Categories
ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಮಲ್ನಾಡ್ ಟಾಪ್ 5 ನ್ಯೂಸ್

ಮಲ್ನಾಡ್ ಟಾಪ್ 5 ನ್ಯೂಸ್
– ರೈಲಿಗೆ ತಲೆಕೊಟ್ಟು ಯುವತಿ ಸಾವು!
– ಲಂಚ ಸ್ವೀಕರಿಸುವ ವೇಳೆ ಸೊರಬ ಪುರಸಭೆ ರೆವಿನ್ಯೂ ಇನ್ಸ್ಪೆಕ್ಟರ್ ಬಲೆಗೆ
– ಚಿಕ್ಕಮಗಳೂರು: ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿ ಬಂಧನ
– ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ.!
– ಶಿವಮೊಗ್ಗ: ಹಾಡುಹಗಲೆ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ.!

NAMMUR EXPRESS NEWS
ಸೊರಬ: ಪುರಸಭೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕಂದಾಯ ನಿರೀಕ್ಷಕ ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದಾರೆ. ಹೊನ್ನಾವರದ ಪ್ರತಿಭಾ ಎಂ. ನಾಯ್ಕ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆದಿದ್ದು, ವಿನಾಯಕ ಅವರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಏನಿದು ಪ್ರಕರಣ:
ಪ್ರತಿಭಾ ಅವರು ಹಳೇ ಸೊರಬ ವ್ಯಾಪ್ತಿಯ ಕಸಬಾ ಹೋಬಳಿಯಲ್ಲಿ ಖಾಲಿ ನಿವೇಶನ ಹೊಂದಿದ್ದು, ಇದು ಈ- ಸ್ವತ್ತಾಗಿದೆ. ಈ ಜಾಗವು ಗ್ರಾಮಪಂಚಾಯ್ತಿಯಿಂದ ಸೊರಬ ಪುರಸಭೆಗೆ ಸೇರಿದ್ದರಿಂದ ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಲಂಚ ಬೇಡಿಕೆ ಹಿನ್ನೆಲೆ ಪ್ರತಿಭಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಅವರನ್ನು ಬಂಧಿಸಿದೆ. ಆರೋಪಿಯಿಂದ 40 ಸಾವಿರ ರೂ. ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಾಗರದಲ್ಲಿ ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆ

ಸಾಗರ : ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾತ್ರಿ 10:40ಕ್ಕೆ ಸಾಗರದಲ್ಲಿ ನಡೆದಿದೆ. ಮೈಸೂ‌ರ್ ತಾಳಗುಪ್ಪ ರೈಲಿಗೆ ಯುವತಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರದ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯುವತಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿ ಅರೆಸ್ಟ್!

ಚಿಕ್ಕಮಗಳೂರು: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಳಹೊಲಗದ್ದೆ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ ಕಾಫಿ ಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದು, ಪಿ.ಎಸ್.ಐ, ಸಿ.ಇ.ಎನ್ ಅಪರಾಧ ಪೊಲೀಸ್‌ ಠಾಣೆ ಮತ್ತು ತಂಡ ಓರ್ವ ಆರೋಪಿಯನ್ನು ವಶಕ್ಕೆ ಪಡೆದು, 100 ಗ್ರಾಂ ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಸಿ.ಇ.ಎನ್‌. ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತಿಯ ಮೇಲೆ ಲೈಂಗಿಕ ದೌರ್ಜನ್ಯ: ಜೈಲು ಶಿಕ್ಷೆ!

ಶಿವಮೊಗ್ಗ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಶಿವಮೊಗ್ಗದ FTSC-1 ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ. 2021ನೇ ಸಾಲಿನಲ್ಲಿ ಸೊರಬ ತಾಲ್ಲೂಕಿನ ವಾಸಿ 35 ವರ್ಷದ ವ್ಯಕ್ತಿಯು 14 ರ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಬಗ್ಗೆ ನೊಂದ ಬಾಲಕಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿ, ಸಿಪಿಐ ರಾಜಶೇಖರ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹರಿಪ್ರಸಾದ್‌, ವಿಶೇಷ ಸರ್ಕಾರಿ ಅಭಿಯೋಜಕ ವಾದ ಮಂಡಿಸಿದ್ದು, ವಿಚಾರಣೆ ನಡೆದು, ಆರೋಪಿ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶೆ ಲತಾ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 4 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದು ಮತ್ತು ದಂಡದ ಮೊತ್ತದಲ್ಲಿ 50,000 ರೂ ಹಾಗೂ ಸರ್ಕಾರದಿಂದ 4,00,000 ರೂ ಸೇರಿ ಒಟ್ಟು 4,50,000 ರೂ ಗಳನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.

ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನ

ಶಿವಮೊಗ್ಗ: ಬಿಎಚ್ ನಗರದ ರಾಯಲ್ ಆರ್ಕೀಡ್ ಹೊಟೆಲ್ ನ ಹಿಂಭಾಗದ ರಸ್ತೆಯ ಅಂಬೇಡ್ಕ‌ರ್ ವೃತ್ತದ ಬಳಿ ಹಾಡಹಗಲೇ ಭರ್ಚಿಯಿಂದ ವ್ಯಕ್ತಿಯೊಬ್ಬನ ಮೇಲೆ ಕೊಲೆಗೆ ಯತ್ನಿಸಿದ ಘಟನೆ ಜರುಗಿದೆ. 48 ವರ್ಷದ ಕಾರ್ತಿಕ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಳಗಾದ ಯುವಕನನ್ನು ಕೂಡಲೇ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಂಗಳವಾರ ಮದ್ಯಾಹ್ನ 12.30 ರ ಆಸುಪಾಸಿನಲ್ಲಿ ಈ ಘಟನೆ ನಡೆದಿದ್ದು, ಕಾರ್ತಿಕ್ ಎನ್ನುವ ವ್ಯಕ್ತಿಯು ಮನೆಗೆ ಹೋಗುತ್ತಿರುವು ಸಂದರ್ಭದಲ್ಲಿ ಹಿಂದಿನಿಂದ ಬಂದ ಇಬ್ಬರು ಅಪರಿಚಿರಲ್ಲಿ ಒಬ್ಬನು ಭರ್ಚಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.

ಈ ವೇಳೆ ಕಾರ್ತಿಕ್ ಭರ್ಚಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ, ಭರ್ಚಿ ಕೊನೆಗೂ ಆತನ ಕೈ ಭಾಗಕ್ಕೆ ತಗುಲಿದೆ. ಕೈಗೆ ಭರ್ಚಿ ಇರಿತದಿಂದ ತೀವ್ರ ರಕ್ತಸ್ರಾವ ಆಗಿದೆ. ತಕ್ಷಣ ಸ್ಥಳೀಯರು ದೊಡ್ಡಪೇಟೆ ಪೊಲೀಸರಿಗೆ ದಾಳಿ ಕುರಿತು ಮಾಹಿತಿ ನೀಡಿದ್ದಾರೆ. ಗಾಯಾಳು ಕಾರ್ತಿಕ್ ನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Categories
ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ
– ಹಿರೇಕಲ್ಲಹಳ್ಳಿಯಲ್ಲಿ ಆಸ್ತಿ ಗಲಾಟೆ: ಮಚ್ಚಿನಿಂದ ಹಲ್ಲೆ!
– ಓರ್ವನಿಗೆ ಗಂಭೀರ ಗಾಯ: ಆರೋಪಿಗಳು ಅರೆಸ್ಟ್
– ದನ ಸಾಗಣೆ: ಧರ್ಮದೇಟು ತಿಂದವ ಆಸ್ಪತ್ರೆಗೆ ದಾಖಲು
– ತೀರ್ಥಹಳ್ಳಿಯಲ್ಲಿ ಮತ್ತೊಂದು ಗಾಂಜಾ ಕೇಸ್ ಪತ್ತೆ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಸಮೀಪದ ಹಿರೇಕಲ್ಲ ಹಳ್ಳಿಯಲ್ಲಿ ಆಸ್ತಿ ಗಲಾಟೆ ಸಂಭವಿಸಿ ವ್ಯಕ್ತಿಯೊಬ್ಬನ ಮೇಲೆ ಗಂಭೀರ ಹಲ್ಲೆ ಮಾಡಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಧರ್ಮದೇಟು ತಿಂದವ ಆಸ್ಪತ್ರೆಗೆ ದಾಖಲು..!

ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿಯಲ್ಲಿ ಅಕ್ರಮವಾಗಿ ಧನಸಾಗಣೆ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬನ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸುಮಾರು 8 ದನಗಳನ್ನು ರಕ್ಷಣೆ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನಿಂದ ಬಯಲು ಸೀಮೆಗೆ ದನಗಳ ಸಾಗಾಟ ಮಾಡಲಾಗುತ್ತಿತ್ತು. ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಮತ್ತೊಂದು ಗಾಂಜಾ ಪ್ರಕರಣ ಪತ್ತೆ:!

ತೀರ್ಥಹಳ್ಳಿ ತಾಲೂಕಿನಲ್ಲಿ ಗಾಂಜಾ ಪ್ರಕರಣ ಹೆಚ್ಚಾಗುತ್ತಿದ್ದು, ಇತ್ತೀಚಿಗಷ್ಟೇ ಮೂರು ಮಂದಿಯನ್ನು ಸೆರೆ ಹಿಡಿದಿರುವ ಘಟನೆಯ ನಡುವೆ ಕಳೆದೊಂದು ವಾರದಲ್ಲಿ ಇಬ್ಬರನ್ನು ತಪಾಸಣೆ ಮಾಡಿ ಗಾಂಜಾ ಸೇವನೆ ಪತ್ತೆ ಮಾಡಲಾಗಿದೆ. ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಜೈಲಿಗೆ ಕಳಿಸಿದ್ದು, ಬೇಲ್ ಮೇಲೆ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕುವೆಂಪು ಶಾಲೆಯಲ್ಲಿ ಶಾರದಾ ಪೂಜೆ!

ತೀರ್ಥಹಳ್ಳಿ ಕುವೆಂಪು ಶಾಲೆಯಲ್ಲಿ ಶಾರದಾ ಪೂಜೆ!
– ಸಂಭ್ರಮದಿಂದ ಭಾಗಿಯಾದ ಮಕ್ಕಳು: ಪೋಷಕರು ಹಾಜರು
– ಅಭಿವೃದ್ಧಿಯತ್ತ ಸಾಗುತ್ತಿರುವ ಕುವೆಂಪು ಸರ್ಕಾರಿ ಶಾಲೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪವಿರುವ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಸಂಭ್ರಮ ಕಂಡುಬಂದಿತು. ಮಕ್ಕಳು ಸಂಭ್ರಮದಿಂದ ಪೂಜೆಯಲ್ಲಿ ಭಾಗವಹಿಸಿದರು, ಪೋಷಕರು ಕೂಡ ಹಾಜರಿದ್ದರು. ಕುವೆಂಪು ಶಾಲೆ ಇತ್ತೀಚೆಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅತ್ಯುತ್ತಮ ಶಾಲೆ, ಹೈಟೆಕ್ ಸೌಲಭ್ಯಗಳು, ಮಕ್ಕಳಿಗೆ ವಿಶೇಷವಾದ ಶಿಕ್ಷಣ ಜೊತೆಗೆ ಪೋಷಕ ಸಭೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಎಲ್ಲಾ ಅಭಿವೃದ್ಧಿಯನ್ನು ಎಸ್ ಡಿಎಂಸಿ ಸಮಿತಿ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಶಾಲಾ ಸಿಬ್ಬಂದಿ ಕೂಡ ಅತ್ಯುತ್ತಮವಾದ ಶಿಕ್ಷಣ ನೀಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಗಂಗಮ್ಮ, ಸತೀಶ್ ಶೆಟ್ಟಿ, ಚಿದಾನಂದ, ರಾಘವೇಂದ್ರ, ನಾಗರಾಜು, ಶಿವಪುತ್ರಪ್ಪ, ಶೋಭಾಲತಾ, ಕನಕಮ್ಮ, ಸುಲೋಚನಾ, ದೀಪ, ಸತ್ಯಮೂರ್ತಿ ಮತ್ತು ಸಂಗೀತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Categories
ಬೆಂಗಳೂರು ರಾಜ್ಯ

ಶಿವರಾತ್ರಿ ಆಚರಣೆಗೆ ದೇವಾಲಯಗಳು ಸಿದ್ಧ..!

ಶಿವರಾತ್ರಿ ಸಂಭ್ರಮ!
– ಶಿವರಾತ್ರಿ ಆಚರಣೆಗೆ ದೇವಾಲಯಗಳು ಸಿದ್ಧ..!
– ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು
– ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ

NAMMUR EXPRESS NEWS
ಬೆಂಗಳೂರು: ಮಹಾ ಶಿವರಾತ್ರಿ ಹಬ್ಬಕ್ಕೆ ಶಿವನ ದೇವಸ್ಥಾನಗಳಲ್ಲಿ ಹಬ್ಬದ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಲು ಭಕ್ತರು ಕೂಡ ಸಜ್ಜಾಗಿದ್ದಾರೆ.

ಸಿಂಗಾರ ಗೊಂಡ ಶಿವನ ದೇಗುಲಗಳು!:

ಶಿವರಾತ್ರಿಯ ಪ್ರಯುಕ್ತ ಈಗಾಗಲೇ ಬಹುತೇಕ ಈಶ್ವರ ದೇಗುಲಗಳನ್ನು ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗುತ್ತಿದೆ. ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಈಶ್ವರ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಶಿವನಿಗೆ ವಿಶೇಷ ಪೂಜೆ: ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮೂರ್ತಿಗೆ ವಿವಿಧ ಪೂಜೆ, ಅಭಿಷೇಕ, ರುದ್ರಾಭಿಷೇಕ, ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಪೂಜೆ, ಮಹಾಮಂಗಳಾರತಿ, ಶಿವನಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ವೇದಾಂತ ಉಪನ್ಯಾಸ ಜರುಗಲಿವೆ. ಶಿವನ ಆರಾಧಕರು ಜಾಗರಣೆ ನಡೆಸಲು ವಿವಿಧ ದೇವಸ್ಥಾನಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು!

ಕೆಲ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು, ಭಜನೆ, ಸಂಗೀತ ಕಛೇರಿ, ಪೌರಾಣಿಕ ನಾಟಕ ಪ್ರದರ್ಶನ ಅಹೋರಾತ್ರಿ ಶಿವನಾಮ ಜಪ, ಸಂಗೀತೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಖರೀದಿ ಭರಾಟೆ ಜೋರು

ಹಬ್ಬದ ಮುನ್ನಾದಿನವಾದ ಗುರುವಾರ ಎಲ್ಲೆಡೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಶಿವಪೂಜೆಗೆ ಪ್ರಧಾನವಾಗಿ ಬಳಸುವ ಬಿಲ್ವಪತ್ರೆ, ವಿಭೂತಿ, ಹೂವು, ಹಣ್ಣುಗಳ ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ.

ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ!

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಕಾರಣ ಮಾಂಸ ಮಾರಾಟ ಅಂಗಡಿಗಳ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.

Categories
ತೀರ್ಥಹಳ್ಳಿ

ಆರಗದಲ್ಲಿ ಶ್ರೀಕಲಾನಾಥೇಶ್ವರ ಜಾತ್ರಾ ರಂಗು!

ಆರಗದಲ್ಲಿ ಶ್ರೀಕಲಾನಾಥೇಶ್ವರ ಜಾತ್ರಾ ರಂಗು!
– ಮಾ.11ರಿಂದ 13ರವರೆಗೆ ಜಾತ್ರಾ ಮಹೋತ್ಸವ
– ಸರ್ವರನ್ನು ಸ್ವಾಗತಿಸಿದ ದೇವಸ್ಥಾನ ಸಮಿತಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆರಗದಲ್ಲಿ ಶ್ರೀಕಲಾನಾಥೇಶ್ವರ ಜಾತ್ರಾ ರಂಗು ಶುರುವಾಗಿದೆ. ಮಾ.11ರಿಂದ 13ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಸರ್ವರನ್ನು ದೇವಸ್ಥಾನ ಸಮಿತಿ ಸ್ವಾಗತ ಮಾಡಿದೆ. ಮಾರ್ಚ್ 10ರ ಭಾನುವಾರ ಬೆಳಿಗ್ಗೆ ಗಣಪತಿ ಪೂಜೆಯ ಮೂಲಕ ರಥೋತ್ಸವದ ಕಾರ್ಯಕ್ರಮ ಆರಂಭವಾಗಲಿದೆ. ಮಾರ್ಚ್ 11 ರ ಸೋಮವಾರ ಮಧ್ಯಾಹ್ನ 12:30 ಕ್ಕೆ ಶ್ರೀ ಮನ್ಮಹಾರಥಾರೋಹಣ ನಡೆಯಲಿದೆ. ಇದೇ ದಿನ ಸಾಯಂಕಾಲ ಆರಗದ ರಾಜಬೀದಿಯಲ್ಲಿ ರಥೋತ್ಸವ ಸಾಗಲಿದೆ. ಇದೇ ದಿನ ರಾತ್ರಿ 8 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮಾರ್ಚ್ 12ರ ಮಂಗಳವಾರ ರಾತ್ರಿ 9:30ಕ್ಕೆ ಆರಗದ ಯಕ್ಷ ಮಿತ್ರರ ಪ್ರಾಯೋಜಕತ್ವದಲ್ಲಿ ಸಾಲಿಗ್ರಾಮ ಮೇಳದವರಿಂದ ನೀಲಗಗನದೊಳ್ ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾರ್ಚ್ 13ರ ಬುಧವಾರ ಬೆಳಿಗ್ಗೆ ಸಂಪ್ರೋಕ್ಷಣ ಮತ್ತು ಮಹಾಪೂಜೆಯ ಮೂಲಕ ರಥೋತ್ಸವ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. ಆರಗ ಕಲಾನಾಥೇಶ್ವರ ದೇವಸ್ಥಾನದ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಜಾತ್ರೆಯ ರಥೋತ್ಸವ ಸಮಿತಿ ಕೋರಿದೆ.

Categories
ಉದ್ಯೋಗ ಸುದ್ದಿ ಮಾಹಿತಿ

ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು!

ರೈಲ್ವೆಯಲ್ಲಿ ಮತ್ತೆ 4,660 ಹುದ್ದೆ: ನೀವೂ ಅರ್ಜಿ ಹಾಕಬಹುದು!
– 4,208 ಕಾನ್ಸ್‌ಟೆಬಲ್, 452 ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆ
– ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವಾಗ…?

NAMMUR EXPRESS NEWS
ಭಾರತೀಯ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ವರ್ಷದಲ್ಲಿ ಮೂರನೇ ಅಧಿಸೂಚನೆ ಹೊರಡಿಸುವ ಮೂಲಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದ್ದು, ನೇಮಕಾತಿ ಸಂಪೂರ್ಣ ವಿವರ ಈ ಕೆಳಕಂಡಂತಿದೆ. ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್‌ಇನ್ಸ್‌ಪೆಕ್ಟ‌ರ್, ರೈಲ್ವೆ ಕಾನ್ಸ್‌ಟೇಬಲ್‌ ಸೇರಿ ಒಟ್ಟು 4660 ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಲ್ಲದೆ ಆರ್‌ಆರ್‌ಬಿ ಆರ್‌ಪಿಎಫ್‌ನ ಎಸ್‌ಐ, ಕಾನ್ಸ್‌ಟೇಬಲ್ ಹುದ್ದೆಗಳ ಕುರಿತು ಆಸಕ್ತಿ ಇರುವವರು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಯಬಹುದಾಗಿದೆ.

ನೇಮಕಾತಿ ವಿವರ:

ಸಂಸ್ಥೆ ಹೆಸರು: ಭಾರತೀಯ ರೈಲ್ವೆ
ಹುದ್ದೆ ಹೆಸರು: ಆರ್‌ಪಿಎಫ್ ಸಬ್ ಇನ್ಸ್‌ಪೆಕ್ಟ‌ರ್, ಆರ್‌ಪಿಎಸ್‌ ಕಾನ್ಸ್‌ಟೇಬಲ್‌
ರೈಲ್ವೆ ಸಬ್ ಇನ್ಸ್‌ಪೆಕ್ಟ‌ರ್ ಹುದ್ದೆಗಳ ಸಂಖ್ಯೆ: 452
ರೈಲ್ವೆ ಕಾನ್ಸ್‌ಟೇಬಲ್ ಹುದ್ದೆಗಳ ಸಂಖ್ಯೆ: 4208
ಖಾಲಿ ಹುದ್ದೆ ಒಟ್ಟು ಸಂಖ್ಯೆ: 4660
ಮಾಸಿಕ ವೇತನ: 21700 ರಿಂದ 35,400 ರೂಪಾಯಿ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಏಪ್ರಿಲ್ 1
ಪೋಸ್ಟಿಂಗ್‌- ದೇಶದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಿಯಾದರೂ

ವಿದ್ಯಾರ್ಹತೆ : ಸಬ್‌ಇನ್ಸ್‌ಪೆಕ್ಟ‌ರ್ ಹುದ್ದೆಗೆ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು.
ಕಾನ್ಸ್‌ಟೇಬಲ್‌ ಹುದ್ದೆಗೆ ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣಗೊಳಿಸಿರಬೇಕು ಎಂದು ಅಧಿಸೂಚನೆ ನೀಡಲಾಗಿದೆ.
ವಯೋಮಿತಿ : ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ಜುಲೈ 01ಕ್ಕೆ 20-28 ವರ್ಷವಾಗಿರಬೇಕು. ಉಳಿದಂತೆ ಕಾನ್ಸ್‌ಟೇಬಲ್ ಹುದ್ದೆಯ ಅಭ್ಯರ್ಥಿಗಳಿಗೆ ಅದೇ ದಿನಾಂಕಕ್ಕೆ 18-28 ವರ್ಷ ವಯಸ್ಸಾಗಿರಬೇಕು.
ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ
ಅಭ್ಯರ್ಥಿಗಳಿಗೆ ಶುಲ್ಕ: 500 ರೂ. ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ: 250 ರೂ.

ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್‌ ಸ್ವೀಕಾರ ಆರಂಭಿಕ ದಿನಾಂಕ: 15-04-2024
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 14-05-2024
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಲಿಂಕ್ ಅನ್ನು 2024ರ ಏಪ್ರಿಲ್ 15 ರಂದು ಆಯಾ ರೈಲ್ವೆ ವಲಯಗಳ ಪ್ರಾದೇಶಿಕ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಲಿಂಕ್ ಗೆ ಭೇಟಿ www.rrbbnc.gov.in ಪಡೆದುಕೊಳ್ಳಬೇಕು.

Categories
ರಾಷ್ಟ್ರೀಯ ವಾರ್ತೆ

ಶಾಲೆಗೆ ಬಂದರು ರೋಬೋಟ್ ಟೀಚರ್!

ಶಾಲೆಗೆ ಬಂದರು ರೋಬೋಟ್ ಟೀಚರ್!
– ದೇಶದ ಮೊದಲ ರೋಬೊ ಶಿಕ್ಷಕಿ ಎಲ್ಲರ ಆಕರ್ಷಣೆ
– ಕೇರಳದ ಶಾಲೆಯಲ್ಲಿ ದೇಶದ ಮೊದಲ ಪ್ರಯೋಗ

NAMMUR EXPRESS NEWS
ತಿರುವನಂತಪುರಂ: ಇತ್ತೀಚೆಗಷ್ಟೇ ಭಾರತದ ಸುದ್ದಿ ವಾಹಿನಿಗಳಿಗೆ ರೋಬೋ ನಿರೂಪಕಿಯರು ಎಂಟ್ರಿಕೊಟ್ಟಿದ್ದರು. ಇದೀಗ ದೇಶದ ಮೊದಲ ಎಐ (ಕೃತಕ ಬುದ್ಧಿಮತ್ತೆ) ಶಿಕ್ಷಕಿ ಕೇರಳದ ತಿರುವನಂತಪುರಂ ಶಾಲೆಗೆ ಕಾಲಿಟ್ಟಿದ್ದಾರೆ. ಮೇಕರ್‌ಲ್ಯಾಬ್ ಎಜುಟೆಕ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಐಆರ್‌ಐಎಸ್ (ಐರಿಸ್), ಕೇರಳದ ಪ್ರಪ್ರಥಮ, ಅಷ್ಟೇ ಏಕೆ ಇಡೀ ದೇಶದ ಮೊದಲ ಮಾನವರೂಪಿ (ಹೂಮನಾಯ್ಸ್) ರೋಬೋ ಶಿಕ್ಷಕಿ ಎಂಬ ದಾಖಲೆ ಬರೆದಿದೆ.

ಬಹುಭಾಷಾ ಶಿಕ್ಷಕಿ:

ಫೆಬ್ರವರಿಯಲ್ಲಿ ಅನಾವರಣಗೊಳಿಸಲಾದ ಐರಿಸ್ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೇಕರ್‌ಲ್ಯಾಬ್ ಹಂಚಿಕೊಂಡಿರುವ ವಿಡಿಯೋ, ಈ ಬಹುಭಾಷಾ ಎಐ ಶಿಕ್ಷಕಿಯ ಸಾಮರ್ಥ್ಯಗಳನ್ನು ಪ್ರಸ್ತುತಪಡಿಸುತ್ತದೆ. ನಾನಾ ವಿಷಯಗಳ ಬಗ್ಗೆ ಕೇಳುವ ತುಂಬಾ ಸಂಕೀರ್ಣವಾದ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ವೈಯಕ್ತಿಕ ಧ್ವನಿ ನೆರವನ್ನು ಒದಗಿಸುವ ಇದು ಪರಸ್ಪರ ಸಂವಹನದ ಕಲಿಕಾ ಅನುಭವವನ್ನು ಕೂಡ ಕೊಡುತ್ತದೆ. ತರಗತಿಯಲ್ಲಿ ಓಡಾಟದ ಅನುಕೂಲಕ್ಕಾಗಿ ಐರಿಸ್‌ಗೆ ಚಕ್ರವನ್ನೂ ಅಳವಡಿಸಲಾಗಿದೆ.

ಜಾಲತಾಣದಲ್ಲಿ ವೈರಲ್!:

ಐರಿಸ್ ಎಐ ಶಿಕ್ಷಕಿಯ ಸಾಮರ್ಥ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೃತಕ ಬುದ್ಧಿಮತ್ತೆ ಕಾಲದಲ್ಲಿ ಕೇರಳಕ್ಕೆ ಕಾಲಿಟ್ಟಿರುವ ಹೊಸ ಟೀಚರ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವುದು ನಿಶ್ಚಿತ ಅಂತ ಶಿಕ್ಷಣ ತಜ್ಞರು ಭವಿಷ್ಯ ನುಡಿದಿದ್ದಾರೆ. ಸಾಕ್ಷರತೆಯಲ್ಲಿ ಮುಂದಿರುವ ಕೇರಳಕ್ಕೆ ಇಂಥದ್ದೊಂದು ತಂತ್ರಜ್ಞಾನ ಬೇಕಿತ್ತೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಹೆಮ್ಮೆಯ ಶಾಲೆ :

ಕಡುವಾಯಿಲ್ ಥಂಗಲ್ ನಡೆಸುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆ ಈ ಆವಿಷ್ಕಾರಕ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಸಂಸ್ಥೆಯಾಗಿದೆ. ಐರಿಸ್, ಅಟಲ್ ಟಿಂಕರಿಂಗ್ ಯೋಜನೆಯ ಭಾಗವಾಗಿದೆ. ನೀತಿ ಆಯೋಗ 2021ರಲ್ಲಿ ಆರಂಭಿಸಿದ ಈ ಉಪಕ್ರಮವು ಶಾಲೆಗಳಲ್ಲಿ ಪತ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ಸೃಷ್ಟಿಯಾದ ಎಐ ಟೀಚರ್ ರೋಬೋ ಐರಿಸ್ ಅನ್ನು ಅನಾವರಣಗೊಳಿಸಿದ್ದು ಹೆಮ್ಮೆ ಮೂಡಿಸಿದೆ ಎಂದು ಮೇಕರ್‌ಲ್ಯಾಬ್‌ ಎಜುಟೆಕ್ ಹೇಳಿದೆ. ಅದು ಶಿಕ್ಷಣ ಕ್ಷೇತ್ರದ ನಮಗೆ ಗೊತ್ತಿರುವ ಕಲಿಕೆಯ ವಲಯವನ್ನು ಮರುವ್ಯಾಖ್ಯಾನಿಸಲು ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ಬೆಳವಣಿಗೆಯು ಕೇರಳದ ಶಿಕ್ಷಣ ರಂಗದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ತರಗತಿ ಕೋಣೆಗಳಲ್ಲಿ ಅದು ಬೋಧಕರಿಗೆ ಬೆಂಬಲದ ಪಾತ್ರವನ್ನು ನಿರ್ವಹಿಸಲಿದೆ.

Categories
ಕರಾವಳಿ ಮಂಗಳೂರು

ಗ್ಯಾರಂಟಿ ಯೋಜನೆ ಜೊತೆ ಬಾಂಬ್ ಉಚಿತ ಎಂದಾತನ ಮೇಲೆ ಕೇಸ್!

ಗ್ಯಾರಂಟಿ ಯೋಜನೆ ಜೊತೆ ಬಾಂಬ್ ಉಚಿತ ಎಂದಾತನ ಮೇಲೆ ಕೇಸ್!
– ದಿವಾಕರ್ ಕೋಟ್ಯಾನ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ
– ಬಸ್ ಫ್ರಿ, ವಿದ್ಯುತ್ ಫ್ರಿ ಈಗ ಬಾಂಬ್ ಸ್ಪೋಟ ಫ್ರೀ ಎಂದು ವಿಡಿಯೋ!

NAMMUR EXPRESS NEWS
ಮಲ್ಪೆ: “ರಾಜ್ಯ ಸರ್ಕಾರದ ಗ್ಯಾರಂಟಿ ಜೊತೆಗೆ ಬಾಂಬ್ ಕೂಡಾ ಉಚಿತವಾಗಿ ಸಿಗುತ್ತದೆ” ಎಂದು ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ನಿಂದಿಸಿ ಅವಹೇಳನ ಮಾಡಿ ವಿಡಿಯೋ ವೈರಲ್ ಮಾಡಿದ ಗರಡಿ ಮಜಲು ನಿವಾಸಿ ದಿವಾಕರ್ ಕೋಟ್ಯಾನ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ದಿವಾಕರ್ ಕೋಟ್ಯಾನ್ ವಿಡಿಯೋದಲ್ಲಿ, ‘ಬಸ್ ಟಿಕೆಟ್ ಫ್ರಿ, ವಿದ್ಯುತ್ ಬಿಲ್ ಫ್ರಿ ಜೊತೆಗೆ ಈಗ ಹೊಸದಾಗಿ ಬಾಂಬ್ ಸ್ಪೋಟ ಫ್ರೀ ಕೂಡ ರಾಜ್ಯ ಸರಕಾರ ಕೊಡುತ್ತಿದೆ. ಇದಕ್ಕೂ ಹಣ ಕೊಡಬೇಕೆಂದು ಇಲ್ಲ ಎಲ್ಲವೂ ಫ್ರಿ….ಆಮೇಲೆ ನೇರವಾಗಿ ಮೇಲೆ ಇದಕ್ಕಾಗಿ ನೋ ಪಾಸ್ ಪೋಟ್ ಬೇಡ ವೀಸಾ ನೂ ಬೇಡ .. ಸನ್ಮಾನ್ಯ ಮುಖ್ಯಮಂತ್ರಿ ಸಿದ್ರುಲ್ಲಾ ಖಾನ್.. ಹಿಂದುಗಳೇ ಫ್ರೀ ಬೇಕಲ್ಲ ತೆಗೆದುಕೊಳ್ಳಿ,..ಮುಂದೆ ಇನ್ನು ಆರು ತಿಂಗಳಿಗೆ ಬಸ್, ವಿದ್ಯುತ್, 2000ರೂ. ಜೊತೆ ಬಾಂಬ್ ಕೂಡ ಫ್ರೀ ಸಿಗುತ್ತದೆ.

ಮಜಾ ಮಾಡಿ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದೀಗ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ದಿವಾಕರ್ ಕೋಟ್ಯಾನ್ ರಾಜ್ಯ ಸರಕಾರದ ಯೋಜನೆಗಳ ಜೊತೆ ಬಾಂಬ್ ಉಚಿತ ಎಂದು ಹೇಳುವುದರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮ್ಮದ್ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅಕ್ರಮ ಗೋ ಸಾಗಾಟ: ಹಿಡಿದು ಹೊಡೆದ ಜನ!

ತೀರ್ಥಹಳ್ಳಿಯಲ್ಲಿ ಅಕ್ರಮ ಗೋ ಸಾಗಾಟ: ಹಿಡಿದು ಹೊಡೆದ ಜನ!
– ತೀರ್ಥಹಳ್ಳಿ ಕುರುವಳ್ಳಿಯಲ್ಲಿ ಘಟನೆ: 8 ದನಗಳ ರಕ್ಷಣೆ
– ಬಯಲು ಸೀಮೆ ಕಡೆಗೆ ಪಿಕ್ ಅಪ್ ಅಲ್ಲಿ ಸಾಗಾಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪಿಕ್ ಅಪ್ ಅಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರೇ ಹಿಡಿದು ಸಾಗಾಟ ಮಾಡುತ್ತಿದ್ದ ಓರ್ವನಿಗೆ ಧರ್ಮದೇಟು ನೀಡುವ ಘಟನೆ ಬುಧವಾರ ರಾತ್ರಿ ನಡೆದಿದೆ.

ತೀರ್ಥಹಳ್ಳಿ ಕುರುವಳ್ಳಿಯಲ್ಲಿ 8 ದನಗಳನ್ನು ಬಯಲು ಸೀಮೆ ಕಡೆಗೆ ಪಿಕ್ ಅಪ್ ಅಲ್ಲಿ ಸಾಗಾಟ ಮಾಡುತ್ತಿದ್ದೂ ಸ್ಥಳೀಯರು ಹಿಡಿದಿದ್ದಾರೆ. ಪೊಲೀಸ್ ಸ್ಥಳಕ್ಕೆ ಆಗಮಿಸಿದ್ದಾರೆ.

Categories
ತೀರ್ಥಹಳ್ಳಿ

ನಿರುಪಯುಕ್ತ ವಸ್ತುಗಳ ಹರಾಜು – ಗ್ರಾಮ ಪಂಚಾಯತಿ ಕಾರ್ಯಾಲಯ, ಮಂಡಗದ್ದೆ

ನಿರುಪಯುಕ್ತ ವಸ್ತುಗಳ ಹರಾಜು
– ಗ್ರಾಮ ಪಂಚಾಯತಿ ಕಾರ್ಯಾಲಯ, ಮಂಡಗದ್ದೆ
ತೀರ್ಥಹಳ್ಳಿ ತಾಲ್ಲೂಕು – 577220

E-mail ID- th.mandagadde@gmail.com ದೂರವಾಣಿ: 08181-245572. ಮೊ: 9480876445
ದಿನಾಂಕ: 22/02/2024
ಗ್ರಾಮಸ್ಥರುಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಮಂಡಗದ್ದೆ ಗ್ರಾಮ ಪಂಚಾಯತಿ ಕಛೇರಿಯಲ್ಲಿರುವ ಈ ಕೆಳಕಂಡ ನಿರುಪಯುಕ್ತ ವಸ್ತುಗಳನ್ನು ದಿನಾಂಕ 07/03/2024 ನೇ ಗುರುವಾರ ಬೆಳಿಗ್ಗೆ 11-00 ಘಂಟೆಗೆ ಸರಿಯಾಗಿ ಮಂಡಗದ್ದೆ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಬಹಿರಂಗವಾಗಿ ವಿಲೇವಾರಿ ಮೂಲಕ ಹರಾಜು ಮಾಡಲಾಗುತ್ತದೆ. ಆಸಕ್ತರು ಈ ಹರಾಜಿನಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.

ಷರತ್ತುಗಳು:

1. ಹರಾಜಿನಲ್ಲಿ ಭಾಗವಹಸುವವರು ರೂ 1000-00 (ಒಂದು ಸಾವಿರ) ಠೇವಣೆ ಕಟ್ಟತಕ್ಕದ್ದು, ಠೇವಣಿ ಹಣವನ್ನು ಈ ಹರಾಜು ಪ್ರಕಟಗೊಂಡ ದಿನಾಂಕದಿಂದ 07/03/2024ರ ಬೆಳಿಗ್ಗೆ 10-00 ಘಂಟೆಯವರೆಗೆ ಮಾತ್ರ ಕಛೇರಿಯ ಸಮಯದಲ್ಲಿ ತೆಗೆದುಕೊಳ್ಳಲಾಗುವುದು.

2. ಠೇವಣಿ ಕಟ್ಟಿದವರಿಗೆ ಮಾತ್ರ ಹರಾಜು ದಿನ ಕೊಠಡಿಯೊಳಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಇತರರಿಗೆ ಹರಾಜು ಕೊಠಡಿಯೊಳಗೆ ಭಾಗವಹಿಸಲು ಅವಕಾಶವಿರುವುದಿಲ್ಲ.

3. ಹರಾಜು ಪಡೆದ ಅಂತಿಮ ಬಿಡ್ಡುದಾರರು ಪ್ರತಿ ನಿರುಪಯುಕ್ತ ಸಾಮಾಗ್ರಿಯ ಮೌಲ್ಯದ ಹಣವನ್ನುಹರಾಜು ನಡೆದ ಮೂರು ದಿನಗಳೊಳಗೆ ಪಾವತಿ ಮಾಡಬೇಕು, ಮೂರು ದಿನಗಳೊಳಗೆ ಪಾವತಿ ಮಾಡದಿದ್ದಲ್ಲಿ, ಠೇವಣಿ ಹಣ ರೂ 1000-00 ಮುಟ್ಟುಗೊಲು ಹಾಕಿಕೊಂಡು ಮರು ಹರಾಜು ಪ್ರಕ್ರಿಯೆ ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸುವವರು ಮಂಡಗದ್ದೆ ಗ್ರಾಮ ಪಂಚಾಯತಿಗೆ ಸ್ವತ್ತಿನ ತೆರಿಗೆ, ಬಾಡಿಗೆ, ಹಾಗೂ ಇನ್ನಿತರೆ ಯಾವುದೇ ಬಾಕಿದಾರರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

4. ಹರಾಜಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಕಛೇರಿ ಕೆಲಸದ ವೇಳೆಯಲ್ಲಿ ಪಡೆಯಬಹುದು. ಹಾಗೂ ಹರಾಜಿಗೊಳಪಡುವ ನಿರುಪಯುಕ್ತ ಸಾಮಗ್ರಿಗಳನ್ನು ಕಛೇರಿ ವೇಳೆಯಲ್ಲಿ ಪರಿಶೀಲಿಸಲು ಲಭ್ಯವಿರುತ್ತದೆ.

5. ಹರಾಜನ್ನು ತಿರಸ್ಕರಿಸುವ, ಮುಂದೂಡುವ ಹಕ್ಕು ಅಧಿಕಾರಿವು ಗ್ರಾಮ ಪಂಚಾಯತಿಗೆ ಇರುತ್ತದೆ.

ಹರಾಜಿಗಿರುವ ನಿರುಪಯುಕ್ತ ವಸ್ತುಗಳ ವಿವರ

(1) ನೀರಿನ ಮೋಟಾರ್‌ಗಳು.
(2) ಕಬ್ಬಿಣದ ಪೈಪ್ ( 2ಇಂಚು)- 15
(3) ಪ್ರಿಂಟರ್ 1
(4) ಕಬ್ಬಿಣದ ಕುರ್ಚಿ 10.
(5) ನೀರಿನ ಫಿಲ್ಟರ್ 2.
(6) ಡ್ರಮ್ 3.
(7) ಎಲ್.ಇ.ಡಿ ಬಲ್ಪ್ಗಳು.
(8) ಕಬ್ಬಿಣದ ರಾಡ್ 10.
(9) ಪೇಪರ್/ರಟ್ಟು.
(10) ಕಬ್ಬಿಣದ ಗೇಟ್ 1.
(11) ಕಿಟಕಿ 1.
(12)ಕಂಪ್ಯೂಟರ್ 1.
(13) ಮರದ ಕುರ್ಚಿ 2

ಇಂದ
ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಮತ್ತು ಸದಸ್ಯರು, ಗ್ರಾಮ ಪಂಚಾಯತ್ ಮಂಡಗದ್ದೆ,

ಸ್ಥಳ: ಮಂಡಗದ್ದೆ