Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಲ್ಲಿ ಹೆಚ್ಚಿದ ಲಂಚಾವಾತಾರ!

ತೀರ್ಥಹಳ್ಳಿ ತಾಲೂಕಲ್ಲಿ ಹೆಚ್ಚಿದ ಲಂಚಾವಾತಾರ!
– ತಾಲೂಕು ಕಚೇರಿ ಸೇರಿ ಎಲ್ಲೆಡೆ ಲಂಚ ಕೊಟ್ಟರೆ ಮಾತ್ರ ಕೆಲಸ
– ಗ್ರಾಮ ಪಂಚಾಯತ್ ಅಧಿಕಾರಿಗಳ ಲಂಚ ದಾಹ
– ಜನರ ಕೆಲಸ ಆಗಲ್ಲ…ಜನ ನಾಯಕರು ಕೇಳಲ್ಲ
– ಶಾಸಕ ಆರಗ ಅವರೇ ಎಲ್ಲಾ ಕಚೇರಿ ಭೇಟಿ ನೀಡಿ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಹೆಚ್ಚಿದ ಲಂಚಾವಾತಾರ ಇದೀಗ ಜನ ಸಾಮಾನ್ಯರಿಗೆ ಮತ್ತಷ್ಟು ಸಂಕಟ ತಂದಿದೆ. ತೀರ್ಥಹಳ್ಳಿ ತಾಲೂಕು ಕಚೇರಿ ಸೇರಿ ಎಲ್ಲೆಡೆ ಲಂಚ ಕೊಟ್ಟರೆ ಮಾತ್ರ ಕೆಲಸ ಎಂಬಂತಾಗಿದೆ. ವಿವಿಧ ಇಲಾಖೆಗಳ ಮೇಲಿನ ಹಂತದ ಅಧಿಕಾರಿಗಳಿಂದ ಹಿಡಿದು ಅಟೆಂಡರ್ ವರೆಗೂ ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾರೆ. ಕೆಲವು ಒಳ್ಳೆ ಸರ್ಕಾರಿ ನೌಕರರಿದ್ದರೂ ಅವರ ಮಾತು ನಡೆಯುತ್ತಿಲ್ಲ.

ಎಲ್ಲಾ ಇಲಾಖೆಯಲ್ಲೂ ಇದೇ ಕಥೆ!

ತೀರ್ಥಹಳ್ಳಿ ತಾಲೂಕು ಕಚೇರಿ ಸೇರಿ ಎಲ್ಲಾ ಇಲಾಖೆಯಲ್ಲೂ ಇದೇ ದೂರು ಕೇಳಿ ಬಂದಿದೆ. ಇನ್ನು ಆಯಾ ಇಲಾಖೆ ಸೌಲಭ್ಯ ಪಡೆಯಲು ಇಷ್ಟು ಹಣ ಕೊಡ್ಬೇಕು ಎಂಬ ನಿಯಮವನ್ನು ಅಧಿಕಾರಿಗಳ ತಂಡ ಮಾಡಿಕೊಂಡಿದೆ. ಇತ್ತೀಚಿಗೆ ಒಬ್ಬರು ಸರ್ಕಾರಿ ಶಾಲೆ ಉಳಿವಿಗೆ ಅವರ ಜೀವನವನ್ನೇ ಮೂಡಿಪಾಗಿಟ್ಟಿದ್ದು ಅವರ ಶಾಲೆಯ ಕಟ್ಟಡ ಹಣ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಅದನ್ನು ಕೇಳಿದರೆ ಹಣ ಕೇಳಲಾಗಿದೆ. ಇದು ಜ್ಞಾನೇಂದ್ರ ಅವರ ಗಮನಕ್ಕೂ ಇದೆ.

ಗ್ರಾಮ ಪಂಚಾಯತ್ ಅಧಿಕಾರಿಗಳ ಲಂಚ ದಾಹ

ತಾಲೂಕಿನ 38 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಲಂಚ ಮಾಮೂಲಿಯಾಗಿದೆ. ಈ ಬಗ್ಗೆ ಜನರು ಪ್ರತಿ ದಿನ ದೂರುತ್ತಿದ್ದಾರೆ. ಆದರೆ ಸರ್ಕಾರಿ ಅಧಿಕಾರಿಗಳು ಇದಕ್ಕೆ ಖ್ಯಾರೆ ಎನ್ನುತ್ತಿಲ್ಲ.

ಜನರ ಕೆಲಸ ಆಗಲ್ಲ…ಜನ ನಾಯಕರು ಕೇಳಲ್ಲ

ಶಾಸಕರಿಂದ ಹಿಡಿದು ಸ್ಥಳೀಯ ನಾಯಕರವರೆಗೆ ಈ ಬಗ್ಗೆ ಗಟ್ಟಿ ದನಿ ಎತ್ತುತ್ತಿಲ್ಲ. ಇದರಿಂದ ಜನ ಸಾಮಾನ್ಯರು ದಿನ ಬೆಳಗಾದ್ರೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ಎಲ್ಲರ ಗಮನಕ್ಕೆ ತಂದಿದೆ.

ರಿಯಲ್ ಎಸ್ಟೇಟ್ ಅಡ್ಡೆಯಾದವಾ ಕಚೇರಿ!?

ತಾಲೂಕು ಕಚೇರಿಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಕೆಲಸ ಮಾಡುತ್ತಿದೆ. ಅಲ್ಲಿನ ಕೆಲವರಿಗೆ ಮಾತ್ರ ಕೆಲಸ ಆಗುತ್ತಿದೆ ಎಂಬ ಆರೋಪ ಇದೆ. ಕ್ಷೇತ್ರದ ಇಬ್ಬರು ಶಾಸಕರು ಸಚಿವರಾದರೂ ಭ್ರಷ್ಟಾಚಾರ ತಪ್ಪಿಸಲಾಗಲಿಲ್ಲ ಎಂಬ ನೋವು ಜನರದ್ದು.

ಪ್ಲೀಸ್ ಅರ್ಥ ಮಾಡಿಕೊಳ್ಳಿ.. ಜನರಿಗೆ ಕಷ್ಟ ಕೊಡ್ಬೇಡಿ!

ಸರ್ಕಾರಿ ನೌಕರರರೇ ನಿಮಗೆ ಸರ್ಕಾರ ಸಂಬಳ ಕೊಡುತ್ತದೆ. ಎಲ್ಲರಿಗಿಂತ ಹೆಚ್ಚು ಸೌಲಭ್ಯ ನಿಮಗಿದೆ. ಇವತ್ತು ಜನ ಬದುಕಲು ಸಾಧ್ಯ ಆಗುತ್ತಿಲ್ಲ. ಕಾನೂನು ಜತೆಗೆ ಸ್ಥಳೀಯ ವ್ಯವಸ್ಥೆ ನೋಡಿಕೊಂಡು ಕೆಲಸ ಮಾಡಿಕೊಡಿ. ಇದು ನಮ್ಮ ಕಾಳಜಿ.

Categories
ರಾಜ್ಯ

ರಾತ್ರಿ ಆಗಸದಿಂದ ಬೀಳಲಿವೆ ಕಲರ್ ಫುಲ್ ಉಲ್ಕೆಗಳು!

ರಾತ್ರಿ ಆಗಸದಿಂದ ಬೀಳಲಿವೆ ಕಲರ್ ಫುಲ್ ಉಲ್ಕೆಗಳು!
– ಇಂದು ಮತ್ತು ನಾಳೆ ಉಲ್ಕೆಗಳ ವರ್ಷಧಾರೆ
– ಬಣ್ಣ ಬಣ್ಣದ ಉಲ್ಕೆಗಳ ದರ್ಶನ
– ವೀಕ್ಷಣೆಗೆ ಬೆಸ್ಟ್ ಟೈಮಿಂಗ್ ಯಾವುದು?

NAMMUR EXPRESS NEWS
ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ, ಮಿಥುನ ರಾಶಿಯಿಂದ ಚಿಮ್ಮುವ ‘ಜೆಮಿನಿಡ್’ ಉಲ್ಕಾಪಾತ ಇಂದು ಮತ್ತು ನಾಳೆ ಮಧ್ಯ ರಾತ್ರಿ ವಿಜೃಂಭಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸಿದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ ಇಂದು ಸುಮಾರು ಗಂಟೆಗೆ ನೂರಕ್ಕಿಂತಲೂ ಹೆಚ್ಚು ಬಣ್ಣ ಬಣ್ಣದ ಉಲ್ಕೆಗಳನ್ನು ನೋಡಿ ಆನಂದಿಸಬಹುದು. ಈ ಉಲ್ಕೆಗಳು ಹೆಚ್ಚಿನವು ಸೂರ್ಯನ ಸುತ್ತುವ ಧೂಮಕೇತುಗಳ ಧೂಳು. ಆದರೆ ಇಂದಿನ ಜೆಮಿನಿಡ್ ಹಾಗಲ್ಲ. ಇದೊಂದು ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಸುಮಾರು 6 ಕಿಮೀ ಗಾತ್ರದ ಕಲ್ಲುಂಡೆಯ, 3200 ಪೇಥಾನ್ (Phaethon asteroid) ಆಸ್ಟೆರೊಯ್ಡ್ ನ ಧೂಳು. ಶುಕ್ರವಾರ ರಾತ್ರಿ ಸುಮಾರು 1 ಗಂಟೆಗೆ ನಡು ನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120 ಉಲ್ಕೆಗಳನ್ನು ಗುರುತಿಸಬಹುದೆಂದು ಅಂದಾಜಿಸಿದ್ದಾರೆ. ಬೇರೆಲ್ಲಾ ಉಲ್ಕಾಪಾತಗಳಿಗಿಂತ ಇದು ವಿಭಿನ್ನ.

ಇಂದು ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು. ಬಿಳಿ, ಕೆಂಪು, ಹಳದಿ, ಹಸಿರು ಹಾಗೂ ನೀಲಿ ಎಂದು ತಿಳಿಸಿದ್ದಾರೆ. ನಮ್ಮ ಮೇಲೆಯೇ ಬಿತ್ತು ಅಂತ ಅನಿಸುವ ಈ ಉಲ್ಕಾಪಾತಗಳು ಹಾಗೇನೂ ಅಲ್ಲ. ಭೂ ವಾತಾವರಣದಿಂದಾಗಿ ಸುಮಾರು 60 – 70 ಕಿಮಿ ಎತ್ತರದಲ್ಲಿ ಆಕಾಶದಲ್ಲೇ ಈ ಧೂಳಿನ ಕಣಗಳು ಘರ್ಷಣೆಯಿಂದ ಉರಿದು ಹೋಗುತ್ತವೆ. ಮಿಥುನ ರಾಶಿಯೇ ನೋಡಲು ಚೆಂದ. ಮಹಾವ್ಯಾಧ ನಕ್ಷತ್ರ ಪುಂಜವೇ ಚೆಂದ. ಅದರ ಪಕ್ಕ ಇರುವ ಪುನರ್ವಸು ನಕ್ಷತ್ರವೂ ಸುಂದರ. ಅದರಲ್ಲೂ ಇದೀಗ ಸಿಡಿಯ ಬಹುದಾದ ಬೃಹನ್ ಆರಿದ್ರಾ ನಕ್ಷತ್ರ, ರೆಡ್ ಸೂಪರ್ ಜೈಂಟ್ ಆಕಾಶ ವೀಕ್ಷಣೆಗೆ ಈ ಮಾರ್ಗಶಿರ ಮಾಸ ಬಲು ಸೊಗಸು. ಅದರೊಂದಿಗೆ ಇಂದಿನ ಆಕಾಶದ ಈ ಉಲ್ಕಾಪಾತದ ಆಟವನ್ನು ನೋಡಿ ಆನಂದಿಸಬಹುದು.

 

Categories
ತೀರ್ಥಹಳ್ಳಿ

ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಗೆ ಸಂಸದರ ಸ್ಪಂದನೆ

ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಗೆ ಸಂಸದರ ಸ್ಪಂದನೆ
– ಮೋದಿ ಸರ್ಕಾರದಿಂದ ಸಮಸ್ಯೆ ಈಡೇರಿಕೆ
– ಸಂಸದ ಬಿ ವೈ ರಾಘವೇಂದ್ರ ಭರವಸೆ

NAMMUR EXPRESS NEWS
ತೀರ್ಥಹಳ್ಳಿ : ಶುಕ್ರವಾರ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್ ರವರು ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳದಿಂದಲೇ ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಬಾಗವಹಿಸಿರುವ ಸಂಸದ ಬಿ ವೈ ರಾಘವೇಂದ್ರ ಅವರನ್ನು ಸಂಪರ್ಕಿಸಿ ಗ್ರಾಮೀಣ ಅಂಚೆ ನೌಕರರ ಪರವಾಗಿ ಅವರ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಬೇಕಾಗಿ ವಿನಂತಿಸಿದರು.
ಎಲ್ಲರಿಗೂ ಕೇಳುವಂತೆ ದೂರವಾಣಿಯಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಸಂಸದರು ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸುವ ಭರವಸೆ ನೀಡಿ ನಮ್ಮ ಸಂಸದರು ಮತ್ತು ಸರ್ಕಾರ ನಿಮ್ಮ ಪರವಾಗಿ ಯಾವಾಗಲೂ ಇದೆ, ನಿಮಗೆ ನ್ಯಾಯ ಕೊಡಿಸುವ ಕಾರ್ಯ ನರೇಂದ್ರ ಮೋದಿ ಸರ್ಕಾರದಿಂದ ಆಗುತ್ತದೆ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.

ಈ ಮದ್ಯೆ ಅಂಚೆ ಇಲಾಖೆ ಅಧಿಕಾರಿಗಳು ನೂತನವಾಗಿ ಆಯ್ಕೆಯಾದ ಗ್ರಾಮೀಣ ಅಂಚೆ ನೌಕರರು ಹೋರಾಟದಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುತ್ತಿರುವ ಮಾಹಿತಿಯನ್ನು ತಿಳಿದ ಹೆದ್ದೂರು ನವೀನ್ ಅವರು ಸ್ಥಳದಿಂದಲೇ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಪ್ರಜಾಪ್ರಭುತ್ವದಲ್ಲಿ ಹೋರಾಟವನ್ನು ತಡೆ ಹಿಡಿಯುವ ಕೆಲಸ ಆಗಬಾರದು ನಾವೆಲ್ಲರೂ ಹೋರಾಟಗಾರರ ಪರವಾಗಿ ಇದ್ದೇವೆ,ನೌಕರನ ಮೂಲಭೂತ ಹಕ್ಕನ್ನು ಕಸಿಯಕೂಡದು ಎಂದು ಅಧಿಕಾರಿಗಳಿಗೆ ಎಚ್ಚರಿಸುವ ಕಾರ್ಯ ಮಾಡಿದರು. ಗ್ರಾಮೀಣ ಅಂಚೆ ನೌಕರರ ಸಂಘದ ಮುಖಂಡರಾದ ನರೇಂದ್ರ, ಉಮೇಶ್ ,ಜಾನಕಿ ಮತ್ತಿತರರು ಉಪಸ್ಥಿತರಿದ್ದರು. ಹೆದ್ದೂರು ನವೀನ್ ಜೊತೆ ಬಿಜೆಪಿ ಯುವ ನಾಯಕರಾದ ಅಂಜೂರ ಕುಡುಮಲ್ಲಿಗೆ, ಗುರು ಸಿ ಗೌಡ, ಪ್ರದೀಪ್ ಗಬಡಿ,ಅಭಿಲಾಷ್ ಕೈ ಮರ, ಕವಿರಾಜ್ ಚಂದಕಮಕ್ಕಿ, ಅನಿರುದ್ಧ ಕೆಳಕೆರೆ ಭಾಗವಹಿಸಿದ್ದರು.

Categories
ತೀರ್ಥಹಳ್ಳಿ

ನಿಮ್ಮ ಹಳ್ಳಿಯಲ್ಲಿ ಸರ್ಕಾರಿ ಬಸ್ ಸಮಸ್ಯೆ ಇದೆಯಾ ?

Categories
ತೀರ್ಥಹಳ್ಳಿ

ಹುಡುಗಿ ಹೆಸರಲ್ಲಿ ಫೇಸ್ಬುಕ್ ಅಕೌಂಟ್ ಮಾಡಿ 7.25 ಲಕ್ಷ ವಂಚನೆ!

ಹುಡುಗಿ ಹೆಸರಲ್ಲಿ ಫೇಸ್ಬುಕ್ ಅಕೌಂಟ್ ಮಾಡಿ 7.25 ಲಕ್ಷ ವಂಚನೆ!
– ತೀರ್ಥಹಳ್ಳಿಯ ಹುಡುಗನಿಂದ ವಂಚನೆ: ಅರೆಸ್ಟ್
– ತೀರ್ಥಹಳ್ಳಿ ಹೊರ ವಲಯದಲ್ಲಿ ಗಾಂಜಾ ವ್ಯಸನಿಗಳ ಕಾಟ!

NAMMUR EXPRESS NEWS
ತೀರ್ಥಹಳ್ಳಿ: ಫೇಸ್ಬುಕ್ ಜಾಲ ತಾಣದಲ್ಲಿ ಹುಡುಗಿಯರ ಹೆಸರಲ್ಲಿ ತೀರ್ಥಹಳ್ಳಿಯ ಯುವಕನೊಬ್ಬ 7.25 ಲಕ್ಷ ವಂಚಿಸಿ ಇದೀಗ ಅರೆಸ್ಟ್ ಆಗಿರುವ ಘಟನೆಯೊಂದು ನಡೆದಿದೆ. ತುಮಕೂರಿನ ಪೋಲಿಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಆ ದೂರಿನ ಮೇರೆಗೆ ಪೋಲೀಸರು ತೀರ್ಥಹಳ್ಳಿಯಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ತೀರ್ಥಹಳ್ಳಿಯ 21 ವರ್ಷದ ಈ ಹುಡುಗ ಫೇಸ್ಬುಕ್ ನಲ್ಲಿ ದಿವ್ಯ ಮತ್ತು ಶರ್ಮಿಳಾ ಎಂಬ ಹೆಸರಿನಲ್ಲಿ ಅಕೌಂಟ್ ಹೊಂದಿದ್ದು ಹುಡುಗರೊಂದಿಗೆ ಮೆಸೆಂಜರ್ ನಲ್ಲಿ ಮಾತುಕತೆಗಿಳಿದು ನಿಧಾನವಾಗಿ ಸಲಿಗೆ ಬೆಳೆಸಿಕೊಂಡು ನಂತರ ವಾಟ್ಸಾಪ್ ನಂಬರ್ ಮೂಲಕ ಇನ್ನಷ್ಟು ಹತ್ತಿರವಾಗಿ ಒಂದಿಷ್ಟು, ಸುಳ್ಳು ಮತ್ತು ಸಿಂಪಥಿಯ ಕಥೆಗಳನ್ನು ಸೃಷ್ಟಿಸಿ ಹೇಳಿ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪೋಲಿಸ್ ತನಿಖೆಯಿಂದ ತಿಳಿದಿದೆ.

ಈ ಆರೋಪಿ ತುಮಕೂರಿನ ಯುವಕನೊಂದಿಗೆ ಹೀಗೆ ವಾಟ್ಸಾಪಿನ ಮತ್ತು ಮಸೆಂಜರ್ ಮೂಲಕ ಮಾತಿಗಿಳಿದಿದ್ದು 7.25 ಲಕ್ಷ ಹಣ ಪಡೆದು ವಂಚಿಸಿರುತ್ತಾನೆ. ಹಣ ಕಳೆದುಕೊಂಡ ಮಗ ಖಿನ್ನತೆಯಿಂದ ಇದ್ದದ್ದನ್ನು ಗಮನಿಸಿದ ಹುಡುಗನ ತಂದೆ ಈ ಕುರಿತು ತುಮಕೂರು ಸಿಇಎನ್ ಠಾಣೆಯಲ್ಲಿ ಆಗಸ್ಟ್ 15ಕ್ಕೆ ದೂರು ನೀಡಿದ್ದು ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಇವನೊಂದಿಗೆ ಇನ್ನಷ್ಟು ಜನರಿರುವ ಶಂಕೆಯಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

 

ತೀರ್ಥಹಳ್ಳಿ ಹೊರ ವಲಯದಲ್ಲಿ ಗಾಂಜಾ ವ್ಯಸನಿಗಳ ಕಾಟ!

ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಂತಿರುವ ತುಡ್ಕಿ-ಬದನೇಹಿತ್ಲು, ಕುರುವಳ್ಳಿ, ಸೀಬಿನಕೆರೆ, ಯಡೆಹಳ್ಳಿ, ಇಂದಿರಾ ನಗರ ಗ್ರಾಮಗಳಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗುತ್ತಿದೆ. ತುಂಗಾ ಕಾಲೇಜು ಗುಡ್ಡ, ತುಡ್ಕಿ ಗದ್ದೆಬಯಲು, ಇಂದಾವರಗಳಲ್ಲಿ ಠಿಕಾಣಿ ಹೂಡುವ ಯುವಕರು ಗಾಂಜಾ ಎಳೆದು ಚಿತ್ರ ವಿಚಿತ್ರವಾಗಿ ವರ್ತಿಸುವುದು, ಪುಂಡಾಟಿಕೆ ನಡೆಸುವುದು, ಪರಸ್ಪರ ಬಡಿದಾಡಿಕೊಳ್ಳುವುದು ಮಾಮೂಲಿಯಾಗಿ ಬಿಟ್ಟಿದೆ. ಇತ್ತೀಚೆಗೆ ಗಾಂಜಾ ಅಮಲಿನಲ್ಲಿ ಯುವಕನೊಬ್ಬನ ಮರ್ಮಾಂಗಕ್ಕೆ ಒದ್ದು ಆತ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಂಜಾ ಹಾವಳಿ ತಡೆಗಟ್ಟುವಂತೆ ಗ್ರಾಮಸ್ಥರು ಪೋಲೀಸ್-ಅಬಕಾರಿ ಇಲಾಖೆಯನ್ನು ಆಗ್ರಹಿಸಿದ್ದಾರೆ.

Categories
ತೀರ್ಥಹಳ್ಳಿ

ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಶಿಕ್ಷಣ ಇಲಾಖೆ!

ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಶಿಕ್ಷಣ ಇಲಾಖೆ!
– ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಮಕ್ಕಳಿಗೆ ತರಬೇತಿ
– ಶಿವಮೊಗ್ಗ ಜಿಲ್ಲೆಗೆ ಕಳೆದ ವರ್ಷ ತೀರ್ಥಹಳ್ಳಿಯೇ ಟಾಪ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ ಶಾಲಾ ಶಿಕ್ಷಣ ಮತ್ತು ‌ಸಾಕ್ಷರತಾ ಇಲಾಖೆಯ ಕಾರ್ಯಕ್ರಮ ಇದೀಗ ರಾಜ್ಯಕ್ಕೆ ಮಾದರಿಯಾಗಿದೆ. ಲಯನ್ಸ್ ಕ್ಲಬ್ ತೀರ್ಥಹಳ್ಳಿ, ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಸಹಕಾರ, ಸಿದ್ದಾಂತ ಪೌಂಡೇಷನ್ ಉಡುಪಿ ಇವರ ವಿಶೇಷ ಪ್ರಯತ್ನದೊಂದಿಗೆ ಈ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ತೀರ್ಥಹಳ್ಳಿ ತಾಲ್ಲೂಕು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ.

ಈ ವರ್ಷವೂ ಅತ್ಯುತ್ತಮ ಫಲಿತಾಂಶ ನೀಡುವ ಉದ್ದೇಶದಿಂದ ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ಅವರು ಸರ್ವರ ಸಹಕಾರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಾರ್ಯಗಾರ ಮಾಡಿಸಿ ಅದು ಯಶಸ್ಸಿಯಾಗಿತ್ತು,ಸಹ ಕಲಿಕೆಯಲ್ಲಿ ಅತ್ಯುತ್ತಮ ಫಲಿತಾಂಶ ಹೊಂದಿರುವ ಮಕ್ಕಳಿಗೆ, ಸಿದ್ದಾಂತ ಫೌಂಡೇಷನ್ ಸಹಕಾರದಲ್ಲಿ, ಮತ್ತೊಂದು ಯಶಸ್ವಿ ಕಾರ್ಯಾಗಾರ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಡೆಯಿತು.

ಮಕ್ಕಳು, ಪೋಷಕರು, ಸಾರ್ವಜನಿಕ ವಲಯದಲ್ಲಿ ಶಿಕ್ಷಣ ಇಲಾಖೆಯ ಈ ಕೆಲಸ ಹೆಚ್ಚು ಅಭಿನಂದನೆಗೆ ಪಾತ್ರವಾಗಿದೆ. ಪ್ರೇರಣಾ ಕಾರ್ಯಾಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್‌, ಪಟ್ಟಣ ಉಪಾಧ್ಯಕ್ಷರಾದ ರಹಮತ್ ವುಲ್ಲಾ ಆಸಾದಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ತನಿಕಲ್ ರಾಜಣ್ಣ, ಮುಖ್ಯಾಧಿಕಾರಿ, ಕುರಿಯೋ ಕೊಸ್, ಕ್ಷೇತ್ರ ಶಿಕ್ಷಣಾಧಿಕಾರಿ, ಗಣೇಶ್ ವೈ, ಸಿದ್ದಾಂತ ಪೌಂಡೇಷನ್ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಕ್ಷೇತ್ರ ಸಮನ್ವಯಾಧಿಕಾರಿ ಗಣೇಶ್ ಇ ಬಿ, ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಅಧಿಕಾರಿ ಪ್ರವೀಣ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಿರಿರಾಜ್ ಜಿ ಕೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮು ಬಿ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಕೆ ವಿ, ತಾಲ್ಲೂಕು ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಯಾದ ಗಣೇಶ್ ಕೆ ಡಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, 650 ಮಕ್ಕಳು ಹಾಜರಿದ್ದರು.

ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ, ಹಾಗೂ ಶಿವಮೊಗ್ಗ ಡಿ ಡಿ ಪಿ ಐ, ಪರಮೇಶ್ವರಪ್ಪ ಹಾಗೂ ಶಿಕ್ಷಣಾಧಿಕಾರಿ, ಲೋಕೇಶಪ್ಪ ಸಹಕಾರ ನೀಡಿದ್ದರು. ಎಲ್ಲಾ ಶಿಕ್ಷಕಕರು ಭಾಗವಹಿಸಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದಲ್ಲಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ!

ತೀರ್ಥಹಳ್ಳಿ ಪಟ್ಟಣದಲ್ಲಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ!
– ನಾಯಿ ಮಾಲೀಕರ ಗಮನಕ್ಕೆ: ಆಡಳಿತದ ಪ್ರಕಟಣೆ
– ದಾರಿ ಮೇಲೆ ಬಿಟ್ಟು ಸಾಯಿಸೋ ಬದಲು ಇದು ಓಕೆ
– ಬೀಡಾಡಿ ಜಾನುವಾರುಗಳ ಬಗ್ಗೆ ಕ್ರಮ ತೆಗೆದುಕೊಳ್ಳಿ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಆಡಳಿತ ಡಿಸೆಂಬರ್ 15ರಿಂದ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಕೊಡಿಸಲಿದೆ. ಆದ್ದರಿಂದ ಸಾಕು ನಾಯಿ ಮಾಲೀಕರು ತಮ್ಮ ನಾಯಿಗಳನ್ನು ಮನೆಯಲ್ಲೇ ಕಟ್ಟಿಜೋಪಾನ ಮಾಡಬೇಕೆಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಆಡಳಿತ ಈ ಕ್ರಮ ತೆಗೆದುಕೊಂಡಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲೂ ಈ ಅಭಿಯಾನ ಆಗಬೇಕಿದೆ.

ಇತ್ತೀಚಿಗೆ ಪಟ್ಟಣ ಸೇರಿ ಹಳ್ಳಿಗಳಲ್ಲಿ ನಾಯಿ ಮರಿಗಳನ್ನು, ನಾಯಿಗಳನ್ನು ತಂದು ಬೀದಿಗೆ ಬಿಡುವ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆಡಳಿತದ ಈ ನಿರ್ಧಾರ ಅನಿವಾರ್ಯವಾಗಿತ್ತು. ಇದೀಗ ಗ್ರಾಮ ಪಂಚಾಯತ್ ಮಟ್ಟದಲ್ಲೂ ಈ ಅಭಿಯಾನ ನಡೆಯಲಿ ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

ಗೂಳಿಗಳ ಕಾಟಕ್ಕೆ ಮುಕ್ತಿ ಬೇಕು!

ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಕಾಟ ಹೆಚ್ಚಾಗಿದೆ. ಇದರಿಂದ ವಾಹನ ಸವಾರರು, ಜನತೆಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಕಳೆದ 2 ವರ್ಷದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಹಲವರ ಮೇಲೆ ಹೋರಿಗಳು ದಾಳಿ ಮಾಡಿವೆ. ಮಕ್ಕಳು, ಮಹಿಳೆಯರು ಓಡಾಡಲು ಹೆದರುವಂತಾಗಿದೆ. ಈ ಬಗ್ಗೆಯೂ ಆಡಳಿತ ಗಮನ ವಹಿಸಬೇಕಿದೆ ಎಂಬ ಅಗ್ರಹ ಜನರದ್ದು.

Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ ಮಾಹಿತಿ

ತೀರ್ಥಹಳ್ಳಿಯಲ್ಲಿ ಕಚೇರಿ ಸಹಾಯಕರು ಹುದ್ದೆ

ತೀರ್ಥಹಳ್ಳಿಯಲ್ಲಿ ಕಚೇರಿ ಸಹಾಯಕರು ಹುದ್ದೆ
– ಮಹಿಳೆ ಅಥವಾ ಪುರುಷ ಅಭ್ಯರ್ಥಿಗಳಿಗೆ ಅವಕಾಶ
– ಪಿಗ್ಮಿ ಸಂಗ್ರಾಹಕರು ಕೂಡ ಬೇಕಾಗಿದ್ದಾರೆ.

NAMMUR EXPRESS JOB NEWS
ತೀರ್ಥಹಳ್ಳಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕಲ್ಪವೃಕ್ಷ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡಲು ಅರ್ಹ ಕಚೇರಿ ಸಹಾಯಕರು ಬೇಕಾಗಿದ್ದಾರೆ.

ಹುದ್ದೆಗಳು

1. ಕಚೇರಿ ಸಹಾಯಕರು: ಹುದ್ದೆ-1( ಮಹಿಳೆ/ಪುರುಷ)
ವಿದ್ಯಾರ್ಹತೆ : ಬಿಕಾಂ, ಕಂಪ್ಯೂಟರ್, ಅಕೌಂಟ್ಸ್ ಜ್ಞಾನ ಇರಬೇಕು. ಸಂವಹನ ಕೌಶಲ್ಯ ಇರಬೇಕು.
– ಹೊಸಬರಿಗೂ ಅವಕಾಶ ಇದೆ.

2. ತೀರ್ಥಹಳ್ಳಿ ಪಟ್ಟಣದಲ್ಲಿ ಕೆಲಸ ಮಾಡಲು ಪಿಗ್ಮಿ ಸಹಾಯಕರು( ಪುರುಷ ಅಥವಾ ಮಹಿಳೆ)

– ಪಿಗ್ಮಿ ಕೆಲಸ ಮಾಡಲು ಆಸಕ್ತಿ ಇರಬೇಕು. ತೀರ್ಥಹಳ್ಳಿ ಪಟ್ಟಣದವರು ಆಗಿರಬೇಕು.

ತಮ್ಮ ರೆಸ್ಯೂಮ್ ಹಾಗೂ ಮಾಹಿತಿಯನ್ನು ಕೆಳಕಂಡ ನಂಬರಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ತೀರ್ಥಹಳ್ಳಿ ಮಾರಿಕಾಂಬಾ ದೇವಾಲಯದ ಹಿಂಭಾಗ ಇರುವ ಕಚೇರಿಗೆ ಹೋಗಿ ಮಾಹಿತಿ ಪಡೆಯಬಹುದು.

ಸಂಪರ್ಕಿಸಿ: ಕರೆ: 6360349622( resume whatsapp )

Categories
ತೀರ್ಥಹಳ್ಳಿ

ಗೃಹ ಲಕ್ಷ್ಮಿ ಹಣ ತೆಗೆಯಲು ಹೋದ ಮಹಿಳೆ ಕಾಣೆಯಾಗಿದ್ದಾರೆ!

ಗೃಹ ಲಕ್ಷ್ಮಿ ಹಣ ತೆಗೆಯಲು ಹೋದ ಮಹಿಳೆ ಕಾಣೆಯಾಗಿದ್ದಾರೆ!
– ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆಯಿಂದ ನಾಪತ್ತೆ
– ನೋಡಿದವರು ಮಾಹಿತಿ ನೀಡಲು ಮನವಿ

NAMMUR EXPRESS NEWS
ತೀರ್ಥಹಳ್ಳಿ: ಗೃಹ ಲಕ್ಷ್ಮಿ ಹಣ ತೆಗೆಯಲು ಹೋಗುತ್ತೇನೆ ಎಂದು ಮನೆಯಿಂದ ಹೋದ ಮಹಿಳೆಯೊಬ್ಬಳು ಕಾಣೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿ ನಡೆದಿದೆ. ರಂಜದಕಟ್ಟೆಯ ಮುಳುಬಾಗಿಲು ಗ್ರಾಮದ ಪಾರ್ವತಿ (60) ಎಂಬುವವರು ಮಾನಸಿಕ ಅಸ್ವಸ್ಥರಾಗಿದ್ದು ಹಾಗೂ ಅಂಗವಿಕಲೆಯಾಗಿದ್ದು, ಕಳೆದ ಮಂಗಳವಾರ ಮನೆಯಿಂದ ನಡೆದುಕೊಂಡು ಹೋದವರು ಕಾಣೆಯಾಗಿದ್ದಾರೆ. ಈಗಾಗಲೇ ಎಲ್ಲಾ ಕಡೆ ಕುಟುಂಬಸ್ಥರು ಹುಡುಕಿದ್ದಾರೆ. ಎಲ್ಲಿಯೂ ಅವರ ಸುಳಿವು ಸಿಕ್ಕಿಲ್ಲ. ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರು ಕಂಡುಬಂದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.

ಮಾಹಿತಿ ನೀಡಬೇಕಾದ ಕುಟುಂಬದವರ ಮೊಬೈಲ್ ಸಂಖ್ಯೆ:

9686610457
9980396284
9663862653


Categories
ರಾಜ್ಯ

ಅರ್ಧಕ್ಕೆ ಕುಸಿದ ಚಿಕನ್ ದರ..!

ಅರ್ಧಕ್ಕೆ ಕುಸಿದ ಚಿಕನ್ ದರ..!
– ಶಬರಿಮಲೆ ಸೀಸನ್ ಹಿನ್ನೆಲೆ ಚಿಕನ್ ಬೇಡಿಕೆ ಕುಸಿತ
– ಸಂಕಷ್ಟದಲ್ಲಿ ವ್ಯಾಪಾರಿಗಳು: ಎಷ್ಟಿದೆ ದರ..?

NAMMUR EXPRESS NEWS
ಶಬರಿಮಲೆ ಸೀಸನ್ ಆರಂಭವಾದ ಹಿನ್ನೆಲೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿದೆ. ಒಮ್ಮೆಲೇ ಅರ್ಧಕ್ಕೆ ಕುಸಿದ ಚಿಕನ್ ದರದಿಂದ ವ್ಯಾಪಾರಿಗಳು ಕಂಗಲಾಗಿದ್ದಾರೆ. ಈ ತನಕ ಕೆಜಿಗೆ 130 ರೂ.ವರೆಗೆ ಇದ್ದ ಬಾಯ್ಲರ್ ಚಿಕನ್ ಏಕಾಏಕಿ 80 ರೂ.ಗೆ ಕುಸಿದಿದೆ. ಶಬರಿಮಲೆ ಸೀಸನ್ ಆರಂಭವಾದ ಬಳಿಕ ಏಕಾಏಕಿ ಚಿಕನ್ ಬೇಡಿಕೆ ಕುಸಿದಿದೆ ಎನ್ನುತ್ತಾರೆ ವ್ಯಾಪಾರಿಗಳು. ಸಂಕಷ್ಟದಲ್ಲಿ ರೈತರು: ಕೋಳಿ ದರ ಕುಸಿತದಿಂದ ವ್ಯಾಪಾರಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಸೀಸನ್ನಲ್ಲಿ 160 ರೂ.ವರೆಗೆ ಇದ್ದ ಕೋಳಿ ಮಾಂಸದ ದರ 80 ರೂ.ಗೆ ಇಳಿದಿದೆ. ಆದರೆ ಪ್ರಸ್ತುತ ಕೋಳಿ ಉತ್ಪಾದನಾ ವೆಚ್ಚ ಕೆಜಿಗೆ 105 ರೂ.ಗಳಾಗಿದ್ದರೆ, ಚಿಲ್ಲರೆ ದರ ಹಲವೆಡೆ 80ರಿಂದ 90 ರೂ. ಇದೆ. ಆದರೆ ರೈತನಿಗೆ ಕೇವಲ 58ರಿಂದ 60 ರೂ. ಮಾತ್ರ ಸಿಗುತ್ತದೆ. ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಇದರ ಲಾಭ ಪಡೆಯುತ್ತಿದ್ದಾರೆ.

ಮಧ್ಯವರ್ತಿಗಳು ಕೆಜಿಗೆ 10ರಿಂದ 12 ರೂ., ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 20ರಿಂದ 25 ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಆದರೆ ಕೋಳಿ ಸಾಕಣೆಗೆ ಭಾರೀ ವೆಚ್ಚ ತಗಲುತ್ತಿದೆ. 40 ದಿನಗಳ ಕಾಲ ಕೋಳಿಗೆ ಆಹಾರಕ್ಕಾಗಿ ಅದರ ಕೆಲಸಕ್ಕಾಗಿ ಅಧಿಕ ವೆಚ್ಚ ತಗಲುತ್ತಿದೆ. ಮುಂಬರುವ ದಿನಗಳಲ್ಲಿ ಕ್ರಿಸ್ಮಸ್, ಹೊಸ ವರ್ಷಗಳ ಆಚರಣೆಯಿಂದ ಮತ್ತೆ ವ್ಯಾಪಾರ ಸುಧಾರಿಸುತ್ತದೆ ಎಂಬ ಭರವಸೆಯಲ್ಲಿ‌ ವ್ಯಾಪಾರಿಗಳಿದ್ದಾರೆ.