Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮನೆಗೆ ಪೊಲೀಸ್: ಅಭಿಯಾನ ಶುರು

ತೀರ್ಥಹಳ್ಳಿಯಲ್ಲಿ ಮನೆಗೆ ಪೊಲೀಸ್: ಅಭಿಯಾನ ಶುರು
– ಜನಸಾಮಾನ್ಯರ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ
– ತೀರ್ಥಹಳ್ಳಿ ಡಿವಿಷನ್ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಸರ್ಕಾರದ ಯೋಜನೆಯಲ್ಲಿ ಒಂದಾದ
ಮನೆ ಮನೆಗೆ ಪೊಲೀಸ್ ಎಂಬ ಹೊಸ ಯೋಜನೆಯೂ ಈಗಾಗಲೇ ಎಲ್ಲೆಡೆ ಆರಂಭವಾಗಿದ್ದು ತೀರ್ಥಹಳ್ಳಿಯಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಪೊಲೀಸ್ ಇನ್ನು ಮನೆ ಬಾಗಿಲಿಗೆ ಬರಲಿದ್ದಾರೆ.
ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ದೆಸೆಯಲ್ಲಿ ಸಾರ್ವಜನಿಕರೊಂದಿಗೆ ಪೊಲೀಸ್‌ ಇಲಾಖೆಯ ಉತ್ತಮ ಹಾಗೂ ಸ್ನೇಹ ಪರ ಸಂಬಂಧವನ್ನು ಬೆಸೆದು ಸೌಹಾರ್ದತೆಯ ಸಮಾಜವನ್ನು ನಿರ್ಮಿಸಲು, ಆಗಬಹುದಾದ ಅಪರಾಧಗಳನ್ನು ತಡೆದು ಘಟಿಸಿದ ಅಪರಾದಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವನ್ನು ಹೆಚ್ಚಿಸಿ ಇಲಾಖೆಯನ್ನು ಸಾರ್ವಜನಿಕ ಸ್ನೇಹಿಯಾಗಿ ಸಮಾಜಕ್ಕೆ ಉತ್ತಮ ಸಕ್ರೀಯ ಪೊಲೀಸ್ ಸೇವೆಯನ್ನು ಒದಗಿಸುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಹತ್ವಾಕಾಂಕ್ಷೆಯ ಯೋಜನೆಯಾದ “ಮನೆ ಮನೆಗೆ ಪೊಲೀಸ್” ಪರಿಶೀಲನೆಯನ್ನು ಜಾರಿಗೆ ತರುತ್ತಿದೆ. ಈ ಪರಿಕಲ್ಪನೆಯಡಿಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರು ಒಂದಾಗಿ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಸಾರ್ವಜನಿಕರ ಕುಂದು ಕೊರತೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಚಾರಿಸಲು ಸ್ಥಳೀಯ ಪೊಲೀಸರು ಮನೆ ಮನೆಗಳಿಗೆ ತಮ್ಮೊಡನೆ ಸಂವಾದಿಸಲಿದ್ದು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಪೊಲೀಸ್ ಇಲಾಖೆಯೊಂದಿಗೆ ಸ್ವಸ್ಥ ಸಮಾಜವನ್ನು ನಿರ್ಮಿಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.
ಈ ಯೋಜನೆಯ ಅಡಿಯಲ್ಲಿ ಸ್ಥಳೀಯ ಬೀಟ್ ಪೊಲೀಸ್‌ ಸಿಬ್ಬಂದಿಗಳು ತಮ್ಮ ಮನೆ ಮನೆಗೆ ಬಂದು ತಮ್ಮ ಜೊತೆ ಸಂವಾದ ನಡೆಸಿ ತಮಗಿರುವ ಕುಂದು ಕೊರತೆಗಳ ಬಗ್ಗೆ ವಿಚಾರಿಸಲಿದ್ದು ತಮ್ಮ ಸಹಕಾರ ಕೋರಲಾಗಿದೆ. ಇದರಿಂದ ಗಂಭೀರ ಸಮಸ್ಯೆ ಉದ್ಭವಿಸುವ ಮುನ್ನವೇ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ಈ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತು ಚೀಟಿಯೊಂದಿಗೆ (ಐಡೆಂಟಿಟಿ ಕಾರ್ಡ್), ಸಮವಸ್ತ್ರದಲ್ಲಿರುತ್ತಾರೆ. ಈ ಯೋಜನೆಯನ್ವಯ 50-60 ಮನೆಗಳ ಒಂದು ಸಮೂಹ ರಚಿಸಿ ಪ್ರತೀ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ ಆ ಮುಖೇನ ಪೊಲೀಸರೊಂದಿಗೆ ಸಾರ್ವಜನಿಕರು ಸಂವಾದಿಸುವಂತೆ ಮಾಡಲಾಗುತ್ತದೆ. ಸ್ಥಳೀಯವಾಗಿ ಸಾರ್ವಜನಿಕರಿಗಿರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಭದ್ರತೆ, ಸುರಕ್ಷತೆ, ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಭೇಟಿ ನೀಡುವ ಬೀಟ್ ಪೊಲೀಸ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಮನೆ ಮನೆಗೆ ಯೋಜನೆಯಡಿ ಭೇಟಿ ನೀಡುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ತಾವು ಬೇರೆ ಇಲಾಖೆಯ ಸಮಸ್ಯೆಗಳನ್ನು ತರಬಹುದು. ಸಾರ್ವಜನಿಕ ಹಿತಾಸಕ್ತಿ ಇದ್ದರೆ ಪೊಲೀಸ್‌ ಇಲಾಖೆಯು ಆಯಾ ಇಲಾಖೆಗಳ ಗಮನಕ್ಕೆ ತರಲಿದೆ.
ಸಾರ್ವಜನಿಕರಿಗೆ ಕಾನೂನು ಸಲಹೆ ಸಹಕಾರ ಬೆಂಬಲ ಮತ್ತು ಸಹಕಾರವನ್ನು ಒದಗಿಸುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.
ಡಿವೈಎಸ್ಪಿ ಅರವಿಂದ ಕಲಗುಂಜ್ಜಿ, ಇಮ್ರಾನ್ ಬೇಗ್
(ಪೊಲೀಸ್ ಇನ್ಸ್ಪೆಕ್ಟರ್ ತೀರ್ಥಹಳ್ಳಿ ), ಗುರಣ್ಣ ಹೆಬ್ಬಾರ್,(ಸರ್ಕಲ್ ಇನ್ಸ್ಪೆಕ್ಟರ್ ಹೊಸನಗರ ), ಸುಷ್ಮಾ (ಸಬ್ ಇನ್ಸ್ಪೆಕ್ಟರ್ ತೀರ್ಥಹಳ್ಳಿ), ಶಿವನಗೌಡ (ಸಬ್ ಇನ್ಸ್ಪೆಕ್ಟರ್ ಆಗುಂಬೆ ), ಕುಮಾರ್ (ಸಬ್ ಇನ್ಸ್ಪೆಕ್ಟರ್ ಮಾಳೂರು ), ಶಿವಾನಂದ್ ಸಬ್ ಇನ್ಸ್ಪೆಕ್ಟರ್ ಮಾಳೂರು ಸೇರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ತೀರ್ಥಹಳ್ಳಿ ಸಂಘಟನೆಗಳ ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.