Categories
ಕರಾವಳಿ

ಕರಾವಳಿಯಲ್ಲಿ ಏನೇನು ನ್ಯೂಸ್

– ಬೆಳ್ತಂಗಡಿ : ಚಿರತೆ ದಾಳಿಗೆ ದನದ ಕರು ಬಲಿ
– ರಸ್ತೆ ಅಪಘಾತ ಆಟೋ ರಿಕ್ಷಾ ಚಾಲಕನಿಗೆ ಗಾಯ
– ಕಾಸರಗೋಡು : ಶಸ್ತ್ರಕ್ರಿಯೆಗೆ ರೋಗಿಯಿಂದ ಲಂಚ ಪಡೆದ ವೈದ್ಯ
– ಪುತ್ತೂರು : ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ
– ಬಂಟ್ವಾಳ: ಬಸ್‌ ಹತ್ತುವ ವೇಳೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

NAMMUR EXPRESS NEWS
ಬೆಳ್ತಂಗಡಿ: ಮುಂಡೂರು ಗ್ರಾಮದ ಕೇರಿಯಾರ್ ಗುರುವಪ್ಪ ಸಾಲಿಯಾನ್ ಅವರ ಮನೆಯ ಕರುವೊಂದನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಅ. 2ರ ತಡ ರಾತ್ರಿ ಸಂಭವಿಸಿದೆ.ಈ ಬಗ್ಗೆ ವಲಯ ಅರಣ್ಯಾಧಿಕಾರಿ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆ ಬೋನು ಇಡಲು ಮುಂದಾಗಿದೆ. ಆದರೆ ನಾರಾವಿಯಲ್ಲೂ ಚಿರತೆ ಹಾವಳಿಯಿದ್ದು ಅಲ್ಲೂ ಬೋನು ಇಡಲಾಗಿದೆ ಕೋಟಿಕಟ್ಟೆಯಿಂದ ಕಾಡಬಾಗಿಲು ರಸ್ತೆಯಲ್ಲಿ ಸಂಚರಿಸುವ ಜನರಿಗೆ, ಜೀವ ಭಯ ಉಂಟಾಗಿದೆ.

ರಸ್ತೆ ಅಪಘಾತ ಆಟೋ ರಿಕ್ಷಾ ಚಾಲಕನಿಗೆ ಗಾಯ

ಕುಂಬಳೆ: ಕುಂಬಳೆ ಚರ್ಚ್ ಪರಿಸರದಲ್ಲಿ ಕಾರು ಢಿಕ್ಕಿ ಹೊಡೆದು ಆಟೋ ರಿಕ್ಷಾ ಚಾಲಕ ಕುಂಬಳೆ ಸ್ಕೂಲ್ ಸಮೀಪದ ನಿವಾಸಿ ಮುರಳಿ(39) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ರಿಕ್ಷಾ ಸಂಪೂರ್ಣ ಹಾನಿಗೀಡಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಸ್ತ್ರಕ್ರಿಯೆಗೆ ರೋಗಿಯಿಂದ ಲಂಚ ಪಡೆದ ವೈದ್ಯ!

ಕಾಸರಗೋಡು : ಶಸ್ತ್ರಕ್ರಿಯೆಗೆ ರೋಗಿಯಿಂದ ಲಂಚ ಪಡೆದ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯನನ್ನು ವಿಜಿಲೆನ್ಸ್ ಬಂಧಿಸಿದೆ. ವೈದ್ಯ ಡಾ ವೆಂಕಟಗಿರಿಯನ್ನು ಮನೆಯಲ್ಲಿ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ಬಂಧಿಸಿದೆ. ಲಂಚ ಕೊಟ್ಟ ನಿವಾಸಿಯೊಬ್ಬರು ನೀಡಿದ ದೂರಿನಂತೆ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ. ಹರ್ನಿಯಾ ರೋಗದ ಚಿಕಿತ್ಸೆಗೆ ಆಗಮಿಸಿದ್ದು ಈ ವೇಳೆ ಶಸ್ತ್ರಕ್ರಿಯೆ ಅಗತ್ಯ ಇರುವುದಾಗಿ ವೈದ್ಯ ಸೂಚಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಶಸ್ತ್ರಕ್ರಿಯೆ ನಡೆಸುವುದಾಗಿ ಎರಡು ಸಾವಿರ ರೂ. ನೀಡುವಂತೆ ಈ ವ್ಯಕ್ತಿಗೆ ವೈದ್ಯ ತಿಳಿಸಿದ್ದನು ಎನ್ನಲಾಗಿದೆ. ಮಂಗಳವಾರ ಸಂಜೆ ನುಳ್ಳಿಪ್ಪಾಡಿಯಲಿರುವ ಮನೆಗೆ ತೆರಳಿ ಎರಡು ಸಾವಿರ ರೂ. ಹಸ್ತಾಂತರಿಸಿದ್ದು ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ, ವೈದ್ಯನನ್ನು ವಶಕ್ಕೆ ಪಡೆದುಕೊಡರು. ಅಬ್ಬಾಸ್ ನೀಡಿದ ಎರಡು ಸಾವಿರ ರೂ. ವನ್ನು ವಶಕ್ಕೆ ಪಡೆದುಕೊಂಡರು.

ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ

ಪುತ್ತೂರು: ಪುತ್ತೂರಿನ ಕೇಪುಳು ಸರ್ಕಲ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಬೈಕ್’ ಗಳೆರಡು ಮುಖಾಮುಖಿ ಡಿಕ್ಕಿ ಘಟನೆಯಲ್ಲಿ ಬೈಕ್‌ ಸವಾರಿ ಹಾಗೂ ಸ್ಕೂಟರ್ ಸವಾರ ಅಬ್ದುಲ್ ಚಂದ್ರ ರಜಾಕ್ ಗೆ ಗಂಭೀರ ಗಾಯ ಅಗಿದು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬಸ್‌ ಹತ್ತುವ ವೇಳೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!

ಬಂಟ್ವಾಳ: ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಸ್ ಹತ್ತುವ ಸಂದರ್ಭ ಅಪರಿಚಿತ ಪ್ರಯಾಣಿಕ ನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಮಂಗಳೂರು ಕಾಲೇಜಿಗೆ ತೆರಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಲ್ಲಿ ಇದ್ದ ಅಪರಿಚಿತ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಆತ ವಿದ್ಯಾರ್ಥಿನಿಗೆ ಬೆದರಿಸಿದ್ದಲ್ಲದೆ

ಮುಂದೆಯೂ ಇದೇ ರೀತಿ ಕಿರುಕುಳ ನೀಡುತ್ತೇನೆ, ಏನು ಮಾಡುತ್ತಿ ? ಎಂದು ಹೆದರಿಸಿದ್ದಾನೆ. ಘಟನೆ ಬಗ್ಗೆ ನಿರ್ವಾಹಕನಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ಮಾತಿನ ಚಕಮುಖಿ ನಡೆದಿದೆ ಎಂದು ತಿಳಿದು ಬಂದಿದೆ. ಬಸ್‌ನಲ್ಲಿ ನಡೆದ ಘಟನೆ ಬಗ್ಗೆ ಸ್ಥಳದಿಂದಲೇ ವಿದ್ಯಾರ್ಥಿನಿ ಫೋನ್ ಮೂಲಕ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಪೋಷಕರು ಮತ್ತು ವಿದ್ಯಾರ್ಥಿನಿ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

Categories
ತೀರ್ಥಹಳ್ಳಿ ಶಿವಮೊಗ್ಗ

ಮಂಜುನಾಥ್​ ಗೌಡರಿಗೆ ಬಿಗ್ ಶಾಕ್!.. ಇ ಡಿ ದಾಳಿ!

ಮಂಜುನಾಥ್​ ಗೌಡರಿಗೆ ಬಿಗ್ ಶಾಕ್!.. ಇ ಡಿ ದಾಳಿ!
– ಕರಕುಚ್ಚಿ, ಶಿವಮೊಗ್ಗ, ತೀರ್ಥಹಳ್ಳಿ ನಿವಾಸಗಳ ಮೇಲೆ ಇಡಿ ದಾಳಿ: ಹಲವು ದಾಖಲೆಗಳ ಪರಿಶೀಲನೆ
– ಬೆಳ್ಳಂಬೆಳಿಗ್ಗೆ ಏಕ ಕಾಲದಲ್ಲಿ ದಾಳಿ
– ರಾಜಕೀಯ ಪ್ರೇರಿತ ದಾಳಿ ಆಯ್ತಾ..?

NAMMUR EXPRESS NEWS
ತೀರ್ಥಹಳ್ಳಿ/ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಆಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಸಹಕಾರಿ ನಾಯಕ ಡಾ.ಆರ್​ಎಂ ಮಂಜುನಾಥ್ ಗೌಡರಿಗೆ ಸೇರಿದ ಆಸ್ತಿಪಾಸ್ತಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇತ್ತೀಚಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡರಿಗೆ ಅ.6ರಂದು ತೀರ್ಥಹಳ್ಳಿಯಲ್ಲಿ ಅದ್ದೂರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಡುವೆ ಅವರಿಗೆ ಸೇರಿದ ಸೇರಿದ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿದ್ದು,ಆನಂತರ ತೀರ್ಥಹಳ್ಳಿಯ ಹಣಗೆರೆ ಕಟ್ಟೆಯ ಸಮೀಪದ ಸಕರಕುಚ್ಚಿ ನಿವಾಸದ ಮನೆ ಮೇಲೂ ದಾಳಿಯಾಗಿದೆ. ಶಿವಮೊಗ್ಗದ ಶರಾವತಿ ನಗರದಲ್ಲಿರುವ ನಿವಾಸದ ಮನೆ ಮೇಲೂ ದಾಳಿ ನಡೆದಿದೆ. ಹೆಚ್ಚುವರಿ ಸಿಬ್ಬಂದಿಯೊಂದಿಗೆ ಬಂದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಜುನಾಥ್ ಗೌಡರ ಮನೆ ಮೇಲೆ ದಾಳಿ ನಡೆಸಿದ್ದು, ಈಗ ಪರಿಶೀಲನೆ ನಡೆಯುತ್ತಿದೆ.  ಡಾ.ಆರ್ ಎಂ ಮಂಜುನಾಥ್ ಗೌಡರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

5 ವಾಹನ…15 ಅಧಿಕಾರಿಗಳ ತಂಡ!

5ಕ್ಕೂ ಹೆಚ್ಚು ವಾಹನಗಳಲ್ಲಿ 15 ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ಮಾಡಿದ್ದೂ ಪ್ರತ್ಯೇಕ ಫೋರ್ಸ್ ನೊಂದಿಗೆ ಇಡಿ ಟೀಂ ಬಂದಿದೆ. ಡಿಸಿಸಿ ಬ್ಯಾಂಕ್ ನಕಲಿ ಬಂಗಾರದ ಹಗರಣ ತನಿಖೆ ಸಂಬಂಧ ಈಡಿ ದಾಳಿ ನಡೆಸಿರುವ ಸಾಧ್ಯತೆ ಇದ್ದು ಕೆಲ ತಿಂಗಳ ಹಿಂದೆಯೇ ಈ ಸಂಬಂಧ ಡಿಸಿಸಿ ಬ್ಯಾಂಕ್ ನಿಂದ ಮಾಹಿತಿ ಕೇಳಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ರಾಜಕೀಯ ಪ್ರೇರಿತ ದಾಳಿ?!

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಭಾವಿ ಮುಖಂಡರಾಗಿ ಬೆಳೆಯುತ್ತಿರುವ ಮಂಜುನಾಥ ಗೌಡರನ್ನು ತಣ್ಣಗೆ ಮಾಡಲು ರಾಜಕೀಯ ದಾಳಿ ಇದಾಗಿದೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆ ಈ ದಾಳಿ ಮಾಡಲಾಗಿದೆ ಎಂದು ಅವರ ಅಭಿಮಾನಿಗಳು, ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Categories
Uncategorized

ನಾಳೆಯಿಂದ ವಿಶ್ವಕಪ್ ಕ್ರಿಕೆಟ್ ಮ್ಯಾಜಿಕ್!

ನಾಳೆಯಿಂದ ವಿಶ್ವಕಪ್ ಕ್ರಿಕೆಟ್ ಮ್ಯಾಜಿಕ್!
– ಇಂಗ್ಲೆಂಡ್ – ನ್ಯೂಜಿಲ್ಯಾಂಡ್ ಮಧ್ಯ ಆರಂಭಿಕ ಪಂದ್ಯ
– ಅ.14ಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ

NAMMUR EXPRESS NEWS
ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ 2023 ಟೂರ್ನಿ ಗುರುವಾರದಿಂದ ಆರಂಭಗೊಳ್ಳಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಉದ್ಘಾಟನಾ ಪಂದ್ಯ ನಡೆಯಲಿದೆ. ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ವೇಳೆ ಅದ್ಧೂರಿ ಸಮಾರಂಭವನ್ನು ಮಾಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ.
ಕಿವೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ ಐಸಿಸಿ ಮತ್ತು ಬಿಸಿಸಿಐ ಅಧಿಕಾರಿಗಳು ಹಾಗೂ ಸಣ್ಣ ಮಟ್ಟದ ಲೇಶ‌ರ್ ಶೋ ಮಾತ್ರ ಇರಲಿದೆ ಎಂದು ತಿಳಿದುಬಂದಿದೆ

Categories
ಉಡುಪಿ ಕರಾವಳಿ ಕಾರ್ಕಳ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಮಾರ್ಬಲ್ ಲಾರಿ ಬ್ರೇಕ್ ಫೈಲ್: ಓರ್ವ ಸಾವು
– ವಿಟ್ಲ ಒಡಿಯೂರಿಗೆ ಬರುತ್ತಿದ್ದ ಮಾರ್ಬಲ್ ಲಾರಿ
– ಕಾರ್ಕಳ : ಕಾಣೆಯಾದವ ಶವವಾಗಿ ಪತ್ತೆ..!
– ಉಡುಪಿ: 50 ಅಡಿ ಆಳದ ಬಾವಿಗೆ ಬಿದ್ದ ಮಹಿಳೆ ರಕ್ಷಣೆ
– ಮಂಗಳೂರು: ಮನೆಯಲ್ಲೆ ವೇಶ್ಯಾವಾಟಿಕೆ ದಂಧೆ
– ಕಾರ್ಕಳ : ರಬ್ಬರ್ ಹೌಸ್‌ನಲ್ಲಿ ಅಗ್ನಿ ಅವಘಡ

NAMMUR EXPRESS ನ್ಯೂಸ್
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳ ತಾಲೂಕು ವಿಟ್ಲ ಒಡಿಯೂರಿಗೆ ಬರುತ್ತಿದ್ದ ಮಾರ್ಬಲ್ ಲಾರಿ ಇಳಿಜಾರು ರಸ್ತೆಯಲ್ಲಿ ಬ್ರೇಕ್ ಫೈಲ್ ಆಗಿ ನೇರವಾಗಿ ದೇವಸ್ಥಾನದ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಸಾವನ್ನು ಕಂಡಿದ್ದು ಮೂವರಿಗೆ ಗಾಯವಾಗಿದೆ. ಮಾರ್ಬಲ್ ತುಂಬಿಕೊಂಡು ಬಂದ ಲಾರಿ ಪಲ್ಟಿಯಾಗಿ ಗಂಭೀರ ಗಾಯಗೊಂಡ ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಉತ್ತರಭಾರತ ಮೂಲದವರು ಎನ್ನಲಾಗಿದೆ. ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಸಾವನ್ನಪ್ಪಿದ್ದ ವ್ಯಕ್ತಿಯನ್ನು ಉತ್ತರ ಭಾರತ ಮೂಲದ ಸುಭಾಶ್ಚಂದ್ರ ಎನ್ನಲಾಗಿದ್ದು, ಹರ್ಷದ್ ಮತ್ತು ಪವನ್ ಹಾಗೂ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಮೂವರಿಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ನಾಲ್ವರಲ್ಲಿ ಇಬ್ಬರು ಉತ್ತರ ಭಾರತದ ಮೂಲದವರು ಮತ್ತು ಇಬ್ಬರು ಮಂಗಳೂರಿನವರು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಣೆಯಾದವ ಶವವಾಗಿ ಪತ್ತೆ..!

ಕಾರ್ಕಳ : ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ದುರ್ಗಾ ಗ್ರಾಮದ ಸಂದೇಶ್ ಶೆಟ್ಟಿ ಅ. 4ರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಕಳ ಪುರಸಭಾ ವ್ಯಾಪ್ತಿಯ ಕಾವೇರಡ್ಕ ಅಯೋಧ್ಯಾ ನಗರ ದುರ್ಗ ತೆಳ್ಳಾರು ಸಂಪರ್ಕ ಸೇತುವೆಯಡಿ ಶವವೊಂದನ್ನು ಗಮನಿಸಿದ ಸ್ಥಳೀಯರು ಕಾರ್ಕಳ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮೇಲಕ್ಕೆತ್ತಿದರು.
ಸಂದೇಶ್ ಶೆಟ್ಟಿ ಕಾಣೆಯಾಗಿರುವ ಕುರಿತು ಅ. 3 ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

50 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

ಉಡುಪಿ: 50 ಅಡಿ ಆಳದ ಬಾವಿಗೆ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದ ಘಟನೆ ಕೊಳಂಬೆ ಬೈಲೂರು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಸವಿತಾ ಕಾಮತ್ ಎಂಬವರು ಸೋಮವಾರ ರಾತ್ರಿ ಸುಮಾರು 50 ಅಡಿ ಆಳದ 10 ಅಡಿ ಅಗಲದ ಮತ್ತು 30 ಅಡಿ ನೀರಿರುವ ಬಾವಿಗೆ, ಅಕಸ್ಮಿಕವಾಗಿ ಬಿದ್ದರೆನ್ನಲಾಗಿದೆ. ಈ ವೇಳೆ ಬಾವಿಯೊಳಗೆ ಇವರು ಪಂಪ್ ಸೆಟ್ ನ ಫುಟ್ಬಾಲ್ ಗೆ ಜೋಡಿಸಿರುವ ಹಗ್ಗವನ್ನು ಹಿಡಿದು ಜೀವನ್ಮರಣ ಪರಿಸ್ಥಿತಿಯಲ್ಲಿದ್ದರು. ಕೂಡಲೇ ಉಡುಪಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ನೇತೃತ್ವದಲ್ಲಿ ಸಿಬ್ಬಂದಿ ವಿನಾಯಕ ಬಾವಿಗೆ ಹಗ್ಗದ ಸಹಾಯದಿಂದ ಇಳಿದು ಮಹಿಳೆಯನ್ನು ಹಗ್ಗದ ಮೂಲಕ ಮೇಲಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿದ್ದಾರೆ.

ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ – ಇಬ್ಬರು ಸೆರೆ.!

ಮಂಗಳೂರು: ಹೆರ್ಗಾ ಗ್ರಾಮದ ಸರಳೇಬೆಟ್ಟುವಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ಸಂಬಂಧ ಇಬ್ಬರನ್ನು ಮಣಿಪಾಲ ಪೊಲೀಸರು ಅ.2ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.ಮಂಡ್ಯದ ಶಿವರಾಜ(38) ಮತ್ತು ಬಾಗಲಕೋಟೆಯ ನಿಂಗಪ್ಪ ಅಂಬಿಗೇರಾ (29) ಬಂಧಿತಆರೋಪಿಗಳು. ಇನ್ನೋರ್ವ ಆರೋಪಿ ನವೀನ್ ಗೌಡ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಎರಡು ಮೊಬೈಲ್ ಫೋನ್ ಹಾಗೂ 15 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣಗಳಿಸುವ ಉದ್ದೇಶದಿಂದ ಹುಡುಗಿಯರನ್ನು ಪುಸಲಾಯಿಸಿ ಕರೆ ತಂದು ಅವರಿಗೆ ಬಲವಂತಾಗಿ ಪುರುಷರನ್ನು ಒದಗಿಸಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದಾಗಿ ದೂರಲಾಗಿದೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಬ್ಬರ್ ಸ್ಕೋಕ್ ಹೌಸ್‌ನಲ್ಲಿ ಅಗ್ನಿ ಅವಘಡ

ಕಾರ್ಕಳ : ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರೆಬೈಲು ಎಂಬಲ್ಲಿ ರಬ್ಬರ್ ಸ್ಕೋಕ್ ಹೌಸ್‌ನಲ್ಲಿ ಅ. 4 ರಂದು ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಬ್ಬರ್ ಶೀಟ್ ಮಾಡಲು ಹಾಕಿದ್ದ ಬೆಂಕಿ ಕಟ್ಟಡಕ್ಕೆ ತಗುಲಿ ಅವಘಡ ಸಂಭವಿಸಿದೆ. ಪರಿಣಾಮವಾಗಿ 50 ರಬ್ಬರ್ ಶೀಟ್, ಕಟ್ಟಡದ ಮೇಲ್ಯಾವಣಿಗೆ ಹಾಕಿದ್ದ ಶೀಟ್ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬೀ. ಎಂ. ಸಂಜೀವ್, ಸಿಬ್ಬಂದಿ ಸುರೇಶ್, ಜಯಮೂಲ್ಯ ಕೇಶವ್, ಸುಜಯ್, ವಿನಾಯಕ್ ಪಾಲ್ಗೊಂಡಿದ್ದರು.

Categories
ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದಲ್ಲಿ ಮೆಸ್ಕಾಂ ಸಿಬ್ಬಂದಿ ಸ್ವಚ್ಛತೆ
– ಮಂಜುನಾಥ ಗೌಡರಿಗೆ ಬೆಳ್ಳಿ ಪ್ರಕಾಶ್ ಗೌರವ!
– ಅನಂತಮೂರ್ತಿ ಶಾಲೆಯಲ್ಲಿ ಗಾಂಧಿಗೆ ನಮನ
– ವಿದ್ಯುತ್ ಲೈನ್ಸ್ ಸ್ವಚ್ಛತೆ ಮಾಡುತ್ತಿರುವ ಮೆಸ್ಕಾಂ ಸಿಬ್ಬಂದಿ
– ತೀರ್ಥಹಳ್ಳಿಯಲ್ಲಿ ವಿದ್ಯುತ್ ಸೇವೆಗೆ 24/7 ಸ್ಪಂದನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಹಾಗೂ ತಾಲೂಕಿನೆಲ್ಲೆಡೆ ವಿದ್ಯುತ್ ಇಲಾಖೆಯ ಲೈನ್ ಮೆನ್ ಹಾಗೂ ಸಿಬ್ಬಂದಿಗಳು 24 ಗಂಟೆ ಸೇವೆ ನೀಡುತ್ತಿದ್ದು ಗ್ರಾಹಕರ ಶ್ಲಾಘನೆಗೆ ಒಳಗಾಗಿದ್ದಾರೆ. ಇದೀಗ ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಲೈನ್ಸ್ ಸ್ವಚ್ಛತಾ ಕಾರ್ಯ ಶುರು ಮಾಡಲಾಗಿದೆ. ತೀರ್ಥಹಳ್ಳಿ ಪಟ್ಟಣದ ಸುತ್ತಮುತ್ತ ಲೈನ್ಸ್ ಸ್ವಚ್ಛತೆಯನ್ನು ವಿದ್ಯುತ್ ಲೈನ್ ಅಡಿ ಗಿಡಗಳನ್ನು ಕಡಿಯಲಾಗುತ್ತಿದ್ದು ಕೆಲವೆಡೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ. ವಿದ್ಯುತ್ ಇಲಾಖೆಯ ಲೈನ್ ಮೆನ್ ಗಳು, ಸಿಬ್ಬಂದಿಗಳು ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಡಾ.ಅರ್. ಎಂ. ಮಂಜುನಾಥ ಗೌಡ ಅವರಿಗೆ ಬೆಳ್ಳಿ ಪ್ರಕಾಶ್ ಅಭಿನಂದನೆ

ರಾಜ್ಯದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ್ ಹಾಗೂ ಎಂ. ಡಿ.ದೇವರಾಜ್‌ ಅವರು ನೂತನವಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಅರ್. ಎಂ. ಮಂಜುನಾಥ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿದರು ಈ ಸಂಧರ್ಭದಲ್ಲಿ ಜಗದೀಶ್ ಕರಕುಚ್ಚಿ ಲೋಕೇಶ್ ಜೊತೆಯಲ್ಲಿ ಇದ್ದರು.

ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿಗೆ ನಮನ

ತೀರ್ಥಹಳ್ಳಿ ಪಟ್ಟಣದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಲಾ ವತಿಯಿಂದ ಆಚರಿಸಲಾಯಿತು.
ಮಹಾಪುರುಷರಿಬ್ಬರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಲಾ ಉಪ ಪ್ರಾಂಶುಪಾಲರಾದ ದೇವೆಂದ್ರ ನಾಯಕ್ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರ್ರಿಯವರ ತತ್ವ,ಸಿದ್ಧಾಂತ, ಅಹಿಂಸಾ ಮಾರ್ಗದ ಬಗ್ಗೆ ಮಾತನಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಸಾಯಿರಾ ಭಾನು  ಮಹಾತ್ಮ ಗಾಂಧಿ ಮತ್ತು ಲಾ.ಬ.ಶಾಸ್ತ್ರಿಯವರ  ಜೀವನ ಶೈಲಿ ಮತ್ತು ಹೋರಾಟದ ಬಗ್ಗೆ ವಿವರ ನೀಡಿದರು. ಅಧ್ಯಕ್ಷತೆ ವಹಿಸಿದ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ರಾಂಚಂದ್ರಕೊಪ್ಪಲು ಮಾತನಾಡಿ, ಗಾಂಧಿ ಮತ್ತು ಶಾಸ್ತ್ರೀಯವರ ಸಾಧನೆಯ ಬದುಕಿನ ಬಗ್ಗೆ ಇರುವ ಪುಸ್ತಕಗಳನ್ನು ಮಕ್ಕಳು ಓದಬೇಕು. ನಮ್ಮೆಲ್ಲರ ಪಾಲಿಗೆ ವಿಶ್ವಗುರು ಆಗಿರುವ ಮಹಾತ್ಮಗಾಂಧಿ ಯವರ ಆದರ್ಶ ಮತ್ತು ಚಿಂತನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಶಾಲಾ ಮಕ್ಕಳು ಭಗವದ್ಗೀತೆ,ಕುರಾನ್,ಬೈಬಲ್ ನಲ್ಲಿನ ಶಾಂತಿ ಮಂತ್ರವನ್ನು ಪಠಿಸಿದರು. ಶಾಲಾ ಶಿಕ್ಷಕರು,ಶಿಕ್ಷಕಿಯರು ಉಪಸ್ಥಿತರಿದ್ದರು.

Categories
ಮಂಗಳೂರು

ರೋಗದಿಂದ ನರಳುತ್ತಿದ್ದ ಹೆಬ್ಬಾವು: ರಕ್ಷಿಸಿದ ಲೇಡಿ ಡಾಕ್ಟರ್ಸ್‌!

ರೋಗದಿಂದ ನರಳುತ್ತಿದ್ದ ಹೆಬ್ಬಾವು: ರಕ್ಷಿಸಿದ ಲೇಡಿ ಡಾಕ್ಟರ್ಸ್‌!
– ಮಂಗಳೂರಲ್ಲಿ ಹೆಬ್ಬಾವಿಗೆ ಆಪರೇಷನ್
– ಏನಿದು ಸ್ಟೋರಿ…? ಆಪರೇಷನ್ ಹೇಗೆ..?

NAMMUR EXPRESS NEWS
ಮಂಗಳೂರು: ಹೆಬ್ಬಾವೊಂದಕ್ಕೆ ಮಲಬದ್ಧತೆ ಸಮಸ್ಯೆ ಎದುರಾಗಿ ಕೊನೆಗೆ ಅದಕ್ಕೆ ಆಪರೇಷನ್‌ ಮಾಡಿ ಸಮಸ್ಯೆ ಪರಿಹಾರ ಮಾಡಿದ ಈ ಘಟನೆ ಮಂಗಳೂರಿನಲ್ಲಿ ವರದಿ ಆಗಿದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಅದರ ಸಂಕಟ ನಿವಾರಣೆ ಮಾಡಿದ್ದು ಒಂದು ಲೇಡಿ ಡಾಕ್ಟರ್ಸ್‌ ಟೀಮ್‌. ಕೆಲವು ದಿನಗಳ ಹಿಂದೆ ಮಂಗಳೂರಿನ ಕದ್ರಿಯಲ್ಲಿ ಒಂದು ಹೆಬ್ಬಾವು ಪತ್ತೆಯಾಗಿತ್ತು. ಮನುಷ್ಯರು ಅತ್ತಿಂದಿತ್ತ ಹೋದರೂ ಸ್ವಲ್ಪವೂ ಚಲನೆ ಇಲ್ಲದೆ ಅದು ಬಿದ್ದುಕೊಂಡಿತ್ತು. ಅದನ್ನು ನೋಡಿದ ಯಾರೋ ಉರಗ ಪ್ರೇಮಿಗಳಿಗೆ ವಿಷಯ ತಿಳಿಸಿದ್ದರು. ಉರಗ ಪ್ರೇಮಿ ಧೀರಜ್‌ ಗಾಣಿಗ ಅವರು ಬಂದು ನೋಡಿದಾಗ ಹಾವು ಏನೋ ಸಮಸ್ಯೆಯಿಂದ ಬಳಲುತ್ತಿರುವುದು ಕಂಡಿತು.

ಮಂಗಳೂರಿನಲ್ಲಿ ಪ್ರಾಣಿಗಳಿಗೆ ಏನೇ ಆರೋಗ್ಯ ಸಮಸ್ಯೆ ಎದುರಾದರೂ ರಕ್ಷಣೆಗೆ ಬರುವ ಲೇಡಿ ಡಾಕ್ಟರ್ಸ್‌ ಟೀಮ್‌ ಕೂಡಲೇ ಈ ಹಾವನ್ನು ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿ ಅವರ ತಂಡ ತನ್ನ ವಶಕ್ಕೆ ಪಡೆಯಿತು. ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ಟೀಮ್‌ ಹಾವಿನ ಸ್ಕ್ಯಾನ್‌ ನಡೆಸಿತು. ಆಗ ಹಾವಿನ ಹೊಟ್ಟೆಯಲ್ಲಿ ಮಲ ತುಂಬಿಕೊಂಡಿರುವುದು ಪತ್ತೆಯಾಯಿತು. ವಿಪರೀತ ಮಲ ತುಂಬಿಕೊಂಡು ಅದನ್ನು ಹೊರಹಾಕಲಾಗದೆ ಹೊಟ್ಟೆ ಉಬ್ಬರಿಸಿ ಅದು ಸಂಕಟದಲ್ಲಿತ್ತು. ಇದನ್ನು ಗಮನಿಸಿದವರು ತಮ್ಮ ವೈದ್ಯಕೀಯ ಜಾಣ್ಮೆಯನ್ನು ಮೆರೆದರು. ಕೂಡಲೇ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಐವರೂ ವೈದ್ಯರು ಸೇರಿ ಅರಿವಳಿಕೆ ಕೊಟ್ಟು ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೆಬ್ಬಾವಿನ ಹೊಟ್ಟೆಯಲ್ಲಿ ತುಂಬಿಕೊಂಡಿದ್ದ ಮಲವನ್ನು ಹೊರತೆಗೆದರು ಮತ್ತು ಹಾಗೇ ಹೊಟ್ಟೆಗೆ ಹೊಲಿಗೆ ಹಾಕಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ- ಕೈಮರ-ಮಾಸ್ತಿಕಟ್ಟೆ ರಸ್ತೆಯಲ್ಲಿ ಅವ್ಯವಸ್ಥೆ

ರಾಜ್ಯದ ಹೆದ್ದಾರಿಯಲ್ಲಿ ಗುಂಡಿ: ಪ್ರತಿದಿನ ಅಪಘಾತ!
– ತೀರ್ಥಹಳ್ಳಿ- ಕೈಮರ-ಮಾಸ್ತಿಕಟ್ಟೆ ರಸ್ತೆಯಲ್ಲಿ ಅವ್ಯವಸ್ಥೆ
– ಸ್ಥಳೀಯರಿಂದ ಆಕ್ರೋಶ: ಹೋರಾಟದ ಎಚ್ಚರಿಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೈಮರದಿಂದ ಮಾಸ್ತಿ ಕಟ್ಟೆ ಮಾರ್ಗವಾಗಿ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸುಣ್ಣದ ಮನೆ, ಎಂ.ಕೆ ಬಯಲು ಭಾಗದಲ್ಲಿ ಗುಂಡಿಗಳು ಬಿದ್ದಿದೆ. ನೂರಾರು ಗುಂಡುಗಳಿದ್ದರೂ ಈವರೆಗೆ ಇದ್ದ ಆಡಳಿತ ತಲೆಕೆಡಿಸಿಕೊಂಡಿಲ್ಲ. ಈ ಭಾಗದ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನ ವಹಿಸುತ್ತಿರುವುದು ಪ್ರತಿದಿನ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತದೆ. ಇತ್ತೀಚಿನ ಕಳೆದ ವಾರಗಳಿಂದ ಏಳಕ್ಕೂ ಹೆಚ್ಚು ಬೈಕ್ ಗಳು ಬಿದ್ದು ಅನೇಕರಿಗೆ ಪೆಟ್ಟಾಗಿದೆ. ಅನೇಕರು ಈ ಭಾಗದಲ್ಲಿ ಜೀವವನ್ನ ಕಳೆದುಕೊಂಡಿದ್ದಾರೆ. ಆದರೆ ಪದೇ ಪದೇ ಸ್ಥಳೀಯರು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದರು ಕೂಡ ಕ್ರಮವನ್ನು ವಹಿಸಿಲ್ಲ. ಇದರಿಂದಾಗಿ ಗುಂಡಿಗಳು ಜನರೇ ಗುಂಡಿಗಳ ನಡುವೆ ಪ್ರಯಾಣಿಸುವಂತಾಗಿದೆ. ಈ ಭಾಗದಲ್ಲಿ ಶಾಲೆ ಮಕ್ಕಳು ಮತ್ತು ಉದ್ಯೋಗಕ್ಕೆ ಹೋಗುವಂತ ಯುವಕರು ಹೆಚ್ಚಾಗಿ ಇದ್ದು ಇದರಿಂದ ಅನಾಹುತ ಸೃಷ್ಟಿಯಾಗುತ್ತದೆ. ಹೀಗಾಗಿ ತಕ್ಷಣ ಸಂಬಂಧಪಟ್ಟವರು ಗಮನಿಸಬೇಕು. ರಸ್ತೆಯಲ್ಲಿರುವ ಗುಂಡಿಗಳನ್ನ ಮುಚ್ಚಬೇಕು. ಶಾಶ್ವತವಾಗಿ ಇದಕ್ಕೆ ಪರಿಹಾರ ನೀಡಬೇಕು ಎನ್ನುವ ಒತ್ತಾಯ ಹೆಚ್ಚಾಗಿದೆ.

ಗುಂಡಿ ಮುಚ್ಚದಿದ್ದಲ್ಲಿ ಪ್ರತಿಭಟನೆ

ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚದಿದ್ದಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಅನೇಕ ಗ್ರಾಮಸ್ಥರು ಈಗಾಗಲೇ ಹೋರಾಟಕ್ಕೆ ಸಿದ್ಧತೆ ನಡೆಸಿಕೊಂಡಿದ್ದಾರೆ. ತಕ್ಷಣ ತಾಲೂಕು ಆಡಳಿತ, ಶಾಸಕರು ಈ ಬಗ್ಗೆ ಗಮನಿಸಬೇಕಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಕ್ರೀಡಾ ಸಾಧಕರು

ಜಿಲ್ಲಾ ಮಟ್ಟಕ್ಕೆ ಹೊಸೂರು ಗುಡ್ಡೇಕೇರಿ, ವಾಗ್ದೇವಿ ಆಂಗ್ಲಮಾಧ್ಯಮ ಶಾಲಾ ಮಕ್ಕಳು
– ಎಲ್ಲಾ ಸಾಧಕ ಮಕ್ಕಳಿಗೂ ಶುಭಾಶಯಗಳು

ಶಿರಾಳಕೊಪ್ಪದಲ್ಲಿ ನಡೆಯುವ ಶಿವಮೊಗ್ಗ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಪರವಾಗಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಬಾಲಕ- ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ. 10 ವರ್ಷಗಳ ನಂತರ ಖೋ ಖೋ ಬಾಲಕ ಬಾಲಕಿಯರು ಭಾಗವಹಿಸುತ್ತಿರುವ, ಅತ್ತ್ಯುತ್ತಮ ಕ್ರೀಡಾ ತರಬೇತಿ ನೀಡಿದ ತೀರ್ಥಹಳ್ಳಿ ತಾಲೂಕಿನ ಹೆಮ್ಮೆಯ ದೈಹಿಕ ಶಿಕ್ಷಕರಾದ ಬೀರಪ್ಪ ಇಟಗಿ, ಕೋಚಿಂಗ್ ಕ್ಯಾಂಪ್ ನ ಜವಾಬ್ದಾರಿ ಹೊತ್ತ ವೀರೇಶ್, ಎಲ್ಲಾ ಶಿಕ್ಷಕರಿಗೂ, ವಿಶೇಷವಾಗಿ ಖೋ ಖೋ ತರಬೇತಿ ನೀಡಿದ ರಾಜ್ಯ ಕಂಡ ಶ್ರೇಷ್ಠ ತರಬೇತಿದಾರ, ಪ್ರೀತಿ ಶರತ್, ಮಂಜು ಕುರುವಳ್ಳಿ, ಬೆನ್ನಿ ಸರ್ ಅಭಿ ರಂಜದಕಟ್ಟೆ, ಹಾಗೂ ಎಲ್ಲಾ ತರಬೇತಿದಾರರಿಗೂ ಪ್ರೋತ್ಸಾಹ ನೀಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಎಂ ಜಿ ಹಾಗೂ ಎಲ್ಲಾ ಸದಸ್ಯರಿಗೂ, ಜನಪ್ರತಿನಿಧಿಗಳಿಗೂ, ಪೋಷಕರಿಗೂ, ಗ್ರಾಮಸ್ಥರಿಗೂ, ಹಿರಿಯ ವಿದ್ಯಾರ್ಥಿಗಳಿಗೂ, ತನು ಮನ ಧನ ಸಹಕಾರ ನೀಡಿದ ಎಲ್ಲರಿಗೂ ಶಾಲೆಯ ಪರವಾಗಿ ಮುಖ್ಯ ಶಿಕ್ಷಕ ಮಂಜುಬಾಬು ಪೂಜಾರ್ ಅಭಿನಂದನೆ ಸಲ್ಲಿಸಿದ್ದಾರೆ.

ವಾಗ್ದೇವಿ ಆಂಗ್ಲಮಾಧ್ಯಮ ಶಾಲಾ ಮಕ್ಕಳ ಸಾಧನೆ

ಶಿವಮೊಗ್ಗ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು 2023-24ನೇ ಸಾಲಿನ 14 ವರ್ಷ ವಯೊಮಿತಿಯೊಳಗಿನ ಬಾಲಕ-ಬಾಲಕಿಯರ ತಾಲ್ಲೂಕು ಮಟ್ಟದ ಕ್ರೀಡಾಕೂಟವು ಶಾಲಾಶಿಕ್ಷಣ ಇಲಾಖೆ ಹಾಗೂ ವಾಗ್ದೇವಿ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಡಾ.ಯು.ಆರ್. ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ 7ನೆಯ ತರಗತಿಯ ವಿದ್ಯಾರ್ಥಿಗಳಾದ ಮಿಥಾಲಿ ( ಗುಂಡು ಎಸೆತ -ಪ್ರಥಮ, ತಟ್ಟೆಎಸೆತ- ದ್ವಿತೀಯ) , ಶ್ರುತಿಕ್ ( 200 ಮೀ ಓಟ- ದ್ವಿತೀಯ, ತಟ್ಟೆ ಎಸೆತ – ದ್ವಿತೀಯ), ಅಫ಼ನಾನ್ ( ಗುಂಡು ಎಸೆತ – ದ್ವಿತೀಯ) ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ 10ನೆಯ ತರಗತಿಯ ವಿದ್ಯಾರ್ಥಿ ಸುಜನ್ ಎ.ಜಿ ಗೌಡ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ನೆಹರು ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾಮಟ್ಟದ
ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಶಾಲೆಯ ಅಧ್ಯಕ್ಷರು ಸದಸ್ಯರು ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಕ್ರೀಡಾಕೂಟಕ್ಕೆ ಶುಭಹಾರೈಸಿದ್ದಾರೆ.

Categories
ತೀರ್ಥಹಳ್ಳಿ

ಜ್ವರ,ಕೆಮ್ಮು,ನೆಗಡಿಯಿಂದ ಆಸ್ಪತ್ರೆಗಳಲ್ಲಿ ಜನವೋ ಜನ!

ಜ್ವರ,ಕೆಮ್ಮು,ನೆಗಡಿಯಿಂದ ಆಸ್ಪತ್ರೆಗಳಲ್ಲಿ ಜನವೋ ಜನ!
– ಮಲೆನಾಡಲ್ಲಿ ರೋಗಗಳು ಎಂಟ್ರಿ: ಜನರ ಪರದಾಟ
– ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಜನರ ಕ್ಯೂ

NAMMUR EXPRESS NEWS
ತೀರ್ಥಹಳ್ಳಿ/ಶೃಂಗೇರಿ: ಆಸ್ಪತ್ರೆಗಳಲ್ಲಿ ಕಳೆದ ಒಂದೆರಡು ತಿಂಗಳಿನಲ್ಲಿ ಹವಾಮಾನ ವೈಪರಿತ್ಯ ಮಳೆಯ ಏರುಪೇರು ಇತರೆ ಹವಾಮಾನದ ಕಾರಣದಿಂದಾಗಿ ಅನಾರೋಗ್ಯ ಹೆಚ್ಚಳವಾಗಿದೆ. ಪ್ರತಿ ಮನೆಯಲ್ಲೂ ಜ್ವರ, ಕೆಮ್ಮು,ನೆಗಡಿ ಶೀತ ದಂತಹ ಕಾಯಿಲೆಗಳು ಹೆಚ್ಚಾಗಿದೆ. ಇನ್ನು ಹಕ್ಕಿ ಜ್ವರ, ಹಂದಿ ಜ್ವರ ಸೇರಿದಂತೆ ಇನ್ನು ಅನೇಕ ವೈರಸ್ ಜ್ವರ ಕೂಡ ಹೆಚ್ಚಾಗಿದೆ. ಈ ನಡುವೆ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಇಂದಲೇ ಜನರ ಕ್ಯೂ ಇದ್ದು, ಅದರಲ್ಲೂ ರಕ್ತಕ್ಕಾಗಿ ಜನ ಕ್ಯೂ ನಿಂತಿದ್ದಾರೆ. ಹೀಗಾಗಿ ಮಲೆನಾಡಿನಲ್ಲಿ ವಾತಾವರಣದ ಸಮಸ್ಯೆಯಿಂದಾಗಿ ಪ್ರತಿ ಮನೆಯಲ್ಲೂ ಅನಾರೋಗ್ಯ ಹೆಚ್ಚಳವಾಗಿದೆ. ಹೀಗಾಗಿ ಜನತೆ ಎಚ್ಚರ ವಹಿಸಬೇಕಿದೆ.

ಮಕ್ಕಳಿಗೂ ಡೇಂಜರ್ ಡೇಂಜರ್..!

ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿಯ ಕಂಡು ಬರುತ್ತದೆ. ಹವಾಮಾನ ವೈಪರಿತ್ಯದಿಂದಾಗಿ ಜ್ವರ ಹಾಗೂ ಬಿಸಿಲಿನಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಅವಧಿಯು ವೈರಾಣು ಹರಡುವಿಕೆಗೆ ಸಹಕಾರಿಯಾಗಿರುತ್ತದೆ. ಆದ್ದರಿಂದ, ಸೋಂಕು ಹರಡುವಿಕೆ ತಡೆಗೆ ಕ್ರಮ ವಹಿಸಬೇಕು. ಹವಾಮಾನ ವೈಪರಿತ್ಯದಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುರಿಂದ ಬಹುಬೇಗ ಕಾಯಿಲೆಗೆ ತುತ್ತಾಗುತ್ತಾರೆ.

Categories
ಕರಾವಳಿ ಬೆಂಗಳೂರು ರಾಜ್ಯ

ರಾಜಧಾನಿಯಲ್ಲೂ ಕಂಬಳದ ಕೋಣಗಳ ಓಟ!

ರಾಜಧಾನಿಯಲ್ಲೂ ಕಂಬಳದ ಕೋಣಗಳ ಓಟ!
– ಕರಾವಳಿಯ ಸಂಸ್ಕೃತಿಯ ಅನಾವರಣಕ್ಕೆ ಸಿದ್ಧತೆ
– ಮೊದಲ ಬಾರಿಗೆ ನ.25,26 ರಂದು ಕಂಬಳ
– 5 ರಿಂದ 6 ಕೋಟಿ ವೆಚ್ಚದಲ್ಲಿ ಕಂಬಳ ಉತ್ಸವ
– ಟ್ರಕ್ ಮೂಲಕ ಕೋಣಗಳು ಮಂಗಳೂರಿನಿಂದ ಬೆಂಗಳೂರಿಗೆ

NAMMUR EXPRESS NEWS
ಮಂಗಳೂರು: ಕರಾವಳಿಯ ಸಂಸ್ಕೃತಿಯ ಅನಾವರಣಕ್ಕೆ ರಾಜಧಾನಿ ಬೆಂಗಳೂರಲ್ಲಿ ಸಿದ್ಧತೆ ಜೋರಾಗಿದೆ. ಈ ವರ್ಷ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಬಳದ ಕೋಣಗಳ ಓಟ ಬೆಂಗಳೂರಲ್ಲಿ ನಡೆಯಲಿದೆ.
ಹೌದು. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮೊದಲ ಕಂಬಳ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ರಾಜ್ಯರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ‘ಕಂಬಳ’ದ ಅನಾವರಣವಾಗಲಿದ್ದು ಸುಮಾರು 100 ರಿಂದ 130 ಕೋಣಗಳು ಮಂಗಳೂರಿನಿಂದ ಮೆರವಣಿಗೆಯಲ್ಲಿ ಸಾಗಲಿವೆ.
ಶನಿವಾರದಂದು ಕಂಬಳದ ಕೋಣಗಳ ಮಾಲಕರೊಂದಿಗೆ ಪ್ರಾಥಮಿಕ ಸಭೆ ನಡೆಸಿದ ಬಳಿಕ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉಡುಪಿ ಮತ್ತು ದ.ಕ ಜಿಲ್ಲೆಗಳ ಜಿಲ್ಲಾ ಕಂಬಳ ಸಮಿತಿಯು ಬೆಂಗಳೂರು ಕಂಬಳ ಸಮಿತಿಯ ಸಹಯೋಗದೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಸಲಿದೆ ಎಂದು ಹೇಳಿದ್ದಾರೆ.

ಕೋಣಗಳು ನ.23 ರಂದು ಟ್ರಕ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲಿವೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು ಕೋಣಗಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ನಾಲ್ಕು ಗಂಟೆಗೆ ವಿರಾಮ, ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಪಶು ಸಂಜೀವಿನಿ ಆಂಬ್ಯುಲೆನ್ಸ್ ಮತ್ತು ನುರಿತ ಪಶು ವೈದ್ಯರ ವ್ಯವಸ್ಥೆ ಮಾಡಲಾಗುವುದು. ಹಾಸನದಲ್ಲಿ ನಿಲುಗಡೆ ನೀಡಲಾಗುವುದು. ಕಂಬಳವನ್ನು ಸುಪ್ರೀಂ ಕೋರ್ಟ್ ನ ನಿರ್ದೇಶನಗಳಿಗೆ ಅನುಗುಣವಾಗಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ತುಳುನಾಡು ಸಂಸ್ಕೃತಿ ಅನಾವರಣ

145 ಮೀ ಉದ್ದದ ಕಂಬಳ ಕೆರೆಯನ್ನು ನಿರ್ಮಾಣ ಮಾಡಲಾಗುವುದು. ಇಡೀ ಕಂಬಳೋತ್ಸವದ ವೆಚ್ಚ ಸುಮಾರು 5 ರಿಂದ 6 ಕೋಟಿ ಆಗಲಿದೆ. ಪ್ರಥಮ ಸ್ಥಾನಿ ಕೋಣಗಳಿಗೆ 2 ಸವರನ್ ಚಿನ್ನದ ನಾಣ್ಯ, ಎರಡನೇ ಸ್ಥಾನ ಪಡೆದ ಕೋಣಗಳಿಗೆ 1 ಸವರನ್ ಚಿನ್ನದ ನಾಣ್ಯ ಹಾಗೂ ಭಾಗವಹಿಸಿದ ಎಲ್ಲ ಕೋಣಗಳಿಗೆ ಪದಕಗಳನ್ನು ನೀಡಲಾಗುವುದು. ತುಳುನಾಡಿನ ಸಂಸ್ಕೃತಿಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ ವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ ನಟರು ಮುಂತಾದವರು ಭಾಗವಹಿಸಲಿದ್ದಾರೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಲೆ ಮತ್ತು ಆಹಾರೋತ್ಪನ್ನ ಮಳಿಗೆಗಳನ್ನು ಪ್ರದರ್ಶಿಸಲಾಗುತ್ತದೆ