Categories
ತೀರ್ಥಹಳ್ಳಿ

ಕನಸು ನನಸಾಯಿತು.. ಹೊಸ ಕಟ್ಟಡ ಉದ್ಘಾಟನೆ ಆಯ್ತು!

ಕನಸು ನನಸಾಯಿತು.. ಹೊಸ ಕಟ್ಟಡ ಉದ್ಘಾಟನೆ ಆಯ್ತು!
– ಮಧು ಬಂಗಾರಪ್ಪ, ಆರಗ, ರಾಘವೇಂದ್ರ, ಆರ್. ಎಂ ಸೇರಿ ಗಣ್ಯರ ಸಮಾಗಮ
– ತೀರ್ಥಹಳ್ಳಿ ಜನರ ಕೆಲಸ ಇನ್ನು ಒಂದೇ ಕಟ್ಟಡದಲ್ಲಿ..!

NAMMUR EXPRESS NEWS
ತೀರ್ಥಹಳ್ಳಿ: 13.5 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ತಾಲೂಕು ಪಂಚಾಯತ್ ಕಟ್ಟಡ ಸೋಮವಾರ ಶುಭ ಸಂಜೆ ಸಾವಿರಾರು ಸಮ್ಮುಖದಲ್ಲಿ ಗಣ್ಯರ ಸಮಾಗಮದಲ್ಲಿ ನೆರವೇರಿತು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಇಡೀ ತೀರ್ಥಹಳ್ಳಿಯ ಹೆಮ್ಮೆಯ ಕಾರ್ಯಕ್ರಮವಾಯಿತು. ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಮಾತನಾಡಿ, ತಾಲೂಕು ಪಂಚಾಯತ್ ಅತ್ಯಂತ ಉತ್ತಮ ಕಟ್ಟಡ. ಹೈಟೆಕ್ ಕಟ್ಟಡವಾಗಿದೆ. ಜಿಲ್ಲೆ ಅಭಿವೃದ್ಧಿ ಆಗುತ್ತಿದೆ. ಮೂಲಭೂತ ಸೌಲಭ್ಯ ಅಭಿವೃದ್ಧಿ ಆಗುತ್ತಿದೆ. ಮನೆ ಮನೆಗೆ ಜಲ ಜೀವನ್ ನೀರು ಕೊಡುತ್ತೇವೆ. ಗುತ್ತಿಗೆದಾರರು, ಅಧಿಕಾರಿಗಳು ಗುಣಮಟ್ಟದ ಕೆಲಸ ಮಾಡಬೇಕು. ತೀರ್ಥಹಳ್ಳಿ ಕ್ಷೇತ್ರಕ್ಕೆ ಕಳೆ ಬರುವ ಕೆಲಸ ಇದಾಗಿದೆ ಎಂದು ಬಣ್ಣಿಸಿದರು.

ತೀರ್ಥಹಳ್ಳಿ ನೆಲ್ಲಿಸರ 538 ಕೋಟಿ ಶಂಕು ಸ್ಥಾಪನೆ, 55 ಕೋಟಿ ಸೇತುವೆ, ಆಯನೂರು ರಿಪ್ಪಿನಪೇಟೆ ಕುಂದಾಪುರ ರಸ್ತೆಗೆ
163 ಕೋಟಿ ಹಣ ಸೇರಿ ಸಾವಿರಾರು ಕೋಟಿ ಅನುದಾನ ತಂದಿದ್ದೇವೆ. ಆಗುಂಬೆ ಸುರಂಗ ಮಾರ್ಗ ಯೋಜನೆ ಬಗ್ಗೆ ಬುಧವಾರ ದೆಹಲಿಯಲ್ಲಿ ಸಭೆ ನಡೆಯಲಿದೆ. ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 16 ಕಿಮಿ ಪೈಕಿ 10 ಕಿಮಿ ಸುರಂಗ, 5 ಕಿಮಿ ರಸ್ತೆ ಕಾಮಗಾರಿ ಪ್ರಸ್ತಾಪದಲ್ಲಿದೆ ಎಂದರು. ಎಂ. ಎಲ್ಸಿ.ರುದ್ರೇಗೌಡ ಮಾತನಾಡಿ, ಮಂಜುನಾಥ ಗೌಡ ಅವರಿಗೆ ಇಂದು ಆಯ್ಕೆ ಆಗಿದ್ದಾರೆ. 13 ವರ್ಷದಿಂದ ತೀರ್ಥಹಳ್ಳಿ ಅಭಿವೃದ್ಧಿ ಆಗುತ್ತಿದೆ. ಖುಷಿಯಾಗುತ್ತಿದೆ ಎಂದರು.

ಮಾಜಿ ಶಾಸಕ ಕಡಿದಾಳ್ ದಿವಾಕರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ತವರಿನ ಸನ್ಮಾನ ಖುಷಿ ತಂದಿದೆ. ಈ ಕಟ್ಟಡ ಈಗ ನಮಗೆ ಹೆಮ್ಮೆ. ತೀರ್ಥಹಳ್ಳಿಗೆ ಎರಡು ಐಕಾನ್ ಒಂದು ತುಂಗಾ ನದಿಗೆ ಕಟ್ಟಿರುವ ಸೇತುವೆ, ಎರಡನೆಯದೂ ಈ ತಾಲೂಕು ಪಂಚಾಯತ್ ಕಟ್ಟಡ. ಜನ ನೆಮ್ಮದಿಯಿಂದ ಕೆಲಸ ಮಾಡಿಸಿಕೊಳ್ಳಲಿ ಎಂದರು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿ, ತೀರ್ಥಹಳ್ಳಿ ಪಟ್ಟಣ ಅಭಿವೃದ್ಧಿಯತ್ತ ಸಾಗುತ್ತಿದೆ. ಅದಕ್ಕೆ ಇವೆಲ್ಲ ಸಾಕ್ಷಿ. ತೀರ್ಥಹಳ್ಳಿ ಬೆಳೆಯುತ್ತಿದೆ. ಇನ್ನು ಸ್ವಚ್ಛ ಹಾಗೂ ಸುಂದರ ಪಟ್ಟಣ ಮಾಡುವ ಗುರಿ ನಮ್ಮೆಲ್ಲರ ಮೇಲಿದೆ. ಇಂತಹ ಸುಂದರ ಕ್ಷಣಕ್ಕೆ ನಾನು ಸಾಕ್ಷಿಯಾಗಿರುವುದಕ್ಕೆ ನನಗೆ ಹೆಮ್ಮೆ ಎಂದರು.

ತಾಲೂಕು ಪಂಚಾಯತ್ ಇಒ ಶೈಲಾ ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾದ ಆಶಾಲತಾ ಪ್ರಸ್ತಾವಿಕವಾಗಿ ಮಾತನಾಡಿದರು. ನಿರೂಪಣೆಯನ್ನು ಪ್ರವೀಣ್ ಅಕ್ಷರ ದಾಸೋಹ ನಿರ್ದೇಶಕರು ಮಾಡಿದರು.

ಜನರನ್ನು ಅಲೆಸಬೇಡಿ ಎಂದ ಮಂಜುನಾಥ್ ಗೌಡ!

ಎಂಎಡಿಬಿ ಅಧ್ಯಕ್ಷ ಡಾ. ಆರ್. ಎಂ.ಮಂಜುನಾಥ್ ಗೌಡ ಮಾತನಾಡಿ, ಹಳೆ ಕಟ್ಟಡ ಒಂದು ನೆನಪು, ಇತಿಹಾಸ. ಎಲ್ಲರ ಪ್ರಯತ್ನದಿಂದ ಒಂದೊಳ್ಳೆ ಕೆಲಸ ಆಗಿದೆ. ತಾಲೂಕು ಆಡಳಿತಕ್ಕೆ ಒಳ್ಳೆ ಸಂಕೇತ. ಜನರನ್ನು ಆ ಟೇಬಲ್ ಇಂದ ಈ ಟೇಬಲ್ ಅಲೆಸಬೇಡಿ. ಈಗ ಜನ. ಸ್ನೇಹಿಯಾಗಿ ಕೆಲಸ ಮಾಡಬೇಕು. ಯುವ ನಾಯಕ ಮಧು ಬಂಗಾರಪ್ಪ ಅವರು ಬಗರ್ ಹುಕುಂ ಯೋಜನೆಗೆ ಸಹಕಾರ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಅವಕಾಶ ಸಿಕ್ಕಿ ಈಗ ಮೊದಲ ಸಭೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.

ಬಗರ್ ಹುಕುಂ ನಾವು ಮಾಡೇ ಮಾಡ್ತೇವೆ…!

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ಉಸ್ತುವಾರಿ ಸಚಿವನಾಗಿ ಈ ಅದ್ಬುತ ಕಟ್ಟಡ ಉದ್ಘಾಟನೆ ಮಾಡಿರುವುದು ಸಂತಸ. ಚೆಂದ ಕಟ್ಟಡ ಮಾಡಿದರೆ ಸಾಲದು, ಇಲ್ಲಿ ಜನಪರ ಕೆಲಸ ಆಗಬೇಕು. ನಾನು ಅಭಿವೃದ್ಧಿ ಕೆಲಸಕ್ಕೆ ಸದಾ ಜತೆಯಾಗುತ್ತೇನೆ. ಮಕ್ಕಳ ಕೆಲಸ ದೇವರ ಕೆಲಸ. ಅಧಿಕಾರ ಕಷ್ಟ. ಆದರೆ ಈಗ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದರು.
ಮಕ್ಕಳ ಭವಿಷ್ಯ ಕಟ್ಟಲು ನಾವೆಲ್ಲ ಸಹಕಾರ ಮಾಡಬೇಕು. 44.5 ಸಾವಿರ ಕೋಟಿ ನಮ್ಮ ಸರ್ಕಾರ ಕೊಟ್ಟಿದೆ. ಶಾಲೆಗಳ ಅಭಿವೃದ್ಧಿಗಾಗಿ ನಾನು ಸದಾ ಬದ್ದ ಎಂದರು.

ಬಡವರ ಬಗ್ಗೆ ಏನಾದ್ರು ಹೇಳಿದ್ರೆ ಸಿದ್ದರಾಮಯ್ಯ ಕರಗುತ್ತಾರೆ. ಹಾಗಾಗಿ ಶಿಕ್ಷಣಕ್ಕಾಗಿ ಅನೇಕ ಯೋಜನೆ ತಂದಿದ್ದೇವೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಹೊಸ ಯೋಜನೆ ತರಲಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ಕೆಪಿಎಸ್ ಶಾಲೆ ಶುರು ಮಾಡುತ್ತೇವೆ. ಶಾಲಾ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ನೀಡುವ ನನ್ನ ಶಾಲೆ ಜವಾಬ್ದಾರಿ ಯೋಜನೆ ಚಾಲನೆ ನೀಡಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳು ಜನರ ಮನ ಸೆಳೆದಿವೆ. ಮಹಿಳೆಯರಿಗೆ ಶಕ್ತಿ ಬರಲು ಶಕ್ತಿ ಯೋಜನೆ ಕಾರಣವಾಗಿದೆ. ರಾಜ್ಯದ 83% ಮನೆಯಲ್ಲಿ ಈಗ ಫ್ರೀ ವಿದ್ಯುತ್ ನೀಡಲಾಗುತ್ತಿದೆ. ಪಟ್ಟಣಕ್ಕೆ ಒಂದು ಬಾರಿ ಬಂದರೆ ಎಲ್ಲಾ ಕೆಲಸ ಒಂದೇ ಕಡೆ ಆಗಬೇಕು. ಜನರ ಸೇವೆಯನ್ನು ಮಾಡೋಣ. ಕಷ್ಟದಲ್ಲಿ ಬಂದವರಿಗೆ ನ್ಯಾಯ ಕೊಡಬೇಕು ಎಂದರು. ಬಗರ್ ಹುಕುಂ ಸರಿ ಮಾಡದಿದ್ರೆ ಮುಂದೆ ಜನರ ಬದುಕು ಬೀದಿಗೆ ಬೀಳಲಿದೆ. ಅಧಿಕಾರ ಬಂದರೆ ಶರಾವತಿ ಸಂತ್ರಸ್ತರಿಗೆ, ಅರಣ್ಯ ಇಲಾಖೆ ಸಮಸ್ಯೆ, ಬಗರ್ ಹುಕುಂ ರೈತರಿಗೆ ನ್ಯಾಯ ಕೊಡಿಸುವುದಾಗಿ ಸರ್ಕಾರ ಹೇಳಲಿದೆ. ಬಡವರು, ರೈತರಿಗೆ ಬದುಕುವ ಹಕ್ಕು ಕೊಡಿಸುತ್ತೇವೆ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.