Categories
ಕಾರ್ಕಳ

ಕ್ರೈಸ್ಟ್ ಕಿಂಗ್: ಸಡಗರದ ಶಿಕ್ಷಕರ ದಿನಾಚರಣೆ – ಶಿಕ್ಷಕರಿಗೆ ಗೌರವ

ಕ್ರೈಸ್ಟ್ ಕಿಂಗ್: ಸಡಗರದ ಶಿಕ್ಷಕರ ದಿನಾಚರಣೆ – ಶಿಕ್ಷಕರಿಗೆ ಗೌರವ
* ಕ್ರೈಸ್ಟ್ ಕಿಂಗ್ ನಲ್ಲಿ ಶಿಕ್ಷಕರಿಗೆ ಗೌರವ ಹಾಗೂ ಪ್ರಶಸ್ತಿ ಪ್ರದಾನ
* ಸಮಾಜದಲ್ಲಿ ಗುರು–ಶಿಷ್ಯ ಸಂಬಂಧದ ಮೌಲ್ಯ ಒತ್ತಿ ಹೇಳಿಕೆ

NAMMUR EXPRESS NEWS
ಕಾರ್ಕಳದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಎಜುಕೇಶನ್ ಟ್ರಸ್ಟ್‌ನಲ್ಲಿ ಶಿಕ್ಷಕರ ದಿನಾಚರಣೆ ಶಿಕ್ಷಕ–ರಕ್ಷಕ ಸಂಘದ ಆಶ್ರಯದಲ್ಲಿ ನೂತನ ಕಾಲೇಜು ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಅವರು “ಮಾನವೀಯ ಮೌಲ್ಯಗಳ ಅಧಃಪತನದಿಂದ ಗುರು–ಶಿಷ್ಯ ಸಂಬಂಧ ಕೂಡ ಕುಸಿಯುತ್ತಿದೆ. ಇಂದಿನ ಸಮಾಜ ಹಣದ ಆಧಾರದ ಮೇಲೆ ಸಂಬಂಧಗಳನ್ನು ಅಳೆಯುತ್ತಿರುವುದು ದುಃಖಕರ. ಶಿಕ್ಷಕರೇ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕಾರಣವಾಗಬಲ್ಲವರು. ಜಗತ್ತಿನಲ್ಲಿ ಶ್ರೇಷ್ಠ ನಾಯಕರನ್ನು ತಯಾರಿಸುವವರು ಶಿಕ್ಷಕರೇ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಗುರು ಸಂಜೀವ ದೇವಾಡಿಗ ಅವರು “ಶಿಕ್ಷಕರು ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಯಿಂದ ನಡೆಸಬೇಕು” ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ರೆಂಜಾಳ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವರ್ಣಲತಾ ಕೆ ಅವರಿಗೆ ‘ ಕ್ರೈಸ್ಟ್ ಕಿಂಗ್ ಶಿಕ್ಷಕ ರತ್ನ’ ಪ್ರಶಸ್ತಿ ಹಾಗೂ ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರಿಗೆ ‘ ಕ್ರೈಸ್ಟ್ ಕಿಂಗ್ ಕ್ರೀಡಾ ಶಿಕ್ಷಕ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ವರ್ಣಲತಾ ಅವರು “ಕಷ್ಟದಿಂದ ಬೆಳೆದರೆ ಉತ್ತಮ ವ್ಯಕ್ತಿತ್ವ ಮೂಡುತ್ತದೆ” ಎಂದರೆ, ಫ್ರೆಡ್ರಿಕ್ ರೆಬೆಲ್ಲೊ ಅವರು “ವಿದ್ಯಾರ್ಥಿಗಳು ಧೈರ್ಯ ಮತ್ತು ಸ್ಥೈರ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು” ಎಂದು ಅಭಿಪ್ರಾಯಪಟ್ಟರು.

ಕ್ರೈಸ್ಟ್ ಕಿಂಗ್ ಎಜುಕೇಶನ್ ಟ್ರಸ್ಟ್‌ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ “ಶಿಕ್ಷಕರು ಮಕ್ಕಳನ್ನು ಪ್ರೀತಿ–ವಾತ್ಸಲ್ಯದಿಂದ ನೋಡಿಕೊಳ್ಳಬೇಕು. ತರಗತಿ ಕೊಠಡಿಗಳಲ್ಲಿ ನೀಡುವ ಮೌಲ್ಯಯುತ ಶಿಕ್ಷಣವೇ ಭಾರತದ ಭವಿಷ್ಯವನ್ನು ವಿಶ್ವನಾಯಕನಾಗಿಸಲಿದೆ” ಎಂದು ಹೇಳಿದರು. ಶಿಕ್ಷಕ–ರಕ್ಷಕ ಸಂಘದ ಪದವಿಪೂರ್ವ ವಿಭಾಗದ ಅಧ್ಯಕ್ಷ ದಯಾನಂದ ಮಲೆಬೆಟ್ಟು, ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಮತ್ತು ಅನೇಕರು ಸಂದರ್ಭೋಚಿತವಾಗಿ ಮಾತನಾಡಿದರು.

ಸಂಸ್ಥೆಯ ಗಣಿತ ಉಪನ್ಯಾಸಕ ಅರುಣ್ ಸಂದೀಪ್ ಡಿ’ಸೋಜ, ಕಚೇರಿ ಸಹಾಯಕಿ ಶ್ರೀಮತಿ ಪೃಥ್ವಿ ಶೆಟ್ಟಿ ಮತ್ತು ಗ್ರಂಥಪಾಲಕಿ ಶ್ರೀಮತಿ ರೇಷ್ಮಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಟ್ರಸ್ಟ್‌ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕರಿಂದ ಹಾಗೂ ಪೋಷಕರಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಶ್ರೀಮತಿ ಶಕೀಲಾ ಜಿ. ಶೆಟ್ಟಿ, ಶ್ರೀಮತಿ ವಿದ್ಯಾ, ಶ್ರೀಮತಿ ಮಮತಾ, ವಿಶ್ವನಾಥ ಪುಜಾರಿ, ಕಿಶನ್, ಪ್ರಕಾಶ್ ಡಿಸೋಜ, ಸುನಿಲ್ ಡಿಸೋಜ, ಜಾನ್ ತಾವ್ರೋ ಮತ್ತು ಶ್ರೀಮತಿ ವನಿತಾ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು. ಪ್ರಾಥಮಿಕ ವಿಭಾಗದ ಅಧ್ಯಕ್ಷ ಉದಯರವಿ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶರಿಟಾ ನೊರೋನ್ಹ ವಂದಿಸಿದರು. ಸದಸ್ಯರಾದ ಶ್ರೀಮತಿ ಹೇಮಲತಾ ಮತ್ತು ಶ್ರೀಮತಿ ಯಶಸ್ವಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.