Categories
ಅಡಿಕೆ-ದರ

ಇಂದಿನ ಅಡಿಕೆ ದರ ಎಷ್ಟಿದೆ?

ಇಂದಿನ ಅಡಿಕೆ ದರ ಎಷ್ಟಿದೆ?
– ಅಡಿಕೆ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

NAMMUR EXPRESS NEWS

ಸರಕು
56009-94652

ಬೆಟ್ಟೆ
45700-54700-57209

ರಾಶಿ
43029-49290-50500

ಹೊಸ ರಾಶಿ
40266-49290-50199

Categories
ಚಿಕ್ಕಮಗಳೂರು

ಮಲೆನಾಡಲ್ಲಿ ನಿಲ್ಲದ ಅಕ್ರಮ ಗೋ ಸಾಗಾಟ!

ಮಲೆನಾಡಲ್ಲಿ ನಿಲ್ಲದ ಅಕ್ರಮ ಗೋ ಸಾಗಾಟ!
– ಆಟೋದಲ್ಲಿ ಸಾಗಿಸುತ್ತಿದ ಗೋಮಾಂಸ ವಶ,3 ಗೋವುಗಳ ರಕ್ಷಣೆ
– ಮೂಡಿಗೆರೆ ಬಜರಂಗದಳ ಕಾರ್ಯಕರ್ತರು, ಪೊಲೀಸರ ಕಾರ್ಯಾಚರಣೆ

NAMMUR EXPRESS NEWS
ಮೂಡಿಗೆರೆ: ಬಜರಂಗದಳ ಕಾರ್ಯಕರ್ತರು ಹಾಗೂ ಪೋಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋ ಮಾಂಸ ಹಾಗೂ ಗೋವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿ.22 ರಾತ್ರಿ ಬೇಲೂರು ಭಾಗದಿಂದ ಆಟೋವೊಂದರಲ್ಲಿ ಸಾಗಿಸುತ್ತಿದ್ದ ಸುಮಾರು 53 ಕೆ.ಜಿ ಗೋ ಮಾಂಸವನ್ನು ವಶಪಡಿಸಿಕೊಂಡಿದು ಪಿಕಪ್ ವಾಹನವೊಂದರಲ್ಲಿ ಸಾಗಿಸುತ್ತಿದ್ದ 3 ಗೋವುಗಳನ್ನು ಗೋಣಿಬೀಡು ಎಂಬಲ್ಲಿ ವಶಪಡಿಸಿಕೊಳ್ಳಲಾಗಿದೆ. ಗೋಣಿಬೀಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಒಂದು ಆಟೋ,ಒಂದು ಪಿಕಪ್ ಸೇರಿದಂತೆ ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ. ದಿನೇ ದಿನೇ ಈ ಭಾಗದಲ್ಲಿ ಅಕ್ರಮ ಗೋಸಾಗಾಟ ಹೆಚ್ಚಾಗಿದ್ದು ಇದನ್ನು ತಡೆಯುವಂತೆ ಬಜರಂಗದಳ ಹಲವು ಬಾರಿ ಪೋಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.

Categories
ಉದ್ಯೋಗ ಸುದ್ದಿ

ಉದ್ಯೋಗ ಸಿಗಬೇಕಾದ್ರೆ

ಉದ್ಯೋಗ ಸಿಗಬೇಕಾದ್ರೆ
– ಆಗ್ಬೇಕು ಆಲ್ ರೌಂಡರ್
– ಉದ್ಯೋಗ ಪಡೆಯಲು ಏನೇನು ಅರ್ಹತೆ ಬೇಕು.?
– ಯುವ ಜನತೆ ಉದ್ಯೋಗ ಪಡೆಯುವುದು ಸುಲಭ ಇಲ್ಲ

ಉದ್ಯೋಗ ದೇಶದ ದೊಡ್ಡ ಸಮಸ್ಯೆ ಆಗಿ ಮಾರ್ಪಡುತ್ತಿದೆ. ಓದಿದರೂ ಬೆಲೆ ಇಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇದು ಡಿಜಿಟಲ್ ಜಮಾನ. ಇಲ್ಲಿ ಕೌಶಲ್ಯ ಇದ್ದವರಿಗೆ ಅವಕಾಶ. ಬರೀ ಓದಿನ ಅಂಕದ ಚೌಕಟ್ಟು ಕೂಡ ಕೆಲವೊಮ್ಮೆ ಕೆಲಸಕ್ಕೆ ಬರುವುದಿಲ್ಲ.! ಸರ್ಕಾರಿ ಉದ್ಯೋಗ ಪಡೆಯುವುದು ಕನಸು
ಸರ್ಕಾರಿ ಉದ್ಯೋಗ ಎಂದರೆ ಅದೇನೋ ಎಲ್ಲರಿಗೂ ಸೇಫ್ ಎಂಬ ಮನೋಭಾವನೆ. ಜೀವನದ ಅಮೂಲ್ಯವಾದ ಸಂಪತ್ತನ್ನು ಮತ್ತು ಜೀವನಕ್ಕೆ ಬೇಕಾದ ಅತ್ಯಮೂಲ್ಯ ವಸ್ತು ಒಂದು ಸಿಕ್ಕ ಹಾಗೆ. ಸರ್ಕಾರಿ ಸ್ಥಾನಗಳಲ್ಲಿ ಅಧಿಕಾರವನ್ನು ಹೊಂದಿದ್ದು, ಸ್ಥಿರವಾದ ಸಂಬಳದಿಂದ ಬೆಂಬಲಿತವಾದ ಆರಾಮದಾಯಕ ಜೀವನವನ್ನು ಖಾತ್ರಿಗೊಳಿಸುತ್ತದೆ. 60 ವರ್ಷ ವಯಸ್ಸಿನವರೆಗೆ ಉದ್ಯೋಗ ಭದ್ರತೆ ಖಾತರಿಯೊಂದಿಗೆ, ವ್ಯಕ್ತಿಗಳು ವಿವಿಧ ಪ್ರಯೋಜನಗಳು, ಭತ್ಯೆಗಳು ಮತ್ತು ಸರ್ಕಾರಿ ರಜಾದಿನಗಳನ್ನು ಆನಂದಿಸುತ್ತಾರೆ. ಸರ್ಕಾರಿ ಹುದ್ದೆಗಳ ಸ್ಪರ್ಧೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಆದರೆ ಅವಕಾಶ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ.

ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ?

ಉದ್ಯೋಗ ಹುಡುಕುತ್ತಿದ್ದರೆ, ಮೊದಲು ಕೇಂದ್ರ ಸರ್ಕಾರಿ ಉದ್ಯೋಗ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಮುಂದುವರಿಸಲು ಬಯಸುತ್ತೀರಾ ಎಂದು ನಿರ್ಧರಿಸಿ. ನಂತರ, ನೀವು ಆಸಕ್ತಿ ಹೊಂದಿರುವ ನಿರ್ದಿಷ್ಟ ಸ್ಥಾನ ಅಥವಾ ಕ್ಷೇತ್ರವನ್ನು ನಿರ್ಧರಿಸಿ. ಆಯ್ಕೆ ಮಾಡಿದ ಪೋಸ್ಟ್ ಅರ್ಹತೆಗಳು ಮತ್ತು ಆಯ್ಕೆ ಪ್ರಕ್ರಿಯೆಗಳೊಂದಿಗೆ ಆಯ್ಕೆಯು ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಯನ್ನು ಒಳಗೊಂಡಿದ್ದರೆ, ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ. ಅಗತ್ಯ
ಮಾಹಿತಿ ಮತ್ತು ಪುಸ್ತಕಗಳನ್ನು ಸಂಗ್ರಹಿಸಿ ಮತ್ತು ನಿಮ್ಮ ಓದುವಿಕೆಯನ್ನು ಪ್ರಾರಂಭಿಸಿ. ನಿಮ್ಮ ಆಸಕ್ತಿಯ ಆ ಸದರಿ ಹುದ್ದೆಗೆ ಅಥವಾ ಯಾವುದೇ ಸರ್ಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆಯಿರಿ.

ಖಾಸಗಿ ಉದ್ಯೋಗ ಪಡೆಯುವುದು ಹೇಗೆ?

ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳುವುದು ಶೈಕ್ಷಣಿಕ ಅರ್ಹತೆಗಳನ್ನು ಮೀರಿದೆ. ಉದ್ಯೋಗದಾತರು ಸಾಮಾನ್ಯವಾಗಿ ಕೌಶಲ್ಯಗಳು, ಗುಣಲಕ್ಷಣಗಳು ಮತ್ತು ಅನುಭವಗಳ ಸಂಯೋಜನೆಯನ್ನು ಹುಡುಕುತ್ತಾರೆ. ನಿಮ್ಮ ಅಧ್ಯಯನದ ಜೊತೆಗೆ ನಿಮ್ಮ ಉದ್ಯೋಗಾವಕಾಶವನ್ನು ಹೆಚ್ಚಿಸುವ ಕೆಲವು ಗುಣಗಳು ಈಗ ಕಡ್ಡಾಯ.

ವಾಕ್ ಸಾಮರ್ಥ್ಯ (Communication Skill)

ವೃತ್ತಿಪರ ಜಗತ್ತಿನಲ್ಲಿ ಲಿಖಿತ ಮತ್ತು ಮೌಖಿಕ ಎರಡೂ ಪರಿಣಾಮಕಾರಿ ಸಂವಹನ ಹಾಗೂ ನಿರ್ಣಾಯಕವಾಗಿದೆ. ಸ್ಪಷ್ಟ ಅಭಿವ್ಯಕ್ತಿ ಮತ್ತು ಆಲೋಚನೆಗಳನ್ನು ತಿಳಿಸುವ ಸಾಮರ್ಥ್ಯವು ಹೆಚ್ಚು ಮೌಲ್ಯಯುತವಾಗಿದೆ.

ಹೊಂದಿಕೊಳ್ಳುವಿಕೆ (Adaptability)

ಉದ್ಯೋಗದಾತರು ಹೊಸ ಸವಾಲುಗಳು, ತಂತ್ರಜ್ಞಾನಗಳು ಮತ್ತು ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳುವ ಅಭ್ಯರ್ಥಿಗಳನ್ನು ಮೆಚ್ಚುತ್ತಾರೆ.

ನಮ್ಯತೆ (Flexibility)

ಹೊಸ ಆಲೋಚನೆಗಳು, ಕಾರ್ಯಗಳು ಅಥವಾ ಯೋಜನೆಗಳಲ್ಲಿನ ಬದಲಾವಣೆಗಳಿಗೆ ಮುಕ್ತವಾಗಿರುವುದು ನಮ್ಯತೆಯನ್ನು ಪ್ರದರ್ಶಿಸುತ್ತದೆ, ಕ್ರಿಯಾತ್ಮಕ ಕೆಲಸದ ವಾತಾವರಣದಲ್ಲಿ ಹೆಚ್ಚು ಬೇಡಿಕೆಯಿರುವ ಲಕ್ಷಣವಾಗಿದೆ.

ಸಮಸ್ಯೆ-ಪರಿಹರಿಸುವ ಕೌಶಲ್ಯಗಳು (Problem-Solving Skills)

ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವ ವ್ಯಕ್ತಿಗಳನ್ನು ಉದ್ಯೋಗದಾತರು ಗೌರವಿಸುತ್ತಾರೆ.

ನೆಟ್ವರ್ಕಿಂಗ್ (Networking)

ವೃತ್ತಿಪರ ಸಂಬಂಧಗಳನ್ನು ನಿರ್ಮಿಸುವುದು ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಉದ್ಯಮದ ಈವೆಂಟ್ಗಳಿಗೆ ಹಾಜರಾಗಿ, ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ನೆಟ್ವರ್ಕ್ ಅನ್ನು ವಿಸ್ತರಿಸಲು ಆನೈನ್ ಪ್ಲಾಟ್ಸಾರ್ಮ್ಗಳನ್ನು ಬಳಸಿ.

ನೆನಪಿಡಿ, ನಿಮ್ಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಈ ಗುಣಗಳ ಸಂಯೋಜನೆಯನ್ನು ಪ್ರದರ್ಶಿಸುವುದು ನಿಮ್ಮ ಉದ್ಯೋಗಾವಕಾಶವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಉದ್ಯೋಗದಲ್ಲಿ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ.

ಶ್ರಮ ಮತ್ತು ನಂಬಿಕೆ

ಯಾವುದೇ ಉದ್ಯಮ, ಕಂಪನಿ, ಸಂಸ್ಥೆಯ ಯಶಸ್ಸು ಆ ವ್ಯವಸ್ಥೆಯಲ್ಲಿ ಕೆಲಸ ಮಾಡುವವರ ಶ್ರಮ, ಕಾಳಜಿ, ನಂಬಿಕೆ, ನಿರ್ಧರಿತ ಗುರಿ ಮುಟ್ಟುವುದರ ಮೇಲೆ ನಿಂತಿದೆ. ಇಲ್ಲಿ ಎಲ್ಲರ ಮನಸ್ಥಿತಿ ಒಂದೇ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಹಾಗಾಗಿ ಅಂತವರಿಗೆ ಅವಕಾಶ ಹೆಚ್ಚು.

ಕೌಶಲ್ಯ ಇದ್ದವರಿಗೆ ಕೆಲಸ ಗ್ಯಾರಂಟಿ ಯಾರು ಯಶಸ್ವಿ ವೃತ್ತಿಜೀವನದ ಹಾದಿಯನ್ನು ಹೊಂದಬೇಕೆಂದು ಇಚ್ಛಿಸುತ್ತಾರೋ ಅವರು ಕೇವಲ ಔಪಚಾರಿಕ ಶಿಕ್ಷಣಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತಾರೆ. ಇಂದಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವೃತ್ತಿಪರ ಜಗತ್ತಿನಲ್ಲಿ ಕೌಶಲ್ಯ
ಹೊಂದಿದವರಿಗೆ ಅವಕಾಶದ ಬಾಗಿಲು ತೆಗೆದಿರುತ್ತದೆ.

ವೃತ್ತಿಜೀವನಕ್ಕೆ ಪ್ರಮುಖವಾದ ನಿರ್ದಿಷ್ಟ ಕೌಶಲ್ಯಗಳನ್ನು ಅನ್ವೇಷಿಸುವಾಗ, ಪರಿಣಾಮಕಾರಿ ಸಂವಹನ, ಸಮಸ್ಯೆ-ಪರಿಹರಿಸುವುದು, ವಿಮರ್ಶಾತ್ಮಕ ಚಿಂತನೆ, ನಾಯಕತ್ವ, ತಂಡದ ಕೆಲಸ ಮತ್ತು ತಾಂತ್ರಿಕ ಪ್ರಾವೀಣ್ಯತೆಯು ವೃತ್ತಿಪರ ಯಶಸ್ಸಿನ ತಳಹದಿಯನ್ನು ರೂಪಿಸುತ್ತದೆ. ಕೌಶಲ್ಯ ವೃತ್ತಿಜೀವನದ ನವೀಕರಣಕ್ಕೆ ದಾರಿ ತೋರಿಸುತ್ತವೆ.

ವೃತ್ತಿಪರ ಬೆಂಬಲ ವ್ಯವಸ್ಥೆಯನ್ನು ರಚಿಸಲು, ಮಾರ್ಗದರ್ಶನ ಮತ್ತು ಹೊಸ ಅವಕಾಶಗಳಿಗೆ ಬಾಗಿಲು ತೆರೆಯಲು ನೆಟ್ವರ್ಕಿಂಗ್ ಮತ್ತು ಸಂಬಂಧ-ನಿರ್ಮಾಣ ಕೌಶಲ್ಯಗಳು ಅತ್ಯಗತ್ಯ. ಸಮಯ ನಿರ್ವಹಣೆ
ಮತ್ತು ಸ್ಥಿತಿಸ್ಥಾಪಕತ್ವವು ಸಮಾನವಾಗಿ ನಿರ್ಣಾಯಕವಾಗಿದೆ.

ತಾಂತ್ರಿಕ ಪ್ರಾವೀಣ್ಯತೆಯು ವೃತ್ತಿಜೀವನಕ್ಕೆ ಆವಶ್ಯಕವಾಗಿದೆ. ಹೊಸ ತಂತ್ರಾಂಶಗಳನ್ನು ಸ್ವೀಕರಿಸಲು ಸಿದ್ಧತೆ ಹೊಂದಿರುವ ವ್ಯಕ್ತಿಗಳು ತಮ್ಮ ವೃತ್ತಿಜೀವನವನ್ನು ನವೀಕರಿಸುವಲ್ಲಿ ಸುಲಭವಾಗಿ ಮುನ್ನಡೆಯಬಹುದು.

ಕೌಶಲ್ಯ, ಜ್ಞಾನ, ಶ್ರಮ, ನಂಬಿಕೆ, ಗುರಿ ಇದ್ದಲ್ಲಿ ಯಶಸ್ವಿ ವೃತ್ತಿಜೀವನವನ್ನು ನೀವೂ ಸಾಧಿಸಬಹುದು. ಎಲ್ಲರಿಗೂ ಬೆಸ್ಟ್ ಆಫ್ ಲಕ್.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಖಾಸಗಿ ಶಾಲಾ ಬಸ್ ಟಯ‌ರ್ ಸ್ಪೋಟ, ಗಾಯ
– ಮಂಗಳೂರು: ಚಾಲಕ ನಿಯಂತ್ರಣ ತಪ್ಪಿ ಆಟೋ ಪಲ್ಟಿ: ಚಾಲಕ ಮೃತ್ಯು
– ಅಜೆಕಾರು: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ – ದೂರು

NAMMUR EXPRESS NEWS
ಗಾಳಿ ತುಂಬುವಾಗ ಟಯ‌ರ್ ಸ್ಪೋಟಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ನಡೆದಿದೆ.
ಕೆಪಿಎಸ್ ಪಿಯು ಕಾಲೇಜ್ ಹಿಂಭಾಗದಲ್ಲಿ ಟಯರ್ ಪಂಚರ್ ಶಾಪ್ ನಲ್ಲಿ ಬಸ್ಸಿನ ಟೈಯರಿಗೆ ಗಾಳಿ ತುಂಬುವ ಸಂದರ್ಭ ಟಯ‌ರ್ ಸಿಡಿದಿದೆ. ಟಯರ್ ಗಾಳಿ ತುಂಬಿಸುತ್ತಿದ್ದ ಅಬ್ದುಲ್ ರಜೀದ್ (19) ಗಾಯಗೊಂಡ ಯುವಕ. ಖಾಸಗಿ ಶಾಲೆ ಬಸ್ ಒಂದರ ಟಯ‌ರ್ ಪ್ಯಾಚ್ ಗೆಂದು ಬಂದಿದ್ದು, ಗಾಳಿ ತುಂಬಿದ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದಿದೆ. ಗಾಳಿ ತುಂಬಿಸುತ್ತಿದ್ದ ಯುವಕ ಎದ್ದು ನಿಲ್ಲುವಷ್ಟರಲ್ಲಿ ಸ್ಪೋಟ ಸಂಭವಿಸಿದ್ದು, ಟಯರ್ ನ ಸಿಡಿತಕ್ಕೆ ಸುಮಾರು ಕೆಲವು ಅಡಿ ಎತ್ತರಕ್ಕೆ ಯುವಕ ಗಾಳಿಯಲ್ಲಿ ಹಾರಾಡಿ ಕೆಳಕ್ಕೆ ಬಿದ್ದ ಯುವಕ ಅಬ್ದುಲ್ ರಜೀದ್ ಗೆ ಗಂಭೀರ ಗಾಯಗೊಂಡಿದ್ದಾನೆ. ಅಪಘಾತದ ಹೊಡೆತಕ್ಕೆ ಯುವಕನ ಕೈ ಮುರಿತ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ದೃಶ್ಯಾವಳಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

* ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ: ಚಾಲಕ ಮೃತ್ಯು

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ರಸ್ತೆ ಉರ್ಲಾಂಡಿಯಲ್ಲಿ ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಡಿ. 22 ರಂದು ಬೆಳಗ್ಗೆ ಸಂಭವಿಸಿದೆ. ಕಬಕ ಗ್ರಾಮದ ನೆಹರೂನಗರ ಕುಡ್ವಸ್‌ ಕಂಪೌಂಡ್‌ ನಿವಾಸಿ, ರಿಕ್ಷಾ ಚಾಲಕ ಸೂರ್ಯಕುಮಾರ್‌ (64) ಮೃತರು. ಸೂರ್ಯಕುಮಾರ್‌ ಅವರು ಬೆಳಗ್ಗೆ 6.30 ಹೊತ್ತಿಗೆ ತನ್ನ ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ನೆಹರೂನಗರ ಕಡೆಯಿಂದ ಪುತ್ತೂರು ಮಹಾಮಾಯ್ಮಿ ಟೆಂಪಲ್‌ ರಸ್ತೆ ಕಡೆಗೆ ತೆರಳುತ್ತಿದ್ದ ವೇಳೆ ಉರ್ಲಾಂಡಿ ಬಳಿ ರಿಕ್ಷಾಕ್ಕೆ ಶ್ವಾನವೊಂದು ಅಡ್ಡ ಬಂದಿದ್ದು ಇದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಚಾಲಕ ಸೂರ್ಯಕುಮಾರ್‌ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಸಹ ಪ್ರಯಾಣಿಕರಾದ ಕೇದರ್‌ ಕುಡ್ವ ಮತ್ತು ಕಾರ್ತಿಕ್‌ ಪೈ ಅವರಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

* ಅಜೆಕಾರು: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ – ದೂರು

ಅಜೆಕಾರು : ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿರುವ ಘಟನೆ ಡಿ. 19ರಂದು ಅಜೆಕಾರಿನಲ್ಲಿ ಸಂಭವಿಸಿದೆ. ಶಿರ್ಲಾಲು ಗ್ರಾಮದ ಸುನಂದ ಎಂಬವರು ಸದಾಶಿವ ಎಂಬುವವರ ಜೊತೆ ನಾಲ್ಕು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಡಿ. 19ರಂದು ಸದಾಶಿವ ಅವರು ತಿಳಿಸಿದಂತೆ ಮರ್ಣೆ ಗ್ರಾಮದ ದೆಪ್ಪುತ್ತೆ ಎಂಬಲ್ಲಿ ರೇಷ್ಮಾಟೆಲಿಸ್‌ ಕ್ರಿಸ್ಪಾಲ್‌ ಅವರ ತೋಟದಲ್ಲಿ ಜ್ಯೋತಿ, ಸಂಕ್ರಾಯ ಮತ್ತು ವಿಜಯ ಅವರ ಜೊತೆ ಕೆಲಸ ಮಾಡಿಕೊಂಡಿರುವಾಗ ಪ್ರದೀಪ್ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಲು ಪ್ರಯತ್ನಿಸಿದಲ್ಲದೆ, ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಸುನಂದಾ ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್
– ಹಣಗೆರೆಕಟ್ಟೆ ಲಾಡ್ಜಲ್ಲಿ ಯುವತಿ ಕೊಲೆ: ಸಿನಿಮಾ ಸ್ಟೈಲಲ್ಲಿ ಹಂತಕನ ಹಿಡಿದ ಪೊಲೀಸರು!
– ರಿಪ್ಪನ್‌ಪೇಟೆ: ಗರ್ತಿಕೆರೆಯ ಕೆರೆಯಲ್ಲಿ ಮಹಿಳೆಯ ಶವ ಪತ್ತೆ
– ಶಿವಮೊಗ್ಗ : ಕೆಟಿಎಂ ಬೈಕ್ – ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು
– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ
– ಎನ್‌. ಆರ್.‌ ಪುರ: ಅಡಿಕೆ ಕಳ್ಳತನ: ಆರೋಪಿಗಳ ಬಂಧನ

NAMMUR EXPRESS NEWS
ಶಿವಮೊಗ್ಗ : ಇಲ್ಲಿನ ಹಣಗೆರೆಕಟ್ಟೆಯ ಲಾಡ್ಜ್‌ವೊಂದರಲ್ಲಿ ಎಂಟು ತಿಂಗಳ ಹಿಂದೆ ನಡೆದಿದ್ದ ಯುವತಿಯ ಕೊಲೆ ಪ್ರಕರಣದ ಆರೋಪಿಯನ್ನು ಮಾಳೂರು ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿರುವ ಪೊಲೀಸರು ಮಾಳೂರು ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ಇದೀಗ ಮುಂದಿನ ಕಾನೂನು ಪ್ರಕ್ರಿಯೆಗಳನ್ನ ನಡೆಸುತ್ತಿದ್ದಾರೆ. 2024 ರ ಏಪ್ರಿಲ್‌ 4 ರಂದು ಹಣಗೆರೆ ಕಟ್ಟೆಯ ಲಾಡ್ಜ್‌ ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಧಾರ್ಮಿಕ ಕ್ಷೇತ್ರದ ಸನ್ನಿದಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಈ ಪ್ರದೇಶದಲ್ಲಿ ಕಾನೂನು ಬಾಹಿರ ಚುಟವಟಿಕೆ ನಡೆಯುತ್ತಿದೆಯೆ ಎಂಬ ಅನುಮಾನಕ್ಕೂ ಕಾರಣವಾಗಿತ್ತು. ಅಲ್ಲದೆ ಪ್ರಕರಣದಲ್ಲಿ ಯಾವೊಂದು ಸುಳಿವು ಸಹ ಸಿಕ್ಕಿರಲಿಲ್ಲ. ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳೆಲ್ಲಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಆನಂತರ ಕೆಲವು ದಿನಗಳ ತನಿಖೆಯ ಬಳಿಕ ಲಾಡ್ಜ್‌ ನಲ್ಲಿ ಕೊಲೆಯಾದ ಯುವತಿ ಶಿವಮೊಗ್ಗದ ಬಾಪೂಜಿ ನಗರದ ನಿವಾಸಿ ಉಮಾ ಎಂದು ಗೊತ್ತಾಗಿತ್ತು. ಪೊಲೀಸರಿಗೆ ಕೊಲೆಯಾದ ಯುವತಿಯ ಬಗ್ಗೆ ಮಾಹಿತಿ ಲಭ್ಯವಾಗಿದ ಬಳಿಕವೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಏಕೆಂದರೆ ಪ್ರಕರಣದ ಆರೋಪಿ ಪತ್ತೆಯಾಗಿರಲಿಲ್ಲ. ಇದೀಗ ಆರೋಪಿ ಪತ್ತೆಯಾಗಿದ್ದು, ದಿನ ಪೊಲೀಸರ ಕೈಗೆ ಸಿಗದೇ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಹಿಡಿದು ತಂದಿರುವ ಬಗ್ಗೆ ಮಾಹಿತಿ ಇದೆ. ಆದಾಗ್ಯು ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.

– ರಿಪ್ಪನ್‌ಪೇಟೆ: ಗರ್ತಿಕೆರೆಯ ಕೆರೆಯಲ್ಲಿ ಮಹಿಳೆಯ ಶವ ಪತ್ತೆ

ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಅವುಕ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ತೋಟದಲ್ಲಿರುವ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಕಮ್ಮಚ್ಚಿ ನಿವಾಸಿ ರೇಖಾ(36) ಎಂಬುವವರ ಮೃತದೇಹ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ರೇಖಾ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ , ಸಂಬಂಧಿಕರು ಹಾಗೂ ಸ್ನೇಹಿತರೆಲ್ಲಾ ವಿಚಾರಿಸಿದ್ದರು ಆದರೆ ಮಹಿಳೆಯ ಮೃತದೇಹ ಅವುಕ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಹಲವಾರು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದ ರೇಖಾ ತೀವ್ರ ಮದ್ಯವಸನಿಯಾಗಿದ್ದರು ಎನ್ನಲಾಗುತಿದ್ದು ಮಾನಸಿಕವಾಗಿ ಜರ್ಜರಿತರಾಗಿದ್ದರು. ಸ್ಥಳಕ್ಕೆ ಗರ್ತಿಕೆರೆ ಗ್ರಾಪಂ ಅಧ್ಯಕ್ಷ ಸಚಿನ್ ಗೌಡ ,ಸದಸ್ಯ ಲಿಂಗರಾಜ್ ಭೇಟಿ ನೀಡಿದ್ದಾರೆ. ರಿಪ್ಪನ್‌ಪೇಟೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

– ಶಿವಮೊಗ್ಗ : ಕೆಟಿಎಂ ಬೈಕ್ ಗೆ ಖಾಸಗಿ ಬಸ್ ಗೆ ಡಿಕ್ಕಿಯಿಂದ ಇಬ್ಬರು ಯುವಕರು ಸಾವು

ಶಿವಮೊಗ್ಗ: ಶಿವಮೊಗ್ಗದ ಹೆಲಿಪ್ಯಾಡ್ ಬಳಿಯಿರುವ ಈಡಿಗರ ಭವನಕ್ಕೆ ತಿರುಗುವ ತಿರುವಿನಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸಾಗರ ರಸ್ತೆಯಲ್ಲಿ ಈಡಿಗರ ಭವನಕ್ಕೆ ತಿರುಗುತ್ತಿದ್ದ ವೇಳೆ ಎಡಭಾಗದಿಂದ ಓವರ್ ಟೇಕ್ ಮಾಡಲು ಯತ್ನಿಸಿದ ಪರಿಣಾಮ ಕೆಟಿಎಂ ಬೈಕು ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಇಬ್ಬರು ಯುವಕರನ್ನ ಮೆಗ್ಗಾನ್ ಗೆ ಸಾಗಿಸಲಾಗಿದೆ. ಇಬ್ಬರು ಯುವಕರನ್ನ ತಪಾಸಣೆ ನಡೆಸಿದ ವೈದ್ಯರು ಇಬ್ಬರ ಸಾವನ್ನ ಖಚಿತಪಡಿಸಿರುವುದಾಗಿ ತಿಳಿದುಬಂದಿದೆ. ಇಬ್ಬರು ಯುವಕರನ್ನ ಅಪರಿಚಿತ ಮೃತದೇಹಗಳೆಂದು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಯುವಕರು ಸಾಗರ ಕಡೆ ಹೊರಟಿದ್ದರು ಎನ್ನಲಾಗಿದೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರು ಜಾವಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

– ಎನ್‌. ಆರ್.‌ ಪುರ: ಅಡಿಕೆ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ

ಎನ್‌. ಆರ್.‌ ಪುರ: ಅಡಿಕೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.‌ ಆರ್.‌ ಪುರ ತಾಲೂಕಿನಲ್ಲಿ ನಡೆದಿದೆ. ಕಡೂರು ಮೂಲದ ಮಹಮ್ಮದ್ ಸಾಧಿಕ್ (39) ಹಾಗೂ ಶಿವಮೊಗ್ಗದ ಲಕ್ಕಿನಕೊಪ್ಪ ವಾಸಿ ಸಲ್ಮಾ(39) ಬಂಧಿತ ಆರೋಪಿಗಳು. ಎನ್‌. ಆರ್.‌ ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪ 65 ರಿಂದ 70 ಅಡಿಕೆ ಮರಗಳಲ್ಲಿನ ಕೊನೆಗಳನ್ನು ಉದುರು ಮಾಡಿ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ್ದು, ಆರೋಪಿಗಳನ್ನು ಬಂಧಿಸಿ ಸುಮಾರು 202.87 ಕೆ.ಜಿ ಒಣ ಅಡಿಕೆ ಹಾಗೂ ಒಂದು ಕಾರು ವಶಪಡಿಸಿಕೊಂಡಿದ್ದಾರೆ. ಎನ್‌. ಆರ್.‌ ಪುರ ಅಲ್ಲದೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಡಿಕೆ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

Categories
ರಾಜ್ಯ

ಚಿನ್ನ-ಬೆಳ್ಳಿ ದರ ಗಣನೀಯ ಇಳಿಕೆ

ಚಿನ್ನ-ಬೆಳ್ಳಿ ದರ ಗಣನೀಯ ಇಳಿಕೆ
– ಕೆಲ ಮಳಿಗೆಗಳಲ್ಲಿ ಆಭರಣ ಚಿನ್ನವನ್ನು ಪ್ರತಿ ಗ್ರಾಂಗೆ 6999 ರೂ. ನಂತೆ ಮಾರಾಟ
– ಚಿನ್ನದ ದರವು ಜನವರಿ ಮೊದಲ ವಾರದವರೆಗೆ ಕಡಿಮೆಯಾಗುವ ಸಾಧ್ಯತೆ

NAMMUR EXPRESS NEWS
ಬೆಂಗಳೂರು: ಕಳೆದ ಏಳೆಂಟು ತಿಂಗಳಿನಿಂದ ಏರುಗತಿಯಲ್ಲಿದ್ದ ಚಿನ್ನ, ಬೆಳ್ಳಿ ದರವು ವಾರದಿಂದೀಚೆಗೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆಭರಣ ಚಿನ್ನವು (22 ಕ್ಯಾರೆಟ್‌) ಪ್ರತಿ ಗ್ರಾಂ.ಗೆ 7,440 ರೂ. ದಾಟಿತ್ತು. ಶನಿವಾರ ಚಿನಿವಾರ ಪೇಟೆಯಲ್ಲಿ 22 ಕ್ಯಾರಟ್‌ನ ಚಿನ್ನದ ದರ 7,100 ರೂ.ಗಳಿಗೆ ಇಳಿಕೆಯಾಗಿದೆ. ಬುಲಿಯನ್‌ (24 ಕ್ಯಾರೆಟ್‌) ಚಿನ್ನದ ದರ ಪ್ರತಿ ಗ್ರಾಂಗೆ 8,000 ರೂ.ಗಳಿಗೆ ಏರಿಕೆಯಾಗಿತ್ತು. ಈಗ 7,590 ರೂ. ಆಗಿದ್ದು, 410 ರೂ. ನಷ್ಟು ಕಡಿಮೆಯಾಗಿದೆ. ಹಾಗೆಯೇ, ಬೆಳ್ಳಿ ದರವು ಗ್ರಾಂಗೆ 99 ರೂ. ನಿಂದ 88.70 ರೂ.ಗೆ ಇಳಿಕೆಯಾಗಿದೆ. ಇದು ಖರೀದಿದಾರರು ಮತ್ತು ಹೂಡಿಕೆದಾರರಲ್ಲಿ ಸಂತಸ ತಂದಿದೆ. ಸದ್ಯ ವಿವಾಹ ಋುತು ಇಲ್ಲ. ಆದಾಗ್ಯೂ, ಚಿನ್ನ ಖರೀದಿ ಉತ್ತೇಜಿಸಲು ಕೆಲವೊಂದು ಆಭರಣ ಮಳಿಗೆಗಳು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿವೆ. ಕೆಲ ಮಳಿಗೆಗಳಲ್ಲಿ ಶನಿವಾರ ಆಭರಣ ಚಿನ್ನವನ್ನು ಪ್ರತಿ ಗ್ರಾಂಗೆ 6999 ರೂ. ನಂತೆ ಮಾರಾಟ ಮಾಡಲಾಗಿದೆ. ಚಿನ್ನದ ದರವು ಜನವರಿ ಮೊದಲ ವಾರದವರೆಗೆ ಕಡಿಮೆಯಾಗುವ ಸಾಧ್ಯತೆಗಳಿವೆ.

– ಟ್ರಂಪ್‌ ನೀತಿಗಳ ಮೇಲೆ ದರ ಏರಿಳಿತ
ಭಾರತ ಸೇರಿದಂತೆ ವಿಶ್ವದಾದ್ಯಂತ ಹೂಡಿಕೆಗೆ ಚಿನ್ನವೇ ಹೆಚ್ಚು ಸುರಕ್ಷಿತ ಎಂಬುದು ಜಗಜ್ಜಾಹೀರಾಗುತ್ತಿದೆ. ಚಿನ್ನ ಕೇವಲ ಆಭರಣಕ್ಕಷ್ಟೇ ಅಲ್ಲ, ಇದು ಆಪತ್ಕಾಲದ ಹಣವೂ ಹೌದು. ಈ ಹಿನ್ನೆಲೆಯಲ್ಲಿ ಖರೀದಿದಾರರನ್ನು ಹೆಚ್ಚು ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವುದು ಕೂಡ ಅಷ್ಟು ಸುರಕ್ಷಿತವಲ್ಲಎಂಬ ಭಾವನೆ ಇದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ, ಯಾವುದೇ ಅಪಾಯವಿಲ್ಲವೆಂಬುದು ಹಲವರ ಅಭಿಪ್ರಾಯ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದವರೆಲ್ಲರೂ ಸುರಕ್ಷತೆ ದೃಷ್ಟಿಯಿಂದ ಚಿನ್ನ ಖರೀದಿಯತ್ತ ಒಲವು ತೋರಿದ್ದರು. ಹೀಗಾಗಿ, ಬೇಡಿಕೆ ಹೆಚ್ಚಾಯಿತು. ಆದರೆ ಪೂರೈಕೆ ಕಡಿಮೆಯಾಗಿದ್ದರಿಂದ ಹಳದಿ ಲೋಹದ ದರ ನಾಗಾಲೋಟದಲ್ಲಿ ಏರಿಕೆಯಾಗಿತ್ತು. ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ದರ ಗ್ರಾಂಗೆ 10 ಸಾವಿರ ರೂ. ತಲುಪುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಷೇರುಗಳಿಗೆ ತೆರಿಗೆ ವಿಧಿಸಿದರೆ, ಗ್ರಾಹಕರು ಷೇರುಗಳ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಆಗ ಚಿನ್ನದ ದರ ಏರಿಕೆಯಾಗಬಹುದು. ಹೀಗಾಗಿ ಟ್ರಂಪ್‌ ಅವರು ಜಾರಿಗೆ ತರುವ ಹೊಸ ನೀತಿ-ನಿಯಮಗಳ ಮೇಲೆ ಚಿನ್ನದ ದರಗಳು ನಿರ್ಧರಿತವಾಗಲಿವೆ,” ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ.ರಾಮಾಚಾರಿ ತಿಳಿಸಿದ್ದಾರೆ. ಕ್ರಿಸ್‌ಮಸ್‌ ರಜೆ ಹಿನ್ನೆಲೆಯಲ್ಲಿ ಚಿನ್ನದ ಖರೀದಿ ಮತ್ತು ಹೂಡಿಕೆಗಳ ಪ್ರಮಾಣ ಸ್ವಲ್ಪ ಇಳಿಕೆಯಾಗಿದೆ. ಹೀಗಾಗಿ ಚಿನ್ನ-ಬೆಳ್ಳಿ ದರ ಕುಸಿದಿದೆ. ಇದು ತಾತ್ಕಾಲಿಕ ಇಳಿಕೆಯಷ್ಟೇ. ಜನವರಿ ಮೊದಲ ವಾರದವರೆಗೆ ದರ ಇಳಿಕೆ ಮುಂದುವರಿಯುತ್ತದೆ. ನಂತರ ಏರಿಳಿತವಾಗತ್ತದೆ ಎಂದು ಡಾ. ಬಿ.ರಾಮಾಚಾರಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ಹೇಳಿದ್ದಾರೆ.

Categories
ಮಲ್ನಾಡ್

ಜ.5ಕ್ಕೆ ಬೆಂಗಳೂರಲ್ಲಿ ಮಲೆನಾಡಿಗರ ಕ್ರೀಡಾಕೂಟ

ಜ.5ಕ್ಕೆ ಬೆಂಗಳೂರಲ್ಲಿ ಮಲೆನಾಡಿಗರ ಕ್ರೀಡಾಕೂಟ
– ಸಹ್ಯಾದ್ರಿ ಸಂಘದಿಂದ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟ
– ವಾಲಿಬಾಲ್, ಕಬಡ್ಡಿ, ಥ್ರೋ ಬಾಲ್ ಸೇರಿ ಹಲವು ಪಂದ್ಯ
– ಸರ್ವರಿಗೂ ಸ್ವಾಗತಿಸಿದ ಸಹ್ಯಾದ್ರಿ ಸಂಘದ ಸಮಿತಿ

NAMMUR EXPRESS NEWS
ಬೆಂಗಳೂರು: ಬೆಂಗಳೂರು ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆಯಾದ ಸಹ್ಯಾದ್ರಿ ಸಂಘದ ವತಿಯಿಂದ ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟ 2025 ಜ.5ರ ಭಾನುವಾರ ಬೆಳಗ್ಗೆ 10.00 ರಿಂದ ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ಸಹ್ಯಾದ್ರಿ ಸಂಘ ಈಗಾಗಲೇ ಪ್ರತಿ ವರ್ಷ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸಭೆ ಮೂಲಕ ಮಲೆನಾಡು ಜನರ ದನಿಯಾಗಿದೆ.

ಕ್ರೀಡಾಕೂಟ ಯಾವ ಯಾವ ಆಟ?

* 5 ವರ್ಷದವರೆಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ
ಬೌಲಿಂಗ್
ಕಪ್ಪೆ ಜಿಗಿತ
ಬಕೆಟ್ ಒಳಗೆ ಚೆಂಡು ಹಾಕುವುದು
* 6 ರಿಂದ 10 ವರ್ಷದವರೆಗಿನ ಗಂಡು ಹೆಣ್ಣು ಮಕ್ಕಳಿಗೆ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ಸ್ಪರ್ಧೆ
ಬಕೆಟ್ ಒಳಗೆ ಚೆಂಡು ಹಾಕುವುದು
50 ಮೀ. ಓಟದ ಸ್ಪರ್ಧೆ
* 11 ರಿಂದ 15 ವರ್ಷದವರೆಗಿನ ಗಂಡು ಹೆಣ್ಣು ಮಕ್ಕಳಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 16 ರಿಂದ 25 ವರ್ಷದವರೆಗಿನ ಗಂಡು ಮಕ್ಕಳಿಗೆ
200 ಮೀ. ಓಟದ ಸ್ಪರ್ಧೆ
400 ಮೀ. ಓಟದ ಸ್ಪರ್ಧೆ
* 16 ರಿಂದ 25 ವರ್ಷದವರೆಗಿನ ಹೆಣ್ಣು ಮಕ್ಕಳಿಗೆ
100 ಮೀ. ಓಟದ ಸ್ಪರ್ಧೆ
200ಮೀ. ಓಟದ ಸ್ಪರ್ಧೆ
* 26 ರಿಂದ 35 ವರ್ಷದವರೆಗಿನ ಮಹಿಳೆಯರಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 26 ರಿಂದ 35 ವರ್ಷದವರೆಗಿನ ಪುರುಷರಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 35 ರಿಂದ 45 ವರ್ಷದವರೆಗಿನ ಮಹಿಳೆಯರಿಗೆ
ಮ್ಯೂಸಿಕಲ್ ಛೇರ್
* 35 ರಿಂದ 45 ವರ್ಷದವರೆಗಿನ ಪುರುಷರಿಗೆ
100 ಮೀ. ಓಟದ ಸ್ಪರ್ಧೆ
200 ಮೀ. ಓಟದ ಸ್ಪರ್ಧೆ
* 46 ರಿಂದ 65 ವರ್ಷದವರೆಗಿನ ಮಹಿಳೆಯರಿಗೆ ಮತ್ತು ಪುರುಷರಿಗೆ
ಮ್ಯೂಸಿಕಲ್ ಛೇರ್ (ಮಹಿಳೆಯರಿಗೆ).
ತೆಂಗಿನಕಾಯಿ ಒಡೆಯುವ ಸ್ಪರ್ಧೆ (ಪುರುಷರಿಗೆ)
* ಪುರುಷರಿಗೆ ಕಬಡ್ಡಿ
ವಾಲಿಬಾಲ್ (ಪುರುಷರಿಗೆ)
* ಥ್ರೋ ಬಾಲ್ (ಮಹಿಳೆಯರಿಗೆ)ಕ್ರೀಡೆಗಳನ್ನು ಆಯೋಜಿಸಲಾಗಿದೆ.

ವಿಶೇಷವಾಗಿ ಸಾಂಸ್ಕೃತಿಕ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ

ವಿಶೇಷವಾಗಿ ಸಂಜೆ 4 ರಿಂದ 4 ರಿಂದ 6ನೇ ವಯಸ್ಸಿನ ಮಕ್ಕಳಿಗೆ ಹಾಗೂ 7 ರಿಂದ 10ನೇ ವಯಸ್ಸಿನ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ. ಸಂಜೆ 6.00 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ ಅಯೋಜಿಸಲಾಗಿದೆ.

Categories
ರಾಜ್ಯ

ಡಿ.27 ರಿಂದ 3 ದಿನ ರಾಜಧಾನಿಯಲ್ಲಿ ವಿಶ್ವ ಹವ್ಯಕ ಸಮ್ಮೇಳನ

ಡಿ.27 ರಿಂದ 3 ದಿನ ರಾಜಧಾನಿಯಲ್ಲಿ ವಿಶ್ವ ಹವ್ಯಕ ಸಮ್ಮೇಳನ
– 1.50 ಲಕ್ಷಮಂದಿ ಪಾಲ್ಗೊಳ್ಳುವ ನಿರೀಕ್ಷೆ: ಎಲ್ಲಾ ಸಮುದಾಯದವರಿಗೆ ಅವಕಾಶ
– ವಿವಿಧ ಕ್ಷೇತ್ರಗಳ 567 ಸಾಧಕರಿಗೆ ಪ್ರಶಸ್ತಿ ಸನ್ಮಾನ

NAMMUR EXPRESS NEWS
ಬೆಂಗಳೂರು: ಅಖಿಲ ಕರ್ನಾಟಕ ಹವ್ಯಕ ಮಹಾಸಭಾ ವತಿಯಿಂದ ಡಿ.27, 28 ಮತ್ತು 29ರಂದು ನಗರದ ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಆಯೋಜಿಸಿರುವ ತೃತೀಯ ‘ವಿಶ್ವ ಹವ್ಯಕ ಸಮ್ಮೇಳನ’ದಲ್ಲಿ ವಿವಿಧ ಕ್ಷೇತ್ರಗಳ 567 ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಮಹಾಸಭಾ ಅಧ್ಯಕ್ಷ ಡಾ.ಗಿರಿಧರ್ ಕಜೆ ತಿಳಿಸಿದ್ದಾರೆ. ಹವ್ಯಕ ಭವನದಲ್ಲಿ ಸಮ್ಮೇಳನ ಕುರಿತು ಮಾಹಿತಿ ನೀಡಿದ ಅವರು, ಮಹಾಸಭೆಗೆ 81 ವರ್ಷಗಳು ತುಂಬಿದ ಸಂಭ್ರಮದಲ್ಲಿ ಚಾರಿತ್ರಿಕವಾಗಿ ಸಮ್ಮೇಳನ ನಡೆಯಲಿದ್ದು, ಹವ್ಯಕ ಸಮುದಾಯ ಮಾತ್ರವಲ್ಲದೇ ಬೇರೆ ಸಮುದಾಯಗಳ ಮುಖಂಡರು, ನಾಯಕರು, ಸಂತಶ್ರೇಷ್ಠರು ಸಾನ್ನಿಧ್ಯ ವಹಿಸಲಿದ್ದಾರೆ. ದೇಶ-ವಿದೇಶಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ಹವ್ಯಕ ಸಂಸ್ಕೃತಿಯ ಅನಾವರಣವಾಗಲಿದೆ ಎಂದು ತಿಳಿಸಿದರು. ಡಿ.27ರಂದು ರಾಘವೇಶ್ವರಭಾರತೀ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಅನೇಕ ಸಂತರ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಡಿ.28ರಂದು ನಡೆಯುವ ಸಾಕ್ಷಾತ್ಕಾರ ಸಭಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರುತ್ತಾರೆ. ಡಿ.29ರಂದು ಸಂಜೆ ನಡೆಯುವ ಸಮಾರಂಭದಲ್ಲಿ ಸಹಸ್ರಚಂದ್ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಗಿರಿಧರ ಕಜೆ ವಿವರಿಸಿದರು. ಮೂರು ದಿನ 300ಕ್ಕೂ ಅಧಿಕ ಸುಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಹಳ್ಳಿಸೊಗಡಿನ ಆಲೇಮನೆ, 100ಕ್ಕೂ ಅಧಿಕ ಪಾರಂಪರಿಕ ವಸ್ತುಗಳ ಪ್ರದರ್ಶನ, ದೇಶಿ ಗೋಪ್ರದರ್ಶಿನಿ, 6000 ಹವ್ಯಕ ಕನ್ನಡ ಪುಸ್ತಕಗಳ ಪ್ರದರ್ಶನ, 108 ವರ್ಷಗಳ ಪಂಚಾಂಗ ದರ್ಶನ, ವೈಭವದ ಗಾಯತ್ರೀ ಥೀಮ್ ಪಾರ್ಕ್, ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು, 2000 ಕಿ.ಮೀ ದೂರದಿಂದ ಅಹಿಚ್ಛತ್ರದಿಂದ ಜ್ಯೋತಿಯ ಆಗಮನ, ಸಮಗ್ರ ಅಡಿಕೆ ಪ್ರದರ್ಶನ ಇರಲಿದೆ ಎಂದು ಗಿರಿಧರ ಕಜೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಉಪಾಧ್ಯಕ್ಷ ಶ್ರೀಧರ್ ಭಟ್, ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ್, ಕಾರ್ಯದರ್ಶಿ ಪ್ರಶಾಂತ್ ಭಟ್, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.

– ಸರ್ವ ಸಮಾಜದವರಿಗೂ ಮುಕ್ತ ಅವಕಾಶ:

100 ವಿಷಯಗಳ ಚಿಂತನ ಮಂಥನ, ಚಿತ್ರಕಲೆ, ಛಾಯಾಚಿತ್ರ ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳು, ಕರಕುಶಲ ವಸ್ತುಗಳ ಪ್ರದರ್ಶನ, ಹವ್ಯಕ ಶೈಲಿಯ 100ಕ್ಕೂ ಅಧಿಕ ಹವಿಸವಿಯ ಪಾಕೋತ್ಸವ ಆಹಾರ ಮೇಳ, 91 ಹವಿ ತಿನಿಸುಗಳ ಮಾರಾಟ ಮಳಿಗೆಗಳು ಇರಲಿವೆ. ಸಮ್ಮೇಳನಕ್ಕೆ ಸರ್ವ ಸಮಾಜದವರಿಗೂ ಮುಕ್ತ ಅವಕಾಶವಿದೆ. ಹವ್ಯಕ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿಲ್ಲ ಎಂದು ಗಿರಿಧರ ಕಜೆ ತಿಳಿಸಿದರು.

Categories
ತೀರ್ಥಹಳ್ಳಿ

ಡಿ.23ಕ್ಕೆ ಕೋಣಂದೂರು ಎನ್.ಇ. ಎಸ್ ಶಾಲೆ ಸಾಂಸ್ಕೃತಿಕ ಉತ್ಸವ!

ಡಿ.23ಕ್ಕೆ ಕೋಣಂದೂರು ಎನ್.ಇ. ಎಸ್ ಶಾಲೆ ಸಾಂಸ್ಕೃತಿಕ ಉತ್ಸವ!
– ಶೀಕೆ ಶಾಲೆ ಮಕ್ಕಳಿಗೆ ಸೇವಾ ಕನ್ನಡಿಗರು ಸಂಸ್ಥೆಯ ಪುಸ್ತಕ ವಿತರಣೆ
– ತುಂಗಾ ಕಾಲೇಜಿನ ಸೂರ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ

NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ.), ಶಿವಮೊಗ್ಗ ಇದರ ಅಂಗ ಸಂಸ್ಥೆ ರಾಷ್ಟ್ರೀಯ ವಸತಿ ಶಾಲೆ, ಕೋಣಂದೂರು ಇಲ್ಲಿ ಸಾಂಸ್ಕೃತಿಕ ಉತ್ಸವ 23-12-2024ರಂದು ಸಂಜೆ ನಡೆಯಲಿದೆ. ರಾಷ್ಟ್ರೀಯ ವಸತಿ ಶಾಲೆ ಕ್ರೀಡಾಂಗಣದಲ್ಲಿ ಸಂಜೆ 5:30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಜಿ.ಎಸ್. ನಾರಾಯಣ ರಾವ್( ಅಧ್ಯಕ್ಷರು, ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ.), ಶಿವಮೊಗ್ಗ) ವಹಿಸಲಿದ್ದಾರೆ. ಉದ್ಘಾಟಕರಾಗಿ ಅನಿಲ್‌ಕುಮಾ‌ರ್ ಬೂಮಾರೆಡ್ಡಿ(ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿವಮೊಗ್ಗ) ಆಗಮಿಸಲಿದ್ದು, ಮುಖ್ಯ ಅತಿಥಿಗಳು ಎಸ್.ಎನ್. ನಾಗರಾಜ್( ಕಾರ್ಯದರ್ಶಿಗಳು, ರಾಷ್ಟ್ರೀಯ ಶಿಕ್ಷಣ ಸಮಿತಿ ಶಿವಮೊಗ್ಗ ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಪ್ರಾರ್ಥನೆ – ಸ್ವಾಗತ – ಉದ್ಘಾಟನೆ – ಸನ್ಮಾನ– ಉದ್ಘಾಟಕರ ಭಾಷಣ – ಅತಿಥಿಗಳ ಭಾಷಣ ಅಧ್ಯಕ್ಷರ ಭಾಷಣ – ವಂದನಾರ್ಪಣೆ – ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಆಡಳಿತ ಮಂಡಳಿ, ಸ್ಥಳೀಯ ಸಲಹಾ ಸಮಿತಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಸರ್ವರನ್ನು ಸ್ವಾಗತಿಸಿದ್ದಾರೆ.

ಶೀಕೆ ಶಾಲೆಯಲ್ಲಿ ಸೇವಾ ಕನ್ನಡಿಗರು ಟ್ರಸ್ಟ್ ಸೇವೆ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕುಡುವಳ್ಳಿ ಅಂಚೆ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೀಕೆಯಲ್ಲಿ ಸೇವಾ ಕನ್ನಡಿಗರು ಟ್ರಸ್ಟ್ ಬೆಂಗಳೂರು ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ಸುಣ್ಣ ಬಣ್ಣ ಹೊಡೆಯುವ ಕಾರ್ಯಕ್ರಮ ಡಿ.19ರಂದು ನಡೆಯಿತು. ಸೇವಾ ಕನ್ನಡಿಗರು ಟ್ರಸ್ಟ್ ವತಿಯಿಂದ ಶಾಲೆಗೆ ಸಾವಿರಾರು ವೆಚ್ಚದಲ್ಲಿ ಸುಣ್ಣ ಬಣ್ಣ ಹೊಡೆಯಲಾಯಿತು. ಸೇವಾ ಕನ್ನಡಿಗರು ಬೆಂಗಳೂರು ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ನರುಗನಹಳ್ಳಿ, ವೆಂಕಟೇಶ್, ದಯಾನಂದ, ರಾಘವೇಂದ್ರ, ಶಶಿಧರ ಸೇರಿದಂತೆ ಹಲವರು ಇದ್ದರು. ಶಾಲೆಯ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ, ಪೋಷಕರು ಹಾಜರಿದ್ದರು.

ದಕ್ಷಿಣ ವಲಯ ವಾಲಿಬಾಲ್: ಜೈ ಸೂರ್ಯ ಆಯ್ಕೆ

ತೀರ್ಥಹಳ್ಳಿ: ಯೂನಿವರ್ಸಿಟಿ ಆಫ್ ಕೇರಳ, ತಿರುವಂತಪುರಂ ನಲ್ಲಿ ಪುರುಷರ south zone inter University, Volleyball ಪಂದ್ಯಾವಳಿಯು ನಡೆಯುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯದ ತಂಡದಿಂದ ತೀರ್ಥಹಳ್ಳಿ ತುಂಗಾ ಮಹಾ ವಿದ್ಯಾಲಯದ ಕ್ರೀಡಾಪಟುವಾದ ಜೈ ಸೂರ್ಯ ದ್ವಿತೀಯ ಬಿಕಾಂ ವಿಭಾಗದ ವಿದ್ಯಾರ್ಥಿಯು ಆಯ್ಕೆಯಾಗಿರುತ್ತಾರೆ. ಇವರಿಗೆ ತುಂಗಾ ಮಹಾವಿದ್ಯಾಲಯದ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಭಾರೀ ಮೋಸ: ಅರೆಸ್ಟ್
– ಪೆರ್ಲ: ಭಾರೀ ಬೆಂಕಿ ದುರಂತ; ಐದು ಅಂಗಡಿ ಭಸ್ಮ
– ಉಡುಪಿ: ಪ್ರವಾಸಿ ಬೋಟ್‌ ಪಲ್ಟಿ: ರೈಡರ್‌ ಸಮುದ್ರಪಾಲು
– ಕುಂದಾಪುರ: ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

NAMMUR EXPRESS NEWS
ಮಂಗಳೂರು: ಲೋಕಾಯುಕ್ತ ಅಧಿಕಾರಿ ಹೆಸರು ಹೇಳಿಕೊಂಡು ವಂಚನೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ತಾಲೂಕಿನ ನಲ್ಲಗುಟ್ಲಪಲ್ಲಿ ನಿವಾಸಿ ಧನಂಜಯ ರೆಡ್ಡಿ ತೋಟ ಬಂಧಿತ ಆರೋಪಿ. 2024ರ ಏಪ್ರಿಲ್ 6ರಂದು ಸೋಮೇಶ್ವರ ಪುರಸಭೆಯಲ್ಲಿ ರೆವಿನ್ಯೂ ಆಫೀಸರ್ ರವರಾದ ಪುರುಷೋತ್ತಮ ರವರ ಮೊಬೈಲ್ ನಂಬ್ರದ ವಾಟ್ಸ್ ಆಪ್ ಕಾಲ್ ಮಾಡಿದ ಆರೋಪಿಯು ತಾನು ಲೋಕಾಯುಕ್ತದಿಂದ ಮಾತನಾಡುತ್ತಿರುವುದು ನಿಮ್ಮ ಮೇಲೆ ಅಲಿಗೇಶನ್ ಬಂದಿದೆ. ನಮ್ಮ ಟೆಕ್ನಿಕಲ್ ಆಫೀಸರ್ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ, ಹಣ ನೀಡುವಂತೆ ತಿಳಿಸಿ, ಇಲ್ಲವಾದರೆ ತೊಂದರೆ ಮಾಡುವುದಾಗಿ ಹೇಳಿದ್ದಾನೆ. ಬಳಿಕ ಕರೆ ಮಾಡಿದ ಆರೋಪಿಯ ಮೊಬೈಲ್ ನಂಬ್ರವನ್ನು ಟೂಕಾಲರ್ ನಲ್ಲಿ ಪರೀಶೀಲಿಸಿದಾಗ ಡಿ. ಪ್ರಭಾಕರ. ಲೋಕಾಯುಕ್ತ. ಪಿ.ಐ ಎಂದು ತೋರಿಸಿತ್ತು. ಈ ಬಗ್ಗೆ ಪುರುಷೋತ್ತಮರವರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಅಧಿಕಾರಿಗಳಲ್ಲಿ ಪೋನ್ ಮೂಲಕ ವಿಷಯ ತಿಳಿಸಿದಾಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿಗಳು ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪುರುಷೋತ್ತಮ ರವರ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಕರಾದ ಲಿಲ್ಲಿ ನಾಯರ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಕೃಷ್ಣ. ಆರ್. ರವರಿಗೆ ಕೂಡಾ ಇದೇ ರೀತಿ ಕರೆ ಮಾಡಿ ಬೆದರಿಕೆ ಒಡ್ಡಿರುತ್ತಾರೆ. ಕರೆ ಮಾಡಿದ ವ್ಯಕ್ತಿಯು ಪುರುಷೋತ್ತಮ ರವರ ಹಣವನ್ನು ಮೋಸದಿಂದ ಪಡೆದುಕೊಳ್ಳುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಎಂದು ನಟಿಸಿ ನಂಬಿಸಿ ಸುಳ್ಳು ಹೇಳಿರುವುದಲ್ಲದೆ, ಹಣಕ್ಕಾಗಿ ಬೆದರಿಕೆ ಒಡ್ಡಿದ್ದಾನೆ. ಜೊತೆಗೆ ಆ ವ್ಯಕ್ತಿ ಪುರುಷೋತ್ತಮ ಅವರ ಕಛೇರಿ ಸಿಬ್ಬಂದಿ ಅಧಿಕಾರಿಗಳಿಗೆ ಹಣಕ್ಕಾಗಿ ಬೆದರಿಕೆ ಒಡ್ಡಿರುತ್ತಾನೆ ಎಂಬಿತ್ಯಾದಿಯಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.ಈ ಪ್ರಕರಣದ ಆರೋಪಿಯ ಪತ್ತೆಯ ಬಗ್ಗೆ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ರವಿಶಂಕರ್ ರವರ ನಿರ್ದೇಶನದಲ್ಲಿ ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎಸ್ ನಾಯಕ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು ಉಳ್ಳಾಲ ಪೊಲೀಸ್ ಠಾಣೆ ರವರ ಸಲಹೆಯಂತೆ ಉಳ್ಳಾಲ ಪೊಲೀಸ್ ಠಾಣಾ ಪಿಎಸ್‌ಐ ಸಂತೋಷ್ ಕುಮಾರ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್ ಸಿ 386 ರಂಜಿತ್ ಕುಮಾರ್, ಸಿಪಿಸಿ-933 ಆನಂದ ಬಾಡಗಿ, ಸಿಪಿಸಿ 2386 ಮಂಜುನಾಥ ರವರು ಆರೋಪಿಯನ್ನು ತಾಂತ್ರೀಕ ಸಹಾಯದಿಂದ ಪತ್ತೆಮಾಡಿ, ಆರೋಪಿ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.

ಪೆರ್ಲ: ಭಾರೀ ಬೆಂಕಿ ದುರಂತ; ಐದು ಅಂಗಡಿ ಭಸ್ಮ

ಪೆರ್ಲ: ಇಲ್ಲಿನ ಪೇಟೆಯಲ್ಲಿ ಡಿ. 21ರಂದು ತಡರಾತ್ರಿ 9 ಅಂಗಡಿಗಳಿಗೆ ಬೆಂಕಿ ಸ್ಪರ್ಶವಾಗಿದ್ದು, ಐದು ಅಂಗಡಿಗಳು ಸಂಪೂರ್ಣವಾಗಿ ಉರಿದು ನಾಶವಾಗಿವೆ. ಬದಿಯಡ್ಕ- ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೈ ಬಿಲ್ಡಿಂಗ್‌ ಎಂಬ ಕಮರ್ಶಿಯಲ್‌ ಕಾಂಪ್ಲೆಕ್ಸ್‌ನಲ್ಲಿ ದುರಂತ ಸಂಭವಿಸಿದೆ. ಒಟ್ಟು ಸುಮಾರು 1.83 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.
ಮಧ್ಯರಾತ್ರಿ 12.15ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದು, ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಶೇಣಿ ನಿವಾಸಿ ನಾರಾಯಣ ಪೂಜಾರಿ ಮಾಲಿಕತ್ವದಲ್ಲಿರುವ ಪೂಜಾ ಫ್ಯಾನ್ಸಿ, ಪೆರ್ಲ ನಿವಾಸಿ ಮೋನು ಅವರ ತರಕಾರಿ ಅಂಗಡಿ, ಜಯದೇವ ಬಾಳಿಗ ಅವರ ಗೌತಮ್‌ ಕೋಲ್ಡ್‌ ಹೌಸ್‌, ಮೊಹಮ್ಮದ್‌ ಅವರ ಸಾದತ್‌ ಜನರಲ್‌ ಸ್ಟೋರ್‌, ಅಮೆಕ್ಕಳ ನಿವಾಸಿ ಪ್ರವೀಣ್‌ ಪೈ ಮಾಲಕತ್ವದ ಪ್ರವೀಣ್‌ ಆಟೋಮೋಬೈಲ್ಸ್‌, ಸಂಜೀವ ಅವರ ಕಬ್ಬಿನ ಹಾಲಿನ ಅಂಗಡಿಗೆ ಹೆಚ್ಚಿನ ಹಾನಿಯಾಗಿದೆ. ಕಾಸರಗೋಡು ಹಾಗೂ ಉಪ್ಪಳ ದಿಂದ ಆಗಮಿಸಿದ ಅಗ್ನಿಶಾಮಕ ದಳದವರು, ಬದಿಯಡ್ಕ ಪೊಲೀಸ್‌ ಅಧಿಕಾರಿಗಳು ಮತ್ತು ಊರವರ ಸಹಕಾರದೊಂದಿಗೆ ಬೆಂಕಿಯನ್ನು ಆರಿಸಿ ಬೆಂಕಿಯ ಕೆನ್ನಾಲಿಗೆ ಸಮೀಪದ ಕಟ್ಟಡಗಳಿಗೂ ಹಬ್ಬುವುದನ್ನು ತಪ್ಪಿಸಿದ್ದಾರೆ.

* ಉಡುಪಿ: ಪ್ರವಾಸಿ ಬೋಟ್‌ ಪಲ್ಟಿ: ರೈಡರ್‌ ಸಮುದ್ರಪಾಲು

ಉಡುಪಿ :ತ್ರಾಸಿ ಬೀಚ್‌ನಲ್ಲಿ ಬೋಟ್‌ ಪಲ್ಟಿಯಾಗಿ ರೈಡರ್‌ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಬೋಟ್‌ನಲ್ಲಿದ್ದ ಪ್ರವಾಸಿಗನನ್ನು ರಕ್ಷಿಸಲಾಗಿದ್ದು, ಕಣ್ಮರೆಯಾಗಿರುವ ರೈಡರ್‌ಗಾಗಿ ಭಾರೀ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನು ನಾಪತ್ತೆಯಾದ ರೈಡರ್‌ನನ್ನು ರವಿದಾಸ್‌ ಎಂದು ಗುರುತಿಸಲಾಗಿದೆ. ತ್ರಾಸಿ ಕಡಲ ಕಿನಾರೆಯಲ್ಲಿ  ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕೀ ಮಗುಚಿ ಬಿದ್ದಿತ್ತು. ರೈಡ್‌ಗೂ ಮೊದಲು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ. ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್‌ ಎಂಬವರು ಟೂರಿಸ್ಟ್ ಬೋಟಿನಲ್ಲಿ ಬೋಟಿಂಗ್ ನಡೆಸುತ್ತಿರುವಾಗ ಬೋಟ್ ಪಲ್ಟಿ ಆದ ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದ ಪರಿಣಾಮ ರೈಡರ್ ನಾಪತ್ತೆಯಾಗಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಪರಿಣಾಮ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ. ಮುರುಡೇಶ್ವರ ನಿವಾಸಿಯಾದ ರೋಹಿದಾಸ್ ತ್ರಾಸಿಯಲ್ಲಿಯೇ ವಾಸಿಸುತ್ತಿದ್ದು, ಜೆಟ್ ಸ್ಕೀ ಮತ್ತಿತರ ಬೋಟ್ ರೈಡ್ ಕಾಯಕ ಮಾಡಿಕೊಂಡಿದ್ದರು. ನಾಪತ್ತೆಯಾದ ರವಿದಾಸ್ ನ ಶೋಧ ಕಾರ್ಯ ನಡೆಯುತ್ತಿದ್ದು ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಪೊಲೀಸ್ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ತೆರಳಿದ್ದಾಗ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿದ್ದರು.

* ಕುಂದಾಪುರ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಕುಂದಾಪುರ: ನಗರದ ವಿಠಲವಾಡಿಗೆ ತೆರಳುವ ಮಾರ್ಗದ ಮನೆಯೊಂದರಲ್ಲಿ ರಾತ್ರಿ ವೇಳೆ ಯಾರೂ ಇಲ್ಲದ ಸಂದರ್ಭ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ವಜ್ರಾಭರಣ ಹಾಗೂ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಕದ್ದೊಯ್ದಿದ್ದಾರೆ ಎಂದು ಅಂದಾಜಿಸಲಾಗಿದೆ. ಬೆಳ್ಳಿಯ ವಸ್ತುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.