Categories
ತೀರ್ಥಹಳ್ಳಿ

ಮುಕೇಶ್ ಕಾಮತ್ ಅವರಿಗೆ ಗೌರವ

ಮುಕೇಶ್ ಕಾಮತ್ ಅವರಿಗೆ ಗೌರವ
– ಬಯೋಕಾನ್ ಕಂಪನಿಯ ಸಿ. ಎಫ್. ಓ ಹುದ್ದೆ
– ತುಂಗಾ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಂದ ದಬ್ಬಣಗದ್ದೆ ನೇತೃತ್ವದಲ್ಲಿ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ತುಂಗಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ, ತೀರ್ಥಹಳ್ಳಿ ಮೂಲದ ಮುಕೇಶ್ ಕಾಮತ್ ದೇಶದ ಔಷಧ ಕ್ಷೇತ್ರದ ದಿಗ್ಗಜ ಸಂಸ್ಥೆ ಬಯೋಕಾನ್ ನೂತನ ಸಿ. ಎಫ್. ಓ ಹುದ್ದೆ ಅಲಂಕರಿಸಿದ್ದಾರೆ.
ತೀರ್ಥಹಳ್ಳಿ ಹಾಗೂ ತುಂಗಾ ಮಹಾವಿದ್ಯಾಲಯಕ್ಕೆ ಈ ಹುದ್ದೆ ಗೌರವ ತಂದಿದೆ. ಈಗಾಗಲೇ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭಾಶಯ ಸಲ್ಲಿಸಿದ್ದಾರೆ.

ಶನಿವಾರ ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಮುಕೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮುಕೇಶ್ ಅವರು ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು.

ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀನಂದಾ ದಬ್ಬಣಗದ್ದೆ, ಕಾರ್ಯದರ್ಶಿ ಯುವರಾಜ್, ಉಪಾಧ್ಯಕ್ಷೆ ಅಕ್ಷತಾ, ಖಜಾಂಚಿ ಭರತ್ ಕೋಡ್ಲು, ಕಾರ್ಯಕಾರಿ ಸದಸ್ಯರಾದ ಪೂರ್ಣೇಶ್ ಕೆಳಕೆರೆ, ರಜನಿ ಜೋಗಿ, ನಮ್ಮೂರ್ ಎಕ್ಸ್ ಪ್ರೆಸ್ ಮುಖ್ಯಸ್ಥರಾದ ರಾಘವೇಂದ್ರ ಇತರರು ಇದ್ದರು.

Categories
ಮೈಸೂರು ಹಾಸನ

ಮೈಸೂರು ಟಾಪ್ 3 ನ್ಯೂಸ್..!

ಮೈಸೂರು ಟಾಪ್ 3 ನ್ಯೂಸ್..!

– ವಿದ್ಯಾರ್ಥಿನಿಗೆ ಗುದ್ದಿದ ತುತುಕುಡಿ ಎಕ್ಸ್‌ಪ್ರೆಸ್‌ ರೈಲು.!
– ಎಚ್‌ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದನೆ; ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು
– ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ

NAMMUR EXPRESS NEWS

ಮಂಡ್ಯ: ತುತುಕುಡಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದಾಳೆ. ಮಂಡ್ಯದ ಕನಕ ಭವನದ ಹಿಂಭಾಗ ರೈಲ್ವೆ ಟ್ರಾಕ್‌ನಲ್ಲಿ ಘಟನೆ ನಡೆದಿದೆ. ಲಾವಣ್ಯ (18) ಗಂಭೀರ ಗಾಯಗೊಂಡವಳು.
ಲಾವಣ್ಯ ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿದ್ದಾಳೆ. ಶುಕ್ರವಾರ ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗುವಾಗ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ತುತುಕುಡಿ ಎಕ್ಸ್‌ಪ್ರೆಸ್ ರೈಲು ಗುದ್ದಿದೆ. ಪರಿಣಾಮ ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಗಾಯಾಳು ಲಾವಣ್ಯಳನ್ನು ಸ್ಥಳೀಯರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಚ್‌ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದನೆ; ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು

ಮಂಡ್ಯ: ಕೇಂದ್ರ ಸಚಿವ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಎಚ್‌ಡಿಕೆಯನ್ನು ಕೆಟ್ಟ ಪದಗಳಿಂದ ಬೈದ ಹಿನ್ನೆಲೆಯಲ್ಲಿ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಜೆಡಿಎಸ್‌ ಕಾರ್ಯಕರ್ತರು ದೂರು ನೀಡಿದ್ದಾರೆ.
ಕೆ.ಆ‌ರ್.ಪೇಟೆ ಟೌನ್‌ ಪೊಲೀಸ್ ಠಾಣೆ ಮತ್ತು ಮಂಡ್ಯದ ಸೈಬ‌ರ್ ಕ್ರೈಂ ಸೆಂಟ್ರಲ್‌ ಪೊಲೀಸ್‌ ಠಾಣೆಗೆ ಪ್ರತ್ಯೇಕ ದೂರುಗಳು ದಾಖಲಾಗಿವೆ. ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿರುವ ಮಂಗಳ ಎಂಬಾಕೆ ಎಚ್‌ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ನಟ ದರ್ಶನ್ ಕೃತ್ಯ ಖಂಡಿಸಲು ಮಂಡ್ಯದಲ್ಲಿ ತಲಾ 150 ರೂ. ಕೊಟ್ಟು ಪ್ರತಿಭಟನೆ ಮಾಡಿಸಿದ್ದಾನೆ ಎಂದು ತಮ್ಮ ನಾಯಕನ ವಿರುದ್ಧ ಮಹಿಳೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆ.ಆ‌ರ್.ಪೇಟೆ ಜೆಡಿಎಸ್‌ ಮುಖಂಡ ವಕೀಲ ಧನಂಜಯ್ ಕುಮಾರ್ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ!

ಮೈಸೂರು: ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿರುವ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ರವಿ ಜೀವಾವಧಿ ಶಿಕ್ಷೆಗೆ ಒಳಗಾದವನು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ನಿವಾಸಿಯಾದ ರವಿ ಎಂಬಾತ ಪತ್ನಿ ಅಮುದಾಳ ಶೀಲ ಶಂಕಿಸಿ ಕೊಲೆ ಮಾಡಿದ್ದ.
ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ರವಿಗೆ ಐಪಿಸಿ ಸೆಕ್ಷನ್ 498(ಎ ) ಪ್ರಕಾರ 2 ವರ್ಷ ಕಠಿಣ ಶಿಕ್ಷೆ ಒಂದು ಸಾವಿರ ದಂಡ ಹಾಗೂ ಐಪಿಸಿ ಸೆಕ್ಷನ್ 302 ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡ ಹಾಕಿ ಆದೇಶಿಸಿದೆ. ಮೈಸೂರು 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್‌ ತೀರ್ಪು ನೀಡಿದ್ದಾರೆ.

Categories
ಬೆಂಗಳೂರು

ಬರ್ತಿದೆ ನಕಲಿ ಮಾವಿನ ಹಣ್ಣು!

ಬರ್ತಿದೆ ನಕಲಿ ಮಾವಿನ ಹಣ್ಣು!

– ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ
– ತಮಿಳುನಾಡಿನಲ್ಲಿ ಆಘಾತಕಾರಿ ಸುದ್ದಿ

NAMMUR EXPRESS NEWS
ಬೆಂಗಳೂರು: ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವ ಗಾಡಿಗಳ ಮೇಲೆ ಮಾವಿನ ಹಣ್ಣುಗಳನ್ನ ಕಂಡರೆ ಮಾವು ಪ್ರಿಯರು ಪುಳಕಿತರಾಗುತ್ತಾರೆ. ಆದರೆ ಯಾವುದು ನಿಜ, ಯಾವುದು ನಕಲಿ ಎಂಬುದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಮಾವಿನ ಹಣ್ಣುಗಳು ನಕಲಿಯೇ.? ಎಂದು ಶಾಕ್ ಆಗುತ್ತಿದ್ದೀರಾ.? ಆದ್ರೆ, ಇದು ನಿಜ. ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಮಾವಿನ ಹಣ್ಣುಗಳಿವೆ. ಅವುಗಳನ್ನ ತಿನ್ನುವವರ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ತಮಿಳುನಾಡಿನ ಆಹಾರ ಸುರಕ್ಷತಾ ಇಲಾಖೆ ಉಗ್ರಾಣದಿಂದ ನಕಲಿ ಮಾವಿನ ಹಣ್ಣನ್ನು ವಶಪಡಿಸಿಕೊಂಡಿದೆ. ಸುಮಾರು ಏಳೂವರೆ ಟನ್ ನಕಲಿ ಮಾವಿನ ಹಣ್ಣನ್ನು ವಶಪಡಿಸಿಕೊಂಡ ಅಧಿಕಾರಿಗಳು ಅವುಗಳನ್ನು ತಿನ್ನುವುದು ಎಷ್ಟು ಅಪಾಯಕಾರಿ ಎಂದು ಸಾರ್ವಜನಿಕರಿಗೆ ತಿಳಿಸಿದರು.

ನಕಲಿ ಮಾವುಗಳನ್ನ ಯಂತ್ರಗಳಿಂದ ತಯಾರಿಸೋದಿಲ್ಲ. ಈ ಮಾವುಗಳನ್ನ ಮರಗಳಿಂದ ಕಿತ್ತು ಕೃತಕವಾಗಿ ಮಾಗಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಆದ್ದರಿಂದ ಅವುಗಳನ್ನ ನಕಲಿ ಮಾವಿನಹಣ್ಣು ಎಂದು ಕರೆಯಲಾಗುತ್ತದೆ. ಈ ನಕಲಿ ಮಾವುಗಳನ್ನ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗುತ್ತದೆ. ಆದರೆ ಅದರ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಏಕೆಂದರೆ ಅದರ ಸಹಾಯದಿಂದ ಮಾಗಿಸಿದ ಹಣ್ಣುಗಳು ಮಾನವನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇನ್ನು ಇಂತಹ ಮಾವಿನ ಹಣ್ಣನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎನ್ನುತ್ತಾರೆ ತಜ್ಞರು.

Categories
ರಾಷ್ಟ್ರೀಯ ವಾರ್ತೆ

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ ಇನ್ಮುಂದೆ ಜೈಲು!

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ ಇನ್ಮುಂದೆ ಜೈಲು!

– ಕಾನೂನು ಜಾರಿ ಮಾಡಿದ ನರೇಂದ್ರ ಮೋದಿ ಸರ್ಕಾರ
– ಕನಿಷ್ಠ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ

ನವ ದೆಹಲಿ: ದೇಶದ ವಿವಿಧ ಕಡೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಲಕ್ಷ ಲಕ್ಷ ಯುವ ಜನರ ಬದುಕನ್ನು ಕತ್ತಲೆಯಲ್ಲಿಟ್ಟಿದೆ.
ಇದೀಗ ಕೇಂದ್ರ ಸರ್ಕಾರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ಮುಂದಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ತಪ್ಪಿತಸ್ಥರಿಗೆ ಕನಿಷ್ಠ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡವನ್ನು ಈ ಕಾಯ್ದೆಯು ಹೊಂದಿದೆ. ಯಾವುದೇ ವ್ಯಕ್ತಿ, ಗುಂಪು, ಸಂಸ್ಥೆ, ಪರೀಕ್ಷಾ ಅಧಿಕಾರಿಗಳು ಕೃತ್ಯವೆಸಗಿದಲ್ಲಿ ಕನಿಷ್ಠ 5-10 ವರ್ಷ ಜೈಲು, 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಕಾಯ್ದೆಯಲ್ಲಿ ಯುಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೇ, ಬ್ಯಾಂಕಿಂಗ್‌, ಎನ್‌ಟಿಎ ನಡೆಸುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳು ಒಳಗೊಂಡಿವೆ.

Categories
ಕರಾವಳಿ

ಟಾಪ್ 3 ನ್ಯೂಸ್ ಕರಾವಳಿ

ಟಾಪ್ 3 ನ್ಯೂಸ್ ಕರಾವಳಿ

– ಮೂಲ್ಕಿ: ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರು!
– ಉಪ್ಪಿನಂಗಡಿ: ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ
– ಕಾರ್ಕಳ: ತೆಂಗಿನ ಮರದಿಂದ ಬಿದ್ದು ಸಾವು!

NAMMUR EXPRESS NEWS
ಮಂಗಳೂರು: ಮೂಲ್ಕಿಯಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಹಾಗೂ ಶ್ರೀ ನವದುರ್ಗ ಪ್ರಸಾದ್ ಬಸ್ ನಡುವೆ ಶನಿವಾರ ಬೆಳಗ್ಗೆ ಕೊಲ್ನಾಡ್ ಇಂಡಸ್ಟ್ರಿಯಲ್ ಕ್ರಾಸ್ ನಲ್ಲಿ ಅಪಘಾತವಾಗಿದೆ.
ಇನ್ನೋವಾ ಕಾರು ನವದುರ್ಗ ಬಸ್ ಗೆ ಹಿಂದೆಯಿಂದ ಬಡಿದಿದೆ. ಕೆಲವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ.

ಉಪ್ಪಿನಂಗಡಿಯಲ್ಲಿ ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ
– ಫ್ಯಾನ್ಸಿ ಅಂಗಡಿಯೊಂದರಲ್ಲಿ ಭಾರೀ ಬೆಂಕಿ

ಉಪ್ಪಿನಂಗಡಿ: ಉಪ್ಪಿನಂಗಡಿ ಪೇಟೆಯಲ್ಲಿರುವ ಪೃಥ್ವಿ ವಾಣಿಜ್ಯ ಮಳಿಗೆಯ ಫ್ಯಾನ್ಸಿ ಅಂಗಡಿಯೊಂದರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಪಕ್ಕದಲ್ಲಿನ ಕೆಲವು ಅಂಗಡಿಗಳಿಗೂ ವ್ಯಾಪಿಸಿ ಸಾಕಷ್ಟು ಹಾನಿಯುಂಟು ಮಾಡಿದೆ.
ಪೃಥ್ವಿ ವಾಣಿಜ್ಯ ಮಳಿಗೆಯಲ್ಲಿನ ಅಂಗಡಿ ಮಾಲೀಕರು ರಾತ್ರಿ ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಮೊದಲಿಗೆ ಫ್ಯಾನ್ಸಿ ಅಂಗಡಿಯಿಂದ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಾರ್ಕಳದಲ್ಲಿ ತೆಂಗಿನ ಮರದಿಂದ ಬಿದ್ದು ಸಾವು!

ಕಾರ್ಕಳ: ಕಾರ್ಕಳ ಶ್ರೀದೇವಿ ಕಾಲೋನಿ ಹತ್ತಿರ ಅಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದ ನಿವಾಸಿ ಶಂಕರ (50) ಎಂದು ಗುರುತಿಸಲಾಗಿದೆ.
ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಜೂ.19ರಂದು ಲೋಹಿತ್ ಎಂಬವರ ಮನೆಯ ಬಳಿಯ ತೆಂಗಿನ ಮರದಿಂದ ತೆಂಗಿನಕಾಯಿ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಜೂ.21ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಹಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಚಿತ್ರದುರ್ಗ

ಸರ್ಕಾರಿ ಶಾಲೆ ದತ್ತು ಪಡೆದ ಸದ್ಗುರು ಸಂಸ್ಥೆ!

ಸರ್ಕಾರಿ ಶಾಲೆ ದತ್ತು ಪಡೆದ ಸದ್ಗುರು ಸಂಸ್ಥೆ!

– ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲೆಗೆ ಅಗತ್ಯ ಸಲಕರಣೆ ವಿತರಣೆ
– ಸದ್ಗುರು ಪ್ರದೀಪ್ ಸೇವೆಗೆ ಎಲ್ಲೆಡೆ ಮೆಚ್ಚುಗೆ

NAMMUR EXPRESS NEWS

ಹೊಸದುರ್ಗ: ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲೆಯನ್ನು ಸದ್ಗುರು ಸಂಸ್ಥೆ ದತ್ತು ಸ್ವೀಕಾರ ಮಾಡಿಕೊಂಡು ಅಗತ್ಯ ಇರುವ ಪೀಠೋಪಕರಣಗಳನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಶಾಲಾ ಶಿಕ್ಷಕರು ಮತ್ತು ಊರಿನ ಯುವಕರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಈ ವೇಳೆ ಸದ್ಗುರು ಸಂಸ್ಥೆಯ ಮುಖ್ಯಸ್ಥರಾದ ಸದ್ಗುರು ಪ್ರದೀಪ್ ಸೇರಿದಂತೆ ಗ್ರಾಮಸ್ತರು, ಎಸ್.ಡಿ ಎಂಸಿ ಪ್ರಮುಖರು ಹಾಜರಿದ್ದರು. ಈಗಾಗಲೇ ಶಿಕ್ಷಣ, ಸಮಾಜ ಸೇವೆ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಸದ್ಗುರು ಪ್ರದೀಪ್ ಸೇವೆ ಸಲ್ಲಿಸುತ್ತಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಯೋಗ ಸಂಭ್ರಮ

ತೀರ್ಥಹಳ್ಳಿಯಲ್ಲಿ ಯೋಗ ಸಂಭ್ರಮ

– ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ.!
– ಯೋಗ ವಿಶ್ವಕ್ಕೆ ಭಾರತ ಕೊಟ್ಟಂತಹ ಬಹಳ ದೊಡ್ಡ ಕೊಡುಗೆ: ಆರಗ

NAMMUR EXPRESS NEWS

ತೀರ್ಥಹಳ್ಳಿ : ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ 10ನೇ ವಿಶ್ವ ಯೋಗ ದಿನಾಚರಣೆಯನ್ನು ಶುಕ್ರವಾರ ಗೋಪಾಲಗೌಡ ರಂಗಮಂದಿರದಲ್ಲಿ ನಡೆಸಲಾಯಿತು.ನೂರಾರು ಮಂದಿ ಯೋಗ ಬಗ್ಗೆ ಮಾಹಿತಿ ಪಡೆದರು.
ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ ಈ ಯೋಗ ವಿಶ್ವಕ್ಕೆ ಭಾರತ ಕೊಟ್ಟಂತಹ ಬಹಳ ದೊಡ್ಡ ಕೊಡುಗೆಯಾಗಿದೆ. ಆಹಾರವನ್ನು ಬೇಯಿಸಿ ತಿನ್ನಲು ಸಹ ಗೊತ್ತಿಲ್ಲದಂತೆ ವಿಶ್ವದ ಜನ ಇದ್ದಾಗ, ಆಗ ಋಷಿಮುನಿಗಳು ಮನುಷ್ಯ ಮತ್ತು ಪ್ರಾಣಿಗಳಿಗೆ ಇರುವಂತಹ ವ್ಯತ್ಯಾಸವನ್ನು ಹೇಳಿಕೊಡುತ್ತಾರೆ. ಇಂತಹ ಶ್ರೇಷ್ಠವಾದ ಮನುಕುಲ ಬದುಕಿರುವಂತಹ ಭೂಮಿ ಭಾರತ. ನಾವೆಲ್ಲ ಹೆಮ್ಮೆ ಪಡುವಂತಹ ಸಂದರ್ಭ ವಿಶ್ವ ಯೋಗ ದಿನಾಚರಣೆಯಾಗಿದೆ. ಮನುಷ್ಯ ಬದುಕಲು, ಆರೋಗ್ಯ ವೃದ್ಧಿಯಾಗಲು, ಉತ್ತಮ ಮನಸ್ಸನ್ನು ಹೊಂದಲು ನಮ್ಮ ದೇಶ ಯೋಗ ಅನುಸರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಂತ ಡಾ. ಜೀವಂಧರ್ ಜೈನ್ ಮಾತನಾಡಿ, ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಿಕೊಂಡು ಬಂದಿದ್ದೇವೆ. ನಮ್ಮ ಈ ಯೋಗ ಶಿಕ್ಷಣ ಶಾಲೆಗೆ ಸುಮಾರು 30 ವರ್ಷ ಆಯಿತು. ಉಚಿತವಾಗಿ ನಾವು ಯೋಗ ಶಿಕ್ಷಣ ಕೊಟ್ಟು ವಿಶೇಷವಾದ ಪ್ರೋತ್ಸಾಹವನ್ನು ಕೊಡುತ್ತಿದ್ದೇವೆ ಎಂದರು.
ಪ್ರಕಾಶ್ ಮಲ್ಪೆ ಅವರು ಮಾತನಾಡಿ ಯೋಗ ದಿನದ ಮಹತ್ವ ಮತ್ತು ಅದರ ಪ್ರಯೋಜನ ಹಾಗೂ ನಮ್ಮ ದೇಶದ ಹಿಂದೂ ಸನಾತನ ಧರ್ಮದ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಕುರಿಯಾಕೋಸ್ ಹಾಗೂ ಟ್ರಸ್ಟ್ ನ ಪ್ರಮುಖರು ಇದ್ದರು.

Categories
ಕರಾವಳಿ

ಮಂಗಳೂರು ವಿವಿ ಪದವಿ ಕಾಲೇಜಿಗಾಗಿ ಹೋರಾಟ

ಮಂಗಳೂರು ವಿವಿ ಪದವಿ ಕಾಲೇಜಿಗಾಗಿ ಹೋರಾಟ

– ಕಾಲೇಜು ಉಳಿಸಲು ಡಿವೈಎಫ್‌ಐನಿಂದ ಹೋರಾಟ ಸಮಿತಿ ರಚನೆ
– ಜುಲೈ 15ರಂದು ಮಂಗಳೂರು ವಿವಿ ಮುಂದೆ ಸಾಮೂಹಿಕ ಜನಾಗ್ರಹ

NAMMUR EXPRESS NEWS
ಮಂಗಳೂರು: ಕೊಣಾಜೆಯಲ್ಲಿರುವ ಮಂಗಳೂರಿನ ವಿವಿ ಕ್ಯಾಂಪಸ್‌ ಒಳಗಡೆ ಇರುವ ಪದವಿ ಕಾಲೇಜು ಸಹಿತ ಆರ್ಥಿಕ ಮುಗ್ಗಟ್ಟುವಿನಿಂದ ಮುಚ್ಚುವ ಭೀತಿ ಎದುರಿಸುತ್ತಿದೆ.
ಮಂಗಳೂರು ವಿವಿ ಪದವಿ ಸಂಧ್ಯಾ ಕಾಲೇಜು, ಮೂಡಬಿದಿರೆಯ ಬನ್ನಡ್ಕ, ನೆಲ್ಯಾಡಿಯಲ್ಲಿರುವ ಪದವಿ ಕಾಲೇಜುಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಸಬೇಕಾದ ಹೋರಾಟದ ಕುರಿತು ಚರ್ಚಿಸಲು ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿಯು ದೇರಳಕಟ್ಟೆಯಲ್ಲಿ ಸಭೆ ನಡೆಸಿ ಹೋರಾಟ ಸಮಿತಿಯನ್ನು ರಚಿಸಿದೆ.

ಕೊಣಾಜೆ ವಿವಿ ಕ್ಯಾಂಪಸ್‌ನಲ್ಲಿರುವ ಪದವಿ ಕಾಲೇಜು ಸಹಿತ ಮುಚ್ಚುವ ಭೀತಿಯಲ್ಲಿರುವ ನಾಲ್ಕು ಕಾಲೇಜುಗಳನ್ನು ಉಳಿಸಲು ಶಾಶ್ವತ ಪರಿಹಾರದ ಕುರಿತು ಸಭೆಯು ಚರ್ಚಿಸಿತಲ್ಲದೆ ವಿವಿ ಆಡಳಿತದ ಪದವಿ ಕಾಲೇಜುಗಳನ್ನು ಸರ್ಕಾರವೇ ವಶಕ್ಕೆ ಪಡೆದುಕೊಂಡು ಪದವಿ ಶಿಕ್ಷಣ ಇಲಾಖೆ ಮೂಲಕ ನಡೆಸಬೇಕೆಂದು ಸಮುತಿ ಆಗ್ರಹಿಸಿದೆ.
ಜುಲೈ 15ರಂದು ಮಂಗಳೂರು ವಿವಿ ಮುಂದೆ ಸಾಮೂಹಿಕ ಜನಾಗ್ರಹ ಧರಣಿ ನಡೆಸಿ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಸಭೆ ನಿರ್ಧರಿಸಿದೆ. ಅಲ್ಲದೆ, ಮಂಗಳೂರು ವಿವಿ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ರಚಿಸಲಾಯಿತು.
ಸಭೆ ಅಧ್ಯಕ್ಷತೆಯನ್ನು ಡಿವೈಎಫ್‌ಐನ ಉಳ್ಳಾಲ ಘಟಕ ಅಧ್ಯಕ್ಷ ನಿತಿನ್‌ ಕುತ್ತಾರ್‌ ವಹಿಸಿದ್ದರು. ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪ್ರಸ್ತಾವಿಕವಾಗಿ ಮಾತನಾಡಿದರು. ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್‌ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

 

Categories
ಕುಂದಾಪುರ

ಇನ್ನೂ ಸಿಗದ ಯುವಕನ ಸುಳಿವು!

ಇನ್ನೂ ಸಿಗದ ಯುವಕನ ಸುಳಿವು!

– ಕುಂದಾಪುರದಲ್ಲಿ ಸಮುದ್ರಪಾಲಾಗಿರುವ ತಿಪಟೂರು ಮೂಲದ ಯುವಕ
– ಪುತ್ತೂರು: ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

NAMMUR EXPRESS NEWS
ಕುಂದಾಪುರ: ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ಸ್ನೇಹಿತನ ಮದುವೆಗೆಂದು ಬಂದು ಸಮುದ್ರಪಾಲಾಗಿರುವ ತಿಪಟೂರು ಮೂಲದ ಟಿಆರ್‌ ಯೋಗೀಶ್‌(23) ಎಂಬ ಯುವಕನ ಪತ್ತೆಗೆ ಇನ್ನೂ ಶೋಧ ಕಾರ್ಯ ಮುಂದುವರಿದಿದೆ.
ಕಳೆದ ಬುಧವಾರ ಸಂಜೆ ಯೋಗೀಶ್‌ ಇಲ್ಲಿನ ಸಮುದ್ರ ತೀರದಲ್ಲಿ ನೀರಲ್ಲಿ ಆಟವಾಡುವುದಕ್ಕೆ ತೆರಳಿದ್ದು ಆ ವೇಳೆ ಅಲೆಗಳ ಅಲೆಗೆ ಕೊಚ್ಚಿ ಹೋಗಿದ್ದರು. ಯೋಗೀಶ್‌ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು, ಕಳೆದ ಮೂರು ದಿನಗಳಿಂದ ಹುಡುಕಾಡುತ್ತಿದ್ದರೂ ಮೃತದೇಹದ ಯಾವುದೇ ಸುಳಿವು ಲಭ್ಯವಾಗಿಲ್ಲ.
ಕುಂದಾಪುರದ ಗೋಪಾಡಿ-ಬೀಜಾಡಿಯ ಸ್ನೇಹಿತನ ಮನೆಯಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ಯುವಕರು ಸಮುದ್ರ ವಿವಾರಕ್ಕೆ ತೆರಳಿದ್ದರು. ಆ ಪೈಕಿ ಸಂದೀಪ್‌ ಎನ್ನುವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ, ಯೋಗೀಶ್‌ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಯೋಗೀಶ್‌ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಬುಧವಾರ ಸಂಜೆಯವರೆಗೂ ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟಿದ್ದು, ಗುರುವಾರ ಬೆಳಗ್ಗಿನಿಂದಲೂ ಮೀನುಗಾರರು, ಪೊಲೀಸರು, ಕರಾವಳಿ ಕಾವಲು ಪಡೆಯುವರು, ಸ್ಥಳೀಯರು ಸತತ ಹುಡುಕಾಟ ನಡೆಸಿದರೂ ಕೂಡ ಪತ್ತೆಯಾಗದಿರುವುದು ಕುಟುಂಬಸ್ಥರಲ್ಲಿ ಮತ್ತಷ್ಟು ದುಃಖಕ್ಕೆ ಕಾರಣವಾಗಿದೆ. ಕಡಲು ಪ್ರಕ್ಷುಬದ್ಧಗೊಂಡಿರುವ ಕಾರಣ ಮೃತದೇಹ ಪತ್ತೆಯಾಗಿಲ್ಲ ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ಕುಂದಾಪುರ ಪೊಲೀಸ್‌ ಠಾಣಾ ನಿರೀಕ್ಷಕ ಯುಬಿ ನಂದಕುಮಾರ್‌, ಪಿಎಸ್‌ಐ ಪ್ರಸಾದ್‌ ಕುಮಾರ್‌ ಹಾಗೂ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ.

ಪುತ್ತೂರಿನಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹೋಟೆಲ್‌ವೊಂದರಲ್ಲಿ ಸಪ್ಲೈಯರ್‌ ಆಗಿರುವ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಶುಕ್ರವಾರ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ನೆಲ್ಲಿಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಬೊಳುವಾರಿನಲ್ಲಿರುವ ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದ ಶಿವಣ್ಣ(45) ಕಾಣೆಯಾದವರು. ಅವರು ಜೈ.10ರಂದು ಪೇಟೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ಹಿಂದುರುಗಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರುನಲ್ಲಿ ಉಲ್ಲೇಖಿಸಲಾಗಿದೆ.
ಶಿವಪ್ಪ ಅವರ ಪತ್ನಿ ಗೀತಾ ಅವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ನನ್ನ ಗಂಡ ಶಿವಪ್ಪ ಯಾನೆ ಶಿವಣ್ಣ ಬೊಳುವಾರಿನ ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಜೂ.10ರಂದು ಬೆಳಗ್ಗೆ ಅವರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದುರುಗಿ ಬಂದಿಲ್ಲ. ಈ ಹಿಂದೆಯೂ ಇದೇರೀತಿ ಮನೆಯಿಂದ ಹೋದವರು ಒಂದು ವಾರ ಕಳೆದು ಬಂದಿದ್ದರು. ಹೀಗಾಗಿ, ಅವರು ಹಿಂದುರುಗಿ ಬರಬಹುದೆಂದು ತಿಳಿದುಕೊಂಡಿದ್ದೆ. ಆದರೆ, ಈ ಬಾರಿ ಅವರು ಮನೆಯಿಂದ ಹೋಗಿ 10 ದಿನ ಕಳೆದರೂ ಹಿಂದಿರುಗಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

ಮತ್ತೆ ಕೊಪ್ಪ ಬಂದ್ ಎಚ್ಚರಿಕೆ ನೀಡಿದ ಜೀವರಾಜ್!

ಮತ್ತೆ ಕೊಪ್ಪ ಬಂದ್ ಎಚ್ಚರಿಕೆ ನೀಡಿದ ಜೀವರಾಜ್!

– ಕೊಟ್ಟ ಗಡುವು ಒಳಗೆ ಭರವಸೆ ಈಡೇರಿಸದಿದ್ದರೆ ಬಂದ್
– ಕೊಪ್ಪ ಸೇರಿ ಎಲ್ಲಾ ಜನರೂ ಕಲುಷಿತ ನೀರು ಕುಡಿಯಬೇಕಾ?

NAMMUR EXPRESS NEWS
ಕೊಪ್ಪ: ಕೊಪ್ಪ ಹಿರಿಕೆರೆ ಕಲುಷಿತ ನೀರಿನ ಸಮಸ್ಯೆ ಇದೀಗ ಪ್ರತಿಭಟನೆ ಹಾದಿ ಹಿಡಿದಿದೆ.
ಕೊಪ್ಪ ಪಟ್ಟಣದ ಜನರು ಕುಡಿಯುವ ನೀರಿಗಾಗಿ ಪಟ್ಟಣ ಸಮೀಪದಲ್ಲಿರುವ ಹಿರಿಕೆರೆಯನ್ನು ಆಶ್ರಯಿಸಬೇಕಾಗಿದೆ. ಕೊಪ್ಪ ಪಟ್ಟಣಿಗರು ಮಾತ್ರ ಹಿರಿಕೆರೆ ನೀರು ಕುಡಿಯುವುದಿಲ್ಲ. ಪಟ್ಟಣಕ್ಕೆ ವಿವಿಧ ಕೆಲಸ ಗಳಿಗಾಗಿ ಶೃಂಗೇರಿ, ನರಸಿಂಹರಾಜಪುರ, ತೀರ್ಥಹಳ್ಳಿ ಮುಂತಾದ ಭಾಗಗಳಿಂದ ಕೊಪ್ಪಕ್ಕೆ ಬರುವ ಇತರರು ಈ ಲೇಔಟ್ ಕಾಮಗಾರಿಯಿಂದಾಗಿ ಕಲ್ಮಶ ನೀರನ್ನೇ ಕುಡಿಯುವ ಸಂಗತಿ ಬಂದಿದೆ.ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಜನಸಾಮಾನ್ಯರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಲೇಔಟ್ ಕಾಮಗಾರಿ ಸ್ಥಗಿತಗೊಳಿಸಬೇಕು. ಸ್ಥಗಿತಗೊಳಿಸದೆ ಇದ್ದಲ್ಲಿ ಕೊಪ್ಪ ಬಂದ್‌ಗೆ ಕರೆಕೊಡುತ್ತೇವೆ ಎಂದು ಮಾಜಿ ಸಚಿವ, ಮಾಜಿ ಶಾಸಕ ಡಿ. ಎನ್ ಜೀವರಾಜ್ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾಜಿ ಸಚಿವರಾದ ಜೀವರಾಜ್ ಎಚ್ಚರಿಕೆ ನೀಡಿದ್ದಾರೆ.