ತೀರ್ಥಹಳ್ಳಿ ಚರ್ಚ್ ವತಿಯಿಂದ ಆರೋಗ್ಯ ಶಿಬಿರ
– ತೀರ್ಥಹಳ್ಳಿಯಲ್ಲಿ ‘ಕ್ಯಾಥೋಲಿಕ್ ಅಸೋಸಿಯೇಶನ್’ ಹಾಗೂ ‘ರೋಟರಿ ಕ್ಲಬ್’ ವತಿಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರ
– ನೂರಾರು ಜನರಿಗೆ ಅನುಕೂಲ: ಜನರ ಮೆಚ್ಚುಗೆ
ನಮ್ಮೂರ್ ಎಕ್ಸ್ ಪ್ರೆಸ್ ತೀರ್ಥಹಳ್ಳಿ
ತೀರ್ಥಹಳ್ಳಿ: ತೀರ್ಥಹಳ್ಳಿಯ ಲೂರ್ದುಮಾತೆಯ ದೇವಾಲಯದ 125ನೇ ಜ್ಯೂಬಿಲಿ ವರ್ಷಾಚರಣೆಯ ಅಂಗವಾಗಿ ದಿನಾಂಕ ಭಾನುವಾರ ಲೂರ್ದುಮಾತೆಯ ದೇವಾಲಯದ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ದೇವಾಲಯದ ‘ಕ್ಯಾಥೋಲಿಕ್ ಅಸೋಸಿಯೇಷನ್’ ಸಂಘಟನೆ ಹಾಗೂ ‘ಮಹಿಳಾ ಮತ್ತು ಆರೋಗ್ಯ ಆಯೋಗ’ ಗಳು ತೀರ್ಥಹಳ್ಳಿ ‘ರೋಟರಿ ಸಂಸ್ಥೆ’ ಯ ಸಹಯೋಗದೊಂದಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟವು.
ಶಿವಮೊಗ್ಗದ ಪ್ರಖ್ಯಾತ ಸರ್ಜಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರು, ಜನರಲ್ ಫಿಸಿಶಿಯನ್, ಚರ್ಮರೋಗ ತಜ್ಞರು, ಮಕ್ಕಳ ತಜ್ಞರು, ಮೂಳೆ ತಜ್ಞರು ಹಾಗೂ ಸಿಬ್ಬಂದಿ ವೈದ್ಯಕೀಯ ತಪಾಸಣೆ ನಡೆಸಿಕೊಟ್ಟರು. ಶಿಬಿರಕ್ಕೆ ಆಗಮಿಸಿ ಪ್ರತಿಯೊಂದು ತಪಾಸಣಾ ಕೊಠಡಿಗೆ ಖುದ್ದು ಭೇಟಿ ನೀಡಿದ ಮಾಜಿ ಗೃಹ ಸಚಿವರು, ತೀರ್ಥಹಳ್ಳಿಯ ಜನಪ್ರಿಯ ಶಾಸಕರು ಆದ ಮಾನ್ಯ ಶ್ರೀ ಆರಗ ಜ್ಞಾನೇಂದ್ರರವರು ವೈದ್ಯರ ಸೇವೆಯನ್ನು ಶ್ಲಾಘಿಸಿದರು. ಈ ಸಮಯದಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಕೌಟುಂಬಿಕ ಆಪ್ತ ಸಮಾಲೋಚನೆ ಕೇಂದ್ರದ ಸ್ಥಾಪನೆಯ ಅಗತ್ಯದ ಕುರಿತು ಪ್ರಸ್ತಾಪಿಸಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ರೆಹಮತುಲ್ಲಾ ಅಸಾದಿಯವರು ಮಾತನಾಡಿ, ಮಾನವ ನಿರ್ಮಿತ ಯಾವುದೇ ಅತ್ಯಾಧುನಿಕ ಉಪಕರಣಗಳು ಕೂಡ ಮಾನವನ ದೇಹದಲ್ಲಿದ ಅಂಗಾಂಗಗಳಿಗೆ ಸಾಟಿಯಾಗಲು ಸಾಧ್ಯವಿಲ್ಲ. ಇಂತಹ ಅಂಗಾಂಗಗಳ ಅರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಪ್ರಥಮ ಅಧ್ಯತೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೂರ್ದುಮಾತೆ ದೇವಾಲಯದ ಗುರುಗಳಾದ ವಂ.ಫಾ|| ವೀರೇಶ್ ವಿಕ್ಟರ್ ಮೊರಾಸ್ ರವರು, ಮನುಷ್ಯನಿಗೆ ಎಷ್ಟು ಹಣವಿದ್ದರೂ ಅರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದರು. ಇಂದಿನ ಆರೋಗ್ಯ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು. ತೀರ್ಥಹಳ್ಳಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾದ ಶ್ರೀ ಭರತ್ ರವರು ಎಲ್ಲಾರಿಗೂ ಶುಭಹಾರೈಸಿದರು.
ಸಂಜೆ 4 ಗಂಟೆಯವರೆಗೆ ತೀರ್ಥಹಳ್ಳಿ ಸುತ್ತಮುತ್ತಲಿನ ಸುಮಾರು 300ಕ್ಕೂ ಹೆಚ್ಚು ಮಂದಿ ಆಗಮಿಸಿ ಉಚಿತ ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ‘ಮಿಲಾಗ್ರಿಸ್ ಕೋ-ಅಪರೇಟಿವ್ ಬ್ಯಾಂಕ್’ನ ವತಿಯಿಂದ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ನವೀಕರಣ ಮಾಡಿಸಲಾಯಿತು. ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗೀತಾ ರಮೇಶ್, ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅನಿಲ್ ಹಾಗೂ ರೋಟರಿ ಪದಾಧಿಕಾರಿಗಳು ಹಾಜರಿದ್ದು, ಶಿಬಿರಕ್ಕೆ ಯಶಸ್ಸು ಕೋರಿದರು.
