Categories
ಅಡಿಕೆ-ದರ

ಇಂದಿನ ಅಡಿಕೆ ದರ ಎಷ್ಟಿದೆ?

ಇಂದಿನ ಅಡಿಕೆ ದರ ಎಷ್ಟಿದೆ?
– ರಾಶಿ ಎಷ್ಟು? ಬೆಟ್ಟೆ ಎಷ್ಟು?

NAMMUR EXPRESS NEWS

ಸರಕು
57100-88300-92910

ಬೆಟ್ಟೆ
51100-58000-60600

ರಾಶಿ
48069-57000-60099

ಗೊರಬಲು
22196-30000-31999

Categories
ಹಾಸನ

ಮಲೆನಾಡಲ್ಲಿ ನಿಲ್ಲದ ಕಾಡಾನೆ-ಮಾನವನ ಸಂಘರ್ಷ : ಮತ್ತೋರ್ವ ಕಾಡಾನೆ ದಾಳಿಗೆ ಬಲಿ

ಮಲೆನಾಡಲ್ಲಿ ನಿಲ್ಲದ ಕಾಡಾನೆ-ಮಾನವನ ಸಂಘರ್ಷ : ಮತ್ತೋರ್ವ ಕಾಡಾನೆ ದಾಳಿಗೆ ಬಲಿ

ಹಾಸನ : ಹಾಸನ ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ-ಮಾನವನ ನಡುವಿನ ಸಂಘರ್ಷದಿಂದ
ಮತ್ತೋರ್ವ ವ್ಯಕ್ತಿ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಬೈಕೆರೆ ಗ್ರಾಮದಲ್ಲಿ ನಡೆದಿದೆ.

ಷಣ್ಮುಖ (36) ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿ. ಹನ್ನೆರಡು ಎಕರೆ ಕಾಫಿ ತೋಟ ಹೊಂದಿದ್ದ ಷಣ್ಮುಖ ಇಂದು ಬೆಳಿಗ್ಗೆ ಕಾಫಿ ತೋಟಕ್ಕೆ ಎಂದಿನಂತೆ ತೆರಳಿದ್ದಾರೆ. ಮಧ್ಯಾಹ್ನವಾದರೂ ಮನೆಗೆ ಬಂದಿಲ್ಲ ಕಾರಣ ಕುಟುಂಬಸ್ಥರು ಷಣ್ಮುಖ ಅವರನ್ನುಹುಡುಕಿಕೊಂಡು ಕಾಫಿ ತೋಟಕ್ಕೆ ತೆರಳಿದ್ದ ವೇಳೆ ಕಾಫಿ ತೋಟದಲ್ಲಿ ಷಣ್ಮುಖ ಶವ ಪತ್ತೆಯಾಗಿದೆ.

ಷಣ್ಮುಖ ರನ್ನು ಕಾಡಾನೆ ಭೀಕರವಾಗಿ ತುಳಿದು ಸಾಯಿಸಿದೆ. ಕಳೆದ ಮೂರು ದಿನಗಳ ಹಿಂದೆ ಹೆಬ್ಬನಹಳ್ಳಿ ಗ್ರಾಮದಲ್ಲಿ ರಘು ಎಂಬುವವರ ಮೇಲೆ ದಾಳಿ ಮಾಡಿದ್ದ ಕಾಡಾನೆ ಇಂದು ಷಣ್ಮುಖನನ್ನು ಬರ್ಬರವಾಗಿ ಸಾಯಿಸಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ.. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Categories
ಕರಾವಳಿ

ಕರಾವಳಿಯ ರಾಷ್ಟ್ರಮಟ್ಟದ ಪ್ರೋ ಕಬಡ್ಡಿ ಪ್ಲೇಯರ್ ನಿಧನ!

ಕರಾವಳಿ 5 ಟಾಪ್ ನ್ಯೂಸ್!

ಕರಾವಳಿಯ ರಾಷ್ಟ್ರಮಟ್ಟದ ಪ್ರೋ ಕಬಡ್ಡಿ ಪ್ಲೇಯರ್ ನಿಧನ!

– ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ, ದೃಶ್ಯ ಸಿಸಿಟಿವಿಯಲ್ಲಿ ಸೆರೆ!
– ಉಡುಪಿ: ಕ್ರಿಕೆಟ್‌ ಬೆಟ್ಟಿಂಗ್: ಲಕ್ಷಾಂತರ ಮೌಲ್ಯದ ಸೊತ್ತು ಸಹಿತ ಮೂವರು ಆರೋಪಿಗಳು ವಶ!
– ಕುಂದಾಪುರ: ಸಂಗಮ ಬ್ರಿಡ್ಜ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
– ಉಡುಪಿ: ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಕಿರುಕುಳ, ಹಲ್ಲೆ!

NAMMUR EXPRESS NEWS
ಕಡಬ: ಕರಾವಳಿಯ ಹೆಸರಾಂತ ಆಟಗಾರ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರೋ ಕಬಡ್ಡಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಗಮನ ಸೆಳೆದ ಕಡಬದ ಯುವ ಆಟಗಾರ ಕೋಕಿಲಾನಂದ ನಿಧನ ಹೊಂದಿದ್ದಾರೆ.
ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇದ್ದ ಇವರು ಕೆಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ ಜೈಲಿಗೂ ಹೋಗಿ ಬಂದಿದ್ದರು. ಕಡಬ ನಿವಾಸಿಯಾಗಿದ್ದ ಇವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ತಂದೆಗೆ ಹೃದಯದ ಖಾಯಿಲೆಯಿದ್ದು ತಾಯಿ ಕೂಡಾ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಪತ್ನಿ ಪಂಚಾಯತಿನಲ್ಲಿ ಮೂರು ದಿನ ಕೆಲಸ ಮಾಡುತ್ತಿದ್ದು ದಂಪತಿಗೆ ಪುಟ್ಟ ಮಗು ಕೂಡಾ ಇದೆ. ಈ ಸಂದರ್ಭ ಕುಟುಂಬಕ್ಕೆ ಬೆನ್ನೆಲುಬಾಗ ಬೇಕಿದ್ದ ಕೋಕಿಲಾನಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರ ನಿಧನಕ್ಕೆ ಅನೇಕ ಕಬಡ್ಡಿ ಆಟಗಾರರು, ಬಂಧು-ಬಳಗ, ಸ್ನೇಹಿತರು ಸಂತಾಪವನ್ನು ಸೂಚಿಸಿದ್ದಾರೆ.

– ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ, ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಉಡುಪಿ: ಬೈಕ್ ಕದಿಯುವ ದೃಶ್ಯವೊಂದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ರೈಲ್ವೆ ನಿಲ್ದಾಣದ ಪರಿಸರದಲ್ಲಿ ಈ ಘಟನೆ ನಡೆದಿದೆ.
ಏ. 24ರಂದು ಬೆಳಗ್ಗೆ ಯೋಗೀಶ್ ಪೂಜಾರಿ ಎಂಬವರು ತಮ್ಮ ಬೈಕನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ವಾಪಸ್ ರೈಲ್ವೆ ನಿಲ್ದಾಣಕ್ಕೆ ಬಂದ ಸಂದರ್ಭ ಬೈಕ್ ಕಾಣೆಯಾಗಿದೆ. ಕೂಡಲೆ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಚೆಕ್ ಮಾಡಿದಾಗ, 11 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕನ್ನು ಕದಿಯುವ ದೃಶ್ಯ ದಾಖಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಕಳ್ಳರಿಗಾಗಿ ಪೊಲೀಸರು ಶೋಧ ಶುರು ಮಾಡಿದ್ದಾರೆ.

– ಉಡುಪಿ: ಕ್ರಿಕೆಟ್‌ ಬೆಟ್ಟಿಂಗ್: ಲಕ್ಷಾಂತರ ಮೌಲ್ಯದ ಸೊತ್ತು ಸಹಿತ ಮೂವರು ಆರೋಪಿಗಳು ವಶ!

ಉಡುಪಿ: ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದು, ಅವರಿಂದ ನಗದು, ಕಾರು ಮತ್ತು ಮೊಬೈಲ್ ಸೇರಿ ಒಟ್ಟು 12,16,700 ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಕೊರ್ಗಿಯ ಸಂದೀಪ್ (34), ಕುಂದಾಪುರ ಬೇಳೂರಿನ ಶ್ರೀರಾಜ್ (33) ಹಾಗೂ ಮೊಳಹಳ್ಳಿಯ ಮಧುಕರ್ (44) ಬಂಧಿತ ಆರೋಪಿಗಳು.
ಇವರು ಐಪಿಎಲ್ ಪಂದ್ಯಗಳ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ, ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡ ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಅವರಿಗೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತಿದ್ದರೆನ್ನಲಾಗಿದೆ
ಇವರ ಬಳಿ ಸಾರ್ವಜನಿಕರಿಂದ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಂಗ್ರಹಿಸಿದ್ದ 81,700ರೂ. ನಗದು, 1.35 ಲಕ್ಷ ರೂ. ಮೌಲ್ಯದ 4 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಮೇ 6ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

– ಕುಂದಾಪುರ: ಸಂಗಮ ಬ್ರಿಡ್ಜ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಕುಂದಾಪುರ: ಆನಗಳ್ಳಿ ಗ್ರಾಮದ ಸಂಗಮ ಬ್ರಿಡ್ಜ್ ಬಳಿ ಹೊಳೆಯಲ್ಲಿ  ಸುಮಾರು 65-70 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ  ಪತ್ತೆಯಾಗಿದೆ.
ಮೃತರ ವಾರಸುದಾರರು ಪತ್ತೆಯಾಗದ ಹಿನ್ನೆಲೆ ಮೃತ ಶರೀರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ.
ಈ ವ್ಯಕ್ತಿಯು ಯಾರಿಗಾದರೂ ಪರಿಚಯವಿದ್ದಲ್ಲಿ  ಕುಂದಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08254230338/ 9480805455/ 8277988959 ಗೆ ಮಾಹಿತಿ ನೀಡಬೇಕಾಗಿ ಕೋರಿದೆ.

– ಉಡುಪಿ: ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಕಿರುಕುಳ, ಹಲ್ಲೆ!

ಉಡುಪಿ: ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ಉಡುಪಿಯ ಕಡೆಕಾರಿನಲ್ಲಿ ನಡೆದಿದೆ. ಇವರ ಪತಿ ಪ್ರಜ್ವಲ್, ಭವಾನಿ, ಸೌಮ್ಯ, ಲಜಿತ್ ಬಂಧಿತ ಆರೋಪಿಗಳು.
ರಕ್ಷಾ ಮತ್ತು ಪ್ರಜ್ವಲ್ ದಂಪತಿಯ ವಿವಾಹದ ಸಂಪೂರ್ಣ ಖರ್ಚನ್ನು ರಕ್ಷಾ ಅವರ ಮನೆಯವರೇ ಭರಿಸಿದ್ದರು. ಆದರೂ ಪ್ರಜ್ವಲ್ ಅವರ ಮನೆಯವರು ವಿನಾ ಕಾರಣ ಇವರಿಗೆ ನಿತ್ಯ ಹಿಂಸೆ ನೀಡುತ್ತಿದ್ದರು.
ಮನೆಯಲ್ಲಿರಬೇಕಾದರೆ ಮತ್ತೆ ಕೆಲವು ರೂ. ಹಣ ತರುವಂತೆ ಪೀಡಿಸುತ್ತಿದ್ದರು. ಊಟ, ಉಪಾಹಾರ ಮೊಬೈಲ್ ಕೂಡ ಬಳಕೆ ಮಾಡಲು ಕೊಡುತ್ತಿರಲಿಲ್ಲ. ಇವರ ದೌರ್ಜನ್ಯ ಸಹಿಸಲಾಗದೆ ರಕ್ಷಾ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Categories
ಡೆಲ್ಲಿ

ಸುಪ್ರಸಿದ್ಧ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಇನ್ನಿಲ್ಲ!

ಸುಪ್ರಸಿದ್ಧ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಇನ್ನಿಲ್ಲ!

– ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನಿಧನ!
– ಬಡವಾದ ವಿಜ್ಞಾನ ಲೋಕ, ಬಾಹ್ಯಕೋಶಕ್ಕೆ ಇವರ ಕೊಡುಗೆ ಅಪಾರ

NAMMUR EXPRESS NEWS
ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ
(ಎನ್‌ಇಪಿ) ಕರಡು ಸಮಿತಿಯ ಅಧ್ಯಕ್ಷ ಮತ್ತು ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ.ಕೆ.ಕಸ್ತೂರಿ ರಂಗನ್ ಏ. 25ರಂದು (ಇಂದು) ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಬೆಳಿಗ್ಗೆ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಕೆ. ಕಸ್ತೂರಿರಂಗನ್ ಅವರು ನಿಧನರಾದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಇಪಿಯಲ್ಲಿನ ಶಿಕ್ಷಣ ಸುಧಾರಣೆಗಳ ಹಿಂದಿನ ವ್ಯಕ್ತಿ ಎಂದು ಕರೆಯಲ್ಪಡುವ ಕಸ್ತೂರಿರಂಗನ್ ಅವರು ರಾಜ್ಯಸಭೆಯ ಸದಸ್ಯರಾಗಿ, ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
ಅಲ್ಲದೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Categories
ಶಿವಮೊಗ್ಗ

ಪ್ರವಾಸಿಗರಿಗೆ ಗುಡ್ ನ್ಯೂಸ್..!!

ಪ್ರವಾಸಿಗರಿಗೆ ಗುಡ್ ನ್ಯೂಸ್..!!
– ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ

NAMMUR EXPRESS NEWS
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರವೇಶವನ್ನು ಮೇ 1 ರಿಂದ ಪುನರಾರಂಭಿಸಲಾಗುತ್ತಿದೆ.

ಜಲಪಾತದ ಪ್ರವೇಶ ದ್ವಾರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದ ಕಾರಣ ಏ.30ರವರೆಗೆ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಈಗ ಮತ್ತೆ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Categories
ಕಾರ್ಕಳ

ಕಾರ್ಕಳ ಲಕ್ಷ್ಮೀಪುರ ದೇವಸ್ಥಾನದಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವ!

ಕಾರ್ಕಳ ಲಕ್ಷ್ಮೀಪುರ ದೇವಸ್ಥಾನದಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವ!

– ಮೇ. 5ರಿಂದ 12ರವರೆಗೆ ಆಯೋಜನೆ
– ರಂಗೇರಲಿದೆ ಧಾರ್ಮಿಕ ವಿಧಿ ವಿಧಾನಗಳು!
– ಜನರ ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ ಝಲಕ್!

NAMMUR EXPRESS NEWS
ಕಾರ್ಕಳ: ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ
ಲಕ್ಷ್ಮೀಪುರದಲ್ಲಿ ಮೇ. 5ರಿಂದ 12ರವರೆಗೆ ಅದ್ದೂರಿ ಬ್ರಹ್ಮಕಲಶೋತ್ಸವ ನಡೆಯಲಿದೆ.
ಗೋವಾದ ಗುರೂಜಿ ಶ್ರೀ ಕಾಳಿದಾಸ ನಾವೈಕ‌ರ್ರವರ ನೇತೃತ್ವದಲ್ಲಿ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಹಸ್ರ ಚಂಡಿಕಾಯಾಗ ಹಾಗೂ ವರ್ಧಂತ್ಯುತ್ಸವ ಮೇ 05ರ ಸೋಮವಾರದಿಂದ ಮೇ 12ರ ಅತ್ಯಂತ ವೈಭವೋಪೇತವಾಗಿ ನೆರವೇರಲಿದೆ.

ಧಾರ್ಮಿಕ ವಿಧಿ ವಿಧಾನಗಳ ವಿವರ ಹೀಗಿದೆ!

ಮೇ. 04ರಂದು ಆದಿತ್ಯವಾರ ಹಿರ್ಗಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಮೇ. 05ರ ಸೋಮವಾರ ಪ್ರತಿಷ್ಠಾ ಪೂರ್ವಾಂಗ ಸರ್ವ ಪ್ರಾಯಶ್ಚಿತ್ತ ವಿಧಿ ಮತ್ತು ಕೂಷ್ಮಾಂಡ ಹೋಮ ಮಧ್ಯಾಹ್ನ ಬ್ರಾಹ್ಮಣ ಸಂತರ್ಪಣೆ ಕಾಂತಿಪಾಠ, ರಾತ್ರಿ ಭಜನೆ, ಮೇ. 06 ಮಂಗಳವಾರದಂದು ಮಹಾಗಣಪತಿ ಪೂಜೆ, ನಾಂದಿ ಸಹಿತ ಪುಣ್ಯಾಹ ವಾಚನ ಹಾಗೂ ಸಹಸ್ರ ಚಂಡಿಕ ಪಾರಾಯಣ, ಮೇ. 07 ಬುಧವಾರ ಪಂಚಕುಂಡದ ಅಗ್ನಿಸ್ಥಾಪನೆ, ಸಗ್ರಹ ವಾಸ್ತು ಹವನ, ಸಹಸ್ರಚಂಡಿ ಮಂಟಪದಲ್ಲಿ ಸಪ್ತಶತಿ ಪಾರಾಯಣ, ಸಪ್ತಶತಿ ಹವನ ಆರಂಭ, ಲಘು ಪೂರ್ಣಾಹುತಿ, ಮಹಾಪೂಜೆ, ಅನ್ನ ಸಂತರ್ಪಣೆ.
ಮೇ. 08ರಂದು ಗುರುವಾರ ಸಂಹಿತಾ ಪಾರಾಯಣ,  ಸ್ಥಳ ಪ್ರಕಾರ ಶುದ್ಧಿ, ಅವಾಹಿತ ದೇವತಾ ಪೂಜೆ. ಮೇ 09 ರ ಶುಕ್ರವಾರ, ದೇವಿಯ ಪ್ರಾಣ ಪ್ರತಿಷ್ಠೆ, ನಾಗದೇವರ ಪ್ರಾಣ ಪ್ರತಿಷ್ಠೆ, ಕಲ್ಕುಡ  ದೈವಸ್ಥಾನ ಪುನರ್ ಪ್ರತಿಷ್ಠೆ. ಮೇ 10 ರ ಶನಿವಾರ ಸುಹಾಸಿನಿ ಮತ್ತು ಕುಮಾರಿಕಾ ಪೂಜೆ.
ಮೇ 11ರ ಅದಿತ್ಯವಾರ, ಸಹಸ್ರ ಕುಂಭಾಭಿಷೇಕ, ಸಹಸ್ರ ಚಂಡಿಕಯಾಗದ ಪೂರ್ಣಾಹುತಿ
ಮೇ 12 ರ ಸೋಮವಾರ, ನವಕಲಶಾಭಿಷೇಕ, ಸಂಪ್ರೋಕ್ಷಣೆ ಮಹಾಪೂಜೆ ಅದ್ದೂರಿಯಾಗಿ ಆಯೋಜಿಸಲಾಗಿದೆ.

– ಜನರ ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ ಝಲಕ್!

ಮೇ. 04ರಂದು ಆದಿತ್ಯವಾರ ಸಾನ್ವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮತ್ತು ಶಿವಾಂಶ ನಾಯಕ್ ಇವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ.
ಮೇ. 05ರಂದು ಕರ್ನಾಟಕ ಶಾಸ್ತ್ರೀಯ ವಯೋಲಿನ್ ದ್ವಂದ್ವ ವಾದನ, ರಾತ್ರಿ 7: 30ರಿಂದ ಧಾರ್ಮಿಕ ಪ್ರವಚನ.
ಮೇ. 06 ಮಂಗಳವಾರ ಬೆಳಿಗ್ಗೆ ಭಜನೆ, ಮಧ್ಯಾಹ್ನ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಬಹುಮಾನ ವಿತರಣೆ, ಸಂಜೆ ಶ್ರೀರಾಮ ನಿರ್ಯಾಣ.
ಮೇ. 07ರಂದು ಭಗವದ್ಗೀತಾ ಪಠಣ, ಮಧ್ಯಾಹ್ನ ಶ್ರೀ ರಾಮಾಂಜನೇಯ ಯಕ್ಷಗಾನ ಬಯಲಾಟ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು.
ಮೇ. 08 ಮಾತೃ ಸಂಗಮ ಕಾರ್ಯಕ್ರಮ ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ಶ್ರೀ ಆದಿಶಕ್ತಿ ತೆಂಕುತಿಟ್ಟು ಯಕ್ಷಗಾನ ಮಂಡಳಿ, ಲಕ್ಷ್ಮೀಪುರ ಇದರ ದಶಮಾನೋತ್ಸವ ಕಾರ್ಯಕ್ರಮ ಮತ್ತು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಮೇ. 09ರಂದು ಆರ್ಟ್ ಆಫ್ ಲಿವಿಂಗ್ ಪರಮಪೂಜ್ಯ ಸ್ವಾಮಿ ಸೂರ್ಯಪಾದಜೀ (ಭಾಯಣ್ಣ) ಇವರಿಂದ ದಿವ್ಯ ಸತ್ಸಂಗ ಮಧ್ಯಾಹ್ನ ವಿದ್ಯುನ್ಮತೀ ಕಲ್ಯಾಣ ಯಕ್ಷಗಾನ ಬಯಲಾಟ, ಸಂಜೆ ಜಾನಪದ ವೈಭವ ಜಾನಪದ ಕಲೆಗಳ ಅನಾವರಣ.
ಮೇ.10 ಬೆಳಿಗ್ಗೆ ಯುವ ಸಂಗಮ ಕಾರ್ಯಕ್ರಮ, ಮಧ್ಯಾಹ್ನ ಅರ್ಚಕ ವೃಂದದವರಿಂದ ಭಜನೆ, ದೌಪದಿ ಪ್ರತಾಪ (ಬಡಗುತಿಟ್ಟು) ಯಕ್ಷಗಾನ ಬಯಲಾಟ, ಸಂಜೆ ರುಕ್ಮಿಣಿ ಕಲ್ಯಾಣ ಹರಿಕಥೆ ಪ್ರಾಯೋಜಕರು ಶ್ರೀ ರಾಮಕೃಷ್ಣ ನಾಯಕ್ ಮತ್ತು ಕುಟುಂಬಸ್ಥರು ಪೀಂದ್ರಬೆಟ್ಟು ಹಿರ್ಗಾನ.
ರಾತ್ರಿ ಎಕ ಎವಾ-ಹಸನ್ ದಾವ ಕೊಂಕಣಿ ಹಾಸ್ಯ ಪ್ರದರ್ಶನ ಜನರ ಕಣ್ಮನ ಸೆಳೆಯಲಿದೆ.
ಮೇ. 11ರಂದು ರವಿವಾರ ಬೆಳ್ಳಿಗ್ಗೆ ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ಲಕ್ಷ್ಮೀಪುರ ಕಾರ್ಕಳ, ಶ್ರೀ ಹರೀಶ ನಾಯಕ್ ಮತ್ತು ಬಳಗ ಕಬ್ಬಾಡಿ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಕಾಡುಹೊಳೆ, ಶ್ರೀ ರಾಮ ಮಂದಿರ ಕೊಡಂಗೆ ಇವರಿಂದ ಭಜನೆ.
ಮಧ್ಯಾಹ್ನ ಭಜನಾ ಕಾರ್ಯಕ್ರಮ,
ಮಧ್ಯಾಹ್ನ ನಾಗಸ್ವರ ವಾದನ ಮತ್ತು ಚಂದ್ರಾವಳಿ ವಿಲಾಸ ಯಕ್ಷಗಾನ ಬಯಲಾಟ.
ರಾತ್ರಿ ಸನಾತನ ನಾಟ್ಯಾಲಯ ಮಂಗಳೂರು ಇವರಿಗೆ ರಾಷ್ಟ್ರದೇವೋಭವ ಪ್ರಯೋಜಕರು ಸಂತೋಷ್ ಭಾಗವ್ ಮುನಿಯಾಲು ಮತ್ತು ಪ್ರಶಾಂತ್ ಪ್ರಭು ಬಜಗೋಳಿ.
ಈ ಎಲ್ಲಾ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಗವದ್ಭಕ್ತರಾದ ತಾವೆಲ್ಲರೂ ಆಗಮಿಸಿ ತನು-ಮನ-ಧನಾದಿಗಳಿಂದ ಸಹಕರಿಸಿ ಶ್ರೀ ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಿ, ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆದರ ಪೂರ್ವಕವಾಗಿ ಆಮಂತ್ರಿಸುತ್ತಿರುವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿ, ಲಕ್ಷ್ಮೀಪುರ, ಹಾಗೂ ಆಡಳಿತ ಮೊಕ್ತೇಸರರು ಮತ್ತು ಸಹ ಮೊಕ್ತೇಸರರು ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ.

Categories
ತೀರ್ಥಹಳ್ಳಿ

ವಾಗ್ದೇವಿ ಪಿಯು ಕಾಲೇಜು ರಾಜ್ಯದಲ್ಲಿ ಮತ್ತೊಂದು ಸಾಧನೆ!

ವಾಗ್ದೇವಿ ಪಿಯು ಕಾಲೇಜು ರಾಜ್ಯದಲ್ಲಿ ಮತ್ತೊಂದು ಸಾಧನೆ!
– ಮರು ಮೌಲ್ಯಮಾಪನದಲ್ಲಿ ದೀಕ್ಷಾಗೆ 600ಕ್ಕೆ 600 ಅಂಕ
– ರಾಜ್ಯದಲ್ಲಿಯೇ ಅಪ್ರತಿಮ ಸಾಧನೆ ಮಾಡಿದ ತೀರ್ಥಹಳ್ಳಿ ಹುಡುಗಿ
– ವಾಗ್ದೇವಿ ಕಾಲೇಜು ರಾಜ್ಯದಲ್ಲಿಯೇ ಇತಿಹಾಸ ಸೃಷ್ಟಿ
– ಇನ್ನು ಎರಡು ರ್‍ಯಾಂಕ್ ಮೂಲಕ ಮಲೆನಾಡಲ್ಲಿ ದಾಖಲೆ

NAMMUR EXPRESS NEWS
ತೀರ್ಥಹಳ್ಳಿ: ವಾಗ್ದೇವಿ ಪಿಯು ಕಾಲೇಜು ಇದೀಗ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದುಕೊಂಡಿದ್ದು, ಈಗ ಮತ್ತೊಂದು ಸಾಧನೆ ಮಾಡಿದೆ. ವಾಗ್ದೇವಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ದೀಕ್ಷಾ 599 ಅಂಕಗಳನ್ನು ಪಡೆದಿದ್ದಳು. ಇದೀಗ ಮರು ಮೌಲ್ಯಮಾಪನದಲ್ಲಿ 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ಅಪ್ರತಿಮ ಸಾಧನೆಯನ್ನು ದೀಕ್ಷಾ ಮಾಡಿದ್ದಾಳೆ. ಈ ಮೂಲಕ ವಾಗ್ದೇವಿ ಕಾಲೇಜು ರಾಜ್ಯದಲ್ಲಿಯೇ ಇತಿಹಾಸ ಸೃಷ್ಟಿ ಮಾಡಿದೆ.

ಮರು ಮೌಲ್ಯ ಮಾಪನದಲ್ಲಿ ಅಂಕ ಗಳಿಕೆ

ರಾಸಾಯನ ಶಾಸ್ತ್ರದಲ್ಲಿ 1 ಅಂಕ ಕಡಿಮೆ ಇದ್ದು ಮರು ಮೌಲ್ಯಮಾಪನಕ್ಕೆ ಹಾಕಲಾಗಿತ್ತು. ಈ ಫಲಿತಾಂಶದಲ್ಲಿ ಮತ್ತೊಂದು ಅಂಕ ಸೇರ್ಪಡೆಯಾಗುವ ಮೂಲಕ ರಾಜ್ಯದಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದಲ್ಲದೆ, 600ಕ್ಕೆ 600 ಅಂಕವನ್ನು ಪಡೆಯುವ ಮೂಲಕ ದೀಕ್ಷಾ ಮತ್ತೊಂದು ಸಾಧನೆ ಮಾಡಿದ್ದಾಳೆ. ಅಲ್ಲದೇ ರಾಜ್ಯದಲ್ಲಿ ದಾಖಲೆ ಮಾಡಿದ್ದಾಳೆ.

ಪಾವನಿ ಮಲ್ಯ, ದೀಪಿಕಾ ರಾವ್ 10ನೇ ರ್‍ಯಾಂಕ್

ವಾಗ್ದೇವಿ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಪಾವನಿ ಮಲ್ಯ 10ನೇ ರ್‍ಯಾಂಕ್ ಅನ್ನು ಪಡೆದು ಮತ್ತೊಂದು ಸಾಧನೆ ಮಾಡಿದ್ದಾಳೆ. ಈಕೆ 586 ಅಂಕ ಪಡೆದಿದ್ದು, ಸಂಸ್ಕೃತ 1 ಅಂಕ ಮತ್ತು ಬಿಸಿನೆಸ್ ಸ್ಟಡಿಯಲ್ಲಿ 2 ಅಂಕ ಸೇರ್ಪಡೆಯಾಗುವ ಮೂಲಕ 589 ಅಂಕಗಳನ್ನು ಗಳಿಸಿ 10ನೇ ರ್‍ಯಾಂಕ್ ಪಡೆದಿದ್ದಾಳೆ.
ದೀಪಿಕಾ ರಾವ್ ಇಂಗ್ಲಿಷ್ ನಲ್ಲಿ ಒಂದು ಅಂಕ ಹೆಚ್ಚು ಪಡೆಯುವ ಮೂಲಕ 589 ಅಂಕಗಳ ಮೂಲಕ 10ನೇ ರ್‍ಯಾಂಕ್ ಪಡೆದಿದ್ದಾಳೆ. ಈ ಮೂಲಕ ಮತ್ತೆರಡು ರ್‍ಯಾಂಕ್ ಗಳು ವಾಗ್ದೇವಿ ಕಾಲೇಜಿಗೆ ಲಭಿಸಿದೆ. ಈ

ರಾಜ್ಯದಲ್ಲೇ ಅಮೋಘ ಸಾಧನೆ

ವಾಗ್ದೇವಿ ಕಾಲೇಜಿನ ವಿಜ್ಞಾನ ವಿಭಾಗದ ಸಿಂಚನ ಹೆಚ್ 9ನೇ ರ್‍ಯಾಂಕ್, ನೇತ್ರ ಆರ್ ವಾಣಿಜ್ಯ ವಿಭಾಗದಲ್ಲಿ ಎಂಟನೇ ರ್‍ಯಾಂಕ್, ಶ್ರೀತ ಪೈ ವಾಣಿಜ್ಯ ವಿಭಾಗದಲ್ಲಿ 9ನೇ ರ್‍ಯಾಂಕ್ ಪಡೆದುಕೊಂಡಿದ್ದರು. ಇದೀಗ ಒಂದು ಅಂಕಗಳ ಗಳಿಕೆಯಲ್ಲೂ ಕೂಡ ವಾಗ್ದೇವಿ ಕಾಲೇಜು ಮುಂದಿದೆ.
ಸಾಧಕ ವಿದ್ಯಾರ್ಥಿಗಳಿಗೆ ವಾಗ್ದೇವಿ ಪಿಯು ಕಾಲೇಜ್ ಆಡಳಿತ ಮಂಡಳಿ ಹಾಗೂ ಸತ್ಪಥ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಪೋಷಕರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Categories
ಕರಾವಳಿ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕರಾವಳಿಯ ಕೊಡುಗೆ!!

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕರಾವಳಿಯ ಕೊಡುಗೆ!!

* ಕನ್ನಡದ ಜತೆ ಕೊಂಕಣಿ, ಬ್ಯಾರಿ ಸಾಹಿತ್ಯಕ್ಕೂ ಕೊಡುಗೆ
* ಪತ್ರಿಕೋದ್ಯಮದ ಮೊದಲ ಮೈಲುಗಲ್ಲು!
– ನಾಗರಿಕರಾಗಿ ಬದುಕುವುದ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಕರಾವಳಿ ಮಂದಿ!

NAMMUR EXPRESS NEWS
ಕರ್ನಾಟಕದ ಕರಾವಳಿ ಉಡುಪಿ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಇದು ತನ್ನ ಪ್ರಾಕೃತಿಕ ಸೌಂದರ್ಯ, ದೇವಾಲಯಗಳು ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಜಗತ್ಪ್ರಸಿದ್ಧವಾಗಿದೆ.
ಕನ್ನಡ ಸಾಹಿತ್ಯಕ್ಕೆ ಕರಾವಳಿ ಕರ್ನಾಟಕದ ಕೊಡುಗೆ ಅಪಾರವಾದದ್ದು. ಸಾಹಿತ್ಯದ ಎಲ್ಲಾ ಪ್ರಕಾರಗಳಿಗೆ ಅನನ್ಯ ಕೊಡುಗೆ ನೀಡಿದ ಹಲವರಿಗೆ ಜನ್ಮದಾತೆ ಕರಾವಳಿ.
ಇಲ್ಲಿನ ಜನರ ಆಡು ಭಾಷೆ ತುಳು. ಆದ್ದರಿಂದಲೇ ಇದನ್ನು ತುಳುನಾಡು ಎಂದು ಕರೆಯುತ್ತಾರೆ. ಕನ್ನಡ ಇಲ್ಲಿನವರಿಗೆ ಕಲಿತು ಬಂದ ಭಾಷೆಯಾಗಿದೆ. ಇದರೊಂದಿಗೆ ಕೊಂಕಣಿ, ಬ್ಯಾರಿ ಭಾಷೆಗಳನ್ನಾಡುವವರು ಇಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಕರಾವಳಿ ಜಿಲ್ಲೆಯ ಅಧಿಕ ಸಂಖ್ಯೆಯ ಜನರ ಆಡುಭಾಷೆ ತುಳು, ಕೊಂಕಣಿ ಇತ್ಯಾದಿಯಾಗಿದ್ದರೂ ಕನ್ನಡ ನಾಡಿಗೆ ಜಿಲ್ಲೆಯ ಕವಿಗಳು, ಸಾಹಿತಿಗಳು, ಕಲಾವಿದರು ಸಲ್ಲಿಸಿದ ಕೊಡುಗೆ ಅಪಾರವಾದುದು.

– ಪತ್ರಿಕೋದ್ಯಮದ ಮೊದಲ ಮೈಲುಗಲ್ಲು!

ಕರಾವಳಿ ಜಿಲ್ಲೆಯಲ್ಲಿ ಕನ್ನಡ ಶಾಸನಗಳು ಸಾಕಷ್ಟು ಹಿಂದಿನಿಂದಲೇ ದೊರೆಯುತ್ತಾದರೂ, ನಿಶ್ಚಿತ ದಾಖಲೆಯೊಂದಿಗೆ ಕನ್ನಡ ಸಾಹಿತ್ಯ ದೊರೆಯುವುದು, 1222ರ ಕಾಲಘಟ್ಟದಲ್ಲಿ ರಚಿಸಿದ ಸೋಮರಾಜನ ಉದ್ಭಟ ಕಾವ್ಯದಿಂದ ಎನ್ನುತ್ತಾರೆ. ಆದರೆ ಈ ಬಗ್ಗೆ ಇನ್ನು ಖಚಿತತೆ ಇಲ್ಲ. ಇನ್ನು ಕನ್ನಡದ ಪ್ರಥಮ ಪತ್ರಿಕೆಯಾದ “ಮಂಗಳೂರು ಸಮಾಚಾರ” ಹುಟ್ಟಿಕೊಂಡದ್ದು ಇಲ್ಲೇ ಎನ್ನುವುದು ಹೆಮ್ಮೆಯ ಸಂಗತಿ.

ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದವರಲ್ಲಿ ಕರಾವಳಿಗರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೆ.ಶಿವರಾಮ ಕಾರಂತ, ಪಂಜೆ ಮಂಗೇಶರಾಯರು, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣ ಭಟ್ಟ ಹೆಸರು ನಮಗೆ ಥಟ್ಟನೆ ನೆನಪಾದರೂ, ಕರಾವಳಿ ವಲಯದ ಹೆಚ್ಚಿನ ಕವಿ, ವಿದ್ವಾಂಸರು, ಸಾಹಿತಿಗಳು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಟ್ಟವರು.
ನಡೆದಾಡುವ ಜ್ಞಾನಕೋಶ ಕಾರಂತರು, ಪಂಜೆ, ಗೋವಿಂದ ಪೈ, ಅಡಿಗ ಹೀಗೆ ಕೆಲವರನ್ನು ಬಿಟ್ಟರೆ ಉಳಿದವರ ಹೆಸರು ಸಮಗ್ರ ಕರ್ನಾಟಕ ಸ್ತರದಲ್ಲಿ ಕೇಳಿ ಬಂದದ್ದು ವಿರಳ ಎನ್ನುವುದು ವಿಪರ್ಯಾಸ.

ನಾಗರಿಕರಾಗಿ ಬದುಕುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಕರಾವಳಿ ಮಂದಿ!

ನಾಡಿನಲ್ಲೇ ಪ್ರಜ್ಞಾವಂತರು
ಕರಾವಳಿ ಜನರು ಸ್ವಚ್ಛತೆ ಇರಬಹುದು. ಬದುಕಿನ ಶಿಸ್ತು ಇರಬಹುದು ಅಥವಾ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವ ವಿಚಾರಗಳಲ್ಲಿ ಶೇ.99ರಷ್ಟು ಈ ಭಾಗದ ಜನರು ಪ್ರಜ್ಞಾವಂತ ನಾಗರಿಕರಾಗಿ ಬದುಕುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಾಮಾನ್ಯ ವಿಚಾರಗಳಲ್ಲಿಯೂ ಹೆಚ್ಚು ಪ್ರಜ್ಞಾವಂತರಾಗಿ ವರ್ತಿಸುತ್ತಾರೆ. ದಕ್ಷಿಣ ಕನ್ನಡ ಇರಬಹುದು ಅಥವಾ ಉಡುಪಿ ಜಿಲ್ಲೆ ಇರಬಹುದು ಇದು ಈ ಭಾಗದ ಜನರ ಬದುಕಿನ ವಿಶೇಷತೆ.

ಹೋಟೆಲ್-ವಸತಿ ವ್ಯವಸ್ಥೆಗೆ ಕರಾವಳಿಯಲ್ಲಿ ಕೊರತೆಯಿಲ್ಲ!

ಹೋಟೆಲ್ ಉದ್ಯಮದಿಂದ ಸೇವೆ ಕಡೆಗೆ
ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇಂದ್ರವಾದ ಮಂಗಳೂರು ಇರಲಿ ಅಥವಾ ಉಡುಪಿ ಜಿಲ್ಲೆಯ ಮಣಿಪಾಲ-ಉಡುಪಿ ಇರಲಿ, ಜನರಿಗೆ ಅದರಲ್ಲಿಯೂ ಪ್ರವಾಸಿಗರಿಗೆ ಅತ್ಯುತ್ತಮ ಶುಚಿ- ರುಚಿಯಾದ ಆಹಾರವನ್ನು ಉಣಬಡಿಸುವಲ್ಲಿ  ಆಯ್ಕೆಗೆ ತಕ್ಕಷ್ಟು ಹೋಟೆಲ್ ಗಳು ಇವೆ. ಅದು ಸಸ್ಯಾಹಾರವಿರಲಿ, ಮಾಂಸಾಹಾರ ಇರಲಿ, ಈ ಭಾಗದ ತಿಂಡಿ-ತಿನಸು, ವೆಜ್-ನಾನ್-ವೆಜ್ ಊಟಕ್ಕೆ ಹೆಸರುವಾಸಿಯಾದ ಹತ್ತಾರು ಹೋಟೆಲ್ ಗಳಿವೆ. ಹೀಗಾಗಿ, ಮಂಗಳೂರು ಭಾಗಕ್ಕೆ ಬರುವ ಪ್ರವಾಸಿಗರಿಗೆ ಇಲ್ಲಿ ಉತ್ತಮ ಆತಿಥ್ಯ ಪಡೆಯುವುದಕ್ಕೆ ಹೋಟೆಲ್-ವಸತಿ ವ್ಯವಸ್ಥೆಗೆ ಎಂದಿಗೂ ಕೊರತೆ ಇಲ್ಲ.

ಉಡುಪಿ ಹೋಟೆಲ್ ಎಲ್ಲೆಡೆ ಫೇಮಸ್!

ಈ ನಡುವೆ, ಉಡುಪಿ ಹೆಸರು ಹೋಟೆಲ್‌ಗಳಿಂದಾಗಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕರ್ನಾಟಕ ರಾಜ್ಯ ಇರಲಿ ಅಥವಾ ಬೇರೆ ರಾಜ್ಯ ಇರಲಿ ನೀವು ಎಲ್ಲೇ ಹೋದರೂ ಅಲ್ಲೊಂದು ಉಡುಪಿ ಹೆಸರಿನ ಹೋಟೆಲ್ ಕಾಣಿಸುತ್ತದೆ. ಅದಕ್ಕೆ ಕಾರಣ ದೇಶದುದ್ದಕ್ಕೂ ಉಡುಪಿ ಹೋಟೆಲ್‌ಗಳ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ.

ಕೊಲ್ಲಿ ರಾಷ್ಟ್ರದ ನಂಟು, ಉದ್ಯೋಗ, ಕೈ ತುಂಬಾ ಹಣ!

ಮಂಗಳೂರು ನಗರವು ವಾಣಿಜ್ಯ ನಗರಿಯಾಗಿ ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಿರುವುದಕ್ಕೆ ಪ್ರಮುಖ ಕಾರಣ ಕೊಲ್ಲಿ ರಾಷ್ಟ್ರದೊಂದಿಗಿನ ಔದ್ಯೋಗಿಕ ನಂಟು.
ಹೌದು, ಕರಾವಳಿ ಭಾಗದ ಹೆಚ್ಚಿನ ಮಂದಿಯು ಉದ್ಯೋಗಕ್ಕೆ ನೆಚ್ಚಿಕೊಂಡಿರುವ ದೇಶ ಅಂದರೆ ಅದು ದುಬೈ, ಕುವೈಟ್, ಕತಾರ್‌ನಂಥ ಕೊಲ್ಲಿ ರಾಷ್ಟ್ರಗಳು. ಕಡಿಮೆ ವಿದ್ಯಾರ್ಹತೆ ಹೊಂದಿದವರಿಗೂ ಅಲ್ಲಿ ಕೈತುಂಬ ಸಂಬಳ ಪಡೆಯುವ ಉದ್ಯೋಗಾವಕಾಶ ಲಭ್ಯವಿದೆ. ಈ ಕಾರಣದಿಂದ ಕಡಿಮೆ ಕಲಿತವರು ಕೂಡ ಗಲ್ಫ್ ದೇಶಗಳಿಗೆ ಹೋಗಿ ಉತ್ತಮ ದುಡಿಮೆ ಮಾಡಿ ಹಣ ಸಂಪಾದನೆಯೊಂದಿಗೆ ಊರಿಗೆ ವಾಪಾಸ್ಸಾಗಿ ಆರ್ಥಿಕವಾಗಿ ಸದೃಢ ಹಾಗೂ ಸ್ವಾವಲಂಬಿ ಜೀವನವನ್ನು ಸಾಗಿಸುತ್ತಿರುತ್ತಾರೆ. ಈ ಗಲ್ಫ್ ಜತೆಗಿನ ಔದ್ಯೋಗಿಕ ನಂಟು ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಕೂಡ ಗರಿಗೆದರುವುದಕ್ಕೆ ಪ್ರಮುಖ ಕಾರಣವಾಗಿದೆ.

Categories
ಬ್ರೇಕಿಂಗ್ ನ್ಯೂಸ್

ಬಂಡಿಪೋರಾದಲ್ಲಿ ಲಷ್ಕರ್ ಕಮಾಂಡರ್ ಮಟಾಷ್ !

ಬಂಡಿಪೋರಾದಲ್ಲಿ ಲಷ್ಕರ್ ಕಮಾಂಡರ್ ಮಟಾಷ್ !

* ಲಷ್ಕರ್ ಕಮಾಂಡರ್ ಅಲ್ತಾಫ್ ಲಲ್ಲಿಯ ಬೇಟೆಯಾಡಿದ ಸೇನೆ
* ಪಾಕ್ ಉಗ್ರರಿಗೆ ಸಹಕರಿಸಿದ ಉಗ್ರರಿಬ್ಬರ ಮನೆಗಳು ಧ್ವಂಸ

NAMMMUR EXPRESS NEWS
ಕಾಶ್ಮೀರ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರದ ಆಟ ಆರಂಭಿಸಿರುವ ಭಾರತಕ್ಕೆ ಬಂಡಿಪೋರಾದಲ್ಲಿ ಮೊದಲ ಯಶಸ್ಸು ದೊರಕಿದೆ. LeT ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಭಾರತೀಯ ಸೇನೆ ರಣಬೇಟೆಯಾಡಿದೆ.
ಈ ಮೊದಲು ಪಾಕ್ ಉಗ್ರರಿಗೆ ಸಹಾಯ ಮಾಡಿದ್ದ ಹಾಗೂ 2018ರಲ್ಲಿ ಪಾಕಿಸ್ಥಾನಕ್ಕೆ ಹೋಗಿ ತರಬೇತಿ ಪಡೆದು ಬಂದಿದ್ದ ಉಗ್ರರಾದ ಆಸಿಫ್ ಮತ್ತು ಆದಿಲ್‌ರ ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿನ ಮನೆಗಳನ್ನು ಧ್ವಂಸ ಮಾಡಲಾಗಿದೆ.
ಭಾರತದ ಈ ದಾಳಿಗೆ ಪತರುಗುಟ್ಟಿರುವ ಪಾಕಿಸ್ಥಾನ ತನ್ನ ಸೇನೆಯ ಸಹಾಯದಿಂದ ಉಗ್ರರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Categories
ಮಂಗಳೂರು

ಪಹಲ್ಗಾಮ್​ ದಾಳಿ ಸಮರ್ಥಿಸಿಕೊಂಡು ಪೋಸ್ಟ್​ ಹಾಕಿದ ಮಂಗಳೂರಿನ ಯುವಕ!

ಪಹಲ್ಗಾಮ್​ ದಾಳಿ ಸಮರ್ಥಿಸಿಕೊಂಡು ಪೋಸ್ಟ್​ ಹಾಕಿದ ಮಂಗಳೂರಿನ ಯುವಕ!

– ಫೇಸ್​ಬುಕ್ ಪೇಜ್​ನ ಡಿಪಿ‌ಯಲ್ಲಿರುವ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ!
– ಈ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

NAMMUR EXPRESS NEWS
ಮಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್​ ಹಾಕಿದ್ದ ಫೇಸ್ ಬುಕ್ ಪೇಜ್ ವಿರುದ್ಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲದ ಸತೀಶ್ ಕುಮಾರ್ ಎಂಬವರು‌ ನೀಡಿದ ದೂರಿನ ಆಧಾರದ ಮೇಲೆ ಬಿಎನ್​ಎಸ್​ ಸೆಕ್ಷನ್ 192 ಮತ್ತು 353(1)(,b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್​ಬುಕ್ ಪೇಜ್​ನ ಡಿಪಿ‌ಯಲ್ಲಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಿಚ್ಚು ಮಂಗಳೂರು ಎಂಬ‌ ಫೇಸ್​ಬುಕ್​ ಪೇಜ್​ನಲ್ಲಿ, “2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ಮೂವರು ಮುಸ್ಲಿಮರನ್ನು‌ ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್​ಗೆ ಸಾರ್ವಜನಿಕವಾಗಿ ನೇಣಿಗೆ ಹಾಕಲಿಲ್ಲ. ಪಾಲ್ಗರ್ ಘಟನೆ ಕಾರಣಕ್ಕೆ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ” ಎಂದು ಪೋಸ್ಟ್​ ಹಾಕಲಾಗಿದೆ. ಈ ಪೋಸ್ಟ್​ಗೆ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಫೇಸ್​ಬುಕ್​​ ಪೇಜ್​ನ ಡಿಪಿಯಲ್ಲಿರುವ ಯುವಕ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ‌ಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.