ವಿಜಯೇಂದ್ರ ಪದಗ್ರಹಣ ಸಂಭ್ರಮ!
– ಬಿಜೆಪಿ 11ನೇ ರಾಜ್ಯಾಧ್ಯಕ್ಷರಾಗಿ ಆಯ್ಕೆ
– ಬಿಜೆಪಿ ಕಚೇರಿಯಲ್ಲಿ ಹೋಮ-ಹವನ ಶುರು
– ಬೆಳಗ್ಗೆ 11 ಗಂಟೆಗೆ ಪದಗ್ರಹಣ ಸಮಾರಂಭ
NAMMUR EXPRESS NEWS
ಬೆಂಗಳೂರು: ಬಿ.ವೈ. ವಿಜಯೇಂದ್ರ ಅವರು ಇಂದು ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಮೂಲಕ ಇವರು ರಾಜ್ಯ ಬಿಜೆಪಿಗೆ 11ನೇ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಕಡೆ ಬಿಜೆಪಿ ವಲಯದಲ್ಲಿ ಹೊಸ ಹುರುಪು ತಂದಿದೆ. ಎ.ಕೆ ಸುಬ್ಬಯ್ಯ ಅವರು 1980ರಲ್ಲಿ ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಬಿ.ಬಿ ಶಿವಪ್ಪ, ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವರು ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ ದುಡಿದಿದ್ದಾರೆ. 1988ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದರು. ಅವರು ಒಟ್ಟು ಮೂರು ಬಾರಿ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಅತಿ ಹೆಚ್ಚು ಬಾರಿ ರಾಜ್ಯಾಧ್ಯಕ್ಷರಾಗಿರುವ ಖ್ಯಾತಿಯನ್ನು ಸಹ ಅವರು ಹೊಂದಿದ್ದಾರೆ.
ಈಗ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಮೊದಲ ಬಾರಿಗೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬುಧವಾರ ಅಧಿಕೃತವಾಗಿ ವಿಜಯೇಂದ್ರ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಸಿದ್ಧತೆ ನಡೆಸಲಾಗಿದೆ.
ಹೋಮ-ಹವನ ಶುರು: ವಿಜಯೇಂದ್ರ ಅವರ ಪದಗ್ರಹಣ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಳಗ್ಗೆ 6.30ರಿಂದಲೇ ಹೋಮ-ಹವನ ಶುರುವಾಗಲಿವೆ. ಗಣಪತಿ ಹೋಮ, ದುರ್ಗ ಹೋಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದಾದ ಬಳಿಕ ಬಳಿಕ ಬಿಜೆಪಿ ಕಚೇರಿಯಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಧ್ವಜವನ್ನು ನಳಿನ್ ಕುಮಾರ್ ಕಟೀಲ್ ಅವರು ಹಸ್ತಾಂತರ ಮಾಡಲಿದ್ದಾರೆ
ನ. 15ರ ಬೆಳಗ್ಗೆ 11 ಗಂಟೆಗೆ ಪದಗ್ರಹಣ ಸಮಾರಂಭ: ಮಾವಿನ ತೋರಣ, ಚಪ್ಪರ ಹಾಕಿ ಕಚೇರಿಗೆ ಕೇಸರಿ ಬಣ್ಣದ ಬಟ್ಟೆಗಳಿಂದ ಅಲಂಕಾರ ಮಾಡಲಾಗಿದೆ. ಬಿಜೆಪಿ ರಾಜ್ಯ ಕಚೇರಿಯ ಇಡೀ ರಸ್ತೆಗೆ ಬಿಜೆಪಿ ಬಂಟಿಂಗ್ಸ್, ಫ್ಲಾಗ್ ಕಟ್ಟಿ ಸಿಂಗಾರ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಅಧಿಕಾರ ಸ್ವೀಕಾರ ಮಾಡಲಿರುವ ಬಿ.ವೈ. ವಿಜಯೇಂದ್ರ ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.