Categories
Uncategorized ಅಂತಾರಾಷ್ಟ್ರೀಯ ಸುದ್ದಿ ಕ್ರಿಕೆಟ್ ಕ್ರೀಡಾ ಸುದ್ದಿ ಬೆಂಗಳೂರು ರಾಜ್ಯ

18 ವರ್ಷಗಳ ಬಳಿಕ ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವದಾಖಲೆ ಬರೆದ ಭಾರತ

18 ವರ್ಷಗಳ ಬಳಿಕ ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವದಾಖಲೆ ಬರೆದ ಭಾರತ

* ಸ್ಮೃತಿ ಮಂಧಾನ ಶತಕ,190 ರನ್‌ಗೆ ಆಸಿಸ್ ಆಲೌಟ್
* 42 ವರ್ಷಗಳ ರೆಕಾರ್ಡ್ ಬ್ರೇಕ್,18 ವರ್ಷದ ಬಳಿಕ ಗೆಲುವು

NAMMMUR EXPRESS SPORTS NEWS
ಚಂಢೀಗಢ: 2025 ರ ಮಹಿಳಾ ಏಕದಿನ ವಿಶ್ವಕಪ್‌ಗೂ ಮುನ್ನ ಸಿದ್ಧತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ ಸರಣಿಯನ್ನಾಡುತ್ತಿರುವ ಭಾರತ ಮಹಿಳಾ ತಂಡ ವಿಶ್ವ ಚಾಂಪಿಯನ್ನರ ವಿರುದ್ಧ ದಾಖಲೆಯ ಗೆಲುವು ದಾಖಲಿಸಿದೆ. ಉಭಯ ತಂಡಗಳ ನಡುವೆ ನಡೆದಿದ್ದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಇದೀಗ ಮೊದಲ ಪಂದ್ಯದ ಸೋಲಿನಿಂದ ಚೇತರಿಸಿಕೊಂಡಿರುವ ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದುಕೊಂಡಿದೆ. ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರ ಶತಕ ಮತ್ತು ಯುವ ವೇಗಿ ಕ್ರಾಂತಿ ಗೌಡ್ ಅವರ ಮಾರಕ ಬೌಲಿಂಗ್‌ನ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾವನ್ನು 102 ರನ್‌ಗಳಿಂದ ಸೋಲಿಸಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಈ ಗೆಲುವಿನ ವಿಶೇಷವೆಂದರೆ 18 ವರ್ಷಗಳ ನಂತರ ಭಾರತ ತಂಡವು ಆಸ್ಟ್ರೇಲಿಯಾವನ್ನು ತನ್ನ ತವರಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸೋಲಿಸಿದೆ. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಅತಿದೊಡ್ಡ ಗೆಲುವು ದಾಖಲಿಸಿದ ಮೊದಲ ತಂಡವೆಂಬ ದಾಖಲೆಯನ್ನು ಬರೆದಿದೆ.

* ಸ್ಫೋಟಕ ಶತಕ ಬಾರಿಸಿದ ಸ್ಮೃತಿ, 196 ರನ್‌ಗೆ ಆಸಿಸ್ ಆಲೌಟ್
ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ಜೋಡಿ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ಅವರಿಂದ ಉತ್ತಮ ಆರಂಭವನ್ನು ಪಡೆದುಕೊಂಡಿತು. ಇವರಿಬ್ಬರು 70 ರನ್‌ಗಳ ಜೊತೆಯಾಟ ನೀಡಿದರು. ಪ್ರತಿಕಾ ಔಟಾದ ಹೊರತಾಗಿಯೂ, ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಮಂಧಾನ 45 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆ ಬಳಿಕವೂ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಸ್ಮೃತಿ ಕೇವಲ 77 ಎಸೆತಗಳಲ್ಲಿ ತಮ್ಮ 12 ನೇ ಶತಕವನ್ನು ಪೂರೈಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಭಾರತದ ಅತ್ಯಂತ ವೇಗದ ಶತಕ ಎಂಬ ದಾಖಲೆಯನ್ನು ಸೃಷ್ಠಿಸಿತು. ಸ್ಮೃತಿ ನಂತರ ಬಂದ ದೀಪ್ತಿ ಶರ್ಮಾ, ಸ್ನೇಹ್ ರಾಣಾ ಮತ್ತು ರಿಚಾ ಘೋಷ್ ತಂಡವನ್ನು 292 ರನ್​ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಹಕರಿಸಿದರು.

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಐದನೇ ಓವರ್ ವೇಳೆಗೆ, ಆರಂಭಿಕರಿಬ್ಬರೂ ಕೇವಲ 12 ರನ್‌ಗೆ ಪೆವಿಲಿಯನ್ ಸೇರಿದರು. ಭಾರತದ ಪರವಾಗಿ ರೇಣುಕಾ ಸಿಂಗ್ ಮತ್ತು ಕ್ರಾಂತಿ ಗೌಡ್ ಎರಡೂ ವಿಕೆಟ್‌ಗಳನ್ನು ಪಡೆದರು. ಬೆತ್ ಮೂನಿ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಆಸ್ಟ್ರೇಲಿಯಾದ ಮೂರನೇ ವಿಕೆಟ್ 62 ರನ್‌ಗಳಿಗೆ ಪತನವಾಯಿತು. 25 ನೇ ಓವರ್‌ನಲ್ಲಿ ಸ್ಪಿನ್ನರ್ ರಾಧಾ ಯಾದವ್ ಎಲಿಸ್ ಪೆರ್ರಿ ಅವರನ್ನು ಪೆವಿಲಿಯನ್​ಗಟ್ಟಿದರು. ಇದರ ನಂತರ ಆಸ್ಟ್ರೇಲಿಯಾದ ಪೆವಿಲಿಯನ್‌ ಪರೇಡ್ ಶುರುವಾಯಿತು. ಅಂತಿಮವಾಗಿ ಇಡೀ ತಂಡವು ಕೇವಲ 190 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ, ಕ್ರಾಂತಿ 9.3 ಓವರ್‌ಗಳಲ್ಲಿ ಕೇವಲ 28 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.

* 42 ವರ್ಷಗಳ ರೆಕಾರ್ಡ್ ಬ್ರೇಕ್,18 ವರ್ಷದ ಬಳಿಕ ಗೆಲುವು
ಭಾರತ ತಂಡಕ್ಕೆ ಈ ಗೆಲುವು ಬಹಳ ವಿಶೇಷವಾಗಿತ್ತು. ಏಕೆಂದರೆ 18 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ತವರು ನೆಲದಲ್ಲಿ ಏಕದಿನ ಪಂದ್ಯದಲ್ಲಿ ಸೋಲಿಸಿದ ದಾಖಲೆಯನ್ನು ಭಾರತ ಮಹಿಳಾ ಪಡೆ ಬರೆಯಿತು. ಇದಕ್ಕೂ ಮೊದಲು 2007 ರಲ್ಲಿ ಚೆಪಾಕ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದಲ್ಲದೆ, ಇದು ಆಸ್ಟ್ರೇಲಿಯಾ ವಿರುದ್ಧ ಯಾವುದೇ ತಂಡವು ಗಳಿಸಿದ ಅತಿದೊಡ್ಡ ಏಕದಿನ ಗೆಲುವಾಗಿದೆ. ಈ ಮೂಲಕ ಟೀಂ ಇಂಡಿಯಾ 42 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು, 1973 ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾವನ್ನು 92 ರನ್‌ಗಳಿಂದ ಸೋಲಿಸಿತ್ತು. ಇದಲ್ಲದೆ, ಈ ಪಂದ್ಯವು ಆಸ್ಟ್ರೇಲಿಯಾದ 13 ಪಂದ್ಯಗಳ ಗೆಲುವಿನ ಸರಣಿಯನ್ನು ಸಹ ಕೊನೆಗೊಳಿಸಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

UAE ವಿರುದ್ಧ ಜಯಗಳಿಸಿದ ಭಾರತ ಏಷ್ಯಾಕಪ್‌ನಲ್ಲಿ ಶುಭಾರಂಭ

UAE ವಿರುದ್ಧ ಜಯಗಳಿಸಿದ ಭಾರತ ಏಷ್ಯಾಕಪ್‌ನಲ್ಲಿ ಶುಭಾರಂಭ

* ಅಬ್ಬರಿಸಿದ ಬೌಲರ್ಸ್ 57 ರನ್‌ಗೆ ಆಲೌಟ್ ಆದ UAE
* ಕುಲ್‌ದೀಪ್ 4,ದುಬೆ 3 ವಿಕೆಟ್,4.1 ಓವರ್‌ನಲ್ಲೇ ಗುರಿ ಬೆನ್ನಟ್ಟಿದ ಭಾರತ

ಏಷ್ಯಾಕಪ್ -2025
NAMMMUR EXPRESS SPORTS NEWS
ದುಬೈ: ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ UAE ವಿರುದ್ಧ 9 ವಿಕೆಟ್‌ಗಳ ಜಯಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲರ್‌ಗಳು ಉತ್ತಮ ಆರಂಭ ನೀಡಿ ಆತಿಥೇಯ ತಂಡವನ್ನು 57 ರನ್‌ಗಳಿಗೆ ಕಟ್ಟಿಹಾಕಿದರು. ಯುಎಇ ತಂಡವು 13.1 ಓವರ್ ನಲ್ಲಿ 57 ರನ್‌ಗಳಿಗೆ ಸರ್ವಪತನಗೊಂಡಿತು. ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್‌ಗಳನ್ನು ಕಬಳಿಸಿದರೇ, ಶಿವಂ ದುಬೆ 3, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ 1-1 ವಿಕೆಟ್‌ಗಳನ್ನು ಪಡೆದಿದರು.
ಅತ್ಯಂತ ಕಡಿಮೆ ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ, ಕೇವಲ 4.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ 9 ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿದರೆ, ಶುಭ್ ಮನ್ ಗಿಲ್ 9 ಎಸೆತಗಳಲ್ಲಿ 20 ರನ್ ಸೂರ್ಯ ಕುಮಾರ್ ಯಾದವ್ 2 ಎಸೆತಗಳಲ್ಲಿ 7 ರನ್ ಗಳಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ
* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ

NAMMMUR EXPRESS SPORTS NEWS
ಇಂಗ್ಲೆಂಡ್: ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಐದುಪಂದ್ಯಗಳ ಟಿ20 ಸರಣಿಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಭಾರತ ಮಹಿಳಾ ತಂಡ ಬರೋಬ್ಬರಿ 97 ರನ್​ಗಳ ದಾಖಲೆಯ ಗೆಲುವು ದಾಖಲಿಸಿದೆ. ಭಾರತ ನೀಡಿದ 210 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ವನಿತಾ ಪಡೆ, ಸ್ಮೃತಿ ಪಡೆಯ ಮಾರಕ ದಾಳಿಗೆ ತತ್ತರಿಸಿ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಏಕಾಂಗಿ ಹೋರಾಟ ನೀಡಿ 66 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಇತ್ತ ಭಾರತದ ಪರ ನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದರೆ, ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ ಶ್ರೀ ಚರಣಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

* ಅತ್ಯಧಿಕ ಟಿ-20 ಸ್ಕೋರ್ ದಾಖಲು
ಇದೇ ವೇಳೆ ನಾಯಕಿ ಮಂಧಾನ ಕೇವಲ 51 ಎಸೆತಗಳಲ್ಲಿ ತಮ್ಮ ಮೊದಲ ಟಿ20 ಅಂತರ್ರಾಷ್ಟ್ರೀಯ ಶತಕ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ಹರ್ಲೀನ್ ಡಿಯೋಲ್ 43 ರನ್ ಗಳಿಸಿ ಔಟಾದರು. ಡಿಯೋಲ್ ವಿಕೆಟ್ ಪತನದ ಬಳಿಕ ಬಂದ ಕೆಳ ಕ್ರಮಾಂಕದ ಬ್ಯಾಟರ್​ಗಳಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಸ್ಮೃತಿ ಅವರ ಸ್ಫೋಟಕ ಶತಕದಿಂದಾಗಿ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್‌ಗಳಿಗೆ 210 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ಎರಡನೇ ಅತ್ಯಧಿಕ ಮತ್ತು ಅತ್ಯಧಿಕ ಟಿ20 ಸ್ಕೋರ್ ದಾಖಲಿಸಿತು. ಇಂಗ್ಲೆಂಡ್ ಪರ, ವೇಗಿ ಲಾರೆನ್ ಬೆಲ್ 27 ರನ್‌ಗಳಿಗೆ 3 ವಿಕೆಟ್ ಪಡೆದರು.

* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದ್ದಾರೆ. ಇದು ಅಂತರ್ರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸ್ಮೃತಿ ಅವರ ಚೊಚ್ಚಲ ಶತಕವಾಗಿದೆ. ಈ ಶತಕದೊಂದಿಗೆ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ.ಇದೀಗ ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿರುವ ಸ್ಮೃತಿ ಮಂಧಾನ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 11 ಶತಕಗಳು ಮತ್ತು ಟೆಸ್ಟ್‌ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಐದನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ರಾಹುಲ್- ಪಂತ್ ಶತಕ, ಇಂಗ್ಲೆಂಡ್​ ಗೆಲುವಿಗೆ 371 ರನ್‌ಗಳ ಟಾರ್ಗೆಟ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ರಾಹುಲ್- ಪಂತ್ ಶತಕ, ಇಂಗ್ಲೆಂಡ್​ ಗೆಲುವಿಗೆ 371 ರನ್‌ಗಳ ಟಾರ್ಗೆಟ್
* ರಾಹುಲ್ ದಾಖಲೆ ಮುರಿದ ರಾಹುಲ್

NAMMMUR EXPRESS SPORTS NEWS
ಇಂಗ್ಲೆಂಡ್: ಲೀಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ 364 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್‌ ಗೆಲುವಿಗೆ 371 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ತಂಡದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಆರಂಭಿಕ ಕೆಎಲ್ ರಾಹುಲ್ ಮತ್ತು ಉಪನಾಯಕ ರಿಷಭ್ ಪಂತ್ ಶತಕ ಬಾರಿಸುವ ಮೂಲಕ ತಂಡವನ್ನು 370 ರನ್‌ಗಳಿಗೆ ಕೊಂಡೊಯ್ದರು. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ, ಪಂತ್ ಮತ್ತು ರಾಹುಲ್ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಪಂತ್ ಮತ್ತು ರಾಹುಲ್ ವಿಕೆಟ್ ಒಪ್ಪಿಸಿದ ನಂತರ ಭಾರತದ ಇನ್ನಿಂಗ್ಸ್ ನಿಧಾನವಾಗಿ ಸಾಗಿದ್ದಲ್ಲದೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

* ರಾಹುಲ್- ಪಂತ್ ಶತಕ, ಬೃಹತ್ ಮೊತ್ತದ ಗುರಿ ನೀಡಿದ ಟೀಂ ಇಂಡಿಯಾ
90 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟವನ್ನು ಮುಗಿಸಿದ್ದ ಟೀಂ ಇಂಡಿಯಾ, ಇಲ್ಲಿಂದ ನಾಲ್ಕನೇ ದಿನದಾಟವನ್ನು ಮುಂದುವರೆಸಿತು. ಆದರೆ ತಂಡವು ನಾಯಕ ಶುಭಮನ್ ಗಿಲ್ ಬೇಗನೆ ವಿಕೆಟ್ ಕಳೆದುಕೊಂಡರು. ಇದರ ನಂತರ, ಪಂತ್ ಮತ್ತು ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ಬೌಲರ್‌ಗಳು ವಿಕೆಟ್‌ಗಾಗಿ ಕಾಯುವಂತೆ ಮಾಡಿದರು. ಟೀ ಬ್ರೇಕ್‌ಗೂ ಮೊದಲು 118 ರನ್‌ ಬಾರಿಸಿದ್ದ ಪಂತ್ ವಿಕೆಟ್ ಒಪ್ಪಿಸಿದರು. ಇದರ ನಂತರ, ರಾಹುಲ್ ಇನ್ನಿಂಗ್ಸ್ ನಿಭಾಯಿಸಿದರಾದರೂ ಅವರು ಕೂಡ 137 ರನ್ ಬಾರಿಸಿ ಔಟಾದರು. ರಾಹುಲ್ ಪೆವಿಲಿಯನ್‌ಗೆ ಹಿಂತಿರುಗಿದ ತಕ್ಷಣ, ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಲು ಪ್ರಾರಂಭಿಸಿದರು.
ದಿನದ ಮೊದಲ ಎರಡು ಸೆಷನ್‌ಗಳಲ್ಲಿ ರಾಹುಲ್ ಮತ್ತು ಪಂತ್ ಜೋಡಿ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಆದರೆ ಟೀ ಬ್ರೇಕ್‌ನ ನಂತರ, ರಾಹುಲ್ ಔಟಾದ ತಕ್ಷಣ ಭಾರತದ ಇನ್ನಿಂಗ್ಸ್ ಕುಸಿಯಿತು. 84 ನೇ ಓವರ್‌ನಲ್ಲಿ ಬ್ರೈಡನ್ ಕಾರ್ಸೆ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಆಗ ಟೀಂ ಇಂಡಿಯಾದ ಸ್ಕೋರ್ 333 ರನ್‌ಗಳಾಗಿತ್ತು. ಇದರ ನಂತರ, ತಂಡದ ಸ್ಕೋರ್‌ಗೆ ಕೇವಲ 2 ರನ್‌ಗಳನ್ನು ಸೇರಿಸುವುದರೊಳಗೆ ಕರುಣ್ ನಾಯರ್ ಕೂಡ ಔಟಾದರು. ನಂತರ ಶಾರ್ದೂಲ್ ಠಾಕೂರ್ ಕೂಡ 349 ರನ್‌ಗಳಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಅದೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ 364 ರನ್‌ಗಳಿಗೆ ಆಲೌಟ್ ಆಯಿತು. ಅಂದರೆ, ಭಾರತ ಕೇವಲ 31 ರನ್‌ಗಳಿಗೆ ತನ್ನ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

* ರಾಹುಲ್ ದಾಖಲೆ ಮುರಿದ ರಾಹುಲ್
ತಾಳ್ಮೆಯುತ ಬ್ಯಾಟಿಂಗ್​ನೊಂದಿಗೆ 202 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್ ವಿಶೇಷ ದಾಖಲೆ ಬರೆದರು. ಅದು ಕೂಡ ಲೆಜೆಂಡ್‌ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಅಂದರೆ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು 2 ಶತಕ ಬಾರಿಸಿದ ಏಷ್ಯನ್ ಬ್ಯಾಟರ್ ಎಂಬ ದಾಖಲೆಯೊಂದು ರಾಹುಲ್ ದ್ರಾವಿಡ್ ಹೆಸರಿನಲ್ಲಿತ್ತು. ಈ ದಾಖಲೆಯನ್ನು ಇದೀಗ ಕೆ.ಎಲ್​ ರಾಹುಲ್ ಮುರಿದಿದ್ದಾರೆ.ಕೆಎಲ್ ರಾಹುಲ್ ಆಂಗ್ಲರ ನಾಡಿನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಈವರೆಗೆ 3 ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಏಷ್ಯನ್ ಓಪನರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 247 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 18 ಫೋರ್​ಗಳೊಂದಿಗೆ 137 ರನ್ ಬಾರಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಲೀಡ್ಸ್ ಮೊದಲ ಟೆಸ್ಟ್ ಇನ್ನಿಂಗ್ಸ್ ಮುನ್ನಡೆಯಲ್ಲಿ ಭಾರತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಲೀಡ್ಸ್ ಮೊದಲ ಟೆಸ್ಟ್ ಇನ್ನಿಂಗ್ಸ್ ಮುನ್ನಡೆಯಲ್ಲಿ ಭಾರತ
* ಬೌಲಿಂಗ್‌ನಲ್ಲಿ ಬೂಮ್ರಾ ಕಮಾಲ್ 5 ವಿಕೆಟ್ , ಹೊಸ ದಾಖಲೆ ಸೃಷ್ಟಿ

NAMMMUR EXPRESS SPORTS NEWS
ಇಂಗ್ಲೆಂಡ್: ಲೀಡ್ಸ್ ಮೈದಾನದಲ್ಲಿ ಆರಂಭವಾಗಿರುವ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದ ಅಂತ್ಯದವರೆಗೆ 3 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿದ್ದ ಇಂಗ್ಲೆಂಡ್, ಮೂರನೇ ದಿನದ ಮೊದಲ ಸೆಷನ್‌ನಲ್ಲಿಯೂ ವೇಗವಾಗಿ ರನ್ ಗಳಿಸಿತು. ದಿನದ ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ 118 ರನ್‌ಗಳನ್ನು ಗಳಿಸಿತು. ಭಾರತ ನಿನ್ನೆಯ ಶತಕವೀರ ಓಲಿ ಪೋಪ್ (106 ರನ್, 137 ಎಸೆತ, 14 ಬೌಂಡರಿ) ಮತ್ತು ಇಂಗ್ಲೆಂಡ್ ನಾಯಕಿ ಬೆನ್ ಸ್ಟೋಕ್ಸ್ (20) ಅವರ ವಿಕೆಟ್‌ಗಳನ್ನು ಬೆಳಗಿನ ಅವಧಿಯಲ್ಲಿ ಕಬಳಿಸಿತು. ಊಟದ ವಿರಾಮದ ವೇಳೆಗೆ, ಇಂಗ್ಲೆಂಡ್ 5 ವಿಕೆಟ್‌ಗಳ ನಷ್ಟಕ್ಕೆ 327 ರನ್ ಗಳಿಸಿತ್ತು.
ಎರಡನೇ ಅವಧಿಯಲ್ಲಿಯೂ ಇಂಗ್ಲೆಂಡ್ ತನ್ನ ಬಲವಾದ ಪ್ರದರ್ಶನವನ್ನು ಮುಂದುವರಿಸಿತು. ಹ್ಯಾರಿ ಬ್ರೂಕ್ ಶತಕವನ್ನು ತಪ್ಪಿಸಿಕೊಂಡಿದ್ದು 99 ರನ್‌ಗಳಿಗೆ ಔಟಾದರು. ಜೇಮೀ ಸ್ಮಿತ್ 40 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 38 ಮತ್ತು ಬ್ರೈಡನ್ ಕಾರ್ಸೆ 22 ರನ್ ಗಳಿಸಿದರು. ಭಾರತವು ಎರಡನೇ ಹೊಸ ಚೆಂಡಿನ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್‌ನ ಕೆಳ ಕ್ರಮಾಂಕವು ಭಾರತೀಯ ಬೌಲರ್‌ಗಳನ್ನು ಬಹಳಷ್ಟು ತೊಂದರೆಗೊಳಿಸಿತು. ಎರಡನೇ ಅವಧಿಯಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಸಹ ಸುಲಭವಾಗಿ ಬೌಂಡರಿಗಳನ್ನು ಗಳಿಸಿದರು ಮತ್ತು 23.4 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 138 ರನ್ ಗಳಿಸಿದರು. ಭಾರತದ ಪರ ಬುಮ್ರಾ 5 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 3 ಮತ್ತು ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.

* ಬೌಲಿಂಗ್‌ನಲ್ಲಿ ಬೂಮ್ರಾ ಕಮಾಲ್ 5 ವಿಕೆಟ್ , ಹೊಸ ದಾಖಲೆ ಸೃಷ್ಟಿ
ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಗೊಂಚಲು ಪಡೆದು ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್‌ನ ಎರಡನೇ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎರಡನೇ ದಿನದ ಆಟದ ಅಂತ್ಯದ ವೇಳೆಗೆ ಬುಮ್ರಾ ಐದು ವಿಕೆಟ್‌ಗಳನ್ನು ಕಬಳಿಸಿ ದೊಡ್ಡ ಸಾಧನೆ ಮಾಡಿದರು.
ಜಸ್ಪ್ರೀತ್ ಬುಮ್ರಾ ಭಾರತೀಯ ತಂಡದ ಅನುಭವಿ ಬೌಲರ್ ಮತ್ತು ವೇಗದ ಬೌಲಿಂಗ್ ದಾಳಿಯ ರೂವಾರಿ. ಬುಮ್ರಾ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಪಾತ್ರ ಮಹತ್ವದ್ದಾಗಿದ್ದು, ಮೊದಲ ಪಂದ್ಯದಲ್ಲಿ ಅವರು ಇದನ್ನು ಸಾಬೀತುಪಡಿಸಿದ್ದಾರೆ. ಬೂಮ್-ಬೂಮ್ ಬುಮ್ರಾ ಅವರ ಮ್ಯಾಜಿಕ್ ಲೀಡ್ಸ್‌ನಲ್ಲಿ ಕಂಡುಬಂದಿದ್ದು ದೊಡ್ಡ ಸಾಧನೆ ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ SENA ದೇಶಗಳಲ್ಲಿ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಷ್ಯನ್ ಬೌಲರ್ ಆಗಿದ್ದಾರೆ. ಈ ವಿಷಯದಲ್ಲಿ ಜಸ್ಪ್ರೀತ್ ಬುಮ್ರಾ ಪಾಕಿಸ್ತಾನದ ಮಾಜಿ ಬೌಲರ್ ವಾಸಿಮ್ ಅಕ್ರಮ್ ಅವರ ದಾಖಲೆಯನ್ನು ಮುರಿದಿದ್ದಾರೆ. ಬುಮ್ರಾ ಈಗ ಸೆನಾ ದೇಶಗಳಲ್ಲಿ 149 ವಿಕೆಟ್‌ಗಳನ್ನು ಪಡೆದಿದ್ದರೆ ಅಕ್ರಮ್ ಈ ದೇಶಗಳಲ್ಲಿ 146 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ 141 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ವೇಗದ ಬೌಲರ್ ಇಶಾಂತ್ ಶರ್ಮಾ 130 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂಗ್ಲೆಂಡ್ ಟೆಸ್ಟ್ ಸರಣಿ ಉತ್ತಮ ಪ್ರದರ್ಶನದತ್ತ ಭಾರತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂಗ್ಲೆಂಡ್ ಟೆಸ್ಟ್ ಸರಣಿ ಉತ್ತಮ ಪ್ರದರ್ಶನದತ್ತ ಭಾರತ
* ಸರಣಿಯಲ್ಲಿ ಮೂವರು ಕನ್ನಡಿಗರು, ಮರುಕಳಿಸಿದ ಇತಿಹಾಸ

NAMMMUR EXPRESS SPORTS NEWS
ಲೀಡ್ಸ್: ಲೀಡ್ಸ್‌ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಹೆಡಿಂಗ್ಲೆಯಲ್ಲಿ ಆರಂಭಗೊಂಡಿದೆ.
ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಭಾರತ ತಂಡ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ. ದಿನದಾಟದಂತ್ಯಕ್ಕೆ ಟೀಂ ಇಂಡಿಯಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 359 ರನ್ ಕಲೆಹಾಕಿದೆ. ಶತಕ ಸಿಡಿಸಿರುವ ನಾಯಕ ಶುಭ್​ಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ ಅಜೇಯರಾಗಿ ಉಳಿದಿದ್ದು, ಎರಡನೇ ದಿನಕ್ಕೆ ತಮ್ಮ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಪರ 2 ಶತಕಗಳು ದಾಖಲಾಗಿದ್ದು, ನಾಯಕ ಗಿಲ್ ಅಜೇಯ ಶತಕ ಸಿಡಿಸಿದರೆ, ಆರಂಬಿಕ ಯಶಸ್ವಿ ಜೈಸ್ವಾಲ್ ಕೂಡ 101 ರನ್​ಗಳ ಇನ್ನಿಂಗ್ಸ್ ಆಡಿದರು. ಕನ್ನಡಿಗ ಕೆಎಲ್ ರಾಹುಲ್ ಕೂಡ 42 ರನ್​ಗಳ ಅಮೂಲ್ಯ ಕಾಣಿಕೆ ನೀಡಿದರು.

* ಯಂಗ್ ಇಂಡಿಯಾ ಆಟಕ್ಕೆ ಹೈರಾಣಾದ ಆಂಗ್ಲರು
ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್​ಮನ್ ಗಿಲ್ ಮೂರನೇ ವಿಕೆಟ್​ಗೆ ಶತಕದ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 200 ರನ್​ಗಳ ಗಡಿ ದಾಟಿಸಿದರು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದ 5ನೇ ಶತಕವನ್ನು ಪೂರ್ಣಗೊಳಿಸಿದರು. ಜೈಸ್ವಾಲ್ ತಮ್ಮ ಇನ್ನಿಂಗ್ಸ್​ನಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ನಾಯಕನ ಜವಾಬ್ದಾರಿಯುವ ಆಟವನ್ನು ಮುಂದುವರೆಸಿದ ಗಿಲ್, ಉಪನಾಯಕ ರಿಷಭ್ ಪಂತ್ ಜೊತೆಗೂಡಿ ಆಂಗ್ಲ ಬೌಲರ್​ಗಳನ್ನು ಹೈರಾಣಾಗಿಸಿದರು.
ಪಂತ್ – ಗಿಲ್ ಇವರಿಬ್ಬರು ಮೊದಲ ದಿನದಾಟ ಮುಗಿಯುವ ವೇಳೆಗೆ ಅಜೇಯರಾಗಿ ಉಳಿದಿದಲ್ಲದೆ ತಂಡವನ್ನು 359 ರನ್​ಗಳಿಗೆ ಕೊಂಡೊಯ್ದಿದ್ದಾರೆ. ಈ ಸಮಯದಲ್ಲಿ ನಾಯಕ ಗಿಲ್, 140 ಎಸೆತಗಳಲ್ಲಿ 14 ಬೌಂಡರಿ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕವನ್ನು ಪೂರೈಸಿದರೆ, ಇತ್ತ ಉಪನಾಯಕ ರಿಷಭ್ ಪಂತ್ ಕೂಡ ಅಜೇಯ ಅರ್ಧಶತಕ ದಾಖಲಿಸಿದರು. ಈ ಮೂಲಕ ಪಂತ್ ಟೆಸ್ಟ್‌ನಲ್ಲಿ 3000 ರನ್​ಗಳನ್ನು ಸಹ ಪೂರ್ಣಗೊಳಿಸಿದರು. ಈ ಜೋಡಿ 4ನೇ ವಿಕೆಟ್​ಗೆ ಅಜೇಯ 138 ರನ್​ಗಳ ಜೊತೆಯಾಟವನ್ನಾಡಿದ್ದು, ನಾಯಕ ಗಿಲ್ 127 ರನ್ ಹಾಗೂ ಉಪನಾಯಕ ರಿಷಬ್ ಪಂತ್ 65 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

* ಸರಣಿಯಲ್ಲಿ ಮೂವರು ಕನ್ನಡಿಗರು ಮರುಕಳಿಸಿದ 23 ವರ್ಷದ ಇತಿಹಾಸ
ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಕಣಕ್ಕಿಳಿದಿದ್ದಾರೆ. ಇದರೊಂದಿಗೆ 23 ವರ್ಷಗಳ ಹಳೆಯ ಇತಿಹಾಸವೊಂದು ಪುನರಾವರ್ತನೆಯಾದಂತಾಗಿದೆ.
ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಬರೋಬ್ಬರಿ 23 ವರ್ಷಗಳ ಬಳಿಕ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಲೀಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದು, ಈ ಮೂಲಕ 2 ದಶಕಗಳ ಬಳಿಕ ಕರುನಾಡ ತ್ರಿಮೂರ್ತಿಗಳು ಟೀಮ್ ಇಂಡಿಯಾ ಪರ ಜೊತೆಯಾಗಿ ಕಣಕ್ಕಿಳಿದಂತಾಗಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದದ್ದು 2002ರಲ್ಲಿ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಜೊತೆಯಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕರ್ನಾಟಕದ ಮೂವರು ಆಟಗಾರರು ಭಾರತದ ಪರ ಒಟ್ಟಿಗೆ ಟೆಸ್ಟ್ ಪಂದ್ಯವಾಡಿರಲಿಲ್ಲ.
ಇದೀಗ ಬರೋಬ್ಬರಿ 23 ವರ್ಷಗಳ ಬಳಿಕ ಕರ್ನಾಟಕದ ಮೂವರು ಆಟಗಾರರು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಟೆಸ್ಟ್ ತಂಡದಲ್ಲಿ ಕರುನಾಡ ಕಲಿಗಳು ಮತ್ತೆ ಛಾಪು ಮೂಡಿಸಲು ಹೊರಟಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂದಿನಿಂದ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ: ಲೀಡ್ಸ್ ಟೆಸ್ಟ್ ಗೆಲ್ಲುತ್ತಾ ಭಾರತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂದಿನಿಂದ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ: ಲೀಡ್ಸ್ ಟೆಸ್ಟ್ ಗೆಲ್ಲುತ್ತಾ ಭಾರತ
* ತಂಡದಲ್ಲಿ ದಿಗ್ಗಜ ಆಟಗಾರರಿಲ್ಲ,ಅನುಭವಿ ಬೌಲರ್‌ಗಳಿಲ್ಲ

NAMMMUR EXPRESS SPORTS NEWS
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಅತಿ ಮುಖ್ಯವಾಗಿದೆ. ಏಕೆಂದರೆ ಟೀಂ ಇಂಡಿಯಾ ಕಳೆದ ಬಾರಿ 2021 ರ ಪ್ರವಾಸದಲ್ಲಿ ಇದೇ ಮೈದಾನದಲ್ಲಿ ಪಂದ್ಯವನ್ನಾಡಿ ಆ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ಅನುಭವಿಸಿತ್ತು. ಹೀಗಾಗಿ ಕಳೆದ ಬಾರಿಯ ಹೀನಾಯ ಸೋಲನ್ನು ಮರೆತು ಗಿಲ್ ಪಡೆ ಕಣಕ್ಕಿಳಿಬೇಕಿದೆ. ಆದಾಗ್ಯೂ ಯುವ ಆಟಗಾರರೇ ತುಂಬಿರುವ ಟೀಂ ಇಂಡಿಯಾ ಲೀಡ್ಸ್ ಟೆಸ್ಟ್‌ನಲ್ಲಿ ಯಶಸ್ವಿಯಾಗುತ್ತಾ ಎಂಬುದೇ ಪ್ರಶ್ನೆ. ಏಕೆಂದರೆ ಲೀಡ್ಸ್‌ನಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ಆಡಿದಾಗ ತಂಡದಲ್ಲಿದ್ದ 6 ಲೆಜೆಂಡರಿ ಆಟಗಾರರು ಈಗ ತಂಡದಲಿಲ್ಲ.

* ದಿಗ್ಗಜರೇ ತಂಡದಲಿಲ್ಲ,ಅನುಭವಿ ವೇಗಗಳು ಇಲ್ಲ
ಕಳೆದ ಬಾರಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಬ್ಯಾಟ್ಸ್‌ಮನ್‌ಗಳು ಲೀಡ್ಸ್ ಟೆಸ್ಟ್‌ನಲ್ಲಿ ಆಡಿದ್ದರು. ಆದರೆ ಈ ಬಾರಿ ಈ ನಾಲ್ವರು ಶ್ರೇಷ್ಠ ಆಟಗಾರರು ತಂಡದಲ್ಲಿಲ್ಲ. ಪೂಜಾರ, ರಹಾನೆಗೆ ಬಹಳ ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇತ್ತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮೊದಲೇ ಟೆಸ್ಟ್​ಗೆ ನಿವೃತ್ತ ಘೋಷಿಸಿದರು. ಕೊನೆಯ ಬಾರಿಗೆ ರೋಹಿತ್ ಮತ್ತು ವಿರಾಟ್ ಲೀಡ್ಸ್ ಟೆಸ್ಟ್‌ನಲ್ಲಿ ಆಡಿದಾಗ ಇಬ್ಬರ ಪ್ರದರ್ಶನವೇನು ಹೇಳಿಕೊಳ್ಳುವಂತಿರಲಿಲ್ಲ. ರೋಹಿತ್ ಶರ್ಮಾ 105 ಎಸೆತಗಳನ್ನು ಎದುರಿಸಿ ಮೊದಲ ಇನ್ನಿಂಗ್ಸ್​ನಲ್ಲಿ 19 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 59 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸಿ ಔಟಾಗಿದ್ದರು.
ಇನ್ನು ಬೌಲರ್​ಗಳ ಬಗ್ಗೆ ನೋಡುವುದಾದರೆ ಕಳೆದ ಲೀಡ್ಸ್ ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಅವರಂತಹ ಇಬ್ಬರು ಅತ್ಯುತ್ತಮ ಬೌಲರ್‌ಗಳು ತಂಡದಲ್ಲಿ ಆಡಿದ್ದರು. ಈಗ ಇಬ್ಬರೂ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಇಶಾಂತ್ ಶರ್ಮಾ ಬಹಳ ಸಮಯದಿಂದ ಟೀಂ ಇಂಡಿಯಾದಿಂದ ಹೊರಗಿದ್ದರೆ, ಮೊಹಮ್ಮದ್ ಶಮಿ ಕಳಪೆ ಫಿಟ್‌ನೆಸ್‌ನಿಂದ ತಂಡದಿಂದ ಹೊರಗಿದ್ದಾರೆ.
ಇವೆಲ್ಲದರ ಮಧ್ಯೆ ತಂಡದಲ್ಲಿ ಈ ಅನುಭವಿ ಆಟಗಾರರ ಅಲಭ್ಯತೆಯ ಮಧ್ಯೆ ಭಾರತ ತಂಡ ಲೀಡ್ಸ್‌ನಲ್ಲಿ ಹೇಗೆ ಆಡಲಿದೆ ಎಂಬ ಪ್ರಶ್ನೆ ಎದುರಾಗಿದೆ.ನಾಯಕ ಶುಭ್​ಮನ್ ಗಿಲ್ ಈಗ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ. ಮತ್ತೊಂದೆಡೆ, ಕೆಎಲ್ ರಾಹುಲ್ ಮತ್ತು ಜೈಸ್ವಾಲ್ ಇಬ್ಬರೂ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬುಮ್ರಾ, ಸಿರಾಜ್ ಹೊರತುಪಡಿಸಿ, ಬೌಲಿಂಗ್ ಜವಾಬ್ದಾರಿ ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಅವರ ಕೈಯಲ್ಲಿರುತ್ತದೆ. ಒಟ್ಟಾರೆಯಾಗಿ, ತಂಡವೇನೋ ಬಲಿಷ್ಠವಾಗಿದೆಯಾದರೂ ಅನುಭವದ ಕೊರತೆಯಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಾಳೆಯಿಂದ ಆರಂಭವಾಗಲಿರೋ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ನಾಳೆಯಿಂದ ಆರಂಭವಾಗಲಿರೋ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ
* ವಿರಾಟ್ ಕೊಹ್ಲಿ ಮನೆಯಲ್ಲಿ 2 ಗಂಟೆಗಳ ಕಾಲ ಮೀಟಿಂಗ್

NAMMMUR EXPRESS SPORTS NEWS
ಲಂಡನ್: ಜೂನ್ 20 ರಿಂದ ಲೀಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ರೋಮಾಂಚಕಾರಿ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಕಠಿಣ ಪ್ರವಾಸದಲ್ಲಿ ಯುವ ಆಟಗಾರ ಶುಭ್​ಮನ್ ಗಿಲ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಶುಭ್​ಮನ್ ಗಿಲ್ ಅವರನ್ನು ಈ ಸ್ವರೂಪದಲ್ಲಿ ಭಾರತದ ನಾಯಕರನ್ನಾಗಿ ಮಾಡಲಾಗಿದೆ. ಅದೇ ಸಮಯದಲ್ಲಿ, ರಿಷಭ್ ಪಂತ್ ಅವರಿಗೆ ಉಪನಾಯಕನ ಸ್ಥಾನ ಸಿಕ್ಕಿದೆ. ರೋಹಿತ್ ಶರ್ಮಾ ನಿವೃತ್ತಿಯ ನಂತರ, ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು.
ಇಂಗ್ಲೆಂಡ್‌ನ ಪ್ರಮುಖ ಸರಣಿಗೆ ಮೊದಲು ಇಬ್ಬರೂ ಅನುಭವಿ ಆಟಗಾರರ ನಿವೃತ್ತಿ ಭಾರತಕ್ಕೆ ಆಘಾತವನ್ನುಂಟು ಮಾಡಿತು. ಸದ್ಯ ಭಾರತದ ಯುವ ತಂಡ ಇಂಗ್ಲೆಂಡ್ ತಲುಪಿದ್ದು, ಇಲ್ಲಿ ಕಠಿಣ ಅಭ್ಯಾಸ ಮಾಡುತ್ತಿದೆ. ಅವರು ಇಂಟ್ರಾ-ಸ್ಕ್ವಾಡ್ ಪಂದ್ಯಗಳನ್ನು ಸಹ ಆಡಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದಾರೆ. ಐಪಿಎಲ್ ಆಡಿದ ನಂತರ ಕೊಹ್ಲಿ ಲಂಡನ್‌ಗೆ ತೆರಳಿದ್ದಾರೆ.

* ವಿರಾಟ್ ಕೊಹ್ಲಿ ಮನೆಯಲ್ಲಿ ಗಿಲ್,ಪಂತ್ ಜೊತೆ 2 ಗಂಟೆಗಳ ಕಾಲ ಮೀಟಿಂಗ್
ನಿವೃತ್ತಿಯ ಹೊರತಾಗಿಯೂ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಯ ಮೇಲೆ ನಿಗಾ ಇಟ್ಟಿದ್ದಾರೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಕೆಲವು ದಿನಗಳ ಮೊದಲು, ಹೊಸ ಟೆಸ್ಟ್ ನಾಯಕ ಶುಭ್​ಮನ್ ಗಿಲ್, ಉಪನಾಯಕ ರಿಷಭ್ ಪಂತ್ ಮತ್ತು ಇತರ ಕೆಲವು ಆಟಗಾರರನ್ನು ಲಂಡನ್‌ನಲ್ಲಿರುವ ತಮ್ಮ ಮನೆಗೆ ಆಹ್ವಾನಿಸಿದ್ದಾರೆ ಎಂದು ಹೇಳಿಕೊಳ್ಳುವ ರೆವ್‌ಸ್ಪೋರ್ಟ್ಜ್‌ನ ವಿಡಿಯೋ ವರದಿಯಿಂದ ಇದು ಸ್ಪಷ್ಟವಾಗಿದೆ. ಸೋಮವಾರ ಕೆಂಟ್‌ನಲ್ಲಿ ನಡೆದ ಇಂಟ್ರಾ-ಸ್ಕ್ವಾಡ್ ಪಂದ್ಯ ಮುಗಿದ ನಂತರ ಭಾರತ ತಂಡಕ್ಕೆ ಒಂದು ದಿನದ ರಜೆ ಇತ್ತು. ಈ ಸಂದರ್ಭ ಆಟಗಾರರು ಕೊಹ್ಲಿಯನ್ನು ಭೇಟಿ ಮಾಡಲು ಲಭ್ಯವಿದ್ದರು.
ಈ ಸಭೆ ಯಾವುದರ ಬಗ್ಗೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿಲ್ಲ. ಮುಂಬರುವ ಸರಣಿಯ ಬಗ್ಗೆ ಅಥವಾ ಗಿಲ್ ಮತ್ತು ಪಂತ್ ಯುವ ತಂಡವನ್ನು ಹೇಗೆ ಮುನ್ನಡೆಸಬಹುದು ಎಂಬುದರ ಬಗ್ಗೆ ಇದು ನಡೆದಿರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಚರ್ಚೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ತಿಳಿದುಬಂದಿದೆ. ಭಾರತ ತಂಡವು ಇಂದು ಲೀಡ್ಸ್ ತಲುಪುವ ನಿರೀಕ್ಷೆಯಿದೆ, ಅಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡವನ್ನು ಭೇಟಿಯಾಗಲಿದ್ದಾರೆ.

* ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ
ಭಾರತ-ಇಂಗ್ಲೆಂಡ್ ಸರಣಿ ಆರಂಭಕ್ಕೆ 2 ದಿನಗಳ ಮೊದಲು, ಮತ್ತೊಬ್ಬ ಆಟಗಾರ ಇದ್ದಕ್ಕಿದ್ದಂತೆ ಟೀಮ್ ಇಂಡಿಯಾವನ್ನು ಪ್ರವೇಶಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೇಗಿ ಹರ್ಷಿತ್ ರಾಣಾ ಭಾರತೀಯ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ. ಜೂನ್ 20 ರಿಂದ ಲೀಡ್ಸ್‌ನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ರಾಣಾ ಅವರನ್ನು 18 ಸದಸ್ಯರ ತಂಡದಲ್ಲಿ ಈ ಮೊದಲು ಆಯ್ಕೆ ಮಾಡಿರಲಿಲ್ಲ. ಆದರೆ ಮಂಗಳವಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಮೊದಲ ಟೆಸ್ಟ್ ನಂತರ ಅವರು ತಂಡದಲ್ಲಿಯೇ ಇರುತ್ತಾರೋ ಇಲ್ಲವೋ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. 23 ವರ್ಷದ ದೆಹಲಿ ವೇಗದ ಬೌಲರ್ ಅವರನ್ನು ಭಾರತ ಎ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನತ್ತ ಹರಿಣಗಳು: ಕೇವಲ 69 ರನ್ ಬಾಕಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನತ್ತ ಹರಿಣಗಳು: ಕೇವಲ 69 ರನ್ ಬಾಕಿ
* ತ್ಯಾಗ,ಹೋರಾಟವಿದ್ದರೆ ಮಾತ್ರ ಇಂಗ್ಲೆಂಡ್ ಸರಣಿ ಗೆಲ್ಲಬಹುದು: ಗಂಭೀರ್

NAMMMUR EXPRESS SPORTS NEWS
ಲಾರ್ಡ್ಸ್: ಆರಂಭಿಕ ಬ್ಯಾಟರ್‌ ಏಡೆನ್‌ ಮಾರ್ಕಂ ಮತ್ತು ನಾಯಕ ಟೆಂಬಾ ಬವುಮಾ ಅವರ ದಿಟ್ಟ ಬ್ಯಾಟಿಂಗ್‌ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟಿದೆ.
ಪಂದ್ಯದ ನಾಲ್ಕನೇ ದಿನವಾದ ಶನಿವಾರ ಬ್ಯಾಟಿಂಗ್‌ ಸ್ಥಿರತೆ ಕಾಯ್ದುಕೊಂಡಲ್ಲಿ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಎತ್ತಿಹಿಡಿಯುವ ಅದ್ಭುತ ಅವಕಾಶ ಹರಿಣಗಳ ಪಾಲಿಗೆ ಒಲಿಯಲಿದೆ. 1998ರಲ್ಲಿ ಏಕದಿನ ಚಾಂಪಿಯನ್ಸ್‌ ಟ್ರೋಫಿ ಗೆದ್ದಿರುವುದನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಲವು ವರ್ಷಗಳಿಂದಲೂ ಚೋಕರ್ಸ್‌ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ, ಈಗ ಅದನ್ನು ಕಳಚುವ ಅದ್ಭುತ ಅವಕಾಶವನ್ನು ಹೊಂದಿದೆ.

* ಇನ್ನು ಬೇಕಿರುವುದು ಕೇವಲ 69 ರನ್
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶುಕ್ರವಾರ 282 ರನ್‌ಗಳ ಕಠಿಣ ಗುರಿ ಪಡೆದ ದಕ್ಷಿಣ ಆಫ್ರಿಕಾ, ದಿನದಾಟದ ಅಂತ್ಯಕ್ಕೆ 56 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿದೆ. ಐತಿಹಾಸಿಕ ಗೆಲುವಿಗೆ ಉಳಿದ 8 ವಿಕೆಟ್‌ಗಳಲ್ಲಿ 69 ರನ್‌ ಗಳಿಸಬೇಕಿದೆ. ಮಾರ್ಕಂ(102; 159 ಎಸೆತ, 11 ಫೋರ್‌) ಮತ್ತು ಬವುಮಾ (65*; 121 ಎಸೆತ, 5 ಫೋರ್‌) ಕ್ರೀಸ್‌ ಕಾಯ್ದುಕೊಂಡಿದ್ದಾರೆ.
ವೇಗಿಗಳಿಗೆ ಹೆಚ್ಚು ನೆರವಾಗುತ್ತಿರುವ ಪಿಚ್‌ನಲ್ಲಿ ರನ್‌ ಗಳಿಸಲು ಬ್ಯಾಟರ್‌ಗಳು ಹರಸಾಹಸ ಪಡುತ್ತಿದ್ದರೂ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಏಡೆನ್‌ ಮಾಕ್ರಂ ಮತ್ತು ಕಾಲಿನ ಗಾಯದ ನಡುವೆಯೂ ತಂಡಕ್ಕೆ ಆಸರೆಯಾದ ಟೆಂಬಾ ಬವುಮಾ, ತಂಡದ ಹೋರಾಟಕ್ಕೆ ಬಲ ತುಂಬಿದರು. ಮಿಚೆಲ್‌ ಸ್ಟಾರ್ಕ್ ಸೇರಿ ಆಸೀಸ್‌ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ 3ನೇ ವಿಕೆಟ್‌ಗೆ 143* ರನ್‌ಗಳ ಅತ್ಯುತ್ತಮ ಜತೆಯಾಟದ ನಿರ್ವಹಿಸಿದರು. 2 ರನ್‌ ಗಳಿಸಿದ್ದ ವೇಳೆ ಸ್ಮಿತ್‌ ಅವರಿಂದ ಜೀವದಾನ ಪಡೆದ ಬವುಮಾ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು.

* ಬ್ಯಾಟಿಂಗ್‌ನಲ್ಲೂ ಆಸರೆಯಾದ ಸ್ಟಾರ್ಕ್
8 ವಿಕೆಟ್‌ಗೆ 114 ರನ್‌ಗಳಿಂದ 2ನೇ ಇನಿಂಗ್ಸ್‌ ಮುಂದುವರಿಸಿದ ಆಸ್ಪ್ರೇಲಿಯಾ, ಮಿಚೆಲ್‌ ಸ್ಟಾರ್ಕ್(58*; 136 ಎಸೆತ, 5 ಫೋರ್‌) ಅವರ ಜವಾಬ್ದಾರಿಯುತ ಅರ್ಧ ಶತಕದ ಬಲದಿಂದ ದಕ್ಷಿಣ ಆಫ್ರಿಕಾಕ್ಕೆ ಕಠಿಣ ಸವಾಲು ಒಡ್ಡಿತು. 2ನೇ ದಿನದಾಟದಂತ್ಯಕ್ಕೆ 16 ರನ್‌ ಗಳಿಸಿದ್ದ ಸ್ಟಾರ್ಕ್, 3ನೇ ದಿನ ವೇಗಿಗಳಾದ ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರ ಮಾರಕ ದಾಳಿಯನ್ನು ಪ್ರಬಲವಾಗಿ ಎದುರಿಸಿದರು. 10ನೇ ವಿಕೆಟ್‌ಗೆ ಜೋಶ್‌ ಹೇಜಲ್‌ವುಡ್‌ ಜತೆ 59 ರನ್‌ಗಳ ಮಹತ್ವದ ಜೊತೆಯಾಟ ನಿರ್ವಹಿಸಿದ ಸ್ಟಾರ್ಕ್, ಆಸೀಸ್‌ಗೆ ಗೆಲುವಿನ ಭರವಸೆ ಮೂಡಿಸಿದರು.

* ತ್ಯಾಗ,ಹೋರಾಟವಿದ್ದರೆ ಮಾತ್ರ ಇಂಗ್ಲೆಂಡ್ ಸರಣಿ ಗೆಲ್ಲಬಹುದು: ಗಂಭೀರ್
ಲಂಡನ್: ನಾವು ತ್ಯಾಗ ಮಾಡಿದರೆ, ಹೋರಾಟ ಬಿಡದಿದ್ದರೆ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸ್ಮರಣೀಯಗೊಳಿಸಬಹುದು ಎಂದು ಭಾರತದ ಕೋಚ್ ಗೌತಮ್ ಗಂಭೀರ್, ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಗುರುವಾರ ಅಭ್ಯಾಸದ ವೇಳೆ ಆಟಗಾರರ ಜೊತೆ ಮಾತನಾಡಿದ ಗಂಭೀರ್, ‘ಈ ಸರಣಿಯನ್ನು ನಾವು 2 ವಿಧದಲ್ಲಿ ನೋಡಬಹುದು. ಅತ್ಯಂತ ಅನುಭವಿಗಳಾದ ಮೂವರು ಆಟಗಾರರಿಲ್ಲದೆ ನಾವು ಈ ಸರಣಿ ಆಡುತ್ತಿದ್ದೇವೆ ಮತ್ತು ದೇಶಕ್ಕಾಗಿ ಏನಾದರೂ ಸಾಧಿಸಲು ನಮಗೆ ಸಿಕ್ಕ ಉತ್ತಮ ಅವಕಾಶ ಇದು. ಈ ತಂಡವನ್ನು ನೋಡುವಾಗ ಬದ್ಧತೆ, ಉದ್ವೇಗ ಕಂಡುಬರುತ್ತದೆ. ನಾವು ಏನಾದರೂ ತ್ಯಾಗ ಮಾಡಲು ಸಿದ್ದವಿದ್ದರೆ, ನಮ್ಮ ಆರಾಮದಾಯಕ ಬದುಕಿನಿಂದ ಆಚೆ ಬಂದರೆ, ಹೋರಾಡಿದರೆ ಈ ಸರಣಿ ಸ್ಮರಣೀಯಗೊಳಿಸಬಹುದು. ಪ್ರತಿ ದಿನ ಅಲ್ಲ, ಪ್ರತಿ ಅವಧಿ, ಪ್ರತಿ ಓವರ್, ಪ್ರತಿ ಎಸೆತದಲ್ಲೂ ನಾವು ಹೋರಾಡಬೇಕು ಎಂದು ಗಂಭೀರ್ ಹೇಳಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025
* ಬೆಂಗಳೂರು ಕಾಲ್ತುಳಿತ ಪ್ರಕರಣ, ಆರ್‌ಸಿಬಿ ಸಿಬ್ಬಂದಿಗಳಿಗೆ ಜಾಮೀನು

NAMMMUR EXPRESS SPORTS NEWS
* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025
ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 212 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡ ಹೀನಾಯ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಮಾರಕ ದಾಳಿಗೆ ಬೆದರಿದ ಆಫ್ರಿಕಾ ತಂಡ ಕೇವಲ 138 ರನ್‌ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಕಾಂಗರೂ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 74 ರನ್‌ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಪರ ಕಮ್ಮಿನ್ಸ್ ಆರು ವಿಕೆಟ್‌ಗಳನ್ನು ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಎರಡು ಮತ್ತು ಜೋಶ್ ಹೇಜಲ್‌ವುಡ್ ಒಂದು ವಿಕೆಟ್ ಪಡೆದರು. ಇತ್ತ ಆಫ್ರಿಕಾ ಪರ ನಾಲ್ವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.
ದಕ್ಷಿಣ ಆಫ್ರಿಕಾ ಪರ ಡೇವಿಡ್ ಬೆಡಿಂಗ್‌ಹ್ಯಾಮ್ ಅತ್ಯಧಿಕ 45 ರನ್ ಗಳಿಸಿದರೆ, ನಾಯಕ ಟೆಂಬಾ ಬವುಮಾ 36 ರನ್ ಗಳಿಸಿ ಔಟಾದರು. ರಯಾನ್ ರಿಕಲ್ಟನ್ 16 ಮತ್ತು ಕೈಲ್ ವೆರ್ರೆಯ್ನ್ 13 ರನ್‌ಗಳ ಕೊಡುಗೆ ನೀಡಿದರು. ಮೊದಲ ದಿನದಾಟದಂತ್ಯಕ್ಕೆ 43 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾದ ಇನ್ನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ನಾಯಕ ಬವುಮಾ ಮತ್ತು ಬೆಡಿಂಗ್ಹ್ಯಾಮ್ ಐದನೇ ವಿಕೆಟ್‌ಗೆ 64 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ಈ ಪಾಲುದಾರಿಕೆ ಮುರಿದ ತಕ್ಷಣ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಕುಸಿಯಿತು. ದಕ್ಷಿಣ ಆಫ್ರಿಕಾ ಪರ, ವಿಯಾನ್ ಮುಲ್ಡರ್ ಆರು, ಟ್ರಿಸ್ಟಾನ್ ಸ್ಟಬ್ಸ್ ಎರಡು, ಕೇಶವ್ ಮಹಾರಾಜ್ ಏಳು ಮತ್ತು ಕಗಿಸೊ ರಬಾಡ ಒಂದು ರನ್ ಗಳಿಸಿದರೆ ಐಡೆನ್ ಮಾರ್ಕ್ರಾಮ್ ಮತ್ತು ಮಾರ್ಕೊ ಯಾನ್ಸೆನ್​ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.

* ಕಮ್ಮಿನ್ಸ್ ದಾಖಲೆ
ಇತ್ತ ಆಸ್ಟ್ರೇಲಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ನಾಯಕ ಪ್ಯಾಟ್ ಕಮ್ಮಿನ್ಸ್ 6 ವಿಕೆಟ್‌ ಉರುಳಿಸಿದರು. ಈ ಮೂಲಕ ಕಮ್ಮಿನ್ಸ್ ಈ ಆವೃತ್ತಿಯಲ್ಲಿ ಆರನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಅಷ್ಟೇ ಅಲ್ಲ, ಕಮ್ಮಿನ್ಸ್ ಪ್ರಸ್ತುತ ಡಬ್ಲ್ಯೂಟಿಸಿ ಸೈಕಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ. ಅವರು 2023-25ರ ಆವೃತ್ತಿಯಲ್ಲಿ ಇದುವರೆಗೆ 79 ವಿಕೆಟ್‌ಗಳನ್ನು ಕಬಳಿಸಿದ್ದು ಈ ಮೂಲಕ ಭಾರತದ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ.

* ಬೆಂಗಳೂರು ಕಾಲ್ತುಳಿತ ಪ್ರಕರಣ, ಆರ್‌ಸಿಬಿ ಸಿಬ್ಬಂದಿಗಳಿಗೆ ಜಾಮೀನು
ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್‌ ಕುಮಾರ್, ಶಮಂತ್ ಮಾವಿನಕೆರೆಗೆ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಆರೋಪಿಗಳು ಪಾಸ್ ಪೋರ್ಟ್ ವಶಕ್ಕೆ ನೀಡುವಂತೆ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಷರತ್ತು ಬದ್ಧ, ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ ಪೊಲೀಸರ ಕ್ರಮ ಕಾನೂನು ಬಾಹಿರವಾಗಿದ್ದು, ಕೂಡಲೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನಾಲ್ವರು ಆರ್​ಸಿಬಿ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಆರ್​ಸಿಬಿ ಮಾರ್ಕೆಟಿಂಗ್​ ಹೆಡ್ ನಿಖಿಲ್​ ಸೋಸಲೆ, ಡಿಎನ್​ಎ ಎಂಟರ್​ಟೈನ್​ಮೆಂಟ್​ ನೆಟ್​ವರ್ಕ್​​ನ ನಿರ್ದೇಶಕ ಸುನೀಲ್​ ಮ್ಯಾಥ್ಯೂ, ಡಿಎನ್​ಎ ಮ್ಯಾನೇಜರ್​ ಕಿರಣ್​ ಕುಮಾರ್ ಮತ್ತು ಸಮಂತ್​ ಮಾವಿನಕೆರೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್​.ಆರ್​ ಕೃಷ್ಣ ಕುಮಾರ್ ಅವರ ಪೀಠ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.