ಸಾಧಕರ ಸಮಾಗಮಕ್ಕೆ ರಾಜಧಾನಿ ಸಾಕ್ಷಿ..!
– ಬೆಂಗಳೂರಲ್ಲಿ ಮಲೆನಾಡು ಮಿತ್ರ ವೃಂದದ ಕಾರ್ಯಕ್ರಮ
– ಸಚಿವರು, ಶಾಸಕರು ಹಾಜರ್: ಸಾಧಕರಿಗೆ ಸನ್ಮಾನದ ಗೌರವ
NAMMUR EXPRESS NEWS
ಬೆಂಗಳೂರು: ಮಲೆನಾಡು ಮೂಲದ ಬೆಂಗಳೂರಿಗರ ಹೆಮ್ಮೆಯ ಸಂಘಟನೆ ಮಲೆನಾಡು ಮಿತ್ರ ವೃಂದ (ರಿ.) ಬೆಂಗಳೂರು ವತಿಯಿಂದ 2025ನೇ ಸಾಲಿನ ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ಮಲೆನಾಡು ಸಾಧಕರು ಪ್ರಶಸ್ತಿ ಪ್ರಧಾನ ಸಮಾರಂಭ, ಮಲೆನಾಡು ಸಾಂಸ್ಕೃತಿಕ ಸಂಜೆ ಅದ್ದೂರಿಯಾಗಿ ನೆರವೇರಿತು. 600ಕ್ಕೂ ಹೆಚ್ಚು ಮಂದಿ ಮಲೆನಾಡಿಗರು ಭಾಗಿಯಾದರು.
ಮಹಾಲಕ್ಷ್ಮಿಪುರಂನ ಡಾ.ರಾಜಕುಮಾರ್ ಕಲಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಿದರು. ಮಾಜಿ ಗೃಹ ಸಚಿವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಹಾಲಕ್ಷ್ಮಿಪುರಂ ಶಾಸಕ ಗೋಪಾಲಯ್ಯ, ಮಲೆನಾಡು ಮಿತ್ರ ವೃಂದದ ಅಧ್ಯಕ್ಷ ಪ್ರದೀಪ್ ಹೆಗ್ಗೋಡು, ಖ್ಯಾತ ಗಾಯಕಿ ಬಿ. ಕೆ ಸುಮಿತ್ರಾ, ಉದ್ಯಮಿ ಅಚ್ಚುತ್ ಗೌಡ, ಕೃಷಿ ಸಾಧಕ ಮಹಮದ್ ಅಮಾನುಲ್ಲಾ, ಸಾಧಕಿ ರಿತುಪರ್ಣ ವೇದಿಕೆಯಲ್ಲಿದ್ದರು. ಸುಕೇಶ್ ದಾಸನಕೊಡಿಗೆ ಸ್ವಾಗತಿಸಿದರು.
ಪ್ರಾಸ್ತವಿಕ ಮಾತನಾಡಿದ ಮಲೆನಾಡು ಮಿತ್ರ ವೃಂದದ ನಿರ್ದೇಶಕರಾದ ಸಂದೇಶ್ ಹಂದಿಗೋಡು ನಮ್ಮ ಸಂಸ್ಥೆ 18 ವರ್ಷದ ಹಿಂದೆ ಕಟ್ಟಿದ ಸಂಸ್ಥೆ. ಮಲೆನಾಡಿನ ಬೆಂಗಳೂರಿಗರಿಗೆ ಸಹಾಯ ಮಾಡುವ ಸಂಸ್ಥೆ ಇದಾಗಿದೆ. ಮಲ್ನಾಡ್ ಭವನ ಕಟ್ಟಲು ಈ ವೇದಿಕೆ ಮನವಿ ಮಾಡುತ್ತದೆ ಎಂದರು. ಶಮಿತಾ ಮಲ್ನಾಡ್ ಅವರು ಮಾತನಾಡಿ, ಮಲೆನಾಡ ಕೋಗಿಲೆಯಾಗಿ ರಾಜ್ಯದ ಖ್ಯಾತ ಗಾಯಕಿಯಾಗಿ ಸುಮಿತ್ರಮ್ಮ ದೊಡ್ಡ ಸಾಧಕಿ. ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಸಂಗೀತ ಕ್ಷೇತ್ರಕ್ಕೆ ನೀಡಿದ ಗೌರವ ಎಂದರು.
ಮಲೆನಾಡು ನನ್ನ ಉಸಿರು ಎಂದ ಮಧು ಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ಬಿ. ಕೆ.ಸುಮಿತ್ರ ಅವರ ಕೊಡುಗೆ ಅಪಾರ. ಅಡಿಕೆ ಜತೆಗೆ ಸಮಗ್ರ ಕೃಷಿ ಬಗ್ಗೆ ಗಮನ ಕೊಡಬೇಕು. ಇಂದಿನ ಪ್ರಶಸ್ತಿಗೆ ಭಾಜನರಾದ ಸಾಧಕರು ಮಲೆನಾಡಿಗೆ ಕೀರ್ತಿ ತಂದಿದ್ದೀರಿ. ಮಲೆನಾಡಲ್ಲಿ ಇದೊಂದು ಮಾದರಿ ಕಾರ್ಯಕ್ರಮ. ಅಧಿಕಾರ ಇರುತ್ತೆ ಹೋಗುತ್ತೆ ಮಲೆನಾಡಿಗರ ಜತೆಯಾಗಿದ್ದೇನೆ. ಆರಗ ಜ್ಞಾನೇಂದ್ರ ನಾವೆಲ್ಲರೂ ಸೇರಿ ಮಲೆನಾಡ ಅಭಿವೃದ್ಧಿಗೆ ಸದಾ ಜತೆ ಇದ್ದೇವೆ. ನಮ್ಮನ್ನು ಬಳಸಿಕೊಳ್ಳಿ ಎಂದರು
ಕವಲೆ ದುರ್ಗ ಮತ್ತು ನಗರ ಕೋಟೆಯಲ್ಲಿ ವಿಶೇಷ ಸಾಂಸ್ಕೃತಿಕ ಉತ್ಸವ ಮಾಡೋಣ. ರಾಜಕಾರಣ ಹೊಲಸು. ನಾವೆಲ್ಲರೂ ಸೇರಿ ಮಲೆನಾಡ ಅಭಿವೃದ್ಧಿಗೆ ಕೈ ಜೋಡಿಸೋಣ. ಇಂತಹ ಸಂಘಟನೆ ಎಲ್ಲರ ಸಂಘಟನೆ ಆಗಬೇಕು ಎಂದರು.
ಮಲೆನಾಡು ಸಾಧಕರ ತವರೂರು: ಗೋಪಾಲಯ್ಯ
ನಾಲ್ಕು ಮಂದಿ ಸಿಎಂ ಕೊಟ್ಟಿರುವ ಜಿಲ್ಲೆ ಶಿವಮೊಗ್ಗ, ರಾಜ್ಯಕ್ಕೆ ಅನೇಕ ಸಾಧಕರನ್ನು ನಾಡಿಗೆ ನೀಡಿದ ನಾಡು ಮಲೆನಾಡು. ಮಲೆನಾಡು ಸುಂದರ ಊರು ಎಂದು ಶಾಸಕ ಗೋಪಾಲಯ್ಯ ಹೇಳಿದರು.
ನೀವೂ ಜಾಗ ಕೊಟ್ಟರೆ ಮುಂದೆ ಜಾಗ ಸಿಗಲ್ಲ. ಕೃಷಿ ಜಮೀನು ಮಾರಬೇಡಿ. ಅತ್ಯುತ್ತಮ ಸಂಘಟನೆ ಮಾಡುವವರು ಮಲೆನಾಡಿಗರು. ಮಲೆನಾಡಿನ ಈ ಸಂಘಟನೆ ಎಲ್ಲಾ ರೀತಿಯಲ್ಲೂ ಸಾರ್ಥಕತೆ ಪಡೆದಿದೆ ಎಂದರು
ಸಂಘಟನೆ, ಕಾರ್ಯಕ್ರಮದ ಬಗ್ಗೆ ಸಾಧಕರ ಮೆಚ್ಚುಗೆ
ಖ್ಯಾತ ಗಾಯಕಿ ಬಿ.ಕೆ.ಸುಮಿತ್ರಾ ಮಾತನಾಡಿ, ನಾನೊಬ್ಬ ಗಾಯಕಿಯಾಗಿ ಸಾಧನೆ ಮಾಡಲು ಕಠಿಣ ಶ್ರಮ ಇತ್ತು. ಎಲ್ಲರ ಪ್ರೋತ್ಸಾಹ ಇತ್ತು. ಇಂತಹ ಸಂಘಟನೆಗಳು ಸಾಧನೆಯನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದರು.
ಉದ್ಯಮಿ ಅಚ್ಚುತ್ ಗೌಡ ಮಾತನಾಡಿ, ಇದು ನಮ್ಮದೇ ಪ್ರೋಗ್ರಾಮ್. 10 ವರ್ಷದಿಂದ ನಾನು ಎಲ್ಲದಕ್ಕೂ ಬೆಂಬಲಿಸಿದ್ದೇನೆ. ಮಲೆನಾಡು ನಮ್ಮ ಹೆಮ್ಮೆ ಎಂದರು.
ಸಾಧಕಿ ರಿತುಪರ್ಣ ಮಾತನಾಡಿ, ನನ್ನ ಇಷ್ಟ ಪಡುವ ಊರು ತೀರ್ಥಹಳ್ಳಿ. ವೈದ್ಯಳಾಗುವ ಕನಸು ಈಡೇರಲಿಲ್ಲ. ಇಂಜಿನಿಯರಿಂಗ್ ಅಲ್ಲಿ ಭಾರತದ ಕಿರಿಯ ಹೆಣ್ಣು ಮಗಳಾಗಿ ರೋಲ್ಸ್ ರಾಯ್ ಕಂಪನಿಗೆ ಆಯ್ಕೆ ಆಗಿದ್ದೇನೆ. ಮಲೆನಾಡು ನನಗೆ ಪ್ರೇರಣೆ. ಯಾವುದೇ ವಿದ್ಯಾರ್ಥಿ ಯಾವಾಗ ಕೂಡ ಶೈನ್ ಆಗಬಹುದು ಎಂದು ಸ್ಫೂರ್ತಿಯ ಮಾತನಾಡಿದರು.
ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡು ಮಿತ್ರ ವೃಂದದ ಈ ಕಾರ್ಯಕ್ರಮ ಸೊಗಸಾಗಿ ಆಯೋಜನೆ ಆಗಿದೆ. ಬೆಂಗಳೂರಲ್ಲಿ ಮಲೆನಾಡು ಜನರು ಬದುಕು ಕಟ್ಟಿಕೊಂಡು ಎಲ್ಲರೂ ಸೇರಿ ಒಂದೊಳ್ಳೆ ಕಾರ್ಯಕ್ರಮ ಮಾಡಿದ್ದಾರೆ. ಇಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.
ಅಡಿಕೆ ಮಲೆನಾಡು ಜನರಿಗೆ ಬದುಕು ನೀಡಿದೆ. ಮಲೆನಾಡಿಗರು ಬೆಂಗಳೂರಲ್ಲಿ ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಎಲ್ಲರೂ ಈ ಕಡೆ ಬಂದ ಕಾರಣ ಊರಲ್ಲಿ ಮುದುಕ ಮುದುಕಿ ಇದ್ದಾರೆ. ಮಲೆನಾಡಲ್ಲಿ ಭೂಮಿ ಮಾರಾಟ ಮಾಡಬೇಡಿ. ನೀವೇ ವಿಶ್ರಾಂತಿ, ನೆಮ್ಮದಿ ಬೇಕು ಎಂದಾಗ ಬನ್ನಿ. ಅರ್ಹರನ್ನು ಸನ್ಮಾನ ಮಾಡಿ ಗೌರವಿಸಿದ್ದೀರಿ ಧನ್ಯವಾದಗಳು ಎಂದರು.
ಮಲೆನಾಡಲ್ಲಿ ಕೃಷಿಗೆ ಒಳ್ಳೆ ಡಿಮ್ಯಾಂಡ್ ಇದೆ. ಮಲೆನಾಡು ಪ್ರತಿಭಾವಂತರ ನಾಡು. ಕರುನಾಡು,ದೇಶಕ್ಕೆ ಸಾವಿರಾರು ಸಾಧಕರನ್ನು ನೀಡಿದೆ. ಈಗಲೂ ಪ್ರತಿಭೆಗೆ ಜನ್ಮ ನೀಡುತ್ತಿದೆ. ಸಹ್ಯಾದ್ರಿ ಸಂಘ, ಮಲೆನಾಡು ಮಿತ್ರ ವೃಂದದಂತಹ ಸಂಘಟನೆಗಳು ಎಲ್ಲರನ್ನು ಸೇರಿಸುವ ಕೆಲಸ ಮಾಡುತ್ತಿವೆ ಎಂದರು.
ಪ್ರದೀಪ್ ಹೆಗ್ಗೋಡು ಅಧ್ಯಕ್ಷೀಯ ನುಡಿ ಆಡಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಖ್ಯಾತ ನಿರೂಪಕಿ ಸ್ನೇಹಾ ನೀಲಪ್ಪಗೌಡ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಲೆನಾಡು ಮಿತ್ರ ವೃಂದದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್..!
ಮಲೆನಾಡು ಮೂಲದ ಖ್ಯಾತ ಗಾಯಕಿ ಭಾಗ್ಯಶ್ರೀ ಗೌಡ, ಹಾಗೂ ತಂಡದವರಿಂದ ಗೀತ ಗಾಯನ ಕಾರ್ಯಕ್ರಮ., ಮಲೆನಾಡು ಭಾಷೆಯ ಕಿರು ನಗೆ ನಾಟಕವನ್ನು ಗುತ್ತುಳಿಕೆ ಕೇಶವ್ ತಂಡ ನಡೆಸಿಕೊಟ್ಟರು.
ಅಶೀಶ್ ದೇವಾಡಿಗ ತಂಡದವರಿಂದ ಸ್ಯಾಕ್ಸೋಫೋನ್ ಹಾಗೂ ಕೊಳಲು ವಾದನ ಎಲ್ಲರ ಗಮನ ಸೆಳೆಯಿತು. ನಾಡಗೀತೆಯನ್ನು ಫಿಲಂ ಫೇರ್ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಗಾಯಕಿ ಡಾ.ಶಮಿತ ಮಲ್ನಾಡ್ ಇವರು ನಡೆಸಿಕೊಟ್ಟರು.
ಸಾಧಕರಿಗೆ ಪ್ರಶಸ್ತಿ, ಸನ್ಮಾನದ ಸಂಭ್ರಮ
ಮಲೆನಾಡು ಮಿತ್ರ ಪ್ರಶಸ್ತಿ-2025 ಅನ್ನು ಬಿ.ಕೆ.ಸುಮಿತ್ರ ಖ್ಯಾತ ಗಾಯಕಿ ಹಾಗೂ ಮಲೆನಾಡು ಸಾಧಕ ಪ್ರಶಸ್ತಿ-2025 ಅನ್ನು ಅಚ್ಚುತ್ ಗೌಡ ಉದ್ಯಮ ಕ್ಷೇತ್ರ, ರಿತುಪರ್ಣ ಶಿಕ್ಷಣ ಹಾಗೂ ಸಾಧನೆ ಕ್ಷೇತ್ರ, ರೆಹಮತ್ ಹೊಸನಗರ ಕೃಷಿ ಕ್ಷೇತ್ರಕ್ಕೆ ನೀಡಿ ಗೌರವ ನೀಡಲಾಯಿತು. ಇದೇ ವೇಳೆ ಕಾರ್ಯಕ್ರಮಕ್ಕೆ ಸಹಕಾರ ನೀಡಿ ಗೌರವಿಸಲಾಯಿತು.
