Categories
ತೀರ್ಥಹಳ್ಳಿ ಶಿಕ್ಷಣ

ತೀರ್ಥಹಳ್ಳಿ ಸಹ್ಯಾದ್ರಿ ICSE 100% ಫಲಿತಾಂಶದ ಸಾಧನೆ

ತೀರ್ಥಹಳ್ಳಿ ಸಹ್ಯಾದ್ರಿ ICSE 100% ಫಲಿತಾಂಶದ ಸಾಧನೆ
– 50 ವಿದ್ಯಾರ್ಥಿಗಳ ಪೈಕಿ 22 ಮಂದಿ ಡಿಸ್ಟಿಂಕ್ಷನ್, 25ಮಂದಿ ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ
– ಸಾನ್ವಿ ಸುಧೀರ್ ಶೇ.96 ಅಂಕ ಪಡೆದು ಶಾಲೆಗೆ ಟಾಪರ್

NAMMUR EXPRESS NEWS
ತೀರ್ಥಹಳ್ಳಿ ಬೆಟ್ಟಮಕ್ಕಿಯಲ್ಲಿರುವ ಸಹ್ಯಾದ್ರಿ ಆಂಗ್ಲ ಮಾಧ್ಯಮ ಶಾಲೆಯ ಐಸಿಎಸ್‌ಇ ವಿಭಾಗ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ 50 ವಿದ್ಯಾರ್ಥಿಗಳ ಪೈಕಿ 22 ಮಂದಿ ಡಿಸ್ಟಿಂಕ್ಷನ್, 25ಮಂದಿ ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಾನ್ವಿ ಸುಧೀರ್ 96% ಅಂಕ ಪಡೆದು ಶಿಕ್ಷಣ ಸಂಸ್ಥೆಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. ಶಾಲೆಗೆ ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಪ್ರಾಂಶುಪಾಲ ಡಾ.ಜಗದೀಶ್ ಅಭಿನಂದಿಸಿ ಶುಭ ಕೋರಿದ್ದಾರೆ.

ತೀರ್ಥಹಳ್ಳಿ ಸಹ್ಯಾದ್ರಿ ಸಂಸ್ಥೆ ಸಾಧನೆ

ಪಿಯುಸಿ ಬೋರ್ಡ್ ಫಲಿತಾಂಶದಲ್ಲೂ ಶೇ.100ರ ದಾಖಲೆ ಮಾಡಿದ್ದ ತೀರ್ಥಹಳ್ಳಿ ಸಹ್ಯಾದ್ರಿ ಸಮೂಹ ಸಂಸ್ಥೆ. ಇದೀಗ ಐಸಿಎಸ್‌ಇ ವಿಭಾಗದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದಿದೆ. ಈ ಮೂಲಕ ತಾಲೂಕಿನ ಹೆಮ್ಮೆಯ ಸಂಸ್ಥೆಯಾಗಿ ಹೊರ ಹೊಮ್ಮಿದೆ.

Categories
ಚಿಕ್ಕಮಗಳೂರು ಮಲ್ನಾಡ್

ಮಲೆನಾಡಲ್ಲಿ ಮಳೆ ಬಂತು!

ಮಲೆನಾಡಲ್ಲಿ ಮಳೆ ಬಂತು!
– ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ
– ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ
– ರಾಜ್ಯದಲ್ಲೂ ಮಳೆ ಸೂಚನೆ

NAMMUR EXPRESS NEWS
ಚಿಕ್ಕಮಗಳೂರು/ ಶಿವಮೊಗ್ಗ: ಚಿಕ್ಕಮಗಳೂರು ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮಲೆನಾಡ ಅನೇಕ ಭಾಗಗಳಲ್ಲಿ ಮಳೆ ಆಗುವ ಸಾಧ್ಯತೆಗಳಿದೆ. ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಕಾಫಿನಾಡಿಗೆ ಕೊನೆಗೂ ವರುಣದೇವ ಕರುಣೆ ತೋರಿದ್ದಾನೆ. ಕಳೆದೊಂದು ಗಂಟೆಯಿಂದ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ರಸ್ತೆಯಲ್ಲಿ ಅರ್ಧ ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡಿದ್ದಾರೆ. 41 ಡಿಗ್ರಿ ತಲುಪುತ್ತಿದ್ದ ಬಿಸಿಲ ತಾಪಮಾನಕ್ಕೆ ಜನ ಹೈರಾಣಾಗಿದ್ದರು. ಇದೀಗ ಧಾರಾಕಾರ ಮಳೆ ಕಂಡು ರೈತರು, ಕಾಫಿ ಬೆಳೆಗಾರರ ಸಂತಸಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಸಾಧ್ಯತೆ

ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು ಮಳೆ ಆಗುವ ಸಾಧ್ಯತೆ ಇದೆ. ಚುನಾವಣೆ ನಡೆಯುತ್ತಿದ್ದು, ಮತದಾನಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಭಾರೀ ಮಳೆ

ಸೋಮವಾರ ಸಂಜೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗಿತ್ತು. ಬೆಂಗಳೂರಿನ ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಇನ್ನೂ ಕೆಲವೆಡೆ ಮರಗಳು ಬಿದ್ದು ಹಾನಿಯಾಗಿತ್ತು.

Categories
ಚುನಾವಣಾ ಸುದ್ದಿ ತೀರ್ಥಹಳ್ಳಿ

ತೀರ್ಥಹಳ್ಳಿಯ ಎಲ್ಲೆಡೆ ಶಾಂತಿಯುತ ಮತದಾನ!

ತೀರ್ಥಹಳ್ಳಿಯ ಎಲ್ಲೆಡೆ ಶಾಂತಿಯುತ ಮತದಾನ!
– ಘಟಾನುಘಟಿ ನಾಯಕರಿಂದ ಮತದಾನ: ಬಿಸಿಲ ನಡುವೆ ಉತ್ತಮ ಪ್ರತಿಕ್ರಿಯೆ
– ಮತಗಟ್ಟೆಗಳಿಗೆ ಭೇಟಿ ನೀಡಿದ ಆರಗ, ಕಿಮ್ಮನೆ, ಆರ್. ಎಂ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಮುಂಜಾನೆಯಿಂದಲೇ ಮತದಾನ ಬಿರುಸಾಗಿ ನಡೆಯಿತು. ಮಧ್ಯಾಹ್ನ ಬಿಸಿಲು ಹಾಗು ಸಂಜೆ ಮಳೆಯ ಆತಂಕದ ಹಿನ್ನೆಲೆಯಲ್ಲಿ ಮತದಾರರು ಬೆಳಗ್ಗೆಯೇ ಮತ ಹಾಕಲು ಧಾವಿಸಿದರು. ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ತಾಲೂಕಿನ ಘಟಾನುಘಟಿ ನಾಯಕರಾದ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ.ಆರ್ ಎಂ ಮಂಜುನಾಥ್ ಗೌಡ ಮತದಾನ ಮಾಡಿದರು.
ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ಶಾಲೆಯಲ್ಲಿ ಆರ್ ಎಂ ಮಂಜುನಾಥ್ ಗೌಡ ಮತದಾನ ಮಾಡಿ ಈ ಬಾರಿ ಗೀತಾ ಶಿವರಾಜಕುಮಾರ್ ಅವರಿಗೆ ಗೆಲುವು,ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದರು.

ಇನ್ನು ಶಾಸಕ ಆರಗ ಜ್ಞಾನೇಂದ್ರ ಅವರು ಗುಡ್ಡೆಕೊಪ್ಪ ಸರ್ಕಾರಿ ಶಾಲೆಗೆ ಕುಟುಂಬಸ್ಥರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಎಲ್ಲಾರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸೋಣ ಎಂದರು. ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಸೊಪ್ಪುಗುಡ್ಡೆಯಲ್ಲಿ ಮತದಾನ ಮಾಡಿದರು.

ಎಲ್ಲಾ ಬೂತಲ್ಲೂ ಸ್ನೇಹ ಮಯ ರಾಜಕಾರಣ!

ತೀರ್ಥಹಳ್ಳಿ ತಾಲೂಕಿನ ಎಲ್ಲಾ ಬೂತಲ್ಲೂ ಸ್ನೇಹ ಮಯವಾಗಿ ಮತದಾನ ನಡೆಯಿತು. ಬಿಸಿಲಿನ ತಾಪ ಹೆಚ್ಚಾದ ಕಾರಣ ಎರಡೂ ಪಕ್ಷದವರು ವಿವಿಧ ಪಾನೀಯ, ಊಟದ ವ್ಯವಸ್ಥೆಯನ್ನು ಪಕ್ಷಬೇಧ ಬಿಟ್ಟು ಮಾಡಿದರು.

Categories
ತೀರ್ಥಹಳ್ಳಿ

ಸರ್ಕಾರಿ ಆಸ್ಪತ್ರೆ ನೌಕರನಿಂದ ಬಿಜೆಪಿ ಚುನಾವಣಾ ಪ್ರಚಾರ: ಸುಳ್ಳು ಮಾಹಿತಿ

ಸರ್ಕಾರಿ ಆಸ್ಪತ್ರೆ ನೌಕರನಿಂದ ಬಿಜೆಪಿ ಚುನಾವಣಾ ಪ್ರಚಾರ: ಸುಳ್ಳು ಮಾಹಿತಿ
– ರಾಜಕೀಯ ಕಾರಣಕ್ಕೆ ಇನ್ನೊಬ್ಬರ ಜೀವನಕ್ಕೆ ಕಲ್ಲು ಹಾಕುವುದು ಬೇಡ: ಶ್ರೀಕಾಂತ್ ಅತ್ತಿಕೊಡಿಗೆ, ಭರತ್

NAMMUR EXPRESS NEWS
ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದ್ ಎಂಬುವವರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸದೆ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಇತ್ತೀಚಿಗೆ ಸುಳ್ಳು ಆರೋಪ ಮಾಡಿ ಅತನ ಜೀವನಕ್ಕೆ ಕಲ್ಲು ಹಾಕಲಾಗುತ್ತಿದೆ.
ಗ್ರಾಮೀಣ ಭಾಗದ ಆಸ್ಪತ್ರೆಗೆ ಹೊಸಬರ ನೇಮಕ ಬೇಡ. ಈತನ ಮೇಲೆ ಕೆಲವರು ರಾಜಕೀಯ ಉದ್ದೇಶದಿಂದ ಆರೋಪ ಮಾಡಿದ್ದಾರೆ ಎಂದು ಯುವ ಮುಖಂಡರಾದ ಶ್ರೀಕಾಂತ್ ಅತ್ತಿಕೊಡಿಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Categories
ಚುನಾವಣಾ ಸುದ್ದಿ ತೀರ್ಥಹಳ್ಳಿ ರಾಜಕೀಯ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಮತದಾನ: ಪತಿ ತೀರಿಕೊಂಡರೂ ಮತ ಹಾಕಿದ ಮಹಿಳೆ!

ತೀರ್ಥಹಳ್ಳಿಯಲ್ಲಿ ಮತದಾನ: ಪತಿ ತೀರಿಕೊಂಡರೂ ಮತ ಹಾಕಿದ ಮಹಿಳೆ!
– ಸುಳುಗೋಡು ಯಡೂರು ಬೂತ್ ನಂ 171 ನಲ್ಲಿ ಕೈಕೊಟ್ಟ ಮತಯಂತ್ರ: 45 ನಿಮಿಷ ಮತದಾನ ವಿಳಂಬ
– ಸಿಂದೂವಾಡಿ ಮತಕೇಂದ್ರದಲ್ಲಿ ಕೈಕೊಟ್ಟ ಮತ ಯಂತ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಜನ ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಈ ನಡುವೆ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಮತದಾನ ವಿಳಂಬವಾಯಿತು. ತೀರ್ಥಹಳ್ಳಿ ತಾಲ್ಲೂಕಿನ ಸುಳುಗೋಡು ಗ್ರಾಮದಲ್ಲಿ ಬೂತ್ ನಂ 171ನಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಮತ ಚಲಾಯಿಸಲು ಬಂದ ಮತದಾರರು 45 ನಿಮಿಷಗಳ ಕಾಲ ಕಾಯಬೇಕಾಯಿತು. ಕೂಲಿ ಕೆಲಸಕ್ಕೆ ಹೋಗಬೇಕಿದ್ದ ಕಾರ್ಮಿಕರು, ಬೇಗ ಮತದಾನಕ್ಕೆ ಅವಕಾಶ ಸಿಗದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಪತಿ ತೀರಿಕೊಂಡ ಸುದ್ದಿ ತಿಳಿದ ಮೇಲೂ ಮತ ಹಾಕಿದ ಮಹಿಳೆ

ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಪಂಚಾಯತ್ ಆಡುಗೋಡಿನ ಕಲಾವತಿ ವೆಂಕಟೇಶ್ ಇವರ ಪತಿ ವೆಂಕಟೇಶ್ ಮಂಗಳವಾರ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಓಟು ಹಾಕಲು ಹೊರಡುವುದಕ್ಕಿಂತ ಮುಂಚೆ ಕಲಾವತಿ ವೆಂಕಟೇಶ್ ಅವರಿಗೆ ವಿಷಯ ತಿಳಿದಿದೆ. ದುಃಖದಲ್ಲೂ ಗಂಡ ತೀರಿಕೊಂಡ ಸುದ್ದಿ ತಿಳಿದ ಮೇಲೂ ದೇಶದ ಭವಿಷ್ಯಕ್ಕಾಗಿ ಓಟು ಹಾಕಲೇಬೇಕು ಎಂದು ಹಠ ಮಾಡಿ ಓಟು ಮಾಡಿ ಮಾದರಿಯಾದರು. ಇವರ ಈ ಮಾದರಿ ಕಾರ್ಯ ಎಲ್ಲೆಡೆ ಮೆಚ್ಚುಗೆ ಕಾರಣವಾಗಿದೆ.

– ಸಿಂದೂವಾಡಿ ಮತಕೇಂದ್ರದಲ್ಲಿ ಕೈಕೊಟ್ಟ ಮತ ಯಂತ್ರ!

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಸಿಂಧೂವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮತಗಟ್ಟೆ ಸಂಖ್ಯೆ 128ರಲ್ಲಿ ಮತದಾನ ಪ್ರಕ್ರಿಯೆ ವೇಳೆ ತಾಂತ್ರಿಕ ದೋಷದಿಂದ ಮತಯಂತ್ರ ಕೈಕೊಟ್ಟಿದೆ. ಬೆಳಗ್ಗಿನಿಂದ ಸುಮಾರು 28 ಮತ ಚಲಾವಣೆಯ ಬಳಿಕ ಮತಯಂತ್ರ ಹಾಳಾಗಿರುವುದು ಮತದಾರರಲ್ಲಿ ಕೆಲ ಸಮಯದ ಕಾಲ ಆತಂಕ ಸೃಷ್ಟಿಸಿತ್ತು. ಚಲಾವಣೆಯಾದ ಮತಗಳು ಕೂಡ ಏನಾದವೂ ಎಂಬ ಗೊಂದಲ ನಿರ್ಮಾಣವಾಗಿತ್ತು. ತಕ್ಷಣ ಬೂತ್ ಸಿಬ್ಬಂದಿಗಳು ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು ತಾಂತ್ರಿಕ ಸಿಬ್ಬಂದಿಗಳನ್ನು ಕರೆಸಿಕೊಂಡು ಇವಿಎಂ ಮಿಷನ್‌ ದುರಸ್ಥಿಗೊಳಿಸಿದ್ದಾರೆ. ಈ ಪ್ರಕ್ರಿಯೆ ಸುಮಾರು 20 ನಿಮಿಷ ನಡೆದಿದ್ದರಿಂದ ಸಿಂಧೂವಾಡಿ ಮತಕೇಂದ್ರದಲ್ಲಿ ಕೆಲ ಕಾಲ ಗೊಂದಲಕ್ಕೆ ಈಡಾಗಿತ್ತು.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ
ಬಾವಿಗೆ ಬಿದ್ದ ನಾಯಿ ರಕ್ಷಿಸಿದರು!
– ಬಂಟ್ವಾಳ ಅಗ್ನಿಶಾಮಕ ತಂಡದ ಮಾನವೀಯ. ಸೇವೆಗೆ ಮೆಚ್ಚುಗೆ
– ಮಂಗಳೂರು: ಕೈದಿ ವೆನ್ಲಾಕ್‌ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣು!

NAMMUR EXPRESS NEWS
ಬಂಟ್ವಾಳ: ಪಾಳು ಬಾವಿಗೆ ಬಿದ್ದ ನಾಯಿಯೊಂದನ್ನು ಬಂಟ್ವಾಳ ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ ಮೊಡಂಕಾಪಿನ ಗಾಂದೋಡಿ ಬಳಿ ನಡೆದಿದೆ. ಸ್ಥಳೀಯರ ಮಾಹಿತಿ ಪ್ರಕಾರ ನಾಯಿಯು ಕಳೆದ ಮೂರು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದು, ಬಾವಿಯನ್ನು ಯಾರೂ ಉಪಯೋಗಿಸದ ಹಿನ್ನೆಲೆಯಲ್ಲಿ ನಾಯಿ ಬಿದ್ದಿರುವುದು ಗಮನಕ್ಕೆ ಬಂದಿರಲಿಲ್ಲ. ಆದರೆ ಇಂದು ನಾಯಿ ಬಾವಿಯಲ್ಲಿರುವುದು ಗೊತ್ತಾಗಿದ್ದು, ಗಾಂದೋಡಿ ನಿವಾಸಿ ವಿಶ್ವನಾಥ ಶೆಟ್ಟಿ ಅವರು ಪೊಲೀಸ್ 100 ಸಂಖ್ಯೆಗೆ ಕರೆ ಮಾಡಿದ್ದು, ಅವರು ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಸಿಬಂದಿಯೊಬ್ಬರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ನಾಯಿಗೆ ಹಗ್ಗವನ್ನು ಕಟ್ಟಿದ್ದಾರೆ. ಅವರು ಮೇಲೆ ಬಂದ ಬಳಿಕ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲಾಗಿದೆ. ಕಾಡು ಹಂದಿ ಸ್ಥಳದಲ್ಲಿ ಸಾವು: ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತಕ್ಕೆ ಒಳಗಾಗಿ ಕಾಡಹಂದಿಯೊಂದು ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೈದಿ ವೆನ್ಲಾಕ್‌ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣು!

ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರಣಾಧೀನ ಕೈದಿ ಮಂಜೇಶ್ವರ ಬಳಿಯ ಬಂದ್ಯೋಡು ನಿವಾಸಿ ಮಹಮ್ಮದ್‌ ನೌಫಾಲ್‌ (24) ಆಸ್ಪತ್ರೆಯ ಕೊಠಡಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೌಫಾಲ್‌ 2022ರ ಡಿಸೆಂಬರ್‌ನಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಕೊಣಾಜೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ. ನಂತರದಲ್ಲಿ ಮಂಗಳೂರಿನ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಆತನಿಗೆ ಜಾಮೀನು ಕೊಡಿಸುವುದಕ್ಕೂ ಯಾರು ಬಂದಿರಲಿಲ್ಲ.

ಅತಿಯಾದ ಡ್ರಗ್ಸ್‌ ಸೇವನೆ ಮಾಡಿಕೊಂಡಿದ್ದ ಆತನಿಗೆ ಮಾದಕ ವಸ್ತು ಸಿಗದೆ ಇದ್ದಾಗ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಈ ಕಾರಣದಿಂದ ಜೈಲಿನವರು ನೌಫಾಲ್‌ನನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದರು. ಏ.26ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಮೇ 6ರಂದು ಮುಂಜಾನೆ 4 ಗಂಟೆಗೆ ಬೆಡ್‌ಶೀಟ್‌ ಅನ್ನೇ ಕಿಟಕಿಗೆ ಕಟ್ಟಿಕೊಂಡು ನೇಣುಬಿಗಿದು ಪ್ರಾಣ ಕಳೆದುಕೊಂಡಿದ್ದಾನೆ.

ಆಸ್ಪತ್ರೆಯ ಅದೇ ಕೊಠಡಿಯಲ್ಲಿಇತರೆ ನಾಲ್ವರು ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದರೂ ಇದು ಅವರ ಗಮನಕ್ಕೆ ಬಂದಿರಲಿಲ್ಲ. ಹೊರಗಡೆ ಕಾವಲು ಕಾಯುತ್ತಿದ್ದ ಪೊಲೀಸರಿಗೂ ಈ ವಿಚಾರ ಗೊತ್ತಾಗಿರಲಿಲ್ಲ. ಪಾಂಡೇಶ್ವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Categories
ರಾಜ್ಯ ಶಿಕ್ಷಣ

ಎಸ್. ಎಸ್. ಎಲ್. ಸಿ ಫಲಿತಾಂಶಕ್ಕೆ ಕ್ಷಣಗಣನೆ

ಎಸ್. ಎಸ್. ಎಲ್. ಸಿ ಫಲಿತಾಂಶಕ್ಕೆ ಕ್ಷಣಗಣನೆ
– ಮೇ 8 ಅಥವಾ 9ರಂದು ಫಲಿತಾಂಶ ಪ್ರಕಟ
– ಫಲಿತಾಂಶ ನೋಡೋದು ಹೇಗೆ… ಇಲ್ಲಿದೆ ಡೀಟೇಲ್ಸ್!

NAMMUR EXPRESS NEWS
ಬೆಂಗಳೂರು: ಬಹು ನಿರೀಕ್ಷೆಯಿಂದ ಕಾಯುತ್ತಿರುವ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 8 ಅಥವಾ 9ಕ್ಕೆ ಪ್ರಕಟವಾಗುವ ಎಲ್ಲಾ ಸಾಧ್ಯತೆಗಳಿವೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEAB) ತನ್ನ ಅಧಿಕೃತ ವೆಬ್‌ಸೈಟ್ kseab.karnataka.gov.in ನಲ್ಲಿ 10 ನೇ ತರಗತಿ ಅಥವಾ SSLC ಫಲಿತಾಂಶಗಳನ್ನು ಈ ವಾರವೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಫಲಿತಾಂಶಗಳನ್ನು karresults.nic.in ನಲ್ಲಿಯೂ ಪರಿಶೀಲಿಸಬಹುದು. ಫಲಿತಾಂಶಗಳು ಮೇ 8 ಇಲ್ಲವೇ 9ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಸಿಕ್ಕಿದೆ.ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಈಗಾಗಲೇ ಸಂಪೂರ್ಣಗೊಂಡಿದೆ.

ಹೀಗಾಗಿ ಪರೀಕ್ಷಾ ಮಂಡಳಿ ಫಲಿತಾಂಶದ ಸರ್ವ ಸಿದ್ದತೆ ಮಾಡಿಕೊಂಡಿದೆ. ಎರಡನೇ ಹಂತದ ಲೋಕಸಭೆ ಚುನಾವಣೆ ಕಾರಣ ಫಲಿತಾಂಶ ತಡವಾಗುತ್ತಿದೆ. ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಎಸ್​ಎಸ್​​ಎಲ್​ಸಿ ಪರೀಕ್ಷೆ ನಡೆದಿದೆ. ಇದರ ಫಲಿತಾಂಶ ಈ ವಾರದಲ್ಲಿ ಪ್ರಕಟವಾಗಲಿದೆ. ಮತದಾನದ ಮುಗಿದ ಎರಡು ದಿನದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮೇ 8 ಬುಧವಾರ ಇಲ್ಲವೇ ಮೇ 9ರಂದು ಗುರುವಾರ ಪ್ರಕಟವಾಗುವ ಸಾಧ್ಯತೆ ಇದೆ. ಮೇ 10 ರಂದು ಬಸವ ಜಯಂತಿ ಇರುವ ಕಾರಣ ಮೇ 9ರೊಳಗೆ ಫಲಿತಾಂಶ ಪ್ರಕಟ ಆಗಲಿದೆ.

ರಿಸಲ್ಟ್ ಚೆಕ್ ಮಾಡೋದು ಹೇಗೆ?

* ಫಲಿತಾಂಶ ಬಿಡುಗಡೆಯಾದಾಗ, ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಬಳಸಿಕೊಂಡು ತಮ್ಮ ರಿಸಲ್ಟ್​ ಪರಿಶೀಲಿಸಬಹುದು.

* ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ.

* ಮುಖಪುಟದಲ್ಲಿ, SSLC ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.

* ಲಾಗಿನ್ ಪುಟದಲ್ಲಿ ಕೇಳಿದಂತೆ ರೋಲ್ ಸಂಖ್ಯೆ ಮತ್ತು ಹೆಸರಿನಂತಹ ವಿವರಗಳನ್ನು ನಮೂದಿಸಿ.

* ಹೊಸ ಪುಟದಲ್ಲಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ.

Categories
ಚುನಾವಣಾ ಸುದ್ದಿ ರಾಜಕೀಯ ಶಿವಮೊಗ್ಗ

ಈಶ್ವರಪ್ಪ ಬಿಜೆಪಿ ಬೆಂಬಲ ಸುಳ್ಳು: ಮಾಧ್ಯಮಗೋಷ್ಠಿ!

ಈಶ್ವರಪ್ಪ ಬಿಜೆಪಿ ಬೆಂಬಲ ಸುಳ್ಳು: ಮಾಧ್ಯಮಗೋಷ್ಠಿ!
– ಮತದಾನದ ದಿನದಂದೇ ಹಳೆಯ ವಿಡಿಯೋ ವೈರಲ್
– ಅಪಪ್ರಚಾರದ ವಿರುದ್ಧ ಈಶ್ವರಪ್ಪ ಕೆಂಡಾಮಂಡಲ

NAMMUR EXPRESS NEWS
ಶಿವಮೊಗ್ಗ : ಮತದಾನದ ದಿನದಂದು ವೈರಲ್ ಆಗಿರುವ ವಿಡಿಯೋ ವಿರುದ್ಧ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದಿದ್ದಾರೆ. ಸಂಸದ ರಾಘವೇಂದ್ರನವರ ಪರ ಮತಯಾಚಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋ ಬಗ್ಗೆ ಮಾತನಾಡಿರುವ ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ರಾಘವೇಂದ್ರರಿಂದ ನೀಚ ಕೃತ್ಯಕ್ಕೆ ಇಳಿದಿದ್ದಾರೆ ಎಂದು ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತದಾನದ ದಿನ ರಾಘವೇಂದ್ರ ಅವರ ಪರವಾಗಿ ಮಾತನಾಡಿದ ಹಳೆಯ ವಿಡಿಯೋವೊಂದನ್ನ ವೈರಲ್ ಮಾಡಲಾಗುತ್ತಿದೆ. ಆದರೆ ಜನ ತೀರ್ಮಾನಿಸಿದ್ದಾರೆ. ನಾನು ಕಣದಿಂದ ಹಿಂದೆ ಸರಿದಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಏನಿದು ಸುಳ್ಳು ಸುದ್ದಿ?

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡಾಯ ಸಾರಿ ಪಕ್ಷೇತರರಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸರ್ಧೆ ಮಾಡಿ ಮಾಡಿರುವ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್ ಈಶ್ವರಪ್ಪ ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ವಿಡಿಯೋ ಹಾಗೂ ಸುದ್ದಿಯನ್ನು ಎಲ್ಲೆಡೆ ಚುನಾವಣೆ ದಿನವೇ ವೈರಲ್ ಮಾಡಲಾಯಿತು. ಪ್ರಧಾನಿ ಮೋದಿಗಾಗಿ ತ್ಯಾಗಕ್ಕೆ ಸಿದ್ದ ಎನ್ನುವ ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದಾರೆ. ಭಾರತದ ಹಿತ ದೃಷ್ಟಿಯಿಂದ ಮೋದಿಜಿ ಪ್ರಧಾನಿಯಾಗುವುದು ಅನಿವಾರ್ಯ ಹಾಗೂ ಅತ್ಯವಶ್ಯಕ, ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುವುದರಿಂದ ಲಾಭ ನೇರವಾಗಿ ಕಾಂಗ್ರೆಸ್‌ಗೆ ಆಗಲಿದೆ. ನಾನು ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡೆ ಬಂದವನು.

ಭಾರತ ವಿರೋದಿ ಜಿಹಾದಿ ಶಕ್ತಿಗಳನ್ನು ಬೆಂಬಲಿಸುವ ಕಾಂಗ್ರೆಸ್ ವಿರುದ್ಧ ನನ್ನ ಹೋರಾಟ ನಿತ್ಯ ನಿರಂತರ. ಈ ನಿಟ್ಟಿನಲ್ಲಿ ನಾನು ಈ ಚುನಾವಣೆಯಲ್ಲಿ ತಟಸ್ಥನಾಗುತ್ತಿದ್ದು ಶಿವಮೊಗ್ಗದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸೋಣ ಎಂದು ಕರೆ ನೀಡಿದ್ದಾರೆ ಎಂದು ವೈರಲ್ ಮಾಡಲಾಗಿತ್ತು. ಆದರೆ ಈಶ್ವರಪ್ಪ ಮಾಧ್ಯಮಕ್ಕೆ ಹೇಳಿಕೆ ನೀಡಿ ರಾಘವೇಂದ್ರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

Categories
ರಾಜಕೀಯ ರಾಜ್ಯ

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಶುರು!

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಶುರು!
– ರಾಜ್ಯದಲ್ಲಿ ಭಾರೀ ಕುತೂಹಲ: ಶಿವಮೊಗ್ಗ ಕ್ಷೇತ್ರ ಅಚ್ಚರಿ
– ಹಲವೆಡೆ ಕೈ ಕೊಟ್ಟ ಮತಯಂತ್ರ: ಹುರುಪಿನಿಂದ ಮತದಾನ

NAMMUR EXPRESS NEWS
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ, ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಶುರುವಾಗಿದೆ. ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ಮೊದಲ ಎರಡು ಹಂತಗಳ ಮತದಾನ ಮುಗಿದ ನಂತರ, 18 ನೇ ಲೋಕಸಭೆಯ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ, ಎರಡನೇ ಹಂತದ ಮತದಾನದಲ್ಲಿ ರಾಜ್ಯದಲ್ಲಿ ಈಗಾಗಲೇ 14 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ. ಇಂದು ಉಳಿದ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದ ಹಲವೆಡೆ ಕೈ ಕೊಟ್ಟ ಮತಯಂತ್ರದಿಂದ ಕೆಲ ಸಮಯ ತಡವಾಗಿದೆ. ಆದ್ರೂ ಜನ ಹುರುಪಿನಿಂದ ಮತದಾನ ಮಾಡುತ್ತಿದ್ದಾರೆ.

ಎಲ್ಲೆಲ್ಲಿ ಮತದಾನ?

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗಾವಿ, ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರಗಳು ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಾಗಿವೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವ ಕಾರಣ, ಬಿಜೆಪಿ ಗೆಲುವು ಕಷ್ಟವಾಗುತ್ತಾ ಎನ್ನುವ ಕುತೂಹಲ ಇದೆ.

ವಿಶೇಷ ಮತಗಟ್ಟೆ ಸ್ಥಾಪನೆ

ದೇಶಾದ್ಯಂತ 3ನೇ ಹಂತ ಹಾಗೂ ಕರ್ನಾಟಕದಲ್ಲಿ 2 ನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಇಂದು(ಮಂಗಳವಾರ) 14 ಜಿಲ್ಲೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರನ್ನ ಮತಗಟ್ಟೆಗಳತ್ತ ಸೆಳೆಯಲು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತಗಳು ಪಿಂಕ್‌ ಬಣ್ಣದ ಸಖಿ ಮತಗಟ್ಟೆ, ಗ್ಲೋಬಲ್‌ ವಾರ್ಮಿಂಗ್‌ ವಿಚಾರವಾಗಿ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಮತಗಟ್ಟೆ, ಕಲಬುರಗಿಯ ತೊಗರಿ ಕಣಜದ ಕೃಷಿ ವಿವರಗಳಿರುವ ಮಾಹಿತಿಗಳಿರುವ ಮತಗಟ್ಟೆ ಸೇರಿದಂತೆ ಮತ್ತಿತರ ಮಾಹಿತಿಗಳಿರುವ ಮತಗಟ್ಟೆಗಳನ್ನ ನಿರ್ಮಾಣ ಮಾಡಲಾಗಿದೆ.

Categories
ಉಡುಪಿ ಕರಾವಳಿ

ಉಡುಪಿಯಲ್ಲಿ ಹೆಚ್ಚಿದ ಆನ್ಲೈನ್ ಮೋಸ!

ಉಡುಪಿಯಲ್ಲಿ ಹೆಚ್ಚಿದ ಆನ್ಲೈನ್ ಮೋಸ!
– ನಂಬಿ ಹಣ ಕಳೆದುಕೊಳ್ಳುವವರೇ ಹುಷಾರು
– ಮೂರು ಪ್ರಕರಣ: ಮೂರು ತರ ಮೋಸ: ಸೈಬರ್ ಪೊಲೀಸ್ ಏನು ಮಾಡ್ತಿದೆ ಸ್ವಾಮಿ…?

NAMMUR EXPRESS NEWS
ಉಡುಪಿ: ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸ್ಕ್ಯಾಮರ್‌ಗಳು ಸಾಮಾಜಿಕ ಬಳಕೆದಾರರನ್ನು ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಕಂಡುಬರುತ್ತಿವೆ. ಈ ನಡುವೆ ಬುದ್ದಿವಂತರ ಊರು ಎಂಬ ಖ್ಯಾತಿ ಪಡೆದ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ಈ ವಂಚನೆಗೆ ಸಿಲುಕಿ ಹಣ, ಜೀವನ, ಜೀವ ಕಳೆದುಕೊಳ್ಳುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಹಣ ಮಾಡಲು ಹೋಗಿ ಬೀದಿಗೆ ಬರುತ್ತಿದ್ದಾರೆ.

ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಿವೃತ್ತ ಬ್ಯಾಂಕ್ ಅಧಿಕಾರಿ!
– ಉಡುಪಿಯ ಅಂಬಲಪಾಡಿ ಅಧಿಕಾರಿಗೇ ಮೋಸ!

ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೆ. ಎಂಬವರು ತಮ್ಮ ವಾಟ್ಸಾಪ್‌ಗೆ ಬಂದ ಲಿಂಕ್‌ಗೆ ಕ್ಲಿಕ್ ಮಾಡಿದ ಪರಿಣಾ ಬ್ಯಾಂಕ್ ಖಾತೆಯಿಂದ 1.75 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಅವರಿಗೆ ಮೇ 3ರಂದು ವಾಟ್ಸಾಪ್ ಗ್ರೂಪ್‌ಗೆ ಅಪರಿಚಿತ ಮೊಬೈಲ್ ನಂಬರ್ ನಿಂದ ಲಿಂಕ್ ಬಂದಿದೆ. ಇದನ್ನು ಕ್ಲಿಕ್ ಮಾಡಿದ ಕೂಡಲೇ ಅವರ ಮೂರು ಖಾತೆಗಳಲ್ಲಿದ್ದ ಹಣ ಬೇರೆಯವರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪೆನಿಯ ಯೂಸರ್ ನೇಮ್ ಹ್ಯಾಕ್ ಮಾಡಿ 21.14 ಲಕ್ಷ ರೂ. ವಂಚನೆ
– ಕಾರ್ಕಳದ ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಂಚನೆ

ಕಾರ್ಕಳದ ಪ್ರಸಿದ್ಧ ಗೋಡಂಬಿ ಫ್ಯಾಕ್ಟರಿ ಕೆದಿಂಜೆ ಗ್ರಾಮದ ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಯೂಸರ್‌ ನೇಮ್‌ ಹ್ಯಾಕ್‌ ಮಾಡಿ ಬಿಡ್ಡಿಂಗ್‌ ಸಲ್ಲಿಸಿ ಮೋಸ ಮಾಡಿದ ಕುರಿತು ಕಂಪನಿ ಮಾಲಕ ರಾಹುಲ್‌ ಅವರು ದೂರು ದಾಖಲಿಸಿದ್ದಾರೆ. ಭಾರತೀಯ ಸೇನೆಗೆ ಬಾದಾಮಿ ಪೂರೈಕೆ ಮಾಡುವ ಬಗ್ಗೆ ಕೇಂದ್ರ ಸರಕಾರದ ಮಾನ್ಯತೆ ಪಡೆದ gem.gov.in ವೆಬ್‌‌ಸೈಟ್‌ನಲ್ಲಿ ಬಹಿರಂಗ ಹರಾಜಿನಲ್ಲಿ ಏ.30ರಂದು ಬೆಳಗ್ಗೆ 5,12,500 ರೂ.ಗೆ ರಾಹುಲ್‌ ಬಿಡ್ ಮಾಡಿದ್ದರು. ಈ ನಡುವೆ ಅಜ್ಞಾತ ದುಷ್ಕರ್ಮಿಗಳು ಬೋಳಾಸ್ ಅಗ್ರೋ ಯೂಸರ್ ನೇಮ್ ಹ್ಯಾಕ್ ಮಾಡಿ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು, ಕಂಪನಿಯ ಹೆಸರಿನಲ್ಲಿ ಒಟ್ಟು 21,14,731 ರೂ.ಗೆ ಇಂಡಿಯನ್ ಆರ್ಮಿಯ ವೆಬ್‌ಸೈಟ್‌ನಲ್ಲಿ ಬಿಡ್ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

ಕೆವೈಸಿ ಅಪ್‌ಡೇಟ್ ನೆಪದಲ್ಲಿ ಹಣ ಎಗರಿಸಿದರು!
– ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕೆವೈಸಿ ಅಪ್‌ಡೇಟ್ ಮಾಡುವುದಾಗಿ ನಂಬಿಸಿ ಓಟಿಪಿ ಪಡೆದು ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 76 ಬಡಗಬೆಟ್ಟು ನಿವಾಸಿ ಗಣೇಶ್ ಕೆ.(33) ಎಂಬವರಿಗೆ ಮೇ 4ರಂದು ಅನಾಮಧೇಯ ವ್ಯಕ್ತಿ ಕರೆ ಮಾಡಿ ಬ್ಯಾಂಕ್‌ಗೆ ಸಂಬಂಧಪಟ್ಟಂತೆ ಕೆವೈಸಿ ಅಪ್‌ಡೇಟ್ ಮಾಡಬೇಕಾಗಿದ್ದು, ನಿಮ್ಮ ಮೊಬೈಲ್‌ಗೆ ಬಂದಿರುವ ಓಟಿಪಿ ನೀಡುವಂತೆ ಕೇಳಿಕೊಂಡಿದ್ದ. ಅದನ್ನು ನಂಬಿದ ಗಣೇಶ್, ಓಟಿಪಿ ನೀಡಿದ್ದು, ಆ ಕೂಡಲೇ ಅವರ ಖಾತೆಯಿಂದ 1.90 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ