Categories
ಕರಾವಳಿ

ಇನ್ಸ್ಟಾಗ್ರಾಮ್ ಅಲ್ಲಿ ಪರಿಚಯ ಮಾಡಿಕೊಂಡು ರೇಪ್..!

ಕರಾವಳಿ ಟಾಪ್ ನ್ಯೂಸ್

ಇನ್ಸ್ಟಾಗ್ರಾಮ್ ಅಲ್ಲಿ ಪರಿಚಯ ಮಾಡಿಕೊಂಡು ರೇಪ್..!

* ಮಂಗಳೂರು : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
* ಮಣಿಪಾಲ: ಹೊಟೇಲ್ ಬುಕ್ಕಿಂಗ್ ನೆಪ: ಸಾವಿರ ರೂ. ವಂಚನೆ
* ಉಳ್ಳಾಲ: ಇನ್ಸ್ಟಾಗ್ರಾಮ್ ಪರಿಚಯ: ಬಾಲಕಿಯ ಅತ್ಯಾಚಾರ..!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಬಿಜೈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಬಳಿಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ತಳದಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಗಿದೆ. ನೀರಿನ ಸಮಸ್ಯೆಯನ್ನು ಪರಿಶೀಲಿಸಿ, ಸರಿಪಡಿಸಲೆಂದು ಹೋಗಿದ್ದ ಕಟ್ಟದ ಕಾರ್ಮಿಕನಿಗೆ ಕಟ್ಟಡದ ತಳಭಾಗದಲ್ಲಿ ಸುಮಾರು ಮೂರು ಅಡಿಯಷ್ಟು ನೀರು ನಿಂತಿದ್ದು ಆ ನೀರಿನಲ್ಲಿ ಶವ ಕೊಳೆತು ತೇಲುತ್ತಿರುವುದು ಕಂಡು ಬಂದಿದೆ.‌ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಕಳೆದ ಫೆಬ್ರವರಿ ತಿಂಗಳಲ್ಲಿ ಮೃದುಲಾ ಎಂಬ ಮಹಿಳೆ ಹೊಟೇಲ್ ಕೋಣೆಯನ್ನು ಕಾಯ್ದಿರಿಸಲು ವೆಬ್ ಸೈಟ್ ಗೆ ಲಾಗಿನ್ ಆದ ಸಂದರ್ಭದಲ್ಲಿ ತುಷಾರ್ ಮೌರ್ಯ ಎನ್ನುವ ವ್ಯಕ್ತಿ ವಾಟ್ಸಪ್ ಮೂಲಕ ಕರೆ ಮಾಡಿ, ಕೋಡ್ ಮೂಲಕ ಬುಕ್ಕಿಂಗ್ ಮಾಡಬೇಕೆಂದು ತಿಳಿಸಿದ್ದಾರೆ. ಮೃದುಲಾ ಅವರು ಅದರಂತೆಯೇ ತಮ್ಮ ಬ್ಯಾಂಕ್ ಖಾತೆಯಿಂದ ಕೋಡ್ ಮೂಲಕ ಇಪ್ಪತ್ತು ಸಾವಿರ ಮತ್ತು ಮಗನ ಖಾತೆಯಿಂದ ಆರು ಸಾವಿರ ರೂಪಾಯಿ ಪಾವತಿಸಿದ್ದಾರೆ. ಇಷ್ಟು ತಿಂಗಳಾದರು ಕೋಣೆಯನ್ನು ಕಾಯ್ದಿರಿಸಿದ ಹೊಟೇಲ್ ನಿಂದ ಯಾವುದೇ ಮಾಹಿತಿ ಮತ್ತು ಪ್ರತಿಕ್ರಿಯೆ ಬಾರದಿದ್ದುದನ್ನು ಕಂಡು ಮೃದುಲಾ ಅವರು ಪೊಲೀಸರಿಗೆ ತಿಳಿಸಿದಾಗ ಅವರು ವಂಚನೆಗೆ ಒಳಗಾದ ಸಂಗತಿ ತಿಳಿದುಬಂದಿದೆ. ಪ್ರಕರಣವು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಉಳ್ಳಾಲ: ಪಿಯುಸಿ ಮುಗಿಸಿ ನರ್ಸಿಂಗ್ ಸೇರಲು ತಯಾರಿ ನಡೆಸಿದ್ದ ಬಾಲಕಿಯೊಬ್ಬಳು ಇನ್ಸ್ಟಾಗ್ರಂ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿ,ಭೇಟಿಯಾಗಲು ಹೋಗಿ, ಅತ್ಯಾಚಾರಕ್ಕೆ ಒಳಗಾದ ಘಟನೆ ಉಳ್ಳಾಲದಲ್ಲಿ ಕಂಡುಬಂದಿದೆ. ಕೆಲ್ವಿನ್ ಎನ್ನುವ ವ್ಯಕ್ತಿ ಬಾಲಕಿಯನ್ನು ಪುಸಲಾಯಿಸಿ ತನ್ನ ಬಳಿ ಕರೆಸಿಕೊಂಡು, ಹೊಟೇಲ್ ಕೋಣೆಯನ್ನು ಕಾಯ್ದಿರಿಸಲು ಹೋದಾಗ ಹುಡುಗಿ ಅಪ್ರಾಪ್ತ ವಯಸ್ಕಳಾದ ಕಾರಣ ಹೊಟೇಲ್ ಕೋಣೆಯನ್ನು ನೀಡಲು ಸಿಬ್ಬಂದಿಗಳು ನಿರಾಕರಿಸಿದ್ದಾರೆ. ಬಳಿಕ ಕೆಲ್ವಿನ್ ಸೋಮೇಶ್ವರ ಸಮುದ್ರ ತೀರದಲ್ಲಿ ಕಾರಿನೊಳಗೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಏನು ತಿಳಿಯದ ರೀತಿಯಲ್ಲಿ ಬಾಲಕಿಯನ್ನು ಆಕೆಯ ಮನೆಗೆ ಬಿಟ್ಟು ಹೋಗಿದ್ದಾನೆ. ಮರುದಿನ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋದಾಗ ಆಕೆ ಅತ್ಯಾಚಾರಕ್ಕೆ ಒಳಪಟ್ಟ ಸಂಗತಿ ಬೆಳಕಿಗೆ ಬಂದಿದೆ. ಇವುಗಳ ಆಧಾರದ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯ ವಿಚಾರದಲ್ಲಿ ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ.

Categories
ಚಿಕ್ಕಮಗಳೂರು

ಕೊಪ್ಪ ಬಸ್ ನಿಲ್ದಾಣದ ಅವ್ಯವಸ್ಥೆ: ಛೇ..ನಾಚಿಕೆಗೇಡು!

ಕೊಪ್ಪ ಬಸ್ ನಿಲ್ದಾಣದ ಅವ್ಯವಸ್ಥೆ: ಛೇ..ನಾಚಿಕೆಗೇಡು!
* ಮಳೆ ಬಂದ್ರೆ ಎಲ್ಲೆಡೆ ನೀರು,ರಿಪೇರಿನೂ ಇಲ್ಲ,ಹೊಸದು ಇಲ್ಲ
* ಮೈಮೇಲೆ ಬಸ್ ನಿಲ್ದಾಣ ಬೀಳುವ ಮುನ್ನ ಎಚ್ಚರ.!
* ಶಾಸಕ ರಾಜೇಗೌಡರೇ ಬಸ್ ನಿಲ್ದಾಣ ಯಾವಾಗ..?

ನಮ್ಮೂರ್ ಪ್ರಾಬ್ಲಮ್ !!

NAMMMUR EXPRESS NEWS
ಕೊಪ್ಪ: ಅದು ತಾಲೂಕಿನ ಪಟ್ಟಣದ ಮುಖ್ಯ ಬಸ್ ನಿಲ್ದಾಣ. ದಿನಕ್ಕೆ ನೂರಾರು ಬಸ್‌ಗಳ ಪ್ರಯಾಣ. ಸಾವಿರಾರು ಜನರ ಆಗಮನ. ಸ್ಥಳೀಯರು, ವಿದ್ಯಾರ್ಥಿಗಳು, ಉದ್ಯೋಗಿಗಳು ಇಲ್ಲಿಂದಲೇ ತಮ್ಮ ತಮ್ಮ ಸ್ಥಳಗಳಿಗೆ ಪ್ರಯಾಣ ಬೆಳೆಸೋದು. ಸಂತೆ ಇತರೆ ಕಾರಣಕ್ಕಾಗಿ ವಾರಕ್ಕೆ ಸಾವಿರಾರು ಜನ ಓಡಾಡೋದು. ಇದು ಕೊಪ್ಪ ಬಸ್ ನಿಲ್ದಾಣ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಸಾರ್ವಜನಿಕ ಬಸ್ ನಿಲ್ದಾಣ ನಿರ್ಮಾಣ ಮಾಡಿ ದಶಕವೇ ಕಳೆದಿದೆ.

ಹಾಳು ಬಿದ್ದ ಕಟ್ಟಡ.. ಸುತ್ತಮುತ್ತ ಗಲೀಜು..!

2000ನೇ ಇಸವಿಯಲ್ಲಿ ನಿರ್ಮಾಣಗೊಂಡ ನೂತನ ಬಸ್ ನಿಲ್ದಾಣ ಈಗ ಸರಿಯಾದ ದುರಸ್ಥಿ ಇಲ್ಲದೆ ಕುಸಿಯುವ ಹಂತ ತಲುಪಿದ್ದು, ಸಾವಿರಾರು ಪ್ರಯಾಣಿಕರು ಇದೇ ಆತಂಕದಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಬಸ್ ನಿಲ್ದಾಣದ ಸುತ್ತಮುತ್ತಲಿನ ವಾತಾವರಣ ಹಾಳು ಬಿದ್ದಂತೆ ಭಾಸವಾಗುತ್ತದೆ.

ಕುಸಿದು ಬೀಳುವ ಹಂತದಲ್ಲಿ ಮಹಿಳಾ ಕೊಠಡಿ!

ಬಸ್ ನಿಲ್ದಾಣದ ಮೇಲ್ಛಾವಣಿ ಮಳೆ ಗಾಳಿಗೆ ಸಂಪೂರ್ಣ ಲಡ್ಡಾಗಿದ್ದು ನೀರು ಸೋರುತ್ತಿದೆ, ನೆಲಕ್ಕೆ ಹಾಕಿದ ನೆಲಹಾಸು ಕೂಡ ಕಿತ್ತುಬರುತ್ತಿದೆ. ಕಂಬಗಳು ಡೊಂಕಾಗಿದ್ದು,ನಿಲ್ದಾಣದ ತುಂಬಾ ತ್ಯಾಜ್ಯಗಳು ರಾರಾಜಿಸುತ್ತಿದೆ. ನಿಲ್ದಾಣದಲ್ಲಿರುವ ಮಹಿಳೆಯರ ವಿಶ್ರಾಂತಿ ಕೊಠಡಿ ಸೇರಿದಂತೆ ಇತರ ಕೊಠಡಿಗಳ ಗೋಡೆಗಳು ಕುಸಿದು ಬೀಳುವ ಹಂತದಲ್ಲಿದೆ.

ಬಸ್ ನಿಲ್ದಾಣ ಹೊಸದಾಗಿ ಮಾಡಲು ಜನರ ಪಟ್ಟು!

ಇಷ್ಟು ದುಸ್ಥಿತಿಯಿಂದ ಕೂಡಿ ಕುಸಿಯುವ ಹಂತದಲ್ಲಿರುವ ಕೊಪ್ಪ ಬಸ್ ನಿಲ್ದಾಣವನ್ನು ದುರಸ್ಥಿ ಮಾಡಿಸಿಕೊಡುವಂತೆ ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಆಗ್ರಹ ಕೇಳಿ ಬಂದರೂ ನಿಲ್ದಾಣದ ದುರಸ್ಥಿ ಕಾರ್ಯವಾಗಿಲ್ಲ. ದಶಕದ ಹಿಂದೆ ನಿಲ್ದಾಣದ ಸ್ಥಳಾಂತರ ಪ್ರಸ್ತಾವನೆ ಚರ್ಚೆಗೆ ಬಂದಿತ್ತಾದರೂ ಕೆಲವರ ಆರ್ಥಿಕ ಹಾಗೂ ರಾಜಕೀಯ ಹಿತಾಸಕ್ತಿಗೆ ನಿಲ್ದಾಣ ಸ್ಥಳಾಂತರದ ಪ್ರಸ್ತಾವನೆ ಅಲ್ಲೇ ಸ್ಥಗಿತಗೊಂಡಿತ್ತು ಎಂಬ ಚರ್ಚೆಗಳಿವೆ. ನಂತರದ ದಿನಗಳಲ್ಲಿ ಈಗಿರುವ ಬಸ್ ನಿಲ್ದಾಣವನ್ನು ತೆರವು ಮಾಡಿ ಅದರ ಎದುರು ನಿರ್ಮಿಸಲಾಗಿರುವ ಜಾಗದಲ್ಲಿ ಆರಂಭಿಸುವ ಯೋಜನೆ ರೂಪುಗೊಂಡಿತ್ತು. ಇದಕ್ಕಾಗಿ ಐಡಿಎಸ್ಎಂಟಿ ಯೋಜನೆಯಡಿಯಲ್ಲಿ 2006ರಲ್ಲಿ ನಿಲ್ದಾಣದ ಎದುರು ಇನ್ನೊಂದು ಕಟ್ಟಡ ನಿರ್ಮಿಸಲಾಗಿತ್ತು. ಆದರೆ ನಿರ್ವಹಣೆಯ ನಿರ್ಲಕ್ಷ್ಯದಿಂದಾಗಿ ಆ ಕಟ್ಟಡವೂ ಈಗ ಬೀಳುವ ಹಂತದಲ್ಲಿದೆ. ಈ ಬಗ್ಗೆ ಪುರ ಪಂಚಾಯತ್ ನಿರ್ಲಕ್ಷ್ಯ ಕೂಡ ಎದ್ದು ಕಾಣುತ್ತಿದೆ.

ಬಾಡಿಗೆ ಮಳಿಗೆಗಳು ಬಾಗಿಲು.. ಕಾರಣ ಏನು?

ಕೊಪ್ಪ ಬಸ್ ನಿಲ್ದಾಣ ಹಿಂಭಾಗದ ಅಂಗಡಿ ಮಳಿಗೆಗಳು ಹಾಳು ಬೀಳುವ ಹಂತದಲ್ಲಿದೆ. ಹತ್ತಾರು ವರ್ಷಗಳಿಂದ ಹಾಳು ಬಿದ್ದಿವೆ. ಆದಾಯ ಕೂಡ ಖೋತಾ ಆಗುತ್ತಿದೆ. ಆದರೂ ಪುರ ಪಂಚಾಯತ್ ನಿರ್ಲಕ್ಷ್ಯ ವಹಿಸುತ್ತಿದೆ. ಕೋಟಿ ಕೋಟಿ ನಷ್ಟವಾಗುತ್ತಿದೆ.

* ಶಾಸಕ ರಾಜೇಗೌಡರೇ ಬಸ್ ನಿಲ್ದಾಣ ಯಾವಾಗ?

ಸಮಸ್ಯೆಗಳ ಆಗರವಾಗಿ ಕುಸಿಯುವ ಹಂತದಲ್ಲಿರುವ ಬಸ್ ನಿಲ್ದಾಣ ಸ್ಥಳಾಂತರ ಅಥವಾ ದುರಸ್ಥಿಯ ಜವಾಬ್ದಾರಿ ಈಗ ಕ್ಷೇತ್ರದ ಶಾಸಕ ರಾಜೇಗೌಡರವರ ಮೇಲಿದ್ದು ತಾಲೂಕಿನ ಜನರು ಈಗ ಪ್ರಶ್ನಿಸುತ್ತಿದ್ದಾರೆ, ಬಸ್ ನಿಲ್ದಾಣದ ದುರಸ್ಥಿಯೋ ?, ಸ್ಥಳಾಂತರವೋ ? ಎಂದು. ಒಟ್ಟಾರೆ ಕ್ಷೇತ್ರದ ಪ್ರಮುಖ ಬಸ್ ನಿಲ್ದಾಣವಾದ ಈ ನಿಲ್ದಾಣದ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ ಹಾಗೂ ಸುಂದರ ಕೊಪ್ಪ ಪಟ್ಟಣದ ಅಂದವನ್ನು ಹೆಚ್ಚಿಸಬೇಕಾಗಿದೆ ಇದು ಜನರ ಮನವಿ ಜತೆಗೆ ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ ಕೂಡ.

Categories
ರಾಜ್ಯ

ಬಿಜೆಪಿಯತ್ತ ಮತ್ತೆ ಈಶ್ವರಪ್ಪ..!

ಟಾಪ್ 3 ನ್ಯೂಸ್ ಕರ್ನಾಟಕ

ಬಿಜೆಪಿಯತ್ತ ಮತ್ತೆ ಈಶ್ವರಪ್ಪ..!

ಕೃಷಿ ಭೂಮಿಯಲ್ಲಿ ಮರ ಕಡಿಯಲು ಅನುಮತಿ..!
* ರಾಜ್ಯ ಸರ್ಕಾರದ ಮಹತ್ವಕ್ಕೆ ಆದೇಶ

NAMMUR EXPRESS NEWS
ನವದೆಹಲಿ: ಕೇಂದ್ರ ಪರಿಸರ ಸಚಿವಾಲಯ ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿ ಕೃಷಿ ಅರಣ್ಯೀಕರಣವನ್ನು ಬೆಂಬಲಿಸುವ ಸಲುವಾಗಿ, ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ಅನುಮತಿ ನೀಡುವಂತಹ ನಿಯಮಗಳನ್ನು ಅಳವಡಿಸಲಾಗಿದೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತದ ಹವಾಮಾನ ಸುಧಾರಣೆಗೆ ಈ ರೀತಿಯ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದರ ಮುಖ್ಯ ಉದ್ದೇಶ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಹವಾಮಾನ ವೈಪರೀತ್ಯವನ್ನು ತಗ್ಗಿಸುವುದು, ಸುಸ್ಥಿರ ಭೂ ಬಳಕೆಯನ್ನು ಖಚಿತಪಡಿಸುವುದಾಗಿದೆ.‌ 2016ರ ಅನ್ವಯ ರಚಿಸಲಾದ ರಾಜ್ಯ ಮಟ್ಟದ ಸಮಿತಿಯು ಈ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದ್ದು, ಇದು ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳನ್ನು ಸಹ ಒಳಗೊಂಡಿದೆ. ಕೃಷಿ ಅರಣ್ಯೀಕರಣವನ್ನು ಉತ್ತೇಜಿಸುವುದು, ಕೃಷಿ ಭೂಮಿಯಿಂದ ಮರದ ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ ಎನ್ನುವುದರ ಕುರಿತು ಈ ಸಮಿತಿಯು ರಾಜ್ಯ ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೃಷಿಯಲ್ಲಿ ತೊಡಗಿರುವವರು ಅರ್ಜಿಯನ್ನು ಸಲ್ಲಿಸಿ, ತಮ್ಮ ಭೂಮಾಲಿಕತ್ವದ ವಿವರ, ಕೃಷಿ ಭೂಮಿ ಇರುವ ಸ್ಥಳದ ವಿವರಗಳನ್ನು ತೋಟ ಭೂಮಿಯ ಕುರಿತು ಇರುವ ವಿಶೇಷ ರಾಷ್ಟ್ರೀಯ ಮರದ ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಮಾಹಿತಿ ನೀಡಲಾಗಿದೆ.

ರಾಜಕೀಯ ಭವಿಷ್ಯದ ಬಗ್ಗೆ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ

* ಬಿಜೆಪಿಗೆ ನನ್ನ ಜೀವ ಮುಡಿಪು ಎಂದ ಮಾಜಿ ಉಪಮುಖ್ಯಮಂತ್ರಿ

ಬಳ್ಳಾರಿ: ಮಾಧ್ಯಮ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಹಿರಿಯ ರಾಜಕಾರಣಿ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಅವರು ತಮ್ಮ ರಾಜಕೀಯ ಜೀವನಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಕೆಲವು ಸ್ಪಷ್ಟ ನಿರ್ಧಾರಗಳನ್ನು ತಿಳಿಸಿದರು.‌ “ಬೇರೆ ಪಕ್ಷಗಳಿಂದ ನನಗೆ ಅವಕಾಶಗಳು ಒದಗಿ ಬಂದರೂ ನಾನು ನಿರಾಕರಿಸಿದೆ. ಏಕೆಂದರೆ ನಾನು ಮುಂದೊಂದು ದಿನ ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆ ಎಂಬ ನಂಬಿಕೆ ನನಗಿದೆ. ನಾನು ಸತ್ತರೂ ಬಿಜೆಪಿ ಬಿಡುವುದಿಲ್ಲ. ನನ್ನ ಜೀವ ಎಂದಿಗೂ ಅದಕ್ಕೇ ಮುಡಿಪು” ಎಂಬ ಮಾತುಗಳನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಬಾನು ಮುಷ್ತಾಕ್ ಆಯ್ಕೆ

* ರಾಜ್ಯ ಕಸಾಪ ಅಧ್ಯಕ್ಷರಾದ ಮಹೇಶ್ ಜೋಷಿ ಘೋಷಣೆ

ಬಳ್ಳಾರಿ: ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಎಂಭತ್ತೆಂಟನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಇತ್ತೀಚಿಗೆ ಬೂಕರ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕನ್ನಡದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಖ್ಯಾತ ಬಂಡಾಯ ಲೇಖಕಿ ಬಾನು ಮುಷ್ತಾಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವರ ಒಪ್ಪಿಗೆ ಮೇರೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾನು ಮುಷ್ತಾಕ್ ಅವರು ಶಿಕ್ಷಕಿಯಾಗಿ, ಪತ್ರಕರ್ತೆಯಾಗಿ, ಪ್ರಸ್ತುತ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಸ್ತ್ರೀವಾದಿ ಲೇಖಕಿಯಾಗಿ ತಮ್ಮದೇ ಆದ ಬರವಣಿಗೆ ಶೈಲಿಯ ಮೂಲಕ ಗುರುತಿಸಿಕೊಂಡಿದ್ದಾರೆ.ಐದು ಕಥಾ ಸಂಕಲನಗಳು, ಕುಬ್ರ ಎಂಬ ಕಾದಂಬರಿ, ಇಬ್ಬನಿಯ ಕಾವು ಎನ್ನುವ ಲೇಖನ ಸಂಕಲನ, ಒದ್ದೆ ಕಣ್ಣಿನ ಬಾಗಿನ ಕವನ ಸಂಕಲನ ಮತ್ತು ಕೌಟುಂಬಿಕ ದೌರ್ಜನ್ಯ ಕಾನೂನು ಎಂಬ ಕಾನೂನು ಸಂಬಂಧಿತ ಕೃತಿಗಳು ಬಾನು ಮುಷ್ತಾಕ್ ಅವರ ಲೇಖನಿಯಿಂದ ಮೂಡಿಬಂದಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ
* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ

NAMMMUR EXPRESS SPORTS NEWS
ಇಂಗ್ಲೆಂಡ್: ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಐದುಪಂದ್ಯಗಳ ಟಿ20 ಸರಣಿಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಭಾರತ ಮಹಿಳಾ ತಂಡ ಬರೋಬ್ಬರಿ 97 ರನ್​ಗಳ ದಾಖಲೆಯ ಗೆಲುವು ದಾಖಲಿಸಿದೆ. ಭಾರತ ನೀಡಿದ 210 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ವನಿತಾ ಪಡೆ, ಸ್ಮೃತಿ ಪಡೆಯ ಮಾರಕ ದಾಳಿಗೆ ತತ್ತರಿಸಿ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಏಕಾಂಗಿ ಹೋರಾಟ ನೀಡಿ 66 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಇತ್ತ ಭಾರತದ ಪರ ನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದರೆ, ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ ಶ್ರೀ ಚರಣಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

* ಅತ್ಯಧಿಕ ಟಿ-20 ಸ್ಕೋರ್ ದಾಖಲು
ಇದೇ ವೇಳೆ ನಾಯಕಿ ಮಂಧಾನ ಕೇವಲ 51 ಎಸೆತಗಳಲ್ಲಿ ತಮ್ಮ ಮೊದಲ ಟಿ20 ಅಂತರ್ರಾಷ್ಟ್ರೀಯ ಶತಕ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ಹರ್ಲೀನ್ ಡಿಯೋಲ್ 43 ರನ್ ಗಳಿಸಿ ಔಟಾದರು. ಡಿಯೋಲ್ ವಿಕೆಟ್ ಪತನದ ಬಳಿಕ ಬಂದ ಕೆಳ ಕ್ರಮಾಂಕದ ಬ್ಯಾಟರ್​ಗಳಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಸ್ಮೃತಿ ಅವರ ಸ್ಫೋಟಕ ಶತಕದಿಂದಾಗಿ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್‌ಗಳಿಗೆ 210 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ಎರಡನೇ ಅತ್ಯಧಿಕ ಮತ್ತು ಅತ್ಯಧಿಕ ಟಿ20 ಸ್ಕೋರ್ ದಾಖಲಿಸಿತು. ಇಂಗ್ಲೆಂಡ್ ಪರ, ವೇಗಿ ಲಾರೆನ್ ಬೆಲ್ 27 ರನ್‌ಗಳಿಗೆ 3 ವಿಕೆಟ್ ಪಡೆದರು.

* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದ್ದಾರೆ. ಇದು ಅಂತರ್ರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸ್ಮೃತಿ ಅವರ ಚೊಚ್ಚಲ ಶತಕವಾಗಿದೆ. ಈ ಶತಕದೊಂದಿಗೆ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ.ಇದೀಗ ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿರುವ ಸ್ಮೃತಿ ಮಂಧಾನ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 11 ಶತಕಗಳು ಮತ್ತು ಟೆಸ್ಟ್‌ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಐದನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಂಜುನಾಥ ಸ್ವಾಮಿಯ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದರೆ, ಮನಸ್ಸು ಯಾವುದೋ ಒಂದು ವಿಷಯದಿಂದ ತೊಂದರೆಗೊಳಗಾಗುತ್ತದೆ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿ ಕೆಲವು ಸಂಭ್ರಮಾಚರಣೆ ಇರಬಹುದು. ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು. ಉತ್ತಮ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳಿ. ಹಿರಿಯರಿಂದ ಅಮೂಲ್ಯ ಸಲಹೆ ಪಡೆಯುವ ಸಾಧ್ಯತೆ ಇದೆ.

** ವೃಷಭ ರಾಶಿ :
ಇಂದು ವೃಷಭ ರಾಶಿಯವರಿಗೆ ಇಂದು ಚಂಚಲ ಮನಸ್ಸು ಇರುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ ಮತ್ತು ಕೆಲವು ಉದ್ಯಮಿಗಳು ವ್ಯಾಪಾರದಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ಲಾಭದ ಅವಕಾಶವಿರುತ್ತದೆ. ನೀವು ವ್ಯಾಪಾರಕ್ಕಾಗಿ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಬಹುದು. ಪ್ರಯಾಣದ ಸಾಧ್ಯತೆಗಳಿವೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯವರಿಗೆ ಇಂದು ಉತ್ಸಾಹ ತುಂಬಿದ ದಿನವಾಗಿರುತ್ತದೆ. ಆದರೆ, ಇಂದು ನಿಮ್ಮ ಆತ್ಮವಿಶ್ವಾಸ ಪೂರ್ಣವಾಗಿರುತ್ತದೆ. ಆದರೆ, ಮನಸ್ಸಿಗೂ ತೊಂದರೆಯಾಗಬಹುದು. ಕೆಲಸದ ವ್ಯಾಪ್ತಿಯ ಹೆಚ್ಚಳದೊಂದಿಗೆ ಸ್ಥಳದಲ್ಲಿ ಬದಲಾವಣೆಯಾಗಬಹುದು. ಆದಾಯ ಹೆಚ್ಚಲಿದೆ. ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯಬಹುದು. ಇಂದು ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿರುತ್ತವೆ.

** ಕರ್ಕಾಟಕ ರಾಶಿ :
ಇಂದು ಕವಿಗಳಿಗೆ ಒಳ್ಳೆಯ ದಿನ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಬರವಣಿಗೆ ಇತ್ಯಾದಿ ಬೌದ್ಧಿಕ ಕೆಲಸಗಳು ಆದಾಯದ ಮೂಲವಾಗಬಹುದು. ಕಟ್ಟಡ ಸೌಕರ್ಯದಲ್ಲಿ ಹೆಚ್ಚಳವಾಗಲಿದೆ. ಅಧಿಕ ಖರ್ಚು ಇರುತ್ತದೆ. ನಿಮ್ಮ ತಂದೆಯನ್ನು ನೋಡಿಕೊಳ್ಳಿ. ಕುಟುಂಬಗಳಲ್ಲಿ ಸಂತೋಷ ಹೆಚ್ಚಳವಾಗಲಿದೆ. ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ.

** ಸಿಂಹ ರಾಶಿ :
ಇಂದು ನೀವು ಕೆಲವು ಕೆಲಸಗಳಲ್ಲಿ ಜಯವನ್ನು ಪಡೆದ ನಂತರ ಸಂತೋಷವನ್ನು ಅನುಭವಿಸುವಿರಿ. ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಆದರೆ ಅತಿಯಾದ ಉತ್ಸಾಹ ಬೇಡ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಗೌರವ ಹೆಚ್ಚಾಗಲಿದೆ. ಆದರೆ, ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಬೇಡಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಇಂದು, ಸ್ನೇಹಿತರ ಸಹಾಯದಿಂದ, ನಿಮ್ಮ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಬಹುದು.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರು ಓದುವುದು ಮತ್ತು ಬರೆಯುವುದರಲ್ಲಿ ಆಸಕ್ತಿ ಹೊಂದಿರುತ್ತೀರಿ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಕುಟುಂಬದ ಹಿರಿಯರಿಂದ ವ್ಯಾಪಾರಕ್ಕಾಗಿ ಹಣವನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ. ಹಿರಿಯರು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೆ ಹಂಚಬಹುದು. ನ್ಯಾಯಾಲಯದಲ್ಲಿ ಗೆಲುವು ಸಾಧ್ಯ. ಯಾವುದೇ ರೀತಿಯ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

** ತುಲಾ ರಾಶಿ :
ಇಂದು ಅತಿಯಾದ ಖರ್ಚು ಮನಸ್ಸನ್ನು ತೊಂದರೆಗೊಳಿಸುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಕಟ್ಟಡ ಅಲಂಕಾರ ಮತ್ತು ಬಟ್ಟೆಗೆ ಖರ್ಚು ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ಲಾಭದ ಅವಕಾಶ ಸಿಗಲಿದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಅವಕಾಶಗಳು ತಾವಾಗಿಯೇ ಒದಗಬಹುದು.

** ವೃಶ್ಚಿಕ ರಾಶಿ :
ಇಂದು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ವಾಹನ ಸೌಕರ್ಯ ಹೆಚ್ಚಲಿದೆ. ಯಾವುದೇ ರೀತಿಯ ಆತುರವನ್ನು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಸಮಯ. ಇಂದು, ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು.

** ಧನಸ್ಸು ರಾಶಿ :
ಇಂದು ಮಾತಿನಲ್ಲಿ ಮಾಧುರ್ಯವಿರುತ್ತದೆ. ಪೂರ್ಣ ವಿಶ್ವಾಸ ಇರುತ್ತದೆ. ಆದರೂ ಮಾನಸಿಕ ನೆಮ್ಮದಿಗಾಗಿ ಪ್ರಯತ್ನಿಸಿ. ಕೆಲವು ಬಾಕಿ ಹಣವನ್ನು ವಸೂಲಿ ಮಾಡಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ವ್ಯಾಪಾರ ವಿಸ್ತರಣೆಯಾಗಲಿದೆ. ಭೂಮಿ, ವಾಹನ ಮತ್ತು ವಾಹನಗಳ ಖರೀದಿ ಸಾಧ್ಯ. ಸಾಂಸಾರಿಕ ಸುಖ ಹೆಚ್ಚಾಗುತ್ತದೆ. ಆದರೆ ಇಂದು, ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ನೋಡಿ.

** ಮಕರ ರಾಶಿ :
ಇಂದು ನಿಮ್ಮ ಧೈರ್ಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಸಾಧಿಸಬಹುದು. ಆದರೆ, ನಿಮ್ಮ ಮನಸ್ಸು ಯಾವುದೋ ವಿಷಯದ ಬಗ್ಗೆ ಚಿಂತಿಸುತ್ತಿರಬಹುದು. ಉದ್ಯೋಗ ಸಂದರ್ಶನ ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಭಾವಿತರಾಗುತ್ತಾರೆ. ಆರ್ಥಿಕವಾಗಿ ಉತ್ತಮ ದಿನವಾಗಿದೆ. ಇಂದು, ನಿಮ್ಮ ಕಠಿಣ ಪರಿಶ್ರಮದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬಹುದು.

** ಕುಂಭ ರಾಶಿ :
ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಸಿಹಿ ಸುದ್ದಿಯನ್ನು ಸ್ವೀಕರಿಸುವ ಸಾಧ್ಯತೆಯಿದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ನೀವು ಗೌರವವನ್ನು ಪಡೆಯಬಹುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಪ್ರಗತಿಗೆ ಅವಕಾಶಗಳು ಇರಬಹುದು. ಇಂದು ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸಿನ ಕಾರಣದಿಂದಾಗಿ ಕುತೂಹಲವಿರಬಹುದು. ಈ ದಿನ ನಿಮ್ಮನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ.

** ಮೀನ ರಾಶಿ :
ಇಂದು ಮನಸ್ಸಿನಲ್ಲಿ ಏರಿಳಿತಗಳು ಕಂಡುಬರುತ್ತವೆ. ನೀವು ಆರ್ಥಿಕವಾಗಿ ಸ್ವಲ್ಪ ತೊಂದರೆಗೊಳಗಾಗುತ್ತೀರಿ ಆದರೆ ದಿನದ ಕೊನೆಯಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ವಾಹನ ಸೌಕರ್ಯವೂ ಹೆಚ್ಚಾಗಬಹುದು. ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನವಾಗಿದೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ.

Categories
ರಾಜ್ಯ

ವಿಶ್ವ ವಿಖ್ಯಾತ ಮೈಸೂರು ದಸಾರದಲ್ಲಿ ಕಂಬಳ?

ವಿಶ್ವ ವಿಖ್ಯಾತ ಮೈಸೂರು ದಸಾರದಲ್ಲಿ ಕಂಬಳ?

* ವಿಧಾನ ಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆ
* ದಸರಾದಲ್ಲಿ ಕಂಬಳ ನಡೆಸುವ ಕುರಿತು ಚರ್ಚೆ?

NAMMMUR EXPRESS NEWS
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ವಿಧಾನ ಸೌಧದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಸಂಬಂಧ ಸಂಪುಟದ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮೈಸೂರು ದಸರಾ ಕಾರ್ಯಕ್ರಮದ ರೂಪರೇಷೆಗಳನ್ನು ಚರ್ಚಿಸಲಾಗಿದ್ದು,ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು ಭಾಗವಹಿಸಿದ್ದರು.
* ದಸರಾದಲ್ಲಿ ಕಂಬಳ ನಡೆಸುವ ಬಗ್ಗೆ ಚರ್ಚೆ
ಸಭೆಯಲ್ಲಿ ದಸರಾ ಸಂದರ್ಭದಲ್ಲಿ ತುಳುನಾಡಿನ ಜನಪ್ರಿಯ ಜನಪದ ಕ್ರೀಡೆ ಕಂಬಳವನ್ನು ನಡೆಸುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮೈಸೂರು ದಸರಾ ವೇಳೆ ಕಂಬಳ ನಡೆಸುತ್ತೀರಾ ಎಂದು ಡಿ.ಕೆ ಶಿವಕುಮಾರ್ ರವರು ಪುತ್ತೂರು ಶಾಸಕ ಅಶೋಕ್ ರೈ ಅವರಲ್ಲಿ ಕೇಳಿದ್ದರು.‌ ಈ ಬಾರಿ‌ ದಸರಾದಲ್ಲಿ ಕಂಬಳ ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ. ಕಂಬಳಕ್ಕೆ ಅವಕಾಶ ಕಲ್ಪಿಸಿದ್ದೇ ಆದಲ್ಲಿ ಬೆಂಗಳೂರಿನಲ್ಲಾದ ಕಂಬಳದಂತೆ ಮೈಸೂರು ಕಂಬಳವೂ ಎರಡನೇ ಬಾರಿಗೆ ವಿಶ್ವ ವ್ಯಾಪಿ ಪ್ರಚಾರವಾಗಲಿದೆ.

Categories
ಕಾರ್ಕಳ

ಬೈಲೂರು ನಚಿಕೇತ ವಿದ್ಯಾಲಯದಲ್ಲಿ ವರ್ಧನ – 2025

ಬೈಲೂರು ನಚಿಕೇತ ವಿದ್ಯಾಲಯದಲ್ಲಿ ವರ್ಧನ – 2025
– ಯಶಸ್ವಿ ಗಣಿತ ತರಬೇತಿ ಕಾರ್ಯಾಗಾರ
– ವಿದ್ಯಾಭಾರತಿ ಸಂಸ್ಥೆ ಉಡುಪಿ ಜಿಲ್ಲೆ ಆಯೋಜನೆ

NAMMUR EXPRESS NEWS
ಬೈಲೂರು: ವಿದ್ಯಾಭಾರತಿ ಕರ್ನಾಟಕ, ಉಡುಪಿ ಜಿಲ್ಲೆ ಆಯೋಜಿಸಿದ ಗಣಿತ ತರಬೇತಿ ಕಾರ್ಯಾಗಾರ ವರ್ಧನ-25 ನಚಿಕೇತ ವಿದ್ಯಾಲಯ ಬೈಲೂರು ಆಶ್ರಯದಲ್ಲಿ ಜರುಗಿತು. ವಿದ್ಯಾಭಾರತಿ ಕರ್ನಾಟಕ ತರಬೇತಿ ಕಾರ್ಯಾಗಾರವನ್ನು ಒಂದು ಬೆಳವಣಿಗೆಯ ಪಥವೆಂದು ನಂಬಿದ್ದು, ಅದು ಶಿಕ್ಷಕರ ಬೆಳವಣಿಗೆಯ ಪಥವಾಗಿದೆ. ಶಿಕ್ಷಕರು ಪ್ರಸ್ತುತ ವಿದ್ಯಮಾನಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕಾಗಿದೆ. ಶಿಕ್ಷಕ ನಿಂತ ನೀರಾಗಿರದೆ ಸದಾ ಹರಿಯುವ ನದಿ ಸಮಾನವಾಗಿರಬೇಕು. ನಚಿಕೇತ ವಿದ್ಯಾಲಯ ಬೈಲೂರು ಶಾಲೆಯಲ್ಲಿ ನಡೆದ ವರ್ಧನ – 2025 ಕಾರ್ಯಾಗಾರವನ್ನು ಉದ್ದೇಶಿಸಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಪಾಂಡುರಂಗ ಪೈ ಉದ್ಘಾಟಿಸಿ ಮಾತನಾಡಿದರು. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಸೇವಾಸಂಗಮ ವಿದ್ಯಾಕೇಂದ್ರದ ಮುಖ್ಯೋಪಾಧ್ಯಾಯ ಶ್ರೀ ಹರ್ಷ ಕೋಟೇಶ್ವರ ಗಣಿತ ತರಬೇತಿಯನ್ನು ನೀಡಿದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ
ಕಲಿಕೆ ನಿರಂತರ ವಾಗಿದೆ,ನಾವು ಕಲಿತದು ಆಗಾಧವೆಂಬ ಭ್ರಮೆ ಬೇಡ, ಅರಿವು ಜೀವನ ಪರಿಯಂತ ಇರುವುದು .ಈ ದಿನದ ಕಾರ್ಯಾಗಾರ ನಿಮ್ಗೆಲ್ಲರಿಗೂ ಪ್ರಯೋಜನವಾಗಿದೆ ಎಂಬ ಭಾವನೆ ನನ್ನದು. ತರಗತಿಯ ಪಾಠದಲ್ಲಿ ಇದರ ಬಳಕೆಯಾಗಲಿ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಮಚ್ಚೇಂದ್ರನಾಥ .ಎಮ್ . ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಹರ್ಷ ಕೋಟೇಶ್ವರ ಅವರಿಗೆ ಸನ್ಮಾನಿಸಲಾಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ 23 ಗಣಿತ ಶಿಕ್ಷಕರು ಭಾಗವಹಿಸಿದರು. ಶ್ರೀಮತಿ ಚಂದ್ರಿಕಾ ದಿವಾಕರ್ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು, ಮಹೇಶ್ ಹೈಕಾಡಿ, ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪ್ರಾಸ್ತಾವಿಕ ನುಡಿಯನ್ನಾಡಿದರು. ನಚಿಕೇತ ಮಾತೃಭಾರತಿಯ ಅಧ್ಯಕ್ಷೆ ದಿಕ್ಷಿತಾ ರಾವ್ , ಕಾರ್ಯದರ್ಶಿ ಸ್ನೇಹಲತಾ ಮತ್ತು ಸಂಸ್ಥೆಯ ಗುರೂಜಿ ಮಾತಾಜಿಯವರು ಉಪಸ್ಥಿತರಿದ್ದರು.

Categories
ಮಲ್ನಾಡ್

ಮತ್ತೆ ಬಂತು ಅಡಕೆಗೆ ಎಲೆಚುಕ್ಕಿ: ಫಸಲು ನಾಶ ಭೀತಿ..!?

ಮತ್ತೆ ಬಂತು ಅಡಕೆಗೆ ಎಲೆಚುಕ್ಕಿ: ಫಸಲು ನಾಶ ಭೀತಿ..!?
– ಮಳೆ.. ಕೊಳೆ… ರೋಗ… ಮಲೆನಾಡು ರೈತರ ಗೋಳು
– ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ ತಾಲೂಕಲ್ಲಿ ಹೆಚ್ಚು
– ಸರ್ಕಾರ, ಇಲಾಖೆ ಏನೂ ಕೆಲಸ ಮಾಡ್ತಿಲ್ಲ: ರೈತರ ಆರೋಪ

NAMMUR EXPRESS NEWS
ಮಲೆನಾಡು: ಮುಂಗಾರು ಮಳೆ ಆರಂಭದ ಕೆಲ ದಿನಗಳಲ್ಲೇ ಮಲೆನಾಡು ಭಾಗದಲ್ಲಿ ವಿವಿಧ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಡಕೆಗೆ ಎಲೆಚುಕ್ಕಿ ರೋಗ ಬಾಧೆ ಕಾಣಿಸಿಕೊಂಡಿದೆ. ಅತಿ ಹೆಚ್ಚು ಮಳೆ ಸುರಿಯುವ ಗ್ರಾಮಗಳಲ್ಲಿ ರೋಗಬಾಧೆ ಉಲ್ಬಣದ ಸ್ಥಿತಿಗೆ ತಲುಪುವ ಸಾಧ್ಯತೆ ಗೋಚರಿಸಿದ್ದು, ರೈತರಲ್ಲಿ ವ್ಯಾಪಕ ಆತಂಕ ಮೂಡಿಸಿದೆ.
ಸತತ ನಾಲೈದು ವರ್ಷಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿಕಾಡುತ್ತಿರುವ ಅಡಕೆ ಎಲೆಚುಕ್ಕಿ ರೋಗಕ್ಕೆ ಸದ್ಯ ಮುಕ್ತಿ ಸಿಗುತ್ತಿಲ್ಲ. ಹಲವು ನಿಯಂತ್ರಣ ಔಷಧ ಬಳಕೆ ನಂತರವೂ ರೋಗ ಮಾತ್ರ ಬಿಟ್ಟೂಬಿಡದೆ ಕಾಡುತ್ತಿದೆ. ಸಸಿಗಳಲ್ಲಿಚುಕ್ಕಿ ರೋಗ ವಿಪರೀತವಾಗಿದ್ದು ಸಾಯುವ ಹಂತ ಮುಟ್ಟಿವೆ.
ಕೃಷಿ, ತೋಟಗಾರಿಕಾ ವಿಜ್ಞಾನಿಗಳ ಸಲಹೆ ಅನ್ವಯ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ರೈತರು ಬಳಸಿದ ಬಹುತೇಕ ಔಷಧ ವಿಫಲವಾದಂತಿದೆ. ಮುಂಗಾರು ಮಳೆ ಅವಧಿಯ ಮಧ್ಯ ಇಲ್ಲವೆ ಕೊನೆ ಹಂತದಲ್ಲಿ ಹೆಚ್ಚಾಗಿ ಗೋಚರಿಸುತ್ತಿದ್ದ ಎಲೆಚುಕ್ಕಿ ರೋಗ ಈ ವರ್ಷ ಆರಂಭದಲ್ಲಿ ಕಂಡುಬಂದಿದೆ. ಅಡಕೆ ಹೆಡಲು ಸಂಪೂರ್ಣ ಚುಕ್ಕಿಮಯವಾಗಿದ್ದು ದೊಡ್ಡ ಮರ, ಸಸಿಗಳಲ್ಲೂರೋಗವಿದೆ. ಮೂರ್ನಾಲ್ಕು ವರ್ಷದ ಹಿಂದೆ ಕಂಡುಬಂದ ಎಲೆಚುಕ್ಕಿ ರೋಗ ನಿಯಂತ್ರಣಗೊಳ್ಳಬಹುದು ಎಂಬ ರೈತರ ನಿರೀಕ್ಷೆ ಬಹುತೇಕ ಹುಸಿ ಆಗಿದೆ. ಬೋರ್ಡೊ ಮಿಶ್ರಣ ಸಿಂಪಡಿಸಿದರೂ ಎಲೆಚುಕ್ಕೆ ರೋಗ ವ್ಯಾಪಕವಾಗಿ ಕಾಣಿಸುತ್ತಿದೆ. ಅಡಕೆ ಎಲೆಚುಕ್ಕಿ ರೋಗ ಇಲ್ಲಿಗೆ 5 ವರ್ಷ ಕಳೆದರೂ ನಿಯಂತ್ರಣಕ್ಕೆ ಬಂದಿಲ್ಲ.

Categories
ಮಂಗಳೂರು

ಸುಹಾಸ್ ಶೆಟ್ಟಿ ಕೊಲೆಗೆ ವಿದೇಶಿ ಹಣ!

ಸುಹಾಸ್ ಶೆಟ್ಟಿ ಕೊಲೆಗೆ ವಿದೇಶಿ ಹಣ!
– ರಾಷ್ಟ್ರೀಯ ತನಿಖಾ ದಳದಿಂದ ಬಹಿರಂಗ
– ವಿದೇಶಕ್ಕೂ ಕರಾವಳಿಗೂ ಕೊಲೆ ಕೇಸ್ ನಂಟು

NAMMUR EXPRESS NEWS
ಮಂಗಳೂರು: ಮಂಗಳೂರಿನ ಕಿನ್ನಿಪದವುದಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ ಮಾಹಿತಿಯೊಂದು ಹೊರಬಿದ್ದಿದೆ, ಈ ಹಿನ್ನೆಲೆಯಲ್ಲಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಜನ ಆರೋಪಿಗಳ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳು ಮತ್ತು ಕೊಲೆಗೆ ನೆರವು ನೀಡಿದ ಕೆಲವು ವಿದೇಶಿಯರು ಮತ್ತು ಸ್ಥಳೀಯರು ನಿಷೇಧಿತ ಸಂಘಟನೆಯಾದ ಪಿಎಫ್ಐ ಜೊತೆ ನಂಟು ಬೆಳೆಸಿದ್ದು, ಕೊಲೆಗೆ ವಿದೇಶ ಮತ್ತು ಸ್ಥಳೀಯರಿಂದ ಹಣದ ನೆರವು ದೊರೆತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ರಾಷ್ಟ್ರೀಯ ತನಿಖಾ ದಳದ ಡಿವೈಎಸ್ಪಿಯಾದ ಪವನ್ ಕುಮಾರ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ ಡಿಜಿ ರಾಹುಲ್ ಮತ್ತು ಎಸ್ ಪಿ ಶಿವಕುಮಾರ್ ಅವರು ಸಂಪೂರ್ಣ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಈಗಾಗಲೇ ಆರೋಪಿಗಳು ವಿದೇಶಿ ಮತ್ತು ಸ್ಥಳೀಯರಾದ ಕೆಲವರ ಹೆಸರುಗಳನ್ನು ಬಹಿರಂಗಪಡಿಸಿದ್ದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಅವರನ್ನು ಬಂಧನಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

Categories
ಚಿಕ್ಕಮಗಳೂರು

ಬೊಮ್ಲಾಪುರ ಶಾಲೆಗೆ ಸ್ಟೀಲ್ ತಟ್ಟೆ ಸ್ಟ್ಯಾಂಡ್ ವಿತರಣೆ

ಬೊಮ್ಲಾಪುರ ಶಾಲೆಗೆ ಸ್ಟೀಲ್ ತಟ್ಟೆ ಸ್ಟ್ಯಾಂಡ್ ವಿತರಣೆ
– ಕೊಪ್ಪದ ಯುವ ಒಕ್ಕಲಿಗ ಸಂಘ, ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ
– ಸಾಮಾಜಿಕ ಸೇವೆ ಮೂಲಕ ಮಾದರಿಯಾದ ಯುವಕರು

NAMMUR EXPRESS NEWS
ಕೊಪ್ಪ: ಕೆಂಪೇಗೌಡ ಜಯಂತಿಯ ಅಂಗವಾಗಿ ಕೊಪ್ಪದ ಯುವ ಒಕ್ಕಲಿಗ ಸಂಘ ಹಾಗೂ ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಬೊಮ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಹುದಿನದ ಬೇಡಿಕೆಯ ಬಿಸಿ ಊಟದ ಸ್ಟೀಲ್ ತಟ್ಟೆ ಸ್ಟ್ಯಾಂಡ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಸಚಿನ್ ನಂದಿಗೋಡು, ಯುವ ಒಕ್ಕಲಿಗ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್ ಕೌರಿ, ಕೊಪ್ಪ ಸ್ಪೋರ್ಟ್ಸ್ ಕ್ಲಬ್ ನ ರೋಹಿತ್ ಬಾಳೆಗದ್ದೆ, ಸುದರ್ಶನ್ ಗುಬ್ಗದ್ದೆ, ಯುವ ಒಕ್ಕಲಿಗ ಸಂಘದ ಅವಿನಾಶ್ ನಿಲುವಾಗಿಲು, ಆದಿತಿ ಶಾನುವಳ್ಳಿ, ಅನುಪ್ ಬೆಳಲೆ ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರು ಮುಖ್ಯ ಶಿಕ್ಷಕರು, ಪೋಷಕರು ಶಾಲಾ ಮಕ್ಕಳು ಇದ್ದರು.

ಸಾಮಾಜಿಕ ಸೇವೆ ಮೂಲಕ ಮಾದರಿಯಾದ ಯುವಕರು!

ಕೊಪ್ಪದ ಯುವ ಒಕ್ಕಲಿಗ ಸಂಘ ಹಾಗೂ ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಸರ್ಕಾರಿ ಶಾಲೆಗಳಿಗೆ ವಿವಿಧ ವಸ್ತು ನೀಡುವ ಮೂಲಕ ಮಾದರಿ ಹೆಜ್ಜೆ ಇಟ್ಟಿದ್ದಾರೆ.