Categories
ರಾಷ್ಟ್ರೀಯ ವಾರ್ತೆ

ಮಹಿಳಾ ಮೀಸಲಾತಿ ಮಸೂದೆ ಪಾಸ್!

ಮಹಿಳಾ ಮೀಸಲಾತಿ ಮಸೂದೆ ಪಾಸ್!
– ಪ್ರಧಾನಿ ಮೋದಿ ಅಭಿನಂದಿಸಿದ ಮಹಿಳಾ ಸಂಸದರು
– ಇನ್ಮುಂದೆ ರಾಜಕೀಯದಲ್ಲಿ ಶೇ.33 ಮೀಸಲಾತಿ
– ಲೋಕ ಸಭೆ, ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನ

NAMMUR EXPRESS NEWS
ನವದೆಹಲಿ: ಗುರುವಾರ ರಾತ್ರಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ, ನಾರಿ ಶಕ್ತಿ ವಂದನ್ ಅಧಿನಿಯಂ ಅಂಗೀಕಾರದ ನಂತರ ಪ್ರಧಾನಿ ಮೋದಿ ಅವರು ಮಹಿಳಾ ಸಂಸದರನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ‘ಭಾರತವು ಉಜ್ವಲ, ಹೆಚ್ಚು ಅಂತರ್ಗತ ಭವಿಷ್ಯದ ಹೊಸ್ತಿಲಲ್ಲಿ ನಿಂತಿದೆ. ಬದಲಾವಣೆಯ ಜ್ಯೋತಿಯನ್ನು ಹೊತ್ತವರು, ತಾವು ಪ್ರತಿಪಾದಿಸಿದ ಶಾಸನವನ್ನು ಆಚರಿಸಲು ಒಗ್ಗೂಡುವುದನ್ನು ನೋಡುವುದು ಸಂತೋಷದ ಸಂಗತಿ’ ಎಂದಿದ್ದಾರೆ.

ಪ್ರಧಾನಿಯವರು ಮಹಿಳಾ ಸಂಸದರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ನೀಡಿದರು, ಅವರಲ್ಲಿ ಹಲವರು ಮಸೂದೆ ಅಂಗೀಕಾರದ ಸಂಭ್ರಮ ಆಚರಿಸಲು ಸಿಹಿ ಹಂಚಿದರು. ಮಹಿಳಾ ಸಂಸದರು ಪ್ರಧಾನಿಯನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಸೂದೆಯ ಅಂಗೀಕಾರದಲ್ಲಿ ಪ್ರಧಾನಿ ಅವರ ನಿರ್ಣಾಯಕ ನಾಯಕತ್ವಕ್ಕಾಗಿ ಅನೇಕ ಮಹಿಳಾ ಸದಸ್ಯರು ಸಹ ಪ್ರಶಂಸಿಸಿದ್ದಾರೆ. ಪ್ರಧಾನಿ ಮೋದಿ ಅವರು ಶಾಸನವನ್ನು ಬೆಂಬಲಿಸಿದ್ದಕ್ಕಾಗಿ ಸಂಸದರಿಗೆ ಕೃತಜ್ಞತೆ ಸಲ್ಲಿಸಿದರು.

Categories
ಬೆಂಗಳೂರು ಮಂಡ್ಯ ಮೈಸೂರು

ಕಾವೇರಿದ ಕಾವೇರಿ ಕಿಚ್ಚು..!

ಕಾವೇರಿದ ಕಾವೇರಿ ಕಿಚ್ಚು..!
– ಬೆಂಗಳೂರು, ಮಂಡ್ಯ, ಮೈಸೂರಲ್ಲಿ ಹೋರಾಟ
– ನಿರ್ಮಲಾನಂದ ಶ್ರೀ ಸಾಥ್: ನಾಳೆ ಮಂಡ್ಯ ಬಂದ್?
– ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

NAMMUR EXPRESS NEWS
ಬೆಂಗಳೂರು : 15 ದಿನಗಳವರೆಗೂ ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸಲು ರಾಜ್ಯಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಇದೀಗ ಕರುನಾಡಲ್ಲಿ ಕಾವೇರಿ ಕಿಚ್ಚು ಹೆಚ್ಚಿದ್ದು, ಹಲವು ಸಂಘಟನೆಗಳು ತೀವ್ರ ಪ್ರತಿಭಟನೆಗೆ ಮುಂದಾಗಿದೆ. ಕರವೇ ವಿಧಾನ ಸೌಧ ಮುತ್ತಿಗೆಗೆ ಮುಂದಾಗಿದ್ದು ಪೊಲೀಸರು ತಡೆದಿದ್ದಾರೆ. ಈ ಬೆನ್ನಲ್ಲೇ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ಆಗದಂತೆ ನಗರದ ಪೊಲೀಸರು ಹೈ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. (ಸೆ.22) ಬೆಳಗ್ಗೆ 11 ಗಂಟೆಯ ನಂತರ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಿನ್ನಲೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪೊಲೀಸರ ಭದ್ರತೆ ನಿಯೋಜಿಸಲಾಗಿದೆ.

ಶನಿವಾರ ಮಂಡ್ಯ ಬಂದ್!

ಮಂಡ್ಯ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಪ್ರಾಧಿಕಾರದ ಆದೇಶಕ್ಕೆ ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ಸಿಗದಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ ಗುರುವಾರ ಜಿಲ್ಲೆಯ ವಿವಿಧೆಡೆ ಸಂಘಟನೆಗಳ ಮುಖಂಡರು ಬೀದಿಗಿಳಿದು ಪ್ರತಿಭಟಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಸೆ.23ರಂದು ಮಂಡ್ಯ ಜಿಲ್ಲಾ ಬಂದ್‌ಗೆ ಕರೆ ನೀಡಿದರು.

ನಿರ್ಮಲಾನಂದ ಶ್ರೀ ಸಾಥ್!

ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರಕಾರ ಮಧ್ಯಸ್ಥಿಕೆ ಮಾಡಬೇಕು. ರಾಜ್ಯ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಮಳೆ ಕಡಿಮೆ ಆದರೆ ಈ ಭಾಗದ ಕಥೆ ಏನು? ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀ ಹೇಳಿದ್ದಾರೆ.
ಮಂಡ್ಯದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿ ಈ ಬಾರಿ ನೀರು ಕೊರತೆ ಇದೆ. ಬೆಳೆ ಹೋಗಲಿ ಜನರಿಗೆ ಕುಡಿಯುವ ನೀರಿಲ್ಲ. ಹಲವು ದಶಕಗಳಿಂದ ಈ ಸಮಸ್ಯೆ ಮುಗಿದಿಲ್ಲ. ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ. ಆದರೆ ರಾಜ್ಯಕ್ಕೆ ನ್ಯಾಯ ಸಿಗಬೇಕು ಎಂದರು.

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ಡಿಕೆಶಿ ಅವಹೇಳನ: ಈಶ್ವರಪ್ಪ ವಿರುದ್ಧ ದೂರು!
– ಡಿಕೆ ಶಿವಕುಮಾರ್ ಅಭಿಮಾನಿ ಬಳಗದಿಂದ ಎಸ್ಪಿಗೆ ದೂರು
– ಸಾಗರ: ಅಪ್ರಾಪ್ತರಿಗೆ ಸಿಗರೇಟ್ ಮಾರಾಟ: ಅಂಗಡಿ ಮೇಲೆ ಪೊಲೀಸರ ದಾಳಿ
– ಸೊರಬ: ಅರೆಕಾಲಿಕ ಉಪನ್ಯಾಸಕರ ಅರ್ಜಿ ಆಹ್ವಾನ
– ಭದ್ರಾವತಿ: ರೀಲ್ಸ್ ಮಾಡಲು ಹೋಗಿ ಪೊಲೀಸ್ ಅತಿಥಿಯಾದರು!
– ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಮಲಗಿದ್ದವನ ಮೊಬೈಲ್, ಹಣ ಮಾಯ!

NAMMUR EXPRESS NEWS
ಶಿವಮೊಗ್ಗ: ಡಿ.ಕೆ ಶಿವಕುಮಾರ್ ವಿರುದ್ಧ ಅವಹೇಳನ ಕಾರಿ ಹೇಳಿಕೆ ನೀಡಿದ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗ ಜಿಲ್ಲಾ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಎಸ್ .ಪಿ.ಕಚೇರಿಗೆ ದೂರು ನೀಡಲಾಗಿದೆ. ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷರಾದ ಆರ್.ಮೋಹನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಎಸ್ ಪಿ ಕಚೇರಿಗೆ ದೂರು ಕೊಡಲಾಯಿತು. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ನಾಗೇಶ್ ಮೊಘವೀರ್ ಮೇಳಿಗೆ, ಹೊಸನಗರ ಅಧ್ಯಕ್ಷರಾದ ವಿಶ್ವನಾಥ ಕೌರಿ, ಪ್ರಮುಖರಾದ ಮಹೇಂದ್ರ ಕುಂಟುವಳ್ಳಿ ಹಾಗೂ ಸಂತೋಷ್ ಕಂತುಗದ್ದೆ,ಸುಧಾಕರ್ ಕಂತುಗದ್ದೆ ಇನ್ನು ಮುಂತಾದ ಗಣ್ಯರ ಸಮ್ಮುಖದಲ್ಲಿ ದೂರು ನೀಡಲಾಯಿತು.

ಅಪ್ರಾಪ್ತರಿಗೆ ಸಿಗರೇಟ್ ಮಾರಾಟ: ಅಂಗಡಿ ಮೇಲೆ ಪೊಲೀಸರ ದಾಳಿ

ಸಾಗರ ನಗರದಲ್ಲಿ ಅಪ್ರಾಪ್ತ ಯುವಕರಿಗೆ ಸಿಗರೇಟ್ ಮಾರುತಿದ್ದ ಅಂಗಡಿಗಳ ಮೇಲೆ ಪೋಲಿಸ್ ಇಲಾಖೆ ದಾಳಿ ನಡೆಸಿದೆ.
ಸಾಗರ ನಗರದ ಹೊಸ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಜ್ಯೂಸ್ ಸೆಂಟರ್ ನಲ್ಲಿ ಹದಿನೆಂಟು ವರ್ಷಕ್ಕಿಂತ ಕಡಿಮೆ ಯುವಕರಿಗೆ ಸಿಗರೇಟ್ ಮಾರುತ್ತಿದ್ದ ಅಂಗಡಿ ಮಾಲಿಕನ ಮೇಲೆ ಸಾಗರದ ಡಿವೈ.ಎಸ್.ಪಿ ಗೋಪಾಲಕೃಷ್ಣ ಟಿ ನಾಯ್ಕ್ ನೇತೃತ್ವದಲ್ಲಿ ದಾಳಿ ಮಾಡಿ ಮಾಲಿಕನ ಮೇಲೆ ಪ್ರಕರಣ ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

ಸೊರಬ: ಅರೆಕಾಲಿಕ ಉಪನ್ಯಾಸಕರ ಅರ್ಜಿ ಆಹ್ವಾನ

ಸೊರಬದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ವತಿಯಿಂದ 2023-24 ನೇ ಶೈಕ್ಷಣಿಕ ಸಾಲಿಗೆ ಕೆಳಕಂಡ ವಿಭಾಗಗಳಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಅರೆಕಾಲಿಕ ಉಪನ್ಯಾಸಕರ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಯಾ ವಿಭಾಗಗಳ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಗಳನ್ನು ನಡೆಸಲು ಅರೆಕಾಲಿಕ ಉಪನ್ಯಾಸಕರುಗಳ ಅವಶ್ಯಕತೆ ಇರುವುದರಿಂದ ಇ ಮತ್ತು ಸಿ ವಿಭಾಗ, ಆಟೋಮೊಬೈಲ್ ವಿಭಾಗ, ಸಿ.ಎ ವಿಭಾಗ, ಮೆಕ್ಯಾನಿಕಲ್ ವಿಭಾಗಗಳಿಗೆ ಬಿ.ಇ ಇನ್ ಇ ಮತ್ತು ಸಿ, ಬಿ.ಇ ಇನ್ ಆಟೋಮೊಬೈಲ್,ಬಿ.ಇ ಇನ್ ಸಿ.ಎಸ್, ಬಿ.ಇ ಇನ್ ಮೆಕ್ಯಾನಿಕ್ ಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಅಂಕಪಟ್ಟಿ, ಪ್ರಮಾಣಪತ್ರ, ರೆಸ್ಯೂಮ್, ಫೋಟೊ ಅಗತ್ಯ ದಾಖಲೆಗಳೊಂದಿಗೆ ಸೊರಬ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರ ಕಚೇರಿಗೆ ಸಲ್ಲಿಸತಕ್ಕದ್ದು ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೇಸ್ ಬುಕ್ ರೀಲ್ಸ್ ಮಾಡಲು ಹೋಗಿ ತಗಲಾಕೊಂಡ ಯುವಕರು!

ಭದ್ರಾವತಿ: ಗಣಪತಿ ಪ್ರತಿಷ್ಠಾಪನ ವೇಳೆ ಆಯುಧಗಳನ್ನ ತೋರಿಸಿ ಕುಣಿದು ಕುಪ್ಪಳಿಸಿದ್ದ ಯುವಕರಿಬ್ಬರನ್ನ ಪೊಲೀಸರು ಠಾಣೆಗೆ ತಂದು ವಾರ್ನಿಂಗ್ ಕೊಟ್ಟು ಕಳುಹಿಸಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಫೇಸ್ ಬುಕ್ ನಲ್ಲಿ ಮಿಂಚಿಕೊಳ್ಳಲು ಹೋಗಿದ್ದ ಯುವಕರು ಪೊಲೀಸರ ಅತಿಥಿಯಾಗಿ ಹೊರಬಂದಿದ್ದಾರೆ. ಗಣಪತಿ ಹಬ್ಬದ ದಿನದಂದು ಗಣಪತಿ ಪ್ರತಿಷ್ಠಾಪನೆಯ ವೇಳೆ ಗಣಪತಿಯನ್ನ‌ ಮೆರವಣಿಗೆಯಲ್ಲಿ ತರುವಾಗ‌ ಅರಕೆರೆ ಗ್ರಾಮದ‌ ಯುವಕರು ಆಯುಧ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡಿರುವುದು ಡೊಳ್ಳು ನಾದಕ್ಕೆ. ಆದರೆ ಈ ವೀಡಿಯೋವನ್ನ ಫೇಸ್ ಬುಕ್ ರೀಲ್ ಗೆ ಹಾಕಿಕೊಂಡು ತಗಲಾಕಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಆಯುಧ ಹಿಡಿದು ಕುಳಿದು ಕುಪ್ಪಳಿಸಿದ ಯುವಕರು ಡಾಲಿ ದನಂಜಯ್ ಅಭಿನಯದ “ರೌಡಿಗಳು ನಾವು ರೌಡಿಗಳು” ಎಂಬ ಸಿನಿಮಾ ಹಾಡು ಮಿಕ್ಸ್ ಮಾಡಿ ಫೇಸ್ ಬುಕ್ ರೀಲ್ಸ್ ಗೆ ಅಪ್ಲೋಡ್ ಮಾಡಿದ್ದಾರೆ. ಎರಡು ದಿನ ತಣ್ಣಗೆ ಕುಳಿತಿದ್ದ ಯುವಕರು ಫೇಸ್ ಬುಕ್ ರೀಲ್ಸ್ ನಲ್ಲಿ ಮಿಂಚಿಕೊಳ್ಳಲು ಮುಂದಾಗಿದ್ದಾರೆ. ಇವತ್ತು ಅಪ್ಲೋಡ್ ಆಗುತ್ತಿದ್ದಂತೆ‌ ಅಲರ್ಟ್ ಆದ ಹೊಳೆಹೊನ್ನೂರು ಪೊಲೀಸರು ತಲವಾರು ಹಿಡಿದು ಕುಪ್ಪಳಿಸಿದ ಯುವಕರನ್ನ ಠಾಣೆಗೆ ತಂದು ಕೂರಿಸಿ ಎಚ್ಚರಿಸಿ ಕಳುಹಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಮಲಗಿದ್ದವನ ಮೊಬೈಲ್, ಹಣ ಮಾಯ!

ಶಿವಮೊಗ್ಗ : ಬಸ್ಸಿಗೆ ಕಾಯುತ್ತ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯ ಜೇಬಿನಲ್ಲಿದ್ದ ಮೊಬೈಲ್‌ ಮತ್ತು ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ನ್ಯಾಮತಿಯ ಭರತ್‌ ಎಂಬುವವರು ಮಂಗಳೂರಿಗೆ ತೆರಳಲು ತಮ್ಮೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ರಾತ್ರಿ 12 ಗಂಟೆಗೆ ಬಸ್‌ ಬರಲಿದೆ ಎಂದು ನಿಲ್ದಾಣದಲ್ಲಿಯೇ ಮಲಗಿದ್ದರು. ರಾತ್ರಿ 11.30ಕ್ಕೆ ಎಚ್ಚರವಾದಾಗ ಜೇಬಿನಲ್ಲಿದ್ದ 11 ಸಾವಿರ ರೂ. ಮೌಲ್ಯದ ವೀವೋ ಮೊಬೈಲ್‌ ಮತ್ತು 900 ರೂ. ನಗದು ಕಳ್ಳತನವಾಗಿತ್ತು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಹಿಲಿಕೆರೆ ಗಣೇಶೋತ್ಸವಕ್ಕೆ ಇಂದು ಅದ್ದೂರಿ ತೆರೆ!

ಹಿಲಿಕೆರೆ ಗಣೇಶೋತ್ಸವಕ್ಕೆ ಇಂದು ಅದ್ದೂರಿ ತೆರೆ!
– ಲಕ್ಷಾಂತರ ರೂ.ಪಟಾಕಿ ಸಿಡಿತದೊಂದಿಗೆ ಮೂಡಲಿದೆ ಸಣ್ಣ ತೆಪೋತ್ಸವ!
– ತೀರ್ಥಹಳ್ಳಿ ತಾಲೂಕಿನಲ್ಲೆ ವಿಜೃಂಭಣೆಯ ಗಣಪತಿ ವಿಸರ್ಜನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿಯೇ ವಿಜೃಂಭಣೆಯ ಗಣೇಶೋತ್ಸವಕ್ಕೆ ಹೆಸರಾಗಿರುವ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಲಿಕೆರೆಯಲ್ಲಿ ಶುಕ್ರವಾರ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕಳೆದ ಐದು ದಿನಗಳಿಂದ ಅದ್ದೂರಿ ಸಾಂಸ್ಕೃತಿಕ ಸ್ಪರ್ಧೆ, ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಅನ್ನಸಂತರ್ಪಣೆ, ಸತ್ಯನಾರಾಯಣ ವ್ರತ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆದವು. ಸಾವಿರಾರು ಜನ ಗಣಪತಿ ಕಾರ್ಯಕ್ರಮದಲ್ಲಿ ಭಾಗಿಯಾದರು.

47ನೇ ವರ್ಷದ ಸಂಭ್ರಮದಲ್ಲಿ ಹೊಸ ಸಮುದಾಯ ಭವನ!

ವಾಟಿಗಾರು, ಹಡಗಿನ ಮಕ್ಕಿ, ಹಿಲಿಕೆರೆ ಗಣೇಶೋತ್ಸವದ ಅಂಗವಾಗಿ ಈಗಾಗಲೇ ಅತಿ ದೊಡ್ಡ ಸಮುದಾಯ ಭವನ ಹಾಗೂ ವೇದಿಕೆಯನ್ನು ಗಣೇಶೋತ್ಸವ ಹಾಗೂ ಸ್ಥಳೀಯ ಅಂಟಿಗೆ ಪಿಂಟಿಗೆ ತಂಡದ ಹಣ ಸಂಗ್ರಹಿಸಿ ನಿರ್ಮಾಣ ಮಾಡಲಾಗಿದೆ. ಸಾವಿರ ಜನರ ಕಾರ್ಯಕ್ರಮಕ್ಕೆ ಸುಸಜ್ಜಿತ ವ್ಯವಸ್ಥೆ ಇದೆ. ಇಲ್ಲಿನ ಒಗ್ಗಟ್ಟು ಗಮನ ಸೆಳೆದಿದೆ. ವಾಟಿಗಾರು ಸದಾನಂದ ಗೌಡ ಗೌರವ ಅಧ್ಯಕ್ಷರಾಗಿರುವ, ಸುಬ್ರಮಣ್ಯ ಅಂಚೆಮನೆ ಅಧ್ಯಕ್ಷರಾಗಿ ನೂರಾರು ಯುವಕರ ಸಂಘಟನೆಯ ಶ್ರಮದಿಂದ ಸಾಮಾಜಿಕವಾಗಿಯೂ ಕೂಡ ಮಾದರಿ ಕೆಲಸವನ್ನು ಹಿಲಿಕೆರೆ ಸಮಿತಿ ಮಾಡಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಹೊಸತೋಟ ಶಿಕ್ಷಕ ಅಣ್ಣಪ್ಪ ಅರಬಗಟ್ಟೆ ಹಾಗೂ ಸ್ಥಳೀಯರನ್ನು ಹಾಗೂ ಮುರಾರ್ಜಿ ಶಾಲೆಯಲ್ಲಿ ಕ್ರೀಡಾಕೂಟಕ್ಕೆ ನೆರವು ನೀಡಿದ ಸುಹಾಸ್ ಹಾಗೂ ಸತೀಶ್ ಅವರನ್ನು ಕೂಡ ಗೌರವಿಸಲಾಗಿದೆ. ಜೊತೆಗೆ ಅನೇಕ ಪ್ರತಿಭೆಗಳನ್ನು ಇಲ್ಲಿ ಗೌರವಿಸಲಾಗುತ್ತಿದೆ. ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಇದೀಗ ಕೊನೆಯ ಹಂತಕ್ಕೆ ಬಂದಿದೆ.

ಮಧ್ಯ ರಾತ್ರಿ ಮೆರವಣಿಗೆ: ಪಟಾಕಿ ರಂಗು!

ಶ್ರೀ ಗಜಾನನ ಸೇವಾ ಸಮಿತಿ ಹಿಲಿಕೆರೆ ವತಿಯಿಂದ 47 ನೇ ಗಣೇಶೋತ್ಸವಕ್ಕೆ ಇಂದು ಅದ್ದೂರಿ ತೆರೆ ಬೀಳಲಿದೆ. ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ಲಕ್ಷಾಂತರ ರೂ ಪಟಾಕಿಯನ್ನು ದೇವಂಗಿ ಸರ್ಕಲ್ ನಲ್ಲಿ ಸಿಡಿಸಲಾಗುತ್ತದೆ. ಅದ್ದೂರಿ ಅಲಂಕಾರ, ಲೈಟಿಂಗ್ಸ್, ನಡುವೆ ದೇವಂಗಿ ಮತ್ತು ಹಿಲಿಕೆರೆ ಎರಡು ಗಣಪತಿಗಳ ಸಮಾಗಮವಾಗಲಿದೆ. ಶಾಂತಿಯುತವಾಗಿ ಕಳೆದ ಎಲ್ಲ ವರ್ಷಗಳಲ್ಲೂ ಗಣಪತಿ ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಹಿಲಿಕೆರೆ ಮತ್ತು ದೇವಂಗಿ ಗಣೇಶೋತ್ಸವಗಳು ನಡೆಸಿಕೊಂಡು ಬಂದಿದೆ. ಈ ಎರಡು ಗಣಪತಿಗಳು ತಾಲೂಕಿನಲ್ಲೆ ಗಮನ ಸೆಳೆದಿದೆ. ಅದ್ದೂರಿ ಮೆರವಣಿಗೆ ಹಾಗೂ ರಾಜಬೀದಿ ಉತ್ಸವ ಹಾಗೂ ಪಟಾಕಿಸಿಡಿತ ಎಳ್ಳಮಾವಾಸೆಯನ್ನು ನೆನಪು ಮಾಡಿಕೊಡಲಿದೆ. ಸರ್ವರನ್ನು ಗಣೇಶ ಸಮಿತಿ ಸ್ವಾಗತಿಸಿದೆ.

Categories
ಮಲ್ನಾಡ್

ಯುವತಿಯ ಫೋಟೋ ವೈರಲ್: 10 ಮಂದಿ ಮೇಲೆ ಕೇಸ್!

ಯುವತಿಯ ಫೋಟೋ ವೈರಲ್: 10 ಮಂದಿ ಮೇಲೆ ಕೇಸ್!
– ಅನ್ಯಕೋಮಿನ ಜೋಡಿಯನ್ನು ತಡೆದ ಯುವಕರು
– ಆಗುಂಬೆಯಲ್ಲಿ ನಡೆದಿದ್ದ ಘಟನೆ

NAMMUR EXPRESS NEWS
ತೀರ್ಥಹಳ್ಳಿ/ ಕಾಪು: ಅನ್ಯ ಕೋಮಿನ ಯುವಕನ ಜತೆ ಇದ್ದ ಯುವತಿಯ ಫೋಟೋ ವೈರಲ್ ಮಾಡಿರುವ ಆರೋಪದ ಮೇಲೆ 10 ಮಂದಿ ಮೇಲೆ ಕೇಸ್ ದಾಖಲಾಗಿದೆ. ಅನ್ಯಕೋಮಿನ ಜೋಡಿಯನ್ನು ತಡೆದ ಘಟನೆ ಆಗುಂಬೆಯಲ್ಲಿ ನಡೆದಿತ್ತು.
ಅನ್ಯಕೋಮಿಗೆ ಸೇರಿದ ಯುವಕ ಯುವತಿಯನ್ನು ರಸ್ತೆ ಮಧ್ಯೆ ತಡೆದು ನಿಲ್ಲಿಸಿ ವಿಚಾರಣೆ ನಡೆಸಿ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದ ಮೇಲೆ 10 ಮಂದಿಯ ವಿರುದ್ದ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ತಿಂಗಳು ನಡೆದಿರುವ ಘಟನೆ ಇದಾಗಿದ್ದು, ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜೊತೆ ಆಗುಂಬೆ ಸಮೀಪದ ಸಿರಿಮನೆ ಫಾಲ್ಸ್ ಗೆ ಹೋಗಿದ್ದಾರೆ. ಈ ವೇಳೆ ವಾಪಸ್ ಬರುವಾಗ ಅನ್ಯಮತೀಯ ಜೋಡಿಯನ್ನು ಯುವಕರ ಗುಂಪು ತಡೆದು ವಿಚಾರಣೆ ಮಾಡಿದ್ದರು.

ವಿಚಾರಣೆಯ ವೇಳೆ ವಿಡಿಯೋ ಮಾಡದಂತೆ ಯುವತಿ ಮನವಿ ಮಾಡಿದ್ದಳು. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನಂತರ ಆಗುಂಬೆ ಪೊಲೀಸರು ಯುವತಿ ಹಾಗೂ ಯುವಕನ ಮನೆಯವರನ್ನು ಠಾಣೆಗೆ ಕರೆಸಿದ್ದರು. ಆದರೆ , ಇಬ್ಬರ ಮನೆಯವರು ಪರಿಚಯಸ್ಥರಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸಿದ್ದರು. ಘಟನೆಯ ವೇಳೆ ಮಾಡಿದ್ದ ವಿಡಿಯೋವನ್ನು ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಫೇಸ್ ಬುಕ್ ಪೇಜ್ ಒಂದರಲ್ಲಿ ವೀಡಿಯೋ ಅಪ್ಲೋಡ್ ಮಾಡಲಾಗಿದ್ದು, ಇದೀಗ ಇನ್ಸ್ಸ್ಟಾಗ್ರಾಂ, ವಾಟ್ಸಾಪ್ ನಲ್ಲಿ ಯುವಕ, ಯುವತಿಯ ಫೋಟೋ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಸದ್ಯ ಯುವತಿಯ ಸಹೋದರ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Categories
ಕರಾವಳಿ

ಪೊಲೀಸ್ ಸಿಬ್ಬಂದಿ ಮೊಬೈಲನ್ನೇ ಎಗರಿಸಿದ ಕಳ್ಳ..!

ಪೊಲೀಸ್ ಸಿಬ್ಬಂದಿ ಮೊಬೈಲನ್ನೇ ಎಗರಿಸಿದ ಕಳ್ಳ..!
– ಆಸ್ಪತ್ರೆಗಳಲ್ಲಿ ಮೊಬೈಲ್ ಕಳ್ಳತನವೇ ಈತನ ಕಾಯಕ!
– ಬಂಟ್ವಾಳ ಆಸ್ಪತ್ರೆಯಲ್ಲಿ ನಡೆದ ಘಟನೆ

NAMMUR EXPRESS NEWS
ಬಂಟ್ವಾಳ: ಆನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಪೋಲಿಸ್ ಸಿಬ್ಬಂದಿಯೋರ್ವರ ಎರಡು ಮೊಬೈಲ್ ಫೋನ್ ಕಳವಾದ ಘಟನೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದ ಕಾರಣ ಸೆ.17 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರು ಸೆ.19 ರಂದು ಜನರಲ್ ವಾರ್ಡ್ ಗೆ ಸ್ಥಳಾಂತರವಾಗಿದ್ದರು. ಅವರು ಬೆಡ್ ನಲ್ಲಿ ಮಲಗಿದ್ದ ವೇಳೆ ಇವರ ಬೆಡ್ ಪಕ್ಕದಲ್ಲಿ ಟೇಬಲ್‌ ಮೇಲೆ ಇರಿಸಲಾಗಿದ್ದ ಸಾವಿರಾರು ರೂ ಮುಖಬೆಲೆಯ ಒಂದು ಮೊಬೈಲ್ ಹಾಗೂ ಕೀ ಪೇಡ್ ಮೊಬೈಲ್ ಫೋನ್ ಎರಡನ್ನು ಕಳ್ಳ ಕದ್ದು ಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಕಳ್ಳ ಮೊಬೈಲ್ ಕಳ್ಳತನ ಮಾಡಿದ ಮತ್ತು ಆತ ಆಸ್ಪತ್ರೆಗೆ ಬಂದು ಹೋಗುವ ಬಗ್ಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಸ್ಪತ್ರೆಯೇ ಇವನ ಕಳ್ಳತನದ ಪಾಯಿಂಟ್!

ಈತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜ್ಜಿ ಯೋರ್ವರಲ್ಲಿ ಒಮ್ಮೆ ಪೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಪೋನ್ ಮಾಡಲು ಇದೆ ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋದ ವ್ಯಕ್ತಿ ಮೊಬೈಲ್ ಹಿಡಿದು ಹೋಗಿದ್ದಾನೆ. ಅದೇ ವ್ಯಕ್ತಿ ಮತ್ತೆ ಪೋಲೀಸ್ ಸಿಬ್ಬಂದಿಯ ಪೋನ್ ಕಳ್ಳತನ ಮಾಡಿರುವಂತದ್ದು, ಇದು ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ. ಇದೀಗ ಆಸ್ಪತ್ರೆಯಲ್ಲಿ ಈತನ ಪೋಟೋ ಅಂಟಿಸಲಾಗಿದ್ದು,ಈತನ ಮೊಬೈಲ್ ಕಳ್ಳ ಈತನ ಚಹರೆ ಯನ್ನು ಗಮ‌ನಿಸಿದವರು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.

Categories
ಶಿವಮೊಗ್ಗ

ಡಾ.ಆರ್.ಎಂ.ಎಂಗೆ ಮತ್ತೆ ಅಧ್ಯಕ್ಷಗಿರಿ..!

ಡಾ.ಆರ್.ಎಂ.ಎಂಗೆ ಮತ್ತೆ ಅಧ್ಯಕ್ಷಗಿರಿ..!
– ಸೆ.29 ಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
– ಬಹುತೇಕ ಗೌಡರಿಗೆ ಕುರ್ಚಿ: ಮತ್ತೆ ಸಹಕಾರಿ ಗತ ವೈಭವ
– ಹಿಂದೆಯೇ ಸುದ್ದಿ ಮಾಡಿತ್ತು… ನಮ್ಮೂರ್ ಎಕ್ಸ್ ಪ್ರೆಸ್

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸೆ.29ರಂದು ಚುನಾವಣೆ ನಿಗದಿಯಾಗಿದ್ದು ಡಾ.ಆರ್.ಎಂ.ಎಂಗೆ ಮತ್ತೆ ಅಧ್ಯಕ್ಷಗಿರಿ ಖಚಿತವಾಗಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಎಂ.ಬಿ.ಚನ್ನವೀರಪ್ಪ ಅವರನ್ನು ಜುಲೈ ತಿಂಗಳಲ್ಲಿ ಅವಿಶ್ವಾಸ ಮಂಡನೆ ಮೂಲಕ ಪದಚ್ಯುತಗೊಳಿಸಿದಾಗಲೇ ಆರ್.ಎಂ.ಮಂಜುನಾಥ ಗೌಡ ಹೆಸರು ಕೇಳಿ ಬಂದಿತ್ತು. ಡಿಸಿಸಿ ಬ್ಯಾಂಕ್ ಕೆ.ಪಿ.ದುಗ್ಗಪ್ಪಗೌಡ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದಾದ ಬಳಿಕ ಸೆ.8ರಂದು ಕೆ.ಪಿ.ದುಗ್ಗಪ್ಪಗೌಡರನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ ನೇಮಕ ಮಾಡಿ, ಆರ್.ಎಂ.ಮಂಜುನಾಥ ಗೌಡ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್‌. ಎಲ್.ಷಡಾಕ್ಷರಿ ಪ್ರಭಾರಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸೇರಿದಂತೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿರುವ ಬಹುತೇಕರೊಂದಿಗೆ ಆರ್‌ಎಂಎಂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರು ಅವಿರೋಧವಾಗಿ ಅಧ್ಯಕ್ಷರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಸಹಕಾರ ಕ್ಷೇತ್ರದಲ್ಲಿ ರಾಜ್ಯದಲ್ಲೇ ಟಾಪ್ ನಾಯಕ!

ಸಹಕಾರಿ ಕ್ಷೇತ್ರದಲ್ಲಿ ಡಾ.ಆರ್.ಎಂ.ಮಂಜುನಾಥ ಗೌಡ ರಾಜ್ಯದಲ್ಲೇ ಟಾಪ್ ನಾಯಕ. ಹಳ್ಳಿ ಹಳ್ಳಿಯಲ್ಲೂ ಸಹಕಾರ ಸಂಘಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದೀಗ ಮತ್ತೆ ಅವರಿಗೆ ಹುದ್ದೆ ಸಿಗುವ ಸಾಧ್ಯತೆ ಇದ್ದು ಇಡೀ ಜಿಲ್ಲೆಯಲ್ಲಿ ಸಂತಸ ವ್ಯಕ್ತವಾಗುತ್ತಿದೆ.

Categories
ಕೊಪ್ಪ

ಕೊಪ್ಪದ ನಿಲುವಾಗಿಲಿನಲ್ಲಿ ಹೈ ಸ್ಕೂಲ್ ಕ್ರೀಡಾಕೂಟ!

ಕೊಪ್ಪದ ನಿಲುವಾಗಿಲಿನಲ್ಲಿ ಹೈ ಸ್ಕೂಲ್ ಕ್ರೀಡಾಕೂಟ!
– ಶಾಸಕ ರಾಜೇಗೌಡ ಉದ್ಘಾಟನೆ: ಶುಭಾಶಯ
– ಕೊಪ್ಪದ ಕ್ರೀಡಾಪಟುಗಳು ಸಂಭ್ರಮದಿಂದ ಭಾಗಿ

NAMMUR EXPRESS NEWS
ಕೊಪ್ಪ: ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ, ನಿಲುವಾಗಿಲಿನಲ್ಲಿ ನಡೆದ 2023-24ನೇ ಸಾಲಿನ ತಾಲ್ಲೂಕು ಮಟ್ಟದ ಫ್ರೌಡಶಾಲೆಯ ಕ್ರೀಡಾಕೂಟವನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟನೆ ಮಾಡಿದರು. ನಿಲುವಾಗಿಲು ಗ್ರಾಮ‌‌ ಪಂಚಾಯಿತಿ ಅಧ್ಯಕ್ಷರಾದ ಕೆ.ಟಿ ಮಿತ್ರ, ಕೊಪ್ಪ ಪಿ.ಸಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಹೆಚ್.ಎಸ್ ಇನೇಶ್, ಮಾಜಿ ಜಿಲ್ಲಾ ಪಂ. ಉಪಾಧ್ಯಕ್ಷರಾದ ಅಸಗೋಡು ನಾಗೇಶ್, ಶಾಲಾ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಉಪಸ್ಥಿತಿಯಲ್ಲಿದ್ದರು.
ಕೊಪ್ಪ ತಾಲೂಕಿನ ಪ್ರೌಢ ಶಾಲೆ ಕ್ರೀಡಾಪಟುಗಳು ಭಾಗವಹಿಸಿದ್ದರು.

Categories
ತೀರ್ಥಹಳ್ಳಿ

ಗಣೇಶನ ಜತೆಗೆ ಸಮಾಜ ಸೇವೆ: ಹೇರಂಭಾಪುರ, ನೊಣಬೂರು ಮಾದರಿ!

ಗಣೇಶನ ಜತೆಗೆ ಸಮಾಜ ಸೇವೆ: ಹೇರಂಭಾಪುರ, ನೊಣಬೂರು ಮಾದರಿ!
-ಹೇರಂಭಾಪುರ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಸೇವೆ
– ನೊಣಬೂರು ಶ್ರೀ ವಿದ್ಯಾಗಣಪತಿ ಸಂಘದ ರಕ್ತದಾನ

NAMMUR EXPRESS NEWS
ತೀರ್ಥಹಳ್ಳಿ: ಹೇರಂಭಾಪುರ, ನೊಣಬೂರು ಯುವಕ ಸಂಘಗಳು ತಮ್ಮ ಅಪರೂಪದ ಮಾನವೀಯ ಸೇವೆ ಮೂಲಕ ಈ ಬಾರಿ ಗಣೇಶೋತ್ಸವದಲ್ಲಿ ಮಾದರಿಯಾಗಿವೆ. ಹೌದು. ಗಣೇಶೋತ್ಸವದ ಸಂಭ್ರಮದ ಜತೆಗೆ ಈ ಎರಡು ಕಡೆ ಯಶಸ್ವಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿವೆ. ನೂರಾರು ಮಂದಿ ರಕ್ತದಾನ ಮಾಡಿದ್ದಾರೆ.

ಹೇರಂಭಾಪುರ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಮಾದರಿ

ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಹೇರಂಭಾಪುರ ಕಟ್ಟೇಹಕ್ಲು, ಇವರು ಗಣೇಶ ಹಬ್ಬದ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರು. ರಕ್ತದಾನದ ಅವಶ್ಯಕತೆ ಮತ್ತು ರಕ್ತದ ಮಹತ್ವವನ್ನು ಅಂಬಳಿಕೆ ಗಿರೀಶ್, ಟ್ರಸ್ಟಿ, ರೋಟರಿ ಐಎಮ್ಎ ಚಾರಿಟೇಬಲ್ ಟ್ರಸ್ಟ್ ತೀರ್ಥಹಳ್ಳಿ ಇವರು ಉದ್ಘಾಟನೆ ಮಾಡಿ ಮಾಹಿತಿ ನೀಡಿದರು. ಎನ್ಸಿಡಿ ಘಟಕ, ಜೇಸಿ ಆಸ್ಪತ್ರೆ ಮತ್ತು ಪಿ ಹೆಚ್ ಸಿ ಹೆದ್ದೂರು ಇವರು 50 ಜನರಿಗೆ ಆರೋಗ್ಯ ಆರೋಗ್ಯ ತಪಾಸಣೆ ಮಾಡಿದರು. ಟಿ ಎಮ್ ಲಕ್ಷ್ಮಿ, ಪ್ರಾಥಮಿಕ ಆರೋಗ್ಯ ಸುರಕ್ಷಾಣಾದಿಕಾರಿ,,ರಮ್ಯಾ ಸಿ ಹೆಚ್ ಒ, ಹೆದ್ದೂರು, ಸಂದೀಪ್, , ಎನ್ ಸಿ ಡಿ ಘಟಕದ ಯಶೋಧ ತಂತ್ರಜ್ಞೆ ಇವರು ಸಹಕರಿಸಿದರು. ನಾಗರಾಜ್ ಅಧ್ಯಕ್ಷರು ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಹೇರಂಭಾಪುರ ಉಪಸ್ಥಿತರಿದ್ದರು. ಅರುಣ್ ಮತ್ತು ಪವಿತ್ರ, ತಂತ್ರಜ್ಞರು, ರೋಟರಿ ಐಎಮ್ಎ ರಕ್ತ ನಿಧಿ ಇವರು ರಕ್ತದಾನ ಶಿಬಿರವನ್ನು ನಡೆಸಲು ಸಹಕರಿಸಿದರು. ರೊ.ಕೆ ಪಿ ಎಸ್ ಸ್ವಾಮಿ, ಸಾರ್ವಜನಿಕ ಸಂಪರ್ಕಾಧಿಕಾರಿ ರೋಟರಿ ಐಎಮ್ಎ ರಕ್ತ ನಿಧಿ ಕೇಂದ್ರ, ತೀರ್ಥಹಳ್ಳಿ ಇವರು ಎಲ್ಲರ ಸಹಕಾರವನ್ನು ಸ್ಮರಿಸಿದರು.

ನೊಣಬೂರು ಶ್ರೀ ವಿದ್ಯಾಗಣಪತಿ ಸಂಘದ ಸೇವಾ ಹೆಜ್ಜೆ

ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ನೊಣಬೂರು, ತೀರ್ಥಹಳ್ಳಿ ತಾಲೂಕು ಗಣೇಶ ಹಬ್ಬದ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು 55 ಮಂದಿ ರಕ್ತದಾನ ಮಾಡಿದರು. ರಕ್ತದಾನದ ಮಹತ್ವವನ್ನು ರೊ.ಕೆ ಎನ್ ಚಂದ್ರಶೇಖರ್ , ಟ್ರಸ್ಟಿ, ರೋಟರಿ ಐಎಮ್ಎ ಚಾರಿಟೇಬಲ್ ಟ್ರಸ್ಟ್ ,ತೀರ್ಥಹಳ್ಳಿ ತಿಳಿಸಿ ರಕ್ತದಾನಿಗಳಿಗೆ ಪ್ರಶಂಸನಾ ಪತ್ರ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಅರಳಸುರಳಿ ಲೋಕನಾಥ್ ಸಹಕರಿಸಿದರು. ಸಂದೀಪ್ ,ಅಧ್ಯಕ್ಷರು ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ನೊಣಬೂರು ಉಪಸ್ಥಿತರಿದ್ದು ಕಾರ್ಯಕ್ರಮದ ನಿರೂಪಿಸಿದರು. ಅರುಣ್ ಮತ್ತು ಕು.ಪವಿತ್ರ, ತಂತ್ರಜ್ಞರು, ರೋಟರಿ ಐಎಮ್ಎ ರಕ್ತ ನಿಧಿ ಇವರು ರಕ್ತದಾನ ಶಿಬಿರವನ್ನು ನಡೆಸಲು ಸಹಕರಿಸಿದರು. 55 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Categories
ಶಿವಮೊಗ್ಗ

ಮಧು ಬಂಗಾರಪ್ಪ ಜನತಾ ದರ್ಶನ!

ಮಧು ಬಂಗಾರಪ್ಪ ಜನತಾ ದರ್ಶನ!
– ಸೆ.25ಕ್ಕೆ ಉಸ್ತುವಾರಿ ಸಚಿವರಿಂದ ಅಹವಾಲು ಸ್ವೀಕಾರ
– ಶಿವಮೊಗ್ಗ ಜಿಲ್ಲೆಯ ಜನರಿಗಗೆ ಅವಕಾಶ

NAMMUR EXPRESS NEWS
ಶಿವಮೊಗ್ಗ ಜಿಲ್ಲೆಯ ಜನರ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 25ರಂದು ಜಿಲ್ಲಾ ಮಟ್ಟದ ಜನತಾ ದರ್ಶನ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂದು ಬೆಳಗ್ಗೆ 10.30ರಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಆಲಿಸಲಿದ್ದಾರೆಂದು ಜಿಲ್ಲಾ ಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ನಾಗರೀಕರು ರಾಜಧಾನಿ ಬೆಂಗಳೂರಿಗೆ ಹೋಗಿ ಹಲವಾರು ರೀತಿಯ ಸಮಸ್ಯೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಹವಾಲುಗಳನ್ನು ಸಲ್ಲಿಸುತ್ತಿರುವುದನ್ನು ನಿಯಂತ್ರಿಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರದ ಆಶಯದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದ ಅವರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಅಹವಾಲುಗಳಿಗೆ, ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಿದ್ದಾರೆ.
ಮುಖ್ಯಮಂತ್ರಿಗಳು ನಿರ್ದೇಶನದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮ ನಡೆಯುವ ದಿನದಂದು ಬೆಳಿಗ್ಗೆ 9.30ರಿಂದ ನಿಗಧಿಪಡಿಸಿದ ಸ್ಥಳದಲ್ಲಿ ಖುದ್ದು ಹಾಜರಿದ್ದು ಸಾರ್ವಜನಿಕರು ತಮ್ಮ ಅವಹಾಲುಗಳನ್ನು ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಸಾರ್ವಜನಿಕವಾಗಿ ಅಹವಾಲು ಸಲ್ಲಿಸುವವರು ಗರಿಷ್ಟ ಇಬ್ಬರಿಗೆ ಅವಕಾಶವನ್ನು ನೀಡಲಾಗುವುದು ಹಾಗೂ ಅರ್ಜಿ ನೋಂದಾಯಿಸಿದ ನಂತರ ಟೋಕನ್‌ಗಳನ್ನು ಪಡೆದುಕೊಳ್ಳಬೇಕು. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಕೆಯಾದ ನಂತರ ಉಳಿಕೆಯವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾ ಕಾರಿ ಡಾ. ಆರ್.ಸೆಲ್ವಮಣಿ ಅವರು ಮನವಿ ಮಾಡಿದ್ದಾರೆ.