ಬೀರೂರು: ಪಿಎಸ್‌ಐ ಬಳಸುತ್ತಿದ್ದ ಜೀಪ್ ವಾಪಸ್ ಪಡೆದ ಇಲಾಖೆ
-ಬಾಳೆಹೊನ್ನೂರು: ಯುವತಿಗೆ ಚಾಕು ಇರಿತ
-ಮೂಡಿಗೆರೆ: ಗಾಂಜಾ ಮಾರಾಟ ಓರ್ವ ಆರೋಪಿ ಬಂಧನ
-ಮೂಡಿಗೆರೆ: ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ಎಸ್ಟೇಟ್ ಮಾಲೀಕ
NAMMUR EXPRESS NEWS
ಬೀರೂರು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಂತೆ ಹದಿನೈದು ವರ್ಷಗಳ ಹಳೆಯ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿರುವ ಕಾರಣ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪೊಲೀಸ್ ಠಾಣೆಯ ಪಿ.ಎಸ್.ಐ ಬಳಸುತ್ತಿದ್ದ ಜೀಪ್ ಅನ್ನು ಹಿಂಪಡೆಯಲಾಗಿದ್ದು, 15 ದಿನಗಳು ಕಳೆದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಪಿ.ಎಸ್.ಐ ಬೈಕ್ ನಲ್ಲಿ ಸಂಚರಿಸುವಂತಾಗಿದೆ. ಬೀರೂರು ಠಾಣೆಗೆ 2007 ನೇ ಸಾಲಿನಲ್ಲಿ ಪಿ.ಎಸ್.ಐ ತಮ್ಮ ಸರಹದ್ದಿನಲ್ಲಿ ಸಂಚರಿಸಿ ಬಂದೋಬಸ್ತ್ ನೀಡಲು ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ 17 ವರ್ಷಗಳಿಂದ ಈ ವಾಹನ ಇಲಾಖೆಗೆ ಬಳಸಿಕೊಳ್ಳಲಾಗಿತ್ತು. ಆದರೆ ಈಗ ಅದು ಸುವ್ಯವಸ್ಥೆಯಲ್ಲಿಲ್ಲ ಎನ್ನುವ ಕಾರಣಕ್ಕೆ ವಾಹನವನ್ನು ಹಿಂಪಡೆಯಲಾಗಿದೆ.
ಪರಿಸರ ಮಾಲಿನ್ಯ ತಡೆಯಲು ವಾಹನ ಹಿಂಪಡೆದಿರುವುದು ಸರಿಯಷ್ಟೆ, ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಹಿಂಪಡೆದಿದ್ದರೆ ಯಾವುದೇ ಸಮಸ್ಯೆಗಳು ಇರುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು ಇನ್ನು ಈ ಕುರಿತು ಬೀರೂರು ಪೊಲೀಸ್ ಪಿ.ಎಸ್.ಐ ಸಜಿತ್ ಕುಮಾರ್ ಪ್ರತಿಕ್ರಿಯಿಸಿ, ವಾಯು ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ 15 ವರ್ಷ ಹಳೆಯ ವಾಹನಗಳನ್ನು ಚಲಾಯಿಸುವಂತಿಲ್ಲ ಎನ್ನುವುದು ಹಸಿರುಪೀಠದ ಆದೇಶವಾಗಿದ್ದು, ಇಲಾಖೆ ವತಿಯಿಂದ ಹೊಸ ವಾಹನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡುವವರೆಗೂ ದ್ವಿಚಕ್ರ ಅಥವಾ ಗಸ್ತು ವಾಹನವಾಗಿರುವ 112 ಬಳಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದರು. ಜಿಲ್ಲೆಯ 5-6 ಠಾಣೆಗಳ ಉಪನಿರೀಕ್ಷಕರ ಜೀಪುಗಳು ಅವಧಿ ಮೀರಿದೆ. ಅಂತಹ ವಾಹನಗಳನ್ನು ಗುರುತಿಸಿ ಹಿಂಪಡೆಯಲಾಗಿದೆ. ಕೆಲವೇ ದಿನಗಳಲ್ಲಿ ಹೊಸ ವಾಹನಗಳನ್ನು ನೀಡಲಾಗುತ್ತದೆ. ಅಲ್ಲಿಯವರೆಗೆ 112 ಮತ್ತು ಇ.ಆರ್.ಎಸ್.ಎಸ್ ವಾಹನಗಳನ್ನು ಬಳಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ತಿಳಿಸಿದರು.
ಬಾಳೆಹೊನ್ನೂರು: ಯುವತಿಗೆ ಚಾಕು ಇರಿತ
ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡು ಗ್ರಾಮದ ಯುವತಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಗಳನ್ನು ಗುರವಾರ ಪೊಲೀಸರು ಬಂಧಿಸಿದ್ದಾರೆ. ಶೋಧನ್, ಕೃಷ್ಣ ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಮನೆಯಿಂದ ರಾತ್ರಿ ಹೊರ ನಿಂತಿದ್ದಾಗ ಯುವತಿಯ ಕುತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದರು. ಈ ಕುರಿತು ಯುವತಿಯ ಪೋಷಕರು ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಗುರವಾರ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಾಳು ಯುವತಿ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಡಿಗೆರೆ: ಗಾಂಜಾ ಮಾರಾಟ ಓರ್ವ ಆರೋಪಿ ಬಂಧನ
ಮೂಡಿಗೆರೆ: ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ನಡೆದಿದೆ. ಚಾರ್ಮಾಡಿ ಮಾರ್ಗವಾಗಿ ಬಣಕಲ್ ಕಡೆಗೆ ಬರುತ್ತಿದ್ದ ವ್ಯಕ್ತಿಯನ್ನು PSI ಬಣಕಲ್ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ತರುವೆ ಗ್ರಾಮದಲ್ಲಿ ವಶಕ್ಕೆ ಪಡೆದುಕೊಂಡು, ಆರೋಪಿಯಿಂದ 85 ಗ್ರಾಂ ಗಾಂಜಾ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.
ಮೂಡಿಗೆರೆ: ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ಎಸ್ಟೇಟ್ ಮಾಲೀಕ
ಮೂಡಿಗೆರೆ: ಕಾಫಿ ತೋಟದ ಎದುರು ಪೆಟ್ಟಿಗೆ ಅಂಗಡಿ ತೆರದಿದ್ದಕ್ಕೆ ಆಕ್ರೋಶಗೊಂಡ ತೋಟದ ಮಾಲೀಕ ಅಂಗಡಿಯನ್ನು ಧ್ವಂಸ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದಲ್ಲಿ ನಡೆದಿದೆ. ವಿದ್ಯಾಶ್ರೀ ಸತ್ಯೇಂದ್ರ ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ವ್ಯಕ್ತಿ. ಅಂಗವಿಕಲವಿರುವ ಪತ್ನಿಗಾಗಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು, ಪತಿ ರಾಜು 15 ದಿನಗಳ ಹಿಂದೆ ರಸ್ತೆ ಬದಿ ಅಂಗಡಿ ತೆರೆದಿದ್ದರು. ಇದೀಗ ಕಾಫಿ ತೋಟದ ಮಾಲೀಕ ವಿದ್ಯಾಶ್ರೀ ಸತ್ಯೇಂದ್ರ ಅಂಗಡಿಯಲ್ಲಿನ ಸಾಮಾಗ್ರಿಗಳನ್ನು ಚೆಲ್ಲಿ ಧ್ವಂಸಗೊಳಿಸಿದ್ದಾರೆ ಎಂದು ಪೆಟ್ಟಿಗೆ ಅಂಗಡಿಯ ಮಹಿಳೆ ಆರೋಪ ಮಾಡಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.