| ಅಡಿಕೆ ದರ | ||
|---|---|---|
| 06-03-2024 | ||
| ಸರಕು | 41000 | 81700 |
| ಬೆಟ್ಟೆ | 44119 | 54569 |
| ರಾಶಿ | 32366 | 48399 |
| ಗೊರಬಲು | 18009 | 33558 |
| Nammur Express | ||
| ಅಡಿಕೆ ದರ | ||
|---|---|---|
| 06-03-2024 | ||
| ಸರಕು | 41000 | 81700 |
| ಬೆಟ್ಟೆ | 44119 | 54569 |
| ರಾಶಿ | 32366 | 48399 |
| ಗೊರಬಲು | 18009 | 33558 |
| Nammur Express | ||
ತೀರ್ಥಹಳ್ಳಿ ತಹಸಿಲ್ದಾರ್ ಆಗಿದ್ದ ರಾಜೇಶ್ ಇನ್ನಿಲ್ಲ!
– ಅನಾರೋಗ್ಯದಿಂದ ಮೈಸೂರಿನಲ್ಲಿ ವಿಧಿ ವಶ
– ಸಾಗರ: ಹೆಂಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆದ ವ್ಯಕ್ತಿ ಕಾಡಿನಲ್ಲಿ ಶವವಾಗಿ ಪತ್ತೆ!
– ಶಿವಮೊಗ್ಗ : ರೈಲ್ವೆ ನಿಲ್ದಾಣದ ಸಮೀಪ ದರೋಡೆ!
– ಜಾಹಿರಾತು ಲಿಂಕ್ ಕ್ಲಿಕ್ ಮಾಡಿ 52 ಲಕ್ಷ ಹೋಯ್ತು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಹಸೀಲ್ದಾರ್ ಆಗಿ ಈ ಹಿಂದೆ ಸೇವೆ ಸಲ್ಲಿಸಿದ ಕೆಎಎಸ್ ಅಧಿಕಾರಿ ಎಂ.ಆರ್.ರಾಜೇಶ್ ರವರು ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಬುಧವಾರ ಮಧ್ಯಾಹ್ನ ಮೈಸೂರಿನಲ್ಲಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ತಹಸಿಲ್ದಾರ್ ಆಗಿದ್ದ ಸಮಯದಲ್ಲಿ ಅತ್ಯಂತ ಪ್ರಾಮಾಣಿಕ, ದಕ್ಷತೆಯಿಂದ ಮತ್ತು ಪಾರದರ್ಶಕವಾಗಿ ಸೇವೆ ಸಲ್ಲಿಸಿದ ರೈತರ ಬಗ್ಗೆ ಕಾಳಜಿ ಉಳ್ಳಂತಹ ಅಧಿಕಾರಿಯಾಗಿದ್ದರು .ಆ ಸಮಯದಲ್ಲಿ ಮಂಡಗದ್ದೆ ಹೋಬಳಿಯ ಹೆಗಲತ್ತಿ ಗ್ರಾಮದ ಸರ್ವೆ ನಂಬರ್ 47ರ 500 ಎಕ್ರೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿ ಮತ್ತು ಕಾಡು ಕೆಲವರು ಅಕ್ರಮವಾಗಿ ಭೂಸುಧಾರಣಾ ಕಾಯ್ದೆ ಅನ್ವಯ ಮಂಜುರಾತಿ ಮಾಡಿಕೊಳ್ಳಲು ಹೊರಟಾಗ ಅದನ್ನು ವಿರೋಧಿಸಿ ರಕ್ಷಣೆ ಮಾಡಿ ಸರ್ಕಾರಕ್ಕೆ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ಮತ್ತು ಸೇವೆಯನ್ನು ಮಾಡಿದ್ದರು. ಮೈಸೂರಿನ ಗಂಗೂಬಾಯಿ ಹಾನಗಲ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮೈಸೂರಿನ ಚಾಮುಂಡಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿಯೂ, ಉಪ ವಿಭಾಗಾಧಿಕಾರಿಯಾಗಿ ಅನೇಕ ಊರುಗಳಲ್ಲಿ ಸೇವೆ ಸಲ್ಲಿಸಿದ್ದರು.
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬ್ಯಾಕೋಡು ಸಮೀಪದ ಕಾಡಿನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಈ ಶವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಬ್ಯಾಕೋಡು ಸಮೀಪ ಪತ್ನಿಯ ಕೊಲೆ ಮಾಡಿ ಎಸ್ಕೇಪ್ ಆದವನ ಶವ ಇದೆ ಇರಬೇಕು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬ್ಯಾಕೋಡು ಸಮೀಪದ ಆವಿಗೆಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಊರಿನ ಗ್ರಾಮಸ್ಥರು ಕಟ್ಟಿಗೆಗಾಗಿ ಕಾಡಿಗೆ ತೆರಳಿದ ಸಂದರ್ಭದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.
ಕಾರ್ಗಲ್ ಠಾಣಾ ಪೊಲೀಸ್ ನವರು ಸ್ಥಳಕ್ಕಾಗಮಿಸಿ, ಮಹಜರ್ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 20 ಜನವರಿ 2024 ರಂದು ಗ್ರಾಮದ ನೀಲಾವತಿ ಎಂಬ ಮಹಿಳೆಯನ್ನು ಪತಿ ಲೋಕೇಶ್ ಎಂಬುವನು ಕುಡಿದ ಅಮಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದ. ನಂತರ ಆರೋಪಿ ಲೋಕೇಶನು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದರು. ಸದ್ಯ ಪತ್ತೆಯಾಗಿರುವ ಶವ ಆತನದ್ದೆ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಸದ್ದಿಲ್ಲದೆ ದರೋಡೆ ಪ್ರಕರಣವೊಂದು ದಾಖಲಾಗಿದೆ. ಶಿವಮೊಗ್ಗ ಸಿಟಿ ಯ ಶೇಷಾದ್ರಿಪುರಂ ಬಳಿ ಇರುವ ರೈಲ್ವೆ ಓವರ್ ಬ್ರಿಡ್ಜ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಕೋಟೆ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ. ಸೇತುವೆ ಕೆಳಗೆ ವಾಕಿಂಗ್ ಮಾಡುತ್ತಿದ್ದ ಮೂವರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ಬೈಕ್ನಲ್ಲಿ ಬಂದ ಅಪರಿಚಿತರು ಚಾಕು ತೋರಿಸಿ ಮೊಬೈಲ್, ನಗದು ದೋಚಿದ್ದಾರೆ. ಮಂಡಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿಯೊಬ್ಬರ ಸಂಬಂಧಿಕರ ಮದುವೆ ಆರತಕ್ಷತೆಗಾಗಿ ಬೆಂಗಳೂರಿನಿಂದ ಸ್ನೇಹಿತರಿಬ್ಬರು ಬಂದಿದ್ದರು. ಇವರನ್ನ ರೈಲ್ವೆ ಸ್ಟೇಷನ್ಗೆ ಬಿಟ್ಟು ಬರಲು ಸ್ಥಳೀಯರು ಬಂದಿದ್ದರು.
ಆದರೆ ಟ್ರೈನ್ ಬರುವುದಕ್ಕೆ ಇನ್ನೂ ಸಹ ಸಮಯ ಇದ್ದ ಕಾರಣಕ್ಕೆ ಮೂವರು ಸಹ ವಾಕ್ ಮಾಡಲು ತೆರಳಿದ್ದಾರೆ. ರೈಲ್ವೆ ಮೇಲ್ಸೇತುವೆ ಕೆಳಗೆ ವಾಕ್ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ಮಾರಕಾಸ್ತ್ರ ತೋರಿಸಿ ಮೂವರನ್ನ ದರೋಡೆ ಮಾಡಿದ್ದಾರೆ. ಬೆಂಗಳೂರಿನ ಇಬ್ಬರು ಹಾಗೂ ಅವರ ಜೊತೆಗೆ ಬಂದಿದ್ದ ವ್ಯಕ್ತಿಯ 3 ಮೊಬೈಲ್. 5 ಸಾವಿರ ರೂ. ನಗದು, ಪರ್ಸ್ ನಲ್ಲಿದ್ದ ವಾಹನ ಪರವಾನಗಿ, ಎಟಿಎಂ. ಮೊದಲಾದ ದಾಖಲಾತಿ ದೋಚಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಶಿವಮೊಗ್ಗ: ನಗರದ ಉದ್ಯಮಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಂಬ ಜಾಹಿರಾತು ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 52 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಬಂದ ಜಾಹೀರಾತು ಗಮನಿಸಿದ ಉದ್ಯಮಿ ಹಣ ಹೂಡಿಕೆ ಮಾಡಿದ್ದರು. ಇನ್ ಸ್ಟಾಗ್ರಾಂನಲ್ಲಿದ್ದ ಲಿಂಕ್ ಗೆ ಜಾಯಿನ್ ಆಗಿ ವಾಟ್ಸ್ಯಾಪ್ ಗ್ರೂಪ್ಗೆ ಜಾಯಿನ್ ಆಗಿದ್ದಾರೆ. ಅಲ್ಲಿನ ಆ್ಯಪ್ ಒಂದನ್ನ ಡೌನ್ ಲೋಡ್ ಮಾಡಿಕೊಂಡು ಅದಕ್ಕೆ ಹಂತ ಹಂತವಾಗಿ 52.60 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆ ಬಳಿಕ ಲಾಭದ ಹಣವನ್ನ ಆ್ಯಪ್ನಿಂದ ತಮ್ಮ ಅಕೌಂಟ್ಗೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಹೋದಾಗ, ಅದು ಮೋಸದ ಜಾಲವೆಂದು ಗೊತ್ತಾಗಿದೆ. ಸದ್ಯ ಈ ಸಂಬಂಧ ಸಿಇಎನ್ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಮುರೊಳ್ಳಿಗೆ ಟಿಕೆಟ್ ನೀಡುವಂತೆ ಸಿಎಂಗೆ ಪಟ್ಟು!
– ಸಿಎಂ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ
– 50ಕ್ಕೂ ಹೆಚ್ಚು ಮಂದಿಯ ನಿಯೋಗದಿಂದ ಒತ್ತಾಯ
NAMMUR EXPRESS NEWS
ಬೆಂಗಳೂರು/ಶೃಂಗೇರಿ: ಕಾಂಗ್ರೆಸ್ ಮುಖಂಡ ಸುಧೀರ್ ಮುರೊಳ್ಳಿ ಅವರಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿಯೋಗದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಕಿಮ್ಮನೆ ರತ್ನಾಕರ, ವಿನಯ್ ಕುಮಾರ್ ಸೊರಕೆ, ಕಾರ್ಕಳದ ಉದಯ್ ಕುಮಾರ್ ಶೆಟ್ಟಿ, ಉಡುಪಿಯ ರಮೇಶ್ ಕಾಂಚನ್, ಕುಂದಾಪುರದ ದಿನೇಶ್ ಹೆಗಡೆ, ಉಡುಪಿಯ ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸೌರವ್ ಬಲ್ಲಾಳ್, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಉಮಾ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯ ನಿಯೋಗ ಬೆಂಗಳೂರಿನ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆ ಅವರು ಇತ್ತೀಚೆಗೆ ತಮ್ಮ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅಲ್ಲದೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಗಳಿದ್ದು. ಹೆಗಡೆಯವರಿಗೆ ಟಿಕೆಟ್ ನೀಡಲು ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ ಎಂದು ನಿಯೋಗ ಸಿಎಂ ಗಮನಕ್ಕೆ ತಂದಿತು. ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಅಭ್ಯರ್ಥಿಗಳ ವಿಷಯವಾಗಿ ಒಂದಿಷ್ಟು ಗೊಂದಲಗಳಿದ್ದು, ಜಯಪ್ರಕಾಶ್ ಹೆಗಡೆಯವರು ಬಿಜೆಪಿ, ಕಾಂಗ್ರೆಸ್ ನಲ್ಲೂ ಸ್ಪರ್ಧಿಸುವುದಾಗಿ ಸುದ್ದಿ ಹರಡಿ ಗೊಂದಲ ಮೂಡುತ್ತಿದೆ.
ಅವರನ್ನು ಸೇರಿಸಿಕೊಳ್ಳುವುದಾದರೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಆದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಮಾಡುವುದು ಸರಿಯಲ್ಲ. ಪಕ್ಷ ನಿಷ್ಠರಿಗೆ ಹಾಗೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ನಿಯೋಗವು ಸಿಎಂ ಅವರನ್ನು ಒತ್ತಾಯಿಸಿದರು. ವಲಸಿಗ ನಾಯಕರಿಗೆ ಮಣೆ ಹಾಕಿದರೆ ಪಕ್ಷ ನಿಷ್ಠರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಹೀಗಾಗಿ ಕಾಂಗ್ರೆಸ್, ಪಕ್ಷದ ಸಿದ್ಧಾಂತ, ವೈಚಾರಿಕತೆ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇಟ್ಟವರನ್ನು ಪರಿಗಣಿಸಬೇಕು ಎಂದು ನಿಯೋಗದ ಸ್ಥಳೀಯ ನಾಯಕರು ಮನವಿ ಮಾಡಿದ್ದಾರೆ.

ಮಗುವಿಗೆ 6 ವರ್ಷ ತುಂಬಿದ್ರೆ ಮಾತ್ರ 1ನೇ ತರಗತಿಗೆ ಪ್ರವೇಶ
– 2025-26ನೇ ಶೈಕ್ಷಣಿಕ ವರ್ಷದಿಂದಲೇ ನಿಯಮ ಜಾರಿ
– ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ
NAMMUR EXPRESS NEWS
ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ ಒಂದನೇ ತಾರೀಕಿಗೆ 6 ವರ್ಷ 2025-26ನೇ ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಿದೆ. ಆದೇಶವನ್ನು ಕಳೆದ ವರ್ಷವೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು, ಈಗ ಮತ್ತೆ ಪೋಷಕರ ಮಾಹಿತಿಗಾಗಿ ಮತ್ತೊಮ್ಮೆ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆರ್ ಟಿ ಇ ಕಾಯಿದ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿ ಪಡಿಸಿ ಉಲ್ಲೇಖ-2 ರನ್ವಯ ತಿದ್ದುಪಡಿ ಆದೇಶ ಹೊರಡಿಸಿರುತ್ತದೆ. ಅದರಂತೆ ಕ್ರಮವಹಿಸಲು ಇಲಾಖೆಯ ಎಲ್ಲಾ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಇಪಿ 260 ಪಿಜಿಸಿ 2021, ದಿನಾಂಕ 26.07.2022ರ ಆದೇಶ ಭಾಗದ 3ನೇ ಸಾಲಿನಲ್ಲಿ “ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ” ಆದೇಶಿಸಿದೆ ಎಂಬುದನ್ನು “2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಿದ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
ಉಳಿದಂತೆ ಸರ್ಕಾರದ ಆದೇಶ ಸಂಖ್ಯೆ: ಇಪಿ 260 ಪಿಜಿಸಿ 2021, ದಿನಾಂಕ 26.07.2022ರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತ ಇದೇ ವೇಳೆ ತಿಳಿಸಿದೆ. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ದಿನಾಂಕ:18.01.2017ರ ಜ್ಞಾಪನವನ್ನು ಮಾರ್ಪಡಿಸಿ ಶೈಕ್ಷಣಿಕ ವರ್ಷ 2018-19ನೇ ಸಾಲಿನಿಂದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಸಂಬಂಧಿಸಿದ ಶೈಕ್ಷಣಿಕ ವರ್ಷದ ಜೂನ್ 1 ರಂದು 5 ವರ್ಷ, 10 ತಿಂಗಳು ಪೂರ್ಣಗೊಂಡಿರಬೇಕೆಂದು ಮೇಲೆ ಓದಲಾದ (3)ರ ಜ್ಞಾಪನದಲ್ಲಿ ನಿಗಧಿಪಡಿಸಲಾಗಿದೆ. 2009ರಲ್ಲಿ ಆರ್.ಟಿ.ಇ. ಕಾಯ್ದೆ ಮತ್ತು 2012 ರಲ್ಲಿ ಕಡ್ಡಾಯ ಶಿಕ್ಷಣ ನಿಯಮಗಳು ಜಾರಿಗೆ ಬಂದಿದ್ದು. ಇವುಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಅದರಡಿ ರಚಿತವಾದ ಎಲ್ಲಾ ನಿಯಮಗಳನ್ನು | ಆದೇಶಗಳನ್ನು ನಿರಸನಗೊಳಿಸುತ್ತದೆ. ಆದ್ದರಿಂದ, ಆರ್.ಟಿ.ಇ. ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಪ್ರಾಥಮಿಕ ಶಾಲೆಗೆ ದಾಖಲಿಸಲು ಮಗುವಿನ ಕನಿಷ್ಠ ವಯಸ್ಸನ್ನು ನಿಗಧಿಪಡಿಸುವುದು ಅಗತ್ಯವಾಗಿರುತ್ತದ ಅಂತ ತಿಳಿಸಿದೆ.
ಅಂಡ್ ಟಾಕೀಸ್ ಸಂಸ್ಥೆಯ ಪವರ್ ಆಫ್ ವೋಟ್ ಕಿರುಚಿತ್ರಕ್ಕೆ ಅವಾರ್ಡ್!
– ಬೆಂಗಳೂರು ಚುನಾವಣಾ ಆಯೋಗದ ವತಿಯಿಂದ ಕಿರುಚಿತ್ರ ಸ್ಪರ್ಧೆ
– ಪ್ರಥಮ ಬಹುಮಾನ ಪಡೆದ ಅಂಡ್ ಟಾಕೀಸ್ ಭದ್ರಾವತಿ
– ದಾನಂ ಕುಮಾರ್ ನಿರ್ಮಾಣ, ಶಿವಕುಮಾರ ಬಿ ರಾಠೋಡ್ ನಿರ್ದೇಶನ
NAMMUR EXPRESS NEWS
ಬೆಂಗಳೂರು: ಬೆಂಗಳೂರು ಚುನಾವಣಾ ಆಯೋಗವು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ವತಿಯಿಂದ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಿದ್ದರು. ಅದರಲ್ಲಿ ಅಂಡ್ ಟಾಕಿಸ್ ಶಿವಮೊಗ್ಗ ವತಿಯಿಂದ ಸಲ್ಲಿಸಿದ ಪವರ್ ಆಫ್ ವೋಟ್ ಕಿರುಚಿತ್ರ ಪ್ರಥಮ ಬಹುಮಾನ ಪಡೆದಿದೆ.
ಪವರ್ ಆಫ್ ವೋಟ್ ಚಿತ್ರವು ಅಂಡ್ ಟಾಕೀಸ್ ಭದ್ರಾವತಿ ದಾನಂ ಕುಮಾರ್ ಇವರ ನಿರ್ಮಾಣದಲ್ಲಿ ಮತ್ತು ಶಿವಕುಮಾರ ಬಿ ರಾಠೋಡ್ ಇವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಛಾಯಾಗ್ರಹಣ ಕುಶಾಲ್, ಸಂಕಲನ ಅನುರಂಜನ್ ಹೆಚ್ಆರ್, ಸಹಾಯ ಛಾಯಾಗ್ರಹಣ ಮಂಜುನಾಥ್, ಚಿತ್ರಕಥೆ ಹಬೀಬ್ ತೀರ್ಥಹಳ್ಳಿ, ಎಸ್ ಬಿ ರಾಠೋಡ್, ನವೀನ್ ಕುಮಾರ್ ದಾನಂ ರವರು ನಿರ್ಮಾಪಕರಾಗಿದ್ದಾರೆ. ಹಾಗೂ ದಾನಂ ಶಿವಮೊಗ, ಶ್ರೀಕಾಂತ್ ಕುಮಟಾ, ಶಿವಕುಮಾರ್ ತೀರ್ಥಹಳ್ಳಿ, ರಕ್ಷಿತ್, ಯಾಸಿನ್, ಅನ್ಸರ್ ಶಿವಮೊಗ್ಗ, ಚಂದನ್, ನಿತೀಶ್, ಪ್ರತಾಪ್, ವಿನಯ್ ಕುಮಾರ್, ಸುಜನ್ ಅವರು ನಟಿಸಿದ್ದಾರೆ.
ರಾಜ್ಯದಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ಜಾಲ!
– ಭಟ್ಕಳದ ಇಬ್ಬರ ಬಂಧನ: ಉಗ್ರ ಚಟುವಟಿಕೆಗೆ ಬಳಕೆ
– ಪಾಕ್ ಜತೆಯೂ ನಂಟು: ಏನಿದು ಕೇಸ್…?
NAMMUR EXPRESS NEWS
ಭಟ್ಕಳ : ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ ಆರೋಪದ ಮೇಲೆ ಬಂಧಿತ ಭಟ್ಕಳದ ಇಬ್ಬರು ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ವಿಶೇಷ ಘಟಕ ಭಟ್ಕಳಕ್ಕೆ ಬಂದು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ ಭಟ್ಕಳದ ಮದೀನಾ ಕಾಲೋನಿಯ ಉಸ್ಮಾನಿಯಾ ಸ್ಟ್ರೀಟ್ ನಿವಾಸಿ ಕಾಕು ತೌಫಿಕ್ ಮತ್ತು ಆತನ ಸಹಚರ ಭಟ್ಕಳದ ಮಾರುಕಟ್ಟೆ ಪ್ರದೇಶದ ಹಯ್ಯನ್ ಕೋಲಾ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಎರಡು ತಿಂಗಳ ಹಿಂದೆ ಜ.೧೬ರಂದು ಇವರಿಬ್ಬರನ್ನು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಒಂದಲ್ಲ, ಎರಡಲ್ಲ, ಮೂರಲ್ಲ,ಬರೋಬ್ಬರಿ ಏಳು ನಕಲಿ ಡ್ರೈವಿಂಗ್ ಲೈಸೆನ್ಸ್ ಗಳನ್ನು ಇವರಿಬ್ಬರಿಂದ ವಶಪಡಿಸಿಕೊಳ್ಳಲಾಗಿತ್ತು. ನಂತರ ಈ ವಿಷಯವನ್ನು ಐಜಿಐ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಅವರು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆಯನ್ನು ನಡೆಸಿದ್ದರು. ಇಬ್ಬರೂ ಆರೋಪಿಗಳು ನಕಲಿ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಂಡುಬಂದಿದೆ. ಹೆಚ್ಚುವರಿಯಾಗಿ, ಅವರು ಪಾಕಿಸ್ತಾನ ಮತ್ತು ದುಬೈ ಮೂಲದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಮುಂಬೈನಲ್ಲಿ ನೆಲೆಸಿರುವ ಅವರ ಸಹಚರ ಅಬ್ದುಲ್ ಖಾದರ್ ಪ್ರಸ್ತುತ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದಾನೆ.
18 ವರ್ಷಗಳ ಹಿಂದೆ ಭಾರತವನ್ನು ತೊರೆದು ಗಡಿಯಾಚೆಗಿನ ಭಯೋತ್ಪಾದನೆ-ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವಾಶಿಕ್ ಜೊತೆಗಿನ ಸಂವಹನವನ್ನು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ ದೆಹಲಿ ಮೂಲದ ಮಾಧ್ಯಮವೊಂದು ತಿಳಿಸಿದೆ. ನಂತರ ಈ ಪ್ರಕರಣವನ್ನು ವಿಶೇಷ ಘಟಕಕ್ಕೆ ವರ್ಗಾಯಿಸಲಾಗಿದೆ. ದೆಹಲಿಯ ವಿಶೇಷ ಘಟಕದ ತಂಡವೊಂದು ಭಟ್ಕಳಕ್ಕೆ ತೆರಳಿ ಕಾಕು ಅವರ ಪತ್ನಿ ಸಹಿತ ಅವರ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿತ್ತು. ಆದರೆ, ಅವರು ಹೆದರಿಕೆಯಿಂದ ಲಿಖಿತ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರ ಜೊತೆಗಿನ ಸಂಬಂಧದ ಬಗ್ಗೆಯೂ ತನಿಖಾಧಿಕಾರಿಗಳ ಮುಂದೆ ಅಲ್ಲಗಳೆದಿದ್ದಾರೆ.
ಪ್ಲಬಿಕ್ ಪರೀಕ್ಷೆ ರದ್ದು ಮಾಡಿದ ರಾಜ್ಯ ಸರ್ಕಾರ!?
– 5,8,9 ಮತ್ತು 11ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ಇಲ್ಲ
– ಏನಿದು ವಿವಾದ..? ಏನಿದು ಆದೇಶ..?
NAMMUR EXPRESS NEWS
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ 5,8,9 ಮತ್ತು 11ನೇ ತರಗತಿಗಳಿಗೆ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಪರೀಕ್ಷೆಗೆ ಹೆಚ್ಚಿನ ಅನುಮತಿ ನೀಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರ ಜಂಟಿಯಾಗಿ ಹೊರಡಿಸಿದ ಬೋರ್ಡ್ ಎಕ್ಸಾಂ ಸುತ್ತೋಲೆಯನ್ನು ಮಾಡಿ ಏಕಸದಸ್ಯ ಪೀಠ ರದ್ದು ಆದೇಶ ನೀಡಿದೆ. ಹೀಗಾಗಿ ಈ ಬಾರಿ ಈ ತರಗತಿಗಳಿಗೆ ಬೋರ್ಡ್ ಎಕ್ಸಾಂ ಇರುವುದಿಲ್ಲ. ರಾಜ್ಯ ಪಠ್ಯಕ್ರಮದ ಶಾಲೆಗಳು 5, 8, 9 ಮತ್ತು 11 ನೇ ತರಗತಿಗಳ ಶಾಲಾ ಮಟ್ಟದ ಪರೀಕ್ಷೆಗೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ ಈ ಹಿಂದೆ ಸುತ್ತೋಲೆ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರ ನ್ಯಾಯಪೀಠ ತೀರ್ಪು ಪ್ರಕಟಿಸಿದೆ. 9ನೇ ತರಗತಿ ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಂಡುಬಂದಿದೆ ಎಂದು ಪ್ರಾಥಮಿಕ ಮತ್ತು ಚಿಕಿತ್ಸಕ ಸಚಿವ ಮಧುಬಂಗಾರಪ್ಪ ಅವರ ವಾದವಾಗಿತ್ತು.
ತೀರ್ಥಹಳ್ಳಿಯಲ್ಲಿ ಕಾರು ಕರೆಂಟ್ ಕಂಬಕ್ಕೆ ಡಿಕ್ಕಿ!
– ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ: ಟ್ರಾಫಿಕ್ ಜಾಮ್
– ಅನಾಹುತದಿಂದ ಪಾರು: ಪದೇ ಪದೇ ಹೆಚ್ಚಿದ ಅಪಘಾತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಡಿಪ್ಲೋಮೋ ಕಾಲೇಜು ಬಳಿ ಕಾರು ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದ್ದು, ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ ಬಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಅನಾಹುತದಿಂದ ಚಾಲಕ ಪಾರಾಗಿದ್ದು, ಪದೇ ಪದೇ ಹೆಚ್ಚಿದ ಅಪಘಾತದಿಂದ ತೀರ್ಥಹಳ್ಳಿ ಜನತೆ ಕಂಗಾಲಾಗಿರುವ ನಡುವೆ ಈ ಘಟನೆ ನಡೆದಿದೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿ ರಸ್ತೆ ಮೇಲೆ ಬಿದ್ದಿದ್ದು, ಮೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಕ್ಷಣ ವಿದ್ಯುತ್ ತೆಗೆಯುವ ಮೂಲಕ ಅನಾಹುತ ತಪ್ಪಿಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಿಸಿದ ಶಿಕ್ಷಣ ಇಲಾಖೆ..!
– ಮತ್ತೆ ಶುರುವಾಗುತ್ತಾ ಪಠ್ಯ ಪರಿಷ್ಕರಣೆ ಫೈಟ್?
– ಏನೆಲ್ಲ ಬದಲಾವಣೆ.? ಇಲ್ಲಿದೆ ವಿವರ
NAMMUR EXPRESS NEWS
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 2024-25ನೇ ಸಾಲಿಗೆ ಪಠ್ಯ ಪುಸ್ತಕ ಪರಿಷ್ಕರಿಸಿದೆ. ರಾಜ್ಯದಲ್ಲಿ ಮತ್ತೆ ಪಠ್ಯ ಪರಿಷ್ಕರಣೆ ಫೈಟ್ ಶುರುವಾಗುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ಡಾ. ಮಂಜುನಾಥ್ ಹೆಗಡೆ ಅವರ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿದ್ದು, ಕೆಲವು ಪಠ್ಯಕ್ಕೆ ಕೋಕ್ ನೀಡಿ ಹೊಸ ಪಠ್ಯ ಸೇರ್ಪಡೆ ಮತ್ತು ಹಳೆ ಪಠ್ಯ ತಿದ್ದುಪಡಿ ಮಾಡಿದೆ. 1ನೇ ತರಗತಿಯಿಂದ 10ನೇ ತರಗತಿ ವರೆಗಿನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕರಿಸಿ ವರದಿಯನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ. 1 ರಿಂದ 10ನೇ ತರಗತಿಯ ಕನ್ನಡ ಹಾಗೂ ದ್ವಿತೀಯ ಭಾಷೆ, 9 ಮತ್ತು 10ನೇ ತರಗತಿ ಕನ್ನಡ ಹಾಗೂ ತೃತೀಯ ಭಾಷೆ, 6ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ. 6ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಚಂದ್ರಶೇಖರ್ ಕಂಬಾರ, ನಾಲ್ವಡಿ ಕೃಷ್ಣರಾಜ ಒಡೆಯರ್, ಎಚ್.ಎಲ್. ನಾಗೇಗೌಡ, ಡಾ. ಸಿದ್ದಲಿಂಗಯ್ಯ, ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಶಾಂತವೇರಿ ಗೋಪಾಲಗೌಡರ ಹಾಗೂ ಕೊಪ್ಪಳದ ಗವಿಮಠದ ಭಾವಚಿತ್ರ ವಿಷಯ ಸೇರ್ಪಡೆ.
ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು ಮತ್ತು ಉತ್ತರ ಭಾರತದ ರಾಜ ಮನೆತನಗಳು, ರಾಜಮನೆತನಗಳ ಪಟ್ಟಿ ಸೇರ್ಪಡೆ. ವೇದ ಕಾಲದ ಸಂಸ್ಕೃತಿ ಮತ್ತು ಹೊಸ ಧರ್ಮಗಳ ಉದಯ ಪಾಠ ಸೇರ್ಪಡೆ. ಗುಳ್ಳಕಾಯಜ್ಜಿಯ ಕಥೆ ಪಠ್ಯಕ್ಕೆ ಕೊಕ್. ಸಂವಿಧಾನ ರಚನಾ ಸಭೆಯಲ್ಲಿ ಭಾಗಿಯಾದ ಮಹಿಳಾ ಸದಸ್ಯರ ವಿವರ ಮತ್ತು ಭಾವಚಿತ್ರ ಸೇರ್ಪಡೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ಅವಕಾಶ, ಪ್ರಭುತ್ವದ ಪ್ರಕಾರಗಳು, ಮಕ್ಕಳ ಹಕ್ಕುಗಳು ಸೇರ್ಪಡೆ.7ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಭಾರತಕ್ಕೆ ಐರೋಪ್ಯರ ಆಗಮನ, ಬ್ರಿಟೀಷ್ ಆಳ್ವಿಕೆಯ ಪರಿಣಾಮ ಮರು ಸೇರ್ಪಡೆ. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ಅಧ್ಯಾಯ ಸೇರ್ಪಡೆ. ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ವಿಷಯ ದಾಖಲು.
8ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಪ್ರಾಕ್ತನ ಆಧಾರಗಳ ಅರ್ಥ ಮತ್ತು ಪ್ರಾಮುಖ್ಯತೆ ವಿಷಯ ಸೇರ್ಪಡೆ. ಸನಾತನ ಧರ್ಮ ಅಧ್ಯಾಯದಲ್ಲಿ ಕೆಲವು ಅಂಶ ಸೇರ್ಪಡೆ. ಜೈನ ಮತ್ತು ಬೌದ್ಧ ಧರ್ಮಗಳು (ಜೈನ ಮತ್ತು ಬೌದ್ಧ ಮತಗಳು-ಶೀರ್ಷಿಕೆ ಬದಲಾವಣೆ) ವಿಷಯ ಸೇರ್ಪಡೆ. 9ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಕಾಶ್ಮೀರದ ಕಾರ್ಕೋಟರು ಮನೆತನ ಮತ್ತು ಅಹೋಮ್ ರಾಜನಮನೆತನದ ವಿಷಯ. ಕನಕದಾಸರು, ಪುರಂದರದಾಸರು ಹಾಗೂ ಸಂತ ಶಿಶುನಾಳ ಶರೀಫರ ಕುರಿತ ಮಾಹಿತಿ ಸೇರ್ಪಡೆ. 10ನೇ ತರಗತಿ ಪಠ್ಯದಲ್ಲಿನ ಬದಲಾವಣೆ: ಮೈಸೂರಿನ ಅರಸರ ಹಾಗೂ ಕಿತ್ತೂರು, ಸುರಪುರ, ಕೊಪ್ಪಳ, ಹಲಗಲಿಗಳ ಸ್ಥಳೀಯ ಬಂಡಾಯಗಳನ್ನು ಕ್ರಮಬದ್ಧವಾಗಿ ದಾಖಲು. ಸಾವತ್ರಿಬಾಯಿ ಫುಲೆ, ಯುವ ಬಂಗಾಳಿ ಚಳವಳಿ ಮತ್ತು ಪೆರಿಯಾರ್ ವಿಷಯ ಸೇರ್ಪಡೆ.
ಸೀನಿಯರ್ ಚೇಂಬರ್ ಕೋಣಂದೂರು ಘಟಕದ ಅಧ್ಯಕ್ಷ ಡಿ.ಪಿ ವಿಶ್ವನಾಥ್ ಗೆ ಪ್ರಶಸ್ತಿ!
– ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ವಾರ್ಷಿಕ ಸಮ್ಮೇಳನದಲ್ಲಿ ಗೌರವ
NAMMUR EXPRESS NEWS
ತೀರ್ಥಹಳ್ಳಿ: ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ವಾರ್ಷಿಕ ಸಮ್ಮೇಳನದಲ್ಲಿ ಕೋಣಂದೂರು ಘಟಕದ ಅಧ್ಯಕ್ಷ ಡಿ.ಪಿ ವಿಶ್ವನಾಥ್ ಗೆ ಪ್ರಶಸ್ತಿ ಲಭಿಸಿದೆ. ಕೇರಳದ ಕಣ್ಣೂರಿನಲ್ಲಿ ನಡೆದ SCI ಅಂತರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ ಕೋಣಂದೂರು ಘಟಕ ಪ್ರಾರಂಭವಾಗಿ ಸ್ವಲ್ಪ ದಿನಗಳಲ್ಲಿ ಅನೇಕ ಸಾಮಾಜಿಕ ಸಾರ್ವಜನಿಕ ಅನುಕೂಲವಾಗುವಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾದ ಕಾರಣ ಕೋಣಂದೂರು ಘಟಕದ ಅಧ್ಯಕ್ಷರಾದ ಪ್ರಗತಿಪರ ಕೃಷಿಕ, ಸಹಕಾರಿ ದೇಮ್ಲಾಪುರ ವಿಶ್ವನಾಥ್ ಅವರಿಗೆ ಅಂತರರಾಷ್ಟ್ರೀಯ ಸೀನಿಯರ್ ಚೇಂಬರ್ ಅಧ್ಯಕ್ಷ ವರ್ಗೀಸ್ ವೈಧ್ಯನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ಕೆ.ಪಿ.ಎಸ್. ಸ್ವಾಮಿ ಮತ್ತು ಸದಸ್ಯರಾದ ಸರ್ಜಾ ಕೃಷ್ಣಮೂರ್ತಿ, ಟಿ.ಎನ್.ಜಗದೀಶ್, ಸೂರ್ಯನಾರಣ್, ಹೆಚ್. ಆರ್ .ಜಗದೀಶ್, ಹರೀಶ್ ಭಟ್, ನಾಗೇಂದ್ರ ಉಪಸ್ಥಿತಿತರಿದ್ದರು
