ಕುಂದಾಪ್ರ ಕನ್ನಡ ದಿನ… ಕುಂದಾಪುರ ಜನರ ಪ್ರೀತಿಯ ಭಾಷೆ!
– ಸಮಸ್ತ ಕುಂದಾಪುರ ಭಾಷಿಗರಿಗೆ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು
– ಜು.26, 27ರಂದು ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ
ವಿಶೇಷ ವರದಿ: ಅಣ್ಣಪ್ಪ ಬೈಂದೂರು
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರ. ದೇಶದ ಅತ್ಯಂತ ವೈವಿದ್ಯಮಯ ರಾಜ್ಯದಲ್ಲಿ ಒಂದಾದ ಕರ್ನಾಟಕ ರಾಜ್ಯದಲ್ಲಿ ಕೂಡ ನೂರಾರು ಭಾಷೆಗಳು ಗಮನ ಸೆಳೆದಿವೆ.
ಅದರಲ್ಲಿ ಕರಾವಳಿಯ ಕುಂದಾಪುರ, ಬೈಂದೂರು ಭಾಗದಲ್ಲಿ ಮಾತನಾಡುವ ಕುಂದಾಪ್ರ ಕನ್ನಡ ಭಾಷೆ ಇಡೀ ವಿಶ್ವದಲ್ಲಿ ಗಮನ ಸೆಳೆದಿದೆ. ಹೇಳಿ ಕೇಳಿ ಕುಂದಾಪುರ ಭಾಗದ ಜನ ಬುದ್ದಿವಂತರು. ವಿಶ್ವದ ಮೂಲೆ ಮೂಲೆಯಲ್ಲಿ ಕುಂದಾಪುರ ಕನ್ನಡಿಗರಿದ್ದಾರೆ.
ಜು.24ರಂದು ಕುಂದಾಪ್ರ ಕನ್ನಡ ದಿನದ ಸಡಗರ ಎಲ್ಲೆಡೆ ಕಂಡು ಬರುತ್ತಿದೆ. ಹಲವೆಡೆ ವಿಶೇಷ ವಾಗಿ ಆಚರಣೆ ಮಾಡಲಾಗಿದೆ.
ಮಲೆನಾಡು ಕನ್ನಡ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ, ಮಂಡ್ಯ ಕನ್ನಡ, ಉತ್ತರ ಕರ್ನಾಟಕ ಕನ್ನಡ, ಬೆಂಗಳೂರು ಕನ್ನಡ ಹೀಗೆ ಕನ್ನಡದಲ್ಲೂ ವೈವಿಧ್ಯತೆ ಇದ್ದು,ಇಂಥ ವೈವಿದ್ಯ ಭಾಷೆ ಕುಂದಾಪುರ ಕನ್ನಡ.
ವರ್ಷ ಆಷಾಢ ಅಮಾವಾಸ್ಯೆಯಂದು ಆಚರಣೆ
ಕುಂದಾಪ್ರ ಕನ್ನಡ ದಿನವನ್ನು ಪ್ರತಿ ವರ್ಷ ಆಷಾಢ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇಡೀ ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಥಳೀಯ ಅಂದರೆ ಜಾನಪದ ಕ್ರೀಡೆಗಳು ಮತ್ತು ಕುಂದಾಪುರ ಭಾಗದ ವಿಭಿನ್ನ ಮತ್ತು ವಿಶಿಷ್ಟವಾದ ವಸ್ತುಗಳ ಪ್ರದರ್ಶನ ಹೇಗೆ ಹಲವಾರು ಬಗೆಯ ಚಟುವಟಿಕೆಗಳನ್ನು ಹಾಗೂ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಇದರ ಮೂಲ ಉದ್ದೇಶ ಇಂದಿನ ಯುವ ಜನಾಂಗ ಮತ್ತು ಮಕ್ಕಳಿಗೆ ನಮ್ಮ ಸಂಸ್ಕೃತಿ, ಭಾಷೆಯ ಕುರಿತು ಅರಿವನ್ನು ಮೂಡಿಸಿ ನಮ್ಮತನದ ಬಗ್ಗೆ ಆತ್ಮ ಗೌರವ ಮತ್ತು ಹೆಮ್ಮೆಯನ್ನು ಬೆಳೆಸುವುದಾಗಿದೆ. ಇನ್ನು ಈ ದಿನವನ್ನು ಕೇವಲ ಕುಂದಾಪುರ ಅಷ್ಟೇ ಅಲ್ಲದೆ ಮಂಗಳೂರು ಬೆಂಗಳೂರುಗಳಲ್ಲೂ ಸಹ ಆಚರಿಸಲಾಗುತ್ತದೆ.
ಬೆಂಗಳೂರು, ಕುಂದಾಪುರ, ಮಂಗಳೂರಲ್ಲಿ ಆಚರಣೆ
ಕುಂದಾಪ್ರ ಕನ್ನಡ ದಿನವನ್ನು ಜುಲೈ ಇಪ್ಪತ್ತನಾಲ್ಕರ ಗುರುವಾರದಂದು ಕುಂದಾಪುರದಲ್ಲಿ ಆಚರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಜುಲೈ ಇಪ್ಪತ್ತಾರು, ಇಪ್ಪತ್ತೇಳರಂದು ನೈಸ್ ರಸ್ತೆಯ ಜಂಕ್ಷನ್ ಬಳಿಯಿರುವ, ನಂದಿ ಲಿಂಕ್ ಮೈದಾನದಲ್ಲಿ ಮತ್ತು ಮಂಗಳೂರಿನಲ್ಲಿ ಆಗಸ್ಟ್ ಮೂರರಂದು ಅಂಬೇಡ್ಕರ್ ಭವನ ಉರ್ವ ಸ್ಟೋರ್ಸ್ ನಲ್ಲಿ ಆಚರಿಸಲಾಗುತ್ತಿದೆ. ನಮ್ಮ ಪ್ರಾಂತ್ಯದ ಕನ್ನಡದ ಬಗ್ಗೆ ಸ್ವಾಭಿಮಾನ ಇರಬೇಕು, ಹಾಗೆಯೇ ಕರ್ನಾಟಕದ ಇತರೆ ಭಾಗಗಳ ಕನ್ನಡದ ಬಗ್ಗೆ ಗೌರವ ಪ್ರೀತಿ ಇರಬೇಕು, ಒಟ್ಟಾರೆ ನಾವು ಕನ್ನಡಿಗರು ಎಂಬ ಹೆಮ್ಮೆ ಇರಬೇಕು ಎಂಬುದು ಕಾರ್ಯಕ್ರಮದ ಆಯೋಜಕರ ಮತ್ತು ಅಭಿಮಾನಿಗಳ ಮನದಾಳದ ಮಾತು.
‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ದಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಜು.26, 27ರಂದು ಕುಂದಾಪ್ರ ಕನ್ನಡ ಹಬ್ಬ-2025 ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್‌ನ ನಂದಿ ಲಿಂಕ್ ಗೌಂಡ್‌ನಲ್ಲಿ ನಡೆಯಲಿದೆ.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಈ ಬಾರಿ ಐದು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಈ ಸಂಭ್ರಮದಲ್ಲಿ ದಿನವಿಡೀ ಕಾರ್ಯಕ್ರಮ ನಡೆಯಲಿದೆ. ಎರಡು ದಿನ ಕುಂದಾಪುರ ಮೂಲದ ಒಬ್ಬೊಬ್ಬರು ಗಣ್ಯ ಸಾಧಕರನ್ನು ಸನ್ಮಾ ನಿಸಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿನ ವಿವಿಧ ಕಾರ್ಯಕ್ರ ಮಗಳ ಜೊತೆ ಹೊರಾಂಗಣದಲ್ಲಿ ಹುಲಿ ವೇಷ, ಕೊರಗರ ಡೋಲು ವಾದನ,ಬಿಳಿ ಪಟಾಕಿ, ನವರಾತ್ರಿ ವೇಷ, ಹಗ್ಗ ಜಗ್ಗಾಟ ಮತ್ತು ವಿವಿಧ ಕ್ರೀಡೆಗಳಲ್ಲದೆ, ಕುಂದಾಪುರದ ಬಹುತೇಕ ಎಲ್ಲ ವಸ್ತು ಗಳು ಸಿಗುವ ಕುಂದಾಪ್ರ ಸಂತೆ ಕೂಡ ಕೂಡ ಇರಲಿದೆ. ಸಾವ್ರಹಣ್ಣಿನ್ ವಸಂತ, ಹೌದರಾಯನ ವಾಲ್ಯ, ಕುಂದಾಪ್ರದ ಡುಗೆ, ಉಪ್ಪಿನೊಡಿ ಟು ಮದಿಮನಿ ಊಟ, ಮೂಕಜ್ಜಿಯ ಕನಸುಗಳು: ಬೂಕ್ ತಕಣಿ ಬೂಕ್, ಸ್ವರ ಕುಂದಾಪ್ರ: ನಮ್ ಊರ್ಮನಿ ಮಕ್ಕ ಹಾಡುಹಸೆ, ಪಟ್ಟಾಂಗ: ಮಾತಿನ ಚಾವಡಿ, ಬಾರ್ಕೂ
ರಿನ್ ಹಡ್: ನೃತ್ಯ ನಾಟಕ (ಪ್ರಥಮ ಪ್ರದರ್ಶನ), ಉದ್ಘಾಟನಾ ಪರ್ವ, ಸಮಾಪನ ಸಮಾರಂಭ: ಊರ ಗೌರವ (ಕುಂದಾಪುರ ಮೂಲದ ಇಬ್ಬರು ಅತಿ ಗಣ್ಯ ಸಾಧಕರಿಗೆ ಸನ್ಮಾನ) ಕಾಠ್ಯಕ್ರಮ ಆಯೋಜಿಸಲಾಗಿದೆ. ಈ ವರ್ಷದ ಬೃಹತ್ ಆಕರ್ಷಣೆಯಾಗಿ ‘ಅಟ್ಟಣ ಆಟ’: ಎರಡು ರಂಗಸ್ಥಳದ ಯಕ್ಷಗಾನ ನಡೆಯಲಿದೆ. ಸಾಹಿತಿ ವೈದೇಹಿ ಉದ್ಘಾ ಟನೆಗೆ ಮುಖ್ಯ ಅತಿಥಿಯಾಗಲಿದ್ದಾರೆ. ಆಯೋಜಕರು ಸಮಸ್ತ ಕುಂದಾಪುರ ಭಾಷಿಗರನ್ನು ಸ್ವಾಗತಿಸಿದ್ದಾರೆ.
ಸಮಸ್ತ ಕುಂದಾಪುರ, ಬೈಂದೂರು ಭಾಗದ ಜನರಿಗೆ ಶೇರ್ ಮಾಡಿ.
