Categories
ಬೆಂಗಳೂರು

ಕೋಟ್ಯಂತರ ಎಟಿಎಂ ಬಳಕೆದಾರರೇ ಅಲರ್ಟ್‌!

ಕೋಟ್ಯಂತರ ಎಟಿಎಂ ಬಳಕೆದಾರರೇ ಅಲರ್ಟ್‌!

– ಮೇ 1 ರಿಂದ ಎಟಿಎಂ ಇಂಟರ್‌ಚೇಂಜ್‌ ಶುಲ್ಕ ಹೆಚ್ಚಳ
– ಈಗ ಶುಲ್ಕ ಎಷ್ಟು ಗೊತ್ತಾ?

NAMMUR EXPRESS
ಬೆಂಗಳೂರು: ಡೆಬಿಟ್ ಕಾರ್ಡ್‌ (ಎಟಿಎಂ ಕಾರ್ಡ್‌)ಗಳನ್ನು ಬಳಸುವ ಕೋಟ್ಯಂತರ ಬಳಕೆದಾರರಿಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಇನ್ಮುಂದೆ ಎಟಿಎಂ ಬಳಕೆಗೆ ಸ್ವಲ್ಪ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ವಾಸ್ತವವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಇಂಟರ್ಚೇಂಜ್ ಶುಲ್ಕ ಹೆಚ್ಚಳವನ್ನು ಅನುಮೋದಿಸಿದೆ. ಈ ಹೊಸ ನಿಯಮವು 2025ರ ಮೇ 1 ರಿಂದ ಜಾರಿಗೆ ಬರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಎಟಿಎಂ ಶುಲ್ಕವನ್ನು ಹಣಕಾಸು ವಹಿವಾಟುಗಳಿಗೆ 2 ರೂಪಾಯಿ ಮತ್ತು ಹಣಕಾಸೇತರ ವಹಿವಾಟುಗಳಿಗೆ 1 ರೂಪಾಯಿ ಹೆಚ್ಚಿಸಲು ಅನುಮೋದನೆ ನೀಡಿದೆ. ಒಂದು ಪರಿಷ್ಕೃತ ನಿಯಮಗಳು ಜಾರಿಯಾದರೆ, ದೇಶದ ಕೋಟ್ಯಂತರ ಗ್ರಾಹಕರು ಎಟಿಎಂ ಮೂಲಕ ಹಣವನ್ನು ಹಿಂಪಡೆಯಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

ಎಟಿಎಂ ಇಂಟರ್‌ಚೇಂಜ್ ಎಂದರೇನು?

ಒಂದು ಬ್ಯಾಂಕಿನ ಗ್ರಾಹಕರು ಮತ್ತೊಂದು ಬ್ಯಾಂಕಿನ ಎಟಿಎಂ ಸೇವೆ ಬಳಸುವುದನ್ನೇ ಎಟಿಎಂ ಇಂಟರ್‌ಚೇಂಜ್ ಎನ್ನುತ್ತಾರೆ. ಬೇರೆ ಬ್ಯಾಂಕಿನ ಎಟಿಎಂ ಬಳಸುವುದಕ್ಕಾಗಿ ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಸಾಮಾನ್ಯವಾಗಿ ವಹಿವಾಟಿನ ಶೇಕಡಾವಾರು ಮೊತ್ತವಾಗಿರುತ್ತದೆ ಮತ್ತು ಇದನ್ನು ಗ್ರಾಹಕರಿಂದಲೇ ಸಂಗ್ರಹಿಸಲಾಗುತ್ತದೆ.

ಈಗ ಶುಲ್ಕ ಎಷ್ಟು ಗೊತ್ತಾ?

ಇದಕ್ಕೂ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್ 2021ರ ಜೂನ್ ನಲ್ಲಿ ಎಟಿಎಂ ಇಂಟರ್‌ಚೇಂಜ್‌ ಶುಲ್ಕವನ್ನು ಪರಿಷ್ಕರಿಸಿತ್ತು. ಈ ಬಾರಿ ಎಟಿಎಂ ಮೂಲಕ ನಗದು ಹಿಂಪಡೆಯಲು ಇಂಟರ್‌ಚೇಂಜ್ ಶುಲ್ಕವನ್ನು ₹17 ರಿಂದ ₹19ಕ್ಕೆ ಹೆಚ್ಚಿಸಲಾಯಿತು. ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸೇತರ ವಹಿವಾಟುಗಳಿಗೆ ಇಂಟರ್‌ಚೇಂಜ್ ಶುಲ್ಕವನ್ನು ₹6 ರಿಂದ ₹7 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ನೀವು ಐದು ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು. ಇದರರ್ಥ ಬೇರೆ ಬ್ಯಾಂಕಿನ ಎಟಿಎಂ ಅನ್ನು ಐದು ಬಾರಿ ಬಳಸುವುದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ ಮೆಟ್ರೋಯೇತರ ನಗರಗಳಲ್ಲಿ ಈ ಮಿತಿ ಮೂರು ವಹಿವಾಟುಗಳಿಗೆ ಸೀಮಿತವಾಗಿದೆ.

Categories
ಬೆಂಗಳೂರು

ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್..!

ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್..!
– ನಂದಿನಿ ಹಾಲಿನ ದರ ಶೀಘ್ರವೇ 3 ರು. ಏರಿಕೆ?
– ಹಾಲು ಒಕ್ಕೂಟಗಳು ಲೀಟರ್‌ಗೆ 5 ರು. ದರ ಹೆಚ್ಚಳ ಮಾಡುವಂತೆ ಆಗ್ರಹ

NAMMUR EXPRESS NEWS
ಬೆಂಗಳೂರು : ಹೆಚ್ಚಳ ಮಾಡುವ ಹಾಲಿನ ದರದ ಪೂರ್ಣ ಹಣವನ್ನು ರೈತರಿಗೆ ಕೊಡಲು ಒಪ್ಪದ ಹಾಲು ಒಕ್ಕೂಟಗಳ ಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದರ ಏರಿಕೆ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸುವುದಾಗಿ ಹೇಳಿದ್ದಾರೆ. ಹಾಲು ಒಕ್ಕೂಟಗಳು ಲೀಟರ್‌ಗೆ 5 ರು. ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದವು. ಇದಕ್ಕೆ ಮುಖ್ಯಮಂತ್ರಿಯವರು 3 ರು. ದರ ಹೆಚ್ಚಳಕ್ಕೆ ಒಪ್ಪಿ, ದರ ಹೆಚ್ಚಳದ ಸಂಪೂರ್ಣ ಮೊತ್ತವನ್ನು ರೈತರಿಗೆ ನೀಡಬೇಕು ಎಂದು ಷರತ್ತು ವಿಧಿಸಿದರು. ಆದರೆ, ಇದಕ್ಕೆ ಒಕ್ಕೂಟಗಳು ಒಪ್ಪದೆ ಕನಿಷ್ಟ 60 ಪೈಸೆಯಾದರೂ ಮಂಡಳಿಗೆ ನೀಡಬೇಕು ಎಂದು ಒತ್ತಾಯಿಸಿದ್ದು, ಇದಕ್ಕೆ ಒಪ್ಪದ ಸಿಎಂ ಸಂಪುಟದಲ್ಲಿ ಚರ್ಚಿಸುವುದಾಗಿ ಎನ್ನಲಾಗಿದೆ. ವಿಷಯ ಮುಂದೂಡಿದರು.

ಸೋಮವಾರ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ದರ ಏರಿಕೆ ಚರ್ಚೆ ನಡೆದಿದೆ.
ಸಭೆ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಇ ಸಿದ್ದರಾಮಯ್ಯ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎಂಬುವುದು ಸರ್ಕಾರದ ನಿಲುವು ಎಂದರು. ಇದಕ್ಕೆ ಒಪ್ಪದ ಹಾಲು ಒಕ್ಕೂಟಗಳು, ಹಾಲು ಉತ್ಪಾದಕರಿಂದ ಖರೀದಿಸಿದ ಸಂಪೂರ್ಣ ಹಾಲನ್ನು ಮಾರಾಟ ಮಾಡುವುದಿಲ್ಲ. ಬೇಡಿಕೆಗೆ ತಕ್ಕಂತೆ ಹಾಲು ಮಾರುಕಟ್ಟೆಗೆ ಸರಬರಾಜು ಮಾಡುತ್ತೇವೆ. ಬಾಕಿ ಉಳಿದ ಲಕ್ಷಾಂತರ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸುತ್ತೇವೆ. ಇದರಿಂದ ಒಕ್ಕೂಟಗಳಿಗೆ ತಿಂಗಳಿಗೆ ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡವು. ಜೊತೆಗೆ ಪ್ರತಿ ಲೀಟ‌ರ್ ಹಾಲಿನ ಹೆಚ್ಚಳವಾದ ದರದಲ್ಲಿ ಶೇ.25 ಹಣ ಒಕ್ಕೂಟಗಳ ನಿರ್ವಹಣೆಗೆ ಬೇಕಾಗುತ್ತದೆ. ಸಂಪೂರ್ಣ ಹಣವನ್ನು ರೈತರಿಗೆ ಕೊಡುವುದರಿಂದ ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಒಕ್ಕೂಟಗಳ ನಿರ್ದೇಶಕರು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಹಾಲಿನ ದರ ಹೆಚ್ಚಳದ ಸಂಪೂರ್ಣ ಹಣವನ್ನು ರೈತರಿಗೆ ವರ್ಗಾಯಿಸಲು ಒಪ್ಪದ ಒಕ್ಕೂಟಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಹಾಲಿನ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಿದರು. ಇದೇ ವೇಳೆ ಹಾಲು ಒಕ್ಕೂಟಗಳು ಖರ್ಚು, ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆ ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಜಾಸ್ತಿಯಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲ ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ. ಆಡಳಿತಾತ್ಮಕ ವೆಚ್ಚ ಯಾವುದೇ ಕಾರಣಕ್ಕೂ ಶೇ.2ಕ್ಕಿಂತ ಹೆಚ್ಚಾಗಬಾರದು. ಮುಂದಿನ ಆರು ತಿಂಗಳ ಒಳಗಾಗಿ ಒಕ್ಕೂಟಗಳು ಆಡಳಿತಾತ್ಮಕ ವೆಚ್ಚವನ್ನು ಶೇ.2ಕ್ಕಿಂತ ಕೆಳಗೆ ಇಳಿಸಲೇಬೇಕು ಎಂದು ಸೂಚಿಸಿದರು.

Categories
ಪ್ರತಿಭೆಗಳು

ಕಾಲಿಲ್ಲದಿದ್ದರೂ ಇಡೀ ವಿಶ್ವ ಗೆದ್ದ ಕರಾವಳಿ ಸಾಧಕಿ!

ನಮ್ಮೂರ್ ಸಾಧಕರು

ಕಾಲಿಲ್ಲದಿದ್ದರೂ ಇಡೀ ವಿಶ್ವ ಗೆದ್ದ ಕರಾವಳಿ ಸಾಧಕಿ!

– ಪ್ರತಿ ಕ್ಷಣವು ನೋವಲ್ಲಿ ಬೆಂದರೂ ಭಾರತದ ಕೀರ್ತಿ ಪತಾಕೆ ಹಾರಿಸಿದರು
– ಕರಾವಳಿಯ ಮಾಲತಿ ಹೊಳ್ಳ ಎಂಬ ಮಹಾನ್ ಸಾಧಕಿ
* ಪೋಲಿಯೋದಲ್ಲಿ ಕಾಲು ಕಳೆದುಕೊಂಡರೂ ದೇಶದ ಹಿರಿಮೆ ಹೆಚ್ಚಿಸಿದರು!
* 32 ಬಾರಿ ಆಪರೇಷನ್: ಆದ್ರೂ ಛಲ ಬಿಡದೆ ಸಾಧನೆ

ಬಂಗಾರ ಸಿದ್ಧವಾಗುವ ಮೊದಲು ಬೆಂದಿರುತ್ತದೆ. ಹಾಗೆಯೇ ಕೆಲವೊಮ್ಮೆ ಬೇಯುವ ಬಯಕೆ ಇಲ್ಲದೆ ಹೋದರೂ ಅನಿವಾರ್ಯ ಪರಿಸ್ಥಿತಿಗಳು ಕೆಂಡಕ್ಕೆ ನೂಕಿರುತ್ತವೆ. ಅದಾಗಿಯೂ ಛಲ ಎಂಬುದೊಂದು ಅಂತಹ ಸಮಯದಲ್ಲಿ ಮತ್ತು ಎಂತದ್ದೇ ಸಂದರ್ಭದಲ್ಲೂ ಬದುಕಿಸಿಬಿಡುತ್ತದೆ.
ಹಾಗೊಬ್ಬ ಸಾಧಕಿಯೇ ಮಾಲತಿ ಹೊಳ್ಳ.
ಕ್ರೀಡಾ ಲೋಕದಲ್ಲಿ ವಿಶ್ವವೇ ಬೆರಗಾಗುವಂತಹ ಸಾಧನೆ ಮಾಡಿದ ಈಕೆಯ ಏಳು ಬೀಳಿನ ಹಾದಿ ನಿಜಕ್ಕೂ ರೋಚಕ.

ಪೋಲಿಯೋದಲ್ಲಿ ಕಾಲು ಸ್ವಾಧೀನ ಹೋಯ್ತು…

ಮಾಲತಿ ಹೊಳ್ಳ ಮೂಲತಃ ಉಡುಪಿ ಜಿಲ್ಲೆಯ ಮಣ್ಣೂರು ಗ್ರಾಮದವರು. ತಂದೆ ಕೃಷ್ಣಮೂರ್ತಿ ಹೊಳ್ಳ, ತಾಯಿ ಪದ್ಮಾವತಿ. ಜುಲೈ 6, 1958 ರಲ್ಲಿ ಜನಿಸಿದರು. ಈಕೆ ಒಂದು ವರ್ಷದ ಮಗುವಾಗಿದ್ದಾಗಲೇ ಪೋಲಿಯೋ ಎಂಬ ಭಯಂಕರ ವ್ಯಾಧಿಗೆ ತುತ್ತಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಇವರನ್ನು ಚೆನ್ನೈನ ದತ್ತಾತ್ರೇಯ ಮೆಡಿಕಲ್ ಸೆಂಟರ್ ಎಂಬ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆ ಗಾಗಿ ಸೇರಿಸಲಾಗಿ ಅಲ್ಲಿಯೇ ಆಕೆಯ ಬಾಲ್ಯದ ಬಹುಭಾಗ ಕಳೆಯುವಂತಾಯಿತು.

32 ಬಾರಿ ಆಪರೇಷನ್: ಆದ್ರೂ ಛಲ ಬಿಡದೆ ಸಾಧನೆ

ಈಕೆಗೆ ಇದ್ದದ್ದು ದೇಹದ ನರಗಳೆಲ್ಲ ಚೆಂಡಿನಂತೆ ಒಂದು ಗೂಡುವ ಕಾಯಿಲೆ. ಇದನ್ನು ತಪ್ಪಿಸಲು ಪ್ರತಿ ಆರು ತಿಂಗಳಿಗೊಮ್ಮೆ ಮಾಲತಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿತ್ತು. ಇಂತಹ 32 ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಯಿತು. ಆದರೂ ಪ್ರತೀ ಪರೀಕ್ಷೆಯಲ್ಲಿ ಮಾಲತಿ ತರಗತಿಗೆ ಮೊದಲಿಗರು. ಇವರು 1975 ರಲ್ಲಿ ಬೆಂಗಳೂರಿಗೆ ಹಿಂತಿರುಗಿ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ತಂದೆಯ ಪ್ರೋತ್ಸಾಹ ಅವರಲ್ಲಿ ಹೆಚ್ಚು ಧೈರ್ಯ ತುಂಬಿತ್ತು. ಅದೇ ವರ್ಷ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದ ಮಾಲತಿ ಹೊಳ್ಳ ಕ್ರೀಡೆಯಲ್ಲಿ ಅವರ ಒಲವನ್ನು ಹೆಚ್ಚಿಸಿಕೊಂಡು ಅಹಮದಾಬಾದ್ ನಲ್ಲಿ ನಡೆದ ಗಾಲಿಕುರ್ಚಿಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರ ಜೊತೆ ಸ್ಪರ್ಧಿಸಲು ಮಹಿಳೆಯರೇ ಇಲ್ಲದ ಕಾರಣ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಬೇಕಾಯಿತು. ಅವರೆಲ್ಲ ಆಗಲೇ ಹೆಸರು ಮಾಡಿದವರು. ಆದರೆ ಅಲ್ಲಿಯೂ ಮಾಲತಿಯೇ ಗೆದ್ದರು. ಕೊರಿಯಾ, ಡೆನ್ಮಾರ್ಕ್, ಬೀಜಿಂಗ್, ಬ್ಯಾಂಕಾಕ, ಬೆಲ್ಲಿಯಂ, ಬಮಿರ್ಂಗ್ ಹ್ಯಾಂ, ಮ್ಯಾಂಚೆಸರುಗಳಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಷಿಯಾಡ್ ಕ್ರೀಡಾ ಕೂಟಗಳಲ್ಲಿ ಗಾಲಿ ಪಚಕ್ ಓಟ, ಗುಂಡು ಎಸೆತ, ತಟ್ಟೆ ಎಸೆತ, ಈಟಿ ಎಸೆದ ಸ್ಪರ್ಧೆಗಳಲ್ಲಿ ಮಾಲತಿ ಹೊಳ್ಳ ಭಾಗವಹಿಸಿ, ವಿಜಯಿಯಾದಾಗ ಇಡೀ ವಿಶ್ವವೇ ಅವರತ್ತ ತಿರುಗಿತು. ಬರ್ಮಿಗ್ ಹ್ಯಾಮ್ ಹೋದಾಗ, ಬಸ್ಸಿನಿಂದ ಬಿದ್ದು ಮೂಳೆ ಮುರಿದರೂ ಅವರ ಉತ್ಸಾಹ ಮಾತ್ರ ತಗ್ಗಲಿಲ್ಲ. ಇದು ಅವರಿಗೆ 17ನೇ ಮೂಳೆ ಮುರಿತ !

ದೇಶ, ವಿದೇಶದ ಪ್ರಶಸ್ತಿ, ಗೌರವ

ಕ್ರೀಡಾ ಜಗತ್ತಿನಲ್ಲಿ ಮಾಲತಿ ಹೊಳ್ಳರ ಸಾಧನೆಯನ್ನು ಪರಿಗಣಿಸಿ, ಭಾರತ ಸರ್ಕಾರ ಅರ್ಜುನ ಪ್ರಶಸ್ತಿ (1995), ಪದ್ಮಶ್ರೀ ಪ್ರಶಸ್ತಿ (2001) ನೀಡಿ ಗೌರವಿಸಿತು. ಕೆ.ಕೆ. ಬಿರ್ಲಾ ಪ್ರಶಸ್ತಿ, ಅಮೆರಿಕನ ಬಯೋಗ್ರಾಫಿಕಲ್ ಇನ್ಸಿಟ್ಯೂಟ್ಸ ವರ್ಷದ ಮಹಿಳಾ ಪ್ರಶಸ್ತಿ, ಇಂಗ್ಲೆಂಡಿನ ಅಂತಾರಾಷ್ಟ್ರೀಯ ಬಯೋಗ್ರಾಫಿಕಲ್ ಕೇಂದ್ರದ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ, ಮುಂತಾದ 30 ಕ್ಕೂ ಮೀರಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮಾಲತಿ ಹೊಳ್ಳ ಭಾಜನರಾಗಿದ್ದಾರೆ.

ಅಭಿನಯ ಜಗತ್ತಿಗೂ ಎಂಟ್ರಿ: ಡಾ. ರಾಜ್ ಜತೆ ನಟನೆ

ಅಭಿನಯ ಜಗತ್ತಿಗೂ ಮಾಲತಿ ಹೊಳ್ಳ ಹೊರತಾಗಿಲ್ಲ. ಡಾ. ರಾಜ್ ಕುಮಾರ್ ಅವರೊಡ ‘ಕಾಮನಬಿಲ್ಲು’ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಲತಿ ಹೊಳ್ಳ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ವಿಧಿ ಬದುಕಿನಲ್ಲಿ ಕೊಟ್ಟ ನೋವನ್ನು ನುಂಗಿ. ವಿಶ್ವ ಬೆರಗಾಗುವಂತೆ ಬೆಳೆದಿರುವುದರಲ್ಲಿ ಅವರ ಪರಿಶ್ರಮವಿದೆ. ಅವರ ಸಾಧನೆಯನ್ನು ಕುರಿತು ಬರೆಯಲಾದ ಪ್ರೌಢ ಪ್ರಬಂಧವೊಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ವಿಕಲಚೇತನರ ಸೇವೆಗಾಗಿ ಈ ಸೇವಾ ಸಂಸ್ಥೆ ಸ್ಥಾಪನೆ

ತಮ್ಮಂತೆಯೇ ವಿಕಲಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡುವ ಸಲುವಾಗಿ ‘ಮಾತೃ ಫೌಂಡೇಶನ್’ ಎಂಬ ಸೇವಾ ಸಂಸ್ಥೆಯ ಪ್ರಾರಂಭಿಸಿದ್ದಾರೆ. ಸದಾ ಚಟುವಟಿಕೆ ಅವರ ಯಶಸ್ಸಿನ ಗುಟ್ಟು. (ಕೀಳರಿಮೆಗಿಂತ ಮಿಗಿಲ ಅಂಗವೈಕಲ್ಯವಿಲ್ಲ. ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು ಎನ್ನುವುದು ಅವರ ಸಿದ್ಧಾಂತ) ಮಾಲತಿ ಹೊಳ್ಳರ ಜೀವನ ವಿಶೇಷ ಚೇತನರಿಗೆ (ವಿಭಿನ್ನ ಸಾಮರ್ಥ್ಯವುಳ್ಳವರು) ಮಾತ್ರವ ಎಲ್ಲ ಮಹಿಳೆಯರಿಗೂ ಸ್ಫೂರ್ತಿದಾಯಕ. ಛಲಗಾತಿ ಮಾಲತಿ ವಿಶೇಷ ಚೇತನರ ಕ್ರೀಡಾಪ್ರಪಂಚ ಹಲವು ದಾಖಲೆಗಳನ್ನು ನಿರ್ಮಿಸಿ, ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
– ಸಂಗ್ರಹ (ಪುಸ್ತಕ ಮತ್ತು ಇಂಟರ್ನೆಟ್)

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಹನುಮಂತನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಆಸ್ತಿಗೆ ಸಂಬಂಧಿಸಿದ ವಿವಾದಗಳು ಇಂದು ನಿಮ್ಮಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ಶೈಕ್ಷಣಿಕ ಕೆಲಸದಲ್ಲಿ ನಿಮ್ಮ ಸಾಧನೆ ಅತ್ಯುತ್ತಮವಾಗಿರುತ್ತದೆ. ವೃತ್ತಿ ಪ್ರಗತಿಗೆ ಸುವರ್ಣಾವಕಾಶಗಳ ಸಂಪೂರ್ಣ ಲಾಭ ಪಡೆಯಲು ಸಿದ್ಧರಾಗಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಲು ಸಾಧ್ಯವಿದೆ. ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯುವಿರಿ.

** ವೃಷಭ ರಾಶಿ :
ಇಂದು ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ಆತ್ಮವಿಶ್ವಾಸದ ಕೊರತೆ ಇರುತ್ತದೆ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ನೀವು ಉದ್ಯೋಗ ಪರೀಕ್ಷೆಗಳು ಮತ್ತು ಸಂದರ್ಶನಗಳು ಇತ್ಯಾದಿಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಶೈಕ್ಷಣಿಕ ಕೆಲಸದ ಸವಾಲುಗಳು ದೂರವಾಗುತ್ತವೆ.

** ಮಿಥುನ ರಾಶಿ :
ಇಂದು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಹಣ ಉಳಿಸಿ. ಆಸ್ತಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ವಿಳಂಬವಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಸಿದ್ಧರಾಗಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು.

** ಕರ್ಕಾಟಕ ರಾಶಿ :
ಇಂದು ವ್ಯವಹಾರದಲ್ಲಿ ಲಾಭ ಇರುತ್ತದೆ. ಯಾವುದಾದರೂ ಸಮಾರಂಭದ ಆಚರಣೆಯಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆ ಇರುತ್ತದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳು ಹೆಚ್ಚಾಗಬಹುದು. ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಕೆಲವು ವಿಶೇಷ ಯೋಜನೆಗಳನ್ನು ಮಾಡಬಹುದು.

** ಸಿಂಹ ರಾಶಿ :
ಇಂದು ಆಸ್ತಿ ಮಾರಾಟ ಅಥವಾ ಬಾಡಿಗೆಗೆ ನೀಡುವುದರಿಂದ ಆರ್ಥಿಕ ಲಾಭ ದೊರೆಯಲಿದೆ. ಶೈಕ್ಷಣಿಕ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ಹಲವು ಆದಾಯದ ಮೂಲಗಳಿಂದ ಹಣ ಬರಲಿದೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ನವೀನ ವಿಚಾರಗಳೊಂದಿಗೆ ಕಚೇರಿ ಸಭೆಗಳಲ್ಲಿ ಸೇರಿ. ಇದು ಪ್ರಗತಿಗೆ ಹಲವು ಅವಕಾಶಗಳನ್ನು ಒದಗಿಸುತ್ತದೆ.

** ಕನ್ಯಾ ರಾಶಿ :
ಇಂದು ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ತಾಳ್ಮೆಯಿಂದಿರಿ. ಅತಿಯಾದ ಕೋಪವನ್ನು ತಪ್ಪಿಸಿ. ನಿಮ್ಮ ಕುಟುಂಬದೊಂದಿಗೆ ನೀವು ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬಹುದು. ವ್ಯವಹಾರವು ವಿಸ್ತರಿಸಬಹುದು. ಹೆಚ್ಚು ಓಡಾಡುವುದು ಇರುತ್ತದೆ. ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಆರೋಗ್ಯ ಸುಧಾರಿಸಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು.

** ತುಲಾ ರಾಶಿ :
ಇಂದು ಆತ್ಮವಿಶ್ವಾಸದ ಕೊರತೆ ಇರುತ್ತದೆ. ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ಸ್ನೇಹಿತರ ಸಹಾಯದಿಂದ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ಈ ವಾರ ನಿಮ್ಮ ಜೀವನದಲ್ಲಿ ಹೊಸದೇನಾದರೂ ಸಂಭವಿಸಬಹುದು. ಇಂದು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಸಿಗುತ್ತದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳು ಉಂಟಾಗಬಹುದು.

** ವೃಶ್ಚಿಕ ರಾಶಿ :
ಇಂದು ಸ್ವಯಂ ನಿಯಂತ್ರಣದಿಂದಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಅನಗತ್ಯ ಕೋಪವನ್ನು ತಪ್ಪಿಸಿ. ವ್ಯಾಪಾರ ಚಟುವಟಿಕೆ ಹೆಚ್ಚಾಗಬಹುದು. ವ್ಯವಹಾರ ನಿಮಿತ್ತ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ವೃಶ್ಚಿಕ ರಾಶಿಯ ಜನರು ಈ ವಾರ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಹೆಚ್ಚು ಹಣ ಖರ್ಚು ಮಾಡುವಾಗ ಸ್ವಲ್ಪ ಜಾಗರೂಕರಾಗಿರಿ.

** ಧನಸ್ಸು ರಾಶಿ :
ಇಂದು ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸಿನಲ್ಲಿ ಏರಿಳಿತಗಳು ಇರಬಹುದು. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಆದಾಯದ ಮೂಲವಾಗಬಹುದು. ಹಣಕಾಸಿನ ವಿಷಯಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ಇದು ನಿಮ್ಮ ಜೀವನಶೈಲಿಯ ಮೇಲೆ ಪರಿಣಾಮ ಬೀರಬಹುದು.

** ಮಕರ ರಾಶಿ :
ಇಂದು ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಬಹುದು. ನಿಮ್ಮ ವೃತ್ತಿಜೀವನದತ್ತ ಗಮನ ಹರಿಸಿ. ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರಿ.

** ಕುಂಭ ರಾಶಿ :
ಇಂದು ಮಾತಿನಲ್ಲಿ ಮಾಧುರ್ಯ ಇರುತ್ತದೆ, ಆದರೆ ಮನಸ್ಸಿಗೂ ತೊಂದರೆಯಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ವ್ಯವಹಾರದಲ್ಲಿ ಲಾಭ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಅತಿಯಾದ ಖರ್ಚಿನಿಂದಾಗಿ ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ.

** ಮೀನ ರಾಶಿ :
ಇಂದು ಹಠಾತ್ ಹಣ ಗಳಿಕೆಯ ಸಾಧ್ಯತೆಗಳಿವೆ. ಕೆಲವು ಪೂರ್ವಜರ ವ್ಯವಹಾರಗಳು ಮತ್ತೆ ಆರಂಭವಾಗಬಹುದು. ಕುಟುಂಬದ ಹಿರಿಯರಿಂದ ನಿಮಗೆ ಹಣ ಸಿಗಬಹುದು. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಹೂಡಿಕೆ ಮಾಡುವ ಮೊದಲು ಸರಿಯಾದ ಸಂಶೋಧನೆ ಮಾಡಿ. ಕೆಲವರು ಸ್ನೇಹಿತರೊಂದಿಗೆ ಪ್ರವಾಸ ಯೋಜಿಸಬಹುದು.

Categories
ಚಿಕ್ಕಮಗಳೂರು

ಸರ್ಕಾರ ಚೆನ್ನಾಗಿದೆ, ಸರ್ಕಾರಕ್ಕೆ ಏನೂ ತೊಂದರೆ ಇಲ್ಲ – ಕೆ.ಜೆ ಜಾರ್ಜ್

ಸರ್ಕಾರ ಚೆನ್ನಾಗಿದೆ, ಸರ್ಕಾರಕ್ಕೆ ಏನೂ ತೊಂದರೆ ಇಲ್ಲ – ಕೆ.ಜೆ ಜಾರ್ಜ್

* ಹನಿಟ್ರಾಪ್ ಎನ್ನುತ್ತಿದ್ದಂತೆಯೇ ಕೈಮುಗಿದ ಸಚಿವ
* ಮೆಸ್ಕಾಂ ಇಂಜಿನಿಯರ್ ಮೇಲೆ ಗರಂ ಆದ ಇಂಧನ ಸಚಿವ

NAMMUR EXPRESS NEWS
ಚಿಕ್ಕಮಗಳೂರು: ರಾಜ್ಯಾದ್ಯಂತ ಸಚಿವರು-ಶಾಸಕರ ಹನಿಟ್ರ್ಯಾಪ್ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹನಿಟ್ರ್ಯಾಪ್ ಹೆಸರೇಳುತ್ತಿದ್ದಂತೆ ಎರಡೂ ಕೈ ಮುಗಿದ ಸಚಿವ ಜಾರ್ಜ್ ಈ ವಿಚಾರವಾಗಿ ದಯವಿಟ್ಟು ಕ್ಷಮಿಸಿ, ನನ್ನ ಏನೂ ಕೇಳಬೇಡಿ ಎಂದು ಹೇಳಿದರು. ಈ ಬಗ್ಗೆ ಯಾರು ಹೇಳಿದ್ರೋ ಅವರನ್ನೇ ಕೇಳಿ, ನನ್ನ ಕೇಳಬೇಡಿ ಎಂದು ಹೇಳಿದರು.
” ನಾನು ಹನಿಟ್ರ್ಯಾಪ್ ಬಗ್ಗೆ ಏನೂ ಮಾತನಾಡಲ್ಲ, ನನ್ನ ಬಳಿ ಏನೂ ಇಲ್ಲ, ನಾನು ಎಲ್ಲಾದ್ರು ಹೇಳಿದ್ದೀನಾ, ದಯವಿಟ್ಟು ನನ್ನ ಏನೂ ಕೇಳಬೇಡಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಯಾರು ಹೇಳಿದ್ರೋ ಅವರನ್ನೇ ಕೇಳಿ,ರಾಜಣ್ಣ ಅವರ ವಿಚಾರ ಮಾತನಾಡಿದವರು “ಯಾರು…? ಯತ್ನಾಳ್ ರಾಜಣ್ಣ ಹೆಸರೇಳಿದ್ದಕ್ಕೆ ರಾಜಣ್ಣ ಹೇಳಿದ್ದಾರೆ ಅಷ್ಟೇ.
ಗೃಹ ಸಚಿವರು ತನಿಖೆ ಮಾಡ್ತೀವಿ ಅಂತ ಹೇಳಿದ ಮೇಲೆ ಮುಗೀತು. ತನಿಖೆಯಾಗುವವರೆಗೂ ಕಾಯಬೇಕಲ್ವಾ, ಸುಮ್ನೆ ಏಕೆ ಗಲಾಟೆ ಮಾಡೋದು, ಸರ್ಕಾರ ಚೆನ್ನಾಗಿದೆ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ರಾಜ್ಯದಲ್ಲಿ ಜನ ಬಿ ಜೆ ಪಿ ಸಂಖ್ಯೆ ಕಡಿಮೆ ಮಾಡಿದ್ದಾರೆ. ಸದನದಲ್ಲಿ ಅವರದ್ದು ಬರೀ ಹಿಟ್ ಅಂಡ್ ರನ್ ಅಷ್ಟೇ ಎಂದು ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.

ಮೆಸ್ಕಾಂ ಇಂಜಿನಿಯರ್ ಮೇಲೆ ಗರಂ ಆದ ಸಚಿವ ಜಾರ್ಜ್ !!
ಉಸ್ತುವಾರಿ ಸಚಿವ ಕೆ. ಜೆ ಜಾರ್ಜ್‌ ಚಿಕ್ಕಮಗಳೂರು ಪ್ರವಾಸದ ವೇಳೆ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಪವರ್ ಕಟ್ ಆಗುತ್ತಿರುವ ಕುರಿತು ರೈತರು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮೆಸ್ಕಾಂ ಇಂಜಿನಿಯ‌ರ್ ಮಾರುತಿ ವಿರುದ್ದ ಗರಂ ಆದ ಉಸ್ತುವಾರಿ ಸಚಿವ ಸಚಿವ ಜಾರ್ಜ್ ಯಾಕೆ ಪವರ್ ಕಟ್ ಮಾಡುತ್ತಿದ್ದೀರಾ? ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಕ.ರ.ವೇ ಇಂದ ಮನವಿ ಪತ್ರ ಸಲ್ಲಿಕೆ!

ತೀರ್ಥಹಳ್ಳಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಕ.ರ.ವೇ ಇಂದ ಮನವಿ ಪತ್ರ ಸಲ್ಲಿಕೆ!
– ತಹಶೀಲ್ದಾರ್ ರವರಿಗೆ ಹಾಗೂ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗೆ ಮತ್ತು ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಕೆ
– ಆಂಗ್ಲ ಭಾಷೆಯ ನಾಮಫಲಕ ಕೂಡಲೆ ತೆರವುಗೊಳಿಸದಿದ್ದಲ್ಲಿ ತೀರ್ಥಹಳ್ಳಿ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ!

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ಅಂಗಡಿ,ಕಛೇರಿ, ಬ್ಯಾಂಕ್ ಹಾಗೂ ಅಂಗ್ಲ ಮಾದ್ಯಮ ಶಾಲೆಗಳ ಬ್ಯಾನರ್‌ಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ತಹಶೀಲ್ದಾರ್ ರವರಿಗೆ ಹಾಗೂ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗೆ ಮತ್ತು ಅಧ್ಯಕ್ಷರಿಗೆ ಮಾರ್ಚ್ 24ರಂದು ಮನವಿ ಪತ್ರ ಸಲ್ಲಿಸಿದರು.

ಸರ್ಕಾರದ ಆದೇಶದಂತೆ ಶೇಕಡ 60ರಷ್ಟು ಭಾಗ ಕನ್ನಡದಲ್ಲಿ ಇರುವಂತೆ ತಹಶೀಲ್ದಾರವರು ತಾಲ್ಲೂಕಿನ ಎಲ್ಲಾ ಸರ್ಕಾರಿ ಕಛೇರಿಗಳು ಅಂಗಡಿ ಮುಂಗ್ಗಟ್ಟುಗಳಿಗೆ, ಬ್ಯಾನರ್‌ಗಳಿಗೆ ಹಾಗೂ ಬ್ಯಾಂಕ್‌ಗಳಿಗೆ ಸೂಕ್ತ ಆದೇಶ ನೀಡಲು ಕೋರಿದೆ. ಆಂಗ್ಲ ಭಾಷೆಯ ನಾಮಫಲಕಗಳನ್ನು ಅಳವಡಿಸಿರುವವರು ಕೂಡಲೆ ನಾಮಫಲಕವನ್ನು ತೆರವುಗೊಳಿಸದಿದ್ದಲ್ಲಿ ತೀರ್ಥಹಳ್ಳಿ ತಾಲ್ಲೂಕು ದಂಡಾಧಿಕಾರಿಗಳ ಕಛೇರಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಂದು ಮನವಿ ಪತ್ರದ ಮೂಲಕ ಹೇಳಿದ್ದಾರೆ.
ತಾಲ್ಲೂಕು ಕ.ರ.ವೇ ಅಧ್ಯಕ್ಷ ಸುರೇಂದ್ರ,ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆರ್ ವೆಂಕಟೇಶ್ ಹೆಗ್ಡೆ,ಜ್ಯೋತಿ ದಿಲೀಪ್, ನಗರ ಅಧ್ಯಕ್ಷ ವಿಜಯ ಪದ್ಮನಾಭ, ನಗರ ಘಟಕ ಅಧ್ಯಕ್ಷ ರವಿ ಎಸ್.ಎನ್, ಯುವ ಘಟಕ ಅಧ್ಯಕ್ಷ ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ವಿಕ್ರಂಶೆಟ್ಟಿ, ಅರ್ಜುನ್, ಡಾಕಮ್ಮ, ಲಕ್ಷ್ಮೀದೇವಿ, ರೇಖಾ, ಪ್ರತಿಮಾ ಎಸ್.ವಿ, ಸುರೇಶ್ ಉಪಸ್ಥಿತರಿದ್ದರು.

ಸಲ್ಲಿಸಲಾದ ಮನವಿ ಪತ್ರದಲ್ಲಿ ಹೀಗಿದೆ :
ಕರ್ನಾಟಕದಲ್ಲಿ ನೆಲೆಸಿರುವ ಪತ್ರಿಯೊಬ್ಬರು ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕು.ಕರ್ನಾಟಕದಲ್ಲಿ ನೆಲೆಸಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳದೇ ಆಂಗ್ಲ ಭಾಷೆಯಲ್ಲಿ ತಮ್ಮ ಅಂಗಡಿ,ಕಛೇರಿಗಳು ಬ್ಯಾಂಕ್ ಗಳು,ಎಲ್ಲಾಆಂಗ್ಲ ಮಾದ್ಯಮ ಶಾಲೆಗಳಲ್ಲಿ ಮತ್ತು ಬ್ಯಾನರ್‌ಗಳಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸುವುದು ಸಹಿಸಲು ಸಾಧ್ಯವಿಲ್ಲ ಆದ್ದರಿಂದ ಸರ್ಕಾರದ ಆದೇಶದಂತೆ ಶೇಕಡ 60ರಷ್ಟು ಭಾಗ ಕನ್ನಡದಲ್ಲಿ ಇರುವಂತೆ ತಹಶೀಲ್ದಾರವರು ತಾಲ್ಲೂಕಿನ ಎಲ್ಲಾ ಸರ್ಕಾರಿ ಕಛೇರಿಗಳು ಅಂಗಡಿ ಮುಂಗ್ಗಟ್ಟುಳಿಗೆ ಹಾಗೂ ಬ್ಯಾನರ್‌ಗಳಿಗೆ ಬ್ಯಾಂಕ್‌ಗಳಿಗೆ ಸೂಕ್ತ ಆದೇಶ ನೀಡಲು ಕೋರಿದೆ. ಆಂಗ್ಲ ಭಾಷೆಯ ನಾಮಫಲಕಗಳನ್ನು ಅಳವಡಿಸಿರುವವರು ಕೂಡಲೆ ನಾಮಫಲಕವನ್ನು ತೆರವುಗೊಳಿಸದಿದ್ದಲ್ಲಿ ತೀರ್ಥಹಳ್ಳಿ ತಾಲ್ಲೂಕು ದಂಡಾಧಿಕಾರಿಗಳ ಕಛೇರಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

Categories
ಉಡುಪಿ

ಕೊಲ್ಲೂರು ಮೂಕಾಂಬಿಕಾ ರಥ ವೈಭವ!

ಕೊಲ್ಲೂರು ಮೂಕಾಂಬಿಕಾ ರಥ ವೈಭವ!

– ವಾರ್ಷಿಕ ಜಾತ್ರೆಯ ತೇರಿನ ರಂಗು!
– ದೇಶ-ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು!

NAMMUR EXPRESS NEWS
ಉಡುಪಿ: ಇತಿಹಾಸ ಪ್ರಸಿದ್ಧ ಕೊಲ್ಲೂರು
ಶ್ರೀಮೂಕಾಂಬಿಕಾ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಮಾ. 22ರಂದು ವೈಭವದಿಂದ ಸಂಪನ್ನಗೊಂಡಿತು. ಶ್ರೀದೇವಿಯ ವಿಜೃಂಭಣೆಯ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ದೇಗುಲದ ಪ್ರಧಾನ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ 12.30 ರ ವೇಳೆಗೆ ಜೋಡಿ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡು ಬಲಿ ಸೇವೆಗಾಗಿ ಸೌಪರ್ಣಿಕ ನದಿ ತೀರಕ್ಕೆ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯ ಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯಿತು. ಸಂಜೆ 5 ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ಬ್ರಹ್ಮರಥ ಕೊಂಡೊಯ್ಯಲಾಯಿತು. ವಾರ್ಷಿಕ ಜಾತ್ರೆಯ ತೇರಿನ ವೈಭವಕ್ಕೆ ದೇಶ-ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ಸಂಜೆ ನಡೆದ ವೈಭವದ ರಥೋತ್ಸವದಲ್ಲಿ ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ದೇವಸ್ಥಾನದ ಹೊರ ಹಾಗೂ ಒಳಾವರಣವನ್ನು ಹೂವು ಹಾಗೂ ಹಣ್ಣು ಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

Categories
ಮಂಗಳೂರು

ವಿಟಿಯ ವ್ಯಾಪ್ತಿಯಲ್ಲೇ ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್!

ವಿಟಿಯ ವ್ಯಾಪ್ತಿಯಲ್ಲೇ ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್!

* ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪಿನಲ್ಲಿ ಮಂಗಳೂರು ಸಹ್ಯಾದ್ರಿಯೇ ಮೇಲುಗೈ!
– ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು!

NAMMUR EXPRESS NEWS
ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ 201 ಕಾಲೇಜು 4 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ.
ಈ ಬಾರಿ ಮಾರ್ಚ್ 15 ರಿಂದ 18ರವರೆಗೆ ಶಿವಮೊಗ್ಗದ ಜೆಎನ್‌ಎನ್‌ಸಿಇಯಲ್ಲಿ ನಡೆದ ವಿಟಿಯು 26ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್ ನಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ ಮಂಗಳೂರು ಹೊಸ ಚರಿತ್ರೆಯನ್ನು ಬರೆದಿದೆ.
ಈ ವಿಶ್ವವಿದ್ಯಾಲಯದ ಅಡಿಯಲ್ಲಿ ಶಾಸಕರಾದ ಮಂಜುನಾಥ ಭಂಡಾರಿಯರವರ ನೇತೃತ್ವದಲ್ಲಿ 2007- 2008 ರಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ ಕಾಲೇಜು ಮಂಗಳೂರಿನಲ್ಲಿ ಸ್ಥಾಪನೆಯಾಗಿರುತ್ತದೆ.
2008-2009ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರಂಭಿಸಿದ್ದು, ಅಂದಿನಿಂದ ಇಂದಿನವರೆಗೆ ಸುಮಾರು 16 ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 8 ಭಾರಿ ಓವರ್ ಆಲ್ ಚಾಂಪಿಯನ್ 5 ರನ್ನರ್ಸ್ ಹಾಗೂ 3ನೇ ಬಾರಿ 4 ನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಾಂಪಿಯನಿನ ಚಾಂಪಿಯನ್ ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು!

– ಇಷ್ಟೊಂದು ಬಾರಿ ಚಾಂಪಿಯನ್ ಆದ ಬೇರೊಂದು ಕಾಲೇಜು ವಿಶ್ವವಿದ್ಯಾಲಯ ಇತಿಹಾಸದಲ್ಲೇ ಇಲ್ಲ!

ಪುರುಷರು ವಾಲಿಬಾಲ್ – 7 ಬಾರಿ, ಮಹಿಳೆಯರು ವಾಲಿಬಾಲ್ 8 ಬಾರಿ, ಥ್ರೋಬಾಲ್ – 9 ಬಾರಿ ರಾಜ್ಯ 4 ಬಾರಿ, ಮಹಿಳೆಯರು ಕರಾಟೆ ಚಾಂಪಿಯನ್‌ಗಳು-1 ಬಾರಿ, ಭಾರ ಎತ್ತುವುದು – ಮಹಿಳೆಯರು 5 ಬಾರಿ ಪುರುಷರು 4 ಬಾರಿ, ಮಹಿಳೆಯರು ಪವರ್‌ಲಿಫ್ಟಿಂಗ್ 4 ಬಾರಿ ಪುರುಷರು 2 ಬಾರಿ, ಅತ್ಯುತ್ತಮ ಮೈಕಟ್ಟು – 1 ಬಾರಿ, ಈಜು ಓಟಗಾರರು 1 ಬಾರಿ, ಕುಸ್ತಿ – 5 ಪದಕಗಳು, ಚೆಸ್, ಕ್ರಿಕೆಟ್ ಹಾಕಿ,ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ 4 ಬಾರಿ, ಪ್ರತೀ ವರ್ಷ 10-14 ವಿದ್ಯಾರ್ಥಿಗಳು ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

– ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು!

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ WUSHU- ಬೆಳ್ಳಿ ಪದಕ ಹಾಗೂ ಹಲವಾರು ಪದಕಗಳನ್ನು ಪಡೆದಿರುತ್ತಾರೆ.
ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂಬುದಾಗಿ ಹೆಸರು ಪಡೆದಿರುವ ಸಹ್ಯಾದ್ರಿ ಕಾಲೇಜು ವಿದ್ಯಾಲಯದ ಮಟ್ಟದಲ್ಲಿ ಹಲವಾರು ರ‍್ಯಾಂಕ್‌ ಗಳಿಸಿರುತ್ತದೆ ಅಲ್ಲದೆ ಪ್ಲೇಸ್ಮೆಂಟ್ ಅಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುತ್ತದೆ. ಅತೀ ಹೆಚ್ಚು ಸಂಬಳ 48 ಲಕ್ಷ ಅದರ ವಿದ್ಯಾರ್ಥಿಗಳಿಗೆ ದೊರಕಿರುವುದು ಕಾಲೇಜಿನ ಗುಣಮಟ್ಟವನ್ನು ತೋರಿಸುತ್ತದೆ.

– ಹಲವರ ಮಾರ್ಗದರ್ಶನ ಈ ಸಾಧನೆಗೆ ಸಾಥ್!

ಶಿಕ್ಷಣದೊಂದಿಗೆ ಕ್ರೀಡಾ, ಕೌಶಲ್ಯವನ್ನು ಕೊಡುವುದು ಕಾಲೇಜಿನ ಮುಖ್ಯ ನಿರ್ಣಯಗಳಲ್ಲಿ ಒಂದಾಗಿರುತ್ತದೆ. ಈ ಕಾಲೇಜಿನ ಅಭಿವೃದ್ಧಿಗೆ ದುಡಿಯುತ್ತಿರುವ ಕಾಲೇಜಿನ ಚೇರ್ಮನ್ ಹಾಗೂ ಶಾಸಕರಾದ ಮಂಜುನಾಥ ಭಂಡಾರಿ ಅವರು ಹಾಗೂ ಅವರೊಂದಿಗೆ ಎಲ್ಲಾ ಟ್ರಸ್ಟ್ ಗಳು , ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗ ಮುಖ್ಯವಾಗಿ ಈ ಕೀರ್ತಿಯನ್ನು ಗಳಿಸಲು ಮಾರ್ಗದರ್ಶನ ನೀಡುತ್ತಿರುವ ದೈಹಿಕ ನಿರ್ದೇಶಕರಾದ ಕರ್ಣ ಕುಮಾರ್ ಕೆ.ಎಸ್., ರಮ್ಯಾ ಪಿ. ಹಾಗೂ ಇದಕ್ಕಿಂತ ಹಿಂದೆ ಮಾರ್ಗದರ್ಶನ ನೀಡಿದಂತಹ ನಿತೀಶ ರೊಡ್ರಿಗಸ್ ಮತ್ತು ಸದಾನಂದ ಗೌಡ ಇವರ ಮಾರ್ಗದರ್ಶನವಿದ್ದು ಈ ಸಾಧನೆಯಲ್ಲಿ ಇವರೆಲ್ಲರ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ಬೇಕಾ ಬಿಟ್ಟಿ ವಾಹನ ನಿಲ್ಸಿದ್ರೆ ದಂಡ ಗ್ಯಾರಂಟಿ!

ಬೇಕಾ ಬಿಟ್ಟಿ ವಾಹನ ನಿಲ್ಸಿದ್ರೆ ದಂಡ ಗ್ಯಾರಂಟಿ!
– ತೀರ್ಥಹಳ್ಳಿ ಪಟ್ಟಣದಲ್ಲಿ ನೋ ಪಾರ್ಕಿಂಗಲ್ಲಿ ವಾಹನ ನಿಲುಗಡೆಗೆ ಬ್ರೇಕ್
– ಬೇಕಾಬಿಟ್ಟಿ ನಿಲ್ಲಿಸಿದ ವಾಹನಗಳಿಗೆ ಲಾಕ್ ಹಾಕಿದ ಪೊಲೀಸರು

ಯೋಗ ಶಿಕ್ಷಣ ಸಮಿತಿಯಿಂದ ಹರಿಹರಪುರ ಮಠದಲ್ಲಿ ಕರಸೇವೆ
– ಸಾಮಾಜಿಕ, ಧಾರ್ಮಿಕ ಸೇವೆ ಮೂಲಕ ಗಮನ ಸೆಳೆದ ತಂಡ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳು ಹೆಚ್ಚಾಗುತ್ತಲೇ ಇದೆ. ಎಲ್ಲರ ಮನೆಯಲ್ಲೂ ಕೂಡ ಕಾರು, ಬೈಕ್ ಎರಡೆರಡು ಇದೆ. ಆದರೆ ತೀರ್ಥಹಳ್ಳಿ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸೋಮವಾರ ಬಂದರೆ ಕಷ್ಟ ಕಷ್ಟ!.
ಸೋಮವಾರ ಪಟ್ಟಣದಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಕಾರುಗಳನ್ನು ಬೈಕುಗಳನ್ನು ಬೇಕಾಬಿಟ್ಟಿ ನಿಲ್ಲಿಸಿದ್ದು ಪೊಲೀಸ್ ಇಲಾಖೆ ಅಲರ್ಟ್ ಆಗಿ ಕ್ರಮ ತೆಗೆದುಕೊಳ್ಳುತ್ತಿದೆ. ನೋ ಪಾರ್ಕಿಂಗ್ ಜಾಗದಲ್ಲಿ ಬೇಕಾಬಿಟ್ಟಿ ವಾಹನಗಳನ್ನ ನಿಲ್ಲಿಸಿದ್ದೆ ಆದರೆ ಲಾಕ್ ಹಾಕಿ ದಂಡ ವಿಧಿಸುತ್ತಿರುವ ತೀರ್ಥಹಳ್ಳಿ ಪೊಲೀಸ್ ಇಲಾಖೆ ನೂತನ ಡಿಎಸ್ಪಿ ಅರವಿಂದ್ ಹಾಗೂ ನೂತನ ಸಿಪಿಐ ಬೇಗ್ ಇಮ್ರಾನ್ ಅವರ ಮಾರ್ಗದರ್ಶನದಲ್ಲಿ ದಂಡ ಹಾಕುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಯೋಗ ಶಿಕ್ಷಣ ಸಮಿತಿ ತೀರ್ಥಹಳ್ಳಿ ವತಿಯಿಂದ ಹರಿಹರಪುರ ಮಠದಲ್ಲಿ ಕರಸೇವೆ

ತೀರ್ಥಹಳ್ಳಿ: ಶ್ರೀ ಮಠ ಹರಿಹರಪುರದ ವಸತಿ ಗೃಹದ ಮೇಲ್ಛಾವಣಿಗೆ ಹೆಂಚುಗಳನ್ನು ಜೋಡಿಸುವ ಕಾರ್ಯ ಯೋಗ ಶಿಕ್ಷಣ ಸಮಿತಿಯ ಸದಸ್ಯರಿಂದ ಕರಸೇವೆಯ ಮೂಲಕ ಯಶಸ್ವಿಯಾಗಿ ನಡೆಯಿತು.
ಸುಮಾರು 5500 ಹೆಂಚುಗಳನ್ನು 3 ಮಹಡಿಯ ವಸತಿ ಗೃಹದ ಮೇಲ್ಗಡೆ ಸಾಗಿಸುವ ಕಾರ್ಯ ಕೇವಲ 2 ಘಂಟೆಗಳಲ್ಲಿ ಸಾಧ್ಯವಾಯಿತು. ಸುಮಾರು 50 ಜನ ಯೋಗ ಸಮಿತಿಯ ಸದಸ್ಯರು ಬಹಳ ಲವಲವಿಕೆಯಿಂದ ಅತ್ಯಂತ ಶಿಸ್ತುಬದ್ಧವಾಗಿ ಈ ಕರಸೇವೆಯಲ್ಲಿ ಪಾಲ್ಗೊಂಡಿದ್ದರು. ಕರಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಯೋಗ ಬಂಧುಗಳಿಗೂ ಶ್ರೀ ಮಠದ ವ್ಯವಸ್ಥಾಪಕ ಮಂಡಳಿಯವರು ಧನ್ಯವಾದಗಳನ್ನು ಅರ್ಪಿಸಿದರು.

Categories
ರಾಜ್ಯ

ನಮ್ಮೂರ್ ಎಕ್ಸ್‌ಪ್ರೆಸ್ ಟಾಪ್ ನ್ಯೂಸ್ !!

ನಮ್ಮೂರ್ ಎಕ್ಸ್‌ಪ್ರೆಸ್ ಟಾಪ್ ನ್ಯೂಸ್ !!

* ಹನಿಟ್ರ್ಯಾಪ್‌ ವಿಚಾರ -ಸುಪ್ರಿಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ
* ಭ್ರಷ್ಟ ವಜ್ರೋದ್ಯಮಿ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲಾನ್‌
* ಲಾಂಗ್ ಹಿಡಿದು ಫೋಸ್ ಕೊಟ್ಟ ಬಿಗ್‌ಬಾಸ್‌ ಸ್ಪರ್ಧಿಗಳ ವಿರುದ್ಧ ಎಫ್.ಐ.ಆರ್

NAMMUR EXPRESS NEWS
* ಹನಿಟ್ರ್ಯಾಪ್‌ ವಿಚಾರ -ಸುಪ್ರಿಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ನವದೆಹಲಿ : ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿ ಟ್ರ್ಯಾಪಿಂಗ್ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎದುರು ಅರ್ಜಿದಾರರು ಮನವಿ ಮಾಡಿದ್ದಾರೆ.
ಹನಿ-ಟ್ರ್ಯಾಪ್ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರನ್ನು ಸಿಲುಕಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ PIL ಅನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದೆದುರು ತರಲಾಗಿದೆ. ವಿಷಯವನ್ನು ಇಂದು ಅಥವಾ ನಾಳೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಿಜೆಐ ತಿಳಿಸಿದ್ದಾರೆ.

* ಭ್ರಷ್ಟ ವಜ್ರೋದ್ಯಮಿ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲಾನ್‌!
ಮುಂಬೈ: ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ಸಾಲ ಹಗರಣದಲ್ಲಿ ಪ್ರಮುಖ ಆರೋಪಿಯಾದ ದೇಶ ಭ್ರಷ್ಟ ವಜ್ಯೋದ್ಯಮಿ ಮೆಹುಲ್ ಚೋಕ್ಸಿ ಬೆಳ್ಳಿಯಂನ್ ಆಂಟ್ವೆರ್ಪ್‌ನಲ್ಲಿ ಪತ್ನಿ ಪ್ರೀತಿ ಚೋಕ್ಸಿಯೊಂದಿಗೆ ವಾಸಿಸುತ್ತಿದ್ದಾರೆ.
ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತೀಯ ಅಧಿಕಾರಿಗಳು ಬೆಲ್ಲಿಯಂ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

* ಲಾಂಗ್ ಹಿಡಿದು ಫೋಸ್ ಕೊಟ್ಟ ಬಿಗ್‌ಬಾಸ್‌ ಸ್ಪರ್ಧಿಗಳ ವಿರುದ್ಧ ಎಫ್.ಐ.ಆರ್
ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಸ್ವರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌.ಐ.ಆರ್ ದಾಖಲಾಗಿದೆ.
ರಜತ್ ಜೊತೆ ನಟ ವಿನಯ್ ಗೌಡ ಒಂದು ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಾರೆ.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳ ವಿರುದ್ಧ ಎಫ್‌.ಐ.ಆರ್ ದಾಖಲಾಗಿದೆ.
ರಜತ್ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ್ರು. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌.ಐ.ಆರ್ ದಾಖಲಾಗಿದೆ.