Categories
ಕರಾವಳಿ

ಮಂಗಳೂರಲ್ಲಿ ಮನೆಗೆ ನುಗ್ಗಿ ದರೋಡೆ!

ಮಂಗಳೂರಲ್ಲಿ ಮನೆಗೆ ನುಗ್ಗಿ ದರೋಡೆ!

– ಉಳಾಯಿಬೆಟ್ಟು ಬಳಿ ಪಿಡಬ್ಲ್ಯುಡಿ ಗುತ್ತಿಗೆದಾರನ‌ ಮನೆಗೆ ನುಗ್ಗಿದ ದರೋಡೆಕೋರರ ತಂಡ: ಮಾಲೀಕನಿಗೆ ಚೂರಿ ಇರಿತ
– ಮನೆ ಮಂದಿಯನ್ನು ಕಟ್ಟಿಹಾಕಿ ನಗ ನಗದು ದರೋಡೆ

NAMMUR EXPRESS NEWS
ಮಂಗಳೂರು: ನಗರ ಹೊರವಲಯದ ಉಳಾಯಿಬೆಟ್ಟು ಎಂಬಲ್ಲಿನ‌ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್‌ಗೆ ನುಗ್ಗಿದ ದರೋಡೆಕೋರರ ತಂಡ ನಗ-ನಗದು ದರೋಡೆಗೈದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಎಂಬವರ ಫಾರ್ಮ್ ಹೌಸ್ ಮನೆಗೆ ನುಗ್ಗಿದ ದರೋಡೆಕೋರರ ತಂಡ ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ದರೋಡೆಗೈದಿದೆ. ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ 8-9 ಮಂದಿಯಿದ್ದ ತಂಡ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದೆ. ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ ತಂಡದ ಸದಸ್ಯರು ಚೂರಿ ತೋರಿಸಿ ಮನೆಯವರನ್ನು ಹೆದರಿಸಿದ್ದಾರೆ.

ಬಳಿಕ ಮನೆಯಲ್ಲಿದ್ದವರನ್ನು ಬೆಡ್ ಶೀಟ್ ಬಳಸಿ ಕೈಕಾಲುಗಳನ್ನು ಕಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮನೆಯ ಒಳಗೆಲ್ಲ ತಡಕಾಡಿ ಸಿಕ್ಕಿದ ನಗದು ಹಣ ಮತ್ತು ಒಡವೆಗಳನ್ನು ದೋಚಿದ್ದಾರೆ. ಬಳಿಕ ಮನೆ ಮಾಲೀಕನ ವಾಹನವನ್ನು ಕದ್ದುಕೊಂಡು ತೆರಳಿದ್ದು ಮನೆಯಿಂದ ಅನತಿ ದೂರದಲ್ಲಿ ಬಿಟ್ಟು ಹೋಗಿದ್ದಾರೆ. ಈ ವೇಳೆ ಪದ್ಮನಾಬ್ ಅವರ ಕೈಗೆ ಚೂರಿಯಿಂದ ಇರಿಯಲಾಗಿದೆ
ದರೋಡೆಕೋರ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

*ಉಪ್ಪಳ: ಪ್ಲ್ಯಾಟ್ ವೊಂದರಲ್ಲಿ ವ್ಯಕ್ತಿ ಮೃತದೇಹ ಪತ್ತೆ!

ಕಾಸರಗೋಡು : ಪ್ಲ್ಯಾಟ್ ವೊಂದರಲ್ಲಿ ಮಂಜೇಶ್ವರ ನಿವಾಸಿಯೋರ್ವ ರ ಮೃತದೇಹ ಶೌಚಾಲಯದಲ್ಲಿ ಶುಕ್ರವಾರ ಪತ್ತೆಯಾದ ಘಟನೆ ಇಲ್ಲಿನ ಉಪ್ಪಳ ಬಸ್ಸು ನಿಲ್ದಾಣ ಸಮೀಪದಲ್ಲಿ ನಡೆದಿದೆ.
ಮಂಜೇಶ್ವರ ಹೊಸಬೆಟ್ಟುವಿನ ನಿವಾಸಿ ಶೇಖ್ ಇಬ್ರಾಹಿಂ (46) ಮೃತ ಪಟ್ಟವರು. ಇವರು ಉಪ್ಪಳದ ಪ್ಲ್ಯಾಟ್ ನಲ್ಲಿ ವಾಸವಾಗಿದ್ದು ಬಕ್ರೀದ್ ಹಬ್ಬ ಪ್ರಯುಕ್ತವಾಗಿ ಕುಟುಂಬದವರು ಊರಿಗೆ ತೆರಳಿ ಕಾರಣ ಇಬ್ರಾಹಿಂ ಮಾತ್ರ ಫ್ಲ್ಯಾಟ್ ನಲ್ಲಿದ್ದರು.

ಶುಕ್ರವಾರ ಬೆಳಿಗ್ಗೆ ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ ಸ್ಥಳೀಯರು ಗಮನಿಸಿದಾಗ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು. ಶೌಚಾಲಯದ ಕಿಟಿಕಿ ಮೂಲಕ ನೋಡಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿ ದರು. ಹೃದಯಾಘಾತದಿಂದ ಮೃತ ಪಟ್ಟಿ ರ ಬಹುದು ಎಂದು ಶಂಕಿಸಲಾಗಿದೆ.

Categories
ತೀರ್ಥಹಳ್ಳಿ

ಟಾಪ್ 4 ನ್ಯೂಸ್ ಮಲ್ನಾಡ್

ಟಾಪ್ 4 ನ್ಯೂಸ್ ಮಲ್ನಾಡ್

ತೀರ್ಥಹಳ್ಳಿ : ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ
– ತಂದೆಗೆ ದಂಡ ಹಾಗೂ ಒಂದು ದಿನದ ಜೈಲು ವಾಸ !

– ಶಿವಮೊಗ್ಗ : ಗಾಂಜಾ ಮಾರಾಟ ಒಬ್ಬ ವ್ಯಕ್ತಿ ಬಂಧನ
– ಸೊರಬ : ಡೆಂಗ್ಯೂ ಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವು
– ಶಿವಮೊಗ್ಗ : ರಾತ್ರೋರಾತ್ರಿ ಪೊಲೀಸ್‌ ಠಾಣೆಗೆ ಬಂದು ಪೊಲೀಸರ ಎದುರಲ್ಲೇ ಬ್ಲೇಡ್‌ನಲ್ಲಿ ಕೈ ಕೊಯ್ದುಕೊಂಡ ಯುವಕ

NAMMUR EXPRESS NEWS
ತೀರ್ಥಹಳ್ಳಿ : ಪಟ್ಟಣದ ದೊಡ್ಡನೆಕೇರಿ ಬಳಿ ಕೆ.ಎ-19- ಇ.ಎಸ್-2318 ಸಂಖ್ಯೆಯ ಬೈಕ್ ನಲ್ಲಿ ಬಂದ ಮಹ್ಮದ್ ಹಯಾನ್ ಎಂಬ 17 ವರ್ಷದ ಅಪ್ರಾಪ್ತ ಬಾಲಕನು ದಿನಾಂಕ 19-06-2024 ರಂದು ಆಗುಂಬೆ ಕಡೆ ಇಂದ ಬಂದು ಬೈಕ್ ಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದಾನೆ.
ಅಪ್ರಾಪ್ತ ಬಾಲಕನ ಮೇಲೆ ತೀರ್ಥಹಳ್ಳಿ ಪೊಲೀಸ್‌ ಠಾಣಾ ಪಿಎಸ್‌ಐ ರವರು ಐಎಂವಿ ಕಾಯ್ದೆ ರೀತ್ಯಾ ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದು ಈ ದಿನ ತೀರ್ಥಹಳ್ಳಿಯ ಪಿಸಿಜೆ & ಜೆಎಂಎಎಪ್ಪಿ ನ್ಯಾಯಾಲಯದ ಮಾನ್ಯ ನ್ಯಾಯಧೀಶರು ಅಪ್ರಾಪ್ತ ಬಾಲಕನ ತಂದೆಗೆ 25000 ರು ದಂಡ ಹಾಗೂ ಒಂದು ದಿನದ ಜೈಲು ಶಿಕ್ಷೆಯನ್ನು ವಿಧಿಸಿರುತ್ತಾರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಶಿವಮೊಗ್ಗ : ಗಾಂಜಾ ಮಾರಾಟ ಒಬ್ಬ ವ್ಯಕ್ತಿ ಬಂಧನ

ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ ತುಂಗ ನಗರ ಪೊಲೀಸರು ಆತನಿಂದ 2 ಕೆಜಿ 214 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ದಿನಾಂಕ:-21-06-2024 ರಂದು ಮದ್ಯಾಹ್ನ ಶಿವಮೊಗ್ಗ ಟೌನ್ ಓತಿಘಟ್ಟದಿಂದ ದುಮ್ಮಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕ ರುದ್ರಭೂಮಿಯ ಹತ್ತಿರ ಬೈಕ್ ನಿಲ್ಲಿಸಿಕೊಂಡು, ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ತುಂಗನಗರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದೆ.
ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎ.ಜಿರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪ ಮೇಲ್ವಿಚಾರಣೆಯಲ್ಲಿ, ತುಂಗನಗರ ಪೊಲೀಸ್ ಠಾಣೆ ಪಿಐ ಮಂಜುನಾಥ್ ಬಿ, ಮತ್ತು ಪಿಎಸ್ಐ ಸಿದ್ದಪ್ಪ,ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.

– ಸೊರಬ : ಡೆಂಗ್ಯೂ ಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವು

ಸೊರಬ : ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಸೊರಬ ತಾಲ್ಲೂಕಿನ ಶಿಗ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಸಂತಾ (40) ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜ್ವರ, ವಾಂತಿ ಹಿನ್ನೆಲೆ ವಸಂತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯು ಪತ್ತೆಯಾಗಿತ್ತು. ಶುಕ್ರವಾರ ಅವರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ

– ಶಿವಮೊಗ್ಗ : ರಾತ್ರೋರಾತ್ರಿ ಪೊಲೀಸ್‌ ಠಾಣೆಗೆ ಬಂದು ಪೊಲೀಸರ ಎದುರಲ್ಲೇ ಬ್ಲೇಡ್‌ನಲ್ಲಿ ಕೈ ಕೊಯ್ದುಕೊಂಡ ಯುವಕ

ಶಿವಮೊಗ್ಗ : ಕೋಟೆ ಪೊಲೀಸ್‌ ಠಾಣೆ ಆವರಣಕ್ಕೆ ಬಂದ ಯುವಕನೊಬ್ಬ ಪೊಲೀಸರ ಎದುರಲ್ಲೇ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಕೈಯಲ್ಲಿ ರಕ್ತ ಸುರಿಯುತ್ತಿದ್ದರೂ ಠಾಣೆ ಆವರಣದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ನಡುರಾತ್ರಿ ಕೋಟೆ ಪೊಲೀಸ್‌ ಠಾಣೆ ಆವರಣಕ್ಕೆ ಬಂದ ಯುವಕನೊಬ್ಬ ಪೊಲೀಸರ ಎದುರಲ್ಲೆ ಬ್ಲೇಡ್‌ನಿಂದ ಕೈ ಕೊಯ್ದುಕೊಂಡಿದ್ದಾನೆ. ಆತನನ್ನು ಗೌತಮ್‌ ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬಳು ತನ್ನನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದಾಳೆ. ಆದ್ದರಿಂದ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು, ರಕ್ತ ಹರಿದು ಹೋದರೂ, ಇಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತೇನೆ ಎಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಆತನನ್ನು ಹಿಡಿಯಲು ಹೋದಾಗ ಆತ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಗೌತಮ್‌ ವಿರುದ್ಧ ಕೋಟೆ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು

ಕನ್ನಡದ ಹಿರಿಯ ಸಾಹಿತಿ ಕಮಲಾ ಹಂಪನಾ ಇನ್ನಿಲ್ಲ!

ಕನ್ನಡದ ಹಿರಿಯ ಸಾಹಿತಿ ಕಮಲಾ ಹಂಪನಾ ಇನ್ನಿಲ್ಲ!

– 60 ವರ್ಷಗಳ ಕಾಲ ಸಾಹಿತ್ಯ ಕೃಷಿ ನಿಲ್ಲಿಸಿತು
– ಇಚ್ಛೆಯಂತೆ ಮೆಡಿಕಲ್ ಕಾಲೇಜಿಗೆ ದೇಹದಾನ

NAMMUR EXPRESS NEWS
ಬೆಂಗಳೂರು: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (89) ಅವರು ಇಂದು (ಜೂನ್‌ 22) ನಿಧನ ಹೊಂದಿದರು. ಪತಿ, ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅನೇಕ ಬಂಧು ಮಿತ್ರರು, ಅಪಾರ ಸಾಹಿತ್ಯಾಭಿಮಾನಿಗಳನ್ನು ಅವರು ಅಗಲಿದ್ದಾರೆ.
ಶನಿವಾರ ಸಂಜೆಯ ತನಕ ರಾಜಾಜಿನಗರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

60 ವರ್ಷಗಳ ಕಾಲ ಸಾಹಿತ್ಯ ಕೃಷಿ

ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಕರ್ನಾಟಕ ಸರ್ಕಾರ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ ಲಭಿಸಿದೆ. ಡಾ.ಕಮಲಾ ಹಂಪನಾ ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಸುಮಾರು 60ಕ್ಕೂ ಹೆಚ್ಚು ಕೃತಿಗಳು ಇದುವರೆಗೆ ಪ್ರಕಟವಾಗಿದ್ದು, ಇದರಲ್ಲಿ ಸೃಜನಕೃತಿಗಳೂ ಇವೆ. ʼಬಿಂದಲಿʼ, ʼಬುಗುಡಿʼ ಹಾಗೂ ʼಬಯಲುʼ ಇವು ಕಮಲಾ ಹಂಪನಾ ಅವರ ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ಬರೆದಿದ್ದಾರೆ. ನಾಡಿನ ಸಾಹಿತಿಗಳು , ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Categories
ತೀರ್ಥಹಳ್ಳಿ

ಬೀಳುವ ಹಂತದ ಮರ, ವಿದ್ಯುತ್ ಕಂಬ ಹುಷಾರ್..!

ಬೀಳುವ ಹಂತದ ಮರ, ವಿದ್ಯುತ್ ಕಂಬ ಹುಷಾರ್..!

– ಸ್ಥಳೀಯ ಗ್ರಾಪಂ ಮತ್ತು ಅರಣ್ಯ ಇಲಾಖೆ ಗಮನಕ್ಕೆ
– ವಿದ್ಯುತ್ ಕಂಬ, ವಿದ್ಯುತ್ ತಂತಿ ಬಗ್ಗೆ ದೂರು ಕೊಡಿ

NAMMUR EXPRESS NEWS
ತೀರ್ಥಹಳ್ಳಿ: ಮಳೆಗಾಲ ಶುರುವಾಗಿದೆ. ಈಗ ಎಲ್ಲೆಡೆ ಬೀಳುವ ಹಂತದ ಮರ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕಿದೆ.
ಆಯಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಅಮಾಯಕರ ಜೀವನಕ್ಕೆ ತೊಂದರೆ ಆಗಲಿದೆ.

ಕೈಮರ ಮಾಸ್ತಿಕಟ್ಟೆ ರಾಜ್ಯ ಹೆದ್ದಾರಿಯ ಶಂಕರ ಮನೆ ಸುಣ್ಣದ ಮನೆಯ ಮಧ್ಯದ ಹೆದ್ದಾರಿ ಪಕ್ಕದಲ್ಲಿ ರಸ್ತೆಗೆ ಉರುಳುವ ಸ್ಥಿತಿಯಲ್ಲಿದೆ.
ಆಕಸ್ಮಿಕ ಅನಾಹುತ ಸಂಭವಿಸುವ ಮೊದಲೇ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ

Categories
ಮಂಗಳೂರು

ಬ್ರಿಜೇಶ್‌ ಚೌಟರಿಂದ “ಯೋಗ ವಿದ್‌ ಯೋಧ” ಕಾರ್ಯಕ್ರಮ

ಬ್ರಿಜೇಶ್‌ ಚೌಟರಿಂದ “ಯೋಗ ವಿದ್‌ ಯೋಧ” ಕಾರ್ಯಕ್ರಮ

– ಸಸಿಹಿತ್ಲು ಬೀಚ್‌ನಲ್ಲಿ ಯೋಗ ಮಾಡಿದ ಗಣ್ಯರು
– ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರ ಸಾಥ್

NAMMUR EXPRESS NEWS
ಮಂಗಳೂರು: ಯೋಗ ಮತ್ತು ಯೋಗ್ಯತೆ ಎರಡೂ ಕೂಡಿ ಬಂದಾಗ ಮಾತ್ರ ವಿಕಾಸ ಸಾಧ್ಯ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಸಸಿಹಿತ್ಲು ಬೀಚಿನಲ್ಲಿ ನಡೆದ “ಯೋಗ ವಿದ್ ಯೋಧ” ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಮತ್ತು ಯೋಗ್ಯತೆ ಫಲಿಸಬೇಕೆಂದರೆ ನಮ್ಮ ಪ್ರಯತ್ನ ಅವಶ್ಯಕ. ದಕ್ಷಿಣ ಕನ್ನಡ ಎಂಬ ಸಾಧ್ಯತೆಗಳ ಸಾಗರದಲ್ಲಿ ಅಭಿವೃದ್ಧಿಯ ಒಂದು ನವಯುಗ ಪ್ರಾರಂಭಿಸಲು ನಾವೆಲ್ಲ ಸೇರಿ ಈ ನವಪಥದಲ್ಲಿ ನವ ಪ್ರಯತ್ನಗಳನ್ನು ಮಾಡಬೇಕು. ಇಡಿ ವಿಶ್ವವೇ ನಮ್ಮ ದಕ್ಷಿಣ ಕನ್ನಡದತ್ತ ನೋಡುವಂತೆ ಮಾಡಬೇಕು ಎಂಬ ಆಶಯದಿಂದ ಈಗಾಗಲೇ ಸಾಹಸ ಕ್ರೀಡೆಗಳ ಮೂಲಕ ಅಂತರ ರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಕಲ್ಪಿಸಿದ ಸಸಿಹಿತ್ಲು ಕಡಲ ತೀರದಲ್ಲಿ ಇಂದು “ಯೋಗ ವಿದ್ ಯೋಧ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಸಂಸ್ಥೆಗೆ ಶಿಫಾರಸು ಮಾಡಿ ಕಳೆದ ಹತ್ತು ವರ್ಷಗಳಿಂದ ಲೋಕದೆಲ್ಲೆಡೆ ಯೋಗ ಒಂದು ಜಾಗತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಹಬ್ಬದಲ್ಲಿ ಇಂದು ನಾವೆಲ್ಲ ಸೇರಿರುವುದು ಅತ್ಯಂತ ಉತ್ಸಾಹದ ವಿಷಯ ಎಂದು ಸಂಸದರು ವಿಶ್ಲೇಷಿಸಿದರು.

– ಸಸಿಹಿತ್ಲು ಬೀಚ್‌ನಲ್ಲಿ ಯೋಗ ಮಾಡಿದ ಗಣ್ಯರು

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರು ಮತ್ತು ಇತರ ಗಣ್ಯರು ಸೇರಿ, ಸಮುದ್ರ ತಟದ ಪ್ರಶಾಂತ ವಾತಾವರಣದಲ್ಲಿ ಯೋಗಾಭ್ಯಾಸ ಮಾಡಿದರು.

Categories
ಹಾಸನ

ರೇವಣ್ಣ ಮತ್ತೊಬ್ಬ ಪುತ್ರನ ಮೇಲೆ ಸಲಿಂಗ ಕಾಮ ಕೇಸ್!?

ರೇವಣ್ಣ ಮತ್ತೊಬ್ಬ ಪುತ್ರನ ಮೇಲೆ ಸಲಿಂಗ ಕಾಮ ಕೇಸ್!?

– . ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ದೂರು
– ರೇವಣ್ಣ ಕುಟುಂಬಕ್ಕೆ ಶಾಕ್ ಮೇಲೆ ಶಾಕ್..!

NAMMUR EXPRESS NEWS
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಬಳಿಕ ಎಚ್‌ಡಿ ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಎಚ್‌.ಡಿ.ರೇವಣ್ಣ ಅವರ ಪುತ್ರ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧ ಸಲಿಂಗಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ.

ಸೂರಜ್ ರೇವಣ್ಣ ಅವರು ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ. ಈಗ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತನೋರ್ವ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿರುವುದಾಗಿ ವರದಿಯಾಗಿದೆ.
ಕಳೆದ ಜೂನ್ 16ರ ಭಾನುವಾರದಂದು ತನಗೆ ವಾಟ್ಸಪ್ ಮೂಲಕ ತನಗೆ ಉದ್ಯೋಗದ ನೆರವು ನೀಡುವುದಾಗಿ ಭರವಸೆಯ ಸಂದೇಶ ಕಳಿಸಿ ಗನ್ನಿಕಡದ ತೋಟದ ಮನೆಗೆ ಕರೆಸಿಕೊಂಡಿದ್ದರು. ಅವರ ಸಂದೇಶ ನಂಬಿಕೊಂಡು ಅಲ್ಲಿಗೆ ಹೋಗಿದ್ದೆ. ಅಲ್ಲಿನ ಕೊಠಡಿಯೊಂದಕ್ಕೆ ಕರೆದುಕೊಂಡು,ಸಲಿಂಗಕಾಮಕ್ಕೆ ಒತ್ತಾಯಿಸಿ, ಅವರು ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ನನ್ನ ದೇಹದ ಮೇಲೆಲ್ಲ ಗಾಯ ಮಾಡಿದ್ದಾರೆ. ಇದನ್ನು ಎಲ್ಲಾದರೂ ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿದ್ದೇನೆ” ಎಂದು ಸುದೀರ್ಘ ದೂರಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜೆಡಿಎಸ್ ಕಾರ್ಯಕರ್ತ ಗಂಭೀರ ಆರೋಪ ಮಾಡಿರುವುದಾಗಿ ವರದಿಯಾಗಿದೆ.

ದೂರಿನಲ್ಲಿ ಏನಿದೆ?

ದೌರ್ಜನ್ಯಕ್ಕೆ ಒಳಗಾದ ಯುವಕನೊಬ್ಬ ಪೊಲೀಸರ ಬಳಿ ನೀಡಿರುವ ದೂರಿನಲ್ಲಿ ಎಲ್ಲವನ್ನೂ ವಿವರಿಸಿದ್ದಾನೆ. ದೌರ್ಜನ್ಯಕ್ಕೆ ಒಳಗಾದ ಯುವಕನ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದಲ್ಲೂ ಗಾಯವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಹುಡುಗನಿಂದ ದೂರು ದಾಖಲಿಸಿಕೊಂಡಿರುವದಾಗಿ ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಪ್ರಕರಣ ಇನ್ನೂ ಸುದ್ದಿಯಲ್ಲಿರುವಾಗಲೇ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಅವರ ಪ್ರಕರಣ ಬೆಳಕಿಗೆ ಬಂದಿದ್ದು, ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.

Categories
ರಾಜ್ಯ

ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮಕ್ಕೆ ಶುಭ ಹಾರೈಸಿದ ಗಣ್ಯರು!

ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮಕ್ಕೆ ಶುಭ ಹಾರೈಸಿದ ಗಣ್ಯರು!

– ಚಿಕ್ಕಮಗಳೂರು ಜಿಲ್ಲೆಯಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಪಯಣ
– ನಾಯಕರಾದ ಸಿ.ಟಿ.ರವಿ, ಜೀವರಾಜ್, ಸರ್ಜಿ ಶುಭಾಶಯ

NAMMUR EXPRESS NEWS
ಚಿಕ್ಕಮಗಳೂರು: ರಾಜ್ಯದ ಕ್ರಿಯಾಶೀಲ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಕಾಫಿ ನಾಡು ಚಿಕ್ಕಮಗಳೂರಲ್ಲಿ ಜನರ ಮನಸು ಗೆದ್ದಿದ್ದು ನಾಯಕರು ಮಾಧ್ಯಮಕ್ಕೆ ಶುಭ ಹಾರೈಸಿದ್ದಾರೆ. ಈಗಾಗಲೇ ಪ್ರತಿ ತಾಲೂಕಿನಲ್ಲಿ ವರದಿ ಮಾಡುತ್ತಿರುವ ಸಂಸ್ಥೆ 9 ವರ್ಷದಿಂದ ಮಲೆನಾಡಲ್ಲಿ ಸೇವೆ ಸಲ್ಲಿಸುತ್ತಿದೆ.

ಮಾಜಿ ಸಚಿವ ಸಿ. ಟಿ. ರವಿ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಎಸ್. ಎಲ್ ಭೋಜೆಗೌಡ, ಮಾಜಿ ಸಚಿವ ಡಿ. ಎನ್. ಜೀವರಾಜ್ ಸೇರಿದಂತೆ ಪಕ್ಷದ ನಾಯಕರು ಶುಭ ಹಾರೈಸಿದ್ದಾರೆ.

ಈ ವೇಳೆ ಚಿಕ್ಕಮಗಳೂರು ಜಿಲ್ಲಾ ಮುಖ್ಯಸ್ಥರಾದ ಸಚಿನ್, ಸಿಬ್ಬಂದಿ ಜೋಯಲ್ ಇದ್ದರು.
ಚಿಕ್ಕಮಗಳೂರು ಜಿಲ್ಲೆ ಎಲ್ಲಾ ಶಾಸಕರು, ನಾಯಕರು ಶುಭಾಶಯ ಸಲ್ಲಿಸಿದ್ದಾರೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?

– ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರಿಗೆ ಕೆಡುಕು?

NAMMUR EXPRESS NEWS
2024 ಜೂನ್ 22ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ ರಾಶಿ :
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ವಿವಾದಗಳಿಂದ ದೂರವಿರುವುದು ಉತ್ತಮ. ವೃತ್ತಿ ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ. ನಿರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತದೆ. ಹಣಕಾಸಿನ ಫಲಿತಾಂಶಗಳು ನಿರೀಕ್ಷಿತ ರೀತಿ ಇರುವುದಿಲ್ಲ.

** ವೃಷಭ ರಾಶಿ :
ಬಾಲ್ಯದ ಗೆಳೆಯರ ಆಗಮನ ಸಂತಸ ತರುತ್ತದೆ. ಸ್ಥಿರಾಸ್ತಿ ವಿಷಯಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ಉದ್ಯೋಗಿಗಳಿಗೆ ಸಂಬಳದ ಬಗ್ಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಸಂಗಾತಿಯೊಂದಿಗೆ ದೈವಿಕ ದರ್ಶನಗಳನ್ನು ಪಡೆಯುತ್ತೀರಿ.

** ಮಿಥುನ ರಾಶಿ :
ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಸ್ನೇಹಿತರ ಸಹಾಯದಿಂದ ಸಾಲದ ಸಮಸ್ಯೆಗಳಿಂದ ಹೊರಬರುತ್ತೀರಿ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.

** ಕರ್ಕ ರಾಶಿ :
ವೃತ್ತಿಗಳು ಹೆಚ್ಚು ನಿರುತ್ಸಾಹಗೊಳಿಸುತ್ತವೆ. ಕೈಗೊಂಡ ಕಾರ್ಯಕ್ರಮಗಳು ಮಂದಗತಿಯಲ್ಲಿ ಸಾಗುತ್ತವೆ. ಕೌಟುಂಬಿಕ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುವುದಿಲ್ಲ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

** ಸಿಂಹ ರಾಶಿ :
ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಆಪ್ತಸ್ನೇಹಿತರೊಂದಿಗೆ ಭಿನ್ನಭಿಪ್ರಾಯಗಳು ಇರುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಮರು ಚಿಂತನೆ ಮಾಡಬೇಕು. ಕುಟುಂಬ ಸದಸ್ಯರ ವರ್ತನೆ ಚಿಂತಾಜನಕವಾಗಿರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚಿದ ಜವಾಬ್ದಾರಿಗಳಿಂದಾಗಿ ಒಬ್ಬರು ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ದೈವಿಕ ಸೇವಾ ಕಾರ್ಯಗಳಲ್ಲಿ
ಭಾಗವಹಿಸುತ್ತೀರಿ.

** ಕನ್ಯಾ ರಾಶಿ :
ಯೋಜಿತ ಕಾರ್ಯಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಗೌರವ ಸಂಸ್ಕಾರ ಹೆಚ್ಚಾಗುತ್ತದೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳು ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡವನ್ನು ನಿವಾರಿಸುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ.

** ತುಲಾ ರಾಶಿ :
ನೇತ್ರ ಸಂಬಂಧಿ ಅನಾರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪಮಾಡುವುದು ಒಳ್ಳೆಯದಲ್ಲ. ಮನೆಯಲ್ಲಿ ಕೆಲವರ ವರ್ತನೆಯಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ಉದ್ಯೋಗ ವಿಚಾರಗಳಲ್ಲಿ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು.

** ವೃಶ್ಚಿಕ ರಾಶಿ :
ಆದಾಯ ಮಾರ್ಗಗಳು ತೃಪ್ತಿಕರವಾಗಿರುತ್ತವೆ. ಮನೆಯ ಹೊರಗೆ ಅನುಕೂಲಕರ ವಾತಾವರಣ ಇರುತ್ತದೆ. ಕುಟುಂಬದ ಸದಸ್ಯರ ಸಹಕಾರದಿಂದ ಮಹತ್ವದ ಕಾರ್ಯಕ್ರಮಗಳು ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಸ್ವೀಕರಿಸಲಾಗುತ್ತದೆ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿಗಳು ಇದ್ದರೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೀರಿ,

** ಧನುಸ್ಸು ರಾಶಿ :
ಸಹೋದರರೊಂದಿಗೆ ತೀವ್ರ ವಿವಾದಗಳು ಕಿರಿಕಿರಿಯುಂಟು ಮಾಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ನಿರುತ್ಸಾಹ ವಾತಾವರಣ ಇರುತ್ತದೆ. ನಿರುದ್ಯೋಗಿಗಳು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತದೆ. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.

** ಮಕರ ರಾಶಿ :
ಪ್ರಮುಖ ಕಾರ್ಯಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ದ ದೊರೆಯುತ್ತದೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದಿ ಮುಂದೆ ಸಾಗುತ್ತವೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಅಧಿಕಾರಿಗಳ ಕೃಪಾಕಟಾಕ್ಷದಿಂದ ಉದ್ಯೋಗಿಗಳಿಗೆ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ.

** ಕುಂಭ ರಾಶಿ :
ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಭೂಮಿ ಮಾರಾಟವು ಅನುಕೂಲಕರವಾಗಿರುತ್ತದೆ. ವ್ಯಾಪಾರಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿಲಾಭವನ್ನು ಪಡೆಯುತ್ತೀರಿ. ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ.

** ಮೀನ ರಾಶಿ :
ಪ್ರಮುಖ ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ಉದ್ಯೋಗಿಗಳು ಸಹೋದ್ಯೋಗಿಗಳೊಂದಿಗೆ ವಿವಾದಗಳನ್ನು ಹೊಂದಿರುತ್ತಾರೆ. ವ್ಯರ್ಥ ಖರ್ಚುಗಳು
ಹೆಚ್ಚಾಗುತ್ತವೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಕಾರಿಗೆ ಹಗ್ಗದಿಂದ ನೊಗ ಕಟ್ಟಿ ಎಳೆದು ಹೋರಾಟ!

ತೀರ್ಥಹಳ್ಳಿಯಲ್ಲಿ ಕಾರಿಗೆ ಹಗ್ಗದಿಂದ ನೊಗ ಕಟ್ಟಿ ಎಳೆದು ಹೋರಾಟ!

– ರಾಜ್ಯ ಸರ್ಕಾರದ ಬೆಲೆ ಏರಿಕೆ, ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ
– ರಸ್ತೆ ತಡೆ ಮಾಡಿ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಘೋಷಣೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಘೋಷಣೆಗಳನ್ನು ಮಾಡುವುದರ ಮೂಲಕ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿ ಅಧಿಕಾರಕ್ಕೆ ಬಂದಿದೆ. ನುಡಿದಂತೆ ನಡೆದ್ದಿದ್ದೇವೆ ಎನ್ನುತ್ತಲೇ ನುಡಿದಂತೆ ನಡೆಯದೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿ ಶುಕ್ರವಾರ ತೀರ್ಥಹಳ್ಳಿಯ ತಾಲೂಕು ಕಚೇರಿ ಮುಂಭಾಗ ರಸ್ತೆ ತಡೆ ಮಾಡಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಅನಾವೃಷ್ಠಿ ವಾತಾವರಣದಿಂದಾಗಿ ತರಕಾರಿ, ಹಣ್ಣು-ಹಂಪಲು, ಹೂವು ಸೇರಿದಂತೆ ಅನೇಕ ದೈನಂದಿನ ವಸ್ತುಗಳ ಅಸಹಜ ಬೆಲೆ ಏರಿಕೆಯಿಂದಾಗಿ ಸಾಮಾನ್ಯನ ಬದುಕು ದುಸ್ತರವಾಗಿದೆ. ಈ ಸಂದರ್ಭದಲ್ಲಿ ಜನತೆಯ ನೆರವಿಗೆ ಧಾವಿಸಬೇಕಿದ್ದ ಸರ್ಕಾರವು ಸಹಾಯ ಹಸ್ತ ನೀಡುವ ಬದಲಾಗಿ ಗಾಯದ ಮೇಲೆ ಬರೆಎಂಬಂತೆ ರಾಜ್ಯಸರ್ಕಾರದ ಅಧೀನದಲ್ಲಿರುವ ಅನೇಕ ತೆರಿಗೆ ಯಥೇಚ್ಛವಾಗಿ – ಮನಸೋಇಚ್ಛೆ ಏರಿಸಿ ಸಾಮಾನ್ಯನ ಬದುಕನ್ನು ಇನಷ್ಟು ಸಂಕಷ್ಟಕ್ಕೆ ದೂಕಿದೆ. ಈ ಹಿಂದೆ ಬಿ.ಎಸ್. ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕೇಂದ್ರ ಸರ್ಕಾರ ನೀಡುತ್ತಿರುವ ಕಿಸಾನ್ ಸಮ್ಮಾನ್ ಯೋಜನೆಯ 6,000 ರೂಗಳಿಗೆ 4,000 ರೂಗಳನ್ನು ಪ್ರೋತ್ಸಾಹಧನವನ್ನು ನೀಡುತ್ತಿದ್ದರು ಪ್ರಸ್ತುತ ರಾಜ್ಯ ಸರ್ಕಾರ ಈ 4,000 ರೂಗಳ ಪ್ರೊತ್ಸಾಹ ಧನವನ್ನು ಸ್ಥಗಿತಗೊಳಿಸಿದೆ. ಹಾಲಿನ ಖರೀದಿ ದರ ಕಡಿತಗೊಳಿಸಿದೆ. ಕೃಷಿ ವಿದ್ಯುತ್ ಸಂಪರ್ಕ ದರ 100 ಪಟ್ಟು ಹೆಚ್ಚಾಗಿದೆ. ಅಬಕಾರಿ ಶುಲ್ಕ, ಮುದ್ರಾಂಕ ಶುಲ್ಕ ಕೈಗೆಟುಕದ ರೀತಿ ಏರಿಕೆಯಾಗಿದೆ. ವಚನ ನೀಡಿದ ಗ್ಯಾರಂಟಿ ಯೋಜನೆಗಳು ಯಾವುದು ಸಮರ್ಪಕವಾಗಿ ಜನರನ್ನು ತಲುಪುತ್ತಿಲ್ಲ. ರಾಜ್ಯದ ಸರ್ವಾಂಗೀಣ ಪ್ರಗತಿ ಕುಂಠಿತವಾಗಿದೆ. ಶಿಲಾನ್ಯಾಸ-ಗುದ್ದಲಿಪೂಜೆ-ಉದ್ಘಾಟನೆ ಎಂಬ ಶಬ್ದಗಳು ಸರ್ಕಾರದ ಶಬ್ದಕೋಶದಿಂದ ಮಾಯವಾಗಿದೆ. ಒಟ್ಟಾರೆ ರಾಜ್ಯದ ಆಡಳಿತ ಯಂತ್ರ ಕುಸಿತವಾಗಿ ಪಕ್ಷದ ಒಳಜಗಳಕ್ಕೆ ಮೀಸಲಾಗಿದೆ. ಇದೆಲ್ಲದರ ನಡುವೆ ರಾಜ್ಯ ಸರ್ಕಾರ ಅಂತರಾಷ್ಟ್ರೀಯ ತೈಲ ದರ ಏರಿಕೆ ಇಲ್ಲದೇ ಅಥವಾ ಯಾವುದೇ ಸಕಾರಣವಿಲ್ಲದೇ ಪೆಟ್ರೋಲ್ ಲೀಟರ್ ಗೆ 3-00 ರೂ ಮತ್ತು ಡೀಸೆಲ್ ಲೀಟರ್ ಗೆ 3-50 ರೂ. ಏರಿಕೆ ಮಾಡಿರುವ ಈ ಜನವಿರೋಧಿ ನೀತಿಯನ್ನು ನಾವು ಉಗ್ರವಾಗಿ ಖಂಡಿಸುತ್ತಿದ್ದೇವೆ ಎಂದು ಬಿಜೆಪಿ ತೀರ್ಥಹಳ್ಳಿಯಲ್ಲಿ ಪ್ರತಿಭಟಿಸಿತು. ಈ ಹಿಂದೆ ಸರ್ಕಾರದಲ್ಲಿ ಮಾನ್ಯ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯನ್ನು 35% ದಿಂದ 24% ಗೆ ಇಳಿಸಿ ಸುಮಾರು 7-00 ರೂ ಕಡಿತಗೊಳಿಸಲಾಗಿತ್ತು. ಈ ಅನಗತ್ಯ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನೇರವಾಗಿ ಗ್ರಾಹಕರಿಗೆ ಹೊರೆಯಾಗಲಿದೆ. ಸಾಗಟ ವೆಚ್ಚ ಏರಿಕೆಯಿಂದಾಗಿ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗುವುದರಿಂದ ಸಾಮಾನ್ಯನಿಗೆ ಹೊರೆಯಾಗಲಿದೆ. ರಾಜ್ಯ ಸರ್ಕಾರ ಈ ಕೂಡಲೇ ಈ ದರ ಪರಿಷ್ಕರಣೆಯನ್ನು ಕೈ ಬಿಟ್ಟು ರಾಜ್ಯದ ಜನತೆಗೆ ಹೊರೆಯಾಗದಂತೆ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಭಾರತೀಯ ಜನತಾ ಪಾರ್ಟಿ ಈ ಮೂಲಕ ವಿನಂತಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮತ್ತು ಬಿಜೆಪಿಮಂಡಲದ ಅಧ್ಯಕ್ಷ ನವೀನ್ ಹೆದ್ದೂರ್, ಪ್ರತಿಭಟನೆ ಕಾರಿಗೆ ಹಗ್ಗದಿಂದ ನೊಗವನ್ನು ಕಟ್ಟಿ ಎಳೆದು ಚಾಲನೆ ನೀಡಿದರು. ಪಟ್ಟಣ ದುದ್ದಕ್ಕೂ ಪ್ರತಿಭಟನೆ ನಡೆಸಿ ತಾಲೂಕ್ ಆಫೀಸಿನ ಮುಂಭಾಗದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿಗಳಲ್ಲಿ ಆರನೇ ಗ್ಯಾರಂಟಿ ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ಜಾಸ್ತಿ ಮಾಡುವುದಾಗಿ ಹೇಳಿದ್ದು, ಅವರು ವಿಧಾನಸೌಧದ ಎದುರು ನಿನ್ನೆ ಕೂತಿದ್ದರು. ಬೆಂಗಳೂರಿನಲ್ಲಿ ಬರುತ್ತಿದ್ದ ಬಾರಿ ಮಳೆಯಲ್ಲಿ ಒದ್ದೆ ಮುದ್ದೆಯಾಗಿ ವಿಧಾನಸೌಧದ ಎದುರು ಕೂತು ಹೋರಾಟ ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ಕಿ ಕೊಡುತ್ತೀವಿ ಎಂದು ಅಕ್ಕಿ ಕೊಡಲಿಲ್ಲ, ಕರೆಂಟ್ ಫ್ರೀ ಕೊಡುತ್ತೇವೆ ಎಂದು ಕರೆಂಟ್ ಬಿಲ್ ಹೆಚ್ಚು ಮಾಡಿದ್ದಾರೆ ಬೇರೆ ಏನು ಮಾಡದೆ ಬರೀ ಪೇಪರ್ ನಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಅಡ್ವರ್ಟೈಸ್ಮೆಂಟ್ ಕೊಟ್ಟಿದ್ದಾರೆ ಅಷ್ಟೇ ಎಂದರು.

ತೀರ್ಥಹಳ್ಳಿ ಬಿಜೆಪಿ ಮಂಡಲದ ಅಧ್ಯಕ್ಷ ಹೆದ್ದೂರು ನವೀನ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಸುಳ್ಳುಗಳನ್ನು ಹೇಳಿಕೊಂಡು ಬಂದಿದೆ. ಕುರುಡು ಭಿಕ್ಷುಕನಿಗೆ ಚಿಲ್ಲರೆಯನ್ನು ಹಾಕಿ ನೋಟನ್ನು ಎತ್ತಿಕೊಳ್ಳುವಂತಹ ಸರ್ಕಾರ ಇದಾಗಿದೆ. ಮನೆಯಲ್ಲಿ ತಾಯಿಗೆ ಕೊಡುವಂತಹ ಹಣವನ್ನು ಅದೇ ಮನೆಯ ಯಜಮಾನನಿಂದ ಕಸಿದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ರಿಗೆ ಮನವಿ ಪತ್ರ ಕೊಟ್ಟು, ಪ್ರತಿಭಟನೆಯಕಾರರು ರಸ್ತೆ ತಡೆ ಮಾಡಿ ವಾಹನ ಸಂಚಾರವನ್ನು ನಿಲ್ಲಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದರು. ಕೆಲಕಾಲ ವಾಹನಗಳ ಸಂಚಾರ ಅಸ್ಥವ್ಯಸ್ತವಾಗಿ ವಾಹನ ಸವಾರರು ಪರದಾಡಿದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಮನವೊಲಿಸಿದರು. ನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು ಬಿಜೆಪಿ ನಾಯಕರಾದ ಕುಕ್ಕೆ ಪ್ರಶಾಂತ್, ಮಧುರಾಜ್ ಹೆಗ್ಡೆ,ಚೊಕ್ಕಡಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ, ಚಂದುವಳ್ಳಿ ಸೋಮಶೇಖರ್, ಕಾಸರವಳ್ಳಿ ಶ್ರೀನಿವಾಸ್, ಸಂತೋಷ್ ದೇವಾಡಿಗ, ನವೀನ್ ಯತಿರಾಜ್ ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Categories
ಮಲ್ನಾಡ್

ಟಾಪ್ 3 ನ್ಯೂಸ್ ಮಲ್ನಾಡ್

ಟಾಪ್ 3 ನ್ಯೂಸ್ ಮಲ್ನಾಡ್

ನೀರು ಪಾಲಾಗಿದ್ದ ಮೂವರ ಮೃತದೇಹ ಪತ್ತೆ: ಜೀವ ತೆಗೆದ ತೆಪ್ಪ!
– ಮೃತ ಕುಟುಂಬದವರ ಕಣ್ಣೀರು : ಯುವ ಜನತೆಯ ಮೋಜಿನ ಹುಚ್ಚು ಬದುಕು ಕಸಿಯಿತು!

ಕೊಪ್ಪ: ನೀರಿನ ಮೋಟರ್ ಪಂಪ್‌ಸಟ್‌ಗಳ ಕೇಬಲ್ ಕಳ್ಳತನ!
– ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ

ಹೊಸನಗರದಲ್ಲೊಂದು ಭೀಕರ ದುರಂತ ತಪ್ಪಿತು!
– ಕಟ್ಟಡದ ಸೆಂಟ್ರಿಂಗ್ ಕುಸಿದು ಬಿದ್ದ ಕಾರಣ ಇಬ್ಬರು ಕಾರ್ಮಿಕರಿಗೆ ಗಾಯ: 30 ಮಂದಿ ಬಚಾವ್

NAMMUR EXPRESS NEWS
ಎನ್ ಆರ್ .ಪುರ : ತೆಪ್ಪ ಮುಳುಗಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ನೀರುಪಾಲಾಗಿದ್ದ ಶಿವಮೊಗ್ಗ ಮೂಲದ ಮೂವರ ಮೃತದೇಹ ಪತ್ತೆಯಾಗಿದ್ದು ಯುವಕರ ತೆಪ್ಪದ ಮೋಜಿನ ಹುಚ್ಚು ಜೀವ ತೆಗೆದಿದೆ.

ಮೃತರನ್ನು ಶಿವಮೊಗ್ಗದ ವಿದ್ಯಾನಗರ ನಿವಾಸಿಗಳಾದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದ ವಿದ್ಯಾನಗರದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು ಜಿಲ್ಲೆಯ ಬೈರಾಪುರದಲ್ಲಿರುವ ಭದ್ರಾ ಹಿನ್ನೀರಿನ ಬಳಿ ಬಂದಿದ್ದಾರೆ. ಈ ವೇಳೆ ನಾಲ್ವರಲ್ಲಿ ಮೂವರು ತೆಪ್ಪದಲ್ಲಿ ತೆರಳಿದ್ದಾರೆ ಓರ್ವ ಮಾತ್ರ ದಡದಲ್ಲಿ ನಿಂತಿದ್ದ ಎನ್ನಲಾಗಿದೆ. ತೆಪ್ಪದಲ್ಲಿ ತೆರಳಿದ ಕೆಲವೇ ಹೊತ್ತಿನಲ್ಲಿ ತೆಪ್ಪ ಮುಳುಗಿ ಮೂವರು ನೀರುಪಾಲಾಗಿದ್ದರು. ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುರುವಾರ ಮತ್ತೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.
ಇದೀಗ ಅವರ ಅಂತ್ಯಕ್ರಿಯೆ ನಡೆದಿದ್ದು ಮೂವರ ಕುಟುಂಬದಲ್ಲಿ ನೋವು ಕಾಣುತ್ತಿದೆ. ಒಟ್ಟಿನಲ್ಲಿ ಹುಡುಗರ ಹುಚ್ಚಾಟ ಮೂವರ ಬದುಕು ತೆಗೆದಿದೆ.

ನೀರಿನ ಮೋಟರ್ ಪಂಪ್‌ಸಟ್‌ಗಳ ಕೇಬಲ್ ಕಳ್ಳತನ!

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ನರಸಿಪುರಗ್ರಾಮದ ಬಾಳೇಗದ್ದೆ ಮತ್ತು ಬಡಿನಹಳ್ಳ ಗ್ರಾಮಗಳ ನಡುವೆ ಇರುವ ಸೋಷಿಯಲ್ ಫಾರೆಸ್ಟ್ ನರ್ಸರಿ ಅಕ್ಕ ಪಕ್ಕದಲ್ಲಿ ತಮ್ಮ ಜಮೀನುಗಳಿಗೆ ನೀರು ಪೂರೈಸಲು ಅಳವಡಿಸಿಕೊಂಡಿದ್ದ ಸುಮಾರು 11 ರೈತರ ವಿದ್ಯುತ್ ಮೋಟರ್‌ಗಳ ಕೇಬಲ್‌ಗಳನ್ನು ಕಿಡಿಗೇಡಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಕಳುವಾದ ಪಂಪ್‌ಸೆಟ್ ಕೇಬಲ್‌ನ ಒಟ್ಟು ತೂಕ ಸುಮಾರು 200 ಕೆಜಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಸದರಿ ಕಳ್ಳತನದ ಬಗ್ಗೆ ಕೊಪ್ಪ ತಾಲೂಕು ಪೋಲೀಸ್ ಠಾಣೆಗೆ ರೈತರು ದೂರು ನೀಡಿದ್ದು, ಪೋಲೀಸರಿಂದ ಸ್ಥಳ ಪರಿಶೀಲನೆ ಆಗಿದ್ದು, ತನಿಖೆ ನಡೆಯುತ್ತಿದೆ. ತೋಟಗಳಲ್ಲಿ, ಜಮೀನುಗಳಲ್ಲಿ ಆಗಾಗ ಸಣ್ಣ ಪುಟ್ಟ ಕೇಬಲ್, ಪೈಪು ಹಾಗೂ ಸ್ಟಾರ್ಟರ್ ಕಳ್ಳತನಗಳು ನಡೆಯುತ್ತಿದ್ದು, ಈಗ ಪಂಪ್‌ಸಟ್‌ ಕೇಬಲ್‌ಗಳ ದೊಡ್ಡ ಮಟ್ಟದ ಸರಣಿ ಕಳ್ಳತನ ಸುದ್ದಿಯಾಗಿದೆ. ಕಳ್ಳತನದ ಸುದ್ದಿ ರೈತ ಬಾಂಧವರಲ್ಲಿ ಆತಂಕ ಹುಟ್ಟಿಸುತ್ತಿದೆ. ಕಳೆದೆರಡು ವರ್ಷಗಳ ಬರದ ಪರಿಣಾಮಕ್ಕೆ ಹೇಗಾದರು ಮಾಡಿ ತೋಟ ಉಳಿಸಿಕೊಳ್ಳಬೇಕೆಂದು ಹರ ಸಾಹಸ ಮಾಡಿದ ರೈತರು, ಇರುವ ನೀರಿನ ಮೂಲಗಳಿಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ಪಂಪ್‌ಸೆಟ್ ಹಾಕಿಸಿಕೊಂಡರೆ, ಈಗ ಅದರ ಕೇಬಲ್‌ಗಳು ಕಳ್ಳತನವಾಗಿರುವುದು ರೈತರು ಆತಂಕದಿಂದ ಪರಿತಪಿಸುವಂತೆ ಮಾಡಿದೆ. ಕೇಬಲ್ ಸರಣಿ ಕಳ್ಳತನದ ಹಿನ್ನಲೆಯಲ್ಲಿ ರೈತರು ತಮ್ಮ ಮೋಟರ್ ಪಂಪ್‌ಸೆಟ್, ಕೇಬಲ್, ಪೈಪ್, ಸ್ಟಾರ್ಟರ್‌ಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕಾಗಿದೆ.

ಹೊಸನಗರದಲ್ಲೊಂದು ಭೀಕರ ದುರಂತ ತಪ್ಪಿತು!
– ಕಟ್ಟಡದ ಸೆಂಟ್ರಿಂಗ್ ಕುಸಿದು ಬಿದ್ದ ಕಾರಣ ಇಬ್ಬರು ಕಾರ್ಮಿಕರಿಗೆ ಗಾಯ: 30 ಮಂದಿ ಬಚಾವ್

ಹೊಸನಗರ:ಹೊಸನಗರ ಪಟ್ಟಣದ ಚೌಡಮ್ಮ ರಸ್ತೆಯ ಕಳೂರು ಸೇವಾ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಕಾಂಕ್ರೀಟ್ ನಡೆಯುತ್ತಿದ್ದು ಕಟ್ಟಡದ ಒಂದು ಭಾಗದ ಸೆಂಟ್ರಿಂಗ್ ಕುಸಿದು ಬಿದ್ದ ಕಾರಣ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿದ್ದು ಸಂಭವಿಸಬಹುದಾದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಸ್ಲ್ಯಾಬ್ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ದುರಂತ ಸಂಭವಿಸುತ್ತಿದ್ದಂತೆ ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು.