ಪ್ರೀತಿ ಸತ್ತೋಯ್ತು!
– ಪ್ರೇಯಸಿ ಆತ್ಮಹತ್ಯೆಯ ಬೆನ್ನಲ್ಲೇ ಪ್ರಿಯಕರ ಸಾವಿಗೆ ಶರಣು!
– ಹೆತ್ತವರು ಮದುವೆಗೆ ಒಪ್ಪಿಗೆ ನೀಡದ ಹಿನ್ನಲೆಯಲ್ಲಿ ಘಟನೆ
NAMMUR EXPRESS NEWS
ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬೆಂಗಳೂರಿನಿಂದ ಕೆಲಸ ಬಿಟ್ಟು ಊರಿಗೆ ಬಂದು ಪ್ರಿಯಕರ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮನೆಯಲ್ಲಿ ಹೆತ್ತವರು ಮದುವೆಗೆ ಒಪ್ಪಿಗೆ ನೀಡದ ಹಿನ್ನಲೆಯಲ್ಲಿ ಮನನೊಂದು ಮೂಡುಬಿದಿರೆ ಸಮೀಪದ ಮಾರ್ಪಾಡಿ ಗ್ರಾಮದ ನಾಗರಕಟ್ಟೆ ನಿವಾಸಿ ಶರಣ್ಯ(19) ಕಳೆದ ಶುಕ್ರವಾರ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ತಿಳಿದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮೂಲ್ಕಿ ಅತಿಕಾರಿಬೆಟ್ಟು ಮೈಲೊಟ್ಟು ನಿವಾಸಿ ಕಾರ್ತಿಕ್ ಪೂಜಾರಿ(20) ಊರಿಗೆ ಬಂದು ಶನಿವಾರ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರ್ತಿಕ್ ಹಾಗೂ ಶರಣ್ಯ ಮೂಲ್ಕಿಯ ಕಾಲೇಜೊಂದರಲ್ಲಿ ಸಹಪಾಠಿಗಳಾಗಿದ್ದರು. ಸಣ್ಣ ವಯಸ್ಸಿನವರಾದ ಕಾರಣ ಹೆತ್ತವರು ಪ್ರೇಮಿಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇಅಲ್ಲ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿ ಶರಣ್ಯ ಅವರನ್ನು ನಾಲ್ಕು ತಿಂಗಳ ಹಿಂದೆ ಕಾಲೇಜು ಕೂಡ ಬಿಡಿಸಿ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿತ್ತು. ಇದರಿಂದ ಶರಣ್ಯ ಖಿನ್ನತೆಗೆ ಒಳಗಾಗಿ ಶುಕ್ರವಾರ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಳು. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.