Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅ.11ಕ್ಕೆ ಉಚಿತ ಮ್ಯಾಮೊಗ್ರಫಿ ತಪಾಸಣಾ ಶಿಬಿರ, ಸ್ತನ ಕ್ಯಾನ್ಸರ್ ತಪಾಸಣೆ

ತೀರ್ಥಹಳ್ಳಿಯಲ್ಲಿ ಅ.11ಕ್ಕೆ ಉಚಿತ ಮ್ಯಾಮೊಗ್ರಫಿ ತಪಾಸಣಾ ಶಿಬಿರ, ಸ್ತನ ಕ್ಯಾನ್ಸರ್ ತಪಾಸಣೆ
– ರೋಗದ ಲಕ್ಷಣಗಳಿದ್ರೆ ಪರಿಶೀಲಿಸಿಕೊಳ್ಳಿ
– ಮಲ್ನಾಡ್ ಮಹಿಳಾ ವೇದಿಕೆ, ತೀರ್ಥಹಳ್ಳಿ, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಮಲ್ನಾಡ್ ಮಹಿಳಾ ವೇದಿಕೆ, ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಉಚಿತ ಮ್ಯಾಮೊಗ್ರಫಿ ತಪಾಸಣಾ ಶಿಬಿರ, ಸ್ತನ ಕ್ಯಾನ್ಸರ್ ( ಬ್ರೆಸ್ಟ್ ಕ್ಯಾನ್ಸರ್ ) ತಪಾಸಣಾ ಶಿಬಿರವನ್ನು 11 ನೇ ಅಕ್ಟೋಬರ್ 2023ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸೊಪ್ಪುಗುಡ್ಡೆ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕ್ಯಾನ್ಸರ್ ಬಗ್ಗೆ ನಿರ್ಲಕ್ಷ ಬೇಡ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದೇ ಸೂಕ್ತ ಎಂಬ ಉದ್ದೇಶದಿಂದ ಈ ಶಿಬಿರ ಆಯೋಜನೆ ಮಾಡಲಾಗಿದೆ.

ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ ಉಚಿತ ತಪಾಸಣೆ ಮಾಡಿಸಿಕೊಳ್ಳಿ

ನಿಮ್ಮ ವಯಸ್ಸು 40 ದಾಟಿದ್ದರೆ, ಕ್ಯಾನ್ಸರ್ ನ ಮೊದಲ ಹಂತದ ಸಂಬಂಧವನ್ನು ಹೊಂದಿದ್ದರೆ, ಸ್ತನ ಭಾಗದಲ್ಲಿ ಗಟ್ಟಿಯಾಗುವಿಕೆ ಅಥವಾ ಗಂಟು ಇದ್ದರೆ, ಸ್ತನದ ಆಕಾರದಲ್ಲಿ ಅಥವಾ ಗಾತ್ರದಲ್ಲಿ ಬದಲಾವಣೆ ನಿರ್ದಿಷ್ಟವಾಗಿ ಒಳ ಹೋದಂತೆ ಆಗುವುದು ಅಥವಾ ಅನಿಯಮಿತ ಆಕಾರ ಹೊಂದಿದ್ದರೆ, ಸ್ತನದಿಂದ ರಕ್ತಸ್ರಾವ ಕಂಡುಬಂದರೆ, ಸ್ತನ ತೊಟ್ಟುಗಳಲ್ಲಿ ಅಥವಾ ಅದರ ಸುತ್ತ ಬಿರುಕುಗಳು ಇದ್ದರೆ, ಕಂಕುಳಿನ ಭಾಗದಲ್ಲಿ ಉದ್ದ ಅಥವಾ ಗಂಟು ಕಂಡು ಬಂದರೆ ರೋಗ ಪರಿಶೀಲಿಸಿಕೊಳ್ಳಿ.

ಉಚಿತ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ

8073170053, 8618575145, 9986759486

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಹರಕೆರೆ, ಶಿವಮೊಗ್ಗ

Categories
ಮಲ್ನಾಡ್

ಅಡಿಕೆಗೆ ಎಲೆಚುಕ್ಕಿ ರೋಗ: ಬೆಳೆಗಾರರು ಕಂಗಾಲು..!

ಅಡಿಕೆಗೆ ಎಲೆಚುಕ್ಕಿ ರೋಗ: ಬೆಳೆಗಾರರು ಕಂಗಾಲು..!
– ಮಲೆನಾಡಿನ ಬಹುತೇಕ ಭಾಗಗಳಲ್ಲಿ ಎಲೆಚುಕ್ಕಿ ರೋಗ ಹೆಚ್ಚಳ
– ಶೃಂಗೇರಿ ಭಾಗದಲ್ಲಿ 80ರಷ್ಟು ಅಡಿಕೆ ತೋಟಗಳು ನಾಶ
– ಅಡಿಕೆ ಹಸಿಗೊನೆಯನ್ನು ತಿನ್ನುತ್ತಿರುವ ಹುಳುಗಳು

NAMMUR EXPRESS NEWS
ಮಲೆನಾಡು: ಅಡಿಕೆ ಮಲೆನಾಡಿಗರ ಬದುಕೇ ಕಷ್ಟ ಅಡಿಕೆಯನ್ನ ನಂಬಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಅಡಿಕೆಗೆ ಬಾಧಿಸುತ್ತಿರೋ ಹಳದಿ ಎಲೆ ರೋಗದಿಂದ ಬೆಳೆಗಾರರು 4-5 ದಶಕಗಳಿಂದ ಕಂಗಾಲಾಗಿದ್ರು. ಆದ್ರೀಗ, ಆ ಹಳದಿ ರೋಗದ ಜೊತೆ ಎಲೆ ಚುಕ್ಕಿ ರೋಗ ಬೆಳೆಗಾರರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಹಳದಿ ಎಲೆ ರೋಗ ಮರಗಳನ್ನ ಎಂಟತ್ತು ವರ್ಷಗಳ ಉಳಿಸುತ್ತಿತ್ತು. ಆದರೆ, ಎಲೆ ಚುಕ್ಕಿ ರೋಗ ಬಂದ್ರೆ ಮುಗೀತು ಕಥೆ. ಮುಗಿಲೆತ್ತರದ ಮರಗಳು ನೋಡನೋಡ್ತಿದ್ದಂತೆ ಉದ್ದುದ್ದ ಮಲಗಿರುತ್ತೆ. ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ್ದ ಮರಗಳು ಕಣ್ಣೆದುರೇ ಸುಟ್ಟಿ ಹೋಗ್ತಿದ್ದು ಬೆಳೆಗಾರರು ಅಕ್ಷರಶಃ ಕಣ್ಣೀರಿಡ್ತಿದ್ದಾರೆ.

ಬಹುತೇಕ ಶಿವಮೊಗ್ಗ, ಚಿಕ್ಕಮಗಳೂರು, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಭಾಗಗಳಲ್ಲಿ ಅಡಿಕೆ ಎಲೆಚುಕ್ಕಿ ರೋಗ ಹೆಚ್ಚಾಗಿದ್ದು ಅಡಿಕೆ ಬೆಳೆದ ಬೆಳೆಗಾರರು ಕಂಗಾಲಾಗಿದ್ದಾರೆ. ಪ್ರತಿ ತೋಟದಲ್ಲೂ ಚುಕ್ಕಿ ಬಿದ್ದು ಬಾಗಿರೋ ಗರಿಗಳು, ಮರದಿಂದ ಬಿದ್ದು ಒಡೆದು ಹೋಗಿರೋ ಅಡಿಕೆ ಕಾಯಿಯ ದ್ರಶ್ಯ ಸರ್ವೇ ಸಾಮಾನ್ಯವಾಗಿದೆ. ಶೃಂಗೇರಿ ತಾಲೂಕಿನ ಮಾತೋಳ್ಳಿ, ಕೆರೆಕಟ್ಟೆ, ಶಿರ್ಲು, ಮುಡಬ, ಗುಲಗುಂಜಿಮನೆ, ಕಾರ್ಕಿ, ಹೆಮ್ಮಿಗೆ, ಹಾದಿ ಸೇರಿದಂತೆ ತಾಲೂಕಿನಲ್ಲಿ ಶೇ. 80ರಷ್ಟು ಅಡಿಕೆ ತೋಟಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿವೆ. ಐದು ತರಹದ ಹುಳಗಳು ಅಡಿಕೆಯ ಹಸಿ ಸೋಗೆಯನ್ನ ತಿನ್ನುತ್ತಿವೆ. ಹುಳಗಳು ಸುಳಿಯನ್ನ ತಿಂದ ಮೇಲೆ ಗಿಡಗಳೇ ಸತ್ತು ಹೋಗುತ್ತಿವೆ. ಗರಿಗಳ ಮೂಲಕ ಹರಡುತ್ತಿರೋ ಈ ರೋಗ ಗರಿಗಳಲ್ಲಿ ತೆಳು ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪುಬಣ್ಣದ ಚುಕ್ಕಿಗಳು ಕಾಣಿಸುತ್ತಿವೆ. ಹಾಗಾಗಿ ಗರಿಗಳು ಕೆಂಪಾಗಿ, ಮರದ ಗಾತ್ರವೇ ಸಣ್ಣದಾಗಿ ಅಡಿಕೆ ಮರಗಳು ನಿಲ್ಲುವ ಸಾಮಥ್ಯವನ್ನೇ ಕಳೆದುಕೊಳ್ತಿವೆ.

15-20 ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಮರಗಳು ಈಗೀಗ ಫಸಲು ನೀಡಲು ಶುರುವಿಟ್ಟಿದ್ದು. ಆದ್ರೀಗ, ಕಳೆದೊಂದು ವರ್ಷದಿಂದ ಕ್ರಮೇಣ ತೋಟವೇ ನಾಶವಾಗ್ತಿದೆ. ಹೀಗಾದ್ರೆ ನಾವು ಬದುಕೋದೇಗೆ, ಸಾವಿರಾರು ರೂಪಾಯಿಯ ಔಷಧಿ ಸಿಂಪಡಿಸಿ ಸಾಕಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.ಈ ಹಿಂದೆ ಗುಡ್ಡಕ್ಕೆ ಬೆಂಕಿ ಬೀಳುವುದು ಮತ್ತು ಕಾಡ್ಗಿಚ್ಚು ಬೀಳುವುದರಿಂದ ಹುಳಗಳು ಬೆಂಕಿಗೆ ಬಿದ್ದು ಸಾಯುತ್ತಿದ್ದವಂತೆ. ಆದರೆ ಒಂದು ವರ್ಷ ಮಳೆ ಜಾಸ್ತಿ ಯಾದ್ರೆ ಮತ್ತೊಂದು ವರ್ಷ ಮಳೆ ಕಡಿಮೆ, ಈ ಹಿನ್ನಲೆಯಲ್ಲಿ ಹುಳಗಳ ಸಂತತಿ ಜಾಸ್ತಿಯಾಗಿದೆ ಅಂತಾರೆ ಸ್ಥಳಿಯರು. ಆದ್ದರಿಂದ ತೋಟಗಳ ಮೇಲೆ ಈ ರೋಗ ಪರಿಣಾಮ ಬೀರಿದ್ದು ದಶಕಗಳ ಅಡಿಕೆ ಮರಗಳು ನಾಲೈದು ತಿಂಗಳಲ್ಲೇ ಸಾಯುತ್ತಿವೆ ಎಂದು ಸ್ಥಳಿಯರು ಅಭಿಪ್ರಾಯಪಟ್ಟಿದ್ದಾರೆ. ಎಷ್ಟೆ ಔಷಧಿ ಕಂಡುಹಿಡಿದು ಕೀಟನಾಶಕವನ್ನ ಸಿಂಪಡಿಸಿದರು ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬೇರು ಹುಳ ಬಾಧೆ, ಹಳದಿಎಲೆ ರೋಗ ಸೇರಿದಂತೆ ಇತರೆ ರೋಗಗಳು ಕಾಡಿದಾಗ ರೈತರು ಸವಾಲಾಗಿ ಸ್ವೀಕರಿಸಿ ತೋಟವನ್ನ ಉಳಿಸಿಕೊಂಡಿದ್ದರು.

ಆದರೆ, ಎಲೆ ಚುಕ್ಕಿ ರೋಗ ತೋಟವನ್ನ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಬೆಳೆಗಾರರು ಕೈಚೆಲ್ಲಿ ಕೂತಿದ್ದು, ಕಣ್ಣೆದುರೇ ತೋಟ ನಾಶವಾಗ್ತಿರೋದ ಕಂಡು ಕೊರಗುತ್ತಿದ್ದಾರೆ. ಒಟ್ಟಾರೆ ಮಲೆನಾಡಿನಾದ್ಯಂತ ಎಲೆ ಚುಕ್ಕಿ ರೋಗ ರೈತರ ಬದುಕನ್ನೇ ಬರ್ಬಾದ್ ಮಾಡ್ತಿದೆ. ಆದ್ರೆ, ಶೃಂಗೇರಿಯ ಅಡಿಕೆ ಸಂಶೋಧನ ಕೇಂದ್ರದ ವಿಜ್ಞಾನಿಗಳು ಮಾತ್ರ ಸಂಬಂಧವಿಲ್ಲದಂತಿದ್ದಾರೆ. ಬೆಳೆಗಾರರು ತಮ್ಮ ಸಮಸ್ಯೆಯನ್ನ ಅಧಿಕಾರಿಗಳು, ವಿಜ್ಞಾನಿಗಳಿಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾರೊಬ್ಬರು ತೋಟಕ್ಕೆ ಬಂದು ರೋಗದ ಬಗ್ಗೆ ಮಾಹಿತಿಯನ್ನೂ ಪಡೆದಿಲ್ಲ ಎಂದು ಬೆಳೆಗಾರರು ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದ್ರು ಎಲೆ ಚುಕ್ಕಿ ರೋಗದಿಂದ ಕಂಗಲಾಗಿರುವ ರೈತರ ನೆರವಿಗೆ ನಿಲ್ಲಬೇಕಿದೆ ಎಂಬುದು ಮಲೆನಾಡಿನ ರೈತರ ಮನವಿ.

Categories
ಚಿಕ್ಕಮಗಳೂರು

ಟೈಟಾಗಿ ರಸ್ತೆ ಬದಿಯಲ್ಲಿ ಮಲಗಿದ ಕುಡುಕನ ಕಿರಿಕ್!

ಟೈಟಾಗಿ ರಸ್ತೆ ಬದಿಯಲ್ಲಿ ಮಲಗಿದ ಕುಡುಕನ ಕಿರಿಕ್!
– ಬೈಕ್ ಸಮೇತ ರಸ್ತೆಯಲ್ಲೇ ಮಲಗಿದ ಯುವಕ
– ಬೈಕ್ ಡಿಕ್ಕಿ ಹೊಡೆದ ಆಂಬುಲೆನ್ಸ್

NAMMUR EXPRESS NEWS
ಚಿಕ್ಕಮಗಳೂರು: ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನುಜ್ಜುಗುಜ್ಜಾಗಿದೆ. ಬೈಕ್ ನಲ್ಲಿ ಇದ್ದ ಇಬ್ಬರಿಗೂ ತೀವ್ರವಾಗಿ ಪೆಟ್ಟಾಗಿದ್ದು, ಚಾಲಕನ ಕಾಲು ಮುರಿದಿದ್ದು ಮತ್ತೋರ್ವ ಸಹ ಚಾಲಕನಿಗೆ ತೀವ್ರ ಗಾಯವಾಗಿದೆ. ಅಂಬುಲೆನ್ಸ್ ಮೂಡಿಗೆರೆ ಭಾಗದಿಂದ ಉಡುಪಿಗೆ ತೆರಳುತ್ತಿದ್ದು ಬೈಕ್ ಕೊಟ್ಟಿಗೆಹಾರ ಕಡೆಯಿಂದ ಬೇಲೂರು ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೈಟಾಗಿ ರಸ್ತೆ ಬದಿಯಲ್ಲಿ ಮಲಗಿದ ಕುಡುಕ!

ಮದ್ಯಪಾನ ಮಾಡಿದ್ದರಿಂದ ಬೈಕ್ ಓಡಿಸಲಾಗದೆ ಯುವಕನೋರ್ವ ರಸ್ತೆ ಮಧ್ಯದಲ್ಲೇ ಬೈಕನ್ನು ತೊರೆದು ಅಲ್ಲೇ ಮಲಗಿ ನಿದ್ದೆ ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಈ ಬೈಕ್ ಸವಾರ ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೆ ರಸ್ತೆ ಮಧ್ಯೆಯೇ ಬೈಕನ್ನು ಅಡ್ಡ ಹಾಕಿ ಅಲ್ಲೇ ಮಲಗಿದ್ದಾನೆ. ಈ ವೇಳೆ ಬೈಕ್ ಇಂಡಿಕೇಟರ್ ಉರಿಯುತ್ತಿದ್ದ ಕಾರಣ ಬೇರೆ ಯಾವುದೇ ವಾಹನಗಳ ಅಡಿಗೆ ಬೀಳದೆ ಪಾರಾಗಿದ್ದಾನೆ.

ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಗಮನಿಸಿದ ಬೇರೆ ವಾಹನ ಸವಾರರು ಅಪಘಾತ ಸಂಭವಿಸಿದೆ ಎಂದು ಭಾವಿಸಿ ಆಂಬುಲೆನ್ಸ್‌ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಂಬುಲೆನ್ಸ್ ಆಗಮಿಸಿದೆ. ಆದರೆ ಈ ವೇಳೆ ಮಲಗಿದ್ದ ವ್ಯಕ್ತಿ ಎಚ್ಚರಗೊಂಡು ಎದ್ದು ನಿಂತಿದ್ದಾನೆ. ಬಳಿಕ ಬಣಕಲ್ ಠಾಣಾ ಪೊಲೀಸರು ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ.

Categories
ತೀರ್ಥಹಳ್ಳಿ

ಗದ್ದೆ ತೋಟಗಳಿಗೆ ನುಗ್ಗಿದ ಕಾಡಾನೆ..!

ಗದ್ದೆ ತೋಟಗಳಿಗೆ ನುಗ್ಗಿದ ಕಾಡಾನೆ..!
– ಸಿಂಗನಬಿದಿರೆ ಗ್ರಾಮದಲ್ಲಿ ಆನೆ ದಾಳಿಗೆ ಆತಂಕಗೊಂಡ ಗ್ರಾಮಸ್ಥರು
– ತೋಟದ ಗೇಟು ಪುಡಿಗೈದು ಅಡಿಕೆ ಗಿಡಗಳ ಹಾಳು ಮಾಡಿದ ಕಾಡಾನೆ
– ಆಗುಂಬೆ, ತೀರ್ಥಹಳ್ಳಿಗೂ ಆನೆ ಕಾಟ..!

NAMMUR EXPRESS NEWS
ತೀರ್ಥಹಳ್ಳಿ: ಕಾಡಾನೆಯೊಂದು ಗದ್ದೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಫಸಲು ಬರುತ್ತಿದ್ದ ಅಡಕೆ ಗಿಡಗಳು, ಭತ್ತ ನೆಲ ಕಚ್ಚಿದೆ. ತೋಟದ ಗೇಟುಗಳನ್ನು ಪುಡಿಗೈದಿದೆ. ತೀರ್ಥಹಳ್ಳಿ ತಾಲೂಕು ಸಿಂಗನಬಿದಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಲೆ ಭಾಗದಲ್ಲಿ ಭಾನುವಾರ ರಾತ್ರಿ ಘಟನೆ ಸಂಭವಿಸಿದೆ. ಕಾಡಾನೆ ದಾಳಿಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ನಿರ್ಮಲಾ, ಯೋಗೀಶ್, ಪದ್ಮಾವತಿ, ಉದಯ ಶೆಟ್ಟಿ, ಪುಷ್ಪಾ ಸೀತಾಲಕ್ಷ್ಮೀ ಅವರ ಗದ್ದೆ ತೋಟಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿ ತಾಲೂಕಲ್ಲಿ ಆನೆ ಕಾಟ!

ತೀರ್ಥಹಳ್ಳಿ ತಾಲೂಕಿನಲ್ಲಿ ಆನೆಗಳ ಕಾಟ ಹೆಚ್ಚಾಗಿದೆ. ಆಗುಂಬೆ ಭಾಗದ ಮಲ್ಲಂದೂರು ಭಾಗದಲ್ಲಿ ಕಳೆದ ಒಂದು ದಶಕದಿಂದ ಒಂಟಿ ಸಲಗದ ಕಾಟ ಹೆಚ್ಚಿರುವ ನಡುವೆ ಇತ್ತೀಚೆಗೆ ಹೆಬ್ರಿ ಭಾಗದ ಆಗುಂಬೆ ಭಾಗದಲ್ಲೂ ಕೂಡ ಆನೆಗಳ ಕಾಟ ಹೆಚ್ಚಾಗಿದ್ದು ಇದರಿಂದ ಜನ ಭಯಭೀತರಾಗಿದ್ದರು. ರೈತರು ಕಂಗಾಲಾಗಿದ್ದರು. ಇನ್ನು ಶೇಡ್ಗಾರು, ದೇವಂಗಿ, ತೀರ್ಥಹಳ್ಳಿ ಪಟ್ಟಣಕ್ಕೂ ಈ ಬಾರಿ ಒಂದು ಆನೆ ಬಂದಿದ್ದು ಅದನ್ನು ಬೇರೆ ಕಡೆ ಕಳಿಸಲು ಅರಣ್ಯ ಇಲಾಖೆ ಹರ ಸಾಹಸ ಪಟ್ಟಿದ್ದರು. ಇದೀಗ ತೀರ್ಥಹಳ್ಳಿಯ ಮತ್ತೊಂದು ಕಡೆ ಆನೆಕಾಟ ಶುರುವಾಗಿದೆ. ಒಟ್ಟಿನಲ್ಲಿ ಆನೆ ಕಾಟ ತೀರ್ಥಹಳ್ಳಿಯ ರೈತರು ಮತ್ತು ಜನರನ್ನು ಕಂಗೆಡಿಸಿದೆ.

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ವಿಷ ಕುಡಿಯುವಂತೆ ಪತ್ನಿಗೆ ಪತಿಯಿಂದಲೇ ಪ್ರಚೋದನೆ?!
– ಸಾಗರ: ಗಣಪತಿ ಕೆರೆ ಬಳಿಯಲ್ಲಿ ಪಲ್ಟಿಯಾದ ಕಾರು!
– ಭದ್ರಾವತಿ: ಯುವಕನೋರ್ವನಿಗೆ ಚಾಕು ಇರಿತ
– ಸಾಗರ : ಹೆದ್ದಾರಿಯಲ್ಲಿ ಬೈಕ್​ಗಳ ನಡುವೆ ಡಿಕ್ಕಿ

NAMMUR EXPRESS NEWS
ಭದ್ರಾವತಿ: ಮಹಿಳೆಯೊಬ್ಬರು ವಿಷ ಕುಡಿಯುವ ದೃಶ್ಯ ಮೊಬೈಲ್ ಅಲ್ಲಿ ಸೆರೆಯಾಗಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದೂರುದಾರ ಚಂದ್ರಮ್ಮ ಅಡಿಕೆ ಕೊಯ್ಲು ಮಾಡಲು ಬಂದ ವೇಳೆ ಗಿರೀಶ್ ಪಾಟೀಲ್​ ಎಂಬವರು ಮತ್ತು ಅವರ ಕುಟುಂಬ ವ್ಯಾಜ್ಯ ತೆಗೆದಿದೆ. ಈ ವೇಳೆ ಗಿರೀಶ್​ರ ಪತ್ನಿ ಮಧುಮಾಲಾ ವಿಷ ಕುಡಿದಿದ್ದಾಳೆ. ಸುಮಾರು ಹತ್ತಿಪ್ಪತ್ತು ಮಂದಿ ಎದುರೇ ಆಕೆ ವಿಷ ಕುಡಿದರು ಆಕೆಯನ್ನು ರಕ್ಷಿಸಲು ಯಾರು ತೆರಳಲಿಲ್ಲ. ಮೊದಲಾಗಿ ಪತಿಯೇ ಕುಡಿ ಕುಡಿ ವಿಷ ಕುಡಿ ಎನ್ನುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ವಿಷ ಕುಡಿದ ಮಹಿಳೆಯು ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಿದೆ. ಇಡೀ ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯ ಸ್ಟೇಟ್ಮೆಂಟ್​ ಪಡೆಯಲು ಭದ್ರಾವತಿ ಗ್ರಾಮಾಂತರ ಪೊಲೀಸರು ತೆರಳಿದ್ದಾರೆ.

ಸಾಗರದ ಗಣಪತಿ ಕೆರೆ ಬಳಿಯಲ್ಲಿ ಪಲ್ಟಿಯಾದ ಕಾರು!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸೋಮವಾರ ಎರಡು ಅಪಘಾತ ಪ್ರಕರಣಗಳು ಸಂಭವಿಸಿದೆ. ನಿಂತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಬೈಕ್​​ವೊಂದು ಗುದ್ದಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ತ್ರಿಬ್ಬಲ್ ರೈಡಿಂಗ್ ಬರುತ್ತಿದ್ದ ವಿದ್ಯಾರ್ಥಿಗಳು ನೇರವಾಗಿ ಬಸ್​ಗೆ ಗುದ್ದಿದ್ದರು. ಇ ರಾತ್ರಿ ಸಾಗರ ಪೇಟೆಯ ಗಣಪತಿ ಕೆರೆಯ ಬಳಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಇಕೋ ಕಾರೊಂದು ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಗಣಪತಿ ಕೆರೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.

ಭದ್ರಾವತಿಯಲ್ಲಿ ಯುವಕನಿಗೆ ಚಾಕು ಇರಿತ

ಭದ್ರಾವತಿ: ನಡೆದುಕೊಂಡು ಹೋಗುತ್ತಿದ್ದ ಯುವನಿಗೆ ಚಾಕುವಿನಿಂದ ಇರಿಯಲಾಗಿದೆ. ಭದ್ರಾವತಿಯ ಹೊನಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಂದ ಕುಮಾರ್ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಹೊಸಮನೆ ಠಾಣೆ ವ್ಯಾಪ್ತಿಯ ಹನುಮಂತ ನಗರದಲ್ಲಿ ಈ ಘಟನೆ ನಡೆದಿದ್ದು ನಂದ ಕುಮಾರ್ ನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಸುತ್ತ ಖಾಕಿ ಸರ್ಪಗಾವಲು ಹೆಣೆಯಲಾಗಿದೆ.

ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಅಪಘಾತ

ಶಿವಮೊಗ್ಗದ ಆಯನೂರು ಸಮೀಪ ಮೂರು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಇವತ್ತು ಬೆಳಗ್ಗೆ ವೀರಣ್ಣನ ಬೆನವಳ್ಳಿ ಸಮೀಪ ಈ ಘಟನೆ ಸಂಭವಿಸಿದೆ. ಆಯನೂರು ಕಡೆಯಿಂದ ಶಿವಮೊಗ್ಗ ಕಡೆ ಬೈಕ್​ವೊಂದು ಬರುತ್ತಿತ್ತು. ಅದೇ ಸಂದರ್ಭದಲ್ಲಿ ಶಿವಮೊಗ್ಗದ ಕಡೆಯಿಂದ ಎರಡು ಬೈಕ್​ಗಳು ಆಯನೂರು ಕಡೆಗೆ ಹೋಗುತ್ತಿತ್ತು. ಈ ಮಧ್ಯೆ ಒಂದು ಬೈಕ್​ ಸವಾರ ಟರ್ನ್​ ತೆಗೆದುಕೊಂಡಿದ್ದಾನೆ ಎನ್ನಲಾಗಿದ್ದು, ಹಿಂದಿನಿಂದ ಬರುತ್ತಿದ್ದ ಬೈಕ್​ ಮುಂದಿನ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಇದೇ ವೇಳೆ ಆಯನೂರು ಕಡೆಯಿಂದ ಬರುತ್ತಿದ್ದ ಬೈಕ್​ ಎದುರು ಆಕ್ಸಿಡೆಂಟ್ ಆದ ಬೈಕ್​ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿದ್ದ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಇನ್ನೂ ಆಯನೂರು ಕಡೆಯಿಂದ ಬರುತ್ತಿದ್ದ ಬೈಕ್ ಸವಾರನಿಗೂ ಗಾಯವಾಗಿದೆ. ವಿಷಯ ತಿಳಿಯುತ್ತಲೇ ಸ್ಥಳದಲಿದ್ದವರು ಆ್ಯಂಬುಲೆನ್ಸ್​ಗೆ ಕರೆ ಮಾಡಿ ಮೂವರನ್ನ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಸದ್ಯ ಮೂವರು ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾರೆ

Categories
ಕಾರ್ಕಳ ಮಾಹಿತಿ ಶಿಕ್ಷಣ

ಕನ್ನಡ ಪುಸ್ತಕ ಲೋಕಕ್ಕೆ ಹೊಸ ಭರವಸೆ “ಪುಸ್ತಕ ಮನೆ”!

ಕನ್ನಡ ಪುಸ್ತಕ ಲೋಕಕ್ಕೆ ಹೊಸ ಭರವಸೆ “ಪುಸ್ತಕ ಮನೆ”!
– ಶೀಘ್ರದಲ್ಲಿ ರಾಜ್ಯದ ಬೃಹತ್ ಶೈಕ್ಷಣಿಕ, ಸಾಹಿತ್ಯ, ಪುಸ್ತಕ ಸಂಗ್ರಹ
– ಅ.16ರಂದು ಉಡುಪಿಯ ಕಾರ್ಕಳದಲ್ಲಿ ಲೋಕಾರ್ಪಣೆ
– ಆಫ್ ಲೈನ್, ಆನ್ಲೈನ್ ಅಲ್ಲಿ ಪುಸ್ತಕ ಖರೀದಿಗೆ ಅವಕಾಶ
– ಎಲ್ಲಾ ಪುಸ್ತಕಗಳು ಒಂದೇ ಸೂರಿನಡಿ ಲಭ್ಯ

NAMMUR EXPRESS  :
ಕಾರ್ಕಳ: ಒಂದೇ ಸೂರಿನಡಿ ಎಲ್ಲಾ ರೀತಿಯ ಪುಸ್ತಕಗಳನ್ನು ಓದುಗರಿಗೆ ಒದಗಿಸುವ ಬೃಹತ್ ಪುಸ್ತಕ ಮಳಿಗೆ “ಪುಸ್ತಕ ಮನೆ” ಕರಾವಳಿಯ ಕಾರ್ಕಳದಲ್ಲಿ ಶೀಘ್ರದಲ್ಲಿ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಆರಂಭವಾಗಲಿದೆ. ರಾಜ್ಯ ಮಟ್ಟದಲ್ಲಿ ಈ ಪುಸ್ತಕ ಮನೆ ಇದೀಗ ಓದುಗರ ಗಮನ ಸೆಳೆದಿದ್ದು, ಆಫ್ ಲೈನ್ ಹಾಗೂ ಆನ್ಲೈನ್ ಎರಡು ವಿಭಾಗದಲ್ಲಿ ನೂರಾರು ಬಗೆಯ ಪುಸ್ತಕಗಳನ್ನು ಒದಗಿಸಲಿದೆ. ಅದರಲ್ಲಿಯೂ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕ ಸಂಗ್ರಹ ಇಲ್ಲಿರಲಿದೆ. ರಾಜ್ಯದ ಪುಸ್ತಕ ಲೋಕಕ್ಕೆ ಹೊಸ ಭರವಸೆ ಮೂಡಿಸಿರುವ “ಪುಸ್ತಕ ಮನೆ” ಅ.16ರಂದು ಕಾರ್ಕಳದಲ್ಲಿ ಉದ್ಘಾಟನೆಗೊಳ್ಳಲಿದೆ. ರಾಜ್ಯದ ಬೃಹತ್ ಪುಸ್ತಕ ಮಳಿಗೆ ಹಾಗೂ ಸಂಗ್ರಹ ಇದಾಗಲಿದೆ.

ವಿಶೇಷ ಏನು?:

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿದ್ಯಾಭ್ಯಾಸದ ಪುಸ್ತಕ, ಸಾಹಿತ್ಯ ಪುಸ್ತಕ, ಮಕ್ಕಳ ಪುಸ್ತಕ, ಕಥೆ, ಕಾವ್ಯ, ತರಬೇತಿ, ಉದ್ಯಮ, ಬಯೋಗ್ರಫಿ ಸೇರಿ ಎಲ್ಲಾ ರೀತಿಯ ಪುಸ್ತಕಗಳು ಇನ್ಮುಂದೆ “ಪುಸ್ತಕ ಮನೆ” ಮಳಿಗೆ ಮತ್ತು ಪುಸ್ತಕ ಮನೆ ಆನ್ಲೈನ್ ಅಲ್ಲಿ ಸಿಗಲಿದೆ. ವಿದ್ಯಾರ್ಥಿಗಳು, ಸಾಹಿತ್ಯ ಅಭಿಮಾನಿಗಳು, ಓದುಗರು ಪುಸ್ತಕಕ್ಕಾಗಿ ಬೆಂಗಳೂರು ಅಥವಾ ಮಂಗಳೂರನ್ನು ಆಶ್ರಯಿಸಬೇಕಾಗಿದೆ. ಅದಕ್ಕಾಗಿ ಕರಾವಳಿ ಹಾಗೂ ಮಲೆನಾಡನ್ನು ಕೇಂದ್ರವಾಗಿರಿಸಿ ಕಾರ್ಕಳದಲ್ಲಿ  ಪುಸ್ತಕ ಮನೆಯನ್ನು ವಿದ್ಯಾರ್ಥಿಗಳು ಸಾಹಿತ್ಯಾಭಿಮಾನಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕ ಮನೆ ಆರಂಭಗೊಳ್ಳುತ್ತಿದೆ.

ಆನ್ಲೈನ್ ನಲ್ಲಿ ಲಭ್ಯ

ಸಾಹಿತ್ಯ ಪುಸ್ತಕಗಳು ಆನ್ಲೈನ್ ಅಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಅಭಿಮಾನಿಗಳು ಆನ್ಲೈನ್ ನಲ್ಲಿ ಕೂಡ ಪಡೆಯಬಹುದು. ಅದರ ಜೊತೆಗೆ ವಿಶೇಷವಾಗಿ ಅಫರ್ ಕೂಡ ಲಭ್ಯವಿದೆ.
ಶೈಕ್ಷಣಿಕ, ಸಾಹಿತ್ಯ ಸದಭಿರುಚಿ ಉಳಿಸಿಕೊಳ್ಳಲು ಸಣ್ಣ ಪ್ರಯತ್ನವಿದು. ಯುವ ಲೇಖಕರಿಗೆ ಸಾಹಿತಿಗಳಿಗೆ ಪುಸ್ತಕ ಓದಲು ಸಕಲ ವ್ಯವಸ್ಥೆ ಕಲ್ಪಿಸುವುದು ನಮ್ಮ ಈ ಯೋಜನೆಯ ಉದ್ದೇಶ. ದೇಶದ ವಿವಿದೆಡೆಗಳಿಂದ ಕನ್ನಡ ಇಂಗ್ಲಿಷ್ ಹಿಂದಿ ಸೇರಿದಂತೆ ವಿವಿಧ  ಸಾಹಿತ್ಯ ಪುಸ್ತಕ ಗಳು ಇಲ್ಲಿ ಲಭ್ಯವಿದೆ. ಓದಲು ಲೈಬ್ರೆರಿ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ಪುಸ್ತಕ ಮನೆಯ ರೂವಾರಿಗಳಲ್ಲಿ ಒಬ್ಬರಾದ ಅಶ್ವಥ್ ಎಸ್.ಎಲ್.

ಪುಸ್ತಕ ಪ್ರೇಮಿಗಳಿಗೆ ಅವರಿಷ್ಟದ ಪುಸ್ತಕ ಲಭ್ಯ

ಪುಸ್ತಕಗಳ ಮೂಲಕ ವಿವಿಧ ಲೋಕಗಳನ್ನು ಅರಿಯಲು ಸಾಧ್ಯ ವಾಗುತ್ತದೆ. ಪುಸ್ತಕಗಳು ವ್ಯಕ್ತಿತ್ವವನ್ನು ಅರಳಿಸಿಕೊಳ್ಳಲು ಸಹಕಾರಿ. ಓದುವುದು ಅದರ ಜೊತೆಗೆ ವಿಷಯವನ್ನು ಸಂಗ್ರಹಿಸುವುದು ಅತ್ಯುತ್ತಮ ಹವ್ಯಾಸ. ಆದರೆ ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾಗಿರುವ ಕಾರಣ ಪುಸ್ತಕ ಓದುವ ಅಭಿರುಚಿ ಮೂಲೆಗುಂಪಾಗಿದೆ. ಈ ನಡುವೆಯೂ ಪುಸ್ತಕ ಪ್ರೇಮಿಗಳಿದ್ದಾರೆ.

ಉತ್ತಮವಾದ, ಅಧ್ಯಯನ, ಕ್ರಿಯಾಶೀಲ ಪುಸ್ತಕಗಳನ್ನು ಅವರ ಕೈಗಿಡಬೇಕು. ಓದುಗರಿಗೆ ಸುಲಭವಾಗಿ ಪುಸ್ತಕ ಸಿಗಬೇಕು ಎಂಬ ಮಹಾದಾಸೆಯಿಂದ ಕರಾವಳಿ ಮಲೆನಾಡನ್ನು ಕೇಂದ್ರೀಕರಿಸಿ ಕಾರ್ಕಳದಲ್ಲಿ ಪುಸ್ತಕ ಮನೆ ನಿರ್ಮಾಣವಾಗಲಿದೆ.
ಕ್ರಿಯೇಟಿವ್ ಸಂಸ್ಥೆಯ ಮೂಲಕ “ಪುಸ್ತಕ ಮನೆ ” ಉಡುಪಿ ಜಿಲ್ಲೆ ಕಾರ್ಕಳ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎರಡುವರೆ ಸಾವಿರ ಚದರ ಅಡಿಯ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿದೆ.

ಏನೇನಿರಲಿದೆ?.. ನೀವೂ ಬುಕ್ ಕೊಡಬಹುದು

ಪುಸ್ತಕ ಮನೆಯಲ್ಲಿ ಸಾಹಿತ್ಯದ ಪುಸ್ತಕಗಳು, ಪಠ್ಯ ಪುಸ್ತಕಗಳು ದೊರಕಲಿವೆ. ಓದಲು ಯೋಗ್ಯವಾಗುವಂತೆ ಹಿರಿದಾದ ಹಾಲ್ ನಿರ್ಮಿಸಲಾಗುತ್ತಿದೆ. ತಮ್ಮ ಬಳಿ ಇರುವ ಸಾಹಿತ್ಯ ಪುಸ್ತಕಗಳನ್ನು ಇಲ್ಲಿ ತೆಗೆದುಕೊಂಡು ಓದಲು ನೀಡಬಹುದಾಗಿದೆ. ಪುಸ್ತಕ ಮನೆ ಎಲ್ಲ ಸಾಹಿತ್ಯ ಪುಸ್ತಕಗಳು ಸೇರಿದಂತೆ ಪಠ್ಯ ಪುಸ್ತಕಗಳು ಕೂಡ ಇಲ್ಲಿ ದೊರಕಲಿವೆ.

ಬುಕ್ ಪಬ್ಲಿಕೇಷನ್ ಕನಸು!

ಪುಸ್ತಕ ಮನೆಯಲ್ಲಿ ಸಾಹಿತ್ಯಾಭಿಮಾನಿಗಳು, ಯುವ ಲೇಖಕರು ಬರೆಯಲು ಬಯಸುವ  ಪುಸ್ತಕಗಳನ್ನು  ತಾವೇ ಮುದ್ರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಯುವ ಸಾಹಿತ್ಯಾಭಿಮಾನಿಗಳಿಗೆ ಪುಸ್ತಕ ಮುದ್ರಣ ಸೇರಿದಂತೆ ಎಲ್ಲವು ಪುಸ್ತಕ ಮನೆ ಸಹಾಯವಾಗಲಿದೆ.

ವಿದ್ಯಾರ್ಥಿಗಳಿಗೆ ಪುಸ್ತಕ ಪೋಷಕ ಯೋಜನೆ

ಸಾಹಿತ್ಯ ಪುಸ್ತಕ ಜೊತೆಗೆ ವಿದ್ಯಾರ್ಥಿಗಳು ಓದಿ ಕಲಿತು ಮುಗಿಸಿರುವ ಪುಸ್ತಕಗಳನ್ನು ಇಲ್ಲಿ ನೀಡಬಹುದಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಇದಕ್ಕಾಗಿ “ಅಮೃತ ಪುಸ್ತಕ ಯೋಜನೆ ” ಎಂದು ಹೆಸರಿಡಲಾಗಿದೆ.

ಕ್ರಿಯೇಟಿವ್ ಫೌಂಡೇಶನ್ ಹೊಸ ಹೆಜ್ಜೆ

ಕ್ರಿಯೇಟಿವ್ ಫೌಂಡೇಶನ್ ಪುಸ್ತಕ ಮನೆ ಈ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಪುಸ್ತಕ ಸೇವೆ ಮೂಲಕ ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲಿದೆ. ಸಂಸ್ಥೆಯ 7 ಮಂದಿ ಈ ಕನಸಿನ ಯೋಜನೆಗಾಗಿ ಶ್ರಮಿಸುತ್ತಿದ್ದಾರೆ. ಪುಸ್ತಕ ಮನೆಯನ್ನು ಓದುಗರ ಕೈಗಿಡಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.

ಪುಸ್ತಕ ಮನೆ ರೂವಾರಿಗಳು

  • ವಿದ್ವಾನ್ ಗಣಪತಿ ಭಟ್
  • ಡಾ.ಗಣನಾಥ ಶೆಟ್ಟಿ
  • ಅಮೃತ್ ರೈ
  • ಆದರ್ಶ ಎಂ.ಕೆ
  • ಅಶ್ವಥ್ ಎಸ್.ಎಲ್
  • ವಿಮಲ್ ರಾಜ್ ಜಿ
  • ಗಣಪತಿ ಕೆ. ಎಸ್
Categories
ತೀರ್ಥಹಳ್ಳಿ

ಅರಳಸುರಳಿ ಮೂವರ ಸಾವು ಇನ್ನು ನಿಗೂಢ!

ಅರಳಸುರಳಿ ಮೂವರ ಸಾವು ಇನ್ನು ನಿಗೂಢ!
– ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿರುವ ಭರತ್ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್
– ಭಾನುವಾರ ರಾತ್ರಿಯೆ ಮೂವರ ಅಂತ್ಯಕ್ರಿಯೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅರಳಸುರಳಿ ಪ್ರಕರಣ ಇನ್ನು ನಿಗೂಢವಾಗಿದೆ. ಮೂವರು ಒಂದೇ ಮನೆಯಲ್ಲಿ ಬೆಂಕಿಗೆ ಅಹುತಿಯಾಗಿದ್ದು, ಓರ್ವ ಇದೀಗ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾನೆ. ಆತನ ಹೇಳಿಕೆ ಇನ್ನು ನಿಗೂಢ ಆಗಿದೆ. ತೀರ್ಥಹಳ್ಳಿಯ ಅರಳಸುರಳಿಯಲ್ಲಿ ನಡೆದ ಘಟನೆ ಬಗ್ಗೆ ಸ್ಥಳೀಯವಾಗಿ ಭಾರೀ ಕುತೂಹಲ ಮೂಡಿಸಿದೆ. ಆರ್ ಎಸ್ ಎಸ್ ಗೆ ತಮ್ಮಬದುಕನ್ನೇ ಮುಡಿಪಾಗಿಟ್ಟಿದ್ದ ಆ ಕುಟುಂಬದ ಸದಸ್ಯರೆಲ್ಲರೂ ಸಜೀವ ದಹನ ಮಾಡಿಕೊಳ್ಳುವಂತ ಕಠೋರ ನಿಲುವು ತಳೆದಿದ್ದಾರು ಏಕೆ ಎನ್ನುವ ಅನುಮಾನ ಎಲ್ಲರಲ್ಲೂ ಇದೆ. ಅರಳು ಸುರಳಿಯ ಕೆಕೋಡ್ ಗ್ರಾಮದಲ್ಲಿ ಒಂದು ಕುಟುಂಬದ ಮೂವರು ಸಜೀವ ದಹನಗೊಂಡಿರುವ ಧಾರುಣ ಘಟನೆ ಆಸ್ತಿಗಾಗಿ ನಡೆದ ಚುಚ್ಚು ಮಾತು ಎಂದೂ ಹೇಳಲಾಗುತ್ತಿದೆ.

ಭಾನುವಾರ ಮುಂಜಾನೆ ಮನೆಯ ಪಕ್ಕದ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬೆಂಕಿ ದುರಂತದಲ್ಲಿ ರಾಘವೇಂದ್ರಕೆಕೋಡ್ (65), ಪತ್ನಿನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದರು. ಇನ್ನೋರ್ವ ಪುತ್ರ ಭರತ್ (28) ಇದೀಗ ಶಿವಮೊಗ್ಗ ಆಸ್ಪತ್ರೆಯಿಂದ ಬೆಂಗಳೂರು ಶಿಫ್ಟ್ ಮಾಡಲಾಗಿದೆ.

ಕುಟುಂಬದ ಎಲ್ಲರೂ ಎಲ್ಲಿದ್ದಾರೆ?

ರಾಘವೇಂದ್ರ ಕುಟಂಬದ ಐದು ಸಹೋದರಲ್ಲಿ ಓರ್ವ ಸಹೋದರ ಸಾವನ್ನಪ್ಪಿದ್ದಾರೆ. ಓರ್ವ ಸಹೋದರ ಡಾಕ್ಟರ್ ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಪಾ.ರಾ ಕೃಷ್ಣಮೂರ್ತಿ ಆರ್.ಎಸ್.ಎಸ್ ರಾಷ್ಟ್ರೀಯ ಪ್ರಚಾರಕ್ ಆಗಿದ್ದಾರೆ.ಮತ್ತೋರ್ವರು ಬಿ.ಎಸ್.ಎನ್ಎಲ್ ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಭರತ ಉತ್ತಮ ಅಡಿಕೆ ವ್ಯಾಪಾರ ಮಾಡುತ್ತಿದ್ದ 10 ಎಕೆರೆ ಅಡಿಕೆ ತೋಟ ಇತ್ತು ಒಳ್ಳೆ ಫಲ ಬರುತ್ತಿತ್ತು.
ಸುಡಬಹುದಾದ ಎಲ್ಲಾ ವಸ್ತುಗಳು ಅಂದರೆ ಕಟ್ಟಿಗೆ,ಹಾಸಿಗೆ, ಚಾಪೆ ಬಟ್ಟೆ ಬರೆ ಪೇಪರ್ ಪೇಸ್ಟು ಎಲ್ಲವನ್ನು ಕೋಣೆಯಲ್ಲಿ ಹಾಕಿಕೊಂಡು ಮದ್ಯದಲ್ಲಿ ಈ ಕುಟುಂಬ ಪೆಟ್ರೋಲ್ ಸುರಿದುಕೊಂಡು ಸಜೀವವಾಗಿ ದಹಿಸಿಕೊಂಡಿದ್ದಾರೆ. ಅಂದೇ ರಾತ್ರಿ ಪೊಲೀಸರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆದಿದೆ. ಇದೀಗ ಎಲ್ಲರದ್ದು ಒಂದೇ ಪ್ರಶ್ನೆ ಮೂವರು ಸಾವು ಕಂಡಿದ್ದು ಏಕೆ..?

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ತಿರುಪತಿ ಯಾತ್ರೆಗೆ ಹೋದವರ ಮನೆಗೆ ನುಗ್ಗಿದ ಕಳ್ಳರು!
– ಕುಂದಾಪುರದಲ್ಲಿ ನಡೆದ ಘಟನೆ: ಬೀಗ ಒಡೆದು ಬಾವಿಗೆ ಎಸೆದರು
– ಮಂಗಳೂರು: ಪಾಯಸದ ಪ್ಯಾಕಲ್ಲಿ ವಿದೇಶದಿಂದ ಚಿನ್ನ ಸಾಗಾಟ
ಉಡುಪಿ: ತಂದೆಯನ್ನೇ ಕೊಲೆಗೈದ ಮಗ ಪೊಲೀಸ್ ವಶ
ಸುಳ್ಯ : ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿದವನ ಸಾವು
ಕಾಸರಗೋಡು: ಆಸ್ಪತ್ರೆಯಲ್ಲಿ ಗಾಂಜಾ ಮಾರಾಟ..!

NAMMUR EXPRESS NEWS
ಕುಂದಾಪುರ: ಮನೆಯವರು ತಿರುಪತಿ ಯಾತ್ರೆಗೆ ತೆರಳಿದ್ದ ಸಂದರ್ಭ ಕಳ್ಳರು ಮನೆಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆ ಎಂಬಲ್ಲಿ ಸಂಭವಿಸಿದೆ.
ಸ್ಥಳೀಯರಾದ ಸುಕನ್ಯಾ ಕಿಣಿ ಎಂಬವರು ತಿರುಪತಿ ದರ್ಶನಕ್ಕೆಂದು ತೆರಳಿದ್ದರು. ಇವರು ಮನೆಗೆ ವಾಪಾಸು ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕುಂದಾಪುರ-ಸಿದ್ದಾಪುರ ಮುಖ್ಯ ರಸ್ತೆ ಸಮೀಪದಲ್ಲೇ ಸುಕನ್ಯಾರ ಮನೆಯಿದ್ದು ತಿರುಪತಿ ದರ್ಶನ ಮುಗಿಸಿ ಬೆಳಗ್ಗೆ ಬಂದಾಗ ಮನೆಯ ಮುಖ್ಯ ದ್ವಾರದ ಬೀಗ ಒಡೆದು ಬಾವಿಗೆ ಎಸೆದಿರುವುದು ತಿಳಿದುಬಂದಿದೆ. ಮನೆಯ ಒಳಗಿನ ಕಪಾಟಿನಲ್ಲಿದ್ದ 5 ಪವನ್ ತೂಕದ ಮುತ್ತಿನ ಹವಳ ಮಿಶ್ರಿತ ಚಿನ್ನ ಒಂದು ಪವನ್ ಚಿನ್ನದ ನಾಣ್ಯ ಹತ್ತು ಸಾವಿರ ರೂ. ನಗದು ಹಾಗೂ ಬೆಳ್ಳಿ ಸಾಮಗ್ರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶಂಕರನಾರಾಯಣ ಠಾಣೆ ಉಪನಿರೀಕ್ಷಕ ನಾಸಿರ್ ಹುಸೇನ್ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಯುತ್ತಿದೆ.

ಪಾಯಸದ ಪ್ಯಾಕೆಟಲ್ಲಿ ವಿದೇಶದಿಂದ ಚಿನ್ನ ಸಾಗಾಟ!

ಮಂಗಳೂರು : ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಾಟ ಮಾಡುವ ಸ್ಮಗ್ಲರ್ ಗಳು ಇದೀಗ ಹೊಸ ರೀತಿಯ ಅವಿಷ್ಕಾರ ಮಾಡಿದ್ದು, ಈ ಬಾರಿ ಖೀರ್ ಮಿಕ್ಸ್ ಪಾಕೆಟ್ ಗಳಲ್ಲಿ ಚಿನ್ನ ಇಟ್ಟು ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಮಂಗಳೂರು ಅಂತಾರಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುಬೈನಿಂದ ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಎಂಐಎ) ಬಂದಿಳಿದ ಪ್ರಯಾಣಿಕರೊಬ್ಬರು ‘ಖೀರ್ ಮಿಕ್ಸ್’ ಪೊಟ್ಟಣಗಳಲ್ಲಿ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಯಿಂದ 24 ಕ್ಯಾರೆಟ್‌ನ 347 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1 20 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಟ್ವಿಟ್ ಮಾಡಿದೆ. ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಶುಕ್ರವಾರ ಎಂಐಎಗೆ ಬಂದಿಳಿದ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ ಬಳಿ ‘ಕಿಚನ್ ಟ್ರೆಜರ್ಸ್’ ಖೀರ್ ಮಿಕ್ಸ್ನ ಐದು ಪೊಟ್ಟಣಗಳಿದ್ದವು. ಸಂದೇಹ ಬಂದಿದ್ದರಿಂದ ಅವುಗಳನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಚಿನ್ನ ಇರುವುದು ಗೊತ್ತಾಯಿತು’ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಮೂಲಗಳು ತಿಳಿಸಿವೆ.

ತಂದೆಯನ್ನೇ ಕೊಲೆಗೈದ ಮಗ ಆರೆಸ್ಟ್!

ಉಡುಪಿ: ಪೆಜಮಂಗೂರು ಗ್ರಾಮದ ಮೊಗವೀರಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಆನಂದ ಮರಕಾಲ ಎಂಬುವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈತ ತನ್ನ ತಂದೆ ಸಾಧು ಮರಕಾಲ ಅವರನ್ನು ಅ.7ರಂದು ಮನೆಯಲ್ಲಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದನು.ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದಲ್ಲಿ ಆರೋಪಿಯನ್ನು ಉಳ್ಳೂರು ಎಂಬಲ್ಲಿ ಬಂಧಿಸಲಾಗಿದೆ.

ಮನೆಗೆ ಬಂದು ತಂದೆ ಜೊತೆ ಆಗ್ಗಾಗೆ ಗಲಾಟೆ ಮಾಡುತ್ತಿದ್ದ ಆನಂದ, ಸಾಧು ಅವರನ್ನು ಮನೆಯಿಂದ ಹೊರ ಹಾಕಬೇಕೆಂದು ದ್ವೇಷವನ್ನು ಹೊಂದಿದ್ದನು. ಇದೇ ದ್ವೇಷದಿಂದ ಆತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿದವನ ಸಾವು!

ಸುಳ್ಯ: ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ವ್ಯಕ್ತಿಯೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಘಟನೆ ನಡೆದಿದೆ. ಅಲೆಟ್ಟಿ ಗ್ರಾಮದ ಕೂಳಿಯಡ್ಕ ಕರುಣಾಕರ ಮೃತಪಟ್ಟ ದುರ್ದೈವಿ. ಸುಳ್ಯ ಅಲೆಟ್ಟಿ ಕ್ರಾಸ್ ಬಳಿ ಖಾಸಗಿ ಬಸ್ ಹತ್ತಲು ಹೋದಾಗ ಬಸ್ಸಿನ ಬಾಗಿಲು ತಳ್ಳಲ್ಪಟ್ಟು ರಸ್ತೆಗೆ ಆಯತಪ್ಪಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಮನೆಯಲ್ಲೇ ಮರುದಿನ ಮುಂಜಾನೆ ಸಮಸ್ಯೆ ಉಲ್ಬಣವಾದ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಮತ್ತೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಸಾವನ್ನಪ್ಪಿದ್ದಾರೆ ತಿಳಿದು ಬಂದಿದೆ

ಕಾಸರಗೋಡು: ಆಸ್ಪತ್ರೆಯ ಆವರಣದಲ್ಲಿ ಗಾಂಜಾ

ಕಾಸರಗೋಡು : ಖಾಸಗಿ ಆಸ್ಪತ್ರೆಯ ಆವರಣದಲ್ಲಿ, ರಹಸ್ಯವಾಗಿ ಮಾದಕ ವಸ್ತು ಮಾರಾಟಕ್ಕೆಪ್ಪಿಸಿದ, ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಉದುಮ ಎಡಚ್ಚಕ್ಕೆ ನ ಫೈಝಲ್ (37) ಮತ್ತು ತಳಿಪರಂಬದ ಸಿ’, ಟಿ ಅಬ್ದುಲ್ಲ (46) ಬಂಧಿತ ಆರೋಪಿಗಳು, ಭಾನುವಾರ ಸಂಜೆ ಸುಳ್ಳಿಪ್ಪಾಡಿ ಯ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಗಾಂಜಾ ಹಸ್ತಾಂತರಿಸುತ್ತಿದ್ದಾಗ ಖಚಿತ ಮಾಹಿತಿಯಂತೆ ಹೊಂಚು ಹಾಕಿ ಕುಳಿತ್ತಿದ್ದ ಅಬಕಾರಿ ದಳದ ಸಿಬ್ಬಂದಿಗಳು ಹಿಡಿಯುವಲ್ಲಿ ಯಶಸ್ವಿಯಾದರು. ಇದರಿಂದ ಎಂಟು ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ಪತ್ರೆ ಆವರಣ ಆದುದರಿಂದ ಯಾರಿಗೂ ಸಂಶಯ ಬರಲಾರದು ಎಂದು ಇವರು ಇಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದಾಗಿ ಅಬಕಾರಿ ದಳದ ಸಿಬ್ಬಂದಿಗಳು ತಿಳಿಸಿದ್ದಾರೆ

Categories
ಕರಾವಳಿ

ಬೆಳ್ಳಂಬೆಳಗ್ಗೆ ಕುಕ್ಕೆಗೆ ದೇವೇಗೌಡ ದಂಪತಿ ಪೂಜೆ!

ಬೆಳ್ಳಂಬೆಳಗ್ಗೆ ಕುಕ್ಕೆಗೆ ದೇವೇಗೌಡ ದಂಪತಿ ಪೂಜೆ!
– ವಿಶೇಷ ಪೂಜೆ ಸಲ್ಲಿಸಿ ಮತ್ತೆ ಬೆಂಗಳೂರಿಗೆ
– ರಾಜಕೀಯ ನಡುವೆ ದೇವರ ಮೊರೆ ಹೋದ ದೇವೇಗೌಡ

NAMMUR EXPRESS NEWS
ಮಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ದಂಪತಿ ಸೋಮವಾರ ಮುಂಜಾನೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಹೆಚ್.ಡಿ. ದೇವೇಗೌಡ ಹಾಗೂ ಪತ್ನಿ ಚನ್ನಮ್ಮ ಬೆಳ್ಳಂಬೆಳಗ್ಗೆ ಶ್ರೀ ಕ್ಷೇತ್ರ ಕುಕ್ಕೆಗೆ ಆಗಮಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ.ಹೆಚ್‌ಡಿಡಿ ದಂಪತಿ ಭಾನುವಾರ ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಬೇಕಿತ್ತು. ಆದರೆ ಮೋಡ ಕವಿದ ವಾತಾವರಣವಿದ್ದ ಹಿನ್ನೆಲೆ ಹೆಲಿಕಾಪ್ಟರ್ ಟೇಕ್ ಆಫ್ ಆಗಲಿಲ್ಲ. ಬಳಿಕ ದಂಪತಿ ವಿಮಾನದ ಮೂಲಕ ಮಂಗಳೂರಿಗೆ ಬಂದು ತಡರಾತ್ರಿ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಅಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಆನೆಯ ಆಶೀರ್ವಾದ ಕೂಡ ಪಡೆದಿದ್ದಾರೆ.

Categories
ಬೆಂಗಳೂರು

ಗ್ರಾಹಕರಿಗೆ ಕಣ್ಣೀರು ತರುತ್ತೆ ಈರುಳ್ಳಿ!

ಗ್ರಾಹಕರಿಗೆ ಕಣ್ಣೀರು ತರುತ್ತೆ ಈರುಳ್ಳಿ!
– ಬೆಲೆ ಏರಿಕೆಯಿಂದ ತತ್ತರಿಸಿದ ‘ಈರುಳ್ಳಿ’ ದರ ಏರಿಕೆ ಬರೆ
– ಟೋಮೋಟೋ ಬಳಿಕ ಈಗ ಈರುಳ್ಳಿ ದುಬಾರಿ?

NAMMUR EXPRESS NEWS
ಬೆಂಗಳೂರು: ಮಳೆ ಕೊರತೆ, ರೋಗ ಮೊದಲಾದ ಕಾರಣಗಳಿಂದ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಈರುಳ್ಳಿ ಇಳುವರಿ ಕಡಿಮೆಯಾಗಿದೆ, ಇದರಿಂದಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಏರಿಕೆ ಈಗ ಮತ್ತೆ ಟೊಮೊಟೊ ಬೆಲೆ ಏರಿಕೆ ನೆನಪಿಸಿದೆ. 40 ರೂ. ಆಸು ಪಾಸಿನಲ್ಲಿ ಮಾರಾಟವಾಗುತ್ತಿರುವ ಈರುಳ್ಳಿ ದರ ದಸರಾ, ದೀಪಾವಳಿ ಹಬ್ಬದ ವೇಳೆಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ದಾವಣಗೆರೆ ಈರುಳ್ಳಿ ಮಾರುಕಟ್ಟೆಗೆ ಪ್ರತಿದಿನ ಸುಮಾರು 500 ಟನ್ ಈರುಳ್ಳಿ ಮಹಾರಾಷ್ಟ್ರದ ಅಹಮದ್ ನಗರ, ನಾಸಿಕ್, ಪುಣೆ, ಕರ್ನಾಟಕದ ಚಳ್ಳಕೆರೆ, ರಾಣೆಬೆನ್ನೂರು, ಹರಪನಹಳ್ಳಿ, ಜಗಳೂರು ಮೊದಲಾದ ಕಡೆಗಳಿಂದ ಬರುತ್ತದೆ.

15 ದಿನಗಳ ಹಿಂದೆ 100 ರೂಪಾಯಿಗೆ 5 ಕೆಜಿ ಇದ್ದ ಈರುಳ್ಳಿ ದರ ಬೇಡಿಕೆ ಹೆಚ್ಚಾಗಿರುವುದರಿಂದ ಈಗ ಕೆಜಿಗೆ 40 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯ ದರ್ಜೆಯ ಈರುಳ್ಳಿ ಕೆಜಿಗೆ 30 ರೂ., ಸಣ್ಣ ಈರುಳ್ಳಿ ಕೆಜಿಗೆ 25 ರೂ. ಗೆ ಮಾರಾಟವಾಗುತ್ತಿದ್ದು, ಹಬ್ಬದ ಹೊತ್ತಿಗೆ ಈರುಳ್ಳಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈರುಳ್ಳಿ ಕೆಜಿಗೆ 30 ರೂ., ಸಣ್ಣ ಈರುಳ್ಳಿ ಕೆಜಿಗೆ 25 ರೂ. ಗೆ ಮಾರಾಟವಾಗುತ್ತಿದ್ದು, ಹಬ್ಬದ ಹೊತ್ತಿಗೆ ಈರುಳ್ಳಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ರೈತರಿಂದ ಕೆಜಿಗೆ 15 ರಿಂದ 20 ರೂಪಾಯಿಗೆ ಈರುಳ್ಳಿ ಖರೀದಿಸುವ ಮಧ್ಯವರ್ತಿಗಳು, ವ್ಯಾಪಾರಸ್ಥರಿಗೆ ಕೆಜಿಗೆ 25 ರಿಂದ 30 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ 35 ರಿಂದ 40 ರೂ. ಗೆ ಮಾರಾಟವಾಗುತ್ತಿದ್ದು, ರೈತರಿಗೆ ಬೆಲೆ ಸಿಗದಂತಾಗಿದ್ದರೆ, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಧ್ಯವರ್ತಿಗಳು, ವರ್ತಕರಿಗೆ ಅನುಕೂಲವಾಗುತ್ತಿದೆ ಎನ್ನಲಾಗಿದೆ.