ಟಾಪ್ ನ್ಯೂಸ್ ತೀರ್ಥಹಳ್ಳಿ
ತೀರ್ಥಹಳ್ಳಿ ಪಟ್ಟಣದಲ್ಲಿ ನೀರು ಇನ್ನು ಸಲೀಸು!
– 2.69 ಕೋಟಿ ವೆಚ್ಚದಲ್ಲಿ ಕುಡಿಯುವ ಕಾಮಗಾರಿ ಆರಂಭ!
– ಸಮಾಜ ಸೇವಕ ಕುರುವಳ್ಳಿ ಪ್ರಮೋದ್ ಪೂಜಾರಿಗೆ ಸನ್ಮಾನ
– ಮಾಳೂರಿಂದ ಮಹಿಷಿಗೆ ಹೋಗುವ ರಸ್ತೆ ಮಧ್ಯ ಗುಂಡಿ: ಗಿಡ ನೆಟ್ಟು ಸಾರ್ವಜನಿಕರ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅಮೃತ್-2 ಯೋಜನೆಯಡಿ 2 ಕೋಟಿ 69 ಲಕ್ಷ ರೂಪಾಯಿ ವೆಚ್ಚದಲ್ಲಿ ಜಾರಿಗೊಳ್ಳುವ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆ ಬುಧವಾರ ತೀರ್ಥಹಳ್ಳಿಯಲ್ಲಿ ನಡೆಯಿತು. ಕಾಮಗಾರಿ ಶಂಕು ಸ್ಥಾಪನೆಯನ್ನು ಶಾಸಕ ಆರಗ ಜ್ಞಾನೇಂದ್ರ, ಸಹಕಾರ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮುಖ್ಯ ಅಧಿಕಾರಿ ನಾಗರಾಜ್ ಸೇರಿ ಅನೇಕರು ನೆರವೇರಿಸಿದರು.
ಸಮಾಜ ಸೇವಕ ಕುರುವಳ್ಳಿ ಪ್ರಮೋದ್ ಪೂಜಾರಿಗೆ ಸನ್ಮಾನ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಡಳಿತ, ತಾಲೂಕು ಕಚೇರಿ ಮತ್ತು ಪಟ್ಟಣ ಪಂಚಾಯಿತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಡಿ. ದೇವರಾಜ ಅರಸ್ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕುರುವಳ್ಳಿ ಪ್ರಮೋದ್ ಪೂಜಾರಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ತುಂಗಾ ನದಿಯಲ್ಲಿ ಅನೇಕರ ಜೀವ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾರ್ಯನಿರ್ವಹಿಸಿದ ಪ್ರಮೋದ್ ಪೂಜಾರಿ ಅನೇಕರು ಮುಳುಗುತ್ತಿರುವ ಸಂದರ್ಭಗಳಲ್ಲಿ ಅವರನ್ನು ಮೇಲಕ್ಕೆತ್ತಿ ಬದುಕು ನೀಡಿರುವುದಲ್ಲದೆ, ನೂರಾರು ಶವಗಳನ್ನು ಭಯವಿಲ್ಲದೆ ನೀರಿನಿಂದ ಹೊರತೆಗೆಯುವ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅವರು ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಾಲೂಕಿನ ಜನರಲ್ಲಿ ಪ್ರೀತಿಯನ್ನು ಗಳಿಸಿರುವ ವ್ಯಕ್ತಿ. ಇಂತಹ ಮಾದರಿ ವ್ಯಕ್ತಿಗೆ ತಾಲೂಕು ಆಡಳಿತದಿಂದ ಈ ದಿನ ನೀಡಲಾದ ಸನ್ಮಾನವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾಳೂರಿಂದ ಮಹಿಷಿಗೆ ಹೋಗುವ ರಸ್ತೆ ಮಧ್ಯ ಗುಂಡಿ: ಗಿಡ ನೆಟ್ಟು ಸಾರ್ವಜನಿಕರ ಆಕ್ರೋಶ
ಮಾಳೂರಿಂದ ಮಹಿಷಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಾಳೂರಿನಲ್ಲಿ ರಸ್ತೆಯ ಎರಡು ಬದಿ ಹೊಂಡ ಬಿದ್ದು ಕುಸಿದು ಹೋಗಿದ್ದು, ದ್ವಿಚಕ್ರ ವಾಹನಗಳು ಮಾತ್ರ ಸಂಚಾರ ಮಾಡಲು ಸಾಧ್ಯವಾಗುತ್ತಿದೆ, ಕಾರು, ಲಾರಿ, ಆಟೋ ಇತರೆ ವಾಹನಗಳು ಯಾವುದೇ ರೀತಿಯಲ್ಲೂ ಕೂಡ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಪಿ ಡಬ್ಲ್ಯೂ ಡಿ ಗೆ ಸಂಬಂಧಪಟ್ಟ ರಸ್ತೆಯಾಗಿದ್ದು, ಇಲಾಖೆಯು ನಿರ್ಲಕ್ಷದಿಂದ ಈ ರೀತಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಾತ್ರಿ ಸಮಯದಲ್ಲಿ ರಸ್ತೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ರಾತ್ರಿ ಸಮಯದಲ್ಲಿ ಹೆಚ್ಚು ಅಪಘಾತಗಳು ಆಗುವ ಸಾಧ್ಯತೆ ಇದೆ. ಒಂದು ವೇಳೆ ರಾತ್ರಿ ಸಮಯದಲ್ಲಿ ಏನಾದರೂ ಅಪಘಾತಗಳು ಉಂಟಾದರೆ ಇದಕ್ಕೆ ಸಂಬಂಧಪಟ್ಟ ಇಲಾಖೆಯವರೇ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆಯಲ್ಲಿ ಗಿಡ ನೆಟ್ಟು ಕಂಬ ಹುಗಿದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
