ಕರಾವಳಿ ಟಾಪ್ ನ್ಯೂಸ್
ಹೆಬ್ಬಾವನ್ನೇ ಮಾರಾಟ ಮಾಡಲು ಪ್ಲಾನ್!
– ಮಂಗಳೂರು: ಹೆಬ್ಬಾವು ಮಾರಾಟ ಜಾಲ ಪತ್ತೆ; ನಾಲ್ವರ ಬಂಧನ
* ಉಡುಪಿ: ಅಪಾರ್ಟ್ಮೆಂಟಲ್ಲಿ ವೇಶ್ಯಾವಾಟಿಕೆ ದಂಧೆ
* ಕುಂದಾಪುರ: ಆಟೋ ಚಾಲಕನಿಂದ ಲೈಂಗಿಕ ಕಿರುಕುಳ?
* ಉಳ್ಳಾಲ: ಹೃದಯಾಘಾತಕ್ಕೆ ಬಲಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಹೆಬ್ಬಾವು ಮಾರಾಟ ಜಾಲ ಪತ್ತೆ ಹಚ್ಚುವಲ್ಲಿ ಮಂಗಳೂರು ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. ಅರಣ್ಯಾಧಿಕಾರಿಯಾದ ರಾಜೇಶ್ ಬಳಿಗಾರ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ಮೊದಲಿಗೆ ಅಧಿಕಾರಿಗಳು ಹೆಬ್ಬಾವು ಖರೀದಿಸುವ ನೆಪದಲ್ಲಿ ವಿಹಾಲ್ ಎಂಬುವವನನ್ನು ಸಂಪರ್ಕಿಸಿದರು. ಆತ ಹೆಬ್ಬಾವನ್ನು ತೋರಿಸಿ ನಲವತ್ತೈದು ಸಾವಿರ ನೀಡುವಂತೆ ಹೇಳಿದನು. ಇವರು ಅರಣ್ಯಾಧಿಕಾರಿಗಳು ಎಂದು ತಿಳಿದೊಡನೆ ಇದು ನನ್ನದಲ್ಲ ಅಪ್ರಾಪ್ತ ಬಾಲಕನೊಬ್ಬ ನನಗೆ ನೀಡಿದ್ದು ಎಂಬ ಸಂಗತಿಯನ್ನು ಬಹಿರಂಗಪಡಿಸಿದನು. ವಿಹಾಲ್ ನ ಮೂಲಕ ಆತನಿಗೆ ಹೆಬ್ಬಾವನ್ನು ನೀಡಿದ ಹುಡುಗನನ್ನು ಕರೆಯಿಸಿಕೊಂಡು, ಅರಣ್ಯಾಧಿಕಾರಿಗಳು ಆ ಬಾಲಕನನ್ನು ಮಾಲ್ ಒಂದರ ಬಳಿ ಬಂಧಿಸಿದ್ದಾರೆ. ಇದೇ ರೀತಿ ಸ್ಟೇಟ್ ಬ್ಯಾಂಕ್ ಬಳಿಯ ಅಂಗಡಿಯೊಂದರಲ್ಲಿ ಪ್ರಾಣಿಗಳನ್ನು ಮಾರಾಟ ಮಾಡುತ್ತಿರುವ ವಿಚಾರ ತಿಳಿದು, ಅಧಿಕಾರಿಗಳು ತಕ್ಷಣ ದಾಳಿ ನಡೆಸಿದರು. ಅಂಗಡಿಯಲ್ಲಿದ್ದ ಹಾವು, ನಕ್ಷತ್ರ ಮೀನು ಮೊದಲಾದ ಜೀವಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ವಿಹಾಲ್ ಶೆಟ್ಟಿ, ಇಬ್ರಾಹಿಂ ಶಕೀಲ್ ಇಸ್ಮಾಯಿಲ್, ಮಹಮ್ಮದ್ ಮುಸ್ತಫಾ ಮಂಗಳೂರಿನ ಕಾಲೇಜ್ ಒಂದರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ಹದಿನಾರು ವರ್ಷದ ಬಾಲಕ ಸೇರಿದಂತೆ ನಾಲ್ವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಉಡುಪಿ: ಅಪಾರ್ಟ್ಮೆಂಟಲ್ಲಿ ವೇಶ್ಯಾವಾಟಿಕೆ ದಂಧೆ!
ಉಡುಪಿ: ಅಪಾರ್ಟ್ಮೆಂಟ್ ಸೆಕ್ಯೂರಿಟಿ ಕೆಲಸಕ್ಕಿದ್ದ ವ್ಯಕ್ತಿಯು ಮಾಲೀಕರು ಇಲ್ಲದ ಸಂದರ್ಭದಲ್ಲಿ ವೇಶ್ಯಾವಾಟಿಕೆಯನ್ನು ನಡೆಸಿದ ಪ್ರಕರಣ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ. ಅಪಾರ್ಟ್ಮೆಂಟ್ ನ ಮಾಲೀಕರು ಹೊರಗೆ ಹೋಗುವ ಸಂದರ್ಭದಲ್ಲಿ ಕೀಲಿಕೈಯನ್ನು ಸೆಕ್ಯೂರಿಟಿ ಬಳಿ ಕೊಟ್ಟು ಹೋಗುತ್ತಿದ್ದರು. ಇದನ್ನು ದುರುಪಯೋಗಪಡಿಸಿಕೊಂಡ ಸೆಕ್ಯೂರಿಟಿ ತನ್ನ ಬಳಿ ಇರುವ ಕೀಲಿಕೈಯಿಂದ ಮನೆಯ ಬಾಗಿಲನ್ನು ತೆರೆದು ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಬಳಿಕ ಆ ಕೀಲಿಕೈಯನ್ನು ಇದರಲ್ಲಿ ತನ್ನೊಂದಿಗೆ ತೊಡಗಿಸಿಕೊಂಡ ವ್ಯಕ್ತಿಗಳಿಗೆ ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದನು ಎಂಬ ಸಂಗತಿ ತಿಳಿದು ಬಂದಿದೆ. ಪೊಲೀಸರು ಈತನನ್ನು ಬಂಧಿಸಿದ್ದು, ಓರ್ವ ಯುವತಿಯನ್ನು ಈ ರಕ್ಷಿಸಿದ್ದಾರೆ. ಸೆಕ್ಯೂರಿಟಿಯೊಂದಿಗೆ ಈ ದಂಧೆಯಲ್ಲಿ ತೊಡಗಿಕೊಂಡ ಮತ್ತೋರ್ವ ವ್ಯಕ್ತಿಯು ನಾಪತ್ತೆಯಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕುಂದಾಪುರ: ಆಟೋ ಚಾಲಕನಿಂದ ಲೈಂಗಿಕ ಕಿರುಕುಳ
ಕುಂದಾಪುರ: ತಾಲ್ಲೂಕಿನ ಸಿದ್ಧಾಪುರ ಬಳಿಯ ಅಮಾಸೆಬೈಲು ಎಂಬ ಗ್ರಾಮದಲ್ಲಿ ಆಟೋ ಚಾಲಕ ಶರತ್ ಶೆಟ್ಟಿ ತನ್ನ ಆಟೋದಲ್ಲಿ ಬರುವ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಆಟೋದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ತನ್ನ ಸ್ನೇಹಿತನಾದ ಮಚ್ಚಟ್ಟು ಗ್ರಾಮದ ನಿವಾಸಿ ಪ್ರಶಾಂತ್ ನಾಯ್ಕ್ ಎನ್ನುವವನನ್ನು ಜೊತೆಗೆ ಕರೆದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ವಿದ್ಯಾರ್ಥಿನಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶಶಿಧರ ಶೆಟ್ಟಿ ಎನ್ನುವವರ ಬಳಿ ಹೇಳಿಕೊಂಡಿದ್ದಾಳೆ. ಆಗ ಮುಖ್ಯ ಶಿಕ್ಷಕರು ಅಮಾಸೆಬೈಲು ಪೊಲೀಸ್ ಠಾಣೆಗೆ ಆಟೋ ಚಾಲಕ ಮತ್ತು ಆತನ ಸ್ನೇಹಿತನ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಮಾಹಿತಿಯ ಆಧಾರದ ಮೇಲೆ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮಳೆ ನೀರು ಮನೆಗೆ ನುಗ್ಗಿದ್ದನ್ನು ನೋಡಿ ಹೃದಯಾಘಾತ
ಉಳ್ಳಾಲ: ಮಿಲ್ಲತ್ ನಗರದ ನಿವಾಸಿ ಹಾಗೂ ಉಳ್ಳಾಲ ದರ್ಗಾ ಸಮಿತಿಯ ಸದಸ್ಯರಾಗಿದ್ದ ರಫೀಕ್ ಎಂಬ ವ್ಯಕ್ತಿಯು ರಾತ್ರಿ ಸುರಿದ ಮಳೆಯಿಂದಾಗಿ ನೆರೆಯ ನೀರು ಮನೆಯೊಳಗೆ ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಖಾಲಿ ಮಾಡಿ, ಸಂಬಂಧಿಕರ ಮನೆಗೆ ಹೊರಟಿದ್ದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಾರ್ಗಮಧ್ಯದಲ್ಲಿ ಅಸುನೀಗಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.