Categories
ಚಿಕ್ಕಮಗಳೂರು

ಮೂಡಿಗೆರೆಯಲ್ಲಿ 3ನೇ ಬಲಿ ಪಡೆದ ಕಾಡಾನೆ!

ಮೂಡಿಗೆರೆಯಲ್ಲಿ 3ನೇ ಬಲಿ ಪಡೆದ ಕಾಡಾನೆ!
– ಆನೆ ಹಿಡಿಯಲು ಹೋದವನನ್ನೇ ತುಳಿದು ಸಾಯಿಸಿತು
– ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದ ಜನ
– ಶಿವಮೊಗ್ಗ ಜಿಲ್ಲೆಯಲ್ಲೂ ಕಾಡಾನೆ ಕಾಟ!

NAMMUR EXPRESS NEWS
ಮೂಡಿಗೆರೆ: ಸರಿ ಸುಮಾರು ಒಂದು ತಿಂಗಳ ಅಂತರದಲ್ಲಿ ಕಾಡಾನೆ ತುಳಿತಕ್ಕೆ 3 ಮಂದಿ ಬಲಿಯಾದ ಘಟನೆ ಘಟನೆ ಕಾಫಿ ನಾಡು ಚಿಕ್ಕಮಗಳೂರಲ್ಲಿ ನಡೆದಿದೆ. ಆನೆ ತುಳಿತಕ್ಕೆ ಆನೆ ನಿಗ್ರಹ ಪಡೆಯ ಸದಸ್ಯನೇ ಬಲಿಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದ ಕಾರ್ತಿಕ್ ಗೌಡ (26) ಆನೆ ತುಳಿತಕ್ಕೆ ಮೃತ ದುರ್ದೈವಿ. ಕಾರ್ತಿಕ್ ಗೌಡ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿದ್ದು, ಸರ್ಕಾರ ರಚಿತ ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದ.

ಆನೆ ದಾಳಿ ಮಾಡಿದ್ದು ಹೇಗೆ?

ಬೈರಾಪುರದಲ್ಲಿ ಆನೆ ಓಡಿಸುವಾಗ ಆನೆ ದಾಳಿಗೆ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 20 ದಿನದ ಹಿಂದೆ ಆಲ್ದೂರಿನಲ್ಲಿ ವೀಣಾ ಎಂಬ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಳು, ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ ಎಂಬುವರು ಸಾವನ್ನಪ್ಪಿದ್ದರು. ಇದೀಗ ಆನೆ ನಿಗ್ರಹ ಪಡೆಯ ಸದಸ್ಯನೇ ಆನೆ ದಾಳಿಗೆ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳಿಯರ ಆಕ್ರೋಶ ಹೊರಹಾಕಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲೂ ಆನೆ ಕಾಟ!

ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಗಡಿ ಭಾಗದ ಹಣಗೆರೆಕಟ್ಟೆ ಭಾಗದಲ್ಲಿ ಆನೆಗಳ ಹಾವಳಿಯಿಂದ ರೈತರ ಬೆಳೆ ಹಾನಿಯಾಗುತ್ತಿದ್ದು, ಆನೆಗಳನ್ನ ಓಡಿಸಲು ಕಾರ್ಯಾಚರಣೆ ಆರಂಭವಾಗಿದೆ. ಆದರೆ ಇಲ್ಲಿಗೆ ಇನ್ನು ತಂಡ ಬಂದಿಲ್ಲ.
ಇತ್ತ ಭದ್ರಾವತಿ ತಾಲೂಕಿನ ಉಂಬ್ಳೆಬೈಲಿನಲ್ಲಿ ಆನೆಗಳ ಹಾವಳಿ ಕೂಡ ಹೆಚ್ಚಾಗಿದೆ. ತಾಲೂಕಿನ ಮಂಜರಿಕೊಪ್ಪ, ಮಲೆಶಂಕರ, ಸಂಪಿಗೆಹಳ್ಳ, ತಮ್ಮಡಿಹಳ್ಳಿ,ಕೂಡಿ, ಎರೆಬೀಸು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಉಂಟಾಗಿದ್ದು, ಇತ್ತೀಚೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಸಹ ಭೇಟಿ ನೀಡಿ ಅರಣ್ಯ ಉಪಸಂರಕ್ಷಣಾಧಿಕಾರಿಗಳಿಗೆ ಸ್ಥಳದಿಂದಲೇ ಕರೆ ಮಾಡಿ ಕ್ರಮಕ್ಜೆ ಸೂಚಿಸಿದ್ದರು. ಈ ಬೆನ್ನಲ್ಲೇ ಸಕ್ರೆಬೈಲಿನ ಆನೆಬಿಡಾರದಿಂದ ಆನೆ, ಮಾವುತ ಮತ್ತು‌ಕಾವಾಡಿಗಳನ್ನ ಕಳುಹಿಸಲಾಗಿದೆ.

Categories
ಬೆಂಗಳೂರು ರಾಜ್ಯ

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ನಿಯಮ

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ನಿಯಮ
– ಪ್ರಾಥಮಿಕ, ಪ್ರೌಢ ಶಾಲೆ ಪ್ರವಾಸಕ್ಕೆ ಷರತ್ತುಗಳೇನು?
– ಡಿಸೆಂಬರ್ ಒಳಗೆ ಪ್ರವಾಸ ಮುಗಿಸಬೇಕು

NAMMUR EXPRESS NEWS
ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಬಗ್ಗೆ ಸ್ಪಷ್ಟಿಕರಣವನ್ನು ನೀಡಿದೆ. ಹೊರ ರಾಜ್ಯಗಳಿಗೆ, ಭಾರತೀಯ ರೈಲ್ವೆಯಲ್ಲಿ ಸಹ ಪ್ರವಾಸ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಕಾವೇರಿ, ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಕುರಿತು ಸ್ಪಷ್ಟಿಕರಣ ಎಂಬ ವಿಷಯವನ್ನು ಒಳಗೊಂಡಿದೆ.

ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಸುತ್ತೋಲೆ ಹೊರಡಿಸಲಾಗಿದೆ. ಕೆಲವು ಶಾಲೆಯವರು ಹೊರ ರಾಜ್ಯಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಮನವಿ ಸಲ್ಲಿಸಿರುತ್ತಾರೆ. ಆದರೆ ದಿನಾಂಕ 14/11/2022ರ ಸುತ್ತೋಲೆಯಲ್ಲಿ ಹೊರ ರಾಜ್ಯಕ್ಕೆ ಪವಾಸ ಕೈಗೊಳ್ಳಲು ಅನುಮತಿ ನೀಡುವ ಕುರಿತು ಯಾವುದೇ ನಿರ್ದೇಶನವಿರುವುದಿಲ್ಲ, ಆದ್ದರಿಂದ ಈ ಬಗ್ಗೆ ಅನುಮತಿ ನೀಡುವ ಕುರಿತು ಮಾರ್ಗದರ್ಶನ ಕೋರಿರುತ್ತಾರೆ ಎಂದು ಸುತ್ತೋಲೆ ಹೇಳಿದೆ.

ಖಾಸಗಿ ಶಾಲೆ ನವೀಕರಣ, ಪ್ರತಿ ವರ್ಷ ದಾಖಲೆ ಕೇಳುವುದು ಸರಿಯಲ್ಲ ಅದರಂತೆ ಪರಿಶೀಲಿಸಲಾಗಿ, ಪ್ರತಿ ಶೈಕ್ಷಣಿಕ ವರ್ಷ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಷರತ್ತುಗಳ ಅನ್ವಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನುಮತಿ ನೀಡಲು ಸೂಚಿಸಿದೆ ಹಾಗೂ ಸದರಿ ಶೈಕ್ಷಣಿಕ ಪುವಾಸವನ್ನು ಭಾರತೀಯ ರೈಲ್ವೇಯ ರೈಲುಗಳಲ್ಲಿಯೂ ಹಮ್ಮಿಕೊಳ್ಳಬಹುದು ಎಂದು ತಿಳಿಸಿದೆ ಎಂದು ತಿಳಿಸಿದೆ.
ಶೈಕ್ಷಣಿಕ ಪ್ರವಾಸ, ಷರತ್ತುಗಳು; ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೇ ಅದರಲ್ಲಿಯೂ ಷರತ್ತುಗಳನ್ನು ಉಲ್ಲೇಖಿಸಲಾಗಿದೆ.

ಈ ಹಿಂದಿನ ಸುತ್ತೋಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ದೇಶಾದ್ಯಂತ ಗಂಭೀರ ಪರಿಸ್ಥಿತಿ ಉಂಟಾಗಿದ್ದ ಪ್ರಯುಕ್ತ ಯಾವುದೇ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಬಾರದೆಂದು ಸೂಚಿಸಿಲಾಗಿರುತ್ತದೆ. ಆದರೆ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಮಾರ್ಗದರ್ಶನ ಮತ್ತು ಅನುಮತಿ ನೀಡಲು ಕೋರಿರುತ್ತಾರೆ. ಅದರಂತೆ ಷರತ್ತುಗಳ ಅನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮನವಿಗಳನ್ನು ಪರಿಶೀಲಿಸಿ ಅನುಮತಿ ನೀಡಲು ಸೂಚಿಸಲಾಗಿದೆ.

– ಪ್ರತಿ ವರ್ಷ ಡಿಸೆಂಬರ್ ಮಾಹೆಯ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್ ಮಾಹೆಯ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೇ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡುವುದು.
– ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವುದು.
– ಪ್ರವಾಸ ಶೈಕ್ಷಣಿಕ ಪ್ರವಾಸವಾಗಿರಲು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ಸ್ಥಳಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವುದು.
– ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಿರಬೇಕು.
– ಶೈಕ್ಷಣಿಕ ಪ್ರವಾಸವನ್ನು ಶಾಲಾ ದಿನಗಳಂದು ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದರೆ ಶನಿವಾರ ಪೂರ್ಣದಿನ/ ಭಾನುವಾರ ಶಾಲೆ ನಡೆಸಿ ಕೊರತೆ ಬೀಳುವ ಪಠ್ಯ ಚಟುವಟಿಕೆಗಳನ್ನು ಸರಿದೂಗಿಸುವುದು.
– ಇಲಾಖೆಯಿಂದ ಪ್ರವಾಸಕ್ಕೆ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ.
– ಪ್ರವಾಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲೆಯ ಮುಖ್ಯಸ್ಥರೇ ನೇರ ಹೂಣೆಗಾರರಾಗಿರುತ್ತಾರೆ. ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ.
– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು.
– ಯಾವುದೇ ಕಾರಣಕ್ಕೂ ಅನಧೀಕೃತವಾಗಿ ಖಾಸಗಿ ಹಾಗೂ ಮಿನಿ ಬಸ್‌ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.
– ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವುದು ಹಾಗೂ ಕೋವಿಡ್ 19ಗೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಬೇಕು.
– ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸಕ್ಕೆ ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳತಕ್ಕದ್ದು.

Categories
ರಾಷ್ಟ್ರೀಯ ವಾರ್ತೆ

ಪಠ್ಯದಲ್ಲಿ ರಾಮಾಯಣ, ಮಹಾ ಭಾರತ?!

ಪಠ್ಯದಲ್ಲಿ ರಾಮಾಯಣ, ಮಹಾ ಭಾರತ?!
– ಶಾಲಾ ಪಠ್ಯಪುಸ್ತಕಗಳಲ್ಲಿ ಆಮೂಲಾಗ್ರ ಬದಲಾವಣೆ
– ಪಠ್ಯ ಪರಿಷ್ಕರಣಾ ಸಮಿತಿ ಚಿಂತನೆ

NAMMUR EXPRESS NEWS
ನವದೆಹಲಿ: ಪಠ್ಯಪುಸ್ತಕಗಳಲ್ಲಿ ಆಮೂಲಾಗ್ರ ಬದಲಾವಣೆ ತರಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ರಚಿಸಿರುವ ಪಠ್ಯ ಪರಿಷ್ಕರಣಾ ಸಮಿತಿ ಚಿಂತನೆ ನಡೆಸಿದೆ. ಮಹಾಭಾರತ, ರಾಮಾಯಣವನ್ನು ಶಾಲೆಗಳ ಇತಿಹಾಸ ಪಠ್ಯದಲ್ಲಿ ಅಳವಡಿಸುವಂತೆ ಶಿಫಾರಸು ಮಾಡಿದೆ. ತರಗತಿಯ ಗೋಡೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸಂವಿಧಾನದ ಪ್ರಸ್ತಾವನೆ ಇರುವ ಫಲಕ ಹಾಕಬೇಕು ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಪಠ್ಯಗಳಲ್ಲಿ ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಪಠ್ಯ ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿತ್ತು. ಇದಾದ ನಂತರ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು ಮಾಡಿದ್ದು, ಎನ್.ಸಿ.ಇ.ಆ‌ರ್.ಟಿ. ಇನ್ನು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಶೀಘ್ರದಲ್ಲಿ ಈ ಬಗ್ಗೆ ಅಂತಿಮವಾಗಲಿದೆ.

Categories
ತೀರ್ಥಹಳ್ಳಿ

ರೈತರಿಗೆ ಮೆಸ್ಕಾಂ ಕಿರಿಕ್: ನ.27ಕ್ಕೆ ರೈತ ಹೋರಾಟ

ರೈತರಿಗೆ ಮೆಸ್ಕಾಂ ಕಿರಿಕ್: ನ.27ಕ್ಕೆ ರೈತ ಹೋರಾಟ
– ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆಗೆ ಸಜ್ಜು
– ಸರ್ಕಾರ ರೈತರ ಸುಲಿಗೆ ಮಾಡುತ್ತಿದೆ: ಆರಗ ಆರೋಪ

NAMMUR EXPRESS NEWS
ತೀರ್ಥಹಳ್ಳಿ: ಅಡಿಕೆ ಸುಲಿಯುವ ಯಂತ್ರಗಳನ್ನು ಅಡಿಕೆ ಸುಲಿಯಲು ಕಾರ್ಮಿಕರ ಕೊರತೆ ಹಿನ್ನೆಲೆ ರೈತರು ಬಳಸುತ್ತಿದ್ದಾರೆ. ಆದರೆ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ವರ್ಷ ವಿಚಿತ್ರವಾದ ಕಿರುಕುಳವನ್ನು ನೀಡುತ್ತಿದ್ದಾರೆ. ಇದರ ವಿರುದ್ಧ ತೀರ್ಥಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ಬಿಜೆಪಿ ರೈತ ಮೋರ್ಚಾದ ವತಿಯಿಂದ ಪ್ರತಿಭಟನ ಸಭೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ತೀರ್ಥಹಳ್ಳಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಮಲೆನಾಡಿನ ಪ್ರಮುಖವಾದ ವಾಣಿಜ್ಯ ಬೆಳೆ ಅಡಿಕೆ, ಸರ್ಕಾರಕ್ಕೆ ಅಡಿಕೆಯಿಂದ ತೆರಿಗೆಯ ರೂಪದಲ್ಲಿ ನೂರಾರು ಕೋಟಿ ರೂಗಳ ಹಣ ಸಂದಾಯವಾಗುತ್ತಿದೆ. ಈಗ ಅಡಿಕೆ ಸುಲಿಯಲು ಕಾರ್ಮಿಕರ ಸಮಸ್ಯೆ ಇದೆ, ಒಂದು ಎಕರೆ ಅರ್ಧ ಎಕರೆ ಎರಡು ಎಕರೆ ಭಾಗ ಇಟ್ಟುಕೊಂಡಿರುವಂತಹ ರೈತರು ಇದ್ದಾರೆ. ರೈತರು ಹಲವು ವರ್ಷಗಳಿಂದ ಅಡಿಕೆ ಸುಲಿಯುವ ಮಿಷನ್ ಗೆ ಹಾಕಿ ಅಡಿಕೆ ಕೊಯ್ಲು ಮಾಡುತ್ತಿದ್ದಾರೆ. ಈ ಮೆಸ್ಕಾಂ ಈ ವರ್ಷ ಅಡಿಕೆ ಬೆಳೆಗಾರರಿಗೆ ಹಿಂಸೆ ಕೊಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮೆಸ್ಕಾಂ ಕಚೇರಿ ಮುತ್ತಿಗೆ ಎಚ್ಚರಿಕೆ

ಫ್ರೀ ವಿದ್ಯುತ್ ಕೊಡುತ್ತೇನೆ ಎಂದು ಹೇಳಿ ಈಗ ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣವಿಲ್ಲದೆ ರೈತರನ್ನು ಸುಲಿಗೆ ಮಾಡಲು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ವಿದ್ಯುತ್ ಕಂಪನಿಗಳಿಗೆ ನಿರ್ದೇಶನ ಕೊಟ್ಟು, ಯಾರ ಮನೆ ಮೀಟರ್ ಆಧಾರದ ಮೇಲೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅವರಿಗೆ ಯಾವುದೇ ರೀತಿ ಕಿರುಕುಳ ಕೊಡಬೇಕಾಗಿಲ್ಲ. ಹೊಸ ಕನೆಕ್ಷನ್ ತೆಗೆದುಕೊಂಡವರಿಗೆ ನಿರ್ದೇಶನ ಕೊಡಬೇಕು. ಆದ್ದರಿಂದ ಸೋಮವಾರ ವಿಶೇಷವಾಗಿ ಪ್ರತಿಭಟನೆ ಮಾಡಲಿದ್ದೇವೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಈ ಪ್ರತಿಭಟನೆ ತೀವ್ರವಾಗಿ ಮಾಡಿ ಮೆಸ್ಕಾಂ ಆಫೀಸ್ ಗೆ ಮುತ್ತಿಗೆ ಹಾಕುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ, ಶಿವಮೊಗ್ಗ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷರಾದ ರಾಮಚಂದ್ರ, ಬಿಜೆಪಿ ನಾಯಕ ರಾದ ಬೇಗುವಳ್ಳಿ ಸತೀಶ್, ಹೆದ್ದೂರು ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರೈತರ ದನಿಯಾಗಿ ನಮ್ಮೂರ್ ಎಕ್ಸ್ ಪ್ರೆಸ್

ನಮ್ಮೂರ್ ಎಕ್ಸ್ ಪ್ರೆಸ್ ಅಡಿಕೆ ಬೆಳೆಗಾರರ ಈ ಸಮಸ್ಯೆ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟ ಮಾಡಿತ್ತು.

Categories
ಕರಾವಳಿ

ಕರಾವಳಿಯ ವಿನಯ್ ಅವರಿಗೆ ಎಸ್.ಬಿ. ಐ ಎಂಡಿ ಹುದ್ದೆ!

ಕರಾವಳಿಯ ವಿನಯ್ ಅವರಿಗೆ ಎಸ್.ಬಿ. ಐ ಎಂಡಿ ಹುದ್ದೆ!
– ಉಡುಪಿ ಕಿನ್ನಿಮುಲ್ಕಿ ಮೂಲದ ಸಾಧಕ
– ಯುವ ಜನರ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಆಸೆ!

NAMMUR EXPRESS NEWS
ಕರಾವಳಿ ದೇಶಕ್ಕೆ ಎಲ್ಲಾ ರಂಗದಲ್ಲೂ ಸೇವೆ ಸಲ್ಲಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರಾವಳಿ ಕಿಂಗ್ ಎಂದರೆ ತಪ್ಪಾಗಲಾರದು. ಇದೀಗ ರಾಜ್ಯಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಉಡುಪಿ ಮೂಲದ ವಿನಯ್ ಎಂ. ತೋನ್ಸೆ, ದೇಶದ ಬೃಹತ್ ಬ್ಯಾಂಕ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ (ಎಸ್‌ಬಿಐ) ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹುದ್ದೆಗೇರಿದ್ದಾರೆ. ಉಡುಪಿ ಜಿಲ್ಲೆಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹೋನ್ನತ ಹುದ್ದೆಗೇರಿದ ಮೊದಲಿಗರು ಅವರಾಗಿದ್ದಾರೆ. ಈ ಮೂಲಕ ರಾಜ್ಯದ ಹೆಸರನ್ನು ಅವರು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ್ದಾರೆ.

ಎಸ್. ಬಿ. ಐ ಕಾರ್ಯನಿರತ ಚೇರ್ಮನ್ ಮತ್ತು ಸಿಇಒ ದಿನೇಶ್ ಕುಮಾರ್ ಖರಾ ಹೊರತಾಗಿ, ಬ್ಯಾಂಕ್‌ನ ಆಡಳಿತ ಹಾಗೂ ವ್ಯವಹಾರವನ್ನು ಸುಸೂತ್ರವಾಗಿ ನಡೆಸಲು 4 ಎಂಡಿಗಳನ್ನು ಎಸ್‌ಬಿಐ ಹೊಂದಿದೆ. ಬ್ಯಾಂಕ್‌ನ ಎಂಡಿಯಾಗಿದ್ದ ಸ್ವಾಮಿನಾಥನ್ ಜಾನಕಿರಾಮನ್ ರಿಂದ ಇತ್ತೀಚೆಗೆ ತೆರವಾದ ಸ್ಥಾನಕ್ಕೆ ಎಸ್‌ಬಿಐ ಡೆಪ್ಯುಟಿ ಎಂಡಿಯಾಗಿದ್ದ ವಿನಯ್ ಎಂ ತೋನ್ಸೆ ಅವರನ್ನು ಆಯ್ಕೆ ಸಮಿತಿ ಶಿಫಾರಸಿನಂತೆ ಕೇಂದ್ರ ಸರಕಾರ ನೇಮಿಸಿದೆ.

ಅಜ್ಜ, ತಂದೆ ಎಲ್ಲರೂ ಉಡುಪಿಯವರು!

ವಿನಯ್ ಎಂ ತೋನ್ಸೆ ಅವರ ಅಜ್ಜ ತೋನ್ಸೆ ನಾರಾಯಣ ರಾವ್ ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದವರು. ಕಿನ್ನಿಮುಲ್ಕಿ ನಿವಾಸಿ, ಅಪ್ಪ ಮುರಳೀಧರ ರಾವ್ ಕಂದಾಯ ಇಲಾಖೆಯಲ್ಲಿದ್ದು ಸಣ್ಣ ಉಳಿತಾಯ ಮತ್ತು ಲಾಟರಿ ಇಲಾಖೆ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದರು, ತಾಯಿ ಕೃಷ್ಣಾಬಾಯಿ. ಬೆಂಗಳೂರಿನ ರಾಜಾಜಿನಗರ, ಇಂದಿರಾ ನಗರದಲ್ಲಿ ಪ್ರಾಥಮಿಕ/ಪ್ರೌಢ ಶಿಕ್ಷಣ, ಸೈಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಬಿಕಾಂ, ಸೆಂಟ್ರಲ್ ಕಾಲೇಜಿನಿಂದ ಎಂಕಾಂ ಪದವಿ, ತೋನ್ಸೆ ಸತೀಶ್ ರಾವ್ (ಕಸಿನ್) ಪ್ರೇರಣೆಯಿಂದ ಎಸ್‌ಬಿಐ ಪ್ರೊಬೆಷನರಿ ಅಧಿಕಾರಿಯಾಗಿ ಮೂರು ದಶಕಗಳಿಂದ ಕಾರ್ಯನಿರತ ರಾಗಿದ್ದಾರೆ.

ಕ್ರೀಡೆ, ಕನ್ನಡ ಸೇವೆಯಲ್ಲೂ ಮುಂದು!

ಡಾ. ರಾಜ್ ಕುಮಾರ್ ಬಗ್ಗೆ ವಿನಯ್ ಅವರಿಗೆ ಅಭಿಮಾನ. ಬಿಕಾಂ ಪದವಿ ಓದಿನ ಸಂದರ್ಭ ನಟ ಪ್ರಕಾಶ್ ರೈ ಸಹಪಾಠಿಯಾಗಿ, ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಸಂಘದಲ್ಲಿ ಸಕ್ರಿಯವಾಗಿದ್ದರು. ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಪ್ರಕಾಶ್‌ ಜತೆ ನಟಿಸಿದ್ದರು. ಕಾಲೇಜು ದಿನಗಳಲ್ಲಿ ಬಿಲ್ವಿದ್ಯೆ ಪ್ರವೀಣ ವಿನಯ್, ರಾಜ್ಯ ಮಿನಿ ಒಲಂಪಿಕ್ಸ್‌ನಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದರು, ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಯುವ ಜನತೆ ದೇಶದ ಅಸ್ತಿ ಎಂದ ವಿನಯ್

ಭಾರತೀಯ ಆರ್ಥಿಕತೆಗೆ ಅಮೃತ ಕಾಲದಲ್ಲಿ ಉಜ್ವಲ ಭವಿಷ್ಯವಿದೆ, ಪ್ರಗತಿ ಸಾಧನೆ ಸಾಧ್ಯವಿದೆ. ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಬ್ಯಾಂಕುಗಳ ನೆರವು ಅಗತ್ಯ. ಯಾವುದೇ ವೃತ್ತಿ ಕ್ಷೇತ್ರವೇ ಇರಲಿ…ಧೈರ್ಯ, ಆತ್ಮವಿಶ್ವಾಸದಿಂದ ದೇಶಕ್ಕೆ ಕೊಡುಗೆ ನೀಡಬೇಕು ಸರಕಾರದ ನೆರವು ಪಡೆದು ಉದ್ಯೋಗ ಸೃಷ್ಟಿಗೆ ಯುವಜನರಿಗೆ ಉತ್ತಮ ಅವಕಾಶವಿದೆ. ಪ್ರತಿಯೊಬ್ಬರಲ್ಲೂ ಇರುವ ಶಕ್ತಿ, ಸಾಮಥ್ರ್ಯದ ಸದ್ಭಳಕೆಯಾಗಬೇಕು, ಹಳ್ಳಿಗಳಲ್ಲೂ ಪ್ರಗತಿ ಸಾಧಿಸಬೇಕು. 2025ರ ಬಳಿಕ ಉನ್ನತ ಹುದ್ದೆಗಿಂತಲೂ ಯುವಜನರ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುವ ಗುರಿಯಿದೆ.

Categories
ಬೆಂಗಳೂರು

ಕಾರಲ್ಲಿ ಬಂದು ಎಳನೀರು ಕದೀತಾನೆ ಈ ಕಳ್ಳ!

ಕಾರಲ್ಲಿ ಬಂದು ಎಳನೀರು ಕದೀತಾನೆ ಈ ಕಳ್ಳ!
– ಆರೆರೇ.. ಈತನ ಕಳವು ಕೇಳಿದ್ರೆ ನಿಮಗೂ ನಗು ಬರುತ್ತೆ!
– ರಮ್ಮಿ ಸರ್ಕಲ್ ಆಡಿ ಹಣ ಕಳೆದುಕೊಂಡು ಈಗ ಕಳ್ಳತನ

NAMMUR EXPRESS NEWS
ಬೆಂಗಳೂರು: ಮನೆ ದರೋಡೆ ಮಾಡೋರನ್ನು ಕೇಳಿದ್ದೀರಿ, ಹಣ, ಚಿನ್ನಾಭರಣ, ವಾಹನ ಕಳವು ಮಾಡೋರ ಬಗ್ಗೆ ಓದಿದ್ದೀರಿ. ಆದರೆ, ಇಲ್ಲೊಬ್ಬ ಕಳ್ಳನಿದ್ದಾನೆ. ಅವನಿಗೆ ಹಣ ಬೇಡ, ಚಿನ್ನಾಭರಣ ಬೇಡ, ಅವನ ಕಣ್ಣಿರುವುದು ಎಳನೀರಿನ ಮೇಲೆ!!. ಫುಟ್‌ ಪಾತ್‌ಗಳ ಮೇಲೆ ಎಳನೀರು ಮಾರಾಟ ಮಾಡ್ತಾರಲ್ಲಾ. ಅವರು ರಾತ್ರಿ ಮನೆಗೆ ಹೋಗುವಾಗ ಉಳಿದ ಎಳನೀರನ್ನು ಚೆನ್ನಾಗಿ ಮೂಟೆ ಕಟ್ಟಿ ಇಟ್ಟು ಹೋಗ್ತಾರಲ್ಲ. ಅವುಗಳನ್ನು ಕದಿಯೋದೇ ಇವನ ಹವ್ಯಾಸ!. ಕಳೆದ ಮೂರು ತಿಂಗಳಿನಿಂದ ಎಳನೀರು ಕದಿಯುತ್ತಿದ್ದ ಇವನು ಇದೀಗ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯ ಹೆಸರು ಮೋಹನ್‌. ತಮಿಳುನಾಡು ಮೂಲದ ಮೋಹನ್ ಈಗ ಮಡಿವಾಳ ನಿವಾಸಿ. ಈತ ಕಾರಿನಲ್ಲಿ ಬಂದು ಎಳನೀರು ಕದ್ದುಕೊಂಡು ಹೋಗುವ ಕಳ್ಳನಿವನು. ಈತನ ಕೈಯಿಂದ ಅವನು ಲೇಟೆಸ್ಟ್‌ ಆಗಿ ಕದ್ದಿರುವ 90 ಎಳನೀರು, ಕಾರು ಮತ್ತು ಒಂದು ಬುಲೆಟನ್ನು ವಶಕ್ಕೆ ಪಡೆಯಲಾಗಿದೆ.

ಸಿಕ್ಕಿ ಬಿದ್ದಿದ್ದು ಹೇಗೆ..?

ಗಿರಿನಗರದ ಮಂಕುತಿಮ್ಮನ ಪಾರ್ಕ್‌ ಬಳಿ ಇರುವ ಫುಟ್‌ಪಾತ್‌ನಲ್ಲಿ ರಾಜಣ್ಣ ಎಂಬವರು ಎಳನೀರು ವ್ಯಾಪಾರ ಮಾಡುತ್ತಾರೆ. ಕೆಲವುದ ದಿನದ ಹಿಂದೆ ಅವರು ಸಂಜೆ ಹೊತ್ತಿಗೆ 1200 ಎಳನೀರು ಖರೀದಿ ಮಾಡಿದ್ದರು. ಅದರಲ್ಲಿ 50 ಎಳನೀರನ್ನು ಮಾರಾಟ ಮಾಡಿದ ಬಳಿಕ 1150 ಎಳನೀರುಗಳನ್ನು ಟಾರ್ಪಾಲ್‌ ಹಾಕಿ ಮುಚ್ಚಿಟ್ಟಿದ್ದರು. ಆದರೆ, ಮರುದಿನ ಬಂದು ನೋಡಿದಾಗ ಅಷ್ಟೂ ಎಳನೀರು ಕಳವಾಗಿತ್ತು. ರಾಜಣ್ಣ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆ ಭಾಗದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದಾಗ ಮಧ್ಯರಾತ್ರಿಯ ಬಳಿಕ ವ್ಯಕ್ತಿಯೊಬ್ಬ ವ್ಯಾಗನ್‌ ಆರ್‌ ಕಾರಿನಲ್ಲಿ ಬಂದು ಎಲ್ಲಾ ಎಳನೀರನ್ನು ಕದ್ದುಕೊಂಡು ಹೋಗುವುದು ಗೊತ್ತಾಗಿದೆ. ಕಾರಿನ ನಂಬರ್‌ ಆಧಾರದಲ್ಲಿ ಅದು ಮಡಿವಾಳ ನಿವಾಸಿ ಮೋಹನ್‌ಗೆ ಸೇರಿದ್ದು ಎನ್ನುವುದು ಸ್ಪಷ್ಟವಾಗಿ ಆತನನ್ನು ಬಂಧಿಸಲಾಗಿದೆ.

ಕಳ್ಳತನ ಮಾಡಿದ್ದು ಏಕೆ ಗೊತ್ತಾ..?

ಮೋಹನ್‌ ಒಬ್ಬ ಎಳನೀರು ವ್ಯಾಪಾರಿಯೇ. ನಗರದಲ್ಲೇ ಎಳನೀರು ಮಾರುತ್ತಿದ್ದ. ಆದರೆ, ಅದರ ನಡುವೆ ಅವನಿಗೆ ಒಂದು ದುರಾಭ್ಯಾಸ ಹುಟ್ಟಿಕೊಂಡಿತು. ಅದುವೇ ರಮ್ಮಿ ಸರ್ಕಲ್‌ ಎಂಬ ಆನ್‌ಲೈನ್‌ ಗೇಮ್‌. ಅವನು ರಮ್ಮಿ ಸರ್ಕಲ್‌ನಲ್ಲಿ ಹಣ ಕಳೆದುಕೊಂಡು ಮೂರು ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದ. ಇಷ್ಟೆಲ್ಲ ಸಾಲ ಮಾಡಿದ ಬಳಿಕ ಅದನ್ನು ಮರು ಪಾವತಿ ಮಾಡುವುದಕ್ಕೆ ಕೇವಲ ಎಳನೀರು ಮಾರಿದರೆ ಸಾಲದು ಎಂದು ಅಂದುಕೊಂಡು ಎಳನೀರು ಕದ್ದರೆ ಆಗಬಹುದು ಅಂತ ಪ್ಲ್ಯಾನ್‌ ಮಾಡಿದ. ಇದು ಸಿಕ್ಕಾಪಟ್ಟೆ ಕ್ಲಿಕ್‌ ಆಯಿತು. ಅವನು ಎಳನೀರು ಕದ್ದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಈಗ ಆತ ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Categories
ರಾಜ್ಯ

ಹಿಂದೂ ದೇಗುಲ ಕಟ್ಟಿಸಿದ ಮುಸ್ಲಿಂ ಯುವಕ!

ಹಿಂದೂ ದೇಗುಲ ಕಟ್ಟಿಸಿದ ಮುಸ್ಲಿಂ ಯುವಕ!
– ಕೊಪ್ಪಳದಲ್ಲಿ 25 ಲಕ್ಷ ವೆಚ್ಚದಲ್ಲಿ ಗಾಳೆಮ್ಮ ದೇವಸ್ಥಾನ ನಿರ್ಮಾಣ
– ಯುವಕನ ಸೌಹಾರ್ದತೆಗೆ ಎಲ್ಲೆಡೆ ಮೆಚ್ಚುಗೆ

NAMMUR EXPRESS NEWS
ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಲ್ಲಿ ಮುಸ್ಲಿಂ ಯುವಕನೊಬ್ಬ ಸುಮಾರು 25 ಲಕ್ಷ ವೆಚ್ಚದಲ್ಲಿ ಹಿಂದೂ ದೇವಾಲಯ ಕಟ್ಟಿಸಿಕೊಟ್ಟಿದ್ದಾನೆ. ದೇಗುಲವನ್ನು ಮುಸ್ಲಿಂ ಯುವಕ ಇಮಾಮ್ ಸಾಬ್ ಎಂಬಾತ ಸ್ವಂತ ಹಣದಲ್ಲಿ ನಿರ್ಮಿಸಿಕೊಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ.

ಏನಿದು ವಿಶೇಷ?:

ನಾಲ್ಕು ವರ್ಷಗಳ ಹಿಂದೆ ಗಾಳೆಮ್ಮ ದೇಗುಲ ಬಿದ್ದು ಹೋಗಿತ್ತು. ದೇಗುಲ ಮರು ನಿರ್ಮಾಣಕ್ಕೆ ನಿರ್ಧರಿಸಿದ ಗ್ರಾಮಸ್ಥರು, ಮರಳು ಗಣಿಗಾರಿಕೆ ಗುತ್ತಿಗೆ ಹಿಡಿದಿದ್ದ ಇಮಾಮ್ ಸಾಬ್ ಬಳಿ ಬಂದು ಮರಳು ಕೇಳಿದ್ದಾರೆ. ಆಗ ಇಮಾಮ್ ಸಾಬ್ ಮರಳು ಯಾಕೆ? ನಾನೇ ದೇವಾಲಯ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದರಂತೆ. ಕೊಟ್ಟ ಮಾತಿನಂತೆ ಇಮಾಮ್ ಸಾಬ್ 25 ಲಕ್ಷ ಖರ್ಚು ಮಾಡಿ ದೇಗುಲ ನಿರ್ಮಿಸಿಕೊಟ್ಟಿದ್ದಾರೆ. ಮಂಗಳವಾರ ದೇಗುಲ ಉದ್ಘಾಟನೆಯೂ ನಡೆದಿದೆ. ಇಮಾಮ್ ಸಾಬ್ ಮೂಲತಃ ಗದಗದ ರಾಜೀವ ಗಾಂಧಿ ನಗರದ ನಿವಾಸಿ. ಕಳೆದ ನಾಲೈದು ವರ್ಷಗಳಿಂದ ಕೊಪ್ಪಳದ ನರೇಗಲ್ನಲ್ಲಿ ಮರಳು ಗುತ್ತಿಗೆದಾರಿಕೆ ಮಾಡುತ್ತಿದ್ದಾರೆ. ಈಗ ನರೇಗಲ್ ಗ್ರಾಮದಲ್ಲಿ ಗಾಳೆಮ್ಮ ದೇಗುಲ ನಿರ್ಮಿಸಿಕೊಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

Categories
ಉಡುಪಿ

ಉಡುಪಿಯಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ

ಉಡುಪಿಯಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
– ನ.24ರಿಂದ ನ.27ರವರೆಗೆ ಲಕ್ಷ ದೀಪೋತ್ಸವ
– ಪ್ರತಿ ದಿನ 25 ಸಾವಿರ ಬತ್ತಿ, 75 ಲೀ ಎಳ್ಳೆಣ್ಣೆಯಿಂದ ದೀಪ
– ಕರಾವಳಿ ಸೇರಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ಆಗಮನ

NAMMUR EXPRESS NEWS
ಉಡುಪಿ: ಕಾರ್ತಿಕ ಮಾಸ ಆರಂಭವಾಗಿದ್ದು, ಎಲ್ಲಡೆ ದೀಪೋತ್ಸವ ಲಕ್ಷದೀಪೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ದೀಪಾರಾಧನೆ, ದೀಪಾರ್ಪಣೆ, ದೀಪೋತ್ಸವ ಸೇರಿದಂತೆ ಇತರ ವಿಶೇಷ ಪೂಜೆ ನಡೆಯುತ್ತಿದೆ.
ರಾಜ್ಯದ ಪ್ರಮುಖ ಕೃಷ್ಣನ ದೇವಾಲಯ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಲಕ್ಷ ದೀಪೋತ್ಸವ ನಡೆಯಲಿದೆ. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 24ರಿಂದ ನವೆಂಬರ್ 27 ರವರೆಗೆ 4 ದಿನಗಳ ಕಾಲ ಲಕ್ಷದಿಪೋತ್ಸವ ನಡೆಯಲಿದೆ. ಉತ್ಥಾನದ್ವಾದಶಿಯಿಂದ ಹುಣ್ಣಿಮೆವರೆಗೆ ಲಕ್ಷದಿಪೋತ್ಸವ ನಡೆಯಲಿದ್ದು, ಬಳಿಕ ರಥೋತ್ಸವಗಳು ಆರಂಭಗೊಳ್ಳಲಿವೆ.

ಇನ್ನು ಈಗಾಗಲೇ ಮಠದ ರಥಬೀದಿಯಲ್ಲಿ ರಥ ಕಟ್ಟುವ ಕಾರ್ಯ ಕೂಡ ಆರಂಭವಾಗಿದ್ದು, ಲಕ್ಷದಿಪೋತ್ಸವಕ್ಕೂ ಸಿದ್ಧತೆಗಳು ಅಂತಿಮಗೊಳ್ಳುತ್ತಿದೆ. ದೀಪೋತ್ಸವಕ್ಕಾಗಿ ರಥಬೀದಿಯ ಸುತ್ತ ಮರದ ಸಲಾಕೆಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಣತೆಗಳನ್ನು ಇಡಲಾಗಿದೆ. ಇನ್ನು ಪ್ರತಿ ದಿನ 25 ಸಾವಿರ ಬತ್ತಿ ಹಾಗೂ 75 ಲೀ ಎಳ್ಳೆಣ್ಣೆ ಬಳಸಿಕೊಂಡು ಮಠದ ಸುತ್ತಲೂ ದೀಪ ಬೆಳಗಿಸಲಾಗುತ್ತದೆ.

ವಿವಿಧ ಮಠಾಧೀಶರಿಂದ ಲಕ್ಷ ದೀಪೋತ್ಸವಕ್ಕೆ ಹಣತೆ ಮುಹೂರ್ತ :

ಲಕ್ಷದೀಪೋತ್ಸವದ ಅಂಗವಾಗಿ ನವೆಂಬರ್ 24ರ ಬೆಳಗ್ಗೆ ಶ್ರೀ ಕೃಷ್ಣ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸಿ ಪೂಜೆ ನಡೆಯಲಿದೆ. ಮಧ್ಯಾಹ್ನ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಲಕ್ಷದೀಪೋತ್ಸವಕ್ಕೆ ಹಣತೆ ಮುಹೂರ್ತ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಬಿ ಪೂಜೆ ನಡೆಯಲಿದ್ದು, ಅಷ್ಟ ಮಠಾಧೀಶರು ತಮ್ಮ ಪಟ್ಟದದೇವರಿಗೆ ಅರ್ಗ್ಯ ಪ್ರದಾನ ಮಾಡಲಿದ್ದಾರೆ. ರಾತ್ರಿ 7 ಗಂಟೆಗೆ ಮಠದಲ್ಲಿ ಉತ್ಸವ ಮುಹೂರ್ತ ಧಾರ್ಮಿಕ ವಿಧಿ ನಡೆಯಲಿದ್ದು, ನವಗ್ರಹ ಪೂಜೆ, ನವಗ್ರಹ ದಾನದ ನಂತರ ಜನವರಿ 14ರಂದು ನಡೆಯುವ ಮಕರ ಸಂಕ್ರಾತಿ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಇನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ವಿದೇಶಿಗ ಪ್ರವಾಸಿಗರು ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸುವ ನೀರೀಕ್ಷೆಯಿದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಸಹ ಸಕಲ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಉಡುಪಿ ಶ್ರೀ ಕೃಷ್ಣ ಮಠದ ಲಕ್ಷದೀಪೋತ್ಸವ ನಡೆಸಲು ಮಠದ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.

Categories
ಕರಾವಳಿ ಮಂಗಳೂರು

ಆಸ್ಟ್ರೇಲಿಯಾ ತಂಡದಲ್ಲಿ ಕರಾವಳಿ ಮ್ಯಾನೇಜರ್!

ಆಸ್ಟ್ರೇಲಿಯಾ ತಂಡದಲ್ಲಿ ಕರಾವಳಿ ಮ್ಯಾನೇಜರ್!
– ವಿಶ್ವ ಕಪ್ ಗೆಲುವಿನ ಹಿಂದೆ ಕನ್ನಡತಿಯ ಶ್ರಮ
– ತಂಡದ ಆಟಗಾರರ ಪ್ಲಾನರ್ ಇವರೇ..!

NAMMUR EXPRESS NEWS
ಮಂಗಳೂರು: ವಿಶ್ವಕಪ್ ಕ್ರಿಕೆಟಿನಲ್ಲಿ ಆಸ್ಟ್ರೇಲಿಯಾ ಭಾರತದ ಭರ್ಜರಿ ಗೆಲುವು ಸಾಧಿಸಿದೆ. ಭಾರತ ತಂಡ ಇಲ್ಲಿ ಸೋತರೂ ಭಾರತ ಮೂಲದ ಮಹಿಳೆ ಸಾಧನೆ ಇಲ್ಲಿದೆ. ಹೌದು ಆಸ್ಟ್ರೇಲಿಯಾ ತಂಡದ ಮ್ಯಾನೇಜರ್ ಆಗಿ ಮಂಗಳೂರು ಮೂಲದ ಯುವತಿ ಕಾರ್ಯನಿರ್ವಹಿಸಿದ್ದು, ಕಪ್ ಗೆಲ್ಲುವುದಕ್ಕೆ ಇವರೂ ಕಾರಣರಾಗಿದ್ದಾರೆ . ಹೌದು… ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್, ಮ್ಯಾನೇಜರ್ ಆಗಿ ಮಂಗಳೂರಿನ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೋ ಕಾರ್ಯನಿರ್ವಹಿಸುತ್ತಿದ್ದಾರೆ. 34 ವರ್ಷದ ಊರ್ಮಿಳಾ ಹೆತ್ತವರಾದ ಐವಿ ಮತ್ತು ವಾಲೆಂಟೈನ್ ದಂಪತಿಯ ಸದ್ಯ ಏಳು ವರ್ಷಗಳಿಂದ ಸಕಲೇಶಪುರದ ಎಸ್ಟೇಟ್ ನಲ್ಲಿ ವಾಸ್ತವ್ಯವಿದ್ದಾರೆ. ಆದರೆ ಇವರು ಸಾಕಷ್ಟು ವರ್ಷಗಳಿಂದ ಉದ್ಯೋಗದ ನಿಮಿತ್ತ ದೋಹಾ ಕತಾರ್ ನಲ್ಲಿ ವಾಸವಾಗಿದ್ದರು. ಊರ್ಮಿಳಾ ಅವರು ಹುಟ್ಟಿದ್ದೇ ಕತಾರ್ ನಲ್ಲಿ. ಬಾಲ್ಯದಿಂದಲೇ ಕ್ರೀಡೆಯತ್ತ ಅಪರಿಮಿತ ಆಸಕ್ತಿ ಹೊಂದಿದ್ದ ಉರ್ಮಿಳಾ ಮೊದಲು ಕತಾ‌ರ್ ಟೆನ್ನಿಸ್ ಫೆಡೆರೇಶನ್ ನಲ್ಲಿ ಕಾರ್ಯ ನಿರ್ವಹಿಸಿದ್ದರು.

ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಟೇಲ್‌ ಕ್ರಿಕೆಟ್ ಟೀಂ ನಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜ‌ರ್ ಆಗಿಕಾರ್ಯ ನಿರ್ವಹಿಸಿದ್ದರು. ಬಳಿಕ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಂ ಮ್ಯಾನೇಜ‌ರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಕತಾರ್ ನಲ್ಲಿ ನಡೆದ ವಿಶ್ವ ಫುಟ್ಬಾಲ್ ನಲ್ಲಿ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಅಪಾರ ಅನುಭವದೊಂದಿಗೆ ಮತ್ತೆ ಆಸ್ಟ್ರೇಲಿಯಾಗೆ ಮರಳಿರುವ ಊರ್ಮಿಳಾ ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್ ಆಗಿದ್ದಾರೆ. ಊರ್ಮಿಳಾಗೆ ಬಾಲ್ಯದಲ್ಲಿ ಬಾಸ್ಕೆಟ್‌ಬಾಲ್, ಟೆನ್ನಿಸ್ ಸೇರಿದಂತೆ ಅಥ್ಲೆಟಿಕ್ ಮೇಲೆ ಆಸಕ್ತಿಯಿತ್ತು. ಬಳಿಕ ಆ ಆಸಕ್ತಿ ಕ್ರಿಕೆಟ್ ಮೇಲೆ ಹೊರಳಿತು. ಊರ್ಮಿಳಾ ರೊಸಾರಿಯೋ ಆಸ್ಟ್ರೇಲಿಯಾ ಮೂಲದವರಲ್ಲದಿದ್ದರೂ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ನಾಲ್ಕು ವರ್ಷಗಳ ಕಾಲ ಕೇರ್ ಟೇಕರ್ ಆಗಿದ್ದರು. ಜೊತೆಗೆ ಊರ್ಮಿಳಾ ಬಹಳಷ್ಟು ಭಾಷೆಗಳನ್ನು ಬಲ್ಲವಳಾಗಿದ್ದರು. ಆದ್ದರಿಂದ ಆಟಗಾರರು ಹೋಗುವ ದೇಶದಲ್ಲಿ ಆಟಗಾರರ ಊಟೋಪಚಾರ, ವಸತಿ ಎಲ್ಲವನ್ನೂ ನಿಭಾಯಿಸುತ್ತಾರೆ. ಅವರ ಕೈಕೆಳಗೆ ಬಹುದೊಡ್ಡ ತಂಡವೇ ಕಾರ್ಯ ನಿರ್ವಹಿಸುತ್ತಿದೆ.

Categories
ತೀರ್ಥಹಳ್ಳಿ

ಬಸ್‌ ಬಾಗಿಲಲ್ಲಿ ನೇತಾಡಿ ವಿದ್ಯಾರ್ಥಿಗಳ ಪ್ರಯಾಣ!

ಬಸ್‌ ಬಾಗಿಲಲ್ಲಿ ನೇತಾಡಿ ವಿದ್ಯಾರ್ಥಿಗಳ ಪ್ರಯಾಣ!
– ವಾಹನಗಳಲ್ಲಿ ಹೆಚ್ಚಾದ ಯುವಕರ ಹುಚ್ಚಾಟ
– ತ್ರಿಬಲ್ ರೈಡಿಂಗ್ ಹಾಗೂ ಅತಿ ವೇಗದ ಚಾಲನೆ
– ತೀರ್ಥಹಳ್ಳಿಯಲ್ಲಿ ಪೊಲೀಸರ ಕಾರ್ಯಚರಣೆ ಶುರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿಗೆ ಬರುವ ಬಸ್ ನಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಬಸ್ ಮಾಲೀಕರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬಸ್ ಬಾಗಿಲಿನಲ್ಲಿ ನೇತಾಡಿಕೊಂಡು ಬರುವಂತಹ ದೃಶ್ಯಗಳು ತಾಲೂಕಿನ ಎಲ್ಲೆಡೆ ಕಂಡು ಬರುತ್ತಿದೆ. ಇದೇ ರೀತಿ ಪ್ರಕರಣ ಒಂದು ಸೋಮವಾರ ತೀರ್ಥಹಳ್ಳಿಯ ಬಾಳೆಬೈಲಿನಲ್ಲಿ ನಡೆದಿದ್ದು, ವಿದ್ಯಾರ್ಥಿಯೊಬ್ಬನು ಬಸ್ ಡೋರ್ ನಲ್ಲಿ ನೇತಾಡಿಕೊಂಡು ಬರುತ್ತಿದ್ದಾಗ ಡೋರ್ ನಿಂದ ಕೆಳಬಿದ್ದು ಗಾಯಗೊಂಡ ಪ್ರಕರಣ ವರದಿಯಾಗಿದ್ದು ಅದೃಷ್ಟವಶಾತ್ ವಿದ್ಯಾರ್ಥಿಗೆ ಯಾವುದೇ ತೊಂದರೆಯಾಗಿಲ್ಲ. ಆದರೂ ಕೂಡ ಎಲ್ಲೆಡೆ ಬಸ್ ನಲ್ಲಿ ಹೆಚ್ಚೆಚ್ಚು ಜನರನ್ನು ತುಂಬಿಸಿಕೊಂಡು ಬರುತ್ತಿರುವುದು ಹಾಗೂ ಬಸ್ ಡೋರ್ ನಲ್ಲಿ ನಿಂತು ವಿದ್ಯಾರ್ಥಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಪೊಲೀಸ್ ಪರಿಶೀಲನೆ: ಘಟನೆ ಬಳಿಕ ಈ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದು, ಎಲ್ಲಾ ಕಡೆ ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಇನ್ನು ಮುಂದೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ.

ತೀರ್ಥಹಳ್ಳಿ ಪಟ್ಟಣದಲ್ಲಿ ಅತಿ ವೇಗದ ಚಾಲನೆ!

ಇನ್ನೂ ಯುವಕರು ತೀರ್ಥಹಳ್ಳಿ ಪಟ್ಟಣದಲ್ಲಿ ಅತಿ ವೇಗದಿಂದ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬರುತ್ತಿದೆ.ಇದರಿಂದ ಸಾರ್ವಜನಿಕರಿಗೆ ಹಾಗೂ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಹೆಲ್ಮೆಟ್ ಧರಿಸದೆ ಹಾಗೂ ತ್ರಿಬಲ್ ರೈಡಿಂಗ್ ಗಳ ಮೂಲಕ ಪಟ್ಟಣದಲ್ಲಿ ಯುವಕರು ಹುಚ್ಚಾಟ ಮೆರೆಯುತ್ತಿದ್ದಾರೆ. ಇದಕ್ಕೆ ಪೊಲೀಸರು ಪರಿಶೀಲನೆ ಮಾಡಬೇಕು. ಯುವಕರ ನಿರ್ಲಕ್ಷಕ್ಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬ್ಯಾರೀಕೆಡ್ ತೆರವುಗೊಳಿಸಿ..!

ಬಾಳೆಬೈಲು ಮಲ್ನಾಡ್ ಕ್ಲಬ್ ಮುಂಭಾಗ ದೊಡ್ಡ ಬ್ಯಾರಿಕೇಡ್ ಇಡಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಕಿರಿಕಿರಿಯಾಗಿದೆ. ಈ ಬಗ್ಗೆ ತಕ್ಷಣ ಗಮನಿಸಬೇಕಿದೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ದಂಡ

ತೀರ್ಥಹಳ್ಳಿ ಪಟ್ಟಣದಲ್ಲಿ ಅತಿ ವೇಗದ ವಾಹನ ಚಾಲನೆ, ಟ್ರಾಫಿಕ್ ನಿಯಮ ಉಲ್ಲಂಘನೆಯಿಂದಾಗುತ್ತಿರುವ ಅಪಘಾತಗಳು, ಸಾವು-ನೋವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪೋಲೀಸ್ ಇಲಾಖೆ ಸಂಚಾರ ವ್ಯವಸ್ಥೆಯ ಸುಧಾರಣೆಗಾಗಿ ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಬಹುತೇಕ ಎಲ್ಲಾ ರಸ್ತೆಗಳಲ್ಲಿ ನಾಕಾಬಂದಿ ನಡೆಸಿದ ಪೋಲೀಸ್ ಸಿಬ್ಬಂದಿಗಳು ಹೆಲೈಟ್ ಧರಿಸದವರು, ಅತಿ ವೇಗದ ವಾಹನ ಚಾಲನೆ ಮಾಡುವವರು, ಸಂಚಾರ ನಿಯಮ ಉಲ್ಲಂಘಿಸಿ ತ್ರಿಬ್ಬಲ್ ರೈಡು, ನಿಗದಿ ಮೀರಿ ಸರಕು ಹೇರಿಕೊಂಡು ಸಂಚರಿಸುವ ವಾಹನಗಳನ್ನು ತಡೆದು ದಂಡ ವಿಧಿಸಿದರು.