Categories
ರಾಜ್ಯ

ಸರ್ಕಾರ ನಡೆಸಲು ಆಗ್ತಿಲ್ಲ, ಇನ್ಮುಂದೆ ಯಾವುದನ್ನು ಫ್ರೀ ಕೊಡಲ್ಲ!

ಸರ್ಕಾರ ನಡೆಸಲು ಆಗ್ತಿಲ್ಲ, ಇನ್ಮುಂದೆ ಯಾವುದನ್ನು ಫ್ರೀ ಕೊಡಲ್ಲ!
– ವರ್ಷಕ್ಕೆ 1 ಸಾವಿರ ಕೋಟಿ ಸಂಸ್ಥೆಗೆ ನಷ್ಟ
– ಡಿಕೆ ಶಿವಕುಮಾ‌ರ್ ಶಾಕಿಂಗ್ ಹೇಳಿಕೆ

NAMMUR EXPRESS NEWS
ಬೆಂಗಳೂರು: ಎಲ್ಲವನ್ನು ಫ್ರೀಯಾಗಿ ಕೊಟ್ಟರೆ ಸರ್ಕಾರ ನಡೆಸುವುದು ಹೇಗೆ? ಇನ್ನು ಮುಂದೆ ಯಾವುದನ್ನು ಫ್ರೀ ಕೊಡುವುದಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ. ಹೌದು, ಕಾವೇರಿ ಭವನದಲ್ಲಿ ಡಿಸಿಎಂ ಡಿಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಬಿಬಿಎಂಪಿ, ಬಿಡಿಎ,BWSSB ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಾರೆ, ವಿದ್ಯುತ್‌ ಫ್ರೀ, ನೀರು ಫ್ರೀ ಅಂದ್ರೆ ಹೇಗೆ ಒಂದು ಪೈಸೆ ಆದ್ರೂ ಬಿಲ್ ಕಟ್ಟಬೇಕಲ್ವ? ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ? ಎಲ್ಲನೂ ಫ್ರೀ ಕೊಟ್ಟರೆ ಸರ್ಕಾರ ನಡೆಸೋದು ಹೇಗೆ? ಇನ್ಮೇಲೆ ಫ್ರೀ ಕೊಡೋಕಾಗೋಲ್ಲ ಎಂದು ಹೇಳಿದ್ದಾರೆ.
ಅಲ್ಲದೆ 2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಇದರಿಂದ ತಿಂಗಳಿಗೆ 85 ಕೋಟಿಯಂತೆ ವರ್ಷಕ್ಕೆ 1 ಸಾವಿರ ಕೋಟಿ ಸಂಸ್ಥೆ ನಷ್ಟ ಎದುರಿಸುತ್ತಿದೆ. ಹೀಗಾಗಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶೀಘ್ರವೇ ನೀರಿನ ದರ ಏರಿಕೆ ಮಾಡುತ್ತೇನೆ, ಜಲಮಂಡಳಿ ಉಳಿಬೇಕು ಅಂದ್ರೆ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.

Categories
ಹೊಸನಗರ

ಹೊಸನಗರದಲ್ಲಿ ಫೆ.04 ರಿಂದ ಫೆ.12 ವರೆಗೆ ಮಾರಿಜಾತ್ರೆ

ಹೊಸನಗರದಲ್ಲಿ ಫೆ.04 ರಿಂದ ಫೆ.12 ವರೆಗೆ ಮಾರಿಜಾತ್ರೆ
– 9 ದಿನಗಳ ಕಾಲ ಅದ್ದೂರಿ ಮಾರಿಕಾಂಬಾ ಜಾತ್ರೆ
– ಫೆ. 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ, ವೈವಿದ್ಯಮಯ ನೃತ್ಯ ಕಾರ್ಯಕ್ರಮ ಜರುಗಲಿದೆ

NAMMUR EXPRESS NEWS
ಹೊಸನಗರ : ಫೆ.04 ಮಂಗಳವಾರದಿಂದ ಫೆ.12ರವರೆಗೆ ಹೊಸನಗರದ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಅದ್ಧೂರಿ ರೀತಿಯಲ್ಲಿ ಮಾರಿಜಾತ್ರೆ ನಡೆಯಲಿದೆ ಎಂದು ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ. ಮಾರಿಗುಡ್ಡದ ದೇವಸ್ಥಾನದ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಫೆ. 4ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮಾರಿಯಮ್ಮ ತಾಯಿ ಮನೆಯೆಂದೇ ಕರೆಯಲ್ಪಡುವ ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬಾ ದೇವಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಸಂಜೆ 9 ಗಂಟೆಯವರೆಗೆ ಅಲ್ಲಿ ಪೂಜೆ ನಡೆಯುತ್ತದೆ. ನಂತರ ಮಾರಿಯಮ್ಮ ದೇವಿಯ ಮೂರ್ತಿಯನ್ನು ಮಾರಿಗುಡ್ಡದಲ್ಲಿರುವ ಗಂಡನ ಮನೆಯೆಂದೇ ಖ್ಯಾತಿ ಪಡೆದಿರುವ ಮಾರಿಗುಡ್ಡದಲ್ಲಿ 8 ದಿನಗಳ ಕಾಲ ಜಾತ್ರೆ ನಡೆಯಲಿದೆ ಎಂದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ : ಫೆ.6 ರ ಗುರುವಾರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಜಿ. ಲಕ್ಷ್ಮಿನಾರಾಯಣರಾವ್ ವಹಿಸಲಿದ್ದು ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ ರಾಘವೇಂದ್ರ, ತೀರ್ಥಹಳ್ಳಿ-ಹೊಸನಗರ ಶಾಸಕ ಆರಗ ಜ್ಞಾನೇಂದ್ರ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್‌ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಾಗರ ಮಾರಿಕಾಂಬ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಎನ್ ನಾಗೇಂದ್ರ ಹಾಗೂ ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ಜಿ.ನಾಯಕ್‌ ಆಗಮಿಸಲಿದ್ದು ಬೆಂಗಳೂರಿನ ಉದ್ಯಮಿ ಎನ್.ವಿ. ದಿನೇಶ್, ಮಕ್ಕಳ ತಜ್ಞರಾದ ಡಾ|| ನಾಗರಾಜ್, ಹೊಸನಗರದ ಸುನಂದಮ್ಮ ಲಕ್ಷ್ಮಿನಾರಾಯಣರಾವ್, ಹೆಚ್.ಎನ್ ಪೂಜಾ ವಿನೀತ್, ಶಾರದಾ ಶೇಷಯ್ಯ, ನಿರ್ಮಲ ಉಮೇಶ್, ಶೇಷಮ್ಮ ವೆಂಕಟೇಶ್ ಹಾಗೂ ಮಾರಿಕಾಂಬಾ ಜಾತ್ರಾ ಸಮಿತಿಯ ನಿರ್ದೇಶಕ ಗಿರೀಶ್‌ ಸನ್ಮಾನಿಸಲಾಗುವುದು ಎಂದರು. ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಗಳಾಗಿ ವಿಜಯ್ ಅಮ್ಯೂಸ್‌ಮೆಂಟ್‌ನವರಿಂದ ರೋಮಾಂಚನಕಾರಿ ಮೈ ಜುಂ ಎನ್ನುವ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾನ್ಸ್, ಮಾರುತಿ ಡೂಮ್, ಮಕ್ಕಳ ರೈಲು, ಮ್ಯಾಜಿಕ್ ಷೋ ಡಾಗ್ ಷೋ ಹಾಗೂ ಇನ್ನೂ ಹತ್ತು ಹಲವಾರು ರೀತಿಯ ವಿಶೇಷ ಮನೋರಂಜನೆಗಳು ಇದ್ದು ಅದರ ಜೊತೆಗೆ ಪ್ರತಿ ದಿನ ರಾತ್ರಿ ಪ್ರಖ್ಯಾತ ದೂರದರ್ಶನ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮವಿದ್ದು ಫೆ. 6ರ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ, 7ರ ಶುಕ್ರವಾರ ಭದ್ರಾವತಿ ತಂಡದಿಂದ ಆರ್ಕೆಸ್ಟ್ರಾ, 8ರ ಶನಿವಾರ ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ, 9ರ ಭಾನುವಾರ ಮೂರು ಮತ್ತು ಖ್ಯಾತಿಯ ಕುಂದಾಪುರ ರೂಪಕಲಾ ತಂಡದಿಂದ ಇನ್ಸ್‌ಪೆಕ್ಟರ್ ಅಣ್ಣಪ್ಪ ನಾಟಕ, 10ರ ಸೋಮವಾರ ಡೆಸ್ಟನಿ ಡ್ಯಾನ್ಸ್ ಕೊಪ್ಪದವರಿಂದ ನೃತ್ಯ ಕಾರ್ಯಕ್ರಮ, 11ರ ಮಂಗಳವಾರ ಮ್ಯೂಸಿಕಲ್ ನೈಟ್ ಹಾಗೂ ವೈವಿದ್ಯಮಯ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಒಟ್ಟು 9 ದಿನಗಳ ಕಾಲ ಹೊಸನಗರದಲ್ಲಿ ಅದ್ದೂರಿಯಾಗಿ ಮಾರಿಜಾತ್ರೆ ನಡೆಯಲಿದ್ದು ದೇವಸ್ಥಾನದ ಭಕ್ತಾರು ಹಾಗೂ ಸಾರ್ವಜನಿಕರು ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು. ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಿ ಜಾತ್ರಾ ಕಮಿಟಿಯ ಮುಖ್ಯಸ್ಥ ಹೆಚ್.ಎನ್.ನಾಗರಾಜ್, ಕಾರ್ಯದರ್ಶಿ ಟಿ.ಆರ್.ಸುನೀಲ್, ಖಜಾಂಚಿ ಪಿ.ಮನೋಹರ್, ಸದಸ್ಯರಾದ ಹೆಚ್.ಎಸ್.ಗಿರೀಶ್, ನಾರಾಯಣ, ಗೋಪಾಲ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Categories
ರಾಜ್ಯ

ಟಾಪ್ 7 ನ್ಯೂಸ್ 

ಟಾಪ್ 7 ನ್ಯೂಸ್ 
– ಹುಬ್ಬಳ್ಳಿ: ಹೆಂಡತಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ
– ತುಮಕೂರು : ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
– ವಿಜಯಪುರ: ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ
– ಬೀದರ್ : ಹೆಜ್ಜೇನು ದಾಳಿಯಿಂದ ಮರದ ಮೇಲಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು
– ರಾಯಚೂರು: ಮಹಿಳೆಯನ್ನ ಸಾರ್ವಜನಿಕವಾಗಿಯೇ ಮರಕ್ಕೆ ಕಟ್ಟಿ ಮನಬಂದಂತೆ ಥಳಿತ
– ದಾವಣಗೆರೆ: ಬೋರ್ ವೆಲ್ ಮೋಟರ್ ಕಳ್ಳತನ ಮಾಡಿರುವ ಕಳ್ಳನನ್ನು ಹಿಡಿದ ಗ್ರಾಮಸ್ಥರು
– ತುಮಕೂರು : ಆಯಿಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವು

NAMMUR EXPRESS NEWS
ಹುಬ್ಬಳ್ಳಿ : ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ಪತ್ನಿ ಕಿರುಕುಳದಿಂದ ಬೇಸತ್ತು ಸಾಯಿಸುತ್ತಿದ್ದೇನೆಂದು ಎಂದು ಪೀಟರ್ ಎನ್ನುವಾತ ಡೆತ್​ನೋಟ್​ ಬರೆದಿಟ್ಟು ಬಳಿಕ ನೇಣಿಗೆ ಶರಣಾಗಿದ್ದಾರೆ. ವಿಚ್ಚೇದನ ಅರ್ಜಿ ಜನವರಿ 27 ರಂದು ಕೋರ್ಟ್​ನಲ್ಲಿ ವಿಚಾರಣೆ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನವರಿ 27 ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆಯಾಗಿದ್ದು, ವಿಚ್ಚೇದನಕ್ಕೆ 20 ಲಕ್ಷ ರೂ. ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದ್ದು, ಇದರಿಂದ ಪೀಟರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹೆಂಡತಿ ಬೇರೊಬ್ಬನ ಜೊತೆ ಅನೈತಿಕ‌ ಸಂಬಂಧ ಹೊಂದಿದ್ದಳು. ಹೀಗಾಗಿ ಕಳೆದ ಏಳೆಂಟು ತಿಂಗಳುಗಳಿಂದ ದೂರ ದೂರವಾಗಿದ್ದ ಪತಿ ಪತ್ನಿ ದೂರವಾಗಿದ್ದರು. ಅಲ್ಲದೇ ಗಂಡನಿಂದ ಡೈವೋರ್ಸಿಗಾಗಿ ಕೋರ್ಟಿಗೆ ಅರ್ಜಿ‌ ಸಲ್ಲಿಸಿದ್ದ ಪತ್ನಿ, ಜೀವನಾಂಶಕ್ಕಾಗಿ 20 ಲಕ್ಷ ರೂ. ಕೊಡುವಂತೆ ಪೀಡಿಸುತ್ತಿದ್ದಳು. ಇದರಿಂದಾಗಿಯೇ ಮನನೊಂದು ಪೀಟರ್ ನೇಣಿಗೆ ಶರಣಾಗಿರುವುದು. ಸಾವಿಗೂ ಮುನ್ನ ಡೆತ್ ನೋಟಿನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಮನವಿ ಮಾಡಿದ್ದ. ಪತ್ನಿ ಕಿರುಕುಳದಿಂದ ಸಾವನ್ನಪ್ಪಿದ ಗಂಡ‌ ಪೀಟರ್ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

– ತುಮಕೂರು : ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ತುಮಕೂರು: ತುಮಕೂರಿನಲ್ಲಿ ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದುರ್ಗದಹಳ್ಳಿ ಗ್ರಾಮದ ತಿಮ್ಮರಾಜು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಕ್ಕೆನಹಳ್ಳಿ ಗ್ರಾಮದಲ್ಲಿರುವ ಹೆಂಡತಿ ಮನೆಗೆ ಬಂದಿದ್ದ ತಿಮ್ಮರಾಜು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಂಡತಿಯೊಂದಿಗೆ ಗಲಾಟೆ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

– ವಿಜಯಪುರ: ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ

ವಿಜಯಪುರ : ಜಿಲ್ಲೆಯಲ್ಲಿ ಹಾಡಹಗಲೇ ಗುಂಡಿನ ಸಪ್ಪಳ ಕೇಳಿಬಂದಿದೆ. ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಓರ್ವ ವ್ಯಕ್ತಿಯ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಮನಾವರ ದೊಡ್ಡಿ ಬಳಿ ನಡೆದಿದೆ. ಸತೀಶ್ ರಾಠೋಡ್ ಮೃತ ವ್ಯಕ್ತಿ. ರಮೇಶ್​​ ಚವ್ಹಾಣ್​ ಹಾಗೂ ಇತರರಿಂದ ಕೃತ್ಯವೆಸಗಿರುವ ಆರೋಪ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್​ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಿಜಯಪುರ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು ಹತ್ಯೆ ಹಿಂದೆ ಯುವತಿಯ ನೆರಳಿದೆ ಎಂದು ಕೊಲೆಗೀಡಾದ ಸತೀಶ್ ತಂದೆ ಪ್ರೇಮಸಿಂಗ್ ಆರೋಪಿಸಿದ್ದಾರೆ. ರಮೇಶ್​​ ಚವ್ಹಾಣ್ ಪುತ್ರಿಯನ್ನ ಸತೀಶ್ ರಾಠೋಡ್​​ ಮದುವೆಯಾಗಲು ಗುರು ಹಿರಿಯರ ಸಮ್ಮುಖದಲ್ಲಿ ಕೇಳಲಾಗಿತ್ತು. ಕಳೆದ ಒಂದೂವರೆ ವರ್ಷದ ಹಿಂದೆ ರಮೇಶ್ ಮಗಳ ಜೊತೆ ಸತೀಶ್ ವಿವಾಹ ಪ್ರಸ್ತಾಪ ನಡೆದಿತ್ತು. ಆದರೆ ಸತೀಶ್​ಗೆ ನನ್ನ ಮಗಳನ್ನು ಕೊಡಲ್ಲ ಎಂದು ಖಡಾಖಂಡಿತವಾಗಿ ರಮೇಶ್​ ಹೇಳಿದ್ದರು. ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶ್ ಮಗಳು ಬಾವಿಗೆ ಹಾರಿ ಮೃತಪಟ್ಟಿದ್ದಳಂತೆ. ಸತೀಶ್ ಮೇಲೆ ರಮೇಶ್ ಹಾಗೂ ಸಹಚರರಿಗೆ ಕೋಪವಿತ್ತಂತೆ. ಇದೇ ಕೋಪದಲ್ಲಿ ಸತೀಶ್ ನನ್ನ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಸತೀಶ್ ತಂದೆ ಪ್ರೇಮ್​ಸಿಂಗ್ ಆರೋಪಿಸಿದ್ದಾರೆ. ಆದರೆ ಪೊಲೀಸರ ತನಿಖೆಯ ಬಳಿಕ ಸತೀಶ್ ಹತ್ಯೆಯ ಸತ್ಯಾಂಶ ಬಯಲಿಗೆ ಬರುವ ಸಾಧ್ಯತೆ ಇದೆ.
ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಸ್ಥಳದಲ್ಲಿ ಸತೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

– ಬೀದರ್ : ಹೆಜ್ಜೇನು ದಾಳಿಯಿಂದ ಮರದ ಮೇಲಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಬೀದರ್ : ಕೋತಿಗಳನ್ನು ಓಡಿಸಲು ಮರವೇರಿದ್ದ ವ್ಯಕ್ತಿ ಹೆಜ್ಜೇನು ದಾಳಿಯಿಂದ ಮರದ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಬೀದರ್​ ಜಿಲ್ಲೆಯ ಹಲಸೂರು ತಾ. ಗಡಿಗೌಡಗಾಂವನಲ್ಲಿ ಸಂಜೆ ನಡೆದಿದೆ. ಯುವರಾಜ್​ ಬಿರಾದಾರ್​​(45) ಮೃತ ವ್ಯಕ್ತಿ. ಗಾಯಗೊಂಡ ಯುವರಾಜ್​ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ರಾಯಚೂರು: ಮಹಿಳೆಯನ್ನ ಸಾರ್ವಜನಿಕವಾಗಿಯೇ ಮರಕ್ಕೆ ಕಟ್ಟಿ ಮನಬಂದಂತೆ ಥಳಿತ

ರಾಯಚೂರು : ವ್ಯಕ್ತಿ ಸಾವಿಗೆ ಪರಿಚಯಸ್ಥ ಮಹಿಳೆಯೇ ಕಾರಣವೆಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ನಡೆದಿದೆ. ಸದ್ಯ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ರಕ್ಷಿಸಿದ ಜಾಲಹಳ್ಳಿ ಠಾಣೆ ಪೊಲೀಸರು ಹಲ್ಲೆ ಆರೋಪದಡಿ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ, ರೇಣುಕಾರಿಂದ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಬಸವರಾಜನ ಅಣ್ಣ ರಂಗಪ್ಪ ಸಾವಿಗೆ ಮಹಿಳೆ ಕಾರಣವೆಂದು ಆರೋಪಿಸಿದ್ದಾರೆ. 20 ದಿನಗಳ ಹಿಂದೆ ಮೂರ್ಛೆ ರೋಗದಿಂದ ರಂಗಪ್ಪ ಮೃತಪಟ್ಟಿದ್ದರು. ರಂಗಪ್ಪಗೆ ಪರಿಯವಿದ್ದ ಮಹಿಳೆ ಜೊತೆ ತೆರಳಿದ್ದಾಗ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಅನುಮಾನದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿ ನಿಂದಿಸಲಾಗಿದೆ. ನೂರಾರು ಜನರ ಎದುರು ಮನಬಂದಂತೆ ಬೈದು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

– ದಾವಣಗೆರೆ: ಬೋರ್ ವೆಲ್ ಮೋಟರ್ ಕದ್ದೊಯ್ಯುತ್ತಿದ್ದ ಕಳ್ಳನನ್ನು ಹಿಡಿದ ಗ್ರಾಮಸ್ಥರು

ದಾವಣಗೆರೆ: ಬೋರ್ ವೆಲ್ ಮೋಟರ್ ಕದ್ದೊಯ್ಯುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಹಿಡಿದಿದ್ದ ಘಟನೆ ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಿ ನಡೆದಿತ್ತು. ಬೈಕ್​ನಲ್ಲಿ ಬಂದ ಮೂವರು ಮೋಟರ್ ಕಳ್ಳತನ ಮಾಡಿ ಬೈಕ್​ನಲ್ಲಿ ಇಟ್ಟುಕೊಂಡು ಹೋಗುತ್ತಿರುವಾಗ ಗ್ರಾಮಸ್ಥರ ‌ಕೈಗೆ ಸಿಕ್ಕಿಬಿದಿದ್ದರು. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಒಂದೇ ಬೈಕ್​ನಲ್ಲಿ ಬಂದಿದ್ದ ಮೂವರು ಕಳ್ಳರು ಯಾರು ಇಲ್ಲದ ವೇಳೆ ನೋಡಿ ಕಳ್ಳತನಕ್ಕೆ ಸ್ಕೇಚ್ ಹಾಕಿದ್ದರು. ಬೋರ್ ವೆಲ್ ಮೋಟರ್ ಕದ್ದು ಬೈಕ್​ನಲ್ಲಿಟ್ಟು ಹೋಗುತ್ತಿದ್ದರು. ಆದರೆ ಈ ವೇಳೆ ಓರ್ವ ಕಳ್ಳನನ್ನು ಹಿಡಿದಿದ್ದ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿದ್ದರು. ಇನ್ನುಳಿದ ಇಬ್ಬರು ಬೈಕ್ ಸಮೇತ ಪರಾರಿ ಆಗಿದ್ದರು. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

– ತುಮಕೂರು : ಆಯಿಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವು

ತುಮಕೂರು : ಆಯಿಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ತುಮಕೂರಿನ ಅಂತಸರನಹಳ್ಳಿ ಕೈಗಾರಿಕಾ ಪ್ರದೇಶದ ಪರಿಮಳ ಆಗ್ರೋ ಫುಡ್ ಇಂಡಸ್ಟ್ರಿಯಲ್ಲಿ ನಡೆದಿದೆ. ಬಿಹಾರ ಮೂಲದ ಸಂತೋಷ್, ಹಾಗೂ ಚಂದನ್ ಶರ್ಮ ಮೃತ ದುರ್ದೈವಿಗಳು. ಮೂವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬತ್ತದ ಹೊಟ್ಟಿನಿಂದ ಪರಿಮಳ ಆಗ್ರೋ ಫ್ಯಾಕ್ಟರಿಯಲ್ಲಿ ಎಣ್ಣೆ ತೆಗೆಯಲಾಗುತ್ತೆ. ಐವರು ಕಾರ್ಮಿಕರು ಆಯಿಲ್ ಟ್ಯಾಂಕ್ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆಯಿಲ್​ ಟ್ಯಾಂಕ್​ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಎಸ್​ಪಿ ಅಶೋಕ್ ಕೆ.ವಿ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Categories
ರಾಜ್ಯ

ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತ ಸೃಷ್ಟಿ..!

ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತ ಸೃಷ್ಟಿ..!
– ರಾಜ್ಯದಲ್ಲಿ ಫೆ.2 ರಿಂದ ಮತ್ತೆ ಮಳೆ
– ಹಗುರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ

NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತ ಸೃಷ್ಟಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಫೆಬ್ರವರಿ 2 ರಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಮಾರುತ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯ ಕೆಲವು ಕಡೆ ಫೆಬ್ರವರಿ 2 ರಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಕೆಲವು ಭಾಗಗಳಲ್ಲಿ ಫೆಬ್ರವರಿ 4 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನವರಿ 30 ರಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ, ಜನವರಿ 31 ಹಾಗೂ ಫೆಬ್ರವರಿ 1 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಧಾರವಾಡ, ವಿಜಯಪುರ, ಹಾವೇರಿ, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಕೊಡಗು, ಕೋಲಾರ, ಬೆಂಗಳೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಹಗುರವಾಗಿ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Categories
ರಾಷ್ಟ್ರೀಯ ವಾರ್ತೆ

ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ 15 ಮಂದಿ ಬಲಿ!

ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ 15 ಮಂದಿ ಬಲಿ!
– ಸಾಧುಗಳಿಂದ ಅಮೃತ ಸ್ನಾನ ರದ್ದು
– ಅತಿಯಾದ ಜನಸಂದಣಿಯಿಂದಾಗಿ ಅವಘಡ
– ಪ್ರಯಾಗ್ ರಾಜ್ ಬರಬೇಡಿ ಎಂದ ಆಡಳಿತ ಮಂಡಳಿ

NAMMUR EXPRESS NEWS
ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆ ಹಿನ್ನಲೆ ಕೋಟ್ಯಾಂತರ ಭಕ್ತರು ಸೇರಿದ್ದಾರೆ. ಅಮೃತ ಸ್ನಾನ ಮಾಡಲು ಭಕ್ತರು ಸರದಿ ಸಾಲಿನಲ್ಲಿ ತೆರಳಿದ್ದಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ತಡೆಗೋಡೆಗಳನ್ನು ದಾಟಿ ಅಮೃತಸ್ನಾನಕ್ಕೆ ತೆರಳಿದ್ದಾರೆ, ಇದು ನೂಕು ನುಗ್ಗಲಿಕೆ ಕಾರಣವಾಗಿದೆ. ಘಟನೆಯಿಂದ ಹಲವು ಭಕ್ತರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಸ್ಥಳದಲ್ಲಿರುವ ಮೂಲಗಳ ಮಾಹಿತಿಗಳ ಪ್ರಕಾರ ಯಾವುದೇ ಭಕ್ತರು ಮೃತಪಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಮಾತನಾಡಿದ್ದಾರೆ. ಘಟನೆ ಮಾಹಿತಿ ಪಡೆದು ಎಲ್ಲಾ ನೆರವಿಗೆ ಸೂಚಿಸಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. ಪರಿಸ್ಥಿತಿಯನ್ನು ಪ್ರಧಾನಿ ನಿರಂತರವಾಗಿ ಗಮನಿಸುತ್ತಿದ್ದಾರೆ. ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ಜ. 28, 29ರಂದು ಮಧ್ಯರಾತ್ರಿ ಸುಮಾರು 2 ಗಂಟೆಗೆ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇತ್ತ 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕುಂಭ ಮೇಳದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ ಪ್ರಕಾರ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದಾರೆ. ಇದರಿಂದ ತಡೆಗೋಡೆಗಳು ಮುರಿದಿದೆ ಎಂದಿದ್ದಾರೆ. ಇದರಿಂದಾಗಿ ಜನರು ಗಾಯಗೊಂಡರು. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಾರೀ ಜನಸಂದಣಿಯಿಂದಾಗಿ ಗಾಯಗೊಂಡವರನ್ನು ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಮೌನಿ ಅಮಾವಾಸ್ಯೆ ಈ ಸಂದರ್ಭದಲ್ಲಿ ಅಮೃತ ಸ್ನಾನ ನಡೆಯಬೇಕಿತ್ತು. ಇದಕ್ಕಾಗಿ ಸುಮಾರು10 ಕೋಟಿ ಜನರು ಕುಂಭ ಮೇಳಕ್ಕೆ ಆಗಮಿಸಿದ್ದರು. ಅತಿಯಾದ ಜನಸಂದಣಿಯಿಂದಾಗಿ ಅವಘಡ ಸಂಭವಿಸಿದೆ. ಅನೇಕರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಇತ್ತ ಅವಘಡದಿಂದ ಎಲ್ಲಾ 13 ಅಖಾಡಗಳು ಸಾಧು ಸಂತರ ಶಾಹಿ ಸ್ನಾನವನ್ನು ರದ್ದುಗೊಳಿಸಿದ್ದಾರೆ. ಮುಂದಿನ ಅಮೃತ ಸ್ನಾನ ಬಸಂತ್ ಪಂಚಮಿಯಂದು ನಡೆಯಲಿದೆ. ಜನಸಂದಣಿಯನ್ನು ನಿಯಂತ್ರಿಸಲು ಎಲ್ಲಾ 30 ಪ್ಲಟೂನ್ ಸೇತುವೆಗಳನ್ನು ತೆರೆಯಲಾಗಿದೆ. ಪ್ರಯಾಗ್‌ರಾಜ್‌ಗೆ ಕುಂಭಮೇಳಕ್ಕೆ ಹೋಗುವವರ ಪ್ರವೇಶವನ್ನು ನಿಲ್ಲಿಸಲಾಗಿದೆ. ಪ್ರಯಾಗ್ ರಾಜ್ ಬರಬೇಡಿ ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಕಾರ್ಕಳ: ಕಾರಿನಲ್ಲಿ ಏಕಾಏಕಿ ಧಗಧಗನೇ ಬೆಂಕಿ!
– ಉಡುಪಿ:15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
– ಉಳ್ಳಾಲ: 2.5 ಲಕ್ಷ ಮೌಲ್ಯದ ಚಿನ್ನಾಭರಣ, ವಾಪಾಸು ಮಾಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ!

NAMMUR EXPRESS NEWS
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಓಮ್ನಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ಘಟನೆ ಕಾರ್ಕಳ ಬೈಪಾಸ್ ಸರ್ಕಲ್ ಬಳಿ ನಡೆದಿದೆ. ಬೈಪಾಸ್ ಸರ್ಕಲ್ ಬಳಿ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಬ್ಯಾಟರಿ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಕಾರು ಧಗಧಗನೇ ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ‌ ಆಗಮಿಸಿ ಬೆಂಕಿ‌ ನಂದಿಸಿದರು. ಅಷ್ಟೊತ್ತಿಗೆ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.

* ಉಡುಪಿ:15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಉಡುಪಿ: ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿಯ 80 ಬಡಗಬೆಟ್ಟು ನಿವಾಸಿ ಮುತ್ತಯ್ಯ ಎಂಬವರ ಪುತ್ರ ಬಾಲಾಜಿ ಎಂ.ನನ್ನು ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಆರೋಪಿಯ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಬೆಂಗಳೂರಿನ ಹರಳೂರು ಬಸ್ ನಿಲ್ದಾಣದ ಬಳಿ ಆರೋಪಿ ಪತ್ತೆಯಾಗಿದ್ದು, ಈ ಮಹತ್ವದ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್‌ ಇನ್ಸ್‌ಪೆಕ್ಟರ್‌ ದೇವರಾಜ್ ಟಿ ವಿ ನೇತೃತ್ವದ ಪಿಎಸ್‌ಐಗಳಾದ ಅನಿಲ್ ಕುಮಾ‌ರ್, ಅಕ್ಷಯ ಕುಮಾರಿ, ಹೆಡ್ ಕಾನ್‌ಸ್ಟೆಬಲ್‌ ಥಾಮ್ರನ್ ಮತ್ತು ಪೊಲೀಸ್ ಪೇದೆ ರವಿರಾಜ್ ಅವರ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಳ್ಳಾಲ: 2.5 ಲಕ್ಷ ಮೌಲ್ಯದ ಚಿನ್ನಾಭರಣ, ವಾಪಾಸು ಮಾಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ!

ಉಳ್ಳಾಲ: ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಾಪಾಸು ಅದರ ಮಾಲಕರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದ ಯುವಕನನ್ನು ಶ್ಲಾಘಿಸಲಾಗಿದೆ. ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ ವಿಜಯಕುಮಾರ್‌ ರೈ ಅವರು ಚಿನ್ನಾಭರಣ ವಾಪಾಸು ನೀಡಿದ್ದು, ಇದರಿಂದ ಚಿನ್ನಾಭರಣ ಪಡೆದ ಮಾಲಕರು ಕಾರ್ಯಕ್ರಮವೊಂದರಲ್ಲಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಸಿಕ್ಕಿದ್ದ ಚಿನ್ನಾಭರಣವನ್ನು ಹಿಡಿದುಕೊಂಡು ತುಂಬಾ ಹೊತ್ತು ಕಾದು ಕುಳಿತಿದ್ದಾಗ, ತನ್ನ ಮಗುವಿನ ಆಭರಣ ಕಳೆದುಕೊಂಡು ಹುಡುಕಾಟ ಮಾಡುತ್ತಾ ಬಂದ ಕಿರಣ್‌ ಶೆಟ್ಟಿ ಅವರು ನಿಶ್ಚಿತಾರ್ಥ ನಡೆದ ಸ್ಥಳಕ್ಕೆ ಬಂದಿದ್ದಾರೆ. ನಿರೀಕ್ಷೆಯಂತೆ ಕಾದು ಕುಳಿತ್ತಿದ್ದ ವಿಜಯ ಕುಮಾ‌ರ್ ರೈ ಅವರು ಕಿರಣ್ ಶೆಟ್ಟಿ ಅವರನ್ನು ವಿಚಾರಿಸಿದ್ದಾರೆ. ಆಗ ಚಿನ್ನ ಕಳೆದುಕೊಂಡ ಕುರಿತು ಹೇಳಿದ್ದಾರೆ, ನಂತರ ಚಿನ್ನದ ಗುರುತನ್ನು ಕೇಳಿ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಅನಂತರ ಕಿರಣ್ ಶೆಟ್ಟಿ ಅವರು ವಿಜಯಕುಮಾ‌ರ್ ರೈ ಅವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಹೋಗಿದ್ದಾರೆ. ನಂತರ ತಾನು ಮಾರ್ಗದರ್ಶಕರಾಗಿರುವ ತಲಪಾಡಿ ಸಮೀಪದ ಕಿನ್ಯ ದುರ್ಗಾಪುರದ ಯುವಶಕ್ತಿಯ ಕಾರ್ಯಕ್ರಮದಲ್ಲಿ ವಿಜಯಕುಮಾರ್ ರೈ ಅವರನ್ನು ನಗದು ಸಹಿತ ಸನ್ಮಾನ ಮಾಡಿ ಗೌರವಿಸಿದ್ದಾರೆ

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಅನುಕೂಲ ? ಯಾವ ರಾಶಿಯವರಿಗೆ ಅನಾನುಕೂಲ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ಆದರೆ, ನೀವು ಕೆಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಆತ್ಮವಿಶ್ವಾಸದ ಕೊರತೆ ಇರುತ್ತದೆ. ವ್ಯವಹಾರದಿಂದ ಲಾಭ ಕಡಿಮೆಯಾಗಬಹುದು. ಸ್ನೇಹಿತರ ಸಹಾಯದಿಂದ, ನಿಮ್ಮ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು. ಕೆಲಸ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ.

** ವೃಷಭ ರಾಶಿ :
ವೃಷಭ ರಾಶಿಚಕ್ರದ ಜನರು ಇಂದು ಮನಸ್ಸಿನಲ್ಲಿ ಏರಿಳಿತಗಳನ್ನು ಹೊಂದಿರುತ್ತಾರೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನ ಪರಿಸ್ಥಿತಿಗಳು ಕಷ್ಟಕರವಾಗಿರಬಹುದು. ನಿಮ್ಮ ವ್ಯವಹಾರಕ್ಕಾಗಿ ನಿಮ್ಮ ತಂದೆಯಿಂದ ನೀವು ಹಣವನ್ನು ಪಡೆಯಬಹುದು. ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಇರುತ್ತಾರೆ. ಇಂದು ಅಧಿಕಾರಿಗಳ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಆಹ್ಲಾದಕರ ದಿನವಾಗಿರುತ್ತದೆ. ಉದ್ಯೋಗ ಸಂದರ್ಶನ ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರ್ಕಾರದಿಂದ ಬೆಂಬಲ ಸಿಗುತ್ತದೆ. ಆದಾಯ ಹೆಚ್ಚಾಗಲಿದೆ. ನಿಮಗೆ ಗೌರವ ಸಿಗುತ್ತದೆ. ಉದ್ಯೋಗದಲ್ಲಿರುವವರಿಗೆ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಇದು ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ.

** ಕರ್ಕಾಟಕ ರಾಶಿ :
ಕಟಕ ರಾಶಿಚಕ್ರದ ಜನರು ಇಂದು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಶೈಕ್ಷಣಿಕ ಮತ್ತು ಬೌದ್ಧಿಕ ಕೆಲಸಗಳಲ್ಲಿ ಆಸಕ್ತಿ ಇರುತ್ತದೆ. ಒಬ್ಬ ಸ್ನೇಹಿತ ಬರಬಹುದು. ಸ್ನೇಹಿತರ ಸಹಾಯದಿಂದ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇರಿಸಿ. ಇಂದು ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ಪ್ರೀತಿಯ ಜೀವನದ ರೋಚಕ ಕ್ಷಣಗಳನ್ನು ಆನಂದಿಸುವಿರಿ.

** ಸಿಂಹ ರಾಶಿ :
ಸಿಂಹ ರಾಶಿಚಕ್ರದ ಜನರು ಇಂದು ಚಂಚಲ ಮನಸ್ಸನ್ನು ಹೊಂದಿರಬಹುದು. ನಿಮ್ಮ ಕುಟುಂಬದೊಂದಿಗೆ ನೀವು ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯೋಗದಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳವಾಗಬಹುದು. ಪ್ರೀತಿಯ ಜೀವನದಲ್ಲಿ ಸಂತೋಷ ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ.

** ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ಏರಿಳಿತಗಳಿಂದ ತುಂಬಿದ ದಿನವಾಗಿರುತ್ತದೆ. ಇಂದು ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಆತ್ಮವಿಶ್ವಾಸ ತುಂಬಿರುತ್ತದೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ಕೆಲವರ ಮೇಲಿನ ಪ್ರೀತಿ ಮದುವೆಗೆ ಕಾರಣವಾಗಬಹುದು. ಇಂದು, ನಿಮ್ಮ ಆರಾಮ ವಲಯದಿಂದ ಹೊರಬರಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಸಿದ್ಧರಾಗಿರಿ.

** ತುಲಾ ರಾಶಿ :
ತುಲಾ ರಾಶಿಚಕ್ರದ ಜನರು ಇಂದು ಸಂತೋಷವಾಗಿರುತ್ತಾರೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಸ್ನೇಹಿತರ ಸಹಾಯದಿಂದ ನೀವು ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು. ಕೆಲಸದಲ್ಲಿ ಜಗಳ ಉಂಟಾಗಬಹುದು. ಹಣದ ಒಳಹರಿವು ಹೆಚ್ಚಾಗುತ್ತದೆ. ಇಂದು ಉದ್ಯಮಿಗಳಿಗೆ ಸರಾಸರಿ ದಿನವಾಗಬಹುದು. ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ನೀವು ಪ್ರೇರಿತರಾಗಿ ಕಾಣಿಸಿಕೊಳ್ಳುತ್ತೀರಿ. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಚಕ್ರದ ಜನರು ಇಂದು ಸಂತೋಷವಾಗಿರುತ್ತಾರೆ. ಉದ್ಯೋಗ ಸಂದರ್ಶನ ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಪ್ರಗತಿಗೆ ಅವಕಾಶಗಳು ದೊರೆಯಲಿವೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಮಕ್ಕಳ ಬೆಂಬಲ ನಿಮಗೆ ಸಿಗುತ್ತದೆ. ನಿಮ್ಮ ಪೋಷಕರಿಂದ ನಿಮಗೆ ಬೆಂಬಲ ಸಿಗುತ್ತದೆ.

** ಧನಸ್ಸು ರಾಶಿ :
ಧನು ರಾಶಿಯ ಜನರಿಗೆ ಇಂದು ತಮ್ಮ ತಂದೆಯ ಸಹವಾಸ ಸಿಗುತ್ತದೆ. ವಾಹನ ಸೌಕರ್ಯದಲ್ಲಿ ಹೆಚ್ಚಳವಾಗಲಿದೆ. ನಿಮ್ಮ ಅಣ್ಣ-ತಂಗಿಯರು ಮತ್ತು ಸಹೋದರರಿಂದ ನೀವು ಹಣವನ್ನು ಪಡೆಯಬಹುದು. ನೀವು ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಬಹುದು. ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಇಂದು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು.

** ಮಕರ ರಾಶಿ :
ಮಕರ ರಾಶಿಯವರಿಗೆ ಇಂದು ಮಾನಸಿಕ ಶಾಂತಿ ಇರುತ್ತದೆ. ಆತ್ಮವಿಶ್ವಾಸ ತುಂಬಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಅವಕಾಶಗಳಿವೆ. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ವ್ಯವಹಾರದಿಂದ ಆದಾಯ ಹೆಚ್ಚಾಗುತ್ತದೆ. ಉತ್ತಮ ಹೂಡಿಕೆ ಅವಕಾಶಗಳು ಲಭ್ಯವಿರುತ್ತವೆ. ಇಂದು ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ.

** ಕುಂಭ ರಾಶಿ :
ಕುಂಭ ರಾಶಿಚಕ್ರದ ಜನರು ಇಂದು ಶಾಂತ ಮನಸ್ಸನ್ನು ಹೊಂದಿರಬಹುದು. ನೀವು ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು. ವ್ಯವಹಾರದಲ್ಲಿ ಹೆಚ್ಚಳ ಕಂಡುಬರಲಿದೆ. ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ಲಾಭ ಹೆಚ್ಚಾಗಲಿದೆ. ಸಂಶೋಧನೆಗೆ ಸಂಬಂಧಿಸಿದ ಕೆಲಸಗಳು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಇಂದು ಸಂಬಂಧಗಳಲ್ಲಿ ಆಪ್ತತೆ ಹೆಚ್ಚಲಿದೆ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ.

** ಮೀನ ರಾಶಿ :
ಮೀನ ರಾಶಿಯ ಜನರು ಕಲೆ ಅಥವಾ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಳ್ಳಬಹುದು. ಉದ್ಯೋಗದಲ್ಲಿ ಬದಲಾವಣೆಗೆ ಅವಕಾಶಗಳು ಸಿಗಬಹುದು. ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ಕೆಲಸದ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಇರುತ್ತಾರೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು ಸಂಬಂಧಗಳಲ್ಲಿ ಭಾವನಾತ್ಮಕ ಏರಿಳಿತಗಳು ಸಾಧ್ಯ. ಸ್ವಯಂ ನಿಯಂತ್ರಣದಲ್ಲಿರಿ.

Categories
ಕರಾವಳಿ

ಕೋರ್ಟ್ ಆದೇಶವಿದ್ದರೂ, ಲಂಚಕ್ಕೆ ಡಿಮ್ಯಾಂಡ್

ಕೋರ್ಟ್ ಆದೇಶವಿದ್ದರೂ, ಲಂಚಕ್ಕೆ ಡಿಮ್ಯಾಂಡ್
– 5000ರೂ. ಲಂಚದ ಹಣಕ್ಕೆ ಬೇಡಿಕೆ
– ಟ್ರಾಫಿಕ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ!

NAMMUR EXPRESS NEWS
ಮಂಗಳೂರು: ವಶಪಡಿಸಿಕೊಂಡಿದ್ದ ಸ್ಕೂಟರ್ ಬಿಡುಗಡೆ ಮಾಡಲು 3 ಸಾವಿರ ರೂ. ಸ್ವೀಕರಿಸುತ್ತಿದ್ದಾಗಲೇ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್ ಲೋಕಾಯುಕ್ತ ಬಲೆಗೆ ಬಿದ್ದವರು. ವ್ಯಕ್ತಿಯೊಬ್ಬರು ಸ್ಕೂಟರ್ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯದಿಂದ ಆದೇಶವಾಗಿತ್ತು. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್‌ರನ್ನು ಭೇಟಿ ಮಾಡಿದಾಗ 5000ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಆದ್ದರಿಂದ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಮತ್ತು ಠಾಣಾ ಬರಹಗಾರೆ ನಾಗರತ್ನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಕೆ. ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ 3000ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.

Categories
ಕರಾವಳಿ

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳದ ಮುಹೂರ್ತ ಫಿಕ್ಸ್!

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳದ ಮುಹೂರ್ತ ಫಿಕ್ಸ್!
– 32 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ!
– ಹಾರೆಯಿಂದ ಅಗೆಯುವ ಮೂಲಕ ಕರೆ ಮುಹೂರ್ತಕ್ಕೆ ಚಾಲನೆ

NAMMUR EXPRESS NEWS
ಪುತ್ತೂರು: ಕರಾವಳಿ ಪ್ರದೇಶದ ಜಾನಪದ ಕ್ರೀಡೆಗಳಲ್ಲೊಂದಾದ ಇತಿಹಾಸ ಪ್ರಸಿದ್ದ ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಮಾ1 ಮತ್ತು 2ರಂದು ನಡೆಯಲಿದ್ದು ಇದರ ಅಂಗವಾಗಿ ಕಂಬಳಕೆರೆ ಮುಹೂರ್ತ ಪುತ್ತೂರು ಮಹಾಲಿಂಗೇಶ್ವರ ದೇವರ ಮಾರುಗದ್ದೆಯಲ್ಲಿ ನಡೆಯಿತು. ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಕೋಶಾಧಿಕಾರಿ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಬೆಳಗಿಸಿ ತೆಂಗಿನಕಾಯಿ ಹೊಡೆಯುವ ಮೂಲಕ ಕರೆಯನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಮಹಾಲಿಂಗೇಶ್ವರನ ಕೃಪೆಯಿಂದ ಕಳೆದ 32 ವರ್ಷಗಳಿಂದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದ್ದು ಮುಂದೆಯೂ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಪ್ರಾರ್ಥಿಸಿದರು. ಇನ್ನು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಕಂಬಳದ ಕರೆಯನ್ನು ಹಾರೆಯಿಂದ ಅಗೆಯುವ ಮೂಲಕ ಕರೆ ಮುಹೂರ್ತಕ್ಕೆ ಚಾಲನೆ ನೀಡಿದರು.

Categories
ಕರಾವಳಿ

ಕದ್ರಿ ಉದ್ಯಾನವನದಲ್ಲಿ 4 ದಿನಗಳ ಫಲಪುಷ್ಪ ಪ್ರದರ್ಶನ!

ಕದ್ರಿ ಉದ್ಯಾನವನದಲ್ಲಿ 4 ದಿನಗಳ ಫಲಪುಷ್ಪ ಪ್ರದರ್ಶನ!
– 20000ಕ್ಕಿಂತಲೂ ಅಧಿಕ, ಮೂವತ್ತಕ್ಕೂ ಹೆಚ್ಚು ವಿವಿಧ ಜಾತಿಯ ಪುಷ್ಪಗಳ ಜೋಡಣೆ
– ಗಮನಸೆಳೆಯುತ್ತಿರುವ ಕಲಾಕೃತಿಗಳ ಪ್ರದರ್ಶನ, ನಾನಾ ವಿಧದ 100 ವಿವಿಧ ಸ್ಟಾಲ್‌ಗಳು

NAMMUR EXPRESS NEWS
ಮಂಗಳೂರು: ನಗರದ ಕದ್ರಿ ಉದ್ಯಾನವನದಲ್ಲಿ 4 ದಿನಗಳ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದೆ. ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘ ಮಂಗಳೂರು ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಜ.26ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಐಫೆಲ್ ಟವರ್ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಐಫೆಲ್ ಟವರನ್ನು ಸುಮಾರು 2 ಲಕ್ಷ ಹೂವುಗಳಿಂದ ನಿರ್ಮಿಸಲಾಗಿದ್ದು, ಬಿಳಿ ಹಾಗೂ ನೇರಳೆ ಸೇವಂತಿಗೆ ಹೂವುಗಳಿಂದ ಸುಮಾರು 22 ಅಡಿ ಎತ್ತರ, 12 ಅಡಿ ಸುತ್ತಳತೆಯಲ್ಲಿ ನಿರ್ಮಿಸಲಾಗಿದೆ. ಸಿರಿ ಧಾನ್ಯ ಮತ್ತು ಅಲಂಕಾರಿಕಾ ಎಲೆಗಳಿಂದ ನಿರ್ಮಿಸಲಾದ ಕಂಬಳದ ಜೋಡಿ ಕೋಣ ಮಾದರಿ, ಯಕ್ಷಗಾನ ವೇಷಧಾರಿಯ ಕಲಾಕೃತಿ, ಮೀನುಗಾರರ ಮತ್ತು ಕಂಬಳ ಓಟಗಾರನ ಕಲಾಕೃತಿ ಸುಂದರವಾಗಿ ಮೂಡಿ ಬಂದಿದೆ. ತರಕಾರಿಗಳಿಂದ ಸುಮಾರು 20000ಕ್ಕಿಂತಲೂ ಅಧಿಕ ಮೂವತ್ತಕ್ಕೂ ಹೆಚ್ಚು ವಿವಿಧ ಜಾತಿಯ ಪುಷ್ಪಗಳ ಜೋಡಣೆ, ತರಕಾರಿ ಕೈ ತೋಟ ಪ್ರಾತ್ಯಕ್ಷಿಕೆಗಳು ನೋಡಬಹುದಾಗಿದೆ. ಇದರ ಜೊತೆಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಹೂವುಗಳಿಂದ ಅಲಂಕರಿಸಿದ ಪೋಟೋ ಪ್ರೇಮ್, ಸೆಲ್ಸಿ ರೆನ್ ಮಾದರಿ, ಮಕ್ರೂಮ್, ಕೆನನ್ ಬಾಲ್, ಜೇನು ನೊಣ, ಮಿಕಿ ಮೌಸ್ ಗಮನ ಸೆಳೆಯುತ್ತಿದೆ. ಕಲಾಕೃತಿಗಳ ಪ್ರದರ್ಶನ, ನಾನಾ ವಿಧದ 100 ವಿವಿಧ ಸ್ಟಾಲ್‌ಗಳು ಇಲ್ಲಿವೆ.