Categories
ಕುಂದಾಪುರ

ಕುಂದಾಪುರ: ಮೀನುಗಾರರಿಗೆ ಜೀವ ರಕ್ಷಕ ಒದಗಿಸಲು ಸರ್ಕಾರ ಸಿದ್ಧ

* ಕುಂದಾಪುರ: ಮೀನುಗಾರರಿಗೆ ಜೀವ ರಕ್ಷಕ ಒದಗಿಸಲು ಸರ್ಕಾರ ಸಿದ್ಧ

•ಪುತ್ತೂರು: ಮಳೆಗೆ ಮರ ಬಿದ್ದು ಅಧಿಕ ಹಾನಿ.

* ಬಂಟ್ವಾಳ: ತೆಂಕತಿಟ್ಟು ಯಕ್ಷಗಾನದ ಸದಾಶಿವ ಶೆಟ್ಟಿಗಾರ್ ನಿಧನ

•ಉಳ್ಳಾಲ: ರಸ್ತೆ ಸಮುದ್ರದ ಪಾಲಾಗುವ ಆತಂಕ.

ನಮ್ಮೂರ ಎಕ್ಸ್ ಪ್ರೆಸ್ ನ್ಯೂಸ್

ಕುಂದಾಪುರ: ಇತ್ತೀಚಿಗಷ್ಟೆ ಗಂಗೊಳ್ಳಿಯಲ್ಲಿ ನಾಡ ದೋಣಿ ಮುಗುಚಿ ಮೃತಪಟ್ಟ ಸುರೇಶ್ ಖಾರ್ವಿ, ಜಗನ್ನಾಥ ಖಾರ್ವಿ ಮತ್ತು ಲೋಹಿತ್ ಖಾರ್ವಿ ಅವರ ಕುಟುಂಬಕ್ಕೆ ಸರ್ಕಾರದಿಂದ ಹತ್ತು ಲಕ್ಷ ರೂಪಾಯಿ ಚೆಕ್ ಅನ್ನು ಪರಿಹಾರವಾಗಿ ನೀಡಲಾಯಿತು. ಹಣವನ್ನು ನೀಡಿದ ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯ ಅವರು ಈ ಸಂದರ್ಭದಲ್ಲಿ ಮಾತನಾಡಿ ಗಂಗೊಳ್ಳಿ ಬಂದರಿನಲ್ಲಿ ಕುಸಿದ ಜೆಟ್ಟಿನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭಿಸಲು, ದುರಸ್ತಿಯ ಅಂದಾಜು ವೆಚ್ಚ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಪ್ಪತ್ತು ಕೋಟಿ ಮಂಜೂರಾಗಿ, ಟೆಂಡರ್ ಗೆ ಕರೆಯಲಾಗಿದೆ. ಹೂಳು ತೆಗೆಯುವ ಕಾರ್ಯ ಮತ್ತು ಬ್ರೇಕ್ ವಾಟರ್ ನ ವಿಸ್ತರಣೆಗೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಲಿದೆ. “ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮೀನುಗಾರರ ಕುರಿತು ಕಾಳಜಿ ಇದೆ, ನಮ್ಮ ಬಳಿ ಹಣವಿದೆ. ಹೀಗಾಗಿ ಅಗತ್ಯವಿರುವ ಮೀನುಗಾರರಿಗೆ ಜೀವ ರಕ್ಷಕವನ್ನು ನೀಡಲು ನಿರ್ಧರಿಸಿದ್ದಾರೆ” ಎಂದು ತಿಳಿಸಿದರು. ” ಮಳೆಗಾಲದಲ್ಲಿ ಮೀನುಗಾರಿಕೆಗೆ ಹೋಗುವುದು ಸೂಕ್ತವಲ್ಲ ಒಂದು ವೇಳೆ ಅನಿವಾರ್ಯತೆ ಇದ್ದಲ್ಲಿ ಜೀವ ರಕ್ಷಕವನ್ನು ಬಳಸಬೇಕು” ಎಂದು ಸಲಹೆ ನೀಡಿದರು. ಮುಂದುವರಿದು ಮಳೆಗಾಲದ ಸಂದರ್ಭದಲ್ಲಿ ಮೀನುಗಾರರಿಗೆ ಸಂಕಷ್ಟ ಎದುರಾಗಬಾರದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರ ಆರು ಸಾವಿರ ರೂಪಾಯಿಯನ್ನು ನೀಡುತ್ತಿದ್ದಾರೆ. ಜೊತೆಗೆ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಐದು ಲಕ್ಷ ರೂಪಾಯಿಯನ್ನು ನೀಡಲಾಗುತ್ತಿದ್ದು, ಅದನ್ನು ಸಂಬಂಧಿಸಿದ ವ್ಯಕ್ತಿಗಳಿಗೆ ಸೂಕ್ತ ಸಮಯದಲ್ಲಿ ಒದಗಿಸಲು ಪ್ರಯತ್ನಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು.

* ಪುತ್ತೂರು: ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವ ಪರಿಣಾಮವಾಗಿ, ಭಾನುವಾರದಂದು ಪುತ್ತೂರಿನ ಕುಂಬ್ರ ವರ್ತಕ ಸಂಘದ ಸದಸ್ಯರಾದ ಮತ್ತು ಅರಿಯಡ್ಕ ಗ್ರಾಮದ ನಿವಾಸಿ ಸಂಶುದ್ದೀನ್ ಎ. ಆರ್. ಅವರ ಮನೆಯ ಮೇಲೆ ತೆಂಗಿನಮರವೊಂದು ಬಿದ್ದು, ಅಧಿಕ ಪ್ರಮಾಣದ ನಷ್ಟ ಸಂಭವಿಸಿದೆ.‌ ಶೀಟುಗಳ ಮೇಲೆ ಮರ ಬಿದ್ದಿರುವುದರಿಂದ ಸುಮಾರು ಐದು ಸಾವಿರದಷ್ಟು ನಷ್ಟವಾಗಿದೆ. ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಈ ಘಟನೆ ನಡೆದಿರುವುದರಿಂದ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ. ಹಗಲಿನ ಸಮಯದಲ್ಲಿ ಜನರು ಓಡಾಡುತ್ತಿದ್ದರು ಮತ್ತು ವಾಹನಗಳನ್ನು ನಿಲ್ಲಿಸಿರುತ್ತಿದ್ದರು ಹೀಗಾಗಿ ಅವಘಡ ಸಂಭವಿಸುವುದು, ತಪ್ಪಿದಂತಾಗಿದೆ ಎಂದು ಸಂಶುದ್ದೀನ್ ತಿಳಿಸಿದ್ದಾರೆ.

ಬಂಟ್ವಾಳ: ಹಲವಾರು ಮೇಳಗಳಲ್ಲಿ ಬಣ್ಣ ಹಚ್ಚಿಕೊಂಡು ಯಕ್ಷಗಾನ ಎಂಬ ಪ್ರಸಿದ್ಧ ಕಲೆಯ ಸೇವೆಯನ್ನು ಮಾಡಿದ, ತೆಂಕತಿಟ್ಟು ಯಕ್ಷಗಾನ ಕಲಾವಿದರಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅವರು ವಿಧಿವಶರಾದರು. ಶ್ರೀ ಕಟೀಲು ಮೇಳದಿಂದ ತಮ್ಮ ಕಲಾ ಸೇವೆಯ ಜೀವನವನ್ನು ಪ್ರಾರಂಭಿಸಿದ ಸದಾಶಿವ ಅವರು, ಹತ್ತು ವರ್ಷಗಳ ನಂತರ ಧರ್ಮಸ್ಥಳ ಮೇಳದಲ್ಲಿ ತೊಡಗಿಕೊಂಡು ಹದಿಮೂರು ವರ್ಷಗಳ ಕಾಲ, ಹತ್ತೊಂಬತ್ತು ವರ್ಷಗಳ ಕಾಲ ಹೊಸನಗರ ಮೇಳದಲ್ಲಿ, ಒಂದು ವರ್ಷ ಎಡನೀರು ಮೇಳದಲ್ಲಿ ಕಲಾ ಸೇವೆಯನ್ನು ಸಲ್ಲಿಸಿದ್ದು, ಇತ್ತೀಚೆಗೆ ಎಂಟು ವರ್ಷಗಳಿಂದ ಶ್ರೀ ಹನುಮಗಿರಿ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಉಳ್ಳಾಲ: ಪ್ರವಾಸಿ ತಾಣವಾದ ಸೋಮೇಶ್ವರ ಉಚ್ಚಿಲದ ಕೊನೆಯ ಬಿಂದು ಸಮುದ್ರ ಪಾಲಾಗುವ ಆತಂಕದಲ್ಲಿದೆ. ಈಗಾಗಲೇ ಇದನ್ನು ಸಂಪರ್ಕಿಸುವ ಉಚ್ಚಿಲ ಮತ್ತು ಬಟ್ಟಪ್ಪಾಡಿ ರಸ್ತೆಯು ಕೊಚ್ಚಿ ಹೋಗಿ ನಾಲ್ಕು ವರ್ಷಗಳೇ ಸಂದಿವೆ. ಈಗ ಅದೇ ರೀತಿಯ ಪರಿಸ್ಥಿತಿಯನ್ನು ಸೋಮೇಶ್ವರದಿಂದ ಉಚ್ಚಿಲವನ್ನು ಸಂಪರ್ಕಿಸುವ ವಾಸ್ಕೋ ಕಡಲ ಮನೆಯ ಬಳಿಯಿರುವ ಹೊಸ ಉಚ್ಚಿಲ ಪೆರೆಬೈಲು ರಸ್ತೆಯು ಎದುರಿಸುತ್ತಿದೆ.‌ ಮಳೆಯ ಅಬ್ಬರ ಹೆಚ್ಚಾದಾಗಲೆಲ್ಲ ಸಮುದ್ರದ ಅಲೆಗಳು ರಸ್ತೆಗೆ ಬಂದು ಬಡಿಯುತ್ತಿರುವ ಪರಿಣಾಮ ರಸ್ತೆಗಳು ಹಾಳಾಗುತ್ತಿವೆ. ಹೀಗಾಗಿ ಉಚ್ಚಿಲ ಸಮುದ್ರದ ರಸ್ತೆಯನ್ನು ಉಳಿಸುವ ಸಲುವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಎಷ್ಟೇ ಮನವಿಯನ್ನು ಸಲ್ಲಿಸಿದರು ಪ್ರಯೋಜನವಾಗಿಲ್ಲ, ಕಡಲ ಕೊರೆತದ ಸಂದರ್ಭದಲ್ಲಿ ಕಲ್ಲುಗಳನ್ನು ಹಾಕುತ್ತಾರೆ ಹೊರತು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವಾರು ಜನ ಭೇಟಿ ನೀಡಿದ್ದರೂ ಸಹ ಯಾವುದೇ ಶಾಶ್ವತ ಪರಿಹಾರವನ್ನು ನೀಡಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ಆದೇಶಿಸಿದ್ದ ಕಲ್ಲು ಹಾಕುವ ಕಾಮಗಾರಿಯನ್ನು ಬೇಸಿಗೆಯಲ್ಲಿ ಮುಗಿಸುವ ಬದಲಾಗಿ, ಈಗ ಸಮಸ್ಯೆ ಎದುರಾದ ಮೇಲೆ ಮಳೆಗಾಲದಲ್ಲಿ ಆರಂಭಿಸಿದ್ದಾರೆ. ಇಂತಹ ಯೋಜನೆಗಳನ್ನು ಮಳೆಗಾಲ ಪ್ರಾರಂಭವಾಗುವ ಮೊದಲೇ ರೂಪಿಸಿದರೆ ಜನರು ಮಳೆಗಾಲದಲ್ಲಿ ತೊಂದರೆಗೆ ಒಳಗಾಗುವುದು ತಪ್ಪುತ್ತದೆ. ಆದರೆ ಯಾರು ಈ ರೀತಿಯ ಕ್ರಮವನ್ನು ಕೈಗೊಳ್ಳುವುದಿಲ್ಲ. ಸಮಸ್ಯೆ ಬಂದ ಸಂದರ್ಭದಲ್ಲಿ ನಾಮಕಾವಸ್ತೆ ಕಾಮಗಾರಿ ನಡೆಸುವುದು ಮತ್ತು ತಾತ್ಕಾಲಿಕ ಪರಿಹಾರ ನೀಡಿ ಸುಮ್ಮನೆ ಕೂರುವುದು ಅಧಿಕಾರಿಗಳ ಅಭ್ಯಾಸವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.