Categories
ಹೊಸನಗರ

ಮಾಸ್ತಿಕಟ್ಟೆಯಲ್ಲಿ ಲಯನ್ಸ್ ರಜತ ಸಂಭ್ರಮ!

ಮಾಸ್ತಿಕಟ್ಟೆಯಲ್ಲಿ ಲಯನ್ಸ್ ರಜತ ಸಂಭ್ರಮ!
– ವರಾಹಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ
– ಮಲೆನಾಡಿನ ಸಾಧಕರಿಗೆ ಸನ್ಮಾನ ಸಮಾರಂಭ
– ನಮ್ಮೂರ್ ಎಕ್ಸ್ ಪ್ರೆಸ್, ಮಲೆನಾಡು ವಾಯ್ಸ್ ಪತ್ರಿಕೆಗಳಿಗೆ ಪ್ರಶಸ್ತಿ ಗರಿ

NAMMUR EXPRESS NEWS
ಹೊಸನಗರ: ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯು 25ನೇ ವರ್ಷದ ಸಂಭ್ರಮದಲ್ಲಿ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವರಾಹಿ ಮಾಸ್ತಿಕಟ್ಟೆ ಸ್ನೇಹ ಸಂಬಂಧ ಕಾರ್ಯಕ್ರಮವನ್ನು ಫೆಬ್ರವರಿ 11ರ ಭಾನುವಾರ ಸಂಜೆ 4 ಗಂಟೆಗೆ ಮಾಸ್ತಿಕಟ್ಟೆಯ ಕೆಪಿಸಿ ಕಾಲೋನಿಯ ವರಾಹಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದೆ. ಈಗಾಗಲೇ ಅಂತಿಮ ಸಿದ್ಧತೆ ಮುಗಿದಿದೆ. ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಯರಾಮ್ ಶೆಟ್ಟಿ ಕುಂದಾಪುರ ದಂಪತಿ, ಬಿದನೂರು ಸಹೋದರಿಯರಾದ ದಾಕ್ಷಾಯಿಣಿ, ಜ್ಯೋತಿ, ನಿವೃತ್ತ ಶಿಕ್ಷಕರಾದ ಮಂಜುಳಮ್ಮ ಆನಂದ ರೆಡ್ಡಿ, ನಮ್ಮೂರ್ ಎಕ್ಸ್ಪ್ರೆಸ್ ಮುಖ್ಯಸ್ಥರಾದ ರಾಘವೇಂದ್ರ ತೀರ್ಥಹಳ್ಳಿ, ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ, ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್ ಇವರಿಗೆ ಸನ್ಮಾನ ಸಮಾರಂಭ ನಡೆಯಲಿದೆ.

ಕಾರ್ಯಕ್ರಮಗಳ ವೈಶಿಷ್ಟ್ಯತೆ :

– ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ
– ಪೂಜ್ಯ ಸ್ವಾಮೀಜಿಗಳು ಹಾಗೂ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಉಪನ್ಯಾಸ ಹಾಗೂ ವಿಶೇಷ ಭಾಷಣಕಾರರನ್ನು ಒಳಗೊಂಡ ಅತ್ಯುತ್ತಮ ವೇದಿಕೆ ಕಾರ್ಯಕ್ರಮ
– ಮಲೆನಾಡಿನ ವೈಭವ ಸೂಚಿಸುವ ವಿಶೇಷ ಹಸಿರು ರಂಗಸಜ್ಜಿಕೆ
– ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಗೌರವ ಸಮರ್ಪಣೆ, ಲಯನ್ಸ್ ಸೇವಾ ಯೋಜನೆ ಅನುಷ್ಠಾನ
– ಮಾಸ್ತಿಕಟ್ಟೆಯ ಮೂಲ ನಿವಾಸಿಗಳಾಗಿ ಹಾಗೂ ಅನೇಕ ರೀತಿಯಲ್ಲಿ ನಮ್ಮೂರ ನಂಟು ಹೊಂದಿರುವ ನೂರಾರು ಜನರನ್ನು ಒಂದೆಡೆ ಸೇರಿಸುವ ವರಹಿ ಮಾಸ್ತಿ ಕಟ್ಟೆ ಸ್ನೇಹ ಸಂಬಂಧ ಎಂಬ ಬಾಂಧವ್ಯದ ಸಮ್ಮಿಲನ ಕಾರ್ಯಕ್ರಮ
– ಮಲೆನಾಡ ಗಾನ ಕೋಗಿಲೆ ಖ್ಯಾತಿಯ ಕಲಾವಿದೆ ದಿವ್ಯ ರಾಮಚಂದ್ರ ಮತ್ತು ಸಂಗಡಿಗರು, ಬೆಂಗಳೂರು ಇವರಿಂದ ಅಮೋಘ ಗಾನ ವೈಭವ ಕಾರ್ಯಕ್ರಮ ಹಾಗೂ ಸ್ಥಳೀಯವಾಗಿ ಕೆಲವು ಸೀಮಿತ ಮನರಂಜನೆ ಕಾರ್ಯಕ್ರಮಗಳ ಅಳವಡಿಕೆ.
– ಮಲೆನಾಡ ವಿಶೇಷ ಅಡುಗೆಯ ಸಸ್ಯಹಾರ ಮತ್ತು ಮಾಂಸಹಾರ ಭೋಜನ ವ್ಯವಸ್ಥೆ.
– ಆಗಮಿಸಿದ ಸರ್ವರನ್ನು ಒಳಗೊಂಡ ವಿಶೇಷ ಛಾಯಾಚಿತ್ರ ಮಾಡಲಾಗುವುದು.
ನಂದಿನಿ ಸಂಜೆ 4ಕ್ಕೆ ಪ್ರಾರಂಭವಾಗಿ,ಸಂಜೆ 4 ರಿಂದ 5:00 ಚಹಾ ತಿಂಡಿ ಹಾಗೂ ಸಂಜೆ 5 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 8.30 ಕ್ಕೆ ಭೋಜನ ವ್ಯವಸ್ಥೆಯೊಂದಿಗೆ ವಿಶೇಷ ಮನರಂಜನ ಕಾರ್ಯಕ್ರಮ, ಮಲೆನಾಡ ಗಾನಕೋಗಿಲೆ ದಿವ್ಯ ರಾಮಚಂದ್ರ ಹಾಗೂ ಸಂಗಡಿಗರು ಬೆಂಗಳೂರು ಇವರಿಂದ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಮಾಹಿತಿ

– ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವವರು ಮುಂಚಿತವಾಗಿ ತಮ್ಮವರ ಹೆಸರನ್ನು ನೋಂದಾಯಿಸಿ ಪ್ರವೇಶ ಪತ್ರ ಪಡೆದುಕೊಳ್ಳುವುದು
– ಈ ನೋಂದಣಿ ಗೌರವ ಪ್ರವೇಶ ಪತ್ರ ಪಡೆದ ಪ್ರತಿ ಕಾರ್ಡಿಗೆ ಗರಿಷ್ಠ ಇಬ್ಬರಿಗೆ ಅವಕಾಶ ನೀಡಲಾಗುವುದು
– ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರು ನಿಗದಿತ ಸಮಯಕ್ಕೆ ಬರುವುದರ ಮೂಲಕ ಕಾರ್ಯಕ್ರಮ ಸಕಾಲಕ್ಕೆ ನಡೆಸಲು ಸಹಕರಿಸುವುದು
– ಕಾರ್ಯಕ್ರಮದಲ್ಲಿ ಗೌರವ ಪ್ರವೇಶ ಪಡೆದ ಪ್ರತೀ ಕಾರ್ಡಿನ ನೋಂದಣಿ ಸಂಖ್ಯೆಗಳನ್ನು ಒಟ್ಟುಗೂಡಿಸಿ ಚೀಟಿ ಎತ್ತುವುದರ ಮೂಲಕ ಕನಿಷ್ಠ 10 ಜನರನ್ನು ಆಯ್ಕೆಗೊಳಿಸಿ ವೇದಿಕೆಯಲ್ಲಿ ಅಭಿನಂದಿಸಲಾಗುವುದು.
– ಈ ಕಾರ್ಯಕ್ರಮ ನಿಮ್ಮಿಂದಲೇ, ನಿಮಗೋಸ್ಕರ ನಡೆಸುವ ನಮ್ಮೂರಿನ ಪ್ರೀತಿ ಗೌರವದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ತಮ್ಮೆಲ್ಲರ ಸಂಪೂರ್ಣ ಸಹಕಾರ ಬಯಸುತ್ತೇವೆ.
– ಆಗಮಿಸುವ ಸರ್ವರನ್ನು ಪ್ರೀತಿ, ವಿಶ್ವಾಸ, ಅಭಿಮಾನ ಆದರದಿಂದ ಬರಮಾಡಿಕೊಳ್ಳುವ ಕರ್ತವ್ಯ ನಮ್ಮದು.

Categories
ಹೊಸನಗರ

ಹೊಸನಗರದಲ್ಲಿ ಜಾತ್ರೆ ರಂಗು ಶುರು!

ಹೊಸನಗರದಲ್ಲಿ ಜಾತ್ರೆ ರಂಗು ಶುರು!
– ಫೆ.6 ರಿಂದ 14ರವರೆಗೆ ಮಾರಿಕಾಂಬಾ ದೇವಿ ಜಾತ್ರೆ
– 8 ದಿನಗಳ ಕಾಲ ಅದ್ದೂರಿ ಮನರಂಜನಾ ಕಾರ್ಯಕ್ರಮ

NAMMUR EXPRESS NEWS
ಹೊಸನಗರ: ಹೊಸನಗರ ಪಟ್ಟಣದಲ್ಲಿ ಫೆ.6 ಮಂಗಳವಾರದಿಂದ ಫೆ.14ರ ಬುಧವಾರವರೆಗೆ ಅದ್ದೂರಿಯಾಗಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಜಾತ್ರಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ಜಾತ್ರಾ ಕಮಿಟಿಯ ಪದಾಧಿಕಾರಿಗಳು, ಗ್ರಾಮಸ್ತರು, ಸಂಘ ಸಂಸ್ಥೆಗಳು ಜಾತ್ರಾ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಹೊಸನಗರ ಜಾತ್ರೆ ಶುರು!

ಫೆ. 6ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದಿಂದ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಶಿವಪ್ಪನಾಯಕ ರಸ್ತೆಯ ಮೂಲಕ ಅಮ್ಮನವರ ತಾಯಿ ಮನೆ ಎನಿಸಿಕೊಂಡಿರುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ನಂತರ 10 ಗಂಟೆಯಿಂದ ಪೂಜಾ ಕಾರ್ಯ ನೆರವೇರಲಿದ್ದು ಅದೇ ದಿನ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರು ಹಣ್ಣು-ಕಾಯಿ ಪೂಜೆಯ ಜೊತೆಗೆ ವಿವಿಧ ಹರಕೆಯನ್ನು ಸಲ್ಲಿಸುವರು.

ಮಧ್ಯಾಹ್ನ ಸ್ನೇಹ ಬಳಗದವರಿಂದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಗಿದ್ದು ಈ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ನಡೆಯುವ ಒಂದು ದಿನದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿ ಈ ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ದುರ್ಗಾಂಬಾ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶ್ರೀಪತಿರಾವ್‌ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿ ಸದಸ್ಯರು ಈ ಮೂಲಕ ಕೇಳಿಕೊಂಡಿದ್ದಾರೆ. ಫೆ. 7ರ ಬುಧವಾರದಿಂದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ 8 ದಿನಗಳ ಮಾರಿಜಾತ್ರೆ ಶಿವಮೊಗ್ಗ ರಸ್ತೆಯಲ್ಲಿರುವ ಮಾರಿಗುಡ್ಡದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿ ದುರ್ಗಾಂಬಾ ದೇವಸ್ಥಾನದಿಂದ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಮಾರಿಕಾಂಬೆಯನ್ನು ಬುಧವಾರ ಬೆಳಿಗ್ಗೆ ಪ್ರತಿಷ್ಠಾಪಿಸಿ 8 ದಿನಗಳ ಕಾಲ ಇಲ್ಲಿ ಪೂಜೆ ನಡೆಸಲಾಗುವುದು.

 

8 ದಿನಗಳ ಕಾಲ ವಿವಿಧ ಮನರಂಜನೆಗಳು:

ಪ್ರತಿದಿನ ರಾತ್ರಿ 8:30ರಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು

ಫೆ. 9ರಂದು ಅಮ್ಮ ಕಲಾವಿದೆ‌ರ್ ಕುಡ್ಲ ಇವರಿಂದ ನಗೆ ನಾಟಕ ಅಪ್ಪ,

ಫೆ. 10ರಂದು ಶನಿವಾರ ಸೋನಿ ಮೆಲೋಡೀಸ್ ಭದ್ರಾವತಿಯವರಿಂದ ಆರ್ಕೆಸ್ಟ್ರಾ,

ಫೆ. 11 ರ ಭಾನುವಾರ ಮ್ಯೂಸಿಕಲ್ ನೈಟ್ ಹಾಗೂ ವೈವಿಧ್ಯಮಯ ನೃತ್ಯ ಕಾರ್ಯಕ್ರಮ,

ಫೆ. 12ರ ಸೋಮವಾರ ಡಿಸ್ನಿ ಡ್ಯಾನ್ಸ್‌ ಕೊಪ್ಪ ಇವರಿಂದ
ಆಕರ್ಷಕ ನೃತ್ಯ ಕಾರ್ಯಕ್ರಮ,

13ರ ಮಂಗಳವಾರ ರೂಪಕಲಾ (ಕುಳ್ಳಪ್ಪು) ತಂಡದವರಿಂದ ‘ಗಿರಾಕಿಯೇ ಇಲ್ಲಾ ಮಾರಾಯ’ ಎಂಬ ನಗೆ ನಾಟಕ,

ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಈ ಎಲ್ಲ ಕಾರ್ಯಕ್ರಮಗಳು ರಾತ್ರಿ 9ಗಂಟೆಯಿಂದ ಪ್ರಾರಂಭವಾಗಲಿದ್ದು ದೇವಿಯ ಭಕ್ತಾರು ಹಾಗೂ ಸಾರ್ವಜನಿಕರು ಆಗಮಿಸಿ ಈ 9 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮಾರಿಕಾಂಬಾ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿ ಸದಸ್ಯರು ಈ ಮೂಲಕ ಕೇಳಿಕೊಂಡಿದ್ದಾರೆ.

Categories
ಶಿವಮೊಗ್ಗ ಸಾಗರ ಹೊಸನಗರ

ಟಾಪ್ ನ್ಯೂಸ್ ಶಿವಮೊಗ್ಗ

ನಶೆಯಲ್ಲಿದ್ದ ಮೆಡಿಕಲ್‌ ವಿದ್ಯಾರ್ಥಿಯಿಂದ ಆಕ್ಸಿಡೆಂಟ್!
– ಶಿವಮೊಗ್ಗದಲ್ಲಿ ಘಟನೆ: ಜನರಿಂದ ಧರ್ಮದೇಟು
– ಹೊಸನಗರ: 15ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು!
– ಶಿಕಾರಿಪುರ: ಐಫೋನ್‌ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ : ನಾಲ್ಕೇ ಗಂಟೆಯಲ್ಲಿ ಅರೆಸ್ಟ್‌
– ಸಾಗರ: ಓಸಿ (ಮಟ್ಕಾ) ಆಡುತ್ತಿದ್ದ ಇಬ್ಬರು ಅರೆಸ್ಟ್!
– ಸಾಗರ: ಬ್ರಿಡ್ಜ್ ಕೆಳಗೆ ತೇಲುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆ

NAMMUR EXPRESS NEWS
ಶಿವಮೊಗ್ಗ: ನಶೆಯಲ್ಲಿದ್ದ ಮೆಡಿಕಲ್‌ ವಿದ್ಯಾರ್ಥಿಯೊಬ್ಬ ಕಾರಿನಲ್ಲಿ ಐದಾರು ಕಡೆ ಅಪಘಾತ ಮಾಡಿದ್ದಾನೆ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರು ಮೆಡಿಕೆಲ್‌ ವಿದ್ಯಾರ್ಥಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಖಾಸಗಿ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಯೊಬ್ಬ ಹೊಳೆಹೊನ್ನೂರು ರಸ್ತೆಯಲ್ಲಿ ಜಾವಳ್ಳಿಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುವಾಗ ನಾಲ್ಕೈದು ಕಡೆ ಅಪಘಾತ ಮಾಡಿದ್ದಾನೆ. ಗುರುಪುರದ ಶಾಂತಮ್ಮ ಲೇಔಟ್‌ನಲ್ಲಿ ಭದ್ರಾವತಿಯ ಲೋಯರ್‌ ಹುತ್ತದ ನವೀನ್‌ ಕುಮಾರ್‌ ಮತ್ತು ಅವರ ಪತ್ನಿ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದಾರೆ. ಅಷ್ಟು ಹೊತ್ತಿಗೆ ಮೆಡಿಕಲ್‌ ವಿದ್ಯಾರ್ಥಿಯನ್ನು ಹಿಂಬಾಲಿಸಿ ಬಂದ ಸಾರ್ವಜನಿಕರು ಆತನನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿದ್ದ ಮೆಡಿಕೆಲ್‌ ವಿದ್ಯಾರ್ಥಿಯನ್ನು ಪೊಲೀಸರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಡಿಕಲ್‌ ವಿದ್ಯಾರ್ಥಿ ನಶೆಯಲ್ಲಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ಮದ್ಯ ಸೇವಿಸಿದ್ದನೊ, ಗಾಂಜಾ ಮತ್ತಿನಲ್ಲಿದ್ದನೊ ಅನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು

15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಬೀತಾದ ಹಿನ್ನೆಲೆ 25 ವರ್ಷದ ಯುವಕನಿಗೆ ಇಲ್ಲಿನ ತ್ವರಿತ ವಿಶೇಷ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದೆ. 2022ರಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ನೊಂದ ಬಾಲಕಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಹೊಸನಗರ ಠಾಣೆ ಸಿಪಿಐ ಬಿ.ಸಿ.ಗಿರೀಶ್‌ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಹರಿಪ್ರಸಾದ್ ವಾದ ಮಂಡಿಸಿ ದರು. ವಿಚಾರಣೆ ನಡೆಸಿದ ನ್ಯಾಯಾಧಿಶರಾದ ಲತಾ ಆರೋಪಿಗೆ ಶಿಕ್ಷೆ ವಿಧಿಸಿ ಅದೇಶಿಸಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ 4 ತಿಂಗಳು ಸಾದಾ ಸೆರೆವಾಸದ ಶಿಕ್ಷೆ ವಿಧಿಸಿದ್ದಾರೆ.

ಐಫೋನ್‌ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ ನಾಲ್ಕೇ ಗಂಟೆಯಲ್ಲಿ ಅರೆಸ್ಟ್‌

ಶಿಕಾರಿಪುರ : ದೂರು ನೀಡಿದ ನಾಲ್ಕೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ಎರಡು ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಾಳೆಕೊಪ್ಪ ಗ್ರಾಮದ ಹನುಮಂತ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಹನುಮಂತ ನಾಯ್ಕ ಅವರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಘಟನೆ ಸಂಭವಿಸಿತ್ತು. ಮನೆ ಬಾಗಿಲಿನ ಬೀಗ ಹಾಕಿ ಅದನ್ನು ಬಾಗಿಲಿನ ಬಳಿ ಇರಿಸಿದ್ದರು. ಅದೇ ಬೀಗ ಬಳಸಿ ಮನೆಯೊಳಗೆ ಹೋಗಿದ್ದ ಯುವಕ 2,05,000 ರೂ. ನಗದು ಕಳವು ಮಾಡಿ ಯುವಕ ತಲೆಮರೆಸಿಕೊಂಡಿದ್ದ.

ಸಿಸಿಟಿವಿ ಪರಿಶೀಲಿಸಿದಾಗ ತಮ್ಮೂರಿಗೆ ಆಗಾಗ ಬರುತ್ತಿದ್ದ ಚನ್ನಗಿರಿ ಮೂಲದ ಕಾಲೇಜು ವಿದ್ಯಾರ್ಥಿ ಎಂದು ಗೊತ್ತಾಗಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದೂರು ದಾಖಲಾದ ಕೇವಲ 4 ಗಂಟೆಯ ಒಳಗಾಗಿ ಆರೋಪಿಯ ಬಂಧನವಾಗಿದೆ. ಐಫೋನ್ ಖರೀದಿಗಾಗಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಇನ್ಸ್‌ಪೆಕ್ಟರ್‌ ಆರ್.ಆರ್ ಪಾಟೀಲ್‌ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಓಸಿ (ಮಟ್ಕಾ) ಆಡುತ್ತಿದ್ದ ಇಬ್ಬರು ಅರೆಸ್ಟ್!

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿ ಕಟ್ಟಿ. ಓಸಿ (ಮಟ್ಕಾ) ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮ್‌ರೆಡ್ಡಿ ಹಾಗೂ ಶಿವಮೊಗ್ಗ ಜಿಲ್ಲಾ 2ನೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾದ ಕಾರಿಯಪ್ಪರವರ ಆದೇಶದ ಮೇರೆಗೆ ಸಾಗರ ಪೊಲೀಸ್ ಉಪಾಧಿಕ್ಷಕರಾದ ಗೋಪಾಲ ಕೃಷ್ಣ ಟಿ.ನಾಯಕ್ ಇವರ ಮಾರ್ಗದರ್ಶನದಂತೆ ಸಾಗರ ಪೇಟೆ ಪೊಲೀಸ್ ಠಾಣೆಯ ಸಿಪಿಐ ಸೀತಾರಾಂ ಜೆ.ಬಿ. ರವರ ಮಾರ್ಗದರ್ಶನದಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯ ಪಿ. ಎಸ್.ಐ ನಾಗರಾಜ ಟಿ.ಎಂ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ ಶ್ರೀನಿವಾಸ ಪಿಸಿ ಮಂಜುನಾಥ್ ಮತ್ತು ಯೋಗೀಶ್ ಅವರನ್ನೊಳಗೊಂಡ ತಂಡ ಕಾನೂನು ಬಾಹಿರವಾಗಿ ಓಸಿ ಮಟ್ಕಾ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ.ಮಂಜಪ್ಪ ನಾಯ್ಕ ಮತ್ತು ಶಿವಕುಮಾರ ಎಂಬ ಇಬ್ಬರನ್ನು ಬಂಧಿಸಿ ಅರೋಪಿತರಿಂದ 3000/- ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.ಈ ಇಬ್ಬರು ಆರೋಪಿಗಳ ಮೇಲೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಿಡ್ಜ್ ಕೆಳಗೆ ತೇಲುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆ!

ಸಾಗರ ತಾಲೂಕು ಕೆರೆಹಳ್ಳಿ ವರದಾ ನದಿ ಬ್ರಿಡ್ಜ್ ಕೆಳಗೆ ಅಪರಿಚಿತ ಮೃತ ದೇಹ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣ ಸೊರಬ ಅಗ್ನಿಶಾಮಕದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ದೇಹವನ್ನು ಮೇಲಕ್ಕೆ ಎತ್ತಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿಯಾದ ಮಹಾಬಲೇಶ್ವರ, ಮಂಜುನಾಥ್, ಶ್ರೀಶೈಲ ತ್ರಿಫಲಕಟ್ಟಿ ,ಅರುಣ್ ಕೆ ಎಂ ,ಚೇತನ್ ಸಂದಿಪ್ ರಾಥೋಡ್, ವಿಜಯ್ ನೆಸರಗಿ ಹಾಜರಿದ್ದರು.

Categories
ಮಲ್ನಾಡ್ ಶಿವಮೊಗ್ಗ ಹೊಸನಗರ

ಟಾಪ್ ನ್ಯೂಸ್ ಮಲ್ನಾಡ್

ಟ್ರೈನ್​ ನಿಂದ ಕೆಳಕ್ಕೆ ಬಿದ್ದು ಮಹಿಳೆ ಸಾವು!
– ಕೊಲೆಯೋ… ಆಕಸ್ಮಿಕ ಸಾವೋ…?
– ಹೊಸನಗರದಲ್ಲಿ ಮನೆ ದರೋಡೆ: 5 ಲಕ್ಷದ ಚಿನ್ನ ಕಳ್ಳತನ
– ಹಾಫ್‌ ಹೆಲ್ಮೆಟ್‌, ಕರ್ಕಶ ಶಬ್ದದ ಸೈಲೆನ್ಸರ್‌ಗಳ ಮೇಲೆ ರೋಲರ್‌ ಹತ್ತಿಸಿದ ಶಿವಮೊಗ್ಗ ಪೊಲೀಸರು!
– ಶೃಂಗೇರಿ: ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ
– ಅಕ್ರಮ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿ ವಶ

NAMMUR EXPRESS NEWS
ಶಿವಮೊಗ್ಗದಲ್ಲಿ ನಡೆದ ಡಿಎಆರ್ ಪರೀಕ್ಷೆ ಮೇಲ್ವಿಚಾರಕಿಯಾಗಿ ಕೆಲಸ ಮಾಡಿ ವಾಪಸ್ ಬೆಂಗಳೂರು ಟ್ರೈನ್​ನಲ್ಲಿ ಹೋಗುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಮೂಲದ ಮಹಿಳೆಯೊಬ್ಬರ ಸಾವು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಲ್ಲಿರುವ ಅರಣ್ಯ ಭವನದ ಸಿಬ್ಬಂದಿಯಾಗಿರುವ ಮಹಿಳೆ ಮೃತದೇಹ ತುಮಕೂರು ಸಮೀಪ ರೈಲ್ವೆ ಹಳಿ ಬಳಿ ಬಿದ್ದಿದೆ. ತುಮಕೂರು ಸಮೀಪದ ಹಿರೇಹಳ್ಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯ ಹೆಸರು ಅನ್ನಪೂರ್ಣ, ವಯಸ್ಸು 50 . ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನವರು. ಬೆಂಗಳೂರು ಅರಣ್ಯ ಭವನದಲ್ಲಿ ಕೆಲಸ.ಶಿವಮೊಗ್ಗದಲ್ಲಿ ನಡೆದ ಡಿಎಅರ್ ಪರೀಕ್ಷೆಯ ಮೇಲ್ವಿಚಾರಕಿಯಾಗಿ ಕೆಲಸ ನಿರ್ವಹಿಸಿ ವಾಪಸ್​ ಶಿವಮೊಗ್ಗ-ಬೆಂಗಳೂರು ಟ್ರೈನ್ ​ನಲ್ಲಿ ತೆರಳುತ್ತಿದ್ದರು.

ಬೆಂಗಳೂರು ಮಲ್ಲೇಶ್ವರಂ ನಲ್ಲಿ ವಾಸವಿದ್ದ ಇವರು ಜನವರಿ 30 ರಂದು ಬೆಂಗಳೂರುಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಅವರ ಸಹೋದರ ಕೂಡ ಟ್ರೈನ್​ನಲ್ಲಿದ್ದರು. ಸಹೋದರ ರಿಸರ್ವೇಶನ್​ ಭೋಗಿಯಲ್ಲಿದ್ದರು. ಮೃತ ಅನ್ನಪೂರ್ಣರವರು ಜನರಲ್ ಕಂಪಾರ್ಟ್​ಮೆಂಟ್​ನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಹೋದರ ಇಳಿದು ಅನ್ನಪೂರ್ಣ ರಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರು ಕಾಣದೆ ಇದ್ದಾಗ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ಪ್ರತಿ ಸ್ಟೇಷನ್​ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗಲೂ ಯಾವುದೇ ವಿಷಯ ಪತ್ತೆಯಾಗಿಲ್ಲ.

ಆ ಬಳಿಕ ರೈಲ್ವೆ ಹಳಿಗಳ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರೇಹಳ್ಳಿ ಸಮೀಪ ಅನ್ನಪೂರ್ಣರವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿಯೇ ಸಮೀಪದಲ್ಲಿ ಅವರ ಬ್ಯಾಗ್ ಸಹ ಪತ್ತೆಯಾಗಿದೆ. ಅನ್ನಪೂರ್ಣರವರು ರೈಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆಕಸ್ಮಿಕವಾಗಿ ಕೆಳಕ್ಕೆ ಬಿದ್ದರೋ ಅಥವಾ ಅವರನ್ನ ರೈಲಿನಿಂದ ತಳ್ಳಲಾಗಿದೆಯೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಈ ಸಂಬಂಧ ಕುಟುಂಬಸ್ಥರು ಅನುಮಾನವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ.

ಹಾಫ್‌ ಹೆಲ್ಮೆಟ್‌, ಸೈಲೆನ್ಸರ್‌ಗಳ ಮೇಲೆ ರೋಲರ್‌ ಹತ್ತಿಸಿದ ಪೊಲೀಸರು!

ಶಿವಮೊಗ್ಗ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳು ಮತ್ತು ಹಾಫ್‌ ಹೆಲ್ಮೆಟ್‌ಗಳ ಮೇಲೆ ಸಂಚಾರ ಠಾಣೆ ಪೊಲೀಸರು ರೋಡ್‌ ರೋಲರ್‌ ಹರಿಸಿ ನಾಶ ಪಡಿಸಿದ ಘಟನೆ ಈಗ ವೈರಲ್ ಆಗಿದೆ. ಸಾರ್ವಜನಿಕರಿಗೆ ಇವುಗಳ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆ ಗೋಪಿ ಸರ್ಕಲ್‌ನಲ್ಲಿ ರೋಡ್‌ ರೋಲರ್‌ ಹತ್ತಿಸಿ ನಾಶಪಡಿಸಲಾಯಿತು. ಸುಮಾರು 3 ಸಾವಿರ ಹಾಫ್‌ ಹೆಲ್ಮೆಟ್‌ಗಳು, 70 ಸೈಲೆನ್ಸರ್‌ಗಳನ್ನು ಸಂಚಾರ ಪೊಲೀಸರು ನಾಶಪಡಿಸಿದ್ದಾರೆ. ಸರ್ಕಲ್‌ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ ಅವುಗಳ ಮೇಲೆ ರೋಡ್‌ ರೋಲರ್‌ ಹತ್ತಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಇದ್ದರು.

ಮನೆಗೆ ನುಗ್ಗಿ ರೂ.4.65ಲಕ್ಷದ ಚಿನ್ನಾಭರಣ ಕಳ್ಳತನ

ಹೊಸನಗರ: ಮನೆಗೆ ನುಗ್ಗಿ ರೂ.4.65 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಗಳನ್ನು 24 ಗಂಟೆಯೊಳಗೆ ಆಭರಣ ಸಹಿತ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೂಲಿಗ್ಗೇರಿ ನಿವಾಸಿಗಳಾದ ಸುಹಾನ್ 21, ಅಶೋಕ 24, ಗಣೇಶ 30 ಬಂಧಿತ ಆರೋಪಿಗಳು. ನೂಲಿಗ್ಗೇರಿ ನಿವಾಸಿ ರಾಜಮ್ಮ ಮನೆಯಲ್ಲಿರದ ವೇಳೆ ಗಮನಿಸಿ ರಾತ್ರಿ ಮನೆಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಬೀರುವಿನ ಬೀಗ ಒಡೆದು ಚಿನ್ನದ ಸರ, ಉಂಗುರ, ಬ್ರಾಸ್ ಲೇಟ್ ಸೇರಿದಂತೆ ರೂ.4.65 ಲಕ್ಷ ಮೌಲ್ಯದ 94 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದರು. ರಾಜಮ್ಮ ಮನೆಗೆ ವಾಪಾಸಾಗಿ ನೋಡುತ್ತಿದ್ದಂತೆ ಕಳ್ಳತನ ಆಗಿದ್ದು ತಿಳಿದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಗಜಾನನ ವಿ ಸುತಾರ, ಸಿಪಿಐ ಗುರಣ್ಣ ಎಸ್ ಹೆಬ್ಬಾಳ ಮತ್ತು ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರ ಪಿಎಸ್ಐ ರಮೇಶ್ ಪಿ.ಎಸ್ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಿಕೊಂಡು ಆರೋಪಿಗಳ ಪತ್ತೆಗೆ ಜಾಲ ಬೀಸಿತ್ತು. ಪ್ರಕರಣದ ವರದಿ ದಾಖಲಾಗಿ 24 ಗಂಟೆಯೊಳಗೆ ಮೂವರು ಆರೋಪಿಗಳ‌ ಜೊತೆಗೆ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿದೆ. ಆರೋಪಿಗಳನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಎಂ.ಜಿ, ವೆಂಕಟೇಶ್, ಪ್ರವೀಣ್ ಕುಮಾರ್, ಕಿರಣ್ ಕುಮಾರ್, ವಿಶ್ವನಾಥ್, ಶಾಂತಪ್ಪ ಭಾಗವಹಿಸಿದ್ದರು. ಕ್ಷಿಪ್ರವಾಗಿ ಪ್ರಕರಣ ಬೇಧಿಸಿ ಚಿನ್ನಾಭರಣ ವಶಕ್ಕೆ ತೆಗೆದುಕೊಂಡ ಪೊಲೀಸರ ಕಾರ್ಯಾಚರಣೆಯನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿವೈಎಸ್ಪಿ ಗಜಾನನ ವಿ ಸುತಾರ ನಗರ ಠಾಣೆಗೆ ಆಗಮಿಸಿ ಪೊಲೀಸರನ್ನು ಅಭಿನಂದಿಸಿದ್ದಾರೆ.

ಶೃಂಗೇರಿ: ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಶೃಂಗೇರಿ ತಾಲೂಕಿನ 79 ವರ್ಷದ ವ್ಯಕ್ತಿ ಹಾಗೂ ಕೊಪ್ಪ ತಾಲೂಕು ಭತ್ರಹಳ್ಳಿ ಜೋಗಿಸರದ 35 ವರ್ಷದ ಖಾಸಗಿ ಶಾಲಾ ಶಿಕ್ಷಕಿಗೆ ಮಂಗನ ಕಾಯಿಲೆ ಪತ್ತೆಯಾಗಿದೆ. ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಂಬಂಧಿಸಿದ ಗ್ರಾಮಗಳ ವ್ಯಾಪ್ತಿಯಲ್ಲಿ ಉಣ್ಣೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಶಾಲಾ ಶಿಕ್ಷಕಿ ಚಿಕ್ಕಮಗಳೂರು ನಗರದಲ್ಲಿ ತರಬೇತಿಗೆ ಹೋಗಿ ಬಂದಿದ್ದನ್ನು ಹೊರತುಪಡಿಸಿದರೇ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ತಿಳಿದು ಬಂದಿದೆ. ಗ್ರಾಮದಲ್ಲಿನ ಪ್ರಾಣಿಗಳಲ್ಲಿನ ಉಣ್ಣೆಯಿಂದ ಸೋಂಕು ಬಂದಿರಬಹುದೆಂದು ಅಂದಾಜಿಸಲಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಕ್ರಮ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿ ವಶ

ರಿಪ್ಪನ್‌ಪೇಟೆ : ಮಲೆನಾಡು ಭಾಗದಲ್ಲಿ ಅಕ್ರಮ ಮರಳು ಮಾಫಿಯಾದ ಹೆಡೆಮುರಿ ಕಟ್ಟುವಲ್ಲಿ ಪಟ್ಟಣದ ಪೊಲೀಸ್‌ ಪಿಎಸ್ ಐ ಪ್ರವೀಣ್ ಎಸ್ ಪಿ ನೇತೃತ್ವದ ತಂಡ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪಟ್ಟಣದ ಪಿಎಸ್ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ತುಂಬಿಕೊಂಡು ಕೋಡೂರು ಮಾರ್ಗವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ದಾಳಿ ನಡೆಸಿ ಮೂರು ಟಿಪ್ಪರ್ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಚ್ ಸಿ ಉಮೇಶ್, ಶಿವಕುಮಾರ್ ನಾಯ್ಕ ಹಾಗೂ ಮಧುಸೂಧನ್‌ ಇದ್ದರು.

Categories
ಮಲ್ನಾಡ್ ಹೊಸನಗರ

ಹುಂಚದಲ್ಲಿ ನೀರು ನಾಯಿಗಳ ಹಿಂಡು!

ಹುಂಚದಲ್ಲಿ ನೀರು ನಾಯಿಗಳ ಹಿಂಡು!
– ಮುತ್ತಿನಕೆರೆ ಬಳಿ ನೀರುನಾಯಿಗಳ ಹಿಂಡು ಪ್ರತ್ಯಕ್ಷ
– ಹೊಸನಗರ ತಾಲೂಕಿನ ಹುಂಚ: ಏನಿದು ವಿಶೇಷ?

NAMMUR EXPRESS NEWS
ಹೊಸನಗರ: ರಿಪ್ಪನ್‌ಪೇಟೆ ಸಮೀಪದ ಇತಿಹಾಸ ಪ್ರಸಿದ್ದ ಹುಂಚ ಮುತ್ತಿನಕೆರೆಯಲ್ಲಿ ನೀರು ನಾಯಿಗಳ ಹಿಂಡು ಏಕಾಏಕಿ ಪ್ರತ್ಯಕ್ಷವಾಗಿವೆ. ಪುರಾಣ ಪ್ರಸಿದ್ದವಾಗಿರುವ ಹುಂಚದ ಮುತ್ತಿನಕೆರೆಯು ಕೋಡೂರು – ನಾಗರಹಳ್ಳಿ ಮಾರ್ಗದಲ್ಲಿದ್ದು, ಈ ಕೆರೆಯಲ್ಲಿ ದಿಢೀರ್ ನೀರು ನಾಯಿಗಳು ಕೆರೆಯ ನೀರಿನಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡಿರುವುದು ರಸ್ತೆಯಲ್ಲಿ ಸಂಚರಿಸುವವರಲ್ಲಿ ಭಯ ಹುಟ್ಟಿಸಿವೆ. ಕಾಡಿನ ಕೆರೆಯಲ್ಲಿ ಕಾಣಸಿಗುವ ಈ ನೀರು ನಾಯಿಗಳು ನಾಡಿನಲ್ಲಿ ಕಂಡಿವೆ. ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಅಂತರ್ಜಲ ಸಹ ಕ್ಷೀಣಿಸಿ ಕೆರೆಕಟ್ಟೆಗಳು ಒಣಗಿ ಹೋಗಿದ್ದು ಬಿಸಿಲ ತಾಪದಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ.

Categories
ಹೊಸನಗರ

ನಗರದ ಶ್ರೀ ಮಾರಿಕಾಂಬ ಜಾತ್ರೆಗೆ ಇಂದು ತೆರೆ!

ನಗರದ ಶ್ರೀ ಮಾರಿಕಾಂಬ ಜಾತ್ರೆಗೆ ಇಂದು ತೆರೆ!
– ಜಾತ್ರೆಯ ಕೊನೆಯ ದಿನ ಸಾವಿರಾರು ಜನ
– ವಿಶೇಷ ಮನೋರಂಜನಾ ಕಾರ್ಯಕ್ರಮಗಳ ಸುಗ್ಗಿ
– ತಮ್ಮ ಊರಿನ ಜಾತ್ರೆಗೆ ಹೊರ ಊರಿನಿಂದ ಬಂದ ಜನ!

NAMMUR EXPRESS NEWS
ನಗರ: ನಗರದ ಮಾರಿಕಾಂಬ ಜಾತ್ರೆ ಶುರುವಾಗಿ ಇಂದಿಗೆ ಐದು‌ ದಿನಗಳಾಗಿದ್ದು ಇದೀಗ ಜಾತ್ರೆಯ ಕೊನೆಯ ದಿನವಾಗಿದೆ. ಮೊದಲ ದಿನದಿಂದ ಜಾತ್ರೆ ವಿಜೃಂಭಣೆಯಿಂದ ನಡೆದಿದ್ದು ದೇವಸ್ಥಾನ ಹಮ್ಮಿಕೊಂಡಿದ್ದ ಎಲ್ಲ ಪೂಜಾ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ, ಅದ್ಧೂರಿಯಾಗಿ ನಡೆಸಲಾಗಿದೆ. ಜಾತ್ರಾ ಬಯಲು ಅಂಗಡಿ ಮುಂಗಟ್ಟುಗಳಿಂದ ತುಂಬಿ ಹೋಗಿದ್ದು. ಅಪಾರ ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ. ಈ ವಾರಾಂತ್ಯದಲ್ಲಿ ರಜೆಗಳು ಇರುವುದರಿಂದ ದೂರದ ಊರುಗಳಲ್ಲಿ ಇರುವವರೂ ಸಹ ಜಾತ್ರೆಗೆ ಆಗಮಿಸಿ ಹರಕೆ ತೀರಿಸಿದ್ದಾರೆ.

ಹಳೆಯ ಸಂಪ್ರದಾಯ ಮುಂದುವರಿಕೆ

ನಗರದಲ್ಲಿ ಹಿಂದಿನ ಕಾಲದ ಕೋಟೆಯು ಐತಿಹಾಸಿಕ ಹಿನ್ನಲೆ ಹೊಂದಿದ್ದು ಅಲ್ಲಿಗೆ ಪ್ರವಾಸಿಗರ ಆಗಮನವೂ ಬಹಳಷ್ಟಿದೆ. ಶನಿವಾರದ ಈ ದಿನ ದೇವಿಯ ವಿಗ್ರಹವನ್ನು ಎರಡು ಕಿ.ಲೋ .ಸಮೀಪದಲ್ಲಿನ ಗಂಡನ ಮನೆಗೆ ಎತ್ತಿನ ಬಂಡಿಯ ಮೆರವಣಿಗೆಯ ಮೂಲಕ ಕೊಂಡೊಯ್ದು ನಂತರ ಅಲ್ಲಿ ಪೂಜೆ ಸಲ್ಲಿಸಿ, ನಾಲ್ಕು ಕಿಲೋ ಮಿಟರ್ ದೂರದ ಕಲಾವತಿ ನದಿಯ ಹಿನ್ನೀರಿನಲ್ಲಿ ವಿಗ್ರಹ ವಿಸರ್ಜನೆ ಮಾಡಲಾಗುತ್ತದೆ.

ವಿಶೇಷ ಮನರಂಜನೆ ಕಾರ್ಯಕ್ರಮದ ಸಂಭ್ರಮ!

ಜಾತ್ರೆಯ ಪ್ರಯುಕ್ತ ವಿಶೇಷ ಮನರಂಜನೆ ಕಾರ್ಯಕ್ರಮಗಳೂ ನಡೆದಿದ್ದು. ಜ.23 ರ ಮಂಗಳವಾರ ರಾತ್ರಿ 10 ರಿಂದ ಬತ್ತದ ಗದ್ದೆ ಮೈದಾನದಲ್ಲಿ ಕೃಷ್ಣ ಅರ್ಜುನ ಯಕ್ಷಗಾನ ನಡೆಯಿತು. ಜ.24 ರ ಬುಧವಾರ ರಾತ್ರಿ ಹತ್ತರಿಂದ ಮಲೆನಾಡಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀರಾಮ್ ಬಳಗ ಪುತ್ತೂರು, ಶ್ರೀಜಿತ್ ಸರಳಾಯ ಹಾಗೂ ಧನುಷ್ ಇವರಿಂದ ಕಾರ್ಯಕ್ರಮ ನಡೆದಿದೆ. ಜ.25 ರ ಗುರುವಾರ ರಾತ್ರಿ 10 ರಿಂದ ಮನೆ ಒಕ್ಲ್ ಎಂಬ ನಾಟಕ ನಡೆದಿದ್ದು ನೆರೆದವರ ಮನರಂಜಿಸಿತ್ತು. ಜ.26ರ ಶುಕ್ರವಾರ ಲೈವ್ ಮ್ಯೂಸಿಕ್ ನೈಟ್ ಆರ್ಕೆಸ್ಟ್ರಾದ ರಂಗು ಮುದ ನೀಡಿತ್ತು. ಜಾತ್ರೆ ಇದೀಗ ಕೊನೆಯ ಹಂತದಲ್ಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಜನ ದೇವಿಯ ಆಶೀರ್ವಾದ ಪಡೆದಿದ್ದಾರೆ.

Categories
ಹೊಸನಗರ

70 ವರ್ಷದ ಸರ್ಕಾರಿ ಶಾಲೆ ಈಗ ಕಲರ್ ಫುಲ್!

70 ವರ್ಷದ ಸರ್ಕಾರಿ ಶಾಲೆ ಈಗ ಕಲರ್ ಫುಲ್!
– ರಿಪ್ಪನ್ ಪೇಟೆ ಪೊಲೀಸರಿಂದ ಶ್ರಮದಾನ
– ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ
– ಪೋಲಿಸ್ ಸಿಬ್ಬಂದಿ ಈ ನಡೆಗೆ ಜನರ ಪ್ರಶಂಸೆ

NAMMUR EXPRESS NEWS
ರಿಪ್ಪನ್‌ಪೇಟೆ : ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಯವರು “ಸರ್ಕಾರಿ ಶಾಲೆ ಅಭಿಮಾನ – ಸುಣ್ಣ ಬಣ್ಣ ಅಭಿಯಾನ” ದಡಿಯಲ್ಲಿ ರಿಪ್ಪನಪೇಟೆ ಹಳೇ ಸಂತೆ ಮಾರುಕಟ್ಟೆ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಣ್ಣ ಬಣ್ಣದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಪಟ್ಟಣದ ಪೋಲೀಸರು ಶ್ರಮದಾನ ನೆರವೇರಿಸಿದ್ದಾರೆ.  70 ವರ್ಷ ಹಳೆಯ ಶಾಲೆ ಎಷ್ಟೊ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದರೂ ಕಲವು ವರ್ಷಗಳಿಂದ ಸುಣ್ಣ ಬಣ್ಣ ಕಾಣದೆ ಮಂಕಾಗಿತ್ತು‌.

ಪೋಸ್ಟ್ ಮ್ಯಾನ್ ನ್ಯೂಸ್ ಬಳಗವು ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸುವ ಅಭಿಯಾನವನ್ನು ಶುರುಮಾಡಿದ್ದು ಈ ಕಾರ್ಯಾಕ್ಕೆ ಪಟ್ಟಣದ ಪೊಲೀಸ್ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಕೈ ಜೋಡಿಸಿದ್ದು ಶ್ಲಾಘನೀಯವಾಗಿದೆ. ಈ ಮೂಲಕ ಅರ್ಥಪೂರ್ಣವಾಗಿ ಗಣರಾಜ್ಯವನ್ನು ಆಚರಿಸಲಾಗಿದೆ. ಧ್ವಜಾರೋಹಣದ ನಂತರ ಸಮವಸ್ತ್ರ ಕಳಚಿಟ್ಟು, ಪೊರಕೆ ಗುದ್ದಲಿ ಹಿಡಿದು ಶಾಲಾವರಣದ ಒಳಗಿನ ಕಸಗಳನ್ನು ತೆಗೆದು ಸ್ವಚ್ಛ ಮಾಡಿದ್ದು, ದಾರಿ ಹೋಕರು, ಸಾರ್ವಜನಿಕರು ಇವರ ಕಾರ್ಯವೈಖರಿಯನ್ನು ಅಭಿನಂದಿಸಿದ್ದಾರೆ. ಸ್ವಚ್ಚತಾ ಕಾರ್ಯಕ್ರಮದ ನಂತರ ಪೋಲಿಸ್ ಸಿಬ್ಬಂದಿಗಳಿಗೆ ಮಕ್ಕಳು ಉಪಹಾರ ನೀಡಿ ಸಂಭ್ರಮಿಸಿದರು.

ಶ್ರಮದಾನ ನೆರವೇರಿಸಿ ಮಾತನಾಡಿದ ಪಿಎಸ್‌ಐ ಪ್ರವೀಣ್ ಎಸ್ ಪಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಿ ಆ ಮೂಲಕ ಶಾಲೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲದೇ ಕೊರಗುತಿದ್ದು ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಜೀವನ ರೂಪಿಸಿಕೊಂಡಿರುವ ಹಳೇ ವಿದ್ಯಾರ್ಥಿಗಳನ್ನು ಸಂಘಟಿಸುವ‌ ಮೂಲಕ ಶಾಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂದು ಹೇಳಿದರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಮಾತನಾಡಿ ಸರಕಾರಿ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವ ಅಭಿಯಾನದಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಸುಣ್ಣ ಬಣ್ಣ ಅಭಿಯಾನ ಪ್ರಶಂಸನೀಯಎಂದರು.

ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಮಾತನಾಡಿ, ರಿಪ್ಪನ್‌ಪೇಟೆ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಂಚಾಯತ್ ವತಿಯಿಂದ ಸಾಕಷ್ಟು ಅನುದಾನವನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತೇವೆ ಎಂದರು. ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪೋಸ್ಟ್ ಮ್ಯಾನ್ ಬಳಗದ ರಫ಼ಿ ರಿಪ್ಪನ್‌ಪೇಟೆ ,ಸಬಾಸ್ಟಿಯನ್ ತಾಲೂಕ್ ಕಸಾಪ ಅಧ್ಯಕ್ಷ ತ ಮ ನರಸಿಂಹ ,ಪೊಲೀಸ್ ಎಎಸ್ ಐ ಮಂಜಪ್ಪ , ಜ್ಯೋತಿ ಹಾಗೂ ಸಿಬ್ಬಂದಿಗಳು ಗ್ರಾಪಂ ಸದಸ್ಯರಾದ ಅಶ್ವಿನಿ ರವಿಶಂಕರ್ , ಮಂಜುಳಾ ಕೇತಾರ್ಜಿರಾವ್ , ದಾನಮ್ಮ , ದೀಪಾ ಸುಧೀರ್ , ಪ್ರಕಾಶ್ ಪಾಲೇಕರ್ , ಪೋಸ್ಟ್ ಮ್ಯಾನ್ ಬಳಗದ ಹಸನಬ್ಬ , ಲೇಖನ ಚಂದ್ರನಾಯ್ಕ್ , ರಾಘವೇಂದ್ರ ಇಂಜಿನಿಯರ್, ಶ್ರೀಧರ್ , ಎಸ್ ಡಿ ಎಂ ಸಿ ಅಧ್ಯಕ್ಷ ರಾಘವೇಂದ್ರ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಎಸ್ ಇದ್ದರು. ಶ್ರಮದಾನದ ನಂತರ ಪೋಸ್ಟ್ ಮ್ಯಾನ್ ನ್ಯೂಸ್ ಬಳಗಕ್ಕೆ ಠಾಣೆಯ ವತಿಯಿಂದ ಆರ್ಥಿಕ ಸಹಾಯವನ್ನು ಕೂಡ ಮಾಡಲಾಗಿದೆ.

Categories
ಹೊಸನಗರ

ದೆಹಲಿ ಗಣರಾಜ್ಯೋತ್ಸವ ಪರೇಡಲ್ಲಿ ರಿಪ್ಪಿನಪೇಟೆ ಹುಡುಗಿಯರು!

ದೆಹಲಿ ಗಣರಾಜ್ಯೋತ್ಸವ ಪರೇಡಲ್ಲಿ ರಿಪ್ಪಿನಪೇಟೆ ಹುಡುಗಿಯರು!
– ರಿಪ್ಪನ್‌ಪೇಟೆ ಡಿಗ್ರಿ ಕಾಲೇಜು ವಿದ್ಯಾರ್ಥಿಗಳ ಡೊಳ್ಳು ಕುಣಿತ
– ರಾಜಧಾನಿಯಲ್ಲಿ ಮಲೆನಾಡ ವಿದ್ಯಾರ್ಥಿನಿಯರ ಸದ್ದು
– ಸಾಗರ ಯುತ್ ಪೋರ್ಸ್ ಅಸೋಸಿಯೇಷನ್ ತಂಡ

NAMMUR EXPRESS NEWS
ರಿಪ್ಪನ್‌ಪೇಟೆ: ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಕರ್ತವ್ಯ ಪಥ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನ ವಿದ್ಯಾರ್ಥಿನಿಯರು ಡೊಳ್ಳು ಕುಣಿತ ಕಾರ್ಯಕ್ರಮಕ್ಕೆ ಆಯ್ಕೆ ಕಾರ್ಯಕ್ರಮ ನೀಡಿದ್ದಾರೆ. ಸಾಗರ ಯುತ್ ಪೋರ್ಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ಡೊಳ್ಳು ಕುಣಿತ ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನ ವಿದ್ಯಾರ್ಥಿನಿಯರಾದ ಕು. ವಿದ್ಯಾ, ಕು. ರಾಧಿಕಾ, ಕು.ಲಾವಣ್ಯ ಮತ್ತು ಕೋಟೆತಾರಿಗದ ಕು. ಅಂಕಿತಾ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡು ತಮ್ಮ ಕಲಾಪ್ರದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಡೊಳ್ಳು ಕುಣಿತಕ್ಕೆ ಟಾಕಪ್ಪ ಕಣ್ಣೂರು ಮತ್ತು ಸಾಗರ ಯುತ್ ಪೋರ್ಸ್ ಅಸೋಸಿಯೇಷನ್‌ ಆಧ್ಯಕ್ಷೆ ಪುಷ್ಪಾವತಿ ಇವರುಗಳ ಮಾರ್ಗದರ್ಶನ ನೀಡಿದ್ದು ಇದಕ್ಕೆ ಕಾಲೇಜ್ ಪ್ರಾಚಾರ್ಯರು ಮತ್ತು ಪೋಷಕವರ್ಗ ಮತ್ತು ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.

Categories
ಹೊಸನಗರ

ಹೊಸ ನಗರ ವಿಧಾನ ಸಭಾ ಕ್ಷೇತ್ರಕ್ಕಾಗಿ ಸೂಪರ್ ಪ್ಲಾನ್!

ಹೊಸ ನಗರ ವಿಧಾನ ಸಭಾ ಕ್ಷೇತ್ರಕ್ಕಾಗಿ ಸೂಪರ್ ಪ್ಲಾನ್!
– ನಗರ ಜಾತ್ರೆಯಲ್ಲಿ ವಿಭಿನ್ನ ಬಗೆಯ ಹೋರಾಟ
– ಹೊಸನಗರ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಜಾಗೃತಿ
– ನಗರ ಜಾತ್ರೆಯಲ್ಲಿದೆ ಇಲ್ಲಿನ ಜನರ ದನಿಯಾದ ಸೆಲ್ಫಿ ಪಾಯಿಂಟ್!

NAMMUR EXPRESS NEWS
ಹೊಸನಗರ: ಹೊಸನಗರವನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿಸುವಂತೆ ಒತ್ತಾಯ ಮತ್ತು ಪ್ರತಿಭಟನೆಗಳು ನಡೆಯುತ್ತಲೆ ಇವೆ. ಇದೀಗ ಹೊಸ ನಗರ ವಿಧಾನ ಸಭಾ ಒತ್ತಾಯವನ್ನು ನಗರ ಜಾತ್ರೆಯಲ್ಲಿ ವಿಭಿನ್ನವಾಗಿ ಮಾಡಲಾಗಿದೆ. ಅದುವೇ ಸೆಲ್ಫಿ ಪಾಯಿಂಟ್!. ಹೌದು. ಹೊಸನಗರ ಕ್ಷೇತ್ರ ಗಡಿ ಪ್ರದೇಶಗಳಾದ ಬೆಳಗಾವಿ ಗುಲ್ಬರ್ಗಾ ಜಿಲ್ಲೆಗಳಿಗೆ ಆದಂತಹ ನಿರ್ಲಕ್ಷ್ಯ ಗಳನ್ನು ಅನುಭವಿಸುತ್ತಾ ಬಂದಿದೆ‌‌. ಅರ್ಧರ್ಧವಾಗಿ ಯಾವ ಕಡೆಗೂ ಸಲ್ಲದೆ ಎರಡೂ ಕಡೆಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಅಭಿವೃದ್ಧಿ ಕನಸಾಗಿದೆ. ತಮಗೆ ಪ್ರತ್ಯೇಕ ಕ್ಷೇತ್ರ ಬೇಕು ಎಂಬ ಕೂಗು ಅಲ್ಲಿನ ಸಾರ್ವಜನಿಕರದ್ದು.

ಅದಕ್ಕಾಗಿ ಅವರು ಹೋರಾಟವನ್ನೂ ಮಾಡುತ್ತಿದ್ದಾರೆ‌. ಕೆಲವು ದಿನಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನದಲ್ಲೂ ಈ ವಿಷಯಗಳನ್ನು ಪ್ರಸ್ತಾಪಿಸಲಾಗಿತ್ತು. ಈಗ ನಡೆಯುತ್ತಿರುವ ನಗರ ಜಾತ್ರೆಯಲ್ಲೂ ನಮಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಬೇಕು ಎಂಬ ಮನವಿಯನ್ನು ಅತ್ಯಂತ ಆಕರ್ಷಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದೀಗ ಒಂದು ಸೆಲ್ಫಿ ಪಾಯಿಂಟ್ ಆಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ‌. ಮುಂದಾದರೂ ಸರ್ಕಾರ, ಜನ ನಾಯಕರು ಹೊಸ ನಗರಕ್ಕೆ ದನಿ ಆಗುವರೇ…?

Categories
ಹೊಸನಗರ

ನಗರದ ಮಾರಿಕಾಂಬ ಜಾತ್ರೆ ರಂಗು!

ನಗರದ ಮಾರಿಕಾಂಬ ಜಾತ್ರೆ ರಂಗು!
– ಅದ್ಧೂರಿಯಾಗಿ ಶುರು: ಮೊದಲ ದಿನ ಪೂಜೆ ವಿಧಿ ವಿಧಾನ
– ಜ.27ವರೆಗೆ ಜಾತ್ರಾ ಮಹೋತ್ಸವ: ಅಂಗಡಿ ಬಂದವು
– ಸುತ್ತಮುತ್ತಲಿನಿಂದ ಸಾವಿರಾರು ಭಕ್ತರ ಆಗಮನ
– 3 ದಿನ ನಡೆಯಲಿದೆ ನಗರ ಹಬ್ಬ

NAMMUR EXPRESS NEWS
ನಗರ: ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದಲ್ಲಿ ಮಾರಿಕಾಂಬ ದೇವಿ ಜಾತ್ರೆಯು 23-01-2024 ರ ಮಂಗಳವಾರದಿಂದ 27-01-2024 ರ ಶನಿವಾರದವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದದ್ದು ಈಗಾಗಲೇ ಚಾಲನೆ ಸಿಕ್ಕಿದೆ ಜಾತ್ರೆಗೆ ಅಂಗಡಿ ಮುಂಗಟ್ಟುಗಳನ್ನು ಹಾಕಲಾಗಿದ್ದು ಆಟೋಪಕರಣಗಳೂ ಸಜ್ಜಾಗಿವೆ. ಅಪಾರ ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ. ಈ ವಾರಾಂತ್ಯದಲ್ಲಿ ರಜೆಗಳೂ ಇರುವುದರಿಂದ ದೂರದ ಊರುಗಳಲ್ಲಿ ಇರುವವರೂ ಸಹ ಜಾತ್ರೆಗೆ ಬರುತ್ತಿದ್ದಾರೆ. ನಗರದಲ್ಲಿ ಹಿಂದಿನ ಕಾಲದ ಕೋಟೆಯು ಐತಿಹಾಸಿಕ ಹಿನ್ನಲೆ ಹೊಂದಿದ್ದು ಅಲ್ಲಿಗೆ ಪ್ರವಾಸಿಗರ ಆಗಮನವೂ ಬಹಳಷ್ಟಿದೆ. ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡುವ ಜೊತೆಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಇಂದು ಬುಧವಾರ ದೇವಿಗೆ ಕುರಿ ಕೋಳಿ ಹರಕೆಗಳನ್ನು ನೀಡುತ್ತಾರೆ.

ಗುರುವಾರ ಮತ್ತು ಶುಕ್ರವಾರಗಳಂದು ದೇವಿಗೆ ಮಡಿಲು ತುಂಬುವ ಸೇವೆಗಳು, ಕಾರ್ಯಕ್ರಮಗಳಿರುತ್ತವೆ. ಶನಿವಾರ ದೇವಿಯ ವಿಗ್ರಹವನ್ನು ಎರಡು ಕಿ.ಲೋ .ಸಮೀಪದಲ್ಲಿನ ಗಂಡನ ಮನೆಗೆ ಎತ್ತಿನ ಬಂಡಿಯ ಮೆರವಣಿಗೆಯ ಮೂಲಕ ಕೊಂಡೊಯ್ದು ನಂತರ ಅಲ್ಲಿ ಪೂಜೆ ಸಲ್ಲಿಸಿ, ನಾಲ್ಕು ಕಿಲೋ ಮಿಟರ್ ದೂರದ ಕಲಾವತಿ ನದಿಯ ಹಿನ್ನೀರಿನಲ್ಲಿ ವಿಗ್ರಹ ವಿಸರ್ಜನೆ ಮಾಡಲಾಗುತ್ತದೆ. ಜಾತ್ರೆಯ ಪ್ರಯುಕ್ತ ವಿಶೇಷ ಮನರಂಜನೆ ಕಾರ್ಯಕ್ರಮಗಳೂ ನಡೆಯಲಿದ್ದು.

ಜ.23 ರ ಮಂಗಳವಾರ ರಾತ್ರಿ 10 ರಿಂದ ಬತ್ತದ ಗದ್ದೆ ಮೈದಾನದಲ್ಲಿ ಕೃಷ್ಣ ಅರ್ಜುನ ಯಕ್ಷಗಾನ ನಡೆಯಿತು. ಜ.24 ರ ಬುಧವಾರ ರಾತ್ರಿ ಹತ್ತರಿಂದ ಮಲೆನಾಡಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀರಾಮ್ ಬಳಗ ಪುತ್ತೂರು, ಶ್ರೀಜಿತ್ ಸರಳಾಯ ಹಾಗೂ ಧನುಷ್ ಇವರಿಂದ ಕಾರ್ಯಕ್ರಮ ನಡೆಯಲಿದೆ. ಜ.25 ರ ಗುರುವಾರ ರಾತ್ರಿ 10 ರಿಂದ ಮನೆ ಒಕ್ಲ್ ಎಂಬ ನಾಟಕ ನಡೆಯಲಿದೆ. ಜ.26 ರ ಶುಕ್ರವಾರ ರಾತ್ರಿ ಹತ್ತರಿಂದ ಲೈವ್ ಮ್ಯೂಸಿಕ್ ನೈಟ್ ಆರ್ಕೆಸ್ಟ್ರಾ ನಡೆಯಲಿದೆ. ಪ್ರತಿ ನಿತ್ಯ ಐದರಿಂದ ಹತ್ತು ಸಾವಿರ ಜನ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಆಶಿರ್ವಾದ ಪಡೆಯುತ್ತಾರೆ. ಇನ್ನೂ ಹೆಚ್ಚಿನ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರವಾಗುವಂತೆ ಸಮಿತಿ ಮನವಿಮಾಡಿದೆ.