Categories
ರಾಷ್ಟ್ರೀಯ ವಾರ್ತೆ

ಅಂಚೆ ಇಲಾಖೆಯಲ್ಲಿ ನೇಮಕಾತಿ..!

ಅಂಚೆ ಇಲಾಖೆಯಲ್ಲಿ ನೇಮಕಾತಿ..!
– ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ
– ಅಧಿಸೂಚನೆ, ಖಾಲಿ ಹುದ್ದೆ, ಕೊನೆ ದಿನಾಂಕಗಳಿಗೆ ಇಲ್ಲಿದೆ ಮಾಹಿತಿ.

NAMMUR EXPRESS NEWS
ನವದೆಹಲಿ: ಭಾರತದಾದ್ಯಂತ ಅನೇಕ ರಾಜ್ಯಗಳಲ್ಲಿ ಭಾರತೀಯ ಅಂಚೆ ಇಲಾಖೆಯು ರಾಜ್ಯವಾರು ನೇಮಕಾತಿ 2024 ಪರೀಕ್ಷೆಗಳನ್ನು ನಡೆಸುತ್ತಿದೆ. ಖಾಲಿ ಹುದ್ದೆಗಳು ಮೇಲ್ ಗಾರ್ಡ್, ಎಮ್ಟಿಎಸ್ ಮತ್ತು ಪೋಸ್ಟ್‌ಮ್ಯಾನ್ ಆಗಿವೆ. ಇದರಿಂದ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ 10 ಮತ್ತು 12 ನೇ ಪದವೀಧರ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಆಫೀಸ್ ಎಮ್ಟಿಎಸ್, ಮೇಲ್ ಗಾರ್ಡ್ ಮತ್ತು ಪೋಸ್ಟ್‌ಮ್ಯಾನ್ ಅಧಿಸೂಚನೆ 2024 ಅನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಬಹುದಾಗಿದೆ. ಅಂಚೆ ಇಲಾಖೆಯಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಬಯಸುವ ಆಕಾಂಕ್ಷಿಗಳು ಈ ನೇಮಕಾತಿ ಡ್ರೈವ್‌ನಲ್ಲಿ ಭಾಗವಹಿಸಬಹುದು.

ಅಧಿಸೂಚನೆ ಪ್ರಕಾರ ಭಾರತೀಯ ಅಂಚೆ ಕಛೇರಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಫೆಬ್ರವರಿ 2024 ರವರೆಗೆ ಕಾಲಾವಕಾಶವಿದೆ. ನಿಖರವಾಗಿ ಅಪ್ಲಿಕೇಶನ್ ಸಲ್ಲಿಕೆ ಅಂತಿಮ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಅಧಿಸೂಚನೆಯ ಪಿಡಿಎಫ್‌ ಕೂಡ ಇನ್ನೂ ಪ್ರಕಟವಾಗಬೇಕಿದೆ. ಅಧಿಸೂಚನೆ ಪಿಡಿಎಫ್ ಅನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ನಂತರ, ಅಭ್ಯರ್ಥಿಗಳು ಮೊದಲು ತಮ್ಮ ಅರ್ಹತೆಯನ್ನು ಪೂರೈಸಲು, ಮಾರ್ಗಸೂಚಿಗಳಿಗೆ ಬದ್ಧರಾಗಿ ಮತ್ತು ನಂತರ ಅವರ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗುತ್ತದೆ. ಈ ಅಧಿಸೂಚನೆಯಲ್ಲಿ, ಒಟ್ಟಾರೆ 98,083 ಖಾಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಕಾಂಕ್ಷಿಗಳು ಆನ್‌ಲೈನ್‌ನಲ್ಲಿ ಸೈನ್ ಇನ್ ಮಾಡಬಹುದು, ಅದರಲ್ಲಿ ನಿಮ್ಮ ರೀತಿಯ ಉದ್ಯೋಗ ಆಯ್ಕೆಯನ್ನು ಖಚಿತಪಡಿಸಿಕೊಂಡು, ಪರೀಕ್ಷೆಗೆ ತಯಾರಾಗುವುದನ್ನು ಪ್ರಾರಂಭಿಸಬಹುದು.

ಭಾರತೀಯ ಅಂಚೆ ಕಚೇರಿ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟ್ : https://www.Indiapost.Gov.In/

ಭಾರತ ಪೋಸ್ಟ್ ಆಫೀಸ್ ಹುದ್ದೆಯ 2024 ಅರ್ಹತಾ ಮಾನದಂಡಗಳು:
ಪೋಸ್ಟ್ ಹೆಸರು ಇಂಡಿಯಾ ಪೋಸ್ಟ್ ಆಫೀಸ್ ಅರ್ಹತೆ 2024 ರ ವಯಸ್ಸಿನ ಮಿತಿ ಅಗತ್ಯವಿದೆ
MTS: 10ನೇ ತರಗತಿ ಪಾಸ್, ವಯೋಮಿತಿ: 18-32
ಮೇಲ್ ಗಾರ್ಡ್ 12ನೇ ತರಗತಿ ಪಾಸ್ ಮತ್ತು ವರ್ಷಗಳು ಕಂಪ್ಯೂಟ‌ರ್ ಜ್ಞಾನ,
ವಯೋಮಿತಿ: 18-32 ವರ್ಷಗಳು ಪೋಸ್ಟ್‌ಮ್ಯಾನ್ 10ನೇ ಅಥವಾ 12ನೇ ತರಗತಿ ಪಾಸ್,
ವಯೋಮಿತಿ: 18-32 ವರ್ಷಗಳು
ಡಾಕ್ಯುಮೆಂಟ್ ಪರಿಶೀಲನೆಯ ಅವಧಿಯವರೆಗೆ ನೀವು ಪ್ರತಿ ಡಾಕ್ಯುಮೆಂಟ್‌ನ ಸಾಫ್ಟ್ ಕಾಪಿ ಮತ್ತು ಹಾರ್ಡ್ ಕಾಪಿಯನ್ನು ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.

ಅಪ್ಲಿಕೇಶನ್ ಶುಲ್ಕ:

ಸಾಮಾನ್ಯ ವರ್ಗ ಮತ್ತು ಓಬಿಸಿ ಅಭ್ಯರ್ಥಿಗಳಿಗಾಗಿ ಅರ್ಜಿ ಶುಲ್ಕ 100 ರೂ
ಎಸ್ಸಿ/ಎಸ್ಟಿ ವರ್ಗದವರಿಗಾಗಿ ಶುಲ್ಕ ಶೂನ್ಯ

Categories
ರಾಷ್ಟ್ರೀಯ ವಾರ್ತೆ

ಕನ್ನಡದಲ್ಲೇ ಸಿಆರ್‌ಪಿಎಫ್ ಪರೀಕ್ಷೆ!

ಕನ್ನಡದಲ್ಲೇ ಸಿಆರ್‌ಪಿಎಫ್ ಪರೀಕ್ಷೆ!
– ಬ್ಯಾಂಕಿಂಗ್ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯಲಿ!
– ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ!

NAMMUR EXPRESS NEWS
ನವದೆಹಲಿ: ಸಿಆರ್‌ಪಿಎಫ್‌, ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಫೆ.20ರಿಂದ ನಡೆಯಲಿದ್ದು, ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ಕೇಂದ್ರ ಗೃಹ ಸಚಿವಾಲಯವು ಕಲ್ಪಿಸಿದೆ. ಕೇಂದ್ರ ಸಶಸ್ತ್ರ ಹಾಗೂ ಮೀಸಲು ಪಡೆಗಳ ನೇಮಕಾತಿಯನ್ನು ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೇ ಪ್ರಾದೇಶಿಕಗಳಲ್ಲೂ ನಡೆಸಲು ಕಳೆದ ವರ್ಷ ಏಪ್ರಿಲ್‌ನಲ್ಲಿ ಸರ್ಕಾರ ನಿರ್ಧರಿಸಿತ್ತು ಮತ್ತು ಅದನ್ನೀಗ ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಈ ನಿರ್ಧಾರವು ಸ್ವಾಗತಾರ್ಹವಾಗಿದೆ.

ಕನ್ನಡದ ಜತೆಗೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲೂ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ದೇಶಾದ್ಯಂತ 128 ನಗರಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ಮತ್ತು ಕೇಂದ್ರ ಸಶಸ್ತ್ರ ಹಾಗೂ ಮೀಸಲು ಪಡೆಯಲ್ಲಿ ಸ್ಥಳೀಯ ಯುವಕರು ಪಾಲ್ಗೊಳ್ಳುವುದನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರವು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಪ್ರಾದೇಶಿಕ ಭಾಷೆಗಳ ಮೇಲೆ ವಿಶೇಷವಾಗಿ ದಕ್ಷಿಣ ಭಾರತದ ಭಾಷೆಗಳ ಮೇಲೆ ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಹೇರುತ್ತಿದೆ ಎಂಬ ಆರೋಪವಿದೆ. ಆದರೆ, ಈ ಆರೋಪವನ್ನು ಹೋಗಲಾಡಿಸುವ ಪ್ರಯತ್ನಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒಂಚೂರು ಬೆಳವಣಿಗೆಯನ್ನು ಕಾಣುತ್ತಿದ್ದೇವೆ, ಆ ಮೂಲಕ ಪ್ರಾದೇಶಿಕ ಭಾಷೆಗಳಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತಿರುವುದು ಅಭಿನಂದನಾರ್ಹವಾಗಿದೆ.

ಸೇನಾ ಪರೀಕ್ಷೆಗಳಿಗೆ ದೈಹಿಕ ಪರೀಕ್ಷೆಯೇ ಪ್ರಧಾನ ಎಂಬುದು ನಿಜವಾದರೂ, ಇತ್ತೀಚೆಗೆ ಲಿಖಿತ ಪರೀಕ್ಷೆಗಳು ಕೂಡ ಅಭ್ಯರ್ಥಿಯ ಗುಣಮಟ್ಟವನ್ನು ಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರೀಯ ಸಶಸ್ತ್ರ ಹಾಗೂ ಮೀಸಲು ಪೊಲೀಸ್‌ ಪಡೆಗಳು ಹಿಂದಿ ಬಲ್ಲ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತದೆ ಎಂದೇನೂ ಇಲ್ಲ. ದೇಶದ ಎಲ್ಲ ಭಾಗಗಳಲ್ಲಿಯೂ ಕಾರ್ಯಾಚರಿಸುತ್ತವೆ. ಸ್ಥಳೀಯ ಭಾಷೆಗಳನ್ನು ಎಲ್ಲರೂ ಕಲಿಯುವುದು ಅಗತ್ಯವಾಗುತ್ತದೆ. ಆದ್ದರಿಂದ ಹಿಂದಿ ವಲಯದ ರಾಜ್ಯಗಳ ಸೈನಿಕರು ಕೂಡ ದಕ್ಷಿಣ ರಾಜ್ಯಗಳಲ್ಲಿ ನೇಮಕವಾದರೆ ಅಲ್ಲಿನ ಭಾಷೆಗಳನ್ನು ಕಲಿಯುವುದು ಅನಿವಾರ್ಯ. ಮಲ್ಟಿನ್ಯಾಷನಲ್‌ ಕಂಪನಿಗಳು ಕೂಡ ಇಂದು ಸ್ಥಳೀಯ ಭಾಷಿಕರನ್ನು ಒಲಿಸಿಕೊಳ್ಳಲು ಆಯಾ ಭಾಷೆಯಲ್ಲಿ ಹೆಚ್ಚಿನ ಆದ್ಯತೆಯ ವಹಿವಾಟನ್ನು ನಡೆಸುತ್ತಿವೆ. ಹೀಗೆ ಪ್ರಾದೇಶಿಕ ಭಾಷೆಗಳು ಕೂಡ ಇಂದು ವಿಶ್ವಾತ್ಮಕವಾಗುತ್ತಿವೆ. ಕನ್ನಡದಲ್ಲಿ ಪರೀಕ್ಷೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಸರಳ ಎನಿಸಿದರೂ, ಅದರ ಹಿಂದೆ ಸಾಕಷ್ಟು ಹೋರಾಟಗಳಿವೆ. ದಶಕಗಳ ಬೇಡಿಕೆಯ ಫಲವಿದು. 2011ಕ್ಕಿಂತ ಮೊದಲು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತಿದ್ದವು. ಆಗ ರೈಲ್ವೆ ಇಲಾಖೆಯಲ್ಲಿ ಹಿಂದಿ ಭಾಷಿಕರೇ ತುಂಬಿ ತುಳುಕುತ್ತಿದ್ದರು. ಇತ್ತೀಚೆಗೆ ಭಾರಿ ಹೋರಾಟದ ಬಳಿಕ ಕನ್ನಡದಲ್ಲೂ ರೈಲ್ವೆ ನೇಮಕಾತಿ ಪರೀಕ್ಷೆ ಲಭ್ಯವಾಗುವಂತಾಗಿದೆ.

ಇಷ್ಟಾಗಿಯೂ ಇನ್ನೂ ಅನೇಕ ಕೇಂದ್ರ ಸರ್ಕಾರಿ ವಲಯಗಳಲ್ಲಿ ಹಿಂದಿಯೇ ಯಜಮಾನಿಕೆಯ ಸ್ಥಾನದಲ್ಲಿದೆ. ಬ್ಯಾಂಕಿಂಗ್‌ ಪರೀಕ್ಷೆಗಳು, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಮುಂತಾದ ಕೇಂದ್ರ ಇಲಾಖೆಗಳು ನಡೆಸುವ ಪರೀಕ್ಷೆಗಳು ಕನ್ನಡದಲ್ಲಿ ಲಭ್ಯವಿಲ್ಲ. ಪರಿಣಾಮವಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಉತ್ತರ ಭಾರತೀಯರೇ ತುಂಬಿ ಹೋಗಿದ್ದರೆ, ಉತ್ತರ ಭಾರತದಲ್ಲಿ ದಕ್ಷಿಣ ಭಾರತೀಯರು ಹುಡುಕಿದರೂ ಕಾಣಸಿಗುವುದಿಲ್ಲ. ಕನ್ನಡಿಗರ ಪಾಲಿನ ಹುದ್ದೆಗಳನ್ನು ಇತರರು ದೋಚಲು ಇದು ಕಾರಣವಾಗಿದೆ. ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ನೀಡುವ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರ ನೇಮಕದ ಪ್ರಮಾಣ ತೀರಾ ಕಡಿಮೆ. ಇನ್ನು ಯು ಪಿ ಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಬಹುದು ಎಂಬ ಅವಕಾಶ ನೀಡಲಾಗಿದೆ; ಆದರೆ ಇಲ್ಲೂ ಪೂರ್ವಭಾವಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್‌ಲ್ಲಿಯೇ ಬರೆಯಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೂಡ ಗಮನ ಹರಿಸಿ ಈ ತಾರತಮ್ಯವನ್ನು ಆದಷ್ಟು ಬೇಗ ಸರಿಪಡಿಸಬೇಕು.

Categories
ಉಡುಪಿ

ಉಡುಪಿಯಲ್ಲಿ ನಡೆಯಲಿದೆ ಗ್ಯಾರಂಟಿ ಸಮಾವೇಶ!

ಉಡುಪಿಯಲ್ಲಿ ನಡೆಯಲಿದೆ ಗ್ಯಾರಂಟಿ ಸಮಾವೇಶ!
– ಫೆ12ರಿಂದ 21ರ ವರೆಗೆ ನಡೆಯಲಿರುವ ಸಮಾವೇಶ!
– ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಾದ್ಯಂತ ತಲುಪಿಸುವ ಕಾರ್ಯಕ್ರಮ

NAMMUR EXPRESS NEWS
ಉಡುಪಿ: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಜಿಲ್ಲೆಯ ಪ್ರತಿ ಅರ್ಹರಿಗೆ ಈ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯಾದ್ಯಂತ ಗ್ಯಾರಂಟಿ ಸಮಾವೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಫೆ.15 ರಂದು ಬ್ರಹ್ಮಾವರದ ನಾರಾಯಣ ಗುರು ಸಭಾ ಭವನ ಹಾಗೂ ಹೆಬ್ರಿಯ ಸಮಾಜ ಮಂದಿರ ಗ್ರಾಮ ಪಂಚಾಯತ್,
టి. 16 ರಂದು ಉಡುಪಿ ಡೌನ್ ಹಾಲ್,
ಫೆ. 17 ರಂದು ಕುಂದಾಪುರ ತಾಲೂಕು ಪಂಚಾಯತ್, ಕೋಟದ ಸಹಕಾರಿ ವ್ಯವಸಾಯಕ ಸಂಘ (ಸಿ.ಎ) ಬ್ಯಾಂಕ್ ಇದರ ಹಾಲ್ ನಲ್ಲಿ ಹಾಗೂ ಕಾರ್ಕಳದ ಮಂಜುನಾಥ ಪೈ ಹಾಲ್,
ಫೆ.19 ರಂದು ವಂಡ್ನಯ ಮಹಾತ್ಮ ಗಾಂಧಿ ಭವನ, ಅಜೆಕಾರುವಿನ ಮರ್ಣೆ ಗ್ರಾಮ ಪಂಚಾಯತ್ ಹಾಗೂ ಬೈಂದೂರು ಆಡಳಿತ ಸೌಧದ ಆವರಣ.
ಫೆ.21 ರಂದು ಕಾಪು ಆಡಳಿತ ಸೌಧದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

Categories
ರಾಷ್ಟ್ರೀಯ ವಾರ್ತೆ

45 ದಿನಕ್ಕೆ ಎರಡೂವರೆ ಲಕ್ಷ ದುಡಿಯುವ ಭಿಕ್ಷುಕಿ.!

45 ದಿನಕ್ಕೆ ಎರಡೂವರೆ ಲಕ್ಷ ದುಡಿಯುವ ಭಿಕ್ಷುಕಿ.!
– ಈಕೆ ಬಳಿಯಲ್ಲಿದೆ ಸ್ವಂತ ಮನೆ, ಕಾ‌ರ್, ಸ್ಮಾರ್ಟ್‌ಫೋನ್‌!
– ಭಿಕ್ಷುಕ ಮುಕ್ತ ನಗರ ಅಭಿಯಾನದಡಿ ಕ್ರಮ

NAMMUR EXPRESS NEWS
ಇಂದೋ‌ರ್:ಸಾಮಾನ್ಯವಾಗಿ ಭಿಕ್ಷುಕರು ಚಿಲ್ಲರೆ ಹಣದಲ್ಲಿ ಎಷ್ಟು ಪಡೆಯಬಹುದು? ಭಿಕ್ಷೆಯಿಂದ ಬರೋ ಹಣ ಅವರು ಹೊಟ್ಟೆ ತುಂಬಿಸಿಕೊಳ್ಳಲು ಸಾಕಾಗುತ್ತೋ ಇಲ್ಲವೋ ಅನ್ನೋ ಕಲ್ಪನೆ ಇರುತ್ತೆ. ಆದರೆ ಭಿಕ್ಷೆ ಬೇಡಿ ಒಂದು ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಅಂದರೆ ಬಾಯಿ ಮೇಲೆ ಬೆರಳಿಟ್ಟು ಅಚ್ಚರಿಯಾಗೋದು ಗ್ಯಾರಂಟಿ. ಇಂದೋರ್ ನಲ್ಲಿ ಭಿಕ್ಷಾಟನೆ ಮಾಡುವ ಮಹಿಳೆಯೊಬ್ಬರು ಕೇವಲ 45 ದಿನಗಳಿಗೆ 2.5 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ. ಭಿಕ್ಷಾಟನೆಯಲ್ಲಿ ಸಂಪಾದಿಸುವ ಹಣದಲ್ಲಿ ಸುಮಾರು 1 ಲಕ್ಷವನ್ನು ರಾಜಸ್ಥಾನದಲ್ಲಿರುವ ತಮ್ಮ ಇಬ್ಬರು ಮಕ್ಕಳಿಗೆ ಕಳುಹಿಸುತ್ತಾರೆ. ಉಳಿದ 1.5 ಲಕ್ಷದಲ್ಲಿ, 50,000ರೂ. ಸ್ಥಿರ ಠೇವಣಿ ಮಾಡುತ್ತಿದ್ದು, ಉಳಿದ 50,000 ರೂ. ಕುಟುಂಬಕ್ಕೆ ಖರ್ಚು ಮಾಡಲಾಗುತ್ತಿದೆ. ಈಕೆಯ ಕುಟುಂಬಸ್ಥರು ಸ್ವಂತ ಮನೆ, ಭೂಮಿ, ಕಾರು, ಸ್ಮಾರ್ಟ್‌ಫೋನ್‌ಗಳು ಎಲ್ಲಾ ಸೌಕರ್ಯಗಳು ಇಟ್ಟುಕೊಂಡಿದ್ದಾರೆ.

ತಿಂಗಳಿಗೆ ಎರಡೂವರೆ ಲಕ್ಷ ದುಡಿಯುವ ಮಹಿಳೆ:

ಬೀದಿಗಳಲ್ಲಿ ಸುತ್ತುತ್ತಾ ಭಿಕ್ಷುಕಿ ಒಂದೂವರೆ ತಿಂಗಳಿಗೆ 2.5 ಲಕ್ಷ ಸಂಪಾದಿಸುತ್ತಿದ್ದಾರೆ. ನಗರದ ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಸೂಚನೆ ಮೇರೆಗೆ ನಗರದಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಲಾಗಿತ್ತು. ಈ ವೇಳೆ 8 ವರ್ಷದ ಬಾಲಕಿಯ ವಿಚಾರಣೆ ವೇಳೆ ತಿಂಗಳಿಗೆ 2.5 ಲಕ್ಷ ಭಿಕ್ಷೆಯಲ್ಲಿ ದುಡಿಯುತ್ತಿರುವ ಈ ಮಹಿಳೆ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಮಾಹಿತಿ ಸಿಕ್ಕಿದೆ. ಅಧಿಕಾರಿಗಳ ತನಿಖೆಯಲ್ಲಿ ಈ ಕುಟುಂಬ ಭಿಕ್ಷಾಟನೆಯನ್ನೇ ಕಸುಬು ಮಾಡಿಕೊಂಡಿರೋದು ತಿಳಿದು ಬಂದಿದೆ. ಭಿಕ್ಷುಕಿಯ ಗಂಡ, ಮಕ್ಕಳು ಸಹ ಭಿಕ್ಷೆ ಬೇಡುತ್ತಿದ್ದಾರೆ. ದಂಪತಿಗೆ ಐವರು ಮಕ್ಕಳು: ಈ ಭಿಕ್ಷುಕ ದಂಪತಿಗೆ ಒಟ್ಟು ಐವರು ಮಕ್ಕಳಿದ್ದಾರೆ. ಮೂವರು ಮಕ್ಕಳು ಇಂದೋರ್-ಉಜ್ಜಯಿನಿ ರಸ್ತೆಯಲ್ಲಿರುವ ಬವರ್ಸಾಲಾ ಚೌಕ, ಲವ್ ಕುಶ್ ಚೌಕದಲ್ಲಿ ಭಿಕ್ಷೆ ಬೇಡುತ್ತಾರೆ. ಇನ್ನು ಎರಡು ಮಕ್ಕಳು ರಾಜಸ್ಥಾನದಲ್ಲಿ ತಾತನ ಜೊತೆ ಇದ್ದಾರೆಂದು ತಿಳಿದು ಬಂದಿದೆ.

ಒಂದೇ ವಾರದಲ್ಲಿ 19 ಸಾವಿರಕ್ಕೂ ಅಧಿಕ ಹಣ:

ಕೇವಲ ಒಂದೇ ವಾರದಲ್ಲಿ 19,200 ರೂಪಾಯಿ ಭಿಕ್ಷೆ ಬೇಡಿ ಸಂಪಾದಿಸಿರೋದಾಗಿ ತಿಳಿದು ಬಂದಿದೆ. ಹಾಗೇ ಹಬ್ಬಹರಿದಿನಗಳ ಸಂದರ್ಭದಲ್ಲಿ 50,000 ರೂ. ಸಂಪಾದಿಸುವುದಾಗಿ ಹೇಳಿದ್ದಾಳೆ. ಇನ್ನು ಈಕೆಯ ಮಗಳು ಬೆಳಗ್ಗೆಯಿಂದ ಮಧ್ಯಾಹ್ನ 1.30ರವರೆಗೂ ಭಿಕ್ಷೆ ಬೇಡಿ 600 ರೂ. ತಾಯಿಗೆ ನೀಡುತ್ತಾಳಂತೆ. ಭಿಕ್ಷುಕ ಮುಕ್ತ ನಗರ ಅಭಿಯಾನ: ಭಾರತದಲ್ಲಿ ಭಿಕ್ಷಾಟನೆ ಸಾಮಾನ್ಯ. ಸರ್ಕಾರ ಮೂಲಭೂತ ಸೌಕರ್ಯ ಒದಗಿಸಿ, ಭಿಕ್ಷುಕರ ಮುಕ್ತ ನಗರ ಮಾಡಲು ಪ್ರಯತ್ನಿಸುತ್ತಲೇ ಇದೆ. ಇಂದೋರ್‌ನ ಜಿಲ್ಲಾಡಳಿತ ತಂಡವು ಭಿಕ್ಷುಕ ಮುಕ್ತ ನಗರ ಅಭಿಯಾನದಡಿ ತಂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅವರಿಗೆ ಕೌನ್ಸೆಲಿಂಗ್‌ ನಡೆಸುತ್ತಿದೆ.

Categories
ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ

ಮಲೆನಾಡಲ್ಲೂ ಕಾಡ್ಗಿಚ್ಚು!

ಮಲೆನಾಡಲ್ಲೂ ಕಾಡ್ಗಿಚ್ಚು!
– ಬಿಸಿಲಿನ ಅಬ್ಬರ: ಈಗ ಕಾಡ್ಗಿಚ್ಚು ಹುಷಾರ್!
– ಮುಳ್ಳಯ್ಯನಗಿರಿ ತಪ್ಪಲಲ್ಲಿ 4 ಎಕರೆ ಹುಲ್ಲುಗಾವಲು ಭಸ್ಮ!
– ಕುಂಸಿಯಲ್ಲಿ ಮೂರು ಎಕರೆ ಅಡಿಕೆ ತೋಟ ಬೆಂಕಿ ಪಾಲು!

NAMMUR EXPRESS NEWS
ಚಿಕ್ಕಮಗಳೂರು/ ಶಿವಮೊಗ್ಗ: ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚುತ್ತಿದೆ. ಹೊರಗಡೆ ಓಡಾಡದಷ್ಟು ಬಿಸಿಲಿನ ಧಗೆ ಭಯಾನಕವಾಗಿದೆ. ಈ ನಡುವೆ ಎಲ್ಲೆಡೆ ಕಾಡ್ಗಿಚ್ಚು ಈಗ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿ ತಪ್ಪಲಲ್ಲಿರುವ ಚನ್ನಗೊಂಡನಹಳ್ಳಿ ಬಳಿ ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಹುಲ್ಲುಗಾವಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 4 ಎಕರೆಯಷ್ಟು ಹುಲ್ಲುಗಾವಲು ಬೆಂಕಿ ಕೆನ್ನಾಲಗೆಗೆ ಆಹುತಿಯಾಗಿದೆ.

ಇದರಿಂದಾಗಿ ಕೆಲಕಾಲ ಆತಂಕ ಮೂಡಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಮಾಹಿತಿ ಕೊಟ್ಟಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಫೈರ್‌ವಾಚರ್‌ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಂಜೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಚನ್ನಗೊಂಡನಹಳ್ಳಿ ಸುತ್ತಮುತ್ತ ಸುಮಾರು 4 ಎಕರೆಯಷ್ಟು ಹುಲ್ಲುಗಾವಲು ಬೆಂಕಿ ಕೆನ್ನಾಲಗೆಗೆ ಕರಕಲಾಗಿತ್ತು.

ಇದಕ್ಕೂ ಮೊದಲು, ಶನಿವಾರ, ಇಲ್ಲಿಗೆ ಸಮೀಪದ ಚುರ್ಚೆಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಸ್ಯ ಸಂಪತ್ತು ನಾಶವಾಗಿದೆ. ಅಲ್ಲಿನ ಬೆಂಕಿಯನ್ನು ಕೂಡ ನಂದಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಕಾಡಿಗೆ ಬೀಳುವ ಬೆಂಕಿ ನಿಯಂತ್ರ ಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಫೈರ್‌ವಾಚರ್, ಪ್ಲಾಂಟೇಷನ್‌ ವಾಚರ್‌ಗಳ ಕಣ್ಣಾವಲು ಇರಿಸಲಾಗಿದೆ ಎಂದು ಡಿಎಫ್‌ಒ ರಮೇಶ್‌ಬಾಬು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕುಂಸಿಯಲ್ಲೂ ಮೂರು ಎಕರೆ ತೋಟ ಬೆಂಕಿಗೆ ಆಹುತಿ ಆಗಿದೆ.

ಇದರಿಂದ ರೈತ ಕುಟುಂಬ ಕಂಗಾಲಾಗಿದೆ. ಕಳೆದ ವರ್ಷ ಸಕಲೇಶಪುರದಲ್ಲಿ ತೀರ್ಥಹಳ್ಳಿ ಮೂಲದ ಅರಣ್ಯ ಇಲಾಖೆ ಅಧಿಕಾರಿ ಕಾಡ್ಗಿಚ್ಚಿಗೆ ಬಲಿಯಾಗಿದ್ದರು. ಬೇಸಿಗೆಯಲ್ಲಿ ಸ್ವಲ್ಪ ಹುಷಾರು ತಪ್ಪಿದರೂ ಎಲ್ಲೆಂದರಲ್ಲಿ ಕಾಡ್ಗಿಚ್ಚು ಹರಡುವ ಸಂಭವ ಹೆಚ್ಚಾಗಿರುತ್ತದೆ. ಬೀಡಿ, ಸಿಗರೇಟಿನ ತುಂಡುಗಳನ್ನು ಆರಿಸದೆ ರಸ್ತೆಬದಿಯಲ್ಲಿ ಎಸೆದು ಬರುವ, ಸುಲಭವಾಗಿ ಕಿಡಿ ಹೊತ್ತಿಕೊಳ್ಳುವಂತಹ ವಸ್ತುಗಳನ್ನು ಪರಿಸರದಿಂದ ದೂರವಿಡುವ ಅವಶ್ಯಕತೆ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಜೊತೆ ಪ್ರತೀ ನಾಗರೀಕರು ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕು.

Categories
ಉಡುಪಿ ಕರಾವಳಿ ಕಾರ್ಕಳ ಮಂಗಳೂರು

ತುಳುನಾಡಿನ ವಿಷೇಶ ಪೂಜೆ ಕೆಡ್ಡಸ!

ತುಳುನಾಡಿನ ವಿಷೇಶ ಪೂಜೆ ಕೆಡ್ಡಸ!
– ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ!
– ಕೆಡ್ಡಸದ ಆಚರಣೆ ಹೇಗೆ? ವಿಶೇಷತೆ ಏನು? ಇಲ್ಲಿದೆ

NAMMUR EXPRESS NEWS
ಮಂಗಳೂರು: ತುಳುನಾಡು ಎಂದ ಕೂಡಲೇ ಅಲ್ಲಿನ ಆಚರಣೆ, ಸಂಪ್ರದಾಯ ಭಿನ್ನವಾಗಿರುತ್ತದೆ. ತುಳುವರು ಪ್ರಕೃತಿಯನ್ನು ಹೆಚ್ಚಾಗಿ ಆರಾಧನೆ ಮಾಡುತ್ತಾರೆ. ಮರ, ಕಲ್ಲು, ಎಲ್ಲದರಲ್ಲೂ ದೇವರನ್ನು ಕಾಣುವುದು ಇಲ್ಲಿನ ಜನರ ವಿಶೇಷ. ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಪೂಜಿಸುತ್ತಾರೆ. ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ. ಹೀಗೆ ಭೂಮಿತಾಯಿಯನ್ನು ಆರಾಧನೆ ಮಾಡುವ ಹಬ್ಬವನ್ನು ಕೆಡ್ಡಸ ಎಂದು ಕರೆಯುತ್ತಾರೆ.

ಆಚರಣೆ ಯಾವಾಗ..?

ಇದು ತುಳು ಮಾಸದ ಪೊನ್ನಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸಲಾಗುತ್ತದೆ. ಮೂರು ದಿನ ನಡೆಯುವ ಈ ಹಬ್ಬದ ಆಚರಣೆಯಲ್ಲಿ ಭೂಮಿ ತಾಯಿ ಮದುವೆ ಆಗಿ ಹೊರಹೋಗಿ ಪ್ರಕೃತಿಗೆ ಫಲ ಕೊಡುತ್ತಾಳೆ ಎಂಬುದು ನಂಬಿಕೆ. ಆ ನಂಬಿಕೆಯ ಪ್ರಕಾರ ಇಂದಿಗೂ ಆಚರಣೆ ನಡೆಯುತ್ತಿದೆ. ಈ ದಿನ ಭೂಮಿಗೆ ಗಾಯವಾಗುವಂತಹ ಹಾರೆ, ಪಿಕಾಸಿಯಂತಹ ವಸ್ತುಗಳಿಂದ ಕೆಲಸ ಮಾಡಬಾರದು. ಹಿಂದೊಮ್ಮೆ ಯಾರೋ ಈ ದಿನ ಭೂಮಿಯಲ್ಲಿ ರಕ್ತವನ್ನು ಕಂಡಿದ್ದರು ಎನ್ನುವ ಮಾತು ಇದೆ.

ಆದ್ದರಿಂದ ಯಾರೂ ಈ ದಿನ ಇಂತಹ ಕೆಲಸ ಮಾಡುವುದಿಲ್ಲ. ಮೂರನೇ ದಿವಸದಂದು ಮುಂಜಾನೆ ಅಂಗಳ ಗುಡಿಸಿ, ತುಳಸಿಕಟ್ಟೆಯ ಮುಂದೆ ಸಗಣಿ ಸಾರಿಸಿ, ಮಸಿ ತುಂಡು, ಸರೋಳಿ ಎಲೆ, ಮಾವಿನ ಎಲೆ, ತೆಂಗಿನಕಾಯಿ, ನನ್ನೆರಿ, ಬಾಳೆಹಣ್ಣು ಜೊತೆಗೆ ಕತ್ತಿ ಹಾಗೂ ಒಂದು ಚೊಂಬು ಇಟ್ಟು, ನೊರೆಕಾಯಿ, ಸೀಗೆಕಾಯಿ ಹಾಗೂ 5 ವೀಳ್ಯದೆಲೆ ಒಂದು ಅಡಿಕೆ, ಪೊರಕೆ ಇಡುವ ಕ್ರಮವಿದೆ. ಇದಾದ ನಂತರ ಮನೆಯ ಯಜಮಾನಿ ಒಂದು ಬೌಲ್‌ನಲ್ಲಿ ಸ್ವಲ್ಪ ಎಣ್ಣೆ ತಂದು ಭೂಮಿಗೆ ಬಿಟ್ಟು ಸಂಜೆಯವರೆಗೆ ಅದನ್ನು ಅಲ್ಲೇ ಬಿಡುವ ಕ್ರಮ ಹಿಂದಿನಿಂದಲೂ ಬಂದಿದೆ.

ಕೆಡ್ಡಸದ ವಿಶೇಷ ಏನು..?

ಕೆಡ್ಡಸದ ವಿಶೇಷ ಅಂದ್ರೆ ನನ್ನೆರಿ. ಕುಚ್ಚಲಕ್ಕಿಯನ್ನು ಹುರಿದು ಹುಡಿಮಾಡಿ, ತುರಿದ ತೆಂಗಿನಕಾಯಿ, ಬೆಲ್ಲ, ಮೆಂತೆ ಹಾಗೂ ತುಪ್ಪ ಮಿಶ್ರಣ ಮಾಡುವುದೇ ನನ್ನೆರಿ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಕೆಡ್ಡಸದ ನನ್ನೆರಿಯನ್ನು ವಾರಗಟ್ಟಲೆ ಇಟ್ಟು ಕೂಡ ತಿನ್ನಬಹುದು. ಈ ದಿನ ಮನೆಯಲ್ಲಿ ನುಗ್ಗೆ, ಬದನೆ ಸಾಂಬಾರು ಮಾಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ.

Categories
ಮಲ್ನಾಡ್

ಮಲೆನಾಡಿನಲ್ಲಿ ಅಡಿಕೆ ಕೋಯ್ಲಿಗೆ ತೆರೆ..!

ಮಲೆನಾಡಿನಲ್ಲಿ ಅಡಿಕೆ ಕೋಯ್ಲಿಗೆ ತೆರೆ..!
– ಎಲ್ಲೆಡೆ ಅಡಿಕೆ ಕೊಯ್ಲು ಬಹುತೇಕ ಮುಕ್ತಾಯ
– ಉತ್ತಮ ದರ: ಚಿನ್ನ, ವಾಹನ ಖರೀದಿಗೆ ಪ್ಲಾನ್

NAMMUR EXPRESS NEWS
ಮಲೆನಾಡು: ಮಲೆನಾಡಿನ ಹಳ್ಳಿಗಳಲ್ಲಿ ಅಡಿಕೆ ಕೊಯ್ಲು ಬಹುತೇಕ ಮುಕ್ತಾಯಗೊಳ್ಳುತ್ತಿದೆ. ಬಹುತೇಕ ಅಡಿಕೆ ಬೆಳೆಗಾರರ ಮನೆ ಅಂಗಳದಲ್ಲಿ ದೊಡ್ಡದೊಡ್ಡ ಅಟ್ಟ ನಿರ್ಮಿಸಿ ಅದರ ತುಂಬಾ ಅಡಿಕೆಯ ಹರವು ಕಂಡರೆ ಇನ್ನು ಮನೆ ಒಳಗೆ, ಹೆಂಚಿನ ಮಾಡಿನ ಮೇಲೆ ಎಲ್ಲೆಂದರಲ್ಲಿ ಅಡಿಕೆಯದೇ ದರ್ಬಾರು. 3 ತಿಂಗಳು ರೈತರು ಫುಲ್ ಬ್ಯುಸಿ. ಅಡಿಕೆ ಕೋಯ್ಲು ಬಳಿಕ ಮಲೆನಾಡಿನ ಜನರು ಕೆಲಸದಿಂದ ಸ್ವಲ್ಪ ಫ್ರೀ. ಈಗಾಗಲೇ ಎಲ್ಲಾ ಕಡೆ ಅಡಿಕೆ ಕೋಯ್ಲು ಮುಗಿದಿದೆ. ಅಡಿಕೆ ಮಂಡಿಗಳಿಗೆ ಸಾಗಿಸುವ ಕೆಲಸ ನಡೆಯುತ್ತಿದೆ. ಇನ್ನು ರೈತರು ಅಡಿಕೆ ಕೋಯ್ಲು ಮುಗಿಸಿ ವಾಹನ, ಚಿನ್ನ, ಜವಳಿ ಇತ್ಯಾದಿಗಳ ಖರೀದಿಸಲು ಮುಂದಾಗಿದ್ದಾರೆ. ಮಲೆನಾಡಿನಲ್ಲಿ ಈ ಸಮಯ ಬಹುತೇಕ ಖರೀದಿ ಸಮಯ. ಮನೆಗೆ ಬೇಕಾದ ವಸ್ತು ಖರೀದಿಗೆ ಪ್ಲಾನ್ ಮಾಡುವ ಸಮಯ. ಹೀಗಾಗಿ ಪಟ್ಟಣಗಳಲ್ಲಿ ಜನ ಹೆಚ್ಚಾಗಿ ಕಾಣ ಸಿಗುತ್ತಾರೆ.

Categories
ತೀರ್ಥಹಳ್ಳಿ

ಪ್ರವಾಸಿ ತಾಣದಂತಾಗುತ್ತಿದೆ ತೀರ್ಥಹಳ್ಳಿ ಹೊಸ ಸೇತುವೆ..!

ಪ್ರವಾಸಿ ತಾಣದಂತಾಗುತ್ತಿದೆ ತೀರ್ಥಹಳ್ಳಿ ಹೊಸ ಸೇತುವೆ..!
– ಕಿಡಿಗೇಡಿಗಳ ವಿಕೃತಿಯೂ ಹೆಚ್ಚಳ
– ಪೋಲೀಸರು ತುಸು ಗಮನಿಸಿ

NAMMUR EXPRESS NEWS
ತೀರ್ಥಹಳ್ಳಿ: ಬಾಳೇಬೈಲಿನಿಂದ ಕುರುವಳ್ಳಿಗೆ ಸಂಪರ್ಕಕಲ್ಪಿಸುವ ನೂತನ ತುಂಗಾನದಿ ಸೇತುವೆ ಅದ್ಭುತವಾಗಿ ನಿರ್ಮಾಣ ಗೊಂಡಿದೆ. ಉತ್ತಮ ಗುಣಮಟ್ಟ, ಸೇತುವೆಯ ಸೌಂದರ್ಯ ಹೆಚ್ಚಿಸುತ್ತಿರು ಲೈಟಿಂಗ್ ಸೇತುವೆ ಕೆಳಗೆ ಹರಿಯುವ ತುಂಗಾನದಿಯ ಸೊಬಗು, ಒಂದೆಡೆ ಕಾಣುವ ಸೂರ್ಯೋದಯ, ಸೂರ್ಯಾಸ್ತಗಳು, ಬೆಳ್ಳಕ್ಕಿ ಗಳ ಸಾಲು ಇನ್ನೊಂದೆಡೆ ಸಾವಿರಾರು ಸಂಖ್ಯೆಯಲ್ಲಿ ಜಮೆಗೊಂಡಿರುವ ಹಕ್ಕಿಗಳು ಪಕ್ಷಿಧಾಮದ ಅನುಭವ ನೀಡುತ್ತಿದೆ ಇದನ್ನು ನೋಡಲು ನಿತ್ಯ ನೂರಾರು ಜನ ಸೇತುವೆಯತ್ತ ಬರುತ್ತಿದ್ದಾರೆ. ಹಾದು ಹೋಗುವ ಪ್ರವಾಸಿಗರು ಕೆಲಹೊತ್ತು ಸೇತುವೆಯ ಮೇಲೆ ನಿಂತು ಸೊಬಗನ್ನು ಆಸ್ವಾದಿಸುತ್ತಾರೆ. ಬೆಳಿಗ್ಗೆ-ಸಂಜೆ ಇಲ್ಲಿ ಬಹಳಷ್ಟು ಜನ ವಾಯು ವಿಹಾರಕ್ಕೆ ಬರುತ್ತಾರೆ ಒಟ್ಟಿನಲ್ಲಿ ತುಂಗಾನದಿ ಹೊಸ ಸೇತುವೆ ಪ್ರವಾಸಿಗರನ್ನು ಸ್ಥಳೀಯರನ್ನು ಆಕರ್ಷಿಸುತ್ತಿದೆ.

ಇದು ಒಂದು ಸ್ವಾಗತಾರ್ಹ ಸಂಗತಿ ಇದರ ಜೊತೆಗೇ ಸೇತುವೆ ಹಾಗೂ ಸುತ್ತಮುತ್ತ ಪುಂಡ ಪೋಕರಿಗಳ ಹಾವಳಿ ಕುಡುಕರ ಕಾಟ ಜಾಸ್ತಿಯಾಗುತ್ತಿದ್ದು ಸೇತುವೆ ಹಾಗೂ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿಕೊಂಡು ಪಾರ್ಟಿ ಮಾಡುವವರು ಜೋರಾಗಿ ಹಾಡು ಹಾಕಿಕೊಂಡು ಕುಣಿಯುವವರು ಕುಡಿದ ಬಾಟಲಿಗಳನ್ನು ನದಿಗೆ ಎಸೆಯುವವರು ಬಾಟಲಿ ಸಿಗರೇಟು ಇತ್ಯಾದಿಯನ್ನು ರಸ್ತೆ ಮೇಲೆಯೇ ಹಾಕುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಪುಂಡ ಪೋಕರಿಗಳ ಬಗ್ಗೆ ಪೋಲೀಸ್ ಇಲಾಖೆ ಸ್ವಲ್ಪಗಮನ ಹರಿಸಬೇಕಿದೆ. ಇಲ್ಲವಾದಲ್ಲಿ ಕೆಲವೇ ಸಮಯದಲ್ಲಿ ಇಡೀ ಸೇತುವೆ ಹಾಗೂ ನದಿ ಪರಿಸರವನ್ನು ಇವರು ಕುಲಗೆಡಿಸಿಬಿಡುತ್ತಾರೆ.

Categories
ತೀರ್ಥಹಳ್ಳಿ

ನಿವೃತ್ತ ಉಪನ್ಯಾಸಕ ಪ್ರೊ. ತಿಮ್ಮಪ್ಪ ಗೌಡ ವಿಧಿವಶ

ನಿವೃತ್ತ ಉಪನ್ಯಾಸಕ ಪ್ರೊ. ತಿಮ್ಮಪ್ಪ ಗೌಡ ವಿಧಿವಶ
– ಮನೆಯಲ್ಲೇ ಹೃದಯಾಘಾತದಿಂದ ನಿಧನ
– ಫೆ.12ರಂದು ತೀರ್ಥಹಳ್ಳಿಯಲ್ಲಿ ಅಂತ್ಯಕ್ರಿಯೆ
– ಶಿಷ್ಯರು, ಅಪಾರ ಸ್ನೇಹಿತರ ವಲಯದಿಂದ ಸಂತಾಪ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ, ಪ್ರಿನ್ಸಿಪಾಲ್ ಆಗಿ ನಿವೃತ್ತರಾಗಿದ್ದ ಪ್ರೊ. ತಿಮ್ಮಪ್ಪ ಗೌಡ ಅವರು ಫೆ.11 ತಮ್ಮ ಸ್ವಗೃಹದಲ್ಲಿ ಹೃದಯಾಘಾತವಾಗಿ ನಿಧನರಾದರು. ಅವರಿಗೆ 70 ವರ್ಷಗಳಾಗಿತ್ತು.
ಪ್ರೊ.ತಿಮ್ಮಪ್ಪ ಗೌಡ ಅವರು ತಮ್ಮ ಉತ್ತಮ ಬೋಧನೆಯಿಂದಾಗಿ ಕಾಲೇಜಿನಲ್ಲಿ ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದರು. ಗೌಡರು ಪತ್ನಿ ಗಾಯತ್ರಿ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗೌಡರ ಹಿರಿಯ ಪುತ್ರ ಅನಿಕೇತನ್ ಅವರು ಕೆಲವು ಕಾಲ ತೀರ್ಥಹಳ್ಳಿ ತಾಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಆಗುಂಬೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರು ವೈದ್ಯರಾಗಿ ಕರ್ತವ್ಯದಲ್ಲಿದ್ದಾರೆ. ಮತ್ತೋರ್ವ ಪುತ್ರ ನಚಿಕೇತನ್ ವಿದೇಶದಲ್ಲಿ ನೌಕರಿಯಲ್ಲಿದ್ದಾರೆ.

ಗೌಡರ ಕಿರಿಯ ಪುತ್ರ ನಚಿಕೇತನ್ ಅವರು ಬೆಂಗಳೂರಿನಲ್ಲಿ ಒಂದು ಚಿಕ್ಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ತೀರ್ಥಹಳ್ಳಿಗೆ ಆಗಮಿಸುವುದು ತಡವಾಗುವುದರಿಂದ ತಿಮ್ಮಪ್ಪ ಗೌಡರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವು ಫೆ.12 ಮಧ್ಯಾಹ್ನ 3 ಗಂಟೆಗೆ ನಡೆಯಲಿರುವುದಾಗಿ ಗೌಡರ ಕುಟುಂಬದವರು ತಿಳಿಸಿದ್ದಾರೆ. ಪ್ರೊ. ತಿಮ್ಮಪ್ಪ ಗೌಡರಿಗೆ ಅವರ ನಿಧನಕ್ಕೆ ಅಪಾರ ಶಿಷ್ಯ ವರ್ಗ, ಅಪಾರ ಸ್ನೇಹಿತರು ಕಂಬನಿ ವ್ಯಕ್ತಪಡಿಸಿದ್ದಾರೆ.

Categories
ಆರೋಗ್ಯ ಉಡುಪಿ ತೀರ್ಥಹಳ್ಳಿ ಮಲ್ನಾಡ್ ರಾಜ್ಯ ಶಿವಮೊಗ್ಗ

ಮಂಗನ ಕಾಯಲೆಗೆ ಬರಲಿದೆ ಹೊಸ ಲಸಿಕೆ!

ಮಂಗನ ಕಾಯಲೆಗೆ ಬರಲಿದೆ ಹೊಸ ಲಸಿಕೆ!
– ಅರೋಗ್ಯ ಇಲಾಖೆ -ಐಸಿಎಂಆರ್ ಜೊತೆ ತಯಾರಿಕೆ
– ರಾಜ್ಯದಲ್ಲಿ ಈ ವರ್ಷ ಎಷ್ಟು ಜನರ ಸಾವು?

NAMMUR EXPRESS NEWS
ಉಡುಪಿ: ಮಂಗನ ಕಾಯಿಲೆಗೆ ಹೊಸ ಲಸಿಕೆ ತಯಾರಿಸುವ ಸಂಬಂಧ ಐಸಿಎಂಆರ್ ಜೊತೆ ಚರ್ಚಿಸಲಾಗಿದ್ದು, ಲಸಿಕೆ ತಯಾರಿಸಲು ಒಪ್ಪಿಗೆ ದೊರೆತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗನ ಕಾಯಿಲೆ ನಿಯಂತ್ರಣ ಕುರಿತು ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು. ಮಂಗನ ಕಾಯಿಲೆಗೆ ಹಳೆಯ ಲಸಿಕೆ ಬಳಸುವಂತಿಲ್ಲ ಎಂಬ ಆದೇಶದ ಹಿನ್ನೆಲೆಯಲ್ಲಿ ಹೊಸ ಲಸಿಕೆ ತಯಾರಿಸಲು ಐಸಿಎಂಆರ್‌ಗೆ 2 ತಿಂಗಳ ಹಿಂದೆ ಮನವಿ ಮಾಡಲಾಗಿತ್ತು. ಅದರಂತೆ, ಹೈದರಾಬಾದ್‌ನ ಇಂಡಿಯನ್‌ ಇಮ್ಯುನಾಲಜಿಕಲ್ ಸಂಸ್ಥೆ ಸಂಶೋಧನೆ ಹಾಗೂ ಲಸಿಕೆ ತಯಾರಿಸುವ ಹೊಣೆ ಹೊತ್ತಿದ್ದು, ಮುಂದಿನ ವರ್ಷ ಹೊಸ ಲಸಿಕೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವರ್ಷ ಮಂಗನ ಕಾಯಿಲೆಗೆ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಎಷ್ಟು ಕೇಸ್?

ಉತ್ತರ ಕನ್ನಡ 38, ಶಿವಮೊಗ್ಗ 25 ಹಾಗೂ ಚಿಕ್ಕಮಗಳೂರಿ ನಲ್ಲಿ 6 ಮಂದಿಗೆ ಕೆಎಫ್‌ಡಿ ಸೋಂಕು ದೃಢಪಟ್ಟಿದ್ದು, 20 ಸಕ್ರಿಯ ಪ್ರಕರಣ ಗಳಿವೆ. ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ಔಷಧ ಪೂರೈಕೆ ಜತೆಗೆ ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ