ಹೆಬ್ರಿಯಲ್ಲಿ ಹಾವು ಕಾಟ ಹೆಚ್ಚಳ!
– ಹಾವು ಕಚ್ಚಿ ಎಂಟು ವರ್ಷದ ಬಾಲಕಿ ಸಾವು
* ಉಡುಪಿ: ಫಲಕಗಳಲ್ಲಿ ಕನ್ನಡ ಕಡ್ಡಾಯ; ನಗರ ಸಭೆ ಪ್ರಕಟಣೆ
* ಕುಂದಾಪುರ: ವಾರಾಹಿ ನದಿಯಿಂದ ಗರಿಷ್ಠ ವಿದ್ಯುತ್ ಉತ್ಪಾದನೆ
* ಬೈಂದೂರು: ಎಲ್ ಸಿ ಗೇಟ್ 71 ರಲ್ಲಿ ವಾಹನ ಸಂಚಾರ ನಿಷೇಧ
* ಕಾಪು: ಮುಗುಚಿದ ಮೀನುಗಾರರ ದೋಣಿ: ಅಪಾಯದಿಂದ ಪಾರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೆಬ್ರಿ: ಹೆಬ್ರಿಯಲ್ಲಿ ಹಾವುಗಳ ಕಾಟ ಹೆಚ್ಚಳವಾಗಿದ್ದು, ಹಾವು ಕಚ್ಚಿ ಎಂಟು ವರ್ಷದ ಬಾಲಕಿ ಸಾವು ಕಂಡಿದ್ದಾಳೆ.
ಶೇಡಿಮನೆ ಗ್ರಾಮದ ಶ್ರೀಧರ ಎನ್ನುವವರ ಪುತ್ರಿ, ಎಂಟು ವರ್ಷದ ಬಾಲಕಿ ಸನ್ನಿಧಿ ತನ್ನ ತಂದೆಯೊಂದಿಗೆ ತೋಟದಲ್ಲಿ ಸುತ್ತಾಡುತ್ತಿರುವ ಸಂದರ್ಭದಲ್ಲಿ ಹಾವು ಕಚ್ಚಿದೆ. ಸನ್ನಿಧಿಯು ಕೂಡಲೇ ತಂದೆಯ ಗಮನಕ್ಕೆ ತಂದಾಗ, ಶ್ರೀಧರ್ ಅವರು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಧಾರುಣ ಘಟನೆ ಶೇಡಿಮನೆ ಗ್ರಾಮದಲ್ಲಿ ನಡೆದಿದೆ.
* ಉಡುಪಿ: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ; ನಗರಸಭೆ ಪ್ರಕಟಣೆ
ಉಡುಪಿ: ಇನ್ನು ಮುಂದೆ ಎಲ್ಲಾ ಕಚೇರಿಗಳು, ಹೊಟೇಲ್ ಗಳು, ಬ್ಯಾಂಕ್ ಗಳು, ಕಂಪನಿಗಳು ಮತ್ತು ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯು ಶೇಕಡ ಅರವತ್ತರಷ್ಟು ಕಡ್ಡಾಯವಾಗಿ ಇರಬೇಕೆಂದು, ಅದರ ಜೊತೆಗೆ ಊರಿನ ಹೆಸರು ಅಲ್ಲಿನ ಐತಿಹ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಉಡುಪಿಯ ನಗರಸಭೆಯು ಈ ನಿಯಮವನ್ನು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶೇಕಡ ಅರವತ್ತರಷ್ಟು ಕನ್ನಡದ ನಾಮಫಲಕವನ್ನು ಪ್ರದರ್ಶಿಸಲು ಕ್ರಮವಹಿಸಬೇಕೆಂದು ಆದೇಶಿಸಿದೆ. ಹಾಗೂ ಪರವಾನಿಗೆಯನ್ನು ಪಡೆದುಕೊಳ್ಳದ ಮತ್ತು ನವೀಕರಿಸದ ಉದ್ದಿಮೆಗಳಿಗೆ ಏಳು ದಿನಗಳ ಒಳಗಾಗಿ ಉದ್ದಿಮೆ ಪರವಾನಿಗೆ ಪಡೆದುಕೊಳ್ಳಲು ನಿಯಮಾನುಸಾರವಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದ್ದು, ತಪ್ಪಿಸಿಕೊಂಡಲ್ಲಿ ಕರ್ನಾಟಕ ಪುರಸಭಾ ಅಧಿನಿಯಮ 256ರ ಉಪನಿಯಮದ ಅನ್ವಯದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
* ಕುಂದಾಪುರ: ವಾರಾಹಿ ನದಿಯಿಂದ ಗರಿಷ್ಠ ವಿದ್ಯುತ್ ಉತ್ಪಾದನೆ
ಕುಂದಾಪುರ: 1989ರಲ್ಲಿ ಆರಂಭಗೊಂಡ ವಾರಾಹಿ ಭೂಗರ್ಭ ಜಲವಿದ್ಯುತ್ ಕೇಂದ್ರವು, ಈ ವರ್ಷದ ಜುಲೈ ತಿಂಗಳಿನಲ್ಲಿ 226. 72 ಮಿಲಿಯನ್ ಯೂನಿಟ್ ನಷ್ಟು ಗರಿಷ್ಠ ವಿದ್ಯುತ್ ಉತ್ಪಾದಿಸುವ ಮೂಲಕ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ವಾರ್ಷಿಕ ನಿರ್ವಹಣೆ ಮತ್ತು ಇನ್ನಿತರ ದುರಸ್ತಿ ಕಾರ್ಯಗಳನ್ನು ಮೇ ಜೂನ್ ತಿಂಗಳಿನಲ್ಲಿಯೇ ಮುಗಿಸಿದ್ದರ ಪರಿಣಾಮವಾಗಿ, ಮಾಣಿ ಅಣೆಕಟ್ಟು ಮತ್ತು ಪಿಕಪ್ ಅಣೆಕಟ್ಟುಗಳಿಗೆ ಅತಿ ಹೆಚ್ಚಿನ ಒಳಹರಿವು ಜುಲೈ ತಿಂಗಳಿನಲ್ಲಿ ಬಂದಿದೆ. ಇದರಿಂದಾಗಿ 115 ಮೆಗಾವ್ಯಾಟ್ ಗಳ ಸಾಮರ್ಥ್ಯದ ನಾಲ್ಕು ಜನರೇಟರ್ ಗಳ ಮೂಲಕ ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ಮಾಡಲು ಸಾಧ್ಯವಾಯಿತು.
* ಬೈಂದೂರು: ಎಲ್ ಸಿ ಗೇಟ್ 71 ರಲ್ಲಿ ವಾಹನ ಸಂಚಾರ ನಿಷೇಧ
ಬೈಂದೂರು: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಶೀರೂರು ಗ್ರಾಮದ ಎಲ್ ಸಿ ಗೇಟ್ 71 ರಲ್ಲಿ ವಾಹನಗಳು ಸಂಚರಿಸಲು ಸಂಪೂರ್ಣವಾಗಿ ನಿಷೇಧಿಸಿದ್ದರ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಎಲ್ ಸಿ ಗೇಟ್ 71ರಲ್ಲಿ 40 ರಿಂದ 50 ರೈಲುಗಳು ಸಂಚರಿಸುತ್ತಿದ್ದು, ಆ ಸಮಯದಲ್ಲಿ ರೈಲ್ವೆ ಗೇಟ್ ಮುಚ್ಚುವುದರಿಂದ, ಸಾರ್ವಜನಿಕರ ಓಡಾಟಕ್ಕೆ ಅಡಚಣೆಯುಂಟಾಗುತ್ತಿದೆ. ಹೀಗಾಗಿ ಈ ಮಾರ್ಗದ ಬದಲಿಗೆ ಟೋಲ್ ಗೇಟ್ ನಿಂದ ಸುಮಾರು 500 ಮೀಟರ್ ಹಿಂದಕ್ಕೆ, ದುರ್ಗಾಂಬಿಕ ಹಾಲ್ ಮತ್ತು ಶಿರೂರು ಕೆರೆಕಟ್ಟೆ ಬಸ್ಸು ನಿಲ್ದಾಣದ ಬಳಿ ಇರುವ, ಎಲ್ ಸಿ ಗೇಟ್ 71ರ ಪಶ್ಚಿಮ ದಿಕ್ಕಿನಲ್ಲಿ ರೈಲ್ವೆ ಇಲಾಖೆಯಿಂದ ಹೊಸದಾಗಿ ನಿರ್ಮಿಸಿರುವ ರಸ್ತೆಯ ಮೂಲಕ ಸಂಚಾರಿಸುವಂತೆ ತಿಳಿಸಿದ್ದಾರೆ.
* ಕಾಪು: ಮುಗುಚಿದ ಮೀನುಗಾರರ ದೋಣಿ; ಅಪಾಯದಿಂದ ಪಾರು
ಕಾಪು: ಕರಾವಳಿ ಭಾಗದಲ್ಲಿ ಮೀನುಗಾರರ ಜೀವಕ್ಕೆ ಅಪಾಯ ಸಂಭವಿಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಆದರೆ ಕೂದಲೆಳೆ ಅಂತರದಿಂದ ಮೀನುಗಾರರು ಪಾರಾಗಿರುವುದು ಸಮಾಧಾನಕರ ಸಂಗತಿ ಆಗಿದೆ. ಕಾಪು ಲೈಟ್ ಹೌಸ್ ನ ಸಮುದ್ರ ತೀರದಲ್ಲಿ ಬೀಸಿದ ಭಾರಿ ಗಾಳಿಗೆ ಮೀನುಗಾರರು ಸಂಚಾರಿಸುತ್ತಿದ್ದ ದೋಣಿ ಮುಗುಚಿ ಬಿದ್ದು, ಅದರಲ್ಲಿದ್ದ ಏಳು ಜನ ಮೀನುಗಾರರು ಸಮುದ್ರ ಪಾಲಾಗಿದ್ದರು. ರಕ್ಷಣೆಗಾಗಿ ಮೀನುಗಾರರು ಕೂಗು ಹಾಕಿದಾಗ ದಡದಲ್ಲಿದ್ದ ಸ್ಥಳೀಯರಿಗೆ ಅವರ ಕೂಗು ಕೇಳಿಸಿ, ಹಗ್ಗ ಹಾಕಿ ಮೀನುಗಾರರನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ತಕ್ಷಣ ಕಾರ್ಯಪ್ರವೃತ್ತರಾದರು. ಇದರಿಂದಾಗಿ ಏಳು ಜನ ಮೀನುಗಾರರು ಅಪಾಯದಿಂದ ಪಾರಾಗಿದ್ದು, ದಡಕ್ಕೆ ಬಂದು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರತಿಭಾ ಅವರು ಮೀನುಗಾರರಿಗೆ ಧೈರ್ಯ ಹೇಳಿ, ಇನ್ನು ಮುಂದೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.




