ಹೊಸದಿಲ್ಲಿ : ವಂದೇ ಮಾತರಂ ಅನ್ನು ಪೂರ್ಣವಾಗಿ ಹಾಡಬೇಕೇ ಅಥವಾ ಎರಡು ಚರಣ ಹಾಡಿದರೆ ಸಾಕೇ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಸರ್ವೋಚ್ಚ ನ್ಯಾಯಾಲಯ, ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆಯನ್ನು ನೀಡಿದೆ. 1986ರ ತೀರ್ಪೊಂದನ್ನು ಸುಪ್ರೀಂಕೋರ್ಟ್ ಈ ವೇಳೆ ಉಲ್ಲೇಖಿಸಿದೆ. ಮನಃಸಾಕ್ಷಿಯ ಕಾರಣಗಳಿಂದ ವಂದೇ ಮಾತರಂ ಹಾಡನ್ನು ಪೂರ್ಣವಾಗಿ ಹಾಡಲು ನಿರಾಕರಿಸಿದ ಮಕ್ಕಳ ಪರವಾಗಿ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದೆ. ’ಮನಃಸಾಕ್ಷಿ ಇಂದ ಆಕ್ಷೇಪಿಸುತ್ತಿರುವವರಿಗೆ’ ಯಾವುದೇ ಶಿಕ್ಷೆಯನ್ನು ವಿಧಿಸಬಾರದು ಎಂದು ಟಾಪ್ ಕೋರ್ಟ್, ತಮ್ಮ ಆದೇಶದಲ್ಲಿ, ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ.
ಕರ್ನಾಟಕ ಸಂಗೀತ ಗಾಯಕ ಟಿಎಂ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ನಡೆಸುತ್ತಿತ್ತು. ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ದವಾಗಿ, ಕೃಷ್ಣ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. 1986ರ ತೀರ್ಪನ್ನು ನ್ಯಾ.ಸೂರ್ಯಕಾಂತ್ ಅವರ ಪೀಠ, ಈ ವೇಳೆ ಉಲ್ಲೇಖಿಸಿದೆ. ವಂದೇ ಮಾತರಂ ಹಾಡಿನ ಕೊನೆಯ ನಾಲ್ಕು ಚರಣಗಳು, ದೇಶದ ಜಾತ್ಯಾತೀತ ಸ್ವರೂಪವನ್ನು ಉಲ್ಲಂಘಿಸುತ್ತವೆ, ಹಾಗಾಗಿ, ಪೂರ್ಣವಾಗಿ ಹಾಡುವುದರಿಂದ ವಿನಾಯತಿ ನೀಡಬೇಕು ಎಂದು ಕೃಷ್ಣ, ತಮ್ಮ ಅರ್ಜಿಯಲ್ಲಿ ಪ್ರಸ್ತಾವಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ನ್ಯಾ.ಜೋಯ್’ಮಾಲ್ಯ ಬಾಗ್ಚಿ ಮತ್ತಿ ವಿ.ಮೋಹನಾ ಅವರನ್ನೊಳಗೊಂಡ ಪೀಠವು ಕೇಳಿತ್ತು.
ಟಿಎಂ ಕೃಷ್ಣ ಅವರ ಅರ್ಜಿಯು 2026ರಲ್ಲಿ ತಿದ್ದುಪಡಿ ಮಾಡಲಾದ, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆ 1971ರ ಸೆಕ್ಷನ್ 3 ಅನ್ನು, ಗೃಹ ಸಚಿವಾಲಯದ ಜನವರಿ 28 ಮತ್ತು ಜುಲೈ 9, 2026ರ ಆದೇಶವನ್ನು ಪ್ರಶ್ನಿಸುತ್ತದೆ. ತಿದ್ದುಪಡಿ ಮಾಡಲಾದ ಸೆಕ್ಷನ್ 3ರ ಪ್ರಕಾರ, ರಾಷ್ಟ್ರಗೀತೆ ಹಾಡುವುದನ್ನು ತಡೆಯುವ ಅಥವಾ ವಂದೇ ಮಾತರಂ ಹಾಡಲು ತೊಡಗಿರುವ ಸಭೆಗೆ ಅಡ್ಡಿಪಡಿಸುವ ಯಾರಿಗಾದರೂ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಎರಡನ್ನೂ ವಿಧಿಸಲು, ಕೇಂದ್ರ ಸರ್ಕಾರ ರೂಪಿಸಿರುವ ಕಾನೂನಿನಲ್ಲಿ ಅವಕಾಶವಿದೆ. ಇದನ್ನು ಅರ್ಜಿದಾರ ಕೃಷ್ಣ ಪ್ರಶ್ನಿಸಿದ್ದರು. ಕೃಷ್ಣ ಅವರ ಪರವಾಗಿ ಹಿರಿಯ ವಕೀಲ ಎಸ್. ಮುರಳೀಧರ್ ವಾದಿಸಿದ್ದರು.