Categories
ಮಲ್ನಾಡ್

ಮಲ್ನಾಡ್ ಟಾಪ್ ನ್ಯೂಸ್

ಶಿವಮೊಗ್ಗದಲ್ಲಿ ರಾತ್ರಿ ಗುಂಪು ಘರ್ಷಣೆ!
– ಶಿವಮೊಗ್ಗದ ಆಲ್ಕೋಳ ಸಮೀಪ 2 ಗುಂಪುಗಳ ಸಂಘರ್ಷ: ಐವರಿಗೆ ಚಾಕು ಇರಿತ
– ಶಿಕಾರಿಪುರ: ಕ್ಯಾನ್ಸರ್ ಮಹಾಮಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಬಲಿ
– ಎನ್. ಆರ್. ಪುರ: ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್!

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್​ ಸಮೀಪ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು 5 ಮಂದಿಗೆ ಚಾಕು ಇರಿಯಲಾಗಿದೆ. ಆಲ್ಕೋಳ ಸಮೀಪ ಇರುವ ವಿಶಾಲ್​ ಮಾರ್ಟ್ ಬಳಿಯಲ್ಲಿ ಎಲ್​ಐಸಿ ಆಫೀಸ್​ ಹಿಂಭಾಗದಲ್ಲಿ ಎರಡು ಗುಂಪುಗಳು ಪರಸ್ಪರ ಮಾರಾಮಾರಿಯಾಗಿದೆ. ಘಟನೆಯಲ್ಲಿ ಐದು ಮಂದಿಗೆ ಚಾಕುವಿಗೆ ಇರಿಯಲಾಗಿದೆ ಗಂಭೀರ ಗಾಯಗೊಂಡ ಓರ್ವನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದೆ. ಈ ಭಾಗದಲ್ಲಿರುವ ಪವನ್​ ಮತ್ತು ಕಿರಣ್ ಎಂಬಿಬ್ಬರು ಸ್ನೇಹಿತರಾಗಿದ್ದು, ಇವರ ನಡುವೆ ಕಳೆದ 2 ವರ್ಷಗಳಿಂದ ಸಣ್ಣಪುಟ್ಟ ವಿಚಾರಕ್ಕೆ ಬಿನ್ನಾಭಿಪ್ರಾಯಗಳಿದ್ದವು.

ಅಲ್ಲದೆ ಇದೇ ಕಾರಣಕ್ಕೆ ಕಿರಿಕ್ ಆಗುತ್ತಿತ್ತು. ಗುರುವಾರ ರಾತ್ರಿ ನೇತಾಜಿ ಸರ್ಕಲ್​ನಲ್ಲಿ ಇದೇ ವಿಚಾರಕ್ಕೆ ಕಿರಿಕ್ ಆಗಿದೆ. ನೇತಾಜಿ ಸರ್ಕಲ್​ನಲ್ಲಿ ನಡೆದ ಜಗಳದ ಬೆನ್ನಲ್ಲಿಯೇ ಪವನ್ ಆ್ಯಂಡ್ ಟೀಂ ವಿಶಾಲ್ ಮಾರ್ಟ್​ ಸಮೀಪವಿದ್ದ ಕಿರಣ್​ ಆ್ಯಂಡ್ ಗ್ಯಾಂಗ್ ಮೇಲೆ ಅಟ್ಯಾಕ್​ ಮಾಡಿದೆ. ಈ ವೇಳೆ ಕಿರಣ್​ ಗ್ಯಾಂಗ್​ನ ಐವರಿಗೆ ಗಾಯಗಳಾಗಿದೆ. ಐವರಿಗೆ ಇರಿತವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದು ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕ್ಯಾನ್ಸರ್ ಮಹಾಮಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಬಲಿ

ಶಿವಮೊಗ್ಗ: ಬೀದರ್ ಜಿಲ್ಲೆಯ ಔರಾದ್ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನಳೀನಕೊಪ್ಪ ಗ್ರಾಮದ ಜಗದೀಶ್ ನಾಯ್ಯ ಅಕಾಲಿಕ ಮರಣ ಹೊಂದಿದ್ದಾರೆ. ಶಿಕಾರಿಪುರ ತಾಲೂಕಿನ ನಳಿನಕೊಪ್ಪ ಗ್ರಾಮದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಗದೀಶ್ ನಾಯ್ಕ್ ಪ್ರಸ್ತುತ ಔರಾದ್ ಸ್ಟೇಷನ್ ಗಾಂಧಿ ಗಂಜ್ ಪೊಲೀಸ್ ಠಾಣೆ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಂದೆ ಈರ ನಾಯ್ಕ, ತಾಯಿ ಸಾವಿತ್ರಿ ಬಾಯಿ,
ಒಬ್ಬ ಸಹೋದರ ಸಹ ಸಿವಿಲ್ ಪೊಲೀಸ್ ಸೇವೆ ಸಲ್ಲಿಸುತ್ತಿದ್ದರು. ಮೃತರು ಇಬ್ಬರು ಸಹೋದರಿಯನ್ನ ಹೊಂದಿದ್ದಾರೆ.

ಸಹೋದರರು ಇಬ್ಬರೂ ಸಹ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ವಿಶೇಷವಾಗಿದ್ದು,ಮಗನ ಅಕಾಲಿಕ ಮರಣಕ್ಕೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕ್ಯಾನ್ಸರ್ ಮಹಾಮಾರಿಯಿಂದ ಪ್ರಾಣ ತ್ಯಜಿಸಿದ್ದಾರೆ. ಕಳೆದ 2 ವರ್ಷದ ಹಿಂದೆ ಶಿವಮೊಗ್ಗದ ಹೊಸಕೊಪ್ಪ ಸಮೀಪದ ಯುವತಿಯನ್ನ ಮದುವೆ ಸಹ ಆಗಿದ್ದರು. ಇಡೀ ಶಿವಮೊಗ್ಗ ಪೊಲೀಸ್ ಇಲಾಖೆ ಸ್ನೇಹಿತರು, ಕುತುಂಬಸ್ತರು ಜಗದೀಶ್ ನಾಯಕರ ಅಕಾಲಿಕ ಮರಣಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಹಾನಿ

ಎನ್.ಆರ್.ಪುರ: ಎನ್.ಆರ್.ಪುರ ಪಟ್ಟಣದ ಮಂಡಗದ್ದೆ ಸರ್ಕಲ್ ಬಳಿ ಇರುವ ಮಂಜುನಾಥ್ ಎಂಬುವರ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅಹುತಿಯಾಗಿದ್ದು ಮನೆ ಸಂಪೂರ್ಣ ನಾಶವಾದ ಘಟನೆ ಗುರುವಾರ ನಡೆದಿದೆ. ಅಗ್ನಿ ಶಾಮಕ ದಳದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Categories
ಬೆಂಗಳೂರು

ಬೆಂಗಳೂರಲ್ಲಿ ನಾಯಿ ಸಾಕಲು ಹೊಸ ರೂಲ್ಸ್!

ಬೆಂಗಳೂರಲ್ಲಿ ನಾಯಿ ಸಾಕಲು ಹೊಸ ರೂಲ್ಸ್!
– ಪ್ರತ್ಯೇಕ ಬೈಲಾ ತರಲು ಬೆಂಗಳೂರು ಪಾಲಿಕೆ ನಿರ್ಧಾರ
– ಸಾಕು ನಾಯಿಗಳನ್ನು ಬೀದಿಗೆ ಬಿಡುವಂತಿಲ್ಲ..!.. ಏನಿದು ನಿಯಮ…?

NAMMUR EXPRESS NEWS
ಬೆಂಗಳೂರು: ರಾಜಧಾನಿಯಲ್ಲಿ ಮನೆಗೊಂದೇ ನಾಯಿ ಸಾಕಲು ಪರವಾನಗಿ ಪಡೆಯುವುದು ಸೇರಿ ಇತರ ನಿಯಮಗಳನ್ನು ಜಾರಿಗೆ ತರುವ ವಿಚಾರ ಮತ್ತೆ ಮನ್ನಲೆಗೆ ಬಂದಿದೆ. ಕೆಲ ಮಾನದಂಡಗಳನ್ನು ಬದಲಾಯಿಸಿ, ಹೊಸ ಬೈಲಾ ರಚಿಸಿ ಸರ್ಕಾರಕ್ಕೆ ಸಲ್ಲಿಸಲು ಪಾಲಿಕೆ ಮುಂದಾಗಿದೆ. ಇದರ ಬಗ್ಗೆ ಈಗಾಗಲೆ ಪ್ರಕ್ರಿಯೆ ಶುರುವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಸಾಕಣೆಗೆ ಸಂಬಂಧಿಸಿದ ಬೈಲಾ ರೂಪಿಸುವ ಪ್ರಯತ್ನ 2012ರಲ್ಲೇ ನಡೆದಿತ್ತು. ಆದರೆ ಜಾರಿಗೆ ಬರಲಿಲ್ಲ. 2018ರಲ್ಲಿ ಈ ಹಳೆಯ ಬೈಲಾವನ್ನು ಪರಿಷ್ಕರಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿತ್ತು. ಈ ಕುರಿತು ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಕೆಲ ಸಂಘ-ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿದ್ದವು. ಬಳಿಕ ಸರ್ಕಾರ ತನ್ನ ಅಧಿಸೂಚನೆಯನ್ನು ಹಿಂಪಡೆದಿತ್ತು. 2020ರಲ್ಲಿಯೂ ನಾಯಿ ಸಾಕಣೆಗೆ ಪಾಲಿಕೆ ಬೈಲಾ ಜಾರಿಗೆ ಬಂದಿತ್ತು. ಬಿಬಿಎಂಪಿ ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳು ರೂಪಿಸಿದ್ದ ‘ಸಾಕು ನಾಯಿ ಪರವಾನಗಿ- ಬೈಲಾ 2020’ರ ಕರಡಿನಲ್ಲಿರುವ ಕೆಲ ಅಂಶಗಳಿಗೆ ನಾಯಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದರೆ ಕೆಲವರು ಬೆಂಬಲ ಸೂಚಿಸಿದ್ದರು.

ಏಕೆ ಈ ನಿಯಮ ಜಾರಿ…?

ವಿದೇಶಿ ನಾಯಿಗಳನ್ನು ಮಾರಾಟ ಮಾಡುತ್ತಿರುವವರಿಗೆ ಕಡಿವಾಣ ಹಾಕಲು ಇದು ಅಗತ್ಯವಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ನಾಯಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಗಲೀಜು ಮಾಡಿದರೆ, ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ಸಾಕು ನಾಯಿಗೆ ಕಡ್ಡಾಯವಾಗಿ ಸಂತಾನಶಕ್ತಿ ಹರಣ ಶಸಚಿಕಿತ್ಸೆ ಮಾಡಿಸಬೇಕು, ಸಾರ್ವಜನಿಕ ಪ್ರದೇಶಗಳಲ್ಲಿ ಸಾಕುನಾಯಿಗಳನ್ನು ಕರೆದೊಯ್ಯುವಾಗ ಅವುಗಳಿಂದ ತೊಂದರೆ ಉಂಟಾಗದಂತೆ ಕ್ರಮ ವಹಿಸುವುದು ಹಾಗೂ ಮೈಕ್ರೋಚಿಪ್ ಅಳವಡಿಕೆ ಸೇರಿ ಇತರ ಅಂಶಗಳನ್ನು ಬೈಲಾದಲ್ಲಿ ಪ್ರಸ್ತಾಪಿಸಲಾಗಿತ್ತು. ಅಲ್ಲದೆ, ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಪಾರ್ಟ್‌ಮೆಂಟ್ ಸೇರಿ ಅನೇಕ ಕುಟುಂಬಗಳು ಒಟ್ಟಿಗೆ ವಾಸಿಸುತ್ತಿರುವ ವಸತಿ ಸಮುಚ್ಛಯಗಳಲ್ಲಿ ಡಾಬರ್‌ಮನ್, ಜರ್ಮನ್ ಶೆರ್ಡ್, ರಾಟ್‌ವೆಯ್ಲರ್, ಹೌಂಡ್ ಸೇರಿ ಮುಂತಾದ ಅಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವುದು ಬೇಡ ಎಂದು ಶಿಫಾರಸು ಮಾಡಲಾಗಿತ್ತು. ಆದರೂ, ಕೆಲ ಕಾರಣಾಂತರಗಳಿಂದ ಈ ನಿಯಮ ಜಾರಿಗೆ ಬರಲಿಲ್ಲ. ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ಪಾಲಿಕೆ, ಜನರಿಂದ ಪಡೆದಿರುವ ಆಕ್ಷೇಪಣೆ ವಿಲೇವಾರಿ ಸೇರಿ ಇತರ ಮಾನದಂಡಗಳನ್ನು ಅಳವಡಿಸಿ ನಿಯಮಗಳನ್ನು ಜಾರಿಗೆ ತರಲು ಆಲೋಚಿಸಿದೆ.

ವರ್ಷದಿಂದ ವರ್ಷಕ್ಕೆ ಸಿಲಿಕಾನ್ ಸಿಟಿಯಲ್ಲಿ ಶ್ವಾನ ಸಾಕುವವರ ಸಂಖ್ಯೆ ಹೆಚ್ಚಳವಾಗಿದೆ. ಲಕ್ಷಕ್ಕೂ ಅಧಿಕ ಸಾಕು ನಾಯಿಗಳಿವೆ. ಕೆಲ ಮನೆಯಲ್ಲಿ 3-4 ಇವೆ. ಕೆಲವರು ಸಾಕು ನಾಯಿಗಳ ಮಾರಾಟವನ್ನೇ ಬುಸಿನೆಸ್ ಮಾಡಿಕೊಂಡಿದ್ದಾರೆ. ವಿವಿಧ ತಳಿಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯೂ ಹೆಚ್ಚಾಗುತ್ತಿದೆ. ಅಲ್ಲದೆ, ಸಾವಿರಾರು ರೂಪಾಯಿ ಕೊಟ್ಟು ದೇಶಿ ವಿದೇಶಿ ತಳಿಯ ನಾಯಿಗಳನ್ನು ತಂದು ಸಾಕಲಾಗುತ್ತಿದೆ. ಇವುಗಳನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗುವುದು, ಎಲ್ಲೆಂದರಲ್ಲಿ ಮಲ/ಮೂತ್ರ ಮಾಡಿಸುವುದು ನಡೆದಿದೆ. ಸದ್ಯ ನಾಯಿ ಸಾಕಲು ಪರವಾನಗಿ ಬೇಕಿಲ್ಲ. ಇದು ಕಡ್ಡಾಯವಾಗಿಲ್ಲ. ಇನ್ನುಮುಂದೆ ಸ್ಥಳೀಯ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು ಸೇರಿ ಇತರ ನಿಯಮಗಳು ಜಾರಿಗೆ ಬರಲಿವೆ.

ಪ್ರಮುಖ ಮಾನದಂಡಗಳೇನು?

– ಒಂದು ಮನೆಗೆ ಒಂದೇ ನಾಯಿ ಸಾಕಣೆ
– ಪಾಲಿಕೆಯಲ್ಲಿ ಶುಲ್ಕ ಕಟ್ಟಿ ಪರವಾನಗಿ ಪಡೆಯುವುದು ಕಡ್ಡಾಯ
– ನಿರ್ದಿಷ್ಟ ದೈತ್ಯ ನಾಯಿ, ದೊಡ್ಡ, ಮಧ್ಯಮ ಮತ್ತು ಸಣ್ಣ ತಳಿಗಳ ಆಧಾರದ ಮೇಲೆ ಶುಲ್ಕ ನಿಗದಿ
– ಲೈಸೆನ್ಸ್ ಪಡೆದ ನಾಯಿಗೆ ನಿರ್ದಿಷ್ಟ ಸಂಖ್ಯೆ ನೀಡಿಕೆ
– ಪ್ರತಿ ವರ್ಷ ಪರವಾನಗಿ ನವೀಕರಣ
– ಸಾಕುಪ್ರಾಣಿಗೆ ಸ್ವಂತ ವೆಚ್ಚದಲ್ಲಿ ಮಾಲೀಕರಿಂದಲೇ ಮೈಕ್ರೋ ಚಿಕ್ ಅಳವಡಿಕೆ
– ಮೈಕ್ರೋ ಚಿಪ್‌ನಲ್ಲಿ ನಾಯಿಯ ತಳಿ, ಮಾಲೀಕರ ವಿಳಾಸ, ಲಸಿಕೆ ಪಡೆದ ಮಾಹಿತಿ ಲಭ್ಯ
– ಜಂತುನಾಶಕ ಔಷಧ, ರೇಬಿಸ್, ಕೆನೈಡ್ ಡಿಸ್ಟೆಂಪರ್ ಸೇರಿ ಮುಂತಾದ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು
– ಸಾಕು ನಾಯಿಗಳನ್ನು ಬೀದಿಗೆ ಬಿಡುವಂತಿಲ್ಲ

Categories
ತೀರ್ಥಹಳ್ಳಿ

ಹೊನ್ನೇತಾಳು ಸೊಸೈಟಿ ನೂತನ ಕಚೇರಿ ಉದ್ಘಾಟನೆ!

ಹೊನ್ನೇತಾಳು ಸೊಸೈಟಿ ನೂತನ ಕಚೇರಿ ಉದ್ಘಾಟನೆ!
– ಸಹಕಾರಿ ನಾಯಕರ ನೇತೃತ್ವದಲ್ಲಿ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ
– ಸೊಸೈಟಿ ಅಧ್ಯಕ್ಷ ಮಹಾಬಲೇಶ್ ಹಸಿರುಮನೆ ಸಾರಥ್ಯ

NAMMUR EXPRESS NEWS
ತೀರ್ಥಹಳ್ಳಿ: ಹೊನ್ನೇತಾಳು ಸೊಸೈಟಿಯ 2022-23 ನೇ ಸಾಲಿನ ವಾರ್ಷಿಕ ಸದಸ್ಯರ ಮಹಾಸಭೆಯನ್ನು ಗುರುವಾರ ಸಂಘದ ಆಡಳಿತ ಕಚೇರಿ ಆವರಣದಲ್ಲಿ ನಡೆದಿದ್ದು ಅಧ್ಯಕ್ಷತೆಯನ್ನು ಹಸಿರುಮನೆ ಹೆಚ್.ಆರ್ ಮಹಾಬಲೇಶ್ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು ಸಂಘದ ಕಚೇರಿ ಉದ್ಘಾಟನೆಯನ್ನು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಜಯದೇವ್ ಹಾಗೂ ನಾಗರಾಜ್ ಶೆಟ್ಟಿ ನೆರವೇರಿಸಿದ್ದಾರೆ. ಮಹಾಬಲೇಶ್ ಮಾತನಾಡಿ ಈ ಸಂಸ್ಥೆ 76-77 ರಲ್ಲಿ ಸ್ಥಾಪನೆಯಾಗಿ ಎಲ್ಲ ಹಿರಿಯರ ಸಹಕಾರದಿಂದ ಈ ಊರಿಗೆ ಒಂದು ಸಹಕಾರಿ ಸಂಸ್ಥೆ ಬರಲು ಕಾರಣವಾಯಿತು. ಈ ಸಂಸ್ಥೆಯ ಅಭಿವೃದ್ಧಿಗಾಗಿ ಬಹಳಷ್ಟು ಜನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿಗಳು,ಸದಸ್ಯರು ಎಲ್ಲರೂ ಕೂಡ ಬಹಳ ಅದ್ಭುತವಾಗಿ ಕೆಲಸ ಮಾಡಿ ಸಹಕರಿಸಿದ್ದರಿಂದ ತೀರ್ಥಹಳ್ಳಿಯಲ್ಲಿ ಒಂದು ಜನಪ್ರಿಯವಾದ ಸೊಸೈಟಿಯಾಗಿದೆ. 5 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಸೊಸೈಟಿಯಾಗಿದೆ. ಸಂಘದ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.
ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ನಾಗರಾಜ್ ಶೆಟ್ಟಿ ಮಾತನಾಡಿ, ಸೊಸೈಟಿ ಸಾಧನೆ ಮತ್ತು ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿ ದುರೀಣ ಬಸವಾನಿ ವಿಜಯ್ ದೇವ್ ಹಾಗೂ ನಾಗರಾಜು ಶೆಟ್ಟಿ ಈ ಸಹಕಾರ ಸಂಘಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಈ ಸಹಕಾರ ಸಂಸ್ಥೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಿ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಹೇಳಿದರು. ಸಹಕಾರ ಸಂಘದ ವತಿಯಿಂದ ವಿಜಯ್ ದೇವ್ ಹಾಗೂ ನಾಗರಾಜ್ ಶೆಟ್ಟಿ ರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎಚ್ಆರ್ ಮಹಾಬಲೇಶ್, ಉಪಾಧ್ಯಕ್ಷರಾದ ಜಿ ವಿನಯ್, ನಿರ್ದೇಶಕರಾದ ಎಸ್ ರವೀಶ್, ನಿರ್ದೇಶಕರಾದ ಶಚ್ಚಿಂದ್ರ ಹೆಗಡೆ, ನಿರ್ದೇಶಕರಾದ ಎಂ ವಿ ರತ್ನಾಕರ್, ನಿರ್ದೇಶಕರದ ಎಚ್ಎಸ್ ಧರ್ಮಪ್ಪ, ನಿರ್ದೇಶಕರಾದ ಕೆಎ ಕೃಷ್ಣಮೂರ್ತಿ, ನಿರ್ದೇಶಕರಾದ ಶ್ರೀಧರ, ನಿರ್ದೇಶಕರಾದ ಲಕ್ಷ್ಮಿ ದೇವಿ, ನಿರ್ದೇಶಕರಾದ ಶ್ರೀಮತಿ ಕೆಎಸ್ ಸುಜಯ ಸೇರಿದಂತೆ ಮುಖ್ಯಕಾರ್ಯನಿರ್ವಣ ಅಧಿಕಾರಿ ವಿನಾಯಕ ಸಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು ಪ್ರಮುಖರು ಹಾಜರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದಲ್ಲಿ ಗಣೇಶನ ರಂಗು!

ತೀರ್ಥಹಳ್ಳಿ ಪಟ್ಟಣದಲ್ಲಿ ಗಣೇಶನ ರಂಗು!
– 3ನೇ ದಿನ ಹಲವು ಗಣೇಶ ವಿಸರ್ಜನೆ
– 20ಕ್ಕೂ ಹೆಚ್ಚು ಗಣೇಶ ಪ್ರತಿಷ್ಠಾಪನೆ
– ಸೆ.22ಕ್ಕೆ ತೀರ್ಥಹಳ್ಳಿ ಪಟ್ಟಣದಲ್ಲಿ ಮದ್ಯ ನಿಷೇಧ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಈ ಬಾರಿ ಅದ್ದೂರಿ ಗಣೇಶೋತ್ಸವ ಎಲ್ಲಾ ಕಡೆ ನಡೆಯಿತು. ಈ ಬಾರಿ ಸೋಮವಾರ ಕೆಲವೆಡೆ ಮತ್ತು ಮಂಗಳವಾರ ಕೆಲವು ಕಡೆ ಪ್ರತಿಸ್ಥಾಪನೆ ಮಾಡಲಾಗಿತ್ತು. ತೀರ್ಥಹಳ್ಳಿ ಪಟ್ಟಣದ ಕೆಇಬಿ ಸೊಪ್ಪುಗುಡ್ಡೆ ಮತ್ತು ಕುಶಾವತಿ ಜೈ ಭಜರಂಗಿ ಗೆಳೆಯರ ಬಳಗ, ಗಾಂಧೀನಗರ, ಕುರುವಳ್ಳಿ ಮಾರಿಕಾಂಬಾ ಸೇರಿದಂತೆ ಅನೇಕ ಗಣಪತಿ ಬುಧವಾರ ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು. ಮಂಗಳವಾರ ಗಣಪತಿ ಕೂರಿಸಿದವರು ಗಣಪತಿಯನ್ನು ಗುರುವಾರ ವಿಸರ್ಜನೆ ಮಾಡುತ್ತಿದ್ದಾರೆ. ಇಂದಿರಾ ನಗರದ ಚೈತನ್ಯ ಯುವಕ ಸಂಘದ ಗಣಪತಿ ಬಿಳುಕೊಪ್ಪ ಹಾಗೂ ಮುಂತಾದ ಕಡೆಯಲ್ಲಿ ಗುರುವಾರ ವಿಸರ್ಜನೆ ಮಾಡಲಾಗುತ್ತಿದೆ

ತೀರ್ಥಹಳ್ಳಿಯಲ್ಲಿ ಮದ್ಯ ಮಾರಾಟ ನಿಷೇಧ
– ಬೆಳಿಗ್ಗೆ 6 ರಿಂದ ರಾತ್ರಿ 11ರವರೆಗೆ ನಿರ್ಬಂಧಿಸಲಾಗಿದೆ

ತೀರ್ಥಹಳ್ಳಿಯಲ್ಲಿ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ಅದರಂತೆ ಹಲವೆಡೆ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಸೆ. 22ರಂದು ಬೆಳಗ್ಗೆ 6 ರಿಂದ ರಾತ್ರಿ 11 ರವರೆಗೆ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಗಣೇಶ ವಿಗ್ರಹಗಳ ವಿಸರ್ಜನಾ ನಡೆಯುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

Categories
ಕಾರ್ಕಳ

ಕಾರ್ಕಳ ಕ್ರಿಯೇಟಿವ್ ಕಾಲೇಜಲ್ಲಿ ಗಣೇಶೋತ್ಸವ!

– ಕಾರ್ಕಳ ಕ್ರಿಯೇಟಿವ್ ಕಾಲೇಜಲ್ಲಿ ಗಣೇಶೋತ್ಸವ!
– ಧಾರ್ಮಿಕ, ಕಲಾ ರಂಗಿನೊಂದಿಗೆ ಗಣೇಶೋತ್ಸವ
– ಹುಲಿವೇಷ, ಅದ್ದೂರಿ ಮೆರವಣಿಗೆ ಬಳಿಕ ಗಣೇಶ ವಿಸರ್ಜನೆ

NAMMUR EXPRESS NEWS
ಕಾರ್ಕಳ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕಾರ್ಕಳದ ಹಿರ್ಗಾನದಲ್ಲಿರುವ ಕ್ರಿಯೇಟಿವ್ ವಿದ್ಯಾಸಂಸ್ಥೆಯಲ್ಲಿ ಗಣೇಶ ಚಥುರ್ತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮುಂಜಾನೆ ಕಾರ್ಕಳದ ಎಣ್ಣೆ ಹೊಳೆಯಿಂದ ತೆರೆದ ವಾಹನದಲ್ಲಿ ಗಣೇಶನ ಮೂರ್ತಿಯನ್ನು ಕಾಲೇಜಿಗೆ ಮೆರವಣಿಗೆ ಮುಖಾಂತರ ಕರೆತರಲಾಯಿತು. ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ವಿಶೇಷವಾಗಿ ಗಣಹೋಮ, ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮಗಳು ನಡೆದವು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಗಣೇಶ ಚತುರ್ಥಿಯ ಮಹತ್ವದ ಕುರಿತು ಮಾತನಾಡಿದರು.

ನಂತರ ಶ್ರೀ ದೇವಿ ಬಯಲಾಟ ಸಮಿತಿ ರಂಗನಪಲೆ ತಂಡದಿಂದ ಅಸಹಾಯಕ ಬಡರೋಗಿಗಳ ಸಹಾಯಾರ್ಥ ಹುಲಿಕುಣಿತ ಪುದರ್ಶನ ನಡೆಯಿತು. ಮಧ್ಯಾಹ್ನ ಮಹಾಪೂಜೆ ಮತ್ತು ಸಾಯಂಕಾಲ ರುದ್ರಶಿವ ಮೂಡಬಿದ್ರೆ ತಂಡದಿಂದ ನಾಸಿಕ್ ಬ್ಯಾಂಡ್ ಹಾಗೂ ಸಾಯಂಕಾಲ 4.30 ಗಂಟೆಗೆ ದುರ್ಗಾಪರಮೇಶ್ವರಿ ಜೋಡುರಸ್ತೆ ಇವರಿಂದ ಹುಲಿಕುಣಿತ ನಡೆಯಿತು. ಸಂಜೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ, ಕುಕ್ಕುದಕಟ್ಟೆಯವರೆಗೆ ಕರೆದೊಯು ಹತ್ತಿರದ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಗಣನಾಥಶೆಟ್ಟಿ, ಅಶ್ವತ್ ಎಸ್.ಎಲ್, ಆದರ್ಶ ಎಂ.ಕೆ. ಅಮೃತ್ ರೈ ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಶೆಟ್ಟಿ ಮತ್ತು ಸುನೀಲ್ ಶೆಟ್ಟಿ, ಕಾರ್ಯಕ್ರಮವನ್ನು ಸಂಯೋಜಿಸಿದರು. ನರೇಶ್‌ ಹಾಗೂ ಪ್ರವೀಣ್ ಸಹಕರಿಸಿದರು.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಕಾವೇರಿ ನೀರು: ಸುಪ್ರೀಂನಲ್ಲಿ ರಾಜ್ಯಕ್ಕೆ ಬಿಗ್ ಶಾಕ್!

– ಕಾವೇರಿ ನೀರು: ಸುಪ್ರೀಂನಲ್ಲಿ ರಾಜ್ಯಕ್ಕೆ ಬಿಗ್ ಶಾಕ್!
– 15 ದಿನ ತಮಿಳುನಾಡಿಗೆ ನೀರು ಹರಿಸಲು ಆದೇಶ
– ರಾಜ್ಯದಲ್ಲಿ ಪ್ರತಿಭಟನೆ ಕಿಚ್ಚು: ಸಿನಿಮಾ ನಟರ ವಿರುದ್ಧ ಆಕ್ರೋಶ

NAMMUR EXPRESS NEWS
ನವದೆಹಲಿ: ಈಗಾಗಲೇ ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟಿನಲ್ಲೂ ಸಹ ಕರ್ನಾಟಕ್ಕೆ ಭಾರೀ ಹಿನ್ನಡೆಯಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಪರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಸೂಚನೆ ನೀಡಿದೆ. ಈ ಕುರಿತಂತೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಿದ್ದು, ಈ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಸೂಚಿಸಿದೆ. ತಮಿಳುನಾಡು ಪರ ವಕೀಲರಾದ ಮುಕುಲ್ ರೋಹಟಗಿ, ಸದ್ಯ ನೀರಿನ ಸಂಕಷ್ಟ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ನಡುವೆ ಕರ್ನಾಟಕ ಸಂಕಷ್ಟ ಸೂತ್ರವನ್ನು ಪಾಲಿಸುತ್ತಿಲ್ಲ. ಹೀಗಾಗಿ, ನಮ್ಮ ರಾಜ್ಯಕ್ಕೆ ಕಡಿಮೆ ನೀರು ದೊರೆಯುತ್ತಿದೆ ಎಂದರು. ಕರ್ನಾಟಕದ ಪರವಾಗಿ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದರು.

ರಾಜ್ಯದಲ್ಲಿ ಹೆಚ್ಚಿದ ಆಕ್ರೋಶ

ರಾಜ್ಯದಲ್ಲಿ ಕರವೇ ಸೇರಿದಂತೆ ಅನೇಕ ಸಂಘಟನೆಗಳು ಮಂಡ್ಯ, ಮೈಸೂರು ಸೇರಿ ಹಲವೆಡೆ ಪ್ರತಿಭಟನೆ ಶುರು ಮಾಡಿವೆ. ಕಾವೇರಿ ನೀರು ಹಂಚಿಕೆ ಬಗ್ಗೆ ಮಾತನಾಡದ ಸಿನಿಮಾ ನಟರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

Categories
ತೀರ್ಥಹಳ್ಳಿ

ವಾಗ್ದೇವಿ ಪಿ.ಯು ವಿದ್ಯಾರ್ಥಿಗಳ ಕ್ರೀಡಾ ಸಾಧನೆ!

ವಾಗ್ದೇವಿ ಪಿ.ಯು ವಿದ್ಯಾರ್ಥಿಗಳ ಕ್ರೀಡಾ ಸಾಧನೆ!
– ಶಿವಮೊಗ್ಗ ಜಿಲ್ಲಾಮಟ್ಟಕ್ಕೆ ಆಯ್ಕೆ: ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: 2023-24 ನೆಯ ಸಾಲಿನ ಪದವಿಪೂರ್ವ ಶಿಕ್ಷಣ ಇಲಾಖೆಯ ಬಾಲಕ-ಬಾಲಕಿಯರ ತಾಲ್ಲೂಕುಮಟ್ಟದ ಕ್ರೀಡಾಕೂಟವು ದಿನಾಂಕ 15-09-2023 ಮತ್ತು 16-09-2023 ರಂದು ಡಾ|| ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ವಾಗ್ದೇವಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷ ಎಂ.ಆರ್ ( ವಿಜ್ಞಾನ ವಿಭಾಗ ಎರಡನೆಯ ವರ್ಷ) 5000ಮೀ ಓಟ ಪ್ರಥಮ, 3000ಮೀ ಓಟ ಪ್ರಥಮ, 1500ಮೀ ಓಟ ಪ್ರಥಮ ಹಾಗೂ ಗುಡ್ಡಗಾಡು ಓಟದಲ್ಲಿ ಪ್ರಥಮ , ಮೊ.ಅರ್ಹಾನ್ ( ವಿಜ್ಞಾನ ವಿಭಾಗ ಪ್ರಥಮ ವರ್ಷ) 100 ಮೀ ಓಟ ಪ್ರಥಮ, ಶನುಷ್ಕಾ ( ವಿಜ್ಞಾನ ವಿಭಾಗ ಪ್ರಥಮ ವರ್ಷ) ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು, ಉಪನ್ಯಾಸಕ ವೃಂದ, ಪೋಷಕರು ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭಹಾರೈಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ: 238 ಗಣಪತಿ ಪೈಕಿ ಇನ್ನುಳಿದಿರುವುದು 39 ಮಾತ್ರ!

ತೀರ್ಥಹಳ್ಳಿ: 238 ಗಣಪತಿ ಪೈಕಿ ಇನ್ನುಳಿದಿರುವುದು 39 ಮಾತ್ರ!
– ತೀರ್ಥಹಳ್ಳಿ ತಾಲೂಕಿನೆಲ್ಲೆಡೆ ಶಾಂತಿಯುತ ಗಣೇಶೋತ್ಸವ: ಸಾಂಸ್ಕೃತಿಕ ಸಂಭ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಈ ಬಾರಿ 238 ಕಡೆ ಗಣಪತಿ ಉತ್ಸವವನ್ನು ಆಯೋಜನೆ ಮಾಡಿದ್ದು, ಗಣೇಶವನ್ನು ಕೂರಿಸಲಾಗಿತ್ತು. ಈಗಾಗಲೇ ಮೊದಲ ದಿನ 60 ಗಣೇಶ, ಮೂರನೇ ದಿನ 139 ಗಣಪತಿಗಳನ್ನು ವಿಸರ್ಜನೆ ಮಾಡಲಾಗಿದೆ. ಇನ್ನುಳಿದ 39 ಗಣಪತಿಗಳನ್ನು 5 ಮತ್ತು 9 ಮತ್ತು 15 ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ. ತೀರ್ಥಹಳ್ಳಿ ತಾಲೂಕಿನ ಮಾಳೂರು, ಆಗುಂಬೆ, ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶೋತ್ಸವವನ್ನು ನಡೆಸಿದ್ದು ಬಹುತೇಕ ಕಡೆ ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗಿದ್ದು ಎಲ್ಲಾ ಕಡೆ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪೊಲೀಸ್ ಇಲಾಖೆ ಅಚ್ಚುಕಟ್ಟಿನ ಬಂದೋ ಬಸ್ತ್ ಮಾಡಲಾಗಿದ್ದು ಸಂಘ ಸಂಸ್ಥೆಗಳು ಕೂಡ ಅಚ್ಚು ಕಟ್ಟಿನ ಕಾರ್ಯಕ್ರಮ ಮಾಡಿದೆ. ಅನೇಕ ಭಾಗಗಳಲ್ಲಿ ಅದ್ದೂರಿ ಕಾರ್ಯಕ್ರಮಗಳನ್ನು ಕೂಡ ಆಯೋಜನೆ ಮಾಡಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗು!

ತೀರ್ಥಹಳ್ಳಿಯ ಬಹುತೇಕ ಕಡೆ ಅತ್ಯುತ್ತಮ ಗಣೇಶೋತ್ಸವ ನಡೆದಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನ ಸೆಳೆದಿದೆ. ವಿದ್ಯುತ್ ಅಲಂಕಾರ ಮಾಡಲಾಗಿತ್ತು.

Categories
ರಾಜ್ಯ

ಪ್ರೀತಿ ನಿರಾಕರಿಸಿದ್ದಕ್ಕೆ ಕಾಲೇಜು ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಹಲ್ಲೆ

ಪ್ರೀತಿ ನಿರಾಕರಿಸಿದ್ದಕ್ಕೆ ಕಾಲೇಜು ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಹಲ್ಲೆ
– ಠಾಣೆಗೆ ಕರೆಸಿ ಥಳಿಸಿದ್ದ ಇನ್ಸ್‌ಸ್ಪೆಕ್ಟರ್, ಕ್ಷಮಿಸಿಬಿಡು ಅಂತ ಹೆಂಡ್ತಿಗೆ ಸಂದೇಶ ಕಳುಹಿಸಿ ಗಂಡ ಆತ್ಮಹತ್ಯೆ
– ಜೀವಕ್ಕೆ ಕುತ್ತು ತಂದ ಎಣ್ಣೆಪೆಟ್ಟು; ಮಗಳಿಗೆ ಬೈದಿದ್ದಕ್ಕೆ ಸ್ನೇಹಿತನ ಹತ್ಯೆ!
– ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಸಾವು

NAMMUR EXPRESS NEWS
ಕೋಲಾರ: ಪ್ರೀತಿಸಲು ನಿರಾಕರಿಸಿದ ಹಿನ್ನೆಲೆ ಪಾಗಲ್ ಪ್ರೇಮಿಯೊಬ್ಬ ಕಾಲೇಜು ವಿದ್ಯಾರ್ಥಿನಿ ಮೇಲೆ ಬೇಡ್ ನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್‌ನ ಚಾಂಪಿಯನ್ ರೀಫ್ ನಗರದಲ್ಲಿರುವ ಖಾಸಗಿ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದಿದೆ.
ದ್ವಿತೀಯ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪ್ರೀತಮ್ ಪ್ರಭು ಎಂಬ ಯುವಕ, ಪ್ರಥಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದರಂತೆ ಇಂದು ಸಹ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಒತ್ತಾಯಿಸಿದ್ದ. ಆದರೆ ವಿದ್ಯಾರ್ಥಿನಿ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಯುವಕ ವಿದ್ಯಾರ್ಥಿನಿಯ ಕುತ್ತಿಗೆಗೆ ಬ್ಲಡ್ ನಿಂದ ಇರಿದಿದ್ದಾನೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಹಲ್ಲೆಗೊಳಗಾಗಿರುವ ವಿದ್ಯಾರ್ಥಿನಿ ಮೂಲತಃ ಬೆಂಗಳೂರಿನವಳಾಗಿದ್ದು, ವಿದ್ಯಾಭ್ಯಾಕ್ಕಾಗಿ ಕೆಜಿಎಫ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ನೆಲೆಸಿದ್ದಳು. ಘಟನಾ ಸ್ಥಳಕ್ಕೆ ಉರಿಗಾಂ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಠಾಣೆಗೆ ಕರೆಸಿ ಥಳಿಸಿದ್ದ ಇನ್ಸ್‌ಸ್ಪೆಕ್ಟರ್, ಕ್ಷಮಿಸಿಬಿಡು ಅಂತ ಹೆಂಡ್ತಿಗೆ ಸಂದೇಶ ಕಳುಹಿಸಿ ಗಂಡ ಆತ್ಮಹತ್ಯೆ!

ಬೆಂಗಳೂರು: ಸಾಲದ ವಿಚಾರವಾಗಿ ಠಾಣೆಗೆ ಕರೆಸಿ ವೈಯಾಲಿಕಾವಲ್ ಠಾಣೆ ಇನ್‌ಸ್ಪೆಕ್ಟರ್ ಥಳಿಸಿದರು ಎಂದು ಆರೋಪಿಸಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಘಟ್ಟಪುರ ಸಮೀಪ ಬುಧವಾರ ನಡೆದಿದೆ.
ರಘುವನಹಳ್ಳಿಯ ಬಿಸಿಎಂ ಲೇಔಟ್ ನಿವಾಸಿ ವಿ.ನಾಗರಾಜ್ (47) ಮೃತ ದುರ್ದೈವಿ. ಕೆಲಸಕ್ಕೆ ತೆರಳಿದ್ದ ಪತ್ನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತನ ಪತ್ನಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಗಳಿಗೆ ಬೈದಿದ್ದಕ್ಕೆ ಸ್ನೇಹಿತನನ್ನೇ ಕೊಂದ!

ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಮಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿ ಬಳಿಕ ಶವವನ್ನು ಸ್ಥಳಾಂತರ ಮಾಡಲು ಹೋಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ನೇಪಾಳ ಮೂಲದ ತೇಜೇಶ್ವರ್ ಹತ್ಯೆಯಾದವ. ಧರ್ಮೇಂದ್ರ ಸಿಂಗ್ ಕೊಲೆಗೈದ ಆರೋಪಿ. ಇಬ್ಬರೂ ದಿನ್ನೂರು ಸಿಗೇಹಳ್ಳಿಯ ನೇಪಾಳಿ ಕಾಲೋನಿ ನಿವಾಸಿಗಳಾಗಿದ್ದಾರೆ. ಹೋಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ತೇಜೇಶ್ವರ್ ಅತಿಯಾದ ಕುಡಿತದ ಚಟವನ್ನು ಮೈ ಗೂಡಿಸಿಕೊಂಡಿದ್ದ. ಕುಡಿತದ ಹಿನ್ನೆಲೆ 2 ತಿಂಗಳ ಹಿಂದೆ ಕೆಲಸದಿಂದ ಹೋಟೆಲ್ ಮಾಲೀಕ ಕಿತ್ತು ಹಾಕಿದ್ದ.

ಹೀಗಾಗಿ ಮೂವರು ನೇಪಾಳಿಗಳನ್ನು ಕರೆದುಕೊಂಡು ತೇಜೇಶ್ವರ್ ಬಾ‌ರ್ ಗೆ ಹೋಗಿದ್ದ. ಈ ವೇಳೆ ತೇಜೇಶ್ವರ್ ಹಾಗೂ ಧರ್ಮೇಂದ್ರ ಸಿಂಗ್ ನಡುವೆ ಗಲಾಟೆಯಾಗಿದೆ. ಈ ಗಲಾಟೆ ಧರ್ಮೇಂದ್ರ ಮನೆಯವರೆಗೂ ತಲುಪಿತ್ತು. ಕುಡಿತ ಮತ್ತಿನಲ್ಲಿ ಮನೆಗೆ ಬಂದು ಗಲಾಟೆ ಮಾಡಿ ತನ್ನ ಮಗಳನ್ನು ಬೈದ ಎಂದು ಪ್ಲಾಸ್‌ನಿಂದ ಬಡಿದು ಧರ್ಮೇಂದ್ರ ಸಿಂಗ್ ಕೊಂದಿದ್ದಾನೆ. ನಂತರ ಸಂಜೆಯವರೆಗೆ ಮನೆಯಲ್ಲಿ ಮೃತದೇಹವನ್ನು ಧರ್ಮೇಂದ್ರ ಇಟ್ಟುಕೊಂಡಿದ್ದ. ನಂತರ ಮತ್ತೊಬ್ಬನಿಗೆ ಹಣ ಕೊಡುತ್ತೇನೆ, ಮೃತದೇಹ ಎಸೆದು ಬರುವಂತೆ ತಿಳಿಸಿದ್ದ. ಕರೆ ಸ್ವೀಕರಿಸಿದವನು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದ. ಹೀಗಾಗಿ ಸ್ಥಳಕ್ಕೆ ಕಾಡುಗೋಡಿ ಪೊಲೀಸರು ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಸಾವು!

ಧಾರವಾಡ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ನಡೆದಿದೆ. ಹುಚ್ಚೇಶ ಹಿರೇಗೌಡರ (37) ಮೃತ ಕ್ಯಾನ್ಸ್‌ಟೇಬಲ್. ಇದೇ ವೇಳೆ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳಾ ಕಾನ್ಸ್‌ಟೇಬಲ್‌ಗೆ ಗಂಭೀರ ಗಾಯಗಳಾಗಿವೆ. ಛಬ್ಬಿ ಗಣೇಶೋತ್ಸವ ಬಂದೋಬಸ್ತ್ಗೆ ತೆರಳಿದ್ದ ಸಿಬ್ಬಂದಿ ಡ್ಯೂಟಿ ಮುಗಿಸಿ ಮರಳಿ ಬರುವಾಗ ಅಪಘಾತ ನಡೆದಿದೆ. ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಕಾನ್ಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Categories
ಹೊಸನಗರ

ಹೊಸನಗರ ತಾಲೂಕಿನಲ್ಲಿ ಗಣೇಶೋತ್ಸವದ ರಂಗು!

ಹೊಸನಗರ ತಾಲೂಕಿನಲ್ಲಿ ಗಣೇಶೋತ್ಸವದ ರಂಗು!
– ರಿಪ್ಪನ್ ಪೇಟೆ, ಹುಂಚ, ಹೊಸ ನಗರದಲ್ಲಿ ಅದ್ದೂರಿ ಗಣೇಶೋತ್ಸವ
– ಶಾಂತಿಯುತ ಹಬ್ಬ: ಪೊಲೀಸ್ ಇಲಾಖೆ ಬಂದೋಬಸ್ತ್

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನಲ್ಲಿ ಸಂಭ್ರಮದಿಂದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಹೊಸನಗರ, ರಿಪ್ಪನ್ ಪೇಟೆ, ನಗರ, ಹುಂಚ ಸೇರಿದಂತೆ ಬಹುತೇಕ ಭಾಗಗಳಲ್ಲಿ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗಿದೆ.
ತಾಲೂಕಿನಲ್ಲಿ ರಿಪ್ಪನ್ ಪೇಟೆ ಹಿಂದೂ ಮಹಾ ಸಭಾ ಗಣಪತಿ ಗಮನ ಸೆಳೆದಿದೆ. ಇಲ್ಲಿ ಕೂಡ ಅದ್ದೂರಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಹೊಸನಗರ ಪಟ್ಟಣದಲ್ಲೂ ಕೂಡ ಅನೇಕ ಭಾಗಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಸಂಭ್ರಮದ ಗಣೇಶೋತ್ಸವವನ್ನು ಆಚರಿಸಲಾಗಿದ್ದು, ಈಗಾಗಲೇ ಅನೇಕ ಗಣೇಶ ವಿಸರ್ಜನೆ ಮಾಡಲಾಗಿದೆ.

ಹೊಸನಗರ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗಣೇಶೋತ್ಸವವನ್ನು ಸಾರ್ವಜನಿಕರು, ಭಕ್ತರು ಹಾಗೂ ಸಂಘ ಸಂಸ್ಥೆಗಳು ಅಚ್ಚುಕಟ್ಟಾಗಿ ಆಚರಣೆ ಮಾಡಿದ್ದಾರೆ. ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಣೆ ಮಾಡಿದ್ದು ಅನೇಕ ಕಡೆ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.