Categories
ಕಲಬುರಗಿ ಚಿಕ್ಕಬಳ್ಳಾಪುರ ಬೆಂಗಳೂರು ರಾಜ್ಯ

ಟಾಪ್ 6 ನ್ಯೂಸ್ ಕರ್ನಾಟಕ

ಟಾಪ್ 6 ನ್ಯೂಸ್ ಕರ್ನಾಟಕ

– ಬೆಂಗಳೂರು : ಬಟ್ಟೆ ಒಣ ಹಾಕಲು ಹೋದಾಗ ಕರೆಂಟ್‌ ಶಾಕ್‌ನಿಂದ ವಿದ್ಯಾರ್ಥಿ ಸಾವು
– ಚಿಕ್ಕಬಳ್ಳಾಪುರ: ಫ್ಯಾನ್‌ ಸ್ವಿಚ್‌ ಆನ್‌ ಮಾಡುವಾಗ ಕರೆಂಟ್‌ ಶಾಕ್‌
– ಬೆಳಗಾವಿ : ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಬಿದ್ದು ಸವಾರ ದುರ್ಮರಣ!
– ಕಲಬುರಗಿ : ಓವರ್‌ಟೇಕ್‌ ನ ಅವಸರದಲ್ಲಿ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ
– ಚಿಕ್ಕೋಡಿ: ಚಿಕ್ಕೋಡಿ ಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ
– ಬೆಂಗಳೂರು : ಕಾರಿಗೆ ಬೈಕ್ ಅಡ್ಡ ಹಾಕಿ ಬಾನೆಟ್‌ಗೆ ಒದ್ದ ಬೈಕ್ ಸವಾರ

NAMMUR EXPRESS NEWS

ದೇವನಹಳ್ಳಿ: ಡಾ.ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಕರೆಂಟ್‌ ಶಾಕ್‌ನಿಂದ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಘಟನೆ ನಡೆದಿದೆ. ಸಾಯಿಭವನ್ (13) ಮೃತ ದುರ್ದೈವಿ. ಹೊಸಕೋಟೆ ತಾಲೂಕಿನ ಸೂಲಿಬೆಲೆ ನಿವಾಸಿ ಸಾಯಿಭವನ್‌ ಕಳೆದ ಎರಡು ವರ್ಷಗಳಿಂದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಹಾಸ್ಟೆಲ್‌ನಲ್ಲಿದ್ದ ಸಾಯಿಭವನ್‌ ಭಾನುವಾರ ಬೆಳಗ್ಗೆ ಬಟ್ಟೆ ಒಣ ಹಾಕಲು ಹೋಗಿದ್ದಾನೆ. ಈ ವೇಳೆ ವಸತಿ ನಿಲಯದ ಮೇಲಿನ 11KV ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

– ಚಿಕ್ಕಬಳ್ಳಾಪುರ: ಫ್ಯಾನ್‌ ಸ್ವಿಚ್‌ ಆನ್‌ ಮಾಡುವಾಗ ಕರೆಂಟ್‌ ಶಾಕ್‌

ಚಿಕ್ಕಬಳ್ಳಾಪುರ:

ಕರೆಂಟ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕಾಡುಗೋಡಿ‌ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬೇನ ಅಗ್ರಹಾರದಲ್ಲಿ ನಡೆದಿದೆ. ಬಿಪುಲ್ ಕುಮಾರ್ (35) ಮೃತ ದುರ್ದೈವಿ. ಟೈಲ್ಸ್ ಶೋ ರೂಂನಲ್ಲಿ ಕೆಲಸ‌ ಮಾಡುತ್ತಿದ್ದ ಬಿಪುಲ್, ಫ್ಯಾನ್ ಆನ್ ಮಾಡಲು ಹೋಗಿದ್ದಾನೆ. ಈ ವೇಳೆ ಕರೆಂಟ್ ಶಾಕ್ ಬಡಿದಿದ್ದು ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಬಿಪುಲ್‌ ಮೃತಪಟ್ಟಿದ್ದಾರೆ.

– ಬೆಳಗಾವಿ : ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಬಿದ್ದು ಸವಾರ ದುರ್ಮರಣ!

ಬೆಳಗಾವಿ: ಭಾರೀ ಮಳೆಯ ಪರಿಣಾಮ ಬೈಕ್ ಮೇಲೆ ಮರವೊಂದು ಉರುಳಿ ಬಿದ್ದು ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯ ಬೆಳಲಳಗುಂದಿ ಗ್ರಾಮದಲ್ಲಿ ನಡೆದಿದೆ. ಕರ್ಲೆ ಗ್ರಾಮದ ಸೋಮನಾಥ್ ಮುಚ್ಚಂಡಿಕರ್ (21) ಮೃತ ದುರ್ದೈವಿಯಾಗಿದ್ದು ವಿಠ್ಠಲ್ ತಳವಾರ್, ಸ್ವಪ್ನಿಲ್ ದೇಸಾಯಿ ಗಂಭೀರ ಗಾಯಗೊಂಡವರಾಗಿದ್ದಾರೆ. ಮೂವರು ಒಂದೇ ಬೈಕ್‍ನಲ್ಲಿ ಬೆಳಗಾವಿಗೆ ತೆರಳುತ್ತಿದ್ದರು. ಈ ವೇಳೆ ಧಾರಾಕಾವಾಗಿ ಸುರಿದ ಮಳೆಯ ಪರಿಣಾಮ ಬೈಕ್ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದಾನೆ. ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

– ಕಲಬುರಗಿ : ಓವರ್‌ಟೇಕ್‌ ನ ಅವಸರದಲ್ಲಿ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

ಕಲಬುರಗಿ : ಗೂಡ್ಸ್ ಮಿನಿ ಟೆಂಪೋ ಪಲ್ಟಿಯಾಗಿ ಸ್ಥಳದಲ್ಲೆ ಓರ್ವ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಡೊಂಗರಗಾಂವ್ ಬಳಿ ಘಟನೆ ನಡೆದಿದೆ. ಹರಕಂಚಿ ಗ್ರಾಮದ ಕೂಲಿ ಕಾರ್ಮಿಕ ಶಿವಪ್ಪ ಸ್ಥಳದಲ್ಲೆ ಮೃತಪಟ್ಟ ದುರ್ದೈವಿ. ಹರಕಂಚಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಹುಮನಬಾದ್ ಪಟ್ಟಣಕ್ಕೆ ತೆರಳುತ್ತಿದ್ದರು. ಈ ವೇಳೆ ವಾಹನವೊಂದಕ್ಕೆ ಓವರ್‌ಟೆಕ್ ಮಾಡಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಶಿವಪ್ಪ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕಮಲಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಟೆಂಪೋವನ್ನು ತೆರವು ಮಾಡಿದ್ದಾರೆ.

– ಚಿಕ್ಕೋಡಿ: ಚಿಕ್ಕೋಡಿ ಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ

ಬೆಳಗಾವಿ: ಜಿಲ್ಲೆಯ ರಾಯಬಾದ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಪಾಲಬಾವಿ ಗ್ರಾಮದ ಮಹಾಲಿಂಗ ನಿಂಗನೂರ (47) ಮತ್ತು ಈರಪ್ಪಾ ಉಗಾರೆ (32) ಮೃತ ದುರ್ದೈವಿಗಳು. ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್‌ ಕಂಬ ಡಿಕ್ಕಿ ಹೊಡೆದಿದೆ. ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರಿಗೆ ತೀವ್ರ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

– ಬೆಂಗಳೂರು : ಕಾರಿಗೆ ಬೈಕ್ ಅಡ್ಡ ಹಾಕಿ ಬಾನೆಟ್‌ಗೆ ಒದ್ದ ಬೈಕ್ ಸವಾರ

ಬೆಂಗಳೂರು: ದಾರಿ ಬಿಡುವ ಸಂದರ್ಭದಲ್ಲಿ ಬೈಕ್‌ ಮತ್ತು ಕಾರು ಚಾಲಕನ ಮಧ್ಯೆ ಜಗಳ ನಡೆದಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಮೂಲಕ ನಗರದಲ್ಲಿ ನಡೆಯುತ್ತಿರುವ ರೋಡ್ ರೇಜ್‌ಗೆ ಮತ್ತೊಂದು ಘಟನೆ ಸೇರ್ಪಡೆಯಾದಂತಾಗಿದೆ. ಜಕ್ಕೂರಿನಲ್ಲಿ ಯೂ ಟರ್ನ್ ಮಾಡುವ ವೇಳೆ ಕಾರು ಚಾಲಕ ಪ್ರವೀಣ್ ಹಾಗೂ ದ್ವಿಚಕ್ರ ವಾಹನ ಸವಾರನ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಕಾರನ್ನು ಅಡ್ಡ ಹಾಕಿ ಕಾರ್‌ನ ಬಾನೆಟ್‌ಗೆ ಒದ್ದು ಬೈಕ್‌ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಫಾಲೋ ಮಾಡಿಕೊಂಡು ಬಂದಿದ್ದ ದ್ವಿಚಕ್ರ ವಾಹನ ಸವಾರ ಶ್ರೀರಾಮಪುರ ವಿಲೇಜ್ ಬಳಿಯೂ ಕಿರಿಕ್‌ ಮಾಡಿದ್ದಾನೆ. ಕಾರ್ ಡ್ಯಾಷ್ ಕ್ಯಾಮ್‌ ಬೈಕ್‌ ಸವಾರನ ಕೃತ್ಯ ಸೆರೆಯಾಗಿದೆ

Categories
ಉಡುಪಿ ಕರಾವಳಿ

ಬೈಂದೂರು: ತ್ರಾಸಿಯಲ್ಲಿ ಎಲೆಕ್ಟ್ರಾನಿಕ್ ಶೋರೂಮಿಗೆ ಬೆಂಕಿ!

ಬೈಂದೂರು: ತ್ರಾಸಿಯಲ್ಲಿ ಎಲೆಕ್ಟ್ರಾನಿಕ್ ಶೋರೂಮಿಗೆ ಬೆಂಕಿ!
– ರಾತ್ರಿಯಿಂದ ಮುಂಜಾನೆವರೆಗೆ ಕಾರ್ಯಚರಣೆ
– ಕುಂದಾಪುರ ಅಗ್ನಿಶಾಮಕ ದಳದ ಕೆಲಸಕ್ಕೆ ಮೆಚ್ಚುಗೆ

NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನತ್ರಾಸಿ ರಾಷ್ಟ್ರೀಯ ಹೆದ್ದಾರಿ ಬಳಿಯ ಕಾರ್ಯ ನಿರ್ವಹಿಸುತ್ತಿರುವ ಅಂಬಾ ಎಲೆಕ್ಟ್ರಾನಿಕ್ ಶೋರೂಮಿಗೆ ಭಾನುವಾರ ರಾತ್ರಿ ಬೆಂಕಿ ಬಿದ್ದಿದ್ದು, ಅಪಾರ ನಷ್ಟ ಸಂಭವಿಸಿದೆ. ಸುಮಾರು 9:30ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳದವರು ಸುಮಾರು ಬೆಳಗ್ಗೆ 3:00 ವರೆಗೆ ಕಾರ್ಯಾಚರಣೆಯನ್ನು ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಶ್ರಮ ಪಟ್ಟರು
ಕುಂದಾಪುರ ಅಗ್ನಿಶಾಮಕ ಠಾಣೆಯಲ್ಲಿ ವಾಹನದ ಕೊರತೆ ಇರುವುದರಿಂದ ಉಡುಪಿ ಹಾಗೂ ಇತರ ಕಡೆಗಳಿಂದ ವಾಹನಗಳನ್ನು ತರಿಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು. ಸ್ಥಳೀಯರು ಕೂಡ ಸಹಕಾರ ನೀಡಿದ್ದರು.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪ‌ರ್.!

ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪ‌ರ್.!
– ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ ಉಲ್ಟಾ ಪಲ್ಟಾ
– ರಾಜ್ಯಕ್ಕೆ ಹೊಸ ಹೊಸ ಯೋಜನೆಗಳ ನಿರೀಕ್ಷೆ
– ಜಾತಿ, ರಾಜಕೀಯ ಲೆಕ್ಕಾಚಾರ ಏನು…?!

NAMMUR EXPRESS NEWS
ಬೆಂಗಳೂರು: ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಅಧಿಕಾರಕ್ಕೆ ಬಂದಿದೆ.
ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಮೋದಿ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದಿಂದ ಐವರಿಗೆ ಅಧಿಕಾರ ದೊರಕಿದೆ. ಈ ಹಿಂದಿನ ಸರ್ಕಾರದಲ್ಲಿ ಕರ್ನಾಟಕದಿಂದ ಮಂತ್ರಿಗಳಾಗಿ ನಿರ್ಮಲಾ ಸೀತಾರಾಮನ್‌, ಪ್ರಲ್ಜಾದ ಜೋಶಿ, ಶೋಭಾ ಕರಂದ್ಲಾಜೆ ಮತ್ತೊಂದು ಬಾರಿ ಅವಕಾಶ ಪಡೆದುಕೊಂಡಿದ್ಧಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮಿತ್ರ ಪಕ್ಷ ಜೆಡಿಎಸ್‌ ಕೋಟಾದಲ್ಲಿ ಸಚಿವರಾದರೆ, ಮಾಜಿ ಸಚಿವ ಹಾಗೂ ತುಮಕೂರು ಕ್ಷೇತ್ರದಿಂದ ಸಂಸದರಾಗಿರುವ ವಿ.ಸೋಮಣ್ಣ ಅವರು ಕೇಂದ್ರದಲ್ಲಿ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಆದರೆ ಇನ್ನು ಖಾತೆ ಹಂಚಿಕೆ ಆಗಿಲ್ಲ.
ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣ ಅವರು ರಾಜ್ಯ ಸಚಿವರಾದರೆ ಇನ್ನು ಮೂವರು ಸಂಪುಟ ದರ್ಜೆ ಸಚಿವರು. ಇನ್ನು ಶೋಭಾ, ಸೋಮಣ್ಣ ಅವರಿಗೆ ಮಣೆ ಹಾಕಿರುವುದು ರಾಜ್ಯ ಬಿಜೆಪಿ ನಾಯಕರ ಅಚ್ಚರಿಗೆ ಕಾರಣವಾಗಿದ್ದು, ಬಿಜೆಪಿ ನಾಯಕರ ಲೆಕ್ಕಾಚಾರ ತಪ್ಪಿದೆ.
ಒಕ್ಕಲಿಗ ಸಮುದಾಯದಲ್ಲಿ ಶೋಭಾ ಕರಂದ್ಲಾಜೆ, ಬ್ರಾಹ್ಮಣ ಸಮುದಾಯದಲ್ಲಿ ಪ್ರಹ್ಲಾದ್ ಜೋಶಿ, ಲಿಂಗಾಯತ ಸಮುದಾಯದಲ್ಲಿ ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದಂತೆ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ (ಒಕ್ಕಲಿಗ ಸಮುದಾಯ) ನೀಡಲಾಗಿದೆ. ಉಳಿದಂತೆ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗುತ್ತದೆ. ರಾಜ್ಯಕ್ಕೆ ಹೆಚ್ಚಿನ ಯೋಜನೆ ಬರುವ ನಿರೀಕ್ಷೆ ಇದೆ.
ನಿರ್ಮಲಾ ಸೀತಾರಾಮನ್ ಹಾಗೂ ಶೋಭಾ ಕರಂದ್ಲಾಜೆಗೆ ಮತ್ತೆ ಸಚಿವ ಸ್ಥಾನ ಸಿಗಬಹುದು ಎಂಬ ಊಹಿಸಿರಲಿಲ್ಲ. ಆದ್ರೆ, ಕೊನೆ ಕ್ಷಣದಲ್ಲಿ ಶೋಭಾ, ಕುಮಾರಣ್ಣ, ಸೋಮಣ್ಣ, ಜೋಶಿ, ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದಿಂದ ಸಚಿವ ಸ್ಥಾನ ನೀಡಲಾಗುತ್ತಿದೆ. ಈ ಪೈಕಿ ಸೋಮಣ್ಣ, ಶೋಭಾ ಅವರಿಗೆ ಮಣೆ ಹಾಕಿರುವುದರಿಂದ ರಾಜ್ಯ ನಾಯಕರು ಶಾಕ್ ಆಗಿದ್ದಾರೆ.
ಲಿಂಗಾಯತ ಸಮುದಾಯದ ರೇಸ್ ನಲ್ಲಿ ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಬಸವರಾಜ ಬೊಮ್ಮಾಯಿ, ಪಿಸಿ ಗದ್ದಿ ಗೌಡರ್ ಮುಂಚೂಣಿಯಲ್ಲಿ ಇದ್ದರು. ಮೂವರು ಪ್ರಮುಖ ಸಂಸದರು ಆಕಾಂಕ್ಷಿಗಳಿದರೂ ಸಹ ವಿ.ಸೋಮಣ್ಣ ಅವರಿಗೆ ಹೈಕಮಾಂಡ್‌ ಮಣೆ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.
ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಎಸ್​ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಗಳಿದ್ದವು. ಅಲ್ಲದೇ ತಮ್ಮ ಪುತ್ರನಿಗೆ ಈ ಬಾರಿ ಕೇಂದ್ರ ಸಚಿವ ಸ್ಥಾನ ನೀಡಬೇಕೆಂದು ಖುದ್ದು ಯಡಿಯೂರಪ್ಪ ಅವರು ಲಾಬಿ ನಡೆಸಿದ್ದರು. ಆದ್ರೆ, ಹೈಕಮಾಂಡ್​ ಯಡಿಯೂರಪ್ಪ ಬೇಡಿಕೆಗೆ ಮನ್ನಣೆ ನೀಡಿಲ್ಲ.
ಯಾವೊಬ್ಬ ದಲಿತ ಸಂಸದಗೂ ಸಚಿವ ಸ್ಥಾನ ಸಿಕ್ಕಿಲ್ಲ. ಒಬಿಸಿ ಕೋಟಾದಲ್ಲಿ ಸಚಿವ ಸ್ಥಾನದ ಆಸೆಯಲ್ಲಿ ಇದ್ದ ಕೋಟಾ ಶ್ರೀನಿವಾಸ ಪ್ರಸಾದ್ ಮತ್ತು ಪಿ.ಸಿ. ಮೋಹನ್ ಅವರಿಗೂ ಅದೃಷ್ಟ ಒಲಿದಿಲ್ಲ.

Categories
ಕರಾವಳಿ ಮಂಗಳೂರು

ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ!

ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ!
– ಮಂಗಳೂರಿನ ಬೋಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ಘಟನೆ
– ಅನ್ಯಕೋಮಿನ ತಂಡದಿಂದ ಕೃತ್ಯ: ಪೊಲೀಸ್ ಬಂದೋಬಸ್ತ್

NAMMUR EXPRESS NEWS
ಮುಡಿಪು: ಮೋದಿ ಪ್ರಮಾಣ ವಚನ ಹಾಗೂ ನೂತನಸಂಸದರಾಗಿ ಆಯ್ಕೆಗೊಂಡ ಬ್ರಿಜೇಶ್ ಚೌಟ ಅವರ ವಿಜಯೋತ್ಸವ ರ್ಯಾಲಿ ಭಾಗವಹಿಸಿ ವಾಪಾಸ್ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಅನ್ಯಕೋಮಿನ ತಂಡವು ಚೂರಿಯಿಂದ ಇರಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಇನೋಳಿ ಧರ್ಮನಗರ ನಿವಾಸಿ ಹರೀಶ್ (35) ಹಾಗೂ ಅವರ ಭಾವ ವಿನೋದ್ (40) ಎಂಬವರ ಮೇಲೆ ಚೂರಿಯಿಂದ ಇರಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಗಾಯಾಳು ಹರೀಶ್ ಮತ್ತು ವಿನೋದ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು
ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಬೋಳಿಯಾರಿನಿಂದ ಧರ್ಮನಗರದವರೆಗೆ ಸಂಸದರಾಗಿ ಆಯ್ಕೆಗೊಂಡ ಬ್ರಿಜೇಶ್ ಚೌಟ ಅವರ ವಿಜಯೋತ್ಸವ ರ್ಯಾಲಿ ಆಯೋಜಿಸಲಾಗಿತ್ತು. ನಂತರ ವಿಜಯೋತ್ಸವ ಮುಗಿಸಿ ಬೈಕಿನಲ್ಲಿ ಹರೀಶ್ , ವಿನೋದ್ ಸೇರಿ ಮೂವರು ಬೋಳಿಯಾರಿನತ್ತ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ತಂಡವೊಂದು ಹರೀಶ್ ಮತ್ತು ವಿನೋದ್ ಗೆ ಚೂರಿಯಿಂದ ಇರಿದಿದೆ. ಇನ್ನೋರ್ವನ ಮೇಲೆ ಹಲ್ಲೆಗೆ ಮುಂದಾದಾಗ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿದೆ. ತಕ್ಷಣ ಕೃತ್ಯ ಎಸಗಿದ ತಂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಆಸ್ಪತ್ರೆಗೆ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದು ಬೋ ಳಿಯಾರ್ ನಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಘಟನಾ ಸ್ಥಳದ ಬಾರ್ ವೊಂದರ ಸಿಸಿಟಿವಿ ಡಿವಿಆರ್ ಬ್ಬ್ ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ

Categories
ತೀರ್ಥಹಳ್ಳಿ ಶಿವಮೊಗ್ಗ

ಉದ್ಯಮಿ ಸರಳ ಪ್ರವೀಣ್ ಇನ್ನಿಲ್ಲ!

ಉದ್ಯಮಿ ಸರಳ ಪ್ರವೀಣ್ ಇನ್ನಿಲ್ಲ!
– ತೀವ್ರ ಅನಾರೋಗ್ಯದಿಂದ ಸ್ನೇಹಮಯಿ ಸಂಘಟಕ ವಿಧಿವಶ
– ತೀರ್ಥಹಳ್ಳಿಯ ಹತ್ತಾರು ಸಂಘಟನೆಯಲ್ಲಿ ಸೇವೆ
– ಸರಳದ ತವರೂರಲ್ಲಿ ಇಂದು ಅಂತ್ಯಕ್ರಿಯೆ
NAMMUR EXPRES NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಯುವ ಸಂಘಟಕ, ಸ್ನೇಹಮಯ ವ್ಯಕ್ತಿತ್ವದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಸಿರಿಬೈಲ್ ಹಾರ್ಡ್ ವೇರ್ ಮಾಲೀಕ ಸರಳ ಪ್ರವೀಣ್ ಸೋಮವಾರ ವಿಧಿವಶರಾಗಿದ್ದಾರೆ.
ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರಳ ಪ್ರವೀಣ್ (40) ಸೋಮವಾರ ಬೆಳಿಗ್ಗೆ ಮಣಿಪಾಲ್ ಕೊಂಡೊಯ್ಯವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಬೆಟ್ಟಮಕ್ಕಿ ನಿವಾಸದಲ್ಲಿ ಇಡಲಾಗಿದೆ. ಸರಳದ ತವರೂರಲ್ಲಿ ಇಂದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಹಾಗೂ ಸ್ನೇಹ ವಲಯವನ್ನು ಅಗಲಿದ್ದಾರೆ.

ನೂರಾರು ಮಂದಿಯ ಬದುಕಿಗೆ ದಾರಿಯಾಗಿದ್ದರು!

ತಾವು ಬೆಳೆಯುವ ಜತೆಗೆ ನೂರಾರರು ಮಂದಿ ಯುವ ಉದ್ಯಮಿಗಳನ್ನು ಬೆಳೆಸಿದ್ದ ಅವರುಉದ್ಯಮ ಕ್ಷೇತ್ರದಲ್ಲಿ ತಾಲೂಕಿನಾದ್ಯಂತ ಸರಳ ಪ್ರವೀಣ್‌ ಎಂದೇ ಚಿರಪರಿಚಿತರಾಗಿದ್ದರು. ಎಲ್ಲರೊಂದಿಗೂ ತಮ್ಮ ಸರಳ ವ್ಯಕ್ತಿತ್ವದಿಂದಲೇ ಪ್ರೀತಿ ಪಾತ್ರರಾಗಿದ್ದರು. ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದರಿಂದ ಅನೇಕ ಸಂಘ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದರು.

ತೀರ್ಥಹಳ್ಳಿಯ ಅನೇಕ ಸಂಘಟನೆಗಳಲ್ಲಿ ಸೇವೆ

ತೀರ್ಥಹಳ್ಳಿ ವರ್ತಕರ ಸಂಘದ ನಿರ್ದೇಶಕರಾಗಿ, ತುಂಗಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕರಾಗಿ, ವಿವಿಧ ಸಂಘ ಸಂಸ್ಥೆಗಳ ಸಂಚಾಲಕರಾಗಿ ಕಳೆದ 2 ದಶಕಗಳಿಂದ ಸೇವೆ ಸಲಿಸಿದ್ದರು.
ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕ‌ರ್, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆ‌ರ್.ಎಂ ಮಂಜುನಾಥ್ ಗೌಡ ಸೇರಿದಂತೆ ಪ್ರತಿಯೊಬ್ಬ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ.

Categories
ಕರಾವಳಿ ಮಂಗಳೂರು ರಾಜಕೀಯ

ಮೋದಿ ಪ್ರಮಾಣ: ಮಂಗಳೂರಲ್ಲಿ ವಿಜಯೋತ್ಸವ

ಮೋದಿ ಪ್ರಮಾಣ: ಮಂಗಳೂರಲ್ಲಿ ವಿಜಯೋತ್ಸವ
– ಸಮಸ್ತ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಸ್ವಾಗತ
– ದಕ್ಷಿಣ ಕನ್ನಡ ಬಿಜೆಪಿ ಕಚೇರಿಯಲ್ಲಿ ಸಂಭ್ರಮಕ್ಕೆ ಸಜ್ಜು

NAMMUR EXPRES NEWS
ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಜೂನ್ 9 ಭಾನುವಾರ ಸಂಜೆ 6.00 ಘಂಟೆಗೆ ಬಿಜೆಪಿ ಜಿಲ್ಲಾ ಕಾರ್ಯಾಲಯ ಪಿ. ವಿ.ಎಸ್ ಬಳಿ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಪಕ್ಷದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಮೋರ್ಚಾಗಳ ಪದಾಧಿಕಾರಿಗಳು, ಸದಸ್ಯರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಪ್ರಮುಖರು, ಪ್ರಕೋಷ್ಠಗಳ ಪ್ರಮುಖರು, ಬೂತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತ ಬಂಧುಗಳು, ಹಿತೈಷಿಗಳು, ಅಭಿಮಾನಿಗಳು ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿಯವರು ತೃತೀಯ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಐತಿಹಾಸಿಕ ಕ್ಷಣದ ವಿಜಯೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ ಮಾಡಲಾಗಿದೆ.

Categories
ಕರಾವಳಿ ಚುನಾವಣಾ ಸುದ್ದಿ ರಾಜಕೀಯ ರಾಜ್ಯ

ಲೋಕಸಭೆಗೆ ಕೋಟಾ: ವಿಧಾನ ಪರಿಷತ್‌ ಸ್ಥಾನಕ್ಕೆ ಯಾರು?

ಲೋಕಸಭೆಗೆ ಕೋಟಾ: ವಿಧಾನ ಪರಿಷತ್‌ ಸ್ಥಾನಕ್ಕೆ ಯಾರು?

– ಕರಾವಳಿಯಲ್ಲಿ ಮತ್ತೊಂದು ಚುನಾವಣೆ
– ಕಟೀಲ್ ಅವರಿಗೆ ಸಿಗುತ್ತಾ ಟಿಕೆಟ್?

NAMMUR EXPRES NEWS
ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ವಿಧಾನ ಪರಿಷತ್‌ನ ಅವರ ಸ್ಥಾನ ತೆರವಾಗಲಿದೆ. ಹೀಗಾಗಿ, ಇದೀಗ ಮತ್ತೊಂದು ಚುನಾವಣೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯು ಸಜ್ಜಾಗಬೇಕಿದೆ.

ಕೋಟ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡಿರುವ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯು ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬ ಅಭ್ಯರ್ಥಿಯನ್ನಷ್ಟೇ ಕಣಕ್ಕೆ ಇಳಿಸಿ ಎರಡೂ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಪರಿಷತ್‌ನಲ್ಲಿ ಈ ಕ್ಷೇತ್ರದಿಂದ ಭದ್ರಪಡಿಸಿಕೊಂಡಿತ್ತು. ಅದರಂತೆ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರು ಆಯ್ಕೆಯಾಗಿದ್ದರೆ, ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಅವರು ಆಯ್ಕೆಯಾಗಿದ್ದರು. ಎಲ್ಲ ಕ್ಷೇತ್ರಗಳಂತೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಪರಿಷತ್‌ ಸದಸ್ಯರ ಅವಧಿಯು 6 ವರ್ಷಗಳಾಗಿವೆ. ಹೀಗಿರುವಾಗ, ಶ್ರೀನಿವಾಸ ಪೂಜಾರಿ ಅವರ ಪರಿಷತ್‌ ಅವಧಿ ಇನ್ನು ಕೂಡ ಮೂರುವರೆ ವರ್ಷ ಬಾಕಿಯಿದೆ.
ಸ್ಥಳೀಯ ಸಂಸ್ಥೆಗಳ ಪರಿಷತ್‌ನ ಈ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಸದಸ್ಯರು ಈ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರು. ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ಇನ್ನೂ ನಡೆಯದೆ ಬಾಕಿಯಿದೆ. ಶೀಘ್ರದಲ್ಲೇ ಪಂಚಾಯತ್‌ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.

ವಿಧಾನ ಪರಿಷತ್‌ ಉಪ ಚುನಾವಣೆಗೂ ಮೊದಲೇ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆದರೆ ಮತದಾರರ ಸಂಖ್ಯೆ ಹೆಚ್ಚಲಿದೆ. ಇಲ್ಲದಿದ್ದರೆ ಈಗಿರುವ ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಪಡೆಯಲಿದ್ದಾರೆ.

ಒಂದುವೇಳೆ, ಕೋಟ ಅವರಿಂದ ತೆರವಾಗುವ ಪರಿಷತ್‌ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇನ್ನು ಬಿಜೆಪಿಯಲ್ಲಿ ಈ ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರೇ ಕಣ್ಣಿಟ್ಟಿದ್ದಾರೆ. ಮಾಜಿ ಸಂಸದರಾದ ನಳಿನ್‌ ಕುಮಾರ್‌ ಕಟೀಲು ಅವರು ಈ ಕ್ಷೇತ್ರದಿಂದ ಟಿಕೆಟ್‌ ಪಡೆಯುವ ಮೂಲಕ ಪರಿಷತ್‌ ಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅದೇರೀತಿ, ಕಳೆದ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಇತ್ತೀಚಿನ ಚುನಾವಣೆಗಳಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿಯ ಅನೇಕ ನಾಯಕರು ಕೂಡ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಈಗಾಗಲೇ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸದ್ಯ ಬಿಜೆಪಿ ವಶದಲ್ಲಿರುವ ಈ ಕರಾವಳಿ ಭಾಗದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಮುಂದಿನ ದಿನಗಳಲ್ಲಿ ಯಾರು ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷತ್‌ ಪ್ರವೇಶಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ ಶಿಕ್ಷಣ

ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಪ್ರಥಮ ವೃತ್ತಿ ಮಾರ್ಗದರ್ಶನ ಕಾರ್ಯಗಾರ

ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಪ್ರಥಮ ವೃತ್ತಿ ಮಾರ್ಗದರ್ಶನ ಕಾರ್ಯಗಾರ

– ಉದ್ಯೋಗ ಬಯಸುವ ಪ್ರತಿಯೊಬ್ಬ ಪದವೀಧರರು ಆರಂಭದಲ್ಲೇ ಎಡವುತ್ತಾರೆ
– ಕೌಶಲ್ಯ ಇದ್ದರೆ ಮಾತ್ರ ಈಗ ಉದ್ಯೋಗ

NAMMUR EXPRESS NEWS
ತೀರ್ಥಹಳ್ಳಿ : ಬಾಳೇಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯ ವಿದ್ಯಾರ್ಥಿಗಳ ಸಂಘ, ಚಾಣಕ್ಯ ವಿಶ್ವವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಗಾರ ನಡೆಯಿತು.

ಉದ್ಯೋಗ ಅರಸುವ ಪ್ರತಿಯೊಬ್ಬ ಪದವೀಧರರು ಆರಂಭದಲ್ಲೇ ಎಡವುತ್ತಾರೆ. ಕೌಶಲ್ಯದ ಜೊತೆಗೆ ವೃತ್ತಿ ಜೀವನ ನಿರ್ವಹಿಸಲು ವೈಯಕ್ತಿಕ ವರ್ಚಸ್ಸು ಹಿಗ್ಗಿಸಿಕೊಳ್ಳಬೇಕು ಎಂದು ಉಪನ್ಯಾಸ ಪ್ರಶಾಂತ್ ಕುಮಾರ್ ಹೆಚ್.ಪಿ. ಹೇಳಿದರು.
ವಿದ್ಯಾರ್ಥಿಗಲ್ಲಿ ಕೌಶಲ್ಯಗಳು ಇದ್ದಾಗಲೂ ಸಂದರ್ಶನದ ವೇಳೆ ಭಯ, ಹೆದರಿಕೆ, ಅಂಜಿಕೆ ಮುಂತಾದ ಅನೇಕ ಸಮಸ್ಯೆಗಳಿಂದ ಕೆಲಸ ಲಭಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲೇ ವೃತ್ತಿ ಬದುಕು ನಿರ್ವಹಿಸಲು ಸಿದ್ಧರಾಗಬೇಕು. ಕೇವಲ ಪಠ್ಯ ಓದು ಮಾತ್ರ ಸಾಲದು. ಸಮಾಜದಲ್ಲಿ ಆಗುವ ಬದಲಾವಣೆಗಳ ಬಗ್ಗೆ ನಿರಂತರ ತಿಳುವಳಿಕೆ ಪಡೆಯುತ್ತಿರಬೇಕು ಎಂದು ಸಲಹೆ ನೀಡಿದರು.

ರೆಸ್ಯೂಮೆ, ಸಿವಿ ತಯಾರಿಸುವಾಗ ಜಾಣ್ಮೆ ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ, ವೈಯಕ್ತಿಕ ವಿವರಗಳನ್ನು ಅಚ್ಚುಕಟ್ಟಾಗಿ ಹಾಕಬೇಕು. ಸಂದರ್ಶನದ ವೇಳೆ ಗಮನ ಸೆಳೆಯುವಂತೆ ಕುಳಿತುಕೊಳ್ಳಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
“ಜೀವನದ ಶೈಲಿಯನ್ನು ರೂಪಿಸಿಕೊಂಡು ಅಂತಿಮ ವಿದ್ಯಾರ್ಥಿಗಳು ಪ್ರಾಯೋಗಿಕ ಬದುಕಿಗೆ ತಯಾರಾಗಬೇಕು. ಚಟುವಟಿಕೆ ಜೀವನ ಭವಿಷ್ಯ ನಿರ್ಮಿಸುತ್ತದೆ” ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಡಿ. ಧರ್ಮಣ್ಣ ಹೇಳಿದರು.
ಚಾಣಕ್ಯ ವಿಶ್ಯವಿದ್ಯಾಲಯದ ಉಪನ್ಯಾಸಕ ವೆಂಕಟೇಶ್ ಕೆ. ಮುದೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಹೆಚ್.ಸಿ., ಪ್ರಮುಖರಾದ ಪ್ರದೀಪ್, ಮವೀಶ, ಸುನಿಲ್ ಕುಮಾರ್, ಅಮಿತ್, ಸಚಿನ್, ಕವಿರಾಜ್ ಇದ್ದರು.

Categories
ತೀರ್ಥಹಳ್ಳಿ ಶಿವಮೊಗ್ಗ ಸಾಗರ

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಸಾಗರ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
– ಓರ್ವ ಸ್ಥಳದಲ್ಲಿಯೇ ಸಾವು ಇಬ್ಬರು ಗಂಭೀರ

ತೀರ್ಥಹಳ್ಳಿ : ಯೋಗಿಮಳಲಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಮನೆಯಲ್ಲಿ ಕಳ್ಳತನ.!
– ಮನೆಯಲ್ಲಿದ್ದ ನಗದು ಮತ್ತು ಬಂಗಾರ ಕಳ್ಳತನ

ಶಿವಮೊಗ್ಗ : ಊಟಕ್ಕೆ ಬಂದ ಗ್ರಾಹಕನ 4 ಲಕ್ಷ ರೂ ಇದ್ದ ಬ್ಯಾಗ್ ಎಗರಿಸಿ ಓಡಿದ ಸಪ್ಲೆಯರ್
– ಬೈಟ್ ಹೊಟೇಲ್ ನಲ್ಲಿ ನಡೆದಿದ್ದೇನು..?

ಭದ್ರಾವತಿ: ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ

ಶಿವಮೊಗ್ಗ : ಕದ್ದ ಚಿನ್ನದ ಆಭರಣವನ್ನ ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ
– ಮಣಪ್ಪುರಂ ಫೈನಾನ್ಸ್‌ ಸಂಸ್ಥೆಗೆ ಕಾದಿತ್ತು ಶಾಕ್

NAMMUR EXPRESS NEWS

ಸಾಗರ : ಆನಂದಪುರ ಹೆದ್ದಾರಿಯಲ್ಲಿ ಮಾರುತಿ ಓಮ್ಮಿ ಹಾಗೂ ಟಾಟಾ ಇಂಡಿಕಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಭದ್ರಾವತಿ ಗ್ರಾಮದ ಅಜಯ್ (21) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಧೈವಿಯಾಗಿದ್ದಾರೆ.
ಉಳ್ಳೂರು ಸಮೀಪದ ಮಂಚಾಲೆ ಗ್ರಾಮದ ಸಮೀಪದಲ್ಲಿ ಈ ದುರ್ಘಟನೆ ನಡೆದಿದ್ದು ಸಾಗರದ ಟೌನ್ ನಿವಾಸಿ ಸೈಯದ್ ನೂರುಲ್ಲಾ ಎಂಬುವವನು ಉಳ್ಳೂರು ಗ್ರಾಮದ ಕಡೆಯಿಂದ ಸಾಗರ ಕಡೆಗೆ ತೆರಳುತಿದ್ದ ವೇಳೆ ಮಂಚಾಳೆ ಸಮೀಪದಲ್ಲಿ ಓಮಿನಿ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮಾರುತಿ ಓಮಿನಿಯಲ್ಲಿದ್ದ ಭದ್ರಾವತಿ ನಿವಾಸಿ ಅಜಯ್‌ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಉಲ್ಲಾಸ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಇಂಡಿಕಾ ಕಾರ್ ನಲ್ಲಿದ್ದ ಸೈಯದ್ ನೂರುಲ್ಲಾ ರವರಿಗೂ ತೀವ್ರ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಂದಪುರ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ತನಿಖೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯೋಗಿಮಳಲಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಮನೆಯಲ್ಲಿ ಕಳ್ಳತನ.!
– ಮನೆಯಲ್ಲಿದ್ದ ನಗದು ಮತ್ತು ಬಂಗಾರ ಕಳ್ಳತನ

ಕೋಣಂದೂರು: ತೀರ್ಥಹಳ್ಳಿ ತಾಲೂಕಿನ ಯೋಗಿಮಳಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಕಾರ್ತಿಕ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಯೋಗಿಮಳಲಿಯ ಸಿ.ಕೆ ಸರ್ಕಲ್ ಹತ್ತಿರ ಮನೆಯಲ್ಲಿ ವಾಸವಾಗಿದ್ದು, ಜೂ.6ರ ರಾತ್ರಿ ಮನೆಯಲ್ಲಿದ್ದ ನಗದು ಮತ್ತು ಬಂಗಾರ ಕಳ್ಳತನವಾಗಿದೆ. ಹಾಗೂ ಇದೇ ದಿನ ರಾತ್ರಿ ಕೋಣಂದೂರು ಸಿ.ಕೆ ಸರ್ಕಲ್‌ನಲ್ಲಿ ಬೈಕ್ ಸಹ ಕಳ್ಳತನವಾಗಿದೆ.

ಊಟಕ್ಕೆ ಬಂದ ಗ್ರಾಹಕನ 4 ಲಕ್ಷ ರೂ ಇದ್ದ ಬ್ಯಾಗ್ ಎಗರಿಸಿ ಓಡಿದ ಸಪ್ಲೆಯರ್
– ಬೈಟ್ ಹೊಟೇಲ್ ನಲ್ಲಿ ನಡೆದಿದ್ದೇನು..?

ಶಿವಮೊಗ್ಗ : ನಗರದ ಬೈಟ್ ಹೊಟೆಲಿನಲ್ಲಿ ಗ್ರಾಹಕ ಬಿಟ್ಟು ಹೋದ 4 ಲಕ್ಷ ರೂ. ಇದ್ದ ಹಣದ ಚೀಲವನ್ನು ಅಲ್ಲಿನ ಸರ್ವರ್ ಎತ್ತಿಕೊಂಡು ಹೋದ ಘಟನೆ ಸಂಭವಿಸಿದ್ದು, ಆತನನ್ನು ಬಂಧಿಸಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕು ಜಂಬಾನಿ ಗ್ರಾಮದ ವಾಸಿ ಲೋಕೇಶ್ ಎನ್ನುವವರು ತನ್ನ ಸ್ನೇಹಿತನೊಂದಿಗೆ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದಾಗ 4 ಲಕ್ಷ ರೂ.ಇದ್ದ ಚೀಲವನ್ನು ಟೇಬಲ್‌ ಮೇಲೆ ಇಟ್ಟಿದ್ದರು. ಅವಸರದಲ್ಲಿ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ನಂತರ ಕಾರಿನಲ್ಲಿ ಬ್ಯಾಗ್ ಇಲ್ಲದೇ ಇರುವುದು ಕಂಡುಬಂದಿದ್ದು, ವಾಪಾಸ್ ಹೋಟೇಲ್ ಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಹೋಟೇಲ್ ನಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾರ್ ಎಂಬುವವನು ಬ್ಯಾಗ್ ನ್ನು ತೆಗೆದು ನೋಡಿ ಸ್ಟೋ‌ರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಂಡುಬಂದಿತು. ಪೋನ್ ಮಾಡಿ ಆತನಿಗೆ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದಾಗ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಫೋನ್ ಕಟ್ ಮಾಡಿದ್ದನು. ಅಲ್ಲದೆ ಬೆಳಿಗ್ಗೆ ಹೊಟೇಲ್ ನ ಕೆಲಸಕ್ಕೂ ಕೂಡ ಬಂದಿಲಯರಲಿಲ್ಲ. ಆದ್ದರಿಂದ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಹೇಮಂತ್ ಕುಮಾರ್ ಈತನ ಮೇಲೆ ಪ್ರಕರಣ ದಾಖಲಿಸಿದ್ದರು. ಶಿವಮೊಗ್ಗ ಪೊಲೀಸರ ತಂಡವು ಪ್ರಕರಣದ ಆರೋಪಿತ ಹೇಮಂತ್ ಕುಮಾರ್ ಅಲಿಯಾಸ್ ಹೇಮಂತ್ (40) ಈತ ವಾಸವಿರುವ ಅಶೋಕನಗರ ದ ಮನೆಗೆ ತೆರಳಿ ದಸ್ತಗಿರಿ ಮಾಡಿ, ಆತನಿಂದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

– ಭದ್ರಾವತಿ: ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ

ಭದ್ರಾವತಿ : ಮಾಲೀಕ ಹೊರ ಹೋಗಿದ್ದ ಸಂದರ್ಭ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ನೌಕರರು ಪರಾರಿಯಾಗಿದ್ದಾರೆ. ಚಿದಾನಂದ ಎಂಬುವವರು ಭದ್ರಾವತಿ ತಾಲೂಕು ಗೌಡರಹಳ್ಳಿಯ ತೋಟವೊಂದರಲ್ಲಿ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದಾರೆ. ನೇಪಾಳ ದೇಶದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ 40 ಸಾವಿರ ರೂ. ಹಣ ನೀಡುವಂತೆ ಕಾರ್ಮಿಕರು ಚಿದಾನಂದ ಬಳಿ ಕೇಳಿದ್ದರು. ಹಣಕಾಸು ಸಮಸ್ಯೆಯಿಂದ ಚಿದಾನಂದ ಹಣ ನೀಡಿರಲಿಲ್ಲ. ಇನ್ನೊಂದೆಡೆ ಕರೆಂಟ್‌ ಬಿಲ್‌ ಪಾವತಿಸದ ಹಿನ್ನೆಲೆ ಜೂ.5ರಂದು ಮೆಸ್ಕಾಂ ಸಿಬ್ಬಂದಿ ವಿದ್ಯುತ್‌ ಕಡಿತಗೊಳಿಸಿದ್ದರು. ಕರೆಂಟ್‌ ಬಿಲ್‌ ಪಾವತಿಸಲು ಹಣ ಹೊಂದಿಸಿಕೊಂಡು ಜೂ.5ರ ರಾತ್ರಿ 10 ಗಂಟೆಗೆ ಹಿಂತಿರುಗಿದಾಗ, ಯಾವುದೋ ವಾಹನ ಫ್ಯಾಕ್ಟರಿ ಬಳಿ ಬಂದು ಹೋಗಿರುವುದು ಚಿದಾನಂದಗೆ ಗೊತ್ತಾಗಿದೆ. ಫ್ಯಾಕರಿಗೆ ತೆರಳಿ ಮೊಬೈಲ್‌ ಟಾರ್ಚ್‌ನಲ್ಲಿ ಪರಿಶೀಲಿಸಿದಾಗ ಒಂದು ಲ್ಯಾಪ್‌ಟಾಪ್‌, 10 ಬ್ಯಾಗ್‌ ಅಡಿಕೆ ತಟ್ಟೆ, ಅಡಿಕೆ ಹಾಳೆ ತಯಾರಿಸುವ 12 ಅಚ್ಚುಗಳು ನಾಪತ್ತೆಯಾಗಿದ್ದವು. ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ದಿನೇಶ, ಆತನ ಪತ್ನಿ ನಿರ್ಮಲಾ, ಪ್ರಕಾಶ್‌, ಆತನ ಪತ್ನಿ ಮನ್ಸೂರ ಕಾಣೆಯಾಗಿದ್ದರು. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ : ಕದ್ದ ಚಿನ್ನದ ಆಭರಣವನ್ನ ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ
– ಮಣಪ್ಪುರಂ ಫೈನಾನ್ಸ್‌ ಸಂಸ್ಥೆಗೆ ಕಾದಿತ್ತು ಶಾಕ್

ಶಿವಮೊಗ್ಗ : ಕದ್ದ ಚಿನ್ನದ ಆಭರಣವನ್ನ ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ ವಿರುದ್ಧ ಮಣಪ್ಪುರಂ ಫೈನಾನ್ಸ್‌ ಸಂಸ್ಥೆ ದೂರು ನೀಡಿದೆ. ಪೂಜಾ ಎಂಬಾಕೆ 2022ರಲ್ಲಿ 25.6 ಗ್ರಾಂ ಚಿನ್ನದ ಆಭರಣವನ್ನು ಮಣಪ್ಪುರಂ ಫೈನಾನ್ಸ್‌ ಸಂಸ್ಥೆಯಲ್ಲಿ ಅಡವಿಟ್ಟಿದ್ದಳು. 84 ಸಾವಿರ ರೂ. ಸಾಲದ ಹಣ ಪಡೆದಿದ್ದಳು ಎಂದು ಆರೋಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಠಾಣೆ ಪೊಲೀಸರು, ಪೂಜಾ ಅಡವಿಟ್ಟ ಚಿನ್ನ ಕಳ್ಳತನದ್ದು ಎಂದು ಆರೋಪಿಸಿ ವಶಕ್ಕೆ ಪಡೆದಿದ್ದರು. ಕಳ್ಳತನದ ಚಿನ್ನವನ್ನು ತನ್ನದೆಂದು ನಂಬಿಸಿ ತಮ್ಮ ಸಂಸ್ಥೆಗೆ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ, ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಣಪ್ಪುರಂ ಫೈನಾನ್ಸ್‌ ಸಂಸ್ಥೆ ಶಿವಮೊಗ್ಗ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ ಹವಾಮಾನ ಸುದ್ದಿ

ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಹಲವೆಡೆ ಹಾನಿ

ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಹಲವೆಡೆ ಹಾನಿ

– ಉಂಟೂರು ಕಟ್ಟೆ ಕೈಮರ ಬಳಿ ಮನೆಗೆ ಬಿದ್ದ ಮರ
– ವಿದ್ಯುತ್, ನೆಟ್ವರ್ಕ್ ಹಲವೆಡೆ ಇಲ್ಲ..

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಮಳೆಯಾಗುತ್ತಿದೆ. ಎಲ್ಲೆಡೆ ಹಾನಿ ಸಂಭವಿಸಿದೆ. ಅನೇಕ ಕಡೆ ವಿದ್ಯುತ್ ಕಂಬ, ಮರಗಳು ಬಿದ್ದಿವೆ.

ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಟುರು ಕಟ್ಟೆ ಕೈಮರ ಹಸಿರುಮನೆ ಎಂಬಲ್ಲಿ ತಿಮ್ಮಪ್ಪ ನಾಯಕ್ ಅವರ ಮನೆಯ ಕೊಟ್ಟಿಗೆ ಹಾಗೂ ಮನೆ ಹಿಂಭಾಗಕ್ಕೆ ಮರ ಬಿದ್ದು ಭಾರೀ ಹಾನಿಯಾಗಿದೆ.

ತಿಮ್ಮಪ್ಪ ನಾಯ್ಕ ಕೂಲಿ ಕಾರ್ಮಿಕ ಎಂಬುವರ ಮನೆ ಹಾನಿಯಾಗಿದ್ದು, ಲಕ್ಷಾಂತರ ನಷ್ಟವಾಗಿದೆ.

ಭಾರೀ ಮಳೆ : ಮಲೆನಾಡಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಎಲ್ಲಾ ಕಡೆ ಮಳೆಯಾಗುತ್ತಿದೆ.