ಕರಾವಳಿ ಟಾಪ್ ನ್ಯೂಸ್
* ಉಡುಪಿ: ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಸಾವು
* ಮಂಗಳೂರು: ಸನ್ಯಾಸಿ ವೇಷ ಧರಿಸಿ ಜನರಿಂದ ಹಣ ವಸೂಲಿ
* ಬೆಳ್ತಂಗಡಿ: ಪತ್ನಿಯನ್ನು ಕೊಂದವನಿಗೆ ನ್ಯಾಯಾಂಗ ಬಂಧನ
* ಸುಳ್ಯ: ನೀರಿನ ಪಾಲಾದ ದಂತ ವೈದ್ಯ ವಿದ್ಯಾರ್ಥಿ.
* ಕಾಪು: ಅಪ್ರಾಪ್ತೆಯ ಮೇಲೆ ಅತ್ಯಾಚಾರ; ದುಷ್ಕರ್ಮಿಗೆ ಕಠಿಣ ಶಿಕ್ಷೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಚಂದ್ರಶೇಖರ ಎನ್ನುವ ವ್ಯಕ್ತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ಸಮಯದಲ್ಲಿ ಕಾಲು ಜಾರಿ ನೀರಿಗೆ ಬಿದ್ದು, ಮೃತಪಟ್ಟ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ಚಂದ್ರಶೇಖರ್ ಮನೆಗೆ ಬಾರದಿರುವುದನ್ನು ಕಂಡು ಪತ್ನಿ ಮತ್ತು ಮಗಳು ಹುಡುಕಾಟ ನಡೆಸಿದ ಸಂದರ್ಭದಲ್ಲಿ, ಕಲ್ಲಟ್ಟೆ ಸೇತುವೆ ಬಳಿಯ ಗದ್ದೆಯೊಂದರಲ್ಲಿ ಅವರ ಮೃತದೇಹ ಕಂಡುಬಂದಿದೆ. ವಿಚಾರಕ್ಕೆ ಸಂಬಂಧಿಸಿದಂತೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಗುಜರಾತ್ ರಾಜ್ಯದ ನೋಂದಣಿ ಸಂಖ್ಯೆ ಇರುವ ಕಾರೊಂದರಲ್ಲಿ, ಕಳೆದೆರಡು ದಿನಗಳಿಂದ ವ್ಯಕ್ತಿಯೊಬ್ಬರು ಆಗಮಿಸಿ, ಅಂಗಡಿ ಮತ್ತು ಕಚೇರಿಗೆ ತೆರಳಿ, ಹಣವನ್ನು ವಸೂಲಿ ಮಾಡುವುದು ನಡೆಯುತ್ತಿದೆ. ಸನ್ಯಾಸಿ ವೇಷದಲ್ಲಿರುವ ಈತ ಜಪ್ಪಿನಮೊಗರು, ಪಂಪ್ ವೆಲ್, ಕಂಕನಾಡಿ ಭಾಗಗಳಲ್ಲಿ ತಿರುಗಾಡಿ, ರಸ್ತೆಯಲ್ಲಿ ಸಿಗುವ ಪದಾಚಾರಿಗಳನ್ನು ನಿಲ್ಲಿಸಿ, ಆಶೀರ್ವಾದ ಪಡೆಯುವಂತೆ ಸೂಚಿಸಿ, ಬಳಿಕ ಸುಗಂಧ ದ್ರವ್ಯವೊಂದನ್ನು ಲೇಪಿಸಿ, ವಿಭೂತಿ ಹಚ್ಚಿ, ದಕ್ಷಿಣೆ ನೀಡುವಂತೆ ಕೇಳಿ ಹಣವನ್ನು ಲಪಟಾಯಿಸುತ್ತಿದ್ದಾನೆ. ಅಂಗಡಿ ಮತ್ತು ಕಚೇರಿಗಳಲ್ಲೂ ಇದೇ ರೀತಿ ತನ್ನ ಚಟುವಟಿಕೆಯನ್ನು ಮುಂದುವರಿಸಿದ್ದಾನೆ. ಕೆಲವರು ಆ ಕ್ಷಣಕ್ಕೆ ಮರುಳಾಗಿ, ಹಣವನ್ನು ತೆತ್ತು, ಬಳಿಕ ತಮ್ಮ ಮೂರ್ಖತನಕ್ಕೆ ಮರುಗುತ್ತಿದ್ದಾರೆ. ಪೊಲೀಸರಿಗೆ ಈ ವಿಚಾರವನ್ನು ಕುರಿತು ಕೇಳಿದಾಗ ಇಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕು ಇಂತಹ ವ್ಯಕ್ತಿಗಳನ್ನು ಅಂಗಡಿ ಕಚೇರಿಗಳಿಗೆ ಸೇರಿಸಿಕೊಳ್ಳಬೇಡಿ ಮತ್ತು ಅಪರಿಚಿತ ವ್ಯಕ್ತಿಗಳನ್ನು ಸುಲಭವಾಗಿ ನಂಬಬೇಡಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳ್ತಂಗಡಿ: ಕೌಟುಂಬಿಕ ಕಲಹದಿಂದ ಉದ್ರೇಕಕ್ಕೆ ಒಳಗಾಗಿ, ರಫಿಕ್ ಎನ್ನುವ ವ್ಯಕ್ತಿಯು ತನ್ನ ಪತ್ನಿಯಾದ ಝೀನತ್ ಳನ್ನು ಚೂರಿನಿಂದ ಇರಿದು ಕೊಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಝೀನತ್ ಳಿಗೆ ಹಾರಿಸ್ ಎನ್ನುವವನೊಡನೆ ಅಕ್ರಮ ಸಂಬಂಧವಿದ್ದು, ಅದು ರಫಿಕ್ ಗಮನಕ್ಕೆ ಬಂದಿತ್ತು. ಗಂಡ ಹೆಂಡತಿ ನಡುವೆ ಈ ವಿಚಾರವಾಗಿ ಕಲಹ ಉಂಟಾದಾಗ, ರಫಿಕ್ ನ ಕೋರಿಕೆಯ ಮೇರೆಗೆ ಊರಿನ ಮುಖಂಡರು ಹಾರಿಸ್ ನನ್ನು ಭೇಟಿಯಾಗಿ, ಝೀನತ್ ಳನ್ನು ಪುನಃ ಸಂಪರ್ಕಿಸ ಬೇಡ ಎಂದು ಅವನೊಂದಿಗೆ ಉತ್ತಮ ರೀತಿಯಲ್ಲಿ ಮಾತುಕತೆ ನಡೆಸಿದ್ದರು. ಆದರೂ ರಫಿಕ್ ಕೆಲಸಕ್ಕೆ ತೆರಳಿದ್ದು, ಮರಳಿ ಮನೆಗೆ ಬಂದಾಗ ಝೀನತ್ ಇಲ್ಲದ್ದನ್ನು ಕಂಡು, ಇಬ್ಬರ ನಡುವಿನ ಸಂಪರ್ಕ ಇನ್ನೂ ಮುಂದುವರಿದಿರುವುದು ತಿಳಿದ ಬಂದಿತು. ರಫಿಕ್ ಹಾರಿಸ್ ಮೇಲೆ ಹಲ್ಲೆ ನಡೆಸಲು ಹೋದಾಗ ಆತ ಪರಾರಿಯಾಗಿದ್ದ. ಝೀನತ್ ಳ ಮೇಲೆ ತನ್ನ ಆಕ್ರೋಶವನ್ನು ಕೊಲೆಯ ರೂಪದಲ್ಲಿ ತೋರಿಸಿದ್ದ. ಈಗ ಕೊಲೆಗಾರನಾದ ರಫಿಕ್ ನ್ಯಾಯಾಂಗ ಬಂಧನದಲ್ಲಿದ್ದು, ಒಂದು ಕುಟುಂಬವನ್ನು ಹಾಳು ಮಾಡಿದ ಮತ್ತು ಮದುವೆಯಾದ ಹೆಂಗಸಿನೊಂದಿಗೆ ಅಕ್ರಮ ಸಂಬಂಧ ಹೊಂದಿದ ಹಾರಿಸ್ ಕೂಡ ಒಬ್ಬ ಅಪರಾಧಿಯೆ. ಪೊಲೀಸರು ಆತನನ್ನು ಹುಡುಕಿ, ಅವನಿಗೂ ಶಿಕ್ಷೆಯನ್ನು ನೀಡಬೇಕೆಂದು ಸ್ಥಳೀಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸುಳ್ಯ: ತಾಲ್ಲೂಕಿನ ನಿವೃತ್ತ ಆರೋಗ್ಯಾಧಿಕಾರಿಗಳಾದ ಡಾ/ ನಂದಕುಮಾರ್ ಅವರ ಪುತ್ರನಾದ, ಮಂಗಳೂರಿನ ಖಾಸಗಿ ದಂತ ವೈದ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ದಂತ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಆಸ್ತಿಕ್ ರಾಘವ್ ಎನ್ನುವ ಯುವಕನು ಕೆರೆಯ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಆಸ್ತಿಕ್ ರಾಘವ್ ಕೇರಳದ ತನ್ನ ಸಹಪಾಠಿಯೊಡನೆ ಆತನ ಮನೆಯಿರುವ ಕಣ್ಣುೂರಿಗೆ ತೆರಳಿದ್ದು, ಮನೆಯ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ. ವಿಷಯ ತಿಳಿದ ನಂದಕುಮಾರ್ ದಂಪತಿಗಳು ಕಣ್ಣೂರಿಗೆ ತೆರಳಿದ್ದು, ಪ್ರಕ್ರಿಯೆಗಳು ನಡೆದ ಬಳಿಕ ಮಂಗಳೂರಿಗೆ ಮೃತ ದೇಹವನ್ನು ತರಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಕಾಪು: ಸಹೋದರನ ಸ್ನೇಹಿತನೊಬ್ಬ ಬಾಲಕಿಗೆ ಕರೆ ಮಾಡಿ, ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ಭರವಸೆ ನೀಡಿ, ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯು ಗದಗ ಜಿಲ್ಲೆಗೆ ತನ್ನ ಅಜ್ಜಿಯ ಮನೆಗೆ ಹೋದ ಸಂದರ್ಭದಲ್ಲಿ ಸಹೋದರನ ಸ್ನೇಹಿತ ಕರೆ ಮಾಡಿ, ನಿರ್ಜನ ಪ್ರದೇಶವೊಂದಕ್ಕೆ ಕರೆಸಿಕೊಂಡು, ಈ ರೀತಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ಯಾರ ಮುಂದಾದರು ಬಾಯಿ ಬಿಟ್ಟರೆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತೇನೆ ಎಂದು ಬಾಲಕಿಯನ್ನು ಹೆದರಿಸಿದ್ದಾನೆ. ಅಪ್ರಾಪ್ತೆಯು ತಾಯಿಯ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾರ್ಕಳದ ಆಗಿನ ಡಿವೈಎಸ್ ಪಿ ಆಗಿದ್ದ ಅರವಿಂದ ಕಲ್ಲುಗುಜ್ಜಿ ಅವರು ಪೋಕ್ಸೋ ಕಾಯಿದೆ ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈಗ ಸಾಕ್ಷಿಗಳ ವಿಚಾರಣೆಯನ್ನು ನಡೆಸಿ, ಆರೋಪಿಯನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದೆ. ದುಷ್ಕರ್ಮಿಗೆ ಇಪ್ಪತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ, ಇಪ್ಪತ್ತೈದು ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಹಾಗೆಯೇ ಅನ್ಯಾಯಕ್ಕೆ ಒಳಗಾದ ಬಾಲಕಿಗೆ ಸರ್ಕಾರದ ವತಿಯಿಂದ ಒಂದೂವರೆ ಲಕ್ಷ ರೂಪಾಯಿಯಷ್ಟು ಹಣವನ್ನು ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.