Categories
ಕಾರ್ಕಳ

ಶ್ರೀ ಮೂಡು ಗಣಪತಿ ಸನ್ನಿಧಿಯಲ್ಲಿ ನೆರವೇರಿತು ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ!

ಶ್ರೀ ಮೂಡು ಗಣಪತಿ ಸನ್ನಿಧಿಯಲ್ಲಿ ನೆರವೇರಿತು ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ!

– ಸಿನಿಮಾ ಮೂಲಕ ವಿಭ ಫಿಲ್ಮ್ಸ್ಅವರ ಹೊಸ ಹೆಜ್ಜೆ!
– ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸುನಾದ್‍ ಗೌತಮ್ ಅವರ ಉಪಸ್ಥಿತಿ

NAMMUR EXPRESS NEWS
ಹೊಸ ಸಿನಿಮಾ ಮೂಲಕ ವಿಭ ಫಿಲ್ಮ್ಸ್ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಯುವ ನಟರು ಈ ಚಿತ್ರಕ್ಕೆ ನಟನಾಗಿ ಬಣ್ಣ ಹಚ್ಚುವುದರ ಜೊತೆಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿ ಪ್ರವೀಣ್ ಜಾರ್ಕಳ ಅವರು ಹೊಸ ಪಯಣ ಬೆಳೆಸಿದ್ದಾರೆ.
ಈ ಚಿತ್ರಕ್ಕೆ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಜೀ ವಾಹಿನಿಯ ‘ಜೊತೆ ಜೊತೆಯಲಿ ಧಾರಾವಾಹಿ’ ‘ಜೀಕುಟುಂಬ ಅವಾಡ್ರ್ಸ್-2019’, ಕಲರ್ಸ್ ಕನ್ನಡ ವಾಹಿನಿಯ ‘ನನ್ನರಸಿ ರಾಧೆ’, ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ ‘ಕಿಕ್‍ ಡ್ಯಾನ್ಸ್ ಶೋ’, ‘ಆದರ್ಶ ದಂಪತಿಗಳು’ ಮತ್ತು ಸುವರ್ಣ ವಾಹಿನಿಯ ‘ಭರ್ಜರಿ ಕಾಮಿಡಿ ಶೋ’ಗಳಿಗೆ ಸಂಗೀತ ಸಂಯೋಜಿಸಿ ನಿರ್ದೇಶಿಸಿರುವಂತಹ ಸುನಾದ್‍ ಗೌತಮ್ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಲಿದ್ದು, ಛಾಯಾಗ್ರಹಣ ನಿರ್ದೇಶಕರಾಗಿ ಮಿಂಚಲಿದ್ದಾರೆ.
ಈ ಪ್ರಯುಕ್ತ ಮೇ 1ರಂದು ( ಇಂದು) ಶ್ರೀ ಮೂಡು ಗಣಪತಿ ದೇವಸ್ಥಾನ ಬಂಡಿ ಮಠದಲ್ಲಿ ಬೆಳಿಗ್ಗೆ 9:30ಕ್ಕೆ ಸ್ಕ್ರಿಪ್ಟ್ ಪೂಜೆ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಾದ ಅಶ್ವಥ್ ಎಸ್. ಎಲ್, ಸಂಗೀತ ನಿರ್ದೇಶಕರಾದ ಸುನಾದ್‍ ಗೌತಮ್, ನಿರ್ದೇಶಕರಾದ ಪ್ರವೀಣ್ ಜಾರ್ಕಳ, ಸಹ ನಿರ್ಮಾಪಕರಾದ ಶ್ರೀನಿಧಿ ಪ್ರೊಡಕ್ಷನ್ ಹಾಗೂ ವಿನಾಯಕ ಕುಲಾಲ್ ಮತ್ತು ಪ್ರವೀಣ್. ಜಿ ಇವರು ಉಪಸ್ಥಿತರಿದ್ದರು.

Categories
ಶೃಂಗೇರಿ

ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇವರಿಂದ ಕಾರ್ಮಿಕ ದಿನ ಆಚರಣೆ

ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇವರಿಂದ ಕಾರ್ಮಿಕ ದಿನ ಆಚರಣೆ

* ಕಾರ್ಮಿಕ ಮಿತ್ರ ಬಳಗದ ಅಜೀವ ಸದಸ್ಯತ್ವಕ್ಕೆ ಚಾಲನೆ
* ಎಲ್ಲಾ ವರ್ಗದ ಕಾರ್ಮಿಕರು ಅಜೀವ ಸದಸ್ಯತ್ವ ನೋಂದಾಯಿಸಿ

NAMMMUR EXPRESS NEWS
ಶೃಂಗೇರಿ: ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇವರ ವತಿಯಿಂದ ಶೃಂಗೇರಿಯ ಕನ್ನಡ ಭವನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಕಾರ್ಮಿಕರ ಅಜೀವ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು.
ಸಾಮಾಜಿಕ ವ್ಯವಸ್ಥೆಯಲ್ಲಿ ರೈತರಂತೆಯೇ ಕಾರ್ಮಿಕರ ಪಾತ್ರವೂ ಅತ್ಯಂತ ಹಿರಿದಾಗಿದೆ ಎಂದು ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಪೂಜಾರಿ ತಿಳಿಸಿದ್ದಾರೆ ಅವರು ಗುರುವಾರ ಬೆಳಿಗ್ಗೆ ಶೃಂಗೇರಿ ಕನ್ನಡ ಭವನದಲ್ಲಿ ಕಾರ್ಮಿಕ ಮಿತ್ರ ಬಳಗ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಬಳಗದ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಿ, ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶೃಂಗೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಕಾರ್ಮಿಕರ ಹಿತವನ್ನು ಕಾಯಲು ಕಾರ್ಮಿಕ ಮಿತ್ರ ಬಳಗ ಶ್ರಮಿಸಬೇಕಿದೆ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ತಾವು ಬೆಳೆಯುವ ಮೂಲಕ ಸಂಘವನ್ನು ಬಲಪಡಿಸಬೇಕಿದೆ ಎಂದರು ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ಶೂನ್ಯ ರಮೇಶ್ ಮಾತನಾಡಿ ಈ ಸಂಘವು ಕೇವಲ ಕಟ್ಟಡ ಕಾರ್ಮಿಕರಿಗೆ ಸೀಮಿತವಾಗಿರದೆ ಎಲ್ಲಾ ವರ್ಗದ ಕಾರ್ಮಿಕರನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಲಿದೆ ಎಂದರು.
ಮಿತ್ರ ಬಳಗದ ಉಪಾಧ್ಯಕ್ಷರುಗಳಾದ ಪ್ರಶಾಂತ್ ಮೆಣಸೆ, ಗ್ರೇಬಿಯಲ್ ಡಿಸೋಜ, ಕಾರ್ಯದರ್ಶಿ ಆನಂದ ಕಾಮ್ಲೆ ಮತ್ತಿತರರು ಹಾಜರಿದ್ದರು

Categories
ಕರಾವಳಿ

ಹೆಬ್ರಿ: ಗಂಡನನ್ನೇ ಕತ್ತಿಯಲ್ಲಿ ಕಡಿದ ಹೆಂಡತಿ!

ಕರಾವಳಿ ಟಾಪ್ ನ್ಯೂಸ್!

ಹೆಬ್ರಿ: ಗಂಡನನ್ನೇ ಕತ್ತಿಯಲ್ಲಿ ಕಡಿದ ಹೆಂಡತಿ!
– ಗಂಡ ಹೆಂಡತಿ ಕುಡಿತದ ಜಗಳ ಕೊಲೆಯಲ್ಲಿ ಅಂತ್ಯ

– ಕಾಸರಗೋಡು: ರಿಕ್ಷಾ, ಕಾರು ಪರಸ್ಪರ ಢಿಕ್ಕಿ, ಚಾಲಕ ಸ್ಪಾಟ್ ಔಟ್
– ಶಿರ್ವ: ಸಿಗರೇಟಿಗೆ ಗಾಂಜಾ ಸೇರಿಸಿ ಸೇದುತ್ತಿದ್ದ ಯುವಕರು ಅರೆಸ್ಟ್!
– ಪುತ್ತೂರು: ಧಾರಾಕಾರ ಮಳೆ, ವಿದ್ಯುತ್ ಶಾಕ್ ಹೊಡೆದು ಮಹಿಳೆ ಮೃತ್ಯು

NAMMUR EXPRESS NEWS
ಹೆಬ್ರಿ: ಗಂಡ ಹೆಂಡತಿ ಕುಡಿತದ ಜಗಳ ಗಂಡನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಏ. 30ರಂದು ಹೆಬ್ರಿಯ ನಾಲ್ಕೂರಿನ ಮುದ್ದೂರು ಪೇಟೆ‌ ಸಮೀಪ ಮನೆಯಲ್ಲಿ ಸಂಭವಿಸಿದೆ.
ಕೊಲೆಯಾದ ವ್ಯಕ್ತಿಯನ್ನು ಗಣಪತಿ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ವಿಪರೀತ ಕುಡಿತದ ಚಟ ಹೊಂದಿದ್ದು ಪ್ರತಿನಿತ್ಯ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದರು.
ಅದೇ ರೀತಿ ಮೇ. 1ರಂದು ಮಧ್ಯಾಹ್ನ ಸುಮಾರು‌ 2.30 ಗಂಟೆ ವೇಳೆಗೆ ಕುಡಿದು ಹೆಂಡತಿಯೊಂದಿಗೆ ಜಗಳವಾಡಿದ್ದು, ಜಗಳ ಅತಿರೇಕವಾಗಿ ಹೆಂಡತಿ ಕತ್ತಿಯಲ್ಲಿ ಕಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ ಗಂಡ ಗಣಪತಿ ನಾಯ್ಕ್ ಸಾವನಪ್ಪಿದ್ದಾರೆ ಎಂದು ತಿಳಿದು‌ ಬಂದಿದೆ.
ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.‌ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗ ಬೇಕಿದೆ.

– ಕಾಸರಗೋಡು: ರಿಕ್ಷಾ, ಕಾರು ಪರಸ್ಪರ ಢಿಕ್ಕಿ, ಆಟೋ ಚಾಲಕ ಸ್ಪಾಟ್ ಔಟ್

ಕಾಸರಗೋಡು: ಆಟೋ ರಿಕ್ಷಾ ಮತ್ತು ಕಾರು ಪರಸ್ಪರ ಢಿಕ್ಕಿ ಹೊಡೆದು ಅಪಘಾತದ ರಭಸಕ್ಕೆ ರಿಕ್ಷಾ ಚಾಲಕನೋರ್ವ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 99ರ ಕಾಸರಗೋಡಿನ ಉಪ್ಪಳ ಗೇಟ್ ಸಮೀಪ ನಡೆದಿದೆ.
ಕಾಂಞಂಗಾಡ್ ನ ರಿಕ್ಷಾ ಚಾಲಕ ಮೋಹನ್ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಮತ್ತು ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಶಿರ್ವ: ಸಿಗರೇಟಿಗೆ ಗಾಂಜಾ ಸೇರಿಸಿ ಸೇದುತ್ತಿದ್ದ ಯುವಕರು ಅರೆಸ್ಟ್!

ಶಿರ್ವ: ಮಾದಕ ವಸ್ತುವಾದ ಗಾಂಜಾವನ್ನು ಸಿಗರೇಟ್ ನಲ್ಲಿ ಸೇರಿಸಿ ಸೇದುತ್ತಿದ್ದ ಯುವಕರನ್ನು ಶಿರ್ವದ ಬಂಟಕಲ್ಲು ಬಸ್ ನಿಲ್ದಾಣದ ಬಳಿ ಪತ್ತೆ ಹಚ್ಚಿದ ಘಟನೆ ನಡೆದಿದೆ.
ಶಿವಪ್ರಸಾದ್ ಮತ್ತು ಆಲ್ವಿನ್ ಶರೂನ್ ಡಿ ಅಲ್ಮೇಡ ಅವರನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಮರಬದ ಅವರು ವಶಕ್ಕೆ ಪಡೆದಿದ್ದಾರೆ.
ಗಾಂಜಾ ಸೇದುತ್ತಿದ್ದ ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಪುತ್ತೂರು: ಧಾರಾಕಾರ ಮಳೆ, ವಿದ್ಯುತ್ ಶಾಕ್ ಹೊಡೆದು ಮಹಿಳೆ ಮೃತ್ಯು!

ಪುತ್ತೂರು: ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು ಅನೇಕ ಕಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಮಹಿಳೆಯೋರ್ವರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ನಡೆದಿದೆ.
ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ ಮೃತ ದುರ್ದೈವಿ. ಏ. 30ರಂದು ಮಧ್ಯಾಹ್ನದ ವೇಳೆ ಮನೆಯ ಟೆರೇಸ್ ಮೇಲೆ ಹೋಗಿದ್ದ ಸಂದರ್ಭ ಇವರು ಪಂಪ್ ಗೆ ಅಳವಡಿಸಿದ್ದ ವಯರ್ ಮೇಲೆ ತಪ್ಪಿ ಕಾಲಿಟ್ಟಿದ್ದಾರೆ.
ಆ ಸಂದರ್ಭ ವಿದ್ಯುತ್ ಸ್ಪರ್ಶಿಸಿದ್ದು ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.‌ ಮೃತರು ಗಂಡ ಮತ್ತು ಮಕ್ಕಳನ್ನು ಅಗಲಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ರಾಮಚಂದ್ರಪುರ ಮಠದಲ್ಲಿ ಶ್ರೀನರಸಿಂಹ ಜಯಂತೀ ಮಹೋತ್ಸವ

ತೀರ್ಥಹಳ್ಳಿ ರಾಮಚಂದ್ರಪುರ ಮಠದಲ್ಲಿ ಶ್ರೀನರಸಿಂಹ ಜಯಂತೀ ಮಹೋತ್ಸವ
– ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ
– ಸರ್ವರಿಗೂ ಸ್ವಾಗತ ಕೋರಿದ ಮಠದ ಆಡಳಿತ

NAMMUR EXPRESS NEWS
ತೀರ್ಥಹಳ್ಳಿ: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ – ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠ ತೀರ್ಥಹಳ್ಳಿ ಶಾಖೆಯಲ್ಲಿ ಶ್ರೀನರಸಿಂಹ ಜಯಂತೀ ಮಹೋತ್ಸವ ಮೇ 10 ಹಾಗೂ 11ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ದಿವ್ಯ ಸಾನ್ನಿಧ್ಯದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರ ಮಠ ಇವರು ನೆರವೇರಿಸಲಿದ್ದಾರೆ.
ಶ್ರೀರಾಮಚಂದ್ರಾಪುರ ಮಠ, ರಥಬೀದಿ, ತೀರ್ಥಹಳ್ಳಿಯಲ್ಲಿ ವಿಶ್ವಾವಸು ಸಂವತ್ಸರದ ವೈಶಾಖ ಶುಕ್ಲ ಚತುರ್ದಶೀ ಭಾನುವಾರ 11.05.2025 ರಂದು ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಶ್ವಾವಸು ಸಂವತ್ಸರದ ವೈಶಾಖ ಶುಕ್ಲ ತ್ರಯೋದಶೀ ಶನಿವಾರ, ದಿನಾಂಕ- 10.05.2025, ಅಪರಾಹ್ಣ 3.30ಕ್ಕೆ ಪರಮಪೂಜ್ಯ ಶ್ರೀಸಂಸ್ಥಾನದವರ ಆಗಮನ, ಸಂಜೆ 6.30ಕ್ಕೆ ಶ್ರೀಪೂಜೆ ನೆರವೇರಲಿದೆ.
ವಿಶ್ವಾವಸು ಸಂವತ್ಸರದ ವೈಶಾಖ ಶುಕ್ಲ ಚತುರ್ದಶೀ ಭಾನುವಾರ, ದಿನಾಂಕ- 11.05.2025 ಬೆಳಗ್ಗೆ 7.00ರಿಂದ ಶ್ರೀದೇವತಾ ಪ್ರಾರ್ಥನೆ, ಶ್ರೀಗುರುವಂದನೆ, ಶ್ರೀಪುಣ್ಯಾಹ ವಾಚನ, ಶ್ರೀಲಕ್ಷ್ಮೀನರಸಿಂಹದೇವರಿಗೆ ಶ್ರೀಪವಮಾನ ಅಭಿಷೇಕ, ಕಲ್ಪೋಕ್ತ ಪೂಜೆ, ಶ್ರೀನರಸಿಂಹಹೋಮ, ಮಾತೆಯರಿಂದ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಬೆಳಗ್ಗೆ 10.00: ಶ್ರೀಪೂಜೆ ನೆರವೇರಲಿದೆ.
ಪೂರ್ವಾಹ್ಣ 11.00ಕ್ಕೆ ಶ್ರೀನರಸಿಂಹ ಹೋಮದ ಪೂರ್ಣಾಹುತಿ, ಭಕ್ತರು ನಡೆಸಿದ ಶ್ರೀಲಕ್ಷ್ಮೀನರಸಿಂಹಸ್ತೋತ್ರ ಸಪ್ತಾಹ ಪಠಣ ಮಂಗಲ
ಪೂರ್ವಾಹ್ಣ 11.30ಕ್ಕೆ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ.
ವಿವಿಧ ಸೇವಾ ವಿವರ: ಸರ್ವಸೇವೆ ₹5000/-, ಅನ್ನದಾನ ಸೇವೆ: ₹3000/-, ಶ್ರೀಲಕ್ಷ್ಮೀನರಸಿಂಹಹೋಮ, ಪವಮಾನ ಅಭಿಷೇಕ,ಕಲ್ಪೋಕ್ತ ಪೂಜೆ: ₹1500/-, ಪವಮಾನ ಅಭಿಷೇಕ: ₹500/-
ಪರಮಪೂಜ್ಯ ಶ್ರೀಸಂಸ್ಥಾನದವರ ಪರಮಾನುಗ್ರಹದೊಡನೆ ತೀರ್ಥಹಳ್ಳಿ ಶಾಖಾಮಠದಲ್ಲಿ ಬಹಳ ಕಾಲದ ಅನಂತರ ಶ್ರೀನರಸಿಂಹ ಜಯಂತಿಯನ್ನು ಮಹೋತ್ಸವವಾಗಿ ಆಚರಿಸಲಾಗುತ್ತಿದೆ. ತಾವು ಈ ಕಾರ್ಯಕ್ರಮದಲ್ಲಿ ತನು-ಮನ-ಧನಗಳೊಂದಿಗೆ ಭಾಗವಹಿಸಿ ಶ್ರೀಗುರುದೇವತಾನುಗ್ರಹಕ್ಕೆ ಪಾತ್ರರಾಗಲು ಸರ್ವರಿಗೂ ಆದರದ ಸ್ವಾಗತವನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕ್ರಿಯಾ ಸಮಿತಿ ಶ್ರೀರಾಮಚಂದ್ರಪುರ ಮಠ ತೀರ್ಥಹಳ್ಳಿ ಶಾಖೆ ಇವರು ಕೋರಿದ್ದಾರೆ.

Categories
ಮಂಗಳೂರು

ಕುಡುಪು ಗುಂಪು ಹತ್ಯೆ, ಇನ್‌ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು!

ಕುಡುಪು ಗುಂಪು ಹತ್ಯೆ, ಇನ್‌ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು!

– ಹಲ್ಲೆ ವೇಳೆ ಕರೆ ಮಾಡಿ ವಿಷಯ ತಿಳಿಸಿದರೂ ನಿರ್ಲಕ್ಷಿಸಿದ ಪೊಲೀಸರು
– ಬಂಧಿತರ ಸಂಖ್ಯೆ 23 ಕ್ಕೆ ಏರಿಕೆ!

NAMMUR EXPRESS NEWS
ಮಂಗಳೂರು: ನಗರ ಹೊರವಲಯದ ಕುಡುಪು ಎಂಬಲ್ಲಿ ಎ.27ರಂದು ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ.
ಎ.27ರಂದು ಕುಡುಪುವಿನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಮಯ ಓರ್ವ ಅಪರಿಚಿತ ವ್ಯಕ್ತಿಗೆ, ಆಟಗಾರರು ಮತ್ತು ಅಲ್ಲಿ ನರೆದಿದ್ದ ಪ್ರೇಕ್ಷಕರು ಗುಂಪು ಹಲ್ಲೆ ನಡೆಸುತ್ತಿದ್ದ ಕುರಿತು ದೀಪಕ್ ಎಂಬುವರು ಪೊಲೀಸರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌, ಸಿಬ್ಬಂದಿಗಳಿಗೆ ಮಾಹಿತಿ ಬಂದಿತ್ತು. ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಗುಂಪು ಹತ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿಲ್ಲ ಎನ್ನಲಾಗಿದೆ.
ಹಾಗಾಗಿ ಗುಂಪು ಹತ್ಯೆ ಪ್ರಕರಣವು ಮೊದಲು ಯುಡಿಆರ್ ಪ್ರಕರಣವಾಗಿ, ಬಳಿಕ ಗುಂಪು ಹತ್ಯೆ ಪ್ರಕರಣವಾಗಿ ದಾಖಲಾಯಿತು.
ಗುಂಪು ಹತ್ಯೆಯ ಬಗ್ಗೆ ಮಾಹಿತಿ ತಿಳಿದಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಾರದೇ ತೀವ್ರ ಕರ್ತವ್ಯ ನಿರ್ಲಕ್ಷತನ ತೋರಿದ ಆರೋಪದ ಮೇಲೆ ಮೂವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

– ಬಂಧಿತರ ಸಂಖ್ಯೆ 23 ಕ್ಕೆ ಏರಿಕೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಬಳಿ ಗುಂಪು ಹಲ್ಲೆಯಿಂದ ಕೇರಳದ ವ್ಯಕ್ತಿ ಮೃತಪಟ್ಟ ಘಟನೆ ಸಂಬಂಧಪಟ್ಟಂತೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀಪ್ ಕುಮಾ‌ರ್ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ‘ಪಾಕಿಸ್ತಾನ ಪಾಕಿಸ್ತಾನ’ ಬೊಬ್ಬೆ ಹೊಡೆದಿದ್ದೇ ಈ ಘಟನೆಗೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಕ್ರಿಕೆಟ್ ಪಂದ್ಯದ ವೇಳೆ ಕೇರಳದ ವ್ಯಕ್ತಿ ಮೊಹಮ್ಮದ್ ಅಶ್ರಫ್‌, ‘ಪಾಕಿಸ್ತಾನ ಪಾಕಿಸ್ತಾನ’ ಎಂದು ಘೋಷಣೆ ಕೂಗಿದ್ದ. ಆಗ ಸ್ಥಳದಲ್ಲಿದ್ದವರು ಆತನನ್ನು ಬೆನ್ನಟ್ಟಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಮತ್ತೆ ಮೂವರನ್ನು ಬಂಧನ ಮಾಡಿದ್ದಾರೆ. ಬಂಧಿತರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ.

Categories
ಬೆಂಗಳೂರು

ಪಾಕ್ ಬೆಂಬಲಿಸುವುದು ದೇಶದ್ರೋಹ, ಹತ್ಯೆಕೋರರಿಗೆ ಶಿಕ್ಷೆಯಾಗಲಿದೆ- ಸಿಎಂ ಸಿದ್ದರಾಮಯ್ಯ

ಪಾಕ್ ಬೆಂಬಲಿಸುವುದು ದೇಶದ್ರೋಹ, ಹತ್ಯೆಕೋರರಿಗೆ ಶಿಕ್ಷೆಯಾಗಲಿದೆ- ಸಿಎಂ ಸಿದ್ದರಾಮಯ್ಯ

* ಕೇರಳದ ಮೊಹಮ್ಮದ್ ಅಶ್ರಫ್ ಹತ್ಯೆಯಾಗಿದ್ದ ಯುವಕ
* ಪ್ರಚೋದನಕಾರಿ ಭಾಷಣಗಳಿಂದ ಹತ್ಯೆ – ಮುಸ್ಲಿಂ ಸಂಘಟನೆಗಳ ಆರೋಪ

NAMMMUR EXPRESS NEWS
ಬೆಂಗಳೂರು: ಯಾರೇ ಆಗಲಿ ಪಾಕಿಸ್ತಾನದ ಪರವಾಗಿ ಮಾತನಾಡುವುದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಂತಹ ನಡೆ ದೇಶಕ್ಕೆ ದ್ರೋಹ ಬಗೆಯುವುದು ಅಥವಾ ದೇಶದ್ರೋಹವಾಗುತ್ತದೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಮಂಗಳೂರು ನಗರದಲ್ಲಿ ನಡೆದ ಗುಂಪು ಹತ್ಯೆ ಘಟನೆಯನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ.
ಗುಂಪು ಹತ್ಯೆ ಮಾಡಿದವರನ್ನು ಬಿಡುವುದಿಲ್ಲ. ತನಿಖೆ ನಡೆಯುತ್ತಿದೆ. ಇಲ್ಲಿಯವರೆಗೆ 15 ಜನರನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡು ವರದಿ ಬಂದ ನಂತರ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡುವುದು ಸಂಪೂರ್ಣವಾಗಿ ತಪ್ಪು. ಅದು ದೇಶದ್ರೋಹ. ನಿಮಗೆ ಅರ್ಥವಾಗಿದೆಯೇ?” ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಇನ್ನು ಗುಂಪು ಹತ್ಯೆ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 20 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ದೃಢಪಡಿಸಿದ್ದಾರೆ.
ಮಂಗಳೂರು ಕೋಮು ಸೂಕ್ಷ್ಮ ನಗರವಾಗಿರುವುದರಿಂದ ರಾಜ್ಯ ಪೊಲೀಸರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಸ್ಲಿಂ ಸಂಘಟನೆಗಳು ಈಗಾಗಲೇ ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಗುಂಪು ಹತ್ಯೆಗೆ ಕಾರಣವಾದ ಪ್ರಚೋದನಕಾರಿ ಭಾಷಣಗಳನ್ನು ನೀಡಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕೆಂದು ಒತ್ತಾಯಿಸಿವೆ. ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ ಘಟನೆಗಳು ಹೆಚ್ಚುತ್ತಿರುವ ಬಗ್ಗೆಯೂ ಮುಸ್ಲಿಂ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹಿಂದೂ ಕಾರ್ಯಕರ್ತರು ಮಾಡಿದ ಪ್ರಚೋದನಕಾರಿ ಭಾಷಣಗಳು ಗುಂಪು ಹತ್ಯೆ ಘಟನೆಗೆ ಕಾರಣವಾಗಿವೆ ಎಂದು ಮುಸ್ಲಿಂ ನಾಯಕರು ಆರೋಪಿಸಿದ್ದಾರೆ. ಇನ್ನು ತನಿಖೆ ವಿಳಂಬಕ್ಕಾಗಿ ಪೊಲೀಸ್ ಇಲಾಖೆಯನ್ನು ಟೀಕಿಸಿದ ಅವರು, ಭಾನುವಾರ ವ್ಯಕ್ತಿಯ ಹತ್ಯೆ ಬೆಳಕಿಗೆ ಬಂದ ನಂತರ ಈ ಘಟನೆ ಕ್ಷುಲ್ಲಕ ವಿಷಯಕ್ಕೆ ನಡೆದಿದೆ ಎಂದು ಹೇಳಿದ್ದ ಪೊಲೀಸರ ಹೇಳಿಕೆಯನ್ನು ಸಂಘಟನೆ ಖಂಡಿಸಿದೆ.

ಘಟನೆ ಹಿನ್ನೆಲೆಯೇನು ??
‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಆರೋಪದ ಮೇಲೆ 30ಕ್ಕೂ ಹೆಚ್ಚು ಜನರ ಗುಂಪೊಂದು 40 ವರ್ಷದ ಮೊಹಮ್ಮದ್ ಅಶ್ರಫ್ ಎಂಬಾತನನ್ನು ತೀವ್ರವಾಗಿ ಥಳಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಅಶ್ರಫ್ ನಂತರ ಮೃತಪಟ್ಟಿದ್ದನು. ಅಶ್ರಫ್ ನೆರೆಯ ರಾಜ್ಯವಾದ ಕೇರಳದ ಮಾನಂದವಾಡಿ ಬಳಿಯ ಉಲ್ಲಪಲ್ಲಿ ಗ್ರಾಮದವನು.
ಭಾನುವಾರ ಮಧ್ಯಾಹ್ನ ಕ್ರಿಕೆಟ್ ಮೈದಾನದಲ್ಲಿ ಮೊಹಮ್ಮದ್ ಅಶ್ರಫ್ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದರಿಂದ ಅಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದ ಜನರು ಆತನ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತಾ (BNS) ಕಾಯ್ದೆಯ ಸೆಕ್ಷನ್ 103(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಸೆಕ್ಷನ್ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ಸೂಚಿಸುತ್ತದೆ. ಪ್ರಮುಖ ಆರೋಪಿಯನ್ನು ಆಟೋ ಚಾಲಕ ಸಚಿನ್ ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ದೇವದಾಸ್, ಸಾಯಿದೀಪ್, ಮಂಜುನಾಥ್ ಸೇರಿದಂತೆ ಇತರರು ಸೇರಿದ್ದಾರೆ. ಮಾಜಿ ಕಾರ್ಪೊರೇಟರ್ ಒಬ್ಬರ ಪತಿಯನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Categories
ಬೆಂಗಳೂರು

ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್
– ಸರಿಸುಮಾರು 1000 ಶಾಲೆಗಳಲ್ಲಿ ಈ ಯೋಜನೆ ಜಾರಿ
– ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲೂ ಸಹ ಈ ಯೋಜನೆ ಜಾರಿ

NAMMUR EXPRESS NEWS
ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ‘ಮಾತನಾಡುವ ಇಂಗ್ಲೀಷ್’ (ಸ್ಪೋಕನ್ ಇಂಗ್ಲೀಷ್) ತರಗತಿಗಳು ಆರಂಭವಾಗಲಿವೆ.

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಳೆದ ವರ್ಷವೂ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಿತ್ತಾದರೂ ಅದು ಅಷ್ಟೇನೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪ್ರಸಕ್ತ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ನಿಶ್ಚಯಿಸಿದೆ. ಈ ಸಂಬಂಧ ಇಲಾಖೆಯು ಅತ್ಯುತ್ತಮ ಸಂಪನ್ಮೂಲವುಳ್ಳ ವ್ಯವಸ್ಥೆ ಜಾರಿಗೆ ಯೋಜನೆ ರೂಪಿಸಿದೆ. ಇಲಾಖೆ ಕಳೆದ ವರ್ಷ ವಾರಾಂತ್ಯದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸುವುದಕ್ಕೆ ಚಾಲನೆ ನೀಡಿತ್ತು. ರಿಜನಲ್ ಇನ್ ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯು ಬೋಧಕರಿಗೆ ರಾಜ್ಯ ಮಟ್ಟದ ತರಬೇತಿ ನೀಡಲು ಸೂಚಿಸಲಾಗಿತ್ತು. ಆದರೆ ಈ ಕಾರ್ಯಕ್ರಮ ಜಾರಿಯೇ ಆಗಿರಲಿಲ್ಲ.
ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವರ್ಷ ವ್ಯವಸ್ಥಿತವಾಗಿ ಯೋಜನೆ ಜಾರಿಗೆ ಮುಂದಡಿಯಿಟ್ಟಿದೆ.

ಈ ಹೊಸ ಯೋಜನೆಯನ್ವಯ ವರ್ಷಕ್ಕೆ 180 ಗಂಟೆಗಳ ಕಾಲ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದ್ದು ಈ ಯೋಜನೆಯು ಸರಿಸುಮಾರು 1000 ಶಾಲೆಗಳಲ್ಲಿ ಜಾರಿಗೆ ಬರಲಿದೆ. ವಿದ್ಯಾರ್ಥಿಗಳ ಸಾಂದ್ರತೆಗನುಗುಣವಾಗಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮಾತ್ರವಲ್ಲದೆ, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲೂ ಸಹ ಈ ಯೋಜನೆ ಜಾರಿಗೆ ಬರಲಿದ್ದು ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳಲೆಂದೇ ವಿಶೇಷವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Categories
ಮಾಹಿತಿ ಸುದ್ದಿ

ಕಾರ್ಮಿಕರಿಗೆ ನಮ್ಮ ಸಲಾಂ!

ಕಾರ್ಮಿಕರಿಗೆ ನಮ್ಮ ಸಲಾಂ!

– ಶ್ರಮಜೀವಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಏಕೈಕ ದಿನ
– ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಶುಭಾಶಯಗಳು!

NAMMUR EXPRESS NEWS
ಮೇ ದಿನವನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಅಥವಾ ಕಾರ್ಮಿಕನ ದಿನ ಎಂದು ಕರೆಯುತ್ತಾರೆ, ಕಾರ್ಮಿಕ ವರ್ಗದ ಕೊಡುಗೆಯನ್ನು ಸ್ಮರಿಸಲು ಮತ್ತು ತೀವ್ರ ಅಸುರಕ್ಷಿತ ಪರಿಸರದಲ್ಲಿ ಕೆಲಸಕ್ಕಾಗಿ ಪ್ರತಿನಿತ್ಯ ಹೋರಾಡವ ಜೀವಕ್ಕೆ ಇಂದು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ.
ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನ’ವನ್ನಾಗಿ ಆಚರಿಸಲಾಗುತ್ತದೆ.
ಇದನ್ನು ಮೇ ಡೇ, ಲೇಬರ್ ಡೇ ಹಾಗೂ ವರ್ಕರ್ಸ್ ಡೇ ಎಂತಲೂ ಕರೆಯಲಾಗುತ್ತದೆ. ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶವಾಗಿದೆ.

ಈ ಆಚರಣೆ ಶುರುವಾಗಿದ್ದು ಹೇಗೆ?

1886ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಿಸಲಾಯಿತು. ದಿನಕ್ಕೆ ಕಾರ್ಮಿಕರಿಗೆ 8 ಗಂಟೆ ಕೆಲಸದ ಅವಧಿಯನ್ನು ನಿಗದಿ ಮಾಡಬೇಕು ಎಂಬ ಆಗ್ರಹದೊಂದಿಗೆ ಶುರುವಾದ ಚಳವಳಿಗೆ ಯಶಸ್ಸು ಸಿಕ್ಕಿತ್ತು. ಇದೇ ಹೋರಾಟದ ಕಿಚ್ಚಿನಲ್ಲಿ ಉದಯಿಸಿದ್ದೇ ಈ ಕಾರ್ಮಿಕರ ದಿನಾಚರಣೆ. ಭಾರತದಲ್ಲಿ ಈ ಆಚರಣೆ ಆರಂಭವಾಗಿದ್ದು 1923ರಲ್ಲಿ, ವಿಶ್ವದ ನಾನಾ ಭಾಗಗಳಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶ್ರಮಜೀವಿಗಳಿಗೆ ಕೃತಜ್ಞತೆಯನ್ನು ಈ ಮೂಲಕ ಸಲ್ಲಿಸಲಾಗುತ್ತದೆ.
ಮೇ 1ರಂದು ಸಮಾಜಕ್ಕಾಗಿ ಕಾರ್ಮಿಕರ ಕೊಡುಗೆ ಹಾಗೂ ತ್ಯಾಗವನ್ನು ಸ್ಮರಿಸಲಾಗುತ್ತದೆ. ಭಾರತದಲ್ಲಿ ಇದನ್ನು ‘ಮೇ ದಿನ’ ಎಂದು ಕರೆಯುತ್ತಾರೆ. ದೇಶದಲ್ಲಿ ಮೊದಲ ಕಾರ್ಮಿಕ ದಿನವನ್ನು ಮೇ 1, 1923 ರಂದು ಮದ್ರಾಸಿನಲ್ಲಿ ಆಚರಿಸಲಾಯಿತು. ಇದನ್ನು ಕಾಮ್ರೇಡ್ ಸಿಂಗರವೇಲರ್‌ ನೇತೃತ್ವದ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆರಂಭಿಸಿತ್ತು. ಅಂದಿನಿಂದ ಈವರೆಗೆ ಭಾರತದಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ ಮತ್ತು ರಾಷ್ಟ್ರೀಯ ರಜೆ ಘೋಷಿಸಲಾಗಿದೆ.
ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಉದಾಹರಣೆಗೆ ಹಿಂದಿಯಲ್ಲಿ ‘ಅಂತಾರಾಷ್ಟ್ರೀಯ ಶ್ರಮಿಕ್ ದಿವಸ್’, ಕಾರ್ಮಿಕ ದಿನಚರಣೆ (ಕನ್ನಡ), ಕಾರ್ಮಿಕ ದಿನೋತ್ಸವಮ್ (ತೆಲುಗು), ಕಮ್‌ಗರ್ ದಿವಸ್‌ (ಮರಾಠಿ), ಉಜೈಪಾಲರ್ ದೀನಂ (ತಮಿಳು), ತೊಝಿಲಾಲಿ ದಿನಂ (ಮಲಯಾಳಂ), ಮತ್ತು ಪ್ರೋಮಿಕ್ ದಿಬೋಶ್‌ (ಬಂಗಾಳಿ) ಎಂದು ಕರೆಯುತ್ತಾರೆ.

Categories
ಮಲ್ನಾಡ್

ಶೃಂಗೇರಿ ಮಠದಲ್ಲಿ ನಿಖಿಲ್ ಪುತ್ರನಿಗೆ ಅಕ್ಷರ ಅಭ್ಯಾಸ!

ಶೃಂಗೇರಿ ಮಠದಲ್ಲಿ ನಿಖಿಲ್ ಪುತ್ರನಿಗೆ ಅಕ್ಷರ ಅಭ್ಯಾಸ!
– ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದ ಯುವ ನಾಯಕ
– ಎಂ.ಎಲ್ಸಿ ಭೋಜೆ ಗೌಡ ಹಾಗೂ ನಾಗೇಂದ್ರ ಭಂಡಿಗಡಿ ಸಾಥ್

NAMMUR EXPRESS NEWS
ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಮಠಕ್ಕೆ ಅಕ್ಷಯ ತೃತೀಯದಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಪತ್ನಿ ರೇವತಿ ಹಾಗೂ ಮಗನ ಜತೆ ಭೇಟಿ ನೀಡಿದ್ದು, ಮಗನಿಗೆ ಅಕ್ಷರಾಭ್ಯಾಸ ಮಾಡಿಸಿದರು.
ನಿಖಿಲ್ ಕುಮಾರಸ್ವಾಮಿ ಅವರ ಪುತ್ರ ಅವನ್ಯ ದೇವ್ ಅಕ್ಷರ ಅಭ್ಯಾಸದ ಬಳಿಕ ವಿಶೇಷ ಪೂಜೆ ಸಲ್ಲಿಸಿ, ಭೋಜನ ಪ್ರಸಾದ ಸ್ವೀಕರಿಸಿ ವಾಪಾಸ್ ಆದರು. ಕುಮಾರಸ್ವಾಮಿ ಕುಟುಂಬಕ್ಕೆ ಆಪ್ತರಾದ ಎಂ.ಎಲ್ಸಿ ಭೋಜೆ ಗೌಡ ಹಾಗೂ ನಾಗೇಂದ್ರ ಭಂಡಿಗಡಿ ಜತೆಯಲ್ಲಿದ್ದರು.

Categories
ಶಿವಮೊಗ್ಗ

ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ಭವನಕ್ಕೆ ಭೂಮಿ ಪೂಜೆ

ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ಭವನಕ್ಕೆ ಭೂಮಿ ಪೂಜೆ
– ಭದ್ರಾವತಿ ತಾಲೂಕಿನ ಮಜ್ಜಿಗೆನಹಳ್ಳಿಯಲ್ಲಿ ಗುದ್ದಲಿ ಪೂಜೆ
– ಎಂ. ಎಲ್ಸಿ ಧನಂಜಯ ಸರ್ಜಿ ಸೇರಿ ಹಲವರು ಹಾಜರ್

NAMMUR EXPRESS NEWS
ಶಿವಮೊಗ್ಗ : ಭದ್ರಾವತಿ ತಾಲೂಕಿನ ಮಜ್ಜಿಗೆನಹಳ್ಳಿ ಗ್ರಾಮದ ಸಮೀಪ ನಿರ್ಮಾಣ ಮಾಡಲು ನಿರ್ಧರಿಸಿರುವ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ (IAP) ಶಿವಮೊಗ್ಗ ಜಿಲ್ಲಾ ಶಾಖೆಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಮಕ್ಕಳ ಆರೋಗ್ಯದ ಪೋಷಣೆಗೆ ಹಾಗೂ ಆರೈಕೆಗೆ ಶ್ರಮಿಸುತ್ತಿರುವ ಜಿಲ್ಲೆಯ ಮಕ್ಕಳ ತಜ್ಞ ವೈದ್ಯರ ಸಮೂಹ ಈ ನೂತನ ಭವನದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಮುಂದೆ ಈ ಭವನ ನಿರ್ಮಾಣವಾದ ಮೇಲೆ ಇಲ್ಲಿ ಶಿಕ್ಷಣ ಮತ್ತು ತರಬೇತಿ ಕಾರ್ಯಗಳು, ಲಸಿಕೆಗಳ ಬಗ್ಗೆ ಜಾಗೃತಿ ಶಿಬಿರಗಳು, ಮಕ್ಕಳ ಆರೋಗ್ಯ ಮತ್ತು ಭದ್ರತೆಯ ಬಗ್ಗೆ ತರಬೇತಿ, ಶಾಲಾ ಮಕ್ಕಳಿಗಾಗಿ ಯುವ ಆರೋಗ್ಯ ನಾಯಕತ್ವ ಕಾರ್ಯಗಾರ, ಶಾಲಾ ಆರೋಗ್ಯ ಶಿಕ್ಷಣ, ಪ್ರಥಮ ಚಿಕಿತ್ಸೆ ತರಬೇತಿ ಸೇರಿದಂತೆ ಆರೋಗ್ಯ ಸಂಬಂಧಿತ ವಿವಿಧ ಕಾರ್ಯ ಚಟುವಟಿಕೆಗಳು ನಡೆಯುತ್ತವೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷರಾದ ಡಾ. ಯತೀಶ ಬಿ.ಎಲ್, ಕಾರ್ಯದರ್ಶಿಗಳಾದ ಡಾ. ರಾಜಾರಾಮ್ ಯು.ಹೆಚ್, ಖಜಾಂಚಿಗಳಾದ ಡಾ. ವಿನೋದ್ ಕುಮಾರ್ ಎಂ.ಕೆ, ಪ್ರಮುಖರಾದ ಡಾ. ಕೊಟ್ರೇಶ್, ಡಾ. ಗಣೇಶ್ ಬಿದರಿಕೊಪ್ಪ, ಡಾ. ಜಗದೀಶ್ ವೈದ್ಯ, ಡಾ.ಮಲ್ಲಿಕಾರ್ಜುನ್ ಸಾಲೆಯರ್, ಡಾ. ದೀಪಕ್ ಕುಮಾರ್, ಡಾ. ನಿತಿನ್, ಡಾ. ಶಂಭುಲಿಂಗ ಬಂಕವಳ್ಳಿ, ಡಾ.ಅಜಯ್, ಡಾ.ವಿನಾಯಕ ಹೆಗಡೆ, ಡಾ.ಅಂಜನಾ ರಾವ್, ಡಾ. ಮಲ್ಲಿಕಾರ್ಜುನ್, ಸೇರಿದಂತೆ ಹಿರಿಯ ಸದಸ್ಯರು, ವೈದ್ಯರು ಉಪಸ್ಥಿತರಿದ್ದರು