Categories
ಶಿವಮೊಗ್ಗ

ಶಿವಮೊಗ್ಗ : ಸ್ಯಾಂಟ್ರೋ ಕಾರ್‌ ನಲ್ಲಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್‌

ಟಾಪ್ 3 ನ್ಯೂಸ್ ಶಿವಮೊಗ್ಗ

ಶಿವಮೊಗ್ಗ : ಸ್ಯಾಂಟ್ರೋ ಕಾರ್‌ ನಲ್ಲಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್‌
– ಭದ್ರಾವತಿ: ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕ ಶವ ಪತ್ತೆ..!!
– ಶಿವಮೊಗ್ಗ : ಬೈಕ್‌ ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಗುಂಡಿಗೆ ಬಿದ್ದು ವ್ಯಕ್ತಿ ಸಾವು..!!

NAMMUR EXPRESS NEWS
ಶಿವಮೊಗ್ಗ : ನಡುರಾತ್ರಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್‌ ಒಂದು ಸ್ಥಳೀಯರು ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದೆ. ಈ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗದ ತಾಲೂಕು ಗಾಜನೂರಿನ ಬಸವೇಶ್ವರ ಬೀದಿಯಲ್ಲಿ ನಡೆದಿದೆ. ಮಾ.20ರಂದು ರಾತ್ರಿ 3 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಬಸವೇ‍ಶ್ವರ ಬೀದಿಯಲ್ಲಿ ನಡುರಾತ್ರಿ ಶಬ್ದವಾಗುತ್ತಿತ್ತು. ನಾಯಿಗಳು ಜೋರಾಗಿ ಬೊಗಳುತ್ತಿದ್ದವು. ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಹೊರ ಬಂದಾಗ ರಸ್ತೆ ಬದಿ ನಿಂತಿದ್ದ ಹಸುವೊಂದನ್ನು ಸ್ಯಾಂಟ್ರೋ ಕಾರಿಗೆ ತುಂಬಿಕೊಳ್ಳುವ ಪ್ರಯತ್ನ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ. ಕಾರಿನಲ್ಲಿ ಮೂರ್ನಾಲ್ಕು ಜನರಿದ್ದರು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

– ಭದ್ರಾವತಿ: ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕ ಶವ ಪತ್ತೆ..!!

ಭದ್ರಾವತಿ: ವ್ಯಕ್ತಿಯೋರ್ವನ ಶವ ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳು ಸಮೀಪದ ಬೋಮ್ಮನಕಟ್ಟೆ ಗ್ರಾಮದಲ್ಲಿ ಶ್ರೀನಿವಾಸ (28) ಎಂಬ ಯುವಕನ ಶವಪತ್ತೆಯಾಗಿದ್ದು, ಆತನ ಕುತ್ತಿಗೆ ಸೀಳಲಾಗಿದೆ. ಕುಡಿತಕ್ಕೆ ದಾಸನಾಗಿದ್ದ ಶ್ರೀನಿವಾಸ್ ತಮ್ಮ ಮನೆಯ ಮೇಲೆ ಆತನ ಶವಪತ್ತೆಯಾಗಿದೆ. 7 ವರ್ಷಗಳ ಹಿಂದೆ ಶ್ರೀನಿವಾಸ್ ಮದುವೆಯಾಗಿದ್ದ. ಎರಡು ಗಂಡು ಮಕ್ಕಳಿದ್ದರು. ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ರಾತ್ರಿ ಆತನ ಶವ ಪತ್ತೆಯಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು – ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ಶ್ರೀನಿವಾಸ್ ಅಧಿಕ ಕುಡಿತದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

– ಶಿವಮೊಗ್ಗ : ಬೈಕ್‌ ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಗುಂಡಿಗೆ ಬಿದ್ದು ವ್ಯಕ್ತಿ ಸಾವು..!!

ಶಿವಮೊಗ್ಗ : ಬೈಕ್‌ನ ಮುಂಭಾಗದಲ್ಲಿ ಅಕ್ಕಿಮೂಟೆ ಇಟ್ಟುಕೊಂಡು ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ಪಿಇಎಸ್‌ ಕಾಲೇಜು ಹಿಂಭಾಗ ಕಿಮ್ಮನೆ ಗಾಲ್ಫ್‌ ಕ್ಲಬ್‌ಗೆ ತೆರಳುವ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಕೇರಳ ಮೂಲದ ಎರ್ನಾಕುಲಂನ ಜೋಬಿ ಪೌಲ್‌ (45) ಮೃತ ಬೈಕ್‌ ಸವಾರ. ಇಲ್ಲಿನ ಫಾರಂ ಒಂದರಲ್ಲಿ ಜೋಬಿ ಪೌಲ್‌ ಕೆಲಸ ಮಾಡುತ್ತಿದ್ದರು. ಸಾಗರ ರಸ್ತೆಯ ಅಂಗಡಿಯೊಂದರಲ್ಲಿ ಅಕ್ಕಿ ಮೂಟೆ ಖರೀದಿಸಿ, ಅದನ್ನು ಬೈಕಿನ ಮುಂಭಾಗದಲ್ಲಿ ಇರಿಸಿಕೊಂಡು ಫಾರಂಗೆ ಹಿಂತಿರುಗುತ್ತಿದ್ದರು. ಈ ಸಂದರ್ಭ ನಿಯಂತ್ರಣ ತಪ್ಪಿದ ಬೈಕ್‌ ಗುಂಡಿಗೆ ಬಿದ್ದಿದೆ ಎಂದು ಆರೋಪಿಸಲಾಗಿದೆ. ಗುಂಡಿಗೆ ಬಿದ್ದ ಜೋಬಿ ಪೌಲ್‌ ತಲೆ ಸಿಮೆಂಟ್‌ ಕಂಬಕ್ಕೆ ಹೊಡೆದುಕೊಂಡಿದೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ತೀರ್ಥಹಳ್ಳಿ, ಹೊಸನಗರದಲ್ಲಿ ಯಕ್ಷಗಾನ

ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ತೀರ್ಥಹಳ್ಳಿ, ಹೊಸನಗರದಲ್ಲಿ ಯಕ್ಷಗಾನ
– ಮಾರ್ಚ್ 25ಕ್ಕೆ ಹೊಸನಗರ, ಮಾ 27ರಂದು ತೀರ್ಥಹಳ್ಳಿಯಲ್ಲಿ ಆಯೋಜನೆ
– ಸರ್ವರಿಗೂ ಆದರದ ಸ್ವಾಗತ ಕೋರಿದ ಆಯೋಜಕರು

NAMMUR EXPRESS NEWS
ಹೊಸನಗರ/ ತೀರ್ಥಹಳ್ಳಿ: ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ತೀರ್ಥಹಳ್ಳಿ, ಹೊಸನಗರದಲ್ಲಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ಕಾಲಮಿತಿ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಯಕ್ಷಗಾನ ನಡೆಯಲಿದೆ.
ಮಾರ್ಚ್ 25ಕ್ಕೆ ಹೊಸನಗರ, ಮಾ 27ರಂದು ತೀರ್ಥಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದೆ. ಆಯೋಜಕರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.
ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ. ಸೊಪ್ಪುಗುಡ್ಡೆ-ತೀರ್ಥಹಳ್ಳಿ. ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ತೀರ್ಥಹಳ್ಳಿ, ಇವರ ಆಶ್ರಯದಲ್ಲಿ ಡಾ|| ಪುನೀತ್ ರಾಜ್‌ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ದಿನಾಂಕ 27-03-2025 ನೇ ಗುರುವಾರ ರಾತ್ರಿ 7-00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಸಂಸ್ಕೃತಿ ಮಂದಿರದ ಮೈದಾನದಲ್ಲಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಭೈದತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ಕಾಲಮಿತಿ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮ”
ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ. ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ, ಯಕ್ಷಗಾನ ವೀಕ್ಷಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ. ತೀರ್ಥಹಳ್ಳಿ,ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ನಾರಾಯಣ ಗುರು ವಿಚಾರ ವೇದಿಕೆ. ತೀರ್ಥಹಳ್ಳಿ ಇವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ

ಶ್ರೀ ಹೊದಲ ಶಿವು
ಅಧ್ಯಕ್ಷರು, ಸಂತ ಶ್ರೀ ನಾರಾಯಣ ಗುರು
ಸೌಹಾರ್ದ ಸಹಕಾರಿ ಸಂಘ, ತೀರ್ಥಹಳ್ಳಿ,
ಮೊ : 7019405132

ಶ್ರೀ ವಿಶಾಲ್ ಕುಮಾರ್
ಅಧ್ಯಕ್ಷರು, ಶ್ರೀ ನಾರಾಯಣ ವಿಚಾರ ವೇದಿಕೆ
ತೀರ್ಥಹಳ್ಳಿ,
ಮೊ : 8618034400

 

ಮಾ.25ಕ್ಕೆ ಹೊಸನಗರದಲ್ಲಿ ಗೆಜ್ಜೆಗಿರಿ ಮೇಳದವರಿಂದ ಯಕ್ಷಗಾನ

ಹೊಸನಗರ: ದೇಶ ವಿದೇಶಗಳಲ್ಲಿ ಪ್ರದರ್ಶನಗೈದು ಯಕ್ಷಾಭಿಮಾನಿಗಳಿಂದ ಪ್ರಶಂಸೆ ಗಳಿಸಿದ ತೆಂಕುತಿಟ್ಟಿನ ಬಲಿಷ್ಠ ಶ್ರೀ ಗೆಜ್ಜೆಗಿರಿ ಮೇಳದವರಿಂದ ಹೊಸನಗರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನದ ರಸದೌತಣ ನಡೆಯಲಿದೆ.
ಡಾ.ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಪುನೀತ್ ನಮನ ಕಾರ್ಯಕ್ರಮ ಸಂಜೆ: 6-45 ಕ್ಕೆ ನಡೆಯಲಿದೆ.
ಶ್ರೀ ನಾರಾಯಣ ಗುರು ವಿಚಾರ ವೇದಿಕೆ (SNGV) ಹೊಸನಗರ ಮಹಿಳಾ ಘಟಕ(SNGV) ಹೊಸನಗರ, ಆರ್ಯ ಈಡಿಗರ ಸಂಘ ಹಾಗೂ ಬಿಲ್ಲವ ಸಂಘ ಹೊಸನಗರ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಮತ್ತು ಪ್ರಮುಖ ದಾನಿಗಳ ಪ್ರಾಯೋಜಕತ್ವದಲ್ಲಿ, ಯಕ್ಷಗಾನ ಪ್ರೇಮಿಗಳ ಸಹಭಾಗಿತ್ವದಲ್ಲಿ ದಿನಾಂಕ 25-03-2025 ಮಂಗಳವಾರದಂದು ನೆಹರೂ ಮೈದಾನ ಹೊಸನಗರದಲ್ಲಿ ಸಂಜೆ 6:30 ಚೌಕಿ ಪೂಜೆ, ರಾತ್ರಿ 7 ಘಂಟೆಯಿಂದ ವಿಶ್ವ ವಿಖ್ಯಾತ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಕಾರಣಿಕವನ್ನು ಸಾರುವ ಐತಿಹಾಸಿಕ ಕನ್ನಡದಲ್ಲಿ
ಪ್ರಸಂಗ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಿದ್ದಾರೆ.

 

Categories
ಬೆಂಗಳೂರು

SSLC ಗಣಿತ ಪ್ರಶ್ನೆ ಪತ್ರಿಕೆ ಲೀಕ್ ?

SSLC ಗಣಿತ ಪ್ರಶ್ನೆ ಪತ್ರಿಕೆ ಲೀಕ್?

– ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಎಂಬ ವದಂತಿ!
– ಸ್ಪಷ್ಟನೆ ನೀಡಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮಂಡಳಿ!

NAMMUR EXPRESS NEWS
ಬೆಂಗಳೂರು: ಮಾ. 24ರಂದು ( ಇಂದು) ನಡೆಯುತ್ತಿರುವ SSLC ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಎಂಬ ವದಂತಿ ಹರಡಿದ್ದು, ಇದನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಲ್ಲಗಳೆದಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಎಚ್‌. ಎನ್. ಗೋಪಾಲಕೃಷ್ಣ, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ, ಸೋರಿಕೆ ಆಗುವುದು ಅಸಾಧ್ಯ. ಕೆಲ ಕಿಡಿಗೇಡಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.
ಪ್ರಥಮ ಭಾಷೆಯ ಪರೀಕ್ಷೆಯ ಸಂದರ್ಭದಲ್ಲಿಯೂ ಇದೇ ರೀತಿ ಆಗಿತ್ತು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿಯೂ ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ನಾವು ಈಗಾಗಲೇ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇನ್ನು SSLC ಪರೀಕ್ಷೆಯ ಪ್ರಶ್ನೆ ಪತ್ರಿಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆಯೊಂದನ್ನು ಹರಿಯ ಬಿಡಲಾಗಿದೆ. ಈ ಪ್ರಶ್ನೆ ಪತ್ರಿಕೆ ನಕಲಿಯೇ, ಇಲ್ಲವೇ ಎಂದು ಇಲಾಖೆಯಿಂದ ಯಾರೂ ಖಾತರಿಪಡಿಸುತ್ತಿಲ್ಲ. ಈ ಬಗ್ಗೆ ಇಲಾಖೆಯೂ ಮೌನವಾಗಿದೆ ಎಂದು ಖಾಸಗಿ ಶಾಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾ‌ರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೆ ಇಲಾಖೆ ದೂರು ನೀಡಲಿ, ಕ್ರಮ ಕೈಗೊಳ್ಳಲಿ ಎನ್ನುತ್ತಿದ್ದಾರೆ ಎಂದು ಡಿ.ಶಶಿಕುಮಾ‌ರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Categories
ಚಿಕ್ಕಮಗಳೂರು

ನಾಮ ನಿರ್ದೇಶಿತರಿಗೆ ಮತದಾನದ ಹಕ್ಕಿಲ್ಲ ಅಂದ್ರೆ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಸಲಿ – ಸಿ.ಟಿ ರವಿ

ನಾಮ ನಿರ್ದೇಶಿತರಿಗೆ ಮತದಾನದ ಹಕ್ಕಿಲ್ಲ ಅಂದ್ರೆ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಸಲಿ – ಸಿ.ಟಿ ರವಿ

* ಹರಿಪ್ರಸಾದ್ ಮನಸ್ಥಿತಿಗೆ ತಕ್ಕಂತೆ ಮಾತನಾಡಿರಬಹುದು
* ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮುಖ್ಯ – ಬಿ.ಎಲ್ ಶಂಕರ್

NAMMUR EXPRESS NEWS
ಚಿಕ್ಕಮಗಳೂರು: ಕಳೆದ ಸೋಮವಾರ ನಡೆದ ವಿಧಾನ ಪರಿಷತ್‌ ಕಲಾಪದ ವೇಳೆ ಮೀಸಲಾತಿ ವಿಚಾರ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ “ಕಳ್ಳ ವೋಟಿನಿಂದ ಗೆದ್ದು ಬಂದಿಲ್ಲ, ವಿಧಾನ ಸಭೆಯಿಂದ ಆರಿಸಿ ಬಂದಿದ್ದೇನೆ ಎಂಬ ಚುಚ್ಚು ಮಾತಿಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಚುನಾವಣೆ ನಡೆಸುವುದು ಚುನಾವಣಾ ಆಯೋಗ ಯಾವುದನ್ನು ಕಳ್ಳೋಟು ಅಂತಾರೆ ವಿಧಾನ ಪರಿಷತ್‌ ಚುನಾವಣೆಗೆ 1987 ರಿಂದ ನಾಮ ನಿರ್ದೇಶಿತರ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಸರ್ಕಾರ ಶಿಫಾರಸ್ಸು ಮಾಡಿ ಚುನಾವಣಾ ಆಯೋಗ ಮಾನ್ಯ ಮಾಡಿರುವುದು. ಗಾಯತ್ರಿ ಶಾಂತೇಗೌಡ ಅವರು 50 ಮತಗಳಿಂದ ಸೋತಿದ್ರೆ ಪ್ರಶ್ನೆ ಮಾಡ್ತಾ ಇದ್ರಾ? ಈ ಹಿಂದೆ ಗಾಯತ್ರಿ ಶಾಂತೇಗೌಡ ಹಾಗೂ ಪ್ರಾಣೇಶ್ ವಿಧಾನ ಪರಿಷತ್ ಸದಸ್ಯರಾಗಿ ಗೆದ್ದಾಗಲು ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿತ್ತು. ಈಗ ಹೇಗೆ ಕಳ್ಳೋಟು ಆಗುತ್ತೆ, ಬಿ.ಕೆ ಹರಿಪ್ರಸಾದ್ ಅವರು ಪೂರ್ಣ ತಿಳುವಳಿಕೆ ಇಲ್ಲದೇ ಮಾತನಾಡಿರಬಹುದು, ಇಲ್ಲ ಅವರು ಮನಸ್ಥಿತಿಗೆ ತಕ್ಕಂತೆ ಮಾತನಾಡಿರಬಹುದು.
ಚುನಾವಣೆ ನಡೆಸಿರುವುದು ಚುನಾವಣಾ ಆಯೋಗ ನಾಮ ನಿರ್ದೇಶಿತರಿಗೆ ಮತದಾನದ ಹಕ್ಕಿಲ್ಲ ಅಂದ್ರೆ ಇಡೀ ರಾಜ್ಯಕ್ಕೆ ಅನ್ವಯಿಸಬೇಕು, ಇಡೀ ರಾಜ್ಯದ ಚುನಾವಣೆಯನ್ನು ಹೊಸದಾಗಿ ನಡೆಸಬೇಕು ನ್ಯಾಯಾಲಯದ ನ್ಯಾಯ ಇದೆ ಮುಂದೆ ನೋಡೋಣ ಅಂತ ವಿಧಾನ ಪರಿಷತ್ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

* ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮುಖ್ಯ – ಬಿ.ಎಲ್ ಶಂಕರ್
ಚಿಕ್ಕಮಗಳೂರು: ಹನಿಟ್ರ್ಯಾಪ್ ಪ್ರಕರಣವು ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಅಕ್ರಮ ಕೃತ್ಯಗಳ ಬಗ್ಗೆ ಹಿರಿಯ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 48ಕ್ಕೂ ಹೆಚ್ಚು ನಾಯಕರು ಈ ಜಾಲಕ್ಕೆ ಸಿಲುಕಿರುವ ಕುರಿತು ಸಚಿವ ಕೆ.ಎನ್. ರಾಜಣ್ಣ ಬಾಂಬ್ ಸಿಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಇದು ಗಂಭೀರವಾಗಿರುವ ವಿಷಯ. ಯಾರನ್ನೇ ಆಗಲಿ ಟ್ರ್ಯಾಪ್ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಆಗಬಾರದು. ಇವೆಲ್ಲವೂ ಹೇಳಿಕೆ ರೂಪದಲ್ಲಿದೆಯೇ ಹೊರತು ಇದಕ್ಕೆ ಆಧಾರಗಳು ಸಿಕ್ಕಿಲ್ಲ. ವಿರೋಧ ಪಕ್ಷಗಳು ಗೌರವಯುತದಿಂದ ಗಂಭೀರವಾಗಿ ಚರ್ಚೆ ನಡೆಸದೇ ಗಲಾಟೆ, ಗದ್ದಲ ಎಬ್ಬಿಸಿ ಸಭಾಪತಿಗಳು ಕೂರುವ ಜಾಗಕ್ಕೆ ನುಗ್ಗಿ ಪೇಪರ್ ಗಳನ್ನು ಹರಿದು ಬಿಸಾಕಿರುವುದು ಶಾಸಕರ ಅಶಿಸ್ತಿನ ಪರಮಾವಧಿ.
ಹೀಗಾಗಿ ಸಭಾಪತಿಗಳು ತಮ್ಮ ಅಧಿಕಾರವನ್ನು ಬಳಸಿ ಆಯ್ದ 18 ಶಾಸಕರನ್ನು ಅಮಾನತು ಮಾಡಿದ್ದಾರೆ. ಇದು ಮುಂದಿನ ಸದನಗಳಲ್ಲಿ ಪುನರಾವರ್ತನೆಯಾಗದಂತೆ ಮಾದರಿಯಾಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಬಿ.ಎಲ್. ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ನೈತಿಕತೆ ಮುಖ್ಯ. ಸದನದಲ್ಲಿ ನಡೆದ ಘಟನೆ ನೈತಿಕತೆಗೆ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಎಂದು ಬಿ‌.ಎಲ್ ಶಂಕರ್ ಸದನದಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ.

Categories
ಉಡುಪಿ

ಏ. 9ರಿಂದ 13ರವರೆಗೆ ಅದ್ದೂರಿ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವ ಕಾರ್ಯಕ್ರಮ!

ಏ. 9ರಿಂದ 13ರವರೆಗೆ ಅದ್ದೂರಿ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವ ಕಾರ್ಯಕ್ರಮ!

– ಪುಣ್ಯಸ್ಥಳ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಆಯೋಜನೆ!
– ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಸಜ್ಜು: ಸರ್ವರಿಗೂ ಸ್ವಾಗತ!

NAMMUR EXPRESS NEWS
ಉಡುಪಿ: ಅಖಿಲ ಭಾರತ ಮಾಧ್ವ ಮಹಾ ಮಂಡಲ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಹಾಗೂ ಅನೇಕ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪುಣ್ಯಸ್ಥಳ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಏ. 9ರಿಂದ ಏ. 13ರವರೆಗೆ ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಲಿದೆ.
ಏಪ್ರಿಲ್ 11 ಶುಕ್ರವಾರದಂದು ಬೆಳಿಗ್ಗೆ 7:00ರಿಂದ ಸಮಾಜದಲ್ಲಿ ಇತ್ತೀಚೆಗೆ ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸುತ್ತಿರುವ ಅಪಮೃತ್ಯು- ಅಕಾಲ ಮೃತ್ಯು ಮೊದಲಾದ ಕಂಟಕ ನಿವಾರಣೆಗಾಗಿ ಪ್ರಾರ್ಥಿಸಿ
ಮನ್ಯುಸೂಕ್ತ ಯಾಗ ಹಾಗೂ ಮಹಾಮೃತ್ಯುಂಜಯ ಯಾಗ ನಡೆಯಲಿದೆ.
ಏಪ್ರಿಲ್ 12 ಶನಿವಾರದಂದು ಬೆಳಿಗ್ಗೆ 7:00ರಿಂದ ಸಮಸ್ತ ಗೋವಂಶದ ಮೇಲಿನ ದುರಾಕ್ರಮಣ ಹಿಂಸೆ ಹಾಗೂ ಗೋಹತ್ಯೆಯ ಅಂತ್ಯ, ಗೋವಂಶದ ಸುರಕ್ಷೆ, ಸಮೃದ್ಧಿಗಾಗಿ ಪ್ರಾರ್ಥಿಸಿ ನಡೆಸಲಾದ ಕೋಟಿ ವಿಷ್ಣುಸಹಸ್ರನಾಮ ಪಾರಾಯಣ ಅಭಿಯಾನದ ಸಮರ್ಪಣಾಂಗ ಬೃಹತ್ ವಿಷ್ಣು ಸಹಸ್ರನಾಮ ಯಾಗ ಹಾಗೂ ಗೋಸೂಕ್ತ ಯಾಗಗಳನ್ನು ಆಯೋಜಿಸಲಾಗಿದೆ.
ಏಪ್ರಿಲ್ 13 ಆದಿತ್ಯವಾರದಂದು ಬೆಳಿಗ್ಗೆ 7:00ರಿಂದ ಪ್ರತಿಯೊಬ್ಬ ಸನಾತನಿ ಮತ್ತು ಪ್ರತೀ ಹಿಂದೂವಿನ ಕೌಟುಂಬಿಕ ಶ್ರೇಯಸ್ಸು ಹಾಗೂ ಧರ್ಮಕಾರ್ಯ ರಾಷ್ಟ್ರಉನ್ನತಿಯ ಕಾರ್ಯಗಳಿಗೆ ಪ್ರೇರಣೆ ಪಡೆಯುವ ಉದ್ದೇಶದಿಂದ ನಡೆಸಲಾದ ದಶಕೋಟಿ ರಾಮ ತಾರಕ ಮಂತ್ರಪಯಜ್ಞದ ಸಮರ್ಪಣಾಂಗ ರಾಮ ತಾರಕ ಯಂತ್ರ ಯಾಗ ಹಾಗೂ ಸೀತಾರಾಮ ಕಲ್ಯಾಣೋತ್ಸವ
ಹಾಗೂ ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಆಯೋಜನೆ ಮಾಡಲಾಗಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

– ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಕ್ತಿರಥಯಾತ್ರೆ ಮಾರ್ಗಸೂಚಿ!

ಈ ಪ್ರಯುಕ್ತ ಮಾರ್ಚ್ 30ರಿಂದ ಎಪ್ರಿಲ್ 9ರವರೆಗೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಕ್ತಿರಥಯಾತ್ರೆ ಮಾರ್ಗಸೂಚಿ ನಡೆಯಲಿದೆ.
ಮಾ. 30ರಂದು ಭಾನುವಾರ ಬೆಳಿಗ್ಗೆ 8.30ಕ್ಕೆ ಪಾಜಕ ಮಧ್ವಮಠದಿಂದ ರಥಯಾತ್ರೆ ಉದ್ಘಾಟನೆ ನಡೆಯಲಿದ್ದು, ಬೆಳಗ್ಗೆ 9:00ಕ್ಕೆ ಹೊರಡುವುದು, 10.30 ದಂಡ ತೀರ್ಥ ಮಠ, 11.00 ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, 12:00 ಉಚ್ಚಿಲ ಪೇಟೆಯಲ್ಲಿ ಸ್ವಾಗತ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭೋಜನ ವಿರಾಮ ಹಾಗೂ ಸಂಜೆ 4:00 ಹೆಜಮಾಡಿ ಚೆಕ್ ಪೋಸ್ಟಿನಿಂದ ಬೈಕ್ ರ್ಯಾಲಿ ಮೂಲಕ ಮುಲ್ಕಿ ಪೇಟೆಗೆ ಸ್ವಾಗತ ಸಭೆ, ಸಂಜೆ 6.30 ಕಟೀಲು ಸ್ವಾಗತ ಸಭೆ ರಾತ್ರಿ ವಾಸ್ತವ್ಯ.
ಮಾ. 31ಸೋಮವಾರದಂದು ಬೆಳಿಗ್ಗೆ 8:00ಕ್ಕೆ ಕಟೀಲಿನಿಂದ ಹೊರಡುವುದು. ಬೆಳಗ್ಗೆ 9:00ಕ್ಕೆ ಬಜಪೆ ಪೇಟೆಯಲ್ಲಿ ಸ್ವಾಗತ ಕಾರ್ಯಕ್ರಮ. 10.30ಕ್ಕೆ ಪೇಜಾವರ, 11.30ಕ್ಕೆ ಚಿತ್ರಾಪುರ ದೇವಸ್ಥಾನ ಭೋಜನ ವಿರಾಮ. ಸಂಜೆ 4.00ಕ್ಕೆ ಹೊರಡುವುದು. 4.30 ಮಂಗಳೂರು ನಗರ ಪ್ರವೇಶ, ಕದ್ರಿ ದೇವಸ್ಥಾನದ ಬಳಿ ಸಭೆ. ಹಾಗೂ ರಾತ್ರಿ ವಾಸ್ತವ್ಯ.
ಎ. 01 ಮಂಗಳವಾರದಂದು 7:30ಕ್ಕೆ ಮಂಗಳೂರಿನಿಂದ ಹೊರಡುವುದು 8:30ಕ್ಕೆ ಕಟ್ಟತ್ತಿಲ. 10:30ಕ್ಕೆ ಮಂಜನಾಡಿ, 11:15ಕ್ಕೆ ವರ್ಕಾಡಿ, 12:00ಕ್ಕೆ ಕಣ್ವತೀರ್ಥ ಸಣ್ಣ ಸಭೆ, ಭೋಜನ ವಿರಾಮ. 2:30ಕ್ಕೆ ಕಣ್ವತೀರ್ಥದಿಂದ ಹೊರಡುವುದು 3:15ಕ್ಕೆ ಕೊಂಡೆವೂರು, ಸಭೆ. 4:30ಕ್ಕೆ ಮಾಯಿಪ್ಪಾಡಿ ಆರಮನೆ. 6:30ಕ್ಕೆ ಕಾವುಗೋಳಿ ದೇವಸ್ಥಾನ. 7:30ಗೆ ಅಡೂರು ದೇವಸ್ಥಾನ. 8:15ಕ್ಕೆ ಕರ್ನೂರುಮಠ, ರಾತ್ರಿ ವಾಸ್ತವ್ಯ.
ಎ. 02 ಬುಧವಾರ ಬೆಳಗ್ಗೆ 8:00ಕ್ಕೆ ಹೊರಡುವುದು. 10:00ಕ್ಕೆ ಸುಳ್ಯ ಚೆನ್ನಕೇಶವ ದೇವಸ್ಥಾನ, ಸಭೆ. ಮಧ್ಯಾಹ್ನ 12:00 ಗಂಟೆಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ. ಸಭೆ, ಭೋಜನ ವಿರಾಮ. 2:30ಕ್ಕೆ ಕೊಡಿಪ್ಪಾಡಿ ಜನಾರ್ದನ ದೇವಸ್ಥಾನ. 4:00ಕ್ಕೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ. ಸಭೆ. 5:45 ನಾರ್ತ್ಯ ತುಳಸೀವನ, ರಾತ್ರಿ 7:30ಕ್ಕೆ ಉಪ್ಪಿನಂಗಡಿ ರಾಘವೇಂದ್ರ ಮಠ. ಸಭೆ ರಾತ್ರಿ ವಾಸ್ತವ್ಯ.
ಎ. 03 ಗುರುವಾರ ಬೆಳಗ್ಗೆ 7:00ಕ್ಕೆ ಹೊರಟು 7:30ಕ್ಕೆ ಈರಕೀ ಮಠ+ರಾಮಕುಂಜ. 11:00ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸಭೆ. ಭೋಜನ ವಿರಾಮ 3:30 ಗಂಟೆಗೆ ಕೊಕ್ಕಡ+ಸೌತಡ್ಕ 5:00 ಕ್ಕೆ ಧರ್ಮಸ್ಥಳ ಸಭೆ. 7:00 ಕ್ಕೆ ಉಜಿರೆ ಜನಾರ್ದನ ದೇವಸ್ಥಾನ. ಸಭೆ ರಾತ್ರಿ ವಾಸ್ತವ್ಯ.
ಎ. 04 ಶುಕ್ರವಾರ ಬೆಳಗ್ಗೆ 7:00 ಗೆ ಹೊರಟು ಬೆಳ್ತಂಗಡಿ, ಗುರುವಾಯನಕೆರೆ ಮಾರ್ಗವಾಗಿ 8:30ಕ್ಕೆ ಮಧ್ಯಕಟ್ಟೆ 9:15ಕ್ಕೆ ನಡ್ಡಂತಾಡಿ. ಸಭೆ. 11:30ಕ್ಕೆ ಮೂಡಬಿದ್ರೆ ಪ್ರವೇಶ, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ, ಭೋಜನ ವಿರಾಮ 4:00ಕ್ಕೆ ಕಾಂತಾವರ ದೇವಸ್ಥಾನ, 4:30ಕ್ಕೆ ಕಾರ್ಕಳ ಪೇಟೆ ಪ್ರವೇಶ, ಮೆರವಣಿಗೆ ಸಭೆ, ರಾತ್ರಿ ವಾಸ್ತವ್ಯ ತೆಳ್ಳಾರು ರಾಘವೇಂದ್ರ ಮಠದಲ್ಲಿ,
ಎ. 5 ಶನಿವಾರ ಬೆಳಿಗ್ಗೆ 7.00 ಕ್ಕೆ ಹೊರಟು 8.00ಕ್ಕೆ ಹೆಬ್ರಿ ಪೇಟೆ ಪ್ರವೇಶ, ಸ್ವಾಗತ 9.30ಕ್ಕೆ ಸಿದ್ದಾಪುರ 10.00ಕ್ಕೆ ಕ್ರೋಢ ಶಂಕರನಾರಾಯಣ ಕ್ಷೇತ್ರ, ಅಲ್ಲಿಂದ ಅಂಪಾರು ಮಾರ್ಗವಾಗಿ 12.30ಕ್ಕೆ ಕೊಲ್ಲೂರು ಕ್ಷೇತ್ರ ಭೇಟಿ ಸ್ವಾಗತ ಭೋಜನ ವಿರಾಮ. 3.30ಕ್ಕೆ ಬೈಂದೂರು ಸ್ವಾಗತ ಪುಷ್ಪಾರ್ಚನೆ ಸಂದೇಶ, 5.00ಕ್ಕೆ ಕುಂದಾಪುರ ಪೇಟೆ ಪ್ರವೇಶ ಸಭೆ. 6.30ಕ್ಕೆ ಕೋಟೇಶ್ವರ ದೇವಳ ಭೇಟಿ, ಸ್ವಾಗತ, 7.00ಕ್ಕೆ ಕುಂಭಾಸಿ ದೇವಸ್ಥಾನ ಭೇಟಿ, ಸಭೆ. ರಾತ್ರಿ ವಾಸ್ತವ್ಯ.
ಎ. 6 ಭಾನುವಾರ ಬೆಳಿಗ್ಗೆ 7.30ಕ್ಕೆ ಹೊರಟು 8.00ಕ್ಕೆ ಕೋಟಿ ಸ್ವಾಗತ. 9.45 ಸಾಲಿಗ್ರಾಮ 10.30 ಬಾರಕೂರು ಪೇಟೆ, ಸಭೆ ಭೋಜನ ವಿರಾಮ ಅಪರಾಹ್ನ 4.30 ಬ್ರಹ್ಮಾವರ ಪೇಟೆ ಪ್ರವೇಶ, ಸಭೆ ಸಂಜೆ 6.00 ಉಪ್ಪುರು , 6.30 ಮಡಿಮಲ್ಲಿಕಾರ್ಜುನ ದೇವಸ್ಥಾನ, 7.00 ವಡಭಾಂಡೇಶ್ವರ ದೇವಸ್ಥಾನ, ಸಭೆ ರಾತ್ರಿ ವಾಸ್ತವ್ಯ.
ಎ. 7 ಸೋಮವಾರ ಬೆಳಿಗ್ಗೆ 8.30ಕ್ಕೆ ಹೊರಟು ಕೊಡವೂರು ದೇವಸ್ಥಾನ ಸ್ವಾಗತ 9.30 ಮಧ್ವನಗರ 10.15 ಬನ್ನಂಜೆ ದೇವಸ್ಥಾನ ಸ್ವಾಗತ ಮಂಗಳಾರತಿ 11:00 ಅಂಬಲಪಾಡಿ ದೇವಸ್ಥಾನ, ಸ್ವಾಗತ, ಸಭೆ, 12:00 ಕಡಿಯಾಳಿ ದೇವಸ್ಥಾನ- ಭೋಜನ ವಿರಾಮ, ಮಧ್ಯಾಹ್ನ 4:00 ಪಣಿಯಾಡಿ ದೇವಸ್ಥಾನ 5:00ಕ್ಕೆ ಚಿಟ್ಟಾಡಿ ಶ್ರೀನಿವಾಸ ದೇವಸ್ಥಾನ, ಸಂಜೆ 5.30ಕ್ಕೆ ಜೋಡುಕಟ್ಟೆಯಿಂದ ರಥಬೀದಿ ವರೆಗೆ ಮೆರವಣಿಗೆ 6:30 ಕನಕ ಗೋಪುರದ ಬಳಿ ಪರ್ಯಾಯ ಪುತ್ತಿಗೆ ಶ್ರೀಗಳ ಸಾನ್ನಿಧ್ಯದಲ್ಲಿ ಸಭೆ, ವಾಸ್ತವ್ಯ.
ಎ. 8 ಮಂಗಳವಾರ ದಿನಪೂರ್ತಿ ಉಡುಪಿ ನಗರದಲ್ಲಿ ಸಂಚಾರ ಸಂಜೆ ಉಡುಪಿ ವಾಸ್ತವ್ಯ.
ಎ. 9 ಬುಧವಾರ ಅಪರಾಹ್ನ 2 ಘಂಟೆಗೆ ಶ್ರೀಕೃಷ್ಣ ಮಠದಿಂದ ಪಾಜಕ ಮಾರ್ಗವಾಗಿ ಪೆರ್ಣಂಕಿಲ ದೇವಸ್ಥಾನಕ್ಕೆ ತೆರಳುವುದು.

Categories
ಮಂಗಳೂರು

ಮಂಗಳೂರು ರೆಸಾರ್ಟ್‌ ಈಜುಕೊಳದಲ್ಲಿ ಮತ್ತೊಂದು ದುರಂತ, ವ್ಯಕ್ತಿ ಸಾವು!

ಮಂಗಳೂರು ರೆಸಾರ್ಟ್‌ ಈಜುಕೊಳದಲ್ಲಿ ಮತ್ತೊಂದು ದುರಂತ, ವ್ಯಕ್ತಿ ಸಾವು!

– ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್‌ ಆಗಿ ಮೃತ್ಯು
– ದೃಶ್ಯ ಸಿಸಿಟಿವಿಯಲ್ಲಿ ಸೆರೆ

NAMMUR EXPRESS NEWS
ಮಂಗಳೂರು: ಮಡಿಕೇರಿ ಕುಶಾಲನಗರ ಮೂಲದ ಪ್ರವಾಸಿ ನಿಶಾಂತ್‌ ಮಂಗಳೂರಿನ ಖಾಸಗಿ ರೆಸಾರ್ಟ್‌ ಈಜುಕೊಳದಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ.
ಈಜುವ ಸಲುವಾಗಿ ಈಜುಕೊಳಕ್ಕೆ ಹಾರಿದ ಸಂದರ್ಭದಲ್ಲಿ ತಲೆ ಟ್ವಿಸ್ಟ್‌ ಆಗಿ ವ್ಯಕ್ತಿ ಈಜುಕೊಳ್ಳದಲ್ಲೇ ಸಾವು ಕಂಡಿದ್ದಾರೆ. ಮೃತ ವ್ಯಕ್ತಿಯನ್ನು ನಿಶಾಂತ್‌ ಎಂದು ಗುರುತಿಸಲಾಗಿದೆ.
ಕುಶಾಲನಗರದ ಮೊಬೈಲ್‌ ಗ್ಯಾಲರಿ ಶಾಪ್‌ ಮಾಲೀಕರಾಗಿದ್ದರು. ಮಂಗಳೂರಿಗೆ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ತೆರಳಿದ ಸಂದರ್ಭ ದುರ್ಘಟನೆ ನಡೆದಿದೆ. ನೀರಿಗೆ ಹಾರಿದ ನಂತರ ನಿಶಾಂತ್‌ ಕೈ ಕಾಲು ಆಡಿಸದ್ದನ್ನು ಕಂಡ ಸ್ನೇಹಿತರು ಹಾಗೂ ಇತರರು ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೃತ ಹೊಂದಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Categories
ತೀರ್ಥಹಳ್ಳಿ

ಹಸು ಹೊಟ್ಟೆಯಲ್ಲಿತ್ತು 4 ಕೆಜಿ ಪ್ಲಾಸ್ಟಿಕ್!

ಟಾಪ್ ನ್ಯೂಸ್ ತೀರ್ಥಹಳ್ಳಿ

ಹಸು ಹೊಟ್ಟೆ ಯಲ್ಲಿತ್ತು 4 ಕೆಜಿ ಪ್ಲಾಸ್ಟಿಕ್!
– ಡಾ.ಅರವಿಂದ್ ನೇತೃತ್ವದಲ್ಲಿ ಆಪರೇಷನ್ ಯಶಸ್ವಿ

ರೈತರ ಜಾಗದ ದಾಖಲೆ ಗೋಲ್ಮಾಲ್ ಮಾಡಿ ಕಬಳಿಕೆ ಹುನ್ನಾರ!?
– ತೀರ್ಥಹಳ್ಳಿ ಯಲ್ಲಿ ರೈತ ಸಂಘದಿಂದ ರೈತರಿಗೆ ಜಾಗೃತಿಗೆ ಮನವಿ

– ತೀರ್ಥಹಳ್ಳಿ: ಇಂದು ಎ.ಪಿ.ರಾಮಪ್ಪ ನುಡಿನಮನ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಕಾಸರವಳ್ಳಿ ಗ್ರಾಮದ ಕೂಡುವಲ್ಲಿ ಗಿರಿಯಪ್ಪ ಅವರ ಮನೆಯಲ್ಲಿ ಸುಮಾರು ಒಂದು ತಿಂಗಳಿನಿಂದ ಹೊಟ್ಟೆ ಉಬ್ಬರಣೆಯಿಂದ ಬಳಲುತ್ತಿದ್ದ ಒಂದು ದೇಸಿ ಮಿಶ್ರ ತಳಿ ಹಸುವಿಗೆ ಶಸ್ತ್ರ ಚಿಕಿತ್ಸೆ ಮಾಡಿ ದೊಡ್ಡ ಹೊಟ್ಟೆ ರೂಮೆನ್ ( ಮೆಲಕು ಚೀಲ ) ನಿಂದ ಸುಮಾರು 3-4 ಕೆಜಿ ಪ್ಲಾಸ್ಟಿಕ್ ಗಂಟನ್ನು ಹೊರತೆಗೆಯಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ತಕ್ಷಣ ಚೇತರಿಸಿಕೊಂಡ ಹಸುವು ಹಸಿ ಹುಲ್ಲನ್ನು ಮೇಯಲು ಪ್ರಾರಂಭಿಸಿದೆ.
ಶಸ್ತ್ರ ಚಿಕಿತ್ಸೆಯನ್ನು ಡಾ.ಅರವಿಂದ್ ಪಶು ವೈದ್ಯಾಧಿಕಾರಿಗಳು ರಾಮಕೃಷ್ಣಾಪುರ ಇವರು ನೆರವೇರಿಸಿದರು . ಡಿ ದರ್ಜೆ ನೌಕರರಾದ ಕುಮಾರಿ ಸುಲೋಚನಾ ಮತ್ತು ಮೈತ್ರಿ ಕಾರ್ಯಕರ್ತ ಕಿರಣ್ ಅವರು ಸಹಾಯಕರಾಗಿದ್ದು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲು ನೆರವಾದರು

ರೈತರ ಜಾಗದ ದಾಖಲೆ ಗೋಲ್ಮಾಲ್ ಮಾಡಿ ಕಬಳಿಕೆ ಹುನ್ನಾರ!?

ತೀರ್ಥಹಳ್ಳಿ: ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕು ಸೇರಿದಂತೆ ರಾಜ್ಯದಾದ್ಯಂತ ಮಠಗಳು, ಮಸೀದಿಗಳು ಮುಂತಾದ ಧಾರ್ಮಿಕ ಕೇಂದ್ರಗಳು ತಲತಲಾಂತರದಿಂದಲು ರೂಢಿಸಿಕೊಂಡಿದ್ದ ಜನಸಾಮಾನ್ಯರ ವಾಸದ ಮನೆ – ಜಾಗಗಳು, ರೈತರ ಕೃಷಿ ಭೂಮಿಯನ್ನು ಲಪಟಾಯಿಸಿ ಕಿತ್ತುಕೊಳ್ಳಲು ಸಂಚು ರೂಪಿಸಿದ್ದರ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಇತ್ತೀಚೆಗೆ ತೀರ್ಥಹಳ್ಳಿಯ ಮಠವೊಂದರ ಇಂತಹ ಸಂಚಿನ ವಿರುದ್ಧ ಹೋರಾಟ ನಡೆಸಿ ಸರ್ಕಾರಕ್ಕೆ ದೂರನ್ನು ನೀಡಲಾಗಿದೆ. ಕೆಲವು ದಿನಗಳಿಂದ ತೀರ್ಥಹಳ್ಳಿಯ ತಾಲ್ಲೂಕು ಆಡಳಿತ ವಿವಾದಿತ ಭೂಮಿಯೊಂದರ ಮೋಜಣಿಗೆ ತಯಾರಿ ನಡೆಸಿದೆ. ಆಗುಂಬೆ ಹೋಬಳಿಯ ಮೇಗರವಳ್ಳಿ ಸಮೀಪದ ದಿಂಡದಲ್ಲಿ ನಾಳೆ 24-03-2025 ರ ಸೋಮವಾರದಂದು ಕೃಷಿಕರ ಭೂಮಿಯ ಮೋಜಣಿ (ಸರ್ವೆ) ನಡೆಯಲಿದೆ ! ಇಲ್ಲಿನ ಬಹುತೇಕ ಹತ್ತಿಪ್ಪತ್ತು ಕುಟುಂಬಗಳವರು ಪರಿಶಿಷ್ಟರು. ನಾಳೆಯ ವಿದ್ಯಮಾನಗಳನ್ನು ನಮ್ಮ ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕು. ಮುಂದಿನ ದಿನಗಳಲ್ಲಿ ಈ ಕುಟುಂಬಗಳಿಗೆ ಅನ್ಯಾಯವಾಗುವ ಎಲ್ಲ ಸಾಧ್ಯತೆಗಳಿವೆ. ಹಾಗಾಗದಂತೆ ನಾವು ರೈತಸಂಘದವರು ಇವರ ಪರ ಹೋರಾಟ ನಡೆಸಬೇಕೆಂದರೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಖುದ್ದಾಗಿ ಹಾಜರಾಗಿ ಮಾಹಿತಿ ಸಂಗ್ರಹಿಸಬೇಕು ಎಂದು ರೈತ ಸಂಘದ ಪ್ರಕಟಣೆ ತಿಳಿಸಿದೆ.

ಇಂದು ಎ.ಪಿ.ರಾಮಪ್ಪ ನುಡಿನಮನ ಕಾರ್ಯಕ್ರಮ

ತೀರ್ಥಹಳ್ಳಿ: ಸಾತ್ವಿಕ ಮನೋಭಾವದ ಹಿರಿಯ ಸಮಾಜವಾದಿ ಎ.ಪಿ.ರಾಮಪ್ಪ ಈಚೆಗೆ ಅಗಲಿದ್ದಾರೆ. ಅವರ ನೆನಪುಗಳನ್ನು ಮೆಲುಕು ಹಾಕುವ ಉದ್ದೇಶದಿಂದ ಮಾರ್ಚ್ 24 ರಂದು ಸಂಜೆ 4 ಗಂಟೆಗೆ ಕೊಪ್ಪ ಸರ್ಕಲ್‌ನಲ್ಲಿರುವ ಬಂಟರ ಭವನದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸಮಾನ ಮನಸ್ಕರು ಬಳಗದ ನೆಂಪೆ ದೇವರಾಜ್, ಶಿವಾನಂದ ಕರ್ಕಿ, ರಾಘವೇಂದ್ರ ಮೇಗರವಳ್ಳಿ ತಿಳಿಸಿದ್ದಾರೆ.
ಶಿಕ್ಷಕರಾಗಿದ್ದ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ್ದಾರೆ. ಶಾಂತವೇರಿ ಗೋಪಾಲಗೌಡರ ಸೋದರಳಿಯ ಆಗಿದ್ದ ಅವರು ಗೋಪಾಲಗೌಡರ ಪ್ರಭಾವವನ್ನು ಜೀವನದಲ್ಲಿ ಬಳಸಿಕೊಳ್ಳದೆ ಬದುಕಿದ ಸರಳ ಜೀವಿ. ಕಷ್ಟ ಎಂದವರಿಗೆ ನೆರವಾಗುತ್ತಿದ್ದ ಅವರು ವಿದ್ಯಾರ್ಥಿಗಳಿಗೆ ಸ್ವಂತ ದುಡಿಮೆ ಹಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದರು. ನಿವೃತ್ತರಾದ ನಂತರ ಜಾತ್ಯಾತೀತ ಜನತಾದಳ ಪುನಃ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಸಂಘಟಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್ !!

ಚಿಕ್ಕಮಗಳೂರು ಟಾಪ್ ನ್ಯೂಸ್ !!

* ಕಾಫಿನಾಡಲ್ಲಿ ಧಾರಾಕಾರ ಮಳೆ
* ಭದ್ರಾ ನದಿಯಿಂದ ಮರಳು ಸಾಗಿಸುತ್ತಿದ್ದ ಆರೋಪಿ ಪೊಲೀಸರ ವಶಕ್ಕೆ
* ವಾಮಾಚಾರಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ
* ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 10.49 ಲಕ್ಷ ಕಳೆದು ಕೊಂಡ ವ್ಯಕ್ತಿ
* ಸರ್ಕಾರಿ ಶಾಲಾವರಣದಲ್ಲಿ ಪಾರ್ಟಿ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು
* ಸಿಡಿಲು ಬಡಿದು ಮಹಿಳೆ ಸಾವು

NAMMUR EXPRESS NEWS
* ಕಾಫಿನಾಡಲ್ಲಿ ಧಾರಾಕಾರ ಮಳೆ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆ ಕೊಂಚ ರಿಲೀಫ್ ನೀಡಿದ್ದ ವರುಣ ಇಂದು ಧಾರಾಕಾರವಾಗಿ ಅಬ್ಬರಿಸಿದ್ದಾನೆ. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ತಾಲೂಕಿನ ವಸ್ತಾರೆ, ಕೂದುವಳ್ಳಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಕಳೆದ ವಾರ ಸುರಿದಿದ್ದ ಮಳೆಗೆ ಕಾಫಿ ಗಿಡಗಳಲ್ಲಿ ಹೂವು ಅರಳಿತ್ತು ನಿನ್ನೆ ಉತ್ತಮ ಮಳೆಯಾಗಿರುವುದರಿಂದ ಕಾಫಿ ಕಾಯಿ ಕಟ್ಟಲು ಅನುಕೂಲವಾಗಲಿದೆ. ಇನ್ನು ಮಳೆ ಬೀಳದ ಅಕ್ಕ ಪಕ್ಕ ಪ್ರದೇಶಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸೆಕೆಯೂ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ ದ್ವೀಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.

* ಭದ್ರಾ ನದಿಯಿಂದ ಮರಳು ಸಾಗಿಸುತ್ತಿದ್ದ ಆರೋಪಿ ಪೊಲೀಸರ ವಶಕ್ಕೆ
ತರೀಕೆರೆ: ಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ತರೀಕೆರೆ ತಾಲೂಕಿನ ಸಿದ್ದಿಪುರದ ಬಳಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ಆರೋಪಿಯನ್ನು ಲಕ್ಕವಳ್ಳಿ ಠಾಣೆಯ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸಿದ್ದಿಪುರದ ನಿವಾಸಿ ದರ್ಶನ್ ಬಂಧಿತನಾಗಿದ್ದು, ಭದ್ರಾನದಿಯಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದಾಗ ಲಕ್ಕವಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತನಿಂದ 3,000 ಮೌಲ್ಯದ ಮರಳು, ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

* ವಾಮಾಚಾರಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ
ಚಿಕ್ಕಮಗಳೂರು: ವಾಮಾಚಾರ ಮಾಡಿದ್ದಾರೆ ಎಂಬ ಆತಂಕದಿಂದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಯಂತಿ (29) ಆತ್ಮಹತ್ಯೆಗೆ ಶರಣಾದ ಗೃಹಿಣಿ. ತನ್ನ ಮೇಲೆ ತಿಮ್ಮಾ ಭೋವಿ, ಲಕ್ಷ್ಮಣ ರಾಮ ಭೋವಿ ಎಂಬುವವರು ವಾಮಚಾರ ಮಾಡಿದ್ದಾರೆ ಎಂದು ಆತಂಕಕ್ಕೆ ಒಳಗಾಗಿದ್ದ ಜಯಂತಿ ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾಮಾಚಾರದ ಖಿನ್ನತೆ ಯಿಂದ ಹೊರ ಬರಲು ಪತ್ನಿಗೆ ಚಿಕಿತ್ಸೆಯನ್ನು ನೀಡಲಾಗಿತ್ತು ಆದರೂ ಆತಂಕ ದಿಂದ ನನ್ನ ಪತ್ನಿ ಆತ್ಮಹತ್ಯೆ ಮಾಡಿದ್ದಾಳೆ ಆಕೆಯ ಸಾವಿಗೆ ಹಿರಿಯಣ್ಣ ತಿಮ್ಮಾ ಭೋವಿ ಹಾಗೂ ಲಕ್ಷ್ಮಣ ರಾಮ ಭೋವಿಯೇ ಕಾರಣ ಎಂದು ಮೃತ ಜಯಂತಿ ಮಂಜು ಭೋವಿ ಆರೋಪಿಸಿದ್ದಾರೆ.

* ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 10.49 ಲಕ್ಷ ಕಳೆದು ಕೊಂಡ ವ್ಯಕ್ತಿ
ಚಿಕ್ಕಮಗಳೂರು: ವಾಟ್ಸಾಪ್‌ನಲ್ಲಿ ಬಂದ ಲಿಂಕನ್ನು ಕ್ಲಿಕ್ ಮಾಡುತ್ತಿದಂತೆಯೇ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ. ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸೈಬರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.20ರಂದು ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಗ್ರೂಪ್ ನಲ್ಲಿ ಪಿ.ಎಂ.ಕಿಸಾನ್ ಯೋಜನಾ ಹೆಸರಿನಲ್ಲಿ ಎಪಿಕೆ ಫೈಲ್ ಲಿಂಕ್ ಬಂದಿದ್ದು, ಲಿಂಕ್ ಡೌನ್ ಲೋಡ್ ಮಾಡಿದ ಕೂಡಲೇ ವ್ಯಕ್ತಿಯ ಗಮನಕ್ಕೆ ಬರುವಷ್ಟರಲ್ಲಿ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ. ಕಡಿತಗೊಂಡಿದೆ.
ಆದ್ದರಿಂದ ಸಾರ್ವಜನಿಕರು ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್, ಟೆಲಿಗ್ರಾಂ, ಇಸ್ಟ್ರಾಗ್ರಾಮ್, ಇ-ಮೇಲ್ ಇತ್ಯಾದಿ ಸಾಮಾಜಿಕ ಮಾಧ್ಯಮ ಗಳಲ್ಲಿ ಬರುವ ಈ ರೀತಿಯ ವಿಶ್ವಾಸಾರ್ಹವಲ್ಲದ, ಎಪಿಕೆ ಫೈಲ್ ಗಳನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೆ ಯಾವುದೇ ಕಾರಣಕ್ಕೂ ಡೌನ್ ಲೋಡ್ ಮಾಡಿಕೊಳ್ಳಬಾರದಾಗಿ ಸಾರ್ವಜನಿಕರು ಇಂತಹ ವಂಚನೆಗೆ ಒಳಗಾದಲ್ಲಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡ ಬೇಕೆಂದು ಜಿಲ್ಲಾ ಪೊಲೀಸ್ ವತಿಯಿಂದ ವಿನಂತಿ ಮಾಡಲಾಗಿದೆ.

* ಸರ್ಕಾರಿ ಶಾಲಾ ಆವರಣದಲ್ಲಿ ಪಾರ್ಟಿ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಕೊಪ್ಪ: ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್‌ ಠಾಣಾ ಸರಹದ್ದಿನಲ್ಲಿರುವ ಕಮ್ಮರಡಿ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡುತ್ತಿದ್ದ 5 ಜನರ ವಿರುದ್ಧ ಕಲಂ 15(ಎ) ಕರ್ನಾಟಕ ಅಬಕಾರಿ ಕಾಯ್ದೆ ರೀತ್ಯಾ ಪ್ರಕರಣವನ್ನು ಹರಿಹರಪುರ, ಠಾಣೆಯ ಪೊಲೀಸರು ದಾಖಲಿಸಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಎಚ್ಚರಿಕೆ ನೀಡಿರುವ ಪೊಲೀಸರು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಎಲ್ಲರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಶಾಲೆಗಳಲ್ಲಿ ಸಂಜೆ ಸಂದರ್ಭದಲ್ಲಿ ಹಾಗೂ ರಜಾ ದಿನಗಳಲ್ಲಿ ಸರ್ಕಾರಿ ಶಾಲಾ ಆವರಣಗಳಲ್ಲಿ ಪಾರ್ಟಿ ನಡೆಸಿ ಎಣ್ಣೆ ಬಾಟಲಿ ಹಾಗೂ ಸಿಗರೇಟ್ ಗಳನ್ನು ಬಿಸಾಕಿತ್ತುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

* ಸಿಡಿಲು ಬಡಿದು ಮಹಿಳೆ ಸಾವು
ಚಿಕ್ಕಮಗಳೂರು: ತಾಲೂಕಿನ ತಿಮ್ಮನಹಳ್ಳಿ ಗ್ರಾಮದ 62 ವರ್ಷದ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ದೇವರಾಜೇಗೌಡ ಅವರ ಪತ್ನಿ ನಾಗಮ್ಮ ಮೃತಪಟ್ಟವರು. ಆರದವಳ್ಳಿ ಗ್ರಾಮದ ತನ್ನ ಅಳಿಯ ಗಂಗೇಗೌಡ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಗ ಮಧ್ಯಾಹ್ನ 2 ಗಂಟೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತ ಭಾನುವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿಯಿತು. ಮಧ್ಯಾಹ್ನ 1.30ರ ವೇಳೆಗೆ ಶುರವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಗರದಲ್ಲಿ ರಸ್ತೆಗಳು ಮತ್ತು ಚರಂಡಿಗಳ ಮೇಲೆ ನೀರು ಉಕ್ಕಿ ಹರಿಯಿತು. ಮೊದಲ ಮಳೆ ಕಂಡು ಜನ ಸಂತಸಪಟ್ಟರು.
ಜಿಲ್ಲೆಯ ಆಲ್ದೂರು ಮತ್ತು ಮೂಡಿಗೆರೆಯಲ್ಲೂ ಭಾನುವಾರ ಮಧ್ಯಾಹ್ನ ಸ್ವಲ್ಪ ಹೊತ್ತು ಧಾರಾಕಾರ ಮಳೆಯಾಗಿದೆ.

Categories
ಕಾರ್ಕಳ

ಅಬಾಕಸ್ ವಾರ್ಷಿಕ ಪರೀಕ್ಷೆಯಲ್ಲಿ ಮಾಳ ಶ್ರೀ ಗುರುಕುಲ ಅನುದಾನಿತ ಶಾಲಾ ವಿದ್ಯಾರ್ಥಿಗಳು ಮಿಂಚಿಂಗ್!

ಅಬಾಕಸ್ ವಾರ್ಷಿಕ ಪರೀಕ್ಷೆಯಲ್ಲಿ ಮಾಳ ಶ್ರೀ ಗುರುಕುಲ ಅನುದಾನಿತ ಶಾಲಾ ವಿದ್ಯಾರ್ಥಿಗಳು ಮಿಂಚಿಂಗ್!

– ಉನ್ನತ ಸ್ಥಾನದಲ್ಲಿ ಅಂಕಗಳ ಪಡೆದ ಶಾಲೆಯ 9 ವಿದ್ಯಾರ್ಥಿಗಳು
– ಗುರುರಾಜ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತರಗತಿಗಳು!

NAMMUR EXPRESS NEWS
ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ 2024- 25ರ ಸಾಲಿನ ಅಬಾಕಸ್ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯ 9 ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಅಂಕಗಳನ್ನು ಪಡೆದು ಶಾಲೆಗೆ ಹೆಮ್ಮೆಯನ್ನು
ತಂದು ಕೊಟ್ಟಿದ್ದಾರೆ.
ಶಾಲೆಯಲ್ಲಿ ಅಬಾಕಸ್ ತರಗತಿಯನ್ನು ಎರಡು ವರ್ಷಗಳಿಂದ ಉಚಿತವಾಗಿ ನೀಡುತ್ತಾ ಬಂದಿರುವ ನಿರ್ದೇಶಕರಾದ ಗುರುರಾಜ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, 2024ರ ರಾಜ್ಯಮಟ್ಟದ ಅಬಾಕಸ್ ಪರೀಕ್ಷೆಯಲ್ಲಿ ಮೂರು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಮಕ್ಕಳಿಗೆ ಅಬಾಕಸ್ ಶಿಕ್ಷಕಿ ವಿಶಾಲಾಕ್ಷಿ ಇವರು ತರಬೇತಿಯನ್ನು ನೀಡಿ ಮಾರ್ಗದರ್ಶನ ಮಾಡಿದ್ದು, ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರು ಸರ್ವ ಸದಸ್ಯರು ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಸಂಚಾಲಕರು ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Categories
ಬೆಂಗಳೂರು

ಕಲಬೆರಕೆ, ಕಳಪೆ ಆಹಾರ: ಎಲ್ಲೆಡೆ ಅಧಿಕಾರಿಗಳ ದಾಳಿ!

ಕಲಬೆರಕೆ, ಕಳಪೆ ಆಹಾರ: ಎಲ್ಲೆಡೆ ಅಧಿಕಾರಿಗಳ ದಾಳಿ!
– ಹೋಟೆಲ್, ಮೆಸ್, ಬೇಕರಿ ಮೇಲೆ ದಾಳಿ
– ಚಹಾಪುಡಿ, ಸಂಬಾರ ಪದಾರ್ಥಗಳಲ್ಲಿಯೂ ಕೂಡ ಕಲಬೆರಕೆ…

NAMMUR EXPRESS NEWS
ಬೆಂಗಳೂರು: ಇಡ್ಲಿ, ಹೋಳಿಗೆ, ಗೋಬಿಮಂಚೂರಿ ಸೇರಿದಂತೆ ಹೋಟೆಲ್‌ನಲ್ಲಿ ತಯಾರಿಸುವ ಹತ್ತಾರು ಪದಾರ್ಥಗಳಲ್ಲಿ ವಿಷಯುಕ್ತ ಪದಾರ್ಥದ ಅಂಶ ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಹೋಟೆಲ್‌ನಲ್ಲಿ ಸೇವಿಸುವ ಚಹಾದಲ್ಲಿಯೂ ವಿಷಕಾರಕ ಅಂಶಗಳನ್ನು ಕಲಬೆರಕೆ ಮಾಡಲಾಗುತ್ತಿದೆ ಎನ್ನುವ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಇಡ್ಲಿ, ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿದ ಬಳಿಕವೂ ಸಾಕಷ್ಟು ದೂರುಗಳು ಕೇಳಿಬಂದಿರುವ ಹಿನ್ನೆಲೆ ಯಲ್ಲಿ ಮತ್ತೆ ರಾಜ್ಯದ ವಿವಿಧ ಹೋಟೆಲ್, ಮೆಸ್ ಹಾಗೂ ಬೇಕರಿಗಳ ಮೇಲೆ ಎಫ್‌ಡಿಐ ದಾಳಿ ನಡೆಸಿ ತಪಾಸಣೆ ನಡೆಸಿದೆ. ಈ ಸಮಯದಲ್ಲಿ ಹಲವು ಹೋಟೆಲ್, ಮೆಸ್ ಹಾಗೂ ಬೇಕರಿಯಲ್ಲಿ ಮಾತು ಚಹಾಪುಡಿ ಹಾಗೂ ಮಸಾಲೆ ಪದಾರ್ಥವನ್ನು ಕಲಬೆರಕೆ ಮಾಡಿರುವುದು ಬಹಿರಂಗವಾಗಿದೆ. ದಾಳಿಗಳ ವೇಳೆ ಆಹಾರ ತಯಾರಿಕೆಯಲ್ಲಿ ಕಲಬೆರಕೆ ಮಸಾಲೆಗಳನ್ನು ಬಳಸಲಾಗುತ್ತಿರುವುದು ಮತ್ತು ಬೆಲ್ಲ, ಎಣ್ಣೆ, ಪನೀರ್, ಖೋವಾ ಮತ್ತು ಚಹಾಪುಡಿಯಂತಹ ವಸ್ತುಗಳಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಇರುವುದು ಬಹಿರಂಗವಾಗಿದೆ. ಇತ್ತೀಚೆಗೆ ನಡೆದ ವಿಷಾಹಾರ ಸೇವನೆ ಪ್ರಕರಣದ ನಂತರ, ಕಾಲೇಜು ಮತ್ತು ಕಚೇರಿಗಳ ಬಳಿಯಿರುವ ಹೋಟೆಲ್, ಮೆಸ್ ಹಾಗೂ ಬೇಕರಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗುತ್ತಿದೆ.

ಚಹಾ ಪುಡಿಯೇ ಮರುಬಳಕೆ?: ದಾಳಿಯ ವೇಳೆ ಚಹಾ ಪುಡಿ ಸೇರಿದಂತೆ ಹಲವಾರು ವಸ್ತುಗಳು ಕಲಬೆರಕೆಯಾಗಿರುವುದು ಕಂಡುಬಂದಿದ್ದು, ಕಡಿಮೆ ದರ್ಜೆಯ ಚಹಾ ಮತ್ತು ಈ ಹಿಂದೆ ತಯಾರಿಸಿದ ಚಹಾ ಪುಡಿಯನ್ನೇ ಒಣಗಿಸಲಾಗುತ್ತದೆ ಮತ್ತು ಕೃತಕ ಬಣ್ಣ ಬಳಸಿ ಅವುಗಳನ್ನೇ ಬಳಸಲಾಗುತ್ತಿದೆ. ಹೆಚ್ಚಿನ ಅಂಗಡಿಗಳು ಕುದಿಸಿದ ಚಹಾ ಪುಡಿಯನ್ನು ಇತರ ತ್ಯಾಜ್ಯದೊಂದಿಗೆ ಬೆರೆಸುವುದಿಲ್ಲ. ಬದಲಿಗೆ, ಅದನ್ನು ಒಣಗಿಸಿ ಮರುಬಳಕೆ ಮಾಡುತ್ತವೆ ಎಂದು ಅಧಿಕಾರಿ ಹೇಳಿದರು. ಇದಲ್ಲದೆ, ಅನೇಕ ಆಹಾರ ಪದಾರ್ಥಗಳನ್ನು ಕಲಬೆರಕೆ ಮಸಾಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಹೆಚ್ಚಿನ ಬೇಡಿಕೆಯಿರುವ ಮತ್ತು ಪುಡಿ ರೂಪದಲ್ಲಿರುವ ಅರಿಶಿಣ, ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿಗಳು ಸಾಮಾನ್ಯವಾಗಿ ಕಲಬೆರಕೆಯಾಗಿರುತ್ತವೆ. ಅರಿಶಿಣವನ್ನು ಹೆಚ್ಚಾಗಿ ಮೆಟಾನಿಲ್ ಹಳದಿ, ಸಂಶ್ಲೇಷಿತ ಬಣ್ಣ ಅಥವಾ ಸೀಸದ ಕ್ರೋಮೇಟ್ ನೊಂದಿಗೆ ಬೆರೆಸಿ ಬಣ್ಣ ಹೆಚ್ಚಿಸಲಾಗುತ್ತಿದೆ. ಇವೆರಡೂ ಹಾನಿಕಾರಕವಾಗಿವೆ. ಅದೇ ರೀತಿ, ಮೆಣಸಿನ ಪುಡಿಯನ್ನು ಸುಡಾನ್ ರೆಡ್‌ನಂತಹ ಕೃತಕ ಬಣ್ಣಗಳೊಂದಿಗೆ ಕಲಬೆರಕೆ ಮಾಡಲಾಗುತ್ತದೆ. ಇದು ಕ್ಯಾನ್ಸರ್‌ಕಾರಕ ಎಂದು ತಿಳಿದುಬಂದಿದೆ. ಕಲಬೆರಕೆ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಲಾನಂತರದಲ್ಲಿ ಅವು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಎಚ್ಚರಿಸಿದ್ದಾರೆ.

ಮೆಟಾನಿಲ್ ಹಳದಿ, ಸೀಸದ ಕ್ರೋಮೇಟ್ ಮತ್ತು ಸುಡಾನ್ ಕೆಂಪು ಮುಂತಾದ ಹಾನಿಕಾರಕ ರಾಸಾಯನಿಕಗಳನ್ನು ಬೆರೆಸಿರುವ ಮಸಾಲೆಗಳು ಜೀರ್ಣಕಾರಿ ಸಮಸ್ಯೆಗಳು, ಯಕೃತ್ತು ಮತ್ತು ಮೂತ್ರಪಿಂಡದ ಹಾನಿ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು. ಈ ರೀತಿಯ ಕಲಬೆರಕೆ ಪದಾರ್ಥಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ನರವೈಜ್ಞಾನಿಕ ಅಸ್ವಸ್ಥತೆಗಳು, ಉಸಿರಾಟದ ತೊಂದರೆಗಳು ಮತ್ತು ಅಂಗಗಳ ಕಾರ್ಯವು ದುರ್ಬಲಗೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ, ಅವು ಜಠರಕರುಳಿನ ಅಸ್ವಸ್ಥತೆ ಮತ್ತು ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವಿವರಿಸಿದರು.