Categories
ಕೊಪ್ಪ ಚಿಕ್ಕಮಗಳೂರು ಶೃಂಗೇರಿ

ರಾಜ್ಯಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

ರಾಜ್ಯಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ

* ರಸ್ತೆ ಗುಂಡಿ ಸಮಸ್ಯೆ,ಹಕ್ಕುಪತ್ರ ವಿಳಂಬ,ರೈತರ ವಿರುದ್ಧ ಎಸ್‌ಐಟಿ ರಚನೆ ವಿರೋಧಿಸಿ ಆಕ್ರೋಶ
* ರಸ್ತೆ ಗುಂಡಿ ಮುಚ್ಚಿದ ಜೆಡಿಎಸ್ ಕಾರ್ಯಕರ್ತರು, ರಸ್ತೆ ಸರಿಪಡಿಸುವಂತೆ ಆಗ್ರಹ

NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದಾದ್ಯಂತ ತಲೆದೂರಿರುವ ರಸ್ತೆ ಗುಂಡಿ ಸಮಸ್ಯೆ ಮತ್ತು ಕ್ಷೇತ್ರದ ಅಭಿವೃದ್ಧಿ ಕುಂಠಿತವನ್ನು ವಿರೋಧಿಸಿ ಜೆಡಿಎಸ್‌ನಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ನೇತೃತ್ವದಲ್ಲಿ ಆಯೋಜನೆಗೊಂಡ ಪ್ರತಿಭಟನೆಯು ಕೊಪ್ಪದ ಕುವೆಂಪು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಕೊಪ್ಪ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಜೆಡಿಎಸ್ ಹಿರಿಯ ನಾಯಕರೂ, ಕಾರ್ಯಕರ್ತರೂ, ಭಾಗವಹಿಸಿದರು.
ರಸ್ತೆ ಗುಂಡಿಗಳನ್ನು ಸ್ವತಃ ತಾವೇ ಮುಚ್ಚುವ ಮೂಲಕ ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ಶಾಸಕರು ಹಾಗು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಸರ್ಕಾರ ಹಾಗೂ ಶಾಸಕರ ಅಸಮರ್ಥತೆಯನ್ನು ವಿರೋಧಿಸಿ ಸ್ಥಳೀಯರು ಮತ್ತು ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಡವರಿಗೆ ಸಾಗುವಳಿ ಚೀಟಿಗಳನ್ನು ನೀಡದಿರುವುದು ಹಾಗೂ ರೈತರ ಒತ್ತುವರಿ ತೆರವಿಗಾಗಿ SIT ರಚಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

* ಸರ್ಕಾರದ ನಿರ್ಲಕ್ಷ್ಯಕ್ಕಿದು ಎಚ್ಚರಿಕೆಯ ಗಂಟೆ – ಸುಧಾಕರ್ ಎಸ್ ಶೆಟ್ಟಿ
ಈ ಸಮಯದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಮಾತನಾಡುತ್ತಾ , ಕ್ಷೇತ್ರದ ತಂಬಾ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು,ಇದರಿಂದ ಸಾರ್ವಜನಿಕರಿಗೆ ತುಂಬಾ ಕಷ್ಟವಾಗಿದೆ,ರಸ್ತೆಯ ಸ್ಥಿತಿ ಕಳಪೆಯಾಗಿದೆ, ಅಭಿವೃದ್ಧಿಯಲ್ಲಿ ಶಾಸಕರು ವಿಫಲರಾಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ” ಎಂದು ಹೇಳಿದರು.
ಒಂದೂವರೆ ಕಿಲೋಮೀಟರ್ ಉದ್ದದ ರಸ್ತೆಯ ಗುಂಡಿಗಳನ್ನು ಮುಚ್ಚುವ ಈ ಜನಪರ ಕಾರ್ಯವು ಸರ್ಕಾರದ ನಿರ್ಲಕ್ಷ್ಯಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿದೆ ಎಂದು ಹೇಳಿದರು.

Categories
ಬೆಂಗಳೂರು ರಾಜ್ಯ

ಗೀಸರ್ ಬಳಕೆ ಹುಷಾರ್…ಹುಷಾರ್…!

ಗೀಸರ್ ಬಳಕೆ ಹುಷಾರ್…ಹುಷಾರ್…!
– ಹೆಚ್ಚುತ್ತಿರುವ ಗ್ಯಾಸ್ ಗೀಸರ್ ದುರಂತ
– ಮೈಸೂರಲ್ಲಿ ಇತ್ತೀಚಿಗೆ ಮಕ್ಕಳು ಇಬ್ಬರು ಸಾವು

NAMMUR EXPRESS NEWS
ರಾಜ್ಯದಲ್ಲಿ ಗ್ಯಾಸ್ ಗೀಸರ್ ದುರಂತ ದಿನೇ ದಿನೇ ಹೆಚ್ಚಾಗುತ್ತಿದೆ. ಗ್ಯಾಸ್ ಗೀಸರ್ ಸೋರಿಕೆಯಾಗಿ ಅನೇಕರು ಜೀವ ಬಿಟ್ಟಿದ್ದಾರೆ. ಈ ನಡುವೆ ಅನೇಕ ಘಟನೆಯಲ್ಲಿ ಅನೇಕರ ಸಾವಿಗೆ ಗೀಸರ್ ಕಾರಣ ಆಗಿದೆ.
ಇದಕ್ಕೆ ಇತ್ತೀಚಿಗೆ ನಡೆದ ಅನೇಕ ಪ್ರಕರಣಗಳು ಪುಷ್ಟಿ ನೀಡಿವೆ.
ಸ್ನಾನದ ಕೋಣೆಯಲ್ಲಿದ್ದ ಗ್ಯಾಸ್ ಗೀಸರ್ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ ಸಾವನ್ನಪ್ಪಿದ ದುರಂತ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ದುರಂತ ಸಂಭವಿಸಿದೆ. ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು.ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನದ ಕೋಣೆಗೆ ಹೋದಾಗ ಘಟನೆ ನಡೆದಿದೆ.
ಸ್ನಾನದ ಕೋಣೆಗೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿಲ್ಲ. ಅನುಮಾನಗೊಂಡ ತಂದೆ ಅಲ್ತಾಫ್‌ ಬಾಗಿಲು ಬಡಿದಿದ್ದಾರೆ.ಆಗಲೂ ಬಾಗಿಲು ತೆಗೆದಿಲ್ಲ ತೆರೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರೋದು ಗೊತ್ತಾಗಿದೆ.ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಕೋಣೆಯಲ್ಲಿ ಕಿಟಕಿ ಇರಲಿಲ್ಲ.

ಬಾತ್ ರೂಮಲ್ಲಿ ಬಿದ್ದು ಯುವತಿ ಸಾವು

ಸ್ನೇಹಿತೆಯ ಎಂಗೇಜ್‌ಮೆಂಟ್‌ಗೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವತಿ, ನಿಶ್ಚಿತಾರ್ಥದ ಮುನ್ನವೇ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದ್ದು , ಮೃತ ಯುವತಿ ರಂಜಿತಾ (27) , ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿಯಾಗಿದ್ದಾಳೆ. ಈ ಘಟನೆಯು ಅಕ್ಟೋಬರ್ 25ರಂದು ನಡೆದಿದ್ದು, ರಂಜಿತಾ ಅವರು ಎಂಎಸ್ಸಿ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ರಂಜಿತಾ, ಸ್ನೇಹಿತೆಯ ನಿಶ್ಚಿತಾರ್ಥಕ್ಕಾಗಿ ತನ್ನ ಸ್ನೇಹಿತೆ ರೇಖಾ ಅವರೊಂದಿಗೆ ಚಿಕ್ಕಮಗಳೂರಿಗೆ ಬಂದಿದ್ದರು. ನಿಶ್ಚಿತಾರ್ಥದ ಕಾರ್ಯಕ್ರಮವಿದ್ದ ಕಾರಣ, ಅವರು ಹಾಂದಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಆದರೆ, ಇಂದು ಬೆಳಗ್ಗೆ ಸ್ನಾನಕ್ಕೆ ಹೋದಾಗ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ರೇಖಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯ ಹಿಂದೆ ಹಲವು ಅನುಮಾನ ವ್ಯಕ್ತವಾಗಿದ್ದು, ಬಾತ್‌ರೂಮ್‌ನಲ್ಲಿ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ರಂಜಿತಾ ಅವರು ಸಾವನ್ನಪ್ಪಿರುವ ಶಂಕೆಯಿದೆ. ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ಸಾವು ಸಂಭವಿಸುವ ಸಾಧ್ಯತೆಯನ್ನು ಪೊಲೀಸರು ಪರಿಗಣಿಸಿದ್ದಾರೆ. ಇನ್ನು ಅನೇಕ ಕಡೆ ಗೀಸರ್ ಸ್ಫೋಟಗೊಂಡು ಅನಾಹುತ ನಡೆದಿದೆ. ಇನ್ನಾದ್ರೂ ಜನರೇ ಎಚ್ಚರ. ಏಕೆಂದರೆ ನಿಮ್ಮ ಜೀವ ನಿಮ್ಮ ಜವಾಬ್ದಾರಿ…!

Categories
Uncategorized

ಕಾಫಿನಾಡಲ್ಲಿ ಪತ್ತೆಯಾಯ್ತು ಜಿಲ್ಲೆಯ ಅತಿದೊಡ್ಡ ಒತ್ತುವರಿ ಪ್ರಕರಣ

ಕಾಫಿನಾಡಲ್ಲಿ ಪತ್ತೆಯಾಯ್ತು ಜಿಲ್ಲೆಯ ಅತಿದೊಡ್ಡ ಒತ್ತುವರಿ ಪ್ರಕರಣ

* ಜಿಲ್ಲೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 580 ಎಕರೆ ಒತ್ತುವರಿ ಪತ್ತೆ
* ಎರಡೂ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು

NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 580 ಎಕರೆ ಅರಣ್ಯ ಜಾಗ ಒತ್ತುವರಿ ಆಗಿರುವುದನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳಸ ತಾಲ್ಲೂಕಿನ ತನೂಡಿ ಗ್ರಾಮದ ಹಲಸೂರು ಮೀಸಲು ಅರಣ್ಯ ಪ್ರದೇಶದ ಸರ್ವೆ ನಂ. 122ರಲ್ಲಿ 450 ಎಕರೆ ಜಾಗವನ್ನು ತನೂಡಿ ಎಸ್ಟೇಟ್‌ನ ಎಸ್.ಬಿ. ಶಂಕರ್, ಎಸ್.ಬಿ. ಪ್ರಭಾಕರ್, ಸುನೀತಾ ಒತ್ತುವರಿ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಾಳೆಹೊನ್ನೂರು ಹೋಬಳಿ ಬಿ.ಕಣಬೂರು ಗ್ರಾಮದ ಸರ್ವೆ ನಂ.9 ಹಾಗೂ ಬನ್ನೂರು ಗ್ರಾಮದ ಸರ್ವೇ ನಂ.95, 96, 97ರಲ್ಲಿ 130 ಎಕರೆ ಬನ್ನೂರು ಕಿರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ ಎಂದು ಎಫ್‌ಐಆ‌ರ್ ದಾಖಲಿಸಲಾಗಿದೆ.
ಬೈರೇಗುಡ್ಡ ಎಸ್ಟೇಟ್‌ನ ಮಹಮ್ಮದ್ ಇಫಿಖಾರ್ ಆದಿಲ್‌, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಇಲಿಯಾಸ್, ಅಬ್ದುಲ್ ವಹೀದ್, ಅಬ್ದುಲ್ ಮುನಾಫ್ ಹಾಗೂ ಅಬ್ದುಲ್‌ ಗಫಾ‌ರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಎರಡೂ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ವಿವಿಧ ಕಲಂ ಅಡಿ ಎಸಿಎಫ್ ಮೋಹನಕುಮಾರ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಮಂಜುನಾಥ್ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಪತ್ತೆಯಾದ ಅತಿದೊಡ್ಡ ಒತ್ತುವರಿ ಪ್ರಕರಣ ಇದಾಗಿದೆ. ಇದೇ ರೀತಿಯ ಒತ್ತುವರಿ ಗುರುತಿಸಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Categories
ಚಿಕ್ಕಮಗಳೂರು

ಯುವತಿ,ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಾಂಗ್ರೆಸ್ ಮುಖಂಡನ ಬಂಧನ

ಯುವತಿ,ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಾಂಗ್ರೆಸ್ ಮುಖಂಡನ ಬಂಧನ

* ಮಹಿಳೆಯರ ವೈಯಕ್ತಿಕ ಫೋಟೋ ಪಡೆದು ಎಡಿಟ್ ಮಾಡಿ ಶೇರ್ ಮಾಡ್ತಿದ್ದ
* ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಮನೆಗೆ ನುಗ್ಗಿ ಥಳಿತ,ವೀಡಿಯೋ ವೈರಲ್

NAMMMUR EXPRESS NEWS
ಚಿಕ್ಕಮಗಳೂರು: ಅಪರಿಚಿತ ಮಹಿಳೆಯರು ಹಾಗೂ ಯುವತಿಯರಿಗೆ ಮೆಸೇಜ್ ಮಾಡುವುದು ಮತ್ತು ಮಹಿಳೆಯೊಬ್ಬರ ವೈಯಕ್ತಿಕ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ, ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸನಗರದ ಆದಿತ್ಯ(40) ಬಂಧಿತ ಆರೋಪಿಯಾಗಿದ್ದು, ಮಹಿಳೆಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ನಂತರ ವೈಯಕ್ತಿಕ ಫೋಟೋಗಳನ್ನು ಪಡೆದು ಅವುಗಳನ್ನು ಎಡಿಟ್ ಮಾಡಿ ಸ್ನೇಹಿತರಿಗೆ ತೋರಿಸುತ್ತಿದ್ದ, ಅಲ್ಲದೇ ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀರಿಗೆ ಮಹಿಳೆ ದೂರು ನೀಡಿದ್ದಾರೆ.ದೂರಿನನ್ವಯ ಪ್ರಕರಣ ದಾಖಲಿಸಿರುವ ನಗರ ಠಾಣೆ ಪೊಲೀಸರು, ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ.
ಆದಿತ್ಯ ಈ ಹಿಂದೆ ಆಲ್ದೂರಿನ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷನಾಗಿದ್ದನು. ಬಂಧನಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರೇ ಆದಿತ್ಯ ಮನೆಗೆ ಹೋಗಿ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Categories
Uncategorized ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ರಾಜಕೀಯ ಮ್ಯೂಸಿಕಲ್ ಚೇರ್!

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ರಾಜಕೀಯ ಮ್ಯೂಸಿಕಲ್ ಚೇರ್!
– ಹೈಕೋರ್ಟ್ ಆದೇಶ ಹಿನ್ನೆಲೆ ಅನಿರ್ಧಿಷ್ಟಾವಧಿಯವರೆಗೆ ಆಸಾದಿ ಮುಂದುವರಿಕೆ
– ಏನಾಗುತ್ತೆ… ತೀರ್ಥಹಳ್ಳಿ ಪಟ್ಟಣ ರಾಜಕಾರಣ?

NAMMUR EXPRESS NEWS
ತೀರ್ಥಹಳ್ಳಿ: ಹೈಕೋರ್ಟ್ ಆದೇಶ ಹಿನ್ನೆಲೆ ಅನಿರ್ಧಿಷ್ಟಾವಧಿಯವರೆಗೆ ಪ.ಪಂ ಅಧ್ಯಕ್ಷ ಅಸಾದಿ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಈ ಮೂಲಕ ಪಟ್ಟಣ ಪಂಚಾಯತ್ ಕುರ್ಚಿ ಇದೀಗ ಮತ್ತೆ ಮ್ಯೂಸಿಕಲ್ ಚೇರ್ ರೀತಿ ಆಗಿದೆ.
ಕಾಂಗ್ರೆಸ್ ಪಟ್ಟಣ ಪಂಚಾಯತ್ ಸದಸ್ಯರು ಮಾಡಿದ್ದ ಅವಿಶ್ವಾಸ ನಿರ್ಣಯ ವಿರುದ್ಧ ಅಸಾದಿಯವರು ಸಲ್ಲಿಸಿದ ಅರ್ಜಿ ಕುರಿತಂತೆ ಅಕ್ಟೋಬರ್ 28ರಂದು ಹೈಕೋರ್ಟ್ ವಿಚಾರಣೆ ನಡೆದಿದ್ದು, ಅಸಾದಿ ಪರ ಸಶಕ್ತವಾಗಿ ವಾದ ಮಂಡಿಸಿದ ವಕೀಲರಾದ ಸುನಿಲ್ ಕುಮಾರ್ ಮಂಡಗದ್ದೆಯವರ ವಾದ ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಕೂಲಂಕುಷವಾಗಿ ಸಂಪೂರ್ಣ ವಸ್ತುಸ್ಥಿತಿ ತಿಳಿಯುವವರೆಗೂ ಪ್ರಕರಣಕ್ಕೆ ಅಂತಿಮ ತೀರ್ಪು ನೀಡಲು ಕಾಲಾವಕಾಶ ಕೊಟ್ಟಿದೆ. ಅಲ್ಲಿಯವರೆಗೂ ಅಧ್ಯಕ್ಷಗಾದಿಯಲ್ಲಿ ಅಸಾದಿಯವರೇ ಮುಂದುವರೆಯಲಿದ್ದಾರೆ. ಹೈಕೋರ್ಟ್ ಮಂಗಳವಾರ ಅರ್ಜಿ ವಿಚಾರಣೆ ಮುಂದೂಡಿದೆ. ದಿನಾಂಕ ಪ್ರಕಟ ಮಾಡದ ಹಿನ್ನಲೆಯಲ್ಲಿ ಅಲ್ಲಿಯವರೆಗೆ ಆಸಾದಿ ಅಧಿಕಾರ ಅಬಾಧಿತವಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್‌ ಮಾಸಿಕ ಡ್ರಾ

ತೀರ್ಥಹಳ್ಳಿ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್‌ ಮಾಸಿಕ ಡ್ರಾ
– ಅಂದಗೆರೆಯ ಐಸಿರಿಗೆ 1 ಲಕ್ಷದ ಬಹುಮಾನ
– ಅನೇಕ ಗ್ರಾಹಕರಿಗೆ ಸಮಾಧಾನಕರ ಬಹುಮಾನ, ಮೊಬೈಲ್ ಹ್ಯಾಂಡ್‌ಸೆಟ್

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ತೀರ್ಥಹಳ್ಳಿ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್‌ನ 17ನೇ ವಾರ್ಷಿಕಾಚರಣೆಯ ತಿಂಗಳ ಮಾಸಿಕ ಡ್ರಾ ಅಕ್ಟೋಬರ್ 29ರಂದು ಸಂಸ್ಥೆಯ ಶೋರೂಂನಲ್ಲಿ ನಡೆಯಿತು.
ಸಂಸ್ಥೆಯ ಗ್ರಾಹಕರಾದ ಪವನ್, ಯೋಗೇಂದ್ರ, ಸುಶ್ಮಿತಾ, ಫೈರೋಜ್, ಅಮೃತಾ, ಶೀಲಾ ಶೆಟ್ಟಿ, ಕಾರ್ತಿಕ್ ಕೆ.ಇ.ಅವರ ಸಮ್ಮುಖದಲ್ಲಿ ನಡೆಸಲಾಯಿತು. ಸಂಸ್ಥೆಯ ಪಾಲದಾರರಾದ ಮೊಯಿದ್ದೀನ್ ಕಬೀರ್, ಯೂಸುಫ್ ಹೈದರ್, ಶೈಖ್ ಅಹಮದ್ ಶಾರಿಖ್ ಉಪಸ್ಥಿತರಿದ್ದರು.

ಡ್ರಾ ವಿಜೇತರ ವಿವರ

ಪ್ರಥಮ ಬಹುಮಾನ :     1,00,000    ನಂ:62086       ಐಸಿರಿ ಎ.ಎನ್. ಅಂದಗೆರೆ
ದ್ವಿತೀಯ ಬಹುಮಾನ:   75,000        ನಂ:46843       ಆರೀಬಾ ಎಂ.ಭಂಡಿಗಡಿ
ತೃತೀಯ ಬಹುಮಾನ:    50,000      ನಂ:58432       ರವೀಂದ್ರ ಎ.ಎಸ್.ಮಹಿಷಿ
4ನೇ ಬಹುಮಾನ:            25,000      ನಂ:51931          ಲಕ್ಷ್ಮಣ ಎಂ.ಕೆ.ಕೊಪ್ಪ

ಸಮಾಧಾನಕರ ಬಹುಮಾನ

ಪ್ರಥಮ ಬಹುಮಾನ:       10,000    ನಂ:49871      ಶಶಿಧರ್ ಬೆಟ್ಟಮಕ್ಕಿ
ದ್ವಿತೀಯ ಬಹುಮಾನ:   10,000    ನಂ:66609      ಮಹಮ್ಮದ್ ಯಾಸಿನ್ ಕೋಡೂರು
ತೃತೀಯ ಬಹುಮಾನ:   10,000    ನಂ:44808     ಉಷಾ ಬೆಂಗಳೂರು
ಮೊಬೈಲ್ ಹ್ಯಾಂಡ್‌ಸೆಟ್ ವಿನ್ನರ್ : ನಂ60105       ಸುರೇಖ ಎನ್.ಕೋಣಂದೂರು

ಸಮಸ್ತ ಗ್ರಾಹಕರಿಗೆ, ವಿಜೇತರಿಗೆ ಧನ್ಯವಾದಗಳು.

Categories
ಕರಾವಳಿ ಬೆಂಗಳೂರು ಮಲ್ನಾಡ್ ರಾಜ್ಯ

ಬಿಲ್ವಪತ್ರೆ ಯ ಮಹತ್ವವೇನು?

ಬಿಲ್ವಪತ್ರೆ ಯ ಮಹತ್ವವೇನು?

ಬಿಲ್ವಪತ್ರೆ ಪೂಜೆ ಸಮಯದಲ್ಲಿ ಶಿವನಿಗೆ ಅರ್ಪಿಸುವ ಪತ್ರೆ. ಶಿವನಿಗೆ ಮೂರು ಕಣ್ಣುಗಳು ಇರುವಂತೆ ಈ ಬಿಲ್ವಪತ್ರೆಗೂ ಸಹ ಮೂರು ದಳಗಳಿವೆ. ಶಿವನಿಗೆ ಬಿಲ್ವಪತ್ರೆ ಯನ್ನು ಅರ್ಪಿಸುವುದರಿಂದ ಮನುಷ್ಯ ಜೀವನದಲ್ಲಿ ಸಂತೋಷ ವನ್ನು ಹೊಂದುತ್ತಾನೆ ಎಂದು ನಂಬಿಕೆ. ಬಿಲ್ವಪತ್ರೆಯನ್ನು ಅರ್ಪಿಸುವಾಗ ದಳಗಳು ತೀರಿಸುವು ಮುರುವಾಗಿ ಅರ್ಪಿಸಬೇಕು.ಅಂದರೆ ದಳದ ತೊಟ್ಟು ನಮ್ಮ ಕಡೆಗೆ ಬರುವಂತೆ ಅರ್ಪಿಸಬೇಕು.

ಶಿವಪುರಾಣದಲ್ಲಿ ಬಿಲ್ವಪತ್ರೆ ಬಗ್ಗೆ ಮಾಹಿತಿ ಇದೆ. ಬಿಲ್ವಪತ್ರೆ ಯನ್ನು ಮೂರು ದಳಗಳನ್ನು ಬ್ರಹ್ಮ ,ವಿಷ್ಣು ,ಮಹೇಶ್ವರ ಗೆ ಹೊಲಿಸಿದ್ದಾರೆ.

ಸ್ಕಂದ ಪುರಾಣದಲ್ಲಿ ಬಿಲ್ವಪತ್ರೆ ಮರದ ಬಗ್ಗೆ ಮಾಹಿತಿ ಇದೆ. ಮರದ ಬೇರಿನಲ್ಲಿ ಗಿರಿಜಾ, ಕಾಂಡದಲ್ಲಿ ಮಹೇಶ್ವರಿ, ಕೊಂಬೆ ಗಳಲ್ಲಿ ದಾಕ್ಷಾಯಿಣಿ, ಎಲೆಗಳಲ್ಲಿ ಪಾರ್ವತಿ, ಹೂವುಗಳಲ್ಲಿ ಗೌರಿ, ಹಣ್ಣುಗಳಲ್ಲಿ ಕಾತ್ಯಾಯಿನಿ ದೇವಿಯರು ವಾಸಿಸುತ್ತಾರೆ

ಇನ್ನೂ ಮುಂದುವರೆದು ಶ್ರೀ ಮಹಾಲಕ್ಷ್ಮೀ ಸಹ ಬಿಲ್ವಪತ್ರೆ ಮರದಲ್ಲಿ ವಾಸಿಸುತ್ತಾರೆ. ಇದಕ್ಕೊಂದು ಸ್ತೋತ್ರ ಇದೆ

“ಬಿಲ್ವವೃಕ್ಷ ಪ್ರಿಯಾ ಕೃಷ್ಣಾಂಬರ ಬಿಲ್ವೋಪ ಮಸ್ತನೀ, ಬಿಲ್ವಾತ್ಮಿಕಾ ಬಿಲ್ವ ವಸುರೇ ಬಿಲ್ವವೃಕ್ಷ ನಿವಾಸಿ ನೀ”
‎

ಬಿಲ್ವಪತ್ರೆ ಸ್ತೋತ್ರ.

ತ್ರಿದಳಂ ತಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ …ಇನ್ನೂ ಮುಂದುವರಿದಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಶಿವ ಪುರಾಣ ಮತ್ತು ಸ್ಕಂದ ಪುರಾಣದಲ್ಲಿ ಬಿಲ್ವಪತ್ರೆ ಬಗ್ಗೆ ವಿವರವಾದ ಉಲ್ಲೇಖವಿದೆ.
ಓಂ ನಮಃ ಶಿವಾಯ.

Categories
ಕರಾವಳಿ ಕಾರ್ಕಳ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಮಂಗಳೂರು: ಮಿತಿಮೀರಿದ ಮಳೆ; ಸಂಕಷ್ಟದಲ್ಲಿ ಕೃಷಿಕರು

* ಕಾಪು: ಕಡಲ್ಕೊರೆತ ಸ್ಥಳಕ್ಕೆ ಶಾಸಕರ ಭೇಟಿ

* ಕಾರ್ಕಳ: ಪ್ರಾಣಿ ಮತ್ತು ಪಕ್ಷಿಗಳ ಉಪಟಳದಿಂದ ಹೈರಾಣಾದ ರೈತರು

* ಕುಮಟಾ: ಸೇತುವೆಯ ಮೇಲೆ ಬಸ್ ಗಳ ಓಡಾಟಕ್ಕೆ ನಿರ್ಬಂಧ.‌

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಮಂಗಳೂರು: ಮಿತಿಮೀರಿದ ಮಳೆ! ಸಂಕಷ್ಟದಲ್ಲಿ ಕೃಷಿಕರು

ಮಂಗಳೂರು: ಈ ವರ್ಷ ಮೇ ತಿಂಗಳ ಮಧ್ಯಭಾಗದಿಂದಲೇ ಮಳೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ, ಕೃಷಿ ಚಟುವಟಿಕೆಗಳು ಕೂಡ ಕೊಂಚ ಬೇಗನೆ ಆರಂಭಗೊಂಡವು. ಆದರೆ ದೀಪಾವಳಿ ಮುಗಿದರೂ, ಮಳೆಗಾಲ ಮುಗಿಯದ ಕಾರಣ ಕೃಷಿಕರು ತಮ್ಮ ಫಸಲನ್ನು ಗದ್ದೆಯಿಂದ ಕಟಾವು ಮಾಡಿ ತರಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಭತ್ತದ ಬೆಳೆಗಳನ್ನು ಕಟಾವು ಮಾಡಲು ಯಂತ್ರಗಳನ್ನು ಈಗಾಗಲೇ ತಂದಿರಿಸಿದ್ದು, ಅದನ್ನು ಗದ್ದೆಗೆ ಇಳಿಸಲು, ಮಳೆಯ ತೀವ್ರತೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಗದ್ದೆಯ ತುಂಬ ನೀರು ಆವರಿಸಿಕೊಂಡಿದೆ.‌ ಇದರ ಪರಿಣಾಮವಾಗಿ ಕೆಲವು ಭತ್ತದ ತೆನೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಉತ್ತಮವಾಗಿ ಬಂದಿರುವ ಫಸಲನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೇ ಎನ್ನುವ ಪರಿಸ್ಥಿತಿ ಕೃಷಿಕರಿಗೆ ಎದುರಾಗಿದೆ. ಇದೇ ರೀತಿ ಮಳೆ ಇನ್ನೂ ಮುಂದುವರಿದರೆ, ಭತ್ತದ ಬೆಳೆಗಳು ಸಂಪೂರ್ಣವಾಗಿ ಮಣ್ಣುಪಾಲಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತದೆ ಎನ್ನುವುದು ಕಟಾವು ಮಾಡಲು, ಮಳೆ ನಿಲ್ಲುವುದನ್ನೇ ಕಾಯುತ್ತಿರುವ ಕೃಷಿಕರ ಅಳಲಾಗಿದೆ. ಈಗಾಗಲೇ ಭತ್ತದ ಹುಲ್ಲು ಕೊಳೆತ ಸ್ಥಿತಿಯಲ್ಲಿದ್ದು, ದನಗಳಿಗೆ ಮೇವು ಇಲ್ಲದಂತಾಗಿದೆ. ಕಟಾವು ಮಾಡುವಾಗ ಪೈರುಗಳು ಉದುರಿ ಬೀಳುವಂತಾಗಿದೆ. ಉಳಿದಿರುವ ಫಸಲನ್ನಾದರೂ ನಿಧಾನವಾಗಿ ಯಂತ್ರಗಳ ಸಹಾಯದಿಂದ ಕಟಾವು ಮಾಡಬೇಕಿದೆ. ಇಲ್ಲದಿದ್ದರೆ ಅದೂ ಕೂಡ ದಕ್ಕುವುದಿಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ.

* ಕಾಪು: ಕಡಲ್ಕೊರೆತ ಸ್ಥಳಕ್ಕೆ ಶಾಸಕರ ಭೇಟಿ

ಕಾಪು: ಕಳೆದ ಕೆಲವು ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ, ಮಟ್ಟು ಸಮುದ್ರ ಬಿರುಸುಗೊಂಡ ಪರಿಣಾಮ, ದಡದತ್ತ ಮುನ್ನುಗ್ಗಿ ಬರುತ್ತಿರುವ ಅಲೆಗಳ ರಭಸಕ್ಕೆ ಕಡಲ್ಕೊರೆತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಬಳಿಕ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಕರೆ ಮಾಡಿ, ತುರ್ತು ಕಾಮಗಾರಿ ಕೈಗೊಳ್ಳುವಂತೆ ಆದೇಶವನ್ನು ಹೊರಡಿಸಿದ್ದಾರೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಚಿವರ ಜೊತೆಗೆ ಚರ್ಚೆ ನಡೆಸಿ, ಶಾಶ್ವತ ಪರಿಹಾರಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರ ಭೇಟಿಯ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯೋಗಿಶ್, ಸದಸ್ಯರಾದ ರತ್ನಾಕರ ಕೋಟ್ಯಾನ್, ನಾಗರಾಜ್ ಮೆಂಡನ್, ರಮೇಶ್ ಪೂಜಾರಿ, ಶಕ್ತಿ ಕೇಂದ್ರದ ಹರ್ಷಿತ್ ಪೂಜಾರಿ, ನ್ಯಾಯವಾದಿಗಳಾದ ಗಣೇಶ್ ಕುಮಾರ್ ಮಟ್ಟು, ಗೋಪಾಲಕೃಷ್ಣರಾವ್, ಸಂತೋಷ್ ಸೇರಿದಂತೆ ಇತರ ಸ್ಥಳೀಯರು ಹಾಜರಿದ್ದರು.

* ಕಾರ್ಕಳ: ಪ್ರಾಣಿ ಮತ್ತು ಪಕ್ಷಿಗಳ ಉಪಟಳದಿಂದ ಹೈರಾಣಾದ ರೈತರು

ಕಾರ್ಕಳ: ಕರಾವಳಿ ಭಾಗದಲ್ಲಿ ಕೃಷಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸಮಸ್ಯೆಗಳು ತಲೆದೋರಿವೆ.‌ ಒಂದೆಡೆ ಮಳೆಯ ತೀವ್ರತೆಯಿಂದಾಗಿ ಬೆಳೆಗಳು ಕುಸಿಯುತ್ತಿದ್ದರೆ, ಮತ್ತೊಂದೆಡೆ ‌ ಪ್ರಾಣಿ-ಪಕ್ಷಿಗಳಿಂದ ಉಳಿದ ಅಲ್ಪಸ್ವಲ್ಪ ಬೆಳೆಗಳನ್ನು ಜೊತೆಗೆ ಮನೆಯಲ್ಲಿ ಸಾಕಿರುವ ಕೋಳಿ, ಹಸುಗಳ ರಕ್ಷಣೆ ಮಾಡುವ ಸವಾಲು ಎದುರಾಗಿದೆ. ಕಾರ್ಕಳದಿಂದ ಪಡುಬಿದ್ರಿ ಭಾಗದವರೆಗೆ ಮಂಗ, ನವಿಲು, ಕಾಡೆಮ್ಮೆ, ಕಾಡು ಹಂದಿ ಮತ್ತು ಚಿರತೆಯ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಹರೀಶ್ ಶೆಟ್ಟಿಗಾರ್ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಕಾರ್ಕಳದ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಜೈನ್ ಅವರು “ಕಾರ್ಕಳ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿಕರೇ ಇದ್ದು, ಭತ್ತ ,ಅಡಿಕೆ, ತೆಂಗು ಮೊದಲಾದವು ಪ್ರಮುಖ ಬೆಳೆಗಳಾಗಿವೆ. ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಅದರಲ್ಲೂ ಮಂಗ, ನವಿಲು, ಕಾಡುಕೋಣ ಮತ್ತು ಕಾಡುಹಂದಿಯಿಂದ ಉಂಟಾಗುವ ತೊಂದರೆ ಮಿತಿಮೀರಿದೆ. ಇದರಿಂದಾಗಿ ಬೆಳೆಗಾರರು ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಅರಣ್ಯ ಇಲಾಖೆಯು ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ, ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಂದಾಪುರ ಅರಣ್ಯ ಇಲಾಖೆಯ ಉಪವಿಭಾಗದ ಡಿಎಫ್ಓ ಗಣಪತಿ ಮತ್ತು ಕಾರ್ಕಳದ ಡಿಎಫ್ಓ ಶಿವರಾಮ ಬಾಬು ಅವರು ” ಕಾಡುಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಭವಿಸುತ್ತಿರುವ ಸಂಘರ್ಷವನ್ನು ತಡೆಗಟ್ಟಲು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾಡು ಪ್ರಾಣಿಗಳಿಂದಾಗಿ ಹಾನಿಗೊಳಪಟ್ಟ ಬೆಳೆಗಳಿಗೆ ಪರ್ಯಾಯವಾಗಿ ಕೃಷಿಕರಿಗೆ ಪರಿಹಾರ ಹಣವನ್ನು ನೀಡಲಾಗುತ್ತಿದೆ.‌ ಮತ್ತು ಕಾಡಿನಿಂದ ಜನವಸತಿ ಪ್ರದೇಶಕ್ಕೆ ಪ್ರಾಣಿಗಳು ಆಗಮಿಸಿದಂತೆ ಸೋಲಾರ್ ಫೆನ್ಸಿಂಗ್ ಅನ್ನು ಅಳವಡಿಸಲಾಗುತ್ತಿದೆ. ರೈತರಿಗೂ ಸಮಸ್ಯೆಯಾಗದಂತೆ ಹಾಗೆಯೇ ಪ್ರಾಣಿಗಳಿಗೂ ತೊಂದರೆಯುಂಟಾಗದಂತೆ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ನಿಗಾವಹಿಸಿ ಕರ್ತವ್ಯನಿರತರಾಗಿದ್ದಾರೆ” ಎಂದು ತಿಳಿಸಿದರು.

* ಕುಮಟಾ: ಸೇತುವೆಯ ಮೇಲೆ ಬಸ್ ಗಳ ಓಡಾಟಕ್ಕೆ ನಿರ್ಬಂಧ

ಕುಮಟಾ: ಕಳೆದ ಕೆಲವು ವರ್ಷಗಳಿಂದ ಕುಂಟುತ್ತಾ ಸಾಗಿದ, ಗಂಗಾವಳಿ ಮತ್ತು ಮಂಜುಗುಣಿ ನಡುವೆ ಸಂಪರ್ಕ ಕಲ್ಪಿಸುವ, ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಆದರೆ ಇದೀಗ ಸಾರಿಗೆ ಬಸ್ ಸಂಚಾರಕ್ಕೆ ಸರ್ಕಾರವು ನಿರ್ಬಂಧ ಹೇರಿರುವುದು ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಯ ವಾಹನಗಳು ಈ ಮಾರ್ಗದಲ್ಲಿ ಚಲಿಸುತ್ತಿದ್ದು, ಬಸ್ ಗಳಿಗೆ ಮಾತ್ರ ಈ ರೀತಿಯ ನಿರ್ಬಂಧ ಹೊರಡಿಸಿದೆ. ಇಷ್ಟು ದಿನ ಸಂಚಾರ ಮಾಡುತ್ತಿದ್ದ ಒಂದು ಬಸ್ ಕೂಡ ಇದೀಗ ಸಂಚಾರ ನಿಲ್ಲಿಸಿದೆ. ಇದರ ಪರಿಣಾಮವಾಗಿ ಗೋಕರ್ಣದಿಂದ ಅಂಕೋಲಾಕ್ಕೆ ಪ್ರತಿದಿನ ಸಂಚರಿಸುವ ಬಸ್, ಸುತ್ತಿ ಬಳಸಿ ಸಂಚರಿಸುತ್ತಿದ್ದು, ರಸ್ತೆಯಲ್ಲಿರುವ ಸಮಸ್ಯೆಗಳಿಂದಾಗಿ ಕೆಟ್ಟು ನಿಲ್ಲುತ್ತಿದೆ. ಮತ್ತು ಕೇವಲ 25 ಕಿಲೋಮೀಟರ್ ಕ್ರಮಿಸಲು ಒಂದು ಗಂಟೆಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಶಾಲಾ ಕಾಲೇಜುಗಳಿಗೆ, ಕೆಲಸಕ್ಕೆ ತೆರಳುವವರಿಗೆ ಸಮಸ್ಯೆ ಉಂಟಾಗುತ್ತಿದೆ.‌ ಅದೇ ಗಂಗಾವಳಿ ಮಾರ್ಗದಲ್ಲಿ ಚಲಿಸಿದರೆ ಅರ್ಧ ಗಂಟೆಯೊಳಗೆ ತಲುಪಬಹುದಾಗಿದೆ. ದಿನವೂ ಸಾವಿರಾರು ಪ್ರವಾಸಿ ವಾಹನಗಳು, ಸರಕು ವಾಹನಗಳು, ಸರ್ಕಾರಿ ವಾಹನಗಳು ಕೂಡ ಸಂಚರಿಸುತ್ತಿದ್ದರೂ, ಸರ್ಕಾರಿ ಬಸ್ ಗಳನ್ನು ಏಕೆ ಈ ಮಾರ್ಗದಲ್ಲಿ ಸಂಚರಿಸಲು ತಡೆಹಿಡಿಯಲಾಗಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಗಣಪತಿಯವರು ಪ್ರತಿನಿತ್ಯ ವಯೋವೃದ್ಧರು ಮತ್ತು ವಿದ್ಯಾರ್ಥಿಗಳು ಸೇತುವೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ತೊಂದರೆ ಅನುಭವಿಸುವಂತಾಗಿದೆ. ಎಲ್ಲಾ ಬಗೆಯ ವಾಹನಗಳು ಸಂಚರಿಸುತ್ತಿದ್ದು, ಸರ್ಕಾರಿ ಬಸ್ ಗಳಿಗೆ ಮಾತ್ರ ಅನುಮತಿ ನೀಡದಿರುವುದು ಬೇಸರದ ಸಂಗತಿಯಾಗಿದೆ. ಜನರಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಇದಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Categories
ಕರಾವಳಿ ಕಾರವಾರ ಪುತ್ತೂರು ಬೆಳ್ತಂಗಡಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಕಡಬ: ಕುಸಿದು ಬಿದ್ದು ಮೃತಪಟ್ಟ ಕಾರ್ಮಿಕ

* ಪುತ್ತೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರ್

* ಸುಳ್ಯ: ನೇಣು ಬಿಗಿದುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

* ಕುಂದಾಪುರ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

•ಬೆಳ್ತಂಗಡಿ: ಅಕ್ರಮ ಗೋಮಾಂಸ ಅಡ್ಡೆ ಮೇಲೆ ದಾಳಿ

* ಕಾರವಾರ: ಒಂದು ಕೋಟಿ ರೂಪಾಯಿ ಸಾಗಾಟ; ವಶಪಡಿಸಿಕೊಂಡ ಪೊಲೀಸರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಕಡಬ: ಕುಸಿದು ಬಿದ್ದು ಮೃತಪಟ್ಟ ಕಾರ್ಮಿಕ

ಕಡಬ: ಮರ್ದಾಳ ಭ್ರಾಂತಿಕಟ್ಟೆ ಎಂಬಲ್ಲಿ, ಸುಬ್ರಹ್ಮಣ್ಯ ರಬ್ಬರ್ ಆರ್ ಆರ್ ಕೆ 2014ನೇ, ರಬ್ಬರ್ ತೋಟವೊಂದರಲ್ಲಿ ಖಾಯಂ ರಬ್ಬರ್ ಟ್ಯಾಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಎನ್ನುವವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಮೃತಪಟ್ಟ ಘಟನೆ ಕಳೆದೆರಡು ದಿನಗಳ ಹಿಂದೆ ಐತ್ತೂರು ಗ್ರಾಮದಲ್ಲಿ ನಡೆದಿದೆ. ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸುರೇಶ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಸುರೇಶ್ ಅವರು ಹೃದಯಾಘಾತ ಅಥವಾ ಇನ್ನಾವುದೋ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಪುತ್ತೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರ್

ಪುತ್ತೂರು: ಚಾಲಕನಿಗೆ ಕಾರಿನ ಮೇಲಿನ ನಿಯಂತ್ರಣ ತಪ್ಪಿ, ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಬೆದ್ರಾಳದಲ್ಲಿ ನಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.‌

* ಸುಳ್ಯ: ನೇಣು ಬಿಗಿದುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಸುಳ್ಯ: ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ, ಮಂಗಳವಾರದಂದು ಜಟ್ಟಿಪಳ್ಳದ ಕಾನತ್ತಿಲದಲ್ಲಿ ನಡೆದಿದೆ. ಕಾಲೇಜಿನಲ್ಲಿ ಪರೀಕ್ಷೆ ಬರೆದು, ಮನೆಗೆ ಹಿಂತಿರುಗಿದ ವೀಕ್ಷಿತ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸಾವಿಗೆ ಶರಣಾಗಿದ್ದಾರೆ. ಕೆಲಸಕ್ಕೆ ತೆರಳಿದ್ದ ತಾಯಿ, ಸಂಜೆ ಮನೆಗೆ ಕರೆದುಕೊಂಡು ಹೋಗಲು ಮಗ ಬಾರದಿದ್ದುದನ್ನು, ಫೋನ್ ಮಾಡಿದರೂ ಪ್ರತಿಕ್ರಿಯಿಸದ ಕಾರಣ, ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ.‌ ಪಕ್ಕದ ಮನೆಯವರು ವೀಕ್ಷಿತ್ ಅವರ ಮನೆಗೆ ಬಂದು ನೋಡಿದಾಗ ಆತ ಸಾವನ್ನಪ್ಪಿರುವುದು ಕಂಡುಬಂದಿದೆ. ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.

* ಕುಂದಾಪುರ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಕುಂದಾಪುರ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಭಿವೃದ್ಧಿಯ ನೆಪದಲ್ಲಿ ಸಾರ್ವಜನಿಕರಿಂದ ಡೊನೇಷನ್ ರೂಪದಲ್ಲಿ ಹಣವನ್ನು ಸಂಗ್ರಹಿಸಿ, ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೇಳೂರು ಗ್ರಾಮದಲ್ಲಿ ನಡೆದಿದೆ.‌ ಹಣಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಲೆಕ್ಕಪರಿಶೋಧನೆ ನಡೆಸದೆ, ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡವನ್ನೇ ಶಾಲಾ ಟ್ರಸ್ಟ್ ನ ಕಛೇರಿ ಎಂದು ನಮೂದಿಸಿ, ತರಗತಿಯ ಅವಧಿಯಲ್ಲಿ ಟ್ರಸ್ಟಿನ ಸಭೆಗಳನ್ನು ನಡೆಸುವ ಮೂಲಕ, ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಶಾಲೆಗಳಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿಯ ನೆಪದಲ್ಲಿ ಲಪಟಾಯಿಸಿ, ಶಾಲಾ ಬಸ್ ಗಳನ್ನು ನಿಲ್ಲಿಸಿ, ಪೆಟ್ರೋಲ್ ಬಂಕ್ ನಲ್ಲಿ ಲಕ್ಷಾಂತರ ರೂಪಾಯಿಯಷ್ಟು ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬೇಳೂರು ಗ್ರಾಮದ ಕರುಣಾಕರ ಶೆಟ್ಟಿ, ಸತ್ಯನಾರಾಯಣ ಅಡಿಗ, ಸತೀಶ್ ಶೆಟ್ಟಿ ಮಡಿಯಾಣ, ವಿಜಯ್ ಕುಮಾರ್ ಶೆಟ್ಟಿ ಕೊಯಿಕೂರು, ಪ್ರಭಾವತಿ ಶೆಟ್ಟಿ, ರಾಜೀವ ಶೆಟ್ಟಿ, ಸುರೇಶ್ ಮೊಗವೀರ, ಜಯಶೀಲ ಶೆಟ್ಟಿ, ದೇವಕಿ ಶೆಟ್ಟಿ, ಸೀತಾರಾಮ ಶೆಟ್ಟಿ, ರಾಜೇಂದ್ರ ಶೆಟ್ಟಿ ಅವರ ಮೇಲೆ, ದಾಖಲೆಗಳ ಸಮೇತ ನ್ಯಾಯವಾದಿಗಳಾದ ಅವಿನಾಶ ಶೆಟ್ಟಿ ಅವರು ಲಿಖಿತ ದೂರನ್ನು ನೀಡಿದ್ದು, ದಾಖಲೆಗಳ ಆಧಾರದ ಮೇಲೆ ಕುಂದಾಪುರ ನ್ಯಾಯಾಲಯದ ಆದೇಶದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಬೆಳ್ತಂಗಡಿ: ಅಕ್ರಮ ಗೋಮಾಂಸ ಅಡ್ಡೆ ಮೇಲೆ ದಾಳಿ

ಬೆಳ್ತಂಗಡಿ: ಖಾಸಗಿ ರಬ್ಬರ್ ತೋಟದ ಶೆಡ್ ವೊಂದರಲ್ಲಿ ಅಕ್ರಮವಾಗಿ ಗೋಮಾಂಸ ಮಾಡುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪಿಎಸ್ಐ ಆಗಿರುವ ಆನಂದ್ ಮತ್ತು ವೇಣೂರಿನ ಪಿಎಸ್ಐ ಆಗಿರುವ ಓಮನ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ ಘಟನೆ, ಇಂದ್ರಬೆಟ್ಟು ಗ್ರಾಮದ ಬೆದ್ರಬೆಟ್ಟುವಿನಲ್ಲಿ ನಡೆದಿದೆ. ಆರೋಪಿಗಳನ್ನು ಬೆದ್ರಬೆಟ್ಟು ನಿವಾಸಿ ಅಬ್ದುಲ್ ನಝೀರ್ ಮತ್ತು ಮಿತ್ತಬಾಗಿಲು ಗ್ರಾಮದ ನಿವಾಸಿ ಝಕಾರಿಯಾ ಎಂದು ಗುರುತಿಸಲಾಗಿದೆ. ಆರೋಪಿಗಳು ದನಗಳನ್ನು ಕಳುವು ಮಾಡಿ ತಂದು, ಮಾಂಸ ತಯಾರಿಸಿ ಮಾರಾಟ ಮಾಡಲು ಸಿದ್ಧತೆಯಲ್ಲಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.‌ ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ , 91 ಕೆಜಿ ದನದ ಮಾಂಸ, ಕತ್ತಿ ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಂಡರು ಆರೋಪಿಗಳ ವಿರುದ್ಧ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರ ಅನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಾರವಾರ: ಒಂದು ಕೋಟಿ ರೂಪಾಯಿ ಸಾಗಾಟ; ವಶಪಡಿಸಿಕೊಂಡ ಪೊಲೀಸರು

ಕಾರವಾರ: ಖಾಸಗಿ ಬಸ್ ವೊಂದರಲ್ಲಿ ಕೋಟ್ಯಂತರ ರೂಪಾಯಿ ಹಣ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿ, ಪೊಲೀಸರು ವಶಪಡಿಸಿಕೊಂಡ ಘಟನೆ, ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ತಡರಾತ್ರಿಯಲ್ಲಿ ನಡೆದಿದೆ.‌ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಬಸ್ ನಲ್ಲಿದ್ದ ಪ್ರಯಾಣಿಕರ ಬ್ಯಾಗ್ ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ, ರಾಜಸ್ಥಾನ ಮೂಲದ ಕಲ್ಲೇಶ್ ಕುಮಾರ್ ಎನ್ನುವ ವ್ಯಕ್ತಿಯ ಬ್ಯಾಗಿನಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ. ಇದನ್ನು ಗೋವಾದಿಂದ ಬೆಂಗಳೂರಿನ ಹೊಸೂರಿಗೆ ಸಾಗಿಸಲಾಗುತ್ತಿತ್ತು ಎನ್ನುವ ಸಂಗತಿ ತಿಳಿದುಬಂದಿದೆ. ಕಲ್ಲೇಶ್ ಕುಮಾರ್ ಮತ್ತು ಆತನ ಜೊತೆಗಿದ್ದ ಭಮ್ರು ಕುಮಾರ್ ಎನ್ನುವ ವ್ಯಕ್ತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಂದು ಕೋಟಿ ರೂಪಾಯಿಯಷ್ಟು ಹಣವು ಅಕ್ರಮ ವ್ಯವಹಾರ ಅಥವಾ ರಾಜಕೀಯ ನಂಟಿಗೆ ಸಂಬಂಧಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಣ ಯಾರಿಗೆ ಸೇರಿದ್ದು? ಯಾವ ಉದ್ದೇಶಕ್ಕಾಗಿ ಅಲ್ಲಿಗೆ ಸಾಗಿಸಲಾಗುತ್ತಿತ್ತು ಎನ್ನುವ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Categories
ಕೊಪ್ಪ ಚಿಕ್ಕಮಗಳೂರು ಶೃಂಗೇರಿ

ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ,ಕೊಲೆ ಯತ್ನ

ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ,ಕೊಲೆ ಯತ್ನ

* ಸಂಬಂಧಿಕ ಭವಿತ್‌ನಿಂದ ಕೊಲೆಗೆ ಯತ್ನ,ಸ್ಥಳೀಯರಿಂದ ರಕ್ಷಣೆ
* ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿಕ್ಷಕಿ ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್,ಆರೋಪಿ ಅರೆಸ್ಟ್

NAMMMUR EXPRESS NEWS
ಕೊಪ್ಪ/ಬಸ್ರೀಕಟ್ಟೆ: ಕೆಲಸ ಮುಗಿಸಿ ಹೋಗುತ್ತಿದ್ದ ಅತಿಥಿ ಶಿಕ್ಷಕಿ ಮೇಲೆ ಹತ್ತಿರದ ಸಂಬಂಧಿಕನೇ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಹೇಯ ಘಟನೆ ಕೊಪ್ಪ ತಾಲೂಕಿನ ಅತ್ತಿಕೊಡಿಗೆ ಗ್ರಾ ಪಂ ವ್ಯಾಪ್ತಿಯ ಬಸ್ರೀಕಟ್ಟೆಯಲ್ಲಿ ನಡೆದಿದೆ.
ಶಿಕ್ಷಕಿಯ ಹತ್ತಿರದ ಸಂಬಂಧಿಯಾದ ಭವಿತ್ ಅಲಿಯಾಸ್ ರಮೇಶ್ (30) ಎಂಬುವನು 25 ವರ್ಷದ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದು, ಕೊಲೆಗೆ ಯತ್ನಿಸಿದಾಗ ಶಿಕ್ಷಕಿ ಜೋರಾಗಿ ಕಿರುಚಿಕೊಂಡಿದ್ದು,ಈ ಸಂದರ್ಭ ಸ್ಥಳೀಯರು ಬಂದು ಶಿಕ್ಷಕಿಯನ್ನು ರಕ್ಷಿಸಿದ್ದಾರೆ. ಹಲ್ಲೆಗೆ ಪ್ರೀತಿ ನಿರಾಕರಣೆ ಕಾರಣ ಎಂಬುದು ತಿಳಿದು ಬಂದಿದ್ದು,ಕಳೆದ ಎರಡು ತಿಂಗಳಿಂದ ಭವಿತ್ ಫೋನ್ ನಂಬರ್‌ನ್ನು ಶಿಕ್ಷಕಿ ಬ್ಲಾಕ್ ಮಾಡಿದ್ದರು ಎನ್ನಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರ ಪರಿಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿಕ್ಷಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಶಿಕ್ಷಕಿಯ ಸಂಬಂಧಿ ಭವಿತ್ ಎಂದು ತಿಳಿದು ಬಂದಿದ್ದು,ಹಲ್ಲೆ ನಡೆಸಿ ಪರಾರಿಯಾಗಿದ್ದ. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಆರೋಪಿಯನ್ನು ಬಾಳೂರು ಸಮೀಪದ ಚಂದುವಳ್ಳಿ ಗ್ರಾಮದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಜಯಪುರ ಪೊಲೀಸರು,ಕೊಪ್ಪ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರೋಪಿ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಲಾಗಿತ್ತು. ಆರೋಪಿಯನ್ನು ಕೂಡಲೇ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು, ಶಿಕ್ಷಕಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.