Categories
ಜಾತಕ

ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿಮ್ಮ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಒಳಿತು? ಯಾವ ರಾಶಿಗೆ ಕೆಡುಕು?
– ಮೇ 7ಕ್ಕೆ ಯಾರಿಗೆ ಲಾಭ? ಯಾರಿಗೆ ನಷ್ಟ?

NAMMUR EXPRESS NEWS
2024 ಮೇ 07ರ ಮಂಗಳವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಲಾಭ .? ಯಾವ ರಾಶಿಯವರು ನಷ್ಟ..?

** ಮೇಷ :
ಪ್ರಮುಖ ವ್ಯವಹಾರಗಳಲ್ಲಿ ಆತುರ ಕೆಲಸ ಮಾಡುವುದಿಲ್ಲ. ಮನೆಯ ಹೊರಗೆ ಕಿರಿಕಿರಿ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ ಮತ್ತು ವ್ಯರ್ಥ ಪ್ರಯಾಣವನ್ನು ಮಾಡಬೇಕಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ತೊಂದರೆಗಳು ಉಂಟಾಗುತ್ತವೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ.

** ವೃಷಭ ರಾಶಿ :
ಆತ್ಮೀಯರಿಂದ ಶುಭ ಸುದ್ದಿ ದೊರೆಯುತ್ತದೆ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಸಹೋದರರೊಂದಿಗೆ ಸಾಮರಸ್ಯ ಉಂಟಾಗುತ್ತದೆ, ವ್ಯಾಪಾರ ಮತ್ತು ಉದ್ಯೋಗಗಳು ಲಾಭದಾಯಕವಾಗಿರುತ್ತವೆ.

** ಮಿಥುನ ರಾಶಿ :
ದೂರ ಪ್ರಯಾಣದಿಂದ ಅನಿರೀಕ್ಷಿತ ಬದಲಾವಣೆಗಳು ಉಂಟಾಗುತ್ತವೆ. ಕೌಟುಂಬಿಕ ಸಮಸ್ಯೆಗಳು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡುತ್ತವೆ. ಆರ್ಥಿಕ ವಿಷಯಗಳಲ್ಲಿ ಗೊಂದಲ ಉಂಟಾಗುತ್ತದೆ. ದೇಗುಲಕ್ಕೆ ಭೇಟಿ ನೀಡುತ್ತೀರಿ. ವೃತ್ತಿಪರ ವ್ಯವಹಾರಗಳು ಸ್ವಲ್ಪ ನಿರಾಶಾದಾಯಕವಾಗಿರುತ್ತವ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ.

** ಕಟಕ ರಾಶಿ :
ದೂರ ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಪರಿಚಯಗಳು ಉಂಟಾಗುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಹಣಕಾಸಿನ ವಿಷಯಗಳು ತೃಪ್ತಿಕರವಾಗಿರುತ್ತವೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ ಕೇಳುತ್ತೀರಿ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಉದ್ಯೋಗದ ವಾತಾವರಣ ಶಾಂತವಾಗಿರುತ್ತದೆ.

** ಸಿಂಹ ರಾಶಿ :
ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಮೌಲ್ಯಯುತವಾದ ವಸ್ತು ಲಾಭವನ್ನು ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತವೆ. ಬಾಲ್ಯದ ಗೆಳೆಯರ ಭೇಟಿ ಸಂತಸ ತರುತ್ತದೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.

** ಕನ್ಯಾ ರಾಶಿ :
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಬಾಲ್ಯದ ಗೆಳೆಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ವೃತ್ತಿಪರ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ಉದ್ಯೋಗಿಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಇರುತ್ತವೆ.

** ತುಲಾ ರಾಶಿ :
ಬಂಧು ಮಿತ್ರರೊಂದಿಗೆ ವಿನಾಕಾರಣ ವಾದ ವಿವಾದಗಳು ಉಂಟಾಗುತ್ತವೆ. ಕೌಟುಂಬಿಕ ವ್ಯವಹಾರಗಳಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕೈಗೊಂಡ ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ದೂರದ ಪ್ರಯಾಣದ ಸೂಚನೆಗಳಿವೆ. ದೇಗುಲಗಳಿಗೆ ಭೇಟಿ ನೀಡುತ್ತೀರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡಗಳು ಉಂಟಾಗುತ್ತವೆ.

** ವೃಶ್ಚಿಕ ರಾಶಿ :
ಔತಣಕೂಟಗಳಿಗೆ ಆಹ್ವಾನಗಳು ದೊರೆಯತ್ತವೆ. ಕೈಗೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ದೂರದ ಸಂಬಂಧಿಕರಿಂದ ಮಹತ್ವದ ಮಾಹಿತಿ ದೊರೆಯುತ್ತದೆ. ಹಣಕಾಸಿನ ವಿಷಯದಲ್ಲಿ ನಿರೀಕ್ಷಿತ ಪ್ರಗತಿ ಹೆಚ್ಚಾಗುತ್ತದೆ. ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿ ಹೆಚ್ಚಾಗುತ್ತದೆ.

** ಧನುಸ್ಸು ರಾಶಿ :
ಅಗತ್ಯಕ್ಕೆ ಆರ್ಥಿಕ ನೆರವು ದೊರೆತು, ದೀರ್ಘಾವಧಿ ಸಾಲಗಳನ್ನು ಸ್ವಲ್ಪ ಮಟ್ಟಿಗೆ ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಆಪ್ತ ಸ್ನೇಹಿತರಿಂದ ನಿರೀಕ್ಷಿತ ಬೆಂಬಲ ದೊರೆಯುತ್ತದೆ. ವ್ಯಾಪಾರಗಳು ಎಂದಿಗಿಂತಲೂ ಉತ್ತಮವಾಗಿರುತ್ತವೆ. ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ದೊರೆಯುತ್ತದೆ.

** ಮಕರ ರಾಶಿ :
ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಹಣಕಾಸಿನ ತೊಂದರೆಗಳು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡುತ್ತವೆ. ಪ್ರಮುಖ ಕೆಲಸಗಳಲ್ಲಿ ವೆಚ್ಚಗಳು ಮತ್ತು ಪ್ರಯತ್ನಗಳು ಹೆಚ್ಚಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳು ನಿರಾಶಾದಾಯಕವಾಗಿರುತ್ತವೆ.

** ಕುಂಭ ರಾಶಿ :
ಮನೆಯ ಹೊರಗೆ ಕಿರಿಕಿರಿಗಳು ಹೆಚ್ಚಾಗುತ್ತವೆ. ಆರೋಗ್ಯದ ವಿಷಯದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ಸಹೋದರರೊಂದಿಗೆ ವಿವಾದದ ಸೂಚನೆಗಳಿವೆ. ವ್ಯಾಪಾರ ಮತ್ತು ಉದ್ಯೋಗಗಳು ಸಾಮಾನ್ಯವಾಗಿ ನಡೆಯುತ್ತವೆ.

** ಮೀನ ರಾಶಿ :
ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾರೆ. ಪ್ರಮುಖ ವ್ಯವಹಾರಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ . ವ್ಯಾಪಾರಗಳು ಸುಗಮವಾಗಿ ನಡೆಯುತ್ತವೆ. ಉದ್ಯೋಗಿಗಳಿಗೆ ಹೊಸ ಪ್ರೋತ್ಸಾಹ ಸಿಗುತ್ತದೆ.

Categories
ಚುನಾವಣಾ ಸುದ್ದಿ ತೀರ್ಥಹಳ್ಳಿ ರಾಜಕೀಯ ಶಿವಮೊಗ್ಗ

ಶಿವಮೊಗ್ಗ ಚುನಾವಣೆಗೆ ಬೆಂಗಳೂರಿನಿಂದ 50 ಸಾವಿರ ಮತದಾರರು!

ಶಿವಮೊಗ್ಗ ಚುನಾವಣೆಗೆ ಬೆಂಗಳೂರಿನಿಂದ 50 ಸಾವಿರ ಮತದಾರರು!
– ಬಸ್, ಸಾರಿಗೆ ವ್ಯವಸ್ಥೆಯನ್ನು ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು
– ತೀರ್ಥಹಳ್ಳಿಗೂ ಸುಮಾರು 10,000 ಮತದಾರರ ಆಗಮನ

NAMMUR EXPRESS NEWS
ಶಿವಮೊಗ್ಗ /ತೀರ್ಥಹಳ್ಳಿ : ಶಿವಮೊಗ್ಗ ಲೋಕಸಭಾ ಚುನಾವಣೆ ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿದೆ. ಶಿವಮೊಗ್ಗ ಲೋಕ ಸಭಾ ಕ್ಷೇತ್ರಕ್ಕೆ ರಾಜಧಾನಿಯಲ್ಲಿರುವ ಸುಮಾರು 50,000ಕ್ಕೂ ಹೆಚ್ಚು ಮತದಾನರು ಬೆಂಗಳೂರಿನಿಂದ ಮತದಾನ ಮಾಡಲು ಆಗಮಿಸಿದ್ದಾರೆ. ರಾಜಧಾನಿಯಲ್ಲಿದ್ದು ತಮ್ಮ ಊರಿನಲ್ಲಿ ಮತ ಇರುವಂತಹ ಮತದಾರರು ಮತವನ್ನು ಚಲಾಯಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಸೇರಿದಂತೆ ಬೈಂದೂರು ಕ್ಷೇತ್ರದ ಮತದಾನರು ಕೂಡ ಆಗಮಿಸುತ್ತಿದ್ದಾರೆ. ಈಗಾಗಲೇ ಕಳೆದ ತಿಂಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶೇಷದ ಸಭೆಯನ್ನು ಮಾಡಿರುವ ರಾಘವೇಂದ್ರ ಹಾಗೂ ಎಲ್ಲಾ ಶಾಸಕರು, ಮಾಜಿ ಶಾಸಕರು ಹಾಗೂ ನಾಯಕರು, ಬೆಂಗಳೂರು ಬಿಜೆಪಿ ಸಮಿತಿ ಈಗ ತಾಲೂಕು ವಾರು ಬೆಂಗಳೂರು ಮಲೆನಾಡು ಮತದಾರರನ್ನು ಮತದಾನಕ್ಕೆ ಕರೆಸಿದೆ.

ನೂರಾರು ಬಸ್, ಕಾರುಗಳಲ್ಲಿ ಆಗಮನ!

ಶಿವಮೊಗ್ಗ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ತಾಲೂಕಿನ ಬೆಂಗಳೂರು ನಿವಾಸಿಗರನ್ನು ಈಗಾಗಲೇ ಸಂಪರ್ಕಿಸಲಾಗಿದ್ದು ಅವರನ್ನು ಮತದಾನಕ್ಕೆ ಕರೆಸಲಾಗಿದೆ. ಬೆಂಗಳೂರಿಂದ ಸಾವಿರಾರು ಜನ ಬಸ್, ಸ್ವತಃ ಕಾರು ವಾಹನಗಳಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಗೆ ಬಂದಿದ್ದಾರೆ.

ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ, ಉಡುಪಿ ಜಿಲ್ಲೆಯ ಬೈಂದೂರು ಸೇರಿ ಎಲ್ಲಾ ತಾಲೂಕು ಬೆಂಗಳೂರಲ್ಲಿರುವ ಹಾಗೂ ರಾಜ್ಯದ ವಿವಿಧ ಕಡೆ ಇರುವ ಮತದಾರರು ಆಗಮಿಸಿದ್ದಾರೆ.

ತೀರ್ಥಹಳ್ಳಿಯೇ ಪವರ್ ಸೆಂಟರ್!

ಬೆಂಗಳೂರಿನಲ್ಲಿರುವ ತೀರ್ಥಹಳ್ಳಿ ಮೂಲದ ಬಿಜೆಪಿ ಮಹಾಮಂಡಲ ಕೂಡ ರಚನೆ ಮಾಡಿದ್ದು, ಯುವ ಸಂಘಟಕ ಅರುಣ್ ಶೆಟ್ಟಿ ನೇತೃತ್ವದಲ್ಲಿ ಈಗಾಗಲೇ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯ ಸಂಘಟನೆಗೆ ಕೆಲಸ ಮಾಡುತ್ತಿದ್ದಾರೆ. ಇನ್ನು ಆಯಾಯ ತಾಲೂಕಿನ ಬಿಜೆಪಿ ಸಂಘಟಕರು ಹಾಗೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಇರುವಂತಹ ಮತದಾರರನ್ನ ಈ ಸಂಘಟನೆಯ ಜವಾಬ್ದಾರಿ ತೆಗೆದುಕೊಂಡಿದ್ದು ಸಾವಿರಾರು ಬಸ್ ಗಳು ಹಾಗೂ ಕಾರುಗಳು, ರೈಲುಗಳ ಮೂಲಕ ಮತದಾನರು ಆಗಮಿಸುತ್ತಿದ್ದಾರೆ. ಕಳೆದ ತೀರ್ಥಹಳ್ಳಿ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಗೆಲುವಿನಲ್ಲಿ ಈ ಮತದಾರರು ಪ್ರಮುಖ ಪಾತ್ರವಹಿಸಿದ್ದು, ಅಲ್ಲಿನ ಎಲ್ಲ ಬಿಜೆಪಿ ನಾಯಕರು ಮುಖಂಡರುಗಳು ಹಾಗೂ ಸಂಘಟಕರು ಕಾರ್ಯಕರ್ತರು ಕೂಡ ವಿಶೇಷವಾಗಿ ಆಸಕ್ತಿ ವಹಿಸಿ ಮತದಾನವನ್ನ ಮಾಡಿಸಿದ್ದರು. ಈ ರಾಘವೇಂದ್ರ ಅವರ ಚುನಾವಣೆಯಲ್ಲೂ ಕೂಡ ಇದೇ ರೀತಿಯ ಚಟುವಟಿಕೆ ನಡೆಯಲಿದೆ. ತೀರ್ಥಹಳ್ಳಿ ಭಾಗದ ಅತೀ ಹೆಚ್ಚು ಮತದಾರರು ಆಗಮಿಸಲಿದ್ದಾರೆ.

Categories
ಕರಾವಳಿ ಮಂಗಳೂರು

ಕರಾವಳಿಯಲ್ಲಿ ತಾಪಮಾನ ಹೆಚ್ಚಳ: ಆಡಳಿತ ಅಲರ್ಟ್!

ಕರಾವಳಿಯಲ್ಲಿ ತಾಪಮಾನ ಹೆಚ್ಚಳ: ಆಡಳಿತ ಅಲರ್ಟ್!
– ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೌಲಭ್ಯಕ್ಕೆ ಪ್ಲಾನ್
– ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ ತಾಲೂಕಿನಲ್ಲಿ 2 ಬೆಡ್ ,ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್ ಮೀಸಲು

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್,ಪ್ರತಿ ತಾಲೂಕಿನಲ್ಲಿ ಎರಡು ಬೆಡ್ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಬೆಡ್ ಗಳನ್ನು ಮೀಸಲಿಡಲಾಗಿದೆ. ದ.ಕ ಜಿಲ್ಲಾ ಅರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್ .ಆರ್.ತಿಮ್ಮಯ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಶಕಗಳ ತಾಪಮಾನವನ್ನು ಗಮನಿಸಿದರೆ 32 ಡಿಗ್ರಿ ಸೆಲ್ಸಿಯಸ್ 33 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿತ್ತು. ಈ ಬಾರಿ ತಾಪಮಾನ 36ರಿಂದ 40 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ ಎಂದರು.

ಬಿಸಿಲಲ್ಲಿ ಓಡಾಡಬೇಡಿ.. ಅರೋಗ್ಯ ಎಚ್ಚರ!

ತಾಪಮಾನದಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡುತ್ತಿರುವವರಿಗೆ ತಲೆ ನೋವು, ಸುಸ್ತು, ನಿಶ್ಯಕ್ತಿ,ಚರ್ಮ ತುರಿಕೆ, ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಕೆಲವೊಮ್ಮೆ ಬಿಸಿಲಿನಾಘಾತ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಮುಂಜಾಗ್ರತೆಯ ಕ್ರಮ ಕೈಗೊಳ್ಳುವ ಅಗತ್ಯ ವಿದೆ ಎಂದು ಡಾ.ತಿಮ್ಮಯ್ಯ ತಿಳಿಸಿದ್ದಾರೆ. ಬಿಸಿಲಿನ ಜಳ ಹೆಚ್ಚಿರುವ ಸಂದರ್ಭದಲ್ಲಿ ಹೊರಗೆ ಓಡಾಡದೆ ಇರುವುದು ಸೂಕ್ತ. ಶುದ್ಧ ನೀರಿನ ಸೇವನೆ,ಮಜ್ಜಿಗೆ ಸೇವನೆ,,ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಧರಿಸುವುದು ಬಿಸಿಲಿನ ನೇರ ಘಾತ ತಡೆಯಲು ಚಪ್ಪಲಿ ಧರಿಸುವುದು ಕೊಡೆ ಬಳಸುವುದು ಉತ್ತಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನಿರ್ಜಲೀಕರಣವಾಗದಂತೆ ಎಚ್ಚರ ವಹಿಸಬೇಕು ಎಂದು ಡಾ.ತಿಮ್ಮಯ್ಯ ಸಲಹೆ ನೀಡಿದರು.

ಡೆಂಗ್ಯೂ ಕೂಡ ಹೆಚ್ಚಾಯ್ತು..!

ದಕ್ಷಿಣ ಕನ್ನಡ ಜಿಲ್ಲಾ ರೋಗ ವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ. ಮರಗಳ ನಾಶ ,ವಾಹನಗಳ ದಟ್ಟಣೆ, ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಪಮಾನದ ಏರಿಕೆಯಾಗುತ್ತಿದೆ. ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೊಳ್ಳೆಗಳು ಹೆಚ್ಚುತ್ತಿರುವ ಕಾರಣ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ ಇದುವರೆಗೆ 108 ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ ಎಂದು ಹೇಳಿದ್ದಾರೆ.

Categories
ಅಡಿಕೆ-ದರ

ಅಡಿಕೆ ದರ 06-05-2024

ಅಡಿಕೆ ದರ
06-05-2024
ಸರಕು 72009 78100
ಬೆಟ್ಟೆ 50119 54119
ರಾಶಿ 32669 52712
ಗೊರಬಲು 20009 34699
Nammur Express
Categories
ಕರಾವಳಿ

ಧರ್ಮಸ್ಥಳದಲ್ಲಿ ಸರಣಿ ಅಪಘಾತ!

ಧರ್ಮಸ್ಥಳದಲ್ಲಿ ಸರಣಿ ಅಪಘಾತ!
– ಎರಡು ಆಟೋ ಹಾಗೂ ಮೂರು ಕಾರುಗಳ ನಡುವೆ ಸರಣಿ ಅಪಘಾತ
– ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ!

NAMMUR EXPRESS NEWS
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಪರಿಣಾಮ ಹಲವು ವಾಹನಗಳು ಜಖಂಗೊಂಡಿರುವ ಘಟನೆ ಸೋಮವಾರ ಸಂಜೆಯ ಸುಮಾರಿಗೆ ನಡೆದಿದೆ. ಧರ್ಮಸ್ಥಳದ ನೇತ್ರಾವತಿ ಬಳಿ ಪೂರ್ಜೆಬೈಲಿನ ಬಳಿ ರಿಕ್ಷಾವೊಂದು ಮಗುಚಿ ಬಿದ್ದಾಗ ಅದರ ಹಿಂದೆ ಬರುತ್ತಿದ್ದ ರಿಕ್ಷಾ ಹಾಗೂ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಎರಡು ರಿಕ್ಷಾ ಹಾಗೂ ಮೂರು ಕಾರುಗಳು ಜಖಂಗೊಂಡಿವೆ. ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಳಿದಂತೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ.

ಸೋಮವಾರ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ನೇತ್ರಾವತಿಯಿಂದ ಧರ್ಮಸ್ಥಳಕ್ಕೆ ಬರುವ ರಸ್ತೆಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅದರ ಹಿಂದೆ ಇದ್ದ ರಿಕ್ಷಾವೊಂದು ಅಪಘಾತ ಸಂಭವಿಸಿದ ರಿಕ್ಷಾಕ್ಕೆ ತಾಗಿ ಜಖಂಗೊಂಡಿದೆ. ವೇಗವಾಗಿ ಬರುತ್ತಿದ್ದ ಕಾರು ಮಗುಚಿ ಬಿದ್ದ ರಿಕ್ಷಾಕ್ಕೆ ಢಿಕ್ಕಿಹೊಡೆದಿದೆ. ಅದರ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ಒಂದರ ಹಿಂದೆ ಒಂದರಂತೆ ಢಿಕ್ಕಿ ಹೊಡೆದಿವೆ ಎಂದು ಧರ್ಮಸ್ಥಳ ಠಾಣಾ ಪೊಲೀಸರು ತಿಳಿಸಿದ್ದಾರೆ.

Categories
ಚುನಾವಣಾ ಸುದ್ದಿ ರಾಜಕೀಯ ಶಿವಮೊಗ್ಗ

ಶಿವಮೊಗ್ಗ ಕ್ಷೇತ್ರದಲ್ಲಿ ಕಣದಲ್ಲಿ ಯಾರು ಯಾರು?

ಶಿವಮೊಗ್ಗ ಕ್ಷೇತ್ರದಲ್ಲಿ ಕಣದಲ್ಲಿ ಯಾರು ಯಾರು?
– ಮಲೆನಾಡಲ್ಲಿ ಅಂತಿಮ ಹಂತದ ಚುನಾವಣೆ ಕಸರತ್ತು
– ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ಜಿಲ್ಲೆಗೆ ಹೊರಟ ಮತದಾರರು
– ಶಿವಮೊಗ್ಗ ಚುನಾವಣೆ ಕಣದಲ್ಲಿ 19 ಕೋಟಿ ಅಕ್ರಮ ಪತ್ತೆ!

NAMMUR EXPRESS NEWS
ಶಿವಮೊಗ್ಗ/ಬೆಂಗಳೂರು: ರಾಜ್ಯದ ಹೈವೋಲ್ಟ್ ಕ್ಷೇತ್ರ ಶಿವಮೊಗ್ಗದಲ್ಲಿ ಚುನಾವಣೆ ಕಾವು ಜೋರಾಗಿದೆ. ಬಿಜೆಪಿಯ ಹಾಲಿ ಸಂಸದ ಬಿ.ವೈ ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ಹಾಗೂ ಬಿಜೆಪಿಯಿಂದ ಬಂಡೆದ್ದು ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಕಣದಲ್ಲಿ ಉಳಿದಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯ ಗೆಲುವಿನ ನಾಗಾಲೋಟಕ್ಕೆ ತೊಡಕಾಗಬಹುದು. ಒಟ್ಟು 24 ಮಂದಿ ಕಣದಲ್ಲಿದ್ದಾರೆ.

ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ಜಿಲ್ಲೆಗೆ ಹೊರಟ ಮತದಾರರು

ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಮೇ 7 ನಡೆಯಲಿದ್ದು, ಬೆಂಗಳೂರಿನಲ್ಲಿರುವ ವಿವಿಧ ಜಿಲ್ಲೆಯವರು ಇದಕ್ಕಾಗಿ ಊರಿಗೆ ಹೊರಟಿದ್ದಾರೆ. ಹೀಗಾಗಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ಮತಗಟ್ಟೆಗೆ ತಲುಪಿದ ಅಧಿಕಾರಿಗಳು!

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಸಕಲ ರೀತಿಯಲ್ಲಿ ಸಿದ್ದತೆ ಕೈಗೊಂಡಿದ್ದು, ಮತಗಟ್ಟೆ ಅಧಿಕಾರಿಗಳು ತಮ್ಮ ತಂಡದೊಂದಿಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದು, ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕರು ಸ್ವಂತ ಊರುಗಳಿಗೆ ತೆರಳಲು ಮೆಜೆಸ್ಟಿಕ್/ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.

ಎಲ್ಲೆಲ್ಲಿ ಚುನಾವಣೆ?

ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳು ಹರಡಿಕೊಂಡಿವೆ. ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಾಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ.

19 ಕೋಟಿ ಅಕ್ರಮ ಪತ್ತೆ!

ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲಿವರೆಗೂ 19,07,47,952 ರೂಪಾಯಿ ಮೌಲ್ಯದ ಚಿನ್ನ, ನಗದು , ಅಮೂಲ್ಯ ವಸ್ತುಗಳನ್ನ ಜಪ್ತು ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ಗಳು ಹಾಗೂ ಅಕ್ರಮ ಅನಧಿಕೃತ ಸಾಗಾಣಿಕೆಯ ವಿರುದ್ಧ ಚುನಾವಣಾ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮೊತ್ತದ ನಗದು, ಚಿನ್ನಾಭರಣಗಳನ್ನ ಜಪ್ತಿ ಮಾಡಲಾಗಿದೆ.

Categories
ರಾಜ್ಯ

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರು!

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರು!
– 14 ಕ್ಷೇತ್ರದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ
– ಮತದಾನಕ್ಕೆ ಸಕಲ ಸಿದ್ದತೆ: ಪೊಲೀಸ್ ಬಂದೋಬಸ್ತ್
– 2.59 ಕೋಟಿ ಮತದಾರರಿಗೆ ಹಕ್ಕು: ಕಣದಲ್ಲಿ 206 ಪುರುಷರು, 21 ಮಹಿಳಾ ಅಭ್ಯರ್ಥಿಗಳು!

NAMMUR EXPRESS NEWS
ಬೆಂಗಳೂರು: ಲೋಕಸಭೆ ಚುನಾವಣೆಯ ರಾಜ್ಯದ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಕ್ಷೇತ್ರಗಳಲ್ಲೂ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್​, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಉತ್ತರ ಕರ್ನಾಟಕದ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಮತಗಟ್ಟೆಗೆ ಬಂದ ಚುನಾವಣೆ ಸಿಬ್ಬಂದಿ!

ಸೋಮವಾರ ಬೆಳಗ್ಗೆ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಸಿಬ್ಬಂದಿ ಗುರುತಿಸಲ್ಪಟ್ಟ ಸ್ಥಳಗಳಿಂದ ಮತದಾನಕ್ಕೆ ಪೂರಕ ಸಾಮಗ್ರಿಗಳನ್ನು ನಿರ್ದಿಷ್ಟಪಡಿಸಿದ ಮತಗಟ್ಟೆಗಳಿಗೆ ಕೊಂಡೊಯ್ಯಲಿದ್ದಾರೆ. ಮತಗಟ್ಟೆಗಳಲ್ಲಿ ಮತದಾರರಿಗೆ ಚುನಾವಣಾ ಆಯೋಗ ಮೂಲಸೌಕರ್ಯ ಕಲ್ಪಿಸಿದೆ. ಬಿಸಿಲಿನ ಬೇಗೆಯಿಂದ ಮತದಾನ ಕಡಿಮೆಯಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮತಗಟ್ಟೆಗಳಲ್ಲಿ ಜ್ಯೂಸ್, ಕುಡಿಯಲು ನೀರು, ಕುಳಿತುಕೊಳ್ಳಲು ಕುರ್ಚಿ, ನೆರಳಿಗೆ ಶಾಮಿಯಾನ ಮತ್ತಿತರ ಸವಲತ್ತುಗಳನ್ನು ಕಲ್ಪಿಸಿದೆ.

2.59 ಕೋಟಿ ಮತದಾರರಿಗೆ ಹಕ್ಕು

ಒಟ್ಟು 2,59,52,958 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಎಲ್ಲ 14 ಕ್ಷೇತ್ರಗಳಲ್ಲೂ ಸ್ಪರ್ಧಿಸಿವೆ. ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 73 ಹಾಗೂ 117 ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ 206 ಪುರುಷರು, 21 ಮಹಿಳಾ ಅಭ್ಯರ್ಥಿಗಳಿದ್ದಾರೆ.

Categories
ತೀರ್ಥಹಳ್ಳಿ

ಬಿಜೆಪಿ 400 ಕ್ಷೇತ್ರಗಳಲ್ಲಿ ಗೆಲುವು

ಬಿಜೆಪಿ 400 ಕ್ಷೇತ್ರಗಳಲ್ಲಿ ಗೆಲುವು
– ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುವುದು ಪಕ್ಕಾ: ಆರಗ ಜ್ಞಾನೇಂದ್ರ
– ಪ್ರಜ್ವಲ್ ಕೇಸ್ ನಮಗೆ ಏನೂ ತೊಂದರೆ ಆಗಲ್ಲ
– ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಹೇಳಿದ್ದೇನು?

NAMMUR EXPRESS NEWS
ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುವುದು ಪಕ್ಕಾ. ಸುಮಾರು 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿ ರಥಬೀದಿಯ ಬಿಜೆಪಿ ಚುನಾವಣೆಯ ಕಾರ್ಯಾಲಯದಲ್ಲಿ ನಡೆದ ಬಿಜೆಪಿಯ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸಬೇಕು. ಸಾವಿರಾರು ಕಾರ್ಯಕರ್ತರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಮನೆ ಮನೆಗೂ ಹೋಗಿ ಪ್ರಚಾರವನ್ನು ಕೂಡ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು, ಜನತೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಬಹುಮತವನ್ನು ಗಳಿಸಿ ರಾಘವೇಂದ್ರ ಅವರು ಜಯ ಗಳಿಸುತ್ತಾರೆ ಎಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಪ್ರಬಲವಾದ ನಾಯಕರಿಗೆ ನಾವು ಹೆಚ್ಚು ಆದ್ಯತೆಯನ್ನು ನೀಡಬೇಕು. ಏಕತೆಗೆ ಯಾವುದೇ ರೀತಿಯ ಭಂಗ ಬರದಂತೆ ರಾಷ್ಟ್ರವನ್ನು ಆಳಬೇಕು ಎಂಬುದು ಪ್ರತಿಯೊಬ್ಬರ ಉದ್ದೇಶವಾಗಿದೆ. ಜಗತ್ತಿನ ಬೇರೆ ದೇಶಗಳು ಕೂಡ ಹೆಮ್ಮೆಪಡುವಂತೆ ಮೋದಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ರಾಘವೇಂದ್ರ ಅವರು ಎಲ್ಲಾ ಕಡೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವುದರಿಂದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಎಲ್ಲಾ ಕಡೆಯಲ್ಲೂ ಕೂಡ ರಾಘವೇಂದ್ರ ಅವರ ಬಗ್ಗೆ ಪ್ರಚಾರ ಕಾರ್ಯ ನಡೆಯುತ್ತಿದೆ ಎಂದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದವರು ಉತ್ತಮವಾದ ಸ್ಪರ್ಧಿಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಸರಿಸಮಾನವಾದ ಅಭ್ಯರ್ಥಿಯನ್ನ ಹಾಕಬೇಕಾಗಿತ್ತು. ಜನರು ಕೊಟ್ಟಂತಹ ತೆರಿಗೆ ಹಣದಿಂದಲೇ ಗ್ಯಾರಂಟಿಗಳನ್ನ ನೀಡುತ್ತಿದ್ದಾರೆ. ಆ ಗ್ಯಾರೆಂಟಿ ಯೋಜನೆಗಳು ಕೂಡ ಜನರಿಗೆ ತಲುಪಲಿಲ್ಲ, ರಾಷ್ಟ್ರದಲ್ಲಿ ಸಮರ್ಥ ನಾಯಕರಿಗೆ ಆಡಳಿತ ಕೊಡಬೇಕು ಎಂದು ಎಲ್ಲಾ ಜನರು ಕೂಡ ಇದ್ದಾರೆ ಎಂದು ಆರಗ ಜ್ಞಾನೇಂದ್ರ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಅನುಷ್ಠಾನಕ್ಕೆ ತರಲಾಗದಂತಹ ಪ್ರಣಾಳಿಕೆಯನ್ನ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಕೂಡ ಕಾಂಗ್ರೆಸ್ಸಿಗೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲಿದ್ದಾರೆ. ಕೇರಳದಲ್ಲಿ ಎಡಪಕ್ಷಯದವರು ಮತ್ತು ಕಾಂಗ್ರೆಸ್ ಬೇರೆ ಬೇರೆ ಸ್ಪರ್ಧೆ ಮಾಡುತ್ತಿದ್ದಾರೆ. ಮೋದಿಯವರು ಹೇಳುವಂತೆ 400 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುತ್ತೇನೆ ಎಂದು ಅದೇ ರೀತಿಯಲ್ಲಿ ಗೆಲುವನ್ನು ಸಾಧಿಸಬಹುದು ಹಾಗೆ ಸಮೀಕ್ಷೆ ಕೂಡ ಅದೇ ರೀತಿಯಲ್ಲಿ ಹೇಳುತ್ತಿದೆ. ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲೂ ಕೂಡ ಗೆಲುವನ್ನು ಸಾಧಿಸಬಹುದು ಎನ್ನುವ ನಿರೀಕ್ಷೆ ಇದೆ. ಅತ್ಯಧಿಕ ಬಹುಮತದಿಂದ ಈ ಕ್ಷೇತ್ರಗಳಲ್ಲಿ ಹಾಗೂ ರಾಜ್ಯದಲ್ಲಿ ಜನ ಗೆಲ್ಲುವುದಕ್ಕೆ ಸಹಕಾರಿಯಾಗಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಮೋದಿಯವರು ಬಿಟ್ಟು ಮುಂದಿನ ದಿನಗಳಲ್ಲಿ ಯಾರು ಪ್ರಧಾನಿಯಾಗಬಹುದು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ ಆದ್ದರಿಂದ ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ತಾಲೂಕಿನ ಎಲ್ಲಾ ಮತದಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಮೂಲ್ಯವಾದ ಮತದಾನವನ್ನು ಮಾಡಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ತಾಲೂಕಿನ ಮತದಾರರಲ್ಲಿ ಕೇಳಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ನಾಗರಾಜ ಶೆಟ್ಟಿ, ಬಿಜೆಪಿ ನಾಯಕ ಬೇಗುವಳ್ಳಿ ಸತೀಶ್ ಜಿಲ್ಲಾ ಬಿ.ಜೆ.ಪಿ.ಉಪಾಧ್ಯಕ್ಷ ಬಾಳೆಬೈಲು ರಾಘವೇಂದ್ರನಾಯಕ್ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ಪಟ್ಟಣ ಬಿ. ಜಿ.ಪಿ. ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ವೆಂಕಟೇಶ್ ಪಟವರ್ಧನ್, ಶಾಸಕರ ಆಪ್ತ ಸಹಾಯಕ ಹೊದಲ ಬಸವರಾಜ್ ಉಪಸ್ಥಿತರಿದ್ದರು.

Categories
ರಾಜ್ಯ

ಸೈಡ್ ಕೊಟ್ಟಿಲ್ಲ ಎಂದು ಸರ್ಕಾರಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ!

ಸೈಡ್ ಕೊಟ್ಟಿಲ್ಲ ಎಂದು ಸರ್ಕಾರಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ!
– ಎರಡು ಕಾರಿನಲ್ಲಿ ಬಂದಿದ್ದ ಯುವಕರ ಪುಂಡಾಟ: ದೂರು
– ಬಂಟ್ವಾಳ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ಘಟನೆ
–  ಹಿರಿಯ ಕೊಂಕಣಿ ಸಾಹಿತಿ ರೊನಾಲ್ಡೊ ಸಿಕ್ವೇರಾ ನಿಧನ
– ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ

NAMMUR EXPRESS NEWS
ಬಂಟ್ವಾಳ: ತಮ್ಮ ಕಾರಿಗೆ ಸೈಡ್ ಕೊಟ್ಟಿಲ್ಲ ಕಾರಣಕ್ಕಾಗಿ ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕನಿಗೆ ಅಪರಿಚಿತ ಯುವಕರ ತಂಡವೊಂದು ಹಲ್ಲೆ ನಡೆಸಿ, ಬಸ್ ಗೆ ಹಾನಿಗೊಳಿಸಿದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ಅವರು ಬಸ್ ಚಾಲಕನಾಗಿದ್ದು, ಅವರ ಮೇಲೆ ಹಲ್ಲೆ ನಡೆಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಬಂಟ್ವಾಳ ನಗರ ಪೋಲಿಸ್ ‌ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ಡಿಪೋದಿಂದ ಸೋಮವಾರ ಪೇಟೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಮಾರ್ಗದಲ್ಲಿ ಭಾನುವಾರ ಸುಮಾರು 4 ಗಂಟೆಗೆ ದಾಸಕೋಡಿಗೆ ಬಸ್ ತಲುಪಿದಾಗ ಕೆ.ಎ.03 ಎಮ್ .ಕೆ.8149 ಮತ್ತು ಕೆ.ಎ.05 ಎ.ಎನ್.6722 ನೊಂದಾವಣೆಯ ಕಾರುಗಳಲ್ಲಿ ಬಂದ ಆರು ಜನರು ಕಲ್ಲಡ್ಕ ಏಕಮುಖ ರಸ್ತೆಯಲ್ಲಿ ಈ ಎರಡು ಕಾರುಗಳಿಗೆ ಮುಂದೆ ಹೋಗಲು ಸೈಡ್ ಕೊಟ್ಟಿಲ್ಲ ಎಂಬ ಆರೋಪ ಮಾಡಿ, ಕೆ.ಎಸ್.ಆರ್.ಟಿ.ಸಿ.ಬಸ್ಸನ್ನು ಅಡ್ಡಗಟ್ಟಿ ಬಸ್ ನ ಸೈಡ್ ಮಿರರನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.ಬಳಿಕ ಚಾಲಕ ಕೃಷ್ಣಪ್ಪ ಅವರನ್ನು ಸೀಟಿನಿಂದ ಎಳೆದುಹಾಕಿ ಕೈಯಿಂದ ಹಣೆಗೆ ಮುಖಕ್ಕೆ ಎಡಕೈಗೆ ಹಿಗ್ಗಾಮುಗ್ಗ ಹೊಡೆದು ಅವ್ಯಾಚ್ಚ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಜೊತೆಗೆ ಬಸ್ ನ ಎದುರು ಭಾಗದ ಗಾಜನ್ನು ಕೈಯಿಂದ ಗುದ್ದಿ ಜಖಂ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
ಘಟನೆಯಿಂದ ಸುಮಾರು 30 ಸಾವಿರ ರೂ ನಷ್ಟ ಸಂಭವಿಸಿದ್ದು, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಂಡದ ಮೇಲೆ ಕಾನೂನು ಕ್ರಮಕ್ಕೆ ಕೃಷ್ಣಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಹಿರಿಯ ಕೊಂಕಣಿ ಸಾಹಿತಿ, ಸಂಘಟಕ ರೊನಾಲ್ಡೊ ಸಿಕ್ವೇರಾ ನಿಧನ

ಖ್ಯಾತ ಕೊಂಕಣಿ ಸಾಹಿತಿ ಹಾಗೂ ಸಂಘಟಕ, ಕೆಡಬ್ಲ್ಯೂಎಎ ಅಧ್ಯಕ್ಷರಾಗಿದ್ದ ರೊನಾಲ್ಡೊ ಸಿಕ್ವೇರಾ(69) ಅಲ್ಪಕಾಲದ ಅನಾರೋಗ್ಯದಿಂದಾಗಿ ಕಂಕನಾಡಿಯ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ರೊನಾಲ್ಡೊ ಅವರು ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ಸಲ್ಲಿಸಿದ್ದಾರೆ. ಸಣ್ಣ ಕತೆ ಹಾಗೂ ಲಲಿತ ಪ್ರಬಂಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡಿದ್ದ ಸಿಕ್ವೇರಾ ಅವರು ಶಿಕೇರಾಮ್‌ ಸುರತ್ಕಲ್‌ ಕಾವ್ಯನಾಮದಲ್ಲಿ ಸುಮಾರು 40 ವರ್ಷಗಳ ಕಾಲ ಸಾಹಿತ್ಯ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಿಕ್ವೇರಾ ಅವರ ಗರ್ಜೆಕ್‌ ಪಡತ್‌ ಕಥಾ ಸಂಗ್ರಹಕ್ಕೆ ಮಣಿಪಾಲದ ಡಾ.ಟಿಎಂಎ ಫೌಂಡೇಷನ್‌ ವತಿಯಿಂದ ವರ್ಷದ ಅತ್ಯುತ್ತಮ ಕೃತಿ ಎಂಬ ಮನ್ನಣೆ ಪಡೆದುಕೊಂಡಿದ್ದರು. ವೃತ್ತಿಯಲ್ಲಿ ಎಲೆಕ್ಟ್ರಿಕಲ್‌ ಕಾಂಟ್ರಾಕ್ಟರ್‌ ಆಗಿದ್ದರು ಕೂಡ ಸಾಹಿತ್ಯ ಕ್ಷೇತ್ರದ ಕಡೆಗೆ ಅವರು ಅಪಾರ ಒಲವು ಬೆಳೆಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್‌ ರೊಡ್ರಿಗಸ್‌, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ, ವಿಶನ್‌ ಕೊಂಕಣಿ ಪುಸ್ತಕ ಪ್ರಾಧಿಕಾರದ ಪ್ರವರ್ತಕ ಮೈಕಲ್‌ ಡಿಸೋಜಾ ಸೇರಿದಂತೆ ಹಲವು ಮಂದಿ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಸಿಕ್ವೇರಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Categories
ಚಿಕ್ಕಮಗಳೂರು

ಟಾಪ್ ನ್ಯೂಸ್ ಚಿಕ್ಕಮಗಳೂರು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು!
– ಎನ್.ಆರ್.ಪುರ ತಾಲೂಕಿನ ಕರಗುಂದದಲ್ಲಿ ಘಟನೆ
– ಆಲ್ದುರು: ಕಾಡಾನೆ ದಾಳಿಗೆ ಮತ್ತೊಂದು ಬಲಿ
– ಕಳಸ : ಸ್ನಾನ ಮಾಡಲು ಹೋಗಿ ನೀರು ಪಾಲು
– ಕಳಸ: ನದಿಗೆ ಹಾರಿ ಯುವಕ ಆತ್ಮಹತ್ಯೆ

NAMMUR EXPRESS NEWS
ಎನ್.ಆರ್.ಪುರ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕರಗುಂದದಲ್ಲಿ ನಡೆದಿದೆ. ಹೊರನಾಡು ಸಮೀಪದ ಸುನಿಲ್ ಹಾಗೂ ಉಮೇಶ್ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಗಳು. ಇಂದು ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದೆ. ಸುನಿಲ್ ಹಾಗೂ ಉಮೇಶ್ ಹೊರನಾಡಿನ ಲಾಡ್ಜ್ ವೊಂದರಲ್ಲಿ ಕೆಲಸ ಮಾಡುತ್ತಿದ್ದವರು ಎನ್ನಲಾಗಿದೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿದ್ದು, ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

ಕಾಡಾನೆ ದಾಳಿಗೆ ಮತ್ತೊಂದು ಬಲಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಇನ್ನೊಂದು ಜೀವ ಬಲಿಯಾಗಿದೆ. ತಾಲೂಕಿನ ಆಲ್ಲೂರು ದರ್ಗದ ಬಳಿಯ ಕೆಸುವಿನಕಲ್ ಕಾಫಿ ಎಸ್ಟೇಟಿನಲ್ಲಿ ಕೆಲ್ಸ ಮಾಡುತ್ತಿದ್ದ ಕೂಲಿ ಕಾರ್ಮಿಕನನ್ನು ಕಾಡಾನೆ ತುಳಿದು ಸಾಯಿಸಿದೆ. ಆನಂದ ಪೂಜಾರಿ(55) ಎಂಬ ಕೂಲಿ ಕಾರ್ಮಿಕ ನೂರ್ ಅಹಮ್ಮದ್ ಎಂಬುವವರಿಗೆ ಸೇರಿದ ಕಾಫಿ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ ತೋಟದ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿ, ಅನಂದ ಪೂಜಾರಿಯನ್ನು ತುಳಿದು ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

– ಸ್ನಾನ ಮಾಡಲು ಹೋಗಿ ನೀರು ಪಾಲಾದ ಬಾಲಕಿ

ಕಳಸ: ಹೆಬ್ಬಾಳೆಯ ಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ತಮಿಳುನಾಡಿನ ಬಾಲಿಕಿಯೊಬ್ಬಳು ಶನಿವಾರ ನೀರು ಪಾಲಾಗಿದ್ದಾಳೆ.
ತಮಿಳುನಾಡಿನ ಹೊಸೂರಿನ ಜಾಹ್ನವಿ(14) ಕುಟುಂಬಸ್ಥರ ಜತೆ ಹೊರನಾಡಿಗೆ ದೇವರ ದರ್ಶನಕ್ಕೆ ಬಂದಿದ್ದಳು. ಬೆಳಿಗ್ಗೆ ಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಾಗ ನೀರಿನಲ್ಲಿ ಮುಳುಗಿದ್ದಾಳೆ. ತಕ್ಷಣ ಬಾಲಕಿಯನ್ನು ನೀರಿಂದ ಎತ್ತಿ ಕಳಸ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ದುರಾದೃಷ್ಟವಶಾತ್ ಬಾಲಕಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಬಾಲಕಿಯ ಪಾಲಕರಿಗೆ ಹಸ್ತಾಂತರ ಮಾಡಲಾಗಿದೆ.

– ಕಳಸ: ನದಿಗೆ ಹಾರಿ ಯುವಕ ಆತ್ಮಹತ್ಯೆ

ಕಳಸ: ತೋಟದೂರು ಗ್ರಾಪಂ ವ್ಯಾಪ್ತಿಯ ಕಗ್ಗನಳ್ಳದ ವ್ಯಕ್ತಿಯೊಬ್ಬರು ಶುಕ್ರವಾರ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸತೀಶ (25) ಎಂಬ ಯುವಕ ಭದ್ರಾ ನದಿಗೆ ಹಾರಿರುವುದನ್ನು ಇನ್ನೊಂದು ದಡದಲ್ಲಿದ್ದ ಸ್ಥಳೀಯರು ಗಮನಿಸಿ ಹುಡುಕಾಟ ನಡೆಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಸ್ಟಾಟ ಹುಡುಕಾಟ ಮಾಡಿಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಸತೀಸ ತನ್ನ ಅಕ್ಕನೊಂದಿಗೆ ವಾಸವಾಗಿದ್ದರು ಎನ್ನಲಾಗುತ್ತಿದೆ. ಆದರೆ ಆತ್ಮಹತ್ಯೆ ಬಗ್ಗೆ ಯಾವುದೇ ಕಾರಣ ತಿಳಿದುಬಂದಿಲ್ಲ.