Categories
ಬೆಂಗಳೂರು

ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಜೋರು..!!

ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಜೋರು..!!
– ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ
– ಕೃಷಿ ಚಟುವಟಿಕೆ ಮತ್ತೆ ಚುರುಕು

NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಜೋರಾಗಿದೆ. ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನ, ಕೋಲಾರ, ವಿಜಯನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಆಗಸ್ಟ್ 10ರವರೆಗೂ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದೆ.

– ಕೃಷಿ ಚಟುವಟಿಕೆ ಮತ್ತೆ ಚುರುಕು..!! 

ಬೆಂಗಳೂರು ನಗರ, ಕೋಲಾರ, ಚಾಮರಾಜನಗರ, ತುಮಕೂರು, ಬೀದರ್, ಚಿಕ್ಕಬಳ್ಳಾಪುರ, ಯಾದಗಿರಿ. ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಸಾಧಾರಣ ವ್ಯಾಪಕ ಮಳೆಯಾಗಿದೆ. ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಚದುರಿದಂತೆ ಮಳೆ ಬಿದ್ದಿದೆ. ಒಟ್ಟಾರೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗಿದೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಕೊಂಡಿದ್ದಾರೆ.

Categories
ಉಡುಪಿ

ಉಡುಪಿಯಲ್ಲಿ ಸೌಂದರ್ಯ ತಜ್ಞೆಯರ ಏಕದಿನ ಕಾರ್ಯಾಗಾರ – 300 ಕ್ಕೂ ಹೆಚ್ಚು ಭಾಗವಹಿಕೆ

ಉಡುಪಿಯಲ್ಲಿ ಸೌಂದರ್ಯ ತಜ್ಞೆಯರ ಏಕದಿನ ಕಾರ್ಯಾಗಾರ – 300 ಕ್ಕೂ ಹೆಚ್ಚು ಭಾಗವಹಿಕೆ

ಉಡುಪಿ, ಆ.6:
ಸಮಾನ ಮನಸ್ಕ ಸೌಂದರ್ಯ ತಜ್ಞೆಯರ ಸಮೂಹದ ಸಂಯೋಜನೆಯಲ್ಲಿ ಉಡುಪಿಯ ಕಿಡಿಯೂರಿನ ಅನಂತ ಶಯನ ಸಭಾ ಭವನದಲ್ಲಿ ಮಂಗಳವಾರ ಒಂದು ದಿನದ ವಿಶೇಷ ಸೌಂದರ್ಯ ಕಾರ್ಯಾಗಾರವನ್ನು ಜರುಗಿಸಲಾಯಿತು.

ಉಡುಪಿಯ ಹಿರಿಯ ಸೌಂದರ್ಯ ತಜ್ಞೆಯರಾದ ಎಡ್ನ ಜತ್ತನ್ನ, ಜಯಶ್ರೀ ಭಂಡಾರಿ, ಲತಾ ವಾದಿರಾಜ್ ಹಾಗೂ ಶರ್ಲಿ ಅಮ್ಮನ್ನರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಾಗಾರದಲ್ಲಿ ಮಂಗಳೂರಿನ ಖ್ಯಾತ ಸೌಂದರ್ಯ ತಜ್ಞ ಮನು ಮುರಳೀಧರ್ ಅವರು ಆಧುನಿಕ ತಂತ್ರಜ್ಞಾನದ ಮೂಲಕ ಮಾಡಬಹುದಾದ ಮೇಕಪ್ ವಿಧಾನಗಳ ಕುರಿತು ಆಳವಾಗಿ ಮಾಹಿತಿ ನೀಡಿದರು. ವಿವಿಧ ತ್ವಚಾ ಪ್ರಕಾರಗಳಿಗೆ ಅನುಗುಣವಾದ ಮೇಕಪ್ ವಿಧಾನ, ಸಮಕಾಲೀನ ತಂತ್ರಜ್ಞಾನಗಳ ಬಳಕೆ, ಹಾಗೂ ಗ್ರಾಹಕರ ತೃಪ್ತಿಗೆ ಶ್ರೇಷ್ಠ ಸೇವೆ ನೀಡುವ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.

ಈ ಕಾರ್ಯಾಗಾರದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ 300 ಕ್ಕಿಂತಲೂ ಹೆಚ್ಚು ಸೌಂದರ್ಯ ತಜ್ಞೆಯರು ಪಾಲ್ಗೊಂಡು ಅನುಭವ ಹಂಚಿಕೆ ಹಾಗೂ ಹೊಸತನ್ನು ಕಲಿಯುವ ಅವಕಾಶವನ್ನು ಪಡೆದುಕೊಂಡರು.

ಕಾರ್ಯಕ್ರಮವನ್ನು ಎಡ್ನ ಜತ್ತನ್ನರ ನೇತೃತ್ವದ ರೋಸ್ ಬ್ಯೂಟಿ ಪಾರ್ಲರ್, ಲಕ್ಷ್ಮೀ ಬ್ಯೂಟಿ ವರ್ಲ್ಡ್, ರೋಸ್ ಕಾಸ್ಮೆಟಿಕ್ಸ್ ಮತ್ತು ಪಟೇಲ್ ಕುಂದಾಪುರ ಜಂಟಿಯಾಗಿ ಆಯೋಜಿಸಿದ್ದವು.

Categories
ಕಾರ್ಕಳ

ಶಿವಮೊಗ್ಗ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆ: ಎಳ್ಳಾರೆ ಮಳ್ಕಾಕಾಡಿನ ಶರಣ್ಯಗೆ ಡಬಲ್ ಕಂಚು ಸಾಧನೆ

ಶಿವಮೊಗ್ಗ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆ: ಎಳ್ಳಾರೆ ಮಳ್ಕಾಕಾಡಿನ ಶರಣ್ಯಗೆ ಡಬಲ್ ಕಂಚು ಸಾಧನೆ

ಕಾರ್ಕಳ,: ಶಿವಮೊಗ್ಗದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಎಳ್ಳಾರೆ ಮುಲ್ಕಡು ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶರಣ್ಯ ಹೆಮ್ಮೆಯ ಸಾಧನೆ ಮಾಡಿದ್ದಾರೆ. ಏಳು ದೇಶಗಳ ಸ್ಪರ್ಧಿಗಳು ಭಾಗವಹಿಸಿದ ಈ ಚಾಂಪಿಯನ್‌ಶಿಪ್‌ನಲ್ಲಿ ಶರಣ್ಯ ಕುಮಟೆ ಹಾಗೂ ಕಟಾ ವಿಭಾಗಗಳಲ್ಲಿ ತೃತೀಯ ಸ್ಥಾನ ಪಡೆದು ಎರಡೂ ವಿಭಾಗಗಳಲ್ಲೂ ಕಂಚಿನ ಪದಕ ಗೆದ್ದಿದ್ದಾರೆ.

ಶರಣ್ಯ ಎಳ್ಳಾರೆ ಸತೀಶ್ ಪೂಜಾರಿ ಮತ್ತು ಶಶಿಕಲಾ ದಂಪತಿಗಳ ಪುತ್ರಿಯಾಗಿದ್ದು, ಕರಾಟೆ ತರಬೇತಿಯನ್ನು ವಿಜಯಲಕ್ಷ್ಮೀ ಮತ್ತು ಸೋಮನಾಥ ಅವರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ.

ಇವರು ಪ್ರತಿಷ್ಠಿತ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸಾಧನೆಮಾಡಿರುವುದು ತಮ್ಮ ಕುಟುಂಬ, ಶಾಲೆ ಹಾಗೂ ಕರಾಟೆ ತರಬೇತಿದಾರರಿಗೂ ಹೆಮ್ಮೆಯ ವಿಷಯವಾಗಿದೆ.

ಮುಲ್ಕಾಡು ಶಾಲೆಯ ಮುಖ್ಯೋಪಾಧ್ಯಾಯ ಜನಾರ್ದನ ಬೆಳ್ಳಿರಾಯ, ರೂಪಾಶ್ರಿ ಪ್ರಭು ,ಸೇರಿದಂತೆ ಶಿಕ್ಷಕರು ಶುಭಾಶಯ ಕೋರಿದ್ದಾರೆ

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಕೆಲಸದಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳಿವೆ. ಬುದ್ಧಿವಂತಿಕೆಯಿಂದ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡಿ, ನಿಮಗೆ ಯಶಸ್ಸು ಸಿಗುತ್ತದೆ. ವೈಯಕ್ತಿಕ ಜೀವನದಲ್ಲಿ ಕಾರ್ಯನಿರತತೆ ಇರುತ್ತದೆ. ಹಣಕಾಸಿನ ಲಾಭ ಇರುತ್ತದೆ. ಆದರೆ ಪಾಲುದಾರಿಕೆ ಕೆಲಸದಲ್ಲಿ ಜಾಗರೂಕರಾಗಿರಿ. ಇಂದು ನೀವು ಕೆಲಸದಲ್ಲಿ ಕಾರ್ಯನಿರತರಾಗಿರುತ್ತೀರಿ, ಆದರೆ ಆರ್ಥಿಕ ನಷ್ಟದ ಸಾಧ್ಯತೆ ಇರುವುದರಿಂದ ಯೋಚಿಸದೆ ಹೂಡಿಕೆ ಮಾಡುವುದನ್ನು ತಪ್ಪಿಸಿ.

** ವೃಷಭ ರಾಶಿ :
​ವೃಷಭ ರಾಶಿಯವರಿಗೆ ಇಂದು ಆರ್ಥಿಕ ದೃಷ್ಟಿಯಿಂದ ಉತ್ತಮ ದಿನವಾಗಿರುತ್ತದೆ. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಸಿಗಬಹುದು, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಸಿಲುಕಿಕೊಂಡಿರುವ ಹಣವನ್ನು ಮರಳಿ ಪಡೆಯಬಹುದು ಮತ್ತು ಬಾಕಿ ಇರುವ ಕೆಲಸಗಳು ತ್ವರಿತಗೊಳ್ಳುತ್ತವೆ. ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಆದರೆ ಮಗುವಿನ ಆರೋಗ್ಯ ಅಥವಾ ಅಧ್ಯಯನದ ಬಗ್ಗೆ ಸ್ವಲ್ಪ ಕಾಳಜಿ ಇರಬಹುದು. ನೀವು ಮಾಡುವ ಕೆಲಸದ ರೀತಿಯನ್ನು ನೋಡಿ ನಿಮ್ಮ ಬಾಸ್ ಸಂತೋಷಪಡುತ್ತಾರೆ.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ತಾಳ್ಮೆಯಿಂದಿರುವುದು ಮುಖ್ಯ. ಸಮಯ ಮತ್ತು ಅದೃಷ್ಟವನ್ನು ಅವಲಂಬಿಸಬೇಡಿ, ನಿಮ್ಮ ಕಠಿಣ ಪರಿಶ್ರಮದ ಮೇಲೆ ಗಮನಹರಿಸಿ. ಪ್ರತಿಯೊಂದು ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡಿ. ಏಕೆಂದರೆ ಅನೇಕ ಜನರು ನಿಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ. ಹಳೆಯ ಹಣ ಚೇತರಿಸಿಕೊಳ್ಳುತ್ತದೆ. ವ್ಯಾಪಾರ ಪ್ರವಾಸ ಯಶಸ್ವಿಯಾಗುತ್ತದೆ ಮತ್ತು ಲಾಭಕ್ಕಾಗಿ ಹೊಸ ಅವಕಾಶಗಳು ಕಂಡುಬರುತ್ತವೆ.

** ಕರ್ಕಾಟಕ ರಾಶಿ :
ಇಂದು ಕಟಕ ರಾಶಿಯವರಿಗೆ ಹಠಾತ್ ನಷ್ಟದ ಸಾಧ್ಯತೆಯಿದೆ. ಶತ್ರುಗಳು ಅಥವಾ ಸ್ಪರ್ಧಿಗಳು ನಿಮಗೆ ತೊಂದರೆ ನೀಡಬಹುದು. ತಂತ್ರ-ಮಂತ್ರ ಅಥವಾ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮಾನಸಿಕ ಒತ್ತಡ ಇರಬಹುದು, ಆದರೆ ಕೆಲಸದಲ್ಲಿ ಪ್ರಗತಿ ಇರುತ್ತದೆ. ಆರ್ಥಿಕ ಲಾಭದ ಸಾಧ್ಯತೆ ಇರುತ್ತದೆ. ಆದರೆ ವ್ಯವಹಾರದಲ್ಲಿ ಹೊಸ ಯೋಜನೆಗಳಲ್ಲಿ ಮಾಡಲಾಗುವ ಕೆಲಸದ ವಿಧಾನವು ಉತ್ತಮವಾಗಿರುತ್ತದೆ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟವಾಗಬಹುದು. ತಂದೆ ಅಥವಾ ಯಾವುದೇ ಹಿರಿಯರ ವರ್ತನೆಯಿಂದ ಮನಸ್ಸು ದುಃಖಿತವಾಗಬಹುದು. ಒತ್ತಡ ಅಥವಾ ಸಣ್ಣಪುಟ್ಟ ಗಾಯಗಳಾಗುವ ಸಾಧ್ಯತೆ ಇದೆ. ಇಂದು ಕಳ್ಳತನ ಅಥವಾ ನಷ್ಟವನ್ನು ತಪ್ಪಿಸಿ. ಲಾಭದ ಕೆಲವು ಅವಕಾಶಗಳು ಕೈ ತಪ್ಪಿ ಹೋಗಬಹುದು, ಆದ್ದರಿಂದ ಜಾಗರೂಕರಾಗಿರಿ. ಆದರೆ ಇಂದು ಮನಸ್ಸಿನಲ್ಲಿ ಯಶಸ್ಸಿಗಾಗಿ ಉತ್ಸಾಹವಿರುತ್ತದೆ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರಿಗೆ ಪ್ರಯಾಣ ಪ್ರಯೋಜನಕಾರಿಯಾಗಲಿದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಸರ್ಕಾರಿ ಕೆಲಸದಲ್ಲಿ ನಿಮಗೆ ಸಹಕಾರ ಸಿಗಬಹುದು. ಆದರೆ, ನಷ್ಟದ ಸಾಧ್ಯತೆ ಇರುವುದರಿಂದ ಕಳ್ಳತನ ಅಥವಾ ಅಪಾಯಕಾರಿ ಕೆಲಸಗಳನ್ನು ತಪ್ಪಿಸಿ. ಎಚ್ಚರಿಕೆಯಿಂದ ದಿನವನ್ನು ಉತ್ತಮಗೊಳಿಸಿ. ನಿಮ್ಮ ಉತ್ತಮ ನಡವಳಿಕೆಯಿಂದಾಗಿ ಜನರು ನಿಮ್ಮನ್ನು ಹೊಗಳುತ್ತಾರೆ. ವಾಹನ, ಯಂತ್ರೋಪಕರಣಗಳು ಅಥವಾ ಬೆಂಕಿಗೆ ಸಂಬಂಧಿಸಿದ ಕೆಲಸಗಳಲ್ಲಿ ಜಾಗರೂಕರಾಗಿರಿ.

** ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಮಿಶ್ರ ದಿನವಾಗಿರುತ್ತದೆ. ವೈಯಕ್ತಿಕ ಜೀವನದಲ್ಲಿ ಆತಂಕ ಅಥವಾ ಒತ್ತಡ ಇರಬಹುದು, ಆದರೆ ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಹೂಡಿಕೆ ಮಾಡಲು ದಿನ ಒಳ್ಳೆಯದು, ಮತ್ತು ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಆದರೆ ಕೆಟ್ಟ ಜನರ ಸಹವಾಸವನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಅವಮಾನವನ್ನು ಎದುರಿಸಬೇಕಾಗಬಹುದು. ಪ್ರೇಮ ಸಂಬಂಧಗಳಲ್ಲಿ ಉತ್ತಮ ವಾತಾವರಣವಿರುತ್ತದೆ.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ ಇಂದು ಒಳ್ಳೆಯ ದಿನ. ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ನಿಮಗೆ ಲಾಭ ಸಿಗುತ್ತದೆ. ಇಂದು ಹೂಡಿಕೆ ಮಾಡುವಲ್ಲಿ ಆತುರಪಡಬೇಡಿ. ರಿಯಲ್ ಎಸ್ಟೇಟ್ ಕೆಲಸದಿಂದ ಲಾಭವಿರುತ್ತದೆ. ವಿವಾದವನ್ನು ತಪ್ಪಿಸಿ. ಖ್ಯಾತಿ ಹೆಚ್ಚಾಗುತ್ತದೆ. ಸುಳ್ಳು ಹೇಳುವುದನ್ನು ತಪ್ಪಿಸಿ. ಬೌದ್ಧಿಕ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ರುಚಿಕರವಾದ ಆಹಾರವನ್ನು ಆನಂದಿಸಲು ನಿಮಗೆ ಅವಕಾಶ ಸಿಗುತ್ತದೆ.

** ಧನಸ್ಸು ರಾಶಿ :
ಇಂದು ಧನು ರಾಶಿಯವರು ಇಂದು ತಮ್ಮ ಕೋಪವನ್ನು ನಿಯಂತ್ರಿಸಬೇಕಾಗುತ್ತದೆ, ಇಲ್ಲದಿದ್ದರೆ ವಿವಾದದ ಪರಿಸ್ಥಿತಿ ಉದ್ಭವಿಸಬಹುದು. ನಿಮಗೆ ಕೆಲವು ದುಃಖದ ಸುದ್ದಿಗಳು ಸಿಗಬಹುದು. ಅಪಾಯಕಾರಿ ಕೆಲಸ ಅಥವಾ ಜಾಮೀನು ನೀಡುವುದನ್ನು ತಪ್ಪಿಸಿ, ಏಕೆಂದರೆ ನಷ್ಟವಾಗಬಹುದು. ಎಚ್ಚರಿಕೆಯಿಂದ ಕೆಲಸ ಮಾಡಿ. ಇಂದು ನೀವು ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ನೀವು ಪಿಕ್ನಿಕ್ ಅಥವಾ ಪಾರ್ಟಿಯನ್ನು ಆನಂದಿಸುವಿರಿ.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಪ್ರೋತ್ಸಾಹದಾಯಕ ದಿನವಾಗಿರುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ, ಇದು ಮನಸ್ಸನ್ನು ಸಂತೋಷವಾಗಿರಿಸುತ್ತದೆ. ಪ್ರೇಮ ವ್ಯವಹಾರಗಳಲ್ಲಿ ಹೊಂದಾಣಿಕೆ ಮತ್ತು ಬೌದ್ಧಿಕ ಕೆಲಸದಲ್ಲಿ ಯಶಸ್ಸು ಇರುತ್ತದೆ. ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ದುರ್ಬಲರಾಗಿರಬಹುದು. ಮನಸ್ಸು ತುಂಬಾ ಚಂಚಲವಾಗಿರುತ್ತದೆ.

** ಕುಂಭ ರಾಶಿ :
ಇಂದು ಕುಂಭ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭಗಳು ಉಂಟಾಗುತ್ತವೆ. ಕೆಲಸದಲ್ಲಿ ಯಶಸ್ಸು ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ನೀವು ವ್ಯಾಪಾರ ಸ್ಪರ್ಧಿಗಳನ್ನು ಗೆಲ್ಲುವಿರಿ. ನಿಮ್ಮ ಮಾತನ್ನು ನಿಯಂತ್ರಿಸಿ ಮತ್ತು ಅಪಾಯಕಾರಿ ಕೆಲಸವನ್ನು ತಪ್ಪಿಸಿ. ಮಕ್ಕಳಿಂದ ಆರೋಗ್ಯಕ್ಕೆ ತೊಂದರೆಯಾಗಬಹುದು. ವಿರೋಧಿಗಳು ಶಾಂತವಾಗಿರುತ್ತಾರೆ.

** ಮೀನ ರಾಶಿ :
ಇಂದು ಮೀನ ರಾಶಿಯವರಿಗೆ ಮಿಶ್ರ ದಿನವಾಗಿರುತ್ತದೆ. ಮಗುವಿನ ಮದುವೆ ಅಥವಾ ಸಂಬಂಧಗಳಿಗೆ ಸಂಬಂಧಿಸಿದ ಪ್ರಯಾಣ ಯಶಸ್ವಿಯಾಗಬಹುದು. ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು ಮತ್ತು ಹೂಡಿಕೆಗಳು ಲಾಭದಾಯಕವಾಗಿರುತ್ತವೆ. ಮನೆಯಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಮದುವೆಗೆ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕುಟುಂಬದಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್

ಚಿಕ್ಕಮಗಳೂರು ಟಾಪ್ ನ್ಯೂಸ್

* ವ್ಯಕ್ತಿ ಮೇಲೆ ಕಾಡಾನೆ ದಾಳಿ, ಗಂಭೀರ ಗಾಯ
* ಎರಡು ಬೊಲೆರೋ ವಾಹನವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ ಶಾಸಕ
* ಕೇಂದ್ರ ಸಚಿವ ವಿ ಸೋಮಣ್ಣರಿಂದ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಅನುದಾನ

NAMMMUR EXPRESS NEWS
* ವ್ಯಕ್ತಿ ಮೇಲೆ ಕಾಡಾನೆ ದಾಳಿ, ಗಂಭೀರ ಗಾಯ
ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ-ಕಾಡಾನೆ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೃದ್ಧರೊಬ್ಬರ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ ಪಿಲೀಪ್ (62) ಎಂಬುವವರು ತಮ್ಮ ಮನೆಯಿಂದ ಮೂತ್ರ ವಿಸರ್ಜನೆಗಾಗಿ ಹೊರ ಬಂದ ಸಂದರ್ಭದಲ್ಲಿ ಅವರ ಮನೆ ಎದುರಿಗೆ ಬಾಳೆಗಿಡ ತಿನ್ನುತ್ತಿದ್ದ ಕಾಡಾನೆ ಏಕಾಏಕಿ ಪಿಲೀಪ್ ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಕಾಲು ಜಾರಿ ಬಿದ್ದ ಕಾರಣ ಪಿಲೀಪ್ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.
ಪಿಲೀಪ್ ಅವರ ಬೆನ್ನು ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆಯಿಂದಾಗಿ ಸ್ಥಳೀಯರು ಭಯಭೀತರಾಗಿದ್ದು ಮಲೆನಾಡಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

* ಎರಡು ಬೊಲೆರೋ ವಾಹನವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ ಶಾಸಕ
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ಡಿ ರಾಜೇಗೌಡ ಅವರ 2025-26 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದಿಂದ ಖರೀದಿಸಲಾದ ಎರಡು ಮಹೀಂದ್ರಾ ಬೊಲೆರೊ ವಾಹನಗಳನ್ನು ಚಿಕ್ಕಮಗಳೂರು ಎಸ್ಪಿ ಡಾ. ವಿಕ್ರಂ ಅಮಟೆ ಅವರ ಮೂಲಕ ಇಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ಘಟಕಕ್ಕೆ ಹಸ್ತಾಂತರಿಸಿದ್ದಾರೆ.

* ಕೇಂದ್ರ ಸಚಿವ ವಿ ಸೋಮಣ್ಣರಿಂದ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಅನುದಾನ
ಅಜ್ಜಂಪುರ: ಜಿಲ್ಲೆಯ ಅಜ್ಜಂಪುರ-ಶಿವನಿ ರೈಲು ನಿಲ್ದಾಣಗಳ ಅಭಿವೃದ್ಧಿ, ಜೋಡಿ ರಸ್ತೆ ನಿರ್ಮಾಣಕ್ಕೆ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಇತ್ತೀಚೆಗೆ ಶಿವನಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಚಿವರಿಗೆ ಸ್ಥಳೀಯ ಮುಖಂಡರು ಶಿವನಿ-ಅಜ್ಜಂಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು, ಎರಡು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಹಾಗೂ ಎಸ್ಎಚ್ 153 ರಸ್ತೆಯ ಎಲ್‌ಸಿ 140ರವರೆಗೆ ಜೋಡಿ ರಸ್ತೆ ಅಂಡರ್‌ ಪಾಸ್‌ನಿಂದ ಜೋಡಿ ರಸ್ತೆ ನಿರ್ಮಾಣ ಕೋರಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಎಸ್‌ಎಚ್ 153 ರಸ್ತೆಯ ಅಂಡ‌ರ್ ಪಾಸ್‌ನಿಂದ ಎಲ್‌ಸಿ 140ರವರೆಗಿನ ಜೋಡಿ ರಸ್ತೆಗಾಗಿ 2.28 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಅಡಿಕೆ ದರ ಏರಿಕೆಯೋ? ಇಳಿಕೆಯೋ?

NAMMUR EXPRESS NEWS

ಸರಕು
65159-71300-91696

ಬೆಟ್ಟೆ
51599-60700-61400

ರಾಶಿ
48609-57600-58400

ಗೊರಬಲು
20499-32300-33151

Categories
ಕಾರ್ಕಳ

ಕ್ರಿಯೇಟಿವ್ ಕಾಲೇಜಿನಲ್ಲಿ ಕೆಸರ್ಡೊಂಜಿ ದಿನ ಕಾರ್ಯಕ್ರಮ

ಕ್ರಿಯೇಟಿವ್ ಕಾಲೇಜಿನಲ್ಲಿ ಕೆಸರ್ಡೊಂಜಿ ದಿನ ಕಾರ್ಯಕ್ರಮ
* ಗ್ರಾಮೀಣ ಪರಿಸರದಲ್ಲಿ ಕೆಸರಿನ ಗದ್ದೆ ಆಟಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ತಳಹದಿ
* ಮಣ್ಣು, ಪ್ರಕೃತಿ ಹಾಗೂ ಸಂಸ್ಕೃತಿಯ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ 

NAMMUR EXPRESS NEWS
ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ ಕ್ರಿಯೇಟಿವ್ ಕೆಸರ್ಡೊಂಜಿ ದಿನ ‘ ಹಸಿರಿನೊಡನೆ ಕಲಿಕೆಯ ಕಾರ್ಯಕ್ರಮವನ್ನು 5 ಆಗಸ್ಟ್ 2025 ರಂದು ಹಿರ್ಗಾನ ಗ್ರಾಮದ ಬೆಂಗಾಲ್ ಗದ್ದೆಯಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ರಾಜ್ಯಾಧ್ಯಕ್ಷರು, ಫೆಡರೇಷನ್ ಆಫ್ ಕ್ವಾರಿ ಮತ್ತು ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ) ಬೆಂಗಳೂರು ಇವರು ಉದ್ಘಾಟನಾ ಭಾಷಣದಲ್ಲಿ ಪ್ರಕೃತಿಯ ಮಹತ್ವ, ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಮತ್ತು ಯುವ ಪೀಳಿಗೆಗೆ ಉತ್ತಮವಾದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಅಗತ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಸಭೆಯನ್ನು ಉದ್ದೇಶಿಸಿ ಮಾತುಗಳನ್ನಾಡಿದರು . “ಕೆಸರಿನಲ್ಲಿ ಆಡೋದು ಕೇವಲ ಆಟವಲ್ಲ, ಅದು ಒಂದು ಅನುಭವ, ಜೀವನಕ್ಕೆ ಪಾಠ ಕಲಿಸುವ ಕ್ರಿಯೆ“ಎಂದು ತಿಳಿಸಿದರು.

ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ. ಬಿ. ರವರು ಪ್ರಾಸ್ತಾವಿಕ ನುಡಿಗಳನ್ನಡುತ್ತಾ ನಮ್ಮ ಸಂಸ್ಥೆಯ ವಿದ್ಯಾರ್ಥಿ ಗಳಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವ ಉದ್ದೇಶಗಳ ಬಗ್ಗೆ ತಿಳಿಸುತ್ತಾ, ಆಗಮಿಸಿದ ಸರ್ವರನ್ನು ಸ್ವಾಗತಿಸಿದರು . ಸ್ಥಳ ದಾನಿ ಯೋಗೀಶ್ ಕಿಣಿ, ಶಿಕ್ಷಕರು, ಸ.ಕಿ.ಪ್ರಾ ಶಾಲೆ ಪಲಾಯಿ ಬಾಕ್ಯಾರು, ತೆಳ್ಳಾರು ಇವರು ಸಭೆಯನ್ನು ಉದ್ದೇಶಿಸಿ “ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಕ್ರೀಡೆ, ಮಣ್ಣು, ಪ್ರಕೃತಿಯ ಸಂಪರ್ಕ ಕಡಿಮೆ ಆಗುತ್ತಿದೆ. ಇಂತಹ ಕೆಸರ್ಡೊಂಜಿ ದಿನ ಕಾರ್ಯಕ್ರಮಗಳು ಮಕ್ಕಳಿಗೆ ನೈಜ ಅನುಭವಗಳನ್ನು ನೀಡುವ ಮೂಲಕ ಪ್ರಕೃತಿಯೊಂದಿಗೆ ಅವರ ಸಂಬಂಧವನ್ನು ಪುನರ್ ಸ್ಥಾಪಿಸುತ್ತದೆ” ಎಂದು ತಿಳಿಸಿದರು.

ಸಹ ಸಂಸ್ಥಾಪಕರಾದ ಆದರ್ಶ ಎಂ.ಕೆ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಉದ್ಯಮಿಗಳಾದ ಸರ್ವೋತ್ತಮ ಕಡಂಬರವರು ಈ ಕಾರ್ಯಕ್ರಮದ ತಾತ್ಪರ್ಯವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಹಿರ್ಗಾನ ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀ ಸತ್ಯನಾರಾಯಣ ಪಡ್ರೆ, ಶ್ರೀ ಸದಾನಂದ ಶೆಟ್ಟಿಗಾರ್, ಶ್ರೀ ವಿಠಲ್ ನಾಯಕ್ ಇವರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭಕ್ಕೆ ಆಗಮಿಸಿದ ಎಲ್ಲರಿಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಖಾದ್ಯಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಸಮಾರೋಪ
ಅಪರಾಹ್ನ ಸಮಯ ಸಂಜೆ 4:00 ಗಂಟೆಗೆ ಸಮಾರೋಪ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ಆಗಮಿಸಿದ ಸರ್ವರನ್ನು ಸ್ವಾಗತಿಸುತ್ತ ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ಎಲ್ಲರನ್ನು ಸ್ಮರಿಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಸಂಸ್ಥಾಪಕರಲ್ಲಿ ಓರ್ವರಾದ ಶ್ರೀ ವಿಮಲ್ ರಾಜ್. ಜಿ. ರವರು “ಗ್ರಾಮೀಣ ಜೀವನ ಶೈಲಿಯು ಪಾಠ ಪುಸ್ತಕದ ಹೊರಗಿನ ಶಿಕ್ಷಣವನ್ನು ನೀಡುತ್ತದೆ. ಆಧುನಿಕ ದಿನಚರಿಯಲ್ಲಿ ಮಕ್ಕಳಿಗೆ ಶಾರೀರಿಕ ಚಟುವಟಿಕೆ ಕಡಿಮೆಯಾಗಿದೆ. ಆದರೆ ಈ ಕೆಸರಿನ ಆಟಗಳು ಕೇವಲ ಮನರಂಜನೆ ಮಾತ್ರವಲ್ಲ, ಶಕ್ತಿಯ ಪೂರಕವೂ ಹೌದು” ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ನವೀನ್ ಚಂದ್ರ ಶೆಟ್ಟಿ, ಅಧ್ಯಕ್ಷರು, ರೋಟರಿ ಕ್ಲಬ್, ಕಾರ್ಕಳ ಮತ್ತು ನಿರ್ದೇಶಕರು, ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್, ಕಾರ್ಕಳ ಇವರು “ನಮ್ಮ ಬಾಳಿನಲ್ಲಿ ಮಣ್ಣು ಎಂಬುದು ಅತ್ಯಂತ ಪ್ರಾಥಮಿಕ ಅಂಶ. ಮಣ್ಣಿನ ಜೊತೆ ನಮ್ಮ ಸಂಬಂಧ ಗಟ್ಟಿಯಾಗಿರಬೇಕೆಂದರೆ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ “ಎಂದರು.

ಇನ್ನೋರ್ವ ಅತಿಥಿ Ar. ಸುನಿಲ್ ಕುಮಾರ್. ಜಿ. ಕಲಿಕೆ ಎಂದರೆ ಪಾಠ ಮಾತ್ರವಲ್ಲ. ಅನುಭವವೂ ಕೂಡ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಶಿಸ್ತು, ಸಹಕಾರ ಮತ್ತು ಆತ್ಮವಿಶ್ವಾಸವನ್ನು ಕಲಿಯುತ್ತಾರೆ ಎಂದು ಅತಿಥಿ ನುಡಿಗಳನ್ನಾಡಿದರು. ಸಂಸ್ಥಾಪಕರಲ್ಲಿ ಓರ್ವರಾದ ವಿದ್ವಾನ್ ಗಣಪತಿ ಭಟ್, ಹಿರಿಯರೂ, ಉದ್ಯಮಿಗಳೂ ಆಗಿರುವ ಜಗದೀಶ್ ರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಎಲ್ಲಾ ಅತಿಥಿವರೇಣ್ಯರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅತಿಥಿಗಳಾದ ಚೇತನ್, ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ. ಬಿ., ಆದರ್ಶ ಎಂ.ಕೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬೋಧಕ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಲೋಹಿತ್ ಎಸ್.ಕೆ ಹಾಗೂ ಪ್ರಿಯಾಂಕ ತೀರ್ಥರಾಮ ರವರು ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು

Categories
ಕಾರ್ಕಳ

ಕ್ರೈಸ್ಟ್ ಕಿಂಗ್ : ಮಕ್ಕಳ ಹಕ್ಕುಗಳು ಹಾಗೂ ವೈಯಕ್ತಿಕ ಸುರಕ್ಷತಾ ಮಾಹಿತಿ ಕಾರ್ಯಕ್ರಮ

ಕ್ರೈಸ್ಟ್ ಕಿಂಗ್ : ಮಕ್ಕಳ ಹಕ್ಕುಗಳು ಹಾಗೂ ವೈಯಕ್ತಿಕ ಸುರಕ್ಷತಾ ಮಾಹಿತಿ ಕಾರ್ಯಕ್ರಮ
– ಮಕ್ಕಳ ವೈಯಕ್ತಿಕ ಸುರಕ್ಷತೆ ಮತ್ತು ಪೋಕ್ಸೋ ಕಾಯ್ದೆಯ ಕುರಿತು ಮಾಹಿತಿ
– ಮೊಬೈಲ್ ಬಳಕೆಯ ದುಷ್ಪರಿಣಾಮ ಮತ್ತು ವಿಷಯದ ಜಾಗೃತಿ ಕಾಳಜಿ

NAMMUR EXPRESS NEWS
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ‘ಮಕ್ಕಳ ಹಕ್ಕುಗಳು ಹಾಗೂ ವೈಯಕ್ತಿಕ ಸುರಕ್ಷತೆ’ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ನಾಯಕ್ ಅವರು ಸಾಮಾಜಿಕ ಜಾಲತಾಣಗಳ ದುರುಪಯೋಗ, ಅಪರಿಚಿತರ ಜೊತೆಗೆ ನಿರ್ವಹಿಸುವ ಸಂಬಂಧಗಳಿಂದ ಉಂಟಾಗಬಹುವಾದ ಅಪಾಯಗಳು, ಪೋಕ್ಸೋ ಕಾಯಿದೆ ಹಾಗೂ ಮಕ್ಕಳಿಗೆ ದೊರೆಯುವ ಕಾನೂನುಬದ್ಧ ಹಕ್ಕುಗಳ ಕುರಿತು ಮಾಹಿತಿ ನೀಡಿದರು.

ಹಿರಿಯ ವೈದ್ಯಾಧಿಕಾರಿ ಡಾ. ಶಮಾ ಶುಕೂರ್ ಅವರು ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಹಾನಿ, ಮೊಬೈಲ್ ವ್ಯಸನ ಹಾಗೂ ಅದರಿಂದ ಪರಿಹಾರ ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ಉಪ ಪ್ರಾಚಾರ್ಯ ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಹಾಗೂ ಮಕ್ಕಳ ರಕ್ಷಣಾ ಸಮಿತಿಯ ಬೋಧಕ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಐಸಿಇ ಉಪನ್ಯಾಸಕಿ ಪಾವನಾ ಧನ್ಯರಾಜ್ ಸಮರ್ಥವಾಗಿ ನೆರವೇರಿಸಿದರು.

Categories
ಕರಾವಳಿ

ಕಡಲು ಅಧ್ಯಯನಕ್ಕೆ ಬರಲಿದೆ ವಿವಿ!

ಕಡಲು ಅಧ್ಯಯನಕ್ಕೆ ಬರಲಿದೆ ವಿವಿ! 
* ಮಂಗಳೂರು: ಕಡಲಯಾನ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನಿರ್ಧಾರ

* ಬೈಂದೂರು: ಪತ್ರಕರ್ತ, ಸಾಹಿತಿ ಪ್ರಕಾಶ್ ಪಡಿಯಾರ್ ನಿಧನ
* ಕಾರ್ಕಳ: ಸ್ಕೂಟರ್ ನಿಂದ ಬಿದ್ದು ಮಹಿಳೆ ಗಂಭೀರ ಗಾಯ
* ಹೆಬ್ರಿ: ಕ್ರೇನ್ ಹರಿದು ವ್ಯಕ್ತಿಯ ದುರ್ಮರಣ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಮಂಗಳೂರು: ಕಡಲು ಅಧ್ಯಯನಕ್ಕೆ ಬರಲಿದೆ ವಿವಿ!. ಹೌದು. ಕಡಲಯಾನ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ.
ನಗರದಲ್ಲಿ ಕಡಲಯಾನ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಚರ್ಚಿಸಿದ ಹಿನ್ನೆಲೆಯಲ್ಲಿ, ಬೊಂದೇಲ್ ನಲ್ಲಿ ನವಮಂಗಳೂರು ಬಂದರಿಗೆ ಸಂಬಂಧಿಸಿದ ಸ್ಥಳವೊಂದಿದ್ದು, ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅದನ್ನು ನಿಗದಿಪಡಿಸಬೇಕು ಎನ್ನುವ ಕುರಿತು ಸಹ ಮಾತುಕತೆ ನಡೆಸಲಾಗಿದೆ. ಕೇಂದ್ರ ಸರ್ಕಾರವು ಅನುಮೋದನೆ ನೀಡಿದರೆ, ನಿರ್ಮಾಣ ಕಾರ್ಯಕ್ಕೆ ಸೂಕ್ತವಾಗಿರುವ ಜಾಗವನ್ನು ನಿರ್ಧರಿಸಲು ಮುಂದುವರಿಯಬಹುದು ಎನ್ನಲಾಗಿದೆ. ಕಡಲಯಾನ ವಿಶ್ವವಿದ್ಯಾನಿಲಯ ಸ್ಥಾಪನೆಯ ಕುರಿತು ಸಚಿವರು ಮತ್ತು ಕಾರ್ಯದರ್ಶಿಗಳಿಂದ ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗಿತ್ತು. ಈ ವರ್ಷ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಐನೂರು ವರ್ಷಗಳ ಸಂಭ್ರಮದ ಜೊತೆಗೆ ನವಮಂಗಳೂರು ಬಂದರು ಕೂಡ ತನ್ನ ಐನೂರು ವರ್ಷದ ಆಚರಣೆಯನ್ನು ನಡೆಸುತ್ತಿದೆ. ಇದರ ನೆನಪಿಗಾಗಿ ವಿಶ್ವವಿದ್ಯಾನಿಲಯದ ನಿರ್ಮಾಣಕ್ಕೆ ಮಾನ್ಯತೆ ದೊರೆಯುವ ಸಾಧ್ಯತೆ ಇದೆ ಎಂಬ ಸಂಗತಿ ತಿಳಿದುಬಂದಿದೆ.

 

ಬೈಂದೂರು: ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ, ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು ವರದಿಗಳನ್ನು ಪ್ರಕಟಿಸಿ, ಆಡಳಿತದ ಗಮನಕ್ಕೆ ತಂದು, ಪ್ರತಿಫಲ ದೊರಕುವಂತೆ ಮಾಡಿ, ಅನೇಕ ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿದ್ದ ಸಾಹಿತಿ ಮತ್ತು ಪತ್ರಕರ್ತ ಪ್ರಕಾಶ್ ಪಡಿಯಾರ್ ಅವರು ಅನಾರೋಗ್ಯದ ಸಮಸ್ಯೆಯಿಂದ ನಿಧನರಾಗಿದ್ದಾರೆ. ಜೀವ ವಿಮಾ ಏಜೆಂಟರಾಗಿ, ಮಾಧ್ಯಮಗಳಿಗೆ ಜಾಹೀರಾತು ಸಂಗ್ರಹಕರಾಗಿ ಕಾರ್ಯನಿರ್ವಹಿಸಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಅವರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆ ಆಶ್ರಮವೊಂದರಲ್ಲಿ ವಾಸವಾಗಿದ್ದರು.

* ಕಾರ್ಕಳ: ಸ್ಕೂಟರ್ ನಿಂದ ಬಿದ್ದು ಮಹಿಳೆ ಗಂಭೀರ ಗಾಯ

ಕಾರ್ಕಳ: ಉಷಾ ಎನ್ನುವ ಮಹಿಳೆಯು, ತನ್ನ ಪತಿಯ ಜೊತೆಗೆ ಉಡುಪಿಯ ಅಂಬಲಪಾಡಿ ದೇವಸ್ಥಾನಕ್ಕೆ ಹೋಗಿ, ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ನೀರೆಜೆಡ್ಡು ಎನ್ನುವಲ್ಲಿ, ರಸ್ತೆಯಲ್ಲಿನ ಗುಂಡಿಗೆ ಸ್ಕೂಟರ್ ಬಿದ್ದ ಪರಿಣಾಮ ಹಿಂಬದಿ ಕುಳಿತಿದ್ದ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊದಲಿಗೆ ಕಾರ್ಕಳದ ಟಿಎಂಎ ಪೈ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಲಾಗಿದ್ದು, ಅಲ್ಲಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈಗ ಮತ್ತಷ್ಟು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಹೆಬ್ರಿ: ಕ್ರೇನ್ ಹರಿದು ವ್ಯಕ್ತಿಯ ದುರ್ಮರಣ

ಹೆಬ್ರಿ: ಮುದ್ರಾಡಿ ಕೆಳಪೇಟೆಯಲ್ಲಿ ಚಣಿಲ ಎಂಬ ವ್ಯಕ್ತಿಯು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ, ಎಸ್ ಎನ್ ಸಿ ಗುತ್ತಿಗೆ ಸಂಸ್ಥೆಗೆ ಸಂಬಂಧಿಸಿದ ಕ್ರೇನ್ ವೊಂದು ಹರಿದ ಪರಿಣಾಮವಾಗಿ ಚಣಿಲ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತವಾದ ಕೂಡಲೇ ಕ್ರೇನ್ ಚಾಲಕ ಪರಾರಿಯಾಗಲು ಪ್ರಯತ್ನಿಸಿದ್ದು, ಕೂಡಲೇ ಸ್ಥಳೀಯರು ಆತನನ್ನು ಹಿಡಿದು, ತಕ್ಕಶಾಸ್ತಿ ಮಾಡಿದ್ದಾರೆ. ಕಾಲ ಮಿಂಚಿಹೋದ ಮೇಲೆ ಚಾಲಕನು ಕ್ರೇನ್ ಅನ್ನು ಸ್ವಲ್ಪ ದೂರಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾನೆ. ಚಾಲಕನ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Categories
ಕರಾವಳಿ

ಧರ್ಮಸ್ಥಳ ಪ್ರಕರಣ: ಇನ್ನು ತನಿಖೆ ಪ್ರಗತಿಯಲ್ಲಿ…!

ಟಾಪ್ ನ್ಯೂಸ್ ಕರಾವಳಿ

ಧರ್ಮಸ್ಥಳ ಪ್ರಕರಣ: ಇನ್ನು ತನಿಖೆ ಪ್ರಗತಿಯಲ್ಲಿ…! 

* ಬ್ರಹ್ಮಾವರ: ಪಿಗ್ಮಿ ಹಣ ದೋಚಿದ ಖದೀಮ
* ಉಡುಪಿ: ಸೆಟ್ ಆಫ್ ಬಾಕ್ಸ್ ಹೆಸರಿನಲ್ಲಿ ವಂಚನೆ
* ಬೆಳ್ತಂಗಡಿ: ಮುಂದುವರಿದ ಧರ್ಮಸ್ಥಳ ಪ್ರಕರಣದ ಪರಿಶೀಲನೆ
* ಪುತ್ತೂರು: ಕೋಮುಗಲಭೆ ಪ್ರಚೋದಿಸಿದ ವ್ಯಕ್ತಿಯ ಬಂಧನ
* ಬಂಟ್ವಾಳ: ಕೋಳಿ ಅಂಕದ ಮೇಲೆ ಪೊಲೀಸರ ದಾಳಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ಮೂರ್ತೆದಾರರ ಸಹಕಾರಿ ಸಂಘದಲ್ಲಿ, ಪಿಗ್ಮಿ ಸಂಗ್ರಹಕಾರರಾಗಿರುವ ಸುಭಾಷ್ ಎನ್ನುವವರು ಪಿಗ್ಮಿ ಸಂಗ್ರಹ ಮಾಡಿಕೊಂಡು ಬಂದು, ಕರ್ನಾಟಕ ಬ್ಯಾಂಕ್ ಸಮೀಪ ಬೈಕ್ ನಿಲ್ಲಿಸಿ ಕಾರ್ಯನಿಮಿತ್ತ ಹೋಗಿದ್ದಾಗ, ಕಳ್ಳರು ಬೈಕಿನ ಬಾಕ್ಸ್ ನಲ್ಲಿ ಬೀಗ ಹಾಕಿ ಇರಿಸಿದ್ದ, ಪಿಗ್ಮಿ ಸಂಗ್ರಹದ ಹಣವನ್ನು ಬೀಗ ಮುರಿದು ದೋಚಿದ್ದಾರೆ.‌ ಬಾಕ್ಸ್ ನಲ್ಲಿ ಇದ್ದ ಪಿಗ್ಮಿ ಹಣ ಸುಮಾರು ಅರವತ್ತೈದು ಸಾವಿರ ಮತ್ತು ಕೆಲವು ದಾಖಲೆಗಳನ್ನು ಲಪಟಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯು ಶಿವಳ್ಳಿ ಹೊಟೇಲ್ ಸಮೀಪ ನಡೆದಿದೆ ಎನ್ನಲಾಗಿದೆ. ಅದು ಕೂಡ ಹಗಲಲ್ಲೇ, ಜನರು ಓಡಾಡುವ ಸಂದರ್ಭದಲ್ಲಿ ನಡೆದಿರುವುದು ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

* ಉಡುಪಿ: ಸೆಟ್ ಆಫ್ ಬಾಕ್ಸ್ ಹೆಸರಿನಲ್ಲಿ ವಂಚನೆ

ಉಡುಪಿ:ಗುಜರಾತ್ ಮೂಲದ ಸಂಸ್ಥೆಯೊಂದು ಗ್ರಾಹಕರಿಗೆ ಉಚಿತ ಸೆಟ್ ಆಫ್ ಬಾಕ್ಸ್ ಜೊತೆಗೆ, ಮೂರು ತಿಂಗಳ ದರವನ್ನು ಉಚಿತವಾಗಿ ನೀಡುತ್ತಿರುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಯಾವ ಸೌಲಭ್ಯವನ್ನು ಸ್ಥಳೀಯ ಕೇಬಲ್ ಆಪರೇಟರ್ ಗಳು ಗ್ರಾಹಕರಿಗೆ ನೀಡದೆ ವಂಚಿಸುತ್ತಿದ್ದಾರೆ ಎನ್ನಲಾಗಿದೆ. ಇವುಗಳ ಕುರಿತು ವಿಚಾರಿಸಿದಾಗ ಕೇಬಲ್ ಆಪರೇಟರ್ ಗಳು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಒತ್ತಾಯ ಪಡಿಸಿದ್ದಾರೆ.

* ಬೆಳ್ತಂಗಡಿ: ಮುಂದುವರಿದ ಧರ್ಮಸ್ಥಳ ಪ್ರಕರಣ ಪರಿಶೀಲನೆ

ಬೆಳ್ತಂಗಡಿ: ಇದುವರೆಗೂ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೆರಡರಲ್ಲಿ ಉತ್ಖನನ ನಡೆದಿದ್ದು, ಸುಮಾರು ಗಂಟೆಗಳ ಕಾಲ ಕಾರ್ಯವನ್ನು ಮುಂದುವರಿಸಿದರೂ ಯಾವುದೇ ಕಳೇಬರ ಕಂಡುಬಂದಿಲ್ಲ.‌ ಹೀಗಾಗಿ ಹನ್ನೆರಡರಲ್ಲಿ ಕಳೇಬರ ಸಿಕ್ಕೆ ಸಿಗುತ್ತದೆ ಎನ್ನುವ ನಿರೀಕ್ಷೆಯು ಈ ಮೂಲಕ ಸುಳ್ಳಾಗಿದೆ. ಮಧ್ಯಾಹ್ನ ಊಟದ ವಿರಾಮದ ಮುಂಚೆಯೇ ಉತ್ಖನನ ಕಾರ್ಯವನ್ನು ನಡೆಸಲಾಗಿತ್ತು. ಮಧ್ಯಾಹ್ನದ ಬಳಿಕ ಮತ್ತೆ ಮಳೆ ಧಾರಾಕಾರವಾಗಿ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಮತ್ತು ಯಾವುದೇ ಸುಳಿವು ದೊರಕದ ಕಾರಣ ನಿನ್ನೆಯ ದಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

* ಪುತ್ತೂರು: ಕೋಮುಗಲಭೆ ಪ್ರಚೋದಿಸಿದ ವ್ಯಕ್ತಿಯ ಬಂಧನ

ಪುತ್ತೂರು: ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಸಂದೇಶಗಳನ್ನು ರವಾನಿಸುತಿದ್ದ ಹಿನ್ನೆಲೆಯಲ್ಲಿ, ಅಬ್ದುಲ್ ಕೆ ಎನ್ನುವ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 67/2025, ಕಾಲಂ 196 (1), 353(2), ಬಿಎನ್ಎಸ್ 2023ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ

* ಬಂಟ್ವಾಳ: ಕೋಳಿ ಅಂಕದ ಮೇಲೆ ಪೊಲೀಸರ ದಾಳಿ

ಬಂಟ್ವಾಳ: ಸುಮಾರು ಹತ್ತು ಜನರು ಹಣವನ್ನು ಪಣವಾಗಿಟ್ಟು, ಕೋಳಿ ಅಂಕವನ್ನು ನಡೆಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕೋಳಿ ಅಂಕದ ಮೇಲೆ ದಾಳಿ ನಡೆಸಿದ್ದಾರೆ. ಶಂಭೂರಿನ ಕಾಪಿಕಾಡಿನಲ್ಲಿ, ಅಕ್ರಮವಾಗಿ ಈ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಅದರಲ್ಲಿ ಕೆಲವರು ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಉಳಿದ ಆರೋಪಿಗಳಾದ ಲೋಕೇಶ್, ಸಂತೋಷ್, ಪುರುಷೋತ್ತಮ ಹಾಗೂ ಮೋಹನದಾಸ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.