Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ

ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ
– ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಸಾಧನೆಗೈದ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ
– ತಾಲೂಕಿನ ಹಳ್ಳಿ-ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಜನ

NAMMUR EXPRESS NEWS
ತೀರ್ಥಹಳ್ಳಿ : ಜಿಲ್ಲಾಡಳಿತ ಶಿವಮೊಗ್ಗ, ತಾಲೂಕು ಆಡಳಿತ ತೀರ್ಥಹಳ್ಳಿ, ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ ಹಾಗೂ ತಾಲೂಕು ಪಂಚಾಯಿತಿ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ತೀರ್ಥಹಳ್ಳಿಯಲ್ಲಿ ಫೆ.10 ರ ಇಂದು ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸಾರ್ವಜನಿಕರು ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೂಡ ಭಾಗವಹಿಸಿದ್ದರು. ಸರ್ಕಾರದ ಈ ಗ್ಯಾರಂಟಿ ಯೋಜನೆಯ ಬಗ್ಗೆ ಫಲಾನುಭವಿಗಳು ಮಾತನಾಡಿ ಈ ಯೋಜನೆಯಿಂದ ತುಂಬಾ ಅನುಕೂಲವಾಗಿದೆ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ ಎದ್ದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಯಾರಿಗೆ ಗ್ಯಾರಂಟಿ ಯೋಜನೆ ಸಿಕ್ಕಿಲ್ಲವೋ ಅವರಿಗೂ ಕೂಡ ಗ್ಯಾರಂಟಿ ಯೋಜನೆ ಸಿಗಬೇಕು ಎಂದು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಯಾರಿಗೆ ಈ ಯೋಜನೆ ತಲುಪಬೇಕೋ ಅವರಿಗೆ ತಲುಪಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ನಿಮ್ಮ ಸೇವೆ ಮಾಡಲು ನಾವು ಸದಾ ಸಿದ್ಧ ಎಂದರು. ಐದು ವರ್ಷ ನಮ್ಮ ಪಕ್ಷ ಇದ್ದೇ ಇರುತ್ತದೆ, ಪಕ್ಷದ ಎಲ್ಲ ಗ್ಯಾರಂಟಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಅವರು ಮಾತನಾಡಿ ಈ ಕಾರ್ಯಕ್ರಮ ಮಾಡುವ ಅನಿವಾರ್ಯತೆ ಇತ್ತು.

ಸರ್ಕಾರ 5 ಗ್ಯಾರಂಟಿಗಳನ್ನು ತಂದಂತಹ ಸಂದರ್ಭದಲ್ಲಿ ಪ್ರತಿ ವ್ಯಕ್ತಿಗೂ ಅದು ದೊರಕಿದೆಯಾ ಎನ್ನುವುದಕ್ಕೆ ಸರ್ಕಾರ ಈ ಒಂದು ಸಮಾವೇಶವನ್ನು ಮಾಡುವುದರ ಮೂಲಕ ಯಾರಿಗೆ ಯೋಜನೆ ತಲುಪಿಲ್ಲವೋ ಅವರಿಗೂ ತಲುಪಿಸುವಂತಹ ವ್ಯವಸ್ಥೆ ಮಾಡಿರುವುದು ಒಳ್ಳೆಯ ಕೆಲಸ. ದೊಡ್ಡ ಮಟ್ಟದ ಸಮಾವೇಶ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯ. ಈ ಯೋಜನೆಗಳಿಂದ ನಮಗೆ ತುಂಬಾ ಅನುಕೂಲವಾಗುತ್ತಿದೆ. ಮಾತಿನಂತೆ ನಡೆದ ಸಿದ್ದರಾಮಯ್ಯ ಸರ್ಕಾರ. ಈ ಯೋಜನೆಗಳನ್ನು ಕೊಟ್ಟಂತ ಸಿದ್ದರಾಮಯ್ಯ ಸರ್ಕಾರಕ್ಕೆ ಎಲ್ಲ ಮಹಿಳೆಯರ ಪರವಾಗಿ ನಾನು ಅಭಿನಂದನೆಯನ್ನು ತಿಳಿಸುತ್ತೇನೆ ಎಂದರು.

ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರೆಹಮತ್ತುಲ್ಲಾ ಅಸಾದಿ ಅವರು ಮಾತನಾಡಿ ಕರ್ನಾಟಕ ಸರ್ಕಾರದ ವತಿಯಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಪಟ್ಟಣ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳನ್ನು ಎಲ್ಲ ಜನರಿಗೂ ತಲುಪಿಸುವಂತಹ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಐದು ಯೋಜನೆಗಳನ್ನು ತುಂಬಾ ಕಡಿಮೆ ಅವಧಿಯಲ್ಲಿ, ವ್ಯವಸ್ಥಿತವಾಗಿ ಸರ್ಕಾರ ಜಾರಿಗೆ ತಂದಿದೆ ಎಂದರು. ಶಿವಮೊಗ್ಗ ಡಿಸಿ ಗುರುದತ್ ಹೆಗ್ಡೆ ಅವರು ಮಾತನಾಡಿ ತೀರ್ಥಹಳ್ಳಿ ಒಂದು ಸುಂದರವಾದ ತಾಲೂಕು ಇಲ್ಲಿ ಬರಲು ಬಹಳ ಖುಷಿ ಆಗುತ್ತದೆ, ಗ್ಯಾರಂಟಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಇಲ್ಲಿಯವರೆಗೂ ಎಲ್ಲೂ ನಡೆದಿಲ್ಲ. ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಗೃಹ ಜ್ಯೋತಿಗೆ 4,58,848 ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. 105 ಕೋಟಿ ದೊರಕಿದೆ ಎಂದರು. ತೀರ್ಥಹಳ್ಳಿ ತಾಲೂಕಿನಲ್ಲಿ 38,718 ಯೋಜನೆ ಪಡೆದುಕೊಂಡಿದ್ದಾರೆ. ಅದೇ ರೀತಿ ಗೃಹಲಕ್ಷ್ಮಿಯಲ್ಲಿ ಶಿವಮೊಗ್ಗದಲ್ಲಿ 3,84,952 ಜನ ಫಲಾನುಭವಿಗಳು ಪಡೆದುಕೊಂಡಿದ್ದಾರೆ ಸುಮಾರು 350 ಕೋಟಿ ದೊರಕಿದೆ. 31ಕೋಟಿ 70 ಲಕ್ಷ ರೂ ಹಣವನ್ನು ತೀರ್ಥಹಳ್ಳಿಯಲ್ಲಿ ಗೃಹಲಕ್ಷ್ಮಿಗೆ ಪಡೆದುಕೊಂಡಿದ್ದಾರೆ. ಸುಮಾರು ಒಂದು ಕೋಟಿ 79 ಲಕ್ಷ 55 ಸಾವಿರ ಜನ ಮಹಿಳೆಯರು ಉಚಿತ ಬಸ್ ಬಳಸಿಕೊಂಡಿದ್ದಾರೆ. ಅದೇ ರೀತಿ ಅನ್ನ ಭಾಗ್ಯ ಯೋಜನೆಯಲ್ಲಿ ತೀರ್ಥಹಳ್ಳಿಯಲ್ಲಿ 27,154 ಫಲಾನುಭವಿಗಳಿದ್ದು ಸುಮಾರು ಒಂದೂವರೆ ಕೋಟಿ ಹಣ ಫಲಾನುಭವಿಗಳಿಗೆ ದೊರಕಿದೆ. ಎಲ್ಲ ಜನರಿಗೂ ಈ ಯೋಜನೆಯನ್ನು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಡಿಸಿ ಗುರುದತ್ ಹೆಗ್ಡೆ, ಪ ಪಂ ಅಧ್ಯಕ್ಷರಾದ ಗೀತಾ ರಮೇಶ್, ಪ ಪಂ ಉಪಾಧ್ಯಕ್ಷರಾದ ರೆಹಮದ್ ಉಲ್ಲಾ ಅಸಾದಿ, ಕಾರ್ಯನಿರ್ವಹಣಾಧಿಕಾರಿ ಶೈಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹ ಸುಧಾಕರ್, ಡಿಸ್ಟಿಕ್ ಆಫೀಸರ್ ಸುಮಾ, ಡಿಸ್ಟಿಕ್ ಎಂಪ್ಲಾಯ್ಮೆಂಟ್ ಆಫೀಸರ್, ಪಟ್ಟಣ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಹಲವು ಸಂಘಟನೆಗಳ ಪ್ರಮುಖರು, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಅಧಿಕಾರಿ ವರ್ಗ, ಸದಸ್ಯರು ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.