Categories
ತೀರ್ಥಹಳ್ಳಿ

ಓಟಿಗಾಗಿ ಹೆಂಡ ಕುಡಿಸಲ್ಲ.. ಹಣ ಕೊಡಲ್ಲ…!

ಓಟಿಗಾಗಿ ಹೆಂಡ ಕುಡಿಸಲ್ಲ.. ಹಣ ಕೊಡಲ್ಲ…!
– ತೀರ್ಥಹಳ್ಳಿ ತಾಲೂಕಿನ ಮಾಳೂರು ಸೊಸೈಟಿ ಚುನಾವಣೆ ವಿಶೇಷ
– ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಎಲ್ಲಾ ಅಭ್ಯರ್ಥಿಗಳು

NAMMUR EXPRESS NEWS
ತೀರ್ಥಹಳ್ಳಿ:
ಓಟಿಗಾಗಿ ಹೆಂಡ ಕುಡಿಸಲ್ಲ.. ಹಣ ಕೊಡಲ್ಲ…!. ತೀರ್ಥಹಳ್ಳಿ ತಾಲೂಕಿನ ಮಾಳೂರು ಸೊಸೈಟಿ ಚುನಾವಣೆ ಇದೀಗ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. ಸೊಸೈಟಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ನಾವು ಮತದಾರರಿಗೆ ಹಣ, ಹೆಂಡ ಹಂಚಲ್ಲ ಎಂದು ಮಂಜುನಾಥನ ಎದುರು ಪ್ರಮಾಣ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2024 ರಿಂದ 05 ವರ್ಷ ಅವಧಿಗೆ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ದಿನಾಂಕ : 28-12-2024ರಂದು ನಡೆಯಲಿದೆ. ಅರುಣ.ಎಂ.ಶೆಟ್ಟಿ, ಉಮೇಶ.ಸಿ.ಡಿ., ಕೃಪಾಲ ಡಿ.ಕೆ, ಜಯಂತ, ಟೀಕಪ್ಪ ಗೌಡ ಕೆ.ವಿ, ಧನಂಜಯ ಎಂ.ಪಿ, ಪೂರ್ಣೇಶ ಹೆಚ್.ಎಂ., ಪ್ರಶಾಂತ ಡಿ.ಎಸ್, ಬಸಪ್ಪ ಎ.ಸಿ, ಮೋಹನ್ ಕುಮಾರ್.ವಿ.ಎಸ್, ರವೀಂದ್ರ ಹೆಚ್.ಸಿ, ಸುರೇಂದ್ರ ಎಸ್.ಎ, ಅನುರಾಧ ಕೆ.ಎ, ಗೀತಾ ಎಸ್. ಕೆ, ಲತಾ ಕೆ. ಎಂ, ಸುಮಾ ನಾಗೇಶ, ಮಹೇಶ ಎಂ.ಎಸ್, ರಾಮಚಂದ್ರ ಕೆ.ಟಿ, ಶ್ರೀನಾಥ ಎಂ.ಡಿ. ಸದಾನಂದ ಇ.ಎಲ್, ಉಮೇಶ ಗಬಡಿ, ಪ್ರಕಾಶ್ ಹೆಚ್.ಡಿ, ನಾಗರಾಜ ಹೆಚ್ ಎಂ, ಸತೀಶ್, ನಾರಾಯಣನಾಯ್ಕ್ ಹೆಚ್. ಎನ್, ಪುಷ್ಪಾವತಿ ಜೆ.ಬಿ ಧರ್ಮಸ್ಥಳಕ್ಕೆ ತೆರಳಿ ಆಣೆ ಮಾಡಿ ಬಂದಿದ್ದಾರೆ. ಇದೀಗ ಮತದಾರರ ಮುಂದೆ ಮತ ನೀಡಿ ಎಂದಷ್ಟೇ ಮನವಿ ಮಾಡುತ್ತಿದ್ದಾರೆ.

Categories
ರಾಜ್ಯ

ಸಿ.ಟಿ ರವಿ ಪ್ರಕರಣ ಸಿಐಡಿ‌ಗೆ ಹಸ್ತಾಂತರ!

ಸಿ.ಟಿ ರವಿ ಪ್ರಕರಣ ಸಿಐಡಿ‌ಗೆ ಹಸ್ತಾಂತರ!
* ಪ್ರಕರಣದ ಸತ್ಯಾಸತ್ಯತೆ ತನಿಖೆಗೆ ಈ ನಿರ್ಧಾರ
* ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ – ಗೃಹ ಸಚಿವ ಪರಮೇಶ್ವರ್

NAMMUR EXPRESS NEWS
ಹುಬ್ಬಳ್ಳಿ:
ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಆರೋಪಡಿ ಈಗಾಗಲೇ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರ ಮೇಲೆ ಕೇಸ್ ದಾಖಲಾಗಿದ್ದು, ಈಗ ರಾಜ್ಯ ಸರ್ಕಾರ ಈ ಕೇಸ್‌ನ್ನು ಸಿಐಡಿ‌ಗೆ ವಹಿಸಿರುವುದಾಗಿ ಗೃಹಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಗೃಹಸಚಿವರು ಪ್ರಕರಣದ ಬಗ್ಗೆ ಏನಂದ್ರೂ…

ಪ್ರಕರಣ ಸಂಬಂಧ ಈಗಾಗಲೇ ಸಿ.ಟಿ ರವಿಯವರ ಮೇಲೆ ಕೇಸ್ ದಾಖಲಾಗಿದೆ. ಇದೀಗ ರವಿ ಅವರು ನಾನು ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ. ಸಚಿವೆ ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಎಂದು ಹೇಳುತ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ಸೂಕ್ತ ತನಿಖೆಯಾಗಲೆಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಸಿ.ಟಿ ರವಿ ಪ್ರಕರಣದ ಬಗ್ಗೆ ಇನ್ನೂ ಹೆಚ್ಚು ಚರ್ಚೆ ಮಾಡಲ್ಲ. ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ.
ಸಿ.ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ಪೀಕರ್ ತಮ್ಮ ಕೆಲಸ ತಾವು ಮಾಡುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಆದರೆ ತನಿಖೆಯನ್ನು ಸರಿಯಾಗಿ ಮಾಡಬೇಕಾಗುತ್ತೆ. ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ. ಸಿ.ಟಿ ರವಿ ಪ್ರಕರಣವನ್ನ ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದರು. ಇನ್ನು ಸಿ.ಟಿ ರವಿಯವರ ಮೇಲೆ ಹಲ್ಲೆ ಮಾಡಿದವರ ಮೇಲೆ ಪ್ರಕರಣ ವಿಳಂಬ ವಿಚಾರವಾಗಿ ಮಾತನಾಡಿದ ಗೃಹಸಚಿವರು, ಕೆಲವೊಂದು ಕಾರಣಕ್ಕೆ ವಿಳಂಬವಾಗಿರಬಹುದು. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಅದನ್ನು ಪಾಲನೆ ಮಾಡಲ್ಲ. ಅವರಿವರು ಆರೋಪ ಮಾಡುತ್ತಾರೆ ಎಂದು ನಾವು ಇಲಾಖೆ ನಡೆಸಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ.

Categories
ರಾಜ್ಯ

ಇನ್ನು 5,8ನೇ ತರಗತಿ ಎಲ್ಲರೂ ಪಾಸಾಗಲ್ಲ!

ಇನ್ನು 5,8ನೇ ತರಗತಿ ಎಲ್ಲರೂ ಪಾಸಾಗಲ್ಲ!

* 5, 8ನೇ ತರಗತಿಗಳಿಗೆ ಜಾರಿಯಾಯ್ತು ಅನುತ್ತೀರ್ಣ ನಿಯಮ
* ಕೇಂದ್ರ ಸರ್ಕಾರದ ನೂತನ ನಿಯಮ ಜಾರಿಗೆ ಬರುತ್ತಾ?

NAMMUR EXPRESS NEWS
ಬೆಂಗಳೂರು:
ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದಿದೆ. ಕಲಿಕೆಯಲ್ಲಿ ಹಿಂದುಳಿದಿರುವ 5 ಮತ್ತು 8ನೇ ತರಗತಿ ಮಕ್ಕಳಿಗೆ ‘ಅನುತ್ತೀರ್ಣ’ ಮಾಡಬಹುದೆಂಬ ಹೊಸ ನಿಯಮ ಜಾರಿಯಾಗಿದೆ. ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ, ಎಂಟನೇ ತರಗತಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲಾಗಿದೆ ಎಂಬ ನಿಯಮ ಬದಲಾಗಲಿದೆ.
ಪರಿಷ್ಕೃತ ನಿಯಮದ ಪ್ರಕಾರ, ಎಂದಿನಂತೆ ಮತ್ತು 8 ನೇ ತರಗತಿಯಿಂದ 5 ವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ನಂತರ ಎರಡು ತಿಂಗಳ ತರಬೇತಿ ನೀಡಿ ಮತ್ತೆ ಪರೀಕ್ಷೆ, ಒಂದೊಮ್ಮೆ ಅಲ್ಲಿಯೂ ಕಲಿಕಾ ಗುಣಮಟ್ಟ ಸುಧಾರಿಸುವಲ್ಲಿ ವಿಫಲವಾದರೆ ಅಂತಹ ಮಕ್ಕಳ ಹಿಂದಿನ ತರಗತಿಯಲ್ಲೇ ಮುಂದುವರಿಯುತ್ತದೆ.

* ರಾಜ್ಯದ ಪರಿಸ್ಥಿತಿ ಏನು?

ಕರ್ನಾಟಕದಲ್ಲಿ ಎಂಟನೇ ತರಗತಿಯವರೆಗೆ ಮಕ್ಕಳಿಗೆ ‘ಅನುತೀರ್ಣ’ ಮಾಡುವ ಪದ್ಧತಿ ಇಲ್ಲ. ಇದೀಗ ಹೊಸ ನಿಯಮ ಜಾರಿಯಾಗಲು ಸರ್ಕಾರದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ವಿಚಾರವಾಗಿ ಅವರು ಮಾತನಾಡಿದ್ದಾರೆ, ರಾಜ್ಯದಲ್ಲಿ ಕಳೆದ ವರ್ಷ 5 ಮತ್ತು 8ನೇ ತರಗತಿಗೆ ಯಾರು ಪರೀಕ್ಷೆ ಮಾಡಬೇಕು ಎಂಬುದರ ಕುರಿತು ಚರ್ಚೆಯಾಗಿ ಹೊಸ ಪ್ರಕರಣವನ್ನು ನಡೆಸಲಾಯಿತು. ಪರೀಕ್ಷೆಯನ್ನು ಮಂಡಳಿಯಿಂದ ನಡೆಸಬೇಕೋ ಅಥವಾ ಶಾಲಾ ಹಂತದಲ್ಲಿ ನಡೆಸಬೇಕೋ ಎಂಬುದು ರಾಜ್ಯದ ವಿಚಾರವಾಗಿತ್ತು. ಆದರೆ, ‘ಫೇಲ್’ ಮಾಡುವ ವಿಚಾರವಾಗಿ ರಾಜ್ಯದಲ್ಲಿ ಚರ್ಚೆ ವಿಷಯವಾಗಿರಲಿಲ್ಲ. ಆದರೆ, ಈಗ ಸರ್ಕಾರವು ಕಲಿಕೆಯಲ್ಲಿ ಮಕ್ಕಳ ಕೇಂದ್ರ ಫೇಲ್ ಮಾಡಲು ಹೊರಟಿರುವುದು ಹೊಸ ವಿಷಯವಾಗಿದೆ. ಹೀಗಾಗಿ, ಸರ್ಕಾರದ ಹಂತದಲ್ಲಿಯೇ ನಿರ್ಣಯ ಕೈಗೊಳ್ಳಲಾಯಿತು.

* ರಾಜ್ಯದಲ್ಲಿ ಪರೀಕ್ಷೆ ಪ್ರಹಸನ!

ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸುವ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಭಯ ಹೋಗಲಾಡಿಸಲು 2022-23ನೇ ಸಾಲಿನಲ್ಲಿ ಮೊದಲ ಬಾರಿಗೆ 5 ಮತ್ತು 8ನೇ ತರಗತಿಯ ತರಗತಿಗಳಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

* ಮುಂದೇನು?

ಕರ್ನಾಟಕದಲ್ಲಿ 2012ರಿಂದ ಆರ್ ಟಿಇ ಜಾರಿಯಲ್ಲಿದೆ. ಆ ಪ್ರಕಾರ, 8ನೇ ತರಗತಿಯವರೆಗೂ ಅನುತ್ತೀರ್ಣ ಎಂಬ ನಿಯಮವನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಮತ್ತೆ ಅನುತ್ತೀರ್ಣ ನಿಯಮ ಜಾರಿಗೊಳಿಸಲು ರಾಜ್ಯದ ಮಟ್ಟದಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

* ಎಲ್ಲೆಲ್ಲಿ ಜಾರಿಯಲ್ಲಿದೆ?

2019ರಲ್ಲಿ ಟಿಟಿಐ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಅನುತ್ತೀರ್ಣ ನಿಯಮ ಗುಜರಾತ್, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಸೇರಿದಂತೆ 16 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿದೆ.
5, 8ನೇ ತರಗತಿಯಿಂದ ವಾರ್ಷಿಕ ಪರೀಕ್ಷೆ ನಡೆಸಲು ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದು ಮಕ್ಕಳ ಮೇಲೆ ಒತ್ತಡ ತರುವುದು ಅಲ್ಲಿನ ಸರ್ಕಾರದ ವಾದವಾಗಿದೆ.

* ಹೊಸ ನಿಯಮದಲ್ಲಿ ಏನಿದೆ?

ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಮಾಡಲಾಗಿದ್ದು, ಅನುತ್ತೀರ್ಣರಾದವರಿಗೆ 2 ತಿಂಗಳ ತರಬೇತಿ ನಂತರ ಮತ್ತೊಮ್ಮೆ ಪರೀಕ್ಷೆ ಇದೆ ಆಗಲೂ ಅನುತ್ತೀರ್ಣರಾದರೆ ಅದೇ ತರಗತಿ ಗತಿ ಆದರೆ ಮಕ್ಕಳನ್ನು ಶಾಲೆಯಿಂದ ಬಿಡಿಸಲಾಗುತ್ತದೆ.
1 ರಿಂದ 8 ನೇ ತರಗತಿಯವರೆಗೆ ಪುಕ್ಕಟೆ ಪಾಸು, 9 ನೇ ತರಗತಿಯಲ್ಲಿ ಅನುಕಂಪದ ಆಧಾರದಲ್ಲಿ ಪಾಸ್‌ ಮಾಡಿ 10 ನೇ ತರಗತಿಯಲ್ಲಿ ಮಕ್ಕಳ ಮೇಲೆ ಗದಾಪ್ರಹಾರ ಮಾಡುವುದಕ್ಕೆ ಬದಲಾಗಿ 5 ಮತ್ತು 8 ನೇ ತರಗತಿಯಲ್ಲಿ ಕಲಿಕಾ ಗುಣಮಟ್ಟ ಪರಿಶೀಲಿಸುವುದು ಅಗತ್ಯ.
ಕೂಡಲೇ ರಾಜ್ಯದಲ್ಲೂ ಈ ನಿಯಮವನ್ನು ಅನುಷ್ಠಾನ ಮಾಡಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತೇನೆ ಎಂದು ಡಿ. ಶಶಿಕುಮಾ‌ರ್, ಕ್ಯಾಟ್ಸ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಕೋಣೆಯಲ್ಲಿ ಕೂಡಿ ಹಾಕಿ ಯುವತಿ ರೇಪ್: ಆರೋಪಿ ಅರೆಸ್ಟ್!
– ಮಣಿಪಾಲ: ಬಾವಿಗೆ ಕೊಡಪಾನ ತೆಗೆಯಲು ಇಳಿದ ವ್ಯಕ್ತಿ ಮೃತ್ಯು
– ಹೆಬ್ರಿ: ಮಹಿಳೆಯೊಬ್ಬರಿಗೆ ಜೀವ ಬೆದರಿಕೆ : ಪ್ರಕರಣ ದಾಖಲು
– ಬಂಟ್ವಾಳ: ಮನೆಯ ಅಂಗಳದಲ್ಲಿ ಗಲಾಟೆ: ಬಂಧನ

NAMMUR EXPRESS NEWS
ಬಂಟ್ವಾಳ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾರಗೈದ ಘಟನೆ ತಡವಾಗಿ ವರದಿಯಾಗಿದೆ. ಅತ್ಯಾಚಾರ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ನಾವೂರ ನಿವಾಸಿ ಜಯಂತ ಎಂದು ಗುರುತಿಸಲಾಗಿದೆ. ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಲು ಮನೆಯವರ ಜೊತೆ ತೆರಳಿದ್ದ ಯುವತಿಯನ್ನು ಆರೋಪಿ ಜಯಂತ ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ನೊಂದ ಯುವತಿಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಳು. ಗ್ರಾಮಾಂತರ ಎಸ್.ಐ.ಹರೀಶ್ ಅವರ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

* ಮಣಿಪಾಲ: ಬಾವಿಗೆ ಕೊಡಪಾನ ತೆಗೆಯಲು ಇಳಿದ ವ್ಯಕ್ತಿ ಮುಳುಗಿ ಮೃತ್ಯು

ಮಣಿಪಾಲ: ಸರಳೆಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಮನೆಯೊಂದರ ಬಾವಿಗೆ ಬಿದ್ದ ಕೊಡಪಾನ ತೆಗೆಯಲು ಬಾವಿಗೆ ಇಳಿದಾಗ ಬಾವಿಗೆ ಆಯ ತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿ ಶಿವನಾಯ್ಕ್ (50) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಗ್ರೀನ್ ಪಾರ್ಕ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಲೋಕು ಪೂಜಾರಿಯವರ ಮನೆಯ ಆವರಣದಲ್ಲಿರುವ ಬಾವಿಗೆ ಅವರ ಕೊಡಪಾನ ಬಿದ್ದದ್ದನ್ನು ತೆಗೆಯಲು ಶಿವನಾಯ್ಕ್ ಅವರು ಬಾವಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ. ತಕ್ಷಣ ಉಡುಪಿ ಅಗ್ನಿಶಾಮಕ ದಳದವರು ಬಂದು ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಮೃತರು ಪತ್ನಿ ಓರ್ವ ಪುತ್ರ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

* ಹೆಬ್ರಿ: ಮಹಿಳೆಯೊಬ್ಬರಿಗೆ ಜೀವಬೆದರಿಕೆ : ಪ್ರಕರಣ ದಾಖಲು

ಹೆಬ್ರಿ: ಹೆಬ್ರಿ ಸಮೀಪದ ಅಜೆಕಾರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಎನ್ನುವಲ್ಲಿ ನಡೆದಿದೆ. ಶಿರ್ಲಾಲಿನ ಸುನಂದ ಅವರು ಡಿ. 19ರಂದು ದೆಪ್ಪುತ್ತೆಯ ರೇಷ್ಮಾ ಟೆಲಿಸ್‌ ಕ್ರಿಸ್ಪಾಲ್‌ ಅವರ ತೋಟದಲ್ಲಿ ಜ್ಯೋತಿ, ಸಂಕ್ರಾಯ, ವಿಜಯ ಅವರ ಜತೆ ಕೆಲಸ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಪ್ರದೀಪ್‌ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಸುನಂದಾ ದೂರು ನೀಡಿದ್ದು, ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬಂಟ್ವಾಳ: ಮನೆಯ ಅಂಗಳದಲ್ಲಿ ಗಲಾಟೆ: ದೂರು, ಪ್ರತಿದೂರು, ಅರೆಸ್ಟ್

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನ ಕೈಕಂಬ ಪರ್ಲಿಯಾದಲ್ಲಿ ಬಾಡಿಗೆ ಕೊಡುವ ವಿಚಾರದಲ್ಲಿ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗಲಾಟೆಗೆ ಸಂಬಂಧಿಸಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನು ಪರ್ಲಿಯಾ ಮದ್ದ ಮನೆ ನಿವಾಸಿ ಶಾಹುಲ್ ಹಮೀದ್ ಹಾಗೂ ತಾರಿಪಡ್ಪು ನಿವಾಸಿ ಹಸೈನಾರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮನೆಯ ಅಂಗಳದಲ್ಲಿ ಎರಡು ತಂಡಗಳ ನಡುವೆ ಗಲಾಟೆಯ ವಿಡಿಯೋ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈಯಕ್ತಿಕ ವಿಚಾರದಲ್ಲಿ ಆರಂಭವಾದ ಗಲಾಟೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಎಸ್.ಡಿ.ಪಿ.ಐ.ಮತ್ತು ಕಾಂಗ್ರೆಸ್ ಪಕ್ಷದ ಅಂಗಳದಲ್ಲಿ ಮಾತಿನ ಫೈರಿಂಗ್ ಆರಂಭವಾಗಿದ್ದು, ಗಲಾಟೆ ನಡೆದಿದೆ.

Categories
ಚಿಕ್ಕಮಗಳೂರು

ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿ ಕುಟುಂಬಕ್ಕೆ ಪರಿಹಾರ

ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿ ಕುಟುಂಬಕ್ಕೆ ಪರಿಹಾರ
– ಅರಣ್ಯ ಇಲಾಖೆ ಹಾಗೂ ಶಾಸಕರಿಂದ ವೈಯಕ್ತಿಕ ಪರಿಹಾರದ ಚೆಕ್ ವಿತರಣೆ
– ಶಾಸಕ ರಾಜೇಗೌಡ, ಡಾ. ಅಂಶುಮಂತ್ ಸೇರಿ ಹಲವರು ಹಾಜರ್

NAMMUR EXPRESS NEWS
ಎನ್.ಆರ್. ಪುರ:
ತಾಲೂಕಿನ ಮುತ್ತಿನಕೊಪ್ಪ ಗ್ರಾಮದ
ಎಕ್ಕಡಬೈಲ್‌ನಲ್ಲಿ ಕಾಡಾನೆ ತುಳಿದು ಸಾವನ್ನಪ್ಪಿದ ಎಲಿಯಾಸ್ ಅವರ ಮನೆಗೆ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ, ಡಿ.ಒಫ್.ಒ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಇಲಾಖೆಯಿಂದ 15 ಲಕ್ಷ ರೂಗಳ ಪರಿಹಾರದ ಚೆಕ್ಕನ್ನು ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ರಾಜೇಗೌಡ ವೈಯಕ್ತಿಕವಾಗಿ 1 ಲಕ್ಷ ರೂಗಳ ಪರಿಹಾರವನ್ನು ಆ ಕುಟುಂಬಕ್ಕೆ ಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರಬೈಲ್ ನಟರಾಜ್ ಹಾಗೂ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಡಾ.ಅಂಶಮಂತ್ ಮುತ್ತಿನಕೊಪ್ಪ ಪಂಚಾಯಿತಿಯ ಅಧ್ಯಕ್ಷರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗ್ರಾಮಸ್ಥರು ಉಪಸ್ಥಿತರಿದ್ದರು.

Categories
ರಾಜ್ಯ

ಸರ್ಕಾರಿ ನೌಕರರಿಗೆ ರಜಾ ಪಟ್ಟಿ ಘೋಷಣೆ!

ಸರ್ಕಾರಿ ನೌಕರರಿಗೆ ರಜಾ ಪಟ್ಟಿ ಘೋಷಣೆ!
– 2025ನೇ ವರ್ಷದಲ್ಲಿ ರಾಜ್ಯದ ಸಾರ್ವತ್ರಿಕ ರಜೆಗಳ ಪಟ್ಟಿ ಘೋಷಣೆ
– 2025ನೇ ಸಾಲಿನ ಸಾರ್ವತ್ರಿಕ ರಜೆ ಯಾವತ್ತು ಇಲ್ಲಿದೆ ಪಟ್ಟಿ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದಿಂದ 2025ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ಸಿಗುವಂತ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದೆ.
2025ನೇ ವರ್ಷದಲ್ಲಿ ಈ ಕೆಳಗಿನ ದಿನಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸಾರ್ವತ್ರಿಕ ರಜೆಗಳೆಂದು ಘೋಷಿಸಲಾಗಿದೆ.
ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಈ ಕೆಳಕಂಡ ದಿನಗಳು

ಇಲ್ಲಿದೆ 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ!

* ದಿನಾಂಕ 14-01-2025 ಮಂಗಳವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* ದಿನಾಂಕ 26-02-2025 ಬುಧವಾರ – ಮಹಾ ಶಿವರಾತ್ರಿ
* ದಿನಾಂಕ 31-03-2025 ಸೋಮವಾರ – ಖುತುಬ್ ಎ ರಂಜಾನ್
* ದಿನಾಂಕ 10-04-2025 ಗುರುವಾರ – ಮಹಾವೀರ ಜಯಂತಿ
* ದಿನಾಂಕ 14-04-2025 ಸೋಮವಾರ – ಡಾ.ಬಿಆರ್ ಅಂಬೇಡ್ಕ‌ರ್ ಜಯಂತಿ
* ದಿನಾಂಕ 18-04-2025 ಶುಕ್ರವಾರ – ಗುಡ್ ಪ್ರೈಡೆ
* ದಿನಾಂಕ 30-04-2025 ಬುಧವಾರ – ಬಸವ ಜಯಂತಿ, ಅಕ್ಷಯ ತೃತೀಯ
* ದಿನಾಂಕ 01-05-2025 ಗುರುವಾರ – ಕಾರ್ಮಿಕ ದಿನಾಚರಣೆ
* ದಿನಾಂಕ 07-06-2025 ಶನಿವಾರ – ಬಕ್ರೀದ್
* ದಿನಾಂಕ 15-08-2025 ಶುಕ್ರವಾರ – ಸ್ವಾತಂತ್ರ್ಯ ದಿನಾಚರಣೆ
* ದಿನಾಂಕ 27-08-2025 ಬುಧವಾರ – ವರಸಿದ್ಧಿ
ವಿನಾಯಕ ವ್ರತ
* ದಿನಾಂಕ 05-09-2025 ಶುಕ್ರವಾರ – ಈದ್ ಮಿಲಾದ್
* ದಿನಾಂಕ 01-10-2025 ಬುಧವಾರ – ಮಹಾನವಮಿ,
ಆಯುಧಪೂಜೆ, ವಿಜಯದಶಮಿ
* ದಿನಾಂಕ 02-10-2025 ಗುರುವಾರ – ಗಾಂಧಿ ಜಯಂತಿ
* ದಿನಾಂಕ 07-10-2025 ಮಂಗಳವಾರ – ಮಹರ್ಷಿ
ವಾಲ್ಮೀಕಿ ಜಯಂತಿ
* ದಿನಾಂಕ 20-10-2025 ಸೋಮವಾರ – ನರಕ
ಚತುರ್ದಶಿ
* ದಿನಾಂಕ 22-10-2025 ಬುಧವಾರ – ಬಲಿಪಾಡ್ಯಮಿ, ದೀಪಾವಳಿ
* ದಿನಾಂಕ 01-11-2025 ಶನಿವಾರ – ಕನ್ನಡ ರಾಜ್ಯೋತ್ಸವ
* ದಿನಾಂಕ 25-12-2025 ಗುರುವಾರ – ಕ್ರಿಸ್‌ ಮಸ್

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಹನುಮನ ದಯೆ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಅದ್ಭುತ ದಿನವೆಂದು ಸಾಬೀತುಪಡಿಸಬಹುದು. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಆದರೆ ಖರ್ಚಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳುವುದು ಸಹ ಅಗತ್ಯವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಆರೋಗ್ಯವೂ ಉತ್ತಮ ಸ್ಥಿತಿಯಲ್ಲಿದೆ, ಆದರೆ ಸ್ವಲ್ಪ ಕಾಳಜಿ ಅಗತ್ಯ. ಇಂದು ದಾನ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಇಂದು ಯಾವುದೇ ವಿವಾದಕ್ಕೆ ಸಿಲುಕುವುದನ್ನು ನೀವು ತಪ್ಪಿಸಬೇಕು.

** ವೃಷಭ ರಾಶಿ :
ನೀವು ಇಂದು ಒಳ್ಳೆಯ ಸುದ್ದಿ ಪಡೆಯಬಹುದು. ಇದು ವೃತ್ತಿ, ಪ್ರೀತಿ, ಕುಟುಂಬ ಅಥವಾ ಹಣದ ವಿಷಯವಾಗಿರಲಿ, ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲು ಸಂತೋಷಪಡಬಹುದು. ನಿಮ್ಮ ಆರಾಮ ವಲಯದಿಂದ ಹೊರಬನ್ನಿ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ, ಅದು ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಮನೆಗೆ ಅತಿಥಿ ಬರಬಹುದು. ಬೇರೆಯವರ ಮಾತುಗಳಿಂದ ಪ್ರಭಾವಿತರಾಗಿ ಕುಟುಂಬದಲ್ಲಿ ಯಾವುದೇ ಜಗಳವನ್ನು ಪ್ರೋತ್ಸಾಹಿಸಬಾರದು.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಕೆಲಸದ ಪ್ರದೇಶದಲ್ಲಿ ಉನ್ನತ ಅಧಿಕಾರಿಗಳಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ದೀರ್ಘಾವಧಿಯ ವ್ಯವಹಾರ ಯೋಜನೆಗಳಿಗೆ ನೀವು ವೇಗವನ್ನು ಪಡೆಯುತ್ತೀರಿ, ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಉತ್ತಮ ಅವಕಾಶವನ್ನು ಪಡೆಯಬಹುದು. ವಿವಾಹಿತ ದಂಪತಿಗಳು ಇಂದು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಬಹುದು.

** ಕರ್ಕಾಟಕ ರಾಶಿ :
ಇಂದು ಧನಾತ್ಮಕ ಶಕ್ತಿಯಿಂದ ತುಂಬಿದ ದಿನವಾಗಲಿದೆ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುವುದು ನಿಮಗೆ ಒಳ್ಳೆಯದು. ನೀವು ಮಾಡುವ ಯಾವುದೇ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನೀವು ಸಹೋದರ ಸಹೋದರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕಳೆದುಹೋದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯೂ ಇದೆ.

** ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ, ನೀವು ಅದನ್ನು ಇಂದು ಪಡೆಯಬಹುದು. ನಿಮ್ಮ ಸಂಗಾತಿಯಿಂದ ನೀವು ಸುಲಭವಾಗಿ ಸಾಕಷ್ಟು ಬೆಂಬಲವನ್ನು ಪಡೆಯುತ್ತೀರಿ. ಇಂದು ಹಣಕಾಸಿನ ವಿಷಯಗಳಲ್ಲಿ ನೀವು ಯಾರನ್ನೂ ನಂಬಬೇಡಿ. ನಿಮ್ಮ ಮನಸ್ಸು ಏನನ್ನೋ ಚಿಂತಿಸುತ್ತಿರುತ್ತದೆ. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯುತ್ತವೆ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರಿಗೆ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ದಿನ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ನಿಮ್ಮ ಸಂಬಂಧಿಕರಿಂದ ನೀವು ಆರ್ಥಿಕ ಲಾಭವನ್ನು ಪಡೆಯುತ್ತಿರುವಂತೆ ತೋರುತ್ತಿದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಆರ್ಥಿಕವಾಗಿ ನೆಮ್ಮದಿ ಇರುತ್ತದೆ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ವ್ಯಾಪಾರದಲ್ಲಿ ಆತುರ ಹೆಚ್ಚಾಗಬಹುದು.

** ತುಲಾ ರಾಶಿ :
ಇಂದು ನೀವು ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ. ರೋಗಗಳನ್ನು ತಪ್ಪಿಸಲು, ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡಿ. ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಕೋಪವನ್ನು ನಿಯಂತ್ರಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಓಡಬೇಕಾಗಬಹುದು. ಇಂದು ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ನಿಮ್ಮ ಕುಟುಂಬದ ವಿಷಯಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ ಇಂದು ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮವನ್ನು ವಹಿಸುವ ದಿನವಾಗಿದೆ. ನಿಮ್ಮ ಕೆಲಸದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಒಳಿತು. ಹೊಸ ಉದ್ಯೋಗ ದೊರೆಯಬಹುದು. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ವ್ಯಾಪಾರ ಮಾಡುವವರಿಗೆ ಇಂದು ಉತ್ತಮ ದಿನ.

** ಧನಸ್ಸು ರಾಶಿ :
ಇಂದು ನೀವು ನಿಮ್ಮ ವೃತ್ತಿಜೀವನದ ಬಗ್ಗೆ ವಿಶೇಷ ಗಮನ ಹರಿಸಬೇಕು. ಕಚೇರಿ ರಾಜಕೀಯದಿಂದಾಗಿ ನಿಮ್ಮ ಒತ್ತಡ ಹೆಚ್ಚಾಗಬಹುದು. ನಿಮ್ಮ ಕೆಲಸದ ಮೇಲೆ ಗಮನ ಹರಿಸುವುದು ಉತ್ತಮ. ಹೈಡ್ರೇಟೆಡ್ ಆಗಿರಿ. ಧನು ರಾಶಿಯವರಿಗೆ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇಂದು ಉತ್ತಮ ದಿನವಾಗಲಿದೆ. ನೀವು ವ್ಯಾಪಾರದಲ್ಲಿ ಕೆಲವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಸ್ವಲ್ಪ ಒತ್ತಡವಿರುತ್ತದೆ.

** ಮಕರ ರಾಶಿ :
ಇಂದು ಶುಭ ದಿನವಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಕೆಲವರು ಆರೋಗ್ಯ ಸಂಬಂಧಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ದೇಹವನ್ನು ಸದೃಢವಾಗಿಡಲು ವ್ಯಾಯಾಮ ಮಾಡುವುದು ಒಳ್ಳೆಯದು. ಇಂದು ನೀವು ತಮ್ಮ ಕೆಲಸದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ, ಆಗ ಮಾತ್ರ ಯಶಸ್ಸು. ಉದ್ಯೋಗವನ್ನು ಹುಡುಕುತ್ತಿರುವ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

** ಕುಂಭ ರಾಶಿ :
ಈ ದಿನವು ನಿಮಗೆ ಆಹ್ಲಾದಕರ ದಿನವಾಗಲಿದೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ದಿನವನ್ನು ಕಳೆಯಬಹುದು. ಇಂದು ಕೆಲವು ಜನರು ಆಸ್ತಿ ಅಥವಾ ಹಣವನ್ನು ಪಿತ್ರಾರ್ಜಿತವಾಗಿ ಪಡೆಯಬಹುದು. ನೀವು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಚಿಂತನಶೀಲವಾಗಿ ಹೂಡಿಕೆ ಮಾಡುವುದು ಉತ್ತಮ. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಸಂಪೂರ್ಣ ಗಮನ ಹರಿಸಬೇಕು. ಆರೋಗ್ಯದ ಕಡೆ ಗಮನಹರಿಸಿ.

** ಮೀನ ರಾಶಿ :
ಮೀನ ರಾಶಿಯವರಿಗೆ ನಾಳೆ ಮಿಶ್ರ ದಿನವಾಗಲಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ, ಆದರೆ ಅನಗತ್ಯವಾಗಿ ಯಾವುದೇ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ, ಇಂದು ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಸುರಕ್ಷಿತ ಹೂಡಿಕೆಯ ಆಯ್ಕೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಒಳಿತು. ತಪ್ಪು ತಿಳುವಳಿಕೆಯನ್ನು ಪರಿಹರಿಸಲು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ.

Categories
ತೀರ್ಥಹಳ್ಳಿ

ಡಿ.29ಕ್ಕೆ ತೀರ್ಥಹಳ್ಳಿಗೆ ಡಿಕೆಶಿ ಆಗಮನ?

ಡಿ.29ಕ್ಕೆ ತೀರ್ಥಹಳ್ಳಿಗೆ ಡಿಕೆಶಿ ಆಗಮನ?
– ಕುವೆಂಪು ಜನ್ಮ ದಿನೋತ್ಸವಕ್ಕೆ ಉಪ ಮುಖ್ಯಮಂತ್ರಿ ಭೇಟಿ
– ಕುಪ್ಪಳಿಯಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ

NAMMUR EXPRESS NEWS
ತೀರ್ಥಹಳ್ಳಿ:
ಕುವೆಂಪು ಜನ್ಮ ದಿನದ ಅಂಗವಾಗಿ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ನಡೆಯಲಿರುವ ಕುವೆಂಪು ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ನೀಡಲಿದ್ದಾರೆ. ಕೊಪ್ಪ ಅಥವಾ ಗಡಿಕಲ್ ಮೈದಾನದಲ್ಲಿ ಹೆಲಿ ಕಾಪ್ಟರ್ ಮೂಲಕ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕ ಕುಪ್ಪಳಿಗೆ ಆಗಮಿಸಲಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

Categories
ಹಾಸನ

ಯಶಸ್ವಿಯಾದ ಕಾಫಿ ಬೆಳೆಗಾರರ ಸಮಾವೇಶ!

ಯಶಸ್ವಿಯಾದ ಕಾಫಿ ಬೆಳೆಗಾರರ ಸಮಾವೇಶ!
– ಜೆಡಿಎಸ್ – ಬಿಜೆಪಿ ಮೈತ್ರಿ ಸರಕಾರ ಬಂದೇ ಬರುತ್ತದೆ; ನಮ್ಮ ಅಜೆಂಡಾ ಪೂರ್ಣಗೊಳಿಸುತ್ತೇವೆ: ಹೆಚ್.ಡಿ.ಕುಮಾರಸ್ವಾಮಿ
– ಪಿಯೂಷ್ ಗೋಯಲ್ ಬಂದಿದ್ದಾರೆ, ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರ ಆಗುತ್ತೆ ಎಂದ ಕೇಂದ್ರ ಸಚಿವರು

NAMMUR EXPRESS NEWS
ಸಕಲೇಶಪುರ / ಹಾಸನ: ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಸಿಎಂ ಆಗಿದ್ದ ಎರಡು ಅವಧಿಗಳಲ್ಲಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನೂ ಆಗ ನಾವು ಮಾಡಿ ಮುಗಿಸುತ್ತೇವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಸಕಲೇಶಪುರದಲ್ಲಿ ಕಾಫಿ ಬೆಳೆಗಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರ ರಚನೆಯಾದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಅನೇಕ ಜನಪರ ಕಾರ್ಯಕ್ರಮಗಳ ಜಾರಿ ಬಾಕಿ ಉಳಿದಿದೆ. ಅವೆಲ್ಲವನ್ನೂ ಅನುಷ್ಠಾನಕ್ಕೆ ತರಬೇಕಾದರೆ ಮತ್ತೊಮ್ಮೆ ಮೈತ್ರಿ ಸರಕಾರ ಬರಬೇಕಿದೆ. ಶೀಘ್ರದಲ್ಲಿಯೇ ಬಂದೇ ಬರುತ್ತದೆ ಎಂದು ಹೇಳಿದರು. ಮುಂದೆ ನಿಮ್ಮೆಲ್ಲರ ಆಶೀರ್ವಾದದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬರುವ ಆಶಯವಿದೆ. ನನ್ನ ಕನಸಿನ ಕೆಲವು ಶಾಶ್ವತ ಯೋಜನೆಗಳು ಹಾಗೆಯೇ ಉಳಿದಿವೆ. ಅವುಗಳನ್ನೆಲ್ಲಾ ಸಾಕಾರಗೊಳಿಸಬೇಕಿದೆ. ರೈತರ ಬದುಕನ್ನು ಕಟ್ಟಿಕೊಡುತ್ತೇವೆ ಎಂದು ಕೇಂದ್ರ ಸಚಿವರು ನುಡಿದರು.

ಕಾಫಿ ಬೆಳೆಗಾರರಿಗೆ ಸಚಿವರ ಅಭಯ

ಪ್ರಾಕೃತಿಕ ಕಾರಣ ಹಾಗೂ ಪ್ರತಿಕೂಲಕರ ಹವಾಮಾನದಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಾಗತಿಕ ಮಾರುಕಟ್ಟೆ ತಲ್ಲಣಗಳಿಂದ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. 1991ರಲ್ಲಿ ದೇವೇಗೌಡರು ಸಂಸದರಾಗಿದ್ದರು. ಸಕಲೇಶಪುರದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಐ.ಕೆ.ಗುಜ್ರಾಲ್ ಅವರು ಭಾಗವಹಿಸಿದ್ದರು. ಅಂದು ಗುಜ್ರಾಲ್ ಅವರಿಗೆ ದೇವೇಗೌಡರು ಕಾಫಿ ಬೆಳೆಗಾರರ ಸಮಸ್ಯೆ ವಿವರಿಸಿದ್ದರು. ಅವರನ್ನು ಬಿಟ್ಟರೆ ನಲವತ್ತು ವರ್ಷಗಳ ನಂತರ ಸಕಲೇಶಪುರಕ್ಕೆ ಬಂದಿರುವ ಕೇಂದ್ರ ಸಚಿವರು ಅಂದರೆ ಫಿಯುಷ್ ಗೋಯೆಲ್ ಅವರು ಮಾತ್ರ. ಅದಕ್ಕಾಗಿ ನಾನು ಗೋಯಲ್ ಅವರಿಗೆ ಆಭಾರಿ ಆಗಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಪಿಯೂಷ್ ಗೋಯಲ್ ಅವರು ಸಕಲೇಶಪುರಕ್ಕೆ ಬಂದಿರುವ ಕಾರಣಕ್ಕೆ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಸಕಲೇಶಪುರ ಜನರು ಆನೆ ಹಾವಳಿಗೆ ತುತ್ತಾಗಿ ಬಹಳಷ್ಟು ಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ನಾನೂ ಮನವಿ ಮಾಡಿದ್ದೇನೆ. ಕೇಂದ್ರದಲ್ಲಿ ಪರಿಸರ ಇಲಾಖೆ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅವರ ಗಮನಕ್ಕೆ ಮತ್ತೊಮ್ಮೆ ಈ ವಿಷಯ ತರುತ್ತೇನೆ. ಪಿಯೂಷ್ ಗೋಯಲ್ ಮತ್ತು ನಾನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಆನೆ ಕಾರಿಡಾರ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಹದಿನೈದು ಸಾವಿರ ಎಕರೆ ಗುರುತಿಸಿದೆ. ರೈತರು ಮೂರು ಸಾವಿರ ಎಕರೆ ಬಿಟ್ಟುಕೊಡಲು ಸಿದ್ದರಿದ್ದಾರೆ. ಆದರೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ. ನಾನು ಮುಖ್ಯಮಂತ್ರಿಯಾದಾಗ ತಡೆಗೋಡೆ ನಿರ್ಮಾಣ ಮಾಡಲು ನೂರು ಕೋಟಿ ಬಿಡುಗಡೆ ಮಾಡಿದ್ದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು. ಕಸ್ತೂರಿ ರಂಗನ್ ವರದಿ ಬಗ್ಗೆ ಎಲ್ಲರಲ್ಲೂ ಆತಂಕ ಇದೆ. ಹೇಮಾವತಿ ನದಿಯ ನೀರು ಮಲೆನಾಡು ಭಾಗದ ಜನರ ತ್ಯಾಗದ ಫಲ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಅನುಕೂಲವಾಗಿದೆ ಎಂದು ಅವರು ಹೇಳಿದರು. ದೇವೇಗೌಡರ ಮೇಲೆ ಅಪಾರ ಗೌರವ ಇಟ್ಟಿರುವ ನರೇಂದ್ರಮೋದಿ ಅವರು ತಮ್ಮ ಸಂಪುಟದಲ್ಲಿ ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಕನಸಿನ ವಿಕಸಿತ ಭಾರತ್ ಸೇರಿದಂತೆ ಅನೇಕ ಯೋಜನೆಗಳನ್ನು ಸಾಕಾರಗೊಳಿಸಬೇಕು. ಆ ನಿಟ್ಟಿನಲ್ಲಿ ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು ಸಚಿವರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರು ಕಾಫಿ ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ, ಮೋಟಮ್ಮ, ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಅಧ್ಯಕ್ಷ ಡಾ.ಹೆಚ್.ಟಿ. ಮೋಹನ್ ಕುಮಾರ್, ಸಂಸದರಾದ ತೇಜಸ್ವಿ ಸೂರ್ಯ, ಶ್ರೇಯಸ್ ಪಟೇಲ್, ಶಾಸಕರಾದ ಎಸ್.ಮಂಜುನಾಥ್, ಹೆಚ್.ಕೆ. ಸುರೇಶ್, ಮಂಥರ್ ಗೌಡ, ಸ್ವರೂಪ್ ಪ್ರಕಾಶ್, ಕಾಫಿ ಮಂಡಳಿ ಅಧ್ಯಕ್ಷ ಡಿ.ಜೆ.ದಿನೇಶ್ ಸೇರಿದಂತೆ ಅನೇಕ ಗಣ್ಯರು, ಕಾಫಿ ಬೆಳೆಗಾರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Categories
ಚಿಕ್ಕಮಗಳೂರು

ಹಿಂದೂಸೇವಾ ಪ್ರತಿಷ್ಠಾನದಿಂದ ದೀಪ ಪೂಜನಾ

ಹಿಂದೂಸೇವಾ ಪ್ರತಿಷ್ಠಾನದಿಂದ ದೀಪ ಪೂಜನಾ
– ಸಮಾಜದಲ್ಲಿ ಸಾಮರಸ್ಯ ವೃದ್ಧಿಗಾಗಿ ಹಲವು ಚಟುವಟಿಕೆಗಳು
– ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯ ಹೇಗಿರುತ್ತೆ?

NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಅಡ್ಡಗದ್ದೆ,ಕಲ್ಕಟ್ಟೆ,ಹೊಸ್ಕೆರೆ ಗ್ರಾಮಗಳಲ್ಲಿ ಹಿಂದೂಸೇವಾ ಪ್ರತಿಷ್ಠಾನದ ವತಿಯಿಂದ ದೀಪ ಪೂಜನಾ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ಸಂಸ್ಥೆಯಿಂದ ತಾಲೂಕಿನ ಹಲವು ಭಾಗಗಳಲ್ಲಿ ಸಾಮಾಜಿಕ ಸಮಾನತೆ ಬೆಳೆಸುವ ಸಲುವಾಗಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರೊಂದಿಗೆ ಭಜನೆ,ಹೊಲಿಗೆ ತರಬೇತಿ ಶಿಬಿರ,ಬಾಲಗೋಕುಲ,ಮನೆಪಾಠದಂತಹ ಚಟುವಟಿಕೆಗಳನ್ನು ನಡೆಸುತ್ತಿದೆ. ದೀಪ ಪೂಜನಾ ಕಾರ್ಯಕ್ರಮವನ್ನು ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸುತ್ತಿದ್ದು ಗ್ರಾಮದ ಎಲ್ಲಾ ಮಹಿಳೆಯರು ಸೇರಿ ಸ್ವತಃ ತಾವೇ ಮಂತ್ರದೊಡನೆ ಪೂಜಿ ಸಲ್ಲಿಸುತ್ತಾರೆ. ಈ ಕಾರ್ಯಕ್ರಮವನ್ನು ಸುಮಂಗಲ ಆನಂದಸ್ವಾಮಿಯವರು ನೇತೃತ್ವ ವಹಿಸಿ ನಡೆಸಿಕೊಟ್ಟರು. ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.

ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯ ಹೇಗಿರುತ್ತೆ?

ಹಿಂದು ಸೇವಾ ಪ್ರತಿಷ್ಠಾನ ಕಳೆದ ಹತ್ತಾರು ವರ್ಷಗಳಿಂದ ಮಲೆನಾಡು ಭಾಗದಲ್ಲಿ ಶಿಕ್ಷಣ, ಸಂಸ್ಕಾರ, ಸ್ವಾವಲಂಬಿ ಮತ್ತು ಪರಿಸರ ಈ ದೃಷ್ಟಿಯಿಂದ ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ವಿಶೇಷವಾಗಿ ಈ ದೀಪೋತ್ಸವ ಸಮಯದಲ್ಲಿ ದೀಪ ಪೂಜನಾ ಎಂಬ ವಿಭಿನ್ನ ಕಾರ್ಯಕ್ರಮವನ್ನು ಮಾಡುತ್ತಿದ್ದು, ಇದರಲ್ಲಿ ವಿಶೇಷವಾಗಿ ತಾಯಂದಿರೇ ಸ್ವತಃ ಪೂಜೆ ಮಾಡುತ್ತಾರೆ ಮತ್ತು ಜಾತಿ ಭೇದ ಮರೆತು ಮೇಲು ಕೀಳು ಎಂಬ ಭಾವನೆ ಇಲ್ಲದೆ ಸಾಮರಸ್ಯಕ್ಕೆ ಒತ್ತುಕೊಟ್ಟು ನಾವೆಲ್ಲರೂ ಹಿಂದು ಮತ್ತು ಭಾರತ ಎಂಬ ರಾಷ್ಟ್ರದ ಭಾಗಗಳು ಎಂಬುದನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮ ಇದು. ಜೊತೆಗೆ ಕುಟುಂಬ, ಪರಿಸರ, ಸ್ವದೇಶಿ, ಸಾಮರಸ್ಯ ಮತ್ತು ನಾಗರೀಕ ಕರ್ತವ್ಯ ಈ ಐದು ವಿಷಯಗಳನ್ನು ಈ ಬಾರಿ ವಿಶೇಷ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ.