ಮಲ್ನಾಡ್ ಟಾಪ್ 4 ನ್ಯೂಸ್
ಹೊಸನಗರ : ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿ ಸಾವು..!!
– ಸಾಗರ: ಕಾಡುಹಂದಿ ದಾಳಿಯಿಂದ ಪಾರಾದ ರೈತ..!!
– ಸೊರಬ : ಮೇಯಲು ತೆರಳಿದ್ದ 38 ಕುರಿಗಳು ದಿಡೀರ್ ಸಾವು!
– ಶಿಕಾರಿಪುರ: ಬೈಕ್ ಮತ್ತು ಓಮ್ಮಿ ವಾಹನದ ನಡುವೆ ಹಸೆಮಣೆ ಏರಬೇಕಿದ್ದ ಜೋಡಿ ಸಾವು..!!
NAMMUR EXPRESS NEWS
ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಕೋಡೂರು ಸಮೀಪದ ಹಿರಿಯೋಗಿ ಗ್ರಾಮದ ದೇವರಾಜ (47) ಎಂದು ಗುರುತಿಸಲಾಗಿದೆ. ಲೋಡ್ ಆಗಿದ್ದ ಅನಧಿಕೃತ ನಾಡ ಬಂದೂಕನ್ನು ಹಿಡಿದುಕೊಂಡು ಮನೆಯ ಮೆಟ್ಟಿಲು ಹತ್ತುವಾಗ ಟ್ರಿಗರ್ ಎಳೆಯಲ್ಪಟ್ಟು ಗುಂಡು ಹಣೆಗೆ ತಾಗಿ ತಕ್ಷಣ ದೇವರಾಜ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ನಡೆದಾಗ ಪತ್ನಿ ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದು, ಮಕ್ಕಳು ಕೋಣೆಯಲ್ಲಿ ಓದುತ್ತಿದ್ದರು. ಮನೆ ಮುಂಭಾಗದಿಂದ ಏಕಾಏಕಿ ಗುಂಡಿನ ಸದ್ದು ಕೇಳಿ ಕೂಡಲೇ ಹೊರಬಂದ ಕುಟುಂಬಸ್ಥರು ರಕ್ತಸಿಕ್ತ ಸ್ಥಿತಿಯಲ್ಲಿ ದೇವರಾಜ್ ಬಿದ್ದಿರುವುದನ್ನು ಕಂಡಿದ್ದಾರೆ. ತಲೆಗೆ ಗುಂಡು ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರ ಪಕ್ಕದಲ್ಲಿಯೇ ಅಕ್ರಮ ನಾಡ ಬಂದೂಕು ಸಹ ಇತ್ತು ಎನ್ನಲಾಗಿದೆ. ಈ ಕುರಿತಂತೆ ಪತ್ನಿ ನೀಡಿದ ದೂರಿನ ಆಧಾರದಲ್ಲಿ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸಾಗರ: ಕಾಡುಹಂದಿ ದಾಳಿಯಿಂದ ಪಾರಾದ ರೈತ..!!
ಸಾಗರ: ತಾಲ್ಲೂಕು ಬಾರಂಗಿ ಹೋಬಳಿ ಕಾನೂರು ಗ್ರಾಮದ ರೈತ ರಾಮಪ್ಪ ಜಟ್ಟನಾಯ್ಕ (60) ಅವರ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯ ತೀವ್ರತೆಯ ನಡುವೆಯೂ ಅವರು ಪ್ರಾಣಾಪಾಯದಿಂದ ಪಾರಾಗಿರುವುದು ಅಚ್ಚರಿಯ ಸಂಗತಿಯಾಗಿ ಪರಿಣಮಿಸಿದೆ. ದುರ್ಗಮ ಪ್ರದೇಶವಾದ ಕಾನೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕಾಡುಹಂದಿಯ ಹರಿತವಾದ ಕೋರೆಗಳಿಂದ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗೊಂಡ ರಾಮಪ್ಪ ಜಟ್ಟನಾಯ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಗಳ ಗಂಭೀರತೆಯನ್ನು ಗಮನಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ICU) ಗೆ ಸ್ಥಳಾಂತರಿಸಲಾಗಿದೆ.
– ಸೊರಬ : ಮೇಯಲು ತೆರಳಿದ್ದ 38 ಕುರಿಗಳು ದಿಡೀರ್ ಸಾವು!
ಸೊರಬ : ಮೇಯಲು ತೆರಳಿದ್ದ 38 ಕುರಿಗಳು ದಿಡೀರ್ ಅಸ್ವಸ್ಥಗೊಂಡು ಮೃತಪಟ್ಟ ಘಟನೆ, ಸೊರಬ ಪಟ್ಟಣದ ಬಂಗಾರಪ್ಪ ಸ್ಟೇಡಿಯಂ ಬಳಿ ನಡೆದಿದೆ. ಬೆಳಗಾವಿ ಜಿಲ್ಲೆ ಖಡಕಲಾಟ ಗ್ರಾಮದ ಕುರಿಗಾಹಿ ಸುರೇಶ ಬೀರಾ ಅವಡಖಾನ ಎಂಬುವರಿಗೆ ಸದರಿ ಕುರಿಗಳು ಸೇರಿದ್ದಾಗಿದೆ. ಕಳೆದ ಕೆಲ ದಿನಗಳಿಂದ ಸುರೇಶ್ ಬೀರಾ ಹಾಗೂ ಇತರರು, ಸೊರಬ ಸುತ್ತಮುತ್ತಲು ಕುರಿಗಳನ್ನು ಮೇಯಿಸುತ್ತಿದ್ದಾರೆ. ಸುರೇಶ ಬೀರಾ ಅವರಿಗೆ ಸೇರಿದ ಕುರಿಗಳ ಆರೋಗ್ಯದಲ್ಲಿ, ದಿಡೀರ್ ಏರುಪೇರು ಕಂಡುಬಂದಿದೆ. ತಕ್ಷಣವೇ ಪಶುವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದಾರೆ.
12 ಕುರಿಗಳು ಹಾಗೂ 26 ಕುರಿಗಳು ಅಸುನೀಗಿವೆ. ವಿಷಪೂರಿತ ಆಹಾರ ಸೇವಿಸಿ ಕುರಿಗಳು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಕುರಿಗಳ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕುರಿಗಳ ಸಾವಿನಿಂದ ಕುರಿಗಾಹಿ ಕುಟುಂಬಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
– ಶಿಕಾರಿಪುರ: ಬೈಕ್ ಮತ್ತು ಓಮ್ಮಿ ವಾಹನದ ನಡುವೆ ಹಸೆಮಣೆ ಏರಬೇಕಿದ್ದ ಜೋಡಿ ಸಾವು..!!
ಶಿಕಾರಿಪುರ : ರಸ್ತೆ ಅಪಘಾತ, ವಿವಾಹ ನಿಶ್ಚಿತಾರ್ಥವಾಗಿದ್ದು, ಹಸೆಮಣೆ ಏರಬೇಕಿದ್ದ ಜೋಡಿ ಮಸಣದದಾರಿ ಹಿಡಿದಿದ್ದಾರೆ. ಶಿವಮೊಗ್ಗ ಶಿಕಾರಿಪುರದಲ್ಲಿ ಬೈಕ್ ಮತ್ತು ಓಮ್ಮಿ ವಾಹನದ ಮಧ್ಯೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಬೈಕ್ ನಲ್ಲಿದ್ದ ಯುವಕ ಮತ್ತು ಯುವತಿ ಅಂಬಾರಗೊಪ್ಪ ಕ್ರಾಸ್ ಘಟನೆ ಸಮೀಪ ನಡೆದಿರುವುದು ವರದಿಯಾಗಿದೆ. ಮೃತರನ್ನು ಶಿಕಾರಿಪುರ ತಾಲೂಕಿನ ಮಟ್ಟಿಕೋಟೆ ಗ್ರಾಮದ ರೇಖಾ(20) ಮತ್ತು ತೊಗರ್ಸಿ ಸಮೀಪದ ಗಂಗೊಳ್ಳಿ ಗ್ರಾಮದ ನಿವಾಸಿ ಬಸವನಗೌಡ ದ್ಯಾಮನಗೌಡ(25) ಎಂದು ಗುರುತಿಸಲಾಗಿದೆ. ಡಿಸೆಂಬರ್ ನಲ್ಲಿ ವಿವಾಹ ನಿಗದಿಯಾಗಿತ್ತು. ಪಟ್ಟಣದಲ್ಲಿರುವ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುವವರನ್ನು ಶಿರಾಳಕೊಪ್ಪ ಕಡೆಯಿಂದ ತೆಗೆದುಕೊಳ್ಳುತ್ತಿದ್ದ ಓಮ್ಮಿ ಮತ್ತು ಬಸವನಗೌಡ ಮತ್ತು ರೇಖಾ ಸಂಚರಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಢಿಕ್ಕಿಯಾದ ರಭಸಕ್ಕೆ ಬೈಕ್ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿಬಿದ್ದಿದೆ. ಓಮ್ಮಿಯ ಮುಂಭಾಗ ತೀವ್ರ ಹಾನಿಯಾಗಿದೆ. ರೇಖಾ, ಬಸವನಗೌಡ ಇಬ್ಬರಿಗೆ ಕಳೆದ ತಿಂಗಳಷ್ಟೇ ಮದುವೆ ನಿಶ್ಚಿತಾರ್ಥ ನಡೆದಿತ್ತು. ಮಳೆ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿದ್ದು ಡಿಸೆಂಬರ್ ನಲ್ಲಿ ಮದುವೆಗೆ ದಿನ ನಿಗದಿಯಾಗಿತ್ತು.