ತೀರ್ಥಹಳ್ಳಿ ತಾಲೂಕಿನ ಹಲವೆಡೆ ಎಳ್ಳಮವಾಸ್ಯೆಯ ರಂಗು
– ಗುಮ್ಮನ ಮಕ್ಕಿಯಲ್ಲಿ ಅಕ್ಕ- ತಂಗಿಯರ ಸಮಾಗಮ!
– ಅದ್ಧೂರಿ ಅಮ್ಮನವರ ಉತ್ಸವಗಳು!
– ಕಂಗೊಳಿಸುತ್ತಿರುವ ತೀರ್ಥಹಳ್ಳಿ ರಾಮೇಶ್ವರ; ರಥಬೀದಿ!
NAMMUR EXPRESS NEWS
ತೀರ್ಥಹಳ್ಳಿ: ತಾಲೂಕಿನ ಹಲವೆಡೆ ಜ.11ರ ಗುರುವಾರ ಅಮವಾಸ್ಯೆಯ ಜಾತ್ರೆ ನಡೆಯಲಿದ್ದು ಅದಕ್ಕಾಗಿ ಪ್ರತಿ ದೇವಸ್ಥಾನದ ಸಮಿತಿಯವರು ಮತ್ತು ಗ್ರಾಮಸ್ಥರು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಾತ್ರೆಯು ಎಳ್ಳಮವಾಸ್ಯೆಯ ದಿನವೇ ಕೆಲವು ಕಡೆ ನಡೆದರೆ, ಸಂಕ್ರಾತಿಯ ದಿನ ಹಲವು ಕಡೆ ನಡೆಯಲಿದೆ. ಜ.11ರ ಗುರುವಾರ ಕುಂಟೆಹೊಳೆ, ಹೆದ್ದೂರು-ಹೊಸಳ್ಳಿ, ಗುಮ್ಮನಮಕ್ಕಿ, ಮಂಡಗದ್ದೆ ಇನ್ನೂ ಹಲವು ಕಡೆ ಜಾತ್ರೆ ಉತ್ಸವಗಳು ನಡೆಯಲಿವೆ. ಗುಮ್ಮನಮಕ್ಕಿ ಜಾತ್ರೆಯು ಬಹಳ ಪ್ರಸಿದ್ಧ ಜಾತ್ರೆಯಾಗಿದ್ದು ಅತಿ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಇಲ್ಲಿ ಐದು ಅಮ್ಮನವರ ಸಮಾಗಮವಾಗಲಿದ್ದು, ಈ ಐದೂ ಅಮ್ಮನವರು ಅಕ್ಕ ತಂಗಿಯರೆಂಬ ಪ್ರತೀತಿ ಇದೆ. ಗುತ್ತಿ ಎಡೆಹಳ್ಳಿ ಅಮ್ಮನವರು, ಸಮಕಾನಿ ಅಮ್ಮನವರು, ಹೊಸಳ್ಳಿ ಅಮ್ಮನವರು, ಆಲಬಳ್ಳಿ ಅಮ್ಮನವರು ಮತ್ತು ಗಾಳಿ ಮಾರಮ್ಮ ಅಕ್ಕತಂಗಿಯರಾಗಿದ್ದು ಜಾತ್ರೋತ್ಸವದ ದಿನ ಸೇರಲಿದ್ದಾರೆ.
ಓಲಗ, ಡೊಳ್ಳು, ಕುಣಿತ, ಪೂಜೆಗಳು ಮತ್ತು ಅಮ್ಮನವರ ಪಲ್ಲಕ್ಕಿ ಉತ್ಸವಗಳು ಕಣ್ಮನ ತಣಿಸುವಂತೆ ಇರುವುದು ಒಂದು ಕಡೆಯಾದರೆ, ಬೆಂಡು ಬತ್ತಾಸು, ಮಿಠಾಯಿ ತಿನಿಸುಗಳು, ಆಟಿಕೆಗಳು, ಕಲರ್ ಫುಲ್ ವಸ್ತುಗಳ ಮಳಿಗೆಗಳು ಇನ್ನೊಂದು ಕಡೆ ಜಾತ್ರೆಯ ಬಹು ಮುಖ್ಯ ಭಾಗವಾಗಿವೆ. ಇನ್ನು ತೀರ್ಥಹಳ್ಳಿ ರಾಮೇಶ್ವರದಲ್ಲಿ ಜಾತ್ರೆಯ ಉತ್ಸವಕ್ಕೆ ನಿನ್ನೆಯೇ ಚಾಲನೆ ಸಿಕ್ಕಿದ್ದು ಇದೀಗ ಪೂಜೆ ಮತ್ತು ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ. ರಥಬೀದಿಯ ಬೀದಿ ದೀಪಗಳು ಅಲಂಕೃತಗೊಂಡು ನಿಂತಿವೆ. ದೇವಸ್ಥಾನ ತಳಿರು ತೋರಣ, ಚಪ್ಪರಗಳಿಂದ ಪೂರ್ಣ ಸಿದ್ಧಗೊಂಡಿದೆ.

ನಾಳೆ ಬೆಳಿಗ್ಗೆಯೇ ತೀರ್ಥ ಸ್ನಾನವಿದ್ದು ಅದಕ್ಕಾಗಿ ತಯಾರಿಯಾಗಿದೆ. ಅಂಗಡಿ ಮಳಿಗೆಗಳು ದಾರಿಯುದ್ದಕ್ಕೂ ಸಿದ್ಧಗೊಂಡಿವೆ. ರಾಮಮಂಟಪದ ಕಿರು ಸೇತುವೆಯೂ ಉದ್ಘಾಟನೆಯಾಗಿದೆ. ಜ.11ರ ಬೆಳಗಿನ ತೀರ್ಥ ಸ್ನಾನಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ಬನ್ನಿ, ನಮ್ಮೂರ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಯಾವುದೇ ಅಹಿತಕರ ಘಟನೆಗಳಾಗದಂತೆ ಯಶಸ್ವಿಗೊಳಿಸೋಣ. ನಮ್ಮೂರ್ ಎಕ್ಸ್‌ಪ್ರೆಸ್ ಎಲ್ಲರಿಗೂ ಎಳ್ಳಮವಾಸ್ಯೆಯ ಶುಭಾಶಯಗಳನ್ನು ತಿಳಿಸುತ್ತಿದೆ.