Categories
ಜಾತಕ

ನಿಮ್ಮ ರಾಶಿ ಫಲ ಏನೇನಿದೆ?

ನಿಮ್ಮ ರಾಶಿ ಫಲ ಏನೇನಿದೆ?
– ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರು ಅಶುಭ?
– ಶುಭ ಶುಕ್ರವಾರ ಏನೇನು ಆಗುತ್ತೆ?

NAMMUR EXPRESS NEWS
2024 ಏಪ್ರಿಲ್ 12ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

* ಮೇಷ ರಾಶಿ :
ಕೌಟುಂಬಿಕ ವಿಚಾರಗಳಲ್ಲಿ ನಿರ್ಧಾರಗಳು ಬದಲಾಗುತ್ತವೆ. ದೀರ್ಘಕಾಲದ ಕಾಯಿಲೆಗಳಿಂದ ನಿವಾರಣೆ ದೊರೆಯುತ್ತದೆ. ಇತರರಿಗೆ ಸಹಾಯ ಸಹಕಾರ ನೀಡುತ್ತೀರಿ. ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು ನಿವಾರಣೆಯಾಗುತ್ತವೆ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.

* ವೃಷಭ ರಾಶಿ :
ಮನೆಯ ಹೊರಗೆ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೀರಿ ಮತ್ತು ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೀರಿ. ಸ್ನೇಹಿತರೊಂದಿಗೆ ಪ್ರವಾಸಗಳಲ್ಲಿ ಭಾಗವಹಿಸುತ್ತೀರಿ. ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರ ಲಾಭದಾಯಕವಾಗಿರುತ್ತದೆ.

* ಮಿಥುನ ರಾಶಿ :
ಸಾಲಬಾಧೆಗಳು ಹೆಚ್ಚಾಗುತ್ತವೆ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತವೆ. ಬಂಧು ಮಿತ್ರರೊಂದಿಗೆ ವಿವಾದ ಉಂಟಾಗುತ್ತದೆ. ಸಾಲದ ಪ್ರಯತ್ನಗಳನ್ನು ಮಾಡುತ್ತೀರಿ. ಪ್ರಯಾಣದಲ್ಲಿ ತೊಂದರೆಗಳು ಉಂಟಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

* ಕಟಕ ರಾಶಿ :
ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದು ಸಂತೋಷವನ್ನು ತರುತ್ತದೆ. ಹೊಸ ವಾಹನ ಖರೀದಿಸುತ್ತೀರಿ. ಉದ್ಯೋಗಗಳಲ್ಲಿ ಪ್ರಗತಿ ಕಂಡುಬರುತ್ತದೆ.

* ಸಿಂಹ ರಾಶಿ :
ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಪ್ರಮುಖ ವಿಷಯಗಳಲ್ಲಿ ನಿಕಟ ಸ್ನೇಹಿತರ ಸಹಾಯ ದೊರೆಯುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷೆಗಳು ಈಡೇರುತ್ತವೆ. ಉದ್ಯೋಗದ ಕೆಲವು ವ್ಯವಹಾರಗಳಲ್ಲಿ ತೊಡಕುಗಳನ್ನು ನಿವಾರಿಸುತ್ತೀರಿ.

* ಕನ್ಯಾ ರಾಶಿ :
ಆತ್ಮೀಯರಿಂದ ಕೆಲವು ವಿಷಯಗಳನ್ನು ತಿಳಿಡು ಕೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ಕೆಲವು ಕೆಲಸಗಳಲ್ಲಿ ಸಮಸ್ಯೆಗಳು ನಿವಾರಣೆಯಾಗಿ ಪರಿಹಾರ ದೊರೆಯುತ್ತದೆ. ಆಧ್ಯಾತ್ಮಿಕ ಮತ್ತು ಸೇವಾ ಚಟುವಟಿಕೆಗಳಿಗೆ ಆಹ್ವಾನಗಳು ಬರುತ್ತವೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.

* ತುಲಾ ರಾಶಿ :
ಧನ, ವಸ್ತು ಮತ್ತು ವಾಹನ ಲಾಭ ದೊರೆಯುತ್ತದೆ. ಸಮಾಜದ ಹಿರಿಯರಿಂದ ವಿಶೇಷ ಬೆಂಬಲ ದೊರೆಯುತ್ತದೆ. ಕೆಲವು ವಿವಾದಗಳಿಂದ ಜಾಣತನದಿಂದ ಹೊರಬರುತ್ತೀರಿ. ವ್ಯವಹಾರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.

* ವೃಶ್ಚಿಕ ರಾಶಿ :
ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಸಮಸ್ಯೆಗಳಿರುತ್ತವೆ. ಹಠಾತ್ ಪ್ರಯಾಣ ಸೂಚನೆಗಳಿವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿಗಳು ಹೆಚ್ಚಾಗುತ್ತವೆ. ವ್ಯವಹಾರದಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ತೊಂದರೆಗಳು ಎದುರಾಗುತ್ತವೆ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ.

* ಧನುಸ್ಸು ರಾಶಿ :
ಮನೆಯ ಹೊರಗೆ ಋಣಾತ್ಮಕ ವಾತಾವರಣವಿರುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗುತ್ತವೆ. ಸಾಲದ ಪ್ರಯತ್ನಗಳು ಅನುಕೂಲಕರವಾಗಿರುವುದಿಲ್ಲ. ದೂರ ಪ್ರಯಾಣದಲ್ಲಿ ವಾಹನ ತೊಂದರೆಗಳು ಉಂಟಾಗುತ್ತವೆ. ಆರೋಗ್ಯದ ವಿಷಯದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ.

* ಮಕರ ರಾಶಿ :
ಸ್ಥಿರಾಸ್ತಿ ಲಾಭ ದೊರೆಯುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ದೈವಾರಾಧನೆಯು ಶುಭ ಫಲವನ್ನು ತರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ.

* ಕುಂಭ ರಾಶಿ :
ಪ್ರಮುಖ ಕಾರ್ಯಗಳಲ್ಲಿ ಅಗತ್ಯಕ್ಕೆ ಸಹಾಯ ಪಡೆಯುತ್ತೀರಿ. ಬಂಧುಗಳಿಂದ ಆಹ್ವಾನಗಳು ಬರುತ್ತವೆ. ಹಣಕಾಸಿನ ವ್ಯವಹಾರಗಳು ಉತ್ತಮವಾಗಿರುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ತಮ ಪರಿಸ್ಥಿತಿಗಳು ಇರುತ್ತವೆ. ಮಕ್ಕಳ ಶಿಕ್ಷಣದ ವಿಷಯಗಳು ತೃಪ್ತಿಕರವಾಗಿರುತ್ತವೆ.

* ಮೀನ ರಾಶಿ :
ವ್ಯಾಪಾರ, ಉದ್ಯೋಗಗಳು ನಿರಾಶಾದಾಯಕವಾಗಿರುತ್ತವೆ. ಆಕಸ್ಮಿಕ ಧನವ್ಯಯದ ಸೂಚನೆಗಳಿವೆ. ಆರೋಗ್ಯ ನಿಧಾನವಾಗಿರುತ್ತದೆ. ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಕೌಟುಂಬಿಕ ವ್ಯವಹಾರಗಳಲ್ಲಿ ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ಕೆಲಸಗಳು ನಿಧಾನವಾಗಿ ನಡೆಯುತ್ತವೆ.

Categories
ಬೆಂಗಳೂರು ರಾಜ್ಯ

ಕರ್ನಾಟಕದ 10 ಜಿಲ್ಲೆಗಳಲ್ಲಿ ಮೊದಲ ಮಳೆ!

ಕರ್ನಾಟಕದ 10 ಜಿಲ್ಲೆಗಳಲ್ಲಿ ಮೊದಲ ಮಳೆ!
– ವಿಜಯಪುರದಲ್ಲಿ ಸಿಡಿಲಿಗೆ ಮೂವರು ಸಾವು
– ಭಾರಿ ಗಾಳಿಯಿಂದ ಹಾರಿಹೋದ ಚೆಕ್‌ಪೋಸ್ಟ್‌
– ಮಲೆನಾಡ ಚಿಕ್ಕಮಗಳೂರಲ್ಲೂ ಬಂತು ಮಳೆ

NAMMUR EXPRESS NEWS
ಬೆಂಗಳೂರು: ಯುಗಾದಿ ಹೊಸ ವರ್ಷವನ್ನು ಸ್ವಾಗತಿಸಿದ ಜನತೆಗೆ ಕೊನೆಗೂ ಮಳೆರಾಯ ತಂಪಿನ ಸಿಂಚನ ನೀಡಿದ್ದಾನೆ. ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಲಕಾಲ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನ ಕೊಂಚ ನಿರಾಳರಾಗಿದ್ದಾರೆ. ಮೊದಲ ಮಳೆಗೆ ವಿಜಯಪುರ ಜಿಲ್ಲೆಯಲ್ಲಿ ಬಾಲಕ ಸೇರಿ ಮೂವರು ಬಲಿಯಾಗಿದ್ದಾರೆ. ಕಲ್ಯಾಣ ಕರ್ನಾಟಕದ ಬಹುತೇಕ ಕಡೆ ತಾಪಮಾನ 40 ದಾಟಿ ಜನ ಸಂಕಷ್ಟ ಅನುಭವಿಸುತ್ತಿದ್ದ ಹೊತ್ತಿನಲ್ಲೇ ವಿಜಯಪುರ, ಕಲಬುರಗಿ, ಧಾರವಾಡ, ಗದಗ, ಯಾದಗಿರಿ, ಬೀದರ್‌, ರಾಯಚೂರು, ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಕಡೆ ಮಳೆಯ ಸಿಂಚನ ಮಾಡುವ ಮೂಲಕ ವರುಣ ತಂಪಿನ ಅನುಭವ ನೀಡಿದ್ದಾನೆ.

ವಿಜಯಪುರದಲ್ಲಿ ಸಿಡಿಲಬ್ಬರಕ್ಕೆ ಮೂವರು ಬಲಿ

ವಿಜಯಪುರ ಜಿಲ್ಲೆಯಲ್ಲಿ ಸಿಡಿಲಬ್ಬರದೊಂದಿಗೆ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಕೆಲಕಾಲ ಸಾಧಾರಣ ಮಳೆಯಾಗಿದ್ದು, ಮೂವರನ್ನು ಬಲಿಪಡೆದಿದೆ. ಇಂಡಿ ತಾಲೂಕಿನಲ್ಲಿ ಗಿಡದ ಕೆಳಗೆ ಆಡು ಕಟ್ಟುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಬೀರಪ್ಪ, ಮಸಳಿ ಬಿ.ಕೆ.ಗ್ರಾಮದಲ್ಲಿ ಹೊಲದಲ್ಲಿ ಈರುಳ್ಳಿ ತುಂಬುತ್ತಿದ್ದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (45) ಹಾಗೂ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಸುನಂದಾ ಶ್ರೀಮಂತ ಡೊಳ್ಳಿ (50) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಇದರ ಜತೆಗೆ ಎಮ್ಮೆ ಸೇರಿ ಕೆಲ ಜಾನುವಾರುಗಳೂ ಸಿಡಿಲಬ್ಬರಕ್ಕೆ ಬಲಿಯಾಗಿವೆ. ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಕೆಲಕಾಲ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಕೆಲಕಾಲ ಮಳೆಯಾಗಿದ್ದು, 44 ಡಿಗ್ರಿ ಉಷ್ಣಾಂಶದಿಂದ ತತ್ತರಿಸಿದ್ದ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲೂ ಸಿಡಿಲಬ್ಬರಕ್ಕೆ ಎಮ್ಮೆ ಮೃತಪಟ್ಟಿದ್ದು, ದಣ್ಣೂರ ಗ್ರಾಮದಲ್ಲಿ ಎತ್ತೊಂದು ಬಲಿಯಾಗಿದೆ.

ಮಲೆನಾಡಲ್ಲಿ ಮಳೆ!

ಮಲೆನಾಡಲ್ಲಿ ಕೆಲ ದಿನಗಳ ಹಿಂದಷ್ಟೇ ಮಳೆಯಾಗಿ ಆ ನಂತರ ಬಿಸಿಲ ತಾಪ ಮತ್ತಷ್ಟು ಏರಿಕೆಯಾಗಿತ್ತು. ಇದೀಗ ಈ ಭಾಗದಲ್ಲಿ ಮತ್ತೆ ಮಳೆಯಾಗಿದ್ದು, ಕಾಫಿ ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾದರೆ, ಕೊಡಗು ಜಿಲ್ಲೆಯ ವಿರಾಜಪೇಟೆ, ಕರಡ, ಪಾಲಂಗಾಲ ಸೇರಿ ವಿವಿಧೆಡೆ ಉತ್ತಮ ಮಳೆ ಸುರಿದಿದೆ.

ಗಾಳಿಯಿಂದ ಹಾರಿಹೋದ ಚೆಕ್‌ಪೋಸ್ಟ್‌

ಧಾರವಾಡದಲ್ಲಿ ಜಿಟಿಜಿಟಿ ಮಳೆಯಾಗಿದ್ದರೂ ಗಾಳಿ ಅಬ್ಬರ ತುಸು ಜೋರೇ ಇತ್ತು. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊರವಲಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಚೆಕ್‌ಪೋಸ್ಟ್‌ನ ತಗಡುಗಳು ಭಾರೀ ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್‌ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ.

ರಾಜ್ಯದ ಎಲ್ಲಾ ಕಡೆ ಮಳೆಗಾಗಿ ಕಾತುರ

ರಾಜ್ಯದ ಎಲ್ಲಾ ಭಾಗದಲ್ಲಿ ಬಿಸಿಲಿನ ತಾಪಕ್ಕೆ ಜನ ಕಂಗಾಲಾಗಿದ್ದು, ಮಳೆ ನಿರೀಕ್ಷೆಯಲ್ಲಿದ್ದಾರೆ. ಮಳೆ ಬಂದಲ್ಲಿ ಕೊಂಚ ನಿರಾಳ ಆಗಲಿದೆ. ಬೆಳೆ, ತೋಟಗಳು ಒಣಗಿ ಹೋಗಿವೆ. ನದಿ, ನೀರಿನ ಮೂಲಗಳು ಬತ್ತಿ ಹೋಗಿವೆ.

Categories
ಮಂಗಳೂರು

ನೀರು ಸೇದಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ, ಮುಂದೇನಾಯ್ತು?!

ನೀರು ಸೇದಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ, ಮುಂದೇನಾಯ್ತು?!
– ತಲೆ ಸುತ್ತಿ ಬಾವಿಗೆ ಬಿದ್ದ ಘಟನೆ: ಪಂಪ್ ಹಗ್ಗ ಕೈಗೆ ಸಿಲುಕಿ ಬದುಕಿದಳು

NAMMUR EXPRESS NEWS
ಮಂಗಳೂರು: ಮನೆಯ ಬಾವಿಯಿಂದ ನೀರು ಸೇದುತ್ತಿದ್ದಾಗ ಮಹಿಳೆಯೊಬ್ಬರು ಆಯತಪ್ಪಿ ಬಾವಿಗೆ ಬಿದ್ದ ಘಟನೆ ಮಂಗಳೂರಿನಲ್ಲಿ ಗುರುವಾರ ಸಂಜೆ ನಡೆದಿದೆ. ಸುಮಾರು 58 ವರ್ಷ ವಯಸ್ಸಿನ ಮಹಿಳೆ ಸಂಜೆ ವೇಳೆ ನೀರು ಸೇದುತ್ತಿದ್ದಾಗ ತಲೆ ಸುತ್ತು ಬಂದಂತಾಗಿ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಎಂಟು ಅಡಿಗಳಿಗೂ ಹೆಚ್ಚು ನೀರಿತ್ತು. ಆದರೆ ಅದೃಷ್ಟವಶಾತ್ ಮಹಿಳೆ ಪಂಪ್ ನ ಹಗ್ಗ ಕೈಗೆ ಸಿಲುಕಿದೆ. ತಕ್ಷಣ ಹಿಡಿದುಕೊಂಡು ಜೋರಾಗಿ ಕಿರುಚಿಕೊಂಡಿದ್ದಾರೆ.
ಸ್ಥಳೀಯರು ತಕ್ಷಣ ಕದ್ರಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ರಕ್ಷಿಸಿ ಮಹಿಳೆಗೆ ಮರುಜೀವ ನೀಡಿದ್ದಾರೆ. ರಕ್ಷಿಸಿ ಮಹಿಳೆಗೆ ಮರುಜೀವ ನೀಡಿದ್ದಾರೆ.

Categories
ಕರಾವಳಿ

ಕಂಬಳಕ್ಕೆ ಈಗ ವೈದ್ಯರು ಎಂಟ್ರಿ!

ಕಂಬಳಕ್ಕೆ ಈಗ ವೈದ್ಯರು ಎಂಟ್ರಿ!
– ಕಂಬುಲ ಕೆರೆಗೆ ’ಕೋಣ’ ಇಳಿಸಲಿರುವ ಭಾರತೀಯ ವೈದ್ಯಕೀಯ(ಐಎಂಎ )ಸಂಘ
– ಜೋಡುಕರೆ ಕಂಬಳದಲ್ಲಿ ಕರೆಗೆ ಇಳಿಯಲಿರುವ ವೈದ್ಯಕೀಯ ಸಂಘದ ಕೋಣಗಳು

ಕಂಬಳ ಎಂದರೆ… ತುಳುನಾಡಿನ ಜಾನಪದ ಕ್ರೀಡೆ ಕಂಬಳ. ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ.. ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು ಹೊಲದೊಡೆಯನ ಹಂಬಲವಾಗಿ, ಕೆಸರು ಮಣ್ಣಿನಲ್ಲಿ ಬೆವರು ಹರಿಸಿದ ಕೃಷಿಕರ ಬೆಂಬಲವಾಗಿ, ಧಾರ್ಮಿಕ, ಮನೋರಂಜನಾ ನೆಲೆಯಲ್ಲಿ ಹುಟ್ಟಿ ಬೆಳೆದ ಗದ್ದೆ ಕಂಬಳಕ್ಕೂ ಕೃಷಿಗೂ ಅವಿಭಾಜ್ಯ ನಂಟಿದೆ. ಆದರೆ ಇಂತಹ ಕಂಬಳಕ್ಕೂ – ಡಾಕ್ಟರ್ ಗಳಿಗೂ ಈಗ ಹೊಸದೊಂದು ಬಂಧ ಬೆಸೆದುಕೊಂಡಿದೆ.
ಹೌದು. ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಭಾರತೀಯ ವೈದ್ಯಕೀಯ(ಐಎಂಎ )ಸಂಘದ ಪ್ರವೇಶ ಪಡೆದಿದೆ. ಭಾರತೀಯ ವೈದ್ಯಕೀಯ ಸಂಘ (ರಿ ) ಮಂಗಳೂರು ಪ್ರಪ್ರಥಮ ಬಾರಿಗೆ ವೈದ್ಯಕೀಯ ಸೇವೆಯ ಜೊತೆಗೆ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಪಾಲ್ಗೊಳ್ಳಲಿದೆ. ಡಾಕ್ಟರ್ ಅವಿನ್ ಆಳ್ವರವರ ನೇತೃತ್ವದಲ್ಲಿ ವೈದ್ಯಕೀಯ ಸಂಘವು ಸ್ವತಃ ಕಂಬಳದ ಕೋಣ ಗಳನ್ನು ಕಂಬಳದ ಕರೆಗೆ ಇಳಿಸಲಿದೆ.

ಎಲ್ಲಿ ನಡೆಯುತ್ತೆ ಕಂಬಳ?!

ಭಾರತೀಯ ವೈದ್ಯಕೀಯ(ಐಎಂಎ )ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ. ರಂಜನ್ ಆರ್ ಕೆ ಈ ಬಗ್ಗೆ ಮಾಹಿತಿ ನೀಡಿದ್ದು “ಎಪ್ರಿಲ್ 12 ಶುಕ್ರವಾರ ಸಂಜೆ 5 ಗಂಟೆಗೆ ಆರಂಭಗೊಳ್ಳುವ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ.)ಇದರ ಆಯೋಜನೆಯಲ್ಲಿ ಗುರುಪುರದಲ್ಲಿ ನಡೆಯುವ “ಮೂಳೂರು- ಅಡ್ಡೂರು” ಹೊನಲು ಬೆಳಕಿನ ಜೋಡುಕರೆ ಕಂಬಳ ಉತ್ಸವದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇವೆ . ಈ ನಿಟ್ಟಿನಲ್ಲಿ ಕಂಬಳ ಸಮಿತಿಯವರ ಜೊತೆಗೆ ಈಗಾಗಲೇ ಮಾತುಕತೆಯನ್ನು ನಡೆಸಿದ್ದು, ಸಮಿತಿಯವರು ನಮಗೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ” ಎಂದು ಡಾ.ರಂಜನ್ ತಿಳಿಸಿದ್ದಾರೆ.

Categories
ಕರಾವಳಿ ಮಂಗಳೂರು

ಮಂಗಳೂರಿನಲ್ಲಿ ಎಳನೀರು ಕುಡಿದು 100 ಮಂದಿ ಅಸ್ವಸ್ಥ!

ಮಂಗಳೂರಿನಲ್ಲಿ ಎಳನೀರು ಕುಡಿದು 100 ಮಂದಿ ಅಸ್ವಸ್ಥ!
– ಆಸ್ಪತ್ರೆಗೆ ದಾಖಲು: ಫ್ಯಾಕ್ಟರಿಗೆ ನೋಟೀಸ್, ಅಧಿಕಾರಿಗಳ ಭೇಟಿ
– ಎಲ್ಲರ ಸ್ಥಿತಿ ಈಗ ಸುಧಾರಣೆ: ಭಾರೀ ಅಲರ್ಟ್

NAMMUR EXPRESS NEWS
ಮಂಗಳೂರು: ಎಳನೀರು ಕುಡಿದು ಸುಮಾರು ಹಲವು ಮಂದಿ ಅಸ್ವಸ್ಥಗೊಂಡ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ಬಳಿ ನಡೆದಿದೆ. ಅಡ್ಯಾರ್ ಲ್ಲಿರುವ ಐಸ್ ಕ್ರೀಮ್ ತಯಾರಿಕ ಮಾರಾಟ ಸಂಸ್ಥೆಯಿಂದ ಒಂದಷ್ಟು ಮಂದಿ ಬೊಂಡದ ನೀರನ್ನು ಅಡ್ಯಾರ್ ಕಣ್ಣೂರು ಮತ್ತು ತುಂಬೆ ಪರಿಸರದ ನಿವಾಸಿಗಳು ಲೀಟರ್ ಲೆಕ್ಕದಲ್ಲಿ ಖರೀದಿಸಿ ಕುಡಿದಿದ್ದರು. ಲೀಟರ್ ಗೆ 40 ರೂಪಾಯಿಯಂತೆ ಸೋಮವಾರ ಸಂಜೆ ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರ್ ಸುತ್ತಮುತ್ತಲಿನ ಸಾರ್ವಜನಿಕರು ಮಂಗಳವಾರದಿಂದ ವಾಂತಿಬೇದಿಯಿಂದ ಬಳಲಿದ್ದರು.

ಬುಧವಾರದಂದು ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಇವರಿಗೆ ವಾಟ್ಸಪ್ ಮುಖಾಂತರ ದೂರು ಸಲ್ಲಿಕೆಯಾಗಿದ್ದು ತಕ್ಷಣವೇ ಇಬ್ಬರೂ ಅಧಿಕಾರಿಗಳೂ ಅಡ್ಯಾರ್ ನಲ್ಲಿರುವ ಬೊಂಡ ಫ್ಯಾಕ್ಟರಿ ಇಲ್ಲಿಗೆ ಭೇಟಿ ನೀಡಿ ಎಳನೀರಿನ ಸ್ಯಾಂಪಲನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದರು. ಇಡೀ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಶುಚಿಗೊಳಿಸಲಿ ಆದೇಶಿಸಲಾಗಿತ್ತು. ಇದಲ್ಲದೇ ಮಂಗಳೂರಿನ ವಿವಿಧ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದ್ದರು.

ಬೊಂಡ ನೀರು ಕುಡಿದು ಇದುವರೆಗೆ 137 ಮಂದಿ ಎಳನೀರು ಕುಡಿದಿರುವುದರಿಂದ ಅಸ್ವಸ್ಥರಾಗಿದ್ದು,ಹೊರರೋಗಿಗಳಾಗಿ 84,ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆದಿದ್ದಾರೆ.ಇದುವರೆಗೆ 23 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಎಲ್ಲರ ಆರೋಗ್ಯವು ಸ್ಥಿರವಾಗಿದ್ದು, ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ. ಗುರುವಾರ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಆರೋಗ್ಯ ಇಲಾಖೆಯೂ ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ತಿಳುವಳಿ ನೋಟೀಸ್ ನೀಡಿ ಬಂದ್ ಮಾಡಿಸಿದೆ.

Categories
ಉಡುಪಿ

ಉಡುಪಿಯಲ್ಲಿ ಮಹಿಳಾ ಕಂಡಕ್ಟರ್ ಮಾರಾಮಾರಿ!

ಉಡುಪಿಯಲ್ಲಿ ಮಹಿಳಾ ಕಂಡಕ್ಟರ್ ಮಾರಾಮಾರಿ!
– ಲೇಡಿ ಕಂಡಕ್ಟರ್ ನಿರ್ವಾಹಕನಿಗೆ ಅವಾಜ್, ಚಪ್ಪಲಿ ಪ್ರದರ್ಶನ
– ಬಸ್ಸನ್ನೇ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ವಿಶ್ರಾಂತಿ ಪಡೆದ ಘಟನೆ ಬೆನ್ನಲ್ಲೇ ಮತ್ತೊಂದು ಘಟನೆ

NAMMUR EXPRESS NEWS
ಉಡುಪಿ: ಬಸ್ ಟೈಮಿಂಗ್ ವಿಚಾರ ಕಂಡಕ್ಟರ್ ಗಳ ನಡುವೆ ಮಾರಾಮಾರಿ ನಡೆದ ಘಟನೆ ಉಡುಪಿಯ ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಲೇಡಿ ಕಂಡಕ್ಟರ್ ಒಬ್ಬರು ಇನ್ನೊಂದು ಬಸ್ಸಿನ ಮೇಲೇರಿ ಅದರ ಕಂಡಕ್ಟರ್ ಗೆ ಅವಾಜ್ ಹಾಕಿ ಹಲ್ಲೆಗೈದ ಘಟನೆಯ ವಿಡಿಯೋ ವೈರಲ್ ಆಗಿದೆ. ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಈ ಗಲಾಟೆ ನಡೆದಿದ್ದು, ತನಗಿಂತ ಮೊದಲೇ ಬಂದು ಬಸ್‌ ನಿಲ್ಲಿಸಿದ್ದಕ್ಕಾಗಿ, ಭಾರತಿ ಬಸ್ ಲೇಡಿ ಕಂಡಕ್ಟರ್ ರೇಖಾ ಅವರು ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಕುಂದಾಪುರ – ಮಂಗಳೂರು ನಡುವೆ ಸಂಚರಿಸುವ ಎರಡು ಬಸ್ ಗಳ ಕಂಡಕ್ಟರ್ ಗಳ ನಡುವೆ ಜಗಳ ನಡೆದಿದೆ.

ದುರ್ಗಾಪ್ರಸಾದ್ ಬಸ್ ನೊಳಗೆ ಬಂದು ರೇಖಾ ಅವರು ಕಂಡಕ್ಟರ್ ರಾಘವೇಂದ್ರ ಅವರೊಡನೆ ಜಗಳವಾಡಿದ್ದಾರೆ. ಈ ವೇಳೆ ಇಬ್ಬರೂ ನಿರ್ವಾಹಕರೂ ಪ್ರಯಾಣಿಕರ ಎದುರೇ ಅವ್ಯಾಚ್ಯ ಶಬ್ದಗಳ ಬಳಕೆ ಮಾಡಿಕೊಂಡು ಕೈ ಕೈ ಮಿಲಾಯಿಸಿದ್ದಾರೆ. ಒಂದು ಹಂತದಲ್ಲಿ ರೇಖಾ ಚಪ್ಪಲಿಯನ್ನೂ ಕೈಗೆತ್ತಿಕೊಂಡಿದ್ದಾರೆ. ಮಹಿಳೆ ನಿರ್ವಾಹಕಿಯ ಗಲಾಟೆ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗುತ್ತಿವೆ. ಇನ್ನು ಈ ಘಟನೆ ಬಗ್ಗೆ ನಿರ್ವಾಹಕ ದುರ್ಗಾಪ್ರಸಾದ್ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಥಮ ಮಹಿಳಾ ಕಂಡಕ್ಟರ್!

ರೇಖಾ ಅವರು ಉಡುಪಿಯ ಪ್ರಥಮ ಮಹಿಳಾ ಬಸ್ ಕಂಡಕ್ಟರ್ ಆಗಿ ಹೆಸರು ಮಾಡಿದ್ದರು. ಹಲವು ವರ್ಷಗಳಿಂದ ಉಡುಪಿ- ಕುಂದಾಪುರ ನಡುವೆ ಸಂಚರಿಸುವ ಭಾರತಿ ಮೋಟಾರ್ಸ್ ಬಸ್ ನಲ್ಲಿ ರೇಖಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿಯಲ್ಲಿ ಬಸ್ ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕ- ನಿರ್ವಾಹಕರ ನಡುವೆ ಜಗಳ ಮಾಮೂಲು ಎಂಬಂತಾಗಿದ್ದು, ಇತ್ತೀಚೆಗೆ ಪಡುಬಿದ್ರೆಯಲ್ಲಿ ಎರಡು ಬಸ್ ಗಳ ನಡುವೆ ಟೈಮಿಂಗ್ ವಿಚಾರದಲ್ಲಿ ವಾಗ್ವಾದ ನಡೆದ ಬಳಿಕ ಬಸ್ಸನ್ನೇ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ವಿಶ್ರಾಂತಿ ಪಡೆದ ಪ್ರಹಸನ ನಡೆದಿತ್ತು.

Categories
ಕರಾವಳಿ ಶಿಕ್ಷಣ

ಮೊದಲ ವರ್ಷವೇ ನ್ಯೂ ವೈಬ್ರೆಂಟ್ ಪಿಯು ಕಾಲೇಜು ಸಾಧನೆ!

ಮೊದಲ ವರ್ಷವೇ ನ್ಯೂ ವೈಬ್ರೆಂಟ್ ಪಿಯು ಕಾಲೇಜು ಸಾಧನೆ!
– ಕಾಲೇಜಿನ ಚೊಚ್ಚಲ ಫಲಿತಾಂಶದಲ್ಲೇ ಶೇ.100% ಸಾಧನೆ
– ಐತಿಹಾಸಿಕ ಸಾಧನೆ ಮಾಡಿದ ರಾಜ್ಯದ ಅತ್ಯುತ್ತಮ ಪಿಯು ಕಾಲೇಜುಗಳಲ್ಲಿ ಒಂದಾಯ್ತು ಸಂಸ್ಥೆ

NAMMUR EXPRESS NEWS
ಮೂಡಬಿದರೆ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಕಳೆದೆರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜು ಶೇ.100ರಷ್ಟು ಫಲಿತಾಂಶ ಪಡೆದು ಕಾಲೇಜಿನ ಚೊಚ್ಚಲ ಫಲಿತಾಂಶದಲ್ಲೇ ಐತಿಹಾಸಿಕ ಸಾಧನೆ ಮಾಡಿದ ರಾಜ್ಯದ ಅತ್ಯುತ್ತಮ ಪಿಯು ಕಾಲೇಜುಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಾಧನೆ ಮಾಡಿದ ಆರ್.ಚಂದನ್ ಮತ್ತು ಸಿಂಚನಾ ಅರಸ್

ವಿದ್ಯಾರ್ಥಿಗಳಾದ ಆರ್ ಚಂದನ್ ಮತ್ತು ಸಿಂಚನಾ ಅರಸ್ ಕ್ರಮವಾಗಿ 589 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ ಹತ್ತನೇ ರಾಂಕ್ ಗಳಿಸಿರುತ್ತಾರೆ. 28 ವಿದ್ಯಾರ್ಥಿಗಳು ಶೇ.95%ಕ್ಕಿಂತಲೂ ಹೆಚ್ಚು ಅಂಕ ಗಳಿಸಿ ಅತ್ಯುನ್ನತ ಸಾಧನೆ ಮಾಡಿರುತ್ತಾರೆ. ಉನ್ನತ ಶ್ರೇಣಿಯಲ್ಲಿ 95, ಪ್ರಥಮ ಶ್ರೇಣಿಯಲ್ಲಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ರಸಾಯನಶಾಸ್ತ್ರ 5, ಗಣಿತಶಾಸ್ತ್ರ 10, ಜೀವಶಾಸ್ತ್ರ 15, ಭೌತಶಾಸ್ತ್ರ, ಗಣಕವಿಜ್ಞಾನ ಮತ್ತು ಕನ್ನಡದಲ್ಲಿ ತಲಾ ಒಂದು ವಿದ್ಯಾರ್ಥಿ 100ಕ್ಕೆ 100 ಪೂರ್ಣ ಅಂಕವನ್ನು ಪಡೆದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಪ್ರಜ್ವಲ್ ಎಮ್ 586, ಸಮೃದ್ ಕುಂದರಗಿ 585, ಎಚ್ ಎಮ್ ಚಿನ್ಮಯಿ 585, ಅಶ್ವಿನ್ ಉಪಾಧ್ಯಾ 584, ಸಿಮ್ರಾನ್ ಥಾನೇದರ್ 584, ಎಸ್ ಚೈತನ್ಯ 583, ವರ್ಷಾ ರೆಡ್ಡಿ 583, ಕೆ ಎಸ್ ಸಂಪದ 583, ಶೇಕ್ ಅಬ್ದುಲ್ಲಾ ಮಹದಿ 582, ಕಲ್ಪಿತ ಕೃಷ್ಣ ಘಾಟಿ 582, ರಾಹುಲ್ ಕೆ ಎಸ್ 582, ಜೋಯಲ್ ರೋಬಿನ್ 580 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಪ್ರಥಮ ಫಲಿತಾಂಶದಲ್ಲೇ ಸಾಧನೆಗೈದ ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.

Categories
ತೀರ್ಥಹಳ್ಳಿ ಬೆಂಗಳೂರು ರಾಜಕೀಯ

ತೀರ್ಥಹಳ್ಳಿ ಬಿಜೆಪಿ ಬೆಂಗಳೂರು ನೂತನ ಸಮಿತಿ..!

ತೀರ್ಥಹಳ್ಳಿ ಬಿಜೆಪಿ ಬೆಂಗಳೂರು ನೂತನ ಸಮಿತಿ..!
– ತೀರ್ಥಹಳ್ಳಿ ಮೂಲದವರ ಸಂಘಟನೆ, ಬಿಜೆಪಿಯ ಹೊಸ ತಂತ್ರಗಾರಿಕೆ
– ರಾಜಧಾನಿಯಲ್ಲಿ ಬಿಜೆಪಿ ಸಂಘಟನೆಗೆ ಹೊಸ ಪ್ಲಾನ್

NAMMUR EXPRESS NEWS
ಬೆಂಗಳೂರು/ತೀರ್ಥಹಳ್ಳಿ: ರಾಜಧಾನಿ ಬೆಂಗಳೂರಿನಲ್ಲಿರುವ ತೀರ್ಥಹಳ್ಳಿ ಮೂಲದ ಬಿಜೆಪಿ ಸಂಘಟಕನ್ನು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಬೆಂಗಳೂರು ಸಮಿತಿ ರಚನೆ ಮಾಡಿ ಹೊಣೆ ನೀಡಲಾಗಿದೆ. ಈ ಸಮಿತಿಯಲ್ಲಿ ಅನೇಕರನ್ನು ಸೇರಿಸಿಕೊಂಡಿದ್ದು, ಎಲ್ಲರಿಗೂ ಪಕ್ಷ ಸಂಘಟನೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವ ಜತೆಗೆ ಬಿಜೆಪಿ ಸಂಘಟನೆ ಜವಾಬ್ದಾರಿಯನ್ನು ನೀಡಲಾಗಿದೆ.

ಬೆಂಗಳೂರು ಸಮಿತಿಯಲ್ಲಿ ಯಾರು ಯಾರು?

ಅಧ್ಯಕ್ಷರಾಗಿ ಅರುಣ್ ಶೆಟ್ಟಿ ಇಂದಿರಾನಗರ, ಉಪಾಧ್ಯಕ್ಷರಾಗಿ ಪ್ರಕಾಶ್ ಕಲ್ಗದ್ದೆ, ವೀರೇಂದ್ರ ಇಂದಾವರ, ಶಶಿ ಅತ್ತಿಕೊಡಿಗೆ, ದಿನೇಶ್ ಕುಂಟಿಗೆ, ಅಜಿತ್ ಹೆಗಲತ್ತಿ, ಗಾಯತ್ರಿ ಲಕ್ಕುಂದ, ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಜಾಧವ್, ಪ್ರಶಾಂತ್ ಇಳಿಮನೆ, ಸಂದೀಪ್ ಅರಳಿಸುರಳಿ, ಕಾರ್ಯದರ್ಶಿಯಾಗಿ ಅರುಣ್ ಮಾಸ್ತಿಕಟ್ಟೆ, ಉದಯ ಹಿರೇಸರ, ಸುನಿಲ್ ಕಲ್ಲೂರು, ಪ್ರದೀಪ್ ಹಳ್ಳದಬೈಲು, ಅಮಿತ್ ತೀರ್ಥಹಳ್ಳಿ, ಅರುಣ್ ಶಬ್ದ, ಖಜಾಂಚಿಯಾಗಿ ಜಯಂತ್ ಮುತ್ತೂರು, ಸೋಶಿಯಲ್ ಮೀಡಿಯಾ ಆದಿತ್ಯ ಕಲ್ಲೂರು ಮತ್ತು ರಾಮ್ ಪ್ರಸಾದ್ ಕಟ್ಟೆಹಕ್ಕಲು ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಬಿಟಿಎಂ, ಶ್ರೀಧರ್ ಎಲ್ಐಸಿ, ಸುನಿಲ್ ಶೆಟ್ಟಿ, ಕಿಶೋರ್ ಯಡೂರು, ಮಂಜು ಗುಬ್ಬಿಗ, ಸನತ್ ರಂಜದಕಟ್ಟೆ

ಬೆಂಗಳೂರು ಸಮಿತಿ ಮಹಾ ಶಕ್ತಿ ಕೇಂದ್ರದ ಪ್ರಮುಖರು

ಮೇಗರವಳ್ಳಿ ಮಹಾಶಕ್ತಿ ಕೇಂದ್ರ ಭೂಷಣ್ ಯಡೆಮನೆ ಮತ್ತು ಸುಬ್ರಹ್ಮಣ್ಯ ಚಿಪ್ಪಳಕಟ್ಟೆ,
ಆರಗ – ಪ್ರಶಾಂತ್ ಖಂಡಕ ಮತ್ತು ಮಿಥುನ್ ದಾವಣೆಬೈಲು
ಕುಪ್ಪಳ್ಳಿ- ಪೂರ್ಣೇಶ್ ಬುಕ್ಕಲಾಪುರ ಮತ್ತು ಮಂಜು ಹುಣಸವಳ್ಳಿ
ನಗರ- ಅವಿನಾಶ್ ಯಡೂರು ಮತ್ತು ಸುಚೇತ, ಹುಂಚಾ – ರಜತ್ ಕಲ್ಲೂರು ಮತ್ತು ವಿನಯ್ ಕಲ್ಲೂರು, ಗಾಜನೂರು ಸಂತೋಷ್ ನಾರೆಗದ್ದೆ, ಶಿವನಂದ ಅರಳಸುರಳಿ.
ಮಂಡಗದ್ದೆ – ಪ್ರಸನ್ನ ಕುಕ್ಕೆ ಮತ್ತು ಮಾಲತೇಶ್ ಮಂಡಗದ್ದೆ, ತೀರ್ಥಹಳ್ಳಿ ಪಟ್ಟಣ ಪ್ರವೀಣ್ ಇಂದಿರಾನಗರ ಮತ್ತು ಆದರ್ಶ ವೈ ಗೌಡ

ಸಲಹಾ ಸಮಿತಿಗೆ ನಾಯಕರ ನೇಮಕ

ದಿನೇಶ್ ವಾಟಗದ್ದೆ, ಸದಾಶಿವ ಕಟ್ಟೆಹಕ್ಕಲು, ವನಮಾಲಯ ಇಳಿಮನೆ, ಪುಂಡಲಿಕ, ಸುಬ್ಬಯ್ಯ ನಂಟೂರು, ದಿನೇಶ್ ಉಡುಪ, ಜಿ ನಾಗರಾಜ್, ಮಹೇಶ್ ಮಳಲಿಕೊಪ್ಪ, ಶ್ರೀಧರ ಭಟ್, ಪ್ರಕಾಶ್ ಕುಕ್ಕೆ.

Categories
ತೀರ್ಥಹಳ್ಳಿ ಶಿಕ್ಷಣ

ಪಿಯುಸಿ ವಿದ್ಯಾರ್ಥಿ ಸಾಧಕರು-2024

ಪಿಯುಸಿ ವಿದ್ಯಾರ್ಥಿ ಸಾಧಕರು-2024
ಗ್ರಾಮೀಣ ಪ್ರತಿಭೆ ತೀರ್ಥಹಳ್ಳಿಗೆ 2ನೇ ಟಾಪರ್!
– ಮಾಳೂರು ಕಾಲೇಜು ವಿದ್ಯಾರ್ಥಿನಿ ಮನವಿ ಸಾಧನೆ
– ಶೇ.86 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದ ಕಾಲೇಜು

NAMMUR EXPRESS NEWS
ತೀರ್ಥಹಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಾಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯಾದ ಮನವಿ ಯು ಉತ್ತಮ ಅಂಕ ಗಳಿಸಿ ತೀರ್ಥಹಳ್ಳಿ ತಾಲೂಕಿಗೆ ಹೆಮ್ಮೆಯನ್ನು ತಂದಿದ್ದಾರೆ. ಪಿಯುಸಿ ವಿಜ್ಞಾನ ವಿಭಾಗದಲ್ಲಿ 586 ಅಂಕಗಳನ್ನು ಗಳಿಸಿದ್ದಾರೆ. ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕವನ್ನ ಗಳಿಸಿ ತೀರ್ಥಹಳ್ಳಿ ತಾಲೂಕಿಗೆ ಸೆಕೆಂಡ್ ಟಾಪರ್ ಆಗಿದ್ದಾರೆ. ಈಕೆ ಗಬಡಿಯ ಉಮೇಶ್ ಮತ್ತು ಶ್ಯಾಮಲಾ ದಂಪತಿಯ ಪುತ್ರ. ಈಕೆ ಸರ್ಕಾರಿ ಕಾಲೇಜುಗಳ ಪೈಕಿ ಟಾಪರ್ ಆಗಿದ್ದಾರೆ.

ಶೇ.86 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದ ಕಾಲೇಜು

ಶೇ.86 ಫಲಿತಾಂಶದೊಂದಿಗೆ ಮಾಳೂರು ಪಿಯು ಕಾಲೇಜು ಉತ್ತಮ ಸಾಧನೆ ಮಾಡಿದೆ. ಪರೀಕ್ಷೆ ಕುಳಿತ 65 ಮಂದಿ ಪೈಕಿ 56 ಮಂದಿ ಪಾಸ್ ಆಗಿದ್ದಾರೆ.

Categories
ಶಿವಮೊಗ್ಗ

ಬಸ್, ಓಮಿನಿ ಡಿಕ್ಕಿ: ಮೂವರು ಸಾವು!

ಬಸ್, ಓಮಿನಿ ಡಿಕ್ಕಿ: ಮೂವರು ಸಾವು!
– ಹಲವರು ಗಂಭೀರ: ಶಿಕಾರಿಪುರ ಶಿವಮೊಗ್ಗ ಮಾರ್ಗದಲ್ಲಿ ಘಟನೆ

NAMMUR EXPRESS NEWS
ಕೆಎಸ್‌ಆರ್‌ಟಿಸಿ ಬಸ್ ಹಾಗೂ ಒಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ – ಶಿಕಾರಿಪುರ ಮಾರ್ಗದಲ್ಲಿ ನಡೆದಿದೆ. ಶಿವಮೊಗ್ಗ-ಶಿಕಾರಿಪುರ ಮಾರ್ಗದ ಚಿನ್ನಿಕಟ್ಟೆ ಬಿದರಳ್ಳಿ ಗ್ರಾಮದ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಒಮಿನಿ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಓಮಿನಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದು ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ. ಒಮಿನಿ ಕಾರಿನಲ್ಲಿ ಸೂರಗೊಂಡನಕೊಪ್ಪದಿಂದ ನಾಲ್ವರು ಶಿಕಾರಿಪುರದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ಮೃತಪಟ್ಟವರಲ್ಲಿ ಓರ್ವ ಹರಮಘಟ್ಟದವನು ಹಾಗೂ ಇನ್ನಿಬ್ಬರು ಸೂರಗೊಂಡನಕೊಪ್ಪದವರು ಎಂದು ತಿಳಿದುಬಂದಿದ್ದು, ಅವರ ಗುರುತು ಇನ್ನಷ್ಟೆ ಗೊತ್ತಾಗಬೇಕಿದೆ. ಬಸ್ ಒಮಿನಿಗೆ ಡಿಕ್ಕಿಯಾಗಿ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿದ್ದು ಬಸ್‌ನ ಮುಂದಿನ ಚಕ್ರ ಕಳಚಿಹೋಗಿದ್ದು ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಮಾರುತಿ ಒಮಿನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮೃತದೇಹಗಳು ಛಿದ್ರಗೊಂಡಿವೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.