Categories
ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಗೃಹ ಲಕ್ಷ್ಮಿ ಹಣ?

 

ವರಮಹಾಲಕ್ಷ್ಮಿ ಹಬ್ಬಕ್ಕೆ ಗೃಹ ಲಕ್ಷ್ಮಿ ಹಣ?
– ಎರಡು ತಿಂಗಳ 4000 ರೂ.ಹಣ ಒಟ್ಟಿಗೆ ಜಮೆ
– ಸರ್ಕಾರ ಹೇಳಿದ್ದೇನು? ಯಾವಾಗ ಸಿಗುತ್ತೆ ಹಣ?

NAMMUR EXPRESS NEWS
ಬೆಂಗಳೂರು : ಕಾಂಗ್ರೆಸ್ ಸರಕಾರ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಎರಡು ಕಂತಿನ ಹಣ ಇನ್ನೂ ಜಮೆ ಆಗಿಲ್ಲ. ವರಮಹಾಲಕ್ಷ್ಮಿ ಹಬ್ಬದಂದು ಮಹಿಳೆಯರ ಖಾತೆಗೆ ಹಣ ಜಮೆ ಆಗೋದು ಖಚಿತ ಎನ್ನಲಾಗುತ್ತಿದೆ.
ಲೋಕ ಸಭೆ ಚುನಾವಣೆ ವೇಳೆ ಹಣ ಜಮೆ ಆಗಿತ್ತು. ಗೃಹಲಕ್ಷ್ಮೀ ಯೋಜನೆಯ ಜೂನ್, ಜುಲೈ ತಿಂಗಳ ಒಟ್ಟು 4000 ರೂಪಾಯಿ ಹಣ ಗೃಹಿಣಿಯರ ಖಾತೆಗೆ ಜಮೆ ಆಗೋದಕ್ಕೆ ಬಾಕಿ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಈ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಜುಲೈ ಅಂತ್ಯದಲ್ಲಿ ಅಥವಾ ಅಗಸ್ಟ್ ಮೊದಲ ವಾರ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುತ್ತೆ ಅಂತಾ ಹೇಳಲಾಗಿತ್ತು. ಆದ್ರೆ ಅಗಸ್ಟ್ ಅರ್ಧ ತಿಂಗಳು ಕಳೆದರೂ ಕೂಡ ಹಣ ಮಾತ್ರ ಸಿಕ್ಕಿಲ್ಲ. ಇನ್ನು ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈ ಬಾರಿ ಎರಡು ತಿಂಗಳ ಹಣ ಒಟ್ಟಿಗೆ ಜಮೆ ಆಗಲಿದೆ ಎನ್ನಲಾಗುತ್ತಿದೆ. ಜೂನ್ ಮತ್ತು ಜುಲೈ ತಿಂಗಳ ಒಟ್ಟು 4೦೦೦ ರೂಪಾಯಿ ವರಮಹಾಲಕ್ಷ್ಮೀ ಹಬ್ಬದ ಗಿಫ್ಟ್ ಆಗಿ ಸಿಗಲಿದೆ.

Categories
ತೀರ್ಥಹಳ್ಳಿ

ಆಗುಂಬೆ ಬಳಿ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು!

ಆಗುಂಬೆ ಬಳಿ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು!
– ಬೈಕ್ ಪಿಕ್ ಅಪ್ ಡಿಕ್ಕಿ: ಚಾಲಕ ಪರಾರಿ

ಒಂದೇ ಕುಟುಂಬದ ಮೂವರು ಆತ್ಮಹತ್ಯೆ!
– ಬಾಡಿಗೆ ಮನೆಯಲ್ಲೇ ಸಾವು: ಶಿವಮೊಗ್ಗದಲ್ಲಿ ಘಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸಮೀಪದ ಬಿದರಗೋಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಗಸರಕೋಣೆ ಶರತ್ (35) ಮತ್ತು ಪಿಕಪ್ ವಾಹನದಲ್ಲಿದ್ದ ಕೇರಳ ಮೂಲದ ಮತ್ತೋರ್ವ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದು ಮೃತನ ಹೆಸರು ಪತ್ತೆಯಾಗಿಲ್ಲ. ಪಿಕಪ್ ವಾಹನ ಓಡಿಸುತ್ತಿದ್ದ ಬಾವಿ ಕೆಲಸ ಮಾಡುವ ಸಂತೋಷ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾರೆ
ಮಧ್ಯಾಹ್ನ 1.15ಕ್ಕೆ ಬಿದರಗೋಡು ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಏಕಾಏಕಿ ಪಿಕಪ್ ವಾಹನಕ್ಕೆ ಅಪ್ಪಳಿಸಿದೆ. ಅಪ್ಪಳಿಸಿದ ಹೊಡೆತಕ್ಕೆ ಚಾಲಕ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಇದ್ದ ಪಿಕಪ್ ವಾಹನ ಚಲಿಸುತ್ತಿರುವ ವೇಗವನ್ನು ಕಡಿತಗೊಳಿಸಲು ಮುಂದಾಗಿದ್ದು ಗುಂಡಿಗೆ ಬಿದ್ದು ವಾಹನದಲ್ಲಿದ್ದ ಕೇರಳ ಮೂಲದ ಯುವಕ ಮೃತಪಟ್ಟಿದ್ದಾನೆ. ಇನ್ನೋರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ.
ಆಗುಂಬೆ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ!

ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ನಗರದ ಓ.ಟಿ. ರಸ್ತೆಯ ಕ್ಲಾರ್ಕ್‌ ಪೇಟೆಯಲ್ಲಿ ನಡೆದಿದೆ.
ಭುವನೇಶ್ವರಿ (41), ಇವರ ಮಗ ದರ್ಶನ್ (21) ಹಾಗೂ ಸಹೋದರ ಮಾರುತಿ (37) ಆತ್ಮಹತ್ಯೆಗೆ ಶರಣಾದವರೆಂದು ಗುರುತಿಸಲಾಗಿದೆ. ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ದೊಡ್ಡಪೇಟೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Categories
ತೀರ್ಥಹಳ್ಳಿ

11ನೇ ಬಾರಿಗೆ ಗೆದ್ದ ಬಂಡೆ ವೆಂಕಟೇಶ್!

11ನೇ ಬಾರಿಗೆ ಗೆದ್ದ ಬಂಡೆ ವೆಂಕಟೇಶ್!
– ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆ
– ಸಹಕರಿಸಿದ ಸರ್ವರಿಗೂ ಬಂಡೆ ವೆಂಕಟೇಶ್ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ರಾಜಕೀಯ ನಾಯಕ ಬಂಡೆ ವೆಂಕಟೇಶ್ ಇದೀಗ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 11ನೇ ಬಾರಿಗೆ ಬಂಡೆ ವೆಂಕಟೇಶ್ ಮತ್ತು ಶ್ರುತಿ ವೆಂಕಟೇಶ್ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ.
ಆಗಸ್ಟ್ 11ರಂದು ನಡೆದಿದ್ದ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಗೆ ತೀರ್ಥಹಳ್ಳಿ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಜನಪ್ರಿಯ ನಾಯಕ, ತೀರ್ಥಹಳ್ಳಿ ಒಕ್ಕಲಿಗ ಸಂಘದ ನಿರ್ದೇಶಕರು,ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯ ಹಾಲಿ ಅಧ್ಯಕ್ಷರು ಮತ್ತು ರಾಜ್ಯ ಗ್ರಾಮ ಪಂಚಾಯತಿ ಒಕ್ಕೂಟದ ಉಪಾಧ್ಯಕ್ಷರಾಗಿರುವ ಬಂಡೆ ವೆಂಕಟೇಶ್ ಅವರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಆಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿ ಸ್ಪರ್ಧೆ ಮಾಡಿರುವ ಶ್ರುತಿ ವೆಂಕಟೇಶ್ ಕೂಡ ಎಲ್ಲಾ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಬಂಡೆ ವೆಂಕಟೇಶ್ ಅಭಿನಂದನೆ

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿದ ಹಿತೈಷಿಗಳು, ಸ್ನೇಹಿತರು, ಬಂಧು ಬಳಗದವರು ಮತ್ತು ಒಕ್ಕಲಿಗ ಸಮುದಾಯದ ಮತದಾರರಿಗೆ ಬಂಡೆ ವೆಂಕಟೇಶ್ ಅಭಿನಂದನೆ ಸಲ್ಲಿಸಿದ್ದಾರೆ.

Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಸಾರಥಿಗಳು!

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಸಾರಥಿಗಳು!
– 21 ಮಂದಿ ನೂತನ ನಿರ್ದೇಶಕರ ಆಯ್ಕೆ: ಯಾರು ಯಾರು ಇಲ್ಲಿದೆ ಮಾಹಿತಿ
– ಕಡಿದಾಳ್ ಗೋಪಾಲ್, ಅದಿಮೂರ್ತಿ, ಸುದರ್ಶನ್ ತಾಯಿಮನೆ, ಬಂಡೆ ವೆಂಕಟೇಶ್ ಸೇರಿ 20 ಜನರ ಗೆಲುವು

NAMMUR EXPRESS NEWS
ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ 2024ರ ಸದಸ್ಯರ ಚುನಾವಣೆಯಲ್ಲಿ 21ನೇ ಸ್ಥಾನಗಳಿಗೆ ನಡೆದ ಚುನಾವಣೆ ಮತ ಎಣಿಕೆ ಸೋಮವಾರ ತಡ ರಾತ್ರಿವರೆಗೆ ನಡೆದಿದ್ದು, ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಹೆಸರು ಪಡೆದ ಮತ
1) ಬಿ ಎ ರಮೇಶ್ ಹೆಗ್ಡೆ= 2001
2) ರವಿಕುಮಾರ್ =1856
3) ಡಾ. ಕಡಿದಾಳ್ ಗೋಪಾಲ್=1805
4) ಆಶಿತ್ ಬಳಗಟ್ಟೆ =1630
5) ಬಂಡೆ ವೆಂಕಟೇಶ್ =1527
6) ಸುದರ್ಶನ್ ತಾಯಿಮನೆ = 1461
7) ಎಂ ಎ ರಮೇಶ ಹೆಗ್ಡೆ = 1442
8) ಉಂಬಳೇಬೈಲು ಮೋಹನ್ = 1436
9) ಪುಟ್ಟಸ್ವಾಮಿ =1417
10) ಆದಿಮೂರ್ತಿ =1410
11) ಪ್ರತಿಮಾ ಡಾಕಪ್ಪ=1367
12) ರಮೇಶ್ ಬಿ ನಾಯಕ್=1366
13) ನೀರುಳ್ಳಿ ನಾಗರಾಜ್ =1342
14) ಸುಂದರೇಶ್ =1301
15) ಸುಮಿತ್ರ ಕೇಶವಮೂರ್ತಿ=1298
16) ಭಾರತಿ ರಾಮಕೃಷ್ಣ =1262
17) ಚೇತನ್ =1260
18) ಅನ್ನಪೂರ್ಣ =1259
19) ಸಹನಾ =1055
20) ವನಮಾಲ ಮೋಹನ್ =1031

ನೂತನವಾಗಿ ಆಯ್ಕೆಯಾದ ಎಲ್ಲಾ ನಿರ್ದೇಶಕರಿಗೂ ಶುಭಾಶಯಗಳು

Categories
ಮಾಹಿತಿ ಸುದ್ದಿ

ಶ್ರಾವಣ ಮಾಸ: ಎಲ್ಲೆಡೆ ವಿಶೇಷ ಪೂಜೆ!

ಶ್ರಾವಣ ಮಾಸ: ಎಲ್ಲೆಡೆ ವಿಶೇಷ ಪೂಜೆ!
– ಸಾಲು ಸಾಲು ಹಬ್ಬಕ್ಕೆ ಸಿದ್ಧತೆ: ಮಳೆ ಕೊಂಚ ಕಡಿಮೆ
– ವ್ಯಾಪಾರಿಗಳಿಗೆ ಉದ್ಯಮ ಅಭಿವೃದ್ಧಿ ನಿರೀಕ್ಷೆ

NAMMUR EXPRESS NEWS
ಆಗಸ್ಟ್‌ 5 ರಿಂದ ಶಿವನಿಗೆ ಸಮರ್ಪಿತವಾದ ಶ್ರಾವಣ ಮಾಸ ಪ್ರಾರಂಭವಾಗಿದೆ . ಶಿವಭಕ್ತರು ಈ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸುವ ಮೂಲಕ ಶಿವನನ್ನು ಪೂಜಿಸುತ್ತಾರೆ. ಈ ವರ್ಷ ಶ್ರಾವಣ ಮಾಸವು ಸೋಮವಾರದಿಂದ ಆರಂಭವಾಗುತ್ತಿರುವುದರಿಂದ ಶ್ರಾವಣ ಮಾಸದ ಮಹತ್ವ ಮತ್ತಷ್ಟು ಹೆಚ್ಚಿದೆ.

ವ್ಯಾಪಾರಿಗಳಿಗೆ, ತಯಾರಕರಿಗೆ ಕೈತುಂಬ ಕೆಲಸ!

ಆ.5 ರಿಂದ ಶುರುವಾದ ಶ್ರಾವಣ ಮಾಸ ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿಯಿಂದ ಹಿಡಿದು ನವರಾತ್ರಿಯಲ್ಲಿ ನವದುರ್ಗೆಯರ ಪೂಜೆಯವರೆಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕುಶಲಕರ್ಮಿಗಳು ಶುಭ ಸಮಾರಂಭಗಳಿಗಾಗಿ ಮೂರ್ತಿಗಳನ್ನು ರಚಿಸಲು ಸಜ್ಜಾಗಿದ್ದಾರೆ. ಹಾಗೂ ಆಭರಣದ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರಿಗಳು ಲಾಭದ ನಿರೀಕ್ಷೆಯಲ್ಲಿದ್ದು ಈ ವರ್ಷ ಭರ್ಜರಿ ವಹಿವಾಟು ಕಾಣುವ ನಿರೀಕ್ಷೆ ಇದೆ.

ಮಳೆ ಕೊಂಚ ಕಡಿಮೆ: ಜನ ಪಟ್ಟಣಗಳತ್ತ

2 ತಿಂಗಳಿಂದ ಅಬ್ಬರಿಸಿದ್ದ ಮಳೆ ಈ ವಾರ ಕೊಂಚ ಕಡಿಮೆ ಆಗಿದೆ. ಅದರಲ್ಲೂ ಭಾರೀ ಅವಾಂತರ ಸೃಷ್ಟಿ ಮಾಡಿದ್ದ ಮಲೆನಾಡು, ಕರಾವಳಿಯಲ್ಲಿ ಮಳೆ ಕಡಿಮೆ ಆಗಿದೆ. ಹೀಗಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ.

ದೇಗುಲಗಳಲ್ಲಿ ವಿಶೇಷ ಪೂಜೆ

ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಮಹಿಳೆಯರು ಶ್ರಾವಣವನ್ನು ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ. ಶ್ರಾವಣ ಆದ್ದರಿಂದ ಮೀನು, ಮಾಂಸಕ್ಕೆ ಬೇಡಿಕೆ ಕಡಿಮೆ ಆಗಿದೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುರುವಾಯ್ತು ಹೋರಾಟ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುರುವಾಯ್ತು ಹೋರಾಟ!
– ಜಮೀನು ಒತ್ತುವರಿ ತೆರವಿಗೆ ವಿಪಕ್ಷಗಳ ವಿರೋಧ
– ರೈತ ಹಿತ ರಕ್ಷಣಾ ಸಮಿತಿಗೂ ಬಿಜೆಪಿ ಬೆಂಬಲ
– ಅರಣ್ಯ ಇಲಾಖೆಗೆ ಡಿ.ಎನ್. ಜೀವರಾಜ್‌ ಎಚ್ಚರಿಕೆ

NAMMUR EXPRESS NEWS
ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರ ಯಾವುದೇ ರೈತರ ಜಮೀನು ತೆರವುಗೊಳಿಸಲು ಹೊರಟರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ತಡೆಯಲಿದ್ದಾರೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್‌ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಒತ್ತುವರಿ ತೆರವು ಶುರುವಾಗಿದೆ. ಈ ಹಿನ್ನೆಲೆ ಇದೀಗ ರೈತರು ಹೋರಾಟಕ್ಕೆ ಇಳಿದಿದ್ದಾರೆ. ಆದರೆ ಅರಣ್ಯ ಇಲಾಖೆ ಮತ್ತು ಸರ್ಕಾರ 3 ಎಕರೆ ಮೇಲ್ಪಟ್ಟ ಒತ್ತುವರಿ ತೆರವು ಮಾಡುವುದಾಗಿ ಹೇಳಿದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕಿಳಿದಿವೆ. ಬಿಜೆಪಿ ಮತ್ತು ಜೆಡಿಎಸ್ ಸಾಥ್ ನೀಡಿವೆ.

ಬಿಜೆಪಿ, ಜೆಡಿಎಸ್ ಜಂಟಿ ಹೋರಾಟ!

ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಅರಣ್ಯ ಸಚಿವ ಈಶ್ವರ್‌ಖಂಡ್ರೆ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ರೈತರ ಒತ್ತುವರಿ ಜಮೀನು ತೆರವುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಕೇರಳದ ವೈನಾಡು, ಉತ್ತರ ಕನ್ನಡ ಜಿಲ್ಲೆ ಗುಡ್ಡ ಕುಸಿತದ ಕಾರಣ ಇಟ್ಟುಕೊಂಡು ಮಲೆನಾಡು ಭಾಗದ ರೈತರ ಒತ್ತುವರಿ ಜಮೀನು ತೆರವು ಮಾಡಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇಡೀ ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಸರ್ಕಾರ ಗದಾ ಪ್ರಹಾರ ಮಾಡಿದೆ ಎಂದು ಟೀಕಿಸಿದರು.
ರೈತರ ಒತ್ತುವರಿಯಿಂದ ಗುಡ್ಡ ಕುಸಿತ ಕಂಡಿಲ್ಲ. ನಮ್ಮ ರೈತರು ಅರಣ್ಯ ಕಾಪಾಡಿಕೊಂಡು ಬಂದಿದ್ದಾರೆ. ಇದರಿಂದ ಮರಗಳ ಬೇರು ಮಣ್ಣು ಜರಿಯದಂತೆ ತಡೆಯುತ್ತಿದೆ. ಸರ್ಕಾರದ ಅವೈಜ್ಞಾನಿಕ ಕಾರಣದಿಂದಲೇ ಗುಡ್ಡ ಕುಸಿದಿವೆ. ಗುಡ್ಡಗಳಲ್ಲಿ ಇಂಗು ಗುಂಡಿ ಮಾಡುವುದು, ಗುಡ್ಡ ಸುತ್ತ ಟ್ರಂಚ್ ಹೊಡೆಯುವುದರಿಂದಲೂ ಸಹಜವಾಗಿ ಒಂದು ಮಾರ್ಗದಲ್ಲಿ ಹೋಗುತ್ತಿದ್ದ ಗುಡ್ಡದ ನೀರು ಬೇರೆ ಮಾರ್ಗದಲ್ಲಿ ಹೋಗುವ ಕಾರಣದಿಂದಲೂ ಗುಡ್ಡ ಕುಸಿಯುತ್ತಿದೆ ಎಂದು ಮಾಜಿ ಸಚಿವ ಜೀವರಾಜ್ ಆರೋಪಿಸಿದ್ದಾರೆ.

ರಸ್ತೆ ಕುಸಿದಿದ್ದು ಕಾಲುವೆ ತೆಗೆದಿದ್ದರಿಂದ!

ಕೊಪ್ಪ ತಾಲೂಕಿನ ಕುಂಚೂರು ರಸ್ತೆ ಪಕ್ಕದಲ್ಲಿ ಗುಡ್ಡ ಕುಸಿದಿದೆ. ಇದಕ್ಕೆ ಕಾರಣ ರಸ್ತೆ ಬದಿ ಓಎಫ್ ಸಿ ಗಾಗಿ ಕಾಲುವೆ ತೆಗೆಯಲಾಗಿದೆ. ಇದನ್ನೂ ಸರಿಯಾಗಿ ಮುಚ್ಚಿಲ್ಲ. ಇದರ ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕಾಲುವೆ ತೆಗೆದಿದ್ದಾರೆ. ಅದನ್ನು ಮುಚ್ಚಿಲ್ಲ.ಈ ಕಾರಣಕ್ಕೆ ಅಲ್ಲಿ ಗುಡ್ಡ ಕುಸಿದಿದೆ ಎಂದರು. ಹೊಸ ಒತ್ತುವರಿ ಬೆಂಬಲಿಸಲ್ಲ ರೈತರು ನೂರಾರು ವರ್ಷದಿಂದ ಒತ್ತುವರಿ ಮಾಡಿ ಜೀವನ ನಡೆಸುತ್ತಿದ್ದಾರೆ. ಅಂತವರ ಜಮೀನು ತೆರವು ಮಾಡುವುದನ್ನು ವಿರೋಧಿಸುತ್ತೇವೆ ಎಂದು ಜೀವರಾಜ್ ಹೇಳಿದ್ದಾರೆ.

ಹೊಸದಾಗಿ ಒತ್ತುವರಿ ಮಾಡಿದವರ ಪರ ನಿಲ್ಲಲ್ಲ

ಹೊಸದಾಗಿ ಒತ್ತುವರಿ ಮಾಡಿದವರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಿಲ್ಲುವುದಿಲ್ಲ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ರೈತರ ಒತ್ತುವರಿ ತೆರವು ಮಾಡಲು ಹೊರಟರೆ ಒಟ್ಟಾಗಿ ವಿರೋಧಿಸುತ್ತೇವೆ. ಎಲ್ಲರೂ ರೈತರೇ ಆಗಿದ್ದಾರೆ. ರೈತರು ಒಗ್ಗಟ್ಟು ಕಾಪಾಡಬೇಕು ಎಂದೂ ಅವರು ಹೇಳಿದರು.

ಶಾಸಕರ ವಿರುದ್ಧ ಜೀವರಾಜ್ ಆಕ್ರೋಶ

ಶೃಂಗೇರಿ ಕ್ಷೇತ್ರದ ಶಾಸಕರು ಸರ್ವೆ ಮಾಡಿಸಿ ಒತ್ತುವರಿ ತೆರವು ಮಾಡಿಸುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಮೊದಲು ಅವೈಜ್ಞಾನಿಕವಾಗಿ ಮಾಡಿರುವ ಕೈಗಾರಿಕೆ, ಗುಡ್ಡದ ರೆಸಾರ್ಟ್ ತೆಗೆಯಿರಿ. ರೈತರ ಒತ್ತುವರಿ ಜಮೀನು ತೆರವು ಗೊಳಿಸುತ್ತೇನೆ ಎಂದು ಅರಣ್ಯ ಸಚಿವ ಈಶ್ವರ್‌ಖಂಡ್ರೆ ಹೇಳಿಕೆ ನೀಡಿದಾಗ ಚಿಕ್ಕಮಗಳೂರು ಜಿಲ್ಲೆಯ 5 ಶಾಸಕರೂ ವಿರೋಧ ಮಾಡಬೇಕಿತ್ತು ಎಂದರು. ಅರಣ್ಯ ಸಚಿವರಿಗೆ ಅರಣ್ಯದ ಬಗ್ಗೆ ಮಾಹಿತಿ ಇರಬೇಕು. ಈ ಹಿಂದೆ ಅರಣ್ಯ ಸಚಿವರಾಗಿದ್ದ ಜೀ ವಿಜಯ ಒಬ್ಬರಿಗೆ ಮಾತ್ರ ಅರಣ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ನಂತರ ಬಂದ ಎಲ್ಲಾ ಅರಣ್ಯ ಸಚಿವರಿಗೆ ಅರಣ್ಯದ ಬಗ್ಗೆ ಸರಿಯಾದ ಅರಿವು ಇಲ್ಲ ಎಂದರು. ಕಾಪಿ ತೋಟಗಳ ಒತ್ತುವರಿ ಜಮೀನನ್ನು ಆ ರೈತರಿಗೆ 30 ವರ್ಷಗಳ ಕಾಲ ಲೀಸ್ ಮೇಲೆ ನೀಡುವ ಕಾಯ್ದೆ ತಂದಿದ್ದು ಬಿಜೆಪಿ ಸರ್ಕಾರ, ಆದರೆ, ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರಲು ವಿಳಂಬ ನೀತಿ ಅನುಸರಿಸಿದೆ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ ಶಾಸಕರೂ ಇದ್ದಾರೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಈ ಮಳೆಗಾಲದ ಕ್ಷೇತ್ರದಲ್ಲಿ 15 ದಿನ ವಿದ್ಯುತ್ ಇಲ್ಲದೆ ಕಗ್ಗತ್ತಲು ಆವರಿಸಿತ್ತು. ರಸ್ತೆಗಳೆಲ್ಲಾ ಕಿತ್ತು ಹೋಗುತ್ತಿದೆ. ಎಲೆಕಲ್ಲು ಹತ್ತಿರ ಕಳೆದ ವರ್ಷ ಹಾಕಿದ ಟಾರು ಈ ವರ್ಷವೇ ಕಿತ್ತು ಹೋಗಿದೆ. ನಾನು ಶಾಸಕನಾಗಿದ್ದಾಗ ಕೊಪ್ಪ- ಶಿವಮೊಗ್ಗ ರಸ್ತೆ ಮಾಡಿಸಿದ್ದೆ. 14 ವರ್ಷ ಆಗಿದ್ದರೂ ಇನ್ನೂ ಕಿತ್ತು ಹೋಗಿಲ್ಲ ಎಂದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಯಾವುದೇ ಗಿಡ ಕಡಿಯಬಾರದು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ. ಆದರೂ ಅರಣ್ಯ ಇಲಾಖೆಯವರು ಒತ್ತುವರಿ ತೆರವು ಸಂದರ್ಭದಲ್ಲಿ ಗಿಡ ಕಡಿಯುತ್ತಾರೆ. ಹಿಂದಿನ
ಜನಸಂಖ್ಯೆಗೆ ಹೋಲಿಸಿದರೆ ಈಗ ಜನಸಂಖ್ಯೆ ಏರಿಕೆಯಾಗಿದೆ. ರೈತರು 1-2 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ನಡೆದರೆ ಜೆಡಿಎಸ್ ಪಕ್ಷ
ವಿರೋಧಿಸಲಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಅರುಣ ಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜೆಡಿಎಸ್ ಕಾರ್ಯಾಧ್ಯಕ್ಷ ಶಿವದಾಸ್, ಬಿಜೆಪಿ ಕೊಪ್ಪ ತಾಲೂಕು ಅಧ್ಯಕ್ಷ ಹೊಸೂರು ದಿನೇಶ್, ಶೃಂಗೇರಿ ಬಿಜೆಪಿ ಅಧ್ಯಕ್ಷ ಉಮೇಶ್, ಬಿಜೆಪಿ ಪಕ್ಷದ ಎನ್.ಆರ್.ಪುರ ಮುಖಂಡರಾದ ಕೆಸವಿ ಮಂಜುನಾಥ್, ಎಚ್ ಡಿ.ಲೋಕೇಶ್, ಎನ್.ಎಂ.ಕಾಂತರಾಜ್, ಪರ್ವೀಜ್, ಶೃಂಗೇರಿ ಮುಖಂಡರಾದ ಅಂಗುರುಡಿ ದಿನೇಶ್, ನೂತನ್ ಕುಮಾರ್ ಇದ್ದರು.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಬ್ರಹ್ಮ ಯೋಗದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮನೆಯ ವಾತಾವರಣ ಶಾಂತಿಯಿಂದ ಕೂಡಿರಲಿದೆ. ಕೆಲಸದ ಸ್ಥಳದಲ್ಲಿನ ಸಮಸ್ಯೆಗಳು ದೂರವಾಗುವುದು. ಮಕ್ಕಳ ಪ್ರಗತಿಯನ್ನು ನೋಡಿ ಮನಸ್ಸು ಸಂತೋಷವಾಗಿರುವುದು. ಈ ದಿನ ಹಠಾತ್ ಆಗಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಬೇಕಾಗುವುದು. ನೀವು ಆರ್ಥಿಕ ಸಮಸ್ಯೆಯಿಂದ ಚಿಂತೆಗೊಳಗಾಗಿದ್ದರೆ ಈ ದಿನ ನಿಮಗೆ ಅದರಿಂದ ಮುಕ್ತಿ ದೊರಕುವುದು.

** ವೃಷಭ ರಾಶಿ :
ಒಡಹುಟ್ಟಿದವರ ಸಂಪೂರ್ಣ ಬೆಂಬಲ ಪಡೆಯುವುದರಿಂದ ನಿಧಾನವಾಗಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಸ್ನೇಹಿತರೊಂದಿಗೆ ದೂರ ಪ್ರಯಾಣ ಮಾಡುವ ಯೋಜನೆಯನ್ನು ಮಾಡುವಿರಿ. ಆದರೆ ಇದರಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಈ ದಿನ ಜಾಗರೂಕರಾಗಿರಿ, ಇಲ್ಲದಿದ್ದರೆ ಶತ್ರುಗಳ ಕಾಟ ಎದುರಾಗಬಹುದು.

** ಮಿಥುನ ರಾಶಿ
ಕೆಲಸದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಹೊಂದುವರು. ಇದರಿಂದ ನಿಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುವುದು. ಈ ದಿನ ನೀವು ಮನೋರಂಜನೆಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಇದರಿಂದ ನಿಮ್ಮ ಚಿಂತೆ ಹೆಚ್ಚಾಗುವುದು. ವ್ಯಾಪಾರದಲ್ಲಿ ಈ ದಿನ ನೀವು ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ನಿಮಗೆ ಹೆಚ್ಚಿನ ಲಾಭವಾಗುವುದು.

** ಕರ್ಕಾಟಕ ರಾಶಿ :
ಯಾವುದಾದರೂ ವಿಚಾರಗಳು ನ್ಯಾಯಾಲಯದಲ್ಲಿ ಇದ್ದರೆ, ಇಂದು ತೀರ್ಪು ನಿಮ್ಮ ಪರವಾಗಿ ಬರಬಹುದು. ನೀವು ಹೂಡಿಕೆ ಮಾಡಬೇಕೆಂದಿದ್ದರೆ ಈ ದಿನ ಉತ್ತಮವಾಗಿರುತ್ತದೆ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳ ಜೀವನದಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗುವುದು ಮತ್ತು ಉನ್ನತ ಶಿಕ್ಷಣಕ್ಕಾಗಿ ಈ ಸಮಯ ಉತ್ತಮವಾಗಿರಲಿದೆ. ಮನೆ ಮತ್ತು ಕೆಲಸದಲ್ಲಿ ಸಮತೋಲನ ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ಸು ಗಳಿಸುವಿರಿ.

** ಸಿಂಹ ರಾಶಿ :
ವ್ಯಾಪಾರದಲ್ಲಿ ಇಂದು ದೊಡ್ಡ ನಷ್ಟವಾಗುವ ಸಂಭವವಿದೆ. ಹಾಗಾಗಿ ಎಚ್ಚರದಿಂದಿರಿ. ನೀವು ಪ್ರಯಾಣಿಸಬೇಕೆಂದಿದ್ದರೆ ಈ ದಿನ ಉತ್ತಮವಾಗಿರಲಿದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಚರ್ಚೆಯನ್ನು ನಡೆಸುವಿರಿ. ನೀವು ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಸುಧಾರಣೆಯನ್ನು ಬಯಸುವುದಾದರೆ, ಇಂದು ನಿಮ್ಮ ಸೋಮಾರಿತನವನ್ನು ದೂರ ಮಾಡಿ ಮತ್ತು ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸುವುದು ಮುಖ್ಯ.

** ಕನ್ಯಾ ರಾಶಿ :
ಸರ್ಕಾರಿ ಕೆಲಸಗಳು ಆಶ್ಚರ್ಯದಾಯಕ ಪರಿಣಾಮವನ್ನು ಪಡೆಯುವುದರಿಂದ ನೀವು ಉತ್ಸಾಹದಿಂದಿರುವಿರಿ. ಆದರೆ ಭವಿಷ್ಯದಲ್ಲಿ ಲಾಭ ಪಡೆಯುವುದಕ್ಕಾಗಿ ಅಧಿಕಾರಿಗಳಿಂದ ದೂರವಿರಿ, ಆಗ ನಿಮಗೆ ಲಾಭ ದೊರಕುವುದು. ನೀವು ಹೊಸ ವ್ಯಾಪಾರವನ್ನು ಶುರು ಮಾಡಬೇಕೆಂದಿದ್ದರೆ, ನಿಮ್ಮ ಮನಸ್ಸು ಉತ್ಸಾಹದಾಯಕವಾಗಿರುವುದು. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

** ತುಲಾ ರಾಶಿ :
ಇಂದು ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾಗಬಹುದು. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಮನೆಯಲ್ಲಿ ಇಂದು ಒಂದೇ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ನಿಮ್ಮ ಸಾಹಸ ಮತ್ತು ಬುದ್ಧಿವಂತಿಕೆಯಿಂದ ನೀವು ಈ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವಿರಿ. ವಿದೇಶದಲ್ಲಿ ಓದುತ್ತಿರುವ ತುಲಾ ರಾಶಿಗೆ ಸೇರಿದ ವಿದ್ಯಾರ್ಥಿಗಳು ಈ ದಿನ ಶುಭ ಸುದ್ದಿಯನ್ನು ಪಡೆಯುವರು.

** ವೃಶ್ಚಿಕ ರಾಶಿ :
ಅಪೂರ್ಣವಾದ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವುದು. ಆದರೆ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಯಾವುದಾದರೂ ಸಮಸ್ಯೆ ಎದುರಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿರಿ. ಉನ್ನತ ಅಧಿಕಾರಿಗಳ ಬೆಂಬಲದಿಂದ ಹಳೆಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಇಂದು ಯಾವುದೇ ರೀತಿಯ ನಿರಾಶೆಯ ವಿಷಯಗಳನ್ನು ಯೋಚಿಸಬೇಡಿ. ಸಮಯ ಬಹಳ ಅನುಕೂಲಕರವಾಗಿರಲಿದೆ.

** ಧನಸ್ಸು ರಾಶಿ :
ಹೊಸ ಜನರ ಭೇಟಿ ಆಗುವರು ಅಥವಾ ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ಪಡೆಯುವರು ಇದರಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ. ಇಂದು ನಿಮ್ಮ ಗಂಡನ ಮನೆಯ ಯಾರಾದರೂ ಸಾಲವನ್ನು ಕೇಳಿದರೆ, ಎಚ್ಚರಿಕೆಯಿಂದ ನೀಡಿ. ಅದು ವಾಪಸ್ಸು ನಿಮ್ಮ ಕೈ ಸೇರುವ ಸಂಭವ ಕಡಿಮೆ ಇದೆ. ಈ ದಿನ ನಿಮ್ಮ ಕುಟುಂಬ ಜೀವನ ಉತ್ತಮವಾಗಿರುವುದು.

** ಮಕರ ರಾಶಿ :
ಪಿತ್ರಾರ್ಜಿತ ಆಸ್ತಿ ಲಭಿಸುವ ಯೋಗವಿದೆ. ನೀವು ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾರಿಂದಲಾದರೂ ಸಾಲ ಪಡೆದಿದ್ದರೆ, ಅದನ್ನು ವಾಪಸ್ಸು ನೀಡಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇಂದು ನೀವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಬಹುದು. ಇಂದು ನಿಮ್ಮ ತಾಯಿಯ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ.

** ಕುಂಭ ರಾಶಿ :
ಇಂದು ಭವಿಷ್ಯಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸುವ ಅವಕಾಶವನ್ನು ಪಡೆಯುವರು. ಇಂದು ಸರ್ಕಾರಿ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವುದರಿಂದ ಹೆಚ್ಚಿನ ಲಾಭವನ್ನು ಗಳಿಸುವಿರಿ. ಇಂದು ನಿಮ್ಮ ಭೌಧಿಕ ಮತ್ತು ತಾರ್ಕಿಕ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭ ಪಡೆಯುವಿರಿ. ಮನೆಯಲ್ಲಿ ಒತ್ತಡದ ವಾತಾವರಣ ಇರುವುದು. ಸಂಗಾತಿ ನಿಮ್ಮಿಂದ ಕೋಪಕ್ಕೆ ಒಳಗಾಗಬಹುದು.

** ಮೀನ ರಾಶಿ :
ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಪಡೆಯುವರು. ಇದರಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಕ್ಷಕರ ಸಂಪೂರ್ಣ ಬೆಂಬಲ ಲಭಿಸುವುದು. ಇದರಿಂದ ಭವಿಷ್ಯದ ಹೆಚ್ಚಿನ ಯಶಸ್ಸನ್ನು ಗಳಿಸುವಿರಿ. ಕೆಲಸದ ಸ್ಥಳದಲ್ಲಿ ಶತ್ರುಗಳಿಂದ ಎಚ್ಚರದಿಂದಿರಿ, ಇಲ್ಲದಿದ್ದರೆ ನಿಮ್ಮ ಕೆಲಸಗಳು ಅಪೂರ್ಣಗೊಳ್ಳಬಹುದು. ಮನೆಯ ಹಿರಿಯ ಸದಸ್ಯರೊಂದಿಗೆ ನಿಮಗೆ ಮನಸ್ತಾಪ ಉಂಟಾಗಲಿದೆ.

Categories
ಬೆಂಗಳೂರು

ಅಂತಾರಾಷ್ಟ್ರೀಯ ಶಾಸಕರ ಸಭೆಯಲ್ಲಿ ಖಾದರ್, ಮಂಜುನಾಥ್ ಭಂಡಾರಿ

ಅಂತಾರಾಷ್ಟ್ರೀಯ ಶಾಸಕರ ಸಭೆಯಲ್ಲಿ ಖಾದರ್, ಮಂಜುನಾಥ್ ಭಂಡಾರಿ
– ಅಮೇರಿಕಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಕರ್ನಾಟಕದ ಶಾಸಕರ ತಂಡ ಭಾಗಿ
– ಶಾಸಕರ ಯೋಜನೆ, ನೀತಿ, ಸವಾಲುಗಳ ಬಗ್ಗೆ ಚರ್ಚೆ

NAMMUR EXPRESS NEWS
ಮಂಗಳೂರು/ ಬೆಂಗಳೂರು: ಅಂತಾರಾಷ್ಟ್ರೀಯ ಶಾಸಕರ ಸಭೆಗೆ ಕರ್ನಾಟಕದ ರಾಯಭಾರಿಗಳಾಗಿ ಸ್ಪೀಕರ್ ಯು.ಟಿ. ಖಾದರ್ ಮತ್ತು ಎಮ್.ಎಲ್.ಸಿ. ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಅಮೆರಿಕಾದ ಕೆಂಟುಕಿ ರಾಜ್ಯದ ಲೂಯಿಸ್‌ವಿಲ್ಲೆಯಲ್ಲಿ ಆಗಸ್ಟ್ 5 ರಿಂದ 7ರವರೆಗೆ ಜರುಗಿದ ಅಂತರಾಷ್ಟ್ರೀಯ ಶಾಸಕರ ಸಮ್ಮೇಳದಲ್ಲಿ ಕರ್ನಾಟಕದ ಸರ್ಕಾರದ ಪರವಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕೆಂಟಕಿ ರಾಜ್ಯದ ಹೊನ್ಲೆ ಆಂಡಿ ಬೇಷೀರ್ ಮತ್ತು ಹೊನ್ಲೆ ಸೆನೆಟರ್ ವೇನ್ ಹಾರ್ಪರ್ ಅವರಿಗೆ ಮೈಸೂರು ಶಾಲು ನೀಡಿ ಗೌರವಿಸಿದರು. ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಮುಖ್ಯ ಸಚೇತಕರಾದ ಅಶೋಕ್ ಪಟ್ಟೆನ್ ಮತ್ತು ಸಲೀಂ ಅಹಮದ್ ಮತ್ತು ಕರ್ನಾಟಕದ ಒಟ್ಟು 10 ಶಾಸಕರು ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 5600 ಶಾಸಕರು ಈ ಶಾಸಕರ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ NCSL ಸಿಇಒ ಟಿಮ್ ಸ್ಟೋರಿ “ಅಂತರರಾಷ್ಟ್ರೀಯ NCSL ಶೃಂಗಸಭೆಯು ಪ್ರಪಂಚದಾದ್ಯಂತದ ನಿಮ್ಮ ಶಾಸಕರ ಸವಾಲುಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡುತ್ತದೆ, ಏನು ಕೆಲಸ ಮಾಡುತ್ತದೆ ಮತ್ತು ಏನನ್ನು ಬದಲಾಯಿಸಬೇಕು” ಹಾಗೂ ನೀವು ಸಂಪರ್ಕದಲ್ಲಿರುವಾಗ, ಮುಂದಿನ 50 ವರ್ಷಗಳ ಬಗ್ಗೆ ಯೋಚಿಸಲು ಈ ಶೃಂಗ ಅನುಕೂಲವಾಗಲಿದೆ. ಶಾಸಕಾಂಗ ಸಂಸ್ಥೆಯು ವಿಕಸನಗೊಳ್ಳಲು ಮತ್ತು ಇನ್ನಷ್ಟು ಬಲವಾಗಿ ಬೆಳೆಯಲು ಸಹಾಯ ಮಾಡಲು ಈ ಸಂಘಟನೆ ಅತ್ಯಗತ್ಯವಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕರ ನೀತಿ, ನಿಯಮ, ಯೋಜನೆ, ಜನಪರ ಕೆಲಸ, ಕೌಶಲ್ಯದ ಬಗ್ಗೆ ಈ ಸಮ್ಮೇಳನ ಬೆಳಕು ಚೆಲ್ಲಿತು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಾನವ ಸರಪಳಿ

ತೀರ್ಥಹಳ್ಳಿ: ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಾನವ ಸರಪಳಿ
– ಬಾಂಗ್ಲಾದಲ್ಲಿ ಹಿಂದೂಗಳ ವಿರುದ್ಧ ಜನಾಂಗೀಯ ದ್ವೇಷಕ್ಕೆ ಖಂಡನೆ
– ಆ.13ಕ್ಕೆ ಪ್ರತಿಭಟನೆ, ತಹಸೀಲ್ದಾರ್ ಮೂಲಕ ಆಗ್ರಹ ಪತ್ರ

NAMMUR EXPRESS NEWS
ತೀರ್ಥಹಳ್ಳಿ: ಹಿಂದೂ ಹಿತರಕ್ಷಣಾ ಸಮಿತಿ, ತೀರ್ಥಹಳ್ಳಿ ವತಿಯಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧ ಆರಂಭವಾದ ಪ್ರತಿಭಟನೆ,
ಕ್ರಮೇಣ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಜನಾಂಗೀಯ ದ್ವೇಷ,ಅನಾಚಾರ-ಅತ್ಯಾಚಾರ,ಸುಲಿಗೆ,ದರೋಡೆ, ಪೂಜಾ ಮಂದಿರ ಹಾನಿ, ಆಸ್ತಿ-ಮಾನ-ಜೀವ ಹರಣಕ್ಕೆ ತಿರುಗಿದೆ.
ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ಸಹಿತ ಇನ್ನಿತರ ಮುಗ್ದ ಜೀವಿಗಳಿಗೆ ಆಗುತ್ತಿರುವ ಜನಾಂಗೀಯ ದ್ವೇಷದಿಂದ ರಕ್ಷಣೆ ಒದಗಿಸಲು ಆಗ್ರಹಿಸಿ, ಈ ಕಾರಣಕ್ಕಾಗಿ ಮಾನವ ಸರಪಳಿ ಹೋರಾಟ 13.08.2024ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಮತ್ತು
ತಾಲೂಕು ದಂಡಾಧಿಕಾರಿಗಳ ಮೂಲಕ ಆಗ್ರಹ ಪತ್ರ ನೀಡಲು ಹಿಂದೂ ಹಿತರಕ್ಷಣಾ ಸಮಿತಿ ನಿರ್ಧಾರ ಮಾಡಿದೆ. ಹಿಂದೂ ಪ್ರಮುಖರು ಪ್ರೇರಣದಲ್ಲಿ ಮಂಗಳವಾರ ಬೆಳಿಗ್ಗೆ l 10 ಗಂಟೆಗೆ ಸೇರಲು ಕರೆ ನೀಡಲಾಗಿದೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು: ಹಾಡಹಗಲೇ ಕಳ್ಳರ ಕೈಚಳಕ

ಟಾಪ್ 3 ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು: ಹಾಡಹಗಲೇ ಕಳ್ಳರ ಕೈಚಳಕ
– ಚಿಕ್ಕಮಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರು
– ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಿಸಿದ್ದ ಪರಿಚಿತ ವ್ಯಕ್ತಿ ಸಾವು

NAMMUR EXPRESS NEWS
ಚಿಕ್ಕಮಗಳೂರು: ತರೀಕೆರೆ ಪಟ್ಟಣದ ಎಂ.ಜಿ ರಸ್ತೆಯಲ್ಲಿರುವ ಟಿ.ಬಿ ಕೃಷ್ಣ ಎಂಬುವರ ಮನೆಯಲ್ಲಿ ಹಾಡಹಗಲೇ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಮಾಲೀಕ ಟಿ.ಬಿ ಕೃಷ್ಣ ಹಾಗೂ ಮನೆಯ ಸದಸ್ಯರು ತಮ್ಮ ತೋಟಕ್ಕೆ ತೆರಳಿದ್ದಾಗ ಯಾರು ಇಲ್ಲದಿರುವುದನ್ನು ಗಮನಿಸಿದ ಖದೀಮರು ಕೈಚಳಕ ತೋರಿದ್ದಾರೆ. ಮನೆಯ ಬಾಗಿಲಿನ ಬೀಗ ಮುರಿದು ಮನೆಯಲ್ಲಿದ್ದ 16 ಗ್ರಾಂ ಚಿನ್ನ, 38 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ 21,000 ನಗದು ಕಳ್ಳತನ ಮಾಡಿದ್ದು, ಒಟ್ಟು 1,36,000 ರೂ ಮೌಲ್ಯದ ವಸ್ತುಗಳೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

– ಚಿಕ್ಕಮಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರು

ಚಿಕ್ಕಮಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡಿದವರಿಗೆ ಸಂಕಷ್ಟ ಎದುರಾಗಿದ್ದು, ಒತ್ತುವರಿ ತೆರವು ಕಾರ್ಯ ಬರದಿಂದ ಸಾಗಿದೆ. ಚಿಕ್ಕಮಗಳೂರು ತಾಲೂಕಿನ ವಿವಿಧೆಡೆ ತೆರವು ಕಾರ್ಯ ನಡೆಸುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಸಣ್ಣ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ದುಮ್ಮಗೆರೆಯಲ್ಲಿ ಒತ್ತುವರಿ ತೆರವು ಮಾಡುತ್ತಿದ್ದ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರಿಟ್ಟಿದ್ದಾರೆ. ದೊಡ್ಡವರು ಅಕ್ರಮ ಮಾಡಿದರೆ ಯಾರು ಕೇಳಲ್ಲ, ಮೊದಲು ಪ್ರಭಾವಿಗಳ ಒತ್ತುವರಿಯನ್ನ ತೆರವುಗೊಳಿಸಿ. ದಯವಿಟ್ಟು ನಾವು ಬೆಳೆದ ಕಾಫಿ ಗಿಡಗಳನ್ನು ಕಡಿಯಬೇಡಿ ಎಂದು ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ.

– ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಿಸಿದ್ದ ಪರಿಚಿತ ವ್ಯಕ್ತಿ ಸಾವು

ಚಿಕ್ಕಮಗಳೂರು: ನಗರದ ಬಸ್ ನಿಲ್ದಾಣದ ಎದುರಿನ ಪುಟ್ಬಾತ್ ನಲ್ಲಿ 2 ದಿನಗಳಿಂದ ನಿತ್ರಾಣವಾಗಿ ಮಲಗಿದ್ದ ಅಪರಿಚಿತ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯ ಹೂವಿನ ವ್ಯಾಪಾರಿಗಳು, ನಗರದ ಶ್ರೀ ಕೃಷ್ಣ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಮಾಹಿತಿಯನ್ನು ನೀಡಿದ್ದರು, ಸ್ಥಳಕ್ಕೆ ಆಗಮಿಸಿದ ಟ್ರಸ್ಟ್ ನ ಸ್ವಯಂಸೇವಕ ಪುನೀತ್ ಹಾಗೂ ತಂಡ ಅಪರಿಚಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ವ್ಯಕ್ತಿಗೆ ಕುಟುಂಬಸ್ಥರು,ಸಂಬಂಧಪಟ್ಟವರು ಗೊತ್ತಿದ್ದಲ್ಲಿ ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೃಷ್ಣ ಚಾರಿಟಬಲ್ ಟ್ರಸ್ಟ್ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.