Categories
ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

ದೇಶದಲ್ಲಿ ಆನ್ ಲೈನ್ ಗೇಮಿಂಗ್ ಆ್ಯಪ್ ಬ್ಯಾನ್!

ದೇಶದಲ್ಲಿ ಆನ್ ಲೈನ್ ಗೇಮಿಂಗ್ ಆ್ಯಪ್ ಬ್ಯಾನ್!
– ಡಿಜಿಟಲ್ ಗೇಮ್ ಕೂಡ ನಿಷೇಧ: ಸರ್ಕಾರದ ಮಾಹಿತಿ
– ಆನ್ ಲೈನ್ ಗೇಮ್ ಆರಂಭಿಸಿದವರಿಗೆ 1 ಕೋಟಿ ದಂಡ ಮತ್ತು 3 ವರ್ಷಗಳವರೆಗೆ ಜೈಲು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಕೇಂದ್ರ ಸರ್ಕಾರವು ಹಣ ಕಟ್ಟಿ ಆಡುವ, ಜೂಜಿನಂತಹ ಆನ್ ಲೈನ್ ಆಟಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025 ಅನ್ನು ಜಾರಿಗೆ ತರುವ ಮೂಲಕ, ಅಂತಹ ಆಟಗಳನ್ನು ಬ್ಯಾನ್ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ವ್ಯವಹಾರಗಳ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಡಾ.ಎಲ್.ಮುರುಗನ್ ಅವರು “ಆಟ ಯಾವುದೇ ಇರಲಿ, ಅದರಲ್ಲಿ ಹಣ ಕಟ್ಟಿ ಆಡುವಂತಹ ಆಯ್ಕೆಗಳಿದ್ದರೆ, ಅಂತಹ ಆಟಗಳಿಗೆ ಯಾವುದೇ ರೀತಿಯ ಅವಕಾಶ ನೀಡಲಾಗುವುದಿಲ್ಲ. ಡಿಜಿಟಲ್ ವೇದಿಕೆಗಳು ಜನರಿಗೆ ಸುರಕ್ಷಿತವಾಗಿರಬೇಕು.

ಬೆಟ್ಟಿಂಗ್ ಕಟ್ಟಿ ಆಡುವಂತಹ ಯಾವುದೇ ಆಟಗಳನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಇವುಗಳಿಗೆ ಪಾವತಿಸಲು ಇರುವಂತಹ ಪೇಮೆಂಟ್ ಗೇಟ್ ವೇಗಳನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಇಂತಹ ಆ್ಯಪ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವವರಿಗೂ ಕಾನೂನಿನ ಅಡಿಯಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50.000 ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ಆನ್ ಲೈನ್ ಗೇಮ್ ಅನ್ನು ಮೊದಲ ಬಾರಿಗೆ ಆರಂಭಿಸಿದವರಿಗೆ 1 ಕೋಟಿ ರೂಪಾಯಿ ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು, ಎರಡನೇ ಬಾರಿ ಅಪರಾಧ ಎಸಗಿದರೆ 2 ಕೋಟಿ ರೂಪಾಯಿ ದಂಡ ಹಾಗೂ ಕನಿಷ್ಠ ಐದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಆನ್ ಲೈನ್ ಗೇಮಿಂಗ್ ಪ್ರಾಧಿಕಾರವನ್ನು ಶೀಘ್ರದಲ್ಲೇ ತೆರೆಯಲಾಗುತ್ತಿದ್ದು, ಪ್ರಾಧಿಕಾರವು ಅನುಮತಿ ನೀಡಿದ ಬಳಿಕವಷ್ಟೇ ಆನ್ ಲೈನ್ ಗೇಮಿಂಗ್ ಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ” ಎಂದು ತಿಳಿಸಿದ್ದಾರೆ.

Categories
ಕರಾವಳಿ ಕುಂದಾಪುರ ಬೆಂಗಳೂರು ರಾಷ್ಟ್ರೀಯ ವಾರ್ತೆ

ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಡಿಜಿಟಲ್ ತಂತ್ರಜ್ಞ ಗೌತಮ್ ನಾವಡ

ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಡಿಜಿಟಲ್ ತಂತ್ರಜ್ಞ ಗೌತಮ್ ನಾವಡ
– ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನಲ್ಲಿ ಸಮ್ಮೇಳನ
– ಕುಂದಾಪುರದ ಫೋರ್ಥ್‌ಫೋಕಸ್ ಸಂಸ್ಥೆ ಸಂಸ್ಥಾಪಕ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕುಂದಾಪುರದ ವಿ ಗೌತಮ್ ನಾವಡ ಉಪನ್ಯಾಸ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ತಮ್ಮ ಡಿಜಿಟಲ್ ತಂತ್ರಜ್ಞಾನ ಜ್ಞಾನವನ್ನು ಹಂಚಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಾರ್ಚ್ 12 ಮತ್ತು 13ರಂದು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ “People, Planet and Profit: The New Paradigm of Sustainable Commerce” ನಡೆಯಲಿದೆ. ಈ ಸಮ್ಮೇಳನದಲ್ಲಿ ಶಿಕ್ಷಣ ತಜ್ಞರು, ಉದ್ಯಮಿಗಳು ಹಾಗೂ ಹಲವು ಕ್ಷೇತ್ರಗಳ ತಜ್ಞರು ಭಾಗವಹಿಸಿ ಆರ್ಥಿಕ ಬೆಳವಣಿಗೆ, ಪರಿಸರ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಸಮ್ಮೇಳನದಲ್ಲಿ ಮುಖ್ಯ ಭಾಷಣಗಳು, ತಾಂತ್ರಿಕ ಅಧಿವೇಶನಗಳು ಹಾಗೂ ಪ್ಯಾನೆಲ್ ಚರ್ಚೆಗಳು ನಡೆಯಲಿದ್ದು, ಸಸ್ಟೇನಬಲ್ ಬಿಸಿನೆಸ್ ಮಾದರಿಗಳು, ಕ್ಲೈಮೇಟ್ ಇನ್ವೆಸ್ಟಿಂಗ್, ಸರ್ಕ್ಯುಲರ್ ಎಕಾನಮಿ ಮತ್ತು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಬೆಂಗಳೂರಿನ ಕಾನ್ಸುಲ್ ಜನರಲ್ ಸ್ಟೀವನ್ ಕಾನೊಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ವೋಲ್ವೋ ಗ್ರೂಪ್, ಡೆಲಾಯಿಟ್ ಸೇರಿದಂತೆ ಹಲವು ಸಂಸ್ಥೆಗಳ ತಜ್ಞರು ವಿವಿಧ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ.

ಉದ್ಯಮದ ಕುರಿತು ವಿಶೇಷ ಉಪನ್ಯಾಸ

ಸಮ್ಮೇಳನದ ಮಾರ್ಚ್ 12ರಂದು ನಡೆಯುವ Technical Session – 2ರಲ್ಲಿ, ಕುಂದಾಪುರ ಮೂಲದ ಉದ್ಯಮಿ ಹಾಗೂ ಫೋರ್ಥ್‌ ಫೋಕಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ವಿ ಗೌತಮ್ ನಾವಡ ಅವರು “Profit with purpose: Sustainable Growth in Business” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ಉಪನ್ಯಾಸದಲ್ಲಿ ಉದ್ಯಮ ಸಂಸ್ಥೆಗಳು ಲಾಭದಾಯಕತೆ ಸಾಧಿಸುವುದರ ಜೊತೆಗೆ ಪರಿಸರ ಮತ್ತು ಸಮಾಜದ ಜವಾಬ್ದಾರಿಯನ್ನು ಹೇಗೆ ಸಮನ್ವಯಗೊಳಿಸಬಹುದು ಎಂಬುದರ ಕುರಿತು ಅವರು ವಿವರಿಸಲಿದ್ದಾರೆ.

ನಾವುಡ ಹೇಳಿದ್ದೇನು..?

ಸಮ್ಮೇಳನದ ಕುರಿತು ಮಾತನಾಡಿದ ನಾವಡ ಅವರು, ”_ಇಂದಿನ ವ್ಯವಹಾರ ಜಗತ್ತಿನಲ್ಲಿ ಲಾಭ ಮಾತ್ರವಲ್ಲ, ಸಮಾಜ ಮತ್ತು ಪರಿಸರದ ಜವಾಬ್ದಾರಿಯೂ ಸಮಾನವಾಗಿ ಮಹತ್ವ ಪಡೆದಿದೆ. ದೀರ್ಘಕಾಲಿಕ ಬೆಳವಣಿಗೆಗಾಗಿ ಸಂಸ್ಥೆಗಳು ಜವಾಬ್ದಾರಿಯುತ ಹಾಗೂ ನೈತಿಕ ವ್ಯವಹಾರ ವಿಧಾನಗಳನ್ನು ಅನುಸರಿಸಬೇಕು. ಇಂತಹ ಸಮ್ಮೇಳನಗಳು ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವೆ ಸಂವಾದಕ್ಕೆ ಉತ್ತಮ ವೇದಿಕೆಯಾಗುತ್ತವೆ ಎಂದು ಹೇಳಿದರು. ಸಮ್ಮೇಳನದ ಎರಡನೇ ದಿನದಲ್ಲಿ ಇನ್ನಷ್ಟು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, “Balancing People, Planet and Profit: Is Sustainable Commerce Truly Achievable?” ಎಂಬ ವಿಷಯದ ಕುರಿತು ಪ್ಯಾನೆಲ್ ಚರ್ಚೆ ನಡೆಯಲಿದೆ. ಇಂತಹ ವೇದಿಕೆಗಳಲ್ಲಿ ಭಾಗವಹಿಸುವ ಮೂಲಕ ಫೋರ್ಥ್‌ಫೋಕಸ್ ಸಂಸ್ಥೆ ಉದ್ಯಮಶೀಲತೆ, ತಂತ್ರಜ್ಞಾನ ಆಧಾರಿತ ಬೆಳವಣಿಗೆ ಹಾಗೂ ಜವಾಬ್ದಾರಿಯುತ ವ್ಯವಹಾರ ಮಾದರಿಗಳ ಬಗ್ಗೆ ನಡೆಯುವ ಚರ್ಚೆಗಳಿಗೆ ತನ್ನ ಕೊಡುಗೆ ನೀಡುತ್ತಿದೆ.

ಡಿಜಿಟಲ್ ಕ್ಷೇತ್ರದಲ್ಲಿ ವಿ ಗೌತಮ್ ನಾವಡ ವಿಶೇಷ ಸಾಧನೆ

ವಿ ಗೌತಮ್ ನಾವಡ ಅವರು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಉದ್ಯಮಿ. ಅವರು ಕುಂದಾಪುರ ಮೂಲದ ಫೋರ್ಥ್‌ಫೋಕಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದು, ವೆಬ್ ಅಭಿವೃದ್ಧಿ, ಡಿಜಿಟಲ್ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಸಲಹಾ ಸೇವೆಗಳನ್ನು ವಿವಿಧ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೆ.

ದೇಶ ವಿದೇಶಕ್ಕೆ ಸೇವೆ ನೀಡುತ್ತಿರುವ ಫೋರ್ಥ್‌ಫೋಕಸ್ ಸಂಸ್ಥೆ

ಫೋರ್ಥ್‌ಫೋಕಸ್ ಒಂದು ವೆಬ್ ಸೊಲ್ಯೂಷನ್ ಸಂಸ್ಥೆಯಾಗಿದ್ದು, ಕಳೆದ 10 ವರ್ಷಗಳಿಗಿಂತ ಹೆಚ್ಚು ಅನುಭವದೊಂದಿಗೆ ವಿವಿಧ ಕ್ಷೇತ್ರಗಳ ಸಂಸ್ಥೆಗಳಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ವೆಬ್ ಆಧಾರಿತ ಪರಿಹಾರಗಳನ್ನು ಒದಗಿಸುತ್ತಿದೆ.

Categories
ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

ಯುದ್ಧದ ಎಫೆಕ್ಟ್: ಸಿಲಿಂಡರ್ ಇನ್ನು ಸಿಗೋದು ಕಷ್ಟ?!

ಯುದ್ಧದ ಎಫೆಕ್ಟ್: ಸಿಲಿಂಡರ್ ಇನ್ನು ಸಿಗೋದು ಕಷ್ಟ?!
– ಸಿಲಿಂಡರ್ ಬುಕ್ಕಿಂಗ್ ನಲ್ಲಿ ಹೊಸ ನಿಯಮ: ಏನೇನು?
– ಯುದ್ಧದ ಸನ್ನಿವೇಶ ತಣ್ಣಗಾಗುವವರೆಗೆ ಸಿಲಿಂಡರ್ ವ್ಯತ್ಯಯ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಯುದ್ಧದ ಎಫೆಕ್ಟ್ ಇದೀಗ ಭಾರತಕ್ಕೂ ಬಿದ್ದಿದೆ. ಅಡುಗೆ ಅನಿಲದ ಪೂರೈಕೆಯಲ್ಲಿ ತೀವ್ರತರವಾದ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಲಿಂಡರ್ ಬುಕ್ಕಿಂಗ್ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಯುದ್ಧ ಹಿನ್ನೆಲೆ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಾಸ ಮತ್ತು ಗ್ರಾಹಕರಲ್ಲಿ ಮನೆ ಮಾಡಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.‌

ಮತ್ತೊಂದು ಕಡೆಯಿಂದ ದೇಶದ ಹಲವಾರು ಗ್ರಾಹಕರು ಸಿಲಿಂಡರ್ ಖಾಲಿಯಾಗುವ ಮೊದಲೇ, ಅಂದರೆ ಎರಡು ತಿಂಗಳಿಗೊಮ್ಮೆ ಬುಕ್ ಮಾಡುತ್ತಿದ್ದವರು ಇದೀಗ 15 ದಿನಗಳಲ್ಲೇ ಪುನಃ ಬುಕ್ಕಿಂಗ್ ಮಾಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಸಿಲಿಂಡರ್ ವಿಚಾರದಲ್ಲಿ ಕೃತಕ ಅಭಾವ ತಲೆದೋರುತ್ತಿದೆ ಎನ್ನಲಾಗಿದೆ.

ಭಾರತದಲ್ಲಿಯೂ ಆತಂಕ: ಬುಕ್ಕಿಂಗ್ ನಿಯಮ ಬದಲು!

ಸರ್ಕಾರವು ಭಾರತದಲ್ಲಿ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎನ್ನುವ ಆಶ್ವಾಸನೆಯನ್ನು ನೀಡುತ್ತಿದ್ದರೂ, ಇನ್ನೊಂದೆಡೆ ಬುಕ್ಕಿಂಗ್ ಅವಧಿಯನ್ನು ಇದ್ದಕ್ಕಿದ್ದಂತೆ ಹೆಚ್ಚಳಗೊಳಿಸಿರುವುದು ಜನಸಾಮಾನ್ಯರಲ್ಲಿ ಚಿಂತೆಯನ್ನುಂಟು ಮಾಡಿದೆ. ಅದರಲ್ಲೂ ಮಧ್ಯಮ ಮತ್ತು ದೊಡ್ಡ ಕುಟುಂಬದಲ್ಲಿ 25 ದಿನಗಳ ಸಿಲಿಂಡರ್ ಮಿತಿಯು ಹೆಚ್ಚಿನ ಸಮಸ್ಯೆಯನ್ನುಂಟು ಮಾಡುತ್ತದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇದಷ್ಟೇ ಅಲ್ಲದೆ ಸಿಲಿಂಡರ್ ಬೆಲೆ ಮತ್ತು ಪೂರೈಕೆಗೆ ಸಂಬಂಧಿಸಿದ ಸೀಮಿತ ಚೌಕಟ್ಟು ಹೊಟೇಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರಿದೆ.

ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ, ಎಲ್ಲವನ್ನು ಸುಗಮಗೊಳಿಸಲು ತೈಲ ಕಂಪನಿಗಳ ಉತ್ಪನ್ನ ಅಧಿಕಾರಿಗಳು ಸಮಿತಿಯೊಂದನ್ನು ವಿಶೇಷವಾಗಿ ರಚಿಸಿದ್ದು , ಸಮಿತಿಯು ಕೈಗಾರಿಕೆಗಳು ಮತ್ತು ಹೊಟೇಲ್ ಗಳ ಬೇಡಿಕೆಗಳನ್ನು ಪರಿಶೀಲಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಸಧ್ಯದ ಸಂದರ್ಭದಲ್ಲಿ ಗೃಹಬಳಕೆದಾರರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವಾಲಯವು ಸ್ಪಷ್ಟಪಡಿಸಿದೆ. ಇದರೊಂದಿಗೆ ಯುದ್ಧದ ಸನ್ನಿವೇಶ ತಣ್ಣಗಾಗುವವರೆಗೆ ಸಿಲಿಂಡರ್ ಪೂರೈಕೆಯಲ್ಲಿನ ಅನಿಶ್ಚಿತತೆ ಮುಂದುವರಿಯುವುದು ಅನಿವಾರ್ಯವಾಗಿದ್ದು, ದೇಶದ ಪ್ರಜೆಗಳು ಪರಿಸ್ಥಿತಿಯನ್ನು ಅರಿತುಕೊಂಡು ಬಳಕೆಯಲ್ಲಿ ಮಿತಿಯನ್ನಿಟ್ಟುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ ರಾಷ್ಟ್ರೀಯ ವಾರ್ತೆ

ಭಾರತ ಚಾಂಪಿಯನ್..!

ಭಾರತ ಚಾಂಪಿಯನ್..!
– ದೇಶದಲ್ಲಿ ಸಂಭ್ರಮ: ಟಿ 20 -ವಿಶ್ವಕಪ್ ಗೆದ್ದ ಹೀರೋಸ್
– ಬೆಂಕಿ ಬ್ಯಾಟಿಂಗ್… ಬೆಂಕಿ ಬೌಲಿಂಗ್..

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಹಮದಾಬಾದ್‌: ಆರಂಭದಲ್ಲಿ ಬ್ಯಾಟರ್‌ಗಳ ವಿಸ್ಫೋಟಕ ಬ್ಯಾಟಿಂಗ್ ನಂತರ ಬೌಲರ್‌ಗಳ ಬೆಂಕಿ ಬೌಲಿಂಗ್‌ನಿಂದ ಫೈನಲ್ ಪಂದ್ಯದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಸತತವಾಗಿ ಎರಡು ಟಿ20 ಫೈನಲ್ ಪಂದ್ಯವನ್ನು ಯಾವುದೇ ತಂಡ ಜಯಗಳಿಸಿಲ್ಲ. ಆದರೆ ಭಾರತ 2024 ಮತ್ತು 2026 ರಲ್ಲಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟಿ20 ವಿಶ್ವಕಪ್ ಆತಿಥ್ಯ ವಹಿಸಿದ ತಂಡ ಇಲ್ಲಿಯವರೆಗೆ ಚಾಂಪಿಯನ್‌ ಪಟ್ಟ ಅಲಂಕರಿಸಿರಲಿಲ್ಲ.

ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಿತ್ತು. ಇಲ್ಲಿಯವರೆಗೆ ಯಾವುದೇ ತಂಡ 3 ಟಿ20 ವಿಶ್ವಕಪ್ ಪಂದ್ಯ ಗೆದ್ದಿರಲಿಲ್ಲ. ಆದರೆ 2008, 2024 ಮತ್ತು 2026 ರಲ್ಲಿ ಜಯಿಸುವ ಮೂಲಕ ಭಾರತ ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್ 2010, 2022 ರಲ್ಲಿ ಟ್ರೋಫಿ ಗೆದ್ದರೆ ವೆಸ್ಟ್ ಇಂಡೀಸ್ 2012 ಮತ್ತು 2016 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸಂಜು ಸ್ಯಾಮ್ಸನ್ ಮತ್ತೆ ಹೀರೋ ಆದರು. ಬುಮ್ರಾ 4 ವಿಕೆಟ್ ಪಡೆದು ಸಾಧನೆ ಮಾಡಿದರು. ಇಡೀ ದೇಶ ಈಗ ಸಂಭ್ರಮದಲ್ಲಿದೆ.

Categories
ಮಾಹಿತಿ ಸುದ್ದಿ ರಾಷ್ಟ್ರೀಯ ವಾರ್ತೆ

ಮಹಿಳೆ ದೇಶದ ಆಸ್ತಿ, ಕುಟುಂಬದ ಕಣ್ಣು..!

ಮಹಿಳೆ ದೇಶದ ಆಸ್ತಿ, ಕುಟುಂಬದ ಕಣ್ಣು..!
– ಸಾಧನೆಗೆ ಸ್ಫೂರ್ತಿ ಹೆಣ್ಣು…ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

ಮಹಿಳಾ ದಿನಾಚರಣೆ ಮತ್ತೊಮ್ಮೆ ಬಂದಿದೆ.‌ ಮಹಿಳೆಯರಿಗೆ ದೊರಕಬೇಕಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸ್ಥಾನಮಾನಗಳಿಗಾಗಿ, ಲಿಂಗ ಸಮಾನತೆಯ ಕಾರಣಕ್ಕಾಗಿ ಹುಟ್ಟಿಕೊಂಡ ಈ ದಿನವನ್ನು ಪ್ರತಿವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1910ರಲ್ಲಿ ಕ್ಲಾರಾ ಜೆಟ್ ಕಿನ್ ಎನ್ನುವ ಮಹಿಳೆಯು ಈ ರೀತಿಯ ದಿನವನ್ನು ಆಚರಿಸಬೇಕು ಎನ್ನುವ ಸಂಗತಿಯನ್ನು ಮಂಡನೆ ಮಾಡಿದರು. ಅದರ ಮರು ವರ್ಷ ಅಂದರೆ 1911ರಿಂದ ಇದು ಆಚರಣೆಗೆ ಬಂದರೂ, 1975ರ ಮಾರ್ಚ್ 8ರಂದು ವಿಶ್ವಸಂಸ್ಥೆಯು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಎನ್ನುವುದನ್ನು ಅಧಿಕೃತವಾಗಿ ಅಂಗೀಕರಿಸಿತು.‌

ಇನ್ನು ದೇಶದ ವ್ಯಾಪ್ತಿಯಲ್ಲಿ ನೋಡುವುದಾದರೆ ಜನವರಿ 24ರಂದು ಹೆಣ್ಣು ಮಕ್ಕಳ ದಿನವನ್ನು, ಫೆಬ್ರವರಿ 13ರಂದು ಸರೋಜಿನಿ ನಾಯ್ಡು ಅವರ ಜನ್ಮದಿನದ ನೆನಪಿಗಾಗಿ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಹೆಚ್ಚಾಗಿ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನೇ ಅದ್ಧೂರಿಯಾಗಿ ಮತ್ತು ಪ್ರತಿವರ್ಷ ಕೆಲವು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ.‌ಇಂದು ಮಹಿಳೆಯು ತನ್ನ ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ಗುರುತಿಸಿಕೊಂಡಿರುವುದಷ್ಟೇ ಅಲ್ಲದೆ ಉನ್ನತ ಸ್ಥಾನಮಾನವನ್ನು ಗಳಿಸಿದ್ದು, ಮುನ್ನುಗ್ಗುತ್ತಿದ್ದರೂ ಕೂಡ, ಕೆಲವೆಡೆ ಮಹಿಳೆಯ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ.

ದೈಹಿಕವಾಗಿ, ಮಾನಸಿಕವಾಗಿ ಮತ್ತು ಅತ್ಯಾಚಾರದ ರೂಪದಲ್ಲೂ ಕೂಡ ಇದು ಮುಂದುವರಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನು ಕೆಲವೆಡೆ ಮಹಿಳೆಗೆ ದೊರೆತ ಸ್ವಾತಂತ್ರ್ಯವೂ ಸ್ವೇಚ್ಛೆಯಾಗಿ ಮಾರ್ಪಟ್ಟು ದುರುಪಯೋಗಗೊಳ್ಳುತ್ತಿದೆ. ಕೆಲ ಮಹಿಳೆಯರಿಗೆ ಧೈರ್ಯ, ಸ್ಥೈರ್ಯ, ದೃಢತೆ, ಆತ್ಮವಿಶ್ವಾಸ ಎಲ್ಲವೂ ಇದ್ದರೂ ಕೂಡ ಸಮಾಜದಲ್ಲಿ ನಡೆಯುತ್ತಿರುವ ವಂಚನೆ, ಅಹಿತಕರ ಘಟನೆಗಳು, ಅಕ್ರಮ ಚಟುವಟಿಕೆಗಳಿಂದಾಗಿ ಕುಗ್ಗುವ ಸ್ಥಿತಿ ಏರ್ಪಟ್ಟು ತನ್ನ ಅಸ್ತಿತ್ವವನ್ನು ತಾನು ಕಂಡುಕೊಳ್ಳಲಾಗದೆ, ಭವಿಷ್ಯವನ್ನು ರೂಪಿಸಿಕೊಳ್ಳಲಾಗದೆ, ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದೆ ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗಿ, ಉಸಿರುಗಟ್ಟಿಸುವಂತಹ ವಾತಾವರಣವದಲ್ಲಿ ಜೀವಿಸಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾಳೆ.

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ದಿನಮಾನಗಳಲ್ಲಿ ಹೆಣ್ಣಿನ ವಿಚಾರದಲ್ಲಿ ಪುರುಷರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ಕೂಡ ಅದು ಹೆಚ್ಚಿನ ಪ್ರಮಾಣದಲ್ಲಿಲ್ಲ. ತನ್ನನ್ನು ಸಮಾನವಾಗಿ ಕಾಣಬೇಕೆಂದು ಬಯಸುವ ಮಹಿಳೆ, ತಾನೂ ಕೂಡ ಪುರುಷನನ್ನು ಅದೇ ದೃಷ್ಟಿಕೋನದಲ್ಲಿ ನೋಡಬೇಕೆಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತನಗೆ ಸ್ವಾತಂತ್ರ್ಯ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಪುರುಷನನ್ನು ಗುಲಾಮನನ್ನಾಗಿ ಕಾಣುತ್ತಿರುವ, ತನ್ನ ಹಠ ಸಾಧನೆಯ ದಳವನ್ನಾಗಿ ಉಪಯೋಗಿಸಿಕೊಳ್ಳುತ್ತಿರುವ ಅದೆಷ್ಟೋ ಮಹಿಳೆಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ.‌ ಇಂದಿನ ದಿನಗಳಲ್ಲಿ ಹಲವಾರು ಮಹಿಳೆಯರು ವಿಕೃತ ಮನಸ್ಥಿತಿಯನ್ನು ಹೊಂದುತ್ತಿರುವುದನ್ನು ನೋಡಿದರೆ ಎದೆ ಝಲ್ಲೆನ್ನಿಸುತ್ತದೆ.

ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರು ‘ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂದು ಹಾಡಿ ಹೊಗಳಿದ ಮಾತೃಹೃದಯಿ, ಭೂಮಿತೂಕದವಳು ಈಕೆಯೇ ಎಂದು ಅನುಮಾನಪಡುವಂತಹ ಸನ್ನಿವೇಶಗಳು ನಡೆಯುತ್ತಲೇ ಇದೆ.‌ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣವಾಗಲಿ, ಪರಿಪೂರ್ಣವಾಗಲಿ.‌ ತನಗೆ ಸಮಾಜದಿಂದ, ಸರ್ಕಾರದಿಂದ ದೊರಕುತ್ತಿರುವ ಅವಕಾಶಗಳು, ಸೌಕರ್ಯಗಳು, ಸ್ಥಾನಮಾನಗಳ ಮಹತ್ವ ಏನೆಂಬುದು ಮಹಿಳೆಗೇ ಅರಿವಾಗಿ ತನ್ನ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವಂತಾಗಲಿ. ಅಂತೆಯೇ ಮಹಿಳೆಯರನ್ನು, ಅವರ ನಿಜವಾದ ಸಾಮರ್ಥ್ಯವನ್ನು, ಸ್ಥಾನಮಾನವನ್ನು ಗೌರವಿಸಿ, ಪೂಜನೀಯ ಭಾವದಿಂದ ಕಾಣುವ ವಿಶಾಲ ಮನೋಭಾವದ ಪುರುಷರಿಗೂ ಕೂಡ ಮಹಿಳಾ ದಿನಾಚರಣೆಯ ಶುಭಾಶಯಗಳು.

Categories
ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಾ..?

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಾ..?
– ಇರಾನ್ ಯುದ್ಧದ ಕಾರ್ಮೋಡ: ಎಲ್ಲಾ ದೇಶಕ್ಕೂ ಎಫೆಕ್ಟ್
– ಪೆಟ್ರೋಲ್, ಡೀಸೆಲ್ ದರಗಳು ಲೀಟರ್ ಗೆ 5 -8 ರೂ. ಹೆಚ್ಚಳ?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವ ದೆಹಲಿ: ಇರಾನ್ ದೇಶವು ಪ್ರತಿಕಾರವಾಗಿ ಎಂಕೆಡಿ ವಿಯೋಮ್ ಎನ್ನುವ ತೈಲ ಟ್ಯಾಂಕರ್ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದ ಘಟನೆ ಕಳೆದೆರಡು ದಿನಗಳ ಹಿಂದೆ ಸಂಭವಿಸಿತ್ತು. ಪರಿಣಾಮವಾಗಿ ತೈಲ ಸಾಗಾಟ ಕಡಿಮೆಗೊಳ್ಳುವ ಸಾಧ್ಯತೆಯಿದ್ದು, ಬೆಲೆ ಏರಿಕೆಯಾಗುವ ಸಂಭವವಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದವು.

ಇದೀಗ ಸಾರ್ವಜನಿಕರ ಕಲ್ಪನೆಯಂತೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಾಣುತ್ತಿದ್ದು, ಇದರ ಜೊತೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.‌ ನಮ್ಮ ಭಾರತವು ಒಟ್ಟು ಕಚ್ಚಾ ತೈಲದ ಅಗತ್ಯತೆಗಿಂತ ಶೇಕಡ 80ರಷ್ಟು ಹೆಚ್ಚಿನ ಭಾಗವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಬದಲಾವಣೆ ಉಂಟಾದಲ್ಲಿ ಅದು ದೇಶದ ಬೆಲೆಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.‌

ಆರ್ಥಿಕ ತಜ್ಞರು “ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡ ಹತ್ತರಷ್ಟು ಏರಿಕೆಯಾಗಿರುವುದರ ಕುರಿತು ವರದಿಗಳು ಪ್ರಕಟಗೊಂಡಿದೆ. ಇದರ ಪರಿಣಾಮ ಭಾರತದ ಮೇಲು ಬೀರಲಿದ್ದು ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್ ಗೆ ಐದು ರೂಪಾಯಿಯಿಂದ ಎಂಟು ರೂಪಾಯಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ದೇಶಕ್ಕೆ ತೈಲವನ್ನು ಪೂರೈಸುವ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದಾಗಿದ್ದು, ಅಲ್ಲಿನ ತೈಲ ಸಂಸ್ಕರಣಾಗಾರಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೆ, ಇದರಿಂದಾಗಿ ಉತ್ಪಾದನೆ ಸ್ಥಗಿತಗೊಂಡರೆ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಾಸಗಳು ಉಂಟಾಗಿ, ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ವಿಶ್ಲೇಷಕರು.

ತೈಲ ದರದ ಏರಿಕೆಯಿಂದಾಗಿ ಸರಕು ಸಾಗಣೆ ವೆಚ್ಚ, ತರಕಾರಿ, ಹಾಲು ಮತ್ತು ದಿನಸಿ ಪದಾರ್ಥಗಳ ಬೆಲೆಗಳು ಸಹ ಏರಿಕೆ ಕಾಣಲಿದ್ದು ಇದು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇದು ನೇರವಾಗಿ ದೇಶದ ಹಣದುಬ್ಬರದ ಮೇಲು ತೀವ್ರತರವಾದ ಪ್ರಭಾವ ಬೀರುತ್ತದೆ.‌ ಈ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿರತೆಗೆ ಸವಾಲುಗಳು ಎದುರಾಗಿ, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿ, ಷೇರು ಮಾರುಕಟ್ಟೆಯಲ್ಲೂ ಅಸ್ಥಿರತೆ ಕಂಡು ಬರಲಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದ ಪ್ರಜೆಗಳ ಗಮನ ಸರ್ಕಾರ ಕೈಗೊಳ್ಳುವ ಕ್ರಮಗಳ ಮೇಲೆ ಕೇಂದ್ರೀಕರಿಸಿದೆ.|

Categories
ರಾಜ್ಯ ರಾಷ್ಟ್ರೀಯ ವಾರ್ತೆ ಹಬ್ಬಗಳು

ರಂಗಿನ ಹಬ್ಬ ಹೋಳಿ ಸಂಭ್ರಮ!

ರಂಗಿನ ಹಬ್ಬ ಹೋಳಿ ಸಂಭ್ರಮ!
– ದೇಶದ ಎಲ್ಲೆಡೆ ಹೋಳಿ ಹಬ್ಬದ ಸಡಗರ
– ಹೋಳಿ ಜತೆಗೆ ಜಾನಪದರ ಕುಣಿತ ವಿಶೇಷ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ವಿಶೇಷ ವರದಿ: ರಚನಾ ಕಾಮತ್

ಬಣ್ಣಗಳ ಹಬ್ಬವಾದ ಹೋಳಿಯನ್ನು ಆಚರಿಸಲು ಕೂಡ ಎರಡು ರೀತಿಯ ಪೌರಾಣಿಕ ಹಿನ್ನೆಲೆ ಇದೆ. ಹೋಳಿ ಹುಣ್ಣಿಮೆಯನ್ನು ಸೋಮವಾರ ದೇಶಾದ್ಯಂತ ಸಡಗರದ ಜೊತೆಗೆ, ಪ್ರತಿಯೊಂದು ಪ್ರಾಂತ್ಯದಲ್ಲೂ ವಿಭಿನ್ನ ಶೈಲಿಯಲ್ಲಿ, ತನ್ನದೇ ಆದ ಸಂಪ್ರದಾಯದೊಂದಿಗೆ ಆಚರಿಸಲಾಗುತ್ತಿದೆ. ಎಲ್ಲೆಡೆ ಬಣ್ಣ ಎರಚಿ ಹಬ್ಬವನ್ನು ಆಚರಣೆ ಮಾಡಲಾಗಿದೆ.

ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಇದು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬರುತ್ತದೆ. ಈ ಬಾರಿ ಹೋಳಿ ಹಬ್ಬವು ಮಾರ್ಚ್ 3ರಂದು ಕಾಮದಹನ ಮತ್ತು 4ರಂದು ಬಣ್ಣಗಳೊಂದಿಗೆ ಆಚರಿಸಲಾಗುತ್ತಿದೆ.

ಹೋಳಿ ಹುಣ್ಣಿಮೆ ಎಂದರೆ ಎಲ್ಲರೂ ಒಂದಾಗಿ ಬೆರೆತು ಬಣ್ಣದ ಪುಡಿಗಳನ್ನು, ಪಿಚಕಾರಿಯ ಮೂಲಕ ಬಣ್ಣದ ನೀರನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸುವುದಷ್ಟೇ ಅಲ್ಲದೆ, ಮಾನವನ ಬದುಕಿಗೆ ಉತ್ತಮ ಸಂದೇಶವನ್ನು ಸಹ ನೀಡುತ್ತದೆ.‌ಮನುಷ್ಯನ ಜೀವನ ಕೆಟ್ಟ ಸಂಗತಿಗಳಿಂದ ಮುಕ್ತವಾಗಿ ಸದಾ ವರ್ಣಮಯವಾಗಿರಲಿ ಎನ್ನುವ ಉದ್ದೇಶವನ್ನು ಈ ಹಬ್ಬವು ಹೊಂದಿದೆ.‌ ಜೊತೆಗೆ ಇದಕ್ಕೆ ಎರಡು ಪೌರಾಣಿಕ ಹಿನ್ನೆಲೆ ಇವೆ.‌

ಹೋಳಿ ಹಬ್ಬದ ಪುರಾಣ ಏನು ಹೇಳುತ್ತೆ?

ಹಿರಣ್ಯಕಶಿಪುವಿಗೆ ಹೋಲಿಕ ಎನ್ನುವ ಸಹೋದರಿಯೊಬ್ಬಳಿದ್ದು, ಪ್ರಹ್ಲಾದನನ್ನು ಕೊಲ್ಲಲು ಆತನಿಗೆ ಸಹಾಯ ಮಾಡುತ್ತಿರುತ್ತಾಳೆ. ಹೋಲಿಕ ಬಳಿ ಒಂದು ವಸ್ತ್ರವಿದ್ದು, ಅದು ಅಗ್ನಿಯಿಂದ ರಕ್ಷಿಸುವಂತಿರುತ್ತದೆ. ಹೀಗಾಗಿ ಹೋಲಿಕ ಆ ವಸ್ತ್ರವನ್ನು ಸುತ್ತಿಕೊಂಡು ಪ್ರಹ್ಲಾದನನ್ನು ತೊಡೆಯ ಮೇಲೆ ಕೂರಿಸಿಕೊಂಡು, ಅಗ್ನಿಯಲ್ಲಿ ಕುಳಿತುಕೊಳ್ಳುತ್ತಾಳೆ. ಆಗ ವಿಷ್ಣುವು ಹೋಲಿಕಾ ಸುತ್ತಿಕೊಂಡಿದ್ದ ವಸ್ತ್ರವು ಜಾರಿ ಪ್ರಹ್ಲಾದನನ್ನು ಸುತ್ತುವರಿಯುವಂತೆ ಮಾಡುತ್ತಾನೆ.

ಇದರಿಂದಾಗಿ ಪ್ರಹ್ಲಾದನು ಅಗ್ನಿಯಿಂದ ರಕ್ಷಿಸಲ್ಪಟ್ಟು, ಹೋಲಿಕ ಅಗ್ನಿಗೆ ಆಹುತಿಯಾಗುತ್ತಾಳೆ. ಇದರ ಕುರುಹಾಗಿ ಎಲ್ಲೆಡೆ ಅಸತ್ಯ ಮತ್ತು ಅಮಂಗಳವನ್ನು ಸುಡುವ ‘ಹೋಲಿಕ ದಹನ’ವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಇದು ಭಕ್ತಿ ಮತ್ತು ನ್ಯಾಯದ ಗೆಲುವಿನ ಸಂಕೇತಗಳಾಗಿ ಮಾಡಲಾಗುತ್ತದೆ.

ರಾಜ್ಯದ ವಿವಿಧ ಭಾಗದಲ್ಲಿ ಆಚರಣೆ

ಉತ್ತರ ಕರ್ನಾಟಕ ಭಾಗದಲ್ಲಿ ಶಿವನು ಮನ್ಮಥನನ್ನು ತನ್ನ ಮೂರನೇ ಕಣ್ಣನ್ನು ತೆರೆದು ಸುಟ್ಟ ಪ್ರತಿಯಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಅಂದರೆ ಮನುಷ್ಯನಲ್ಲಿ ಅಡಗಿರುವ ಕಾಮ,ಕ್ರೋಧ, ಲೋಭ,ಮೋಹ, ಮದ ಮತ್ತು ಮತ್ಸರದಂತಹ ಗುಣಗಳನ್ನು ಸುಟ್ಟು ಭಸ್ಮ ಮಾಡಿ, ನಿಷ್ಕಲ್ಮಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎನ್ನುವುದರ ಆಧ್ಯಾತ್ಮಿಕ ಸಂಕೇತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಪದ ಹಿನ್ನೆಲೆ ಇದೆ.

ಮಲ್ಲೇಶಿ ಎನ್ನುವ ಬೇಡರ ಜನಾಂಗದ ಯುವಕನು ತನ್ನ ಅಧಿಕಾರ ಮದದಿಂದ ಕೊಬ್ಬಿ, ಜನರಿಗೆ ತೊಂದರೆ ನೀಡುತ್ತಾ ರಾತ್ರಿಯ ವೇಳೆ ತಮಟೆಯ ತಾಳಕ್ಕೆ ಕುಣಿಯುತ್ತಾ ಗಸ್ತು ತಿರುಗುತ್ತಿರುತ್ತಾನೆ. ಈ ಸಂದರ್ಭದಲ್ಲಿ ಸ್ತ್ರೀ ವ್ಯಾಮೋಹಿಯಾದ ಮಲ್ಲೇಶಿಯ ಕಣ್ಣು ದಾಸಪ್ಪ ಶೆಟ್ಟಿಯ ಮಗಳಾದ ರುದ್ರಾಂಬಿಕೆಯ ಮೇಲೆ ಬೀಳುತ್ತದೆ. ದುಷ್ಟನಾದ ಮಲ್ಲೇಶಿಯನ್ನು ರುದ್ರಾಂಬಿಕೆಯು ಸಮಾಜದ ಕಲ್ಯಾಣಕ್ಕಾಗಿ ವರಿಸಲು ಒಪ್ಪಿಕೊಳ್ಳುತ್ತಾಳೆ. ಎಂದಿನಂತೆ ಗಸ್ತು ತಿರುಗುತ್ತಿದ್ದ ತನ್ನ ಗಂಡನಾದ ಮಲ್ಲೇಶಿಯ ಮುಖದ ಮೇಲೆ ಹೋಳಿ ಹುಣ್ಣಿಮೆಯ ರಾತ್ರಿ ರುದ್ರಾಂಬಿಕೆ ಆಮ್ಲವನ್ನು ಎರಚುತ್ತಾಳೆ.

ಆಗ ಮಲ್ಲೇಶಿಗೆ ಕಣ್ಣು ಕಾಣದಂತಾಗಿ, ಕ್ರೋಧಗೊಂಡು ರುದ್ರಾಂಬಿಕೆಯನ್ನು ಅಟ್ಟಿಸಿಕೊಂಡು ಬರುತ್ತಾನೆ. ಆಗ 12 ಜನ ಸ್ಥಳೀಯರು ಮಲ್ಲೇಶಿಯನ್ನು ಹಿಡಿದು, ಕಟ್ಟಿಹಾಕಿ, ಆತನನ್ನು ಜೀವಂತವಾಗಿ ಸುಡುತ್ತಾರೆ. ಬಳಿಕ ರುದ್ರಾಂಬಿಕೆ ಚಿತೆಗೆ ಹಾರಿ ತನ್ನ ಪ್ರಾಣವನ್ನು ಬಿಡುತ್ತಾಳೆ. ಇದರ ದ್ಯೋತಕವಾಗಿ ಪ್ರತಿ ವರ್ಷ ಬೇಡರ ವೇಷ ಎನ್ನುವ ಜನಪದ ಸಂಪ್ರದಾಯವು ಆಚರಿಸಲ್ಪಡುತ್ತದೆ. ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವುದರ ಹಿಂದಿರುವ ಕಾರಣ ಕೂಡ ಇದೇ ಆಗಿರಬಹುದು.

ಹೋಳಿ ಕುಣಿತ ವಿಶೇಷ…

ಕರಾವಳಿ ಭಾಗದಲ್ಲಿ ಹೋಳಿ ಹುಣ್ಣಿಮೆಯನ್ನು ಸುಗ್ಗಿ ಹಬ್ಬವನ್ನಾಗಿ ಒಂದು ರೀತಿಯ ಜನಪದ ಶೈಲಿಯಲ್ಲಿ ಆಚರಿಸಲಾಗುತ್ತದೆ.
ಸುಗ್ಗಿ ಕುಣಿತದ ತಂಡ ಸಾಂಪ್ರದಾಯಿಕ ಉಡುಗೆಯೊಂದಿಗೆ, ತಲೆಗೆ ಬಣ್ಣದ ತುರಾಯಿಯನ್ನು ಧರಿಸಿಕೊಂಡು, ಪೇಟಗುಮಟೆ ವಾದ್ಯಗಳೊಂದಿಗೆ ಮನೆ ಮನೆಗೆ ತೆರಳಿ ಸುಗ್ಗಿಯ ಸಂಭ್ರಮವನ್ನು ಆಚರಿಸುತ್ತಾರೆ. ಮರಾಠಿ ನಾಯ್ಕ ಸಮುದಾಯವು ಇದರ ಮುಂಚೂಣಿಯಲ್ಲಿರುತ್ತದೆ.

ತಲೆಗೆ ಬಣ್ಣದ ತುರಾಯಿ ಪೇಟವನ್ನು ಕಟ್ಟಿ ಏಳು ದಿನಗಳ ಕಾಲ ಕುಣಿಯುತ್ತಾರೆ. ಇದಕ್ಕೆ ಗುಮಟೆ ಮತ್ತು ಜಾಗಟೆಯ ಸದ್ದು ಮತ್ತಷ್ಟು ಮೆರಗು ನೀಡುತ್ತದೆ. ಈ ಸಂದರ್ಭದಲ್ಲಿ ಸುಗ್ಗಿ ಕುಣಿತದ ತಂಡವು ಪ್ರತಿಯೊಂದು ಮನೆಯಿಂದ ಹಣ, ಊಟ, ತಿಂಡಿ ಮೊದಲಾದವುಗಳನ್ನು ಸ್ವೀಕರಿಸುತ್ತಾರೆ.‌ ಹೋಳಿ ಹಬ್ಬದ ದಿನ ಕರಿದೇವರಿಗೆ ಪೂಜೆ ಮಾಡಿ, ತುರಾಯಿಯನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಆಚರಣೆಯನ್ನು ಮುಗಿಸುತ್ತಾರೆ.

ಇನ್ನು ಮಲೆನಾಡು ಭಾಗದಲ್ಲಿ ಎಲ್ಲೆಡೆಯಂತೆ ಹಿಂದಿನ ದಿನ ಕಾಮದಹನ ಮರುದಿನ ಬೆಳಿಗ್ಗೆ ಬಣ್ಣಗಳ ಎರಚುವಿಕೆಯೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಬಣ್ಣಗಳ ಹಬ್ಬವಾದ ಕಾರಣ ಇದು ಮಕ್ಕಳಿಗೆ ಹೆಚ್ಚು ಮುದವನ್ನು ನೀಡುತ್ತದೆ. ಮಕ್ಕಳ ಸಂಭ್ರಮ ಕಂಡು ಹಿರಿಯರು ಕೂಡ ಆನಂದಪಡುತ್ತಾರೆ. ಪುರಾಣ, ಜನಪದ, ಆಧ್ಯಾತ್ಮ ಮತ್ತು ಬಣ್ಣಗಳ ಮಹತ್ವದ ಮಿಶ್ರಣವೇ ಹೋಳಿ ಹಬ್ಬದ ಆಚರಣೆಯಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ರಾಷ್ಟ್ರ ಮಟ್ಟದಲ್ಲಿ ಜನಮನ ಗೆದ್ದ ನಟ ಮಿತ್ರರು!

ರಾಷ್ಟ್ರ ಮಟ್ಟದಲ್ಲಿ ಜನಮನ ಗೆದ್ದ ನಟ ಮಿತ್ರರು!
– ಗುಂಟೂರಿನಲ್ಲಿ ನಡೆದ ಅಂತರ ರಾಷ್ಟ್ರೀಯ ಭಾರತ ರಂಗಮಹೋತ್ಸವದಲ್ಲಿ ನಾಟಕ ಪ್ರದರ್ಶನ
– ತೀರ್ಥಹಳ್ಳಿ ತಂಡದ ನಾಟಕಕ್ಕೆ ಈಗ ಭಾರೀ ಬೇಡಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಂದ್ರಪ್ರದೇಶ: ವಿನಕೊಂಡದ ಶಾಸಕರೂ ಆಂಧ್ರಪ್ರದೇಶದ ವಿಧಾನಸಭೆಯ ಮುಖ್ಯ ಸಚೇತಕರೂ ಆದ ಬಿ.ಆಂಜನೇಯಲು ಭಾರತ ಸರ್ಕಾರದ ಸಂಸ್ಕ್ರತಿ ಸಚಿವಾಲಯ ಗುಂಟೂರಿನಲ್ಲಿ ಆಯೋಜಿಸಿದ ಅಂತರ ರಾಷ್ಟ್ರೀಯ ಭಾರತ ರಂಗಮಹೋತ್ಸವದಲ್ಲಿ ತೀರ್ಥಹಳ್ಳಿ ಹವ್ಯಾಸಿ ಕಲಾವಿದರ ತಂಡ ನಟ ಮಿತ್ರರು ಕಲಾವಿದರ ಅಭಿನಯದ “ಆ ಊರು ಈ ಊರು” ನಾಟಕ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಗುಂಟೂರು ವಿಜ್ಞಾನ ಕಲಾ ಮಂದಿರದಲ್ಲಿ ಫೆಬ್ರವರಿ 6 ರಿಂದ ಪ್ರಾರಂಭವಾದ ನಾಟಕೋತ್ಸವದಲ್ಲಿ ಈ ನಾಟಕವೂ ಸೇರಿ ವಿವಿಧ ದೇಶ ವಿದೇಶಗಳ ವಿವಿಧಭಾಷೆಗಳ 6 ನಾಟಕಗಳು ಪ್ರದರ್ಶನಗೊಂಡವು. ಪ್ರತೀ ದಿನವೂ ತುಂಬಿದ ಗೃಹ ದಲ್ಲಿ ಪ್ರದರ್ಶನಗಳು ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರ ಉತ್ಸಾಹ ಇಮ್ಮಡಿಗೊಳಿಸಿತು.

ರಾಷ್ಟ್ರ ಮಟ್ಟದಲ್ಲಿ ತೀರ್ಥಹಳ್ಳಿ ತಂಡ ರಾಜ್ಯದಲ್ಲೇ ವಿಭಿನ್ನ ಎಂಬಂತೆ ಪ್ರದರ್ಶನ ನೀಡಿತು.

ಕಲಾವಿದರು: ನಟ ಮಿತ್ರರು ತಂಡದ ಪ್ರಮುಖ ಸಂದೇಶ ಜವಳಿ , ಆಶಾ ಡೇನಿಯಲ್, ವಿಜಯೇಂದ್ರ ಅರ್ಚಕ್‌ (ಧಾರವಾಡ) , ಕೃಷ್ಣ ಎಂ ಜಾಧವ್, ನಿರಂಜನ ವಿ, ಚೇತನ್ ಜಿ, ರಾಹುಲ್ ಬಿ ಪಿ, ಆದಿತ್ಯ ಯು, ವಿಶ್ರಾಂತಿ ವಿ ಪೈ, ಸುಬ್ರಮಣ್ಯ ಜಿ ಆರ್, ಮನೋಜ್ ಬಿ ಬಿ, ಪೃಥ್ವಿ ಹೊಸಗದ್ದೆ, ಕ್ಷಿತಿಜ್, ವಿಜಯಕುಮಾರ್ (ಶಿವಾಜಿ), ಕಾರ್ತಿಕ್ ಕುಮಾರ್ ಟಿ ಆರ್, ಲಕ್ಷ್ಮೀ ರವಿಶಂಕರ್, ಧನ್ಯಶ್ರೀ, ಸೃಷ್ಠಿ ರೆಡ್ಡಿ, ಮನು ಟಿ ಜಿ, ಶ್ರೇಷ್ಠ, ದಿವ್ಯಶ್ರೀ ಅಭಿನಯ ಗಮನ ಸೆಳೆಯಿತು. ಈಗಾಗಲೇ ರಾಜ್ಯದಲ್ಲಿಅನೇಕ ಬೇಡಿಕೆ ನಾಟಕ ಇದಾಗಿದೆ.

Categories
ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

10 ವರ್ಷ ಹಳೆ ಆಧಾ‌ರ್ ಕಾರ್ಡ್..ಮತ್ತೆ ಬೆರಳಚ್ಚು ಕೊಡಬೇಕು!

10 ವರ್ಷ ಹಳೆ ಆಧಾ‌ರ್ ಕಾರ್ಡ್..ಮತ್ತೆ ಬೆರಳಚ್ಚು ಕೊಡಬೇಕು!
– ಬಯೋಮೆಟ್ರಿಕ್ ನವೀಕರಣ ಅಗತ್ಯ: ನಕಲಿ ಆಧಾರ್ ತಡೆಗೆ ಕ್ರಮ
– ಅಡ್ರೆಸ್, ನಂಬರ್, ಮಾಹಿತಿ ಕೂಡ ಸರಿ ಪಡಿಸಲು ಅವಕಾಶ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಆಧಾ‌ರ್ ಬಳಕೆದಾರರು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕು. ಕಳೆದ 10 ವರ್ಷಗಳಲ್ಲಿ ತಮ್ಮ ಬೆರಳಚ್ಚುಗಳು ಮತ್ತು ಐರಿಸ್ ಸ್ಕ್ಯಾನ್ ಅನ್ನು ನವೀಕರಿಸದ ಜನರು ಸಾಧ್ಯವಾದಷ್ಟು ಬೇಗ ಅದನ್ನು ಮಾಡಬೇಕೆಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸಿಮ್ ಕಾರ್ಡ್ ಪಡೆಯುವವರೆಗೆ, ಸರ್ಕಾರಿ ಯೋಜನೆಗಳು ಅಥವಾ ಸಬ್ಸಿಡಿಗಳನ್ನು ಪಡೆಯುವವರೆಗೆ ಆಧಾ‌ರ್ ಎಲ್ಲೆಡೆ ಅಗತ್ಯವಿದೆ.

ಇದರೊಂದಿಗೆ, ಆಧಾ‌ರ್ ನಿಯಮಗಳಲ್ಲಿನ ಬದಲಾವಣೆಗಳು ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತವೆ. ಆಧಾ‌ರ್ ಅನ್ನು ಸುರಕ್ಷಿತವಾಗಿ ಮತ್ತು ಡಿಜಿಟಲ್ ಆಗಿ ಬಳಸಲು ಫೆಬ್ರವರಿ 2026 ರಲ್ಲಿ ಯುಐಡಿಎಐ ಅನೇಕ ಬದಲಾವಣೆಗಳನ್ನು ಮಾಡಿದೆ. ಆಧಾರ್ ಅನ್ನು ನಿಯಮಿತವಾಗಿ ಬಳಸುವವರು ಈ ಬದಲಾವಣೆಗಳ ಬಗ್ಗೆ ತಿಳಿದಿರಬೇಕು.

ಕೆಲವೊಮ್ಮೆ ಬೆರಳಚ್ಚುಗಳ ಮೂಲಕ ಆಧಾರ್ ಪರಿಶೀಲನೆಯ ಸಮಯದಲ್ಲಿ ಹಳೆಯ ಬಯೋಮೆಟ್ರಿಕ್ ಡೇಟಾ ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಇದು ಬ್ಯಾಂಕಿಂಗ್, ಸಿಮ್ ಮತ್ತು ಇತರ ಸರ್ಕಾರಿ ಉದ್ದೇಶಗಳಿಗಾಗಿ ಆಧಾರ್ ಬಳಸುವಾಗ ಪರಿಶೀಲನೆ ವೈಫಲ್ಯಕ್ಕೆ ಕಾರಣವಾಗುತ್ತದೆ. 15 ವರ್ಷ ವಯಸ್ಸಿನ ನಂತರ ಮಕ್ಕಳು ತಮ್ಮ ಬಯೋಮೆಟ್ರಿಕ್ಸ್ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ತೆಗೆದುಕೊಂಡ ಬಯೋಮೆಟ್ರಿಕ್ ವಿವರಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ಅವರು ಅವುಗಳನ್ನು ಮತ್ತೆ ಒದಗಿಸಬೇಕಾಗುತ್ತದೆ.

UIDAI ಆಧಾರ್ eKYC ಪ್ರಕ್ರಿಯೆಯನ್ನು ಸಹ ಅಪ್ಲೋಡ್ ಮಾಡಿದೆ. ಈ ಹಿಂದೆ, ಬೆರಳಚ್ಚುಗಳು ಮತ್ತು ಐರಿಸ್ ಆಧರಿಸಿ ಪರಿಶೀಲನೆ ಮಾಡಲಾಗುತ್ತಿತ್ತು. ಆದರೆ ಹಳೆಯ ಬೆರಳುಗಳನ್ನು ಹೊಂದಿರುವ ವೃದ್ಧರು ಮತ್ತು ಕೆಲಸಗಾರರು ಬಯೋಮೆಟ್ರಿಕ್ ಪರಿಶೀಲನೆಯ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಪರಿಹರಿಸಲು, UIDAI ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ವಿಸ್ತರಿಸುತ್ತಿದೆ. ಇದರೊಂದಿಗೆ, ನಿಮ್ಮ ಮುಖವನ್ನು ಗುರುತನ್ನು ಪರಿಶೀಲಿಸಲು ಹೆಚ್ಚುವರಿ ಆಯ್ಕೆಯಾಗಿ ಬಳಸಬಹುದು. ಇದು eKYC ಅನ್ನು ವೇಗವಾಗಿ ಪೂರ್ಣಗೊಳಿಸುತ್ತದೆ ಮತ್ತು ಬೆರಳಚ್ಚುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು. ನೀವು ಎಲ್ಲಿಂದಲಾದರೂ ನಿಮ್ಮ ಆಧಾರ್ ಸಂಖ್ಯೆಯನ್ನು ನವೀಕರಿಸಬಹುದು. ಮೊದಲು, ನಿಮ್ಮ ವಿವರಗಳನ್ನು ನವೀಕರಿಸಲು ನೀವು ಆಧಾರ್ ಕೇಂದ್ರ ಅಥವಾ UIDAI ಪೋರ್ಟಲ್ಲೆ ಹೋಗಬೇಕಾಗಿತ್ತು. ಆದರೆ ಈಗ, ಈ ಆಧಾ‌ರ್ ಅಪ್ಲಿಕೇಶನ್ ಬಳಸಿ, ನೀವು ನಿಮ್ಮ ಮೊಬೈಲ್ಕಿಂದ ನಿಮಿಷಗಳಲ್ಲಿ ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಬದಲಾಯಿಸಬಹುದು. ಈಗ, ನೀವು ನಿಮ್ಮ ಎಲ್ಲಾ ಕುಟುಂಬ ಸದಸ್ಯರ ಆಧಾ‌ರ್ ವಿವರಗಳನ್ನು ಒಂದೇ ಸ್ಥಳದಲ್ಲಿ ಇರಿಸಬಹುದು.

ಪ್ರತಿಯೊಬ್ಬರಿಗೂ ಶೇರ್ ಮಾಡಿರಿ..

Categories
ಬೆಂಗಳೂರು ಬ್ರೇಕಿಂಗ್ ನ್ಯೂಸ್ ಮಂಗಳೂರು ಮಲ್ನಾಡ್ ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ಅ.1 ರಿಂದ ದೇಶಾದ್ಯಂತ ಆನ್‌ಲೈನ್ ಬೆಟ್ಟಿಂಗ್ ಗೇಮ್ ನಿಷೇಧ

ಅ.1 ರಿಂದ ದೇಶಾದ್ಯಂತ ಆನ್‌ಲೈನ್ ಬೆಟ್ಟಿಂಗ್ ಗೇಮ್ ನಿಷೇಧ
– ಗೇಮಿಂಗ್ ಕಂಪನಿಗಳ ಜತೆ ಚರ್ಚಿಸಿಯೇ ನಿಯಮ ರಚನೆ
– ನಿಯಮಗಳು ಉಲ್ಲಂಘಿಸುವವರಿಗೆ ಕಾನೂನಿನ ಮೂಲಕ ಶಿಕ್ಷೆ

NAMMUR EXPRESS NEWS
ನವದೆಹಲಿ: ಈ ಸಲದ ಸಂಸತ್ ಕಲಾಪದ ವೇಳೆ ಆನ್‌ಲೈನ್ ಗೇಮಿಂಗ್ ಬ್ಯಾನ್‌ ಮಾಡಿ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಿದ ಬೆನ್ನಲ್ಲೇ ಈಗ ಅಕ್ಟೋಬರ್ 1ರಿಂದ ನಿಯಮಗಳು ಜಾರಿಗೆ ಬರಲಿದ್ದು, ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಕಾನೂನನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ನಂತರವೂ ಆನ್‌ಲೈನ್ ಗೇಮಿಂಗ್ ಕಂಪನಿಗಳು ಮತ್ತು ಅವುಗಳ ಪಾಲುದಾರರ ಜತೆ ನಾವು ಮಾತನಾಡಿದ್ದೇವೆ. ಈ ಚರ್ಚೆಯ ವೇಳೆಯೇ ನಿಯಮಗಳನ್ನು ಅಂತಿಮ ಮಾಡಲಾಗಿದೆ. ಅವು ಜಾರಿಯಾಗುವ ಮುನ್ನ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸಚಿವರು ತಿಳಿಸಿದರು. ನಿಯಮ ಜಾರಿಗೂ ಮುನ್ನ ನಡೆಯಲಿರುವ ಮತ್ತೊಂದು ಸುತ್ತಿನ ಚರ್ಚೆಯಲ್ಲಿ ಹೆಚ್ಚಿನ ಸಮಯಾವಕಾಶಬೇಕು ಎಂದು ಅನಿಸಿದರೆ, ಅದನ್ನು ಪರಿಗಣಿಸಲಾಗುವುದು. ಆದರೆ ಸದ್ಯದ ಮಟ್ಟಿಗೆ ಅಕ್ಟೋಬರ್ 1ರಿಂದಲೇ ಶಾಸನ ಹಾಗೂ ಅದರ ನಿಯಮವನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಆಗಸ್ಟ್ ತಿಂಗಳಲ್ಲಿ ಎಲ್ಲ ರೀತಿಯ ಆನ್‌ಲೈನ್ ಬೆಟ್ಟಿಂಗ್ ಗೇಮ್ ಗಳನ್ನು ನಿಷೇಧಿಸುವ ಕಾನೂನನ್ನು ಸಂಸತ್ತಿನ ಉಭಯ ಸದನಗಳಲ್ಲಿ ಕೇಂದ್ರ ಸರ್ಕಾರ ಮಂಡಿಸಿತ್ತು. ಅದಕ್ಕೆ ಆಗಸ್ಟ್ 22ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಅಂಕಿತ ಹಾಕಿದ್ದರು. ನಿಷೇಧಿಸಿದೆಯಾದರೂ ಹಣವನ್ನು ಹಾಕಿ ಆಡುವ ಆನ್‌ಲೈನ್ ಗೇಮ್‌ಗಳ ಪ್ರಚಾರ ಪ್ರಚಾರ ಹಾಗೂ ಅವುಗಳ ಹಣಕಾಸು ವಹಿವಾಟನ್ನು ಕೇಂದ್ರ ಸರ್ಕಾರ ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆನ್‌ಲೈನ್ ಆಟಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಹಣಕೊಟ್ಟು ಆಡುವ ಬೆಟ್ಟಿಂಗ್ ಗೇಮ್ಗಳು ಹಾಗೂ ಆ್ಯಪ್‌ಗಳ ಕಾರಣ ದೇಶದ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ ಹಾಗೂ ಮನೆ ಮಠಗಳನ್ನು ಕಳೆದುಕೊಂಡ ಉದಾಹರಣೆಗಳು ಇವೆ. ಈಗ ಈ ಹೊಸ ಕಾನೂನಿನಿಂದ ಅಂಥ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಲಿವೆ.

– ಹೊಸ ಕಾನೂನು?

*ಹಣ ಕೊಟ್ಟು ಆಡುವ ಆನ್‌ಲೈನ್ ಗೇಮಿಂಗ್ ದೇಶಾದ್ಯಂತ ನಿಷೇಧ

*ಇಂತಹ ಆಟಗಳನ್ನು ಆಡುವುದು ಅಥವಾ ಪರಿಚಯಿಸುವುದು ಅಪರಾಧ

*ಹೊಸ ಕಾನೂನಿನ ಪ್ರಕಾರ ಈ ಅಪರಾಧ ಜಾಮೀನು ರಹಿತವಾಗಿ ಇರುತ್ತದೆ.

* ಈ ಆನ್‌ಲೈನ್ ಬೆಟ್ಟಿಂಗ್ ಆಟಗಳಿಗೆ ಲಿಂಕ್ ಆಗಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡ ಕಾನೂನಿನಡಿ ನಿರ್ಬಂಧಿಸಲಾಗುತ್ತದೆ.