Categories
ರಾಜ್ಯ ಶಿವಮೊಗ್ಗ

ಟಾಪ್ ನ್ಯೂಸ್ ಕರ್ನಾಟಕ 30-12-2023

ಪಾಳುಬಿದ್ದ ಮನೆಯಲ್ಲಿ ಐದು ನಿಗೂಢ ಅಸ್ಥಿಪಂಜರ ಪತ್ತೆ!
-ಚಿತ್ರದುರ್ಗದಲ್ಲಿ ಏನಿದು ನಿಗೂಢ ರಹಸ್ಯ !!?
– ಅಂತರ್ ಜಾತಿ ವಿವಾಹ ಊರಿನವರ ಬಹಿಷ್ಕಾರ!
– ಕಾಲು ಜಾರಿ ಕಟ್ಟೆ ಇಲ್ಲದ ಬಾವಿಗೆ ಬಿದ್ದ ವ್ಯಕ್ತಿ!
– ಮನೆ ಹಿತ್ತಲಲ್ಲಿ ಗಾಂಜಾ ಕೃಷಿ: ಮಾಲು ಸಮೇತ ಅರೆಸ್ಟ್!
– ಉಳ್ಳಾಲದಲ್ಲಿ ಚಿಕ್ಕಮಗಳೂರಿನ ಮೂವರು ನೀರು ಪಾಲು!

NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್​ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿವೆ. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ. ಈ ವಿಚಾರವಾಗಿ ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿದ್ದು, ಈ ಮನೆಯಲ್ಲಿ ಇವರ ಸಂಬಂಧಿ ನಿವೃತ್ತ ಇಂಜಿನಿಯರ್ ಆಗಿದ್ದ ಜಗನ್ನಾಥರೆಡ್ಡಿ,(80) ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ.

ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ನಾವು ಕಂಡಿಲ್ಲ. ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ. ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಕೊಲೆಯಾಗಿದ್ದಾರೆಯೇ? ಎಂಬುವುದರ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಸಧ್ಯ ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಲು ತೀರ್ಮಾನಿಸಲಾಗಿದೆ. ಪೊಲೀಸರ ಸೂಕ್ತ ತನಿಖೆ ಬಳಿಕವಷ್ಟೇ ಐದು ಅಸ್ಥಿಪಂಜರಗಳ ಹಿನ್ನೆಲೆ ಗೊತ್ತಾಗಲಿದೆ. ಈ ಬಗ್ಗೆ ಡಿವೈಎಸ್‌ಪಿ ಪಿ.ಅನಿಲ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ.

ಉಳ್ಳಾಲದಲ್ಲಿ ಮೂವರು ನೀರು ಪಾಲು!

ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಆಟವಾಡಲು ಹೋದ ಮೂವರು ಸಮುದ್ರದ ಪಾಲಾಗಿದ್ದಾರೆ. ಉಳ್ಳಾಲ ದರ್ಗಾದ ಸಂದರ್ಶನಕ್ಕೆ ಬಂದ ಮೂವರು ಸಂದರ್ಶನದ ನಂತರ ಸಮುದ್ರಕ್ಕೆ ತೆರಳಿದ್ದಾರೆ. ಅಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ಸಿಲುಕಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಇವರು ಬಷೀರ್(23), ಸಲ್ಮಾನ್(19), ಸೈಫ್ ಆಲಿ(27) ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ಇವರು ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾಗ ತಕ್ಷಣವೇ ಹತ್ತಿರದಲ್ಲಿದ್ದ ಮೊಗವೀರ ಜೀವರಕ್ಷಕ ಸದಸ್ಯರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಸಲ್ಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಶೀರ್ ಸಮುದ್ರದಲ್ಲಿ ಇನ್ನೂ ಪತ್ತೆಯಾಗಿಲ್ಲ. ಸಧ್ಯ ಸೈಫ್ ಆಲಿ ಚಿಕಿತ್ಸೆ ಪಡೆಯುತ್ತಿದ್ದು ಉಳ್ಳಾಲ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂತರ್ ಜಾತಿ ವಿವಾಹ ಊರಿನವರ ಬಹಿಷ್ಕಾರ!

ಶಿವಮೊಗ್ಗ: ಜಿಲ್ಲೆ ಚೋರಡಿಯ ಹೊರಬೈಲ್​ನಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಪರಿಶಿಷ್ಟ ವರ್ಗದ ಯುವತಿಯನ್ನ ಮದುವೆಯಾಗಿದ್ದ ಸಮುದಾಯವೊಂದು ಬಹಿಷ್ಕಾರ ಹಾಕಿದೆ. ಜೋಗಿ ಸಮುದಾಯದ ಯುವಕ ಹಾಗೂ ಪರಿಶಿಷ್ಟ ಜಾತಿಯ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯಾಗಿ ಆರಂಭದಲ್ಲಿ ಯುವತಿಯನ್ನ ಕುಟುಂಬಸ್ಥರು ಯಾವುದೇ ಸಮಸ್ಯೆ ಇಲ್ಲದೆ ಮನೆ ಸೇರಿಸಿಕೊಂಡಿದ್ದರು. ಆದರೆ ಊರಿನವರು, ಪ್ರೀತಿಸಿ ಮದುವೆಯಾದ ಯುವಕ ಯುವತಿ ಹಾಗೂ ಅವರ ಪರಿವಾರವನ್ನು ನಾಲ್ಕು ತಿಂಗಳಿನಿಂದ ದೂರವಿಟ್ಟಿದ್ದಾರೆ.

30 ಮನೆಗಳು ಸೇರಿ ಸಭೆಯೊಂದನ್ನು ಕರೆದು ಸಂತ್ರಸ್ತ ಕುಟುಂಬದವರನ್ನ ಹಾಗೂ ಅವರಿಗೆ ಹೆಗಲು ಕೊಟ್ಟಿರುವ ಕುಟುಂಬದ ಸಂಬಂಧಿಕರನ್ನ ಮಾತನಾಡಿಸಬಾರದು. ಹಾಗೆ ಮಾತನಾಡಿಸಿದರೆ 1000 ರೂಪಾಯಿ ದಂಡ ಹಾಕುವುದು ಮತ್ತು ಕುಟುಂಬಸ್ಥರನ್ನ ಮಾತನಾಡಿಸಿದವರ ಬಗ್ಗೆ ಮಾಹಿತಿ ಕೊಟ್ಟರೆ ಐನೂರು ರೂಪಾಯಿ ಬಹುಮಾನ ಕೊಡುವುದು ಎಂದು ಮೀಟಿಂಗ್​ನಲ್ಲಿ ತೀರ್ಮಾನಿಸಿದ್ದಾರೆ. ಕೆಲಸಕ್ಕೂ ಕರೆಯದ, ಮನೆಗೂ ಬಾರದ, ಊರು ಮನೆಯಲ್ಲಿ ಬದುಕುವುದು ಕಷ್ಟವಾಗತೊಡಗಿದಾಗ ಇಡೀ ಕುಟುಂಬಸ್ಥರು ಖಿನ್ನತೆಗೆ ಜಾರಿದ್ದಾರೆ.

ಒಂದೂರಿನ ಜನರನ್ನ ಎದುರುಹಾಕಿಕೊಂಡು ಬದುಕುವುದು ಹೇಗೆ ಎಂದು ಅರಿಯದೇ ಇದ್ದಾಗ ಯುವಕ ಯುವತಿ ನೆರವಿನ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಮೇರೆಗೆ ಜಿಲ್ಲಾಡಳಿತ ತಹಸೀಲ್ದಾರ್, ಡಿವೈಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ಹೊರಬೈಲ್​ಗೆ ಕಳುಹಿಸಿತ್ತು. ಇದೀಗ ಊರಿನ ಜನರ ಸಭೆ ಸೇರಿಸಿ ಕಾನೂನಿನ ಅಸ್ತ್ರವನ್ನು ಮುಂದಿಟ್ಟಿದ್ದಾರೆ. ಸದ್ಯದಲ್ಲಿ ಹೊರಬೈಲ್​ನಲ್ಲಿ ಮನೆದೇವರ ಹಬ್ಬವಿದೆ. ಆ ಹಬ್ಬದಲ್ಲಿ ಸಾಮೂಹಿಕ ಪೂಜೆ ನಡೆಯುತ್ತದೆ. ಸಮುದಾಯದ ಹಬ್ಬದಲ್ಲಿ ಸಂತ್ರಸ್ತ ಕುಟುಂಬವೂ ಪಾಲ್ಗೊಳ್ಳಬೇಕಿದೆ. ಹಾಗೆ ಆದಲ್ಲಿ ಕಾನೂನಿನ ಹೋರಾಟಕ್ಕೆ ಸಾರ್ಥಕತೆ ಸಿಗಲಿದೆ.

ತೋಟದ ಕೆಲಸದ ಸಮಯ ಕಾಲು ಜಾರಿ ಕಟ್ಟೆ ಇಲ್ಲದ ಬಾವಿಗೆ ಬಿದ್ದ ವ್ಯಕ್ತಿ!

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನೀಚಡಿಯಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದ ಪರಿಣಾಮ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ತೋಟದ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 55 ವರ್ಷದ ಬಂಗಾರಪ್ಪನವರು ಕಾಲು ಜಾರಿ ಆಯ ತಪ್ಪಿ ಸೀದಾ ಕಟ್ಟೆ ಇಲ್ಲದ ಬಾವಿಗೆ ಬಿದ್ದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಅಲ್ಲಿಗೆ ಬಂದಿದ್ದಾರೆ. ಮೃತರನ್ನು ಜಿಗಳೆ ಮನೆಯ ಬಂಗಾರಪ್ಪ ಎಂದು ಗುರುತಿಸಲಾಗಿದ್ದು, ಆನಂತರ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಪ್ರಕರಣ ಆನಂದಪುರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ.

ಮನೆ ಹಿತ್ತಲಲ್ಲಿ ಗಾಂಜಾ ಕೃಷಿ: ಮಾಲು ಸಮೇತ ಅರೆಸ್ಟ್!

ಶಿವಮೊಗ್ಗ : ಈ ನಡುವೆ ಗಾಂಜಾ ಪ್ರಕರಣಗಳು ಹೆಚ್ಚುತ್ತಿದ್ದು ಎಷ್ಟು ಬ್ರೇಕ್ ಹಾಕಿದರೂ ನಿಲ್ಲದಂತಾಗಿವೆ. ಇದೀಗ ಮಾದಕ ವಸ್ತುಗಳನ್ನು ರೋಡ್ ಸೈಡ್ ಮಾರಾಟ ಮಾಡುವಷ್ಟು ಮುಂದುವರೆದಿದ್ದಾರೆ. ಪೊಲೀಸರು ಜಪ್ತು ಮಾಡಿ ರೋಡ್​ ಸೈಡ್​ನಲ್ಲಿ ಮಾರಾಟ ಮಾಡುವ ಆರೋಪಿಗಳನ್ನ ಅರೆಸ್ಟ್ ಮಾಡುತ್ತಿದ್ದಾರೆ. ಈ ವಾರದಲ್ಲಿಯೇ ತುಂಗಾನಗರ ಪೊಲೀಸರು ಎರಡು ಕೇಸ್ ಹಿಡಿದಿದ್ದಾರೆ. ಈ ಹಿಂದೇ ಶಿವಮೊಗ್ಗದಲ್ಲಿ ಎಸ್​ಪಿ ಲಕ್ಷ್ಮೀಪ್ರಸಾದ್​ ಜಿಲ್ಲೆಗೆ ಬರುತ್ತಿದ್ದ ಲೋಡ್​ ಗಟ್ಟಲೇ ಗಾಂಜಾ ಮಾಲನ್ನ ಸೀಜ್​ ಮಾಡಿದ್ದರು. ಅವರ ನಂತರ ಬಂದ ಎಸ್​ಪಿ ಮಿಥುನ್ ಕುಮಾರ್​ ಕೂಡ ಮಾದಕವಸ್ತುಗಳ ವಿಚಾರದಲ್ಲಿ ಜಿರೋ ಟಾಲರೆನ್ಸ್ ಎಂದಿದ್ದಾರೆ.

ಮರಾಠಿ ಕ್ಯಾಂಪ್​ನ ಯುವಕನನ್ನ ಅರೆಸ್ಟ್​ ಮಾಡಿದ್ದ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಇದೀಗ ಮನೆ ಹಿತ್ತಲಲ್ಲಿ ಗಾಂಜಾ ಕೃಷಿ ಮಾಡ್ತಿದ್ದ ನಜ್ರತ್ ನನ್ನು ಅರೆಸ್ಟ್ ಮಾಡಿದ್ದಾರೆ. ಮಳಲಿಕೊಪ್ಪ ಗ್ರಾಮದ ವಾಸಿ ನಜರತ್ ತನ್ನ ಮನೆಯ ಹಿಂಬದಿ ಜಾಗದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನ ಬೆಳೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳ ತಂಡವು ಪರಿಶೀಲನೆ ನಡೆಸಿದೆ. ದಿನಾಂಕ 28-12-2023 ರಂದು ನಜರತ್ ಅಲಿಯಾಸ್ ನಜ್ರನನ್ನು ಅರೆಸ್ಟ್ ಮಾಡಿದ್ದು, ಅಂದಾಜು ಮೌಲ್ಯ 1,20,00/- ರೂ ಗಳ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ಜಪ್ತು ಮಾಡಿದ್ದಾರೆ. ಮಳಲಿಕೊಪ್ಪ ಗ್ರಾಮದ ನಿವಾಸಿ ನಜ್ರ ವಿರುದ್ಧ ಕಲಂ 8(ಬಿ), 20 (ಎ)(i), 25 NDPS ಕಾಯ್ದೆ ಅಡಿ ಕೇಸ್ ದಾಖಲಾಗಿದೆ.

Categories
ರಾಜ್ಯ

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ
– ಫೆಬ್ರುವರಿ 13 ರಿಂದ 28ರವರೆಗೆ ಪರೀಕ್ಷೆ
– ವಿಷಯವಾರು ಪರೀಕ್ಷೆ ವೇಳಾಪಟ್ಟಿ: ಯಾವತ್ತು ಯಾವ ಪರೀಕ್ಷೆ…?

NAMMUR EXPRESS NEWS
2023-24ನೇ ಸಾಲಿನ ಕರ್ನಾಟಕ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಬಿಡುಗಡೆ ಮಾಡಿದೆ. ಕರ್ನಾಟಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ 2024 ರ ಫೆಬ್ರುವರಿ 13ರಿಂದ 28ರವರೆಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ವಿಷಯವಾರು ವೇಳಾಪಟ್ಟಿಯನ್ನು ಮಂಡಲಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಚೆಕ್‌ ಮಾಡಬಹುದು.

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಷಯವಾರು ವೇಳಾಪಟ್ಟಿ 2024

* ಕನ್ನಡ : 13-02-2024
* ಅರೇಬಿಕ್ : 13-02-2024
* ಹಿಂದಿ : 14-02-2024
* ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ : 15-02-2024
* ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್‌ : 16-02-2024
* ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ : 17-02-2024
*ಇತಿಹಾಸ, ಭೌತಶಾಸ್ತ್ರ : 19-02-2024
*ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ : 20-02-2024
*ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ : 21-02-2024
*ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ : 22-02-2024
*ಗಣಿತ, ಶಿಕ್ಷಣ ಶಾಸ್ತ್ರ : 23-02-2024
*ಅರ್ಥಶಾಸ್ತ್ರ : 24-02-2024
*ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ : 26-02-2024
*ಇಂಗ್ಲಿಷ್ : 27-02-2024
*ಭೂಗೋಳಶಾಸ್ತ್ರ ಮತ್ತು ಜೀವಶಾಸ್ತ್ರ : 28-02-2024

ಪರೀಕ್ಷೆಗೆ ಸಿದ್ಧತೆ: ವಿದ್ಯಾರ್ಥಿಗಳೇ ಗುಡ್ ಲಕ್

ಕರ್ನಾಟಕ ರಾಜ್ಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಆರಂಭವಾಗಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದ್ದು, ಈ ಪರೀಕ್ಷೆ ಬರೆಯಲಿರುವವರು ಸಕಲ ಸಿದ್ಧತೆ ನಡೆಸಿಕೊಳ್ಳಿ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜನವರಿ 16 ರಿಂದ 30ರವರೆಗೆ ರಾಜ್ಯದಾದ್ಯಂತ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಆಯಾ ಕಾಲೇಜುಗಳಲ್ಲಿ ನಡೆಸಲಿದೆ. ಇದಕ್ಕೆ ಅಗತ್ಯ ಸೂಚನೆಯನ್ನು ಕೆಎಸ್‌ಇಎಬಿ ಜಿಲ್ಲಾ ಉಪನಿರ್ದೇಶಕರುಗಳಿಗೆ ನೀಡಿದೆ.

Categories
ಬೆಂಗಳೂರು ರಾಜ್ಯ

ಬೈಕ್ ಸವಾರರಿಗೆ ಶಾಕಿಂಗ್ ನ್ಯೂಸ್!

ಬೈಕ್ ಸವಾರರಿಗೆ ಶಾಕಿಂಗ್ ನ್ಯೂಸ್!
– ಹಿಂಬದಿ ಸವಾರ ಮೃತಪಟ್ಟರೆ ವಾಹನ ಮಾಲೀಕನಿಂದಲೇ ಪರಿಹಾರ
– ಹೈಕೋರ್ಟ್ ಮಹತ್ವದ ಆದೇಶ.. ಏನಿದು ಆದೇಶ?

NAMMUR EXPRESS NEWS
ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹಿಂಬದಿ ಸವಾರ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬೈಕಿನ ಹಿಂಬದಿ ಸವಾರನ ಸಾವಿಗೆ ಬೈಕ್ ಮಾಲೀಕನೇ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ. ಈ ಮೂಲಕ ಬೈಕ್ ಓಡಿಸುವವನ ನಿರ್ಲಕ್ಷ್ಯ ಮಾಡಿದರೆ ದಂಡ ಪಾವತಿಸಬೇಕಾಗುತ್ತದೆ..!. ಹೌದು. ತುಮಕೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ವಿಮಾ ಸಂಸ್ಥೆಗೆ ಪರಿಹಾರ ಪಾವತಿಸಲು ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆಯಲ್ಲದೇ ನ್ಯಾಯಮಂಡಳಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಮೃತನ ಕುಟುಂಬದವರಿಗೆ ನೀಡುವಂತೆ ವಾಹನದ (ಹೀರೋ ಹೋಂಡಾ ಬೈಕ್) ಮಾಲೀಕ ನಿಜಾಮುದ್ದೀನ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನಲೆ ಏನು..?: 2011ರ ಮಾರ್ಚ್ 24ರಂದು ಮೃತ ಸಿದ್ದಿಕ್ ಉಲ್ಲಾಖಾನ್ ಎಂಬುವವರು ಕುಣಿಗಲ್ ಬಳಿ ನಿಜಾಮುದ್ದೀನ್ ಅವರ ಬೈಕ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದರು. ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಬೈಕ್ ಹಳ್ಳಕ್ಕೆ ಬಿದ್ದಿತ್ತು ಈ ವೇಳೆ ತೀವ್ರವಾಗಿ ಗಾಯಗೊಂಡ ಖಾನ್‌ ರನ್ನು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾರ್ಚ್ 26, 2011ರಂದು ಖಾನ್ ಮೃತಪಟ್ಟಿದ್ದರು. ನಂತರ ಖಾನ್ ಕುಟುಂಬ ಸದಸ್ಯರು ಪರಿಹಾರ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಖಾನ್ ಚಿಕಿತ್ಸೆ ಮತ್ತು ಇತರೆ ವೆಚ್ಚಗಳಿಗಾಗಿ 12 ಲಕ್ಷ ರೂ ಖರ್ಚು ಮಾಡಿದ್ದು ಈ ಒಟ್ಟು 15 ಲಕ್ಷ ರೂ.ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕುಣಿಗಲ್‌ ನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ 2017ರ ಆ.24ರಂದು ವಾರ್ಷಿಕ ಶೇ. 6 ಬಡ್ಡಿಯೊಂದಿಗೆ 7,27,114 ರೂ.ಗಳನ್ನು ಪರಿಹಾರ ನೀಡುವಂತೆ ವಿಮಾ ಸಂಸ್ಥೆ ಆದೇಶಿಸಿತ್ತು.

ಆದರೆ ಇದಕ್ಕೆ ಹೈಕೋರ್ಟ್ ತೀರ್ಪು ನೀಡಿದ್ದು, ವಾಹನದ ಆಸನದ ಸಾಮರ್ಥ್ಯವು 1+1ಆಗಿದ್ದು, ಅದರ ಆಧಾರದ ಮೇಲೆ ನ್ಯಾಯ ಮಂಡಳಿಯು ವಿಮಾ ಕಂಪನಿಯ ಮೇಲೆ ಪರಿಹಾರ ನೀಡುವ ಹೊಣೆ ಗಾರಿಕೆಯನ್ನು ನಿಗದಿಪಡಿಸಿದೆ. ನ್ಯಾಯಾಧೀಕರಣದ ಆದೇಶ ಸೂಕ್ತವಾಗಿಲ್ಲ ಎಂದು ತಿಳಿಸಿದೆಯಲ್ಲದೆ, ಪರಿಹಾರ ಪಾವತಿಸುವ ಹೊಣೆಯನ್ನು ಬೈಕ್ ಮಾಲೀಕನಿಗೆ ವರ್ಗಾಯಿಸಿ ಆದೇಶಿಸಿದೆ.

Categories
ಬೆಂಗಳೂರು

ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಸಂದ ಜಯ!

ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಸಂದ ಜಯ!
– ಅತಿಥಿ ಉಪನ್ಯಾಸಕರ ವೇತನ 5 ಸಾವಿರ ರೂ ಹೆಚ್ಚಳ
– ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆ

NAMMUR EXPRESS NEWS
ಬೆಂಗಳೂರು : ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಜಯ ಸಿಕ್ಕಿದೆ. ಅತಿಥಿ ಉಪನ್ಯಾಸಕರ ವೇತನ 5 ಸಾವಿರ ರೂ ಹೆಚ್ಚಳ ಮಾಡಲಾಗಿದೆ. ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆ ಮಾಡಲಾಗಿದೆ. ಡಿ. 29 ರಂದು ವಿಕಾಸ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದರು.

ಅತಿಥಿ ಉಪನ್ಯಾಸಕರ ಪ್ರತಿಭಟನೆ ಸಂಬಂಧ ಮಾತನಾಡಿದ ಸುಧಾಕರ್, ನಾವು ಅವರ ಸಮಸ್ಯೆಗಳನ್ನು ಆಲಿಸಿದ್ದೇವೆ. ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಖಾಯಂ ಅವರ ಪ್ರಮುಖ ಬೇಡಿಕೆ ಆಗಿದೆ. ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಸಹಾಯಕ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಪರಿಗಣಿಸುತ್ತೇವೆ. ಹೊಸದಾಗಿ ನೇಮಕಾತಿ ಸಂದರ್ಭದಲ್ಲಿ ಇವರಿಗೆ ಕೃಪಾಂಕ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ವರ್ಕ್‌ಲೋಡ್ ಬಗ್ಗೆಯೂ ಸೂಚನೆ ನೀಡಲಾಗಿದೆ. 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ಕೆಲಸ ಬಿಡುವಾಗ 5 ಲಕ್ಷ ನೀಡಲು ತೀರ್ಮಾನ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ನೀಡಲಾಗುವುದು. ಅತಿಥಿ ಉಪನ್ಯಾಸಕರ ವೇತನ 5 ಸಾವಿರ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಿಸಲು ನಿರ್ಧರಿಸಲಾಗಿದೆ. ಅತಿಥಿ ಉಪನ್ಯಾಸಕರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಅತಿಥಿ ಉಪನ್ಯಾಸಕರು ಮುಷ್ಕರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಮುಷ್ಕರದಿಂದ ತೊಂದರೆಯಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

Categories
ಮಂಗಳೂರು

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಪ್ರಕರಣ!

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಪ್ರಕರಣ!
– ಎಫ್ ಐ ಆರ್ ದಾಖಲು!

NAMMUR EXPRESS NEWS
ಮಂಗಳೂರು: ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟಿರುವುದಾಗಿ xonocikonoci10@beeble.com ಮೇಲ್ ಐಡಿಯಿಂದ ಡಿಸೆಂಬರ್ 26ರಂದು FUNING ಎಂಬ ಉಗ್ರಗಾಮಿ ಸಂಘಟನೆ ಎಂದು ಘೋಷಿಸಿಕೊಂಡು, ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಅದಾನಿ ಆಡಳಿತದ ಮಂಗಳೂರು ಏರ್ಪೋರ್ಟ್ ಸಂಸ್ಥೆ ಬಾಜ್ಪೆ ಠಾಣೆಗೆ ದೂರು ನೀಡಿತ್ತು. ಮಂಗಳೂರು ಏರ್​​ಪೋರ್ಟ್ ಆಡಳಿತ ಮಂಡಳಿ ಡಿಸೆಂಬರ್.27 ರಂದು ಇ-ಮೇಲ್ ಗಮನಿಸಿ ಅಲರ್ಟ್ ಆಗಿದ್ದು, ಭದ್ರತಾ ತಂಡ ಏರ್ಪೋರ್ಟ್ ನಲ್ಲಿ ತೀವ್ರ ತಪಾಸಣೆ ನಡೆಸಿತ್ತು.

ಅಲ್ಲದೇ ಸಿಐಎಸ್ಎಫ್ ಹಾಗೂ ಬಾಜ್ಪೆ ಪೊಲೀಸರು ಸಹ ತೀವ್ರ ಶೋಧ ನಡೆಸಿದ್ದರು. ಕೊನೆಗೆ ಇದೊಂದು ಹುಸಿ ಬಾಂಬ್ ಕರೆ ಎಂದು ಖಾತ್ರಿಯಾಗಿತ್ತು. ಬಳಿಕ ಮಂಗಳೂರು ವಿಮಾನ ನಿಲ್ದಾಣ ಆಡಳಿತ ಮಂಡಳಿ ಈ ಬಗ್ಗೆ ಬಾಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಇದೀಗ ನ್ಯಾಯಾಲಯದ ಅನುಮತಿಯಿಂದ ಐಪಿಸಿ 507 ಅಡಿ‌ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Categories
ತೀರ್ಥಹಳ್ಳಿ

ಪ್ರಕೃತಿಯ ಮಡಿಲಿನಲ್ಲಿ ಹೊಸ ವರ್ಷದ ಸಂಭ್ರಮ

ಪ್ರಕೃತಿಯ ಮಡಿಲಿನಲ್ಲಿ ಹೊಸ ವರ್ಷದ ಸಂಭ್ರಮ
– ಕುಂದಾದ್ರಿ ಮಿಸ್ಟ್ ಇನ್ : ನ್ಯೂ ಇಯರ್-2024
– ನೀವೂ ಬನ್ನಿ… ಹೊಸ ವರ್ಷ ಆಚರಿಸಿ..!

NAMMUR EXPRESS NEWS 
ಹೊಸ ವರ್ಷದ ಸಂಭ್ರಮಕ್ಕೆ ಇದೀಗ ದಿನಗಣನೆ ಆರಂಭವಾಗಿದೆ. ಇದೀಗ ತೀರ್ಥಹಳ್ಳಿಯ ಪ್ರಸಿದ್ಧ ಪ್ರವಾಸಿ ತಾಣ ಕುಂದಾದ್ರಿ ಸಮೀಪದ ಕುಂದಾದ್ರಿ ಮಿಸ್ಟ್ ಇನ್ ಅಲ್ಲಿ ಹೊಸ ವರ್ಷದ ಆಚರಣೆ ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು. ಡ್ರಿಂಕ್ಸ್/ಫುಡ್/ಎಂಟರ್ಟೈನ್ಮೆಂಟ್ ಜೊತೆಗೆ ಪ್ರಸಿದ್ಧ ಹಾಡುಗಾರರು, ಡಿಜೆ ಪ್ಲೇಯರ್ ಜೊತೆ ಹೊಸ ವರ್ಷದ ಸಂಭ್ರಮ ಅನುಭವಿಸಬಹುದಾಗಿದೆ. ಖ್ಯಾತ ಹಾಡುಗಾರರಾದ ವಿನಯ್, ನಿಧಿ ಸುರೇಶ್ ನ್ಯೂ ಇಯರ್ ವಿಶೇಷ ಸಾಂಗ್ ಮನರಂಜನೆ ನೀಡಲಿದೆ.

ದಿನಾಂಕ: ಡಿ.31 ಭಾನುವಾರ
ಸಮಯ: ಸಂಜೆ 7ರಿಂದ ರಾತ್ರಿ 12:30

1999/- Per 1 Person (Silver Entry)
4999/- per 3 persons (Gold Entry)
7999/- per 5 person (Daimond Entry)
15,999/- per 10 persons ( Platinum Entry)

ತಮ್ಮೆಲ್ಲರಿಗೂ ಸುಸ್ವಾಗತ, ಬುಕ್ಕಿಂಗ್ ತಕ್ಷಣ ಮಾಡಿರಿ

ಸ್ಥಳ: ಕುಂದಾದ್ರಿ ಮಿಸ್ಟ್ ಇನ್, ಕೆಂದಾಳ ಬೈಲು, ಕುಂದಾದ್ರಿ ಸಮೀಪ, ತೀರ್ಥಹಳ್ಳಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ

For enquiry and Booking :
9481652174
7019876081
9449805014

Categories
ರಾಷ್ಟ್ರೀಯ ವಾರ್ತೆ

ಕೈಯಲ್ಲಿ ಕೇಸರಿ ಧ್ವಜ, ಬಾಯಲ್ಲಿ ರಾಮ ನಾಮ..!

ಕೈಯಲ್ಲಿ ಕೇಸರಿ ಧ್ವಜ, ಬಾಯಲ್ಲಿ ರಾಮ ನಾಮ..!
– ಅಯೋಧ್ಯೆಗೆ ಹೊರಟ ಭಕ್ತೆ ಶಬನಂ ಶೇಖ್..!

NAMMUR EXPRESS NEWS
ಮನಸ್ಸಿನಿಂದ ದೇವರ ಹುಡುಕುವವನಿಗೆ ಜಾತಿ, ಧರ್ಮ ಅಡ್ಡಿಯಾಗದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದು ಇತಿಹಾಸಿದಲ್ಲೂ ರುಜುವಾತಾಗಿದೆ. ಈಗ ಮತ್ತೆ ಇಂತಹದ್ದೆ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲೇ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ರಾಮನ ಕಣ್ತುಂಬಿಕೊಳ್ಳಲು ಇಡೀ ಭಕ್ತ ಸಮೂಹ ತುದಿಗಾಲಲ್ಲಿ ನಿಂತಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಮುಂಬರುವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 22 ರಂದು ದೇವಾಲಯವನ್ನು ಅನಾವರಣಗೊಳಿಸಲಿದ್ದು, ಅದರ ಪವಿತ್ರ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಇರಿಸಲಾಗಿದೆ. ರಾಮಮಂದಿರ ಟ್ರಸ್ಟ್‌ನಿಂದ ಸಾವಿರಾರು ಗಣ್ಯರಿಗೆ ಆಹ್ವಾನ ಬಂದಿದ್ದು,

ಸಿದ್ಧತೆಗಳು ಭರದಿಂದ ಸಾಗಿವೆ. ಈ ಉತ್ಸಾಹದ ನಡುವೆ, ಮುಂಬೈನಿಂದ ಬಂದ ಮುಸ್ಲಿಂ ಯುವತಿ ಭಗವಾನ್ ರಾಮನ ದರ್ಶನಕ್ಕಾಗಿ ಹಂಬಲಿಸುತ್ತಾ ಅಯೋಧ್ಯೆಗೆ ಯಾತ್ರೆ ಆರಂಭಿಸಿರುವುದು ಭಾರೀ ಸದ್ದು ಮಾಡ್ತಿದೆ. ಇದು ಧರ್ಮಗಳ ಆಚೆಗಿನ ಭಕ್ತಿಯ ಸಾರವಾಗಿದೆ. ಆಕೆ ರಾಮನ ಭಕ್ತಿಯಾಗಿದ್ದು, ಬರೋಬ್ಬರಿ 1,425 ಕಿ.ಮೀ ದೂರ ಸಾಗಿ ರಾಮನ ದರ್ಶನ ಪಡೆಯಲು ಮುಂದಾಗಿದ್ದಾಳೆ. ರಾಮನ ಕಟ್ಟಾ ಭಕ್ತಿ ಮತ್ತು ಸ್ವಯಂ ಘೋಷಿತ ಸನಾತನಿ ಶಬನಂ ಶೇಖ್ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಶ್ರೀರಾಮನ ಬ್ಯಾನ‌ರ್ ಹಿಡಿದು ನೂರು ಕಿಲೋಮೀಟ‌ರ್ ದಾಟಿದ್ದಾರೆ. ದಾರಿಯುದ್ದಕ್ಕೂ ಶ್ರೀರಾಮನ ಭಕ್ತರೊಂದಿಗೆ ಆಕೆ ಮುಖಾಮುಖಿ ಮಾತುಕತೆ ಹಾಗೂ ದಾರಿಯುದ್ದಕ್ಕೂ ಆಕೆಯ ಜೈಶ್ರೀರಾಮ್ ಘೋಷಣೆಯ ವಿಡಿಯೋಗಳು ಈಗ ವೈರಲ್ ಆಗ್ತಿವೆ. ಈ ಎಲ್ಲಾ ವಿಡಿಯೋಗಳನ್ನು ಹಾಗೂ ಆಕೆ ಭೇಟಿಯಾದ ಭಕ್ತರ ಕುರಿತಾದ ವಿಚಾರಗಳನ್ನು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಆಕೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಕೇಳಿಬಂದಿದೆ.

Categories
ತೀರ್ಥಹಳ್ಳಿ

ಜಗದ ಕವಿ ಯುಗದ ಕವಿಗೆ ನಾಡ ನಮನ

ಜಗದ ಕವಿ ಯುಗದ ಕವಿಗೆ ನಾಡ ನಮನ
– ಕುಪ್ಪಳಿಯಲ್ಲಿ ಕುವೆಂಪು ಸಮಾಧಿಗೆ ಪೂಜೆ
– ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಂಭ್ರಮ
– ಕುವೆಂಪು ಪ್ರೇರಣೆಯಿಂದ ವರ್ಷಕ್ಕೆ 2 ಲಕ್ಷ ಪ್ರವಾಸಿಗರ ಭೇಟಿ!

NAMMUR EXPRESS NEWS
ತೀರ್ಥಹಳ್ಳಿ: ಜಗದ ಕವಿ ಯುಗದ ಕವಿ ಕುವೆಂಪು ಅವರ ಜನ್ಮ ದಿನವನ್ನು ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿ ಅವರ ಸಮಾಧಿಗೆ ನಮನ ಸಲ್ಲಿಸಲಾಯಿತು. ಕುವೆಂಪು ಸಮಾಧಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಲ್. ಶಂಕರ್, ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ನೆಫ್ರೋ ಯೂರೋಲಜಿ ಸ್ಥಾಪಕ ನಿರ್ದೇಶಕ ಡಾ.ಜಿ.ಕೆ. ವೆಂಕಟೇಶ್ ಸೇರಿದಂತೆ ಜಿಲ್ಲಾ ಆಡಳಿತ, ತಾಲೂಕು ಆಡಳಿತ, ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತದ ಪ್ರಮುಖರು ಹಾಜರಿದ್ದರು. ಬಳಿಕ ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿಗೆ ನಮನ ಸಲ್ಲಿಸಲಾಯಿತು.

ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ

ಪ್ರಶಸ್ತಿಗಳು ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡುತ್ತದೆ. ಆದರೆ ಶ್ರೇಷ್ಟವಾದ ಸಾಹಿತ್ಯ ಓದುಗರ ಮನಸ್ಸಿನಲ್ಲಿ ದೀರ್ಘವಾಗಿ ಉಳಿಯುವಂತೆ ಪ್ರಭಾವ ಬೀರುತ್ತದೆ ಎಂದು ಖ್ಯಾತ ಬಂಗಾಳಿ ಸಾಹಿತಿ ಶೀಷೇಂಧು ಮುಖ್ಯೋಪಾಧ್ಯಾಯ ಅಭಿಪ್ರಾಯ ವ್ಯಕ್ತಪಡಿಸಿದರು. ಕುಪ್ಪಳಿಯಲ್ಲಿ ಶುಕ್ರವಾರ ಕುವೆಂಪು 119ನೇ ಜನ್ಮದಿನೋತ್ಸವ ಅಂಗವಾಗಿ ನಡೆದ ವಿಶ್ವಮಾನದ ದಿನಾಚರಣೆಯಲ್ಲಿ “ಕುವೆಂಪು ರಾಷ್ಟ್ರೀಯ ಪುರಸ್ಕಾರ” ₹5 ಲಕ್ಷ ನಗದು ಬಹುಮಾನ ಸ್ವೀಕರಿಸಿ ಅವರು ಮಾತನಾಡಿದರು.

ವರ್ಷಕ್ಕೆ 2 ಲಕ್ಷ ಪ್ರವಾಸಿಗರ ಭೇಟಿಗೆ ಕುವೆಂಪು ಪ್ರೇರಣೆ

“ಕುವೆಂಪು ಅಭಿವ್ಯಕ್ತಿ ಸ್ವಾಂತ್ರಂತ್ರವನ್ನು ಗೌರವಿಸುತ್ತಿದ್ದರು. ರಾಜಕಾರಣಿ, ಪ್ರಧಾನಿ, ಸ್ವಾಮೀಜಿಗಳಿಗೂ ನಿಷ್ಠೂರವಾದಿಯಾಗಿ ಕಾಡಿದ್ದರು. ಸಾಸ್ಕೃತಿಕ ಮನಸ್ಸಿದ್ದರೆ ಏನು ಬೇಕಾದರು ಸಾಧ್ಯ ಎಂಬುದಕ್ಕೆ ಕುಪ್ಪಳಿ ಉದಾಹರಣೆಯಾಗಿದೆ. ವಾರ್ಷಿಕವಾಗಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎಲ್ಲರಿಗೂ ಸೌಕರ್ಯ ಒದಗಿಸುವ ಜವಾಬ್ದಾರಿ ಕಷ್ಟಸಾಧ್ಯ” ಎಂದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಸುಧಾಕರ್ ಲೋಕಂಡೆ, ದೇವಂಗಿ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ಕುಮಾರ್, ಸದಸ್ಯೆ ಹೆಚ್.ಸಿ. ಸರೋಜ ಇದ್ದರು.

ಬಂಗಾರಪ್ಪ ಅವರಿಂದ ಕುವೆಂಪು ಕನಸು ನನಸು

ಕುವೆಂಪು ಲೇಖನಗಳಲ್ಲಿ ಉಲ್ಲೇಖವಾದ ನಿಷ್ಟೂರ ವ್ಯಕ್ತಿತ್ವ ತದ್ರೂಪ ರಾಜಕಾರಣದಲ್ಲಿ ಎಸ್.ಬಂಗಾರಪ್ಪ ಅವರದ್ದಾಗಿತ್ತು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ವತಃ ಅವರೇ ಮನೆಗೆ ತೆರಳಿ ನೀಡಿದ್ದರು. ಕೊನೆಯ ದಿನಗಳಲ್ಲಿ ಕುವೆಂಪು ಅವರಿಗಿದ್ದ ಕುಪ್ಪಳಿ ನೋಡುವ ಆಸೆಯನ್ನು ತೀರಿಸಿದ್ದರು. ಎಲ್ಲರೂ ಇತಿಹಾಸದ ಪಾಲುದಾರರಾಗಬೇಕು. ಕುವೆಂಪು ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿ ನೆಲೆಸಿದ್ದಾರೆ.

– ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ಕುವೆಂಪು ವಿಚಾರಧಾರೆಗೆ ಸಾವು ಇಲ್ಲ

ಕುವೆಂಪು ವಿಚಾರಧಾರೆಗೆ ಸಾವು ಎಂಬುದಿಲ್ಲ. ವ್ಯಕ್ತಿತ್ವದ ಮೂಲಕವೇ ಚಿರಂಜೀವಿಯಾಗಿ ನಮ್ಮೊಂದಿಗೆ ಬದುಕಿದ್ದಾರೆ. ಮಲೆನಾಡಿನ ಅಗಾಧ ಪ್ರಕೃತಿಯನ್ನು ವರ್ಣಿಸುವ ದಿವ್ಯದೃಷ್ಟಿ ಅವರಿಗಿತ್ತು. ಕುವೆಂಪು ಹೆಸರಿನಲ್ಲಿರುವ ಜೈವಿಕ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಸಲ್ಲ. ಪೂರ್ಣ ಮೂಲಭೂತ ಸೌಲಭ್ಯ ಕಲ್ಪಿಸಿದರೆ ವಿಲಾಸಿ ಕೇಂದ್ರವಾಗಿ ಪರಿವರ್ತನೆ ಹೊಂದಲಿದೆ.

– ಆರಗ ಜ್ಞಾನೇಂದ್ರ, ಶಾಸಕ

Categories
ತೀರ್ಥಹಳ್ಳಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
– ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
– ಸರ್ವರನ್ನು ಸ್ವಾಗತಿಸಿದ ಸೊಸೈಟಿ ಆಡಳಿತ

NAMMUR EXPRESS NEWS
ತೀರ್ಥಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ 30-12-2023 ನೇ ಶನಿವಾರ ಬೆಳಗ್ಗೆ 10-30ಕ್ಕೆ ಯಡೂರು ಸಹಕಾರಿ ಸಂಘದ ಆವರಣದಲ್ಲಿ ನಡೆಯಲಿದೆ. ಶ್ರೀ ಗುತ್ತಿ ರೇಣುಕಾಂಬ ಸಭಾ ಭವನ, ಸುಳುಗೋಡಿನ ಯಡೂರಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಆರ್ ಎಂ ಮಂಜುನಾಥ ಗೌಡ, ಮಾಜಿ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್, ಬೆಂಗಳೂರು, ಅಧ್ಯಕ್ಷರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಿವಮೊಗ್ಗ, ಅವರ ಸಾರಥ್ಯದಲ್ಲಿ ಸಮಾರಂಭ ಉದ್ಘಾಟನೆಯಾಗಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶಶಾಂಕ್ ಕೊಳವಾಡಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಲಿದೆ.

ಶ್ರೀ ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ ಮಾನ್ಯ ವಿಧಾನಸಭಾ ಸದಸ್ಯರು, ತೀರ್ಥಹಳ್ಳಿ ಕ್ಷೇತ್ರ, ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂ. ಎಂ ಪರಮೇಶ್, ನಿರ್ದೇಶಕರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಿವಮೊಗ್ಗ, ಎನ್. ಸುಧೀರ್, ನಿರ್ದೇಶಕರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಜಿ. ವಾಸುದೇವ್, ಮುಖ್ಯ ಕಾರ್ಯನಿರ್ವಾಹಕರು ಡಿ. ಸಿ. ಸಿ ಬ್ಯಾಂಕ್, ಶಿವಮೊಗ್ಗ ಮತ್ತು ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಜಿಲ್ಲೆ, ಶೃತಿ ಶೇಷಾದ್ರಿ,ಅಧ್ಯಕ್ಷರು ಗ್ರಾಮ ಪಂಚಾಯಿತಿ ಸುಳುಗೋಡು,ಹೆಚ್ ಡಿ ಜಯಪ್ರಕಾಶ್, ಅಧ್ಯಕ್ಷರು ಗ್ರಾಮ ಪಂಚಾಯಿತಿ ಯಡೂರು, ಕೆ. ಬಿ. ಕೃಷ್ಣಮೂರ್ತಿ,ಅಧ್ಯಕ್ಷರು ಗ್ರಾಮ ಪಂಚಾಯಿತಿ, ಖೈರುಗುಂದ ಮಾಸ್ತಿಕಟ್ಟೆ, ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಶಶಾಂಕ್ ಕೊಳವಾಡಿ ಅಧ್ಯಕ್ಷರು,
ನಾಗೇಶ್ ಗೌಡ ಹಿರೇಬೈಲು ಉಪಾಧ್ಯಕ್ಷರು,
ಮಂಜುನಾಥ ಹೊಸಗದ್ದೆ ನಿರ್ದೇಶಕರು,
ಟೀಕಪ್ಪ ಗೌಡ ಹುಮ್ಮಡಗಲ್ಲು ನಿರ್ದೇಶಕರು,
ಪುರುಷೋತ್ತಮ ಜಗನಕೊಪ್ಪ ನಿರ್ದೇಶಕರು,
ರಮೇಶ್ ಅಚ್ಚುಮನೆ ನಿರ್ದೇಶಕರು,
ಪ್ರಶಾಂತ ಹಂದಿಗೆಮನೆ ನಿರ್ದೇಶಕರು,
ವಿನೋದ ರಾಜಶೇಖರ ಗಿಣಿಕಲ್ಲು ನಿರ್ದೇಶಕರು,
ಸತ್ಯ ಪ್ರೇಮ ಯೋಗೇಂದ್ರ ಮೇಲಿನಬೈಸೆ ನಿರ್ದೇಶಕರು,
ಸರಸ್ವತಿ ರತ್ನಾಕರ್ ಕೊಳವಾಡಿ ನಿರ್ದೇಶಕರು,
ಯಶೋದ ಚಂದ್ರಶೇಖರ್ ಸುಳಗೋಡು ನಿರ್ದೇಶಕರು,

ಶಿವಕುಮಾರ್ ಎಸ್ ಕ್ಷೇತ್ರ ಅಧಿಕಾರಿಗಳು, ಡಿಸಿಸಿ ಬ್ಯಾಂಕ್ ಹೊಸನಗರ ಶಾಖೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ,

ಮಹೇಶ್ ಮಾಗಲು, ಮಾಜಿ ಅಧ್ಯಕ್ಷರು, ವೃತ್ತಿಪರ ನಿರ್ದೇಶಕರು,
ಮಹಮ್ಮದ್ ಶರೀಫ್ ಯಡೂರು ವೃತ್ತಿಪರ ನಿರ್ದೇಶಕರು.

ಸಂತೋಷ್ ಹೊಸಗದ್ದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶ್ರೀಮತಿ ಕೆ ಆರ್ ಚೇತನ, ನಗದು ಗುಮಾಸ್ತೆ, ವಿಜೇತ್ ಗೌಡ ಕೊಳೂರು, ಪಿಗ್ಮಿ ಸಂಗ್ರಾಹಕರು ಇರಲಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕರವೇ ಪ್ರತಿಭಟನೆ!

ತೀರ್ಥಹಳ್ಳಿ ಕರವೇ ಪ್ರತಿಭಟನೆ!
– ಕರವೇ ಅಧ್ಯಕ್ಷ ನಾರಾಯಣಗೌಡ ಬಿಡುಗಡೆಗೆ ಪಟ್ಟು!
– ತಹಶಿಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ಕರವೇ ಕಾರ್ಯಕರ್ತರು!

NAMMUR EXPRESS NEWS
ತೀರ್ಥಹಳ್ಳಿ: ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ಬಂಧನದ ವಿರುದ್ಧ ರಾಜ್ಯ ಸರ್ಕಾರ ಮತ್ತು ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಕ ರ ವೇ ಪ್ರತಿಭಟನೆ ಮಾಡಿದ್ದು, ಕೂಡಲೇ ನಾರಾಯಣ ಗೌಡರನ್ನು ಬಿಡುಗಡೆ ಮಾಡುವಂತೆ ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭವಾಗಿ 25 ವರ್ಷಗಳು ಆಗಿದೆ. ಈ 25 ವರ್ಷದಲ್ಲಿ ಕರವೇ ಸಾಕಷ್ಟು ನಾಡಿನ ಗಡಿ, ನೆಲ, ನುಡಿ, ಭಾಷೆಗಾಗಿ ನಾವು ಹೋರಾಟ ಮಾಡಿದ್ದು ಕೇಸುಗಳನ್ನು ಹಾಕಿಸಿಕೊಂಡಿದ್ದೇವೆ. ಆದರೆ ಈಗ ರಾಜ್ಯದಲ್ಲಿ ಆಂಗ್ಲ ನಾಮಫಲಕಕ್ಕಾಗಿ ಹೋರಾಟದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣಗೌಡರನ್ನು ಬಂಧಿಸುವುದು ಖಂಡನೀಯ! ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು, ರಾಜ್ಯ ಕರವೇ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗಡೆ ಅಕ್ರೋಶ ಹೊರಹಾಕಿದರು. ಅಧ್ಯಕ್ಷರ ಆರೋಗ್ಯವು ಸರಿ ಇಲ್ಲ. ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.

ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಪ್ರತಿಯೊಂದು ಅಂಗಡಿ ಮುಂಗಟ್ಟಿಗೆ ಹಾಗೂ ಮಾಲ್ ಗಳಲ್ಲಿ ಕನ್ನಡದ ನಾಮಪಲಕ ಬದಲು ಆಂಗ್ಲ ಹಾಗೂ ಇನ್ನಿತರ ಭಾಷೆ ನಾಮಫಲಕವನ್ನು ಹಾಕಲಾಗಿದೆ. ಹಾಗಾಗಿ ಕನ್ನಡವನ್ನು ಮೊದಲು ಬಳಸಬೇಕು. ಮೊದಲ ಆದ್ಯತೆ ಕನ್ನಡ ಭಾಷೆಗೆ ಇರಬೇಕು ಎಂಬ ಕಾರಣಕ್ಕೆ ಇಂತಹ ಹೋರಾಟವನ್ನು ಆರಂಭಿಸಿದ್ದೇವೆ. ಈ ಹೋರಾಟದಲ್ಲಿ ಗೆಲುವು ನಮ್ಮದಾಗಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಕರವೇ ತಾಲೂಕಿನ ಅಧ್ಯಕ್ಷರಾದ ಯಡಿಯೂರು ಸುರೇಂದ್ರ ಮಾತನಾಡಿ, ಆಂಗ್ಲ ಅಥವಾ ಬೇರೆ ಭಾಷೆಯನ್ನು ವಿರೋಧ ಮಾಡುತ್ತಿಲ್ಲ. ಅದರ ಬದಲು ಕನ್ನಡಕ್ಕೆ 60 % ಉಳಿದ ಭಾಷೆಗೆ 40% ಇರುವಂತೆ ನಾಮಫಲಕ ಹಾಕಬೇಕು. ಈ ಸುತ್ತೋಲೆ ಮೊದಲಿನಿಂದಲೂ ಇತ್ತು. ಆದರೆ ಯಾವ ಸರ್ಕಾರವು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ, ಮತ್ತೆ ಈಗಾಗಲೇ ಮುಖ್ಯಮಂತ್ರಿಗಳು ಕೂಡ ಆದೇಶ ನೀಡಿದ್ದಾರೆ. ಹಾಗಾಗಿ ತೀರ್ಥಹಳ್ಳಿಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಸೇರಿ ಈ ನಿಯಮ ಜಾರಿಗೆ ತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ದಿಲೀಪ್ ಮಾತನಾಡುತ್ತಾ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಕಡ್ಡಾಯ ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ಜನಜಾಗೃತಿ ಮೂಡಿಸುವ ರ್ಯಾಲಿಯಲ್ಲಿ ವಿನಾಕಾರಣ ಪೊಲೀಸರು ತಡೆಯೊಡ್ಡಿ ಕರವೇಯ ಸುಮಾರು 1000 ಜನರನ್ನು ಬಂಧಿಸಿ ಸೂಕ್ತ ಆಹಾರ ನೀಡದೆ ಮಧ್ಯರಾತ್ರಿಯವರೆಗೂ ಕೂಡಿಹಾಕಿ, ಮಧ್ಯರಾತ್ರಿ 2 ಗಂಟೆಗೆ ಬಲಾತ್ಕಾರವಾಗಿ ನಾರಾಯಣಗೌಡರನ್ನು ಬಂಧಿಸಿ ಕರೆದೊಯ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದನ್ನು ತೀರ್ಥಹಳ್ಳಿ ತಾಲ್ಲೂಕು ಕರವೇ ಖಂಡಿಸುತ್ತದೆ. ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಬಂಧನಕ್ಕೆ ಒಳಗಾದ ಕರವೇ ಕಾರ್ಯಕರ್ತರನ್ನು ಭಯೋತ್ಪಾದಕರ ರೀತಿ ನಡೆಸಿಕೊಂಡಿದ್ದಾರೆ. ಮಧ್ಯಾಹ್ನ ಬಂಧಿಸಿದ ನಮಗೆ ಊಟ ನೀರು ಕೊಡದೆ ಹಾಗೆಯೇ ಕೂರಿಸಿದರು. ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಇಂತಹ ಧೋರಣೆಯನ್ನು ಖಂಡಿಸುತ್ತೇವೆ ಎಂದರು.

ರಾಜ್ಯ ಸರ್ಕಾರಕ್ಕೆ ಮನವಿ ಏನು…?

ಗೃಹ ಸಚಿವರಲ್ಲಿ ನಮ್ಮ ಮನವಿ ಏನೆಂದರೆ, ಕರ್ನಾಟಕದಲ್ಲಿ ವ್ಯಾಪಾರ ಮತ್ತು ಇತರ ವ್ಯವಹಾರ ಮಾಡಲು ಹೊರರಾಜ್ಯದಿಂದ ಬರುವ ಅನ್ಯಭಾಷಿಕರಿಗೆ ಕನ್ನಡದ ಬಗ್ಗೆ ಇರುವ ಅಸಡ್ಡೆ ಮನೋಭಾವವನ್ನು ಈ ಹಿಂದಿನಿಂದಲೂ ಕರವೇ ವಿರೋಧಿಸಿಕೊಂಡು ಬಂದಿರುತ್ತದೆ. ಮೊನ್ನೆ ನಡೆದಿರುವ ಪ್ರತಿಭಟನೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ 60 % ಕನ್ನಡ ಮತ್ತು 40% ಇತರ ಭಾಷೆಗೆ ಮೀಸಲಿಟ್ಟು ಆದೇಶವನ್ನು ಜಾರಿಗೆ ತಂದಿರುತ್ತಾರೆ. ಆದರೆ ಅದನ್ನು ಬಹುತೇಕ ಜನರು ನಾಮಫಲಕದಲ್ಲಿ ಅಳವಡಿಸಿಕೊಳ್ಳದೇ ಇರುವುದರಿಂದ ಈ ವಿಚಾರವಾಗಿ ಸರ್ಕಾರಕ್ಕೆ ಕರವೇ ವತಿಯಿಂದ ಮನವಿ ಕೂಡ ಮಾಡಿರುತ್ತೇವೆ. ಆದರೂ ಪ್ರಯೋಜನವಾಗಿರುವುದಿಲ್ಲ. ಇದರಿಂದ ಕರ್ನಾಟಕದಲ್ಲಿ ಕನ್ನಡದ ಉಳಿವಿಗಾಗಿ ಕನ್ನಡಿಗರಿಂದಲೇ ಪ್ರಾರಂಭವಾದ ಕರವೇ ನೇತೃತ್ವದಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಮುಂದಾಳತ್ವದಲ್ಲಿ ಜನಜಾಗೃತಿ ಮೂಡಿಸಲು ಮುಂದಾದ ಸಂಧರ್ಭದಲ್ಲಿ ರಾಜ್ಯ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು, ಹೋರಾಟಗಾರರನ್ನು ಅಪರಾಧಿಗಳಂತೆ ಬಿಂಬಿಸಿ ಅನೇಕ ಕಿರುಕುಳವನ್ನು ಕೊಟ್ಟಿರುತ್ತಾರೆ. ಮತ್ತು ರಾತ್ರೋರಾತ್ರಿ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಮತ್ತು ಇತರರನ್ನು ಬಂಧಿಸಿರುತ್ತಾರೆ.

ಆದ್ದರಿಂದ ರಾಜ್ಯಾಧ್ಯಕ್ಷರನ್ನು ಮತ್ತು ಇತರರನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು, ತೀರ್ಥಹಳ್ಳಿ ತಾಲ್ಲೂಕು ಕರವೇ ಒತ್ತಾಯಿಸುತ್ತಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತರಹದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕರವೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗ್ಡೆ, ತಾಲೂಕು ಕರವೇ ಅಧ್ಯಕ್ಷ ಯಡೂರು ಸುರೇಂದ್ರ, ಶ್ರೀಕಾಂತ್ ಬೆಟ್ಟಮಕ್ಕಿ ಯುವ ಘಟಕದ ಅಧ್ಯಕ್ಷರು, ರವಿ ಎಸ್ ನಗರ ಘಟಕ ಅಧ್ಯಕ್ಷರು, ವಿಕ್ರಂ ಶೆಟ್ಟಿ ತಾಲೂಕು ಪ್ರಧಾನ ಕಾರ್ಯದರ್ಶಿ, ಹರ್ಷೇಂದ್ರ ಕುಮಾರ್ ಜಿಲ್ಲಾ ಸಂಚಾಲಕರು, ಜ್ಯೋತಿ ದಿಲೀಪ್ ಮಹಿಳಾ ಘಟಕದ ಅಧ್ಯಕ್ಷರು, ಸುರೇಶ್ ಟೈಲರ್, ಸುಧೀನ್ ಗೌಡ, ಚಂದ್ರು, ಕುಶಾವತಿ ಹಾಗೂ ಪ್ರಮುಖರು ಇದ್ದರು.