Categories
ಬೆಂಗಳೂರು ರಾಜ್ಯ ಶಿಕ್ಷಣ

ಬೆಸ್ಟ್ ಆಫ್ ಲಕ್ ವಿದ್ಯಾರ್ಥಿಗಳೇ..!

ಬೆಸ್ಟ್ ಆಫ್ ಲಕ್ ವಿದ್ಯಾರ್ಥಿಗಳೇ..!
– ಮಾ.25ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ
– ಪರೀಕ್ಷಾ ಕೇಂದ್ರದ ಸುತ್ತಮುತ್ತಾ ನಿಷೇಧಾಜ್ಞೆ ಜಾರಿ
– ವೇಗದೂತ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
– ಎಸ್ ಎಸ್ ಎಲ್ ಸಿ ಎಕ್ಸಾಂ ಬರೆಯುವವರಿಗೆ ಬಿಸಿಯೂಟ!

NAMMUR EXPRESS NEWS
ಬೆಂಗಳೂರು: ಮಾ.25ರಿಂದ ಎಪ್ರಿಲ್ 6ರವರೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆಗಳು ನಡೆಯಲಿದ್ದು, ಶಾಂತಿ-ಸುವ್ಯವಸ್ಥೆ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ಅನ್ವಯ ನಿರ್ಭಂದಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್, ಕಂಪ್ಯೂಟರ್, ಸೈಬರ್ ಸೆಂಟರ್ಗಳುಕಾರ್ಯನಿರ್ವಹಿಸುವಂತಿಲ್ಲ ಮತ್ತು ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಿದೆ. ಈ ಆದೇಶವು ಎಸ್‌ಎಸ್‌ಎಲ್ಸಿ ಪರೀಕ್ಷೆಯ ಮೇಲ್ವಿಚಾರಣೆ ಕಾರ್ಯ ನಿರ್ವಹಿಸುವ ಸಿಬ್ಬಂದಿಯವರಿಗೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಕೆಎಸ್ ಆರ್ ಟಿಸಿಯ ನಗರ, ಹೊರ ವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆ ನಡೆಯಲಿದ್ದು, ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ಒಟ್ಟು 8,96,271 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. 4,58,427 ಬಾಲಕರು, 4,37,844 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.

ಎಸ್ ಎಸ್ ಎಲ್ ಸಿ ಎಕ್ಸಾಂ ಬರೆಯುವವರಿಗೆ ಬಿಸಿಯೂಟ!

2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುತ್ತಿರುವಂತ ವಿದ್ಯಾರ್ಥಿಗಳಿಗೆ, ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, 2023-24ನೇ ಸಾಲಿನ 29 ಮೇ 2023 ರಿಂದ 10 ಏಪ್ರಿಲ್ 2024 ರವರೆಗಿನ ಶೈಕ್ಷಣಿಕ ವರ್ಷದ ಅವಧಿಯಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಎಂ ಪೋಷಣ್‌(ಮಧ್ಯಾಹ್ನ ಉಪಾಹಾರ ಯೋಜನೆ) ಅನುಷ್ಠಾನಗೊಂಡಿರುತ್ತದೆ ಎಂದಿದ್ದಾರೆ.

ಸದರಿ ವಾರ್ಷಿಕ ಕಾರ್ಯಕ್ರಮದಡಿ ಅಡುಗೆ ಕೇಂದ್ರಗಳಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಉಲ್ಲೇಖ – 1 ರ ಆದೇಶದಲ್ಲಿರುವಂತೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗಳು ದಿನಾಂಕ 25.03.2024 ರಿಂದ ಪ್ರಾರಂಭಗೊಂಡು ದಿನಾಂಕ: 06.04.2024ರವರೆಗೆ ನಡೆಯಲಿದ್ದು ಈ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಎಸ್ ಎಸ್ ಎಲ್ ಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟವನ್ನು ಸಿದ್ಧಪಡಿಸಿ ವಿತರಿಸುವಂತೆ ಆದೇಶಿಸಿದೆ.

Categories
ತೀರ್ಥಹಳ್ಳಿ ರಾಜಕೀಯ

ತೀರ್ಥಹಳ್ಳಿಗೆ ಆಗಮಿಸಿದ ಶಿವಣ್ಣ!

ತೀರ್ಥಹಳ್ಳಿಗೆ ಆಗಮಿಸಿದ ಶಿವಣ್ಣ!
– ರಾಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರ ಸಭೆಯಲ್ಲಿ ಹಾಜರ್
– ಕಾರ್ಯಕ್ರಮದಲ್ಲಿ ಗಮನ ಸೆಳೆದ ಶಿವಣ್ಣ!

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕ ಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ಅವರ ಪತಿ, ನಟ ಶಿವರಾಜ್ ಕುಮಾರ್ ತೀರ್ಥಹಳ್ಳಿಗೆ ಆಗಮಿಸಿ ಕಾರ್ಯಕರ್ತರಿಗೆ ಜೋಶ್ ತುಂಬಿದರು. ಶಿವಮೊಗ್ಗದಿಂದ ಸಂತೆಕಡೂರಿಂದ ಶುರುವಾದ ಕಾರ್ಯಕರ್ತರ ಸಭೆಯು ಬೆಜ್ಜವಳ್ಳಿಯಿಂದ ಬೈಕ್ ಮೆರವಣಿಗೆ ಮೂಲಕ ತೀರ್ಥಹಳ್ಳಿಗೆ ಆಗಮಿಸಿ ಅಲ್ಲಿಂದ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬಳಿಕ ಕೆಟಿಕೆ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕರ್ತರ್ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು.

ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಡಾ. ಆರ್. ಎಂ. ಮಂಜುನಾಥ ಗೌಡ, ಬೇಳೂರು ಗೋಪಾಲಕೃಷ್ಣ, ದಿನೇಶ್, ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಕಲಗೋಡು ರತ್ನಾಕರ್, ಮುಡುಬ ರಾಘವೇಂದ್ರ, ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ಪುಟ್ಟೋಡ್ಲು ರಾಘವೇಂದ್ರ, ಅಮರನಾಥ ಶೆಟ್ಟಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಇದ್ದರು.

Categories
ಮಲ್ನಾಡ್

ಟಾಪ್ 3 ನ್ಯೂಸ್ ಮಲ್ನಾಡ್

ಆತಂಕ ತಂದ ನಾಲ್ಕು ಮಂಗಗಳ ಸಾವು!
– ಕಡೂರು ಸಮೀಪ ಭೀಕರ ಅಪಘಾತ
– ಬಸ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ KSRTC ಬಸ್ ಚಾಲಕ!

NAMMUR EXPRESS NEWS
ಸೊರಬ : ಬರಗಾಲದ ಛಾಯೆಯ ಹಾನಿ ಪ್ರಾಣಿಗಳ ಮೇಲೆ ಬೀಳುತ್ತಿದ್ದು, ಚಂದ್ರಗುತ್ತಿ ಸೊರಬ ರಸ್ತೆಯ ಬಸದಿ ಬಳಿ ನಾಲ್ಕು ಮಂಗಗಳು ಅಸುನೀಗಿವೆ. ಒಂದೆಡೆ ಪಕ್ಕದ ತಾಲ್ಲೂಕು ಶಿರಸಿಯಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ವ್ಯಕ್ತಿಯೋರ್ವ ಮರಣ ಹೊಂದಿರುವುದು ವರದಿಯಾಗಿದ್ದು, ಬೆನ್ನಲ್ಲೇ ಇಲ್ಲಿ ಮಂಗಗಳು ಸತ್ತಿರುವುದು ಕೂಡ ಜನತೆಯ ಆತಂಕವನ್ನು ಹೆಚ್ಚಿಸಿದೆ. ಚಂದ್ರಗುತ್ತಿ ಭಾಗದಲ್ಲಿ ಈಚೆಗೆ ಅವ್ಯಾಹತ ಅರಣ್ಯ ನಾಶದ ಜೊತೆಗೆ ಬೆಂಕಿ ಹಚ್ಚಿ ಪಶುಪಕ್ಷಿಗಳಿಗೆ ಏನೂ ಆಹಾರ ಸಿಗದಂತಾಗಿದೆ. ಅವು ನೀರು ಆಹಾರ ಅರಿಸಿ ನಾಡಿಗೆ, ಹೊಲಗದ್ದೆಗಳ ಸಮೀಪಕ್ಕೆ ಬಂದು ಜನರ ಕ್ರೂರತ್ವಕ್ಕೆ ಬಲಿಯಾಗುತ್ತಿವೆ. ನದಿ, ಕೆರೆಗಳಿಗೆ ಪಂಪ್ ಹಚ್ಚುವ ಮೂಲಕ ನೀರು ಸಂಪೂರ್ಣ ಬರಿದಾಗಿದ್ದು ಮನುಷ್ಯನ ಉಪಯೋಗಕ್ಕೂ ನೀರು ಲಭಿಸದಂತಾಗಿದೆ. ಈಚೆಗೆ ಗಿಳಿ, ಮಂಗ ಇತ್ಯಾದಿ ಕಾಟದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಾಸನೆ ರಹಿತ ಔಷಧಿಗಳನ್ನು ಇರಿಸುತ್ತಿದ್ದು ಅಂತಹ ಔಷಧಿ ತಿಂದು ಸಹಾ ಮಂಗಗಳು ಸತ್ತಿರಬಹುದು ಎಂದು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಹಸಿವಿನಿಂದ ಸತ್ತಿವೆಯೋ ?, ನೀರು ಸಿಗದೆ ಸತ್ತಿವೆಯೋ ?, ಅಥವಾ ಕಾಯಿಲೆಯಿಂದ ಸತ್ತಿವೆಯೋ ?, ಮುಂತಾದ ಚರ್ಚೆಯ ನಡುವೆ ಸಕಾಲಕ್ಕೆ ಗ್ರಾಮ ಪಂಚಾಯತಿ ಗಮನಕ್ಕೆ ಬಂದಿದ್ದು ಕೂಡಲೆ ಕ್ರಮಕ್ಕೆ ಮುಂದಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯವರು ಆಗಮಿಸಿ ಮಹಜರು ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

– ಕಡೂರು ಸಮೀಪ ಭೀಕರ ಅಪಘಾತ

ಕಡೂರು : ಲಾರಿ-ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃಪಟ್ಟಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ತಂಗಲಿ ಬಳಿ ನಡೆದಿದೆ. ಮೃತ ಮಹಿಳೆಯನ್ನು ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಣ್ಣ ಅವರ ಪತ್ನಿ ಸುಮಾ (25) ಎಂದು ಗುರುತಿಸಲಾಗಿದೆ. ಪೇದೆ ಜಯಣ್ಣ ಅವರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ ಪತ್ನಿ ಜೊತೆ ಬೈಕಿನಲ್ಲಿ ರೈಲ್ವೆ ಸ್ಟೇಷನ್ ಗೆ ಹೋಗುತ್ತಿರುವಾಗ, ಒನ್ ವೇ ನಲ್ಲಿ ಬಂದ ಲಾರಿ ಬೈಕ್‌ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಜಯಣ್ಣ ದಾವಣಗೆರೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರ (ಎಎಸ್ಪಿ) ಗನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಡ್ಯೂಟಿ ನಿಮಿತ್ತ ದಾವಣಗೆರೆಗೆ ಹೊರಟಿದ್ದ ವೇಳೆ ಈ ದುರಂತ ಸಂಭವಿಸಿದೆ.

– ಬಸ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ KSRTC ಬಸ್ ಚಾಲಕ!

ಶಿವಮೊಗ್ಗ : ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ತವ್ಯ ನಿರತ ಚಾಲಕ-ಕಂ-ನಿರ್ವಾಹಕ ಬಸ್ಸಿನಲ್ಲಿಯೇ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ. ಬಸವರಾಜು ಟಿ.ವಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಎನ್ನಲಾಗಿದೆ. ಬಸವರಾಜು ಟಿ.ವಿ ಶಿವಮೊಗ್ಗ ವಿಭಾಗದ ಹೊನ್ನಾಳಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಘಟಕದಲ್ಲಿ ಕೆ.ರೇಣುಕಾ ಎಂಬುವರು ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವಿಚಾರ ಮೇಲಿನ ಅಧಿಕಾರಿಗಳಿಗೂ ತಿಳಿದಿದೆ. ಮೇಲಿನ ಅಧಿಕಾರಿಗಳ ಬೆಂಬಲದೊಂದಿಗೆ ಕೆ. ರೇಣುಕಾ ಅವರು ಬಸವರಾಜು ಟಿ.ವಿ ಮತ್ತು ಮತ್ತೋರ್ವ ಚಾಲಕ ಸಿ. ಮಹೇಶ್ವರ ವಿರುದ್ಧ ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ದೂರು ನೀಡಿದ್ದು, ಎಫ್‌ಐಆ‌ರ್ ದಾಖಲಾಗಿದೆ. ಎಫ್‌ಐಆ‌ರ್ ದಾಖಲಾಗುತ್ತಿದ್ದಂತೆ ಬಸವರಾಜು ಟಿ.ವಿ ಶಿವಮೊಗ್ಗ ವಿಭಾಗೀಯ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಚಾಲಕ ಬಸವರಾಜು ಅವರಿಗೆ ಸ್ಪಂದಿಸಿಲ್ಲ. ಇದರಿಂದ ನೊಂದ ಬಸವರಾಜು ಟಿ.ವಿ ಶಿವಮೊಗ್ಗ ವಿಭಾಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿನಲ್ಲಿಯೇ ವಿಷ ಸೇವಿಸಿ ಅತ್ಮಹತ್ಯೆ ಯತ್ನಿಸಿದ್ದಾರೆ. ವಿಚಾರ ತಿಳಿದು ಅಕ್ಕ- ಪಕ್ಕದಲ್ಲಿದ್ದ ಸಿಬ್ಬಂದಿ ಅವರನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

Categories
ರಾಜಕೀಯ ರಾಜ್ಯ

ಕಾಂಗ್ರೆಸ್ ತಂಡದಲ್ಲಿ ಮತ್ತಷ್ಟು ಆಪರೇಷನ್!

ಕಾಂಗ್ರೆಸ್ ತಂಡದಲ್ಲಿ ಮತ್ತಷ್ಟು ಆಪರೇಷನ್!
– ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ
– ಮಂಜುನಾಥ್‌ ಭಂಡಾರಿ ಸೇರಿ ಐವರು ನೇಮಕ

NAMMUR EXPRESS NEWS
ಲೋಕಸಭಾ ಚುನಾವಣೆ ವೇಳೆಯಲ್ಲಿ ಕೆಪಿಸಿಸಿಗೆ ಮೇಜ‌ರ್ ಸರ್ಜರಿ ಮಾಡಲಾಗಿದ್ದು ಶಾಸಕ ತಸ್ವೀರ್ ಸೇರ್ ಸೇರಿ ಐವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಾಸಕ ತನ್ವಿರ್ ಸೇರ್, ಜಿ.ಸಿ ಚಂದ್ರಶೇಖ‌ರ್, ವಿನಯ್ ಕುಲಕರ್ಣೀ, ಮಂಜುನಾಥ ಭಂಡಾರಿ, ವಸಂತ ಕುಮಾರ್ ಅವರನ್ನ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿನಯ್ ಕುಮಾರ್ ಸೊರಕೆ, ಪ್ರಚಾರ ಸಮಿತಿ ಕೋ ಚೇರ್ಮನ್ ಆಗಿ ಎಲ್ ಹನುಮಂತಯ್ಯ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ರಿಜ್ವಾನ್ ಅರ್ಷಾದ್ ರನ್ನು ನೇಮಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

Categories
ರಾಜ್ಯ

ಹೋಳಿ ಸಂಭ್ರಮ: ಬಣ್ಣದ ಬಗ್ಗೆ ಎಚ್ಚರ!

ಹೋಳಿ ಸಂಭ್ರಮ: ಬಣ್ಣದ ಬಗ್ಗೆ ಎಚ್ಚರ!
– ಸಾವಯವ ಬಣ್ಣಗಳ ಬಳಕೆ ಹೆಚ್ಚಲಿ
– ಸಿಂಥೆಟಿಕ್ ಬಣ್ಣಗಳಿಂದ ಆರೋಗ್ಯ ಹಾಳಾಗಬಹುದು
– ಎಲ್ಲೆಡೆ ಹೋಳಿ ಹಬ್ಬದ ಆಚರಣೆಗೆ ಸಜ್ಜು

NAMMUR EXPRESS NEWS
ಪ್ರತಿಹಬ್ಬಕ್ಕೂ ಈ ನೆಲದಲ್ಲಿ ತನ್ನದೇ ಆದ ಇತಿಹಾಸ, ಮಹತ್ವವಿದೆ. ಈ ಪೈಕಿ ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬಕ್ಕೆ ವಿಶೇಷ ಪ್ರಾಶಸ್ತ್ರವಿದೆ. ಹೋಳಿ ಎಂದರೆ ಬಣ್ಣದೋಕುಳಿಯ ಹಬ್ಬ. ರಂಗುರಂಗಿನ ಬಣ್ಣ ಎರಚುವುದರೊಂದಿಗೆ ಸ್ನೇಹಿತರು, ಬಂಧು-ಬಳಗದವರು, ನೆರೆಹೊರೆಯವರೊಂದಿಗೆ ಪ್ರೀತಿ ಬೆಸೆಯುವ ಹಬ್ಬ. ಈಗಾಗಲೇ ಹೋಳಿ ಸಂಭ್ರಮ ಎಲ್ಲೆಡೆ ಕಾಣುತ್ತಿದೆ.
ಹಬ್ಬದ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಹೋಳಿಯಲ್ಲಿ ಬಳಕೆಯಾಗುವ ಬಣ್ಣಗಳಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ಲೆಕ್ಕಿಸದೆ ಅನೇಕ ಮಂದಿ ಹೋಳಿ ಆಚರಿಸಲು ಮುಂದಾಗುತ್ತಾರೆ. ಹೋಳಿ ಆಚರಣೆಯಲ್ಲಿ ಬಳಸಲಾಗುವ ಸಿಂಥೆಟಿಕ್ ಬಣ್ಣಗಳು ಕೂದಲಿನ ಬುಡದಲ್ಲಿ, ಉಗುರಿನ ಕೆಳಗೆ ಅಥವಾ ಕಿವಿ ಹಿಂಭಾಗದಲ್ಲಿ ಉಳಿದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ನೈಸರ್ಗಿಕ ಬಣ್ಣಗಳಿಂದ ಹೋಳಿ ಹಬ್ಬದ ಆಚರಣೆ ಮಾಡುವುದು ಸೂಕ್ತ. ನೈಸರ್ಗಿಕ ಬಣ್ಣಗಳನ್ನು ಸ್ವಚ್ಛಗೊಳಿಸುವುದು ಸುಲಭ.

– ಹೋಳಿ ಹಬ್ಬಕ್ಕೆ ಬಳಸಲಾಗುವ ಬಣ್ಣಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು

ಬಣ್ಣಗಳಲ್ಲಿ ಬಳಸಲಾದ ರಾಸಾಯನಿಕ ಅಂಶಗಳಿಂದ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ, ತುರಿಕೆ, ಸುಟ್ಟಂತಹ ಅನುಭವಗಳು ಕಂಡುಬರುತ್ತವೆ. ಕೆಲವರಿಗೆ ಚರ್ಮ ಕೆಂಪಾಗಾಗುವ ಸಾಧ್ಯತೆಯೂ ಇರುತ್ತದೆ.

– ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇಲ್ಲಿವೆ

• ತ್ವಚೆ, ಕೈ ಕಾಲುಗಳಿಗೆ ಅಗತ್ಯವಿರುವಷ್ಟು ಮಾಯಿಶ್ಚರೈಸರ್ ಮತ್ತು ಸನ್‌ಸ್ಟೀನ್ ಬಳಸಿ. ಕೂದಲಿಗೆ ಎಣ್ಣೆಯನ್ನು ಹಚ್ಚಿ. ಆದರೆ ಅತಿಯಾಗಿ ಬಳಸದಿರುವುದು ಉತ್ತಮ.

• ಕೈ ಕಾಲಿನ ಉಗುರುಗಳನ್ನು ಸರಿಯಾಗಿ ಟ್ರಿಮ್ ಮಾಡಿ. ಈ ಮೂಲಕವೂ ಉಗುರುಗಳ ಕೆಳಗೆ ಬಣ್ಣ ಶೇಖರಣೆಯಾಗುವುದನ್ನು ತಪ್ಪಿಸಬಹುದು.

• ತುಂಬು ತೋಳಿರುವ ಬಟ್ಟೆಯನ್ನು ಧರಿಸಿ.

• ಕೋಮಲವಾದ ತುಟಿಗಳಿಗೆ ಲಿಪ್ ಬಾಮ್/ಯಾವುದಾದರೂ ಪೆಟ್ರೋಲಿಯಂ ಜೆಲ್ಲಿಗಳನ್ನು ಹಚ್ಚುವುದು ಒಳಿತು.

• ಬಣ್ಣ ಎರಚುವ ವೇಳೆ ಮಹಿಳೆಯರು ನಿಮ್ಮ ಕೂದಲನ್ನು ಮೇಲೆತ್ತಿ ಕಟ್ಟುವುದು ಒಳಿತು.

• ಹೋಳಿ ಆಚರಣೆಯ ಮುಂಚಿನ ಐದು ದಿನಗಳಲ್ಲಿ ಅಥವಾ ಆಚರಣೆಯ ನಂತರದ ಐದು ದಿನಗಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಫ್ರೆಡಿಂಗ್, ಬೀಚಿಂಗ್, ಲೇಸರ್ ಚಿಕಿತ್ಸೆ, ವಾಕ್ಸಿಂಗ್‌ಗಳನ್ನು ಮಾಡಿಸದಿರುವುದು ಉತ್ತಮ.

– ಸಾವಯವ ಬಣ್ಣಗಳ ಬಳಕೆ ಹೆಚ್ಚಲಿ

ಸಿಂಥೆಟಿಕ್ ಬಣ್ಣಗಳಿಗೆ ಪರ್ಯಾಯವಾಗಿ ಸಾವಯವ ಬಣ್ಣಗಳನ್ನು ಬಳಸುವುದು ಸುರಕ್ಷಿತ. ಚರ್ಮರೋಗ ಹೊಂದಿರುವವರು ಯಾವುದೇ ರೀತಿಯ ಬಣ್ಣದ ಬಳಕೆ ಮಾಡದಿರುವುದು ಸೂಕ್ತ. ಹೋಳಿ ಆಚರಣೆಯ ನಂತರ ಆದಷ್ಟು ಬೇಗನೆ ಚರ್ಮವನ್ನು ನೀರಿನಿಂದ ಸ್ವಚ್ಛಗೊಳಿಸುವುದು ಅಗತ್ಯ. ಈ ವೇಳೆ ಚರ್ಮವನ್ನು ಉಜ್ಜುವುದು ಅಥವಾ ಅತಿಯಾದ ಬಿಸಿನೀರಿನಿಂದ ತೊಳೆಯುವುದನ್ನು ಮಾಡಬೇಡಿ. ಹೋಳಿ ನಂತರದ ಎರಡು ದಿನಗಳು ಯಾವುದೇ ರೀತಿಯ ಚರ್ಮದ ಆರೈಕೆ ಚಟುವಟಿಕೆಗಳನ್ನು ಮಾಡಲೂ ಹೋಗಬೇಡಿ.

Categories
ಮಾಹಿತಿ ರಾಜ್ಯ

ಮನೆಯಲ್ಲೇ ಕುಳಿತು ವೋಟರ್ ಐಡಿ ಮಾಡಿಸಬಹುದು!

ಮನೆಯಲ್ಲೇ ಕುಳಿತು ವೋಟರ್ ಐಡಿ ಮಾಡಿಸಬಹುದು!
– ವೋಟರ್ ಐಡಿ ಇಲ್ಲದೆಯೂ ಮತದಾನ ಮಾಡಿ!
– ಹೇಗೆ ನೋಂದಣಿ ಮಾಡುವುದು? ಮಾ.25 ಕೊನೆಯ ದಿನ

NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಇನ್ನೊಂದು ತಿಂಗಳ ಒಳಗೆ ಮಹಾ ಚುನಾವಣಾ ಸಮರ ಆರಂಭವಾಗಲಿದೆ. ಭಾರತೀಯ ನಾಗರಿಕರಾಗಿದ್ದು ಅರ್ಹ ವಯಸ್ಸು ದಾಟಿದವರು ಮುಂದಿನ ಮತದಾನಕ್ಕೆ ಅರ್ಹರು. ಆದರೆ, ಅರ್ಹತೆ ಇದ್ದ ಹೊರತಾಗಿಯೂ ಹಲವಾರು ಮಂದಿ ವೋಟರ್ ಐಡಿ ಪಡೆದುಕೊಂಡಿರುವುದಿಲ್ಲ. ಅದಕ್ಕೆ ನಾನಾ ಕಾರಣಗಳಿರುತ್ತವೆ. ನೀವು ಇಂಥವರ ಸಾಲಿನಲ್ಲಿದ್ದರೆ ತಕ್ಷಣವೇ ನೋಂದಾಯಿಸಿ, ನಿಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಸಿದ್ಧರಾಗಿ. ಮನೆಯಲ್ಲಿಯೇ ಕುಳಿತು ವೋಟರ್​ ಐಡಿಯನ್ನು ಪಡೆದುಕೊಳ್ಳುವ ಸದವಕಾಶ ನಿಮಗಿದೆ. ಆದರೆ, ನೆನಪಿಟ್ಟುಕೊಳ್ಳಿ ಇದಕ್ಕೆ ನಿಮಗಿರುವುದು ಕೇವಲ ಎರಡು ದಿನಗಳು ಮಾತ್ರ. ಯಾಕೆಂದರೆ ಮಾರ್ಚ್ 25 ಕೊನೆಯ ದಿನ.

ಚುನಾವಣಾ ವೇಳಾಪಟ್ಟಿ ಪ್ರಕಟಗೊಳಿಸುವ ವೇಳೆಯಲ್ಲಿಯೇ ಚುನಾವಣಾ ಆಯೋಗ ಮತದಾನದ ಹಕ್ಕಿಗಾಗಿ ನೋಂದಣಿ ಮಾಡಿಕೊಳ್ಳುವಂತೆ ನಾಗರಿಕರನ್ನು ಕೋರಿದೆ. ಅಂತೆಯೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನದ 10 ದಿನಕ್ಕೂ ಮೊದಲು ನಾಗರಿಕರು ತಮ್ಮ ನೋಂದಣಿ ಅಥವಾ ತಿದ್ದುಪಡಿಯನ್ನು ಮಾಡಲು ಸಾಧ್ಯವಿದೆ. ಹೀಗಾಗಿ ಏಪ್ರಿಲ್ 26 ರಂದು ಮತದಾನ ನಡೆಯುವ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳ ಮತದಾರರಿಗೆ ಮಾರ್ಚ್ 25 ಕೊನೆಯ ದಿನವಾಗಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ 14 ಕ್ಷೇತ್ರಗಳಲ್ಲಿ ಮತದಾರರಿಗೆ ಪಟ್ಟಿಗೆ ಸೇರ್ಪಡೆಗೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 9. ಯಾಕೆಂದರೆ ಅವರೆಲ್ಲರಿಗೂ ಮತದಾನ ದಿನ ಮೇ 7.

ಹೇಗೆ ನೋಂದಣಿ ಮಾಡುವುದು?

ಮತದಾರರ ಪಟ್ಟಿಯಲ್ಲಿ ತಮ್ಮ ನೋಂದಾಯಿಸಿಕೊಳ್ಳಲು ಫಾರ್ಮ್ 6 ಅನ್ನು ಭರ್ತಿ ಮಾಡಬೇಕಾಗುತ್ತದೆ. ಒಂದು ವೇಳೆ ತಿದ್ದುಪಡಿಗಳನ್ನು ಮಾಡಲು ಬಯಸುವವರು ಫಾರ್ಮ್ 8 ಅನ್ನು ಭರ್ತಿ ಮಾಡಬೇಕು. ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ (https://voters.eci.gov.in/) ಮನೆಯಲ್ಲಿಯೇ ಕುಳಿತು ಭರ್ತಿ ಮಾಡಬಹುದು. ಅಥವಾ ಅಪ್ಲಿಕೇಷನ್​ ಡೌನ್​ಲೋಡ್ ಮಾಡಿ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ನೇರವಾಗಿ ಸಲ್ಲಿಸಬಹುದು. ಅವುಗಳನ್ನು ಅಂಚೆ ಮೂಲಕವೂ ಕಳುಹಿಸಬಹುದು. ಆದರೆ, ಕೊನೇ ದಿನಾಂಕಗಳು ಬಾಕಿ ಇರುವಾಗ ಅಂಚೆ ಮೂಲಕ ಕಳುಹಿಸದೇ ಇರುವುದು ಸೂಕ್ತ. ವಿಳಾಸ ಬದಲಾವಣೆಯ ಸಂದರ್ಭದಲ್ಲಿ, ಅರ್ಜಿದಾರರು ಫಾರ್ಮ್ 8 ಎ ಅನ್ನು ಭರ್ತಿ ಮಾಡಬೇಕಾಗುತ್ತದೆ. ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಲು ಫಾರ್ಮ್ 7 ಅನ್ನು ಭರ್ತಿ ಮಾಡಬೇಕಾಗುತ್ತದೆ.

ವೋಟರ್ ಐಡಿ ಇಲ್ಲದೆಯೂ ಮತದಾನ ಮಾಡಿ!

ಒಂದು ವೇಳೆ ನೀವು ನೋಂದಣಿ ಮಾಡಿಕೊಂಡಿದ್ದರೂ ವೋಟರ್ ಐಡಿ ನಿಮ್ಮ ಕೈ ತಲುಪದೇ ಹೋದರೂ ಮತದಾನ ಮಾಡಬಹುದು. ಆದರೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ 12 ಸರ್ಕಾರಿ-ದೃಢೀಕೃತ ಗುರುತಿನ ಪುರಾವೆಗಳಲ್ಲಿ ಯಾವುದನ್ನಾದರೂ ಒಂದನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಖಚಿತಪಡಿಸಿಕೊಂಡರೆ ಸಾಕು. ನೀವು ಆ ಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಬಹುದು ಮತ್ತು ಮತದಾನಕ್ಕೂ ಮೊದಲು ಪರಿಶೀಲನೆ ಕೌಂಟರ್‌ನಲ್ಲಿ ಅದನ್ನು ತೋರಿಸಬಹುದು. ಆದರೆ, ಪ್ರಿಂಟೌಟ್ ತೆಗೆದುಕೊಳ್ಳುವುದನ್ನು ಮಾನ್ಯ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿನ ನಿಮ್ಮ ವಿವರಗಳನ್ನು ವೇಗವಾಗಿ ಹುಡುಕಲು ಸ್ಕ್ರೀನ್‌ಶಾಟ್ ಚುನಾವಣಾ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ಮತದಾರ ವೋಟರ್ ಐಡಿಯನ್ನು ಹೊಂದಿಲ್ಲದಿದ್ದರೆ, ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬೇಕಾಗುತ್ತದೆ. ಆದಾಗ್ಯೂ ನಾಗರಿಕರು E-EPIC ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಮತ ಚಲಾಯಿಸಲು ತೆರಳುವ ಮುನ್ನ ಪ್ರತಿಯೊಬ್ಬ ನಾಗರಿಕ ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಬೇಕು. ಅದು ವೆಬ್‌ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಮುಕ್ತವಾಗಿ ಲಭ್ಯವಿದೆ. . ಎಪಿಕ್​ ಕಾರ್ಡ್​ ಹೊಂದಿದ ತಕ್ಷಣ ಪಟ್ಟಿಯಲ್ಲಿ ಹೆಸರಿದ್ದೇ ಇರುತ್ತದೆ ಎಂದು ಖಾತರಿಯಾಗಿ ಹೇಳುವುದಕ್ಕೆ ಸಾಧ್ಯವಿಲ್ಲ.

– ಹೆಸರು ನೋಂದಾಯಿಸಲು ಹೀಗೆ ಮಾಡಿ

ಗೂಗಲ್​ ಪ್ಲೇಸ್ಟೋರ್/ ಆ್ಯಪಲ್ ಫೋನ್​ ಐಒಎಸ್​ನಿಂದ ಭಾರತದ ಚುನಾವಣಾ ಆಯೋಗ ನೀಡುವ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಮುಖ ಪುಟದಲ್ಲಿ, ಸುಲಭವಾಗಿ ಗೋಚರಿಸುವ ‘ಮತದಾರರ ನೋಂದಣಿ’ ಆಯ್ಕೆಯನ್ನು ಮಾಡಿ ಮತ್ತು ‘ಹೊಸ ಮತದಾರರ ನೋಂದಣಿ (ಫಾರ್ಮ್ 6) ಎಂದು ಹೇಳುವ ಪಟ್ಟಿಯಿಂದ ಎರಡನೇ ಆಯ್ಕೆಯನ್ನು ಆರಿಸಿ. ಅಗತ್ಯ ಮಾಹಿತಿಗಳನ್ನು ತುಂಬಿಸಿ ನೋಂದಣಿ ಮಾಡಿ.

– ಫಾರ್ಮ್ 6 ತುಂಬುವುದು ಹೇಗೆ?

*ಒಮ್ಮೆ ನೀವು ಹೊಸ ನೋಂದಣಿ ಆಯ್ಕೆ ಆರಿಸಿದಾಗ ವೈಯಕ್ತಿಕ ಡಿಜಿಟಲ್ ಸಹಾಯಕ ‘ವೋಟರ್ ಮಿತ್ರ’ ಜತೆ ಸಂವಹನ ನಡೆಸಲು ಕೇಳುತ್ತದೆ. ಅದು ನಿಮಗೆ ಮಾರ್ಗದರ್ಶನ ನೀಡುತ್ತದೆ.
*ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕು. ಬಳಿಕ , ‘ಹೌದು, ಮೊದಲ ಬಾರಿಗೆ ಅರ್ಜಿ ಸಲ್ಲಿಸುವುದು ಎಂಬ ಆಯ್ಕೆಯನ್ನು ‘ ಕ್ಲಿಕ್ ಮಾಡಬೇಕು.
*ರಾಜ್ಯ, ವಿಧಾನಸಭಾ ಕ್ಷೇತ್ರ, ಹುಟ್ಟಿದ ದಿನಾಂಕ ಮತ್ತು ಸಂಬಂಧಿತ ಜನನ ಪುರಾವೆ ದಾಖಲೆಯಂತಹ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
*ಪುಟದ ಕೆಳಭಾಗದಲ್ಲಿ, ನೀವು ಲಗತ್ತಿಸಿದ ‘ವಯಸ್ಸಿನ ಘೋಷಣೆ ಫಾರ್ಮ್’ ಅನ್ನು ಡೌನ್ಲೋಡ್ ಮಾಡಬೇಕು.
*ನಿಮ್ಮ ಲಿಂಗ, ಹೆಸರು ಮತ್ತು ಇತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಚಿತ್ರವನ್ನು ಅಪ್ಲೋಡ್ ಮಾಡಬೇಕು.
*ನಿಮ್ಮೊಂದಿಗೆ ವಾಸಿಸುವ ಕುಟುಂಬ ಸದಸ್ಯರ ವಿವರಗಳನ್ನು ನಮೂದಿಸಬೇಕು.
*ಮುಂದಿನ ಹಂತದಲ್ಲಿ, ನಿಮ್ಮ ವಿಳಾಸ ಮತ್ತು ಗ್ರಾಮ, ಅಂಚೆ ಕಚೇರಿ, ಪಿನ್ ಕೋಡ್ ವಿವರಗಳು, ನಿಮ್ಮ ಜಿಲ್ಲೆ, ಕ್ಷೇತ್ರವನ್ನು ನಮೂದಿಸಬೇಕು. ಈ ಹಂತವನ್ನು ಪೂರ್ಣಗೊಳಿಸಲು ವಿಳಾಸ ದಾಖಲೆಯನ್ನು ನೀಡಬೇಕು.
*ಅಂತಿಮ ಹಂತದಲ್ಲಿ ಹೇಳಿಕೆಯನ್ನು ಒಪ್ಪಿಕೊಂಡು ಕ್ಲಿಕ್ ಮಾಡಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣ.

Categories
ಬೆಂಗಳೂರು ರಾಜ್ಯ ಶಿವಮೊಗ್ಗ

ರಾಮೇಶ್ವರ ಕೆಫೆ ಸ್ಫೋಟದ ಹಿಂದೆ ಮಲೆನಾಡು ಇಬ್ಬರು!

ರಾಮೇಶ್ವರ ಕೆಫೆ ಸ್ಫೋಟದ ಹಿಂದೆ ಮಲೆನಾಡು ಇಬ್ಬರು!
– ದಿನಕ್ಕೊಂದು ತಿರುವು ಪಡೆಯುತ್ತಿರುವ ರಾಮೇಶ್ವರಂ ಕೆಫೆ
– ಎನ್‌ಐಎ ತನಿಖೆ ಚುರುಕು: ತೀರ್ಥಹಳ್ಳಿ ಮೂಲದ ಇಬ್ಬರ ತನಿಖೆ

NAMMUR EXPRESS NEWS
ಶಿವಮೊಗ್ಗ: ರಾಜಧಾನಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಭಾರಿ ಯಶಸ್ಸು ಕಂಡಿದ್ದು, ಕೆಫೆಗೆ ಬಾಂಬ್ ತಂದಿಟ್ಟು ಸ್ಫೋಟಿಸಿದ ವ್ಯಕ್ತಿ ರಾಜ್ಯದ ಮಲೆನಾಡು ಪ್ರದೇಶದವನು ಎಂಬುದು ಖಚಿತಗೊಂಡಿದೆ ಎನ್ನಲಾಗಿದೆ. ಅಂದು ಬೆಂಗಳೂರಿಗೆ ಹೊರರಾಜ್ಯದಿಂದಲೇ ಬಸ್ಸಿನಲ್ಲಿ ಆಗಮಿಸಿದ್ದ ಶಂಕಿತ ವ್ಯಕ್ತಿ, ಪೂರ್ವಯೋಜನೆಯಂತೆ ತಾನು ಕೃತ್ಯ ಎಸಗಿದ ಬಳಿಕ ಬಸ್ಸಿನಲ್ಲೇ ಹೊರರಾಜ್ಯಕ್ಕೆ ಪರಾರಿಯಾಗಿದ್ದಾನೆ. ಸದ್ಯ ಆಂಧ್ರಪ್ರದೇಶದ ತಿರುಪತಿ ಅಥವಾ ತೆಲಂಗಾಣ ರಾಜ್ಯದ ಹೈದ್ರಾಬಾದ್‌ನಲ್ಲಿ ಆತನ ಇರುವಿಕೆ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಶಂಕಿತನ ಗುರುತು ಸಿಕ್ಕಿದ ಬೆನ್ನಲ್ಲೇ ಆತನ ಸಂಪರ್ಕ ಜಾಲ ಭೇದಿಸಲು ದೂರವಾಣಿ ಕರೆಗಳ (ಸಿಡಿಆರ್) ಪರಿಶೀಲನೆ ಕಾರ್ಯವನ್ನು ತನಿಖಾ ಸಂಸ್ಥೆಗಳು ಆರಂಭಿಸಿವೆ ಎನ್ನಲಾಗಿದೆ.

ಶಿವಮೊಗ್ಗ-ಮಂಗಳೂರು ಲಿಂಕ್

ಕಳೆದ ನಾಲ್ಕು ವರ್ಷ ಅವಧಿಯಲ್ಲಿ ನಡೆದಿರುವ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಪ್ರಕರಣ, ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಜಿಲ್ಲೆ ತುಂಗಾ ತೀರದಲ್ಲಿ ಬಾಂಬ್ ಪ್ರಯೋಗಾರ್ಥ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಫೋಟ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳಿಗೆ ಪರಸ್ಪರ ನಂಟಿದೆ. ಈಗ ಕೆಫೆ ಸ್ಫೋಟದಲ್ಲಿ ಕರ್ನಾಟಕದ ಮಲೆನಾಡು ಜಿಲ್ಲೆಯ ವ್ಯಕ್ತಿ ಪಾತ್ರವಹಿಸಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಮಂಗಳೂರು ಕುಕ್ಕ‌ರ್ ಸ್ಫೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗಾರ್ಥ ಸ್ಫೋಟದಲ್ಲಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳಿಗೂ ರಾಮೇಶ್ವರ ಕೆಫೆ ಸ್ಫೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ. ಹೀಗಾಗಿ ಶಿವಮೊಗ್ಗ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಪ್ರಮುಖ ಹ್ಯಾಂಡ್ಲರ್‌ಗಳೇ ಕೆಫೆ ಕೃತ್ಯದಲ್ಲಿ ಪಾತ್ರವಹಿಸಿರುವ ಶಂಕೆ ವ್ಯಕ್ತವಾಗಿದೆ.

ಮತೀನ್, ಮುಸಾಬೀರ್ ಹುಸೇನ್ ಕೈವಾಡ ಶಂಕೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಶಿವಮೊಗ್ಗದ ಬಾಂಬ್ ಪ್ರಯೋಗಾರ್ಥ ಪರೀಕ್ಷೆ ಪ್ರಕರಣಗಳಲ್ಲಿ ಶಂಕಿತ ಐಸಿಸ್ ಉಗ್ರರಾದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್ ತಾಹ ಹಾಗೂ ಮುಸಾಬೀ‌ರ್ ಹುಸೇನ್ ತಲೆಮರೆಸಿಕೊಂಡಿದ್ದಾರೆ. ಆ ಎರಡು ಕೃತ್ಯಗಳಲ್ಲಿ ಮತೀನ್ ಹಾಗೂ ಮುಸಾಬೀರ್ ಹ್ಯಾಂಡ್ಲರ್‌ಗಳಾಗಿದ್ದರು. ಹೀಗಾಗಿ ಈಗ ಕೆಫೆ ಬಾಂಬ್ ಸ್ಫೋಟದ ಶಂಕಿತನ ಹಿಂದೆ ಸಹ ಈ ಇಬ್ಬರು ಇರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೆಫೆ ವಿಧ್ವಂಸಕ ಕೃತ್ಯಕ್ಕೆ ಮೂರು ತಿಂಗಳ ಸಂಚು!

ರಾಮೇಶ್ವರ ಕೆಫೆ ವಿಧ್ವಂಸಕ ಕೃತ್ಯಕ್ಕೆ ಯೋಜಿತ ರೀತಿಯಲ್ಲಿ ಶಂಕಿತರು ಸಂಚು ರೂಪಿಸಿದ್ದರು. ಇದಕ್ಕಾಗಿ ಮೂರು ತಿಂಗಳು ದುಷ್ಕರ್ಮಿಗಳು ಪೂರ್ವ ಸಿದ್ಧತೆ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಬಾಂಬ್ ಸ್ಫೋಟಕ್ಕೂ ಮುನ್ನ ಕೆಫೆಗೆ ಬಾಂಬರ್ ಸೇರಿದಂತೆ ಸಂಚಿನಲ್ಲಿದ್ದ ಹ್ಯಾಂಡ್ಲರ್‌ಗಳು ತೆರಳಿ ಕೆಫೆಯ ಭದ್ರತೆ ಕುರಿತು ಪರಾಮರ್ಶಿಸಿದ್ದಾರೆ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ, ಯಾವ ಪ್ರದೇಶದಲ್ಲಿ ಜನರು ಹೆಚ್ಚು ಕೂರುತ್ತಾರೆ ಹೀಗೆ ಪ್ರತಿಯೊಂದರ ಮಾಹಿತಿ ಕಲೆ ಹಾಕಿ ದುಷ್ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Categories
ಬೆಂಗಳೂರು ರಾಜ್ಯ

2 ತಿಂಗಳು ಬಿಸಿಲಿನ ತಾಪದ ಎಚ್ಚರಿಕೆ

2 ತಿಂಗಳು ಬಿಸಿಲಿನ ತಾಪದ ಎಚ್ಚರಿಕೆ
– ಸೂರ್ಯನ ತಾಪಮಾನದಿಂದ ಅನೇಕ ಖಾಯಿಲೆ
– ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದಿಷ್ಟು ಸಲಹೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ನೀರಿಗೆ ಹಾಹಾಕಾರ ಉಂಟಾಗಿದೆ. ಇದೇ ವೇಳೆ ಬಿಸಿಲು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಫೆಬ್ರವರಿಯಿಂದ ಆರಂಭವಗಿರುವ ಈ ಬಿಸಿಲು ಜೂನ್ ಎರಡನೇ ವಾರದವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿಲಿನಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಹೀಗಾಗಿಯೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಹವಾಮಾನ ಇಲಾಖೆ ಸೂರ್ಯನ ಬಿಸಿಲು ಮತ್ತು ಬಿಸಿಯ ಗಾಳಿಯೂ ಹೆಚ್ಚಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಸೂರ್ಯನ ಶಾಖದ ಪ್ರಖರತೆಯಿಂದ ಡಿಹೈಡೇಷನ್, ಸನ್ ಸ್ಟೋಕ್, ವಿಪರೀತ ತಲೆನೋವು ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತವೆ. ಅದಕ್ಕಾಗಿಯೇ ಅನೇಕ ವೈದ್ಯರು ಹಲವಾರು ಸಲಹೆಗಳನ್ನು ನೀಡುತಿದ್ದಾರೆ.

ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

*ಹೊರಗೆ ಹೋಗುವುದನ್ನು ತಪ್ಪಿಸಬೇಕು

* ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿ ಬಳಸಬೇಕು

* ಕಪ್ಪು, ನೀಲಿ ಬಣ್ಣದ ಬಟ್ಟೆ ಧರಿಸಬಾರದು

*ಹೆಚ್ಚು ಕಾಟನ್ ಬಟ್ಟೆ ಧರಿಸಬೇಕು

*ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಹೆಚ್ಚು ನೀರು ಕುಡಿಯಲು ಕೊಡಬೇಕು

* ಬಿಸಿಲಿನಿಂದ ವಿಟಮಿನ್ ‘ಸಿ’ ಕೊರತೆ ಎದುರಾಗುವುದರಿಂದ ಹೆಚ್ಚು ನಿಂಬೆಹಣ್ಣಿನ ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಸಕ್ಕರೆ ಬದಲು ಬೆಲ್ಲವನ್ನು ಬಳಸುವುದು ಸೂಕ್ತ.

* ಬೆಳಗ್ಗೆ ಎದ್ದ ತಕ್ಷಣ ತುಳಸಿ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲಸ ಮಾಡುವಾಗ ಸುಸ್ತಾಗುವುದಿಲ್ಲ

* ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬಾರದು.

*ತಲೆ ಮತ್ತು ಮೆದುಳು ತಂಪಾಗಿರಲು ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ ಹರಳೆಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬೇಕು.

*ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ.

*ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿದಲ್ಲಿ ದೇಹ ತಂಪಾಗಿರುತ್ತದೆ.

*5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು.

* ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಒಳ್ಳೆಯದ್ದು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕುರುವಳ್ಳಿಯಲ್ಲಿ ಅಕ್ರಮ ಕಲ್ಲುಬಂಡೆ ಮಾಫಿಯಾ!

ತೀರ್ಥಹಳ್ಳಿ ಕುರುವಳ್ಳಿಯಲ್ಲಿ ಅಕ್ರಮ ಕಲ್ಲುಬಂಡೆ ಮಾಫಿಯಾ!
– ಅಕ್ರಮದಲ್ಲಿ ಮಹಿಳಾ ಅಧಿಕಾರಿ ಶಾಮೀಲು?
– ಬಂಡೆ ಅಕ್ರಮದ ಹಿಂದೆ ಇದೆ ದೊಡ್ಡ ಲಾಬಿ!?

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣ ಸಮೀಪದ ಕುರುವಳ್ಳಿಯಲ್ಲಿರುವ ಕುರುವಳ್ಳಿ ಮಟನ್ ಸ್ಟಾಲ್ ಪಕ್ಕ ಸರ್ವೇ ನಂಬರ್ 75ರಲ್ಲಿ ಅಕ್ರಮವಾಗಿ ಕಲ್ಲುಬಂಡೆ ನಡೆಸಲಾಗುತ್ತಿದ್ದು, ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಕಲ್ಲು ಬಂಡೆ ವ್ಯಾಪ್ತಿಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಕೂಡ ಮಾಡಿಲ್ಲ. ಜಿಪಿಎಸ್ ಇಲ್ಲದೆ ಲಾರಿ ಹಿಡಿಯುತ್ತಿದ್ದಾರೆ. ಆದರೆ ಕುರುವಳ್ಳಿ ಮಟನ್ ಸ್ಟಾಲ್ ಪಕ್ಕ ಸರ್ವೇ ನಂಬರ್ 75ರಲ್ಲಿ ಅಕ್ರಮವಾಗಿ ನಡೆಯುತ್ತಿರುವಂತಹ ಬಂಡೆ ಮಾಫಿಯಕ್ಕೆ ಕಡಿವಾಣ ಯಾವಾಗ ಎಂಬ ಪ್ರಶ್ನೆ ಈಗ ಎದ್ದಿದೆ. ಇದರ ಹಿಂದೆ ಬಹಳ ದೊಡ್ಡ ಲಾಬಿಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.

Categories
ತೀರ್ಥಹಳ್ಳಿ

ಚಿಲುಮೆಜಡ್ಡು ಶ್ರೀ ಶಿವನಾಗ ಕ್ಷೇತ್ರದಲ್ಲಿ ಧಾರ್ಮಿಕ ಸಂಭ್ರಮ

ಚಿಲುಮೆಜಡ್ಡು ಶ್ರೀ ಶಿವನಾಗ ಕ್ಷೇತ್ರದಲ್ಲಿ ಧಾರ್ಮಿಕ ಸಂಭ್ರಮ
– ಶ್ರೀ ಬ್ರಾಹ್ಮರಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಶ್ಲೇಷ ಬಲಿ
– ಸಾವಿರಾರು ಭಕ್ತರು ಹಾಜರ್

NAMMUR EXPRESS NEWS
ಬ್ರಾಹ್ಮರಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಶಿವನಾಗ ಕ್ಷೇತ್ರದಲ್ಲಿ ದಿನಾಂಕ : 21-03-2024ನೇ ಗುರುವಾರದಂದು ಶ್ರೀ ಕ್ಷೇತ್ರದಲ್ಲಿ ಸರ್ಪಶಾಂತಿ ಹೋಮ, ಸಾಮೂಹಿಕ ಅಶ್ಲೇಷ ಬಲಿ, ನಾಗದರ್ಶನ ನಂತರ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಿತು. ನಾಗಪಾತ್ರಿ ರಮೇಶ್ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಿತ್ತು. ಸರ್ವ ಭಕ್ತಾಧಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿದರು. ಇತ್ತೀಚಿಗೆ ಈ ದೇಗುಲಕ್ಕೆ ಭಕ್ತರು ಪ್ರತಿ ದಿನ ಆಗಮಿಸಿ ದೇವರಲ್ಲಿ ಹರಕೆ ಹೊರುತ್ತಾರೆ.

ಧರ್ಮದರ್ಶಿಗಳು:
ಶ್ರೀ ರಮೇಶ್ ನಾಗಸಂದರ್ಶನ ಪಾತ್ರಿಗಳು
ಮಾಹಿತಿಗಾಗಿ ಸಂಪರ್ಕಿಸಿ
ಮೊ : 9740081200