Categories
Uncategorized ಮಂಗಳೂರು

ಕರಾವಳಿಯಾದ್ಯಂತ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

ಕರಾವಳಿಯಾದ್ಯಂತ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

– ದ. ಕನ್ನಡ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ
– ಬೆಳಗ್ಗೆಯಿಂದಲೇ ಸುರಿಯುತ್ತಿದೆ ಧಾರಾಕಾರ ಮಳೆ 

NAMMUR EXPRESS NEWS
ಮಂಗಳೂರು: ಭಾರೀ ಮಳೆಯ ಮುನ್ಸೂಚನೆಯಾಗಿ ರೆಡ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ, ಮೇ. 19ರ ರಾತ್ರಿಯಿಂದಲೇ ಕರಾವಳಿಯಾದ್ಯಂತ ಭಾರೀ ವರ್ಷಧಾರೆಯಾಗಿದೆ. ನಿನ್ನೆಯಿಂದಲೇ ಪ್ರಾರಂಭವಾಗಿದ್ದ ಮಳೆ ಇವತ್ತು ಬಿರುಸು ಪಡೆದುಕೊಂಡಿದ್ದು ಬೆಳಗ್ಗೆಯಿಂದಲೇ ಸುರಿಯುತ್ತಿದೆ.
ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬಿರುಗಾಳಿಯ ಹೊಡೆತಕ್ಕೆ ಮರಗಳು ಧರೆಗುರುಳಿವೆ.
ಭಾರೀ ಗಾಳಿ ಮಳೆ ಬರುವ ಸಾಧ್ಯತೆ ಇರುವುದರಿಂದ, ಮೀನುಗಾರರಿಗೆ ಸಮುದ್ರಕ್ಕೆ ತೆರಳಬಾರದೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಅಲ್ಲದೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹಲವು ಮುಂಜಾಗ್ರತಾ ಸೂಚನೆಗಳನ್ನು ನೀಡಿದ್ದು, ಅದನ್ನು ಪಾಲಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
ಮೇ 22 ರ ವರೆಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮೇ 21, 22 ರ ವರೆಗೂ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ತೀವ್ರ ಮಳೆಯಾಗಲಿದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ, ಹಾಗೂ ಮಿಂಚು, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿರುಸಿನ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ನೀರು ನುಗ್ಗುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸಬೇಕು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ವಿಪತ್ತು ನಿರ್ವಹಣೆಯ ಚಾಚೂ ತಪ್ಪದೇ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ತಿಳಿಸಿದೆ.

Categories
ಮಲ್ನಾಡ್

ಈಗ ಅಣಬೆ ಕಾಲ… ಎಂಥಾ ರುಚಿ ಗೊತ್ತಾ?

ಈಗ ಅಣಬೆ ಕಾಲ… ಎಂಥಾ ರುಚಿ ಗೊತ್ತಾ?
– ಒಂದು ಕಡೆ ಮಳೆಯಾದರೆ ಇನ್ನೊಂದು ಕಡೆ ಅಣಬೆಗಳ ಹುಡುಕಾಟ
– ಅಣಬೆಗಳನ್ನು ಕಾಡಿನಲ್ಲಿ ಹುಡುಕುವಾಗ ಎಚ್ಚರ
– ಎಲ್ಲಾ ಅಣಬೆ ತಿನ್ನೋಕಾಗಲ್ಲ…

NAMMUR EXPRESS NEWS
ಮಲೆನಾಡು: ಮಳೆಗಾಲ ಮಲೆನಾಡಿನಲ್ಲಿ ಚುರುಕುಗೊಂಡಿದ್ದು, ಈಗ ಎಲ್ಲೆಡೆ ಅಣಬೆಗಳು ಏಳುವುದು ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಐಗಿನ ಅಣೆಬೆ, ಎಣ್ಣೆ ಅಣಬೆ, ಹೆಗ್ಗಲ ಅಣಬೆ,ಬೋಗಿ ಆಣಬೆ, ಅಕ್ಕಿ ಅಣಬೆ, ಕರಿ ಅಣಬೆ ಹೀಗೆ ಮುಂತಾದ ಅಣಬೆಗಳು ಮಲೆನಾಡಿನಲ್ಲಿ ಕಾಣಸಿಗುತ್ತವೆ. ಅಣಬೆ ಅಂದರೆ ಯಾರಿಗಿಷ್ಟವಿಲ್ಲ ಹೇಳಿ.
ಅಣಬೆ ಬಗೆಬಗೆಯ ಖಾದ್ಯಗಳಿಂದಲೂ ಜನರ ಮನಗೆದ್ದಿದೆ. ಈಗಂತೂ ಮಳೆಗಾಲ. ದೊಡ್ಡ ಮರಗಳ ಬುಡಗಳಲ್ಲಿ, ತೋಟ ಮತ್ತು ಹೊಲಗಳ ಬದಿಯಲ್ಲಿ ಸೊಂಪಾಗಿ ಬೆಳೆದು ನಿಂತಿರುವ ಅಣಬೆಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಜೊತೆಗೆ ಅಣಬೆಯಿಂದ ಮಾಡುವ ಖಾದ್ಯ ಕೂಡಾ ಬಲು ರುಚಿಯಾಗಿರುತ್ತದೆ. ಒಂದು ಕಡೆ ಮಳೆಯಾದರೆ ಇನ್ನೊಂದು ಕಡೆ ಜನರು ಅಣಬೆಯ ಹುಡುಕಾಟ ನಡೆಸುತ್ತಿದ್ದಾರೆ. ರೈತರು ಮುಂಜಾನೆಯೇ ಎದ್ದು ಕಾಡು, ಹೊಲಗಳಿಗೆ ಹೋಗಿ ತಾಜಾ ಅಣಬೆಗಳನ್ನು ಕಿತ್ತು ತರುತ್ತಾರೆ. ಆದರೆ ಇದೇ ಸಮಯದಲ್ಲಿ ಅಣಬೆಗಳ ಜೊತೆಗೆ ಕೆಲವು ವಿಷಕಾರಿ ಹಾಗೂ ನಂಜಿನ ಅಣಬೆಗಳು ಇರುವುದರಿಂದ ಎಚ್ಚರಿಕೆ ಅಗತ್ಯ. ಮಳೆಯಾ ಪ್ರಮಾಣವೂ ಕೂಡ ಜೋರಾಗಿದೆ. ಸೈಕ್ಲೋನ್ ಗಳ ಪ್ರಭಾವದಿಂದ ಮುಂದಿನ ದಿನಗಳಲ್ಲಿ ಏನಾಗುತ್ತದೆ ಮಳೆ ಹೆಚ್ಚಾಗುತ್ತದೆ ಅಥವ ಕಡಿಮೆ ಆಗುತ್ತದೆಯೋ ಎಂದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.

– ವಿಶೇಷ ವರದಿ: ಪ್ರಾಪ್ತಿ ಸಾಗರ

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್ | ಹಲ್ಲಿನ ಹೊಳಪನ್ನು ಹೆಚ್ಚಿಸಲು 5 ಸರಳ ಮನೆಮದ್ದು!

ಆರೋಗ್ಯ ಎಕ್ಸ್ ಪ್ರೆಸ್

ಹಲ್ಲಿನ ಹೊಳಪನ್ನು ಹೆಚ್ಚಿಸಲು 5 ಸರಳ ಮನೆಮದ್ದು!

NAMMUR EXPRESS NEWS
ಹಲ್ಲು ನಮ್ಮ ಮುಖದ ಆಕರ್ಷಣೆ ಹಾಗೂ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲ್ಲಿನ ಬಣ್ಣದಲ್ಲಿಯೂ ಭಿನ್ನತೆ ಇರುತ್ತದೆ. ವ್ಯಕ್ತಿಯ ಆನುವಂಶಿಕತೆ ಹಾಗೂ ದೇಹದ ಆರೋಗ್ಯದ ಆಧಾರದ ಮೇಲೆ ಬಿಳಿ ಬಣ್ಣದ ಮೇಲೆಯೇ ಕೆಲವು ಛಾಯೆಯು ಕಾಣಿಸಿಕೊಳ್ಳುವುದು.
ಹಲ್ಲನ್ನು ಸರಿಯಾಗಿ ಆರೈಕೆ ಮಾಡದೆ ಇದ್ದಾಗ, ಆಹಾರವನ್ನು ಸೇವಿಸಿದ ಬಳಿಕ ಬಾಯಿ ಮುಕ್ಕಳಿಸದೆ ಇರುವುದು, ಕೆಫೀನ್ ಸೇವನೆ, ಅತಿಯಾಗ ಬೆಲ್ಲ ಸೇವನೆ, ಮಾದಕ ವಸ್ತುಗಳ ಸೇವನೆ ಹೀಗೆ ವಿವಿಧ ಕಾರಣಗಳಿಗಾಗಿ ಹಲ್ಲು ಹಳದಿ ಬಣ್ಣವನ್ನು ಪಡೆದುಕೊಂಡಿರುತ್ತದೆ.
ಹಲ್ಲಿನ ಮೇಲೆ ಪ್ಲೇಕ್ ರಚನೆ ಆಗುವುದರಿಂದ ಹಳದಿ ಬಣ್ಣಕ್ಕೆ ತಿರುಗುವುದು. ಸರಿಯಾದ ಆರೈಕೆ ಮತ್ತು ಸುಚಿತ್ವ ಮಾಡದೆ ಇದ್ದಾಗ ಹಲ್ಲಿನ ಮೇಲೆ ಹಳದಿ ಬಣ್ಣವು ಶಾಶ್ವತವಾಗಿ ಉಳಿದು ಬಿಡುತ್ತದೆ. ದಂತ ಸವೆತ ಉಂಟಾದಾಗ ಅದರಲ್ಲಿ ಇರುವ ದಂತದ್ರವ್ಯವು ಹಲ್ಲುಗಳ ಮೇಲೆ ಬಂದು ಕುಳಿತುಕೊಳ್ಳುತ್ತವೆ. ಆಗ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು.

– ಬಾಯಿ ಮುಕ್ಕಳಿಸಲು ಎಣ್ಣೆಯನ್ನು ಬಳಸಿ

ಬಾಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಕುಚುಗುಡಿಸುತ್ತಿರಬೇಕು. ಸ್ವಲ್ಪ ಸಮಯಗಳ ಕಾಲ ಈ ಕ್ರಿಯೆಯನ್ನು ಮುಂದುವರಿಸಿ, ನಂತರ ಉಗುಳಬೇಕು. ಈ ಕ್ರಮವು ಅತ್ಯಂತ ಪ್ರಾಚೀನ ಪದ್ಧತಿ. ಆದರೆ ಹಲ್ಲು, ದಂತ ಹಾಗೂ ಬಾಯಿಯ ಆರೋಗ್ಯವನ್ನು ಕಾಪಾಡಲು ಸಹಕಾರಿ.
ಬಾಯಿ ಮುಕ್ಕಳಿಸಲು ತೆಂಗಿನ ಎಣ್ಣೆ, ಎಳ್ಳೆಣ್ಣೆ ಮತ್ತು ಸೂರ್ಯಕಾಂತಿಯ ಎಣ್ಣೆಯನ್ನು ಬಳಸಬಹುದು. ಇವು ಬಾಯಲ್ಲಿ ಲಾರಿಕ್ ಆಮ್ಲವನ್ನು ಹೆಚ್ಚಿಸುತ್ತವೆ. ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಬಾಯಲ್ಲಿ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ.

– ಅಡುಗೆ ಸೋಡದೊಂದಿಗೆ ಬ್ರಷ್ ಮಾಡುವುದು

ಅಡುಗೆ ಸೋಡ ನೈಸರ್ಗಿಕವಾಗಿಯೇ ಬಿಳಿ ಮಾಡುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಇದನ್ನು ಪೇಸ್ಟ್ ಜೊತೆಗೆ ಸೇರಿಸಿ, ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಮೇಲಿರುವ ಕಲೆ, ಕೊಳೆ ಹಾಗೂ ಹಳದಿ ಬಣ್ಣವನ್ನು ಸುಲಭವಾಗಿ ನಿವಾರಿಸುವುದು.
ಬಾಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುವುದು. ಒಂದು ಟೀ ಚಮಚ ಅಡುಗೆ ಸೋಡವನ್ನು 2 ಟೀ ಚಮಚ ನೀರಿನೊಂದಿಗೆ ಬೆರೆಸಿ ಹಲ್ಲುಜ್ಜಬಹುದು ಅಥವಾ ಬಾಯಿ ಮುಕ್ಕಳಿಸಬಹುದು. ವಾರಕ್ಕೆ 2- 3 ಬಾರಿ ಈ ಕ್ರಮವನ್ನು ಅನುಸರಿಸಿದರೆ ಉತ್ತಮ ಫಲವನ್ನು ಪಡೆಯಬಹುದು.

– ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‍ಗಳು. ಅವು ಬಾಯಲ್ಲಿ ಇರುವ ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತವೆ. ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು ಮತ್ತು ಅವುಗಳ ವಿರುದ್ಧ ಹೋರಾಡುವುದರಿಂದ ಗಾಯಗಳನ್ನು ಶುದ್ಧಗೊಳಿಸಲು ಬಳಸುತ್ತಾರೆ.
ಅಡುಗೆ ಸೋಡಾ ಮತ್ತು ಶೇ.1ರಷ್ಟು ಹೈಡ್ರೋಜನ್ ಪೆರಾಕ್ಸೈಡ್ ಹೊಂದಿರುವ ಪೇಸ್ಟ್ ಗಳು ಹಲ್ಲುಗಳನ್ನು ಸ್ವಚ್ಛ ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತವೆಗೀ ಸಂಯೋಜನೆಯ ಪೇಸ್ಟ್ ಅನ್ನು ಆರು ವಾರಗಳ ಕಾಲ ಬಳಸಿದರೆ ಶೇ.62ರಷ್ಟು ಬಿಳಿ ಹಲ್ಲನ್ನು ಹೊಂದಬಹುದು. ಇದನ್ನು ಅಡುಗೆ ಸೋಡದೊಂದಿಗೆ ಬೆರೆಸಿ ಹಲ್ಲುಜ್ಜ ಬಹುದು ಅಥವಾ ಇದನ್ನು ಸ್ವಲ್ಪ ನೀರಿಗೆ ಸೇರಿಸಿ ಬಾಯಿ ಮುಕ್ಕಳಿಸಬಹುದು.

– ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ!

ಕುರುಕಲಾದಂತೆ ಇರುವ ಹಣ್ಣು ಮತ್ತು ತರಕಾರಿಗಳನ್ನು ಜಗೆಯುವಾಗ ಹಲ್ಲಿನ ಮೇಲಿರುವ ಫ್ಲೇಕ್‍ಗಳನ್ನು ತೆಗೆಯುವುದು. ಹಾಗಂತ ಇವುಗಳನ್ನು ಹಲ್ಲುಜ್ಜಲು ಪರ್ಯಾಯವಾಗಿ ಬಳಸಬಾರದು. ಅನಾನಸ್ ಮತ್ತು ಸ್ಟ್ರಾಬೆರಿ ಹಣ್ಣುಗಳು ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳುಪಾಗಿಸುತ್ತವೆ.

Categories
ತೀರ್ಥಹಳ್ಳಿ

ಶಾಸಕ ಆರಗ ಜ್ಞಾನೇಂದ್ರರಿಂದ ವಿಕಲಚೇತನರಿಗೆ ದ್ವಿಚಕ್ರ ಸ್ಕೂಟರ್ ವಿತರಣೆ

ಶಾಸಕ ಆರಗ ಜ್ಞಾನೇಂದ್ರರಿಂದ ವಿಕಲಚೇತನರಿಗೆ ದ್ವಿಚಕ್ರ ಸ್ಕೂಟರ್ ವಿತರಣೆ
– ಏಳು ಜನ ವಿಕಲಚೇತನರಿಗೆ ಸ್ಕೂಟರ್
– ಸ್ಕೂಟರ್ ನ ಸದುಪಯೋಗವನ್ನು ಫಲಾನುಭವಿಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಆರಗ ಜ್ಞಾನೇಂದ್ರ ಹಾರೈಕೆ

NAMMUR EXPRESS NEWS
ತೀರ್ಥಹಳ್ಳಿ: ಶಾಸಕ ಆರಗ ಜ್ಞಾನೇಂದ್ರರವರ ಪ್ರದೇಶಾಭಿವೃದ್ಧಿ ವತಿಯಿಂದ 7 ಜನ ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್ ವಿತರಣೆ ಮಾಡಲಾಯಿತು. ತೀರ್ಥಹಳ್ಳಿ ತಾಲೂಕು ಪಂಚಾಯ್ತಿ ಆವರಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ರವರ ಪ್ರದೇಶಾಭಿವೃದ್ಧಿ ವತಿಯಿಂದ 7 ಜನ ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್ ಗಳನ್ನು ವಿತರಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಇದರ ಸದುಪಯೋಗವನ್ನು ಫಲಾನುಭವಿಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಎಂದರು. ಈ ಸಂಧರ್ಭದಲ್ಲಿ ತಹಶೀಲ್ದಾರ್ ರಂಜಿತ್ ಕುಮಾರ್ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶೈಲಾ ಇನ್ನಿತರರು ಉಪಸ್ಥಿತರಿದ್ದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಲಖನೌ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿದ ಹೈದ್ರಾಬಾದ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಲಖನೌ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿದ ಹೈದ್ರಾಬಾದ್
* ಪ್ಲೇ ಆಫ್‌ನಿಂದ 5 ತಂಡಗಳು ಔಟ್, ಉಳಿದ ಒಂದು ಸ್ಥಾನಕ್ಕೆ ಡೆಲ್ಲಿ ಮುಂಬೈ ಪೈಪೋಟಿ

NAMMMUR EXPRESS SPORTS NEWS
ಲಖನೌ: ಏಕನಾ ಕ್ರೀಡಾಂಗಣದಲ್ಲಿ ನಡೆದ ಲಖನೌ ಜೈಂಟ್ಸ್ ಹಾಗೂ ಸನ್ ರೈಸರ್ಸ್ಸ್ ಹೈದ್ರಾಬಾದ್ ನಡುವಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಹೊಡೆಬಡಿಯ ಅರ್ಧಶತಕ ಲಖನೌ ಸೂಪರ್ ಜೈಂಟ್ಸ್ ತಂಡದ ಪ್ಲೇ ಆಫ್ ಕನಸಿಗೆ ಹೈದ್ರಾಬಾದ್ ತಣ್ಣೀರೆರಚಿದೆ. ಹೀಗಾಗಿ 12 ಪಂದ್ಯಗಳಿಂದ 5 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೇವಲ 10 ಅಂಕಗಳನ್ನಷ್ಟೇ ಕಲೆ ಹಾಕಿರುವ ಲಖನೌ ಇನ್ನು ಉಳಿದಿರುವ ಎರಡು ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್ ತಲುಪದು. ಇದೇ ವೇಳೆ ಸನ್ ರೈಸರ್ಸ್ ತಂಡ ಈ ಗೆಲುವಿನ ಮೂಲಕ 9 ಅಂಕಗಳನ್ನಷ್ಟೇ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದು 8ನೇ ಸ್ಥಾನದಲ್ಲೇ ಮುಂದುವರೆದಿದೆ.
ಗೆಲ್ಲಲು 206 ರನ್‌ಗಳ ಗುರಿ ಪಡೆದ ಸನ್ ರೈಸರ್ಸ್ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಜಯ ಸಾಧಿಸಿತು. ಟ್ರಾವಿಸ್ ಹೆಡ್ ಬದಲಿಗೆ ಅಭಿಷೇಕ್ ಶರ್ಮಾ ಅವರ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಆಥರ್ವ ಥಾಯಿಡೆ (9 ಎಸೆತದಲ್ಲಿ 13 ರನ್) ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಅಭಿಷೇಕ್ ಶರ್ಮಾ ಅವರು ಕೇವಲ 20 ಎಸೆತಗಳಲ್ಲಿ 59 ರನ್ ಗಳಿಸುವ ಮೂಲಕ ಎದುರಾಳಿ ತಂಡದಿಂದ ಪಂದ್ಯ ಕಸಿದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಗಳಿದ್ದವು. ಇನ್ನುಳಿದಂತೆ ಇಶಾನ್ ಕಿಶನ್(28 ಎಸೆತಗಳಲ್ಲಿ 35 ರನ್ ), ಹೆನ್ರಿಚ್ ಕ್ಲಾಸನ್ (28 ಎಸೆತಗಳಲ್ಲಿ 47) ಮತ್ತು ಕಮಿಂಡು ಮೆಂಡಿಸ್(21 ಎಸೆತಗಳಲ್ಲಿ 32) ಉತ್ತಮ ಕೊಡುಗೆ ನೀಡಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಖನೌ ತಂಡಕ್ಕೆ ಮಿಚೆಲ್ ಮಾರ್ಷ್ ಮತ್ತು ಏಡನ್ ಮಾರ್ಕಂ ಅವರು ಭರ್ಜರಿ ಆರಂಭ ಒದಗಿಸಿದರು. ಮಿಚೆಲ್ ಮಾರ್ಶ್ 39 ಎಸೆತಗಳಿಂದ 65 ಮತ್ತು ಏಡನ್ ಮಾರ್ಕಂ 38 ಎಸೆತಗಳಿಂದ 61 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 10.3 ಓವರ್‌ಗಳಲ್ಲಿ 115 ರನ್ ಜೊತೆಯಾಟವಾಡಿದರು. ಆದರೆ ನಾಯಕ ರಿಷಬ್ ಪಂತ್ 6 ಎಸೆತಗಳಿಂದ 7 ರನ್‌ಗಳಿಸಿ ಮತ್ತೆ ವಿಫಲವಾಗುವುದರೊಂದಿಗೆ ಲಖನೌ ಇನ್ನಿಂಗ್ಸ್‌ಗೆ ಹೊಡೆತ ಬಿತ್ತು. ಆದರೆ ನಿಕೋಲಸ್ ಪೂರನ್‌ರ ಆಟದಿಂದ (26 ಎಸೆತಗಳಿಂದ 45) ತಂಡದ ಮೊತ್ತ 200ರ ಗಡಿ ದಾಟುವಂತಾಯಿತು. ಸನ್ ರೈಸರ್ಸ್ ಪರ ಇಶಾನ್ ಮಾಲಿಂಗ 2 ವಿಕೆಟ್, ಹರ್ಷ್ ದುಬೆ, ಹರ್ಷಲ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ ಉಳಿದ ಮೂರು ವಿಕೆಟ್ ಗಳನ್ನು ಹಂಚಿಕೊಂಡರು.

* ಪ್ಲೇ ಆಫ್‌ನಿಂದ 5 ತಂಡಗಳು ಔಟ್, ಉಳಿದ ಒಂದು ಸ್ಥಾನಕ್ಕೆ ಡೆಲ್ಲಿ ಮುಂಬೈ ಪೈಪೋಟಿ
ಈ ಬಾರಿ ಐಪಿಎಲ್‌ನಿಂದ 5 ತಂಡಗಳು ಅಧಿಕೃತವಾಗಿ ಹೊರಬಿದ್ದಿವೆ. ಚೆನ್ನೈ, ರಾಜಸ್ಥಾನ, ಹೈದರಾಬಾದ್, ಕೋಲ್ಕತಾ ಬಳಿಕ ಲಖನೌ ಕೂಡಾ ನಾಕೌಟ್ ಎಂಟ್ರಿಯ ಕನಸು ಭಗ್ನಗೊಂಡಿದೆ.
ಈ ಬಾರಿ ಗುಜರಾತ್, ಆರ್‌ಸಿಬಿ, ಪಂಜಾಬ್ ಪ್ಲೇ-ಆಫ್ ಪ್ರವೇಶಿಸಿವೆ. ಇನ್ನುಳಿದ 1 ಸ್ಥಾನಕ್ಕೆ ಮುಂಬೈ, ಡೆಲ್ಲಿ ನಡುವೆ ಪೈಪೋಟಿಯಿದೆ. ಮುಂಬೈ 12 ಪಂದ್ಯ ಆಡಿದ್ದು, 7ರಲ್ಲಿ ಗೆದ್ದು 14 ಅಂಕ ಗಳಿಸಿದೆ. ಡೆಲ್ಲಿ 12ರಲ್ಲಿ 13 ಅಂಕ ಹೊಂದಿದೆ. ಈ 2 ತಂಡಕ್ಕೆ ತಲಾ 2 ಪಂದ್ಯ ಬಾಕಿಯಿವೆ. ಒಂದು ಪಂದ್ಯದಲ್ಲಿ ಈ 2 ತಂಡಗಳೇ ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಈ 2 ತಂಡಗಳಿಗೆ ಪಂಜಾಬ್ ಸವಾಲು ಎದುರಾಗಲಿವೆ.

Categories
ಮಂಗಳೂರು

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ!

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ!

– ವಿದ್ಯಾರ್ಥಿಗಳು, ಜನರು ಮಳೆಯ ಆರ್ಭಟಕ್ಕೆ ಸಿಲುಕಿ ಪರದಾಟ

NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿದೆ. ನಗರದ ವಿವಿಧೆಡೆ ಬೆಳಗ್ಗೆಯೇ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಯಿಂದ ಎಡೆಬಿಡದೆ ವರ್ಷಧಾರೆ ಸುರಿದಿದೆ. ದಿಢೀರ್ ಮಳೆಯಿಂದಾಗಿ ಸಾರ್ವಜನಿಕರು ಹೈರಾಣಾದರು. ದಿನನಿತ್ಯದ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಮಂಗಳೂರು ಮತ್ತು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಇತರ ಭಾಗಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದೆ.
ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಬೆಳಗಿನ ಜಾವದಿಂದಲೇ ಭಾರಿ ಮಳೆಯಾಗಿದ್ದರೆ, ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗಿನ ಜಾವ ಮಳೆಯಿಂದ ತೊಂದರೆಯಾಯಿತು.
ಬೆಳಿಗ್ಗೆ ಮನೆಯಿಂದ ಹೊರಟಿದ್ದ ಜನರು ಮತ್ತು ವಿದ್ಯಾರ್ಥಿಗಳು ಮಳೆಯ ಆರ್ಭಟಕ್ಕೆ ಸಿಲುಕಿ ಪರದಾಡುವಂತಾಗಿದೆ.

Categories
ಬೆಂಗಳೂರು

ವಿದ್ಯಾರ್ಥಿಗಳಿಗೆ ಬಿಗ್ ಶಾಕ್..!!

ಟಾಪ್ 3 ನ್ಯೂಸ್

ವಿದ್ಯಾರ್ಥಿಗಳಿಗೆ ಬಿಗ್ ಶಾಕ್..!!
– ಸರ್ಕಾರಿ, ಅನುದಾನಿತ ಪದವಿ ಕಾಲೇಜು ಶುಲ್ಕ ಶೇ.5 ಹೆಚ್ಚಳ.!

– ₹20 ಮುಖಬೆಲೆಯ ಹೊಸ ನೋಟು ಶೀಘ್ರ ಬಿಡುಗಡೆ..!!

– ಬೆಂಗಳೂರು : ವಾರಾಂತ್ಯದ ಒಳಗೆ ಸಿಇಟಿ ಫಲಿತಾಂಶ ಪ್ರಕಟ ಸಾಧ್ಯತೆ..!!

NAMMUR EXPRESS NEWS
ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪದವಿ, ಕಾನೂನು ಹಾಗೂ ಚಿತ್ರಕಲಾ ಕಾಲೇಜುಗಳಲ್ಲಿನ 2025-26ನೇ ಸಾಲಿನ ಪ್ರವೇಶ ಕೋರ್ಸುಗಳ ಶುಲ್ಕವನ್ನು ಶೇ.5 ಹೆಚ್ಚಳ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ. ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ, ಅನುದಾನಿತ ಪದವಿ ಕಾಲೇಜು ಶುಲ್ಕ ಶೇ.5 ಹೆಚ್ಚಳ ಮಾಡಿದ್ದು, ಇದರಿಂದ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎಂ, ಕಾನೂನು, ಚಿತ್ರಕಲೆ ಸೇರಿದಂತೆ ಎಲ್ಲ ರೀತಿ ಪದವಿ ಕೋರ್ಸುಗಳ ಶುಲ್ಕ ಶೇ.5ರಷ್ಟು ಹೆಚ್ಚಾಗಲಿದೆ. ಇನ್ನೂ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಶುಲ್ಕವನ್ನು ಪ್ರತ್ಯೇಕವಾಗಿ ಪಡೆಯಲು ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕ, ಪ್ರವೇಶ ಶುಲ್ಕ, ಬೋಧನಾ ಶುಲ್ಕ ಹೀಗೆ 22 ರೀತಿಯ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗಿದೆ. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರತಿ ವರ್ಷ ಶೇ.5ರಷ್ಟು ಶುಲ್ಕ ಹೆಚ್ಚಿಸಲು ನಿಯಮ ರೂಪಿಸಲಾಗಿದೆ.

– ₹20 ಮುಖಬೆಲೆಯ ಹೊಸ ನೋಟು ಶೀಘ್ರ ಬಿಡುಗಡೆ..!!

ಮುಂಬೈ: ಗವರ್ನರ್ ಸಂಜಯ್ ಮದ್ದೋತ್ರಾ ಅವರ ಸಹಿ ಇರುವ ₹20 ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಗವರ್ನರ್ ಆಗಿದ್ದ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಲ್ಗೊತ್ರಾ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಾತ್ಮ ಗಾಂಧಿ ಅವರ ಭಾವಚಿತ್ರ ಇರುವ ನೋಟುಗಳ ಸರಣಿಯಂತೆಯೇ ಈ ಹೊಸ ನೋಟುಗಳನ್ನು ವಿನ್ಯಾಸಗೊಳಿಸಲಾಗಿದೆ. ಹಳೆಯ ನೋಟುಗಳಿಗೆ ಅನ್ವಯಿಸುವ ನಿಯಮಾವಳಿಗಳು ಇವುಗಳಿಗೂ ಅನ್ವಯವಾಗಲಿವೆ ಎಂದು ತಿಳಿಸಿದೆ.

– ಬೆಂಗಳೂರು: ವಾರಾಂತ್ಯದ ಒಳಗೆ ಸಿಇಟಿ ಫಲಿತಾಂಶ ಪ್ರಕಟ ಸಾಧ್ಯತೆ

ಬೆಂಗಳೂರು : ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈ ವಾರಾಂತ್ಯದೊಳಗೆ ಪ್ರಕಟವಾಗುವ ಸಾಧ್ಯತೆ ಇದೆ. ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಮತ್ತು ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾದ ಬಳಿಕ ಸಿಇಟಿ ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರು. ಅದರಂತೆ ಈಗಾಗಲೇ ಈ ಫಲಿತಾಂಶಗಳು ಪ್ರಕಟವಾಗಿವೆ. ಈ ಫಲಿತಾಂಶ ಪರಿಗಣಿಸಿ ಸಂಬಂಧಿಸಿದ ವಿದ್ಯಾರ್ಥಿಗಳ ಸಿಇಟಿ ರ್‍ಯಾಂಕಿಂಗ್‌ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆ ಬಳಿಕ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ-2 ಬರೆದಿದ್ದ 71 ಸಾವಿರ ವಿದ್ಯಾರ್ಥಿಗಳಲ್ಲಿ 41 ಸಾವಿರ ಮಂದಿ ಫಲಿತಾಂಶ ಉತ್ತಮಗೊಂಡಿದೆ. ಇದರಲ್ಲಿ ಬಹುತೇಕ ಮಂದಿ ವಿಜ್ಞಾನ ವಿಭಾಗದವರಾಗಿದ್ದು, ಅವರ ಉತ್ತಮಗೊಂಡಿರುವ ಫಲಿತಾಂಶವನ್ನು ಸಿಇಟಿ ರ್‍ಯಾಂಕಿಂಗ್‌ಗೆ ಈಗ ಪರಿಗಣಿಸಬೇಕಿದೆ. ದ್ವಿತೀಯ ಪಿಯುಸಿ ಮತ್ತು ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದಿರುವ ಅಂಕಗಳಲ್ಲಿ ತಲಾ ಶೇ.50ರಷ್ಟು ಅಂಕಗಳನ್ನು ಒಟ್ಟುಗೂಡಿಸಿ ರ್‍ಯಾಂಕಿಂಗ್‌ ನೀಡಲಾಗುತ್ತದೆ. ಉತ್ತಮಗೊಂಡಿರುವ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡಬೇಕಿದೆ. ಒಟ್ಟಾರೆ ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ಈ ವಾರಾಂತ್ಯದೊಳಗೆ ಫಲಿತಾಂಶ ಪ್ರಕಟಿಸುವ ಪ್ರಯತ್ನದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ತೊಡಗಿದ್ದಾರೆ. ಏ.16 ಮತ್ತು 17ರಂದು ಈ ಬಾರಿಯ ಸಿಇಟಿ ಪರೀಕ್ಷೆಗಳನ್ನು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 3.11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.15ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. 1,958 ಅಭ್ಯರ್ಥಿಗಳು ಹಾಜರಾಗಿದ್ದರು.

Categories
ಬೆಂಗಳೂರು

ಮಹಾ ಮಳೆಗೆ ಬೆಂಗಳೂರು ಮುಳುಗಡೆ!

ಮಹಾ ಮಳೆಗೆ ಬೆಂಗಳೂರು ಮುಳುಗಡೆ!
– ಇಬ್ಬರು ಸಾವು: ನೂರಾರು ಮನೆಗಳಿಗೆ ನೀರು
– ಮಳೆ ಕಾರಣ ಹಲವು ಕಚೇರಿಗಳಿಗೆ ವರ್ಕ್ ಫ್ರಮ್ ಹೋಂ
– ವಾಹನ ಸಂಚಾರ ಹುಷಾರ್: ಆಡಳಿತ ಅಲರ್ಟ್ ಆಗಬೇಕು!

NAMMUR EXPRESS NEWS
ಬೆಂಗಳೂರು : ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಇಂದು ಬೆಳಿಗ್ಗೆ ತಾನೇ ಬೆಂಗಳೂರಿನ ವೈಟ್ ಫೀಲ್ಡ್ ಭಾಗದಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆ ಒಬ್ಬರು ಸಾವನಪ್ಪಿದ್ದರು ಇದೀಗ ಬೆಂಗಳೂರಿನಲ್ಲಿ ಮಹಾಮಳೆಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ನೀರು ನಿಂತಿದ್ದು, ಜನರಿಗೆ ಮನೆಯಿಂದ ಹೊರಗಡೆ ಕಾಲಿಡಲು ಸಹ ಆಗುತ್ತಿಲ್ಲ. ಇದೀಗ ಬೆಂಗಳೂರಿನ ಮಹಾಮಳೆಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಮೃತರನ್ನು ಮನೋಹರ್ ಕಾಮತ್ (55) ಮತ್ತು ದಿನೇಶ್ (9) ಎನ್ನುವ ಬಾಲಕ ಬಲಿಯಾಗಿದ್ದಾರೆ.

ಬಿಟಿಎಂ ಲೇಔಟ್ ನ 2 ನೇ ಹಂತದ ಎನ್ ಎಸ್ ಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಮಧುವನ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಾರ್ಟ್ಮೆಂಟ್ ನಿವಾಸಿ ಮನೋಹರ್ ಕಾಮತ್ ಹಾಗೂ ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ದುರ್ಮರಣ ಹೊಂದಿದ್ದಾರೆ. ಮಳೆಯಿಂದ ಸಂಪೂರ್ಣವಾಗಿ ಅಪಾರ್ಟ್ಮೆಂಟಿನ ಬೇಸ್ಮೆಂಟ್ ಜಲಾವೃತವಾಗಿತ್ತು. ಈ ವೇಳೆ ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಎಲೆಕ್ಟ್ರಿಕ್ ಶಾಕ್ ನಿಂದ ಮನೋಹರ್ ಕಾಮತ್ ಮತ್ತು ದಿನೇಶ್ ಸಾವನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸದ್ಯ ಇಬ್ಬರ ಮೃತ ದೇಹಗಳನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಧುವನ ಅಪಾರ್ಟ್ಮೆಂಟ್ ಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಮೈಕೋ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಹನುಮಂತನ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡುಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮ್ಮ ಯಾವುದೇ ಕೆಲಸ ಅಥವಾ ಯೋಜನೆಗೆ ಸರ್ಕಾರದಿಂದ ಪ್ರಯೋಜನಗಳು ಸಿಗಬಹುದು. ಕೆಲಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಬಹುದು. ಕೆಲಸಕ್ಕಾಗಿ ಪ್ರಯಾಣಿಸುವ ಸಾಧ್ಯತೆಯೂ ಇದೆ. ನೀವು ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ನೀವು ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ ಮತ್ತು ಕುಟುಂಬ ಸದಸ್ಯರೊಂದಿಗೆ ಚರ್ಚಿಸುತ್ತೀರಿ.

** ವೃಷಭ ರಾಶಿ :
ಇಂದು ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ವ್ಯವಹಾರದಲ್ಲಿಯೂ ಆರ್ಥಿಕ ಲಾಭಗಳು ದೊರೆಯುತ್ತವೆ. ಹೊಸ ಕೆಲಸಗಳನ್ನು ಮತ್ತು ಹೊಸ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ದೀರ್ಘ ಪ್ರಯಾಣದ ಸಾಧ್ಯತೆ ಇದೆ. ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ನಿಮ್ಮ ಮಕ್ಕಳು ಸಹ ಪ್ರಗತಿ ಹೊಂದುತ್ತಾರೆ. ನಿಮ್ಮ ಆರೋಗ್ಯವನ್ನು ನೀವು ನೋಡಿಕೊಳ್ಳಬೇಕಾಗುತ್ತದೆ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯವರು ನಿಮ್ಮ ಆಕ್ರಮಣಕಾರಿ ಸ್ವಭಾವದಿಂದಾಗಿ ನಿಮಗೆ ನೀವೇ ಹಾನಿ ಮಾಡಿಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೀವು ಕಾಳಜಿ ವಹಿಸಬೇಕು. ನೀವು ನಿಮ್ಮ ಮಾತನ್ನು ನಿಯಂತ್ರಿಸಿದರೆ, ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳನ್ನು ತಪ್ಪಿಸಬಹುದು. ಖರ್ಚುಗಳು ಹೆಚ್ಚಾಗಿರುತ್ತವೆ. ನಿಮ್ಮ ಆರೋಗ್ಯ ಕೆಟ್ಟದಾಗಿರುತ್ತದೆ. ನೀವು ನಿರಾಶೆಯನ್ನು ಅನುಭವಿಸುವಿರಿ.

** ಕರ್ಕಾಟಕ ರಾಶಿ :
ಇಂದು ಪ್ರೀತಿ ಮತ್ತು ವಾತ್ಸಲ್ಯದ ಭಾವನೆಗಳಿಂದ ನಿಮ್ಮ ಮನಸ್ಸು ತುಂಬಿ ತುಳುಕಬಹುದು. ಇಂದು ನೀವು ಹೊಸ ವಸ್ತುಗಳು, ಹೊಸ ಬಟ್ಟೆಗಳು, ಆಭರಣಗಳು ಮತ್ತು ವಾಹನಗಳನ್ನು ಖರೀದಿಸಬಹುದು ಇದರಿಂದ ನೀವು ನಿಮ್ಮ ದಿನವನ್ನು ಮನರಂಜನೆ ಮತ್ತು ಮೋಜಿನಲ್ಲಿ ಕಳೆಯಬಹುದು. ವ್ಯವಹಾರದಲ್ಲಿ ಪಾಲುದಾರಿಕೆಯಿಂದ ನೀವು ಲಾಭ ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

** ಸಿಂಹ ರಾಶಿ :
ಇಂದು ಉದಾಸೀನತೆ ಮತ್ತು ಸಂದೇಹವು ನಿಮ್ಮನ್ನು ಅಶಾಂತರನ್ನಾಗಿ ಮಾಡುತ್ತದೆ. ದೈನಂದಿನ ಕೆಲಸಗಳು ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ನಿಮಗೆ ಅಪೇಕ್ಷಿತ ಫಲಿತಾಂಶಗಳು ಸಿಗದಿರಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಜಾಗರೂಕರಾಗಿರಬೇಕು. ನಿಮ್ಮ ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ ಸಿಗದಿರಬಹುದು.

** ಕನ್ಯಾ ರಾಶಿ :
ಇಂದು ನೀವು ಆತಂಕ ಮತ್ತು ಭಯದಿಂದ ತೊಂದರೆಗೊಳಗಾಗುತ್ತೀರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಹಠಾತ್ ದೊಡ್ಡ ಖರ್ಚುಗಳ ಸಾಧ್ಯತೆ ಇದೆ. ಬೌದ್ಧಿಕ ಚರ್ಚೆಗಳು ಮತ್ತು ಚರ್ಚೆಗಳು ಫಲಪ್ರದವಾಗುವುದಿಲ್ಲ. ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತೀರಿ. ವಿಶೇಷ ವ್ಯಕ್ತಿಯ ಕಡೆಗೆ ನೀವು ಆಕರ್ಷಿತರಾಗುತ್ತೀರಿ.

** ತುಲಾ ರಾಶಿ :
ಇಂದು ತುಲಾ ರಾಶಿಯ ಜನರು ಜಾಗರೂಕರಾಗಿರಿ. ನಿರಂತರ ಆಲೋಚನೆಗಳಿಂದಾಗಿ ನಿಮ್ಮ ಮಾನಸಿಕ ಸ್ಥಿತಿ ಅಸ್ಥಿರವಾಗಿರುತ್ತದೆ ಮತ್ತು ನಿಮ್ಮ ತಾಯಿ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಚಿಂತೆಗಳು ನಿಮಗೆ ಇರುತ್ತವೆ. ಇಂದು ಪ್ರಯಾಣ ಮಾಡುವುದನ್ನು ತಪ್ಪಿಸುವುದು ನಿಮಗೆ ಒಳ್ಳೆಯದು. ಸಮಯಕ್ಕೆ ಸರಿಯಾಗಿ ಆಹಾರ ಮತ್ತು ನಿದ್ರೆ ಸಿಗದ ಕಾರಣ ನೀವು ಅಸ್ವಸ್ಥರಾಗುತ್ತೀರಿ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಬೇಕು.

** ವೃಶ್ಚಿಕ ರಾಶಿ :
ಇಂದು ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ದಿನ ಆರ್ಥಿಕ ಲಾಭ ಮತ್ತು ಅದೃಷ್ಟವೂ ಹೆಚ್ಚಾಗಬಹುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಸಹ ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತಲೇ ಇರುತ್ತೀರಿ. ನಿಮ್ಮ ಪ್ರತಿಸ್ಪರ್ಧಿಗಳನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ನೀವು ಪ್ರೀತಿಪಾತ್ರರನ್ನು ಭೇಟಿಯಾಗುತ್ತೀರಿ ಮತ್ತು ನಿಮಗೆ ಬಹಳಷ್ಟು ಸಂತೋಷ ಸಿಗುತ್ತದೆ. ಸಣ್ಣ ಪ್ರವಾಸದ ಸಾಧ್ಯತೆಯಿದೆ. ಆರೋಗ್ಯವು ಉತ್ತಮವಾಗಿರುತ್ತದೆ.

** ಧನಸ್ಸು ರಾಶಿ :
ಇಂದು ಮಾನಸಿಕ ಸ್ಥಿತಿ ಮತ್ತು ಕೌಟುಂಬಿಕ ಅಶಾಂತಿಯಿಂದಾಗಿ ನೀವು ತೊಂದರೆಗೊಳಗಾಗುತ್ತೀರಿ. ನೀವು ಹಣವನ್ನು ತಪ್ಪಾಗಿ ಖರ್ಚು ಮಾಡುತ್ತೀರಿ. ನಿಮ್ಮ ಕೆಲಸಕ್ಕೂ ಅಡ್ಡಿಯಾಗುತ್ತದೆ. ಇಂದು ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳದಿದ್ದರೆ ಉತ್ತಮ. ಕುಟುಂಬ ಸದಸ್ಯರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಅಥವಾ ತಪ್ಪು ತಿಳುವಳಿಕೆ ಉಂಟಾಗದಂತೆ ನೀವು ಕಾಳಜಿ ವಹಿಸಬೇಕಾಗುತ್ತದೆ.

** ಮಕರ ರಾಶಿ :
ಇಂದು ನಿಮ್ಮ ಎಲ್ಲಾ ಕೆಲಸಗಳು ಇಂದು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕಚೇರಿ ಮತ್ತು ವ್ಯವಹಾರ ಸ್ಥಳದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಬಡ್ತಿಯ ಸಾಧ್ಯತೆಗಳಿವೆ. ಗೃಹ ಜೀವನದಲ್ಲಿ ಸಂತೋಷದ ವಾತಾವರಣವಿರುತ್ತದೆ. ದೈಹಿಕ ಗಾಯದ ಸಾಧ್ಯತೆಗಳಿರುವುದರಿಂದ ಜಾಗರೂಕರಾಗಿರಿ ಮತ್ತು ಬೀಳುವುದನ್ನು ತಪ್ಪಿಸಿ. ನೀವು ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಭೇಟಿಯಾಗುತ್ತೀರಿ. ನೀವು ಮಾನಸಿಕವಾಗಿ ಶಾಂತವಾಗಿರುತ್ತೀರಿ.

** ಕುಂಭ ರಾಶಿ :
ಇಂದು ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಮಾನಸಿಕ ಆರೋಗ್ಯವು ಹದಗೆಡುತ್ತದೆ. ನ್ಯಾಯಾಲಯದ ಪ್ರಕರಣಗಳ ಜಗಳಕ್ಕೆ ಸಿಲುಕಬೇಡಿ. ನಿಮ್ಮ ಬಂಡವಾಳವು ತಪ್ಪು ಸ್ಥಳದಲ್ಲಿ ಹೂಡಿಕೆಯಾಗದಂತೆ ನೋಡಿಕೊಳ್ಳಿ. ಕುಟುಂಬ ಸದಸ್ಯರು ಪ್ರತಿಕೂಲ ರೀತಿಯಲ್ಲಿ ವರ್ತಿಸಬಹುದು. ಹಠಾತ್ ಘಟನೆಗಳಿಂದ ದೂರವಿರಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ಹಣ ಖರ್ಚಾಗುವ ಸಾಧ್ಯತೆ ಇದೆ.

** ಮೀನ ರಾಶಿ :
ಇಂದು ನಿಮಗೆ ತುಂಬಾ ಅನುಕೂಲಕರ ದಿನ. ವ್ಯವಹಾರ ಅಥವಾ ಉದ್ಯೋಗದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿಮ್ಮ ಸ್ನೇಹಿತರು ಮತ್ತು ಹಿರಿಯರಿಂದ ನಿಮಗೆ ಲಾಭವಾಗಬಹುದು. ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಿರಿ ಮತ್ತು ಈ ಸ್ನೇಹವು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ನೀವು ಕೆಲವು ಶುಭ ಸಂದರ್ಭದಲ್ಲಿ ಹಾಜರಿರುತ್ತೀರಿ. ನೀವು ಸ್ನೇಹಿತರೊಂದಿಗೆ ಹೊರಗೆ ಹೋಗಬಹುದು.

Categories
ಚಿಕ್ಕಮಗಳೂರು

ಆಪರೇಷನ್ ಸಿಂದೂರ ಯಶಸ್ವಿ ಕೊಪ್ಪದಲ್ಲಿ ಬೃಹತ್ ತಿರಂಗಾ ಯಾತ್ರೆ

ಆಪರೇಷನ್ ಸಿಂದೂರ ಯಶಸ್ವಿ ಕೊಪ್ಪದಲ್ಲಿ ಬೃಹತ್ ತಿರಂಗಾ ಯಾತ್ರೆ

* 1000 ಮೀಟರ್ ಬೃಹತ್ ತಿರಂಗಾ, ಸಾವಿರಾರು ಜನ ಭಾಗಿ
* ಶೃಂಗೇರಿ ಕ್ಷೇತ್ರ ಮಟ್ಟದ ತಿರಂಗಾ ಯಾತ್ರೆ

NAMMMUR EXPRESS NEWS
ಕೊಪ್ಪ: ನಗರದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಆಪರೇಷನ್ ಸಿಂಧೂರ ಹಾಗೂ ಭಾರತೀಯ ಸೈನಿಕರನ್ನು ಬೆಂಬಲಿಸಿ ಶೃಂಗೇರಿ ಕ್ಷೇತ್ರ ಮಟ್ಟದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು,
ಯಾತ್ರೆಯಲ್ಲಿ 1000 ಅಡಿ ಉದ್ದದ ಬಾವುಟ ಹಿಡಿದು ಭಾರತ ಮಾತೆಗೆ ಹಾಗೂ ಭಾರತೀಯ ಸೈನ್ಯಕ್ಕೆ ಘೋಷಣೆ,ಜೈಕಾರ ಕೂಗುತ್ತಾ ಮಹಿಳೆಯರೂ ಸೇರಿದಂತೆ ಕ್ಷೇತ್ರದ ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಮಾಜಿ ಯೋಧರು,ಬಿಜೆಪಿ ನಾಯಕ ಡಿ.ಎನ್ ಜೀವರಾಜ್ ಸೇರಿ ಹಲವು ಪ್ರಮುಖರು,ಕಾರ್ಯಕರ್ತರು,ಸಂಘ,ಸಂಘಟನೆಯ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಕೊಪ್ಪ ಬಸ್ ನಿಲ್ದಾಣದಲ್ಲಿ ರಾಷ್ಟ್ರ ಗೀತೆ ಹಾಡುವುದರ ಮೂಲಕ ಸಮಾರೋಪಗೊಂಡಿತು..